Tag Archives: ಪ್ರಧಾನಿ

ನಿಜವಾದ ಕೋಡಿ ಹಳ್ಳಿ ಸ್ವಾಮಿ ಭವಿಷ್ಯ!

3 ಜೂನ್

(ನಗೆ ನಗಾರಿ ಭವಿಷ್ಯವಾಣಿ ಮಹಾನ್ವೇಷಣಾ ಬ್ಯೂರೋ)

ಮಾಧ್ಯಮದವರ ಬೇಜವಬ್ದಾರಿತನದ ಬಗ್ಗೆ ಪುಟಗಟ್ಟಲೆ ಕೊರೆದು ಸುಸ್ತಾಗಿರುವ ನಮಗೆ ಇನ್ನಷ್ಟು ಭಾಷಣ ಮಾಡಲು ಅವಕಾಶ ಸಿಕ್ಕಿದ್ದಕ್ಕಾಗಿ ಸಂತೋಷವಾಗಿದೆ.  ಸುದ್ದಿಯೆಂಬುದು ಕರ್ನಾಟಕದ ಕಗ್ಗತ್ತಲ ಮೂಲೆಯಲ್ಲಿ ಕಪ್ಪು ಕಂಬಳಿ ಹೊದ್ದು ಅಡಗಿ ಕುಳಿತಿದ್ದರೂ ಪತ್ತೆ ಹಚ್ಚಿ, ಹಿಡಿದು ತಂದು, ಬಣ್ಣ ಬಳಿದು, ಪೋಷಾಕು ತೊಡಿಸಿ ವರದಿ ಮಾಡುವ, ಆಮೂಲಕ ಉತ್ತಮ ಸಮಾಜ ಕಟ್ಟಲು ಶ್ರಮಿಸುವ ಚಾನಲ್ಲು, ನಿರಂತರವಾಗಿ ನೇರವಾದ ವರದಿಯನ್ನು ದಿಟ್ಟವಾಗಿ ಪ್ರಕಟಿಸುವ ಛಲ ಹೊತ್ತ ಚಾನಲ್ಲುಗಳು, ನಂಬರ್ ಒನ್, ಟೂ, ಥ್ರೀ ಪತ್ರಿಕೆಗಳು ಈ ಬಗೆಯ ಬೇಜವಾಬ್ದಾರಿಯನ್ನು ಪ್ರದರ್ಶಿಸುತ್ತಿರುವುದನ್ನು ಕಂಡು ನಾವು ಕೆಂಡಾ ಮಂಡಲರಾಗಿದ್ದೇವೆ. ಸುದ್ದಿಯನ್ನು ವರದಿ ಮಾಡುವುದಷ್ಟೇ ಪತ್ರಕರ್ತನ ಕೆಲಸವಲ್ಲ, ಆ ಸುದ್ದಿಯ ಬೆಳವಣಿಗೆ, ಅದರ ಪರಿಣಾಮಗಳನ್ನು ತಾಳ್ಮೆಯಿಂದ ಗಮನಿಸಿ ಓದುಗರಿಗೆ ಮುಟ್ಟಿಸಬೇಕಾದ್ದು ಆತನ ಕರ್ತವ್ಯ. ಆದರೆ ಈ ಕರ್ತವ್ಯವನ್ನು ಮರೆತು ಮಾಧ್ಯಮಗಳು ಉತ್ತಮ ಸಮಾಜ ಕಟ್ಟಲು ಹೊರಟಿವೆ.

ನಮ್ಮ ಪ್ರಭಾವಿ ಮುಖ್ಯಧಾರೆಯ ಮಾಧ್ಯಮಗಳು ಎಡವಿದ ಕಲ್ಲನ್ನೇ ಕರ್ತಾರನ ಕಮ್ಮಟ ಎಂದು ಭಾವಿಸಿ ಕೆಲಸಕ್ಕೆ ತೊಡಗುವ ನಗೆ ನಗಾರಿ ಡಾಟ್ ಕಾಮ್ ಪತ್ರಿಕಾ ಧರ್ಮವನ್ನು ಎತ್ತಿ ಹಿಡಿಯಲು ಮತ್ತೊಮ್ಮೆ ತನ್ನ ಸಮಸ್ತ ಶಕ್ತಿಯನ್ನೂ ವಿನಿಯೋಗಿಸಿದೆ.

ಚುನಾವಣೆಗಳ ಮುನ್ನ ಯಾರು ಎಷ್ಟು ಸೀಟು ಗೆಲ್ಲಬಹುದು, ಯಾರು ಕುರ್ಚಿಯೇರಬಹುದು ಎಂದೆಲ್ಲಾ ರಾಜಕೀಯ ಪಂಡಿತರು ಹಾಗೂ ಟಿವಿ ನಿರೂಪಕರು ಹಗಲು ರಾತ್ರಿ ಗಂಟಲು ಹರಿದುಕೊಳ್ಳುವುದು ಸಾಮಾನ್ಯ. ಏಕೆಂದರೆ ಅದು ಅವರ ವೃತ್ತಿ, ಹೊಟ್ಟೆ ಪಾಡು. ವೃತ್ತಿ ಅಥವಾ ಹೊಟ್ಟೆ ಪಾಡು ನಿರ್ವಹಿಸಲು ಯಾವುದೇ ಪ್ರತಿಭೆ, ಅಧ್ಯಯನ, ಜವಾಬ್ದಾರಿ, ತಜ್ಞತೆ ಇರಬೇಕು ಎಂದೇನು ಕಾನೂನು ಇಲ್ಲ. ಅವರು ಬಾಯಿಗೆ ಬಂದ, ತಲೆಗೆ ತೋಚಿದ ವಿಶ್ಲೇಷಣೆ ಮಾಡಿದರೂ, ತಲೆ ಬುಡವಿಲ್ಲದ ಭವಿಷ್ಯವಾಣಿಯನ್ನು ಅರುಹಿದರೂ ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಬುದ್ಧಿವಂತ ವೀಕ್ಷಕರಿಗೆ ಅನ್ನಿಸುವುದಿಲ್ಲ.

ಆದರೆ ಹೊಟ್ಟೆ ಪಾಡಿನ ಹಂಗಿಲ್ಲದೆ, ವೃತ್ತಿಯನ್ನು ನಿರ್ವಹಿಸಬೇಕಾದ ಅನಿವಾರ್ಯತೆಯಿಲ್ಲದೆ ಈ ಬಗೆಯ ಭವಿಷ್ಯವಾಣಿಯನ್ನು ಉದ್ಘೋಷಿಸುವ ಹವ್ಯಾಸಿ ತಜ್ಞರ ಪ್ರಯತ್ನವನ್ನು ಮಾತ್ರ ಅಸಡ್ಡೆಯಿಂದ ಕಾಣಬಾರದು. ಅವರ ಕೊಡುಗೆಯನ್ನು ಭಾರಿ ಗೌರವಾದರಗಳಿಂದ ನೆನೆಸಿಕೊಳ್ಳಬೇಕಾದ್ದು ಎಲ್ಲರ ಕರ್ತವ್ಯ.

ಈ ಸಾಲಿನ ಲೋಕಸಭಾ ಚುನಾವಣೆಗಳ ಮುಂಚೆ ರಾಜಕೀಯ ಏರುಪೇರುಗಳ ಬಗ್ಗೆ ಅತ್ಯಂತ ನಿಖರವಾಗಿ ಭವಿಷ್ಯ ನುಡಿದಿದ್ದ ಕೋಡಿ ಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿಯವರ ಹೇಳಿಕೆಗಳನ್ನು ನೆನೆಸಿಕೊಳ್ಳೋಣ.

svami

 

ಯಡಿಯೂರಪ್ಪ ಅಧಿಕಾರಕ್ಕೆ ಕುತ್ತು: ಕೋಡಿಮಠ ಶ್ರೀ ಭವಿಷ್ಯ

ಹಾಸನ, ಸೋಮವಾರ, 11 ಮೇ 2009( 10:51 IST )

NRB

ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ 15 ದಿನಗಳೊಳಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸ್ಥಾನಕ್ಕೆ ಕುತ್ತು ಬರಲಿದೆ. ಒಂದು ವೇಳೆ ತಕ್ಷಣಕ್ಕೆ ಅಪಾಯದಿಂದ ಪಾರಾದರೂ ಡಿಸೆಂಬರ್‌‌ನಲ್ಲಿ ಎದುರಾಗುವ ರಾಜಕೀಯ ಗಂಡಾಂತರದಿಂದ ಯಡಿಯೂರಪ್ಪ ಪಾರಾಗಲು ಸಾಧ್ಯವೇ ಇಲ್ಲ ಎಂದು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರು ಭವಿಷ್ಯ ನುಡಿದಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆ ಏರಿದ ದಿನದಿಂದಲೂ ರಾಜ್ಯದಲ್ಲಿ ಅವಘಡ, ಗಲಾಟೆ, ಸಾವುಗಳು ನಿರಂತರವಾಗಿ ಸಂಭವಿಸುತ್ತಿವೆ. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ಘಳಿಗೆಯೇ ಸರಿಯಿಲ್ಲ. ಗಂಡಾಂತರದಿಂದ ಅವರು ಪಾರಾಗಬೇಕಿದ್ದರೆ ಮುಖ್ಯಮಂತ್ರಿಯಾದ 45 ದಿನಗಳಲ್ಲಿ ರಾಜೀನಾಮೆ ನೀಡಿ ಮತ್ತೆ ಅಧಿಕಾರ ಸ್ವೀಕರಿಸಬೇಕಿತ್ತು. ಆ ಕೆಲಸ ಮಾಡಿದ್ದರೆ 10 ವರ್ಷ ಅನಭಿಷಿಕ್ತ ದೊರೆಯಂತಿರಬಹುದಿತ್ತು. ಈಗ ಯಾವ ಶಾಂತಿ ಮಾಡಿಸಿದರೂ ಗಂಡಾಂತರದಿಂದ ಪಾರಾಗಲು ಸಾಧ್ಯವಾಗದು ಎಂದು ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಹಿಂದಿನ ಚುನಾವಣೆಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡು ಪ್ರಬಲವಾಗಲಿದೆ. ರಾಜ್ಯದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು ಸಂಭವಿಸುವ ಸಾಧ್ಯತೆಯಿದೆ ಎಂದರು.

 

ಸ್ವಾಮೀಜಿಯವರ ಭವಿಷ್ಯವಾಣಿಯನ್ನು ವರದಿ ಮಾಡುವಲ್ಲಿ ಪತ್ರಿಕೆಗಳು ತೋರಿದ ಶ್ರದ್ಧೆಯನ್ನು ಅವರ ಭವಿಷ್ಯವಾಣಿ ನಿಖರವೆಂದು ಸಾಬೀತಾದಾಗ ಅದನ್ನು ನೆನಯುವಲ್ಲಿ ತೋರಲು ಮರೆತರು. ಅತ್ಯಂತ ನಿಖರವಾಗಿ ಫಲಿತಾಂಶವನ್ನು ನಿರೀಕ್ಷಿಸಿದ್ದಕ್ಕೆ ಸ್ವಾಮೀಜಿಯವರಿಗೆ ನಾವು ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

ತಮ್ಮ ತ್ರಿಕಾಲಜ್ಞಾನದ ಬಲದಿಂದ ಸ್ವಾಮೀಜಿಯವರು ಈ ಚುನಾವಣೆಯ ನಂತರ ದೇಶದ ಪ್ರಧಾನಿಯಾಗುವುದು ಮಹಿಳೆಯೇ ಎಂದಿದ್ದರು. ತೃತೀಯ ರಂಗ ಉತ್ತಮ ಸಾಧನೆ ಮಾಡಲಿದೆ ಎಂದಿದ್ದರು. ಪ್ರಧಾನಿ ಆಯ್ಕೆ ಸಮಯದಲ್ಲಿ ಆಗುವ ಗಲಾಟೆಯಿಂದ ಒಂದು ಬಣ ಪ್ರಮುಖ ಪಕ್ಷದಿಂದ ಸಿಡಿದು ಹೋಗಲಿದೆ ಎಂದಿದ್ದರು. ತಮ್ಮ ಭವಿಷ್ಯವಾಣಿಯನ್ನು ಬೆಂಬಲಿಸುವುದಕ್ಕೆ ಮುಂಬಯಿಯ ಮೇಲೆ ಆಕ್ರಮಣ ನಡೆಯುವುದನ್ನು ನಾವು ಮೊದಲೇ ನುಡಿದಿದ್ದೆವು ಎಂದು ನೆನಪಿಸಿದ್ದರು. ಕರ್ನಾಟಕದಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಪಡೆದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಸ್ಥಾನ ಹೆಚ್ಚಿಸಿಕೊಳ್ಳುತ್ತವೆ ಎಂದಿದ್ದರು. ಚುನಾವಣೆಯ ನಂತರ ಯಡಿಯೂರಪ್ಪನವರ ಅಧಿಕಾರಕ್ಕೆ ಕುತ್ತು ಬರಲಿದೆ ಎಂದೂ ತಿಳಿಸಿದ್ದರು.   ಅಲ್ಲಿ ಇಲ್ಲಿ ಕೆಲವು ಅಪಸವ್ಯಗಳನ್ನು ಹೊರತು ಪಡಿಸಿದರೆ ಸ್ವಾಮೀಜಿಯವರ ಭವಿಷ್ಯವಾಣಿ ಶೇ ನೂರರಷ್ಟು ಸತ್ಯವಾಗಿದೆ. 

ಸ್ವಾಮೀಜಿಯವರ ಈ ಸಾಧನೆಗೆ, ದಿವ್ಯ ಶಕ್ತಿಗೆ ತಲೆಬಾಗಿರುವ ವೈಜ್ಞಾನಿಕ ಜಗತ್ತು ಇವತ್ತು ಮಧ್ಯ ರಾತ್ರಿ ಹನ್ನೆರಡು ಗಂಟೆಯಿಂದಲೇ ತಮ್ಮೆಲ್ಲಾ ಕೆಲಸಗಳನ್ನು ನಿಲ್ಲಿಸಿ ಸ್ವಾಮೀಜಿಯ ಪದತಲದಲ್ಲಿ ನೆಲೆಯೂರುವ ಯೋಜನೆ ಹಾಕಿಕೊಂಡಿದ್ದಾರೆ. ಭೂಕಂಪನ ಮುನ್ಸೂಚನೆ, ಚಂಡಮಾರುತ, ಸುನಾಮಿಗಳ ಮುನ್ನೆಚ್ಚರಿಕೆ, ರೇಡಾರ್ ನಿರ್ವಹಣೆ, ಶೇರು ಮಾರುಕಟ್ಟೆಯ ನಿರ್ವಹಣೆ ಮಾಡಬೇಕಾದ ತಜ್ಞರೆಲ್ಲ ತಮ್ಮ ಕೆಲಸಗಳನ್ನು ಸ್ವಾಮೀಜಿಯವರ ಕೈಗೆ ನೀಡಿ ಕಾಲಿಗೆ ಬೀಳಲು ಏಕಸಮ್ಮತವಾಗಿ ನಿರ್ಧರಿಸಿದ್ದಾರೆ.

ಈ ನಡುವೆ  ಸಾಮ್ರಾಟರು ಸ್ವಾಮೀಜಿಯವರನ್ನು ವೈಯಕ್ತಿಕವಾಗಿ ಭೇಟಿಯಾಗಿ ತಮ್ಮ ಅಭಿನಂದನೆಗಳನ್ನು ಸಲ್ಲಿಸಿ, ಈ ವರದಿ ಪ್ರಕಟಣೆಗಾಗಿ ಅಲ್ಪ ಮೊತ್ತದ ಚೆಕ್ ಒಂದನ್ನು ಪಡೆದುಕೊಂಡು ಅದು ಕ್ಲಿಯರ್ ಆಗುವುದೋ ಇಲ್ಲ ಬೌನ್ಸ್ ಆಗುವುದೋ ಎಂದು ಭವಿಷ್ಯವಾಣಿಯನ್ನು ಕೇಳಿಕೊಂಡು ಬಂದು ಕೂತಿದ್ದಾರೆ.

ನಗಾರಿ ರೆಕಮಂಡೆಶನ್ 14

19 ನವೆಂ

ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ವಾರ ವಾರವೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.

…………………………………….

ನಮ್ಮ ದೇಶದ ಪ್ರಧಾನಿಯವರ ಬ್ಲಾಗಿದು. ಹ್ಹ! ಆಶ್ಚರ್ಯ ಚಕಿತರಾಗಿ ಉಸಿರು ಗಂಟಲಲ್ಲಿ ಸಿಕ್ಕಿಸಿಕೊಂಡು ಒದ್ದಾಡುವ ಮುನ್ನ ಸ್ವಲ್ಪ ಗಮನಿಸಿ. ಇದು ನಮ್ಮ ದೇಶದ ಪ್ರಧಾನಿಯವರ ಶೇ ನೂರರಷ್ಟು ಅನಧಿಕೃತವಾದ ಬ್ಲಾಗು.

blog

ಬ್ಲಾಗಿನ ಬಗ್ಗೆ ಪರಿಚಯ ನೀಡುತ್ತಾ ಪ್ರಧಾನಿಯವರು ಹೀಗೆ ಬರೆಯುತ್ತಾರೆ: “ನಾನು ಕೆಲ ಸಮಯದ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಆಗಿದ್ದೆ. ಈಗ ಮನಮೋಹನನಾಗಿರುವೆ. ಪ್ರಸ್ತುತ ಮನಮೋಹನನಾಗಿರುವೆನಾದರೂ ಆಗಾಗ ಸೋನಿಯಾ ಆಗುತ್ತಿರುತ್ತೇನೆ. ಈ ದೇಶದ ರಾಜಕೀಯದಲ್ಲಿ ಸದಾ ಬದಲಾಗುವ ಶಾಶ್ವತ ಸ್ಥಾನ ನನ್ನದು. ಶೀಘ್ರದಲ್ಲಿ ನಾನು ರಾಹುಲನಾಗಬಹುದು, ಅಡ್ವಾಣಿಯಾಗಬಹುದು ಇಲ್ಲವೇ ಮೋದಿ. ಇಲ್ಲವಾದರೆ ನಾನು ಲಾಲೂ ಆಗಬಹುದು. ಆ ದಿನ ದೇವರೇ ಭಾರತವನ್ನು ಕಾಪಾಡಬೇಕು. ಒಂದು ವೇಳೆ ನಾನು ಮಾಯಾವತಿಯಾದರೆ ನನಗೆ ಸರ್ಜರಿ ಆವಶ್ಯಕವಾಗಿ ಬೇಕು…’’

ಕನ್ನಡದಲ್ಲಿರುವ ಹಲವು ಬೊಗಳೆ ಬ್ಲಾಗುಗಳ ಹಾಗೆಯೇ ಇದು ಏಕ ಸದಸ್ಯರ ಗುಂಪು ನಡೆಸುತ್ತಿರುವ ಬೊಗಳೆ ಬ್ಲಾಗು. ಬೊಗಳೆ ಇಂಗ್ಲೀಷಿನದಾದ ತಕ್ಷಣ ಅದಕ್ಕೆ ಇಡೀ ದೇಶದ ವಿಷಯಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯ ಎಂಬುದು ಅಪ್ಪಟ ಮಿಥ್ ಎಂದು ಸಾಮ್ರಾಟರು ಹೇಳುತ್ತಿದ್ದಾರಾದರೂ ಈ ಬಾರಿ ರೆಕಮಂಡ್ ಮಾಡಲು ಇದಕ್ಕಿಂತ ಉತ್ತಮ ಆಯ್ಕೆ ಇರದುದರಿಂದ ಈ ಬ್ಲಾಗನ್ನು ರೆಕಮಂಡ್ ಮಾಡಲು ಸೂಚಿಸಿದ್ದಾರೆ!

ಪ್ರಧಾನಿಯವರ ಆರೋಗ್ಯ ಕಾಪಾಡಲು ಮನವಿ

29 ಆಗಸ್ಟ್

(ನಗಾರಿ  ರಾಷ್ಟ್ರೀಯ ಸುದ್ದಿ ಬ್ಯೂರೋ)

ಕಡೆಗೂ ತಾವು ವಿದೇಶಿ ಹಸ್ತಗಳ ಹಿಡಿತದಲ್ಲಿಲ್ಲ ಎಂಬುದನ್ನು ಮಾನುಅ ನಿಧಾನಿ ಮೋಹನ ಮನ ಸಿಂಗರು ಕಳೆದ ವಿಶ್ವಾಸಮತ ಕೋರಿಕೆಯ ಸಂದರ್ಭದಲ್ಲಿ ಜಗಜ್ಜಾಹೀರು ಮಾಡಿದ್ದಾರೆ. ದೇಶದ ಆಮ್ ಆದ್ಮಿಗೆ ನಮ್ಮ ನಿಧಾನಿ ತಮ್ಮ ಸ್ವಂತ ಮೆದುಳಿನಿಂದಲೇ ದೇಶವನ್ನು ಮುಂದಕ್ಕೆ ಓಡಿಸುತ್ತಿದ್ದಾರೆ ಎಂಬ ಸಮಾಧಾನ ಸಿಕ್ಕಲು ನಾಲ್ಕು ವರ್ಷ ಬೇಕಾಯಿತು. ಹೀಗಿರುವಾಗ ನಮ್ಮ ನಿಧಾನಿಯವರ ‘ಖಾಸಗಿ ಆರೋಗ್ಯ’ ನೋಡಿಕೊಳ್ಳುವ ವೈದ್ಯರು ನಗೆ ಸಾಮ್ರಾಟರೊಂದಿಗೆ ಮಾತನಾಡಲು ಸಮಯ ಮಾಡಿಕೊಂಡರು.

‘ಯಾವುದೇ ಮನುಷ್ಯನಿಗೆ ದಿನನಿತ್ಯದ ಚಟುವಟಿಕೆಯ ಜೊತೆಗೆ ದೇಹಾರೋಗ್ಯವನ್ನು ಜಬರ್ದಸ್ತಾಗಿ ಇಟ್ಟುಕೊಳ್ಳಲು ಆಗಾಗ ಉಪವಾಸ ಮಾಡುವುದು ಅಗತ್ಯ. ವಯಸ್ಸು ಹೆಚ್ಚಾದಂತೆ ಇದು ಇನ್ನೂ ಅಗತ್ಯ. ಹಾಗೆಯೇ ಕೆಲವೊಮ್ಮೆ ರಾತ್ರಿಯಿಡೀ ಜಾಗರಣೆ ಮಾಡುವುದರಿಂದ ಇಂದ್ರಿಯಗಳು ಪುನಃಶ್ಚೇತನ ಪಡೆದುಕೊಳ್ಳುತ್ತವೆ. ನಮ್ಮ ನಿಧಾನಿಯವರಿಗೂ ಇದೂ ಕಾಲಕಾಲಕ್ಕೆ ಅಗತ್ಯವಾಗಿ ಬೇಕೇ ಬೇಕು. ಹಿಂದೊಬ್ಬರು ನಿಧಾನಿಯಿದ್ದರು ಅವರಿಗೆ ಈ ಆರೋಗ್ಯದ ರಹಸ್ಯವನ್ನು ಕಲಿಸಲು ಹೋಗಿ ನಾನೇ ಪೆಟ್ಟು ತಿಂದಿದ್ದೆ. ಅವರು ಹೊಟ್ಟೆ ತುಂಬಾ ಮುದ್ದೆ ನುಂಗಿ ಕಾರ್ಯಕ್ರಮಗಳ ಮಧ್ಯೆಯೇ ಆರಾಮಾಗಿ ನಿದ್ದೆ ಮಾಡುತ್ತಾ ದೇಶವನ್ನು ಮುನ್ನಡೆಸುತ್ತಿದ್ದರು. ಅದು ಅವರ ವೈಯಕ್ತಿಕ ಹಿರಿಮೆಯಷ್ಟೇ. ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ನಮ್ಮ ಮೋಹನ ಮನ ಸಿಂಗರು ದೇಶದ ಬಗ್ಗೆ ಅತ್ಯಂತ ಕಾಳಜಿಯಿಂದ ಆಲೋಚಿಸಲು ಈ ಉಪವಾಸ ಹಾಗೂ ಜಾಗರಣೆಗಳು ಅತಿ ಆವಶ್ಯಕ.

‘ನಮ್ಮ ಮೋಹನ ಮನ ಸಿಂಗರ ಸುಕೃತವೋ, ಈ ದೇಶದ ಜನರ ಪುಣ್ಯವೋ ಇಲ್ಲವೇ ಮಹಾ ಮಾತೆಯ ಕೃಪೆಯೋ ನಮ್ಮ ನಿಧಾನಿಯವರಿಗೆ ನಿದ್ದೆಗೆಡುವ, ಊಟ ಬಿಡುವ ಅವಕಾಶಗಳು ಆಗಾಗ ಸಿಕ್ಕುತ್ತಲೇ ಇರುತ್ತವೆ. ಇಂಥ ಅವಕಾಶಗಳಿಂದ ಅವರ ಆರೋಗ್ಯ ಸುಸ್ಥಿತಿಯಲ್ಲಿದೆ. ಇಲ್ಲದೆ ಹೋದರೆ ಹಿಂದಿನ ನಿಧಾನಿಯ ಹಾಗೆ ದೇಹದ ಪ್ರತಿಯೊಂದು ಸ್ಪೇರ್ ಪಾರ್ಟುಗಳನ್ನೂ ಬದಲಾಯಿಸಿಕೊಳ್ಳಬೇಕಾಗುತ್ತಿತ್ತು. ನೂರು ಕೋಟಿ ಮಂದಿಯ ಬಂಡಿಯನ್ನು ಹೊರುವುದು ಎಂದರೆ ಸುಮ್ಮನೆ ಮಾತೇ?

‘ನಿಧಾನಿಯವರ ಆರೋಗ್ಯವನ್ನು ಕಾಪಾಡುವುದಕ್ಕಾಗಿ ದೇಶದಲ್ಲಿ ಎಷ್ಟೆಲ್ಲಾ ಪ್ರಯತ್ನಗಳು ನಡೆಯುತ್ತಿವೆ. ನಮ್ಮ ದೇಶದ ಅಕ್ಕ ಪಕ್ಕದ ತಂಟೆಕೋರ ಮನೆಗಳಿಂದ ಉಗ್ರರ್, ವ್ಯಗ್ರರು ಬಂದು ಮಾರ್ಕೆಟ್ಟುಗಳಲ್ಲಿ, ಬಸ್ ಸ್ಟ್ಯಾಂಡುಗಳಲ್ಲಿ, ಶಾಲೆಗಳಲ್ಲಿ ಕಡೆಗೆ ಆಸ್ಪತ್ರೆಗಳನ್ನೂ ಬಿಡದೆ ಉಡಾಯಿಸಿದರು, ಮರದ ಮೇಲೆ, ಚರಂಡಿಯ ಅಡಿಗೆ, ಕಸದ ಬುಟ್ಟಿಯಲ್ಲಿ ಹೀಗೆ ಎಲ್ಲೆಂದರಲ್ಲಿ ಭಾರತೀಯರು ಮೂತ್ರ ಮಾಡಿದ ಹಾಗೆ ಬಾಂಬುಗಳನ್ನು ಇಟ್ಟು ‘ಹೆಸರಾಂತ’ ಪತ್ರಿಕೆ, ಟಿವಿಗಳಿಗೆ ‘ತಾಕತ್ತಿದ್ದರೆ ನಮ್ಮನ್ನು ತಡೆಯಿರಿ…’ ಎಂದು ಸವಾಲೊಡ್ಡಿದರು. ಬಾಂಬಿನ ಆಟಾಟೋಪದಲ್ಲಿ ಎಷ್ಟೋ ಮಂದಿ ಜೀವ ಕಳೆದುಕೊಂಡರು. ಆದರೆ ಇದರಿಂದ ನಿಧಾನಿಯವರಿಗೆ ಉಪವಾಸವೂ ಸಿಕ್ಕಲಿಲ್ಲ, ಜಾಗರಣೆಯೂ ಮಾಡಲಾಗಲಿಲ್ಲ. ಹೊಟ್ಟೆ ತುಂಬಾ ಊಟ ಮಾಡುತ್ತಾ, ಕಣ್ತುಂಬಾ ನಿದ್ದೆ ಮಾಡುತ್ತಾ ಇದ್ದು ಬಿಟ್ಟರು.

‘ಅತ್ತ ಭಾರತದ ಶಿರವಾದ ಕ್ಯಾಶ್ಮೀರದಲ್ಲಿ ನೆರೆಮನೆಯರು ಎರಡೂ ಕಾಲುಗಳನ್ನು ಎರಡೂ ಕೈಗಳ ತಲಾ ಐದು ಉಗುರುಗಳಿಂದ ಪರಪರಪರನೆ ಕೆರೆದುಕೊಂಡು ಬಂದು ಜಗಳ ಮಾಡಿದಾಗಲೂ, ನಮ್ಮ ನಾಡಿನ ರಕ್ಷಣೆಗೆ ನಿಂತ ಯೋಧರ ಪ್ರಾಣ ಹೋದರೂ ನಮ್ಮ ನಿಧಾನಿಯವರ ಆರೋಗ್ಯ ಕಾಪಾಡುವ ಯಾವ ಪರಿಣಾಮವೂ ಆಗಲಿಲ್ಲ.

‘ಇಡೀ ಜಗತ್ತೇ ಪ್ರಧಾನಿಯವರಿಗೆ ಉತ್ತಮ ಆರೋಗ್ಯವನ್ನು ಕೊಡಬೇಕು ಎಂದು ಸಂಚು ಮಾಡಿ ಭಾರತದ ಹಣದುಬ್ಬರದಡಿಗೆ ರಾಕೆಟ್ ಇಟ್ಟು ಉಡಾಯಿಸಿಬಿಟ್ಟಿತು. ಆಮ್ ಆದ್ಮೀ ನೇರವಾಗಿ ಸ್ವರ್ಗದಲ್ಲೇ ಚೀಪ್ ಆಗಿ ಬದುಕು ಸಾಗಿಸಬಹುದು ಎಂದು ತೀರ್ಮಾನಿಸುವ ಪರಿಸ್ಥಿತಿ ಬಂದಿತು ಆದರೆ ಪಿತ್ತ ಮಂತ್ರಿಯೂ ಆಗಿದ್ದ ನಿಧಾನಿಯವರಿಗೆ ಇದರಿಂದ ಯಾವ ರೀತಿಯಲ್ಲೂ ನೆರವಾಗಲಿಲ್ಲ. ನಿದ್ದೆ, ಊಟ ಯಥೇಚ್ಚವಾಗಿ ಮುಂದುವರೆದಿತ್ತು.

‘ಹೀಗಿರುವಾಗ ನಮ್ಮ ನಿಧಾನಿಯವರ ಆರೋಗ್ಯದ ಗತಿ ಏನಾಗಬೇಡ? ಅವರಿಗೆ ಆಗಾಗ ಉಪವಾಸ ಹಾಗೂ ನಿದ್ದೆ ಬರದ ರಾತ್ರಿಗಳನ್ನು ಕರುಣಿಸುವುದು ಹೇಗೆ ಅನ್ನುವಾಗಲೇ ನಮ್ಮ ಕಣ್ಣೆದುರು ಪವಾಡವೊಂದು ನಡೆಯಿತು. ಅನ್ಯದೇಶದಲ್ಲಿ ಬಾಂಬು ಉಡಾಯಿಸಿದವರೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾದ ಭಾರತದ ಕುವರ ದೇಶಕ್ಕೆ ಮರಳಿ ಬಂದಾಗ, ಅನ್ಯದೇಶದಲ್ಲಿ ತನಗಾದ ಅವಮಾನ, ತನ್ನ ಮೇಲೆ ನಡೆದ ‘ಶೋಷಣೆ’ಯನ್ನು ಪರಿ ಪರಿಯಾಗಿ ವಿವರಿಸಿ ಟಿವಿ ಕೆಮಾರಗಳ ಮುಂದೆ ಒಂದೇ ಕಣ್ಣಿನಲ್ಲಿ ಗೊಳೋ ಎಂದು ಅತ್ತಾಗ ಪವಾಡ ಸಂಭವಿಸಿಯೇ ಬಿಟ್ಟಿತು. ನಮ್ಮ ನಿಧಾನಿ ಮಾಡುವ ಕೆಲಸವನ್ನೆಲ್ಲಾ ಬಿಟ್ಟು ಟಿವಿ ಚಾನೆಲ್ಲು ನೋಡುತ್ತಾ ಕುಳಿತರು. ಆ ಕನ್ನಡದ ಕುವರನ ತಾಯಿ ರೋಧಿಸುವುದನ್ನು ನಮ್ಮ ಟಿವಿ ಚಾನೆಲ್ಲುಗಳು ೨೪*೭ ತೋರಿಸುವುದನ್ನು ಕಂಡು ನಿಧಾನಿಯವರು ನಿದ್ದೆಯಿಲ್ಲದೆ ರಾತ್ರಿಯನ್ನು ಕಳೆದರು. ಇದರಿಂದ ಅವರ ಆರೋಗ್ಯದಲ್ಲಿ ಮಹತ್ವದ ಸುಧಾರಣೆ ಕಂಡು ಬಂದಿದೆ.

‘ ಅನಂತರ ಇಲ್ಲಿ ಎಲ್ಲೋ ಪೂರ್ವದ ರಾಜ್ಯದಲ್ಲಿ ಕೋಮುವಾದಿ ಕೋಮಿನ ಕೋಮುವಾದಿ ಮುಖಂಡನನ್ನು ‘ದೇಶ ಭಕ್ತರು’ (ಅವರು ಯಾವ ದೇಶಕ್ಕೆ ಭಕ್ತರು ಎಂದು ಕೇಳಿದ್ದಕ್ಕೆ ಆಫ್ ದಿ ರೆಕಾರ್ಡ್ ಉತ್ತರ ಕೊಟ್ಟಿದ್ದನ್ನು ನಾವಿಲ್ಲಿ ಎಡಿಟ್ ಮಾಡಿದ್ದೇವೆ – ಸಂ) ತೆಗೆದರು. ಇದರಿಂದ ಕೋಮುವಾದಿಗಳು ಅಲ್ಪಸಂಖ್ಯಾತರ ಮೇಲೆ ‘ಮಾರಣ ಹೋಮ’ ನಡೆಸಿದರು. ಇದನ್ನು ಕೆಲವು ತಲೆ ಕೆಟ್ಟ ಮಂದಿ ಹಿಂದೆ ಇಂದಿರಮ್ಮ ಸತ್ತಾಗ ಸಿಖ್ಖರ ಮೇಲೆ ನಡೆಸಿದ ‘ಹೋರಾಟ’ಕ್ಕೆ ಹೋಲಿಸುತ್ತಾರೆ. ಅದೇ ಬೇರೆ ಇದೇ ಬೇರೆ ಅಂತ ಇವರಿಗೆ ಗೊತ್ತಿಲ್ಲ. ಹೀಗೆ ಅಲ್ಪ ಸಂಖ್ಯಾತರ ಮೇಲೆ ಕೋಮುವಾದಿಗಳ ಅಟ್ಟಹಾಸದಿಂದ ನಮ್ಮ ನಿಧಾನಿಗೆ ಹೊಟ್ಟೆಗೆ ಸರಿಯಾಗಿ ಊಟ ಸೇರಲಿಲ್ಲ, ನಿದ್ದೆಯಂತೂ ಮಾರು ದೂರದಲ್ಲಿ ನಿಂತಿತು. ಇಡೀ ದೇಶ ಇದಕ್ಕಾಗಿ ಅವಮಾನ ಪಡಬೇಕು ಎಂದರು.

‘ಹೀಗೆ ಆಗಾಗ ಇಂಥ ಘಟನೆಗಳು ದೇಶದಲ್ಲಿ ನಡೆದರೆ ನಮ್ಮ ನಿಧಾನಿಯವರ ಆರೋಗ್ಯ ಕಟ್ಟುಮಸ್ತಾಗಿರುತ್ತದೆ ಎಂದು ಈ ಮೂಲಕ ತಿಳಿಸಲು ಇಚ್ಚಿಸುತ್ತೇನೆ’.

ನಿಧಾನಿಯವರ ಆರೋಗ್ಯ ಎಂದರೆ ಕೈ ಪಕ್ಷದ ಓಟ್ ಬ್ಯಾಂಕೇ ಎಂದು ಕೇಳಬೇಕು ಎಂದುಕೊಳ್ಳುವಷ್ಟರಲ್ಲಿ ಸಂಪರ್ಕ ಕಡಿದುಹೋಗಿತ್ತು.