Tag Archives: ಬ್ಲಾಗು

ಸ್ವಾಮಿ ಅಧ್ಯಾತ್ಮಾನಂದರ ಅಂಕಣ

2 ಆಕ್ಟೋ

ನಗೆ ನಗಾರಿ ಡಾಟ್ ಕಾಮ್ ಒಂದು ವರ್ಷ ಪೂರೈಸಿದ ಖುಷಿಯಲ್ಲಿ ನಾವು ನಾಡಿನ ಅನೇಕ ಗಣ್ಯರನ್ನು ಖಾಸಗಿಯಾಗಿ ಸಂದರ್ಶಿಸಿದೆವು. ತಾವು ನೋಡಿರದ ನಗೆ ನಗಾರಿಯಲ್ಲಿ ಕಂಡು ಬಂದ ಕೊರತೆಗಳನ್ನು, ತಪ್ಪುಗಳನ್ನು ಮುಕ್ತ ಮನಸ್ಸಿನಿಂದ ತಿಳಿಸಲು ಬೇಡಿಕೊಂಡೆವು. ನಮ್ಮ ಬೇಡಿಕೆಯ ಮೇರೆಗೆ ಅವರು ಮಾಡಿದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಮೊದಲ ಕಂತಿನ ಭಾಗವಾಗಿ ಈ ಹೊಸ ಅಂಕಣವನ್ನು ಪ್ರಾರಂಭಿಸುತ್ತಿದ್ದೇವೆ.

– ನಗೆ ಸಾಮ್ರಾಟ್

ಎಲ್ಲರಲ್ಲೂ ನೆಲೆಸಿರುವ ಆತನಿಗೆ ಇಲ್ಲಿಂದ ವಂದಿಸುವೆವು. ನಮ್ಮಲ್ಲಿ ನೆಲೆಸಿರುವ ಆತನಿಗೆ ನಿಮ್ಮ ಕಂಪ್ಯೂಟರ್ ಪರದೆಗೆ ಉದ್ಧಂಡ ನಮಸ್ಕಾರ ಹಾಕುವುದರ ಮೂಲಕ ನಮಸ್ಕರಿಸಿ.

ಅಧ್ಯಾತ್ಮದ ಬಗ್ಗೆ ನಗೆ ನಗಾರಿ ಡಾಟ್ ಕಾಮ್‌ಗೆ ಬರೆಯಬೇಕು ಎಂದು ತೊಣಚಪ್ಪನವರು ಕೇಳಿಕೊಂಡಾಗ ನಾವು ದಿಗ್ಭ್ರಾಂತರಾದೆವು. ಕಾರಣವಿಷ್ಟೆ. ನಾವು ಈ ನಗೆ ನಗಾರಿ ಡಾಟ್ ಕಾಮ್ ಎಂಬ ಬ್ಲಾಗಿನ ಹೆಸರನ್ನೇ ಆಲಿಸಿರಲಿಲ್ಲ. ಇದೊಂದು ಬ್ಲಾಗು ಬಿಡಿ, ವಾಸ್ತವವಾಗಿ ನಮಗೆ ಬ್ಲಾಗ್ ಎಂದರೇನೆಂದೇ ತಿಳಿದಿರಲಿಲ್ಲ. ಇತ್ತೀಚೆಗಷ್ಟೇ ಹುಟ್ಟಿಕೊಂಡಿರುವ ಈ ಬ್ಲಾಗ್ ಬಗ್ಗೆ ತಿಳಿಯದಿರುವುದು ಅಂತಹ ಅಪರಾಧವಲ್ಲ ಬಿಡಿ. ಒಬ್ಬನಿಗೆ ಬ್ಲಾಗ್ ಬಗ್ಗೆ ತಿಳಿದಿಲ್ಲ ಎಂದರೆ ಆತ ಕಾಲೇಜು ವಿದ್ಯಾರ್ಥಿಯಲ್ಲ, ಪುಕ್ಕಟೆ ಅಂತರ್ಜಾಲದ ಸಂಪರ್ಕವಿರುವ ಆಫೀಸಿನಲ್ಲಿ ದುಂದಾಗಿ ಕಳೆಯಲು ಹೆಚ್ಚು ಸಮಯವಿರುವ ಉದ್ಯೋಗಿಯಲ್ಲ, ಪತ್ರಿಕಾ ಕಛೇರಿಗಳ ಕಸದ ಬುಟ್ಟಿಯಲ್ಲಿ spirituality ಪ್ರಾಣ ಬಿಡುವ ತಮ್ಮ ಕೃತಿಗಳಿಗೆ ಕೃತಕ ಉಸಿರಾಟ ಕೊಡಬಯಸುವ ಹವ್ಯಾಸಿ ಲೇಖಕನಲ್ಲ, ಪತ್ರಿಕೆಯಲ್ಲಿ ಎರಡು ಕಾಲಂ ವರದಿ ಪ್ರಕಟವಾಗದ ಸಂಪಾದಕೀಯ ಬರೆಯುವ ಹುಮ್ಮಸ್ಸಿರುವ ಪತ್ರಕರ್ತನಲ್ಲ, ಅವರಿವರನ್ನು ಬಯ್ಯುವ, ಅದಕ್ಕಾಗಿ ಸಮಯ ವಿನಿಯೋಗಿಸುವ, ಬೈದವರಿಗೆ ತಾನಿಲ್ಲಿ ಕೀಬೋರ್ಡಿನ ಮೇಲೆ ಕುಟ್ಟಿದ್ದು ತಲುಪಿಯೇ ತಲುಪುತ್ತದೆ ಎಂದು ಬ್ಲಾಗ್ ಅಂಚೆ ಇಲಾಖೆಯ ಮೇಲೆ ಅಪಾರ ವಿಶ್ವಾಸವಿರಿಸುವ ನಾಮವಿಲ್ಲದ,ಲಿಂಗವಿಲ್ಲದ ಜೀವಿಯಲ್ಲ ಎಂದು ನಿರ್ಧರಿಸಬಹುದು.

ಆದರೆ ನಮಗೆ ಈ ಅಂತರಜಾಲ ಎಂದರೇನೆಂಬುದೇ ತಿಳಿದಿರಲಿಲ್ಲ. ನಮ್ಮ ಮಠದ ವಾತಾವರಣದಲ್ಲಿ ನಮಗೆ ವೆಬ್ ಎಂದರೆ ಜೇಡನದ್ದೇ ಎಂದು ಕೇಳುವಷ್ಟರ ಮಟ್ಟಿಗೆ ಮಾತ್ರ ತಿಳುವಳಿಕೆ ಬೆಳೆದಿತ್ತು. ಆದರೆ ಕಾಲ ಬದಲಾದ ಹಾಗೆ ನಾವೂ ಬದಲಾಗಬೇಕಲ್ಲವೇ? ಏಕೆ ಬದಲಾಗಬೇಕು ಎಂದು ಜಿಜ್ಞಾಸುಗಳು ಪ್ರಶ್ನಿಸಬಹುದು. ಬದಲಾಗದಿದ್ದರೆ ಚಲಾವಣೆ ಇರುವುದಿಲ್ಲವಾದ್ದರಿಂದ ಬದಲಾಗಲೇ ಬೇಕು.

ಅಂತರಜಾಲದ ಓನಾಮವನ್ನೂ ತಿಳಿಯದ ನಮ್ಮ ಕೈಲಿ ಅಂಕಣವನ್ನು ಬರೆಸುವ ಸಾಹಸವನ್ನು ಮಾಡಲು ಬಂದ ತೊಣಚಪ್ಪನವರನ್ನು ನಾವು ಗದರಿಸಿ ಕಳುಹಿಸಿದೆವು. ತೊಣಚಿ ಬಿಡು ಎಂದರೆ ಬಿಟ್ಟು ಬಿಡುವುದೇ? ನಮ್ಮ ಮಠದಲ್ಲಿ ದಾನ, ಖರ್ಚು ವೆಚ್ಛಗಳನ್ನು ನೆನಪಿಡುವುದಕ್ಕಾಗಿ ತಂದಿಟ್ಟುಕೊಂಡಿದ್ದ ಕಂಪ್ಯೂಟರನ್ನು ಅಂತರಜಾಲದ ಸಂಪರ್ಕಕ್ಕೆ ಒಡ್ಡಿ ನಮಗೆ ನಗೆ ನಗಾರಿ ಬ್ಲಾಗನ್ನು ತೊಣಚಪ್ಪ ತೋರಿದರು. ಸಂಪಾದಕರಾದ ನಗೆ ಸಾಮ್ರಾಟರ ಬರಹಗಳನ್ನು ತೋರಿಸಿದರು. ಅದರಲ್ಲಿ ಸಾಮ್ರಾಟರು ತಮ್ಮನ್ನು ‘ನಾವು’ ಎಂದು ಕರೆದುಕೊಳ್ಳುವುದನ್ನು ನೋಡಿ ನಮಗೆ ಗಾಬರಿಯಾಯಿತು. ಇವರು ಇನ್ನ್ಯಾವುದೋ ಮಠದ ಸ್ವಾಮಿಯೇ ಎಂಬ ಶಂಕೆ ಉಂಟಾಯಿತು. ಆದರೆ ಆ ಬಗೆಯ ಸ್ವಸಂಬೋಧನೆಯ ಹಿಂದಿನ ಕಾರಣವನ್ನು ಅರಿತು ನಾವು ಸಮಾಧಾನ ಹೊಂದಿದೆವು.

ನಮ್ಮ ಈ ಅಂಕಣದ ಮೊದಲ ಲೇಖನವಾಗಿ ನಾವು ಏನನ್ನು ಬರೆಯಬೇಕೆಂದು ಆಲೋಚಿಸುವಾಗ ಅಧ್ಯಾತ್ಮದ ಬಗ್ಗೆ ಬರೆಯುವುದಕ್ಕಾಗಿ ನಮ್ಮನ್ನೇ ಏಕೆ ಸಂಪಾದಕರು ಆರಿಸಿದರು ಎಂಬ ಪ್ರಶ್ನೆಯು ಹುಟ್ಟಿಕೊಂಡಿತು. ಅಧ್ಯಾತ್ಮ ಎಂಬುದು ಮಠದ ಸ್ವಾಮೀಜಿಗಳ, ಸಂನ್ಯಾಸಿಗಳ, ಪೂಜಾರಿಗಳ, ಪಿಂಚಣಿ ಎಣಿಸುತ್ತಿರುವವರ ಸ್ವತ್ತು ಆದದ್ದು ಯಾವಾಗಿನಿಂದ ಎಂಬ ಜಿಜ್ಞಾಸೆ ಮೂಡಿತು. ಆಟೋ ಚಾಲಕನಿಗೆ, ರೈತನಿಗೆ, ಚಮ್ಮಾರನಿಗೆ, ಬಸ್ ಡ್ರೈವರಿಗೆ, ಟೀ ಸ್ಟಾಲ್ ಮಾಣಿಗೆ, ವಾರ್ತಾ ನಿರೂಪಕಿಗೆ ತಿಳಿಯದ ಯಾವ ಅಧ್ಯಾತ್ಮ ಮಠ ಮಂದಿರಗಳಲ್ಲಿ ಕೂತ ಸ್ವಾಮೀಜಿಗಳಿಗೆ ತಿಳಿದೀತು ಎನ್ನಿಸಿತು. ಮದುವೆ, ದಾಂಪತ್ಯದ ಬಗ್ಗೆ, ಕುಟುಂಬದ ಬಗ್ಗೆ, ಸಂಸಾರ ಸಾಗರದ ಬಗ್ಗೆ ಅವ್ಯಾವುಗಳಲ್ಲೂ ತೊಡಗಿಕೊಳ್ಳದವನಿಗೆ ತಿಳಿದಿರಲು ಹೇಗೆ ಸಾಧ್ಯ? ಈಜೇ ಬರದವನ ಬಳಿ ನದಿಯ ಆಳದ ಬಗ್ಗೆ, ಅದರ ಹರಿವಿನ ಬಗ್ಗೆ, ದಾಟುವ ಬಗ್ಗೆ ಸಲಹೆ ಕೇಳುವುದು ವಿವೇಕಯುತವೇ? ಹೆಣ್ಣಿನ ಸಂಗವನ್ನೇ ಅರಿಯದ (ಅಥವಾ ಹಾಗೆ ತೋರ್ಪಡಿಸುವ) ಸಂನ್ಯಾಸಿ ಹೆಣ್ಣು ಮಾಯೆ, ಹೆಣ್ಣು ಬಂಧನ, ಸಂಸಾರ ಸಾಗರ ಎನ್ನದೆ ಇನ್ನೇನು ಅಂದಾನು? ಹೆಣ್ಣು ಗಂಡಿನ ಸಂಯೋಗವನ್ನು ಪಾಪವೆನ್ನದೆ ಮತ್ತೇನು ಅಂದಾನು? ಎಟುಕದ ದ್ರಾಕ್ಷಿ ಹುಳಿಯಲ್ಲವೇ?

ಜಿಜ್ಞಾಸೆಗಳು ಕೈ ಹಿಡಿದು ಜಗ್ಗುತ್ತಿರುವಾಗ ನಾವು ಸಾಮ್ರಾಟರನ್ನು ಸಂಪರ್ಕಿಸಿದೆವು. ಚಾಟ್ ಕೋಣೆಯಲ್ಲಿ ಕುಳಿತು ನೇರವಾಗಿ ನಮ್ಮ ಗೊಂದಲಗಳನ್ನು ತೋಡಿಕೊಂಡೆವು. “ನೋಡಿ ಸ್ವಾಮಿಗಳೇ, ನಿಮ್ಮ ಈ ಜಿಜ್ಞಾಸೆಗಳು ಹುಟ್ಟುವುದಕ್ಕೆ ನಮ್ಮ ಬ್ಲಾಗಿಗೆ ಬರೆಯುವುದರಿಂದಾವ ಸಂಭಾವನೆಯೂ ದೊರೆಯುವುದಿಲ್ಲ ಎನ್ನುವುದೇ ಪ್ರಮುಖ ಕಾರಣವಾದರೆ ನಾವು ಅಸಹಾಯಕರು. ನಮ್ಮ ಬ್ಲಾಗಿನ ಅಭಿಮಾನಿಗಳ ಸಂಖ್ಯೆ ಕಡಿಮೆ ಎನ್ನುವುದು ಕಾರಣವಾದರೆ ಅದರ ಬಗ್ಗೆಯೂ ನಾವೇನು ಮಾಡಲು ಸಾಧ್ಯವಿಲ್ಲ, ಬ್ಲಾಗ್ ಹಿಟ್ಟುಗಳನ್ನು ಏರಿಸಿಕೊಳ್ಲುವುದಕ್ಕಾಗಿ ಲಿಂಗ ಬದಲಾವಣೆ ಮಾಡಿಸಿಕೊಳ್ಳಲು ಸೌಕರ್ಯವಿಲ್ಲ, ಹೆಸರು ಬದಲಿಸಿಕೊಳ್ಳುವ ಅನಿವಾರ್ಯವಿಲ್ಲ.  ಈ ಬರವಣಿಗೆಯಿಂದ ನಿಮ್ಮ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಲಾರದು ಎನ್ನುವುದು ನಿಮ್ಮ ಚಿಂತೆಯಾಗಿದ್ದರೆ ಅದರ ಬಗ್ಗೆ ಏನಾದರೂ ಉಪಾಯ ಹೂಡಬಹುದು. ಆದರೆ ಇದು ನನ್ನ ಪ್ರಾಮಾಣಿಕ ಪ್ರಶ್ನೆ, ಆತ್ಮಸಾಕ್ಷಿಯ ಕಾಟ ಎನ್ನುವುದಾದರೆ ಒಂದು ಮಾತು ನೆನಪಿನಲ್ಲಿಡಿ. ಶಂಖದಿಂದ ಬಂದರಷ್ಟೇ ತೀರ್ಥ. ಆನೆ ನಡೆದದ್ದೇ ದಾರಿ. ಒಂದನೆಯ ತರಗತಿಯ ಹುಡುಗನ ಉತ್ತರ ಪತ್ರಿಕೆಯನ್ನೇ ವೇದಿಕೆಯ ಮೇಲೆ ನಿಂತು ಕವಿ ಎಂದು ಕರೆದುಕೊಳ್ಳುವವನೊಬ್ಬ ಓದಿದರೆ ಅದೇ ಕವಿತಾವಾಚನವಾಗುತ್ತೆ. ಹೀಗಾಗಿ ನೀವು ಯೋಚಿಸಬೇಡಿ, ಸುಮ್ಮನೆ ನನ್ನ ತಲೆ ಕೊರೆಯಬೇಡಿ, ನಿಮ್ಮದೂ ಕೊರೆದುಕೊಳ್ಳಬೇಡಿ. ಕೊರೆಸಿಕೊಳ್ಳಲು ಸಾಲುಗಟ್ಟಿರುವ ಅಸಂಖ್ಯಾತ ಪ್ರಜೆಗಳು ನಮ್ಮ ಸಾಮ್ರಾಜ್ಯದಲ್ಲಿವೆ.” ಎಂದವರು ವಿವರಿಸಿದಾಗ ನಮಗೆ ಧೈರ್ಯ ಬಂದಿತು.

ಹೀಗಾಗಿ ಅಧ್ಯಾತ್ಮ ಎಂಬ ಕಬ್ಬಿಣದ ಕಡಲೆಯನ್ನು ತಿನ್ನಿಸಿ, ನಗೆ ನಗಾರಿಯೆಂಬ ನೀರನ್ನು ಕುಡಿಸಿ ನೀವು ‘ನಗೆ ಬಾಂಬು’ಗಳನ್ನು ಸಿಡಿಸುವಂತೆ ಮಾಡಿ ನಿಮ್ಮ ವಾತಾವರಣವನ್ನು ಹಾಸ್ಯಮಯ ಮಾಡುವ ಉದ್ದೇಶದಿಂದ ನಾವು ಬರೆಯಲು ಒಪ್ಪಿಕೊಂಡಿದ್ದೇವೆ. ಮುಂದಿನ ಸಂಚಿಕೆಯಿಂದ ನಮ್ಮ ಅಧ್ಯಾತ್ಮ ಪ್ರವಚನವನ್ನು ಶುರು ಮಾಡುವೆವು. ಶಿರಸ್ತ್ರಾಣ, ಕರ್ಣ ಕವಚಗಳನ್ನು, ನೇತ್ರ ಕುಂಡಲಗಳನ್ನು ತಯಾರು ಮಾಡಿಟ್ಟು ಕೊಳ್ಳುವವರಿಗೆ ಸಾಕಷ್ಟು ಸಮಯಾವಕಾಶವಿದ್ದೇ ಇದೆ.

ಯುವ ಬ್ಲಾಗಿಗನ ಸಂದರ್ಶನ(2)

13 ಆಗಸ್ಟ್

(ನಗೆ ಸಾಮ್ರಾಟರ ಅಟ್ಟದ ಮೇಲಿನ ಈಗೋ ಭಾಳ ಬುದ್ಧಿವಂತನಾಗಿಬಿಟ್ಟಿದ್ದ. ಸಂದರ್ಶನದ ಉಳಿದ ಭಾಗವನ್ನು ‘ನಾಳೆ’ಗೆ ಮುಂದುವರೆಸುವುದಾಗಿ ಹೇಳಿ ನಾಪತ್ತೆಯಾಗಿಬಿಟ್ಟ. ಆ ನಾಳೆ ಯಾವತ್ತೂ ಬರುವುದಿಲ್ಲ ಎಂದು ತಿಳಿದು ಆತ ಪರಾರಿ ಕಿತ್ತಿದ್ದ. ಅನಂತರ ನಗೆ ಸಾಮ್ರಾಟರು ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಬೀದಿ ಬೀದಿ ಅಲೆದು ಮನೆ ಮನೆಯ ಅಟ್ಟವನ್ನು ಹುಡುಕಾಡಿ ಅವನನ್ನು ಎಳಕೊಂಡು ಬಂದಿದ್ದಾರೆ. ಸಂದರ್ಶನ ಮುಂದಿನ ಭಾಗವನ್ನು ಇಲ್ಲಿ ಕೊಟ್ಟು ಆತ ತನ್ನ ಮರ್ಯಾದೆ ಉಳಿಸಿಕೊಂಡಿದ್ದಾನೆ.)

ನಗೆ ಸಾಮ್ರಾಟ್: ಹೌದು, ಸರ್. ಬ್ಲಾಗಿಂಗ್ ಸಮಾಜದ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರುತ್ತದೆ? ದಯವಿಟ್ಟು ತಿಳಿಸಬೇಕು.

ಯುವ ಬ್ಲಾಗಿಗ: ಇಂಟರ್ನೆಟ್ ಎಂಬ ಅಲ್ಲಾವುದ್ದೀನನ ಅದ್ಭುತದ ದೀಪದಿಂದ ಹೊರ ಬರುತ್ತಿರುವ ಅಸಂಖ್ಯಾತ ಜೀನಿಗಳಲ್ಲಿ ಈ ಬ್ಲಾಗಿನ ತಂತ್ರಜ್ಞಾನವೂ ಒಂದು ಕಣ್ರೀ. ಇದು ಜನರಿಗೆ ಹಿಂದೆಂದೂ ಇರದಿದ್ದ, ಜನರು ಊಹಿಸಲು ಸಾಧ್ಯವೇ ಇರದಿದ್ದ ಅವಕಾಶವನ್ನು ತೆರೆದುಕೊಟ್ಟಿದೆ. ಇಂಥ ಸವಲತ್ತು ಯಾವ ಕಾಲದಲ್ಲಿತ್ತು, ಯಾವ ನಾಗರೀಕತೆಗಳಲ್ಲಿತ್ತು? ಹಿಂದಿನಿಂದಲೂ ತುಂಬಾ ಹಿಂದಿನಿಂದಲೂ ದೊಡ್ಡವರು ಹೇಳುತ್ತಾ ಬಂದದ್ದು ಒಂದೇ ಮಾತು ‘ಬಾಯ್ಮುಚ್ಚು… ತಲೆ ಹರಟೆ!’ ಮನುಷ್ಯನ ಸಹಜ ಸ್ವಭಾವವೇ ಬಾಯ್ತೆರೆಯುವುದು. ಮಗು ಕಣ್ಬಿಟ್ಟ ಕೂಡಲೇ ಬಾಯಿ ಅಗಲಿಸಿ ಕಿಟ್ಟನೆ ಚೀರುತ್ತದೆ. ಹಾಗೆ ಚೀರದ ಮಗು ಆರೋಗ್ಯ ಹೊಂದಿರುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ. ಮನುಷ್ಯ ಬಿದ್ದಾಗಲೂ, ಎಡವಿದಾಗಲೂ ಬಾಯಿ ತೆರೆಯುತ್ತಾನೆ. ಕೊನೆಗೆ ಸತ್ತ ಮೇಲೂ ಬಾಯ್ತೆರೆದೇ ಇರುತ್ತಾನೆ. ಮನುಷ್ಯನ ಈ ಸಹಜ ಸ್ವಭಾವವನ್ನು ದಮನಿಸುವ ವ್ಯವಸ್ಥಿತ ಸಂಚು ತುಂಬಾ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದನ್ನು ನುಚ್ಚು ನೂರು ಮಾಡಿದ್ದು ಬ್ಲಾಗುಗಳು. ಇದಕ್ಕೂ ಮುನ್ನ ಇದೇ ಕ್ರಾಂತಿಯನ್ನು ಮೊಬೈಲ್ ಫೋನುಗಳು ಮಾಡಲು ಪ್ರಯತ್ನ ಪಟ್ಟವು. ‘ಮಾತಾಡು ಇಂಡಿಯಾ ಮಾತಾಡು’ ಎಂದು ಹುರಿದುಂಬಿಸಿದವು. ಆದರೆ ಅವುಗಳಿಗೆ ಯಶಸ್ಸು ಸಿಕ್ಕಲಿಲ್ಲ.

ನ.ಸಾ: ಮೊಬೈಲುಗಳು ಯಶಸ್ವಿಯಾಗಲಿಲ್ಲವಾ? ಹೇಗೆ ಸರ್?

ಯು.ಬ್ಲಾ: ‘ಮಾತಾಡು ಭಾರತವೇ ಮನಬಿಚ್ಚಿ ಮಾತಾಡು’ ಎಂದೇನೋ ಮೊಬೈಲ್ ಕಂಪೆನಿಗಳು ಜನರನ್ನು ಹುರಿದುಂಬಿಸಿದವು. ಜನರೂ ಸಹ ಹೆಚ್ಚು ಹೆಚ್ಚು ಮಾತಾಡಿದಷ್ಟೂ ಫೋನ್ ಬಿಲ್ಲು ಹೆಚ್ಚು ಹೆಚ್ಚು ಬರುವುದನ್ನು ಕಂಡು ತಮ್ಮ ಮಾತಿಗೆ ಇಷ್ಟೋಂದು ಬೆಲೆಯಿದೆಯಾ ಎಂದು ಅನುಮಾನಗೊಂಡು, ಆಶ್ಚರ್ಯಗೊಂಡು, ಆಘಾತಗೊಂಡು ಸುಧಾರಿಸಿಕೊಂಡರು. ಆದರೆ ಬರು ಬರುತ್ತಾ ಅವರಿಗೆ ಅರಿವಾಯಿತು. ಮೊಬೈಲುಗಳು ಕ್ರಾಂತಿಯನ್ನು ಮಾಡುವಲ್ಲಿ ಸೋತವು ಎಂದು. ಮೊಬೈಲಿನಲ್ಲಿ ನೀವೆಷ್ಟೇ ಮಾತನಾಡಿದರೂ ನಿಮ್ಮನ್ನು ಕೇಳಲಿಕ್ಕೆ ಒಬ್ಬನಾದರೂ ಅತ್ತ ಕಡೆ ಇರಬೇಕಲ್ಲವಾ? ನಿಮ್ಮ ಕಥೆಗೆ, ನಿಮ್ಮ ಸಾಧನೆಯ ಯಶೋಗಾಥೆಗೆ ಹೂಂಗುಟ್ಟಲು ಒಂದು ಜೊತೆ ಕಿವಿ-ಬಾಯಿಯಾದರೂ ಆವಶ್ಯಕವಲ್ಲವಾ? ಜನರಿಗೆ ಮಾತನಾಡುವ, ಬಾಯ್ಬಿಡುವ ತೆವಲು ಹತ್ತಿದಾಗ ಸುಮ್ಮನೆ ಕಂಡಕಂಡವರಿಗೆ ಫೋನಾಯಿಸಲು ಸಾಧ್ಯವಾಗುತ್ತದಾ? ಹಾಗೇನಾದರೂ ಮಾಡಿದರೆ ‘ಕೊರೆತ ಕ್ರಿಮಿ’ ಎಂಬ ಬಿರುದು ಪಡೆಯಬೇಕಾಗುತ್ತದೆ. ನಿಮಗೆ ಸಾಹಿತ್ಯದಲ್ಲಿ ನೊಬೆಲ್ ಕೊಟ್ಟ ಸಂಗತಿಯನ್ನು ಹೇಳಲು ಫೋನಾಯಿಸಿದರೂ ಅತ್ತ ಬದಿಯವರು ಫೋನಿನ ಕೊನೆಯ ರಿಂಗಿನ ಕಂಪನ ಸಾಯುವವರೆಗೂ ಅದನ್ನು ಕೈಲೇ ಇಟ್ಟುಕೊಂಡು ಸತಾಯಿಸತೊಡಗುತ್ತಾರೆ. ಇಲ್ಲವೇ ಸಿಮ್ ಬದಲಿಸಿ ಅದರ ಬಗ್ಗೆ ಸುಳಿವೂ ಸಿಕ್ಕದ ಹಾಗೆ ಎಚ್ಚರ ವಹಿಸುತ್ತಾರೆ. ಇದರಿಂದಾಗಿ ಮೊಬೈಲುಗಳು ‘ಬಾಯ್ತೆರೆಸುವ’ ಕ್ರಾಂತಿಯನ್ನು ಮಾಡುವಲ್ಲಿ ವಿಫಲವಾದವು.

ನ.ಸಾ: ಅದೇನೋ ಸರಿ ಸರ್, ಆದರೆ ಬ್ಲಾಗುಗಳು ಹೇಗೆ ಈ ಕ್ರಾಂತಿಯನ್ನು ಮಾಡಲು ಸಾಧ್ಯವಾಯಿತು?

ಯು.ಬ್ಲಾ: ಹೇಳುತ್ತೇನೆ ಕೇಳಿ, ಈ ಬ್ಲಾಗುಗಳು ಕಂಪ್ಯೂಟರು, ಅದಕ್ಕೊಂದು ಅಂತರ್ಜಾಲದ ನೆಟ್‌ವರ್ಕು ಇರುವ ಯಾರಾದರೂ ಒಂದು ತಾಣವನ್ನು ತೆರೆದುಕೊಂಡು ಮನಸ್ಸಿಗೆ ತೋಚಿದ್ದನ್ನು ಗೀಚಿ ಬಿಸಾಕುವ ಸ್ವಾತಂತ್ರ್ಯವನ್ನೂ ಕೊಟ್ಟವು. ಜನರು ಚೆಂದದ ಹೆಸರಿನ ಬ್ಲಾಗುಗಳನ್ನು ತೆರೆದುಕೊಂಡು ಅದರಲ್ಲಿ ತಮ್ಮ ಫೋಟೊ ಹಾಕಿಕೊಂಡು, ತಮ್ಮ ಪ್ರವರವನ್ನು ಹರಿಬಿಟ್ಟು ಹುರುಪಿನಿಂದ ಮಾತು ಹಚ್ಚಿಕೊಂಡರು. ಮೈಮೇಲೆ ಹುತ್ತಗಟ್ಟಲು ಬಿಟ್ಟು ರಾಮಾಯಣ ರಚಿಸುವಲ್ಲಿ ಮಗ್ನರಾದವರ ಹಾಗೆ ಕೀಲಿಮಣೆಯನ್ನು ಕುಟ್ಟುತ್ತಾ ಕೂರುತ್ತಾರೆ ಜನರು. ತಾವು ಬರೆಯುವುದನ್ನೇ ಜಗತ್ತು ಕಾಯುತ್ತಾ ಕುಳಿತಿದೆಯೆಂದು ಭ್ರಮಿಸಿಕೊಂಡು ಕಲ್ಪನಾ ಲೋಕದಲ್ಲಿ ತೇಲಾಡುತ್ತಾರೆ. ತಮ್ಮ ಮಾತನ್ನು, ತಮ್ಮ ಬರಹವನ್ನು ತಮ್ಮ ಚಿಂತನೆಯ ಹೆಸರಿನಲ್ಲಿರುವ ಹರಟೆಯನ್ನು ಜಗತ್ತಿನ ಯಾವ ಮನುಷ್ಯ ಬೇಕಾದರೂ ಓದಬಹುದು ಎಂದು ನೆನೆದು ಪುಳಕಗೊಳ್ಳುತ್ತಾರೆ. ದಿನಕ್ಕೆ ನೂರು ಬಾರಿ ಕ್ಲಿಕ್ಕಿಗರ ಸಂಖ್ಯೆಯನ್ನು ನೋಡುತ್ತಾ, ಬ್ಲಾಗ್ ಅಂಕಿ ಅಂಶಗಳ ಗ್ರಾಫನ್ನೇ ಧೇನಿಸುತ್ತಾ ಕೂರುತ್ತಾರೆ. ದಿನ ದಿನವೂ ಪ್ರಪಂಚದ ಯಾವ ಮೂಲೆಯಿಂದಲಾದರೂ ತಮಗೆ ಪ್ರತಿಕ್ರಿಯೆ ಬಂದಿದೆಯಾ ಎಂದು ಮೇಲ್ ಬುಟ್ಟಿಯನ್ನು ತಡಕುತ್ತಾರೆ. ಇಷ್ಟೆಲ್ಲಾ ಹುಸಿ ಸಂಭ್ರಮ ಪಡುತ್ತಾ ಕಳೆಯುವ ಸಮಯದಲ್ಲಿ ಮಹತ್ವವಾದದ್ದೇನನ್ನೋ ಓದುವ, ಬರೆಯುವ, ಹೊಸದನ್ನು ಕಲಿಯುವಂತಹ ಕೆಲಸಗಳನ್ನು ಮಾಡಬಹುದು ಎಂಬುದನ್ನು ಯಶಸ್ವಿಯಾಗಿ ಮರೆಯುತ್ತಾರೆ. ಮಾತನಾಡುತ್ತಲೇ ಹೋಗುತ್ತಾರೆ…

ನ.ಸಾ: ತುಂಬಾ ಚೆನ್ನಾಗಿ ಹೇಳಿದ್ರಿ ಸರ್. ಬ್ಲಾಗುಗಳಲ್ಲಿ ಹೆಚ್ಚು ಹೆಚ್ಚು ಜನರು ಬರೆಯಲು ಶುರು ಮಾಡಿದಾಗಿನಿಂದ ಒಟ್ಟಾರೆಯಾಗಿ ಏನೆಲ್ಲಾ ಬೆಳವಣಿಗೆಗಳಾಗಿವೆ? ಜನರ ಮನಸ್ಥಿತಿಯಲ್ಲಿ ಏನೆಲ್ಲಾ ಪರಿವರ್ತನೆಗಳಾಗಿವೆ?

ಯು.ಬ್ಲಾ: ಒಳ್ಳೆಯ ಪ್ರಶ್ನೆ. ನಮ್ಮ ಜನರಲ್ಲಿ, ಅದರಲ್ಲೂ ನನ್ನಂಥ ಯುವಕರಲ್ಲಿ ಬಹಳ ಬದಲಾವಣೆಗಳಾಗುತ್ತಿವೆ. ಹಿಂದೆಲ್ಲಾ ಸಮಾಜದ ಬಗ್ಗೆ, ವ್ಯವಸ್ಥೆಯಲ್ಲಿನ ಅವ್ಯವಸ್ಥೆಯ ಬಗ್ಗೆ ಇವರು ಕುದ್ದು ಹೋಗುತ್ತಿದ್ದರು. ಅನ್ಯಾಯ ಮೇರೆ ಮೀರಿದಾಗ ಬೀದಿಗಿಳಿಯುತ್ತಿದ್ದರು. ಕೆಲವೊಮ್ಮೆ ಉಗ್ರ ಪ್ರತಿಭಟನೆಗಳನ್ನು ಮಾಡುತ್ತಿದ್ದರು. ಜೀವವನ್ನು ಬಲಿದಾನ ಮಾಡಲೂ ಹಿಂಜರಿಯುತ್ತಿರಲಿಲ್ಲ, ಸುಧಾರಣೆಯನ್ನು ತರುತ್ತಿದ್ದರು. ಬದಲಾವಣೆಗೆ ಕಾರಣರಾಗುತ್ತಿದ್ದರು. ಈಗ ಹಾಗಿಲ್ಲ. ತಮಗೆ ಏನೇ ಅನ್ಯಾಯ ಕಂಡರೂ, ವ್ಯವಸ್ಥೆಯ ಬಗ್ಗೆ ಜಿಗುಪ್ಸೆ ಬಂದರೂ ಪಬ್ಲಿಕ್ ಟಾಯ್ಲೆಟ್ ಒಳಹೊಕ್ಕು ಉಮ್ಮಳವನ್ನು ಕಳೆದುಕೊಂಡು ಬಂದಷ್ಟೇ ಸಲೀಸಾಗಿ ಅದನ್ನೆಲ್ಲಾ ಬ್ಲಾಗಿನ ಅಂಗಳದಲ್ಲಿ ಕಾರಿಕೊಂಡು ಜವಾಬ್ದಾರಿಯಿಂದ ಜಾರಿಕೊಂಡು ಬಿಡುತ್ತಾರೆ. ಕಣ್ಣೆದುರೇ ಅನ್ಯಾಯ ನಡೆಯುತ್ತಿದ್ದರೆ ಅದರ ಬಗ್ಗೆ ಬ್ಲಾಗಿನಲ್ಲಿ ಏನೆಂದು ಬರೆಯುವುದು, ಏನು ಟೈಟಲ್ ಕೊಡುವುದು, ಎಂಥಾ ಪ್ರತಿಕ್ರಿಯೆ ಬರಬಹುದು ಎಂದೆಲ್ಲಾ ಕನಸುತ್ತಾ ಅನ್ಯಾಯವನ್ನು ಪ್ರತಿಭಟಿಸುವುದನ್ನೇ ಮರೆಯಲು ಸಹಾಯ ಮಾಡುತ್ತಲಿದೆ ಈ ಬ್ಲಾಗು. ಟ್ರಾಫಿಕ್ಕಿನ ಬಗ್ಗೆ, ಹೆಚ್ಚುತ್ತಿರುವ ಮನಸ್ಸಿನ ಮಾಲಿನ್ಯದ ಬಗ್ಗೆ, ಭಾವನೆಗಳು ನಶಿಸುತ್ತಿರುವುದರ ಬಗ್ಗೆ, ಮನುಷ್ಯ ಮನುಷ್ಯನ ಜೊತೆ ಮಾತನಾಡಲು ಸಂಯಮ ಕಳೆದುಕೊಳ್ಳುತ್ತಿರುವ ಬೆಳವಣಿಗೆಯ ಬಗ್ಗೆ… ಹೀಗೆ ಎಲ್ಲದರ ಬಗ್ಗೆ ಗೊಣಗುತ್ತಾ ಗೊಣಗುತ್ತಾ ತಮ್ಮ ಗೊಣಗಾಟ ಈ ಜಡವಾದ ವ್ಯವಸ್ಥೆಯಲ್ಲಿ ಭಯಾನಕ ಬಿರುಗಾಳಿಯನ್ನೇಳಿಸುತ್ತದೆ ಎಂದು ಕನಸು ಕಾಣುತ್ತಾ ಬದುಕುತ್ತಿದ್ದಾರೆ.

ನ.ಸಾ: ಹೀಗೆಲ್ಲಾ ನಡೆಯುತ್ತಿದೆಯೇ ಸರ್? ಮತ್ತೇನೇನು ನಿಮ್ಮ ಗಮನಕ್ಕೆ ಬಂದಿದೆ?

ಯು.ಬ್ಲಾ: ಹೇಳಲಿಕ್ಕೆ ಇನ್ನೂ ಇದೆ. ಜನರಿಗೆ ಪತ್ರಿಕೆಗಳು ಏಕೈಕ ಸುದ್ದಿ ಮೂಲವಾಗಿದ್ದವು. ಪತ್ರಿಕೆಯಲ್ಲಿ ಪ್ರಕಟವಾದದ್ದೆಲ್ಲಾ ಸತ್ಯ ಎಂದು ಜನ ನಂಬುತ್ತಿದ್ದರೂ ಈಗಲೂ ಬಹುಪಾಲು ಮಂದಿ ಅದನ್ನೇ ನಂಬಿಕೊಂಡಿದ್ದಾರೆ. ಈ ಬ್ಲಾಗುಗಳು ಬಂದ ಮೇಲೆ ಜನರು ಪತ್ರಿಕೆಗಳ ‘ಪಾತಿವ್ರತ್ಯ’ವನ್ನೇ ಶಂಕಿಸಲು ಶುರು ಮಾಡಿದ್ದಾರೆ. ಮುಂಚೆಯಾದರೆ ಅದು ಆರುಶಿ ತಲ್ವಾರ್ ಕೊಲೆ ಕೇಸಿರಲಿ, ಪದ್ಮ ಪ್ರಿಯಾ ಪ್ರಕರಣವಿರಲಿ, ವೋಟಿಗಾಗಿ ಹಣದ ಕ್ಯಾತೆಯಿರಲಿ ಪತ್ರಿಕೆಗಳು ಹೇಳಿದ್ದನ್ನೇ ಮಹಾಪ್ರಸಾದವೆಂಬಂತೆ ನಾವು ನಂಬುತ್ತಿದ್ದೆವು. ಸಂಪಾದಕರು ದಪ್ಪಕ್ಷರಗಳಲ್ಲಿ ಮುದ್ರಿಸಿದ್ದನ್ನೇ ಮಹಾ ಪ್ರಸಾದವೆಂಬಂತೆ ನಾವು ಭಯ ಭಕ್ತಿಯಿಂದ ಕಣ್ಣಿಗೊತ್ತಿಕೊಂಡು ಅದನ್ನು ಹರಟೆ ಕಟ್ಟೆಯ ‘ಸಂವಾದ’ದಲ್ಲಿ ಎತ್ತಿಕೊಂಡು ನಮ್ಮ ನಮ್ಮ ಸಂಸ್ಕಾರಗಳಿಗೆ ತಕ್ಕ ಹಾಗೆ ಅದನ್ನು ಸಂಸ್ಕರಿಸಿ, ಸಾಧ್ಯವಾದಷ್ಟು ಮಂದಿಗೆ ವಿತರಿಸಿ ಮನೆಯ ಬಾಗಿಲು ಹಾಕಿಕೊಂಡು ನೆಮ್ಮದಿಯಿಂದ ಮಲಗುತ್ತಿದ್ವಿ. ಆದರೆ ಈ ಬ್ಲಾಗುಗಳು ಪತ್ರಿಕೆಗಳ ನಾನಾ ಬಣ್ಣದ ವೇಷಗಳನ್ನು ಬಿಚ್ಚಿ ಹಾಕಿ ಅವನ್ನು ಬೆತ್ತಲಾಗಿಸುತ್ತಾ ಹೋದಂತೆಲ್ಲಾ ನಮಗೆ ಆಘಾತವಾಗುತ್ತಿದೆ. ಈಗ ಜನರಿಗೆ ಪತ್ರಿಕೆಗಳಲ್ಲಿ ಬಂದದ್ದೆಲ್ಲಾ ಸತ್ಯವಲ್ಲ ಆದರೆ ಬ್ಲಾಗುಗಳಲ್ಲಿ ಬಂದದ್ದೆಲ್ಲಾ ಸತ್ಯ ಎಂದು ಅರಿವಾಗುತ್ತಿದೆ. ಹೀಗಾಗಿ ಗಲ್ಲಿಗೊಂದರಂತೆ ‘ಅಭಿಪ್ರಾಯ’ ವಿತರಿಸುವ ಬ್ಲಾಗುಗಳು ಹುಟ್ಟಿಕೊಂಡಿವೆ. ಸೂರ್ಯನ ಕೆಳಗಿನ ಪ್ರತಿಯೊಂದು ಸಂಗತಿಯ ಬಗ್ಗೆ ನಿರರ್ಗಳವಾಗಿ ಕೊರೆಯಬಲ್ಲ ಪಂಡಿತರು ಸೃಷ್ಟಿಯಾಗಿದ್ದಾರೆ. ಜಗತ್ತಿನ ಯಾವ ಘಟನೆಯ ಬಗೆಗೇ ಆಗಲಿ ಮಾತನಾಡುವ ಹಕ್ಕು ಎಲ್ಲರಿಗೂ ಸಿಕ್ಕಿದೆ. ಯಾವ ಕೋರ್ಟು, ವಿಚಾರಣೆಯೂ ಇಲ್ಲದೆ ಅಪರಾಧಿ ಯಾರೆಂದು ತೀರ್ಪು ಕೊಡುವ ಸ್ವಾತಂತ್ರ್ಯ ಎಲ್ಲರಿಗೂ ಸಿಕ್ಕಿದೆ. ಇದಕ್ಕಿಂತ ಹೆಚ್ಚಿನ ಕ್ರಾಂತಿ ಸಾಧ್ಯವೇ?

ನ.ಸಾ: ತುಂಬಾ ಉಪಯುಕ್ತವಾದ ಚಿಂತನೆಗಳನ್ನು ನಮ್ಮೊಂದಿಗೆ ಹಂಚಿಕೊಂಡದ್ದಕ್ಕೆ ಧನ್ಯವಾದಗಳು ಯುವ ಬ್ಲಾಗಿಗರೇ.

ಯು.ಬ್ಲಾ: ಹ್ಹಾ! ನಿಮ್ಮ ಸೋಂಪಾದಕರ ಇಲ್ಲವೇ ಸಹ ಬ್ಲಾಗಿಗರ ಒತ್ತಾಯಕ್ಕೆ ಮಣಿದು ನನ್ನ ಸಂದರ್ಶನವನ್ನೇನಾದರೂ ಎಡಿಟ್ ಮಾಡಿದರೆ ಜೋಕೆ!

ನ.ಸಾ: ಇಲ್ಲ, ಸರ್ ನಮ್ಮ ಬ್ಲಾಗಿನಲ್ಲಿ ಯಾವ ಸಂಗತಿಯೂ ಸೆನ್ಸಾರ್ ಆಗುವುದಿಲ್ಲ. ನಮ್ಮ ನಾಡಿನ ಖ್ಯಾತ ಅಂಕಣಕಾರ ಪ್ರತಾಪ್ ಸಿಂಹರು ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗಿ ಯಾರದೋ ಪುಸ್ತಕದ ಸಂವಾದ ಕಾರ್ಯಕ್ರಮದಲ್ಲಿ, ತಮ್ಮ ಪುಸ್ತಕ ಬಿಡುಗಡೆ ಮಾಡಿ ಬೇರಾರನ್ನೋ ಬೈದು ಭಾಷಣ ಮಾಡುವಾಗ ಹೇಳಿದ ಹಾಗೆ ನೀವು ‘ಕಾಂಡೋಮ್’ ಇಲ್ಲದೆ ಮಾತನಾಡಬಹುದು ನಗೆ ನಗಾರಿಯಲ್ಲಿ ಮಾತ್ರ! (ಮಾತನಾಡುವುದಕ್ಕೆ ಕಾಂಡೋಮ್ ಯಾಕೆ ಅಂತ ಹಾಯ್ ಬೆಂಗಳೂರ್ ಸಾರಥಿಯ ಹಾಗೆ ಕೇಳಬೇಡ್ರಿ ಮತ್ತೆ!)

ಯುವ ಬ್ಲಾಗಿಗನ ಸಂದರ್ಶನ

8 ಆಗಸ್ಟ್

ನಗೆ ಸಾಮ್ರಾಟರ alter ego ಕಳೆದ ಬಾರಿಯ ಸಂದರ್ಶನದಿಂದ ಉತ್ಸಾಹಗೊಂಡು ಈ ಸಂಚಿಕೆಯ ನಗೆ ನಗಾರಿಗಾಗಿ ಒಬ್ಬ ಯುವ ಹಾಗೂ ಯಶಸ್ವೀ ಬ್ಲಾಗಿಗನನ್ನು ಸಂದರ್ಶಿಸಿದೆ. ಈ ಸಾಮ್ರಾಟರ ಮಾನಸ ಪುತ್ರ ಸಾಮ್ರಾಟರ ಬೆನ್ತಟ್ಟುವಿಕೆಗಾಗಿ ಕಾಯುತ್ತಾ ನಿಂತಿದ್ದಾನೆ.

ಸಂದರ್ಶನ ನಿಮ್ಮ ಮುಂದಿದೆ:

ನಗೆ ಸಾಮ್ರಾಟ್: ನಮಸ್ಕಾರ್ ಸರ್. ಹೇಗಿದ್ದೀರಾ?

ಯುವ ಬ್ಲಾಗಿಗ: Fine dude. How are you?

ನ.ಸಾ: ಚೆನ್ನಾಗಿದ್ದೀನಿ ಸರ್. ಇದು ಕನ್ನಡದ ಪತ್ರಿಕೆಗಾಗಿನ ಸಂದರ್ಶನ. ಕನ್ನಡದಲ್ಲಿ ಮಾತನಾಡಿದರೆ ಚೆಂದ ಇತ್ತು.

ಯು.ಬ್ಲಾ: ನೋ ಪ್ರಾಬ್ಲಮ್ ಡೂಡ್. ಐ ಆಮ್ ಕಂಫರ್ಟಬಲ್ ವಿಥ್ ಕನ್ನಡ ಆಲ್ಸೋ!

ನ.ಸಾ: (ತಲೆ ಚಚ್ಚಿಕೊಳ್ಳುತ್ತಾ…) ಹಂಗಲ್ಲ ಸಾರ್. ಕನ್ನಡದಲ್ಲಿ ಮಾತಾಡಿ ಅಂದರೆ ಕನ್ನಡ ಫಾಂಟ್ಸ್ ಬಳಸಿಕೊಂಡು ಇಂಗ್ಲೀಷ್ ಮಾತಾಡಿ ಅಂತಲ್ಲ. ಕನ್ನಡದಲ್ಲಿ ಮಾತಾಡಿ, ಕನ್ನಡಿಗರು ಮಾತನಾಡುವ ಕನ್ನಡದಲ್ಲಿ.

ಯು.ಬ್ಲಾ: ಯು ಆರ್ ಇರಿಟೇಟಿಂಗ್ ಮಿ. ನಾನು ಬೆಂಗಳೂರು ಕನ್ನಡಿಗಾಸ್ ಮಾತಾಡೋ ಟೈಪೇ ಮಾತಾಡ್ತಿರೋದಲ್ವಾ?

ನ.ಸಾ: ಕ್ಷಮಿಸಿ ಸಾರ್. ಬೆಂಗಳೂರು ಕನ್ನಡಿಗರಲ್ಲ, ಉಳಿದ ಕನ್ನಡಿಗರು ಮಾತಾಡೋ ಕನ್ನಡದಲ್ಲಿ ಮಾತಾಡಿ.

ಯು.ಬ್ಲಾ: ಸರಿ. ಈಗ ಸರಿಯಾಗಿ ಕೇಳಿದಿರಿ ನೀವು. ಹೂಂ, ಸಂದರ್ಶನ ಮುಂದುವರೆಸಿ.

ನ.ಸಾ: ಸರ್, ಈ ಬ್ಲಾಗುಗಳು ನಮ್ಮ ಸಮೂಹ ಪ್ರಜ್ಞೆಗೆ ಹೊಸ ಆಯಾಮವನ್ನು ದಕ್ಕಿಸಿಕೊಟ್ಟು ಆಮೂಲಕ ಹೊಸ ಸಾಂಸ್ಕೃತಿಕ ಅನುಸಂಧಾನಗಳಿಗೆ ಅವಕಾಶ ಮಾಡಿಕೊಟ್ಟು ಜಾಗತೀಕರಣದ ಈ ಯುಗದಲ್ಲಿ ಸಮಾಜದಲ್ಲಿ ಜವಾಬ್ದಾರಿಯುತ ಸಮೂಹವನ್ನು ಹುಟ್ಟುಹಾಕುವ ಕೆಲಸ ಮಾಡುತ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಯು.ಬ್ಲಾ: ಹ್ಞಾ..? ಯಾವ ಭಾಷೆರೀ ಅದು? ಸ್ವಲ್ಪ ಅರ್ಥ ಹಾಗೋ ಹಂಗೇ ಕೇಳೋಕಾಗಲ್ಲವೇನ್ರಿ? ಬ್ಲಾಗ್ ಅಂದ್ರೆ ಏನು ಅಂತ ಸರಳವಾಗಿ ಕೇಳಿದ್ರೆ ನಿಮ್ಮ ಗಂಟೇನು ಹೋಗುತ್ತೆ? ನೀವು ಬುದ್ಧಿಜೀವಿಯಾ?

ನ.ಸಾ: (ಪ್ಯಾದೆ ನಗು ನಗುತ್ತಾ) ಓದುಗರು ಹಾಗನ್ನುತ್ತಾರೆ ಸರ್.

ಯು.ಬ್ಲಾ: ಹಿಂಗೇ ಕಣ್ರೀ ಜನ ನಿಮ್ಮನ್ನು ರೈಲು ಹತ್ತಿಸುವುದು. ನಿಮ್ಮಂಥವರ ಕಷ್ಟ ತಡಿಯೋಕಾಗದೆ ನಿಮ್ಮನ್ನು ಬುದ್ಧಿಜೀವಿ ಅಂತ ಕರೆದು ದೂರ ಕೂರಿಸಿಬಿಡ್ತಾರೆ. ರಾಜಕೀಯದ ನಿರಾಶ್ರಿತರನ್ನು ರಾಜಭವನದಲ್ಲಿ ಕೂರಿಸಿದ ಹಾಗೆ.

ನ.ಸಾ: ಕ್ಷಮಿಸಿ ಸರ್. ಸರಳವಾಗೆ ಕೇಳ್ತೀನಿ. ಈ ಬ್ಲಾಗುಗಳು ಯಾವ ರೀತಿಯಲ್ಲಿ ಸಮಾಜದ ಮೇಲೆ ಪರಿಣಾಮ ಬೀರ್ತಾ ಇವೆ ಸರ್?

ಯು.ಬ್ಲಾ: ಹಾಂ! ಹಂಗೆ ಕೇಳಿ. ನೋಡಿ ಈ ಬ್ಲಾಗುಗಳು ಮನುಷ್ಯನ ಬೇಸಿಕ್ ಇನ್‌ಸ್ಟಿಂಕ್ಟನ್ನು ಉದ್ದೀಪನ ಗೊಳಿಸುವಲ್ಲಿ ಸಹಾಯ ಮಾಡ್ತಾ ಇವೆ. ಮನುಷ್ಯನಿಗೆ ತನಗೆ ತಿಳಿದ ಸಂಗತಿಯನ್ನು ಇನ್ನೊಬ್ಬನಿಗೆ,ಮತ್ತೊಬ್ಬನಿಗೆ,ಮಗದೊಬ್ಬನಿಗೆ ದಾಟಿಸುವ ತೆವಲು ಇರುತ್ತದೆ. ಆ ಮಾಹಿತಿ ಸುದ್ದಿಯೋ, ವದಂತಿಯೋ, ಆರೋಪವೋ, ಸಂಶಯವೋ, ಸಂಶೋಧನೆಯೋ, ಕವನವೋ, ಕವಿತೆಯೂ ಅಥವಾ ಇವುಗಳ ಹೆಸರಿನಲ್ಲಿ ಗೀಚಿದ ರಬ್ಬಿಶೋ ಏನೇ ಆಗಬಹುದು. ಎಲ್ಲವನ್ನೂ ಎರಡನೆಯವನಿಗೆ, ಮೂರನೆಯವನಿಗೆ ದಾಟಿಸಿಬಿಡುವ ಆಸೆಯಿರುತ್ತದೆ. ಹಿಂದೆ ಇದೇ ಕಾರಣಕ್ಕೆ ಮನುಷ್ಯನಿಗೆ ಸಂಜ್ಞೆಗಳ ಭಾಷೆ ಬೇಕಾಯಿತು. ಅನಂತರ ಆತ ಶಬ್ಧಗಳನ್ನು ಕೇಳಿ ತಿಳಿದು ನಾಲಿಗೆಯನ್ನು ನಾನಾ ರೀತಿಯಲ್ಲಿ ತಿರುವಿ ಮಾತನಾಡಲು ಕಲಿತು ಭಾಷೆಗಳನ್ನು ಮಾಡಿದ. ಅನಂತರ ತಾನು ಹೇಳಿದ್ದನ್ನು ಪದೇ ಪದೇ ಹೇಳಲು ಬೇಜಾರಾಗಿಯೋ ಅಥವಾ ತಾನು ಸತ್ತ ಮೇಲೆ ತನ್ನ ‘ವಿಚಾರ’ಗಳನ್ನು ಮುಂದಿನ ತಲೆಮಾರಿಗೆ ಹೇಗೆ ತಲುಪಿಸುವುದು(ಅವರಿಗೆ ಬೇಕೋ ಬೇಡವೋ ಎನ್ನುವುದನ್ನು ಯೋಚಿಸದೆ) ಎನ್ನುವ ಚಿಂತೆಯಲ್ಲಿ ಲಿಪಿಯನ್ನು ಕಂಡುಕೊಂಡ. ಈಗ ಈ ಬ್ಲಾಗುಗಳು ಬಂದಿವೆ.

ನ.ಸಾ: ಒಳ್ಳೆಯ ವಿಶ್ಲೇಷಣೆ, ಇವುಗಳಿಂದ ಸಮಾಜದಲ್ಲಿ ಏನು ಬದಲಾವಣೆಯಾಗುತ್ತದೆ?

ಯು.ಬ್ಲಾ: ಸಮಾಜದಲ್ಲಿ ಬದಲಾವಣೆಗಳು? ತುಂಬಾ ಆಗ್ತವೆ. ಪಟ್ಟಿ ಮಾಡಿಕೊಳ್ಳಿ. ಜನರು ತಮ್ಮ ಕೆಲಸ ಗಿಲಸ ಬಿಟ್ಟು ಕಂಪ್ಯೂಟರಿನ ಕೀಲಿಮಣೆಯ ಮುಂದೆ ಕುಳಿತುಕೊಳ್ಳುತ್ತಾರೆ. ಕೀಲಿಮಣೆಯ ಮೇಲೆ ಧೂಳು ಕೂರಲು ಬಿಡುವು ಕೊಡದ ಹಾಗೆ ಕುಟ್ಟುತ್ತಲೇ ಇರುತ್ತಾರೆ. ಚಿಕ್ಕ ಮಕ್ಕಳು ಮೈದಾನದಲ್ಲಿ ಆಡುವುದು ವಿರಳವಾಗುತ್ತಿದೆ. ಯುವಕರು ಸೈಬರ್ ಕೆಫೆಗಳಲ್ಲಿ ಜಾಂಡಾ ಹೂಡಲು ಶುರು ಮಾಡಿದ್ದಾರೆ. ಆಫೀಸುಗಳಲ್ಲಿ ನೌಕರರು ಕದ್ದು ಮುಚ್ಚಿ ಐನ್‌ಸ್ಟೀನ್ ಪೇಟೆಂಟ್ ಆಫೀಸಿನಲ್ಲಿ ಕುಳಿತು ಥಿಯರಿ ಆಫ್ ರಿಲೇಟಿವಿಟಿ ಬರೆದ ಹಾಗೆ ಬ್ಲಾಗುಗಳನ್ನು ಕುಟ್ಟುತ್ತಿರುತ್ತಾರೆ. ಬಾಸುಗಳಿಗೆ ತಲೆ ನೋವು ತರುತ್ತಿರುತ್ತಾರೆ. ತಲೆ ನೋವು ಹೆಚ್ಚಾಗುವುದರಿಂದ ಅನಾಸಿನ್ ಮಾತ್ರೆಯ ವ್ಯಾಪಾರ ವಿಪರೀತವಾಗುತ್ತದೆ. ಇಂಟರ್ನೆಟ್ ಬಿಲ್ಲು ರೇಶನ್ ಬಿಲ್ಲಿನಲ್ಲಿ ಸೇರಿಹೋಗಿದೆ…

ನ.ಸಾ: (ತಲೆ ಕೆರೆದುಕೊಳ್ಳುತ್ತಾ) ಅದೆಲ್ಲಾ ಸರಿ ಸರ್, ಆದರೆ ಸಮಾಜಿಕವಾದ ಪರಿಣಾಮಗಳು ಏನು?

ಯು.ಬ್ಲಾ: ಇವೆಲ್ಲಾ ಸಾಮಾಜಿಕ ಬದಲಾವಣೆಗಳು ಎಲ್ಲವೇನ್ರಿ? ಓಹೋ, ನೀವು ಬುದ್ಧಿಜೀವಿಗಳು ಅಲ್ಲವಾ? ನಿಮಗೆ ಘನ ಗಂಭೀರವಾದ ಸಂಗತಿಗಳನ್ನು ಹೇಳಬೇಕು ಅಲ್ಲವೇ?

(ನಾಳೆ ಮುಂದುವರೆಯುವುದು)

ನಗಾರಿಯಲ್ಲಿ ಪ್ರತಿಕ್ರಿಯೆಗಳೇಕಿಲ್ಲ?

13 ಜುಲೈ

ನಿಮಗೆ ನಿಜಕ್ಕೂ ಅಚ್ಚರಿಯಾಗುತ್ತದೆ. ನಗೆ ನಗಾರಿಯ ತಾಣಕ್ಕೆ ದಿನವೊಂದಕ್ಕೆ ಐವತ್ತರಿಂದ ನೂರು ಮಂದಿ ಮೌಸು ಚಿಟುಕಿಸಿ ಹೋಗುತ್ತಾರೆ. ಇಲ್ಲಿನ ಹಾಸ್ಯದ ಅಬ್ಬರಕ್ಕೆ ನವಿರಾಗಿ ನಲುಗಿ ಮನಸಾರೆ ನಗುತ್ತಾರೆ. ಆದರೆ ಕೆಲವೇ ಕೆಲವರು ಬರಹಗಳಿಗೆ ಪ್ರತಿಕ್ರಿಯೆ ಕೊಡುತ್ತಾರೆ. ಧ್ವನಿಗೆ ಪ್ರತಿಧ್ವನಿಯನ್ನು ಸೇರಿಸುತ್ತಾರೆ. ಯಾಕೆ ಹೀಗೆ?

ಇದಕ್ಕೆ ಮುಖ್ಯ ಕಾರಣ ನಮ್ಮ ‘ನಗೆ ಸಾಮ್ರಾಟ್’ ಎಂಬ ಅವತಾರ ಎನ್ನುತ್ತಾರೆ ನಮ್ಮ ಹಿತೈಷಿಗಳು. ನಮ್ಮ ಅ‘ನಾಮ’ಧೇಯತೆಯೇ ಓದುಗರಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸುವಂತೆ ಮಾಡುತ್ತಿದೆ. ನಮ್ಮ ಗುರುತಿಲ್ಲದ, ಪರಿಚಯವಿಲ್ಲದ ವಿವರವೇ ಪ್ರತಿಸ್ಪಂದನೆಗೆ ಅವಕಾಶವಿಲ್ಲದಂತೆ ಮಾಡುತ್ತಿದೆ ಎಂಬುದು ಅವರ ವಾದ.

ಜನರು ಅಗೋಚರವಾದ ದೇವರಿಗೆ ಪೂಜೆ ಮಾಡುತ್ತಾರೆ, ನೈವೇದ್ಯ ತೋರಿಸುತ್ತಾರೆ, ಕೈ ಮುಗಿಯುತ್ತಾರೆ ಆದರೆ ಆತನೊಂದಿಗೆ ಕಷ್ಟ ಸುಖ ಮಾತನಾಡುತ್ತಾ ಹರಟೆಗೆ ಕೂರುವುದಿಲ್ಲ. ಕೆಲವರು ದೆವ್ವ, ಭೂತಗಳಿಗೂ ಮರ್ಯಾದೆ ಕೊಡುತ್ತಾರೆ, ಹೆದರುತ್ತಾರೆ, ಪ್ರಾಣಿ ಬಲಿ ಕೊಟ್ಟು ಉಂಡು ಮಲಗುತ್ತಾರೆ. ಅವುಗಳನ್ನು ಹರಟೆ ಕಟ್ಟೆಗೆ ಎಳೆದುಕೊಂಡು ಬರುವುದಿಲ್ಲ. ಹಾಗೆಯೇ ನಗೆ ಸಾಮ್ರಾಟ್ ಎಂಬ ಮುಖವಿಲ್ಲದ ಗುರುತನ್ನು ಓದುಗರು ಮೆಚ್ಚುತ್ತಾರೆ, ಇಷ್ಟಪಡುತ್ತಾರೆ ಆದರೆ ಅದರೊಂದಿಗೆ ಸಂವಾದಕ್ಕೆ ತೊಡಗುವುದಿಲ್ಲ. ಅವರಿಗೇನಿದ್ದರೂ ತಮ್ಮ ಹಾಗೆ ಗುರುತಿರುವ ಜನರು ಬೇಕು ಮಾತಿಗೆ, ಹರಟೆಗೆ, ಪ್ರತಿಸ್ಪಂದನಕ್ಕೆ. ಹೀಗಾಗಿ ನಗೆ ಸಾಮ್ರಾಟರು ಹರಟಲಾಗದೆ ಒದ್ದಾಡುತ್ತಿದ್ದಾರೆ.

ಇನ್ನೂ ಕೆಲವು ಸುದ್ದಿ ಮೂಲಗಳ ಪ್ರಕಾರ. ನಗೆ ನಗಾರಿ ಡಾಟ್ ಕಾಮಿಗೆ ಬಂದು ನಗುನಗುತ್ತಾ ಜನರು ಎದ್ದು ಹೋಗಿಬಿಡುತ್ತಾರೆ. ಅವರಿಗೆ ನಾಲ್ಕು ಮಾತು ಆಡಬೇಕು ಎನ್ನುವುದೂ ಮರೆತುಹೋಗುವಷ್ಟು ನಗುಬಂದಿರುತ್ತದೆ. ಅವರಿಗೆ ನಗೆ ತರಿಸದ ವಿಚಾರವಿದ್ದರೆ ಅಲ್ಲಿ ಪ್ರತಿಕ್ರಿಯೆ ನೀಡಿರುತ್ತಾರೆ. ಈ ಸುದ್ದಿ ಮೂಲವನ್ನು ನಾವು ಮಾನ್ಯ ಮಾಡಿದ್ದು ಪ್ರತಿಕ್ರಿಯೆಗಳು ಅಷ್ಟಾಗಿ ಸಿಕ್ಕದ ದಿನ ಅದನ್ನು ನಾವು ಪುನಃ ಪುನಃ ಓದಿ ಖುಶಿ ಪಡುತ್ತೇವೆ.

ಒಂದು ವರ್ಗದ ಜನರಿಗೆ ಇಂಥಾ ‘ಸಿಲ್ಲಿ’ ಬ್ಲಾಗ್‌ಗಳಲ್ಲಿ ತಮ್ಮ ಹೆಸರಿನಲ್ಲಿ ಪ್ರತಿಕ್ರಿಯೆ ಹಾಕಿದರೆ ತಮ್ಮ ‘ಇಮೇಜಿಗೆ’ ಘಾಸಿಯಾಗುತ್ತದೆ ಎಂಬ ಭಯವಿರುತ್ತದೆ. ಗಂಭೀರ ಓದುಗರು, ಪ್ರಜ್ಞಾವಂತ ಬ್ಲಾಗಿಗರು ಎಲ್ಲಾದರೂ ಜೋಕು ಹೇಳಿಕೊಂಡು, ಜೋಕು ಓದಿಕೊಂಡು ಕಾಲ ಕಳೆಯಲು ಸಾಧ್ಯವಾಗುತ್ತದೆಯೇ? ಹಾಗೆ ಅಲ್ಲರ ಹಾಗೆ ಸದಾ ನಗುತ್ತಲೇ ಇದ್ದರೆ ನಮ್ಮನ್ನು ಜನ ‘ಗಂಭೀರ ಚಿಂತಕ’ರು ಎಂದು ಪರಿಗಣಿಸುವುದೇ ಇಲ್ಲ ಎಂಬುದು ಅವರ ವಾದ. ಹೀಗಾಗಿ ಅಂಥವರಿಗಾಗಿ ನಾವು ನಗೆ ನಗಾರಿಯಲ್ಲಿ ‘ನಗ ಬಾರದು’ ಅಂಕಣವನ್ನು ಶುರು ಮಾಡುವ ಆಲೋಚನೆ ಮಾಡಿದ್ದೇವೆ. ಆ ಅಂಕಣವನ್ನು ಓದಿ ಯಾರೂ ನಗಬಾರದೆಂದೂ, ಒಂದು ವೇಳೆ ಇಡೀ ಅಂಕಣವನ್ನು ಓದಿಯೂ ಯಾರು ನಗುವುದಿಲ್ಲವೋ ಅವರನ್ನು ‘ಶ್ರೇಷ್ಠ ಗಂಭೀರ ಚಿಂತಕ’ ಎಂದು ಘೋಷಿಸಲಾಗುವುದೆಂದೂ ಈ ಮೂಲಕ ತಿಳಿಸಲು ಇಚ್ಚಿಸುತ್ತೇವೆ.

ನಗೆ ನಗಾರಿಗೆ ಪ್ರತಿಕ್ರಿಯೆಗಳು ಏಕಿಲ್ಲ? ಇದಕ್ಕಾದರೂ ಪ್ರತಿಕ್ರಿಯಿಸಿ!

– ನಗೆ ಸಾಮ್ರಾಟ್

ನಿರೀಕ್ಷಿಸಿ, ಯುವ ಬ್ಲಾಗಿಗನ ಸಂದರ್ಶನ

9 ಜುಲೈ

ನಗೆ ಸಾಮ್ರಾಟರ ತದ್ರೂಪು ಭಾರಿ ಹುರುಪಿನಲ್ಲಿದ್ದಾನೆ. ಮಾಧ್ಯಮ ಪ್ರತಿನಿಧಿಯೊಂದಿಗೆ ಮಾಡಿದ ಕಳೆದ ಸಂದರ್ಶನವನ್ನು ಕಂಡು ಮನಸಾರೆ ಕೊಂಡಾಡಿದ ನಗೆ ಸಾಮ್ರಾಟರು ಹೀಗೇ ಮುಂದುವರೆಯಲು ಸೂಚಿಸಿರುವುದು ಆತನಿಗೆ ನೆಲದ ಮೇಲೆ ಕಾಲು ನಿಲ್ಲದ ಹಾಗೆ ಮಾಡಿದೆ.

ಮುಂದಿನ ಸಂಚಿಕೆಗಾಗಿ ಈತ ಯುವ ಬ್ಲಾಗಿಗನೊಬ್ಬನನ್ನು ಸಂದರ್ಶಿಸಿ ಬಂದಿದ್ದಾನೆ. ಬ್ಲಾಗು ಎಂಬ ಅಮೂರ್ತ ಜಗತ್ತು ನಡೆಯುವುದು ಹೇಗೆ? ಬ್ಲಾಗುಗಳಿಗೆ ಬರೆಯುವುದು ಹೇಗೆ? ನೂರಾರು ಪ್ರತಿಕ್ರಿಯೆ ಪಡೆಯುವುದರ ಹಿಂದಿನ ರಹಸ್ಯವೇನು? ಬ್ಲಾಗು ಜಗತ್ತಿನ ಅಂತರಾಳದ ಗುಸು ಗುಸು ಪಿಸಪಿಸ ಏನು? ಎಂದೆಲ್ಲಾ ರೋಚಕವಾದ ಪ್ರಶ್ನೆಗಳೊಂದಿಗೆ ಸಂದರ್ಶನ ತಯಾರಾಗಿದೆ.

ಇನ್ನೇನಿದ್ದರೂ ಮುಂದಿನ ಸಂಚಿಕೆಗೆ ಕಾಯುವ ಕೆಲಸವನ್ನು ನೀವು ಮಾಡಬಹುದು, ಬೇರೇನೂ ಇಲ್ಲದಿದ್ದರೆ!