Tag Archives: ನಗೆ ಸಾಮ್ರಾಟ್

ವಾರದ ವಿವೇಕ

20 ಆಗಸ್ಟ್

ಪರನಿಂದೆಯಲಿ ಪರಮಸುಖ ಅರಸುವ ಪಡಪೋಶಿ ಎಂಬ ಕುಶಾಲಿನ ಪಟ್ಟ ಬೇಕೆ? ನಿಮ್ಮ ಹೆಸರು ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಪ್ರಕಟವಾಗಬೇಕೆ?

ಹಾಗಿದ್ದರೆ ನಿಮ್ಮ ಕುಶಾಲು ಹರಟೆಯಲ್ಲಿ ,ಅನ್ನಿಸಿದ್ದನ್ನು ಎಗ್ಗಿಲ್ಲದೆ ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವಾಗ, ದೊಡ್ಡವರ ದಡ್ಡತನದ ಬಗ್ಗೆ ಉಡಾಫೆ ಮಾಡುವಾಗ ತುಸು ದೊಡ್ಡ ದನಿಯಲ್ಲಿ ಕನ್ನಡ ಪ್ರಭ ಸಂಪಾದಕರನ್ನು ಬೈದು ಬಿಡಿ.

– ನಗೆ ಸಾಮ್ರಾಟ್

ಸಾಮ್ರಾಟರಿಗೊಂದು ಓಲೆ :‌೨೧ ಕುಶಾಲ ಅನಾದಿ ತಾಳಗಳು

20 ಆಗಸ್ಟ್

ನಲ್ಮೆಯ ನಗೆಸಾಮ್ರಾಟ್,

“ಭಾಗ್ಯದೊಡನೆ ಭೇಟಿ” ನಿಮ್ಮ ಸಾಮ್ರಾಜ್ಯದ ಮುಖಪುಟ ಮರ್ಯಾದೆಗೆ ಪಾತ್ರವಾಗಿರುವುದನ್ನು ಕಂಡು ಆಶ್ಚರ್ಯಾನಂದವಾಯಿತು. ಈ ಲೇಖನಕ್ಕೆ ನಿಮ್ಮ ಹಾಸ್ಯಪ್ರಜ್ಞಾವಂತ ಓದುಗರ ಹರ್ಷಚಿತ್ತವನ್ನು ಭೇಟಿ ಮಾಡುವ ಭಾಗ್ಯವನ್ನು ದೊರಕಿಸಿಕೊಟ್ಟದಕ್ಕಾಗಿ ನನ್ನ *ನಗಾರಖಾನೆಯಿಂದ ನಿಮಗೆ ೨೧ ಕುಶಾಲ ಅನಾದಿತಾಳಗಳು!

-ಎಸ್. ಜಿ. ಸೀತಾರಾಮ್, ಮೈಸೂರು.

*ನಗಾರಖಾನೆ:ನಗಾರಿ ಮತ್ತಿತರ ಬ್ಯಾಂಡ್ ವಾದ್ಯಗಳನ್ನಿಡುವ ಮತ್ತು “ಬಾರಿಸುವ” ಜಾಗ. ಗೌರವ, ಮರ್ಯಾದೆ, ಸಂತೋಷಗಳ ಸೂಚನೆಗಾಗಿ ೨೧ ಕುಶಾಲ ತೋಪುಗಳನ್ನು (gun salute) ನೀಡುವ ಒಂದು ಸಂಪ್ರದಾಯವು ಮೈಸೂರಿನ ಅರಮನೆಯಲ್ಲಿತ್ತು.ಹೆಮ್ಮೆಯ ಎಮ್ಮೆಪುರ (ಮೈಸೂರು = ಮಹಿಷೂರು = Buffaloshire) ಪುತ್ರನಾಗಿ, ಅದೇ ಭವ್ಯ ಭಾವನೆಗಳನ್ನು ನಾನಿಲ್ಲಿ ೨೧ ನಗಾರಿ ತಾಳಗಳ ಮೂಲಕ ಸೂಚಿಸುತ್ತಿದ್ದೇನೆ.

ಭಾಗ್ಯದೊಡನೆ ಭೇಟಿ ಬರಹವನ್ನು ಇಲ್ಲಿ ಓದಬಹುದು.

ಸಂತಾಪಕೀಯ :‌ ಇಗೋ, ಮತ್ತೊಮ್ಮೆ ನಾವು ನಿಮ್ಮ ಮುಂದೆ!

15 ಆಗಸ್ಟ್

ಮೊದಲಿಗೆ ನಮ್ಮ ಸಾಮ್ರಾಜ್ಯದ ನಿಷ್ಠ ಪ್ರಜೆಗಳಿಗೆಲ್ಲ ಸ್ವಾತಂತ್ರ್ಯ ದಿನದ ಶುಭಾಶಯಗಳು. ಸ್ವಾತಂತ್ರ್ಯ ದಿನವಲ್ಲವೇ? ಎಲ್ಲರೂ ಸಿಹಿ ತಿನ್ನಿ. ತಿನ್ನಿ ಪರವಾಯಿಲ್ಲ. ಎರಡು ಕ್ಷಣ ನಾವು ಕಣ್ಣು ಮುಚ್ಚಿಕೊಂಡು ಕೂರುತ್ತೇವೆ. ನಮ್ಮ ನಿಷ್ಠಾವಂತ ಪ್ರಜೆಗಳು ಎರಡು ನಿಮಿಷದ ಮಟ್ಟಿಗೆ ತಾವು ಸ್ವತಂತ್ರರು ಎಂದು ಸಂಭ್ರಮಿಸಲು ಅವಕಾಶ ಕೊಡದಷ್ಟು ಕ್ರೂರಿಗಳೇ ನಾವು? ಹ್ಹಾ! ತಿಂದು ಬಿಡಿ ನಾವು ಕಣ್ಣು ಬಿಡುವುದರೊಳಗೆ ಕೈ ಬಾಯಿ ಒರೆಸಿಕೊಂಡು ಶ್ರದ್ಧೆಯಿಂದ ಮಂಡಿಯೂರಿ ಕೂತರೆ ಸಾಕು…

ನೋಡಿ, ಸಾಮ್ರಾಟರೆಂಬ ಪಟ್ಟ ನಾವು ಕೇಳಿ ಪಡೆದುದಲ್ಲ. “ತಮ್ಮ ಶಿಲುಬೆಯನ್ನು ತಾವೇ ಹೊರಬೇಕು” ಎನ್ನುವ ಪರಮಾತ್ಮ ಏಸುವಿನ ಜೀವನ ಸಂದೇಶದಂತೆ ನಾವು ನಮ್ಮ ಈ ಶಿಲುಬೆಯನ್ನು ಹೊತ್ತು ಬಂದಿದ್ದೇವೆ (ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಹೋದಾಗ ಮಾತ್ರ ಕ್ಷಣ ಮಾತ್ರಕ್ಕೆ ಅದನ್ನುವೈಕುಂಟಂ ಕ್ಯೂ ಕಾಂಪ್ಲೆಕ್ಸಿನಲ್ಲಿ ಇರಿಸಿಹೋಗುತ್ತೇವೆ). ನಮ್ಮ ಹೆಗಲ ಮೇಲಿನ ಭಾರ ನಮಗಷ್ಟೇ ಗ್ರಾಸವಾಗುವುದು. ಸಾಮ್ರಾಟರೆಂದ ಮಾತ್ರಕ್ಕೆ ನಾವು ಸರ್ವಾಧಿಕಾರಿಯಂತೆ ವರ್ತಿಸುವುದಕ್ಕೆ ಸಾಧ್ಯವೇ? ನಾವು ಇಷ್ಟು ಕಾಲ ಎಲ್ಲಿದ್ದೆವು, ನಗಾರಿ ಏಕೆ ಮೌನವಾಗಿತ್ತು ಎಂಬೆಲ್ಲ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಬಾಧ್ಯತೆ ನಮ್ಮದು. ಅದನ್ನು ತಪ್ಪಿಸಿಕೊಳ್ಳಲು, ಪ್ರಶ್ನೆ ಕೇಳಿದವರನ್ನು ಅಟ್ಟಿಸಿಕೊಂಡು ಹೋಗುವುದಕ್ಕೆ ನಾವೇನು ವೇಸ್ಟ್ ಬಂಗಾಲದ ದೊರೆಯೇ?

ಇರಲಿ, ನಿಮ್ಮ ಎಲ್ಲಾ ಸಂಶಯ ಸಂದೇಹಗಳಿಗೆ ಎಂದಿನಂತೆ ಪ್ರಜ್ವಲವಾದ ಸತ್ಯದ ಶುಭ್ರವಾದ ಪರದೆಯನ್ನೇ ಎಳೆಯುತ್ತೇವೆ.

ನಿಮಗೆಲ್ಲ ಆಶ್ಚರ್ಯವಾಗಬಹುದು. ನಿಮ್ಮ ಕಿವಿಗಳ ಮೇಲೆ ನಿಮಗೇ ಸಂಶಯ ಹುಟ್ಟಬಹುದು. ಆದರೂ ಕಿವಿಗೊಟ್ಟು ಕೇಳಿ. ನಾವು ನಗೆ ಸಾಮ್ರಾಟರಾದರೂ ಈ ಗೊಡ್ಡು, ನಗೆಹೀನ ಭರತ ಖಂಡಕ್ಕೆ ಸಾಮಂತರು ಮಾತ್ರ. ಇದನ್ನಾಳುವವರು ನಮಗಿಂತ ದೊಡ್ಡವರು. ಈ ದೊಡ್ಡವರ ದಡ್ಡತನ ತಿದ್ದಲ್ಲು ಮಗದೊಬ್ಬ ದೊಡ್ಡಣ್ಣ ಬೇಕು ಎಂದು ಚಳುವಳಿ ಪ್ರಾರಂಭ ಮಾಡಿದರು ಬಣ್ಣಾ ಮಜಾರೆ. ನೀವು ಗುಹೆಯಲ್ಲಿ ತಪಸ್ಸು ಮಾಡುತ್ತ, ಹೊಲದಲ್ಲಿ ಗೇಯುತ್ತ, ಐಐಟಿ ಎಂಟ್ರೆನ್ಸ್ ಎಗ್ಸಾಮಿಗಾಗಿ ಇರುಳು ದೀಪ ಉರಿಸುತ್ತಾ ಕೂತಿರದಿದ್ದರೆ ಖಂಡಿತವಾಗ್ಯೂ ಈ ಚಳುವಳಿ ಬಗ್ಗೆ ಕೇಳೇ ಇರುತ್ತೀರಿ.

ಬಣ್ಣಾ ಮಜಾರೆ ನಾಯಕತ್ವದಲ್ಲಿ ನಾವೂ ಸಹ ಚಳುವಳಿಯಲ್ಲಿ ಧುಮುಕಿದ್ದೆವು. ಐಸ್ ಕ್ರೀಮಿನಲ್ಲಿ ಸ್ವಾದವಿಲ್ಲ, ಚಹಾದಲ್ಲಿ ರುಚಿಯಿಲ್ಲ, ಕಾಫಿಯಲ್ಲಿ ಕೆಫೀನಿಲ್ಲ, ಅನ್ನದಲ್ಲಿ ಕಲ್ಲೇ ಎಲ್ಲ ಎಂದು ದೊಡ್ಡವರ ಕೊರಳ ಪಟ್ಟಿ ಹಿಡಿದು ಕೇಳುವುದಕ್ಕೆ ನಮಗೂ ಮೋಜು. ಗಂಟಲು ಹರಿಯುವಂತೆ ಕೂಗುತ್ತಿದ್ದೆವು. ಇನ್ನೇನು ನಮ್ಮೆಲ್ಲಾ ಕುಂದು ಕೊರತೆಗೆ ಇಲಾಜು ದೊರೆಯಿತು ಅನ್ನುವಷ್ಟರಲ್ಲಿ ಅಪ್ಪಳಿಸಿತೊಂದು ಸಿಡಿಲಾಘಾತ! ಊಟ, ತಿಂಡಿ ಬಿಟ್ಟು ಚಳುವಳಿ ಕೂತಿದ್ದ ಬಣ್ಣಾ ಮಜಾರೆ ಬೇಲಿಯೇ ಎದ್ದು ಹೊಲ ಮೇಯುವುದ ನೋಡೋಕಾಗಲ್ಲ, ಇದನ್ನ ತಡಿಯೋಕೆ ಹೊಲವೇ ಎದ್ದು ಬೇಲಿಯಾಗಬೇಕು ಎಂದು ಬಿಡಬೇಕೆ? ಶೀರ್ಷಾಸನದಲ್ಲಿದ್ದ ವಾಮದೇವ ಗುರೂಜಿ ಚಂಗನೆ ಧ್ವಜ ಸ್ಥಂಭವಾಗಿ ಬಿಟ್ಟರಲ್ಲ!

ನಾವು ಸಂಪೂರ್ಣವಾಗಿ ಭ್ರಮ ನಿರಸನಗೊಂಡು ರುಚಿಯಿಲ್ಲದ ಚಹಾದಲ್ಲಿ ನಮ್ಮೆಲ್ಲ ಹತಾಶೆಯನ್ನು ಮುಳುಗಿಸಿ ಕೈ ತೊಳೆಯುತ್ತಿರುವಾಗ ಇಬ್ಬನಿಯ ಎದೆಯಿಂಡ ಹೊಮ್ಮಿದ ಪರಿಮಳದಂಥ ಸೂರ್ಯನ ಕಾಂತಿಯಂತೆ ಬೆಳಗುವ ನಗೆ ನಗಾರಿ ಕಣ್ಣ ಮುಂದೆ ಬಂದಿತು. ಯಾರದೋ ಬೇಲಿ ಸರಿ ಮಾಡುವ ಉಮ್ಮೇದಿಯಲ್ಲಿ ನಮ್ಮ ಹೊಲವನ್ನು ತೊರೆದು ಹೋದ ಖೇದ ನಮ್ಮನ್ನಾವರಿಸಿತು. ಝಗ್ಗನೆ ಹೊತ್ತಿಕೊಂಡ ಅರಿವಿನ ಪಂಜು ಹಿಡಿದು ನಾವು ವಾಪಾಸ್ಸಾಗಿದ್ದೇವೆ. ನಿಮ್ಮ ಸೇವೆ ಸವಿಯಲು ಸಿದ್ಧರಾಗಿದ್ದೇವೆ.

ಭೋಗರಾಜ ಶೆಟ್ಟರ ಸಂದರ್ಶನ ಅತೀ ಶೀಘ್ರದಲ್ಲಿ…

4 ಸೆಪ್ಟೆಂ

 

ಮಚ್ಚು ಲಾಂಗು ರೇಜರುಗಳ ಸತ್ಸಂಪ್ರದಾಯವನ್ನು ನೆಚ್ಚಿಕೊಂಡು, ಕುರ್ಪು, ಗುನ್ನ, ಡಿಚ್ಚಿಗಳೆಂಬ ದೈವೀ ಪ್ರಭಾವಳಿಯಿಂದ ಸನ್ನಡತೆಯನ್ನು ಕಾಪಾಡಿಕೊಂಡು ಕರುಣಾಜನಕ, ಕರುಳು ಬೇಧಕ ಭಾವುಕ ಪರಂಪರೆಯನ್ನು ಪೊರೆಯುತ್ತಾ ನೆಮ್ಮದಿಯಾಗಿದ್ದ ಕನ್ನಡ ಚಿತ್ರರಂಗಕ್ಕೆ ಹೊತ್ತಲ್ಲದ ಹೊತ್ತಿನಲ್ಲಿ ಮುಂಗಾರು ಹೊಡೆಸಿ ನೆಗಡಿ ಹತ್ತಿಸಿ, ಸಿಂಬಳ ಸುರಿಸುವಂತೆ ಮಾಡಿದ್ದು ನಮ್ಮ ನಿಮ್ಮೆಲ್ಲರ ಮೆಚ್ಚಿನ ಭೋಗರಾಜ ಶೆಟ್ಟರು.

ಸತತ ಮೂರು ಚಿತ್ರಗಳಲ್ಲಿ ಭರ್ಜರಿ ಯಶಸ್ಸನ್ನು ಕಂಡು ಪ್ರಾಯೋಜಕರಾದ ಕಂಪೆನಿಗಳಿಗಿಂತ ಹೆಚ್ಚಿನ ಪ್ರಚಾರವನ್ನು ಪಡೆದುಕೊಂಡ ಶೆಟ್ಟರು ಪೆನ್ನು ಹಿಡಿದುಕೊಂಡರೂ, ಮೈಕು ಹಿಡಿದುಕೊಂಡರೂ, ಇನ್ಯಾರದೂ ಕೈಯಿ ಹಿಡಿದುಕೊಂಡರೂ, ತಮ್ಮದೇ ತಲೆ ಹಿಡಿದುಕೊಂಡರೂ ಮಾಧ್ಯಮಗಳಿಗೆ ಎದ್ದು ಬಿದ್ದು ವರದಿ ಮಾಡಬಹುದಾದ ಸುದ್ದಿ.

ಭೋಗರಾಜ ಶೆಟ್ಟರು ತಮ್ಮ ಸಿನೆಮಾಗಳ ಬಗ್ಗೆ ಎಲ್ಲೂ ಹೆಚ್ಚಾಗಿ ಮಾತನಾಡುವುದಿಲ್ಲ ಎಂದು ಅನೇಕ ಟಿವಿ ಸಂದರ್ಶನಗಳಲ್ಲಿ ತಮ್ಮ ಸಿನೆಮಾವನ್ನು ಪ್ರಮೋಟ್ ಮಾಡುತ್ತಾ ಮಾತನಾಡಿದ್ದಾರೆ. ತಮ್ಮ ಸಿನೆಮಾ ಬದುಕಿನ ಜೊತೆಗೆ ತಮ್ಮ ಸಾಹಿತ್ಯಿಕ ಲೋಕದ ಬಗ್ಗೆಯೂ ಸಂದರ್ಶನಗಳಲ್ಲಿ ಮನಬಿಚ್ಚಿ, ರೆಕ್ಕೆ ಬಿಚ್ಚಿ ಮಾತನಾಡಿದ್ದಾರೆ. ಅವರು ರೆಕ್ಕೆ ಬಿಚ್ಚಿ ಮಾತನಾಡುವ ಕಾರಣಕ್ಕೇ ಅವರು ಪ್ರಶ್ನೆಗಳಿಗೆ ಹಾರಿ ಹಾರಿ ಹಾರಿಕೆಯ ಉತ್ತರ ನೀಡುತ್ತಾರೆ yogarajbhaಎನ್ನುವ ಪ್ರಶಂಸೆಗೆ ವಿನಾಕಾರಣ ಗುರಿಯಾಗಿದ್ದಾರೆ.

ಈ ಹಾರು ಹಕ್ಕಿಯ ಜೊತೆಗೆ ಅಭೂತಪೂರ್ವವಾದ ಸಂದರ್ಶನವೊಂದನ್ನು ಮಾಡಬೇಕೆಂದು ಹಾರಿಕೆಯ ತಜ್ಞರಾದ ಸಾಮ್ರಾಟರಲ್ಲಿ ಕೋರಿಕೆ ಸಲ್ಲಿಸಲಾಯ್ತು. ಕೂಡಲೇ ಸಾಮ್ರಾಟರು ತಮ್ಮಾಪ್ತ ಚೇಲ ಕುಚೇಲನಿಗೆ ಕರೆ ಕಳುಹಿಸಿದರು. ನಾರ್ಕೋ ಲೆಪ್ಸಿಯಿಂದಾಗಿ ಕಂಡ ಕಂಡಲ್ಲಿ, ಕಂಡವರ ಸಂಗಡ ಮಲಗಲು ಶುರುಮಾಡಿದ್ದ ತಮ್ಮ ಆಲ್ಟರ್ ಈಗೋವನ್ನು ಇಗೋ ಇಗಲೇ ಎಳೆದು ತಾ ಎಂದು ಆಜ್ಞಾಪಿಸಿದರು.

ತಮ್ಮ ಬೆನ್ನ ಹಿಂದೆ ತೂಕಡಿಸುತ್ತ ನಿಂತ ಆಲ್ಟರ್ ಈಗೋವನ್ನು ಎಚ್ಚರಿಸಿ ಭೋಗರಾಜ ಶೆಟ್ಟರ ಸಂ-ದರ್ಶನವನ್ನು ಮಾಡಿಕೊಂಡು ಬರಲಿಕ್ಕೆ ಅಟ್ಟಿದರು. ಮಂದ್ರ ಸ್ವರದಲ್ಲಿ ಆಲ್ಟರ್ ಈಗೋ

ಇಂಟ್ರ್ಯು ಮಾಡಿ ಪುಣ್ಯ ಕಟ್ಕೊ

ಯೋಚ್ನೆ ಮಾಡಿ ಗಡ್ಡ ಸುಟ್ಕೊ

ಉತ್ರ ಸಿಗದೆ ಇರುವೆ ಬಿಟ್ಕೊ

ಲೈಫು ಇಷ್ಟೇನೇ…

ಎಂದು ಹಾಡಿಕೊಳ್ಳುತ್ತಾ ಸಂದರ್ಶನಕ್ಕೆ ಮುಂದಾಯಿತು.

ಶೀಘ್ರದಲ್ಲಿ ನಿರೀಕ್ಷಿಸಿ ಭರ್ಜರಿ ನಿರ್ದೇಶಕ ಭೋಗರಾಜ ಶೆಟ್ಟರ ಸಂದರ್ಶನ: ನಗಾರಿಯಲ್ಲಿ ಮಾತ್ರ!

ವಾರದ ವಿವೇಕ 42

15 ಮೇ

………………………

ಸಾವಿರಾರು ಮಂದಿ

ಒಬ್ಬಂಟಿಗಳು ಒಟ್ಟಿಗೇ

ಬದುಕುವ ಜಾಗಕ್ಕೆ

ನಗರ ಎನ್ನುವರು!

………………………

ನಿರೀಕ್ಷಿಸಿ,ಸ್ವಾಮಿ ನಿತ್ಯಕಾಮಾನಂದ ವಿಶೇಷ ಸಂದರ್ಶನ!

10 ಮಾರ್ಚ್

ಮುಖ್ಯವಾಹಿನಿಗಳು ಅಲಕ್ಷಿಸುವ, ಮುಖ್ಯವಾಹಿನಿಗಳನ್ನು ಅಲಕ್ಷಿಸುವ ವ್ಯಕ್ತಿಗಳ ಅಭಿವ್ಯಕ್ತಿಯ ಮಾಧ್ಯಮವಾಗಿ ಅಂತರ್ಜಾಲವು ಬೆಳೆಯುತ್ತಿದೆ. ಈ ಬೆಳವಣಿಗೆಗೆ ನಗೆ ನಗಾರಿ ಡಾಟ್ ಕಾಮ್ ತನ್ನ ಅಳಿಲು ಸೇವೆಯನ್ನು ಸಲ್ಲಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಮುಖ್ಯವಾಹಿನಿಯ ಪತ್ರಕರ್ತರ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಂಡ ಸುದ್ದಿಗಳನ್ನೂ, ಸುದ್ದಿ ಮಾಡುವವರನ್ನೂ ಹೆಕ್ಕಿ ತಂದು ವರದಿ ಮಾಡುವುದು ನಮ್ಮ ಹೆಚ್ಚುಗಾರಿಕೆ. ಇಪ್ಪತ್ನಾಲ್ಕೂ ಗಂಟೆ ಬ್ರೇಕಿಂಗ್ ನ್ಯೂಸ್ ತಂದುಕೊಡುವ ಧಾವಂತದಲ್ಲಿ ನಮ್ಮ ಟಿವಿ ಚಾನಲುಗಳ ಸುದ್ದಿಗಾರರು ಮುರಿದ ಸುದ್ದಿಗಳ ಚೂರುಗಳನ್ನು ಆರಿಸಿಕೊಂಡು ಬಂದು ವರದಿ ಮಾಡಲಿಕ್ಕೆ ನಗಾರಿ ಸುದ್ದಿಚೋರರು ಸದಾ ಸಿದ್ಧರು.

ಈ ಸಂಚಿಕೆಯ ವಿಶೇಷ ಸಂದರ್ಶನಕ್ಕಾಗಿ ಸಾಮ್ರಾಟರು ತಮ್ಮ  alter egoವನ್ನು ಅಲೆಸದ ಜಾಗವಿಲ್ಲ. ಮಾಡಿಸದ ಕೆಲಸವಿಲ್ಲ. ಹತ್ತಾರು ತಾಸುಗಳ ಉಪನ್ಯಾಸದ ವಿಡಿಯೋಗಳಿಂದ ಸಾಧಿಸಲಾಗದ ಜನಪ್ರಿಯತೆಯನ್ನು, ಮಾಧ್ಯಮಗಳ ಒಲುಮೆಯನ್ನು ಹತ್ತೇ ನಿಮಿಷದ ವಿಡಿಯೋ ಕ್ಲಿಪ್ಪಿಂಗಿನಿಂದ ಸಾಧಿಸಿದ ಸ್ವಾಮಿ ನಿತ್ಯಕಾಮಾನಂದರ ಸಂದರ್ಶನ ಪಡೆದೇ ಹಿಂದಿರುಗಬೇಕೆಂದು ಅಪ್ಪಣೆ ಮಾಡಿದ್ದರು. ಸ್ವಾಮಿಯವರು ಸರ್ವಶಕ್ತಿಶಾಲಿಗಳೂ, ಅನೇಕ ದೇಹಗಳನ್ನು ಧರಿಸಬಲ್ಲವರಾದ್ದರಿಂದ ಅವರನ್ನು ಬೆನ್ನಟ್ಟಿ ಹಿಡಿಸು ಸಂದರ್ಶನ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ. ಬಿಡದಿಯಲ್ಲಿನ ದೊಡ್ಡ ದೊಡ್ದ ಪೋಸ್ಟರುಗಳ ಹಿಂದಿನ ಜಾಗದಿಂದ ಹಿಡಿದು ಹಿಮಾಲಯದ ಗುಹೆಗಳವರೆಗೆ ಎಲ್ಲಾ ಜಾಗಗಳನ್ನು ಜಾಲಾಡಿದ್ದಾಯಿತು. ಈ ಸಂದರ್ಭದಲ್ಲಿ ಕೈಯಲ್ಲೊಂದು ಹ್ಯಾಂಡಿಕ್ಯಾಮ್ ಇದ್ದಿದ್ದರೆ ‘ಎಲೆ ಮರೆಯ ಕಾಯಿಯಂತಿರುವ’ ದೇಶದ ಇನ್ನೆಷ್ಟೋ ದೇವಮಾನವರ ಚರಿತ್ರೆ ಬೆಳಕು ಕಾಣುತ್ತಿತ್ತು ಎಂದು ಹಲುಬುತ್ತ ಸಾಮ್ರಾಟರ  alter ego ಕ್ಯಾಮರಾಗಾಗಿ ಅರ್ಜಿ ಹಾಕಿತು.

ಸುತ್ತಾಡಿ ಸುಸ್ತಾಗಿ ದಣಿವಾರಿಸಿಕೊಳ್ಳಲು ಸಾಮ್ರಾಟರ alter ego ಕುಂಭ ಮೇಳದ ಸ್ನಾನ ಮಾಡಿ ಹೊಟೇಲೊಂದರಲ್ಲಿ ಲಸ್ಸಿ ಹೀರುತ್ತಿರುವಾಗ ಅಯಾಚಿತವಾಗಿ ಸಿಕ್ಕವರು ಸ್ವಾಮಿ ನಿತ್ಯಕಾಮಾನಂದ. ಸುತ್ತ ಎಲ್ಲೂ ಕ್ಯಾಮರಾ ಇಲ್ಲದ್ದನ್ನು ಖಾತರಿ ಪಡಿಸಿಕೊಂಡು ಒಂದುವರೆ ತಾಸುಗಳ ‘ದೇಹವನ್ನು ಮೀರಿದ ಅನುಭವ’ ಕೊಡುವ ಧ್ಯಾನ ಮಾಡಿಸಿದ ನಂತರ ಸ್ವಾಮಿಗಳು ಸಂದರ್ಶನಕ್ಕೆ ಸಿದ್ಧರಾದರು.

ಸ್ವಾಮಿಗಳ (ಅಧ್ಯಾತ್ಮ) ರಸಭರಿತ ಸಂದರ್ಶನ ನಗೆ ನಗಾರಿಯಲ್ಲಿ ಶೀಘ್ರವೇ ಪ್ರಕಟವಾಗಲಿದೆ!

ನಿರೀಕ್ಷಿಸಿ ಪ್ರತಂಪು ಸಿಂಹರ ಲೇಖನ!

22 ಫೆಬ್ರ

ನಗೆ ನಗಾರಿಗೆ ಮೊದಲ ವರ್ಷ ತುಂಬಿದಾಗ ಕನ್ನಡದ ಖ್ಯಾತ ಪತ್ರಕರ್ತ ಗವಿ ಬಿಳಿಗೆರೆ ವಿಶೇಷ ಲೇಖನವೊಂದನ್ನು ಬರೆದುಕೊಟ್ಟಿದ್ದರು. ನಗೆ ನಗಾರಿ ಡಾಟ್ ಕಾಮ್ ಬಗ್ಗೆ ಹಾಗೂ ನಮ್ಮ ಬಗ್ಗೆ ಏನಾದರೂ ನಾಲ್ಕು ಮಾತು ಬರೆಯುತ್ತಾರೆ ಎಂದು ನಿರೀಕ್ಷಿಸಿದ್ದ ನಮಗೆ ಗವಿಯವರ ಚಿಕ್ಕ ಆಟೋ`ಭಯಾಗ್ರಫಿ’ ಓದಲು ಸಿಕ್ಕಿತು. ಅದು ನಗಾರಿ ವಿಶೇಷ ಲೇಖನವಾಗುವ ಬದಲು ಗವಿ ಬಿಳಿಗೆರೆ ಸಾಮಾನ್ಯ ಲೇಖನವಾಗಿ ಹೋಗಿತ್ತು.

ಹೀಗಾಗಿ ಎರಡನೆಯ ವರ್ಷದ ಹುಟ್ಟು ಹಬ್ಬದ ಸಂಭ್ರಮಕ್ಕೆ ಯಾರ ಕೈಲಿ ವಿಶೇಷ ಲೇಖನ ಬರೆಸುವುದು ಎಂದು ಚಿಂತೆಗಿಟ್ಟುಕೊಂಡಿತು. ನಾಡಿನ ಹೆಸರಾಂತ ಬರಹಗಾರರಿಗೆಲ್ಲ ತಮ್ಮ ಬಗ್ಗೆಯೇ ಹೇಳಿಕೊಳ್ಳುವುದಕ್ಕೆ ವೇದಿಕೆಗಳು ಸಾಕಾಗುತ್ತಿಲ್ಲ ಹೀಗಿರುವಾಗ ಎರಡು ವರ್ಷ ತುಂಬಿದ ನಗೆ ನಗಾರಿಯ ಬಗ್ಗೆ ಮಾತನಾಡುವವರನ್ನೇ ಆರಿಸಬೇಕು ಎಂಬುದು ನಮ್ಮ ಏಕ ಸದಸ್ಯ ಸಾಮ್ರಾಜ್ಯದ ಒಕ್ಕೊರಲಿನ ತೀರ್ಮಾನವಾಯ್ತು.

ವಸ್ತುನಿಷ್ಠತೆಗೆ ಹೆಸರುವಾಸಿಯಾದ, ಯುವ ಅಂಕಣಕಾರ ನಮ್ಮ ಕಣ್ಣಿಗೆ ಬಿದ್ದರು. ಕಳೆದ ಹಲವು ವರ್ಷಗಳಿಂದ ತಮ್ಮ `ಯುವ ಅಂಕಣಕಾರ’ ಟೈಟಲನ್ನು ಉಳಿಸಿಕೊಂಡು ಬಂದಿರುವ ಶ್ರೀಯುತ ಪ್ರತಂಪು ಸಿಂಹರಿಗೆ ನಮ್ಮ ಸಾಮ್ರಾಜ್ಯದ ಬಗ್ಗೆ ವಿಸ್ತೃತವಾದ ಲೇಖನ ಬರೆಯಲು ಕೇಳಿಕೊಂಡೆವು. ಅದಕ್ಕೆ ಪ್ರತಂಪು ಸಿಂಹರು ಕೂಡಲೇ ಒಪ್ಪಿಕೊಂಡರು. ನಿಮ್ಮ ಹೆಸರಿನಲ್ಲೇ ಲೇಖನ ಬರೆಯಬೇಕು ಎಂದಾಗ ತುಸು ವಿಚಲಿತರಾದರು. ತೊಣಚಪ್ಪ ಎರಡು ನಿಮಿಷ ವಿವರಿಸಿದ ನಂತರ ತಮ್ಮ ಹೆಸರಿನಲ್ಲಿಯೇ ಲೇಖನ ಬರೆಯಲು ಒಪ್ಪಿಕೊಂಡರು.

ಪ್ರತಂಪು ಸಿಂಹರ ವಿಶೇಷ ಲೇಖನವು ಎರಡು ವರ್ಷ ತುಂಬಿದ ಸಂಭ್ರಮದಲ್ಲಿರುವ ನಗಾರಿ ಓದುಗರ ಖುಷಿ ಇಮ್ಮಡಿಸೀತು ಎಂಬುದು ನಮ್ಮ ಆಶಯ!

– ನಗೆ ಸಾಮ್ರಾಟ್

ಓದುಗರ ದುಃಖದ ಮೇಲೆ ಯುದ್ಧ ಜಾರಿಯಲ್ಲಿರಲಿ…..

14 ಫೆಬ್ರ

ತಮ್ಮ ಪತ್ರಿಕೆ, ಬ್ಲಾಗುಗಳ ಹುಟ್ಟು ಹಬ್ಬದ ದಿನ ಅವುಗಳ ಸಂಪಾದಕರು, ಮಾಲೀಕರು ಕಂಡಕಂಡವರಿಂದ ಅಭಿನಂದನೆಗಳನ್ನು ಬೇಡಿ ಪಡೆಯುತ್ತವೆ. ಬ್ಲಾಗನ್ನು ಎಂದೂ ಓದದ ದೊಡ್ಡವರಿಂದ ವಿಮರ್ಶೆಗಳನ್ನು ಸಂಪಾದಿಸಿ ಪ್ರಕಟಿಸುತ್ತವೆ. ನಗೆ ನಗಾರಿ ಡಾಟ್ ಕಾಮ್‌ಗೆ ಎರಡು ವರ್ಷ ತುಂಬಿದ ಸಂತಸದ ಸಂರ್ಭದಲ್ಲಿ ನಾವು ಅದೇ ಸಂಪ್ರದಾಯ ಪಾಲಿಸಲು ಇಚ್ಛಿಸುವುದಿಲ್ಲ.

ನಮ್ಮ ಬ್ಲಾಗಿನ ನಿಯಮಿತ ಓದುಗರಾದ, ಸತ್ರ್ಪಜೆಗಳಾದ ಮಂದಿಯಿಂದ ಅವರ ಪ್ರಾಮಾಣಿಕ ಅನಿಸಿಕೆಯನ್ನ ಕೇಳಿದ್ದೇವೆ. ಅದನ್ನು ಚೂರೂ ಕತ್ತರಿಸದೆ ಪ್ರಕಟಿಸುತ್ತೇವೆ. ನಗೆ ನಗಾರಿ ಡಾಟ್ ಕಾಮ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ನೇರವಾಗಿ ಕಳಿಸಬಹುದು (nagesamrat [at] gmail.com)

– ನಗೆ ಸಾಮ್ರಾಟ್

ಬ್ಲಾಗುಲೋಕದಲ್ಲಿ (ನಿಜವಾದ) ಹಾಸ್ಯ ಸಾಹಿತ್ಯ ತುಂಬಾ ಕಡಿಮೆ ಇದೆ. ಅದರ ಕೊರತೆ ನೀಗಿಸುವಲ್ಲಿ ನಿಮ್ಮ ಪ್ರಯತ್ನ ದೊಡ್ಡದು. ನನಗೆ ಪರ್ಸನಲ್ಲಾಗಿ ಈ ಬ್ಲಾಗ್ ಇಷ್ಟ ಯಾಕೆಂದರೆ ಇದರಲ್ಲಿನ ಜಾಣ್ಮೆಯುಕ್ತ ಬರಹಗಳು. ಹಾಸ್ಯ ಬರೆಯಲು ತುಂಬಾ ಬುದ್ಧಿಶಕ್ತಿ ಬೇಕು ಅನ್ನೋದು ನನ್ನಭಿಪ್ರಾಯ.( "ನನ್ನನ್ನು ನೋಡಿದರೆ ಹಾಗನ್ನಿಸುತ್ತದಾ?" ಅಂತ ಸ್ವತಃ ಅಚ್ಚರಿ ಪಡಬೇಡಿ). ಬರಹದಲ್ಲಿ ಅಲ್ಲದೇ ಪ್ರತಿಕ್ರಿಯೆಯಲ್ಲೂ ನಿಮ್ಮನ್ನು ಕೆಣಕುವುದು, ಅದಕ್ಕೆ ನೀವಿತ್ತ ಉತ್ತರಕ್ಕೆ ಅಚ್ಚರಿ ಪಡುವುದು ಇವು ನನಗಂತೂ ಸಾಮಾನ್ಯವಾಗಿಬಿಟ್ಟಿದೆ.

ಒಂದೆರಡು ಪಾಯಿಂಟುಗಳು ನಿಮ್ಮ ಮುಂದಿನ ದಾರಿಗೆ. ಆಗಾಗ್ಗೆ ಇನ್ನೇನು ನಿಂತುಬಿಡುತ್ತದೆ ಅನ್ನುವ ಭಯ ಪ್ರಜೆಗಳಿಗೆ ಇನ್ನು ಮುಂದಾದರೂ ಮೂಡಿಸದಿರಿ. ಹಾಗೇನೇ ಬರಹದಲ್ಲಿ ಇನ್ನಷ್ಟು ವೈವಿಧ್ಯತೆಗಳು ಬರಲಿ ಎಂಬ ಆಸೆ ವ್ಯಕ್ತಪಡಿಸುತ್ತೇನೆ. ಬರಹಗಳು ಚುರುಕಾಗಲಿ ಮತ್ತು ನಗದವರಿಗೆ ಚುರುಕು ಮುಟ್ಟಿಸಲಿ.

ಹೆಚ್ಚು ಕಾವ್ಯಾತ್ಮಕವಾಗಿ ಹೊಗಳಿದರೂ ನಮಗೆ ಚಿನ್ನದ ಹಾರ, ನೆಕ್ಲೇಸು, ಗಿಫ್ಟ್ ಹ್ಯಾಂಪರ್ರುಗಳು ಈ ಸಾಮ್ರಾಜ್ಯದಲ್ಲಿ ಗಿಟ್ಟುವುದು ಅಷ್ಟರಲ್ಲೇ ಇದೆ ಎಂಬ ಸತ್ಯದ ಅರಿವಿರುವುದರಿಂದ ನನ್ನ ಮಾತು ಇಷ್ಟಕ್ಕೇ ಮುಗಿಸುವೆ.

ಸಾಮ್ರಾಜ್ಯದಲ್ಲಿ ನಗಾರಿ ಮೊಳಗುತಿರಲಿ. ಓದುಗರ ದುಃಖದ ಮೇಲೆ ಯುದ್ಧ ಜಾರಿಯಲ್ಲಿರಲಿ.

-ರಂಜಿತ್ ಅಡಿಗ, ಸಿಂಗಾಪುರ

ಹುಟ್ಟು ಹಬ್ಬಕ್ಕೆ ವಿಷ್ ಮಾಡುವುದಿಲ್ಲವೇ?

13 ಫೆಬ್ರ

ನಗೆ ನಗಾರಿ ಡಾಟ್ ಕಾಮ್ ಎಂಬ ನಗೆಯ ಸಾಮ್ರಾಜ್ಯ ಸ್ಥಾಪನೆಯಾಗಿ ಜನವರಿ ೨೭ಕ್ಕೆ ಎರಡು ವರ್ಷಗಳು ಸಂಪೂರ್ಣವಾದವು. ವಿಜಯ ನಗರ ಸಾಮ್ರಾಜ್ಯದಲ್ಲಿ ಬೀದಿ ಬೀದಿಯಲ್ಲಿ ಮುತ್ತು ರತ್ನಗಳನ್ನು ಅಕ್ಕಿ ಬೇಳೆ ವ್ಯಾಪಾರ ಮಾಡಿದಂತೆ ಮಾರುತ್ತಿದ್ದರಂತೆ. ಆ ಭವ್ಯ ನಗರದ ನೆನಪನ್ನು ಹಸಿರಾಗಿಡುವುದಕ್ಕಾಗಿ ನಮ್ಮ ನಾಯಕರುಗಳು ಮಾಡಿರುವ ಸಾಧನೆಯನ್ನು ನೆನೆಯಲೇಬೇಕು. ಥೇಟ್ ವಿಜಯನಗರದ ಕಾಲದ ಟಾರಿಲ್ಲದ ಬೀದಿಯಲ್ಲಿ ನಿಂತು ಅಕ್ಕಿ ಬೇಳೆಗಳನ್ನು ಮುತ್ತು ರತ್ನಗಳನ್ನು ಕೊಳ್ಳುವ ಹಾಗೆ ಖರೀದಿ ಮಾಡುವ ಭಾಗ್ಯವಂತರು ನಾವೆಲ್ಲ. ನಗಾರಿ ಸಾಮ್ರಾಜ್ಯವೇನು ಕಡಿಮೆಯದಲ್ಲ. ಇಲ್ಲಿ ನಟ್ಟ ನಡು ಬೀದಿಯಲ್ಲಿ ಜನರು ಮುತ್ತುಗಳಂತಹ ತಮ್ಮ ಹಲ್ಲುಗಳನ್ನು ಕಿರಿದು ನಗುವಿನ ವಹಿವಾಟು ನಡೆಸುತ್ತಾರೆ. ಎರಡೇ ವರ್ಷಗಳಲ್ಲಿ ನಲವತ್ಮೂರು ಚಿಲ್ಲರೆ ಸಾವಿರ ಸ್ಮೈಲುಗಳು ಮಿನುಗಿವೆ!

ಈ ಎರಡು ವರ್ಷದಲ್ಲಿ ಏನೇನೆಲ್ಲ ನಡೆದಿದೆ! ಆದರೆ ಇದೆಲ್ಲ ಇನ್ನೂ ಪ್ರಾರಂಭವಷ್ಟೇ… ಎರಡು ವರ್ಷದ ಮಗು ಅಂಗಾಲಿನ ಮೇಲೆ ಚಲಿಸುತ್ತ ಮೆಲ್ಲಗೆ ಗೋಡೆ ಹಿಡಿದು ಎದ್ದು ನಿಲ್ಲುವ ಪ್ರಯತ್ನ ಮಾಡುತ್ತಿದೆ. ನೀವು ಸಾಧ್ಯವಾದಷ್ಟು ನಿಮ್ಮ ಕೈಗಳನ್ನು ದೂರವಿರಿಸಿಕೊಳ್ಳುವ ಮೂಲಕ ಅದರ ಓಟಕ್ಕೆ ನೆರವಾಗ ಬೇಕಾಗಿ ವಿನಂತಿ!

ಎರಡನೆಯ ವರ್ಷದ ಹುಟ್ಟುಹಬ್ಬಕ್ಕೆ ವಿಷ್ ಮಾಡುವುದಿಲ್ಲವೇ?

– ನಗೆ ಸಾಮ್ರಾಟ್

ಆಣೆ ಸವಾಲು ಅಲ್ಪಸಂಖ್ಯಾತರ ಓಲೈಕೆಯ ತಂತ್ರ: ಅಬೋಧ ಕುತಾಲಿಕ್

20 ಜನ

*ನಾರದ
ನಗಾರಿ ವಿಶೇಷ ಪ್ರತಿನಿಧಿ
ಬೆಂಗಳೂರು, ಜ.೨೦

ರಾಜ್ಯ ಕಂಡ ಏಕೈಕ ಮಣ್ಣಿನ ಪ್ರಾಡಕ್ಟ್ ಸೇವೆಗೌಡರ ಮಗ ಜೋಕುಮಾರ ಸ್ವಾಮಿಯವರು ತಮ್ಮ ಮಾಜಿ ಟ್ವೆಂಟಿ ಟ್ವೆಂಟಿ ಪಾರ್ಟನರ್ ಜಡ್ಯುರಪ್ಪನವರು ಧರ್ಮಸ್ಥಳದಲ್ಲಿ ಆಣೆ ಮಾಡಿ ತಮ್ಮ ಸರಕಾರದ ಸಾಚಾತನವನ್ನು ಸಾಬೀತು ಮಾಡಬೇಕು ಎಂದು ಸವಾಲುಹಾಕಿದ್ದಾರೆ. ಇಂದಿನ ಯುವಕರು ದೇವರು, ಧರ್ಮ, ಸರಕಾರ, ರಾಜಕಾರಣಿಗಳಲ್ಲಿ ನಂಬಿಕೆ ಕಳೆದುಕೊಳ್ಳುವ ದುಸ್ಥರ ಸಂದರ್ಭದಲ್ಲಿ ಸರಕಾರದ ಸಾಚಾತನ ಪರೀಕ್ಷಿಸುವುದಕ್ಕೆ ಆಯೋಗಗಳು, ಲೋಕಾಯುಕ್ತ, ನ್ಯಾಯಾಲಯಗಳು, ಶ್ವೇತಪತ್ರ, ಪತ್ರಿಕೆಗಳ ತನಿಖೆ ಇವೇ ಮೊದಲಾದ ಮಾರ್ಗಗಳಿದ್ದರೂ ದೈವಿಕವಾದ ಮಾರ್ಗಕ್ಕೆ ರಾಜಕಾರಣಿಗಳು ಒಲವು ತೋರಿಸಿರುವುದು ಆಶಾದಾಯಕವಾಗಿ ಹಲವರಿಗೆ ಕಂಡಿದೆ. ಇನ್ನೂ ಕೆಲವರು ಪ್ರಜಾಪ್ರಭುತ್ವ, ನ್ಯಾಯಾಲಯದಂತಹ ಇಪ್ಪತ್ತೊಂದನೆಯ ಶತಮಾನದ ನಾಗರೀಕ ವ್ಯವಸ್ಥೆಯಲ್ಲಿದ್ದೂ ಈ ರಾಜಕಾರಣಿಗಳು ಆದಿ ಮಾನವರ ಹಾಗೆ ಆಣೆ ಪ್ರಮಾಣದಲ್ಲಿ ತೊಡಗಿರುವ ಸುಸಂದರ್ಭದಲ್ಲಿ ಅವರಿಗೆ ಆದಿ ಮಾನವರ ವಿಶೇಷ ಸ್ಥಾನ ದೊರಕಿಸಿ ಕೊಟ್ಟು ವಸ್ತ್ರ ರಹಿತವಾಗಿ ನೈಸರ್ಗಿಕ ವಾಸಸ್ಥಾನಗಳಿಗೆ ಅಟ್ಟವುದು ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಚಿಂತಕ ಬುದ್ಧಿಜೀವಿ ಏನಂದರಾವ್ ರವರು ಸುದ್ದಿ ಪ್ರಕಟವಾಗುತ್ತಲೇ ನಮ್ಮ ಕಛೇರಿಗೆ ಫೋನಾಯಿಸಿ ತಮ್ಮ ಪ್ರತಿಭಟನೆಯನ್ನು praj_muhmad cartoon ದಾಖಲಿಸಿದರು, “ತಮ್ಮ ಅಧಿಕಾರವಾಧಿಯಲ್ಲಿ ಮಾಡಿದ ಸಾಧನೆಗಳ ಲೆಕ್ಕ ಕೊಡುವಾಗ ಈ ರಾಜಕಾರಣಿಗಳು ಅಸ್ತಿತ್ವದಲ್ಲೇ ಇಲ್ಲದ ನದಿಗಳಿಗೆ ಸೇತುವೆಗಳನ್ನು ಕಟ್ಟಿಸಿದ್ದಾಗಿಯೂ, ಇಲ್ಲದ ರಸ್ತೆಗಳ ರಿಪೇರಿ ಮಾಡಿರುವುದಾಗಿಯೂ, ಅಸ್ತಿತ್ವದಲ್ಲೇ ಇಲ್ಲದ ಕಾಲೇಜಿಗೆ ಅನುದಾನ ಮಾಡಿರುವುದಾಗಿಯೂ ಘೋಷಿಸುವುದನ್ನು ನಾಡಿನ ಜನತೆ ನೋಡಿದ್ದಾರೆ. ಆದರೆ ಇದು ಹೊಸತು. ತಮ್ಮ ಸಾಚಾತನವನ್ನು ಸಾಬೀತು ಮಾಡುವುದಕ್ಕಾಗಿ ಒಬ್ಬರ ಮೇಲೊಬ್ಬರು ಪೈಪೋಟಿ ಬಿದ್ದು ಇಲ್ಲದ ದೇವರ ಮೇಲೆ ಆಣೆ ಪ್ರಮಾಣ ಮಾಡುತ್ತಿದ್ದಾರೆ. ಈಡಿಯಟ್ಸ್…”

ರಾಜಕಾರಣಿಗಳ ಆಣೆ ಪ್ರಮಾಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಖಿಲ ಬ್ರಹ್ಮಾಂಡ ಹಿಂದೂ ಮಹಾಸೇನೆಯ ನಾಯಕ ಅಬೋಧ ಕುತಾಲಿಕರು, ‘‘ ಜಾತ್ಯಾತೀತ ದಳ ಎಂದು ತಮ್ಮನ್ನು ಕರೆದುಕೊಳ್ಳುವ ಪಕ್ಷದ ರಾಜಕಾರಣಿ ಆಣೆ ಮಾಡಲು ಹಿಂದೂಗಳ ಆರಾಧ್ಯದೈವವಾದ ಧರ್ಮಸ್ಥಳದ ಮಂಜುನಾಥನನ್ನೇ ಆರಿಸಿಕೊಂಡದ್ದು ಸರ್ವಥಾ ಕೂಡದು. ಒಂದು ವೇಳೆ ಮುಖ್ಯಮಂತ್ರಿ ಸುಳ್ಳಾಡಿ, ಅನಂತರ ಪ್ರಮಾಣ ಮಾಡಿದರೆ ಅಪಾಯವೇನಿದ್ದರೂ ಹಿಂದೂ ದೇವರಿಗೇ ಆಗಲಿ ಎನ್ನುವ ಕುತಂತ್ರ ಇದರ ಹಿಂದಿದೆ. ನಾವು ಎಂದಿನಿಂದ ನೋಡುತ್ತಿರುವ ಅಲ್ಪಸಂಖ್ಯಾತರ ತುಷ್ಟೀಕರಣದ ತುರ್ಯಾವಸ್ಥೆಯಿದು. ಜೋಕುಮಾರ ಸ್ವಾಮಿಯವರಿಗೆ ದಮ್ಮಿದ್ದರೆ ಅಲ್ಪಸಂಖ್ಯಾತರ ದೇವರ ಮೇಲೆ ಪ್ರಮಾಣ ಮಾಡಿ ತಾವು ಸಾಚಾ ಎಂದು ಸಾಬೀತು ಮಾಡಲಿ.” ಎಂದು ಅಬ್ಬರಿಸಿದರು.

ರಾಜಕೀಯದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಹಿರಿಯ ನಾಸ್ತಿಕ ಹೋರಾಟಗಾರರು ಪ್ರಸ್ತುತ ವಿವಾದದಲ್ಲಿ ದೇವರ ಕೈವಾಡವಿದೆ ಎಂದು ಅರಿತು ಪ್ರತಿಕ್ರಿಯಿಸಲು ಒಪ್ಪಿಕೊಂಡರು. “ ದೇವರು ಎನ್ನುವ ಇಲ್ಲದ ಗುಮ್ಮನನ್ನು ತೋರಿಸಿ ಬೆದರಿಸುವ, ಮರುಳು ಮಾಡುವ ತಂತ್ರವಿದು. ದೇವರ ರಕ್ತ ಹಂಚಿಕೊಂಡು ಹಿಟ್ಟಿದ ಬ್ರಾಹ್ಮಣ ಜಾತಿಯವರನ್ನು ಹಿಗ್ಗಾಮುಗ್ಗ ಹಳಿಯುತ್ತ ಓಟು ಬಾಚುವ ಗೌಡರು ಅದೇ ದೇವರ ರಕ್ತ ಸಂಬಂಧಿಯ ಹಿಂದೆ ಊರೂರು ಅಲೆಯುವುದು ಕಂಡಿಲ್ಲವೇ? ಈ ಜೋಕುಮಾರಸ್ವಾಮಿ ಭಲೇ ಚತುರ. ದೇಹವಿಲ್ಲದ, ಆಕಾರವಿಲ್ಲದ ಅಲ್ಲಾಹುವಿನ ಮೇಲೆ ಪ್ರಮಾಣ ಮಾಡಿ ಎನ್ನಬಹುದಿತ್ತು. ಆದರೆ ಪ್ರಮಾಣ ಮಾಡಲಿಕ್ಕೆ ಜಡ್ಡಿ ಕೈ ಎಲ್ಲಿಡಬೇಕು ಎನ್ನುವ ಸಮಸ್ಯೆ ಬರುತ್ತೆ. ಕ್ರೈಸ್ತನ ತಲೆಯಲ್ಲಾಗಲೇ ಮುಳ್ಳಿನ ಕಿರೀಟವಿದೆ ಅಲ್ಲಿ ಕೈ ಇಡಲು ಹೇಳಲಾಗದು. ಹೀಗಾಗಿ ತಲೆಯಷ್ಟನ್ನೇ ಪ್ರಮುಖವಾಗಿ ಹೊಂದಿರುವ ಮಂಜುನಾಥನ ಮೇಲೆ ಆಣೆ ಮಾಡಲು ಹೇಳಿದ್ದಾನೆ. ಇದರಿಂದ ನಾಲ್ಕು ತಲೆ ಇರುವ ಬ್ರಹ್ಮನಿಂದ ಹಿಡಿದು ಮುದಿವಯಸ್ಸಿನಲ್ಲೂ  ತಲೆ ತುಂಬಾ ಕರಿ ಕೂದಲು ಕಾಪಾಡಿಕೊಂಡಿರುವ ಸಾಯಿಬಾಬನವರೆಗೆ ಉಳಿದೆಲ್ಲಾ ದೇವರುಗಳಿಗೆ ಹೊಟ್ಟೆ ಕಿಚ್ಚಾಗುವುದಿಲ್ಲವೇ?”

ಪ್ರಸ್ತುತ ವಿವಾದದ ಬಗ್ಗೆ ಅಭಿಪ್ರಾಯ ಕೇಳಿದಾಗ ಸಾಮ್ರಾಟರು, “ಯಾರೇ ಆಣೆ ಪ್ರಮಾಣ ಮಾಡುವುದಿದ್ದರೆ ನಮ್ಮ ಮೇಲೆ ಮಾಡಲಿ. ಏಕೆಂದರೆ ಸಾಮ್ರಾಟರಾದ ನಮಗೆ ತಲೆಯೇ ಇಲ್ಲ, ಇರುವುದು ಹೃದಯ ಮಾತ್ರ!” ಎಂದು ಹೇಳಿದುದಾಗಿ ವರದಿಯಾಗಿದೆ.