Tag Archives: ನಗಾರಿ

ಸಂತಾಪಕೀಯ :‌ ಇಗೋ, ಮತ್ತೊಮ್ಮೆ ನಾವು ನಿಮ್ಮ ಮುಂದೆ!

15 ಆಗಸ್ಟ್

ಮೊದಲಿಗೆ ನಮ್ಮ ಸಾಮ್ರಾಜ್ಯದ ನಿಷ್ಠ ಪ್ರಜೆಗಳಿಗೆಲ್ಲ ಸ್ವಾತಂತ್ರ್ಯ ದಿನದ ಶುಭಾಶಯಗಳು. ಸ್ವಾತಂತ್ರ್ಯ ದಿನವಲ್ಲವೇ? ಎಲ್ಲರೂ ಸಿಹಿ ತಿನ್ನಿ. ತಿನ್ನಿ ಪರವಾಯಿಲ್ಲ. ಎರಡು ಕ್ಷಣ ನಾವು ಕಣ್ಣು ಮುಚ್ಚಿಕೊಂಡು ಕೂರುತ್ತೇವೆ. ನಮ್ಮ ನಿಷ್ಠಾವಂತ ಪ್ರಜೆಗಳು ಎರಡು ನಿಮಿಷದ ಮಟ್ಟಿಗೆ ತಾವು ಸ್ವತಂತ್ರರು ಎಂದು ಸಂಭ್ರಮಿಸಲು ಅವಕಾಶ ಕೊಡದಷ್ಟು ಕ್ರೂರಿಗಳೇ ನಾವು? ಹ್ಹಾ! ತಿಂದು ಬಿಡಿ ನಾವು ಕಣ್ಣು ಬಿಡುವುದರೊಳಗೆ ಕೈ ಬಾಯಿ ಒರೆಸಿಕೊಂಡು ಶ್ರದ್ಧೆಯಿಂದ ಮಂಡಿಯೂರಿ ಕೂತರೆ ಸಾಕು…

ನೋಡಿ, ಸಾಮ್ರಾಟರೆಂಬ ಪಟ್ಟ ನಾವು ಕೇಳಿ ಪಡೆದುದಲ್ಲ. “ತಮ್ಮ ಶಿಲುಬೆಯನ್ನು ತಾವೇ ಹೊರಬೇಕು” ಎನ್ನುವ ಪರಮಾತ್ಮ ಏಸುವಿನ ಜೀವನ ಸಂದೇಶದಂತೆ ನಾವು ನಮ್ಮ ಈ ಶಿಲುಬೆಯನ್ನು ಹೊತ್ತು ಬಂದಿದ್ದೇವೆ (ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಹೋದಾಗ ಮಾತ್ರ ಕ್ಷಣ ಮಾತ್ರಕ್ಕೆ ಅದನ್ನುವೈಕುಂಟಂ ಕ್ಯೂ ಕಾಂಪ್ಲೆಕ್ಸಿನಲ್ಲಿ ಇರಿಸಿಹೋಗುತ್ತೇವೆ). ನಮ್ಮ ಹೆಗಲ ಮೇಲಿನ ಭಾರ ನಮಗಷ್ಟೇ ಗ್ರಾಸವಾಗುವುದು. ಸಾಮ್ರಾಟರೆಂದ ಮಾತ್ರಕ್ಕೆ ನಾವು ಸರ್ವಾಧಿಕಾರಿಯಂತೆ ವರ್ತಿಸುವುದಕ್ಕೆ ಸಾಧ್ಯವೇ? ನಾವು ಇಷ್ಟು ಕಾಲ ಎಲ್ಲಿದ್ದೆವು, ನಗಾರಿ ಏಕೆ ಮೌನವಾಗಿತ್ತು ಎಂಬೆಲ್ಲ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಬಾಧ್ಯತೆ ನಮ್ಮದು. ಅದನ್ನು ತಪ್ಪಿಸಿಕೊಳ್ಳಲು, ಪ್ರಶ್ನೆ ಕೇಳಿದವರನ್ನು ಅಟ್ಟಿಸಿಕೊಂಡು ಹೋಗುವುದಕ್ಕೆ ನಾವೇನು ವೇಸ್ಟ್ ಬಂಗಾಲದ ದೊರೆಯೇ?

ಇರಲಿ, ನಿಮ್ಮ ಎಲ್ಲಾ ಸಂಶಯ ಸಂದೇಹಗಳಿಗೆ ಎಂದಿನಂತೆ ಪ್ರಜ್ವಲವಾದ ಸತ್ಯದ ಶುಭ್ರವಾದ ಪರದೆಯನ್ನೇ ಎಳೆಯುತ್ತೇವೆ.

ನಿಮಗೆಲ್ಲ ಆಶ್ಚರ್ಯವಾಗಬಹುದು. ನಿಮ್ಮ ಕಿವಿಗಳ ಮೇಲೆ ನಿಮಗೇ ಸಂಶಯ ಹುಟ್ಟಬಹುದು. ಆದರೂ ಕಿವಿಗೊಟ್ಟು ಕೇಳಿ. ನಾವು ನಗೆ ಸಾಮ್ರಾಟರಾದರೂ ಈ ಗೊಡ್ಡು, ನಗೆಹೀನ ಭರತ ಖಂಡಕ್ಕೆ ಸಾಮಂತರು ಮಾತ್ರ. ಇದನ್ನಾಳುವವರು ನಮಗಿಂತ ದೊಡ್ಡವರು. ಈ ದೊಡ್ಡವರ ದಡ್ಡತನ ತಿದ್ದಲ್ಲು ಮಗದೊಬ್ಬ ದೊಡ್ಡಣ್ಣ ಬೇಕು ಎಂದು ಚಳುವಳಿ ಪ್ರಾರಂಭ ಮಾಡಿದರು ಬಣ್ಣಾ ಮಜಾರೆ. ನೀವು ಗುಹೆಯಲ್ಲಿ ತಪಸ್ಸು ಮಾಡುತ್ತ, ಹೊಲದಲ್ಲಿ ಗೇಯುತ್ತ, ಐಐಟಿ ಎಂಟ್ರೆನ್ಸ್ ಎಗ್ಸಾಮಿಗಾಗಿ ಇರುಳು ದೀಪ ಉರಿಸುತ್ತಾ ಕೂತಿರದಿದ್ದರೆ ಖಂಡಿತವಾಗ್ಯೂ ಈ ಚಳುವಳಿ ಬಗ್ಗೆ ಕೇಳೇ ಇರುತ್ತೀರಿ.

ಬಣ್ಣಾ ಮಜಾರೆ ನಾಯಕತ್ವದಲ್ಲಿ ನಾವೂ ಸಹ ಚಳುವಳಿಯಲ್ಲಿ ಧುಮುಕಿದ್ದೆವು. ಐಸ್ ಕ್ರೀಮಿನಲ್ಲಿ ಸ್ವಾದವಿಲ್ಲ, ಚಹಾದಲ್ಲಿ ರುಚಿಯಿಲ್ಲ, ಕಾಫಿಯಲ್ಲಿ ಕೆಫೀನಿಲ್ಲ, ಅನ್ನದಲ್ಲಿ ಕಲ್ಲೇ ಎಲ್ಲ ಎಂದು ದೊಡ್ಡವರ ಕೊರಳ ಪಟ್ಟಿ ಹಿಡಿದು ಕೇಳುವುದಕ್ಕೆ ನಮಗೂ ಮೋಜು. ಗಂಟಲು ಹರಿಯುವಂತೆ ಕೂಗುತ್ತಿದ್ದೆವು. ಇನ್ನೇನು ನಮ್ಮೆಲ್ಲಾ ಕುಂದು ಕೊರತೆಗೆ ಇಲಾಜು ದೊರೆಯಿತು ಅನ್ನುವಷ್ಟರಲ್ಲಿ ಅಪ್ಪಳಿಸಿತೊಂದು ಸಿಡಿಲಾಘಾತ! ಊಟ, ತಿಂಡಿ ಬಿಟ್ಟು ಚಳುವಳಿ ಕೂತಿದ್ದ ಬಣ್ಣಾ ಮಜಾರೆ ಬೇಲಿಯೇ ಎದ್ದು ಹೊಲ ಮೇಯುವುದ ನೋಡೋಕಾಗಲ್ಲ, ಇದನ್ನ ತಡಿಯೋಕೆ ಹೊಲವೇ ಎದ್ದು ಬೇಲಿಯಾಗಬೇಕು ಎಂದು ಬಿಡಬೇಕೆ? ಶೀರ್ಷಾಸನದಲ್ಲಿದ್ದ ವಾಮದೇವ ಗುರೂಜಿ ಚಂಗನೆ ಧ್ವಜ ಸ್ಥಂಭವಾಗಿ ಬಿಟ್ಟರಲ್ಲ!

ನಾವು ಸಂಪೂರ್ಣವಾಗಿ ಭ್ರಮ ನಿರಸನಗೊಂಡು ರುಚಿಯಿಲ್ಲದ ಚಹಾದಲ್ಲಿ ನಮ್ಮೆಲ್ಲ ಹತಾಶೆಯನ್ನು ಮುಳುಗಿಸಿ ಕೈ ತೊಳೆಯುತ್ತಿರುವಾಗ ಇಬ್ಬನಿಯ ಎದೆಯಿಂಡ ಹೊಮ್ಮಿದ ಪರಿಮಳದಂಥ ಸೂರ್ಯನ ಕಾಂತಿಯಂತೆ ಬೆಳಗುವ ನಗೆ ನಗಾರಿ ಕಣ್ಣ ಮುಂದೆ ಬಂದಿತು. ಯಾರದೋ ಬೇಲಿ ಸರಿ ಮಾಡುವ ಉಮ್ಮೇದಿಯಲ್ಲಿ ನಮ್ಮ ಹೊಲವನ್ನು ತೊರೆದು ಹೋದ ಖೇದ ನಮ್ಮನ್ನಾವರಿಸಿತು. ಝಗ್ಗನೆ ಹೊತ್ತಿಕೊಂಡ ಅರಿವಿನ ಪಂಜು ಹಿಡಿದು ನಾವು ವಾಪಾಸ್ಸಾಗಿದ್ದೇವೆ. ನಿಮ್ಮ ಸೇವೆ ಸವಿಯಲು ಸಿದ್ಧರಾಗಿದ್ದೇವೆ.

ಹಳೆ ಹೇರು, ಹೊಸ ಡೈಯು ಕೂಡಿರಲು ವಿಗ್ಗು ಸೊಗಸು!

14 ಫೆಬ್ರ

ಹಳೆಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು ಎಂಬ ಕವಿವಾಣಿಯಿದೆ. ಇದನ್ನು ವಕ್ರವಾಗಿ ಅರ್ಥ ಮಾಡಿಕೊಂಡು ನಾವು ಹಳೆ ಹೇರು ಹೊಸ ಡೈಯು ಕೂಡಿರಲು ವಿಗ್ಗು ಸೊಗಸು ಎಂದು ಹೊಸ ಕಪಿವಾಣಿಗೆ ಜನ್ಮ ನೀಡಿದ್ದೇವೆ.

ವಯಸ್ಸು ಮಾಗಿತು ಎಂದು ಕೂದಲ ವಿರಹದಲ್ಲಿ ನರಳುವ ಬಕ್ಕ ಹಣೆ, ಮುದುರಿದ ಮುಖದ ಚರ್ಮ, ನಡುಗುವ ಕೈಗಳು, ಬಾಗಿದ ಬೆನ್ನು, ಮಂದವಾದ ಕಣ್ಣು, ಕಿವಿಗಳು, ಧುಮ್ಮಿಕ್ಕಿ ಹರಿಯುವ ಬಾಲ್ಯದ ನೆನಪುಗಳು, ಬೇಡವೆಂದರೂ ತೆರೆದುಕೊಳ್ಳುವ ಅನುಭವ ಕಂತೆ ಇವೆಲ್ಲ ಸಾರಿ ಸಾರಿ ಹೇಳಿದರೂ ಕೂದಲಿಗೆ ಬಣ್ಣ ಬಳಿದುಕೊಂಡು, ಮುಖಕ್ಕೆ ಕ್ರೀಮು ಬಳಿದು ಕೊಂಡು ಹೊಸ ಚಿಗುರಿನ ಸಂಭ್ರಮ ಪಡುತ್ತಾರೆ.

ಈ ಜನಪ್ರಿಯ ಧೋರಣೆಗೆ ನಾವೇಕೆ ಅಪವಾದವಾಗೋಣ ಎಂದುಕೊಂಡು ನಾವೂ ಹೊಸ ಚಿಗುರು ಕಾಣುವ ಪ್ರಯತ್ನದಲ್ಲಿದ್ದೇವೆ. ಸಾಮ್ರಾಜ್ಯದಲ್ಲಿ ನೀಡಿದ ಭರವಸೆಗಳನ್ನು ನೆನಪಿಟ್ಟುಕೊಳ್ಳಲಾಗದ ಮಾಗಿದ ವಯಸ್ಸನ್ನು ಮುಟ್ಟಿದ ನಮ್ಮನ್ನು ಅಂತರ್ಜಾಲದ ಅನಭಿಷಿಕ್ತ ದೊರೆಯಾಗಿಸುವ ನಾರದ, ಕುಚೇಲರ ಉತ್ಸಾಹಕ್ಕೆ ತಣ್ಣೀರೆರಚುವ ಮನಸ್ಸಾಗಲಿಲ್ಲ.

ಜಗತ್ತಿಗೆ ಜಗತ್ತೇ ಓಬಿರಾಯನ ಕಾಲದ್ದು ಎನ್ನುವಂತಾಗಿರುವ ಟ್ವಿಟರಿಗೆ ನಮ್ಮನ್ನು ಇವರು ಪರಿಚಯಿಸಿದರು. ನಮ್ಮ ಅಗಣಿತ ಪಾಂಡಿತ್ಯವನ್ನು, ಅನಂತ ಪ್ರತಿಭೆಯನ್ನೂ 140 ಅಕ್ಷರಗಳಿಗೆ ಇಳಿಸುವ ಶ್ರಮ ವಿವರಿಸುವುದೆಂತು? ನಗಾರಿಯಲ್ಲಿ ಪುಟಗಟ್ಟಲೆ ಕೊರೆಯುವ ನಮಗೆ ಅದು ಬಹುದೊಡ್ಡ ವೈಕಲ್ಯವೇ ಆಗಿ ಹೋಗಿತ್ತು.

ಫೇಸ್ ಇಲ್ಲದ ನಮ್ಮನ್ನು ಒಯ್ದು ಫೇಸ್ ಬುಕ್ಕಿಗೂ ಅಂಟಿಸಿಬಿಟ್ಟರು. ನಮ್ಮ ವಜನು, ಆರಾ, ಗ್ಲಾಮರುಗಳಿಗೆ ಮರುಳಾಗಿ ಕನ್ಯಾಮಣಿಗಳು ಮುಗಿಬೀಳಬಾರದೆಂಬ ಎಚ್ಚರಿಕೆಯಿಂದ ನಮ್ಮ ಅಸಲಿ ಜನ್ಮ ದಿನಾಂಕವನ್ನೇ ಪ್ರಕಟಿಸಿದ್ದೇವೆ.

ಎರಡನೆಯ ವರ್ಷದ ಹುಟ್ಟು ಹಬ್ಬದ ಸಂದರ್ಭ ನಾನಾ ಹೊಸತನಗಳನ್ನು ನಗೆ ನಗಾರಿಗೆ ಸೇರಿಸುವ ಹುಮ್ಮಸ್ಸಿನಲ್ಲಿದ್ದೇವೆ. ಒಂದಿಷ್ಟು ದಿನ ಈ ಆರಂಭಶೂರತ್ವವನ್ನು ಸಹಿಸುವ ಜವಾಬ್ದಾರಿ ನಿಮ್ಮದು!

– ನಗೆ ಸಾಮ್ರಾಟ್

ಓದುಗರ ದುಃಖದ ಮೇಲೆ ಯುದ್ಧ ಜಾರಿಯಲ್ಲಿರಲಿ…..

14 ಫೆಬ್ರ

ತಮ್ಮ ಪತ್ರಿಕೆ, ಬ್ಲಾಗುಗಳ ಹುಟ್ಟು ಹಬ್ಬದ ದಿನ ಅವುಗಳ ಸಂಪಾದಕರು, ಮಾಲೀಕರು ಕಂಡಕಂಡವರಿಂದ ಅಭಿನಂದನೆಗಳನ್ನು ಬೇಡಿ ಪಡೆಯುತ್ತವೆ. ಬ್ಲಾಗನ್ನು ಎಂದೂ ಓದದ ದೊಡ್ಡವರಿಂದ ವಿಮರ್ಶೆಗಳನ್ನು ಸಂಪಾದಿಸಿ ಪ್ರಕಟಿಸುತ್ತವೆ. ನಗೆ ನಗಾರಿ ಡಾಟ್ ಕಾಮ್‌ಗೆ ಎರಡು ವರ್ಷ ತುಂಬಿದ ಸಂತಸದ ಸಂರ್ಭದಲ್ಲಿ ನಾವು ಅದೇ ಸಂಪ್ರದಾಯ ಪಾಲಿಸಲು ಇಚ್ಛಿಸುವುದಿಲ್ಲ.

ನಮ್ಮ ಬ್ಲಾಗಿನ ನಿಯಮಿತ ಓದುಗರಾದ, ಸತ್ರ್ಪಜೆಗಳಾದ ಮಂದಿಯಿಂದ ಅವರ ಪ್ರಾಮಾಣಿಕ ಅನಿಸಿಕೆಯನ್ನ ಕೇಳಿದ್ದೇವೆ. ಅದನ್ನು ಚೂರೂ ಕತ್ತರಿಸದೆ ಪ್ರಕಟಿಸುತ್ತೇವೆ. ನಗೆ ನಗಾರಿ ಡಾಟ್ ಕಾಮ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ನೇರವಾಗಿ ಕಳಿಸಬಹುದು (nagesamrat [at] gmail.com)

– ನಗೆ ಸಾಮ್ರಾಟ್

ಬ್ಲಾಗುಲೋಕದಲ್ಲಿ (ನಿಜವಾದ) ಹಾಸ್ಯ ಸಾಹಿತ್ಯ ತುಂಬಾ ಕಡಿಮೆ ಇದೆ. ಅದರ ಕೊರತೆ ನೀಗಿಸುವಲ್ಲಿ ನಿಮ್ಮ ಪ್ರಯತ್ನ ದೊಡ್ಡದು. ನನಗೆ ಪರ್ಸನಲ್ಲಾಗಿ ಈ ಬ್ಲಾಗ್ ಇಷ್ಟ ಯಾಕೆಂದರೆ ಇದರಲ್ಲಿನ ಜಾಣ್ಮೆಯುಕ್ತ ಬರಹಗಳು. ಹಾಸ್ಯ ಬರೆಯಲು ತುಂಬಾ ಬುದ್ಧಿಶಕ್ತಿ ಬೇಕು ಅನ್ನೋದು ನನ್ನಭಿಪ್ರಾಯ.( "ನನ್ನನ್ನು ನೋಡಿದರೆ ಹಾಗನ್ನಿಸುತ್ತದಾ?" ಅಂತ ಸ್ವತಃ ಅಚ್ಚರಿ ಪಡಬೇಡಿ). ಬರಹದಲ್ಲಿ ಅಲ್ಲದೇ ಪ್ರತಿಕ್ರಿಯೆಯಲ್ಲೂ ನಿಮ್ಮನ್ನು ಕೆಣಕುವುದು, ಅದಕ್ಕೆ ನೀವಿತ್ತ ಉತ್ತರಕ್ಕೆ ಅಚ್ಚರಿ ಪಡುವುದು ಇವು ನನಗಂತೂ ಸಾಮಾನ್ಯವಾಗಿಬಿಟ್ಟಿದೆ.

ಒಂದೆರಡು ಪಾಯಿಂಟುಗಳು ನಿಮ್ಮ ಮುಂದಿನ ದಾರಿಗೆ. ಆಗಾಗ್ಗೆ ಇನ್ನೇನು ನಿಂತುಬಿಡುತ್ತದೆ ಅನ್ನುವ ಭಯ ಪ್ರಜೆಗಳಿಗೆ ಇನ್ನು ಮುಂದಾದರೂ ಮೂಡಿಸದಿರಿ. ಹಾಗೇನೇ ಬರಹದಲ್ಲಿ ಇನ್ನಷ್ಟು ವೈವಿಧ್ಯತೆಗಳು ಬರಲಿ ಎಂಬ ಆಸೆ ವ್ಯಕ್ತಪಡಿಸುತ್ತೇನೆ. ಬರಹಗಳು ಚುರುಕಾಗಲಿ ಮತ್ತು ನಗದವರಿಗೆ ಚುರುಕು ಮುಟ್ಟಿಸಲಿ.

ಹೆಚ್ಚು ಕಾವ್ಯಾತ್ಮಕವಾಗಿ ಹೊಗಳಿದರೂ ನಮಗೆ ಚಿನ್ನದ ಹಾರ, ನೆಕ್ಲೇಸು, ಗಿಫ್ಟ್ ಹ್ಯಾಂಪರ್ರುಗಳು ಈ ಸಾಮ್ರಾಜ್ಯದಲ್ಲಿ ಗಿಟ್ಟುವುದು ಅಷ್ಟರಲ್ಲೇ ಇದೆ ಎಂಬ ಸತ್ಯದ ಅರಿವಿರುವುದರಿಂದ ನನ್ನ ಮಾತು ಇಷ್ಟಕ್ಕೇ ಮುಗಿಸುವೆ.

ಸಾಮ್ರಾಜ್ಯದಲ್ಲಿ ನಗಾರಿ ಮೊಳಗುತಿರಲಿ. ಓದುಗರ ದುಃಖದ ಮೇಲೆ ಯುದ್ಧ ಜಾರಿಯಲ್ಲಿರಲಿ.

-ರಂಜಿತ್ ಅಡಿಗ, ಸಿಂಗಾಪುರ