Tag Archives: ನಗೆ ನಗಾರಿ

ಸಂತಾಪಕೀಯ :‌ ಇಗೋ, ಮತ್ತೊಮ್ಮೆ ನಾವು ನಿಮ್ಮ ಮುಂದೆ!

15 ಆಗಸ್ಟ್

ಮೊದಲಿಗೆ ನಮ್ಮ ಸಾಮ್ರಾಜ್ಯದ ನಿಷ್ಠ ಪ್ರಜೆಗಳಿಗೆಲ್ಲ ಸ್ವಾತಂತ್ರ್ಯ ದಿನದ ಶುಭಾಶಯಗಳು. ಸ್ವಾತಂತ್ರ್ಯ ದಿನವಲ್ಲವೇ? ಎಲ್ಲರೂ ಸಿಹಿ ತಿನ್ನಿ. ತಿನ್ನಿ ಪರವಾಯಿಲ್ಲ. ಎರಡು ಕ್ಷಣ ನಾವು ಕಣ್ಣು ಮುಚ್ಚಿಕೊಂಡು ಕೂರುತ್ತೇವೆ. ನಮ್ಮ ನಿಷ್ಠಾವಂತ ಪ್ರಜೆಗಳು ಎರಡು ನಿಮಿಷದ ಮಟ್ಟಿಗೆ ತಾವು ಸ್ವತಂತ್ರರು ಎಂದು ಸಂಭ್ರಮಿಸಲು ಅವಕಾಶ ಕೊಡದಷ್ಟು ಕ್ರೂರಿಗಳೇ ನಾವು? ಹ್ಹಾ! ತಿಂದು ಬಿಡಿ ನಾವು ಕಣ್ಣು ಬಿಡುವುದರೊಳಗೆ ಕೈ ಬಾಯಿ ಒರೆಸಿಕೊಂಡು ಶ್ರದ್ಧೆಯಿಂದ ಮಂಡಿಯೂರಿ ಕೂತರೆ ಸಾಕು…

ನೋಡಿ, ಸಾಮ್ರಾಟರೆಂಬ ಪಟ್ಟ ನಾವು ಕೇಳಿ ಪಡೆದುದಲ್ಲ. “ತಮ್ಮ ಶಿಲುಬೆಯನ್ನು ತಾವೇ ಹೊರಬೇಕು” ಎನ್ನುವ ಪರಮಾತ್ಮ ಏಸುವಿನ ಜೀವನ ಸಂದೇಶದಂತೆ ನಾವು ನಮ್ಮ ಈ ಶಿಲುಬೆಯನ್ನು ಹೊತ್ತು ಬಂದಿದ್ದೇವೆ (ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಹೋದಾಗ ಮಾತ್ರ ಕ್ಷಣ ಮಾತ್ರಕ್ಕೆ ಅದನ್ನುವೈಕುಂಟಂ ಕ್ಯೂ ಕಾಂಪ್ಲೆಕ್ಸಿನಲ್ಲಿ ಇರಿಸಿಹೋಗುತ್ತೇವೆ). ನಮ್ಮ ಹೆಗಲ ಮೇಲಿನ ಭಾರ ನಮಗಷ್ಟೇ ಗ್ರಾಸವಾಗುವುದು. ಸಾಮ್ರಾಟರೆಂದ ಮಾತ್ರಕ್ಕೆ ನಾವು ಸರ್ವಾಧಿಕಾರಿಯಂತೆ ವರ್ತಿಸುವುದಕ್ಕೆ ಸಾಧ್ಯವೇ? ನಾವು ಇಷ್ಟು ಕಾಲ ಎಲ್ಲಿದ್ದೆವು, ನಗಾರಿ ಏಕೆ ಮೌನವಾಗಿತ್ತು ಎಂಬೆಲ್ಲ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಬಾಧ್ಯತೆ ನಮ್ಮದು. ಅದನ್ನು ತಪ್ಪಿಸಿಕೊಳ್ಳಲು, ಪ್ರಶ್ನೆ ಕೇಳಿದವರನ್ನು ಅಟ್ಟಿಸಿಕೊಂಡು ಹೋಗುವುದಕ್ಕೆ ನಾವೇನು ವೇಸ್ಟ್ ಬಂಗಾಲದ ದೊರೆಯೇ?

ಇರಲಿ, ನಿಮ್ಮ ಎಲ್ಲಾ ಸಂಶಯ ಸಂದೇಹಗಳಿಗೆ ಎಂದಿನಂತೆ ಪ್ರಜ್ವಲವಾದ ಸತ್ಯದ ಶುಭ್ರವಾದ ಪರದೆಯನ್ನೇ ಎಳೆಯುತ್ತೇವೆ.

ನಿಮಗೆಲ್ಲ ಆಶ್ಚರ್ಯವಾಗಬಹುದು. ನಿಮ್ಮ ಕಿವಿಗಳ ಮೇಲೆ ನಿಮಗೇ ಸಂಶಯ ಹುಟ್ಟಬಹುದು. ಆದರೂ ಕಿವಿಗೊಟ್ಟು ಕೇಳಿ. ನಾವು ನಗೆ ಸಾಮ್ರಾಟರಾದರೂ ಈ ಗೊಡ್ಡು, ನಗೆಹೀನ ಭರತ ಖಂಡಕ್ಕೆ ಸಾಮಂತರು ಮಾತ್ರ. ಇದನ್ನಾಳುವವರು ನಮಗಿಂತ ದೊಡ್ಡವರು. ಈ ದೊಡ್ಡವರ ದಡ್ಡತನ ತಿದ್ದಲ್ಲು ಮಗದೊಬ್ಬ ದೊಡ್ಡಣ್ಣ ಬೇಕು ಎಂದು ಚಳುವಳಿ ಪ್ರಾರಂಭ ಮಾಡಿದರು ಬಣ್ಣಾ ಮಜಾರೆ. ನೀವು ಗುಹೆಯಲ್ಲಿ ತಪಸ್ಸು ಮಾಡುತ್ತ, ಹೊಲದಲ್ಲಿ ಗೇಯುತ್ತ, ಐಐಟಿ ಎಂಟ್ರೆನ್ಸ್ ಎಗ್ಸಾಮಿಗಾಗಿ ಇರುಳು ದೀಪ ಉರಿಸುತ್ತಾ ಕೂತಿರದಿದ್ದರೆ ಖಂಡಿತವಾಗ್ಯೂ ಈ ಚಳುವಳಿ ಬಗ್ಗೆ ಕೇಳೇ ಇರುತ್ತೀರಿ.

ಬಣ್ಣಾ ಮಜಾರೆ ನಾಯಕತ್ವದಲ್ಲಿ ನಾವೂ ಸಹ ಚಳುವಳಿಯಲ್ಲಿ ಧುಮುಕಿದ್ದೆವು. ಐಸ್ ಕ್ರೀಮಿನಲ್ಲಿ ಸ್ವಾದವಿಲ್ಲ, ಚಹಾದಲ್ಲಿ ರುಚಿಯಿಲ್ಲ, ಕಾಫಿಯಲ್ಲಿ ಕೆಫೀನಿಲ್ಲ, ಅನ್ನದಲ್ಲಿ ಕಲ್ಲೇ ಎಲ್ಲ ಎಂದು ದೊಡ್ಡವರ ಕೊರಳ ಪಟ್ಟಿ ಹಿಡಿದು ಕೇಳುವುದಕ್ಕೆ ನಮಗೂ ಮೋಜು. ಗಂಟಲು ಹರಿಯುವಂತೆ ಕೂಗುತ್ತಿದ್ದೆವು. ಇನ್ನೇನು ನಮ್ಮೆಲ್ಲಾ ಕುಂದು ಕೊರತೆಗೆ ಇಲಾಜು ದೊರೆಯಿತು ಅನ್ನುವಷ್ಟರಲ್ಲಿ ಅಪ್ಪಳಿಸಿತೊಂದು ಸಿಡಿಲಾಘಾತ! ಊಟ, ತಿಂಡಿ ಬಿಟ್ಟು ಚಳುವಳಿ ಕೂತಿದ್ದ ಬಣ್ಣಾ ಮಜಾರೆ ಬೇಲಿಯೇ ಎದ್ದು ಹೊಲ ಮೇಯುವುದ ನೋಡೋಕಾಗಲ್ಲ, ಇದನ್ನ ತಡಿಯೋಕೆ ಹೊಲವೇ ಎದ್ದು ಬೇಲಿಯಾಗಬೇಕು ಎಂದು ಬಿಡಬೇಕೆ? ಶೀರ್ಷಾಸನದಲ್ಲಿದ್ದ ವಾಮದೇವ ಗುರೂಜಿ ಚಂಗನೆ ಧ್ವಜ ಸ್ಥಂಭವಾಗಿ ಬಿಟ್ಟರಲ್ಲ!

ನಾವು ಸಂಪೂರ್ಣವಾಗಿ ಭ್ರಮ ನಿರಸನಗೊಂಡು ರುಚಿಯಿಲ್ಲದ ಚಹಾದಲ್ಲಿ ನಮ್ಮೆಲ್ಲ ಹತಾಶೆಯನ್ನು ಮುಳುಗಿಸಿ ಕೈ ತೊಳೆಯುತ್ತಿರುವಾಗ ಇಬ್ಬನಿಯ ಎದೆಯಿಂಡ ಹೊಮ್ಮಿದ ಪರಿಮಳದಂಥ ಸೂರ್ಯನ ಕಾಂತಿಯಂತೆ ಬೆಳಗುವ ನಗೆ ನಗಾರಿ ಕಣ್ಣ ಮುಂದೆ ಬಂದಿತು. ಯಾರದೋ ಬೇಲಿ ಸರಿ ಮಾಡುವ ಉಮ್ಮೇದಿಯಲ್ಲಿ ನಮ್ಮ ಹೊಲವನ್ನು ತೊರೆದು ಹೋದ ಖೇದ ನಮ್ಮನ್ನಾವರಿಸಿತು. ಝಗ್ಗನೆ ಹೊತ್ತಿಕೊಂಡ ಅರಿವಿನ ಪಂಜು ಹಿಡಿದು ನಾವು ವಾಪಾಸ್ಸಾಗಿದ್ದೇವೆ. ನಿಮ್ಮ ಸೇವೆ ಸವಿಯಲು ಸಿದ್ಧರಾಗಿದ್ದೇವೆ.

ಲೈಫು ವೈಫು ಇಷ್ಟೇನೇ

7 ಸೆಪ್ಟೆಂ

‘ಪಂಚರಂಗಿ’ ಎಂಬ ಆಧುನಿಕ ಚಿತ್ರದ ಸಮಕಾಲೀನ ಜನಪದ ಗೀತೆಯಾಗಿ ಹೋಗಿರುವ ‘ಲೈಫು ಇಷ್ಟೇನೇ…’ ಸ್ಪೂರ್ತಿಯಲ್ಲಿ ನಾವು ಆಧುನಿಕ ಸಮಕಾಲೀನ ಗಂಡಂದಿರ ಅಂತರಂಗದ

ರಾಮಾನುಜಂ.ಎಂ.ಕೆ

ನಗಾರಿಯ ಮಿಡಿತಗಳನ್ನು-ಬಡಿತಗಳನ್ನು ಗ್ರಹಿಸಿಕೊಂಡು ಅವಕ್ಕೆ ಪರೋಡಿ ಗೀತೆಯ ರೂಪವನ್ನು ನೀಡಿದೆವು.

ಈ ಗೀತೆಯನ್ನು ಓದಿ ನಮ್ಮ ಲೈಫು-ವೈಫು ಯಾವ ಮಟ್ಟಿಗೆ ಕೋಪಾವಿಷ್ಟರಾಗಿದ್ದಾರೆಂದರೆ ತಿಂಡಿಯ ಸಮಯದಲ್ಲಿ ತಟ್ಟೆಯಲ್ಲಿ ಎರಡು ಸೌತೆಕಾಯಿ ಬಿಲ್ಲೆ, ಒಂದು ಬಟಾಣಿ ಇಟ್ಟು ತಿಂಡಿ ಇಷ್ಟೇನೇ ಎನ್ನುತ್ತಾರೆ. ಕಾಫಿ ಬಟ್ಟಲಲ್ಲಿ ನೀರು ತುಂಬಿಕೊಟ್ಟು ಕಾಫಿ ಇಷ್ಟೇನೇ ಎನ್ನುತ್ತಿದ್ದಾರೆ. ಇನ್ನು ರಾತ್ರಿ ಮಲಗುವ ಪಾಡನ್ನು ಹೇಳದಿದ್ದರೆ ವಾಸಿ!

ಹೀಗೆ ನಾವೇ ತೋಡಿದ ಗುಂಡಿಗೆ ನಾವೇ ಬೀಳುವುದು ಎನ್ನುವ ಗಾದೆಯ ಆಧುನಿಕ ಅರ್ಥಾಂಥರವನ್ನು ಅನುಭವವೇದ್ಯಗೊಳಿಸಿಕೊಳ್ಳುತ್ತ ನಾವು ಕುಚೇಲನ ಕೈಲಿ ಕಾಫಿ ಮಾಡಿಸಿಕೊಂಡು ಕುಡಿಯುತ್ತ ವೇದನೆಯನ್ನು ಶಮನ ಮಾಡಿಕೊಳ್ಳುವಾಗ ಈ ಸುದ್ದಿ ನಮ್ಮ ಎರಡು ಕಿವಿಗಳನ್ನು ತಲುಪಿತು.

ಬಜ್ ನಲ್ಲಿ ನಮ್ಮ ಗೀತೆಯನ್ನು ಓದಿ ಮೆಚ್ಚಿಕೊಂಡ ರಾಮಾನುಜಂ.ಎಂ.ಕೆಯವರು ಅದಕ್ಕೆ ಸಂಗೀತ ಸಂಯೋಜನೆ ಮಾಡಿ ಹಾಡಿಯೂ ಬಿಟ್ಟಿದ್ದಾರೆ. ಹಾಡು ಕೇಳುವುದಕ್ಕೆ, ಡೌನ್ ಲೋಡ್ ಮಾಡುವುದಕ್ಕೆ ಇಲ್ಲಿ ಕ್ಲಿಕ್ಕಿಸಿ.

ರಾಮಾನುಜಂ ರಿಗೆ ನಗಾರಿಯ ಪರವಾಗಿ ಥ್ಯಾಂಕ್ಸ್ ಹೇಳುತ್ತ ಇನ್ನು ಮುಂದೆ ಈ ಹಾಡು ಗಂಡಂದಿರ ರಿಂಗ್ ಟೋನ್ ಆಗಿ ಹೋದರೆ ನಾವಾಗಲಿ ಆಧುನಿಕ ಗಂಡಂದಿರ ಶೋಕ ಗೀತೆ ‘ಕವಲು’ ಕತೃವೂ ಜವಾಬ್ದಾರರಲ್ಲ ಎಂದು ಈಗಲೇ ಹೆಮ್ಮಕ್ಕಳಿಗೆ ಸ್ಪಷ್ಟಪಡಿಸುತ್ತಿದ್ದೇವೆ.

ಸಂತಾಪಕೀಯ: ಐವತ್ತು ಸಾವಿರ ಒದೆ ತಿಂದ ನಗಾರಿಯ ವರ್ಚಸ್ಸು ಎಂಥದ್ದು ನೀವೇ ಹೇಳಿ…

19 ಏಪ್ರಿಲ್

ಸರಕಾರಿ ಆಸ್ಪತ್ರೆಯ ಮುದಿ ನರ್ಸು ನಮ್ಮೆರಡೂ ಕಾಲುಗಳ ಪಾದಗಳನ್ನು ತನ್ನ ಕೈಗಳಲ್ಲಿ ಒತ್ತಿ ಹಿಡಿದು ನಮ್ಮ ತಾಯಿಯ ಗರ್ಭದಿಂದ ಹೊರಗೆಳೆದ ಕ್ಷಣದಲ್ಲೇ ನಮಗೆ ಒಂದು ಸಂಗತಿ ಅರಿವಾಗಿ ಹೋಗಿತ್ತು: ನಾವು ಸಾಮಾನ್ಯವಲ್ಲ. ನಾವು ಸಮ್ರಾಟರು. ಇಷ್ಟು ದೊಡ್ಡ ಹೊಟ್ಟೆಯ ನರ್ಸು ನಮ್ಮ ಪಾದಗಳನ್ನು ಹಿಡಿದಿರುವಾಗ ನಾವು ಮಹಾಮಹಿಮರೇ ಇರಬೇಕು.

ಇಂತಹ ಅಸಾಮಾನ್ಯ ಜನ್ಮವನ್ನು ಪಡೆದ ನಾವು ಸಾಮಾನ್ಯ ಬಾಲಕರ ಹಾಗೆ ಶಾಲೆಗೆ ಹೋಗುವ ಅಪಮಾನವನ್ನು ಅನೇಕ ವರ್ಷಗಳ ಕಾಲ ಸಹಿಸಿಕೊಂಡಿದ್ದೆವು. ಹೀಗೆ ಸಹಿಸಿಕೊಳ್ಳುವುದಕ್ಕೆ ನಮ್ಮ ವಿಶಾಲ ಹೃದಯವಾಗಲಿ, ಅನುಪಮವಾದ ಸಂಯಮವಾಗಲಿ ಕಾರಣವಾಗಿರಲಿಲ್ಲ. ತಾಯ್ತಂದೆಯರ ಕುರಿತ ಭಯ, ಭಕ್ತಿ, ಗುರು ಹಿರಿಯರ ಮೇಲಿನ ಮಮಕಾರಾದಿಯಾಗಿ ಯಾವ ಭಾವನೆಯೂ ಕಾರಣವಲ್ಲ. ಲೋಕದ ದೃಷ್ಟಿಯಲ್ಲಿ ಈ ಕಾರಣಗಳನ್ನು ನಾವು ಒಪ್ಪಿಕೊಂಡಂತೆ ಕಂಡಿರಬಹುದು. ಆದರೆ ನಿಜವಾದ ಕಾರಣ ಬೇರೆಯೇ ಇತ್ತು. ಮುಂದೊಂದು ದಿನ ಗ್ರಹಣ ಬಿಟ್ಟ ಸೂರ್ಯನ ಹಾಗೆ ಪ್ರಜ್ವಲಿಸುತ್ತಾ ಸಾಮ್ರಾಟರಾಗಿ ಬೆಳಗಬೇಕಾದ ನಾವು ಅಂದಿನಿಂದಲೇ ಅದಕ್ಕೆ ಸಿದ್ದತೆ ಪ್ರಾರಂಭಿಸಿದ್ದೆವು. ಸಾಮ್ರಾಟರಾದ ನಮ್ಮ ಆಸ್ಥಾನವನ್ನು ಶೋಭಾಯಮಾನಗೊಳಿಸುವುದಕ್ಕೆ ನಯನ ತಣಿಸುವ ಸುಂದರಿಯರು ಅವಶ್ಯಕವಲ್ಲವೇ? ಬೆಳೆಯುವ ಸಿರಿಯನ್ನು ಸರಿಯಾಗಿ ಅರಿಯುವುದಕ್ಕೆ ಮೊಳಕೆಯಲ್ಲೇ ಕಾಳಜಿ ಮಾಡಬೇಕೆಂದು ಹಿರಿಯರು ಹೇಳುತ್ತಾರೆ. ಹೀಗಾಗಿ ನಾವು ಆ ಸುಂದರಿಯರ ಅನ್ವೇಷಣೆ, ಪಾಲನೆ, ಪೋಷಣೆಗೆ ನಮ್ಮ ಸಮಯ ಮೀಸಲಿರಿಸಿದ್ದೆವು.

ನಾವಿದ್ದ ತರಗತಿಯಲ್ಲಿ ಸಕಲೆಂಟು ವಿದ್ಯೆಗಳನ್ನು ಕಲಿಸುವುದಕ್ಕೆ ಇದ್ದದ್ದು ಒಬ್ಬನೇ ಶಿಕ್ಷಕ. ಆತ ಕನ್ನಡ, ಇಂಗ್ಲೀಷ್, ಹಿಂದಿ ಎಂಬ ಮೂರು ಭಾಷೆಗಳನ್ನೂ, ವಿಜ್ಞಾನ, ಗಣಿತ, ಸಮಾಜ ಎಂಬ ಮೂರು ಮನುಕುಲದ ಕಂಟಕಪ್ರಾಯ ವಿಷಯಗಳನ್ನೂ ಏಕಪ್ರಕಾರವಾಗಿ ಕಲಿಸುತ್ತಿದ್ದ. ಆತನಿಗೆ ತರಬೇತಿ ನೀಡಿದ ಬೃಹಸ್ಪತಿ ಯಾರೋ, ಈ ಆರು ವಿಷಯಗಳಷ್ಟೇ ಅಲ್ಲ, ಜಗತ್ತಿನ ಸಮಸ್ಯ ಜ್ಞಾನ ರಾಶಿಯನ್ನು ಕಲಿಸಲು ತೊಡಗಿದರೂ ಆತನ ಬೋಧನಾ ಪದ್ಧತಿಯಲ್ಲಿ ಇನಿತೂ ವ್ಯತ್ಯಾಸವಾಗುತ್ತಿರಲಿಲ್ಲ. ಆತನ ಕಲಿಕೆಯ ಪದ್ಧತಿ ತೀರಾ ಸರಳವಾಗಿತ್ತು. ತಾನು ನಮಗೆ ಕಲಿಸಬೇಕು ಎನ್ನುವ ವಿಷಯವನ್ನು ಚೊಕ್ಕಟವಾದ ನೋಟ್ ಬುಕ್ಕಿನಲ್ಲಿ ಬರೆದುಕೊಂಡು ಬರುತ್ತಿದ್ದ. ಅದನ್ನು ಅಷ್ಟೇ ಮುತುವರ್ಜಿಯಿಂದ, ಒಂದಕ್ಷರ ಅತ್ತ ಇತ್ತ ಆಗದ ಹಾಗೆ ಕಪ್ಪು ಹಲಗೆಯ ಬೋರ್ಡಿನ ಮೇಲೆ ಇಳಿಸುತ್ತಿದ್ದ. ತನ್ನ ಅಪಾರ ಪ್ರತಿಭೆಯನ್ನು ಬಳಸಿ ಬೋರ್ಡ್ ಮೇಲೆ ಬರೆದಿರುವುದನ್ನು ತಪ್ಪಿಲ್ಲದೆ ಓದುತ್ತಿದ್ದ. ಈ ಸಮಸ್ತ ಪ್ರಕ್ರಿಯೆ ಜರುಗುವಷ್ಟರಲ್ಲಿ ವಿದ್ಯಾರ್ಥಿಗಳು ಆತ ಬೋಧಿಸಿದ ವಿಷಯವನ್ನು ಅರಗಿಸಿಕೊಂಡು ಬಿಡಬೇಕಿತ್ತು.

ಮರುದಿನ ತರಗತಿಗೆ ಕಾಲಿಟ್ಟೊಡನೆ ಆತ ತನ್ನ ಟೇಬಲಿನಿಂದ ಬಾರು ಕೋಲನ್ನು ಹೊರ ತೆಗೆಯುತ್ತಿದ್ದ. ಕಡೇ ಬೆಂಚಿನಿಂದ ಶುರು ಮಾಡಿಕೊಂಡು ತಾನು ಹಿಂದಿನ ದಿನ ‘ಬೋಧಿಸಿದ’ ವಿಷಯವನ್ನು ಒಪ್ಪಿಸುವಂತೆ ಗದರುತ್ತಿದ್ದ. ಎದ್ದು ನಿಂತ ಹುಡುಗ ಏನಾದರೊಂದು ಒದರಿದ್ದರೂ ನಡೆದು ಹೋಗುತ್ತಿತ್ತು. ಏಕೆಂದರೆ ಆ ಶಿಕ್ಷಕನಿಗೆ ತಾನು ಬೋಧಿಸಿದ ವಿಷಯವೇನು ಎನ್ನುವುದೇ ನೆನಪಿರುತ್ತಿರಲಿಲ್ಲ. ಉತ್ತರ ಪರೀಕ್ಷಿಸುವುದಕ್ಕೆಂದು ಎಲ್ಲರೆದುರು ನೋಟ್ ಬುಕ್ ತೆರೆಯುವುದು ಅಪಮಾನ ಎಂದೆಣಿಸಿ, ಉತ್ತರ ಹೇಳುತ್ತಿರುವವನ ಧ್ವನಿಯ ಏರಿಳಿತ, ಹಣೆಯ ಮೇಲಿನ ಬೆವರ ಸಾಲು, ಒಂದೇ ಸಾಲನ್ನು ಪುನರುಚ್ಚಿಸುವಾಗಿನ ಮುಖಭಾವ, ನಿಂತುಕೊಂಡ ಭಂಗಿ ಹೀಗೆ ನಾನಾ ಮೂಲದ ಮಾಹಿತಿ ಸಂಗ್ರಹಿಸಿ ಟಿವಿಯ ಕ್ವಿಜ್ ಕಾರ್ಯಕ್ರಮದಲ್ಲಿ ವಿಚಿತ್ರ ಮುಖ ಮಾಡಿಕೊಂಡು ಉತ್ತರ ಊಹಿಸುವವರ ಹಾಗೆ ಆತ ಊಹೆ ಮಾಡುತ್ತಿದ್ದ. ವಿಭಕ್ತಿ ಪ್ರತ್ಯಯದಿಂದ ಉತ್ತರ ಶುರು ಮಾಡಿ ಪ್ಲಾಸಿ ಕದನದ ವಿವರಣೆಯೊಂದಿಗೆ ಮುಗಿಸಿದರೂ ಆತನಿಗೆ ವ್ಯತ್ಯಾಸವಾಗುತ್ತಿರಲಿಲ್ಲ. ಹೆದರದೆ, ತೊದಲದೆ, ನಿರಂತರವಾಗಿ ಟಿವಿ ನಿರೂಪಕಿಯ ಹಾಗೆ ಉಲಿಯುವುದೇ ಉತ್ತಮ ವಿದ್ಯಾರ್ಥಿಯ ಲಕ್ಷಣ ಎಂಬುದು ಆತನ ಸಿದ್ಧಾಂತವಿದ್ದಂತಿತ್ತು. ಹೀಗಾಗಿ ಸುಂದರ ಮುಖದ, ಟಿವಿ ನಿರೂಪಕಿಯರೋ, ಗಗನ ಸಖಿಯರೋ ಆಗುವ ಉಜ್ವಲ ಭವಿಷ್ಯವಿದ್ದ ವಿದ್ಯಾರ್ಥಿನಿಯರಿಗೆ ಆತನ ಬಾರು ಕೋಲಿನ ಸ್ಪರ್ಶದ ಅನುಭವ ಸಿಕ್ಕುತ್ತಲೇ ಇರಲಿಲ್ಲ!

ಚಿಕ್ಕಂದಿನಲ್ಲಿಯೇ ನಮ್ಮ ಅವತಾರದ ಉದ್ದೇಶ ಅರಿತಿದ್ದ ನಾವು, ಮಾತು ಮಿತವಾದಷ್ಟೂ ವ್ಯಕ್ತಿತ್ವಕ್ಕೆ ಹಿತ ಎಂದು ನಂಬಿದ್ದೆವು. ಸಾಮ್ರಾಟರಾದ ನಮ್ಮನ್ನು ಪ್ರಶ್ನಿಸುವ ಹಕ್ಕು ಯಾವ ಹುಲು ಮಾನವನಿಗೂ ಇಲ್ಲ ಎನ್ನುವುದೇ ನಮ್ಮ ನಂಬುಗೆಯಾಗಿತ್ತು. ಹೀಗಾಗಿ ನಮಗೂ ಆ ಶಿಕ್ಷಕನ ಬಾರು ಕೋಲಿಗೂ ಗಳಸ್ಯ-ಕಂಠಸ್ಯ ನಂಟು ಬೆಳೆದಿತ್ತು. ಪ್ರತಿಬಾರಿ ನಮ್ಮ ರಾಜಠೀವಿಯ ಅಂಗೈಗಳ ಮೇಲೆ ಬಾರು ಕೋಲಿನ ಮುದ್ರೆ ಮೂಡಿಸುವಾಗಲೂ ಆ ಶಿಕ್ಷಕ ಒಂದು ಕತೆ ಹೇಳುತ್ತಿದ್ದ.

ಒಂದಾನೊಂದು ಊರಿನಲ್ಲಿ ಎರಡು ಕಲ್ಲು ಬಂಡೆಗಳಿದ್ದವು. ಶಿಲ್ಪಿಯು ಅವರೆಡನ್ನೂ ತಂದು ಉಳಿಯ ಏಟು ಕೊಡಲಾರಂಭಿಸಿದ. ಅಸಂಖ್ಯಾತ ಏಟುಗಳನ್ನು ತಾಳ್ಮೆಯಿಂದ ಸಹಿಸಿಕೊಂಡ ಕಲ್ಲು ದೇವಾಲಯದಲ್ಲಿ ದೇವರ ಮೂರ್ತಿಯಾಗಿ ಪೂಜೆ ಪಡೆಯಿತು, ಏಟು ತಿನ್ನಲು ನಿರಾಕರಿಸಿ ಒಡೆದ ಕಲ್ಲು ಚಪ್ಪಡಿಯು ಮೆಟ್ಟಿಲಿನ ಹಾಸಾಗಿ ಬಂದು ಹೋದುವವರಿಂದ ತುಳಿಸಿಕೊಂಡು ಒದೆಸಿಕೊಂಡು ಕಾಲ ಕಳೆಯುತ್ತಿತ್ತು ಎಂದು.

ಜೀವನದಲ್ಲಿ ಪ್ರತಿಬಾರಿ ಏಟು, ಒದೆತ ತಿನ್ನುವಾಗಲೂ ನಮಗೆ ಈ ಕತೆ ನೆನಪಾಗುತ್ತಿತ್ತು. ಈಗ ಬಿದ್ದ ಏಟು ಮುಂದೆ ನಾವು ಸಮಸ್ತ ಸಾಮ್ರಾಜ್ಯದ ಸಾಮ್ರಾಟರಾಗುವುದಕ್ಕೆ ನೆರವಾಗುವಂಥದ್ದು ಎಂದೇ ಭಾವಿಸುತ್ತಿದ್ದೆವು. ಅದಕ್ಕೇ ಒಂದು ಏಟು ಬೀಳುವ ಸಂದರ್ಭದಲ್ಲಿ ಕಿತಾಪತಿ ಮಾಡಿ ಎರಡು, ಮೂರು ಏಟು ತಿನ್ನುತ್ತಿದ್ದೆವು. ಬದುಕಿನಲ್ಲಿ ಅಷ್ಟು ಏಟು ತಿಂದಿರುವುದಕ್ಕೇ ನಾವಿಂದು ಹೀಗಿರುವುದು.

ವಾರಪತ್ರಿಯೊಂದರ ಸಾರಥಿ ಸಂಪಾದಕನ ಹಾಗೆ ನಮ್ಮ ಬಗ್ಗೆಯೇ ಇಷ್ಟು ಕೊರೆದುಕೊಳ್ಳುವುದಕ್ಕೆ ಕಾರಣವಿದೆ. ನಗೆ ನಗಾರಿ ಡಾಟ್ ಕಾಮ್ ಎಂಬುದು ನಮ್ಮ ಅಸ್ತಿತ್ವದ ಪ್ರತಿಬಿಂಬವಿದ್ದಂತೆ. ಇಂದಿಗೆ ಈ ಬ್ಲಾಗಿಗೆ ಓದುಗರ ‘ಒದೆ’ಗಳು ಐವತ್ತು ಸಾವಿರದ ಎಣಿಕೆಯನ್ನು ದಾಟಿವೆ. ಕೇವಲ ನೂರಿನ್ನೂರು ಒದೆಗಳ ಪ್ರಭಾವದಿಂದಲೇ ನಾವು ಇಷ್ಟರ ಮಟ್ಟಿಗೆ ಗೌರವಕ್ಕೆ ಭಾಜನರಾಗಿದ್ದೇವೆ, ನಮ್ಮನ್ನು ‘ನಾವು’ ಎಂದು ಕರೆದುಕೊಳ್ಳುವ ಹಂತ ತಲುಪಿದ್ದೇವೆ. ಹೀಗಿರುವಾಗ ಐವತ್ತು ಸಾವಿರ ಮಂದಿಯ ಒದೆ ತಿಂದಿರುವ ನಗಾರಿಯ ವರ್ಚಸ್ಸು ಎಂಥದ್ದು , ನೀವೇ ಹೇಳಬೇಕು!

‘ಅವಧಿ’ಯಲ್ಲಿ ಪ್ರತಿಧ್ವನಿಸಿದ ನಗಾರಿ ಸದ್ದು!

31 ಜನ

 

ನಗೆ ಸಾಮ್ರಾಟರಾದ ನಾವು ಸನ್ಮಾನ ಅವಮಾನಗಳನ್ನು ಸಮಾನವಾಗಿ ಕಾಣುವವರು, ನಮಗೆ ಹೊಗಳಿಗೆ ತೆಗಳಿಕೆಗಳಲ್ಲಿ ಯಾವುದೇ ಹೆಗ್ಗಳಿಕೆ ಕಾಣುವುದಿಲ್ಲ.  ಒಂದು ವರ್ಷಗಳಿಂದ ನಮ್ಮ ಅನುಯಾಯಿಗಳಾಗಿರುವ ನಿಮಗೂ ಇದು ತಿಳಿದದ್ದೇ. ಆದರೆ ನಮ್ಮ ಏಕಸದಸ್ಯ ಸಂಸ್ಥೆಯ ಇನ್ನುಳಿದ ಸಿಬ್ಬಂದಿಗಳು ನಿಮ್ಮಷ್ಟೇ ಹುಲುಮಾನವರು. ಅವರಿಗೆ ತಮ್ಮ ಕೆಲಸವನ್ನು ಯಾರಾದರೂ ಗುರುತಿಸಿ ಬೆನ್ನು ತಟ್ಟಿದರೆ ಇಲ್ಲವೇ ಬೆನ್ನಿಗೆ ಗುದ್ದು ಹಾಕಿದರೆ ಇನ್ನಷ್ಟು ಮುಂದೆ ತೆವಳುವುದಕ್ಕೆ ಸಹಾಯವಾಗುತ್ತದೆ.

ನಗೆ ನಗಾರಿಯ ವಾರ್ಷಿಕೋತ್ಸವ ಸಾಂಗವಾಗಿ ಜರುಗಿದ ಬಗ್ಗೆ ಸಂತಸ ವ್ಯಕ್ತ ಪಡಿಸಿ ನಮ್ಮನ್ನು ಅಭಿನಂದಿಸಿ ಅವಧಿಯಲ್ಲಿ ಒಂದು ಬರಹ ಪ್ರಕಟವಾಗಿದೆ. ಒಮ್ಮೆ ಇಣುಕಿ ನೋಡಿ ಬನ್ನಿ…

avadhi

ನಗೆ ಉಕ್ಕಿಸುತ್ತವೆ ಚಿತ್ರಗಳು

25 ಜನ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’

ಈ ಸಂಚಿಕೆಯ ಒಂದು ಸ್ಯಾಂಪಲ್:

ಈ ಕೆಲಸದ ಮುಂದೆ ನಿಮ್ಮದ್ಯಾವ ಲೆಕ್ಕ ಬಿಡ್ರಿ…

ಮೂರು ದಿನ ರಜೆ!

24 ಜನ

ನಗೆ ನಗಾರಿಯ ಏಕ ಸದಸ್ಯ ಬ್ಯೂರೋದ ಸಮಸ್ತ ಸಿಬ್ಬಂದಿ ಕಳೆದ ವರ್ಷ ಜನವರಿ ಇಪ್ಪತ್ನಾಲ್ಕರಿಂದ  ಮುನ್ನೂರ ಅರವತ್ತೈದು ದಿನವೂ ಅವಿರತವಾಗಿ ದುಡಿದಿದ್ದಾರೆ. ತಮ್ಮ ಸುಖ, ದುಃಖಗಳನ್ನು, ಸಂಕಟಗಳನ್ನು ಮರೆತು ನಗೆ ನಗಾರಿಯೆಂಬ ಯಾಗದಲ್ಲಿ ತಮ್ಮ ಸಮಯವನ್ನೇ ಹವಿಸ್ಸನ್ನಾಗಿ ಅರ್ಪಿಸಿದ್ದಾರೆ. ನಗದವರನ್ನು ನಗಿಸುವ ಯತ್ನದಲ್ಲಿ ದುಡಿದು ದಣಿದಿದ್ದಾರೆ. ಬರುವ ಇಪ್ಪತ್ತೇಳಕ್ಕೆ ನಗೆ ನಗಾರಿ ಡಾಟ್ ಕಾಮಿನ ಮೊದಲ ವಾರ್ಷಿಕೋತ್ಸವ ಕಾರ್ಯಕ್ರಮವು ಅದ್ಧೂರಿಯಾಗಿ ಜರುಗಲಿದೆ. ಕಾರ್ಯಕ್ರಮ ನಡೆಯುವ ಜಾಗ, ಸಮಯ, ಅದಕ್ಕೆ ಆಹ್ವಾನಿತರಾದವರ ವಿವರ, ಕಾರ್ಯಕ್ರಮದ ರೂಪು ರೇಷೆಗಳೆಲ್ಲ ಗುಪ್ತವಾಗಿಡಲು ಮೇಲಿನವರ ಆದೇಶವಾಗಿದೆ. ಹೀಗಾಗಿ ವಾರ್ಷಿಕೋತ್ಸವದ ಕಾರ್ಯಕ್ರಮ ಮುಗಿಯುವವರೆಗೆ ನಮ್ಮ ಸಿಬ್ಬಂದಿಯನ್ನು ಗೃಹ ಬಂಧನದಲ್ಲಿರಿಸಲಾಗುವುದು. ಇನ್ನು ಮೂರು ದಿನ ನಗೆ ನಗಾರಿಯು ಸದ್ದು ಮಾಡುವುದಿಲ್ಲ. ಇನ್ನು ನಮ್ಮ ನಿಮ್ಮ ಭೇಟಿ ಜನವರಿ ೨೮ರಂದು!

ನಮ್ಮ ಸ್ಪರ್ಧೆಗಳಲ್ಲಿ ಭಾಗವಹಿಸಿದವರನ್ನೆಲ್ಲಾ ಅಭಿನಂದಿಸುತ್ತಾ ಜನವರಿ ಇಪ್ಪತ್ತೆಂಟರಂದು ಸ್ಪರ್ಧಗಳ ಫಲಿತಾಂಶಗಳನ್ನು ಜಗಜ್ಜಾಹೀರು ಮಾಡುವುದಾಗಿ ತಿಳಿಸಲು ಇಚ್ಚಿಸುತ್ತೇವೆ. ಅಂದಹಾಗೆ ನಮ್ಮ ವಾರ್ಷಿಕೋತ್ಸವದ ರಹಸ್ಯ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಸರ್ವರಿಗೂ ಸುಸ್ವಾಗತ!

– ನಗೆ ನಗಾರಿ

ನಮ್ಮ ಸಂಗೀತವಿರುವುದು ಪ್ರಜೆಗಳಿಗಾಗಿ!

24 ಜನ

 

(ನಗೆ ನಗಾರಿ ಪಾಪ್ ಸಂಗೀತ ಬ್ಯೂರೋ)

 

ಸಂಗೀತದ ನಾನಾ ಉಪಯೋಗಗಳ ಬಗ್ಗೆ ಪ್ರಬಂಧವನ್ನು ಬರೆಯಲು ಹೇಳಿದರೆ, ಇನ್ನು ಮುಂದೆ ನಮ್ಮ ಹೈಸ್ಕೂಲು, ಪ್ರೈಮರಿ ಸ್ಕೂಲುಗಳ ಮಕ್ಕಳು ತಾವು ಉರು ಹೊಡೆದ ಹತ್ತಾರು ಉಪಯೋಗಗಳ ಜೊತೆಗೆ ಇದನ್ನೂ ಸೇರಿಸಬಹುದು. ಸಂಗೀತದ ಸಾಮಾಜಿಕ ಪರಿಣಾಮಗಳ ಮೇಲೆ ಸಂಶೋಧನೆ ನಡೆಸಿ ತಮ್ಮ ಹೆಸರನ್ನು ಒಂದಕ್ಷರ ಉದ್ದ ಮಾಡಿಕೊಳ್ಳಲಿಚ್ಚಿಸುವವರಿಗೆ(‘ಡಾ’ ಸೇರಿಸಿಕೊಂಡು!) ಬಿಸಿ ಬಿಸಿ ವಿಷಯವಾಗಿಯೂ ಇದು ಬಳಕೆಯಾಗಬಲ್ಲದು. ಹಾಗೆ ನೋಡಿದರೆ ಪಾಪ್, ಹಿಪ್ ಹಾಪ್ ಹಾಗೂ ರಾಕ್ ಸಂಗೀತಗಳಿಂದ ಹಾಗೂ ಕೆಲವು ಸ್ವದೇಶಿ ಪ್ರತಿಭೆಗಳ ಶಾಸ್ತ್ರೀಯ ಸಂಗೀತದಿಂದ ಇಷ್ಟು ದಿನ ಲಭ್ಯವಾದ ಅಸಂಖ್ಯಾತ ಲಾಭಗಳನ್ನು, rock-band 4 ಸಮಾಜಕ್ಕೆ ವರವಾಗಿ ಕಂಡ ಬಹುಸಂಖ್ಯಾತ ಸಂದರ್ಭಗಳನ್ನು ಗಮನಿಸಿದರೆ ಪ್ರಸ್ತುತ ಉಪಯೋಗ ಅವೆಲ್ಲವುಗಳಿಗಿಂತ ಅದೆಷ್ಟು ವಿಭಿನ್ನ ಹಾಗೂ ವಿಶಿಷ್ಟ ಎಂಬುದು ತಿಳಿಯುತ್ತದೆ. ಸಂಗೀತವು ಹಿಂದೆಂದೂ ಇಷ್ಟು ಸ್ಪಷ್ಟವಾಗಿ, ಇಷ್ಟು ಪರಿಣಾಮಕಾರಿಯಾಗಿ ಸಮಾಜಕ್ಕೆ ಉಪಯುಕ್ತವಾಗಿರಲಿಲ್ಲ ಎಂದು ನಮ್ಮ ಬ್ಯೂರೋದ ಸಂಶೋಧನಾ ಪಂಡಿತರು ಫತ್ವಾ ಹೊರಡಿಸಿದ್ದಾರೆ.

ಇಪ್ಪತ್ತೊಂದನೆಯ ಶತಮಾನದ ಸ್ಮರಣೀಯ ವೈಜ್ಞಾನಿಕ ಸಾಧನೆಗಳಲ್ಲಿ ಮೊದಲ ಸ್ಥಾನ ಪಡೆಯದಿದ್ದರೂ, ಕನಿಷ್ಠ ಪಕ್ಷ ನೂರರಲ್ಲಿ ಒಂದು ಸ್ಥಾನವನ್ನಾದರೂ ಪಡೆಯುವ ಅರ್ಹತೆಯಿರುವ ಈ ಸಂಗೀತದ ಬಳಕೆಯ ತಂತ್ರಜ್ಞಾನದ ಬಗ್ಗೆ ತಿಳಿಯುವ ಮೊದಲು ಸಂಗೀತ ಹಿಂದೆಲ್ಲಾ ನಮ್ಮ ಸಮಾಜಕ್ಕೆ ಹೇಗೆ ನೆರವಾಗಿದೆ ಎಂಬುದರ ಬಗ್ಗೆ ಒಂದು ನೇರಳೆ ಕಿರಣ ಬೀರುವ ಪ್ರಯತ್ನ ಇಲ್ಲಿದೆ.

‘ಸಂಗೀತದಿಂದ ಆಗುವ ಪ್ರಯೋಜನಗಳೇನು?’ ಎಂದು ಯಾರಾದರೂ ನೇರವಾಗಿ ಪ್ರಾಮಾಣಿಕವಾಗಿ ಪ್ರಶ್ನಿಸಿದರೆ ಅವರಿಗೆ ಅಷ್ಟೇ ಪ್ರಾಮಾಣಿಕತೆಯಿಂದ, ಅಷ್ಟೇ ನೇರವಾಗಿ ಉತ್ತರ ಕೊಡುವುದಕ್ಕೆ ಅಪಾರ ಧೈರ್ಯದ ಅಗತ್ಯವಿರುತ್ತದೆ. ಒಂದು ವೇಳೆ ಧೈರ್ಯದ ದಾಸ್ತಾನು ಕಡಿಮೆಯಿದ್ದರೆ ಹೆಡ್ಡತನದ ಸರಕಾದರೂ ತಕ್ಕಮಟ್ಟಿಗೆ ಇರಬೇಕಾಗುತ್ತದೆ. ನಗೆ ನಗಾರಿಯಲ್ಲಿ ಎರಡನೆಯದಕ್ಕೆ ಯಾವ ಕೊರತೆಯೂ ಇಲ್ಲ. ಹೀಗಾಗಿ ನಾವು ನೇರವಾಗಿ, ದಿಟ್ಟವಾಗಿ, ನಿರಂತರವಾಗಿ ಹಾಗೂ ಸಾಧ್ಯವಾದಷ್ಟು ಮಟ್ಟಿಗೆ ಪ್ರಾಮಾಣಿಕವಾಗಿ ಉತ್ತರಿಸಬಹುದು.

ಸಂಗೀತದಿಂದ ಇರುವ ಉಪಯೋಗಗಳ ಬಗ್ಗೆ ಇದುವರೆಗೂ ಬೃಹತ್ ಗ್ರಂಥಗಳನ್ನೆಲ್ಲ ರಚಿಸಿರುವ ಮಹಾನುಭಾವರೆಲ್ಲ ಮರೆತ ಸತ್ಯವೊಂದಿದೆ. ಅದೆಂದರೆ: ಸಂಗೀತದಿಂದ ಸಂಗೀತಗಾರರಿಗೆ ಉಪಯೋಗವಿದೆ! ಹೌದು, ಸಂಗೀತ ಕಲಿತವನಿಗೆ ಸಮಾಜದಲ್ಲಿ ಸಿಕ್ಕುವ ಮನ್ನಣೆ, ಹಣಕಾಸು, ಸ್ಥಾನಮಾನ, ಅಕಾಡೆಮಿಗಳ ಪದವಿ, ಗೌರವ ಡಾಕ್ಟರೇಟು ಮುಂತಾದುವೆಲ್ಲಾ ಒಂದು ತೂಕದ್ದಾದರೆ ಸಂಗೀತ ಸದಾಕಾಲ ಸಂಗೀತಗಾರನ ಕೈಲಿ ಅಸ್ತ್ರದ ಹಾಗೆ ಶೋಭಿಸಿ ಆತನನ್ನು ಪೊರೆಯುತ್ತದೆ ಎಂಬುದು ಬಹುಮುಖ್ಯ ಉಪಯೋಗ. ಜಗತ್ತಿನಲ್ಲಿರಬಹುದಾದ ಅತಿ ಭಯಾನಕ ಹಾಗೂ ಅತಿ ಪರಿಣಾಮಕಾರಿಯಾದ ಎರಡು ಬೆದರಿಕೆಗಳೆಂದರೆ, ‘ನನ್ನ ಕವನ ಓದಲೇ?’ ಎಂಬುದು ಹಾಗೂ ‘ನನ್ನ ಸಂಗೀತ ಕೇಳ್ತೀರಾ?’ ಎಂಬುದು. ಕೆಲವರು ಸರಸ್ವತಿಯನ್ನು ಒಲಿಸಿಕೊಂಡು ಸಂಗೀತವನ್ನು ಬಳಸಿಕೊಂಡು ರಸಿಕರ ಮನಸ್ಸನ್ನು ರಂಜಿಸಿದರೆ ಹಲವರು ಸಂಗೀತವನ್ನು ಬಳಸಿ ಮನುಕುಲದ ಕಷ್ಟದ ಪರಂಪರೆಯನ್ನು ಹೆಚ್ಚಿಸುತ್ತಿದ್ದಾರೆ. ಕೆಲವರು ಸಂಗೀತದಿಂದ ಸ್ವರ್ಗವನ್ನೇ ಭೂಲೋಕಕ್ಕೆ ಎಳೆದು ತಂದರೆ ಹಲವರು ತಮ್ಮ ಸಂಗೀತ ಪ್ರತಿಭೆಯಿಂದ ಭೂಲೋಕವನ್ನೇ ನರಕಕ್ಕೆ ತಳ್ಳುತ್ತಿದ್ದಾರೆ. ಆದರೆ ಇಬ್ಬರಿಗೂ ತಮ್ಮ ಸಾಧನೆಗೆ ಸಂಗೀತ ಆವಶ್ಯಕ.

ಸಂಗೀತದಿಂದ ಮನೆ ಕೆಡುವುದು ತಪ್ಪುತ್ತಿದೆ. ತೂತು ಒಲೆ ಕೆಡಿಸಿತು, ಮಾತು ಮನೆ ಕೆಡಿಸಿತು ಎಂಬ ಗಾದೆ ಮಾತು ನಮ್ಮ ಕಡೆ ಭಾರಿ ಫೇಮಸ್ಸು. ಈ ಎರಡನೆಯ ಘನ ಕಾರ್ಯಕ್ಕೆ ನಮ್ಮ ಟಿವಿ ಚಾನೆಲ್ಲಿನ ಧಾರಾವಾಹಿಗಳು ಕೈಲಾದಷ್ಟು ನೆರವನ್ನು ನೀಡುತ್ತಿವೆ. ಆದರೆ ಈ ಘನಕಾರ್ಯಕ್ಕೆ ಕಂಟಕವಾಗಿರುವುದು ಸಂಗೀತ! ಹೌದು, ಸಂಗೀತ ಮನೆಗಳನ್ನು ಉಳಿಸುತ್ತಿದೆ. ಹೇಗೆನ್ನುತ್ತೀರಾ? ಒಂದು ಮನೆಯ ವಾರ್ತಯೆನ್ನು ಇನ್ನೊಂದು ಮನೆಗೆ ಹಬ್ಬಿಸಿ ಗಬ್ಬೆಬ್ಬಿಸುವ ಸಾಧನೆಯ ಕ್ರೆಡಿಟ್ಟು ಹೆಂಗಸರಿಗೆ ಸಲ್ಲಬೇಕು ಎಂಬುದನ್ನು ಎಲ್ಲಾ ಚಿಲ್ಲರೆ ಸಂಶೋಧಕರೂ ಒಪ್ಪುತ್ತಾರೆ. ಆದರೆ ಹೆಚ್ಚೆಚ್ಚು ಮಂದಿ ಮಹಿಳೆಯರು ಸಂಗೀತಾಭ್ಯಾಸ ಶುರು ಮಾಡಿದರೆ, ಅವರ ಬಾಯನ್ನು ಸಂಗೀತ ಆಕ್ರಮಿಸಿಕೊಂಡಿರುತ್ತಾದ್ದರಿಂದ ಗಾಸಿಪ್ಪಿಗೆ ಜಾಗ ಸಿಕ್ಕುವುದಿಲ್ಲ. ಇದರಿಂದ ಎಷ್ಟೋ ಮನೆಗಳು ನೆಮ್ಮದಿಯಿಂದಿರುತ್ತವೆ. ಮನೆಗಳು ನೆಮ್ಮದಿಯಿಂದಿದ್ದರೆ ಸಮಾಜವೂ ನೆಮ್ಮದಿಯಿಂದಿರುತ್ತದೆ. ಆದರೆ ಇದರಲ್ಲಿ ಒಂದು ತೊಡಕಿದೆ, ಸಂಗೀತಾಭ್ಯಾಸಿಗಳು ಹೆಚ್ಚಾದಷ್ಟೂ ಶಬ್ಧ ಮಾಲಿನ್ಯದ ಸಮಸ್ಯೆ ಹೆಚ್ಚಾಗುತ್ತದೆ!

ಸಂಗೀತ ರೋಗವನ್ನು ಗುಣ ಮಾಡುತ್ತದೆ, ಸಂಗೀತವನ್ನು ಕೇಳಿದ ಗಿಡಗಳು ಹೆಚ್ಚು ಎತ್ತರ ಬೆಳೆಯುತ್ತವೆ, ಸಂಗೀತವನ್ನು ಕೇಳುತ್ತಿದ್ದರೆ ಹಸು ಹೆಚ್ಚು ಹಾಲು ಕೊಡುತ್ತದೆ, ಸಂಗೀತದಿಂದ ಮಳೆ ಬರುತ್ತದೆ, ಸಂಗೀತದಿಂದ ಕಲ್ಲು ಬಂಡೆ ತೇಲುತ್ತದೆ, ಸಂಗೀತದಿಂದ ಕ್ರೂರ ಪ್ರಾಣಿಗಳು ಮೈಮರೆಯುತ್ತವೆ, ಸಂಗೀತಕ್ಕೆ ಹಾವು ತಲೆದೂಗುತ್ತದೆ ಎಂದೆಲ್ಲಾ ಹಲವರು ಭಾಷಣಗಳನ್ನು ಚಚ್ಚುತ್ತಿದ್ದರೂ ಇವಕ್ಕೆ ತಕ್ಕ ಮಟ್ಟಿಗೆ ಸಾಕ್ಷ್ಯಗಳು ಸಿಕ್ಕಿಲ್ಲ. ಆದರೆ ನಾವು ಹೇಳುತ್ತೇವೆ ಎಂದ ತಂತ್ರಜ್ಞಾನದ ಉಪಯೋಗಗಳ ಬಗ್ಗೆ ವ್ಯಾಪಕ ಸಾಕ್ಷಿಗಳು ಲಭ್ಯವಾಗಿವೆ. ಅಮೇರಿಕಾ ತನ್ನ ಭಯೋತ್ಪಾದನೆಯ ವಿರುದ್ಧ ಸಮರದಲ್ಲಿ ಬಂಧಿಸಿದ ಆರೋಪಿಗಳಿಂದ ಸತ್ಯವನ್ನು ಬಾಯ್ಬಿಡಿಸಲು ಅನೇಕಾನೇಕ ಪದ್ಧತಿಗಳನ್ನು ಬಳಸಿಕೊಳ್ಳುತ್ತದೆ. ಆದರೆ ಒಂದು ಪದ್ಧತಿ ಮಾತ್ರ ಅವರ ಅಪಾರ ವಿಶ್ವಾಸವನ್ನು ಗಳಿಸಿಕೊಂಡಿದೆ. ಅದೆಂದರೆ, ಅಮೇರಿಕಾದ ಪಾಪ್, ರಾಕ್, ಹಿಪ್ ಹಾಪ್ ಗಾಯಕರ ಆಲ್ಬಮುಗಳನ್ನು ಆರೋಪಿಗಳಿಗೆ ಕೇಳಿಸುವುದು! ಆ ಸಂಗೀತದ ವೈಭವವನ್ನು ಕೇಳಲಾಗದೆ ಆರೋಪಿಗಳು ಸತ್ಯವನ್ನು ಬಾಯ್ಬಿಡಬೇಕು!

ತಮ್ಮ ಸಂಗೀತ ದೇಶದ ರಕ್ಷಣೆಗೆ ಬಳಕೆಗೆ ಬರುತ್ತಿರುವುದನ್ನು ಕಂಡು ಹೆಮ್ಮೆ ಪಡಬೇಕಾದ ಸಂಗೀತ ವಿಶಾರದರು ಕುಪಿತರಾಗಿದ್ದಾರಂತೆ! ತಮ್ಮ ಸಂಗೀತವನ್ನು ಅಪರಾಧಿಗಳಿಗೆ ಟಾರ್ಚರ್ ನೀಡಲು ಬಳಸಬಾರದು. ಅವುಗಳಿರುವುದು ದೇಶದ ಪ್ರಜೆಗಳಿಗೆ ಮಾತ್ರ ಎಂದಿದ್ದಾರಂತೆ!

‘ಜೋಕು’ಮಾರ ಸ್ಪರ್ಧೆ

20 ಜನ

ನಗೆ ನಗಾರಿ ಡಾಟ್ ಕಾಮ್ ಎಂಬ ವಿಶ್ವದ ನಂಬರ್ ಒನ್ ಕನ್ನಡ ಹಾಸ್ಯ ಬ್ಲಾಗಿನ ಮೊದಲ ವಾರ್ಷಿಕೋತ್ಸದ ಅಂಗವಾಗಿ ನಾವು ಅನೇಕ ಸ್ಪರ್ಧೆಗಳನ್ನು, ವಿಶೇಷಗಳನ್ನು ಹಮ್ಮಿಕೊಂಡಿರುವುದು ಸೂರ್ಯನಷ್ಟೇ ಸತ್ಯವಾದ ಸಂಗತಿ. ಈ ಪ್ರಕ್ರಿಯೆಯ ಮೊದಲ ಭಾಗವಾಗಿ ನಾವು ಶುರು ಮಾಡಿದ ವಿತ್ರ ಗುಪ್ತ ಸ್ಪರ್ಧೆಯಲ್ಲಿ ನಾವು ಎಣಿಸಿದ್ದಕ್ಕಿಂತ ಸರಿಯಾಗಿ ನಾಲ್ಕೂವರೆ ಪಟ್ಟು ಸ್ಪರ್ಧಿಗಳು ಭಾಗವಹಿಸಿ ನಮಗೆ ಅಚ್ಚರಿ ಮೂಡಿಸಿದ್ದಾರೆ. ಹಾಗೆಯೇ ಈ ಸ್ಪರ್ಧೆಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ  ಓದುಗರು ಭಾಗವಹಿಸಿ ಸಾಮ್ರಾಟರಿಗೆ ಹೃದಯಾಘಾತ ಉಂಟು ಮಾಡಬೇಕಾಗಿ ವಿನಂತಿ!

‘ಜೋಕು’ಮಾರ ಸ್ಪರ್ಧೆ

ದಿನವೊಂದರಲ್ಲಿ ನಾವು ಹತ್ತಾರು ಜೋಕುಗಳನ್ನು ಕೇಳುತ್ತೇವೆ. ಮೂರ್ನಾಲ್ಕು ಜೋಕುಗಳನ್ನು ಕಟ್ ಮಾಡಿರುತ್ತೇವೆ. ಆದರೆ ಇವ್ಯಾವೂ ಸಹ ನಮ್ಮವಾಗಿರುವುದಿಲ್ಲ ಎಂಬುದು ಎಂಥ ದೊಡ್ಡ ಜೋಕ್ ಅಲ್ಲವೇ? ಜೋಕುಗಳು ಹುಟ್ಟುವುದು ಎಲ್ಲಿಂದ ಎಂದು ಮೂಲ ಹುಡುಕಿ ಹೊರಟವರು ಇನ್ನೂ ವಾಪಸ್ಸು ಬಂದು ಉತ್ತರ ಹೇಳಿಲ್ಲವಾದ್ದರಿಂದ ಆ ಪ್ರಶ್ನೆಯನ್ನು ಅದರ ಪಾಡಿಗೆ ಬಿಟ್ಟು ಬಿಡುತ್ತೇವೆ.

ನಿಮ್ಮದೇ ಒಂದು ಜೋಕನ್ನು ಸೃಷ್ಟಿ ಮಾಡಲು ನಿಮಗೆ ಸಾಧ್ಯವೇ? ನಿಮ್ಮಲ್ಲಿ ಅಡಗಿ ಕೂತಿರುವ ಜೋಕೆಂಬ ಒಸಾಮ ಬಿನ್ ಲಾಡನನ್ನನ್ನು ಹೊರಗಟ್ಟಲು ಸಾಧ್ಯವೇ? ಹಾಗಾದರೆ ತಡ ಮಾಡಬೇಡಿ, ನಮ್ಮ ಜೋಕುಮಾರ ಸ್ಪರ್ಧೆಯಲ್ಲಿ ಭಾಗವಹಿಸಿ. ನಿಮ್ಮ ಸ್ವಂತದ ಜೋಕನ್ನು ಜಗತ್ತಿಗೆ ಅರ್ಪಿಸಿ ಪುಣ್ಯ ಕಟ್ಟಿಕೊಳ್ಳಿ.

(ಜೋಕುಗಳು ಸ್ವಂತದ್ದಲ್ಲ, ಕದ್ದವು ಎಂಬುದು ಸಾಬೀತಾದರೆ ಅಪರಾಧಿಗಳನ್ನು ಅತ್ಯುಗ್ರವಾಗಿ ಶಿಕ್ಷಿಸಲಾಗುವುದು!)

– ನಗೆ ಸಾಮ್ರಾಟ್

ನಗೆಯ ಚಿತ್ರ

6 ನವೆಂ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’

ಈ ಸಂಚಿಕೆಯ ಒಂದು ಸ್ಯಾಂಪಲ್:

s5

ಈ ಪ್ರಪಂಚದ ಬಗ್ಗೆ ತಲೆ ಕೆಡಿಸ್ಕೊಂಡು ಸಾಕಾಗೋಯ್ತು!

ಇದು ಪ್ರತಿ ಕ್ಷಣದ ಅಚ್ಚರಿ!

10 ಸೆಪ್ಟೆಂ

(ನಗೆ ನಗಾರಿ ವೈಯಕ್ತಿಕ ಬ್ಯೂರೋ)

ನಾಡಿನ ಹೆಸರಾಂತ ಸಂಪಾದಕರು ನಡೆಸುವ ನೂರಾರು ಸಂಗತಿಗಳಲ್ಲಿ ಒಂದಾದ ಅದ್ಭುತ, ಅಮೋಘ ಟ್ಯಾಬ್ಲಾಯ್ಡ್‌‍ವೊಂದರ ಸಂದರ್ಶನಕ್ಕೆ ನಗೆ ಸಾಮ್ರಾಟರ ಛೇಲ ಕುಚೇಲ ಹಾಜರಾಗಿದ್ದ ಆಘಾತಕಾರಿ ಸಂಗತಿ ಇದೀಗ ತಾನೆ ಬಯಲಾಗಿದೆ. ನಗೆ ನಗಾರಿಯಲ್ಲಿನ ಸಂ-ಚೋದನೆಯಿಂದ ಬೋರು ಹೊಡೆದು ವಾರದ ಅಚ್ಚರಿಯಲ್ಲಿ ಪಾಲ್ಗೊಳ್ಳಲು ಆತ ಆತ ಸಂದರ್ಶನಕ್ಕೆ ಓಡಿದ್ದ ಎಂದು ತಿಳಿದುಬಂದಿದೆ.

ಸಂದರ್ಶನಕ್ಕೆ ಹಾಜರಾದ ನೂರು ಪ್ಲಸ್ ಅಭ್ಯರ್ಥಿಗಳಲ್ಲಿ ಕುಚೇಲನನ್ನು ಹೊರತು ಪಡಿಸಿದರೆ ಮತ್ತೆಲ್ಲರೂ ಶಿಫಾರಸ್ಸು ಪತ್ರಗಳನ್ನು ಕಿಸೆಯಲ್ಲಿ ಸಿಕ್ಕಿಸಿಕೊಂಡು ಬಂದಿದ್ದರು. ಕುಚೇಲ ಒಂದೊಂದೇ ಪತ್ರವನ್ನು ಇಣುಕಿಣುಕಿ ನೋಡಿದ, ಅಲ್ಲಿ ರಾಜಕಾರಣಿಗಳ ಹೆಸರು ಕಂಡದ್ದು ಕಡಿಮೆ. ಹೆಚ್ಚು ಹೆಸರುಗಳು ಕನ್ನಡ ನಾಡು ಮೆಚ್ಚಿ ಹಾಡಿ ಹೊಗಳಿದ ಚಲನ ಚಿತ್ರ ನಿರ್ದೇಶಕರು, ಖ್ಯಾತ ಅಂಕಣಕಾರರು ಹಾಗೂ ಪ್ರಖ್ಯಾತ ವಕೀಲರುಗಳ ಹೆಸರುಗಳೇ ಇದ್ದವು. ಸಂದರ್ಶನಕ್ಕೆ ಕದ್ದು ಹಾಜರಾಗುವ ಗಡಿಬಿಡಿಯಲ್ಲಿ ಕುಚೇಲ ಯಾವ ಶಿಫಾರಸ್ಸು ಪತ್ರಗಳನ್ನೂ ಒಯ್ಯಲು ಸಾಧ್ಯವಾಗಲಿಲ್ಲ. ನಗೆ ಸಾಮ್ರಾಟರು ಒಂದು ಪತ್ರ ಗೀಚಿಕೊಟ್ಟಿದ್ದರೆ ಎಷ್ಟು ಸುಲಭವಾಗುತ್ತಿತ್ತು ಕೆಲಸ ಎಂದು ಆತನಿಗೆ ಕ್ಷಣ ಮಾತ್ರಕ್ಕಾದರೂ ಅನ್ನಿಸಲಿಲ್ಲ ಎಂಬುದು ವರದಿಯಾಗಿದೆ.

ಸಂದರ್ಶನದ ದಿನ ಕುಚೇಲ ಟಿಪ್ ಟಾಪಾಗಿ ಡ್ರೆಸ್ ಮಾಡಿಕೊಂಡು ಟ್ಯಾಬ್ಲಾಯ್ಡಿನ ಕಛೇರಿಗೆ ಹೋಗಿದ್ದ. ಹಾಗೆ ಹೋಗುವ ಮುನ್ನ ಸಂದರ್ಶನಕ್ಕೆ ತಯಾರಿ ಮಾಡುವವನಂತೆ ಎರಡು ದಿನ ಹಾಗೂ ಒಂದು ರಾತ್ರಿ ಕುಳಿತು ಬಹುವಾಗಿ ಓದಿಕೊಂಡಿದ್ದ. ಪತ್ರಿಕೆಯ ಪ್ರಾರಂಭ, ಹಿನ್ನೆಲೆ, ನಿಲುವು, ವಸ್ತುನಿಷ್ಠತೆ, ಬದ್ಧತೆಯ ಬಗೆಗೆ ಆತ ತಲೆ ಕೆಡಿಸಿಕೊಳ್ಳಲಿಲ್ಲ. ಬದಲಾಗಿ ಸಂಪಾದಕರು ಯಾವುದೋ ದೂರದ ಊರಿನಿಂದ ಬೆಂಗಳೂರಿಗೆ ಹಾರಿ ಬಂದಾಗ ಅವರ ಕಿಸೆಯಲ್ಲಿದ್ದದ್ದು ಏನು? ಸಂಪಾದಕರು ಎಷ್ಟೆಲ್ಲಾ ಕಷ್ಟ ಪಟ್ಟು ಪತ್ರಿಕೆಯನ್ನು ಪ್ರಾರಂಭಿಸಿದರು? ಸಂಪಾದಕರು ದಿನಕ್ಕೆ ಸರಾಸರಿಯಾಗಿ ಎಷ್ಟು ಸಿಗರೇಟುಗಳನ್ನು ಸುಟ್ಟು, ಎಷ್ಟು ತಾಸುಗಳ ಕಾಲ ಓದಿ, ಎಷ್ಟು ಪುಟಗಳವರೆಗೆ ಕೈಬರಹ ಕೆಡದ ಹಾಗೆ ಬರೆಯುತ್ತಿದ್ದರು? ಸಂಪಾದಕರ ಹಳೆಯ ಗೆಳೆಯರುಗಳು ಯಾರು, ಗೆಳತಿಯರು ಯಾರು? ಯಾರ್ಯಾರ ಮನೆಯಲ್ಲಿ ಊಟ ಮಾಡಿ ಎಲ್ಲೆಲ್ಲಿ ಮಲಗಿ ಎದ್ದರು? ಸಂಪಾದಕರ ಮೆಚ್ಚಿನ ಲೇಖಕರು ಯಾರು, ನೆಚ್ಚಿನ ಪುಸ್ತಕ ಯಾವುದು? ಸಂಪಾದಕರಿಗೆ ಯಾವ ರೀತಿಯ ಬಟ್ಟೆ ಎಂದರೆ ಇಷ್ಟ? – ಎಂಬೆಲ್ಲಾ ವಿಷಯಗಳ ಬಗ್ಗೆ ಸವಿವರವಾಗಿ ಅಧ್ಯಯನ ಕೈಗೊಂಡು ತಯಾರಿ ನಡೆಸಿದ್ದ.

ತನ್ನ ಬಯೋ ಡೇಟಾದಲ್ಲಿನ ಹವ್ಯಾಸಗಳು, ಇಲ್ಲಿಯವರೆಗಿನ ಸಾಧನೆಗಳು ಮುಂತಾದ ಸಂಗತಿಗಳು ಸಂದರ್ಶಕರಿಗೆ ಅದೆಷ್ಟು ಗೌಣ ಎಂಬುದು ಕುಚೇಲ ಹೇಗೋ ಪತ್ತೆ ಮಾಡಿಬಿಟ್ಟಿದ್ದ. ಆತನ ಬಯೋಡೇಟಾದಲ್ಲಿ ಹವ್ಯಾಸಗಳು, ಕುಟುಂಬ, ಮಾತನಾಡುವ ಭಾಷೆಗಳು ಮುಂತಾದ ಕಾಲಮ್ಮುಗಳನ್ನು ಆತ ಸಂಪಾದಕರ ಹವ್ಯಾಸ, ಅವರ ಇಷ್ಟ, ಅವರ ಚಟಗಳು, ಅವರ ಸಾಧನೆಗಳಿಂದಲೇ ತುಂಬಿಸಿದ್ದ. ಕಡೆಗೆ ಒಂದು ಹೆಚ್ಚುವರಿ ಪುಟದಲ್ಲಿ ಸಂಪಾದಕರ ಮನೆಯವರ ಹಾಗೂ ಮನೆಯಲ್ಲಿರುವವರ ವಿವರಗಳು ಹಾಗೂ ಅವರ ಇಷ್ಟ ಕಷ್ಟ, ಸಾಧನೆಗಳ ಬಗೆಗೂ ಬರೆದಿದ್ದ.

ಸರಿ, ಸಂದರ್ಶನ ಪ್ರಾರಂಭವಾಯಿತು. ಪ್ರಶ್ನೆಗಳನ್ನು ಕೇಳಲಾಯಿತು. ಕುಚೇಲ ಮೊದಲೇ ಆದ್ಯಂತವಾಗಿ ತಯಾರಿ ನಡೆಸಿದ್ದರಿಂದ ಯಾವ ವಶೀಲಿಯೂ ಇಲ್ಲದೆ ಕೆಲಸಕ್ಕೆ ನೇಮಕಗೊಂಡ. ತಾಸೆರಡು ತಾಸು ಮೇಕಪ್ ಮಾಡಿಕೊಂಡು ಸಂಪಾದಕರೊಂದಿಗೆ ಫೋಟೊ ತೆಗೆಸಿಕೊಂಡು ಅದು ಪ್ರಕಟವಾಗುವ ಮುಂದಿನ ಸಂಚಿಕೆಗಾಗಿ ಕಾಯುತ್ತಾ ಕುಳಿತ.

ಇಷ್ಟೆಲ್ಲಾ ಆಗಿಯಾದ ಮೇಲೆ ಕುಚೇಲ ಇಂದು ನಮ್ಮ ಕಛೇರಿಗೆ ವಾಪಸ್ಸು ಓಡಿ ಬಂದಿರುವುದು ನಿಮಗಷ್ಟೇ ಅಲ್ಲದೇ ನಮ್ಮಲ್ಲೂ ವಿಸ್ಮಯ ಹಾಗೂ ಆಶ್ಚರ್ಯವನ್ನು ಹುಟ್ಟಿಸಿದೆ. ಇದಕ್ಕೆ ಕಾರಣವೇನೆಂದು ಕೇಳಲಾಗಿ, ಕುಚೇಲ ತನ್ನ ಕಷ್ಟವನ್ನು ತೋಡಿಕೊಂಡದ್ದು ಹೀಗೆ, “ಸಂದರ್ಶನಕ್ಕೆ ನಾನು ನಡೆಸಿದ ತಯಾರಿಯನ್ನು ಕಂಡು ನಿಜಕ್ಕೂ ಸಂದರ್ಶಕಿ ದಂಗು ಬಡಿದುಹೋಗಿದ್ದಳು. ಆಕೆಯ ಮಾತುಗಳಿಂದ ನನಗೆ ಕೆಲಸ ಗ್ಯಾರಂಟಿ ಎಂದು ಸಂದರ್ಶನ ಮುಗಿಯುತ್ತಿದ್ದ ಹಾಗೆಯೇ ತಿಳಿದು ಹೋಗಿತ್ತು. ನಾನು ಆ ದಿನದಿಂದಲೇ ಕೆಲಸ ಶುರು ಮಾಡಿಕೊಳ್ಳಲು ಬೇಕಾದ ತಯಾರಿ ಮಾಡಿಕೊಳ್ಳತೊಡಗಿದೆ. ವರದಿಗಾರಿಕೆಗೆ ಏನೇನೆಲ್ಲಾ ತಿಳಿದುಕೊಳ್ಳಬೇಕು ಎಂಬ ಬಗ್ಗೆ ಯೋಚಿಸತೊಡಗಿದೆ. ಯಾವ ಯಾವ ಸುದ್ದಿ ಮೂಲಗಳನ್ನು ಸಿದ್ಧಪಡಿಸಿಕೊಳ್ಳಬೇಕು, ಇನ್ ಫಾರ್ಮರುಗಳನ್ನು ಪರಿಚಯಿಸಿಕೊಳ್ಳಬೇಕು, ಯಾವ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿ ನನ್ನ ಪರಿಚಯ ಕೊಡಬೇಕು ಎಂದೆಲ್ಲಾ ಪಟ್ಟಿ ಮಾಡಿದೆ. ನಮ್ಮ ಸಂಪಾದಕರು ಹೇಳುವ ಹಾಗೆಯೇ ನಾನು ಪೂರ್ಣ ತಯಾರಿಯೊಂದಿಗೆ ಫೀಲ್ಡಿಗೆ ಇಳಿಯುವ ಹುಮ್ಮಸ್ಸಿನಲ್ಲಿದ್ದೆ.

“ಅಷ್ಟರಲ್ಲಿ ಪತ್ರಿಕೆಯ ಮೇಲ್ವಿಛಾರಕಿ ಬಂದು ನನಗೆ ಒಂದು ನೂರು ಪುಟಗಳ ಪುಸ್ತಕ ಕೊಟ್ಟಳು. ‘ಇದನ್ನು ಸ್ಟಡಿ ಮಾಡಿ ನೆನಪಿಟ್ಟುಕೊಂಡು ಆ ಮೇಲೆ ವರದಿಗಾರಿಕೆಗೆ ತೊಡಗಿಕೊಳ್ಳುವುದು’ ಎಂಬ ನೋಟ್ ಇತ್ತು. ಆ ಪುಸ್ತಕವನ್ನು ಓದಿ ಮುಗಿಸುವಷ್ಟರಲ್ಲಿ ಬವಳಿ ಬಂದು ನಾನು ಅಲ್ಲಿಂದ ಓಟಕಿತ್ತಿದ್ದೆ…”

ಸ್ವಲ್ಪ ಕಾಲ ಸುಧಾರಿಸಿಕೊಳ್ಳಲು ಮಾತು ನಿಲ್ಲಿಸಿದ ಕುಚೇಲ ನಗಾರಿ ಕಛೇರಿಯವರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ. ಮಾತು ಮುಂದುವರೆಸಿ, “ಆ ಪುಸ್ತಕದಲ್ಲೇನಿತ್ತು ಎಂಬುದು ನಿಮ್ಮ ಪ್ರಶ್ನೆಯಲ್ಲವೇ? ನನ್ನದೂ ಅದೇ ಪ್ರಶ್ನೆಯಾಗಿತ್ತು. ಪುಟ ತಿರುವಿ ನೋಡಿದೆ ಅದರಲ್ಲಿ ನೂರಾರು ಮಂದಿ ಪ್ರಮುಖರ, ಹೆಸರಾಂತ ಕಲಾವಿದರ, ಸಂಗೀತಗಾರರ, ವೈದ್ಯರ, ವಕೀಲರುಗಳ, ಪೊಲೀಸು ಆಫೀಸರುಗಳ, ಕೆಲವು ಪತ್ರಕರ್ತರ , ಮಠಾಧಿಪತಿಗಳ, ರಾಜಕಾರಣಿಗಳ ಹೆಸರುಗಳಿದ್ದವು. ಅವುಗಳ ಪಕ್ಕದ ಕಾಲಮ್ಮಿನಲ್ಲಿ ಇವರು ನಮ್ಮ ಸಂಪಾದಕರಿಗೆ ಹೇಗೆ ಪರಿಚಿತರು ಎಂಬುದರ ಬಗ್ಗೆ ಟಿಪ್ಪಣಿ ಇತ್ತು. ಕೆಲವರು ಸಂಪಾದಕರ ‘ಭಿಕಾರಿ’ ದಿನಗಳ ಒಡನಾಡಿಗಳು. ಕೆಲವರು ಸಂಪಾದಕರು ಪತ್ರಿಕೆಯನ್ನು ಕಟ್ಟಲು ಮೆಟ್ಟಿಲಾಗಿ, ಇಟ್ಟಿಗೆಯಾಗಿ ಬಳಸಿಕೊಂಡವರು, ಕೆಲವರು ಸಂಪಾದಕರ ಸೋದರಳಿಯನ ಸಂಬಂಧಿಕರ ಗೆಳೆಯರು, ಕೆಲವರು ಸಂಪಾದಕರ ನಿರ್ದೇಶನದ ಮುಂದಿನ ಚಿತ್ರಕ್ಕೆ ಸಂಗೀತ ಮಾಡುವವರು, ಹಾಡು ಬರೆಯುವವರು, ಕೆಲವರು ಸಂಪಾದಕರ ಕಾಲೇಜಿಗೆ ಗ್ರ್ಯಾಂಟ್ ಕೊಡುವವರು- ಹೀಗೆ ಡಿಟೇಲ್ಸ್ ಇದ್ದವು. ‘ಇದನ್ನೆಲ್ಲಾ ಅಧ್ಯಯನ ಮಾಡಿಕೊಂಡು ಯಾರು ಯಾರು ಸಂಪಾದಕರಿಗೆ ತುರ್ತು ಸಹಾಯಕ್ಕೆ ಆವಶ್ಯಕವೋ, ಯಾರು ಯಾರಿಂದ ಸಂಪಾದಕರಿಗೆ ಹತ್ತಿರದ ಭವಿಷ್ಯದಲ್ಲಿ ಲಾಭವಿದೆಯೋ ಅವರನ್ನು ಲೋಕದ ಇಂದ್ರ ಚಂದ್ರ ಎಂದು ಬರೆಯಬೇಕೆಂದೂ, ಕೆಲವು ರೆಡ್ ಮಾರ್ಕಿನ ಹೆಸರುಗಳ ವ್ಯಕ್ತಿಗಳ ಬಗೆಗೆ- ಅವರು ಕೆಮ್ಮಿದರೂ, ಅಪಾನವಾಯುವನ್ನು ಹೊರಬಿಟ್ಟರೂ ಅದು ಅವರ ನೈತಿಕ ಅಧಃಪಥನ ಎಂಬಂತೆ ಬರೆಯಬೇಕೆಂದು ಸೂಚನೆ ಇತ್ತು.

“ಈ ಮಾರ್ಗದರ್ಶಿ ಸೂತ್ರಗಳನ್ನು ನೆನಪಿನಲ್ಲಿಟ್ಟುಕೊಂಡು ವರದಿ ಮಾಡಬೇಕು. ಈ ಕೈಪಿಡಿಯ ಆಧಾರದ ಮೇಲೆಯೇ ಯಾರು ನಿಸ್ಪೃಹ ಅಧಿಕಾರಿ, ರಾಜಕಾರಣಿ, ಯಾರು ಕಚ್ಚೆ ಹರುಕ, ಯಾರು ಹೆಂಡತಿಗೆ ಹೊಡೆಯುತ್ತಾನೆ, ಯಾರಿಗೆ ಮಗಳಂಥ ಹೆಂಡತಿಯಂಥ ಗೆಳತಿಯಿದ್ದಾಳೆ ಎಂಬುದಾಗಿ ಬರೆಯಬೇಕು. ಈ ನಿಯಮಾನುಸಾರವೇ ಯಾವ ಸಿನೆಮಾ ಸೂಪರ್ ಹಿಟ್ಟು, ಮೆಗಾ ಹಿಟ್ಟು, ಯಾವುದು ಫ್ಲಾಪು, ಚಾಪ್ಟರ್ ಕ್ಲೋಸು ಎಂದು ಬರೆಯಬೇಕು. ಹಾಗೆಯೇ ಯಾವ ನಟ ರೈಸಿಂಗ್ ಸ್ಟಾರು, ಯಾವ ಯಾವ ಸ್ಟಾರು ಎಲ್ಲೆಲ್ಲಿ ಹುಟ್ಟಿತು, ಯಾವ ನಟಿ ಹೇಗೆ ಎಂಬುದನ್ನು ವರದಿ ಮಾಡಬೇಕು.’ ಎಂದು ನೂರು ಪುಟಗಳ ಕೈಪಿಡಿಯಲ್ಲಿತ್ತು… ಅದನ್ನು ಓದಿ ಬವಳಿ ಬಂದು ಬಸವಳಿದು ಒಂದೇ ಏಟಿಗೆ ಅಲ್ಲಿಂದ ಓಟಕ್ಕಿತ್ತಿ ಇಲ್ಲಿ ಸಾಮ್ರಾಟರ ನಗೆ ನಗಾರಿಗೆ ಹಿಂದಿರುಗಿರುವೆ” ಎಂದ.

ಈತನ ಬಗ್ಗೆ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ತೀರ್ಮಾನಿಸಲು ಸಾಮ್ರಾಟರು ನಗೆ ನಗಾರಿಯ ಏಕ ಸದಸ್ಯ ಕಮಿಟಿಯ ಸಮಸ್ತರನ್ನೂ ಮೀಟಿಂಗಿಗಿ ಕರೆದಿದ್ದಾರೆ.