Tag Archives: ಬುದ್ಧಿಜೀವಿ

ಆಣೆ ಸವಾಲು ಅಲ್ಪಸಂಖ್ಯಾತರ ಓಲೈಕೆಯ ತಂತ್ರ: ಅಬೋಧ ಕುತಾಲಿಕ್

20 ಜನ

*ನಾರದ
ನಗಾರಿ ವಿಶೇಷ ಪ್ರತಿನಿಧಿ
ಬೆಂಗಳೂರು, ಜ.೨೦

ರಾಜ್ಯ ಕಂಡ ಏಕೈಕ ಮಣ್ಣಿನ ಪ್ರಾಡಕ್ಟ್ ಸೇವೆಗೌಡರ ಮಗ ಜೋಕುಮಾರ ಸ್ವಾಮಿಯವರು ತಮ್ಮ ಮಾಜಿ ಟ್ವೆಂಟಿ ಟ್ವೆಂಟಿ ಪಾರ್ಟನರ್ ಜಡ್ಯುರಪ್ಪನವರು ಧರ್ಮಸ್ಥಳದಲ್ಲಿ ಆಣೆ ಮಾಡಿ ತಮ್ಮ ಸರಕಾರದ ಸಾಚಾತನವನ್ನು ಸಾಬೀತು ಮಾಡಬೇಕು ಎಂದು ಸವಾಲುಹಾಕಿದ್ದಾರೆ. ಇಂದಿನ ಯುವಕರು ದೇವರು, ಧರ್ಮ, ಸರಕಾರ, ರಾಜಕಾರಣಿಗಳಲ್ಲಿ ನಂಬಿಕೆ ಕಳೆದುಕೊಳ್ಳುವ ದುಸ್ಥರ ಸಂದರ್ಭದಲ್ಲಿ ಸರಕಾರದ ಸಾಚಾತನ ಪರೀಕ್ಷಿಸುವುದಕ್ಕೆ ಆಯೋಗಗಳು, ಲೋಕಾಯುಕ್ತ, ನ್ಯಾಯಾಲಯಗಳು, ಶ್ವೇತಪತ್ರ, ಪತ್ರಿಕೆಗಳ ತನಿಖೆ ಇವೇ ಮೊದಲಾದ ಮಾರ್ಗಗಳಿದ್ದರೂ ದೈವಿಕವಾದ ಮಾರ್ಗಕ್ಕೆ ರಾಜಕಾರಣಿಗಳು ಒಲವು ತೋರಿಸಿರುವುದು ಆಶಾದಾಯಕವಾಗಿ ಹಲವರಿಗೆ ಕಂಡಿದೆ. ಇನ್ನೂ ಕೆಲವರು ಪ್ರಜಾಪ್ರಭುತ್ವ, ನ್ಯಾಯಾಲಯದಂತಹ ಇಪ್ಪತ್ತೊಂದನೆಯ ಶತಮಾನದ ನಾಗರೀಕ ವ್ಯವಸ್ಥೆಯಲ್ಲಿದ್ದೂ ಈ ರಾಜಕಾರಣಿಗಳು ಆದಿ ಮಾನವರ ಹಾಗೆ ಆಣೆ ಪ್ರಮಾಣದಲ್ಲಿ ತೊಡಗಿರುವ ಸುಸಂದರ್ಭದಲ್ಲಿ ಅವರಿಗೆ ಆದಿ ಮಾನವರ ವಿಶೇಷ ಸ್ಥಾನ ದೊರಕಿಸಿ ಕೊಟ್ಟು ವಸ್ತ್ರ ರಹಿತವಾಗಿ ನೈಸರ್ಗಿಕ ವಾಸಸ್ಥಾನಗಳಿಗೆ ಅಟ್ಟವುದು ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಚಿಂತಕ ಬುದ್ಧಿಜೀವಿ ಏನಂದರಾವ್ ರವರು ಸುದ್ದಿ ಪ್ರಕಟವಾಗುತ್ತಲೇ ನಮ್ಮ ಕಛೇರಿಗೆ ಫೋನಾಯಿಸಿ ತಮ್ಮ ಪ್ರತಿಭಟನೆಯನ್ನು praj_muhmad cartoon ದಾಖಲಿಸಿದರು, “ತಮ್ಮ ಅಧಿಕಾರವಾಧಿಯಲ್ಲಿ ಮಾಡಿದ ಸಾಧನೆಗಳ ಲೆಕ್ಕ ಕೊಡುವಾಗ ಈ ರಾಜಕಾರಣಿಗಳು ಅಸ್ತಿತ್ವದಲ್ಲೇ ಇಲ್ಲದ ನದಿಗಳಿಗೆ ಸೇತುವೆಗಳನ್ನು ಕಟ್ಟಿಸಿದ್ದಾಗಿಯೂ, ಇಲ್ಲದ ರಸ್ತೆಗಳ ರಿಪೇರಿ ಮಾಡಿರುವುದಾಗಿಯೂ, ಅಸ್ತಿತ್ವದಲ್ಲೇ ಇಲ್ಲದ ಕಾಲೇಜಿಗೆ ಅನುದಾನ ಮಾಡಿರುವುದಾಗಿಯೂ ಘೋಷಿಸುವುದನ್ನು ನಾಡಿನ ಜನತೆ ನೋಡಿದ್ದಾರೆ. ಆದರೆ ಇದು ಹೊಸತು. ತಮ್ಮ ಸಾಚಾತನವನ್ನು ಸಾಬೀತು ಮಾಡುವುದಕ್ಕಾಗಿ ಒಬ್ಬರ ಮೇಲೊಬ್ಬರು ಪೈಪೋಟಿ ಬಿದ್ದು ಇಲ್ಲದ ದೇವರ ಮೇಲೆ ಆಣೆ ಪ್ರಮಾಣ ಮಾಡುತ್ತಿದ್ದಾರೆ. ಈಡಿಯಟ್ಸ್…”

ರಾಜಕಾರಣಿಗಳ ಆಣೆ ಪ್ರಮಾಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಖಿಲ ಬ್ರಹ್ಮಾಂಡ ಹಿಂದೂ ಮಹಾಸೇನೆಯ ನಾಯಕ ಅಬೋಧ ಕುತಾಲಿಕರು, ‘‘ ಜಾತ್ಯಾತೀತ ದಳ ಎಂದು ತಮ್ಮನ್ನು ಕರೆದುಕೊಳ್ಳುವ ಪಕ್ಷದ ರಾಜಕಾರಣಿ ಆಣೆ ಮಾಡಲು ಹಿಂದೂಗಳ ಆರಾಧ್ಯದೈವವಾದ ಧರ್ಮಸ್ಥಳದ ಮಂಜುನಾಥನನ್ನೇ ಆರಿಸಿಕೊಂಡದ್ದು ಸರ್ವಥಾ ಕೂಡದು. ಒಂದು ವೇಳೆ ಮುಖ್ಯಮಂತ್ರಿ ಸುಳ್ಳಾಡಿ, ಅನಂತರ ಪ್ರಮಾಣ ಮಾಡಿದರೆ ಅಪಾಯವೇನಿದ್ದರೂ ಹಿಂದೂ ದೇವರಿಗೇ ಆಗಲಿ ಎನ್ನುವ ಕುತಂತ್ರ ಇದರ ಹಿಂದಿದೆ. ನಾವು ಎಂದಿನಿಂದ ನೋಡುತ್ತಿರುವ ಅಲ್ಪಸಂಖ್ಯಾತರ ತುಷ್ಟೀಕರಣದ ತುರ್ಯಾವಸ್ಥೆಯಿದು. ಜೋಕುಮಾರ ಸ್ವಾಮಿಯವರಿಗೆ ದಮ್ಮಿದ್ದರೆ ಅಲ್ಪಸಂಖ್ಯಾತರ ದೇವರ ಮೇಲೆ ಪ್ರಮಾಣ ಮಾಡಿ ತಾವು ಸಾಚಾ ಎಂದು ಸಾಬೀತು ಮಾಡಲಿ.” ಎಂದು ಅಬ್ಬರಿಸಿದರು.

ರಾಜಕೀಯದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಹಿರಿಯ ನಾಸ್ತಿಕ ಹೋರಾಟಗಾರರು ಪ್ರಸ್ತುತ ವಿವಾದದಲ್ಲಿ ದೇವರ ಕೈವಾಡವಿದೆ ಎಂದು ಅರಿತು ಪ್ರತಿಕ್ರಿಯಿಸಲು ಒಪ್ಪಿಕೊಂಡರು. “ ದೇವರು ಎನ್ನುವ ಇಲ್ಲದ ಗುಮ್ಮನನ್ನು ತೋರಿಸಿ ಬೆದರಿಸುವ, ಮರುಳು ಮಾಡುವ ತಂತ್ರವಿದು. ದೇವರ ರಕ್ತ ಹಂಚಿಕೊಂಡು ಹಿಟ್ಟಿದ ಬ್ರಾಹ್ಮಣ ಜಾತಿಯವರನ್ನು ಹಿಗ್ಗಾಮುಗ್ಗ ಹಳಿಯುತ್ತ ಓಟು ಬಾಚುವ ಗೌಡರು ಅದೇ ದೇವರ ರಕ್ತ ಸಂಬಂಧಿಯ ಹಿಂದೆ ಊರೂರು ಅಲೆಯುವುದು ಕಂಡಿಲ್ಲವೇ? ಈ ಜೋಕುಮಾರಸ್ವಾಮಿ ಭಲೇ ಚತುರ. ದೇಹವಿಲ್ಲದ, ಆಕಾರವಿಲ್ಲದ ಅಲ್ಲಾಹುವಿನ ಮೇಲೆ ಪ್ರಮಾಣ ಮಾಡಿ ಎನ್ನಬಹುದಿತ್ತು. ಆದರೆ ಪ್ರಮಾಣ ಮಾಡಲಿಕ್ಕೆ ಜಡ್ಡಿ ಕೈ ಎಲ್ಲಿಡಬೇಕು ಎನ್ನುವ ಸಮಸ್ಯೆ ಬರುತ್ತೆ. ಕ್ರೈಸ್ತನ ತಲೆಯಲ್ಲಾಗಲೇ ಮುಳ್ಳಿನ ಕಿರೀಟವಿದೆ ಅಲ್ಲಿ ಕೈ ಇಡಲು ಹೇಳಲಾಗದು. ಹೀಗಾಗಿ ತಲೆಯಷ್ಟನ್ನೇ ಪ್ರಮುಖವಾಗಿ ಹೊಂದಿರುವ ಮಂಜುನಾಥನ ಮೇಲೆ ಆಣೆ ಮಾಡಲು ಹೇಳಿದ್ದಾನೆ. ಇದರಿಂದ ನಾಲ್ಕು ತಲೆ ಇರುವ ಬ್ರಹ್ಮನಿಂದ ಹಿಡಿದು ಮುದಿವಯಸ್ಸಿನಲ್ಲೂ  ತಲೆ ತುಂಬಾ ಕರಿ ಕೂದಲು ಕಾಪಾಡಿಕೊಂಡಿರುವ ಸಾಯಿಬಾಬನವರೆಗೆ ಉಳಿದೆಲ್ಲಾ ದೇವರುಗಳಿಗೆ ಹೊಟ್ಟೆ ಕಿಚ್ಚಾಗುವುದಿಲ್ಲವೇ?”

ಪ್ರಸ್ತುತ ವಿವಾದದ ಬಗ್ಗೆ ಅಭಿಪ್ರಾಯ ಕೇಳಿದಾಗ ಸಾಮ್ರಾಟರು, “ಯಾರೇ ಆಣೆ ಪ್ರಮಾಣ ಮಾಡುವುದಿದ್ದರೆ ನಮ್ಮ ಮೇಲೆ ಮಾಡಲಿ. ಏಕೆಂದರೆ ಸಾಮ್ರಾಟರಾದ ನಮಗೆ ತಲೆಯೇ ಇಲ್ಲ, ಇರುವುದು ಹೃದಯ ಮಾತ್ರ!” ಎಂದು ಹೇಳಿದುದಾಗಿ ವರದಿಯಾಗಿದೆ.

ಕಗ್ಗತ್ತಲ ನಡುವೆ ಬೆಳ್ಳಿಯ ಗೆರೆ

17 ಡಿಸೆ

ನಗೆ ಸಾಮ್ರಾಟ್


ತುಂಬಾ ದಿನಗಳಿಂದ ನಮ್ಮ ಕನ್ನಡದ ಪತ್ರಿಕಗಳನ್ನು, ಸುದ್ದಿ ವಾಹಿನಿಗಳನ್ನು ಗಮನಿಸುವುದನ್ನು ಮರೆತು ನಾವು ಇಂಗ್ಲೀಷ್ ಪೇಪರನ್ನು, ಟಿವಿ ಚಾನೆಲ್ಲುಗಳನ್ನು ಹುಚ್ಚರಂತೆ ಗಮನಿಸುತ್ತಿದ್ದೆವು. ಕಾರಣವಿಷ್ಟೇ, ಎಲ್ಲದರೂ ಒಂದೇ ಒಂದು ಕ್ಷಣಕ್ಕಾದರೂ ಬೆಳಕಿನ ಕಿರಣಗಳು ಮೂಡಬಹುದೇನೋ ಎಂದು!


ಇಡೀ ದೇಶವೇ ಸಮೂಹ ಸನ್ನಿಯ ಕಪಿಮುಷ್ಟಿಯಲ್ಲಿ ನರಳುತ್ತಿರುವುದನ್ನು,ನಮ್ಮ ಸುತ್ತ ಮುತ್ತಲಿನ ಜನರೆಲ್ಲರೂ ಯಾವುದೋ ಹಿಪ್ನಾಟಿಸಂಗೆ ಒಳಗಾದವರಂತೆ ವರ್ತಿಸುತ್ತಿರುವಾಗ ಈ ಭೂಮಿಯ ಮೇಲೆ ಆ ದೇವರು ಸ್ಯಾಂಪಲ್ಲಿಗಾಗಿಯಾದರೂ ಇರಲಿ ಎಂದು ಸೃಷ್ಟಿಸಿದ ವಿವೇಕಿಗಳು ಎಲ್ಲಿಹೋದರು ಎಂದು ಹುಡುಕುತ್ತಿದ್ದೆವು. ಸಮೂಹ ಸನ್ನಿಗೆ ಬಲಿಯಾಗಿ ನಮ್ಮ ಮಾಧ್ಯಮಗಳೂ ಸಹ ಅವರ ದಿಟ್ಟ ಧ್ವನಿಯನ್ನು, ಸ್ಪಷ್ಟ ನಿಲುವನ್ನು ಪ್ರಕಟಿಸಲು ಹಿಂದೇಟು ಹಾಕಿದವೇನೋ ಎಂದು ಆತಂಕವಾಯ್ತು. ಸಂವಿಧಾನ ಬದ್ಧವಾಗಿ ಬಂದ ವಾಕ್ ಸ್ವಾತಂತ್ರ್ಯಕ್ಕೆ ಈ ಸಾಮೂಹಿಕ ಒಗ್ಗಟ್ಟಿನಿಂದ ಎಲ್ಲಿ ಅಪಾಯವಾಗಿ, ಒಂದು ಮಾತನ್ನು ಸಾರ್ವಜನಿಕವಾಗಿ ಹೇಳುವುದೂ ಅಪರಾಧವಾಗುತ್ತದೆಯೋ ಎಂದು ಕಳವಳಗೊಂಡಿದ್ದೆವು. ಸಾವಿರಾರು ವರ್ಷಗಳಿಂದ ಎಲ್ಲಾ ಬಗೆಯ ವಿರುದ್ಧ ಅಭಿಪ್ರಾಯಗಳನ್ನು, ಎಲ್ಲಾ ವರ್ಗದ ಹಿಪಾಕ್ರಸಿಯನ್ನು ಸಹಿಸಿಕೊಂಡು ಬಂದ ದೇಶ ಈ ಒಂದು ಘಟನೆಯಿಂದ ಎಲ್ಲಿ ಬದಲಾಗಿಬಿಡಬಹುದೋ ಎಂದು ಆತಂಕಗೊಂಡಿದ್ದೆವು. ಎಲ್ಲಕ್ಕಿಂತಲೂ ಹೆಚ್ಚು ಕಾಡಿದ ಭಯವೆಂದರೆ ‘ಈ ಭೂಮಿಯ ಮೇಲಿರುವ ಆ ಕೆಲವೇ ಕೆಲವು ಶ್ರೇಷ್ಠ ಮೇಧಾವಿಗಳೂ ಸಹ ಈ ಸಂದರ್ಭದಲ್ಲಿ ಸಮಾಜದ ಭಾವನೆಯನ್ನು ಒಪ್ಪಿಕೊಂಡು ಬಿಟ್ಟವೇ? ಎನ್ನುವುದಾಗಿತ್ತು.


ಮುಂಬೈ ಎಂಬ ಭಾರತದ ಆರ್ಥಿಕ ರಾಜಧಾನಿಯ ಮೇಲೆ ತನ್ನ ಬೇನಾಮಿ ಸೈನ್ಯದ ಮೂಲಕ ಪಾಕಿಸ್ತಾನವು ಫಿದಾಯೇ ಯುದ್ಧವನ್ನು ಘೋಷಿಸಿರುವ ಸಂದರ್ಭದಲ್ಲಿ ಇಡೀ ದೇಶಕ್ಕೆ ದೇಶವೇ ಮತಿಭ್ರಾಂತವಾದಂತೆ ವರ್ತಿಸುತ್ತಿತ್ತು. ದೇಶದ ಜನಸಮೂಹಕ್ಕೆ ತಾವೇನು ಮಾಡುತ್ತಿದ್ದೇವೆ ಎಂಬುದರ ಅರಿವೇ ಇರಲಿಲ್ಲ. ಮುಂಬೈ ನಗರಿಯನ್ನು ಬಂದರುಗಳ ಮೂಲಕ ಪ್ರವೇಶಿಸಿ  ಹಣದ ಉನ್ಮಾದದ ಪ್ರತೀಕದಂತೆ, ವಾಕರಿಕೆ ತರಿಸುವ ಶ್ರೀಮಂತಿಕೆಯ ಅಮಲಿನ ಸಂಕೇತದಂತೆ, ಬಡವರ ರಕವ ಹೀರುವ ಆಕ್ಟೋಪಸ್ಸುಗಳ ನಕಲಿನಂತೆ ಕಾಣುವ ತಾಜ್ , ಒಬೆರಾಯ್ ಹೊಟೇಲುಗಳ ಮೇಲೆ ಫಿದಾಯೆ ವೀರರು ದಾಳಿ ಮಾಡಿದರು. ಹಣದ ಮದದಲ್ಲಿ ಮೆರೆಯುತ್ತಿದ್ದ, ಜಾಗತೀಕರಣದ ಪಾಯಸವನ್ನು ಕೆನಯ ಸಮೇತ ಮೆಲ್ಲುತ್ತಿದ್ದ ಶ್ರೀಮಂತ ವರ್ಗಕ್ಕೆ ಬಿಸಿ ಮುಟ್ಟಿಸಿದರು. ಇಂತಹ ಸಾಮ್ರಾಜ್ಯ ಶಾಹಿ ವಿರೋಧಿ ಹೋರಾಟಗಾರರನ್ನು ನೂರು ಕೋಟಿ ಜನರಿರುವ ಭಾರತ ಕಂಡಿದ್ದಾದರೂ ಹೇಗೆ? ದೇಶದ ಜನರನ್ನು ಬಡಿದೆಬ್ಬಿಸಲು ಪ್ರಾಣದ ಹಂಗನ್ನು ತೊರೆದು ಬಂದ ಆ ಯೋಧರನ್ನು ನಮ್ಮ ದೇಶದ ಜನರು ಭಯೋತ್ಪಾದಕರು ಎಂದರು. ಕೊಲೆಗಡುಕರು ಎಂದು ಅಪಮಾನಿಸಿದರು. ಎಲ್ಲೋ ಸಿಕ್ಕುವ ಸ್ವರ್ಗವನ್ನು ಹಾಗೂ ಅಲ್ಲಿನ ಕನ್ಯೆಯರನ್ನು ಪಡೆಯುವುದಕ್ಕಾಗಿ ತಮ್ಮ ಇಪ್ಪತ್ತು, ಇಪತ್ತೊಂದರ ವಯಸ್ಸಿನಲ್ಲೇ ಸಾವಿನ ಕುಣಿಕೆಗೆ ಕತ್ತು ಒಡ್ಡಲು ತಯಾರಾದ ಯುವಕರನ್ನು ರಾಕ್ಷಸರು ಎಂದು ಕರೆದರು. ದೇಶಕ್ಕೆ ದೇಶವೇ ಹುಚ್ಚು ಹಿಡಿದಂತೆ ವರ್ತಿಸಿತು.


hypocrite

ಇನ್ನು ಹತ್ತು ಮಂದಿ ಅಬೋಧ ಬಾಲಕರು ಇನ್ನೂರು ಮಂದಿಯನ್ನು ಕೊಂದ ಮಾತ್ರಕ್ಕೆ ನಮ್ಮ ಸರಕಾರ ಅಮಾನವೀಯ ಕೆಲಸಕ್ಕಿಳಿಯಿತು. ನರ ಭಕ್ಷಕ ಸೈನ್ಯವನ್ನು ಕರೆಸಿ ಅದರ ರಕ್ತ ಪೀಪಾಸು ಕಮಾಂಡೊಗಳನ್ನು ಛೂ ಬಿಡಲಾಯ್ತು. ಏಳೆಂಟು ಮಂದಿ ಅಮಾಯಕ ಫಿದಾಯೇ ಹೋರಾಟಗಾರರ ಧ್ವನಿಯನ್ನು ಹತ್ತಿಕ್ಕುವುದಕ್ಕೆ ನೂರಾರು ಮಂದಿ ಕ್ರೂರ ಕಮ್ಯಾಂಡೊಗಳನ್ನು ಕರೆಸಲಾಯ್ತು. ವ್ಯವಸ್ಥೆಯ ಕ್ರೌರ್ಯಕ್ಕೆ ಸಾಕ್ಷಿಯಾಗಿ ಆ ಹತ್ತು ಮಂದಿಯಲ್ಲಿ ಒಂಭತ್ತು ಮಂದಿ ಹೋರಾಟಗಾರರು ಕಮ್ಯಾಂಡೊಗಳ ಜೀವ ಭಕ್ಷಕ ಬುಲೆಟುಗಳಿಗೆ ಆಹಾರವಾಗಿ ಕಣ್ಮುಚ್ಚಿದರು. ಇಷ್ಟಕ್ಕೂ ಆ ಘಟನೆಯಲ್ಲಿ ಸತ್ತವರ ಸಾವಿಗೆ ಈ ಒಂಭತ್ತು ಮಂದಿ ಫಿದಾಯೆಗಳೇ ಕಾರಣ ಎನ್ನುವುದಕ್ಕೆ ಏನಿತ್ತು ಸಾಕ್ಷಿ? ಅವರೇ ಕೊಂದರು ಎನ್ನುವುದಕ್ಕೆ ಇದ್ದ ಪುರಾವೆಗಳು ಯಾವುವು? ಒಂದು ವೇಳೆ ಅವರು ತಪ್ಪನ್ನೇ ಮಾಡಿದ್ದರೂ ಅವರನ್ನು ಶಿಕ್ಷಿಸುವುದಕ್ಕೆ ನಮ್ಮ ಸಂವಿಧಾನ ಬದ್ಧ ನ್ಯಾಯಾಂಗ ವ್ಯವಸ್ಥೆಯಿದೆ. ಅವರನ್ನು ಶರಣಾಗುವಂತೆ ಮನವೊಲಿಸಿ ಇಲ್ಲವೇ ಅವರೊಂದಿಗೆ ಮಾತು ಕತೆಗೆ ಕುಳಿತು ಅವರನ್ನು ನ್ಯಾಯಾಂಗದ ತನಿಖೆಗೆ ಒಳಪಡಿಸಬೇಕಿತ್ತು. ಅದು ಬಿಟ್ಟು ಅವರನ್ನು ಅಮಾನವೀಯವಾಗಿ ಕೊಂದು ಬಿಸಾಕುವುದರ ಮೂಲಕ ನಮ್ಮ ಸೈನ್ಯ, ಪೊಲೀಸರು ಹಾಗೂ ಸರಕಾರ ತಾನೆಂಥ ರಕ್ತ ಪೀಪಾಸು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.


ಆಗುವ ಅನಿಷ್ಟಕ್ಕೆಲ್ಲಾ ಶನೇಶ್ವರನೇ ಕಾರಣ ಎನ್ನುವಂತೆ ನಮ್ಮ ದೇಶದಲ್ಲಿ ನಡೆಯುವ ಪ್ರತಿಯೊಂದು ಭದ್ರತೆಯ ಲೋಪಕ್ಕೆ ನೆರೆಯ ಪಾಕಿಸ್ತಾನವನ್ನು ದೂರುವ ಚಟ ನಮಗೆ ತುಂಬಾ ಹಿಂದಿನಿಂದಲೇ ಇದೆ. ಪಾಪ ಆ ದೇಶ ತಮ್ಮ ದಿಕ್ಕೆಟ್ಟ ರಾಜಕೀಯ, ಬರಗೆಟ್ಟ ಆರ್ಥಿಕತೆ, ಅನಕ್ಷರತೆ, ನಿರುದ್ಯೋಗದಿಂದ ತನ್ನ ತಾನು ರಕ್ಷಿಸಿಕೊಳ್ಳಲು ಒದ್ದಾಡುತ್ತಿದೆ. ಆ ದೇಶದಲ್ಲಿ ಸರಕಾರಕ್ಕೆ ಜನರ ಹಸಿವನ್ನು ತಣಿಸಲು ಸಾಧ್ಯವಾಗಿಲ್ಲ ಇನ್ನು ಅದು ಭಾರತವನ್ನು ಹಾಳು ಮಾಡುವುದಕ್ಕೆ ಇಷ್ಟೆಲ್ಲಾ ಖರ್ಚು ಮಾಡಲು ಸಾಧ್ಯವೇ? ಅಲ್ಲಿನ ಜನರಾದರೂ ತಮ್ಮ ಹಸಿವಿಗಿಂತ ತಮ್ಮ ದ್ವೇಷ ಮುಖ್ಯ ಎಂದು ಎಂದಾದರೂ ಭಾವಿಸಲು ಸಾಧ್ಯವಿದೆಯೇ? ಗೌರವಯುತವಾಗಿ ಈ ದೇಶದಿಂದ ಬೇರೆಯಾದ ನಮ್ಮ ಬಂಧುಗಳು ಅವರು ನಾವು ಅವರನ್ನು ಶತ್ರುಗಳಂತೆ ಕಾಣುವುದು ಅಮಾನವೀಯ. ನಮ್ಮ ಯುದ್ಧ ದಾಹಿ ಸರಕಾರಗಳು, ರಕ್ತಪೀಪಾಸು ಸೈನ್ಯ ಪ್ರತಿಯೊಂದು ಭಯೋತ್ಪಾದಕ ದಾಳಿಗೂ ಪಾಕಿಸ್ತಾನ, ಬಾಂಗ್ಲಾ ದೇಶಗಳನ್ನು ದೂರುತ್ತವೆ.


ಇಷ್ಟು ದಿನ ಕೇವಲ ಕೋಮುವಾದಿ ಬಹುಸಾಂಖ್ಯಾತರು ಮಾತಾಡುತ್ತಿದ್ದ ರೀತಿಯಲ್ಲೇ ಇತ್ತೀಚೆಗೆ ಮುಸ್ಲೀಂ ಮುಖಂಡರು, ಎಡಪಂಥೀಯರೂ ಮಾತಾಡಲು ಶುರು ಮಾಡಿದ್ದಾರೆ. ಶಾರುಖ್ ಖಾನ್, ಅಮೀರ್ ಖಾನ್ ರಿಂದ ಹಿಡಿದು ಪ್ರತಿಯೊಬ್ಬ ಮುಸ್ಲಿಂ ಜನಪ್ರಿಯ ವ್ಯಕ್ತಿಗಳು ಭಯೋತ್ಪಾದಕರನ್ನು ಗುಂಡಿಟ್ಟು ಕೊಲ್ಲಿ. ಅವರಿಗೆ ಧರ್ಮವಿಲ್ಲ, ಮಾನವೀಯತೆಯಿಲ್ಲ ಎಂದು ಹೇಳಿಕೆ ಕೊಡುತ್ತಿದ್ದಾರೆ. ಬಹುಸಂಖ್ಯಾತರ ಕೋಮುವಾದದಿಂದ ರೊಚ್ಚಿಗೆದ್ದ, ವ್ಯವಸ್ಥೆಯ ಬಹುಸಂಖ್ಯಾತರ ಓಲೈಕೆಯಿಂದ ಅಭದ್ರತೆ ಒಳಗಾಗುವ ಅಲ್ಪಸಂಖ್ಯಾತರು ಕೋವಿ ಕೈಗೆತ್ತಿಕೊಳ್ಳುತ್ತಾರೆ. ನಮ್ಮ ಸೈನಿಕರ ಹಾಗೆ ಕೊಲ್ಲುವುದಕ್ಕಾಗಿ ಎಂತಲೇ ಗನ್ನು ಕೈಗಿರಿಸಿಕೊಂಡು ತರಬೇತಿ ಪಡೆಯುವಂಥವರಲ್ಲ ಅವರು. ಅವರನ್ನು ಖಂಡಿಸುವ ಮೂಲಕ ಅಲ್ಪಸಂಖ್ಯಾತ ವರ್ಗ ಬಹುಸಂಖ್ಯಾತರ ಬಲೆಗೆ ಬೀಳುತ್ತಿದೆ. ಮುಂಬೈ ಘಟನೆ ನಡೆದ ನಂತರ ದೇಶವಿಡೀ ಕಠಿಣ ಕಾನೂನುಗಳಿಗೆ ಉಗ್ರವಾದ ಕ್ರಮಗಳಿಗಾಗಿ ಸರಕಾರವನ್ನು ಒತ್ತಾಯ ಪಡಿಸುತ್ತಿವೆ. ಪೋಟಾದಂತಹ ಜೀವ ವಿರೋಧಿ, ದುಷ್ಟ ಕಾನೂನನ್ನು ತೆಗೆದು ಹಾಕಿ ಪ್ರಜ್ಞಾವಂತರಲ್ಲಿ ನೆಮ್ಮದಿಯನ್ನು ಮೂಡಿಸಿದ್ದ ಯುಪಿಎ ಸರಕಾರ ಸಹ ಒತ್ತಡಕ್ಕೆ ಮಣಿದು ಪೋಟಾದಂತಹ ಕಾಯ್ದೆಯನ್ನು ತರುವ ಬಗ್ಗೆ ಆಲೋಚನೆ ನಡೆಸುತ್ತಿದೆ. ಇದು ನಿಜಕ್ಕೂ ದುರದೃಷ್ಟಕರ. ಸಾಯಲು ತಯಾರಾಗಿ ಬರುವ ಹೋರಾಟಗಾರರು ನಮ್ಮ ಕಾಯ್ದೆಗಳಿಗೆ ಹೆದರುತ್ತಾರೆಯೇ? ಇಂತಹ ಕಾಯ್ದೆಗಳಿಂದ ಏನೂ ಉಪಯೋಗವಾಗುವುದಿಲ್ಲ. ಸುಮ್ಮನೆ ಇವನ್ನು ಬಳಸಿಕೊಂಡು ಅಮಾಯಕರನ್ನು ಹಿಂಸಿಸಲಾಗುತ್ತದೆ. ಈಗ ರಾಜ್ಯ ಸರಕಾರಗಳು ಮಾಡಿರುವ ಕೋಕಾ ಕಾನೂನು ಬಳಸಿಕೊಂಡು ಯೂನಿಯನ್ ಮುಖಂಡರನ್ನು ಹಿಂಸಿಸುತ್ತಿರುವುದು ಕಾಣುವುದಿಲ್ಲವೇ?

ಭಯೋತ್ಪಾದನೆಯ ಬಗ್ಗೆ ಹಿಸ್ಟೀರಿಕ್ ಆಗಿ ದೇಶಕ್ಕೆ ದೇಶವೇ ಆವೇಶದಿಂದ ವರ್ತಿಸುತ್ತಿರುವಾಗ  ಈ ಮೇಲೆ ನಾವು ಕೊಡಮಾಡಿರುವ ವಿವೇಕಯುತವಾದ, ಪ್ರಜ್ಞಾವಂತಿಕೆಯಿಂದ ಕೂಡಿದ ಹೇಳಿಕೆಗಳನ್ನು ನೀಡುವುದಕ್ಕೆ ಯಾರೂ ಮುಂದೆ ಬರದಿದ್ದುದನ್ನು ಕಂಡು ನಾವು ತೀವ್ರವಾಗಿ ಖಿನ್ನರಾಗಿದ್ದೆವು. ಆದರೂ ನಮ್ಮ ದೇಶದ ಗೌರವವನ್ನು, ಮರ್ಯಾದೆಯನ್ನು ಕಾಪಾಡಲು ಒಂಟಿ ಕಾಲಲಿ ನಿಂತು ಶ್ರಮಿಸುತ್ತಿರುವ ಇಂಗ್ಲೀಷ್ ಮಾಧ್ಯಗಳ ಮೇಲೆ ನಾವು ನಂಬಿಕೆಯನ್ನು ಕಳೆದುಕೊಂಡಿರಲಿಲ್ಲ. ಕಡೆಗೂ ಕವಿದ ಕಗ್ಗತ್ತಲ ನಡುವೆ ಬೆಳ್ಳಿಎಯ ರೇಖೆ ಮೂಡಿದೆ. ನಮ್ಮಂತಹ ಸಾವಿರಾರು ಮಂದಿ ಜಾತ್ಯಾತೀತವಾದಿಗಳ, ಪ್ರಗತಿಪರರ, ಹಿಂಸೆ ವಿರೋಧಿಗಳ, ಶಾಂತಿ ದೂತರ, ಅಂತರಾಷ್ಟ್ರೀಯ ಮಾನ್ಯತೆ ಗಳಿಸಿದ ವೀರರ ಧೀಮಂತ ಪ್ರತಿನಿಧಿಯಾಗಿ ನಮ್ಮ ಬುದ್ಧಜೀವಿ ಹಾಗೂ ಸುದ್ದಿಜೀವಿ ಅರುಂಧತಿ ರಾಯ್‌ರವರು ಮಾತಾಡಿದ್ದಾರೆ.


ಅವರ ದಿಟ್ಟತನಕ್ಕೆ, ಸತ್ಯ ನಿಷ್ಟುರತೆಗೆ, ಜಾತ್ಯಾತೀತವಾದಕ್ಕೆ ಜಯವಾಗಲಿ. ಅರುಂಧತಿ ಸಂತತಿ ಸಾವಿರವಾಗಲಿ. ಫಿದಾಯೆಗಳು ಅಮರರಾಗಲಿ

(ಚಿತ್ರ ಕದ್ದದ್ದು ಇಲ್ಲಿಂದ:

http://neoconexpress.blogspot.com/2006/02/la-times-gutless-offenders-and-cartoon.html)


ಸೀರಿಯಸ್ಲೀ ಸೀರಿಯಸ್ಸು: ಸತ್ತ ನೊಣ, ಹೆಗ್ಗಣಗಳ ಪರಿಮಳ!

14 ನವೆಂ

‘ಕಂಡವರ ತಟ್ಟೆಯಲ್ಲಿನ ಸತ್ತ ನೊಣದ ಬಗ್ಗೆ ಮಾತನಾಡುವ ಮೊದಲು ನಿಮ್ಮ ತಟ್ಟೆಯಲ್ಲಿನ ಸತ್ತ ಹೆಗ್ಗಣವನ್ನು ತೆಗೆದುಹಾಕಿ’ ಎಂಬುದು ಚರ್ಚಾಸ್ಪರ್ಧೆಗಳಲ್ಲಿ ವೀರಾವೇಷದಿಂದ ಹೋರಾಡಿ ಹಲವು ಬಾರಿ ವಿಜಯಿಯಾಗಿ ವಿಜಯಮಾಲೆಯನ್ನು ಧರಿಸಿ ಮೆರೆದು ಜನರು ಮರೆತು ಹೋದವರೂ, ವೀರಮರಣವನ್ನಪ್ಪಿ ನಾಲ್ಕು ಕ್ಷಣ ನೆರೆದವರ ಮೌನಾಚರಣೆಯನ್ನು ಸ್ವೀಕರಿಸಿದವರೂ, ಮುಖಹೇಡಿಗಳಾಗಿ ಹೌಹಾರಿ ಬಸವಳಿದು ಹೋದವರೂ ಎಲ್ಲರಿಗೂ ಪ್ರಿಯವಾದ ವಾಕ್ಯ. ಇದರರ್ಥ ನಿಮ್ಮಲ್ಲಿರುವ ದೊಡ್ಡ ತಪ್ಪನ್ನು ಮೊದಲು ತಿದ್ದಿಕೊಳ್ಳಿ ಆಮೇಲೆ ಇನ್ನೊಬ್ಬರಲ್ಲಿರುವ ಸಣ್ಣ ತಪ್ಪಿನ ಬಗ್ಗೆ ಮಾತನಾಡಲು ನಿಮಗೆ ಅರ್ಹತೆ ಬರುತ್ತದೆ ಎಂದು. ಉದಾಹರಣೆಗೆ: ಕೂದಲಿಗೆ ಶ್ಯಾಂಪೂ ಹಾಕೆ ಬೇಡ, ಹಾಳಾಗುತ್ತವೆ ಎಂದು ತಂದೆ ಮಗನಿಗೆ ಉಪದೇಶ ಮಾಡುತ್ತಾನೆ. ತಂದೆಯ ಬೋಳು ತಲೆಯಲ್ಲಿನ ನಾಲ್ಕು ಕೂದಲುಗಳನ್ನು ಹುಡುಕಿ ತೋರಿಸಿ ಮಗ ಮೇಲಿನ ವಾಕ್ಯವನ್ನು ಹೇಳಬಹುದು.

ಇಷ್ಟು ಪೀಠಿಕೆಯನ್ನು ಬಯಸುವ ಸಂಗತಿಯಾಗುವುದು ಎಂಬುದು ನಿಮ್ಮಂತಹ ಬುದ್ಧಿವಂತರಿಗೂ ಹೊಳೆದಿರಲಾಗದು. ಇಷ್ಟು ದಿನ ಭಾರತದ ಯಾವ ಮೂಲೆಯಲ್ಲಿ ಬಾಂಬುಗಳು ಸಿಡಿದರೂ, ಸಿಡಿಯದೆ ಮಲಗಿ ನಿದ್ದೆ ಹೋದರೂ, ಬಾಂಬಿನ ಸದ್ದು ಮಾಡುವ ಆನೆ ಪಟಾಕಿ ಅಬ್ಬರಿಸಿದರೂ, ನಾಲ್ಕು ಮಂದಿ ತಲೆಗೆ ಬಿಳಿಯ ಟೊಪ್ಪಿ ತೊಟ್ಟವರು ಒಂದೇ ದಿನ ಕಾಣೆಯಾದರೂ ‘ಭಯೋತ್ಪಾದನೆ’, ‘ಉಗ್ರವಾದ’, ‘ಮೂಲಭೂತವಾದ’, ‘ಮತಾಂಧತೆ’ ಎಂದೆಲ್ಲಾ ದಿನಪತ್ರಿಕೆಗಳ ಅಂಕಣಕೋರರು, ವಾರಪತ್ರಿಕೆಗಳ ಸೊಂಪಾದಕರು ಅಂಕಣಗಳ ಮೇಲೆ ಅಂಕಣಗಳನ್ನು ಚಚ್ಚುತ್ತಿದ್ದರು. ಕೆಲವರು ಅಲ್ ಖೈದ, ಮಷ್ಕಿರಿ ತೊಯ್ಬಾ, ಮಜಾಹಿದ್ದೀನ್ ಎಂದೆಲ್ಲಾ ಯಾರಿಗೂ ಅರ್ಥವಾಗದ ಶಬ್ಧಗಳ ದಾಳಿಯನ್ನು ಮಾಡುತ್ತಾ ಜನಸಾಮಾನ್ಯರನ್ನು ಭಯಭೀತರನ್ನಾಗಿಸುತ್ತಿದ್ದರು. ಕೇಸರಿ ಪಾರ್ಟಿಯಂತೂ ಪರಮ ತತ್ವಜ್ಞಾನಿಯ ಫೋಸಿಗೆ ರೆಡಿಯಾಗುತ್ತಾ ‘ನಾವು ಯಾವ ಕಾಲದಿಂದ ಹೇಳುತ್ತಾ ಬಂದಿದ್ದೇವೆ, ಅವರ ಮತಾಂಧತೆ ಹೆಚ್ಚಾಯಿತು ಅಂತ, ನೀವು ಕೇಳಲಿಲ್ಲ. ಸರಕಾರದ ಮೃದು ಧೋರಣೆಯಿಂದಾಗಿ ಗಟ್ಟಿ ಗಟ್ಟಿ ಬಾಂಬುಗಳು ಸ್ಪೋಟಗೊಳ್ಳುತ್ತಿವೆ. ನಮ್ಮವರನ್ನು ನೋಡಿ ಎಂದಿಗೂ ಒಬ್ಬರ ಮೇಲೆ ಕೈ ಎತ್ತಿದವರಲ್ಲ. ನಮ್ಮವರು ಯಾರ ಮೇಲಾದರೂ ದಂಡೆತ್ತಿ ಹೋದ ಉದಾಹರಣೆ ಇತಿಹಾಸದಲ್ಲಿ ಸ್ಯಾಂಪಲ್ಲಿಗಾದರೂ ಇದ್ದರೆ ತೋರಿಸಿ ನಾವು ಪ್ರಸ್ತುತ ಹಾಕಿಕೊಂಡಿರುವ ಶಾರ್ಟ್ಸ್ ಕಳಚಿ ನಿಮ್ಮಂತೆ ಪ್ಯಾಂಟು ತೊಡುತ್ತೇವೆ.’ ಎಂದು ಮೈಕುಗಳ ಮುಂದೆ ವಾಗ್ಝರಿಯನ್ನು ಹರಿಸಿ ಮೈಕನ್ನೂ, ನೋಡುಗರ ಕಣ್ಣುಗಳನ್ನು ಒದ್ದೆಯಾಗಿಸುತ್ತಿದ್ದರು.

ಇವರಿಗೆ ವಿರುದ್ಧವಾದದ್ದನ್ನೇ ಹೇಳುತ್ತಾ ಬಂದಿರುವ ಹ್ಯಾಂಡ್ ಪಾರ್ಟಿಯವರು ಆಡಳಿತದಲ್ಲಿದ್ದಾಗ ಅದರ ಹೋಂ ಮಿನಿಸ್ಟರು, ‘ಉಗ್ರವಾದವನ್ನು ನಾವು ಯಾವ ಕಾರಣಕ್ಕೂ ಸಹಿಸುವುದಿಲ್ಲ. ಭಯೋತ್ಪಾದಕರನ್ನು ಕಂಡಲ್ಲಿ ಗುಂಡಿಕ್ಕಿ ಕೊಂದು ಸೆರೆಹಿಡಿದು ನ್ಯಾಯಾಲಯದ ಮುಂದೆ ನಿಲ್ಲಿಸುತ್ತೇವೆ. ಭಯೋತ್ಪಾದಕರ ಒತ್ತಾಯಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ’ ನಾಲ್ಕೈದು ಸೂಟು ಬದಲಿಸುವ ನಡುವೆ ಸಮಯ ಮಾಡಿಕೊಂಡು ಹಿಂದಿನ ಹೇಳಿಕೆಯನ್ನೇ ನೆನಪಿನಿಂದ ಹೊರತೆಗೆದು ಮರು ಉಚ್ಚರಿಸಿ ಬೆವರೊರೆಸಿಕೊಳ್ಳುತ್ತಾರೆ. ಅಲ್ಲಿ ಇಲ್ಲಿ ಕೆಲವು ಭೂಮಿಯ ಮೇಲಿನ ಏಕೈಕ ಬುದ್ಧಿವಂತ ಪ್ರಾಣಿಗಳು ‘ಭಯೋತ್ಪಾದನೆಗೆ ಯಾವ ಧರ್ಮವನ್ನೂ ಹೊಣೆಯಾಗಿಸಲು ಸಾಧ್ಯವಿಲ್ಲ. ಒಂದು ಸಮಾಜ ಶಾಂತಿಯಿಂದ ಇದೆ ಎಂದರೆ, ಸಹಬಾಳ್ವೆ ಬ್ರಾತೃತ್ವವನ್ನು ಪಾಲಿಸುತ್ತಿದೆ, ಸರ್ವರಿಗೂ ಸ್ವತಂತ್ರವನ್ನು ಕೊಟ್ಟಿದೆ ಎಂದಾಗ ಅದಕ್ಕೆ ಅವರು ಪಾಲಿಸುವ ಧರ್ಮ, ಅವರ ಸಂಸ್ಕಾರವನ್ನು ಹೊಣೆ ಮಾಡಬೇಕು. ಆದರೆ ಅವರು ಹಿಂಸೆಗಿಳಿದು ಮುಗ್ಧ ಮಕ್ಕಳ, ಅಮಾಯಕರ ಪ್ರಾಣವನ್ನು ತೆಗೆಯುವಾಗ, ತಮ್ಮ ದೇಶವನ್ನೇ ಒಡೆದೊಡೆದು ದಳ್ಳುರಿಯಲ್ಲಿ ಬೇಯಿಸುವಾಗ ಅದಕ್ಕೆ ಧರ್ಮವನ್ನು ಹೊಣೆ ಮಾಡಬಾರದು. ಭಯೋತ್ಪಾದನಕನಿಗೆ ಧರ್ಮವಿಲ್ಲ. ಆತನ ಕೃತ್ಯಗಳೆಲ್ಲವೂ ಸ್ವಂತ ವಿವೇಚನೆಯಿಂದ ಬಂದವು.’ ಎಂದು ಘನಘಂಬೀರವಾದ ವಿಚಾರವನ್ನು ಮಂಡಿಸಿ ಗಡ್ಡ ಕೆರೆಯುತ್ತಾ ನಿಂತಿರುವಾಗ ಹ್ಯಾಂಡ್ ಪಕ್ಷದ ವಕ್ತಾರ ಬಂದು ‘ನಾವು ಅದನ್ನೇ ಹೇಳುತ್ತಿದ್ದದ್ದು, ಭಯೋತ್ಪಾದನೆಗೆ ಧರ್ಮ ಕಾರಣವಲ್ಲ. ಹಾಗೆಯೇ ಭಯೋತ್ಪಾದನೆಯನ್ನು ಮತದ ಹೆಸರು ಹೇಳಿ ಕರೆಯುವುದು ತಪ್ಪು. ಭಯೋತ್ಪಾದಕರದು ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆಯ ವಿರುದ್ಧದ ಬಂಡಾಯದ ದನಿ’ ಎಂದು ಉಸುರುತ್ತಾರೆ. ಕೇಸರಿ ಪಕ್ಷದವರು ಇವರಿಬ್ಬರ ಮಾತುಗಳನ್ನು ಕೇಳುತ್ತಾ ಚಿದ್ವಿಲಾಸದ ನಗೆ ಬೀರುತ್ತಾ, ‘ತುಷ್ಟೀಕರಣ’ ಎಂದು  ಉದ್ಗರಿಸುತ್ತಾರೆ.

ಆದರೆ ಕಾಲ ಚಕ್ರ ಉರುಳಿದ ಹಾಗೆ ಚಿದ್ವಿಲಾಸದ ನಗೆ ಬೀರುವವರ ಸರದಿಯೂ ಬದಲಾಗಿದೆ. ಕೇಸರಿ ಪಕ್ಷದವರು ಬೆವರಿಳಿಯುವ ಹಣೆಯನ್ನು ತಮ್ಮ ಜುಬ್ಬಗಳಿಗೆ ತಿಕ್ಕಿಕೊಳ್ಳುತ್ತಿದ್ದರೆ ಹ್ಯಾಂಡಿನವರು ಬೀಗುತ್ತಿದ್ದಾರೆ. ಕೇಸರಿ ಪಕ್ಷದ ಬೆಂಬಲಿಗರು ಬಾಂಬುಗಳನ್ನು ಮಾಡುವಲ್ಲಿ ಹೆಸರು ಮಾಡಿದ್ದಾರೆ, ಹ್ಯಾಂಡಿನವರಷ್ಟು ಚೆನ್ನಾಗಿ ಮಾಡುವುದನ್ನು ಇನ್ನೂ ಕಲಿತಿಲ್ಲವಾದರೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದಾರೆ. ನಾಲ್ಕೈದು ಮಂದಿ ಈ ಮಹಾನ್ ಪ್ರಯೋಗದಲ್ಲಿ ತಮ್ಮ ಜೀವವನ್ನೇ ಹವಿಸ್ಸನ್ನಾಗಿ ಅರ್ಪಿಸಿದ್ದಾರೆ. ಹ್ಯಾಂಡಿನ ಅನುಯಾಯಿಗಳಷ್ಟು ತರಬೇತಿಯನ್ನು ಕೇಸರಿ ಪಕ್ಷದ ಅಭಿಮಾನಿಗಳು ಪಡೆಯಬೇಕು ಎಂಬ ಉದ್ದೇಶದಿಂದ ನೇರವಾಗಿ ಸೇನೆಯಿಂದ ಉನ್ನತ ಅಧಿಕಾರಿಯನ್ನು ತರಬೇತಿ ನೀಡಲು ನೇಮಿಸಲಾಗಿದೆ. ಹಾಗೆಯೇ ಇವರ ಮೇಲೆ ಭಗವಂತನ ಕೃಪೆ ಹೆಚ್ಚಾಗಿರಲಿ ಎಂದು ಸಾಧ್ವಿ ಮಣಿಯವರ ನೆರವನ್ನೂ ಪಡೆಯಲಾಗಿದೆ. ಬುದ್ಧಿಜೀವಿಗಳು ಆಚೆ ಈಚೆ ನೋಡಿ ಮೊದಲು ಯಾರಾದರೂ ಮಾತನಾಡಲಿ ಎಂದು ಕಾಯುತ್ತಿದ್ದಾರೆ. ಕೇಸರಿ ಪಕ್ಷದವರು ಮಾಡುತ್ತಿದ್ದ ಆರೋಪಗಳ ಕಾಪಿಯನ್ನು ಪತ್ರಿಕೆಯ ಕಛೇರಿಗಳಿಂದ ಸ್ಪೀಡ್ ಪೋಸ್ಟಿನಲ್ಲಿ ತರಿಸಿಕೊಂಡ ಹ್ಯಾಂಡ್ ಪಕ್ಷದವರು ಅವನ್ನು ಉರುಹೊಡೆಯುವಲ್ಲಿ ಮಗ್ನರಾಗಿದ್ದರೆ ಕೇಸರಿ ಪಕ್ಷದವರು ಹ್ಯಾಂಡ್ ಪಕ್ಷದವರ ಹೇಳಿಕೆಗಳ ಮೊರೆಹೋಗಿದ್ದಾರೆ. ಈ ಮಧ್ಯೆ ನಗೆ ಸಾಮ್ರಾಟರಂತಹ ಮಾಜಿ ಜವಾಬ್ದಾರಿಯುತ ಪ್ರಜೆಗಳು ಹಾಗೂ ಹಾಲಿ ರಾಜಕೀಯ ವಿಶ್ಲೇಷಕರು ಕೇಸರಿ ಹಾಗೂ ಹ್ಯಾಂಡ್ ಪಕ್ಷಗಳ ಈ ಸಾಮರಸ್ಯವನ್ನು, ಕೊಡುತೆಗೆದುಕೊಳ್ಳುವಿಕೆಯನ್ನು ನಾವು ಇಷ್ಟು ವರ್ಷಗಳ ಇತಿಹಾಸದಲ್ಲಿ ಎಂದಿಗೂ ಕಂಡಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಒಬಾಮ ಯುವಕರಿಗೆ ಆದರ್ಶವಾಗಬಾರದು!

13 ನವೆಂ

(ನಗೆ ನಗಾರಿ ರಾಜಕೀಯ ವೃತ್ತಾಂತ ಬ್ಯೂರೋ)

ಜಗತ್ತಿನ ತ್ಯಂತ ಹಳೆಯ ಪ್ರಜಾಪ್ರಭುತ್ವಗಳಲ್ಲು ಒಂದಾದ ಅಮೇರಿಕಾದ ನಲವತ್ತನಾಲ್ಕನೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಒಬಾಮ ಜಗತ್ತಿನಾದ್ಯಂತ ಹೊಸ ಅಲೆಯನ್ನು ಎಬ್ಬಿಸಿರುವುದು ಸುಳ್ಳಲ್ಲ. ಭಾರತದಲ್ಲಿ ನೆಲೆಸಿರುವ ಅನೇಕ ಜಾಗತಿಕ ರಾಜಕೀಯ ಪಂಡಿತರು ಭಾರತವನ್ನು ಅಪ್ಪಳಿಸಿದ ಎರಡನೆಯ ಸುನಾಮಿ ಇದು ಎಂದು ವ್ಯಾಖ್ಯಾನಿಸುವ ಪ್ರಯತ್ನ ಮಾಡಿದರು. ಆದರೆ ಅದು ಯಾವ ಪತ್ರಿಕೆಯಲ್ಲೂ ಬೆಳಕು ಕಾಳದೆ ಡಾರ್ಕ್ ರೂಮ್ ಪಾಲಾಯಿತು. ಎಪ್ಪತ್ತು ಚಿಲ್ಲರೆ ವರ್ಷ ವಯಸ್ಸಿನ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಜಾನ್ ಮೆಕೇನ್‌ರನ್ನು ಸುಲಭವಾಗಿ ಮಣಿಸಿದ ನಲವತ್ತೇಳು ವರ್ಷದ ‘ಯುವಕ’ ಒಬಾಮ `we can change’ ಎಂಬ ಘೋಷವಾಕ್ಯದೊಂದಿಗೆ ಅಧಿಕಾರ ಪಡೆದುಕೊಂಡಿದ್ದಾರೆ. ಗುಲಾಮರಾಗಿ ನರಳಿದ ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬ ದೇಶದ ಸರ್ವೋಚ್ಛ ಹುದ್ದೆಯನ್ನು ಅಲಂಕರಿಸಲು ಸಾಧ್ಯವಾದದ್ದು ಅಮೇರಿಕಾದ ಪ್ರಜಾಪ್ರಭುತ್ವದ ಗಟ್ಟಿತನಕ್ಕೆ ಸಾಕ್ಷಿ ಎಂಬ ಹೊಗಳಿಕೆಯ ನಡುವೆಯೇ ಇದು ಸಾಧ್ಯವಾಗಲು ಇನ್ನೂರ ಇಪ್ಪತ್ತೊಂದು ವರ್ಶ ಬೇಕಾಯ್ತೆ ಎಂಬುದು ಸಾಮ್ರಾಟರ ಕೊಂಕು! ಭಾರತ ಅಮೇರಿಕಾದಿಂದ ಕಲಿಯಬೇಕಾದ್ದು ತುಂಬಾ ಇದೆ ಎಂದು ಚಡಪಡಿಸುವವರನ್ನು ಸಮಾಧಾನ ಪಡಿಸುವುದಕ್ಕಾಗಿ ಸಾಮ್ರಾಟರು ಶ್ರೀಮಾನ್ ಘಾರವರನ್ನು ನೆನೆಸಿಕೊಂಡು ಲೈಟ್ ಪದ್ಯ ಹೊಸೆದಿದ್ದಾರೆ.

ಒಬಾಮನಿಗೆ ಬಹುಪರಾಕ್
ನಮಗೊಬ್ಬ ಸಿಗುವುದು ಎಂದು?
ಚಿಂತೆ ಬೇಡ
ಅವರಿಗಾತ ಸಿಕ್ಕಲು ಬೇಕಾಯ್ತು
ವರ್ಷಗಳು ೨೨೧
ನಮ್ಮದಿನ್ನೂ ಅರವತ್ತೊಂದು!

ಈ ಮಧ್ಯೆ ಒಬಾಮರಿಂದ ಸ್ಪೂರ್ತಿ ಪಡೆದ ಜಗತ್ತಿನ ತರುಣ ತರುಣಿಯರು ದೇಶದ ಅಭಿವೃದ್ಧಿಗಾಗಿ ತಾವೂ ರಾಜಕೀಯದಲ್ಲಿ ಪಾಲ್ಗೊಳ್ಳಬೇಕು ಎಂಬ ಆಸಕ್ತಿಯನ್ನು ತಳೆದಿರುವುದು ಅಲ್ಲಲ್ಲಿ ಬೆಳಕಿಗೆ ಬಂದಿದೆ. ಯುವಕರು ರಾಜಕೀಯದಲ್ಲಿ ಆಸಕ್ತಿ ತಳೆಯುವುದರಿಂದಾಗುವ ಬದಲಾವಣೆಯ ಬಗ್ಗೆ ಹಾಗೂ ಯುವಕರು ರಾಜಕೀಯಕ್ಕೆ ಬರಬೇಕೆ ಎಂಬ ಬಗ್ಗೆ ನಗೆ ನಗಾರಿ ಸಾಕಷ್ಟು ಮಂದಿಯನ್ನು ಸಂದರ್ಶಿಸಿ ಅಭಿಪ್ರಾಯ ಕ್ರೂಢಿಕರಿಸಿದೆ.

ಟಿಮ್ ಜೋನ್ ಪಾಪಣ್ಣ, ಯುವಕ: ಒಬಾಮ ನಮಗೆಲ್ಲಾ ಸ್ಪೂರ್ತಿ. ನಲವತ್ತೇಳು ವರ್ಷದ ವ್ಯಕ್ತಿ ಅಮೇರಿಕಾದಂತಹ ದೇಶದ ಅಧ್ಯಕ್ಷನಾಗಬಹುದಾದರೆ ಇಪ್ಪತ್ನಾಲ್ಕು ವರ್ಷದ ನಾನು ಕನಿಷ್ಟ ಪಕ್ಷ ಕಾರ್ಪೋರೇಷನ್ ಮೇಯರ್ ಆಗುವುದಕ್ಕೆ ಸಾಧ್ಯವಿಲ್ಲವೇ? ನಮ್ಮ ದೇಶದಲ್ಲಿ ರಾಜಕೀಯ ವ್ಯವಸ್ಥ ಸಂಪೂರ್ಣ ಸರಿಯಾಗಬೇಕು. ಯುವಕರು ದೊಡ್ಡ ದೊಡ್ಡ ರಾಜಕೀಯ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು. ಇಲ್ಲವಾದರೆ ನನ್ನಂತಹ ಎಷ್ಟೋ ಮಂದಿ ಶಕ್ತಿವಂತ, ಕ್ರಾಂತಿಕಾರಿ ಚಿಂತನೆಗಳ, ಬಿಸಿ ರಕ್ತದ, ಅಪ್ರತಿಮ ಬುದ್ಧಿಮತ್ತೆಯ ಯುವಕರು ಕಾಲೇಜು ಯೂನಿಯನ್ನಿನ ಕಾರ್ಯದರ್ಶಿ, ಕ್ರಿಕೆಟ್ ಟೀಮ್ ಮ್ಯಾನೇಜರು ಸ್ಥಾನದ ಚುನಾವಣೆ ಮುಂತಾದವುಗಳಲ್ಲೇ ನಮ್ಮ ಪ್ರತಿಭೆಯನ್ನು ಪೋಲು ಮಾಡಿಕೊಂದುಬಿಡುತ್ತೇವೆ.

indian-flag

ಶ್ರೀ ಚಿಂತಾಕ್ರಾಂತ ಮೂರ್ತಿ, ಬುದ್ಧಿಜೀವಿ: ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ ಒಬಾಮನ ಗೆಲುವನ್ನು ಯಾವ ನೆಲಯಲ್ಲಿ ವಿಶ್ಲೇಷಿಸಲಾಗುತ್ತಿದೆ ಎಂಬುದನ್ನು ನಾನು ಹಲವು ದಿನಗಳಿಂದ ನಿರ್ಲಿಪ್ತನಾಗಿ ಗಮನಿಸುತ್ತಿದ್ದೇನೆ. ಯುವಕರು ರಾಜಕೀಯದಲ್ಲಿ ಆಸಕ್ತಿ ತಳೆಯಬೇಕೆ ಬೇಡವೇ ಎಂಬುದು ಜಾಗತೀಕರಣದ ಈ ಕಾಲಘಟ್ಟದಲ್ಲಿ ಅತ್ಯಂತ ಕ್ಷಿಷ್ಟಕರವಾದ ಹಾಗೂ ಸಮಗ್ರ ಅಧ್ಯಯನವನ್ನು ಬೇಡುವಂತಹ ಪ್ರಶ್ನೆ. ನಾವು ಏನೇ ಮಾತನಾಡಿದರೂ ಅದರೂ ಅತಿ ಸೂಕ್ಷ್ಮ ಸಂಗತಿಯೊಂದರ ಸುಲಭದ ಸರಳೀಕರಣವಾಗಿಬಿಡುವ ಅಪಾಯವಿರುವುದರಿಂದ ನೇರವಾದ ನಿಲುವುಗಳಿಗೆ ಬಂದು ನಿಲ್ಲುವುದು ಸೂಕ್ತವಾಗದು. ಪ್ರಗತಿಪರರು, ಚಿಂತಕರು, ಯುವಕರ ನಾಡಿಮಿಡಿತ ಅರಿಯಬಲ್ಲತಜ್ಞರು ಕೂಡಿ ವಿಚಾರ ಸಂಕೀರ್ಣವೊಂದನ್ನು ಏರ್ಪಡಿಸಿ ಈ ಬಗ್ಗೆ ಕೂಲಂಕುಶವಾದ ಚರ್ಚೆಯನ್ನು ನಡೆಸಿ ವರದಿಯನ್ನು ತಯಾರಿಸಬೇಕು. ಅನಂತರವಷ್ಟೇ ಯುವಕರು ರಾಜಕೀಯಕ್ಕೆ ಧುಮುಕಬಹುದೇ ಇಲ್ಲವೇ ಎಂಬುದನ್ನು ಇದಮಿತ್ಥಂ ಎಂದು ಹೇಳಬಹುದು.

ಶ್ರೀಯುತ ಮಲ್ಲರೆಡ್ಡಿ, ಹಿರಿಯ ಮುತ್ಸದ್ಧಿ, ರಾಜಕಾರಣಿ: ಒಬಾಮನ ಉದಾಹರಣೆಯನ್ನು ನಮ್ಮ ಯುವಕರು ಸ್ಪೂರ್ತಿಯಾಗಿ ಭಾವಿಸಬಾರದು. ಇದರಲ್ಲಿ ಅನೇಕ ಸೂಕ್ಷ್ಮಗಳಿರುವುದು ಅವರಿಗೆ ತಿಳಿಯುವುದಿಲ್ಲ. ಮೊದಲನೆಯದಾಗಿ ನಮ್ಮ ಸಂವಿಧಾನದ ಪ್ರಕಾರ ಒಬ್ಬ ಸಂಸತ್ ಸದಸ್ಯನಾಗುವುದಕ್ಕೆ ಈ ಅರ್ಹತೆಗಳು ಬೇಕು
೧. ೨೫ ಅಥವಾ ೨೫ ವರ್ಷಕ್ಕೆ ಮೇಲ್ಪಟ್ಟವನಾಗಿರಬೇಕು.
೨. ಬುದ್ಧಿ ಸ್ಥಿಮಿತದಲ್ಲಿರಬೇಕು
೩. ದಿವಾಳಿಯಾಗಿರಬಾರದು
೪. ಆತನ ಮೇಲೆ ಯಾವ ಕ್ರಿಮಿನಲ್ ಮೊಕದ್ದಮೆಗಳಿರಬಾರದು
ಆದರೆ ನಮ್ಮ ದೇಶದಲ್ಲಿ ಈ ಅರ್ಹತೆಗಳಿಗೆ ಯಾವ ಬೆಲೆಯನ್ನೂ ಕೊಡಲಾಗುತ್ತಿಲ್ಲ ಎಂಬುದು ತೀರಾ ದುಃಖದ ಸಂಗತಿ. ಕಡೆಯ ಮೂರು ಅರ್ಹತೆಗಳಿಲ್ಲದವರೂ ಸಹ ಈಗ ಎಂಪಿಗಳಾಗಿದ್ದಾರೆ. ನೂರಾರು ಕ್ರಿಮಿನಲ್ ಮೊಕದ್ದಮೆಗಳಿದ್ದರೂ ಚುನಾವಣೆ ಹತ್ತಿರ ಬಂದಾಕ್ಷಣ ಗಂಗೆಯಲ್ಲಿ ಮಿಂದೆದ್ದಾಗ ನಾಶವಾಗಿಬಿಡುವ ಪಾಪಗಳ ಹಾಗೆ ಅವೆಲ್ಲಾ ಕ್ಷಣ ಮಾತ್ರದಲ್ಲಿ ಅಳಿಸಿ ಹೋಗಿಬಿಡುತ್ತವೆ. ಸ್ವತಃ ಆ ಚಿತ್ರಗುಪ್ತನೇ ಬಂದರೂ ಅಭ್ಯರ್ಥಿಯ ಕ್ರಿಮಿನಲ್ ಹಿನ್ನೆಲೆ ಸಾಬೀತು ಮಾಡಲು ನಯಾ ಪೈಸೆ ಸಾಕ್ಷಿಯೂ ಸಿಕ್ಕುವುದಿಲ್ಲ. ಮೂರನೆಯ ಅರ್ಹತೆಯನ್ನು ನಮ್ಮ ದೇಶದ ರಾಜಕಾರಣಿಗಳು ಉಲ್ಟಾ ಅರ್ಥ ಮಾಡಿಕೊಂಡಿದ್ದಾರೆ. ಆರ್ಥಿಕವಾಗಿ ದಿವಾಳಿಯಾಗಿರುವವನಿಗೆ ಎಂಪಿಯಾಗುವ ಅರ್ಹತೆಯಿಲ್ಲ ಎನ್ನುವುದನ್ನು ತಪ್ಪಾಗಿ ಅರ್ಥೈಸಿಕೊಂಡು ಅಧಿಕಾರಕ್ಕೆ ಬಂದೊಡನೆ ತಮ್ಮ ದಾರಿದ್ರ್ಯ, ಹಣಕಾಸಿನ ಮುಗ್ಗಟ್ಟನ್ನೆಲ್ಲಾ ನಿವಾರಿಸಿಕೊಂಡು ದೇಶವನ್ನು ದಿವಾಳಿ ಮಾಡಬೇಕು ಎಂದು ಅವರು ಭಾವಿಸಿದ್ದಾರೆ. ಎರಡನೆಯ ಅರ್ಹತೆಯಂತೂ ಬಹುಪಾಲು ಮಂದಿಗೆ ಇರುವುದೇ ಇಲ್ಲ. ದಿನ ನಿತ್ಯ ಪತ್ರಿಕೆಗಳಲ್ಲಿ ಮುಖ್ಯ ಮಂತ್ರಿ ವಿರೋಶ ಪಕ್ಷದವರಿಗೆ ತಲೆ ಕೆಟ್ಟಿದೆ ಎನ್ನುತ್ತಾರೆ. ಮರುದಿನ ವಿರೋಧ ಪಕ್ಷದವರು ಆಡಳಿತ ಪಕ್ಷದವರಿಗೇ ತಲೆಯೇ ಇಲ್ಲ ಇನ್ನು ಕೆಡುವುದೆಂತು (head less chicken ಪ್ರಕರಣವನ್ನು ನೆನೆಸಿಕೊಳ್ಳಬಹುದು) ಎನ್ನುತ್ತಾರೆ.
ಹೀಗೆ ಮೂರು ಅರ್ಹತೆಗಳಿಗೆ ಯಾವ ಬೆಲೆಯೂ ಇರದಿರುವಾಗ ಕನಿಷ್ಠ ಪಕ್ಷ ನಾವು ಒಂದು ಅರ್ಹತೆಗಾದರೂ ಬೆಲೆ ಕೊಡಬೇಕು. ಈ ಮೂರು ಅರ್ಹತೆಗಳಲ್ಲಿ ಲ್ಯಾಪ್ಸ್ ಆದ ಬೆಲೆಯನ್ನೂ ಸೇರಿಸಿ ಮೊದಲನೆಯ ಅರ್ಹತೆಯನ್ನು ರೂಪಿಸಬೇಕು. ಅಂದರೆ ೨೫ ವರ್ಷದ ಅರ್ಹತೆಯ ಮಿತಿಯನ್ನು ತಿರುವುಮುರುವು ಮಾಡಿ ೫೨ ಎಂದು ಮಾಡಿಕೊಂಡು ಪಾಲಿಸಬೇಕು.

ಅಲ್ಲದೇ‘ರಾಜಕೀಯ ಅಯೋಗ್ಯನ ಕಡೆಯ ಆಶ್ರಯ ತಾಣ’ ಎಂಬ ಮಾತಿದೆ. ಹೀಗಾಗಿ ಯುವಕರು ರಾಜಕೀಯಕ್ಕೆ ಬರುವ ಮೊದಲು ತಾವು ಬೇರಾವುದೇ ಕ್ಷೇತ್ರದಲ್ಲಿ ನ್ಯಾಯ, ನೀತಿಗೆ ಅನುಗುಣವಾಗಿ ಕೆಲಸ ಮಾಡಿ ಬದುಕಲು ಸಾಧ್ಯವಿಲ್ಲ ಎಂಬುದನ್ನು ಸಾಬೀತು ಪಡಿಸಬೇಕು. ಇದು ಸರಳವಾದ ಕೆಲಸವಲ್ಲ. ಇದಕ್ಕೆ ಜೀವನದ ಬಹುಪಾಲು ಸಮಯವನ್ನು ಮೀಸಲಿಡಬೇಕು. ಹೀಗೆ ಒಮ್ಮೆ ಅಯೋಗ್ಯನೆಂಬ ಪದವಿಯನ್ನು ಪಡೆದುಕೊಂಡರೆ ಅನಂತರ ದೇಶ ಸೇವೆ ಮಾಡುವ ಅರ್ಹತೆ ದೊರೆಯುತ್ತದೆ.

ಇವನ್ನೆಲ್ಲಾ ನಮ್ಮ ಯುವಕರು ಅರ್ಥ ಮಾಡಿಕೊಳ್ಳಬೇಕು. ಅಲ್ಲದೆ ಕಣ್ಣು ಸರಿಯಾಗಿ ಕಾಣುವ, ಕಿವಿ ಚೆನ್ನಾಗಿ ಕೇಳುವ, ಬುದ್ಧಿ ಚುರುಕಾಗಿರುವ, ಮೈ ಕೈ ಗಟ್ಟಿ ಮುಟ್ಟಾಗಿರುವ ಸಮಯದಲ್ಲಿ ರಾಜಕೀಯದ ಉಸಾಬರಿ ಅವರಿಗೇಕೆ? ಇದರಿಂದ ಅವರಿಗೂ ಲಾಭವಿಲ್ಲ ರಾಜಕೀಯಕ್ಕೂ ಲಾಭವಿಲ್ಲ. ಏಕೆಂದರೆ ಈ ಯುವಕರಿಗೆ ಮೈತುಂಬ ಆದರ್ಶಗಳು. ಬೆಂಗಳೂರಿನ ಯಾವೊಬ್ಬ ಯುವಕನನ್ನು ಕರೆದು ಶರ್ಟು ಬಿಚ್ಚಿ ನೋಡಿದರೆ ಕಾಣುವುದು ಎರಡೇ ಸಂಗತಿಗಳು. ಒಂದು ಚಿತ್ರ ವಿಚಿತ್ರವಾದ ಹಚ್ಚೆ ಇಲ್ಲವೇ ಅವಕ್ಕಿಂತಲೂ ವಿಚಿತ್ರವಾದ ಆದರ್ಶಗಳು. ಆದರ್ಶವಂತರು ಕೆಲಸ ಮಾಡುತ್ತಾರೆಯೇ ಹೊರತು ರಾಜಕೀಯ ಮಾಡುವುದಿಲ್ಲ. ಒಮ್ಮೆ ಇಂಥ ಆದರ್ಶವಾದಿಗಳು ಅಧಿಕಾರಕ್ಕೆ ಬಂದು ಐದು ವರ್ಷಗಳನ್ನು ರಾಜಕೀಯ ಮಾಡುವುದರಲ್ಲಿ ಕಳೆಯದೆ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿಬಿಟ್ಟರೆ, ಗರೀಬಿ ಹಠಾಯಿಸಿಬಿಟ್ಟರೆ, ಎಲ್ಲರಿಗೂ ಮೂಲಭೂತ ಆವಶ್ಯಕತೆ ಕೊಟ್ಟು ಬಿಟ್ಟರೆ, ದುಡಿಮೆಗೆ ತಕ್ಕಂತಹ ಪ್ರತಿಫಲ ಬರುವಂತಹ ವ್ಯವಸ್ಥೆಯನ್ನು ರೂಪಿಸಿಬಿಟ್ಟರೆ, ಭ್ರಷ್ಠಾಚಾರವನ್ನು ಕಿತ್ತೊಗೆದುಬಿಟ್ಟರೆ ಅನಂತರ ಅಧಿಕಾರಕ್ಕೆ ಬರುವ ಸರ್ಕಾರಗಳಿಗೆ ಮಾಡಲು ಕೆಲಸವೇ ಇರುವುದಿಲ್ಲ. ಇದರಿಂದ ಪ್ರಜಾಪ್ರಭುತ್ವವೇ ಅಂತ್ಯವಾಗಿಬಿಡುತ್ತದೆ. ಹೀಗಾಗಿ ಯುವಕರು ಎಂದೆಂದಿಗೂ ರಾಜಕೀಯದ ಕಡೆಗೆ ತಲೆ ಹಾಕಿಯೂ ಮಲಗಬಾರದು.

ಬುದ್ಧಿ ಜೀವಿಯಾಗುವುದು ಹೇಗೆ?

6 ನವೆಂ

(ನಗೆ ನಗಾರಿ ಅತಿ ಆಧ್ಯಾತ್ಮ ಬ್ಯೂರೋ)


ಸರ್ವ ಭಾಷಗೆಳನ್ನು, ಭಾರತದ ಸಕಲ ಸಂಸ್ಕೃತಿಯನ್ನು, ಭಾರತೀಯರ ಎಲ್ಲಾ ದೇವರುಗಳನ್ನು ಗೌರವದಿಂದ ಕಾಣುವ ಹಾಗೂ ಸ್ವಲ್ಪವೂ ದುರಭಿಮಾನವನ್ನು ತೋರ್ಪಡಿಸದ ತಮಿಳು ನಾಡೆಂಬ ಭೂಲೋಕದ ಸ್ವರ್ಗದ ರಾಜಧಾನಿಯಲ್ಲಿ  ಕರುಣಾಜನಕ ವಿಧಿಯವರು ಬುದ್ಧಿಜೀವಿಯಾಗುವುದು ಹೇಗೆ?’ ಎಂಬ ಕಾರ್ಯಾಗಾರವನ್ನು ಯಶಸ್ವಿಯಾಗಿ  ನಡೆಸಿಕೊಟ್ಟಿದ್ದಾರೆ. ಈ ಕಾರ್ಯಾಗಾರದಲ್ಲಿ ಸಾಮಾನ್ಯರಲ್ಲಿ ಅತೀ ಸಾಮಾಯರಾದವರು ಕೂಡ ಹೇಗೆ ಕೆಲವೇ ಕೆಲವು ಪರಿಣಾಮಕಾರಿ ಹಾಗೂ ಸತ್ವಯುತ ಉಪಾಯಗಳನ್ನು ಬಳಸುವ ಮೂಲಕ ಖ್ಯಾತಿವೆತ್ತ ಬುದ್ಧಿಜೀವಿಯಾಗಿ ನಾಡಿನ ಎಲ್ಲಾ ಪತ್ರಿಕೆಗಳ ಮುಖಪುಟಗಳಲ್ಲಿ, ಟಿವಿ ಚಾನೆಲ್ಲುಗಳಲ್ಲಿ ಮಿಂಚಬಹುದು ಎಂಬುದನ್ನು ಬೋಧಿಸಿದ್ದಾರೆ.


img1081105066_1_1

ಬುದ್ಧಿಜೀವಿಯಾಗಲು ಕೆಲವೇ ಮೆಟ್ಟಿಲು ಎಂದು ತಮ್ಮ ಉಪನ್ಯಾಸವನ್ನು ಪ್ರಾರಂಭಿಸಿದ ಕರುಣಾಜನಕ ವಿಧಿಯವರು ಮೊದಲ ಮೆಟ್ಟಿಲಿನ ಬಗ್ಗೆ ಹೇಳಿದ್ದು ಹೀಗೆ: ತಣ್ಣಗಿರುವ ಕೊಳದ ಪಕ್ಕದಲ್ಲಿ ನೀವು ಸಾವಿರ ವರ್ಷ ತಪಸ್ಸು ಮಾಡುತ್ತಾ ಕುಳಿತರೂ ಪ್ರಪಂಚದ ಗಮನವನ್ನು ಸೆಳೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಆದರೆ ಪ್ರಶಾಂತವಾದ ಕೊಳಕ್ಕೆ ಒಂದೇ ಒಂದು ಕಲ್ಲು ಬೀರಿ ನೋಡಿಅಲೆಗಳ ಮೇಲೆ ಅಲೆಗಳು ಎದ್ದು ಪ್ರಪಂಚದ ಗಮನವೆಲ್ಲಾ ನಿಮ್ಮೆಡೆಗೆ ತಿರುಗುತ್ತದೆ. ಆದರೆ ಇಲ್ಲಿ ಒಂದು ಎಚ್ಚರಿಕೆಯ ಮಾತನ್ನು ಗಮನಿಸಬೇಕಾದ್ದು ಆವಶ್ಯಕ. ಹೀಗೆ ಶಾಂತ ಸರೋವರಕ್ಕೆ ಇಲ್ಲವೇ ತೃಪ್ತ ಹೆಜ್ಜೇನಿನ ಗೂಡಿಗೆ ಕಲ್ಲು ಬೀರುವಾಗ ನೀವು ಬುದ್ಧಿವಂತಿಕೆಯನ್ನು ಉಪಯೋಗಿಸಬೇಕು. ಕಚ್ಚಲಾಗದ, ಬೊಗಳಲಾಗದ ನಾಯಿಯನ್ನು ನಿಮ್ಮ ಪರಾಕ್ರಮ ತೋರಲು ಆಯ್ದುಕೊಳ್ಳುವ ಚಾಕಚಕ್ಯತೆಯನ್ನು ಅನುಭವದಿಂದ ಮಾತ್ರ ಸಿದ್ಧಿಸಿಕೊಳ್ಳಲು ಸಾಧ್ಯ.’

ಮೊದಲ ಸೂತ್ರವನ್ನು ಮತ್ತಷ್ಟು ವಿವರವಾಗಿ ಅರ್ಥೈಸುತ್ತಾ, ತಾವು ಬರೆದ ಇತ್ತೀಚಿನ ಕವನವೊಂದನ್ನು ಉದಾಹರಿಸಿದರು.ನನ್ನ ಇತ್ತೀಚಿನ ಕವನವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿಹಿಂದೂಗಳು ತಿಲಕ, ವಿಭೂತಿಯನ್ನು ಹಣೆಯಲ್ಲಿ ಧರಿಸುವುದು ತಪ್ಪು ಎಂದು ಉಗ್ರವಾಗಿ ವಾದಿಸಿದ್ದೇನೆ. ಸಮಾನತೆಯ ಆಶಯದಲ್ಲಿ ಹುಟ್ಟಿಕೊಂಡಿರುವ ದೇಶದಲ್ಲಿ ಹೀಗೆ ತಿಲಕ ಹಚ್ಚಿಕೊಂಡು ತಿರುಗುವುದು ಅಸಮಾನತೆಯನ್ನು ಉಂಟು ಮಾಡುತ್ತದೆ ಎಂದು ಕಾವ್ಯಾತ್ಮಕವಾಗಿ ಪ್ರಚುರಪಡಿಸಿದ್ದೇನೆ. ಬ್ರಾಹ್ಮಣರು ಜನಿವಾರವನ್ನು ಹಾಕಿಕೊಳ್ಳುವುದು ಏತಕ್ಕೆ, ಅದರಿಂದ ಏನೂ ಪ್ರಯೋಜನವಿಲ್ಲ ಎಂದು ವಿದ್ವತ್ ಪೂರ್ಣವಾಗಿ ಪ್ರಶ್ನೆ ಹಾಕಿರುವೆ. ಹೀಗೆ ಸುಮ್ಮನಿದ್ದ ಕೊಳಕ್ಕೆ ಕಲ್ಲನ್ನು ಎಸೆಯಬೇಕು. ಹಿಂದೂಗಳೆಂಬುವವರೆಲ್ಲಾ ಕಣ್ಣು ಕೆಂಪಗೆ ಮಾಡಿಕೊಂಡು ನಿಮ್ಮತ್ತ ನೋಡುತ್ತಾರೆ. ಮಾಧ್ಯಮಗಳು ಉಳಿದೆಲ್ಲಾ ಮುಖ್ಯ ಕೆಲಸ ಬಿಟ್ಟು ಈಗ ನನ್ನ ಮುಂದೆ ಹಲ್ಕಿರಿದು ಕ್ಯಾಮರಾ ತೆಗೆದು ನಿಂತಿಲ್ಲವೇ ಹಾಗೆ ನಿಮ್ಮೆದುರು ಬರುತ್ತಾರೆ.


ಅದರ ಜೊತೆಗೇ ನಾನು ಪಾಲಿಸಿರುವ ಎಚ್ಚರಿಕೆಯನ್ನೂ ಸಹ ನೀವು ಪಾಲಿಸಬೇಕು. ಕಚ್ಚದ, ಬೊಗಳದ ನಾಯಿಗೆ ಕಲ್ಲೆಸುವ ಎಚ್ಚರಿಕೆಯನ್ನು ಮರೆಯಬಾರದು. ಉದಾಹರಣೆಗೆ, ನಾನು ಮುಸ್ಲೀಮರು ತಲೆಗೆ ಟೊಪ್ಪಿ ಧರಿಸುವುದು, ಹೆಂಗಸರು ಬುರ್ಕಾ ಧರಿಸುವುದು ಯಾಕೆ ಎಂದೋ, ಸಮಾನತೆಯಿರುವ ನಾಡಿನಲ್ಲಿ ಕ್ರಿಸ್ತರು ಶಿಲುಬೆಯ ಚೈನನ್ನು ಕೊರಳಿಗೆ ಹಾಕಿಕೊಳ್ಳುವುದು ಏಕೆ, ಬಿಳಿಯ ಬಟ್ಟೆಯನ್ನೇ ಹೆಚ್ಚಾಗಿ ಧರಿಸುವುದು ಏಕೆ ಎಂದೇನಾದರೂ ಪ್ರಶ್ನಿಸಿ ಕವನ ಬರೆದಿದ್ದರೆ ಟಿವಿ ಚಾನಲ್ಲುಗಳಿಗೆ, ಪತ್ರಿಕೆಗಳಿಗೆ ನನ್ನ ಸಂದರ್ಶನ ಮಾಡುವುದಕ್ಕೆ ಅವಕಾಶವಾಗುತ್ತಿರಲಿಲ್ಲ. ಬದಲಾಗಿ ನನ್ನ ಅಂತ್ಯಸಂಸ್ಕಾರದ ಲೈವ್ ಕವರೇಜ್ ಮಾಡುವ ಅವಕಾಶ ಸಿಕ್ಕುತ್ತಿತ್ತು ಅಷ್ಟೇ. ಆ ಅಪಾಯವನ್ನು ಮನಗಂಡೇ ನಾನು ಹಿಂದೂಗಳ ಬಗ್ಗೆ ಕವನ ಬರೆದದ್ದು.


ಹಿಂದೆಯೂ ನಾನು ಶ್ರೀರಾಮನ ಬಗ್ಗೆ ಕ್ರಾಂತಿಕಾರಿಯಾದ ಸಂಗತಿಗಳನ್ನು ಬಯಲಿಗೆಳೆದು ಪ್ರಸಿದ್ಧನಾದದ್ದರ ಬಗ್ಗೆ ನಿಮಗೆ ತಿಳಿದಿರಬಹುದು. ಈಗ ನೋಡಿ ನಮ್ಮ ದೇಶವೊಂದರಲ್ಲಿ ಅಷ್ಟೇ ಅಲ್ಲ ಇಡೀ ಜಗತ್ತಿನಲ್ಲಿನ ಮಾಧ್ಯಮ ಮಿತ್ರರು ನನ್ನನ್ನು ಬುದ್ಧಿಜೀವಿ ರಾಜಕಾರಣಿ ಎಂದೇ ಪರಿಗಣಿಸುತ್ತಾರೆ. ಈ ಸೂತ್ರವನ್ನು ಪರಿಣಾಮಕಾರಿಯಾಗಿ ಬಳಸಿದರೆ ಒಂದೇ ದಿನದಲ್ಲಿ ನೀವೂ ಜಗದ್ವಿಖ್ಯಾತರಾಗಬಹುದು.’


ಬಹು ಯಶಸ್ವಿಯಾಗಿ ಜರುಗಿದ ಕಾರ್ಯಾಗಾರದಲ್ಲಿ ಕರುಣಾ ಜನಕ ವಿಧಿಯವರು ಇನ್ನೂ ಅನೇಕ ಶಕ್ತಿಶಾಲಿ ಯಶಸ್ವಿ ಸೂತ್ರಗಳನ್ನು ಹೇಳಿಕೊಟ್ಟರು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಮೂರು ಮುಕ್ಕಾಲು ಮಂದಿ ತಮ್ಮ ಭವಿಷ್ಯ ಭದ್ರವಾಯಿತೆಂಬ ನೆಮ್ಮದಿಯಿಂದ ಮನೆಗೆ ತೆರಳಿದರು.