ಅವನದೆಂತಹ ಶ್ರೇಷ್ಠ ವಿಜ್ಞಾನಿಯೇ ಆಗಲಿ, ಆತನಿಂದ ಕಾಲ್ಪನಿಕ ವ್ಯಕ್ತಿಯನ್ನು, ವಸ್ತುವನ್ನು ಇಲ್ಲ ಎಂದು ಸಾಬೀತು ಮಾಡಲಿಕ್ಕೆ ಸಾಧ್ಯವಿಲ್ಲ ಎನ್ನುತ್ತದೆ ತರ್ಕ.
ಇದನ್ನು ವಿವರಿಸಲು ಖ್ಯಾತ ದಾರ್ಶನಿಕ ಬರ್ಟ್ರಂಡ್ ರಸೆಲ್ ಭೂಮಿಯ ಸುತ್ತಲಿನ ಕಕ್ಷೆಯಲ್ಲಿ ಟೀ ಪಾಟ್ ಒಂದು ಸುತ್ತುತ್ತಿದೆ ಎಂದ. ಅದನ್ನು ಅಲ್ಲಗಳೆಯಲು ಸಾಧವೇ ಇರಲಿಲ್ಲ. ಆದರೆ ಮನುಷ್ಯ ಅಂತರಿಕ್ಷಕ್ಕೆ ಜಿಗಿಯುವಲ್ಲಿ ಸಫಲನಾಗಿ, ಭೂಕಕ್ಷೆಯಲ್ಲಿ ಟೀ ಪಾಟ್ ಅಷ್ಟೇ ಏಕೆ ದೊಡ್ಡ ಉಪಗ್ರಹವನ್ನೇ ಇಡಬಲ್ಲವನಾದಾಗ ರಸೆಲ್ ಮಾತನ್ನು ಸುಳ್ಳು ಎಂದು ಸಾಬೀತು ಮಾಡಲು ಅವಕಾಶವಾಯಿತು.
ಆದರೆ ರಸೆಲ್ ಈಗ ಬದುಕಿದ್ದರೆ ತನ್ನ ಪ್ರಶ್ನೆಯಲ್ಲಿ ಸಣ್ಣ ಮಾರ್ಪಾಡು ಮಾಡಿ ಭೂಕಕ್ಷೆಯಲ್ಲಿ ಕಣ್ಣಿಗೆ ಕಾಣದ, ವಾಸನೆಯಿಲ್ಲದ, ಸದ್ದು ಹೊರಡಿಸದ, ರೆಡಾರ್ ಗಮನಕ್ಕೆ ಬಾರದ, ವಿಕಿರಣ ಹೊರಸೂಸದ ಟೀ ಪಾಟ್ ಸುತ್ತುತ್ತಿದೆ ಎನ್ನುತ್ತಿದ್ದನೇನೋ!
ಇರಲಿ, ಇವೆಲ್ಲ ಪೀಠಿಕೆ ಪ್ರಸ್ತಾವನೆಯ ಅಗತ್ಯವೇನೆಂದರೆ, ನಮ್ಮ ಈ ಸಂಚಿಕೆಯ ರೆಕಮಂಡೇಶನ್ ಜಗತ್ತಿನಲ್ಲೇ ಅತಿ ವಿವಾದಾಸ್ಪದ ವ್ಯಕ್ತಿಗೆ ಸಂಬಂಧಿಸಿದ್ದು. ವಿವಾದ ಹುಟ್ಟಿಕೊಳ್ಳುವುದಕ್ಕೆ ಖುದ್ದು ಆ ವ್ಯಕ್ತಿಯು ಏನನ್ನೂ ಮಾಡಿಲ್ಲವಾದರೂ ಆತನ ಸುತ್ತಲಿರುವ ವಿವಾದದ ಶಾಖ ಅತಿ ಪ್ರಬಲವಾದದ್ದು. ಈ ವಿವಾದ ನಮ್ಮ ಟಿವಿ ‘ಸಚ್ಕಾ ಸಾಮ್ನಾ’ ಆಗುವುದಕ್ಕೆ ಮುಂಚಿನಿಂದಲೂ ಜೀವಂತವಾಗಿದೆ ಎಂದರೆ ಅದೆಷ್ಟು ಪ್ರಾಚೀನವಾದದ್ದು ಹಾಗೂ ಜನಪ್ರಿಯವಾದದ್ದು ಎನ್ನುವುದು ಅರಿವಾಗುತ್ತದೆ.
ಹೌದು! ನಿಮ್ಮ ಊಹೆ ಸರಿಯೇ. ಆತ ಆ ದೇವರು.
ದೇವರು ಹೇಗಿದ್ದಾನೆ, ಆತನ ರೂಪ ಯಾವುದು, ಆತನ ಲಿಂಗ ಯಾವುದು, ಆತ ಯಾರನ್ನು ಸ್ವರ್ಗಕ್ಕೆ ಕಳುಹಿಸುತ್ತಾನೆ, ಯಾರನ್ನು ನರಕಕ್ಕೆ ಅಟ್ಟುತ್ತಾನೆ ಎಂಬಿತ್ಯಾದಿ ಪ್ರಶ್ನೆಗಳು ಸರಕಾರಿ ಕಛೇರಿಯ ಗುಮಾಸ್ತರಿದ್ದ ಹಾಗೆ ಎಷ್ಟು ತುರುಕಿದರೂ ತೃಪ್ತವಾಗುವುದಿಲ್ಲ. ಈ ಪ್ರಶ್ನೆಗಳ ಗುಮಾಸ್ತರ ಹೊಟ್ಟೆ ತಣಿಸುವ ಹೊಸ ಪ್ರಯತ್ನ ಸಂಪದ ಸಮುದಾಯ ತಾಣದಲ್ಲಿ ಸುಪ್ರೀತ್.ಕೆ.ಎಸ್ ಎಂಬುವವರು ನಡೆಸುತ್ತಿದ್ದಾರೆ.
ಒಂದು ಎಚ್ಚರ: ಈ ರೆಕಮಂಡೇಶನ್ ಬುದ್ಧಿವಂತರಿಗೆ ಮಾತ್ರ. ಇದನ್ನು ಓದುವುದರಿಂದುಂಟಾಗುವ ಮಾನಸಿಕ ಕ್ಲೇಷಾದಿಗಳಿಗೆ ನಾವು ಜವಾಬ್ದಾರರಲ್ಲ.
ಸ್ವಘಟ್ಟಿ ತತ್ವಚಿಂತನೆಯ ಸ್ಯಾಂಪಲ್ ನಗಾರಿ ಸಾಮ್ರಾಜ್ಯದ ಪ್ರಜೆಗಳಿಗಾಗಿ:
ಈ ಜಗತ್ತಿನಲ್ಲಿ ಸ್ವಘಟ್ಟಿ ಎಂಬ ಮೂರು ಕೈಗಳ, ನಾಲ್ಕು ನಾಲಿಗೆಗಳ, ಎರಡು ತಲೆಗಳ, ಹದಿನಾರು ಕಿಡ್ನಿಗಳ ಮನುಷ್ಯ ಇಲ್ಲವೇ ಇಲ್ಲ ಎನ್ನುವುದು ಅನಾಗರೀಕರಾದ, ಕಾಮನ್ ಸೆನ್ಸ್ ಇಲ್ಲದ, ವಿತಂಡ ವಾದಿಗಳಾದ, ನರಕವನ್ನೇ ಭವಿಷ್ಯವನ್ನಾಗಿ ಹೊಂದಿರುವ ನಾಸ್ತಿಕರ ವಾದ. ಇವರು ನಮ್ಮೆಲ್ಲರನ್ನು ಕಾಯುವ, ತನ್ನ ಹದಿನಾಲ್ಕು ಕಿಡ್ನಿಗಳಿಂದ ನಮ್ಮ ಪಾಪಗಳನ್ನು ಶುದ್ಧೀಕರಿಸಿ ಜಗತ್ತನ್ನು ಉದ್ಧಾರ ಮಾಡುವ ಸ್ಬಘಟ್ಟಿಯ ಅಸ್ತಿತ್ವವನ್ನೇ ಪ್ರಶ್ನಿಸುತ್ತಾರೆ. ಉದ್ದುದ್ದ ಭಾಷಣ ಚಚ್ಚುತ್ತಾರೆ.
ಇವರಿಗೆ ಸ್ವಘಟ್ಟಿಯ ಮಹಿಮೆಯ ಬಗ್ಗೆ ಆತನ ಮೂರು ಕೈಯ ವೈಶಿಷ್ಟ್ಯದ ಬಗ್ಗೆ ಹೇಳಲು ಹೋದರೆ, ಸ್ವಘಟ್ಟಿಯನ್ನು ಆರಾಧಿಸಿ ಎನ್ನಲು ಹೋದರೆ ಸ್ವಘಟ್ಟಿ ಇರುವುದಕ್ಕೆ ಸಾಧ್ಯವೇ ಇಲ್ಲ. ಆತ ಇದ್ದಾನೆ ಎನ್ನುವುದಕ್ಕೆ ಸಾಕ್ಷಿ ಕೊಡು ಎನ್ನುತ್ತಾರೆ. ಮನುಷ್ಯನಿಗೆ ಎರಡು ಕೈ ಒಂದು ತಲೆ, ಒಂದು ನಾಲಿಗೆ ಇರುತ್ತೆ(ಕೆಲವರು ಅದನ್ನು ಎರಡಾಗಿ ಬಳಸುತ್ತಾರೆ) , ಎರಡು ಕಿಡ್ನಿಗಳಿರುತ್ತೆ(ಕೆಲವರ ಒಂದು ಕಿಡ್ನಿ ಮಾರಾಟವಾಗಿರುತ್ತೆ) – ಸ್ವಘಟ್ಟಿಯಂಥ ಮನುಷ್ಯ ಇರುವುದಕ್ಕೆ ಯಾವ ಸಾಕ್ಷಿಯೂ ಇಲ್ಲ. ಆತ ಇದ್ದಾನೆ ಎನ್ನುವುದಕ್ಕೆ ನೀವೇನಾದರೂ ಅವನನ್ನು ನೋಡಿದ್ದೀರಾ ಎಂದು ಉದ್ಧಟತನದ ಮಾತನಾಡುತ್ತಾರೆ.
ಸ್ವಘಟ್ಟಿಯನ್ನು ನಮ್ಮ ಮನದಾಳದಲ್ಲಿ ಸ್ಥಾಪಿಸಿಕೊಂಡು ಪ್ರತಿದಿನ ಆತನ ಮೂರು ನಾಲಿಗೆಗಳಲ್ಲಿ ಮೆದುಳನ್ನು ನೆಕ್ಕಿಸಿಕೊಳುವ ನಾವೇನು ಆತನನ್ನು ನೋಡಿಲ್ಲ. ಆತನನ್ನು ನಮ್ಮ ಮುತ್ತಾತನ ಮುತ್ತಾತನ ಮುತ್ತಾತ ಕಂಡಿದ್ದನಂತೆ.
ಇದು ಈ ಸಂಚಿಕೆಯ ನಗಾರಿ ರೆಕಮಂಡೇಶನ್!
ಇತ್ತೀಚಿನ ಪ್ರಜಾ ಉವಾಚ