Tag Archives: ಪತ್ರಿಕೆ

ನಗೆ ನಗಾರಿ ಮಾಸಪತ್ರಿಕೆ ಮಾರುಕಟೆಯಲ್ಲಿ!

1 ಏಪ್ರಿಲ್

 

ನಗೆ ನಗಾರಿಯ ಸಾಮ್ರಾಜ್ಯದ ಸಮಸ್ತ ಪ್ರಜೆಗಳಿಗೂ ಸಂತಸದ ಸುದ್ದಿ.

ನಗೆ ನಗಾರಿ ಡಾಟ್ ಕಾಮ್ ತನ್ನ ಒಂದು ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಸಂದರ್ಭದಲ್ಲೇ ಈ ಸವಿ ಸುದ್ದಿಯನ್ನು ಹಂಚಿಕೊಳ್ಳಬೇಕಿತ್ತು. ಆದರೆ ಸಿದ್ಧತೆಯ ಕೊರತೆಯಿಂದ ಪ್ರಕಟಿಸಲು ಹಿಂದುಮುಂದು ನೋಡಿದೆವು. ಆದರೀಗ ಬಹುತೇಕ ನಿಶ್ಚಿತವಾಗಿದೆ. ‘ನಗೆ ನಗಾರಿ’ ಮಾಸಪತ್ರಿಕೆ ಇಂದಿನಿಂದ ನಿಮಗೆ ರಾಜ್ಯದ ಎಲ್ಲಾ ಪುಸ್ತಕದಂಗಡಿಗಳಲ್ಲಿ ಲಭ್ಯವಿದೆ.

ನಗೆ ನಗಾರಿಯ ಬ್ಲಾಗಿನಲ್ಲಿನ ವೈವಿಧ್ಯಮಯ ಹಾಸ್ಯದ ಸರಕನ್ನು ಆನಂದಿಸಿದ ಪ್ರತಿಯೊಬ್ಬರಿಗೂ ಈ ಪತ್ರಿಕೆಯ ನಮ್ಮ ಪ್ರಯತ್ನ ಆವಶ್ಯಕವಾಗಿ ಸಂತೋಷ ನೀಡುತ್ತದೆ ಎಂಬ ನಂಬಿಕೆ ನಮ್ಮದು.

ಪ್ರಥಮ ಸಂಚಿಕೆಯ ವಿಶೇಷತೆಗಳು ಇಂತಿವೆ:

ಮುಖಪುಟ ಲೇಖನ – ಮುಂದಿನ ಪ್ರಧಾನಿ ಯಾರು? ನಗೆ ನಗಾರಿ ವಿಶೇಷ ಸಮೀಕ್ಷಾ ವರದಿ.

ಖ್ಯಾತ ಹಾಸ್ಯ ಕವಿ – ಹನಿಕವಿ ಮಿನಿಕವಿ – ಡುಂಡಿರಾಜರ ಅಂಕಣ

ಹೆಸರಾಂತ ನಿರ್ದೇಶಕ ರಮೇಶ್ ಅರವಿಂದ್ ಬರೆಯುವ ಅಂಕಣ

ಖ್ಯಾತ ಪತ್ರಕರ್ತ ರವಿ ಬೆಳಗೆರೆಯವರ ಸಂದರ್ಶನ

ಕೋಕಿಲ ಸಾಧುರವರ ವಿಶೇಷ ಲೇಖನ

ವಿಜಯ ಕರ್ನಾಟಕದ ಉಪ ಸಂಪಾದಕರಾದ ಪ್ರತಾಪ್ ಸಿಂಹರ ಹಾಸ್ಯ ಲೇಖನ ಮಾಲೆ.

ಇನ್ನೂ ಇವೆ…

ಈ ಕೂಡಲೇ ನಿಮ್ಮ ಸಂಚಿಕೆಯನ್ನು ಕಾದಿರಿಸಿ. ಹತ್ತಿರದ ಪುಸ್ತಕದಂಗಡಿಗೆ ಭೇಟಿ ಕೊಡಿ.

ಇಲ್ಲವಾದರೆ ನಿಮ್ಮ ವಿಳಾಸವನ್ನು ತಿಳಿಸಿ ನಮಗೊಂದು (nagesamrat@gmail.com) ಮಿಂಚಂಚೆ ಹಾಕಿ.

ನೀವೂ ಜನಪ್ರಿಯ ಅಂಕಣಕಾರರಾಗಬಹುದು!

17 ಮಾರ್ಚ್

(ಮೊದಲ ಭಾಗ)

೪. ಗುರಿಯ ಸ್ಪಷ್ಟತೆಯಿರಲಿ

ಅಂಕಣ ಬರಹಗಾರನಿಗೆ ತನ್ನ ಅಂಕಣವನ್ನು ಓದುವವರು ಯಾರು ಎಂಬ ಬಗ್ಗೆ ಸ್ಪಷ್ಟತೆ ಇರಬೇಕು. ಆ ಸೂರ್ಯನಿಗೇ ಇಡೀ ಜಗತ್ತನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ. ಹೀಗಿರುವಾಗ ಹುಲುಮಾನವನಾದ ಅಂಕಣಕಾರ ಎಲ್ಲರನ್ನೂ ಮೆಚ್ಚಿಸಬೇಕೆನ್ನುವುದು ಅಸಾಧ್ಯವಾದ ಸಂಗತಿ. ತಾನು ಮೆಚ್ಚಿಸಬೇಕಾದ್ದು ತನ್ನ ಅಂಕಣವನ್ನು ಓದುವ ವರ್ಗವನ್ನು ಎಂಬುದನ್ನು ಅಂಕಣಕಾರ ಬಹುಬೇಗ ಮನದಟ್ಟು ಮಾಡಿಕೊಳ್ಳಬೇಕು.
ನಿಮ್ಮ ಅಂಕಣ ಬರಹಕ್ಕೆ ಯುವಕರೇ ಪ್ರಮುಖವಾದ ಓದುಗರು ಎನ್ನುವುದಾದರೆ ಓಂ ಪ್ರಕಾಶ್ ಸಿನೆಮಾದ ಡೈಲಾಗ್ ಮಾದರಿಯಲ್ಲಿ ಹೆಡ್ಡಿಂಗುಗಳನ್ನೂ ಲೇಖನದಲ್ಲಿ ಪಂಚ್ ಲೈನ್‌ಗಳನ್ನೂ ಬಳಸಬೇಕು. ನಿಮ್ಮ ಓದುಗರು ಹೆಂಗಸರು ಎಂದಾದರೆ ಎಸ್.ನಾರಾಯಣ್ ಧಾರಾವಾಹಿ ಮಾದರಿಯಲ್ಲಿ ಬರೆಯಬೇಕು. ಒಟ್ಟಿನಲ್ಲಿ ನೀವು ಯಾರಿಗಾಗಿ ಬರೆಯುತ್ತಿರುವಿರಿ ಎಂಬುದನ್ನು ಯಾವಾಗಲೂ ಸ್ಪಷ್ಟವಾಗಿ ನೆನಪಿಟ್ಟುಕೊಂಡಿರಬೇಕು.

೫. ಗಾಳಿಯೊಂದಿಗೆ ಗುದ್ದಾಡು

ಒಂದು ವಿಷಯದ ಬಗ್ಗೆ, ಯಾವುದಾದರೊಂದು ಕ್ಷೇತ್ರದಲ್ಲಿ ಅರಿಣಿತಿಯನ್ನು ಗಳಿಸಿ ಟೆಕ್ಸ್ಟ್ ಬುಕ್ ಬರೆದ ಹಾಗೆ ಅಂಕಣ ಬರೆಯುವವರು ಇದ್ದಾರೆ. ಅವರ ಅಂಕಣಗಳನ್ನು ಆಸಕ್ತರು ಹಾಗೂ ನಿರಾಸಕ್ತಿರೂ ಇಬ್ಬರೂ ಟೆಕ್ಸ್ಟ್ ಬುಕ್ ಓದಿದ ಹಾಗೆಯೇ ಓದಿಕೊಳ್ಳುತ್ತಾರೆ. ಅಂಥವರನ್ನು ಜನಪ್ರಿಯ ಅಂಕಣಕಾರ ಎನ್ನಲು ಸಾಧ್ಯವಾಗದು.
ಅಂಕಣಕಾರ ಜನಪ್ರಿಯನಾಗಬೇಕಾದರೆ ಗಾಳಿಯೊಂದಿಗೆ ಗುದ್ದಾಡಬೇಕು, ಹತ್ತಿಯ ಮೂಟೆಯ ಮೇಲೆ ತನ್ನ ಬಾಕ್ಸಿಂಗ್ ಕೌಶಲ್ಯವನ್ನು ತೋರಬೇಕು, ಸಗಣಿಯೊಂದಿಗೆ ಸಖ್ಯ ಬೆಳೆಸಿಕೊಳ್ಳಬೇಕು, ಕೊಳಚೆಯ ಅಭಿಮಾನಿಯಾಗಿರಬೇಕು.
ಅರ್ಥವಾಗಲಿಲ್ಲವೇ, ವಿವರಿಸುತ್ತೇವೆ ಕೇಳಿ: ಅಂಕಣಕಾರ ತನ್ನ ಪರಿಣಿತಿಯ ಕ್ಷೇತ್ರದಲ್ಲಿನ ವಿಷಯಗಳ ಬಗ್ಗೆ ಎಷ್ಟೇ ಪ್ರಖರವಾಗಿ ಬರೆದರೂ ಎಲ್ಲರಿಗೂ ಅಪೀಲ್ ಮಾಡಲಾಗುವುದಿಲ್ಲ. ಅದಕ್ಕೆ ಆತ ಗಾಳಿಯ ಹಾಗೆ ಎಲ್ಲರಿಗೂ ಅನುಭವಕ್ಕೆ ಬಂದ, ಎಲ್ಲರಿಗೂ ಲಭ್ಯವಾದ ವಿಷಯ ಆರಿಸಿಕೊಳ್ಳಬೇಕು. ಹಾಗೆಯೇ ಹತ್ತಿಯ ಚೀಲದಂತಹ ಟಾಪಿಕ್ಕುಗಳನ್ನು ಇಟ್ಟುಕೊಳ್ಳಬೇಕು, ತನ್ನ ಪಂಚಿಂಗ್ ಕೌಶಲ್ಯವನ್ನು ತೋರಿಸುತ್ತಾ ಹೋಗಬೇಕು. ಉದಾಹರಣೆಗೆ ಗಾಂಧೀಜಿ, ಧರ್ಮ, ದೇಶಪ್ರೇಮ ಇಂಥವನ್ನೇ ತೆಗೆದುಕೊಳ್ಳಿ. ಇವು ಎಲ್ಲರಿಗೂ ಸಂಬಂಧಿಸಿದವು. ಗಾಂಧೀಜಿಗೆ ನೂರಾ ಎಂಟು ಪ್ರಶ್ನೆಗಳು ಎಂದು ಪುಂಖಾನುಪುಂಖವಾಗಿ ಪ್ರಶ್ನೆಗಳನ್ನು ಎಸೆದು ಲೇಖನ ಬರೀರಿ ಉತ್ತರ ಕೊಡೋಕೆ ಗಾಂಧಿ ಇದ್ರೆ ತಾನೆ ಭಯ? ಹಂಗೇ ಧರ್ಮ ಅಂತ ಇಟ್ಕೊಂಡು ನಿಮಗೆ ಸರಿ ಕಂಡಿದ್ದನ್ನು ಕಾಣದ್ದನ್ನೆಲ್ಲಾ ಗೀಚಿ ಹಾಕಿ, ನಿಮಗೆ ನಿಮ್ಮ ಓದುಗರು ಬಹುಸಂಖ್ಯಾತರಾಗಿರುವುದು ಯಾವ ಧರ್ಮದವರು ಎಂಬ ಸ್ಪಷ್ಟತೆ ಇರುತ್ತದಾದ್ದರಿಂದ ತೊಂದರೆಯಾಗುವುದಿಲ್ಲ.
ಸಗಣಿಯೊಂದಿಗೆ ಸಖ್ಯವೆಂದರೆ, ಅತ್ಯಂತ ಜನಪ್ರಿಯ ಅಂಕಣಕಾರನಾದವನಿಗೆ ಸಗಣಿ ಎಸೆಯುವ, ಮುಖಕ್ಕೆ ಮಸಿ ಬಳಿಯುವ ಕಲೆ ಕರಗತವಾಗಿರಲೇ ಬೇಕು. ಅದೆಂತಹ ಒಳ್ಳೆಯ ವ್ಯಕ್ತಿಯನ್ನೇ ಟೀಕಿಸುವುದಿದ್ದರೂ ನೀವು ಬಳಸುವ ಸಗಣಿ, ಮಸಿಯಿಂದ ಖುದ್ದು ಆ ವ್ಯಕ್ತಿಗೇ ತನ್ನ ಬಗ್ಗೆ ತನಗೆ ಸಂಶಯ ಬಂದುಬಿಡಬೇಕು. ಇದಕ್ಕೆ ವಕೀಲಿ ವೃತ್ತಿಯ ಗೆಳೆಯರಿಂದ ವಾದಕ್ಕೆ ತಯಾರಿಯನ್ನೂ, ಬೀದಿಜಗಳ ಪ್ರವೀಣರಿಂದ ವಿತಂಡವಾದದ ಅಭ್ಯಾಸವನ್ನೂ, ನಡೆದಾಡುವ ಅವಾಚ್ಯ ಶಬ್ಧಕೋಶಗಳಿಂದ ಬೈಗುಳ, ಆರೋಪಗಳನ್ನು ಕಡ ತೆಗೆದುಕೊಳ್ಳಬೇಕು.
ಬರ್ನಾಡ್ ಶಾ ಒಮ್ಮೆ ಹೇಳಿದಂತೆ, “ಹಂದಿಯೊಂದಿಗೆ ಕಿತ್ತಾಡಬೇಡ. ಹೆಚ್ಚು ಕಿತಾಡಿದಷ್ಟು ನೀನು ಕೊಳಕಾಗುತ್ತೀ ಆದ್ರೆ ಹಂದಿ ಅದನ್ನ ಎಂಜಾಯ್ ಮಾಡ್ತಾ ಹೋಗುತ್ತೆ” ಅಂತ. ಈ ತತ್ವವನ್ನು ಬಳಸಿದರೆ ನಿಮಗೆ ಸರಿಸಾಟಿಯೇ ಇರರು.

೬. ಸಂಗ್ರಹ ಬುದ್ಧಿ ಅವಶ್ಯಕ

ಅಂಕಣಕಾರನಿಗಿರುವ ಅತಿ ದೊಡ್ಡ ಸವಲತ್ತು ಎಂದರೆ ಆತ ಕೇವಲ ತನ್ನ ಸ್ವಂತದ್ದನ್ನೇ ಬರೆಯಬೇಕೆಂದಿಲ್ಲ. ಅಥವಾ ಸ್ವಂತದ್ದೆನ್ನುವುದ್ಯಾವುದನ್ನೂ ಬರೆಯಬೇಕೆಂದಿಲ್ಲ. ತನ್ನ ವಾದಕ್ಕೆ ಪೂರಕವಾಗಿ ಅನ್ಯರು ಹೇಳಿದ್ದನ್ನೆಲ್ಲಾ ಸಂಗ್ರಹಿಸಿ ಸೊಗಸಾಗಿ ಒಂದು ಖೌದಿ ಹೊಲಿದು ಬಿಟ್ಟರೆ ಸಾಕು.
ಉದಾಹರಣೆಗೆ ದೇವಸ್ಥಾನದ ಗರ್ಭಗುಡಿಯಲ್ಲಿ ಮೈಕ್ರೋಫೋನ್ ಬಳಸಬೇಕೇ ಬೇಡವೇ ಎಂದು ವಿವಾದವೆದ್ದಿದೆ ಎಂದು ಭಾವಿಸಿ. ಆಗ ಅಂಕಣಕಾರನಾದವನು ತನ್ನ ವಾದಕ್ಕೆ ಪೂರಕವಾಗಿ ಕೋಟ್ ಬಳಸಬಹುದು. ಮೈಕ್ರೋಫೋನ್ ಬಳಸುವುದು ನಿಷಿದ್ಧ ಎಂಬ ಅಭಿಪ್ರಾಯ ಬಿಂಬಿಸ ಹೊರಟವ “ದೇವರ ಪಿಸುಮಾತು ತಲುಪಬೇಕಾದ್ದು ಕಿವಿಗಳಿಗಲ್ಲ, ಹೃದಯಕ್ಕೆ” – ವಾಲ್ಮೀಕಿ ಮಹರ್ಷಿ ಎಂದೂ, ಮೈಕ್ರೋಫೋನ್ ಬಳಕೆಯನ್ನು ಅನುಮೋದಿಸುವವ “ಪುರೋಹಿತಶಾಹಿಯ ಸಂಚಿನ ಗುಟ್ಟು ರಟ್ಟಾಗುವುದಕ್ಕೆ ಬೇಕೇ ಬೇಕು ಡಂಗೂರ” – ವಿಶ್ವಾಮಿತ್ರ ಮಹರ್ಷಿ ಎಂದು ಕೋಟ್ ಬಳಸಬೇಕು. ಇದರಿಂದ ನಿಮ್ಮ ವಾದವನ್ನು ಮಂಡಿಸುವುದರ ಜೊತೆಗೆ ನಿಮ್ಮ ವಾದಕ್ಕೆ ಎಂತೆಂಥ ದೊಡ್ಡವರ ಬೆಂಬಲವಿದೆ ಎಂದು ತೋರ್ಪಡಿಸಿದ ಹಾಗೂ ಆಗುತ್ತೆ. ಜೊತೆಗೆ ವಾಲ್ಮೀಕಿಯಾಗಲಿ, ವಿಶ್ವಾಮಿತ್ರರಾಗಲಿ ಹೀಗೆ ಹೇಳಿದ್ದರು, ಮೈಕ್ರೋಫೋನಿನ ಬಗ್ಗೆ ತಿಳಿದಿದ್ದರು ಎನ್ನುವುದಕ್ಕೆ ಯಾವ ಸಾಕ್ಷಿಯೂ ಇರದು.
ಈ ತಂತ್ರದ ಸೂಕ್ತ ಬಳಕೆಗೆ ಅತ್ಯಂತ ಉಪಯುಕ್ತವಾದ ಸಾಧನ ಅಂತರಜಾಲ.

ಹೆಸರಾಂತ ಅಂಕಣಕಾರರಾಗುವುದಕ್ಕೆ ಬೇಕಾದ ರಹಸ್ಯ ಸೂತ್ರಗಳನ್ನು ಕೇಳಿದಿರಿ. ಭಕ್ತಿಯಿಂದ, ಶ್ರದ್ಧೆಯಿಂದ ಇವನ್ನೆಲ್ಲಾ ಪಾಲಿಸಿದರೆ ಅವಶ್ಯಕವಾಗಿ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಕಡೆಗೆ ಇವೆಲ್ಲವನ್ನೂ ಸರಳಗೊಳಿಸಿ ಒಂದು ಮೆಥಾಡಲಜಿಯನ್ನು ಹೇಳಲಿ ಬಯಸುತ್ತೇವೆ.

ಒಂದು ವಾರದ ಅಂಕಣವನ್ನು ಸಿದ್ಧ ಪಡಿಸಲು ಪಾಲಿಸಬೇಕಾದ ಅತ್ಯಂತ ಸರಳ ಪದ್ಧತಿ:
೧. ನಾಲ್ಕೂ ದಿಕ್ಕಲ್ಲಿ ಕಣ್ಣು ಹಾಯಿಸಿ ಬಿಸಿ ಬಿಸಿಯಾಗಿರುವ ವಿಷಯ ಆಯ್ದುಕೊಳ್ಳಿ.
೨. ವಿಷಯದ ಪರವಾಗಿ ಇಲ್ಲವೇ ವಿರುದ್ಧವಾಗಿ ಮಾತ್ರ ಬರೆಯಿರಿ. ಅಡ್ಡಗೋಡೆ ಮೇಲಿಟ್ಟ ದೀಪಕ್ಕೆ ಎಣ್ಣೆ ದಂಡ ಎಂಬುದು ನೆನಪಿರಲಿ.
೩. ವಿಷಯದ ಪರ, ವಿರುದ್ಧ ವಹಿಸುವುದು ಕಷ್ಟವಾದರೆ ಒಂದ್ರುಪಾಯಿ ನಾಣ್ಯ ತೂರಿ ನಿರ್ಧರಿಸಿ.
೪. ಅನಂತರ ನಿಮ್ಮ ವಾದಕ್ಕೆ ಪೂರಕವಾಗಿ ಲಭ್ಯವಿರುವ ಮಾಹಿತಿಯನ್ನು ಅಂತರಜಾಲದಿಂದ, ನಿಮ್ಮ ವಾದ ಬೆಂಬಲಿಸುವ ಮೂಲಭೂತವಾದಿಗಳಿಂದ, ಪುಸ್ತಕಗಳಿಂದ ಸಂಗ್ರಹಿಸಿಕೊಳ್ಳಿ.
೫. ಕೆಲವು ಕಡೆ ಕೋಟ್ ಮಾಡುತ್ತಾ ಉಳಿದಂತೆ ಸಂಗ್ರಹಿಸಿದ ಮಾಹಿತಿಯನ್ನೆಲ್ಲಾ ನಿಮ್ಮದೇ ಎನ್ನುವಂತೆ ಬರೀರಿ.
೬. ನಿಮ್ಮನ್ನು ಮೆಚ್ಚಿ, ನಿಮ್ಮ ಪ್ರತಿ ಅಂಕಣವನ್ನು ಕೊಂಡಾಡುವ ಓದುಗರ ಪತ್ರಗಳು ಮಾತ್ರ ಪತ್ರಿಕೆಯಲ್ಲಿ ಪ್ರಕಟವಾಗುವಂತೆ ನೋಡಿಕೊಳ್ಳಿ. ಅಂಥದ್ದು ಯಾವುದೂ ಬರದಿದ್ದರೆ ನೀವೇ ಓದುಗರ ಹೆಸರಲ್ಲಿ ಬರೆದುಕೊಂಡು ಪ್ರಕಟಿಸಿ.

ಇವನ್ನು ಪಾಲಿಸಿ ಪ್ರತಿಯೊಬ್ಬರೂ ಅತ್ಯುತ್ತಮ ಕಾಲಮಿಸ್ಟರಾಗಿ ಎಂದು ಹಾರೈಸುತ್ತೇವೆ.

ಪ್ರಖ್ಯಾತ ಅಂಕಣಕಾರರಾಗುವುದು ಹೇಗೆ?

16 ಮಾರ್ಚ್

ಈ ಹಿಂದೆ ನಾವು ಉತ್ತಮ ಕವಿಯಾಗಲು ನೀಡಿದ್ದ ಪಂಚ ಸೂತ್ರಗಳನ್ನು ಬಳಸಿ ಅತ್ಯಂತ ಯಶಸ್ವಿ ಕವನಗಳನ್ನು ಗೀಚಿ ಕವಿಯಾದ ಅನೇಕರು ನಮ್ಮನ್ನು ಅಭಿನಂದಿಸಿದ ಹಿನ್ನೆಲೆಯಲ್ಲಿ ಅಂದು ಶುರು ಮಾಡಿದ್ದ ಸಾಹಿತ್ಯ ಅಭಿಯಾನವನ್ನು ಮುಂದುವರೆಸಲು ನಿರ್ಧರಿಸಿದ್ದೇವೆ.

ಈ ಮಾಲಿಕೆಯ ಎರಡನೆಯ ಆವೃತ್ತಿಯಲ್ಲಿ ನಾವು ಅತಿ ಸಾಮಾನ್ಯ ಬರಹಗಾರ ಕೂಡ ‘ಪ್ರಖ್ಯಾತ ಅಂಕಣಕಾರನಾಗುವುದು ಹೇಗೆ?’ ಎಂದು ತಿಳಿಸಿಕೊಡುತ್ತೇವೆ. ಎಂದಿನಂತೆ ನಮ್ಮ ಸಲಹೆ ಸೂಚನೆಗಳು ಅತ್ಯಂತ ಚುಟುಕಾಗಿಯೂ, ಸ್ಪುಟವಾಗಿಯೂ, ಪರಿಣಾಮಕಾರಿಯಾಗಿಯೂ ಇರುತ್ತವೆಂಬುದನ್ನು ನೆನಪಿಸಬೇಕಿಲ್ಲ. ಹಾಗಾದರೆ, ಭಯ, ಭಕ್ತಿ, ಶ್ರದ್ಧೆಗಳಿಂದ ನಮ್ಮ ಉಪದೇಶ ಕೇಳಲು ಸಿದ್ಧರಾಗಿ.

ಅಂಕಣ ಬರಹವೆಂಬುದು ಯಾವ ಸಾಹಿತ್ಯ ಪ್ರಕಾರ ಎಂದು ತಲೆ ಕೆಡಿಸಿಕೊಂಡು ‘ಕೇಶ’ವನ ಕೃಪೆಯಿಂದ ಉಳಿದುಕೊಂಡಿರುವ ನಾಲ್ಕೈದು ಕೇಶ ಕುಡಿಗಳನ್ನು ಉದುರಿಸುವ ಅಗತ್ಯವಿಲ್ಲ. ಬೇರೆಲ್ಲ ಸಾಹಿತ್ಯ ಪ್ರಕಾರಗಳ ಹಾಗೆ ಇದು ತನ್ನ ಹುಟ್ಟನ್ನು ಅತ್ಯಂತ ಶಕ್ತಿಯುತವಾದ ಗುಟ್ಟನ್ನಾಗಿ ಉಳಿಸಿ ಸಂಶೋಧಕರು, ಪಂಡಿತರಿಗೆ ಹೆಮ್ಮೆ ತರುವ ಸರಕಾಗಿಲ್ಲ. ಅಂಕಣ ಬರಹ ಹುಟ್ಟಿದ್ದು ವೃತ್ತ ಪತ್ರಿಕೆಗಳೆಂಬ ಕುಲ ಹುಟ್ಟಿದ ನಂತರ. ಮೊದ ಮೊದಲು ವೃತ್ತ ಪತ್ರಿಕೆಯೆಂಬ ಬಹುದೊಡ್ಡ ಪಾರ್ಕಿಂಗ್ ಲಾಟನ್ನು ಸುದ್ದಿಗಳೆಲ್ಲಾ ಆಕ್ರಮಿಸಿದ ನಂತರ ಅನಾಥವಾಗಿ, ಬೇವಾರ್ಸಿಯಾಗಿ ಉಳಿದಿರುತ್ತಿದ್ದ ಜಾಗವನ್ನು ಈ ‘ಅಂಕಣ ಬರಹ’ಕ್ಕೆ ಬಿಟ್ಟುಕೊಡಲಾಗುತ್ತಿತ್ತು. ಅಷ್ಟಕ್ಕೇ ಚಿಗುರಿಕೊಂಡ ಈ ಅಂಕಣ ಬರಹಗಾರರ ಗಣ ಪ್ರತಿ ಪತ್ರಿಕೆಯಲ್ಲಿ ತನ್ನ ಪಾಲನ್ನು ಭದ್ರ ಮಾಡುವ ಕೆಲಸ ಮಾಡಲು ಶುರು ಮಾಡಿತು. ಈಗ ಅಂಕಣ ಬರಹಗಳಿಲ್ಲದ ಪತ್ರಿಕೆಯನ್ನು ನೋಡಿದರೆ ಕುಂಕುಮವಿಲ್ಲದ ಹೆಣ್ಣಿನ ಹಣೆ ನೋಡಿದ ಹಾಗಾಗುತ್ತೆ(ಈ ವಾಕ್ಯದಲ್ಲಿ ಸ್ತ್ರೀ ವಾದ, ಕೋಮುವಾದ, ಕಾಮವಾದಗಳನ್ನು ಹುಡುಕುವ ಉದ್ಧಟತನ ತೋರಿದವರನ್ನು ಉಗ್ರವಾಗಿ ಶಿಕ್ಷಿಸಲಾಗುವುದು!).

ಇದಿಷ್ಟು ಅಂಕಣ ಬರಹದ ಇತಿಹಾಸ. ಇನ್ನು ಪ್ರಖ್ಯಾತ ಅಂಕಣ ಕಾರನಾಗುವುದಕ್ಕೆ ಪಾಲಿಸಬೇಕಾದ ನಿಯಮಗಳ ಬಗ್ಗೆ ಗಮನ ಹರಿಸೋಣ.

೧. ನಂಬರ್ ಮ್ಯಾಟರ್ಸ್

ಅಂಕಣಕಾರನೊಬ್ಬನ  ಯಶಸ್ಸು ನಿರ್ಧಾರವಾಗುವುದು ಒಂದೇ ಅಂಶದಿಂದ. ಆತನ ಅಂಕಣವನ್ನು ಎಷ್ಟು ಮಂದಿ ಓದುತ್ತಾರೆ? ಮುದ್ರಕ, ಮಾಲೀಕ, ಸಂಪಾದಕ ಹಾಗೂ ಅಂಕಣಕಾರ- ಇಷ್ಟು ಮಂದಿ ಓದುವ ಪ್ರಶಸ್ತಿ ವಿಜೇತ ಬರಹಕ್ಕಿಂತ ಅತಿ ಹೆಚ್ಚು ಮಂದಿ ಓದುವ ಕಳಪೆ ಅಂಕಣ ಯಶಸ್ಸಿನ ಮಾಪಕದಲ್ಲಿ ಹೆಚ್ಚು ಅಂಕ ಗಳಿಸುತ್ತದೆ. ಹೀಗಾಗಿ ಅಂಕಣಕಾರನ ಯಶಸ್ಸು ಆತನ ಓದುಗರ ಸಂಖ್ಯೆಯ ಮೇಲೆ- ಅರ್ಥಾತ್ ಪತ್ರಿಕೆಯ ಓದುಗರ ಸಂಖ್ಯೆಯ ಮೇಲೆ ನಿರ್ಭರವಾಗಿರುತ್ತದೆ.
ಹೀಗಾಗಿ ಮೊದಲು ಅತ್ಯಧಿಕ ಪ್ರಸಾರ ಹೊಂದಿರುವ ಪತ್ರಿಕೆ ಯಾವುದು ಎಂಬುದನ್ನು ತಿಳಿದುಕೊಳ್ಳಿ. ಅನಂತರ ಆ ಪತ್ರಿಕೆಯ ಸಂಪಾದಕರ ಹೆಂಡತಿಯ ತವರು ಮನೆಯ ದಿಕ್ಕು, ಸಂಪಾದಕರ ಕಾರು ಚಾಲಕನ ಮನೆಯ ಓಣಿ, ಸಂಪಾದಕರ ಪೆನ್ನಿನ ಶಾಯಿ ಸರಬರಾಜು ಮಾಡುವವನ ವಿಳಾಸ, ಅವರ ಬಟ್ಟೆಗೆ ಇಸ್ತ್ರಿ ತಿಕ್ಕುವವನ ವಿವರ, ಸಂಪಾದಕರು ಅಡ್ಡ ಬೀಳುವ ಮಠಗಳು, ಸೆಲ್ಯೂಟು ಹೊಡೆಯುವ ಮಂತ್ರಿ ಮಹೋದಯರ ಬಗ್ಗೆ ಮಾಹಿತಿ ಸಂಗ್ರಹಿಸಿ. ಅಂಕಣಕ್ಕೆ ಬೇಕಾದ ವಿಷಯ ಸಂಗ್ರಹದಲ್ಲಿ ನ್ಯೂನ್ಯತೆಯಿದ್ದರೂ ಈ ಮುಂಚೆ ತಿಳಿಸಿದ ವಿವರಗಳ ಸಂಗ್ರಹದಲ್ಲಿ ಚಿಕ್ಕ ಲೋಪವೂ ಆಗಬಾರದು. ಸಂಗ್ರಹವಾದ ಮಾಹಿತಿಯ ಆಧಾರದ ಮೇಲೆ ಯಾರ ಕಾಲುಗಳಿಗೆ ಎಷ್ಟು ನಿಮಿಷ ಮಸಾಜ್ ಮಾಡಬೇಕು, ಯಾರ ಅಂಗೈಗೆ ಎಷ್ಟು ಶಾಖ ಕೊಡಬೇಕು ಎಂಬುದನ್ನು ತೀರ್ಮಾನಿಸಬೇಕು. ಆ ಮೂಲಕ ಅಂಕಣಕಾರನ ಸ್ಥಾನಮಾನವನ್ನು ಸಂಪಾದಿಸಿಕೊಳ್ಳಬೇಕು. ಎಲೆಯ ಮರೆಯ ಕಾಯಿಯಾಗಿ ಉಳಿಯುವುದು ನಿಮ್ಮ ಆದರ್ಶವಾದರೆ ಈ ಸಲಹೆಯನ್ನು ಕಸದ ಬುಟ್ಟಿಗೆ ಹಾಕಿ.

೨. ನಿರಂತರತೆಯೇ ತಾಯಿ ತಂದೆ

ಒಮ್ಮೆ ನೀವು ಅಂಕಣಕಾರನ ಸ್ಥಾನಮಾನವನ್ನು ಪಡೆದ ಮೇಲೆ ಅತ್ಯಂತ ತುರ್ತಿನಲ್ಲಿ ರೂಢಿಸಿಕೊಳ್ಳಬೇಕಾದ ಗುಣವೆಂದರೆ ನಿರಂತರತೆ. ನಿರಂತರವಾಗಿಲ್ಲದ ಗಂಗಾಜಲಕ್ಕಿಂತ ನಿರಂತರವಾದ, ಅಡೆತಡೆಯಿಲ್ಲದ ಕೊಚ್ಚೆ ನೀರು ನಮ್ಮ ಪತ್ರಿಕೆಗಳಿಗೆ ಅತಿ ಮುಖ್ಯ. ಹೀಗಾಗಿ ಕವಿಗಳ ಹಾಗೆ ಲಹರಿ ಬಂದಾಗ ಬರೆಯುವ, ಸ್ಪೂರ್ತಿಗಾಗಿ, ಪ್ರೇರಣೆಗಾಗಿ ಬೀದಿ ಸುತ್ತುವ ಹಾಗಿಲ್ಲ. ನಿಂತ ಭಂಗಿಯಲ್ಲೇ ಟಿಕೆಟ್ ವಿವರಗಳನ್ನು ಗೀಚಿಕೊಳ್ಳುವ ಬಸ್ ಕಂಡಕ್ಟರನ ಹಾಗೆ ಬರೆದು ಬಿಸಾಕುವ ತಾಕತ್ತು ಮೊದಲು ರೂಢಿಸಿಕೊಳ್ಳಬೇಕು.

೩. ಗಾಳಿ ಬಂದಾಗ ತೂರಿಕೋ

ವಾರಕ್ಕೊಂದು ಅಂಕಣ ಬರೆಯುವುದಕ್ಕೆ ಈ ದಿಶೆಯಲ್ಲಿ ಅನೇಕ ಅಡ್ಡಿ ಆತಂಕಗಳು ಎದುರಾಗುತ್ತವೆ. ಉದಾಹರಣೆಗೆ,  ಅಧ್ಯಯನದ ಕೊರತೆ, ಸತ್ಯಾಸತ್ಯತೆಯ ಪರಿಶೀಲನೆ, ತಥ್ಯಗಳ ತುಲನೆ, ಪೂರ್ವಾಗ್ರಹದಿಂದ ಮುಕ್ತವಾದ ವಿಶ್ಲೇಷಣೆ ಮುಂತಾದವು. ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾ ಕೂತರೆ ಪ್ರಖ್ಯಾತ ಅಂಕಣಕಾರನಾಗುವುದಕ್ಕೆ ಸಾಧ್ಯವಿಲ್ಲ. ‘ತಾನು ಬರೆಯುವುದೆಲ್ಲ ಸತ್ಯ, ತಾನು ಬರೆದದ್ದು ಮಾತ್ರ ಸತ್ಯ’ ಎಂಬ ಸರಳವಾದ ನಂಬಿಕೆಯನ್ನು ಅಂಕಣಕಾರನಾದವನು ತನ್ನ ಹೃದಯದಲ್ಲಿ ಸುವರ್ಣಾಕ್ಷರಗಳಿಂದ ಕೆತ್ತಿಸಿಟ್ಟುಕೊಳ್ಳಬೇಕು. ಒಂದು ವಿಷಯದ ಬಗ್ಗೆ ಅವರಿವರ ವಾದಗಳನ್ನೆಲ್ಲ ಕೇಳಿ ಸತ್ಯ ಯಾವುದು, ಸುಳ್ಳು ಯಾವುದು ಎಂದು ಪತ್ತೆ ಹಚ್ಚಿ, ಸ್ವತಂತ್ರವಾಗಿ ಅಧ್ಯಯನ ಮಾಡಿ ಅಭಿಪ್ರಾಯ ರೂಪಿಸಿಕೊಂಡು ಒಂದು ಅಂಕಣ ಬರೆಯುವಷ್ಟರಲ್ಲಿ ತಿಂಗಳು ಕಳೆದುಹೋಗಿರುತ್ತದೆ!
ಹೀಗಾಗಿ ಅಂಕಣಕಾರನಾದವನು ಸದಾ ಸಮಾಜಮುಖಿಯಾಗಿರಬೇಕು. ಬಹುಸಂಖ್ಯಾತರ ನಾಡಿಮಿಡಿತದ ತಿಳಿವನ್ನು ಹೊಂದಿರಬೇಕು. ತಾನು ಬರೆದದ್ದು ಸತ್ಯವೋ, ಪೂರ್ವಾಗ್ರಹದಿಂದ ಮುಕ್ತವಾದದ್ದೋ, ರಚನಾತ್ಮಕವಾದದ್ದೋ ಎಂದು ಆಲೋಚಿಸುವುದರಲ್ಲಿ ಸಮಯ ಕಳೆಯದೆ ಜನ ಸಾಮಾನ್ಯರು ಆ ವಿಷಯದ ಬಗ್ಗೆ ಯಾವ ಭಾವನೆ ಹೊಂದಿದ್ದಾರೆ ಎಂಬುದನ್ನು ಗ್ರಹಿಸಬೇಕು. ಗಾಳಿ ಬರುತ್ತಿರುವ ದಿಕ್ಕನ್ನು ಕಂಡುಕೊಂಡು ಅಲ್ಲಿ ತೂರಿಕೊಂಡು ಬಿಡಬೇಕು. ಭಯೋತ್ಪಾದಕ ದಾಳಿಯಾದೊಡನೆ ಅದಕ್ಕೆ ಸಂಬಂಧಿಸಿದ, ಸಂಬಂಧಿಸಿರದ ರಾಜಕಾರಣಿಗಳನ್ನು ಉಗಿಯಬೇಕು, ಸೈನ್ಯವನ್ನು ಹೊಗಳಿ ಅಟ್ಟಕ್ಕೇರಿಸಬೇಕು. ಕ್ರಿಕೆಟ್ ಪಂದ್ಯದಲ್ಲಿ ನಮ್ಮ ತಂಡ ವಿಜಯಿಯಾದರೆ ನಮ್ಮನ್ನು ಗೆಲ್ಲುವವರು ಯಾರಿದ್ದಾರೆ ಎಂದು ಜಗತ್ತಿಗೇ ಸವಾಲು ಎಸೆಯಬೇಕು. ಸತತವಾಗಿ ಸೋಲಲು ಶುರುವಾದರೆ ಒಬ್ಬೊಬ್ಬ ಆಟಗಾರನ ಇತಿಹಾಸವನ್ನೂ ಕೆದಕಿ, ಅವರ ಹಣದಾಸೆಯನ್ನು, ಸ್ವಾರ್ಥವನ್ನು ಜರೆದು ಉಗಿದು ಉಪ್ಪಿನಕಾಯಿ ಹಾಕಬೇಕು. ಅಲ್ಪಸಂಖ್ಯಾತರ ಮೇಲೆ ದಾಳಿ ನಡೆದರೆ, ಮಾರಣ ಹೋಮವೇ ಕಣ್ಣೆದುರು ನಡೆದರೂ ಅದು ಬಹುಸಂಖ್ಯಾತರ ಮೇಲಿನ ನಿರಂತರ ದೌರ್ಜನ್ಯಕ್ಕೆ ಸಣ್ಣ ಪ್ರತಿಕ್ರಿಯೆ ಎನ್ನಬೇಕು, ಸ್ಯೂಡೋ ಸೆಕ್ಯುಲರ್ ಮಾಧ್ಯಮಗಳ ಹುಯಿಲು ಅನ್ನಬೇಕು. ಇಡೀ ಜಗತ್ತಿನ ನೈತಿಕ ಅಧಃಪತನಕ್ಕೆ, ಹಣದ ವ್ಯಾಮೋಹಕ್ಕೆ, ಗೋವಾದ ಬೀಚಿನಲ್ಲಿ ಹೆಚ್ಚುತ್ತಿರುವ ಅತ್ಯಾಚಾರದ ಪ್ರಕರಣಗಳಿಗೆ ಬೆಂಗಳೂರಿನ ಐಟಿ ಬಿಟಿ ಮಂದಿಯೇ ಕಾರಣ ಅನ್ನಬೇಕು.
ಈ ಮಾದರಿಗಳನ್ನು ಅನುಸರಿಸಿದರೆ ಎರಡು ಲಾಭಗಳಿವೆ. ಬಹುಸಂಖ್ಯಾತರ ಭಾವನೆಗೆ ಅಂಕಣಕಾರನಾದವ ಸಹಾನುಕಂಪ ತೋರಿದಂತಾಗುತ್ತದೆ. ಎರಡನೆಯದು ಎಂಥದ್ದೇ ಸಂಕಷ್ಟ ಬಂದರೂ, ಯಾವುದೇ ಟೀಕೆಗಳು ಬಂದರೂ ತಾನು ಜನ ಸಾಮಾನ್ಯರ ಎದೆಯ ಅನಿಸಿಕೆಗೆ ಧ್ವನಿ ಕೊಟ್ಟೆನಷ್ಟೇ ಎಂದು ಡೈಲಾಗ್ ಹೊಡೆದು ತಪ್ಪಿಸಿಕೊಳ್ಳಬಹುದು.

(ಇನ್ನೂ ಉಂಟು)

ಸೀರಿಯಸ್ಲೀ ಸೀರಿಯಸ್ಸು: ಸತ್ತ ನೊಣ, ಹೆಗ್ಗಣಗಳ ಪರಿಮಳ!

14 ನವೆಂ

‘ಕಂಡವರ ತಟ್ಟೆಯಲ್ಲಿನ ಸತ್ತ ನೊಣದ ಬಗ್ಗೆ ಮಾತನಾಡುವ ಮೊದಲು ನಿಮ್ಮ ತಟ್ಟೆಯಲ್ಲಿನ ಸತ್ತ ಹೆಗ್ಗಣವನ್ನು ತೆಗೆದುಹಾಕಿ’ ಎಂಬುದು ಚರ್ಚಾಸ್ಪರ್ಧೆಗಳಲ್ಲಿ ವೀರಾವೇಷದಿಂದ ಹೋರಾಡಿ ಹಲವು ಬಾರಿ ವಿಜಯಿಯಾಗಿ ವಿಜಯಮಾಲೆಯನ್ನು ಧರಿಸಿ ಮೆರೆದು ಜನರು ಮರೆತು ಹೋದವರೂ, ವೀರಮರಣವನ್ನಪ್ಪಿ ನಾಲ್ಕು ಕ್ಷಣ ನೆರೆದವರ ಮೌನಾಚರಣೆಯನ್ನು ಸ್ವೀಕರಿಸಿದವರೂ, ಮುಖಹೇಡಿಗಳಾಗಿ ಹೌಹಾರಿ ಬಸವಳಿದು ಹೋದವರೂ ಎಲ್ಲರಿಗೂ ಪ್ರಿಯವಾದ ವಾಕ್ಯ. ಇದರರ್ಥ ನಿಮ್ಮಲ್ಲಿರುವ ದೊಡ್ಡ ತಪ್ಪನ್ನು ಮೊದಲು ತಿದ್ದಿಕೊಳ್ಳಿ ಆಮೇಲೆ ಇನ್ನೊಬ್ಬರಲ್ಲಿರುವ ಸಣ್ಣ ತಪ್ಪಿನ ಬಗ್ಗೆ ಮಾತನಾಡಲು ನಿಮಗೆ ಅರ್ಹತೆ ಬರುತ್ತದೆ ಎಂದು. ಉದಾಹರಣೆಗೆ: ಕೂದಲಿಗೆ ಶ್ಯಾಂಪೂ ಹಾಕೆ ಬೇಡ, ಹಾಳಾಗುತ್ತವೆ ಎಂದು ತಂದೆ ಮಗನಿಗೆ ಉಪದೇಶ ಮಾಡುತ್ತಾನೆ. ತಂದೆಯ ಬೋಳು ತಲೆಯಲ್ಲಿನ ನಾಲ್ಕು ಕೂದಲುಗಳನ್ನು ಹುಡುಕಿ ತೋರಿಸಿ ಮಗ ಮೇಲಿನ ವಾಕ್ಯವನ್ನು ಹೇಳಬಹುದು.

ಇಷ್ಟು ಪೀಠಿಕೆಯನ್ನು ಬಯಸುವ ಸಂಗತಿಯಾಗುವುದು ಎಂಬುದು ನಿಮ್ಮಂತಹ ಬುದ್ಧಿವಂತರಿಗೂ ಹೊಳೆದಿರಲಾಗದು. ಇಷ್ಟು ದಿನ ಭಾರತದ ಯಾವ ಮೂಲೆಯಲ್ಲಿ ಬಾಂಬುಗಳು ಸಿಡಿದರೂ, ಸಿಡಿಯದೆ ಮಲಗಿ ನಿದ್ದೆ ಹೋದರೂ, ಬಾಂಬಿನ ಸದ್ದು ಮಾಡುವ ಆನೆ ಪಟಾಕಿ ಅಬ್ಬರಿಸಿದರೂ, ನಾಲ್ಕು ಮಂದಿ ತಲೆಗೆ ಬಿಳಿಯ ಟೊಪ್ಪಿ ತೊಟ್ಟವರು ಒಂದೇ ದಿನ ಕಾಣೆಯಾದರೂ ‘ಭಯೋತ್ಪಾದನೆ’, ‘ಉಗ್ರವಾದ’, ‘ಮೂಲಭೂತವಾದ’, ‘ಮತಾಂಧತೆ’ ಎಂದೆಲ್ಲಾ ದಿನಪತ್ರಿಕೆಗಳ ಅಂಕಣಕೋರರು, ವಾರಪತ್ರಿಕೆಗಳ ಸೊಂಪಾದಕರು ಅಂಕಣಗಳ ಮೇಲೆ ಅಂಕಣಗಳನ್ನು ಚಚ್ಚುತ್ತಿದ್ದರು. ಕೆಲವರು ಅಲ್ ಖೈದ, ಮಷ್ಕಿರಿ ತೊಯ್ಬಾ, ಮಜಾಹಿದ್ದೀನ್ ಎಂದೆಲ್ಲಾ ಯಾರಿಗೂ ಅರ್ಥವಾಗದ ಶಬ್ಧಗಳ ದಾಳಿಯನ್ನು ಮಾಡುತ್ತಾ ಜನಸಾಮಾನ್ಯರನ್ನು ಭಯಭೀತರನ್ನಾಗಿಸುತ್ತಿದ್ದರು. ಕೇಸರಿ ಪಾರ್ಟಿಯಂತೂ ಪರಮ ತತ್ವಜ್ಞಾನಿಯ ಫೋಸಿಗೆ ರೆಡಿಯಾಗುತ್ತಾ ‘ನಾವು ಯಾವ ಕಾಲದಿಂದ ಹೇಳುತ್ತಾ ಬಂದಿದ್ದೇವೆ, ಅವರ ಮತಾಂಧತೆ ಹೆಚ್ಚಾಯಿತು ಅಂತ, ನೀವು ಕೇಳಲಿಲ್ಲ. ಸರಕಾರದ ಮೃದು ಧೋರಣೆಯಿಂದಾಗಿ ಗಟ್ಟಿ ಗಟ್ಟಿ ಬಾಂಬುಗಳು ಸ್ಪೋಟಗೊಳ್ಳುತ್ತಿವೆ. ನಮ್ಮವರನ್ನು ನೋಡಿ ಎಂದಿಗೂ ಒಬ್ಬರ ಮೇಲೆ ಕೈ ಎತ್ತಿದವರಲ್ಲ. ನಮ್ಮವರು ಯಾರ ಮೇಲಾದರೂ ದಂಡೆತ್ತಿ ಹೋದ ಉದಾಹರಣೆ ಇತಿಹಾಸದಲ್ಲಿ ಸ್ಯಾಂಪಲ್ಲಿಗಾದರೂ ಇದ್ದರೆ ತೋರಿಸಿ ನಾವು ಪ್ರಸ್ತುತ ಹಾಕಿಕೊಂಡಿರುವ ಶಾರ್ಟ್ಸ್ ಕಳಚಿ ನಿಮ್ಮಂತೆ ಪ್ಯಾಂಟು ತೊಡುತ್ತೇವೆ.’ ಎಂದು ಮೈಕುಗಳ ಮುಂದೆ ವಾಗ್ಝರಿಯನ್ನು ಹರಿಸಿ ಮೈಕನ್ನೂ, ನೋಡುಗರ ಕಣ್ಣುಗಳನ್ನು ಒದ್ದೆಯಾಗಿಸುತ್ತಿದ್ದರು.

ಇವರಿಗೆ ವಿರುದ್ಧವಾದದ್ದನ್ನೇ ಹೇಳುತ್ತಾ ಬಂದಿರುವ ಹ್ಯಾಂಡ್ ಪಾರ್ಟಿಯವರು ಆಡಳಿತದಲ್ಲಿದ್ದಾಗ ಅದರ ಹೋಂ ಮಿನಿಸ್ಟರು, ‘ಉಗ್ರವಾದವನ್ನು ನಾವು ಯಾವ ಕಾರಣಕ್ಕೂ ಸಹಿಸುವುದಿಲ್ಲ. ಭಯೋತ್ಪಾದಕರನ್ನು ಕಂಡಲ್ಲಿ ಗುಂಡಿಕ್ಕಿ ಕೊಂದು ಸೆರೆಹಿಡಿದು ನ್ಯಾಯಾಲಯದ ಮುಂದೆ ನಿಲ್ಲಿಸುತ್ತೇವೆ. ಭಯೋತ್ಪಾದಕರ ಒತ್ತಾಯಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ’ ನಾಲ್ಕೈದು ಸೂಟು ಬದಲಿಸುವ ನಡುವೆ ಸಮಯ ಮಾಡಿಕೊಂಡು ಹಿಂದಿನ ಹೇಳಿಕೆಯನ್ನೇ ನೆನಪಿನಿಂದ ಹೊರತೆಗೆದು ಮರು ಉಚ್ಚರಿಸಿ ಬೆವರೊರೆಸಿಕೊಳ್ಳುತ್ತಾರೆ. ಅಲ್ಲಿ ಇಲ್ಲಿ ಕೆಲವು ಭೂಮಿಯ ಮೇಲಿನ ಏಕೈಕ ಬುದ್ಧಿವಂತ ಪ್ರಾಣಿಗಳು ‘ಭಯೋತ್ಪಾದನೆಗೆ ಯಾವ ಧರ್ಮವನ್ನೂ ಹೊಣೆಯಾಗಿಸಲು ಸಾಧ್ಯವಿಲ್ಲ. ಒಂದು ಸಮಾಜ ಶಾಂತಿಯಿಂದ ಇದೆ ಎಂದರೆ, ಸಹಬಾಳ್ವೆ ಬ್ರಾತೃತ್ವವನ್ನು ಪಾಲಿಸುತ್ತಿದೆ, ಸರ್ವರಿಗೂ ಸ್ವತಂತ್ರವನ್ನು ಕೊಟ್ಟಿದೆ ಎಂದಾಗ ಅದಕ್ಕೆ ಅವರು ಪಾಲಿಸುವ ಧರ್ಮ, ಅವರ ಸಂಸ್ಕಾರವನ್ನು ಹೊಣೆ ಮಾಡಬೇಕು. ಆದರೆ ಅವರು ಹಿಂಸೆಗಿಳಿದು ಮುಗ್ಧ ಮಕ್ಕಳ, ಅಮಾಯಕರ ಪ್ರಾಣವನ್ನು ತೆಗೆಯುವಾಗ, ತಮ್ಮ ದೇಶವನ್ನೇ ಒಡೆದೊಡೆದು ದಳ್ಳುರಿಯಲ್ಲಿ ಬೇಯಿಸುವಾಗ ಅದಕ್ಕೆ ಧರ್ಮವನ್ನು ಹೊಣೆ ಮಾಡಬಾರದು. ಭಯೋತ್ಪಾದನಕನಿಗೆ ಧರ್ಮವಿಲ್ಲ. ಆತನ ಕೃತ್ಯಗಳೆಲ್ಲವೂ ಸ್ವಂತ ವಿವೇಚನೆಯಿಂದ ಬಂದವು.’ ಎಂದು ಘನಘಂಬೀರವಾದ ವಿಚಾರವನ್ನು ಮಂಡಿಸಿ ಗಡ್ಡ ಕೆರೆಯುತ್ತಾ ನಿಂತಿರುವಾಗ ಹ್ಯಾಂಡ್ ಪಕ್ಷದ ವಕ್ತಾರ ಬಂದು ‘ನಾವು ಅದನ್ನೇ ಹೇಳುತ್ತಿದ್ದದ್ದು, ಭಯೋತ್ಪಾದನೆಗೆ ಧರ್ಮ ಕಾರಣವಲ್ಲ. ಹಾಗೆಯೇ ಭಯೋತ್ಪಾದನೆಯನ್ನು ಮತದ ಹೆಸರು ಹೇಳಿ ಕರೆಯುವುದು ತಪ್ಪು. ಭಯೋತ್ಪಾದಕರದು ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆಯ ವಿರುದ್ಧದ ಬಂಡಾಯದ ದನಿ’ ಎಂದು ಉಸುರುತ್ತಾರೆ. ಕೇಸರಿ ಪಕ್ಷದವರು ಇವರಿಬ್ಬರ ಮಾತುಗಳನ್ನು ಕೇಳುತ್ತಾ ಚಿದ್ವಿಲಾಸದ ನಗೆ ಬೀರುತ್ತಾ, ‘ತುಷ್ಟೀಕರಣ’ ಎಂದು  ಉದ್ಗರಿಸುತ್ತಾರೆ.

ಆದರೆ ಕಾಲ ಚಕ್ರ ಉರುಳಿದ ಹಾಗೆ ಚಿದ್ವಿಲಾಸದ ನಗೆ ಬೀರುವವರ ಸರದಿಯೂ ಬದಲಾಗಿದೆ. ಕೇಸರಿ ಪಕ್ಷದವರು ಬೆವರಿಳಿಯುವ ಹಣೆಯನ್ನು ತಮ್ಮ ಜುಬ್ಬಗಳಿಗೆ ತಿಕ್ಕಿಕೊಳ್ಳುತ್ತಿದ್ದರೆ ಹ್ಯಾಂಡಿನವರು ಬೀಗುತ್ತಿದ್ದಾರೆ. ಕೇಸರಿ ಪಕ್ಷದ ಬೆಂಬಲಿಗರು ಬಾಂಬುಗಳನ್ನು ಮಾಡುವಲ್ಲಿ ಹೆಸರು ಮಾಡಿದ್ದಾರೆ, ಹ್ಯಾಂಡಿನವರಷ್ಟು ಚೆನ್ನಾಗಿ ಮಾಡುವುದನ್ನು ಇನ್ನೂ ಕಲಿತಿಲ್ಲವಾದರೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದಾರೆ. ನಾಲ್ಕೈದು ಮಂದಿ ಈ ಮಹಾನ್ ಪ್ರಯೋಗದಲ್ಲಿ ತಮ್ಮ ಜೀವವನ್ನೇ ಹವಿಸ್ಸನ್ನಾಗಿ ಅರ್ಪಿಸಿದ್ದಾರೆ. ಹ್ಯಾಂಡಿನ ಅನುಯಾಯಿಗಳಷ್ಟು ತರಬೇತಿಯನ್ನು ಕೇಸರಿ ಪಕ್ಷದ ಅಭಿಮಾನಿಗಳು ಪಡೆಯಬೇಕು ಎಂಬ ಉದ್ದೇಶದಿಂದ ನೇರವಾಗಿ ಸೇನೆಯಿಂದ ಉನ್ನತ ಅಧಿಕಾರಿಯನ್ನು ತರಬೇತಿ ನೀಡಲು ನೇಮಿಸಲಾಗಿದೆ. ಹಾಗೆಯೇ ಇವರ ಮೇಲೆ ಭಗವಂತನ ಕೃಪೆ ಹೆಚ್ಚಾಗಿರಲಿ ಎಂದು ಸಾಧ್ವಿ ಮಣಿಯವರ ನೆರವನ್ನೂ ಪಡೆಯಲಾಗಿದೆ. ಬುದ್ಧಿಜೀವಿಗಳು ಆಚೆ ಈಚೆ ನೋಡಿ ಮೊದಲು ಯಾರಾದರೂ ಮಾತನಾಡಲಿ ಎಂದು ಕಾಯುತ್ತಿದ್ದಾರೆ. ಕೇಸರಿ ಪಕ್ಷದವರು ಮಾಡುತ್ತಿದ್ದ ಆರೋಪಗಳ ಕಾಪಿಯನ್ನು ಪತ್ರಿಕೆಯ ಕಛೇರಿಗಳಿಂದ ಸ್ಪೀಡ್ ಪೋಸ್ಟಿನಲ್ಲಿ ತರಿಸಿಕೊಂಡ ಹ್ಯಾಂಡ್ ಪಕ್ಷದವರು ಅವನ್ನು ಉರುಹೊಡೆಯುವಲ್ಲಿ ಮಗ್ನರಾಗಿದ್ದರೆ ಕೇಸರಿ ಪಕ್ಷದವರು ಹ್ಯಾಂಡ್ ಪಕ್ಷದವರ ಹೇಳಿಕೆಗಳ ಮೊರೆಹೋಗಿದ್ದಾರೆ. ಈ ಮಧ್ಯೆ ನಗೆ ಸಾಮ್ರಾಟರಂತಹ ಮಾಜಿ ಜವಾಬ್ದಾರಿಯುತ ಪ್ರಜೆಗಳು ಹಾಗೂ ಹಾಲಿ ರಾಜಕೀಯ ವಿಶ್ಲೇಷಕರು ಕೇಸರಿ ಹಾಗೂ ಹ್ಯಾಂಡ್ ಪಕ್ಷಗಳ ಈ ಸಾಮರಸ್ಯವನ್ನು, ಕೊಡುತೆಗೆದುಕೊಳ್ಳುವಿಕೆಯನ್ನು ನಾವು ಇಷ್ಟು ವರ್ಷಗಳ ಇತಿಹಾಸದಲ್ಲಿ ಎಂದಿಗೂ ಕಂಡಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.