ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ಪ್ರತಿ ಸಂಚಿಕೆಯಲ್ಲೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.
…………………………………….
ರಾಜಕೀಯ ವಿಡಂಬನೆ ಎನ್ನುವುದು ಮಾಧ್ಯಮ ರಂಗದ ಮೊನಚಾದ ಅಸ್ತ್ರ. ನಾಡನ್ನು ಆಳುವವರನ್ನು ಚುಚ್ಚುವ ಸೂಕ್ತವಾದ ಸೂಜಿ. ತಪ್ಪು ಮಾಡಿದವರನ್ನು ಗೇಲಿ
ಮಾಡುವುದು, ಅವರ ಅಪರಾಧಕ್ಕಾಗಿ ಬೆಲೆ ತೆರೆವಂತೆ ಮಾಡುವುದು ಸಹ ಅತ್ಯಂತ ಜವಾಬ್ದಾರಿಯುತ ಪತ್ರಿಕೋದ್ಯಮವೇ. ಕನ್ನಡದ ಪತ್ರಿಕೆಗಳಲ್ಲಿ ರಾಜಕೀಯ ವಿಡಂಬನೆಗೆ ಕೊರತೆಯಿಲ್ಲ. ಪ್ರತಿದಿನ ತಪ್ಪದೆ ಪ್ರಕಟವಾಗುವ ವ್ಯಂಗ್ಯಚಿತ್ರಗಳು ಆಳುವವರನ್ನು, ಅವರ ನೀತಿಗಳನ್ನು, ವರ್ತನೆಗಳನ್ನು ಲೇವಡಿ ಮಾಡುವುದನ್ನು ನಾವು ಕಾಣುತ್ತೇವೆ. ಟೈಮ್ಸಾಫಿಂಡಿಯಾದ ಟ್ರೇಡ್ ಮಾರ್ಕ್ ಆದ ಆರ್.ಕೆ.ಲಕ್ಷ್ಮಣ್ ಕಾರ್ಟೂನುಗಳಿಂದ ಹಿಡಿದು ಪ್ರಜಾವಾಣಿಯ ಮಹಮ್ಮದ್‌ರ ಕಾರ್ಟೂನುಗಳವರೆಗೆ ನಮ್ಮ ನಾಡಿನ ರಾಜಕೀಯವನ್ನು ಸೀಳಿ ನೋಡುವ, ಹುಳುಕನ್ನು ಬಯಲು ಮಾಡುವ ಹುಮ್ಮಸ್ಸು ಕಾಣುತ್ತದೆ.
ಆದರೆ ಟಿವಿ ಮಾಧ್ಯಮದಲ್ಲಿ ಈ ಶೈಲಿಯನ್ನು ಸಮರ್ಪಕವಾಗಿ ಬಳಸಿಕೊಂಡ ಉದಾಹರಣೆಗಳು ನಮಗೆ ಕಾಣುವುದಿಲ್ಲ. ಅಗ್ಗದ ಮಿಮಿಕ್ರಿಯನ್ನೇ ರಾಜಕೀಯ ವಿಡಂಬನೆ ಎಂದು ತಿಳಿದು ಹಾಸ್ಯವನ್ನು ಒದಗಿಸುವವರೇ ಹಾಸ್ಯಾಸ್ಪದರಾಗುತ್ತಿರುವುದು ನಿಜಕ್ಕೂ ಒಳ್ಳೆಯ ಜೋಕು! ಹಾಗಾದರೆ ರಾಜಕೀಯ ವಿಡಂಬನೆಯನ್ನು ಟಿವಿ ಮಾಧ್ಯಮದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುವುದು ಎಂದರೆ ಹೇಗೆ ಎಂಬುದಕ್ಕೆ ಒಂದು ಉದಾಹರಣೆ ಕೊಡಬೇಕಲ್ಲವೇ?
ಈತ ಸ್ಟೀಫನ್ ಟೈರನ್ ಕೋಲ್ಬರ್ಟ್ (Stephen Tyrone Colbert ), ತನ್ನ ಹೆಸರನ್ನು ಕೋಲ್ಬರ್ಟ್ ಎನ್ನಬೇಡಿ, ಕೋಲ್‌ಬೇರ್ ಎನ್ನಿ ಎಂದು ಹೇಳುವ ಈತ ‘ದಿ ಕೊಲ್‌ಬೇರ್ ರಿಪೋರ್ಟ್’ ಎಂಬ ಟಿವಿ ಕಾರ್ಯಕ್ರಮವನ್ನು ಕಾಮಿಡಿ ಸೆಂಟ್ರಲ್ ಟಿವಿ ವಾಹಿನಿಗೆ ಕಳೆದ ಮೂರು ವರ್ಷಗಳಿಂದ ನಡೆಸಿ ಕೊಡುತ್ತಿದ್ದಾನೆ. ಈತ ಕಾರ್ಯಕ್ರಮ ಕೇವಲ ಅರ್ಧ ಗಂಟೆಯದಾದರೂ ಅದು ವಿಶಿಷ್ಟವಾಗಿರುತ್ತದೆ, ವೈವಿಧ್ಯಮಯವಾಗಿರುತ್ತದೆ. ಪ್ರತಿ ಕಾರ್ಯಕ್ರಮದಲ್ಲಿ ಒಬ್ಬ ಅತಿಥಿಯನ್ನು ಸಂದರ್ಶಿಸಲಾಗುತ್ತದೆ. ಈತನ ನಿರೂಪಣೆಯಲ್ಲೂ ವಿಶಿಷ್ಟತೆ ಇದೆ. ಅಮೇರಿಕಾದಲ್ಲಿ ತನ್ನ ಪೂರ್ವಾಗ್ರಹ ಪೀಡಿತ ವರದಿಗಾರಿಕೆಗೆ ಕುಖ್ಯಾತಿ ಹೊಂದಿರುವ ಫಾಕ್ಸ್ ನ್ಯೂಸ್ ಚಾನೆಲ್ಲಿನ ಆಂಕರ್ ಬಿಲ್ ಓ ರೆಲಿಯ ಸ್ವಕೇಂದ್ರಿತ, ಆಕ್ರಮಣಕಾರಿ, ಅಹಂಕಾರ ಭರಿತ ಶೈಲಿಯನ್ನು ಗೇಲಿ ಮಾಡುವುದಕ್ಕಾಗಿ ಈತ ಅದೇ ಶೈಲಿಯನ್ನು ವೈಭವೀಕರಿಸಿ ಅಳವಡಿಸಿಕೊಂಡಿದ್ದಾನೆ.
ಈತನ ರಾಜಕೀಯ ವಿಡಂಬನೆಯ ಹರಿತತೆಯನ್ನು ತಿಳಿಯುವುದಕ್ಕೆ ಈತ ೨೦೦೬ರ ಶ್ವೇತ ಭವನದ ಮಾಧ್ಯಮ ಪ್ರತಿನಿಧಿಗಳ ಸಂಘದ ವಾರ್ಷಿಕ ಭೇಟಿಯಲ್ಲಿ ಅಂದಿನ ಅಧ್ಯಕ್ಷ ಜಾರ್ಜ್.ಡಬ್ಲು.ಬುಶ್ ಎದುರಲ್ಲೇ ಆತನ ಸಣ್ಣತನಗಳನ್ನು, ತಪ್ಪು ನಿರ್ಧಾರಗಳನ್ನು, ಆಡಳಿತದ ಹುಳುಕುಗಳನ್ನು ಲೇವಡಿ ಮಾಡಿದ ಈ ಕ್ಲಿಪ್ಪನ್ನು ನೀವು ನೋಡಬೇಕು.
ಈತನ ‘ದಿ ಕೋಲ್‌ಬೇರ್ ರಿಪೋರ್ಟ್’ ಕಾರ್ಯಕ್ರಮವನ್ನು ಅಂತರ್ಜಾಲದಲ್ಲಿ ವೀಕ್ಷಿಸಲು ಇಲ್ಲಿ ಭೇಟಿ ನೀಡಿ.
ಇದು ಈ ಸಂಚಿಕೆಯ ನಗಾರಿ ರೆಕಮಂಡೇಶನ್!
ಟ್ಯಾಗ್ ಗಳು:ಆರ್.ಕೆ.ಲಕ್ಷ್ಮಣ್, ಕೋಲ್‌ಬೇರ್ ರಿಪೋರ್ಟ್, ನಗಾರಿ ರೆಕಮಂಡೇಶನ್, ಮಹಮದ್, Stephen colbert, The colbert report
ಇತ್ತೀಚಿನ ಪ್ರಜಾ ಉವಾಚ