ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.
……………………………………………………
ವಾರೆ ಕೋರೆ ಬಿಡುಗಡೆ
ಜಗತ್ತಿನಾದ್ಯಂತ ಭಾರಿ ಕುತೂಹಲ ಉಂಟು ಮಾಡಿದ್ದ ಕನ್ನಡ ಹಾಸ್ಯ ಪತ್ರಿಕೆ ವಾರೆ ಕೋರೆ ಬಿಡುಗಡೆಯಾಯಿತು. ಕನ್ನಡ ನಾಡಿನಲ್ಲಿ ತುಂಟರಗಾಳಿಯನ್ನು ಎಬ್ಬಿಸಲು ಸಂಕಲ್ಪ ತೊಟ್ಟಿರುವ ಪ್ರಕಾಶ್ ಶೆಟ್ಟಿಯವರಿಗೆ ಅಭಿನಂದನೆಗಳು.
ಪತ್ರಿಕೆ ಬಿಡುಗಡೆಯ ಫೊಟೊ… ನಿದ್ರೇವೇಗೌಡರ ಅ‘ಮೃತ’ ಹಸ್ತದಿಂದ ಪತ್ರಿಕೆ ಬಿಡುಗಡೆ
ಬಿಡುಗಡೆ ಕಾರ್ಯಕ್ರಮದ ವರದಿ…
ಬೊಗಳೆ ರಗಳೆ
ವಸ್ತುನಿಷ್ಠ ಹಾಗೂ ವ್ಯಕ್ತಿ ಕಷ್ಟ ವರದಿಗಾರಿಕೆಯಲ್ಲಿ ಎತ್ತಿದ ಕೈ ಎಂಬ ಕುಖ್ಯಾತಿಯನ್ನು ಸಂಪಾದಿಸಿ ಸುಸ್ತಾಗಿರುವ ಬೊಗಳೆ ರಗಳೆ ಬ್ಯೂರೋ ಬೇರೆಲ್ಲಾ ಪತ್ರಿಕೆಗಳು ವರದಿ ಮಾಡದ ಸುದ್ದಿಗಳನ್ನು ವರದಿ ಮಾಡುವ ಕಾಯಕವನ್ನು ಮುಂದುವರೆಸಿದೆ.
ಕರುನಾಟಕದ ಅಮುಖ್ಯಮಂತ್ರಿಯವರು ಬೆಳಗಿನ ಉಪಹಾರಕ್ಕೆ ಇಡ್ಲಿ ವಡೆಯನ್ನು ತಿನ್ನುತ್ತಾರೆ ಎಂಬ ಸುದ್ದಿಯನ್ನು ಬೆನ್ನತ್ತಿ ವಿಸ್ತೃತವಾದ ವರದಿಯನ್ನು ಮಾಡಿದ್ದಾರೆ.
“ರಾಜ್ಯದ ಅಮುಖ್ಯಮಂತ್ರಿಗಳು ಬೆಳಗ್ಗಿನ ಉಪಾಹಾರಕ್ಕೆ ಇಡ್ಲಿ ವಡೆ ತಿನ್ನುತ್ತಾರೆ ಎಂದು ವರದ್ದಿಯಾಗಿರುವುದು ತನಿಖೆಗೆ ಅರ್ಹ ಎಂದು ಬೊಗಳೂರು ಓದುಗರೆಲ್ಲರೂ ಪ್ರತಿಭಟನೆ ಮಾಡಿರುವುದರಿಂದ ಒತ್ತಡಕ್ಕೆ ಮಣಿದ ನಮ್ಮ ಅನ್ವೇಷಣಾ ಬ್ಯುರೋ, ರದ್ದಿಗಾರರನ್ನು ಅಟ್ಟಾಡಿಸಿ ಕಳುಹಿಸಿತು.”
ಸುದ್ದಿಗೆ ಸಂಬಂಧ ಪಟ್ಟವರು ಪಡವರು ಹೀಗೆ ಯಾರ್ಯಾರನ್ನೆಲ್ಲಾ ಹಿಡಿದು ಸುದ್ದಿಯನ್ನು ಪಡೆಯಬೇಕು ಎಂಬುದಕ್ಕೆ ಯುವ ಉತ್ಸಾಹಿ ಪತ್ರಿಕೋದ್ಯಮದ ವಿದ್ಯಾರ್ಥಿನಿಯರಿಗೆ ಈ ವರದಿ ದಾರಿ ದೀಪವಾಗಲಿದೆ.
ಪಂಚ್ ಲೈನ್
ಓದುಗರನ್ನು ಗಾಬರಿ ಪಡಿಸುವುದಕ್ಕಾಗಿಯೋ ಇಲ್ಲವೇ ಓಡಿಸುವುದಕ್ಕಾಗಿಯೋ ಹೊಸ ಹೊಸ ಅವತಾರಗಳನ್ನೆತ್ತುವೆ ಎಂದು ವೀರ ಪ್ರತಿಜ್ಞೆ ಮಾಡಿರುವ ಪಂಚ್ ಲೈನ್ ಧೀರ ಗಣೇಶರು ಪರೀಕ್ಷೆಯ ನಂತರ ಪಂಚ್ ಲೈನಿಗೆ ಮರಳುವುದಾಗಿ ಮಾತು ಕೊಟ್ಟಿದ್ದರು. ಆದರೆ ವೇದಿಕೆಯ ಮೇಲೆ ನಾಟಕದ ಡೈಲಾಗಿನ ಪಂಚನ್ನೂ, ಲೈನನ್ನೂ ಮರೆತಂತೆ ಬ್ಲಾಗನ್ನು ಮರೆತಿರುವ ಹಾಗಿದೆ. ಅವರಿಗೆ ಈ ಮೂಲಕ ಸಾಮ್ರಾಟರುನ ನೆನಪಿಸುವುದೆಂದರೆ, ಮಾತು ಉಳಿಸಿಕೊಳ್ಳದಿದ್ದ ಆ ಶ್ರೀಕೃಷ್ಣನನ್ನೇ ಜನರು ಮರೆತು ‘ದೇವರಿದ್ದಾನಾ?’ ಎಂದು ಪ್ರಶ್ನಿಸುತ್ತಿದ್ದಾರೆ, ಇನ್ನು ಅವರಂತಹ ಹುಲುಮಾನವರ ಗತಿ ಏನು? ಆದಷ್ಟು ಬೇಗ ಗಣೇಶ್ ಪಂಚಿನ ಮೇಲೆ ಪಂಚುಗಳನ್ನು ರವಾನಿಸಲಿ ಎಂಬುದು ನಮ್ಮ ಅಶಯ.
ಮಜಾವಾಣಿ
ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವೂ, ಎಲ್ಲಿಲ್ಲವೋ ಸತ್ಯದ ಸುಳಿವು ಅಲ್ಲಿ ನಾವಿರುತ್ತೇವೆ ಎಂದು ಅಭಯ ನೀಡಿರುವ ಮಜಾವಾಣಿಯ ಸಂಪಾದ ಮಹಾಶಯರು ವಾಣಿಯನ್ನು ಮರೆತು ‘ಮಜಾ’ ಮಾಡುತ್ತಿರುವಂತಿದೆ ಎಂದು ಸಾಮ್ರಾಟರು ಗಡ್ಡ ಬೋಳಿಸುವ ಸಂಸ್ಥೆಯ ನೌಕರರು ಆಡಿಕೊಳ್ಳುತ್ತಿದ್ದಾರೆ.
ಬ್ಲಾಗ್ ಸ್ಪಾಟಿನಿಂದ ಫೇರಿಕಿತ್ತ ಮೇಲೆ ಮಜಾವಾಣಿ ಸೊರಗಿದೆಯೇ ಎಂಬ ಬಗ್ಗೆ ಲೋಕಾಯುಕ್ತ ತನಿಖೆಯನ್ನೂ, ಮಜಾವಾಣಿಯ ಸಂಪಾದಕರು ಪತ್ರಿಕಾ ಧರ್ಮ ಮೆರೆಯುವುದಕ್ಕೆ ಮಂಗಳೂರಿನ ಕಡೆಯ ಅಮ್ನೇಶಿಯಾ ಪ್ರವೇಶಿಸಿ ದಿವಂಗತರಾದರೋ ಎಂಬುದನ್ನು ಪತ್ತೆಹಚ್ಚಲು ನಮ್ಮ ಚೇಲ ಕುಚೇಲನ ತನಿಖೆಯನ್ನು ನಾವು ಆದೇಶಿಸಿದ್ದೇವೆ.
ಬ್ಲಾಗ್ ಬೀಟ್ 9
17 ಜೂನ್ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ಸುದ್ದೀಶ. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.
………………………………………………………………
ಬೊಗಳೆ ರಗಳೆ
ಇಂಧನ ಬೆಲೆಯೇರಿಕೆಯ ವಿರುದ್ಧ ವಾಹನ ಚಾಲಕರು ಬೈದಾಡಿ ಬಾಯಿ ಸೇವೆ ಮುಗಿಸಿಕೊಂಡು ತಮ್ಮ ಗಾಡಿಗಳಿಗೆ ಇಂಧನ ತುಂಬಿಸಿಕೊಂಡು ರೊಯ್ಯನೆ ಹೊರಡುತ್ತಿರುವಾಗ ಬೊಗಳೆ ರಗಳೆರ ಸೊಂಪಾದಕರಿಗೆ ಸಂಕಟದ ಸ್ಥಿತಿ ಬಂದಿದೆ. ಬೊಗಳೆ ಬಿಡುವುದರಲ್ಲಿ ಬೊಗಳೂರಿನಲ್ಲೇ ಫೇಮಸ್ಸಾದ ಸೊಂಪಾದಕರನ್ನೇ ಮೀರಿಸುವ ಹಾಗೆ ಎಡ, ಬಲ ಪಕ್ಷಗಳು, ಕೈ ಕಾಲು ಪಕ್ಷಗಳು, ನಿಧಾನ ಮಂತ್ರಿ, ಪಿತ್ಥ ಸಚಿವರು ಬೊಗಳೆ ಬಿಡುತ್ತಿರುವುದನ್ನು ಕಂಡು ಅಕ್ಷರಶಃ ಕಂಗಾಲಾಗಿದ್ದಾರೆ.
ವಿಜ್ಞಾನಿಗಳು ಗಾಳ ಹಾಕಿ ಮೀನುಗಳನ್ನು ಹಿಡಿಯುವ ಕೋತಿಯನ್ನು ಪತ್ತೇ ಹಚ್ಚಿರುವುದನ್ನು ಎಸ್.ಎಂ.ಎಸ್ ಮೂಲಕ ತಿಳಿದು ಗಾಬರಿಯಿಂದ ನಾಪತ್ತೆಯಾಗಿದ್ದ ಏಕಸದಸ್ಯ ಬ್ಯೂರೋದ ಸಮಸ್ತ ಸಿಬ್ಬಂದಿ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಏಕೆಂದಿರಾ? ಇಲ್ಲಿ ಓದಿ…
ಪ್ರಕಾಶ್ ಶೆಟ್ಟಿ ಗೆರೆಗಳ ಪಂಚ್
ಬೆಲೆಯೇರಿಕೆ, ಪೆಟ್ರೋಲು ಬೆಲೆ ತುಟ್ಟಿ… ಕಾಂಗ್ರೆಸ್ ಸರಕಾರದ ನಿಷ್ಠೆಯ ನವೀಕರಣ… ಎಲ್ಲಕ್ಕೂ ಪ್ರಕಾಶ್ ಶೆಟ್ಟಿ ಗೆರೆಗಳನ್ನು ಕೊಟ್ಟಿದ್ದಾರೆ, ಗೆರೆಗಳ ಮೂಲಕ ಬರೆ ಎಳೆದಿದ್ದಾರೆ. ಇಲ್ಲಿ ನೋಡಿ ೧ ೨ ೩.
ಪಂಚ್ ಲೈನ್
ಪಂಚಿಗಾಗಿ ಲೈನುಗಳನ್ನು ಬರೆಯುವ ಗಣೇಶ್ ಬಹುದೊಡ್ಡ ಮ್ಯಾನೇಜ್ ಮೆಂಟ್ ಗುರುವಾಗುವ ಎಲ್ಲಾ ಲಕ್ಷಣಗಳನ್ನು ತೋರ್ಪಡಿಸುತ್ತಿದ್ದಾರೆ. ಅವರ ಇತ್ತೀಚಿನ ಪಂಚ್ ಸಾಲುಗಳನ್ನೇ ನೋಡಿ…
ಕೊಲೆ ಮಾಡಿಯೂ ಶಿಕ್ಷೆ ಅನುಭವಿಸಬಾರದೆಂದರೆ ಏನು ಮಾಡಬೇಕು?
ನಿಷ್ಪಕ್ಷಪಾತ, ಸತ್ಯನಿಷ್ಠತೆ, ನ್ಯಾಯಯುತ ಸುದ್ದಿಗೆ ಅತ್ಯುತ್ತಮ ಉದಾಹರಣೆ ಯಾವುದು?
ಪೆಟ್ರೋಲ್ ಡಿಸೇಲ್ ಬೆಲೆ ಗಗನಕ್ಕೇರಿದೆ ನಾವೇನು ಮಾಡಬಹುದು?
ಕಾಲ ಚಕ್ರ
ಸಮೃದ್ಧ ಸರಕಾರಕ್ಕೆ ಮೂರೇ ಗೇಣು ಎಂದು ಹಲುಬುತ್ತಿರುವ ಬಿಜೆಪಿ ಸರಕಾರ ಭಿನ್ನಮತೀಯತೆಯನ್ನು ಶಮನ ಮಾಡಿ ಶವಸಂಸ್ಕಾರ ಮಾಡುವುದಕ್ಕೆ ಏನು ಮಾಡಬೇಕು ಅನ್ನೋ ಪ್ರಶ್ನೆಗೆ ನಮ್ ನಂಜ ಹಿಂಗಂತ ಉತ್ತರಿಸವ್ನೆ ಇಲ್ಲಿ… ‘ಹಂಗಲ್ಲ ಸರ್ರ, ಕೊನಿಗೆ ನೂರಾ ಹತ್ತು ಜನಕ್ಕ ನೂರಾ ಹತ್ತು ಮಂತ್ರಿಗಳಾದ್ರೂ ಆದ್ರೆ ಆವಾಗ ಭಿನ್ನ ಮತಾನೇ ಇರಂಗಿಲ್ಲ ಏನಂತೀರಿ…’
………………………………………………………………
ಕಳೆದ ಸಂಚಿಕೆಯ ಬ್ಲಾಗ್ ಬೀಟ್
ಟ್ಯಾಗ್ ಗಳು:ಗಣೇಶ್, ಪಂಚ್ ಲೈನ್, ಪ್ರಕಾಶ್ ಶೆಟ್ಟಿ, ಬೊಗಳೆ ರಗಳೆ, ಬ್ಲಾಗ್ಸ್, blogs, comments