Tag Archives: ಬುದ್ಧಿಜೀವಿಗಳು

ವಾರದ ವಿವೇಕ 44

18 ಸೆಪ್ಟೆಂ

…………………………………………………………………

ಪ್ರಗತಿಪರರು ತಲೆಮಾರಿನ ಹಿಂದೆ

ಯಾವುದಕ್ಕಾಗಿ ಹೋರಾಡಿದ್ದರೋ ಅದನ್ನು

ಉಳಿಸಿಕೊಳ್ಳಬೇಕೆಂದು ಇಂದು ಹೋರಾಡುವವನು

ಸಂಪ್ರದಾಯವಾದಿ!

…………………………………………………………………

ಬುದ್ಧಿಜೀವಿಗಳಿದ್ದಾರೆ ಎಚ್ಚರ!

8 ಸೆಪ್ಟೆಂ

(ನಗೆ ನಗಾರಿ ಅಲರ್ಟ್)

ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕರು, ಸಮಾಜ ಘಾತುಕರು, ಕಳ್ಳರು, ಖದೀಮರು, ಭ್ರಷ್ಟರು ಹಾಗೂ ರಾಜಕಾರಣಿಗಳ ಬಗ್ಗೆ ಎಚ್ಚರಿಕೆಯನ್ನು, ಮುನ್ನೆಚ್ಚರಿಕೆಯನ್ನೂ ತಮ್ಮ ಅನಿಯಮಿತವಾದ ಜಾಹೀರಾತುಗಳ ಮಧ್ಯದಲ್ಲಿ ಪ್ರಸಾರ ಮಾಡಿ ಮಾಡಿ ದಣಿಯುತ್ತಿವೆ ಮಾಧ್ಯಮಗಳು. ಈ ಮೂಲಕ ದೇಶದ ಜನರ ಬಗೆಗೆ, ಅವರ ಒಳಿತಿನ, ಕ್ಷೇಮದ ಬಗೆಗೆ ಇರುವ ಕಾಳಜಿಯನ್ನು ವ್ಯಕ್ತಪಡಿಸುತ್ತಿವೆ. ಕೆಲವು ಮಾಧ್ಯಮಗಳು ಜನರ ಕ್ಷೇಮದ ಜೊತೆಗೆ ತಮ್ಮ ಟಿಆರ್‌ಪಿಯ ಕ್ಷೇಮವನ್ನೂ ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಆದರೆ ಜನತೆಯ ಬಗ್ಗೆ, ದೇಶದ ಜನ ಸಾಮಾನ್ಯರ ಬಗ್ಗೆ ನೈಜ ಕಾಳಜಿಯುಳ್ಳ ಮಾಧ್ಯಮ ಮಾಡಬೇಕಾದ ಕೆಲಸವೊಂದನ್ನು ಮಾಡದೆ ಮೌನಕ್ಕೆ ಶರಣಾಗಿರುವುದನ್ನು ನಮ್ಮ ಸಂಪಾದಕರು ಪತ್ತೆ ಹಚ್ಚಿದ್ದಾರೆ. ಸಮಾಜದ ಬಗೆಗಿನ ಕಾಳಜಿಯನ್ನು ಕ್ಷಣ ಕ್ಷಣಕ್ಕೂ ಜನತೆಯೆದುರು ಬಿಚ್ಚಿಟ್ಟು ಆಮೂಲಕ ಜನತೆಯ ಮನದಾಳದಲ್ಲಿ ವಿಶ್ವಾಸವನ್ನು ಸಂಪಾದಿಸಿಕೊಂಡಿರುವ ನಮ್ಮ ಸಂಪಾದಕರು ಜನತೆ ಸದಾ ಎಚ್ಚರದಿಂದ ಇರಬೇಕಾದ ಸಂಗತಿಯ ಬಗ್ಗೆ ಯಾರೂ ಗಮನ ಹರಿಸದಿರುವುದನ್ನು ಗಂಭೀರವಾಗಿ ಪರಿಗಣಿಸುತ್ತಾ ಅದಕ್ಕಿಂತ ಹೆಚ್ಚಿನ ಗಾಂಭೀರ್ಯದಲ್ಲಿ ಈ ಎಚ್ಚರಿಕೆಯನ್ನು ನೀಡುತ್ತಿದೆ.

ನಮ್ಮ ದೇಶದಲ್ಲಿ ಒಂದು ಬಗೆಯ ಆತಂಕವಾದಿ ಮನುಷ್ಯರು ಹುಟ್ಟುತ್ತಿದ್ದಾರೆ. ಇವರನ್ನು ‘ಬುದ್ಧಿ ಜೀವಿ’ ಎನ್ನಲಾಗುತ್ತದೆ.ತಮ್ಮ ಬುದ್ಧಿವಂತಿಯಲ್ಲೇ ತಮ್ಮ ಜೀವವಿದೆ ಎಂಬಂತೆ ವರ್ತಿಸುವುದು ಇವರ ಪ್ರಾಥಮಿಕ ಲಕ್ಷಣ. ಕೆಲವೊಮ್ಮೆ ಇದು ಅತಿರೇಕಕ್ಕೆ ಹೋಗಿ (ಕೆಲವು ಹುಣ್ಣಿಮೆ, ಅಮವಾಸ್ಯೆಯ ಸಮಯದಲ್ಲಿ) ತಮ್ಮ ಬುದ್ಧಿಯಲ್ಲೇ ಇಡೀ ಸಮಾಜದ ಜನಸಾಮಾನ್ಯರ ಜೀವ ಇದೆ ಎಂದು ವರ್ತಿಸಲು ಶುರುಮಾಡುತ್ತಾರೆ. ಇವರು ದೇಶದ ಯಾವ ಮೂಲೆಯಲ್ಲಾದರೂ ಇರಬಹುದು. ಹುದುಗಿಕೊಳ್ಳುವುದು, ಅಡಗಿಕೊಳ್ಳುವುದು, ಬಚ್ಚಿಟ್ಟುಕೊಳ್ಳುವುದು ಇವೆಲ್ಲಾ ಇವರಿಗೆ ಆಗಬರದ ಸಂಗತಿಗಳು. ಇವರು ಸದಾ ಎಲ್ಲರ ಕಣ್ಣೆದುರೇ ಓಡಾಡಿಕೊಂಡಿರಲು ಬಯಸುತ್ತಾರೆ. ಜನರ ಕಣ್ಣೆದುರು ಅಲ್ಲದಿದ್ದರೂ ಕೆಮಾರದ ಕಣ್ಣೆದುರು ಓಡಾಡಲು ಪ್ರಾಶಸ್ತ್ಯ ನೀಡುತ್ತಾರೆ. ಇವರು ತತ್ವ, ಸಿದ್ಧಾಂತ, ಮೂಲಭೂತ ನಂಬಿಕೆಗಳು, ಇವರ ಕಾರ್ಯಕ್ಷೇತ್ರ, ಕಾರ್ಯಾಚರಣೆಯ ವೈಖರಿ, ಇವರಿಂದ ಜನಸಾಮಾನ್ಯರಿಗೆ ಉಂಟಾಗುವ ಅಪಾಯಗಳು, ಇವರನ್ನು ನಿಭಾಯಿಸಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಮುಂತಾದವುಗಳ ಬಗ್ಗೆ ನಮ್ಮ ಅಧಿಕೃತ ಹಾಗೂ ಅನಧಿಕೃತ ಸುದ್ದಿಮೂಲಗಳು ಮಾಹಿತಿ ಕಲೆಹಾಕುತ್ತಿವೆ. ಆದರೆ ತತ್ ಕ್ಷಣದಲ್ಲಿ ಈ ‘ಜೀವಿ’ಗಳ ಮುಖಚರ್ಯೆ ಹಾಗೂ ತೋರುವಿಕೆಯ ಬಗ್ಗೆ ಎಲ್ಲರೂ ತಿಳಿದಿರಲೇ ಬೇಕಾದ ಅಗತ್ಯವಿದೆ.

ಇಸ್ತ್ರಿ ಕಾಣದ ಕಾಟನ್ ಇಲ್ಲವೇ ಖಾದಿಯ ಮಂಡಿ ಮುಚ್ಚುವಷ್ಟು ಉದ್ದನೆಯ ಜುಬ್ಬ, ಜೀನ್ಸ್ ಪ್ಯಾಂಟು, ಹೆಗಲ ಮೇಲೊಂದು ಜೋಳಿಗೆಯಂಥ ಬ್ಯಾಗು ಇವು ಈ ಜೀವಿಗಳ ವೇಷ ಭೂಷಣ. ಇದನ್ನು ನೆನಪಿಟ್ಟುಕೊಂಡರೆ ನೀವು ಒಂದು ಮೈಲು ದೂರದಿಂದಲೇ ಇವರನ್ನು ಗುರುತು ಹಿಡಿದು ರಸ್ತೆ ಬದಲಾಯಿಸಿ ತಪ್ಪಿಸಿಕೊಳ್ಳಬಹುದು.ಆದರೆ ಈಗ ತಪ್ಪಿಸಿಕೊಳ್ಳುವ ಅಗತ್ಯವಿಲ್ಲ, ಸ್ವಲ್ಪ ಸಮೀಪ ಹೋಗಿ.

ಇನ್ನು ಸ್ವಲ್ಪ ಹತ್ತಿರಕ್ಕೆ ಬನ್ನಿ, ಹ್ಹ! ಮುಖ ಕಾಣುವಷ್ಟು ಹತ್ತಿರವಾದರೆ ಸಾಕು. ಈಗಲೇ ತುಂಬಾ ಹತ್ತಿರ ಹೋಗಿಬಿಡಬೇಡಿ. ಕೆದರಿದ ಕೂದಲು, ಕೆಲವೊಮ್ಮೆ ಕತ್ತಿನ ಹಿಂಭಾಗವನ್ನು ತುಂಬಿಸುತ್ತಾ ಬೆನ್ನ ಮೇಲೆ ಹರಿಯುವಷ್ಟು ಉದ್ದನೆಯ ಕೂದಲು, ತುಂಬಾ ಸೀನಿಯರ್ ‘ಜೀವಿ’ಯಾದರೆ ಆ ಅಲ್ಲಿ ಕೂದಲಿನ್ನು ಹುಡುಕಲು ಹೋಗಬೇಡಿ, ಆ ಬಯಲು ಪ್ರದೇಶದ ಮೇಲಿಂದ ಕಣ್ಣನ್ನು ಜಾರಿಸಿ ಮುಖಕ್ಕೆ ತನ್ನಿ! ಕುರುಚಲು, ಕುರುಚಲಾಗಿ ಪೊದೆಯಂತಹ ಗಡ್ಡ ಇದೇ ಅಲ್ಲವಾ, ಇದನ್ನು ಮೊದಲು ಕನ್ ಫರ್ಮ್ ಮಾಡಿಕೊಳ್ಳಿ. ಇದು ಬಹುಮುಖ್ಯವಾದ ಚರ್ಯೆ. ಕೆಲವು ಇನ್ ಸೈಡರ್ ಇನ್‌ಫಾರ್ಮೇಶನ್ ಪ್ರಕಾರ ಈ ‘ಜೀವಿ’ಗಳ ಗುಂಪಿನಲ್ಲಿ ಹೆಚ್ಚು ಹುಲುಸಾದ ಗಡ್ಡವಿರುವವರಿಗೆ ಪ್ರಾಮುಖ್ಯತೆ ಹೆಚ್ಚು ಎಂಬ ಅಲಿಖಿತ ನಿಯಮವಿದೆಯಂತೆ. ಈ ಬಗ್ಗೆ ಎಚ್ಚರವಹಿಸಿ. ಹ್ಹ! ಸರಿಯಾಗಿ ಊಹಿಸಿದಿರಿ, ಮೂಗಿನ ಮೇಲೆ ಆಗಲೋ ಈಗಲೋ ಜಾರಿ ಬೀಳುವಂತೆ ಒಂದು ಕನ್ನಡಕ ಕುಳಿತಿದೆಯಲ್ಲವೇ? ನಿಮ್ದೂ ಒಳ್ಳೇ ಅಬ್ಸರ್ವೇಶನ್ನು ಬಿಡಿ 🙂

ಹಾಗೆ ಸ್ವಲ್ಪ ಹತ್ತಿರಕ್ಕೆ ಬನ್ನಿ, ಆಗಲೇ ಕೆಮ್ಮಲು ಶುರು ಮಾಡಿಬಿಟ್ರಾ? ಹೌದು ಕಣ್ರೀ, ಈ ಬುದ್ಧಿ ಜೀವಿಗಳು ಸದಾ ಎಷ್ಟು equipped ಆಗಿರುತ್ತಾರೆ ಅಂತೀರಿ, ಅವರ ಕೈಲಿ ಸದಾ ಹರಿತವಾದ ಮೊನೆಯ ಲೇಖನಿ ಇದ್ದೇ ಇರುತ್ತದೆ. ಕೆಲವರು ಆಗಾಗ ತಮ್ಮ ಬಾಯೊಳಗಿನ ಹರಿತವಾದ ಉಪಕರಣದಿಂದ ಲೇಖನಿಯ ಹಿಂಭಾಗವನ್ನೂ ಸಹ ಹರಿತಗೊಳಿಸುತ್ತಿರುವುದು ಕಂಡು ಬರುತ್ತದೆ. ಗಾಬರಿಯಾಗಬೇಡಿ. ಕೈಯಲ್ಲಿ ಲೇಖನಿ ಇಲ್ಲದ ಸಂದರ್ಭದಲ್ಲಿ ಮತ್ತಷ್ಟು ಅಪಾಯಕಾರಿಯಾದ ಆಯುಧವಿರುತ್ತದೆ. ಅದರ ತುದಿ ನಿಗಿ ನಿಗಿ ಕೆಂಡದ ಹಾಗೆ ಕಂಗೊಳಿಸುತ್ತಿರುತ್ತದೆ. ಮತ್ತೊಂದು ತುದಿ ನೇರವಾಗಿ ಬುದ್ಧಿಜೀವಿಯ ಬಾಯೊಳಕ್ಕೆ ಚಾಚಿಕೊಂಡಿರುತ್ತದೆ. ಅಯ್ಯೋ, ಅರ್ಥವಾಗಿ ಹೋಯ್ತಾ? ಹೌದು ಕಣ್ರೀ ಅದು ಸಿಗರೇಟು! ಇದನ್ನು ಅಪಾಯಕಾರಿ ಅಂದದ್ದು ಅದು ನೀವು ಮಾರುದ್ದ ದೂರವಿದ್ದರೂ ನಿಮ್ಮನ್ನು ತನ್ನ ‘ಕಂಪಿ’ನಿಂದ ಕಂಗೆಡಿಸಿ ಒದ್ದಾಡಿಸುವುದರಿಂದ. ಆದರೆ ಮೊದಲನೆಯ ಉಪಕರಣದ ಪ್ರಭಾವ ಹಾಗೂ ಪರಿಣಾಮವನ್ನು ಗಮನಿಸಿದರೆ ಎರಡನೆಯದು ಅಷ್ಟೇನು ಅಪಾಯಕಾರಿ ಅಲ್ಲ ಎಂದೇ ಹೇಳಬಹುದು.

ನಮಗೆ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ನಮ್ಮ ಓದುಗರನ್ನು ಹಾಗೂ ಹಿತೈಷಿಗಳನ್ನು ಎಚ್ಚರಿಸುವ ಕೆಲಸವನ್ನು ಮಾಡಿದ್ದೇವೆ. ಮುಂದೆ ಎಂದಾದರೂ ಈ ಮುಖಚರ್ಯೆಯ ವ್ಯಕ್ತಿಗಳು ಕಂಡುಬಂದರೆ ಎಚ್ಚರದಿಂದಿರಿ. ಇವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿರುವ ನಗೆಸಾಮ್ರಾಟರು ಉಪಯುಕ್ತ ಮಾಹಿತಿ ಸಿಕ್ಕೊಡನೆ ನಗೆ ನಗಾರಿಯಲ್ಲಿ ಪ್ರಕಟಿಸುತ್ತಾರೆ. ಅಷ್ಟರಲ್ಲಿ ನಿಮಗೇನಾದರೂ ಹೆಚ್ಚಿನ ಮಾಹಿತಿ ಸಿಕ್ಕಲ್ಲಿ ದಯವಿಟ್ಟು ನಗೆ ನಗಾರಿಗೆ ತಿಳಿಸಿ..

ಪಕ್ಷಗಳನ್ನು ನಿಷೇಧಿಸಲು ಬುದ್ಧಿಜೀವಿಗಳ ಆಗ್ರಹ

12 ಜುಲೈ

(ನಗೆ ನಗಾರಿ ರಾಜಕೀಯ ಬ್ಯೂರೋ)

ಅಖಿಲ ಭಾರತ ಬುದ್ಧಿಜೀವಿಗಳ ಸಂಘಟನೆ ಶುಕ್ರವಾರದ ಸಮಾರಂಭದಲ್ಲಿ ಕಲೆತು ಪ್ರಸಕ್ತ ರಾಜಕೀಯ ಆಗುಹೋಗುಗಳನ್ನು ಚರ್ಚಿಸಿದರು. ತಮ್ಮ ಭೇಟಿಯ ಉದ್ದೇಶ ಹಾಗೂ ತಮ್ಮ ಆಗ್ರಹಗಳ ಬಗ್ಗೆ ಪ್ರಕಟಣೆ ಕೊಡಲು ಕರೆದ ಪತ್ರಿಕಾ ಗೋಷ್ಠಿಯಲ್ಲಿ ಒಬ್ಬ ಪತ್ರಕರ್ತನೂ ಇರದಿದ್ದನ್ನು ಕಂಡು ನಗೆ ಸಾಮ್ರಾಟರಿಗೆ ಬುಲಾವು ಕಳಿಸಿದರು. ಸುದ್ದಿ ಎಂದರೆ ಅರ್ಧ ರಾತ್ರಿಯ ನಿದ್ದೆಯನ್ನೂ, ತಟ್ಟೆಯಲ್ಲಿರುವ ಮುದ್ದೆಯನ್ನೂ ಬಿಟ್ಟು ಓಡುವ ಸಾಮ್ರಾಟರು ಪತ್ರಿಕಾಗೋಷ್ಟಿಗೆ ತೆರಳಿದರು.

‘ನಾವು ಬುದ್ಧಿ ಜೀವಿಗಳು ಸಾಮಾನ್ಯವಾಗಿ ಒಂದು ಕಡೆ ಕಲೆಯುವುದಿಲ್ಲ. ವಿಚಾರ ಮಂಟಪ, ಗೋಷ್ಠಿಗಳಲ್ಲೂ ಸಹ ನಾವು ಎಲ್ಲರೂ ಒಟ್ಟಾಗಿ ಸೇರುವುದಿಲ್ಲ. ನಾವೇನಿದ್ದರೂ ಹತ್ತಾರು ಗುಂಪುಗಳಲ್ಲಿದ್ದುಕೊಂಡೇ ಕಾರ್ಯ ನಿರ್ವಹಿಸುವುದು. ಇದನ್ನೇ ಕೆಲವರು ನಮಗಾಗದವರು ಗುಂಪುಗಾರಿಕೆ ಎಂದು ಕರೆದು ಸಂತೋಷ ಪಡುತ್ತಾರೆ. ನಾವು ಅವರ ಸಂತೋಷವನ್ನು ಹಾಳು ಮಾಡಬಾರದೆಂಬ ಕಾರಣಕ್ಕೆ ಹಾಗೇ ನಡೆದುಕೊಳ್ಳುತ್ತೇವೆ.

‘ಹಾ, ತೂಕಡಿಸಬೇಡಿ ಸಾಮ್ರಾಟರೇ, ವಿಷಯಕ್ಕೆ ಬರ್ತೇವೆ. ಕರ್ನಾಟಕದ ಪ್ರಸ್ತುತ ರಾಜಕೀಯ ಬೆಳವಣಿಗೆ, ಸ್ಥಿತ್ಯಂತರಗಳನ್ನು ಗಮನಿಸಿದರೆ ನಮಗೆ ತೀರಾ ಜುಗುಪ್ಸೆಯಾಗುತ್ತದೆ. ಇದು ಸರಿ ಅಲ್ಲ. ಗಣಿಯ ಧೂಳಿಗೆ ಎಲ್ಲರ ಮುಖವೂ ಕೆಂಪಾಗಿ ಕಾಣುತ್ತದೆ ಎಂದ ಮಾತ್ರಕ್ಕೆ, ಗಣಿಯ ನೋಟಿಗೂ ಎಲ್ಲರೂ ಹಾಗೇ ಕಾಣಬೇಕೆ? ಯಾವ ಪಕ್ಷವಾದರೇನು, ಯಾವ ಸಿದ್ಧಾಂತವಾದರೇನು ಗಣಿಯ ಥೈಲಿ ಅವರನ್ನು ‘ಮುಕ್ತ’ರನ್ನಾಗಿಸುತ್ತಿದೆ. ಎಲ್ಲಾ ಜಂಜಡಗಳನ್ನು ತಪ್ಪಿಸಿಕೊಂಡು ಹಾರಲು ಅವರಿಗೆ ಸ್ಫೂರ್ತಿಯನ್ನು ನೀಡುತ್ತಿದೆ. ಇದು ನಿಜಕ್ಕೂ ಆತಂಕಕಾರಿಯಾದ ಸಂಗತಿ ಎಂದು ನಮ್ಮ ಚರ್ಚೆಯಲ್ಲಿ ಒಕ್ಕೊರಲಿನಿಂದ ಮೊದಲ ಬಾರಿಗೆ ತೀರ್ಮಾನಿಸಲಾಯಿತು.

‘ಹೀಗಾಗಿ ನಾವು ಸಂವಿಧಾನದಲ್ಲಿ ಸೂಕ್ತವಾದ ತಿದ್ದುಪಡಿಯನ್ನು ತಂದು ದೇಶದ ಎಲ್ಲಾ ಪಕ್ಷಗಳನ್ನು ನಿಷೇಧಿಸಬೇಕು ಎಂದು ನಾವು ಈ ಮೂಲಕ ಆಗ್ರಹಿಸುತ್ತಿದ್ದೇವೆ. ನೂರಾರು ಹೆಸರಿನ ಪಕ್ಷಗಳ ಸಂಪ್ರದಾಯವನ್ನು ಅಂತ್ಯಗೊಳಿಸಬೇಕು. ಇದರಿಂದಾಗಿ ನೂರಾರು ಸಿದ್ಧಾಂತಗಳ ಕೊರೆತದಿಂದ ಜನರನ್ನು ದಾರಿ ತಪ್ಪಿಸುವುದು ತಪ್ಪುತ್ತದೆ. ಇನ್ನು ಮೇಲೆ ಎಲ್ಲಾ ಪಕ್ಷಗಳನ್ನು ನಿರ್ಮೂಲನೆ ಮಾಡಿ ಕೇವಲ ಎರಡು ಪಕ್ಷಗಳನ್ನು ಹುಟ್ಟಿ ಹಾಕ ಬೇಕು. ಒಂದು ದುಡ್ಡಿದ್ದವರ ಪಕ್ಷ. ಇನ್ನೊಂದು ದುಡ್ಡಿಲ್ಲದವರ ಪಕ್ಷ. ಆಗ ಎಲ್ಲಾ ಬಗೆಯ ಪಕ್ಷಾಂತರಗಳು ನಿಲ್ಲುತ್ತವೆ. ಬಡವರನ್ನು ಇನ್ನಷ್ಟು ಬಡವರನ್ನಾಗಿಯೂ, ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಯೂ ಮಾಡುವ ಅತ್ಯಂತ efficient ಆದ ಬಂಡವಾಳಶಾಹಿ ವ್ಯವಸ್ಥೆ ನಮಗೆ ವರವಾಗಿ ಕಾಣುತ್ತದೆ. ಇದು ಪಕ್ಷಾಂತರಕ್ಕೆ ಸಂಪೂರ್ಣವಾದ ತಡೆಯನ್ನು ಒಡ್ಡುತ್ತದೆ. ದುಡ್ಡಿಲ್ಲದವರ ಪಕ್ಷದಿಂದ ಒಬ್ಬೇ ಒಬ್ಬನು ಸಹ ದುಡ್ಡಿರುವ ಪಕ್ಷಕ್ಕೆ ಹಾರಲು ಇದು ಬಿಡುವುದಿಲ್ಲ. ಹಾಗೆಯೇ ದುಡ್ಡಿರುವವನ ಪಕ್ಷದವರು ದುಡ್ಡಿಲ್ಲದವರ ಪಕ್ಷಕ್ಕೆ ಪಕ್ಷಾಂತರ ಮಾಡಲು ಇದು ಸುತಾರಾಂ ಅನುಮತಿಸುವುದಿಲ್ಲ. ಇದರಿಂದ ಪಕ್ಷಾಂತರಗಳು ಇಲ್ಲುತ್ತವೆ. ನಿಮ್ಮಂಥ ಪತ್ರಕರ್ತರಿಗೆ ಯಾವ ಯಾವ ಸಚಿವರು ಯಾವ ಪಕ್ಷದಲ್ಲಿದ್ದಾರೆ, ಇಆದರು, ಇರುತ್ತಾರೆ ಎಂದು ಸಂಶೋಧನೆ ನಡೆಸುವ ಕಷ್ಟ ತಪ್ಪುತ್ತದೆ.

‘ ಈ ತಿದ್ದು ಪಡಿಯಿಂದ ಇನ್ನಷ್ಟು ಮಹತ್ತರವಾದ ಸಾಧನೆಗಳು ಸಾಧ್ಯವಾಗುತ್ತವೆ. ಏನು ಅಂದಿರಾ? ನಮ್ಮಲ್ಲಿ ಚುನಾವಣೆಗಳೇ ನಿಂತು ಹೋಗುತ್ತವೆ. ಪ್ರತಿ ಚುನಾವಣೆಯಲ್ಲೂ ಜನರೂ ಸಹ ದುಡ್ಡಿರುವ ಪಕ್ಷದ ಬೆಂಬಲಕ್ಕೆ ನಿಲ್ಲುತ್ತಾರೆ. ಆಗ ಕ್ರಮೇಣ ಚುನಾವಣೆ ನಡೆಸುವ ಕೆಲಸವೇ ಇಲ್ಲದಂತಾಗುತ್ತದೆ. ದುಡ್ಡಿರುವ ಪಕ್ಷವೇ ರಾಜನಾಗುತ್ತದೆ. ಅವರ ಮಕ್ಕಳೇ ಉತ್ತರಾಧಿಕಾರಿಗಳಾಗುತ್ತಾರೆ. ಜನರ ಮೇಲೆ ಚುನಾವಣಾ ವೆಚ್ಚವನ್ನು ಹೇರುವ ಸಂದರ್ಭವೂ ಬರುವುದಿಲ್ಲ. ಹೇಗಿದೆ ಸಾರ್ ನಮ್ಮ ಆಲೋಚನೆ?’

ಸಾಮ್ರಾಟರು ಅಲ್ಲಿಂದ ‘ಮಿಂಚಿನ ಓಟ’ಕ್ಕಿತ್ತಾಗಿತ್ತು!