(ನಗಾರಿ ಅಂತರಾಷ್ಟ್ರೀಯ ಸಮಾಚಾರ ಬ್ಯೂರೊ)
ಅವಧಿ ಮುಗಿಯುವ ಮುನ್ನ ತಾನು ಹಾಳು ಮಾಡಿದ ಇರಾಕಿಗೆ ಪ್ರೀತಿ ಪೂರ್ವಕವಾಗಿ ಗುಡ್ ಬೈ ಹೇಳಲು ಬಂದಿದ್ದ ಬುಶ್ ಮಹಾಶಯನನ್ನು ಏಳು ನಂಬರಿನ ಎರಡು ಬೂಟುಗಳನ್ನು ಎಸೆಯುವುದರ ಮೂಲಕ, ‘ನಾಯಿ’ ಎಂದು ವಿಶ್ ಮಾಡುವುದರ ಮೂಲಕ ಬರಮಾಡಿಕೊಂಡಿದ್ದ ಇರಾಕಿನ ಪತ್ರಕರ್ತ ಜೈದಿಗೆ ಅಲ್ಲಿನ ನ್ಯಾಯಾಲಯ ಮೂರು ವರ್ಷ ಕಾರಾಗೃಹ ಸಜೆ ವಿಧಿಸಿದೆ.ತಾನು ಇರಾಕಿನ ಮುಗ್ಧರನ್ನು ಹತ್ಯೆಗೈದ ಬುಶ್‌ನನ್ನು ಕಂಡಾಗ ಭಾವೋದ್ರೇಕಕ್ಕೊಳಗಾಗಿ ಬೂಟು ಎಸೆದೆ ಎಂದು ತಪ್ಪೊಪ್ಪಿಕೊಂಡರೂ ನ್ಯಾಯಾಲಯ ಆತನಿಗೆ ದಂಡನೆ ನೀಡಿದೆ.
ಈ ತೀರ್ಪನ್ನು ವಿರೋಧಿಸಿ ಇರಾಕಿನಲ್ಲಿ ಜೈದಿ ಅಭಿಮಾನಿಗಳು ತಮ್ಮ ಆಕ್ರೋಶ ತೋರ್ಪಡಿಸುತ್ತಿದ್ದರೆ ಜಗತ್ತಿನ ಈ ಮೂಲೆಯಲ್ಲಿ ತೀರ್ಪಿನ ಪರವಾಗಿ ಮಾತುಗಳು ಕೇಳಿಬರುತ್ತಿವೆ. ಅಖಿಲ ಕರ್ನಾಟಕ ಕೊರೆತ ವೀರರ, ಭಾಷಣ ಕೋರರ ಸಂಘದ ಅಧ್ಯಕ್ಷರು ನಗೆ ನಗಾರಿಯೊಂದಿಗೆ ಹೀಗೆ ಮಾತನಾಡಿ, “ಈ ಜೈದಿಯಂಥವರನ್ನು ಜೈಲಿಗೆ ಅಟ್ಟುವುದರ ಮೂಲಕ ಆತನ ಕೆಲಸಕ್ಕೆ ಜನ ಮನ್ನಣೆ ದೊರಕದಂತೆ ನೋಡಿಕೊಳ್ಳಬೇಕು. ಈ ಜೈದಿಯಂಥವರಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೇ ಧಕ್ಕೆ ಉಂಟಾಗುತ್ತದೆ. ಜನ ಸಾಮಾನ್ಯರು ಇವನ ಆದರ್ಶವನ್ನೇ ಅನುಕರಿಸಿದರೆ ನಾವು ವಿಪರೀತ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಗಡಿಯಾರವನ್ನೇ ಏನು ಕೆಲವೊಮ್ಮೆ ಕ್ಯಾಲಂಡರನ್ನೂ ಮರೆತು ನಾವು ತನ್ಮಯರಾಗಿ ವೇದಿಕೆಯ ಮೇಲೆ ಭಾಷಣದ ಮಳೆಗರೆಯುತ್ತಿರುತ್ತೇವೆ. ಕೇಳುಗರ ಕಿವಿಯ ಆಳ ಅಗಲ, ತಲೆಯೊಳಗಿನ ಮಿದುಳಿನ ವಿಸ್ತಾರ ಅರಿಯದೆ ಮಾತಿನ ಸುನಾಮಿಯನ್ನೇ ಹರಿಸುತ್ತಿರುತ್ತೇವೆ. ಆಗ ಕೇಳುಗರೂ ಸಹ ಗಾಂಧೀಜಿಯವರ ಮೂರು ಮಂಗಗಳಲ್ಲಿ ಒಂದರ ಭಂಗಿಯಲ್ಲಿ – ಕಣ್ಮುಚ್ಚಿಕೊಂಡು ನಿದ್ರೆ ಮಾಡುತ್ತಲೋ, ಕುರುಕಲು ತಿಂಡಿ, ಗುಟಕಾ, ಎಲೆ ಅಡಿಕೆಗಳಿಂದ ಬಾಯಿ ಮುಚ್ಚಿಕೊಂಡೋ, ಐಪಾಡು, ಮೊಬೈಲುಗಳಿಂದ ಕಿವಿ ಮುಚ್ಚಿಕೊಂಡೋ- ಕೂತು ನಮ್ಮನ್ನು ಸಹಿಸಿಕೊಳ್ಳುತ್ತಾರೆ.
“ಇವರಿಗೆಲ್ಲ ಜೈದಿ ಗಾಳಿ ಬೀಸಿದರೆ ಏನಾಗುತ್ತದೆ ಊಹಿಸಿದ್ದೀರಾ? ಭಾಷಣ ಕೇಳಲು ಬಂದವರು ನಮ್ಮ ಮಾತಿನ, ಚಾಟೋಕ್ತಿಗಳ, ಕುಯುಕ್ತಿಯ ಹೇಳಿಕೆಗಳ, ಅಪಹಾಸ್ಯದ, ತರ್ಕದ ದಾಳಿಗೆ ಪ್ರತಿಯಾಗಿ ನಮ್ಮ ಮೇಲೆ ಚಪ್ಪಲಿ, ಬೂಟು, ಕಮಟು ವಾಸನೆ ಹೊಡೆಯುವ ಸಾಕ್ಸುಗಳ ಪ್ರತಿದಾಳಿ ನಡೆಸಿದರೆ ನಾವು ಎಲ್ಲಿಗೆ ಹೋಗೋಣ? ಇರಾಕಿನ ಪ್ರಸಂಗವಾದ ಮೇಲೆ ನಾವು ಎಚ್ಚೆತ್ತುಕೊಂಡು ಪಾದರಕ್ಷೆಗಳನ್ನು ಹೊರಗೆ ಬಿಟ್ಟು ಬನ್ನಿ ಎಂದು ಬೋರ್ಡು ಹಾಕಿಸಿ ಮುನ್ನಚ್ಚೆರಿಕೆ ತೆಗೆದುಕೊಳ್ಳಲು ಶುರು ಮಾಡಿದ್ದೇವೆ. ಆದರೂ ನಾವು ಸಂಪೂರ್ಣ ಸುರಕ್ಷಿತರಲ್ಲ.
“ಭಾಷಣ ಸೇರಲು ಬಂದ, ಕರೆದುಕೊಂಡು ಬಂದ ಜನರು ಚಪ್ಪಲಿಗಳ ಬದಲಾಗಿ ಬೇರೆ ಆಯುಧಗಳನ್ನ ಬಳಸುವುದಿಲ್ಲ ಎಂದು ಹೇಳಲಾಗುವುದಿಲ್ಲ. ಕೊಳೆತ ಮೊಟ್ಟೆ, ಟೊಮೆಟೊ, ಆಲೂಗಡ್ಡೆ, ಸೌತೇಕಾಯಿ, ಕಿತ್ತಲೆ ಹಣ್ಣು, ಮುದುಡಿದ ಪ್ಲಾಸ್ಟಿಕ್ ಬಾಟಲಿ, ಟೀ ಕಪ್ಪು, ಸಾಸರು, ಹೂವಿನ ಕುಂಡ, ಪೆನ್ನು, ರಟ್ಟು, ಪೆನ್ಸಿಲ್ಲು – ಹೀಗೆ ಯಾವುದರಿಂದಲಾದರೂ ದಾಳಿ ಮಾಡಬಹುದು. ಬುಶ್ ಮಹಾಶಯನೇನೋ ಸ್ಲಿಮ್ಮಾಗಿ, ಸ್ಟಿಫಾಗಿ ಇದಾನೆ ಅದ್ಕೇ ಎರಡೂ ಬೂಟುಗಳಿಂದ ತಪ್ಪಿಸಿಕೊಂಡ, ಇಡೀ ಭೂಗೋಳವನ್ನು ಹೊಟ್ಟೆಯಲ್ಲಿ ಪ್ರತಿಷ್ಠಾಪಿಸಿಕೊಂಡ ನಮ್ಮ ಪಾಡೇನು? ಇದಕ್ಕೆಲ್ಲಾ ನಾವು ಸಿದ್ಧರಾಗಿರಬೇಕು. ಪ್ರಾಣವನ್ನೇ ಒತ್ತೆಯಿಟ್ಟು ಭಾಷಣ ಸಿದ್ಧ ಪಡಿಸಿ, ಪ್ರಾಣದ ಹಂಗನ್ನೇ ಲೆಕ್ಕಿಸದೆ ಗಂಟೆ ಗಟ್ಟಲೆ ವೇದಿಕೆಯ ಮೇಲೆ ಕೊರೆಯುವುದರ ಜೊತೆಗೆ ನಾವು ಪ್ರಾಣವನ್ನೇ ಪಣಕ್ಕೊಡ್ಡಿ ಇಂತಹ ದಾಳಿಗೆ ಸಿದ್ಧರಾಗಬೇಕು. ಜನರು ನಮಗೆ ಯಾವ ಯಾವ ತೊಂದರೆಗಳನ್ನ ಒಡ್ಡುತ್ತಾರೋ ಹೇಳಲು ಬಾರದು. ನಾವು ಲಹರಿಯನ್ನು ಹಿಡಿದು ಯಾವುದೋ ಗಹನವಾದ ವಿಷಯ ಪ್ರವೇಷ ಮಾಡುವಾಗ ಕೆಲವರು ನಮ್ಮನ್ನೇ ನುಂಗುವಷ್ಟಗಲಕ್ಕೆ ಬಾಯಿತೆರೆದು ಆಕಳಿಸುತ್ತಾ ನಮ್ಮನ್ನು ಬೆದರಿಸುತ್ತಾರೆ, ಮಾತು ಅರ್ಧದಲ್ಲೇ ಇರುವಾಗ ಕಿವಿ ಕಿತ್ತು ಹೋಗುವ ಹಾಗೆ ಚಪ್ಪಾಳೆ ತಟ್ಟಿ ಭಯೋತ್ಪಾದನೆಯುಂಟು ಮಾಡುತ್ತಾರೆ. ನಾವು ಮಾತಾಡುವ ಸದ್ದು ಮೈಕಾಸುರನ ಮೂಲಕ ಹಾದು ದೊಡ್ಡ ಧ್ವನಿಯಾದರೂ ಅದನ್ನು ಮೀರಿಸುವ ಜೋರಿನಲ್ಲಿ ಹರಟೆ ಹೊಡೆಯುತ್ತಾ ನಮ್ಮ ತೊಡೆಗಳು ನಡುಗುವಂತೆ ಮಾಡುತ್ತಾರೆ. ಇವೆಲ್ಲಕ್ಕೂ ಜೈದಿಗೆ ವಿಧಿಸಿದ ಹಾಗೆ ಕಠಿಣಾತಿ ಕಠಿಣ ಶಿಕ್ಷೆಯನ್ನು ವಿಧಿಸಬೇಕು.”
ಇನ್ನು ತೀರ್ಪು ಸೂಕ್ತವಾದದ್ದು ಆದರೆ ಅದರ ಜೊತೆಗೆ ಮತ್ತೊಂದು ಕೆಲಸವನ್ನು ನ್ಯಾಯಾಲಯ ಮಾಡಬೇಕು ಎಂದು ಅಖಿಲ ವಿಶ್ವ ಬುಶ್ ವಿರೋಧಿ ಸಂಘದ ಉಪಾಧ್ಯಕ್ಷ ಸಲಹೆ ನೀಡಿದ್ದಾರೆ. “ಎರಡು ಬಾರಿ ಬೂಟ್ ಎಸೆಯುವ ಅವಕಾಶ ಸಿಕ್ಕಿದರೂ ಒಂದೂ ಬೂಟು ಗುರಿಯನ್ನು ತಲುಪುವಲ್ಲಿ ವಿಫಲವಾಯ್ತು. ತನಗೆ ಸಿಕ್ಕ ಅತ್ಯಂತ ಅಮೂಲ್ಯ ಅವಕಾಶವನ್ನು ತನ್ನ ಬೇಜಾವಾಬ್ದಾರಿತನದಿಂದ ಹಾಳುಮಾಡಿಕೊಂಡ ಜೈದಿಗೆ ಶಿಕ್ಷೆ ವಿಧಿಸಿದ್ದು ಸರಿಯಾಗಿಯೇ ಇದೆ. ಇದರ ಜೊತೆಗೆ ಆತನಿಗೆ ಕಾರಾಗೃಹದಲ್ಲಿ ಗುರಿ ತಪ್ಪದ ಹಾಗೆ ಬೂಟು ಎಸೆಯುವ ತರಬೇತಿಯನ್ನು ನೀಡಬೇಕು.”
ಇತ್ತೀಚಿನ ಪ್ರಜಾ ಉವಾಚ