Tag Archives: ಪ್ರೇಮಿಗಳ ದಿನ

ಸಂಪಾದಕೀಯ: ಶ್ರೀರಾಮ ಸೇನೆಗೆ ನಮ್ಮ ಬೇಷರತ್ ಬೆಂಬಲ

10 ಫೆಬ್ರ

ಪಬ್ ಎಂಬ ಮಾದಕತೆಯ, ಮೈಮರೆಯುವಿಕೆಯ ಅಡ್ಡೆಯಲ್ಲಿ ಅಪ್ಪ ಅಮ್ಮನ ದುಡ್ಡಿನ ನ್ಯಾಯಸಮ್ಮತ ಹಮ್ಮಿನಲ್ಲಿ ಕುಣಿದು ನಲಿದು, ಜಗತ್ತಿನ ಸಂಕಟ ಕಡಿಮೆ ಮಾಡುತ್ತಿದ್ದ ಅಮಾಯಕ ಹೆಣ್ಣು ಮಕ್ಕಳು ಹಾಗೂ ಗಂಡು ಹುಡುಗರ ಮೇಲೆ ಕೈ ಮಾಡಿ ಸಂಸ್ಕೃತಿಯ ರಕ್ಷಕರು ಎಂದು ವಯ್ಯಕ್ತಿಕ ಬಿರುದು ಪಡೆದು, ಕರ್ನಾಟಕದvalentines_day ತಾಲೀಬಾನಿಕರಣ ಎಂದು ತಮ್ಮ ಕೆಲಸಕ್ಕೆ ದೊಡ್ಡ ಹೆಸರಿನ ಮೊಹರನ್ನು ದೊಡ್ಡವರ ಒಡೆತನದ ದೊಡ್ಡ ಇಂಗ್ಲೀಷ್ ಟಿವಿ ಚಾನಲುಗಳಿಂದ ಪಡೆದು ಜಗತ್ಪ್ರಸಿದ್ಧರಾಗಿರುವ ಶ್ರೀರಾಮ ಸೇನಯ ಸೈನಿಕರು ಫೆಬ್ರವರಿ ಹದಿನಾಲ್ಕರಂದು ಆಚರಿಸುವ ವ್ಯಾಲಂಟೈನ್‌ನ ದಿನದಂದು ಹೊಸ ಪ್ರತಿಭಟನೆಯ ವರಸೆಯನ್ನು ಪ್ರಯೋಗಿಸಲು ಸನ್ನದ್ಧರಾಗಿದ್ದಾರೆ.

ವ್ಯಾಲಂಟೈನ್‌ನ ದಿನದಂದು ಅರಿಶಿಣದ ಕೊಂಬನ್ನು ಹೊತ್ತು ತಿರುಗಾಡುವ ಈ ಸೇನೆಯವರು, ಪ್ರೀತಿಯಲ್ಲಿ ಕಂಠ ಮಟ್ಟ ಮುಳುಗಿ ಉಸಿರಾಗಿ ಪರದಾಡುತ್ತಾ ಒದ್ದಾಡುತ್ತಿರುವವರನ್ನು ಮೇಲಕ್ಕೆತ್ತಿ ಮದುವೆ ಮಾಡಿಸಿ ಸಂಸಾರ ಸಾಗರದಲ್ಲಿ ಪೂರ್ಣವಾಗಿ ಮುಳುಗಿಸಲಿದ್ದಾರೆ. ಪ್ರೀತಿ ಅಂತ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಹುಡುಗ ಹುಡುಗಿಯ ಜೊತೆ ಅಲೆಯುವುದು ನಮ್ಮ ಸಂಸ್ಕೃತಿಯಲ್ಲ ಎಂದಿರುವ ಶ್ರೀರಾಮ ಸೇನೆಯವರ ಈ ಯೋಜನೆಯನ್ನು ನಾವು ಬೇಷರತ್ತಾಗಿ ಬೆಂಬಲಿಸುತ್ತೇವೆ. ಪ್ರಮೋದ್ ಮುತಾಲಿಕ್ ಮಾಡುತ್ತಿರುವುದು, ಆಲೋಚಿಸುತ್ತಿರುವುದು ಸರಿ ಎಂದು ಎದೆ ತಟ್ಟಿ ಹೇಳುತ್ತೇವೆ.

ಊಟವಾದ ಮೇಲೆ ಕೈತೊಳೆಯಲೇ ಬೇಕು, ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಹಾಗೆಯೇ ಪ್ರೀತಿಯನ್ನು ಮಾಡುವ ಧೈರ್ಯವನ್ನು ತೋರಿದವರು ಮದುವೆಯೆಂಬ ಸಿಂಹಸ್ವಪ್ನವನ್ನು ಎದುರಿಸಲೇ ಬೇಕು. ಓದು ಮುಗಿಸಿ ಅಲೆಯುವವರಿಗೆ ಕೆಲಸ ಕೊಡಿಸುವುದು, ಹಸಿದು ಬಾಲ ಕಡಿಯುತ್ತಿರುವ ನಾಯಿಗೆ ಕೊಳೆತ ಮಾಂಸದ ತುಂಡು ಎಸೆಯುವುದು ಹೇಗೆ ಭಗವಂತನಿಗೆ ಪ್ರಿಯವೋ ಹಾಗೆಯೇ ಪ್ರೀತಿಸಿದವರನ್ನು ಮದುವೆ ಮಾಡುವುದು ಭಗವಂತನಿಗೆ ಪ್ರಿಯವಾಗುವ ಕೆಲಸ. ಈ ಅತ್ಯುತ್ತಮ ಆದರ್ಶದ ಕೆಲಸವನ್ನು ನಾವು ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು.

ಬಸುರಿ ಹೆಂಗಸಿನ ಹೆಸರಲ್ಲಿ ಮನೆಗೆ ವಕ್ಕರಿಸಿ ಪ್ರತಿಷ್ಠಾಪಿತನಾಗುವ ಅಳಿಯನ ಹಾಗೆ ಆಧುನಿಕತೆಯ ಹೆಸರಲ್ಲಿ ವಕ್ಕರಿಸಿರುವ ವಿದೇಶಿ ಕಂಪೆನಿಗಳು, ಲಾಭ ಬಡುಕ ಟಿವಿ ಚಾನಲ್ಲುಗಳು, ಜಾಹೀರಾತನ್ನು ನಂಬಿ ಕೂತ ಪತ್ರಿಕೆಗಳು ಮಾಡುತ್ತಿರುವ ಅನ್ಯಾಯನವನ್ನು ಕಾಣುವವರು ಯಾರೂ ಇಲ್ಲ. ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು, ಪ್ರೀತ್ಸೋದು ತಪ್ಪಾ, ಪ್ರೀತ್ಸು ತಪ್ಪೇನಿಲ್ಲ ಎಂದೆಲ್ಲಾ ಪುಗಸಟ್ಟೆ ಉಪದೇಶಗಳನ್ನು ದಯಪಾಲಿಸುವ ಸಿನೆಮಾ ಮಂದಿ ಪ್ರೀತಿಯನ್ನೇ ಬಂಡವಾಳವಾಗಿಸಿಕೊಂಡಿದ್ದಾರೆ. ತಯಾರಾಗುವ ನೂರು ಸಿನೆಮಾಗಳಲ್ಲಿ ತೊಂಭತ್ತೆಂಟು, ಬಿಡುಗಡೆಯಾಗುವ ನೂರು ಸಿನೆಮಾಗಳಲ್ಲಿ ತೊಂಭತ್ತೊಂಭತ್ತು ವರೆ ಸಿನೆಮಾಗಳು ಪ್ರೀತಿಯನ್ನೇ ಅವಲಂಬಿಸಿವೆ. ಹಾಗೆ ನೋಡಿದರೆ ಈ ಸಿನೆಮಾ ಉದ್ಯಮಕ್ಕೆ ಪ್ರೀತಿ ಎಂಬುದು ಪುಕ್ಕಟೆ ಕಚ್ಚಾ ಪದಾರ್ಥ. ಆದರೆ ಈ ಪ್ರೀತಿ ಎಂಬ ಹಾಲಿಗೆ ಮದುವೆ ಎಂಬ ರುಚಿಕಟ್ಟಾದ, ಹಲ್ಲು ಚುಳ್ಳೆನಿಸುವ ಎರಡು ಹನಿ ನಿಂಬೆ ರಸವನ್ನು ಹಿಂಡಿದರೆ ಏನಾಗುತ್ತೆ ಎಂಬುದು ಎಲ್ಲರಿಗೂ ತಿಳಿದಿರುವಂಥದ್ದು. ಪ್ರೀತಿ ಮದುವೆಯಲ್ಲಿ ಅಂತ್ಯವಾದರೆ ಸಿನೆಮಾ ದಿ ಎಂಡ್ ಆಗುತ್ತೆ. ಹೀಗಾಗಿ ಈ ಸಿನೆಮಾ ಮಂದಿಗೆ ಜನರು ಪ್ರೀತಿ ಮಾಡುವುದು ಬೇಕು, ಮದುವೆಯಾಗಬಾರದು. ಇದೊಳ್ಳೆ, ಇಂಜಿನಿಯರಿಂಗು ಓದಬೇಕು- ಕೆಲಸಕ್ಕೆ ಸೇರಬಾರದು ಎಂದು ಆಶಿಸಿದಂತೆ. ಇಂಥ ಹುಲುಮಾನವರು ಶ್ರೀರಾಮ ಸೇನೆಯ ವಿರುದ್ಧ ಮಾತನಾಡುವರು. ಪ್ರೀತಿಯನ್ನು ಬಂಡವಾಳವಾಗಿಸಿಕೊಂಡ ಅವರಿಗೆ ಪ್ರೀತಿಸುವವರ ಬಗ್ಗೆ ಮಾತಾಡುವ ಹಕ್ಕಿಲ್ಲ.

ಇನ್ನು ಮೂರನೇ ಪುಟದಲ್ಲಿನ ಮದ್ಯದ ಅಮಲಲ್ಲಿ ಬಿದ್ದು ಒದ್ದಾಡಿ ದಣಿಯುವ ಪತ್ರಕರ್ತರಿಗೆ ‘ಮನುಷ್ಯ ನಾಯಿಯನ್ನು ಕಚ್ಚುವುದೇ ಸುದ್ದಿ’. ಅವರು ಕಲಹ ಪ್ರಿಯರು. ನೆಮ್ಮದಿಯಾಗಿರುವ ಯಾವ ಮನೆಯೂ ಅವರ ಪತ್ರಿಕೆಗೆ ಸರಕಾಗುವುದಿಲ್ಲ. ತೃಪ್ತನಾದ ಯಾವ ವ್ಯಕ್ತಿಯೂ ಅವರ ಗಮನಕ್ಕೆ ಅರ್ಹನಲ್ಲ. ಅವರನ್ನು ಪೊರೆಯುವ ಜಾಹೀರಾತು ದೊರೆಗಳ ಸುಖಕ್ಕೆ ಅಡ್ಡಿಯಾಗದ ಯಾವುದೂ ಅವರಿಗೆ ರಾಷ್ಟ್ರೀಯ ದುರಂತವಲ್ಲ. ಪ್ರಖ್ಯಾತ ನಟ ಮದುವೆಯಾದರೆ ಇವರಿಗೆ ಬೇಸರವಾಗುತ್ತೆ. ಯಾರಿಗೂ ತಿಳಿಸದೆ ಗುಟ್ಟಾಗಿ ಮದುವೆಯಾದರೆ ಇವರಿಗೆ ಕೊಂಚ ಥ್ರಿಲ್ಲಾಗುತ್ತದೆ. ಮದುವೆಗೆ ಮುಂಚೆ ಹುಡುಗಿಯೊಂದಿಗೆ ಹಾಡು, ಕುಣಿತ, ಫ್ಲಾಷ್ ಬ್ಯಾಕುಗಳಲ್ಲಿ ತೊಡಗಿದರೆ ಹಾಲು ಕುಡಿದಷ್ಟು ಸಂತೋಷವಾಗುತ್ತೆ. ಮದುವೆಯಾದ ಮೇಲೂ ‘ಇರುವುದೆಲ್ಲವ ಬಿಟ್ಟು’ ಹೊರಟರೆ ಸ್ವರ್ಗಕ್ಕೆ ಮೂರೇ ಗೇಣು. ಹೀಗಾಗಿ ಇವರಿಗೆ ಪ್ರೀತಿ ಎಂಬ ಕಬಾಬಿನಲ್ಲಿ ಮೂಳೆಯನ್ನು ಹುಡುಕುವುದೇ ಕೆಲಸ. ಇವರಿಗೆ ಪ್ರೀತಿಯ ಬಗ್ಗೆ ಮಾತಾಡಲು ಯಾರು ಕೊಟ್ಟರು ಹಕ್ಕು?

ಇನ್ನು ಬುದ್ಧಿ ಜೀವಿಗಳ ಬಗ್ಗೆ ಮರುಕ ತೋರಿಸಿ ನಮ್ಮ ಪುಣ್ಯವನ್ನು ಹೆಚ್ಚು ಮಾಡಿಕೊಳ್ಳುವುದು ಲೇಸು.

ಬುಡಕಟ್ಟು ಜನರ ಆಚರಣೆಗಳನ್ನು ಹೈಜ್ಯಾಕ್ ಮಾಡಿ ಹೊಚ್ಚ ಹೊಸ ಹೆಸರಿಟ್ಟು ಚೀನಾದ ಹಾಗೆ ಮಾರ್ಕೆಟಿಂಗ್ ಮಾಡಿ ವಿತರಿಸುವುದರಲ್ಲಿ ದಕ್ಷವಾದ ಕ್ರೈಸ್ತ ಧರ್ಮ ಮದುವೆಯ ಮುಂಚಿನ ಪ್ರೇಮ-ವಿಲಾಸದ ಬಗ್ಗೆ ಯಾವ ಧೋರಣೆ ಹೊಂದಿದೆ ಎಂಬುದು ಎಲ್ಲರಿಗೂ ಗೊತ್ತು. ಸದಾ ಪರದ ಬಗ್ಗೆ, ಅಲೌಕಿಕದ ಕಡೆ ಮುಖಮಾಡಿರುವ ಚರ್ಚುಗಳು, ಬಿಷಪ್ಪು, ಪೋಪುಗಳು ಹೆಚ್ಚು ಮಾತಾಡುವುದು ಬರೀ ಸಂತಾನ ನಿಯಂತ್ರಣ, ಸಲಿಂಗ ಕಾಮದ ಬಗ್ಗೆಯೇ ಆಗಿರುವುದು ಅನೇಕರಲ್ಲಿ ಅಲೌಕಿಕದ ಮೇಲೆ ಆಸಕ್ತಿ ಹುಟ್ಟಿಸಿದೆ. ವ್ಯಾಲಂಟೈನ್ ಆಚರಣೆ ಹುಟ್ಟಿದ್ದು ಹೇಗೆ ಎನ್ನುವುದೇ ಸರಿಯಾಗಿ ಜಗತ್ತಿಗೆ ತಿಳಿದಿಲ್ಲ, ವಿಕಿಪಿಡಿಯಾ ಪುಟ ಸಹ ನಿಮಗೆ ನಿಖರ ಉತ್ತರ ಕೊಡುವುದಿಲ್ಲ.

ಅನೇಕರು ತಿಳಿದಿರುವಂತೆ ರಾಜ್ಯದ ರಾಜನನ್ನು ಎದುರು ಹಾಕಿಕೊಂಡು ಸಂತ ವ್ಯಾಲಂಟೈನ್ ಯುವ ಪ್ರೇಮಿಗಳನ್ನು ಮದುವೆ ಮಾಡಿಸುತ್ತಿದ್ದ. ಕಡೆಗೆ ಒಮ್ಮೆ ಆತನನ್ನು ಗೆಲ್ಲಿಗೇರಿಸಲಾಯ್ತು. ಆದಿನವನ್ನೇ ಪ್ರೇಮಿಗಳ ದಿನ ಎನ್ನಲಾಗುತ್ತೆ. ಪ್ರೀತಿಸುವವರನ್ನು ಒಂದು ಮಾಡಲು ರಾಜನನ್ನೇ ಎದುರು ಹಾಕಿಕೊಂಡು ಪ್ರಾಣವನ್ನು ಕೊಟ್ಟು ಹೋರಾಡಿದ ಸಂತನ ನೆನೆಯುವ ದಿನ. ಆದರೆ ಈ ದಿನವನ್ನು ಯಾರು ನಿಜವಾದ ಅರ್ಥದಲ್ಲಿ ಆಚರಿಸುತ್ತಿದ್ದಾರೆ? ಗ್ರೀಟಿಂಗ್ ಕಾರ್ಡು ಮಾಫಿಯಾವಾಗಲಿ, ಗುಲಾಬಿ ಹೂವು ಗ್ಯಾಂಗಾಗಲಿ, ಗಿಫ್ಟ್ ಸೆಂಟರು ಓನರುಗಳಾಗಲಿ, ರೆಸಾರ್ಟು, ರೆಸ್ಟ್ರೋರೆಂಟು, ಪಬ್ಬು ದೊರೆಗಳಾಗಲಿ, ಪತ್ರಕರ್ತ, ಬುದ್ಧಿಜೀವಿಗಳಾಗಲಿ- ಯಾರೆಂದರೆ ಯಾರೂ ಈ ದಿನವನ್ನು ಅದರ ನೈಜ ಅರ್ಥದಲ್ಲಿ ಆಚರಿಸುತ್ತಿಲ್ಲ. ಆದರೆ ಹಾಗೆ ಆಚರಿಸಲು ಯೋಜಿಸುತ್ತಿರುವವರು ಒಬ್ಬರೇ. ಯುವ ಪ್ರೇಮಿಗಳಿಗಾಗಿ ಸರಕಾರವನ್ನೇ, ಸಂವಿಧಾನವನ್ನೇ, ಪೊಲೀಸ್ ವ್ಯವಸ್ಥೆಯನ್ನೇ, ಅಷ್ಟೇಕೆ ಇಡೀ ಸಮಾಜವನ್ನೇ ಎದುರು ಹಾಕಿಕೊಂಡು ತಮ್ಮ ಪ್ರಾಣದ ಹಂಗನ್ನು ತೊರೆದು ಹೋರಾಡಲು ಪಣ ತೊಟ್ಟಿರುವವರು ಒಬ್ಬರೇ… ಅವರೇ ಶ್ರೀರಾಮ ಸೇನೆಯ ವೀರ ಯೋಧರು! ಪ್ರೇಮಿಗಳನ್ನು ಫೆ ೧೪ರಂದು ಮದುವೆ ಮಾಡಿಸಿ ಸಂತ ವ್ಯಾಲಂಟೈನ್ ಹಾಕಿಕೊಟ್ಟ ಆದರ್ಶವನ್ನು ಪಾಲಿಸುತ್ತಿದ್ದಾರೆ. ಅನ್ಯ ಧರ್ಮದ, ಅನ್ಯ ಸಂಸ್ಕೃತಿಯ ಆಚರಣೆಯನ್ನು ಇಷ್ಟು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿರುವ ಶ್ರೀರಾಮ ಸೇನೆಯ ಪರ ಧರ್ಮ ಸಹಿಷ್ಣುತೆ, ವಿಶಾಲ ಹೃದಯವನ್ನು ಗುರುತಿಸದ ಮೂರ್ಖರಿಗೆ ಧಿಕ್ಕಾರವಿರಲಿ!

ಸಂತ ವ್ಯಾಲಂಟೈನ್ ಹಾಗೂ ಆತನ ಆದರ್ಶದ ತೀವ್ರ ಅಭಿಮಾನಿಯಾದ ನಾವು ಮುತಾಲಿಕ್ ಸಾಹೇಬರಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದೇವೆ. ಇವರು ತಮ್ಮ ಉಗ್ರ ಹಿಂದುತ್ವದಿಂದ ಕ್ರೈಸ್ತ ಆಚರಣೆಯನ್ನು ಜೀವಂತವಾಗಿಸುವ ಪ್ರಯತ್ನ ಮಾಡುತ್ತಿರುವುದನ್ನು ಆದರ್ಶವಾಗಿ ಸ್ವೀಕರಿಸಿ ಮತಾಂಧ ಮುಸ್ಲೀಂ ಸಂಘಟನೆಗಳು ಮನು ಹೇಳಿದ ಆದರ್ಶಗಳನ್ನು ಸ್ಥಾಪಿಸಲು ಹಿಂದೂ ಆಚರಣೆಯನ್ನು ಜೀವಂತವಾಗಿರಿಸಲು ಹೋರಾಟ ರೂಪಿಸಬೇಕು. ಹೆಣ್ಣು ಗಂಡಿನ ಅನುಪಾತ ಸಮಾನವಾಗಿರುವಾಗಲೂ ಗಂಡು ನಾಲ್ಕು ಹೆಣ್ಣನ್ನು ಮದುವೆಯಾಗಬಹುದು, ತಲಾಖ್ ನೀಡುವ ಹಕ್ಕಿರುವುದು ಗಂಡಿಗಷ್ಟೇ, ಹೆಣ್ಣಿಗೆ ಬುರ್ಕಾ ಕಲರ್ ಸೆಲೆಕ್ಟ್ ಮಾಡುವ ಹಕ್ಕನ್ನು ನಿಷೇಧಿಸಿರುವುದನ್ನು ಬೆಂಬಲಿಸಿ ಅದನ್ನು ಶೇ ೧೦೦ರಷ್ಟು ಜಾರಿಗೆ ತರಲು ಕ್ರೈಸ್ತ ಉಗ್ರವಾದಿಗಳು ಕಂಕಣ ತೊಡಬೇಕು. ಆಗಲೇ ನಮ್ಮ ದೇಶದಲ್ಲಿ ಜಾತ್ಯಾತೀತ ಮೌಲ್ಯ ಬೆಳಗುವುದು! ದೇಶ ಸರ್ವ ಧರ್ಮ ಸಮನ್ವಯ ಭಾರತವಾಗುವುದು!

– ನಗೆ ಸಾಮ್ರಾಟ್