Tag Archives: ಬ್ಲಾಗ್ ಬೀಟ್

ಬ್ಲಾಗ್ ಬೀಟ್ 22

18 ಜುಲೈ

 

ನಾವು ಮಾಡುವ ತಪ್ಪನ್ನು ನಮಗಿಂತಾ ಚೆನ್ನಾಗಿ ಯಾರ್ಯಾರು ಮಾಡಿದ್ದಾರೆ ಎಂದು ವಿವರವಾಗಿ ದಾಖಲಿಸುವ ಕಲೆಯನ್ನೇ ವಿಮರ್ಶೆ ಎನ್ನುವುದು. ನಮ್ಮ  ಪ್ರಮುಖ ಪತ್ರಿಕೆಗಳು ಇದನ್ನು ಮಿರ್ಚಿ, ಮಸಾಲಾ ಹೆಸರಿನಲ್ಲಿ ಮಾಡುತ್ತಿವೆ. ಪ್ರತಿ ಸಂಚಿಕೆಯಲ್ಲಿ ಇದನ್ನೇ ನಾವು ‘ಬ್ಲಾಗ್ ಬೀಟ್’ ಹೆಸರಿನಲ್ಲಿ ಮಾಡುತ್ತಿದ್ದೇವೆ.

ನಮ್ಮ ವಿಮರ್ಶೆಯ ಮೊನೆಗೆ ನಿಮ್ಮ ಬ್ಲಾಗೂ ತಾಕಬೇಕೆಂದಿದ್ದರೆ ಇಲ್ಲೊಂದು ಕಮೆಂಟ್ ಹಾಕಿ.

……………………..

ಬೊಗಳೆ

 

‘ಸ್ವಂತ ಮನೆ’ಯನ್ನು ಕಟ್ಟಿಕೊಳ್ಳುವುದರಲ್ಲಿ ಮಜಾವಾಣಿ ಆಯ್ತು ಈಗ ಬೊಗಳೆಯ ಸರದಿ! ನಾವಿನ್ನೂ ವರ್ಡ್ ಪ್ರೆಸ್ಸೆಂಬ ಮನೆ ಮಾಲೀಕನ ಮರ್ಜಿಯಲ್ಲಿ ಬದುಕುತ್ತಾ ಬಾಡಿಗೆ ಮನೆ ಸೊಗಸು ನೀವೇನು ಬಲ್ಲಿರಿ, ಈ ಜಗತ್ತೇ ಬಾಡಿಗೆ ಮನೆ, ಈ ದೇಹ ಬಾಡಿಗೆ ಮನೆ… ಬಾಡಿಗೆತನಕ್ಕೆಲ್ಲಿ ಕೊನೆ ಎಂದು ದೇವದಾಸ ಪದ ಹಾಡಿಕೊಳ್ಳುತ್ತಾ ಇದ್ದೇವೆ.

ಸ್ವಂತ ಮನೆ ಕಟ್ಟಿಕೊಂಡಿರುವ ಬೊಗಳೆಯಲ್ಲಿ ಎಂಪಿಗಳು ಎಮ್ಮೆಗಳಾಗಲು ಒಪ್ಪಲಿಲ್ಲವೇಕೆ ಎಂಬ ವರದಿಯಿದೆ.

ಮೋಟುಗೋಡೆ

 

ಮೋಟುಗೋಡೆಗೆ ಎದುರಾಗಿ ಚಲ್ಲಣವಿಲ್ಲದ ಚೋಟುಗಳನ್ನು ನಿಲ್ಲಿಸಿ ನೋಡಿಕೊಳ್ಳಿ ಎಂದು ಸವಾಲೆಸೆದು ತಲ್ಲಣ ಸೃಷ್ಟಿಸಿರುವ ಮೋಟುಗೋಡೆ ಬ್ಲಾಗಿನಲ್ಲಿ ಖ್ಯಾತರು ಮೋಟುಗೋಡೆಯನ್ನು ಜಿಗಿದು ಮಾಡಿದ ಸಾಹಸದ ದಾಖಲಾತಿ ಮುಂದುವರೆದಿದೆ. ಗಂಗಾಧರ ಚಿತ್ತಾಲರ, ಅಡಿಗರ ಗೋಡೆ ದಾಟಿದ ಸಾಹಸಗಳು ಇಲ್ಲಿವೆ

ಕೆಂಡಸಂಪಿಗೆ

 

ಮುದ್ರಣಕ್ಕೆ ಕಾಗದವನ್ನು ಬಳಸದ, ವರದಿಗಾರರಿಗೆ, ಬರಹಗಾರರಿಗೆ , ಅನಾಮಿಕ ಕಮೆಂಟುದಾರರಿಗೆ ಟಿಎ, ಡಿಎ, ಬಾಟಾ ಕೊಡದ   ಕೆಂಡಸಂಪಿಗೆಯಲ್ಲಿ ಕಾಸ್ಟ್ ಕಟಿಂಗ್ ನಡೆಯುತ್ತಿದೆಯಾ ಎಂಬ ಸಂಶಯ ಸಾಮ್ರಾಟರಿಗೆ ಬಂದಿದೆ.

ಜಗತ್ತಿನಾದ್ಯಂತ ಪತ್ರಿಕೆಗಳು ತಮ್ಮ ಹೆಚ್ಚುವರಿ ವರದಿಗಾರರನ್ನು, ಪ್ರೂಫ್ ತಿದ್ದುವ ಬುದ್ಧಿವಂತರನ್ನು ಮನೆಗೆ ಕಳಿಸುತ್ತಿದ್ದರೆ ಕೆಂ.ಸಂದಲ್ಲಿ ಅಪ್ರತಿಮ ವರದಿಗಾರ ಸುದ್ದಿ ಕ್ಯಾತನನ್ನೇ ಹೊರಗೆ ಅಟ್ಟಲಾಗಿದೆ.

ಈ ಬಗ್ಗೆ ಕೆಂ.ಸಂದ ಅತಿಥಿ ಸಂಪಾದಕರು ಕೊಂಚ ಗಮನ ಹರಿಸಲಿ ಎಂಬುದು ನಗೆ ಸಾಮ್ರಾಟರ ಕೋರಿಕೆ.

ಇನ್ನು ಅತಿಥಿ ಸಂಪಾದಕರ ಹೊಸತೊಂದು ಐಡಿಯಾ ಬಗ್ಗೆ ನಮ್ಮ ಸಂಪೂರ್ಣ ಬೆಂಬಲವಿದೆ.

ಬ್ಲಾಗ್ ಬೀಟ್ 21

2 ಜೂನ್

 

ಬಹು ದಿನಗಳ ನಂತರ ಬೀಟಿಗೆ ಹೊರಟ ಸಾಮ್ರಾಟರಿಗೆ ಭಾರಿ ನಿರಾಶೆ ಕಾದಿತ್ತು. ಅತ್ಯುತ್ತಮವಾದ ಫಸಲನ್ನು ನಿರೀಕ್ಷಿಸಿ ಕುಯಿಲಿಗೆ ಹೊರಟಿದ್ದವರಿಗೆ ಬರಡು ಭೂಮಿಯಂತಹ ಬ್ಲಾಗಿನಂಗಳ ಕಂಡು ದುಃಖವಾಯಿತು. ವಿದರ್ಭದ ಆಸುಪಾಸಿನಲ್ಲಿ ಓಡಾಡುತ್ತಿದ್ದರೆ ನೇಣು ಬಿಗಿದುಕೊಳ್ಳುವ ಅಪಾಯವಿತ್ತು. ಆದರೆ ಎಂದೂ ಕರ್ನಾಟಕದ ಅಂಗಳದಿಂದ ಕಾಲ್ಕಿತ್ತದ ಸಾಮ್ರಾಟರು ಬಚಾವಾದರು. ಕನ್ನಡದ ನೆಲದಲ್ಲಿ ಆಶಾವಾದಕ್ಕೆ ಕೊರತೆಯಿಲ್ಲ ಎಂದು ತಮ್ಮನ್ನು ತಾವು ಸಮಾಧಾನಿಸಿಕೊಂಡು ಸಿಕ್ಕ ಒಂದೆರಡು ಕಾಳುಗಳನ್ನು ಹೆಕ್ಕಿ ತಂದು ಸುರಿದಿದ್ದಾರೆ.

ಬೊಗಳೆ

ಎಲ್ಲೇ ಯಾವುದಕ್ಕೆ ಬರಗಾಲವಿದ್ದರೂ ಬ್ಲಾಗಿನ ಅಂಗಳದಲ್ಲಿ ಬೊಗಳೆಗೆ ಬರಗಾಲವಿಲ್ಲವೆನ್ನುವುದನ್ನು ಅನ್ವೇಷಿಯವರು ಸತತವಾಗಿ ಸಾಬೀತು ಪಡಿಸಿಕೊಂಡು ಬರುತ್ತಿದ್ದಾರೆ. ತಮ್ಮ ಇತ್ತೀಚಿನ ವರದಿಯಲ್ಲಿ ತಮಿಳು ನಾಡಿನಲ್ಲಿನ ಚುನಾವಣೋತ್ತರ ಸನ್ನಿವೇಶವನ್ನು ತೆರೆದಿಟ್ಟಿದ್ದಾರೆ.

ತಮಿಳುಕಾಡಿನ ಪ್ರಥಮ ಕುಟುಂಬವು ತನ್ನೆಲ್ಲಾ ಶಕ್ತಿ-ಸಾಮರ್ಥ್ಯ-ಜನಬಲ-ಕುಟುಂಬ ಬಲಗಳನ್ನೆಲ್ಲವನ್ನೂ ದೆಹಲಿಗೆ ವರ್ಗಾಯಿಸಿರುವ ಕಾರಣದಿಂದಾಗಿ ತಮಿಳುಕಾಡು ಬಿಕೋ ಎನ್ನುತ್ತಿದ್ದ ಘಟನೆಯೊಂದು ಯಾರಿಗೂ ತಿಳಿಯದಂತೆ ಘಟಿಸಿದ್ದು, ಅದನ್ನು ಬೊಗಳೂರು ವರದ್ದಿಗಾರರು ಪತ್ತೆ ಹಚ್ಚಿರುವುದಾಗಿ ಅನ್ಯ ಪತ್ರಿಕೆಗಳಲ್ಲಿ ವರದ್ದಿಯಾಗಿದೆ.

ಮೋಟು ಗೋಡೆ

ಗೋಡೆಯ ಆಚೆ ಈ ಬಾರಿ ಸಾಮ್ರಾಟರಿಗೆ ಎದುರಾಗಿದ್ದು ಸಲಿಂಗಿ ಜೋಡಿಗಳ ವಿಷಯ. ಈ ಸಂಗತಿಯ ಬಗ್ಗೆ ಜಗತ್ತೇ ತಲೆ ಕೆಡಿಸಿಕೊಂಡು ಒದ್ದಾಡುತ್ತಿರುವಾಗ ಸಾಮ್ರಾಟರು ಸರಳವಾದ ಸೂತ್ರವನ್ನು ಹಾಕಿ ಸಮಸ್ಯೆಯನ್ನು ಪರಿಹರಿಸಿದ್ದಾರೆ.
ಅ=ಸಾಹಿತ್ಯಕ್ಕೆ ಹೆಣ್ಣು ಗಂಡೆಂಬ ಬೇಧವಿಲ್ಲ
ಬ= ಪ್ರೀತಿ ಮಾಡ ಬಾರದು ಮಾಡಿದರೆ ಜಗಕೆ ಹೆದರಬಾರದು ಎಂಬುದು ಉತ್ತಮ ಸಾಹಿತ್ಯ
ಕ= ಪ್ರೀತಿಗೆ ಗಂಡು ಹೆಣ್ಣೆಂಬ ಬೇಧವಿಲ್ಲ

ಪ್ರೀತಿಸುವಾಗ ತೊಂದರೆಯಿಲ್ಲ ಆದರೆ ಮದುವೆಯಾದ ನಂತರ ಒಂದೊಂದೇ ತೊಂದರೆ ಶುರುವಾಗುತ್ತೆ. ಮದುವೆಯಾಗುವವರು ಗಂಡು ಹೆಣ್ಣು ಮಾತ್ರ ಎಂಬ ತಪ್ಪು ಅಭಿಪ್ರಾಯದಿಂದಾಗಿ ಗಂಡ, ಹೆಂಡತಿ, ಅಪ್ಪ, ಅಮ್ಮ ಎಂಬಂತಹ ಸಂಬಂಧಗಳು ಗಟ್ಟಿಯಾದವು. ಈಗ ಇಬ್ಬರು ಒಂದೇ ಲಿಂಗಿಗಳು ಮದುವೆಯಾದರೆ…

ಆದರೆ ಅವರು ಹೆದರಬೇಕಿಲ್ಲ. ಜಗತ್ತಿನಲ್ಲಿ ಯಾವುದ್ಯಾವುದಕ್ಕೋ ಕ್ರಾಂತಿಯಾಗಿದೆ. ಹೀಗಿರುವಾಗ ಗಂಡ ಹೆಂಡತಿ ಎಂಬ ಪದಗಳ ವಿಚಾರದಲ್ಲಿ ಕ್ರಾಂತಿ ಮಾಡುವುದಕ್ಕೆ ಯಾಕೆ ಹಿಂಜರಿಕೆ.

ಬ್ಲಾಗ್ ಬೀಟ್ 20

7 ಮೇ

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

……………………………………………………

ಟೂನಂಗಡಿ 001

ಟೂನಂಗಡಿ ತೆರೆದು ಕೂತಿರುವ ಅಮೃತ್.ವಿ ಉದಯವಾಣಿಯಲ್ಲಿ ಪ್ರಕಟವಾದ ತಮ್ಮ ಕಾರ್ಟೂನುಗಳಲ್ಲಿ ಕೆಲವನ್ನು ಬ್ಲಾಗಿಗೆ ಹಾಕಿರುವುದು ಬೀಟ್ ಹೊರಟ ಸಾಮ್ರಾಟರ ಕಣ್ಣಿಗೆ ಬಿತ್ತು. ಹಾಗೆ ಕಣ್ಣಿಗೆ ಬಿದ್ದದ್ದನ್ನು  ಸಾವಕಾಶವಾಗಿ ಹೊರಗೆ ತೆಗೆದು ಅವರು ಇಲ್ಲಿ ಹಾಕಿದ್ದಾರೆ.

ಪಂಚ್ ಲೈನು

ಹುಡುಗಿಯರ ವಿಷಯದಲ್ಲೂ ರಾಜಕಾರಣದಲ್ಲೂ ತಲಾ ಒಂದೊಂದಾಗಿ ಪಿ.ಎಚ್.ಡಿ ಮಾಡುತ್ತಿರುವಂತೆ ಕಾಣುವ ಪಂಚ್ ಲೈನ್ ಗಣೇಶರು ಹುಡುಗಿಯರ ಮನಸ್ಸು ಗೆಲ್ಲೋದು ಚುನಾವಣೆ ಗೆಲ್ಲೋದೂ ಆಲ್ಮೋಸ್ಟ್ ಸೇಮ್ ಅಂತಾರೆ. ಹೇಗೆ ಅಂದ್ರಾ? ಇಲ್ ನೋಡಿ…

ಪುಗಸಟ್ಟೆ

ರಾಜಕೀಯದಲ್ಲಿನ ಎಡದ ಬಲ ಹಾಗೂ ಬಲದ ಎಡದ ಸುಳಿಯಲ್ಲಿ ಪುಗಸಟ್ಟೆ ಉಪದೇಶ ಕೊಡುವ ಬ್ಲಾಗಿಗರು ಒಂದು ಗಂಭೀರ ಪ್ರಶ್ನೆ ಕೇಳಿದ್ದಾರೆ. ‘ಈ ಘಟನೆ’ ಭಾರತದಲ್ಲಿ ನಡೆಯುವುದು ಯಾವಾಗ ಎಂಬುದು ಅವರ ಪ್ರಶ್ನೆ. ಇದಕ್ಕೆ ಉತ್ತರಿಸಬೇಕಾದಾವರು, ಮಾತನಾಡದೆ ಮಾಡಿ ತೋರಿಸುವವರನ್ನು ಹುಡುಕಿ ನಮ್ಮ ಚೇಲ ದೇಶಾಂತರ ಹೊರಟಿದ್ದಾನೆ.

ಬೊಗಳೆ

ಅಶಿಕ್ಷಿತರು, ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದವರೇ ತುಂಬಿ ಹೋಗಿರುವ ರಾಜಕೀಯ ರಂಗಕ್ಕೆ ಸುಶಿಕ್ಷಿತರು ಧುಮುಕುತ್ತಿರುವ ವಿದ್ಯಮಾನದ ಸಮಗ್ರ ವರದಿಯನ್ನು ಬೊಗಳೆ ಬ್ಯೂರೋ ಪ್ರಕಟಿಸಿದೆ. ಮಾನವಿಲ್ಲದ ದಂಡ ಪಿಂಡಗಳಾದ ರಾಜಕಾರಣಿಗಳಿಗೆ ಮಾನದಂಡವನ್ನು ವಿಧಿಸುವ ಮಹೋನ್ನತ ಕಾರ್ಯಕ್ಕೆ ಕೈ ಹಾಕಿದೆ. ಅವರ ಸಾಹಸಕ್ಕೆ ಸಂತಾಪ ಸೂಚಿಸುತ್ತಾ ನಾವು ಅಲ್ಲಿಂದ ಪರಾರಿಯಾಗಿದ್ದೇವೆ.

ಮೋಟುಗೋಡೆ

ಇರುವ ಮೋಟು ಗೋಡೆಯನ್ನು ಎಗರಿ ಎಗರಿ ಜಿರಾಫೆಯಂತೆ ಎತ್ತರವಾಗಿರುವ ಮೋಟುಗೋಡೆ ಬಳಗ ಕಂಪ್ಯೂಟರ್ ಕರ್ಮಕಾಂಡವನ್ನು ವರದಿ ಮಾಡಿದೆ. ರಿಸೆಷನ್ ಸಮಯದಲ್ಲಿ ಎಲ್ಲರನ್ನೂ ಕಾಡುತ್ತಿರುವ ಕಂಪ್ಯೂಟರ್ ಕರ್ಮ ಕಾಂಡವಲ್ಲ ಇದು. ಇದು ಮೋಟುಗೋಡೆಯ ಸ್ಪೆಷಲ್ ‘ಡಿಕ್’ಆಕ್ಷನ್!

ಮಜಾವಾಣಿ

ಮಜಾವಾಣಿ ಪತ್ರಿಕೆ ಈಗ ಮೈತುಂಬಿಕೊಂಡು ನಿಂತಿದೆ. ಅಗ್ರ ರಾಷ್ಟ್ರೀಯ ವಾರ್ತೆಯಿಂದ ಹಿಡಿದು ವಿಶೇಷ ಸಂದರ್ಶನದವರೆಗೆ ಎಲ್ಲಾ ವಿಭಾಗಗಳಲ್ಲೂ ನೈಪುಣ್ಯತೆ ಮೆರೆದಿದೆ.

ಈ ಸಂಚಿಕೆಯಲ್ಲಿ ಹಿನ್ನೆಲೆ ಕೆಮ್ಮು ಕಲಾವಿದ ದಮ್ಮುಲ ಕೃಷ್ಣಪ್ಪನವರ ಅಪರೂಪದ ಸಂದರ್ಶವನ್ನು ಪ್ರಕಟಿಸಲಾಗಿದೆ. ಕೆಮ್ಮಾಭಿಮಾನಿಗಳು ಹಾಗೂ ದಮ್ಮಾಭಿಮಾನಿಗಳು ಅವಶ್ಯಕವಾಗಿ ಓದಲೇಬೇಕಾದ ಸಂದರ್ಶನವಿದು.

ಬ್ಲಾಗ್ ಬೀಟ್ 16

25 ಆಕ್ಟೋ

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

……………………………………………………..

ಸಾಮ್ರಾಟರ ಅಕಾಲಿಕ ಮರಣದಿಂದ ಬ್ಲಾಗ್ ಲೋಕದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿ ಬಿಡುತ್ತದೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ಬೀಟಿಗೆ ಸಾಮ್ರಾಟರು ಬರುತ್ತಿಲ್ಲ ಎಂಬುದನ್ನು ತಿಳಿದು ಬ್ಲಾಗಿಗ ಮಹಾಶಯರು ಇಲ್ಲ ಸಲ್ಲದ ತಂಟೆ ತಕರಾರು ತೆರೆದುಕೊಳ್ಳುತ್ತಾರೆ ಎಂದೆಲ್ಲಾ ಭಾವಿಸಿದ್ದ ಸಾಮ್ರಾಟರ ಅತೃಪ್ತ ಆತ್ಮಕ್ಕೆ ತಕ್ಕ ಪಾಠ ಸಿಕ್ಕಿದೆ. ಅಜ್ಜಿಯ ಕೋಳಿ ಕೂಗದಿದ್ದರೆ ಬೆಳಕೇ ಹರಿಯುವುದಿಲ್ಲ ಎಂಬುದನ್ನು ಅಕ್ಷರಶಃ ನಂಬಿಕೊಂಡಿದ್ದ ಸಾಮ್ರಾಟರು ಈಗ ಸದ್ದಿಲ್ಲದೆ ಅಜ್ಜಿಯ ಕೈಲಿದ್ದ ಕೋಳಿಯ ಕತ್ತು ಸೀಳಿ ಆ ಅಜ್ಜಿಯ ಕೈಲೇ ಮಸಾಲೆ ಅರೆಸುತ್ತಿದ್ದಾರೆ!

…………………………

ಪ್ರಕಾಶ್ ಶೆಟ್ಟಿಯವರದು ಬರೇ ವಾರೆ ಕೋರೆ

ತಮ್ಮ ವಾರೇ ಕೋರೆ ಗೆರೆಗಳಿಂದ ನಾಡಿನ ಉದ್ದಗಲಕ್ಕೆ ಚಿರಪರಿಚಿತರಾಗಿರುವ ಪ್ರಕಾಶ್ ಶೆಟ್ಟಿಯವರು ಬಹುದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. ಅವರ ಈ ಸಾಧನೆ ಗಿನ್ನಿಸ್ ದಾಖಲೆಯ ಪುಸ್ತಕದಲ್ಲೇ ಶ್ರೇಷ್ಠ ಮಟ್ಟದ ಸ್ಥಾನಮಾನವನ್ನು ಪಡೆಯಲಿದೆ ಎಂದು ಗುಸುಗುಸು ಶುರುವಾಗಿದೆ. ಅಸಲಿಗೆ ಇವರು ಮಾಡಲು ಹೊರಟಿರುವುದಾದರೂ ಏನನ್ನು? ‘ದೇವೇಗೌಡರನ್ನು ನಗಿಸಲು ಹೊರಟಿದ್ದಾರೆ!’

ಇಲ್ಲಿ ನೋಡಿ…

ಹೌದು, ಪ್ರಕಾಶ್ ಶೆಟ್ಟಿಯವರು ಕನ್ನಡದಲ್ಲಿ ಒಂದು ಹಾಸ್ಯ ಮಾಸ ಪತ್ರಿಕೆಯನ್ನು ತೆರೆಯುತ್ತಿದ್ದಾರಂತೆ. ಗೌಡರನ್ನು, ಖರ್ಗೆಯವರನ್ನು ನಗಿಸುವ ಹುಮ್ಮಸ್ಸಿರುವ ಶೆಟ್ಟಿಯವರ ಪಂಚ್‌ನ್ನು ಕನ್ನಡಿಗರು ಸಕತ್ತಾಗಿ ಸ್ವೀಕರಿಸಲಿ ಎಂಬುದು ಸಾಮ್ರಾಟರ ಹಾರೈಕೆ.

…………………………

ಆಚಾರ್ಯರಿಗೆ ಸ್ವಲ್ಪ ಬೇಜಾರಾಗುತ್ತದೆಯಂತೆ!

ತಮ್ಮನ್ನು ಹೋಂ ಮಿನಿಸ್ಟರ್ ಎಂದು ಕನಿಕರದಿಂದ, ಲೇವಡಿಯಿಂದ, ಮಮತೆಯಿಂದ ಕರೆಯುವುದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದ ಆಚಾರ್ಯರು ಇಷ್ಟೆಲ್ಲಾ ಆದರೂ ಇದರಿಂದ ಸ್ವಲ್ಪ ಬೇಜಾರಾಗುತ್ತದೆ ಎಂದು ಹೇಳಿದ್ದು ನಾಡಿನ ಹೆಸರಾಂತ ಪತ್ರಿಕೆ ಮಜಾವಾಣಿಯಲ್ಲಿ ವರದಿಯಾಗಿದೆ.

ಹಾಗೆಯೇ ನಮ್ಮ ಮಾನ್ಯ ಮುಖ್ಯ ಮಂತ್ರಿಯವರು ಅಮೇರಿಕಾದ ಅಕ್ಕನ ಸಮಾರಂಭಕ್ಕೆ ಹೋಗಿ ಆಂಗ್ಲ ರಾಜಕಾರಣಿಗೆ ಉಚಿತವಾಗಿ ಲೋಟಸ್ ಫ್ಲವರ್ ಆಪರೇಷನ್ ಮಾಡಿದ ಸಂಗತಿ ಸಚಿತ್ರ ವರದಿ ಮಜಾವಾಣಿಯಲ್ಲಿ ಪ್ರಕಟವಾಗಿದೆ.

…………………………

ಬೊಗಳೆ ದಿವಾಳಿ ವಿಶೇಷಾಂಕ

ರಾಜ್ಯದ ಪ್ರತಿಯೊಂದು ಪತ್ರಿಕೆಯೂ ತಾನು ಬದುಕಿದ್ದೇನೆ ಎಂಬುದನ್ನು ಸಾಬೀತು ಪಡಿಸುವುದಕ್ಕಾಗಿಯೇ ದೀಪಾವಳಿಯಂದು ವಿಶೇಷಾಂಕದ ಹೆಸರಿನಲ್ಲಿ ಒಂದೇ ಆಕಾರದ, ಒಂದೇ ತೂಕದ, ಒಂದೇ ಬೆಲೆಯ ಒಂದಷ್ಟು ಸರಕನ್ನು ದಾಟಿಸಿ ಕೈತೊಳೆದುಕೊಂಡುಬಿಡುತ್ತವೆ.

ಈ ರೇಸಿನಲ್ಲಿ ತಾನೇನೂ ಕಡಿಮೆ ಇಲ್ಲ ಎಂದು ಬೊಗಳೆ ರಗಳೆಯ ಏಕಸದಸ್ಯ ಬ್ಯೂರೋದ ಸಮಸ್ತ ಸಿಬ್ಬಂದಿ ಟೊಂಕ ಕಟ್ಟಿ ನಿಂತು ದಿವಾಳಿ ವಿಶೇಷಾಂಕವನ್ನು ಹೊರತಂದಿದ್ದಾರೆ. ಅವರು ಈ ಸಂಚಿಕೆಯನ್ನು ಹೊರತಂದಿದ್ದಕ್ಕಾಗಿ ಹಾಗೂ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದೆ ಕೃಪೆ ಮಾಡಿದ್ದಕ್ಕಾಗಿ ಸಾಮ್ರಾಟರಿಂದ ಅಭಿನಂದೆಗಳ ಠುಸ್ ಪಟಾಕಿಯನ್ನು ಪಡೆದಿದ್ದಾರೆ.

(ಇವರ ಉಚಾವಣೆಯಿಂದ ಸಾಮ್ರಾಟರೂ ಸಹ ನಗೆ ನಗಾರಿ ದೀಪಾವಳಿ ವಿಶೇಷಾಂಕ ತರುವ ಸನ್ನಾಹದಲ್ಲಿದ್ದಾರೆ ಎಂಬುದು ಕೇವಲ ಊಹಾಪೋಹದ ಆಧಾರದಲ್ಲಿ ರೂಪುಗೊಂಡಿರುವ ವಾಸ್ತವ ಸಂಗತಿ ಎಂದು ತಿಳಿಸುತ್ತಿದ್ದೇವೆ.)

…………………………

ಪಂಚುಗಳು

ತುಂಬಾ ದಿನಗಳಿಂದ ಬ್ಲಾಗ್ ಲೋಕದಿಂದ ಗಣೇಶರು ನಾಪತ್ತೆಯಾಗಿ ಅನಂತರ ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಾರ್ತೆಯೂ ವರದಿಯಾಗಿ ಜನರು ಅನವಶ್ಯಕವಾದ ಸಂಶೋಧನೆಗಳನ್ನು ಮಾಡಲು ಶುರು ಮಾಡತೊಡಗಿದಾಗಲೇ ಗಣೇಶರು ಪ್ರತ್ಯಕ್ಷರಾಗಿ ಒಂದೆರಡು ಪಂಚು ಕೊಟ್ಟು ಮಾಯವಾಗಿದ್ದಾರೆ.

ಅವರು ಕೊಟ್ಟ ಪಂಚಿನ ಅರ್ಥ ಸಾಮ್ರಾಟರಿಗೆ ಸಿಕ್ಕದೆ ಅದನ್ನು ಹುಡುಕಿ ಅಲೆಯುತ್ತಿದ್ದಾರೆ. ಯಾರಿಗಾದರೂ ಸಿಕ್ಕಿದರೆ ಶೇ ಐವತ್ತನ್ನು ತಮ್ಮತ್ತ ತಳ್ಳಲು ಮನವಿ ಮಾಡಿಕೊಂಡಿದ್ದಾರೆ!

ಬ್ಲಾಗ್ ಬೀಟ್ 14

1 ಸೆಪ್ಟೆಂ

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

……………………………………………………..

ಮಜಾವಾಣಿ ಪಲಾಯನ

ಬ್ಲಾಗ್ ಸ್ಪಾಟಿನ ಅಂಗಳದಿಂದ ಮಜಾವಾಣಿ ಎಂಬ ವಸ್ತು ನಿಷ್ಟ ಪತ್ರಿಕೆ ಪಲಾಯನ ಗೈದಿದ್ದು ಇದರಲ್ಲಿ ನಮ್ಮ ಕೈವಾಡವೇನೂ ಇಲ್ಲ ಎಂದು ಬೊಗಳೆ ಬ್ಯೂರೋ ನೀಡಿದ ಸ್ಪಷ್ಟನೆ ಎಲ್ಲೂ ಪ್ರಕಟವಾಗಿಲ್ಲ.
ತನ್ನದೇ ಆದ ತಾಣವನ್ನು ತೆರೆದುಕೊಂಡು ಸಂಪದದ ಶಾಮಿಯಾನದಲ್ಲಿ ಅಂಗಡಿ ತೆರೆದಿರುವ ‘ಮಜಾವಾಣಿ’ ತನ್ನ ಪ್ರತಿಸ್ಪರ್ಧಿ ಪತ್ರಿಕೆಗಳಿಗಿಂತ ಗಾವುದ ದೂರ ಓಡಿ ತನಗೆ ಉಸೇನ್ ಬೋಲ್ಟ್ ಆದರ್ಶ ಎಂಬುದನ್ನು ಸಾಬೀತು ಪಡಿಸಿದೆ. ಇಷ್ಟೇ ವೇಗವಾಗಿ ಓಡುತ್ತಿದ್ದರೆ ಪ್ರತಿಸ್ಪರ್ಧಿಗಳು ಮುನಿಸಿಕೊಂಡು ರೇಸಿನಿಂದಲೇ ಹಿಂದಕ್ಕೆ ಸರಿಯಬಹುದು ಎಂಬ ಎಚ್ಚರಿಕೆಯನ್ನು ನಗೆಸಾಮ್ರಾಟರು ರವಾನಿಸಿದ್ದಾರೆ!

ಬೊಗಳೆ

ಬ್ಲಾಗು ಎಂಬುದನ್ನು ಕನ್ನಡದಲ್ಲಿ ಏನೆಂದು ಕರೆಯಬೇಕು ಎಂಬುದಕ್ಕೆ ಉತ್ತಮವಾದ ಜನಾಭಿಪ್ರಾಯವನ್ನು ಮೂಡಿಸುವಲ್ಲಿ, ಜನರ ಕೆನ್ನೆಗೆ ಬೆಣ್ಣೆ ತಿಕ್ಕಿ ತಮ್ಮ ಪತ್ರಿಕೆಯ ಹೆಸರೇ ಅದಕ್ಕೆ ಸೂಚಿತವಾಗುವಂತೆ ಮಷ್ಕಿರಿ ಮಾಡುವಲ್ಲಿ ಅಸತ್ವ ಅನ್ವೇಷಿಗಳು ಯಶಸ್ವಿಯಾಗಿದ್ದಾರೆ. ಬ್ಲಾಗೆಂಬ ಒಲಿಂಪಿಕ್ಸಿನಲ್ಲಿ ಒಂದೊಂದು ಪತ್ರಿಕೆ ಒಂದೊಂದು ಸಾಧನೆ ಮಾಡುತ್ತಿದ್ದರೂ ನಗೆಸಾಮ್ರಾಟರು ಏನನ್ನೂ ಮಾಡದೆ ಸುಮ್ಮನಿದ್ದು ಮಾಡಿರುವ ಸಾಧನೆಯನ್ನು ಯಾರೂ ನೆನೆಸಿಕೊಳ್ಳುತ್ತಿಲ್ಲ ಎಂದು ಅವರ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಬೀಜಿಂಗಿಗೆ ತೆರಳದ ಸುದ್ದಿ ಮೂಲಗಳಿಂದ ತರಿಸಿಕೊಂಡ ವರದಿಯ ಪ್ರಕಾರ ಬೀಜಿಂಗಿನಲ್ಲಿ ಎಂಟು ಬಂಗಾರದ ಪದಕಗಳನ್ನು ನುಂಗಿದ ಮೀನನ್ನು ಅಮೇರಿಕಾಕ್ಕೆ ವಾಪಸ್ಸು ಕಳುಹಿಸಿದ ವರದಿಯನ್ನು ಪ್ರಕಟಿಸಿದೆ.

ಕೆಂಡಸಂಪಿಗೆಯ ಸುದ್ದಿಕ್ಯಾತ

ಹುಡುಗರೇ ನೀವು ಎಷ್ಟಾದರೂ ಮಂದಿ ಹುಡುಗಿಯರನ್ನು ಗರ್ಲ್‌ಫ್ರೆಂಡ್‌ಗಳಾಗಿ ಹೊಂದಿರಿ, ಅವರಿಗೆ ಎಷ್ಟಾದರೂ ಮಿಸ್ ಕಾಲ್ ಕೊಡಿ ಇಲ್ಲವೇ ಸ್ವೀಕರಿಸಿ ಆದರೆ ಮೆಸೇಜು ಮಾತ್ರ ಮಾಡಬೇಡಿ. ಹಾಗೊಂದು ವೇಳೆ ನೀವು ಮೇಸೇಜು ಮಾಡಿದರೆ ನಿಮಗೇ ಆಪತ್ತು ಎಂದು ಸರ್ವೆ ತಿಳಿಸಿದ ಸಂಗತಿಯನ್ನು ಸುದ್ದಿ ಕ್ಯಾತ ವರದಿ ಮಾಡಿದ್ದಾನೆ,
ಇತ್ತೀಚೆಗೆ ಈಸೋಪನ ಕಥೆಗಳಂತೆ ತನ್ನ ಪ್ರತಿಯೊಂದು ವರದಿಗೂ ನೀತಿಯನ್ನು ಕೊಡಮಾಡುತ್ತಿರುವ ಸುದ್ದಿ ಕ್ಯಾತ ಈ ವರದಿಗೆ ಕೊಟ್ಟ ನೀತಿ: ಹುಡುಗಿಯರು ಹತ್ತಿರ ಇದ್ದರೆ ಮೊಬೈಲ್ ಹೊರತೆಗೆಯಬೇಡಿ.

ಪಂಚ್ ಲೈನ್

ಬಿಜೆಪಿಯವರು ಏನೇನನ್ನೋ ಗಾಳಿಗೆ ತೂರಿ ಮತ್ತೇನನ್ನೋ ಹಿಡಿದುಕೊಳ್ಳುತ್ತಾರೆ ಎಂದು ಮರ್ಮಾಘಾತುಕಕಾರಿ ಪಂಚನ್ನು ಕೊಟ್ಟಿದ್ದ ಗಣೇಶ್ ಹಠಾತ್ತನೆ ಬ್ಲಾಗಿನ ಅಂಗಳದಿಂದ ಮರೆಯಾಗಿಬಿಟ್ಟಿದ್ದಾರೆ.
ನಗೆ ಸಾಮ್ರಾಟರು ನಮ್ಮ ಪಂಚಿನ ಚಾಂಪಿಯನ್ ಗಣೇಶರನ್ನು ಇತರ ದೇಶದವರು ಅಪಹರಿಸಿ ಒಲಿಂಪಿಕ್ಕಿನಲ್ಲಿ ಪಂಚಿಸಿ ಚಿನ್ನ ಗೆದ್ದು ತರಲು ಕಳುಹಿಸಿದ್ದಾರೇನೋ ಎಂದು ಸಂಶಯಿಸಿದ್ದರು. ಇದನ್ನು ಪತ್ತೇ ಹಚ್ಚಲು ತಮ್ಮ ಚೇಲ ಕುಚೇಲನನ್ನು ಅಟ್ಟಿದ್ದರು. ಆದರೆ ಪಂಚು ಕೊಡುವುದರಲ್ಲಿ ಚಿನ್ನವಿರಲಿ ತಗಡೂ ಸಹ ಗಣೇಶ್‌ಗೆ ಒಲಿಯದಿದ್ದುದರಿಂದ ಸಾಮ್ರಾಟರು ನೆಮ್ಮದಿಯಾಗಿದ್ದಾರೆ.