( ನಗೆ ನಗಾರಿ ಸಿನಿಕ ಸಂಶಯ-ಚೋದನಾ ಬ್ಯೂರೋ)
ಜಗತ್ತು ನಾವಂದುಕೊಂಡಷ್ಟು ಸರಳವಾಗಿ ನಡೆಯುವುದಿಲ್ಲ. ಬೆಳ್ಳಗಿರುವುದೆಲ್ಲ ಹಾಲು ಆಗಿರುವುದಿಲ್ಲ. ಹಾಗೂ ಹಾಲು ಬೆಳ್ಳಗೇ ಇರಬೇಕೆಂಬ ನಿಯಮವೂ ಇಲ್ಲ. ಕಣ್ಣೆದುರು ಕಂಡದ್ದಷ್ಟೇ ಘಟನೆಯ ಸಂಪೂರ್ಣ ಸತ್ಯವಲ್ಲ. ತೆರೆಮರೆಯಲ್ಲಿ ಘೋರವಾದ ಸಂಚುಗಳು ರೂಪುಗೊಳ್ಳುವುದು, ಕಾಣದ ಕೈಗಳು ಇಡೀ ಜಗತ್ತಿನ ಆಗುಹೋಗುಗಳನ್ನು ನಿರ್ದೇಶಿಸುವುದು, ಜನ ಸಾಮಾನ್ಯರು ತಾವೆಷ್ಟೇ ಸ್ವತಂತ್ರರು ಎಂದುಕೊಂಡರೂ ತಮ್ಮ ಕೃತಿಗಳನ್ನು ಬದುಕಿನ ನಿರ್ಧಾರಗಳು ತಮ್ಮ ಕೈಲಿಲ್ಲ ಎಂಬ ಅರಿವು ಎಲ್ಲರಿಗೂ ಇರುವುದಿಲ್ಲ. ಈ ಜಗತ್ತಿನಲ್ಲಿ ಸದಾ ಮಹಾ ಸಂಚೊಂದು ಸದ್ದಿಲ್ಲದೆ ನನ್ನ ಬೆನ್ನ ಹಿಂದೆ ಜರುಗುತ್ತಿದೆ ಎಂಬ ಸಂಶಯ ಎಲ್ಲರಿಗೂ ಒಂದಲ್ಲ ಒಂದು ಸಮಯದಲ್ಲಿ ಮೂಡಿರುತ್ತೆ. ಪ್ರೇಯಸಿ ಕೈಕೊಟ್ಟ ಕ್ಷಣದಿಂದ ಹಿಡಿದು, ನೂರಾರು ಜನರ ಎದುರು ವೇದಿಕೆಯ ಮೇಲೆ ನಿಂತಾಗ ಪ್ಯಾಂಟಿನ ಜಿಪ್ಪು ಭದ್ರವಾಗಿಲ್ಲ ಎಂಬುದು ಅರಿವಾಗುವ ಕ್ಷಣದವರೆಗೆ ಯಾವುದಾದರೊಂದು ಘಳಿಗೆಯಲ್ಲಿ ಅದು ಸುಳಿದು ಮಾಯವಾಗಬಹುದು.
ಆದರೆ ಇಂತಹ ಸಂಶಯವೊಂದು ನಮ್ಮ ಅತ್ಯಾಪ್ತ ಚೇಲ ಕುಚೇಲನ ತಲೆಯಲ್ಲಿ ಸುಳಿದಾಗ ಆತ ಹತ್ತರಲ್ಲಿ ಹನ್ನೊಂದವನಂತೆ ಸುಮ್ಮಗುಳಿಯಲಿಲ್ಲ.
ನಮ್ಮ ಸಿನೆಮಾಗಳ ನಟಿಯರ ಲಂಗದ ಎತ್ತರ ದಿನೇ ದಿನೇ ಕ್ಷೀಣಿಸುತ್ತಿರುವುದರ ಹಿಂದಿರುವ ಜಾಗತಿಕ ಹುನ್ನಾರವನ್ನು ಬಯಲು ಮಾಡಲು ಆತ ಕಂಕಣ ತೊಟ್ಟೇ ಬಿಟ್ಟ. ಸಂಶಯ-ಚೋದನೆಯಲ್ಲಿ ಆತನ ಪಾಲಿಗೆ ಭೀಷ್ಮರಾದ ಸಾಮ್ರಾಟರಾದ ನಮ್ಮನ್ನು ಕಂಡು ಸಲಹೆ ಪಡೆದು ಆತ ಮೊಣಕಾಲು ಮೆಚ್ಚುವವರೆಗಿನ ಪ್ಯಾಂಟು, ಮೊಣಕೈ ಮುಚ್ಚುವವರೆಗಿನ ಅಂಗಿ ಧರಿಸಿ ರಣಾಂಗಣಕ್ಕೆ ಧುಮುಕಿಯೇ ಬಿಟ್ಟ.
ಮರಗಿಡಗಳನ್ನು ಹೆಚ್ಚಾಗಿ ನಾಶ ಮಾಡುವುದರಿಂದ ಪರಿಸರದಲ್ಲಿ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಹೆಚ್ಚಿ ಅದರಿಂದ ಭೂಮಿಯ ಮೈ ಬಿಸಿಯು ಅಂತರಿಕ್ಷಕ್ಕೆ ಹಾರಿ ಹೋಗುವುದು ಕಡಿಮೆಯಾಗಿ ಭೂಮಿಯ ತಾಪಮಾನ ಹೆಚ್ಚಾಗಿ, ಭೂತಾಯಿಗೆ ಜ್ವರ ಬಂದು, ಹಿಮ ಪ್ರದೇಶದಲ್ಲಿ ಮಂಜುಗಡ್ಡೆಯು ಕರಗಿ ಬೆವರಿನಂತೆ ಸುರಿದು ಈಗಾಗಲೇ ಮುಕ್ಕಾಲು ಪಾಲು ಭೂಮಿಯನ್ನಾವರಿಸಿರುವ ಜಲರಾಶಿಯನ್ನು ಸೇರಿ ನೀರಿನ ಮಟ್ಟದಲ್ಲಿ ಏರಿಕೆ ಕಂಡು ತೀರ ಪ್ರದೇಶಗಳು ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತಿದೆ. ನೀರಿನ ಪ್ರಮಾಣ ಹೆಚ್ಚಿದ ಹಾಗೆ ಬೆಟ್ಟದ ಭೂಭಾಗ ಎತ್ತರ ಎತ್ತರಕ್ಕೆ ಏರುತ್ತಾ ಹೋಗಿ ಕಡೆಗೊಂದು ದಿನ ನೀರೇ ಸಂಪೂರ್ಣ ಆವರಿಸಿಕೊಂಡು ಬಿಡುವ ಜಾಗತಿಕ ತಾಪಮಾನ ಏರಿಕೆಗೂ ನಟಿಯರ ಲಂಗದ ಎತ್ತರ ತೀರಾ ಕಳವಳಕಾರಿಯಾದ ವೇಗದಲ್ಲಿ ಏರುತ್ತಿರುವುದಕ್ಕೂ ಸಂಬಂಧವಿದೆಯೇ ಎಂದು ಖ್ಯಾತ ಪರಿಸರ ತಜ್ಞ, ವಿಜ್ಞಾನಿ ತಂತ್ರೇಶ ಹೆಗಡೆಯವರನ್ನು ಪ್ರಶ್ನಿಸಿದೆವು.
“ಇಲ್ಲ ಖಂಡಿತಾ ಇಲ್ಲ! ನಟಿಯರ ಬಟ್ಟೆಯ ಪ್ರಮಾಣವು ಭಯಾನಕ ರೀತಿಯಲ್ಲಿ ಕಡಿಮೆಯಾಗುವುದಕ್ಕೆ ಭೂತಾಪಮಾನ ಏರಿಕೆ ಯಾವ ರೀತಿಯಲ್ಲೂ ಕಾರಣವಲ್ಲ. ಅಸಲಿಗೆ, ಭೂತಾಪಮಾನ ಏರಿಕೆಗೆ ನಟಿಯರ ತೆರೆದೆದೆ, ತೊಡೆಗಳೇ ಕಾರಣವಾಗಿರುವ ಸಂಭವ ಹೆಚ್ಚಿದೆ. ಹಿಂದೆ ನಟಿಯರ ಮೈ ಮೇಲೆ ನೆತ್ತಿಗಿಂತ ಎತ್ತರಕ್ಕೆ ವ್ಯಾಪಿಸಿಕೊಂಡು, ಕೆಳಗೆ ಅಂಗಾಲಿಗಿಂತ ಕೆಳಗಿನವರೆಗೆ ಹರಡಿಕೊಂಡು ಶ್ರೀಮಂತವಾಗಿದ್ದ ಹತ್ತಿಯ ಎಳೆಗಳು ರಾತ್ರಿಯಲ್ಲಿ ಒಡತಿಯನ್ನು ಕಂಡ ಅಡುಗೆ ಮನೆಯ ಜಿರಲೆಗಳು ಓಡುವಂತೆ ಓಡುತ್ತಿರುವುದು ತಾಪಮಾನದ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತಿದೆ. ಬರಿದಾದ ನಟಿಯರ ದೇಹವು ಮಂದವಾದ, ಕೆಂಪು ಮಿಶ್ರಿತ ಬೆಳಕಿನಲ್ಲಿ, ಹಾಡ ಹಗಲಿನ ಬೆಳಕಿನಲ್ಲಿ ಯುವಕರು, ಮುದುಕರಾದಿಯಾಗಿ ಎರಡು, ಒಂದು ಅಥವಾ ಒಂದುವರೆ ಕಣ್ಣುಗಳಿರುವ ಯಾವ ಗಂಡು ಪ್ರಾಣಿಯ ಮೇಲಾದರೂ ಹಾನಿಕರಕ ಪರಿಣಾಮವನ್ನುಂಟು ಮಾಡಬಲ್ಲದು. ಇದರಿಂದ ಗಂಡು ಪ್ರಾಣಿಯ ಎದೆ ಬಡಿತವು ಹೆಚ್ಚಾಗುವುದು, ಧಮನಿಗಳಲ್ಲಿ ಹೆಚ್ಚಿನ ಪ್ರಮಾಣದ ರಕ್ತದ ಹರಿಯುವಿಕೆಯಿಂದ ದೇಹದ ತಾಪಮಾನ ಹೆಚ್ಚುವುದು, ಕೆಲವರಲ್ಲಿ ಲಾಲಾರಸದ ಉತ್ಪತ್ತಿ ಹೆಚ್ಚಾಗುವುದು. ಕೆಲವರು ಮಾನಸಿಕ ಸ್ಥಿಮಿತ ಕಳೆದುಕೊಳ್ಳುವುದು ಸಹಜ. ಈ ಹಸಿಬಿಸಿ ನಟಿಯರಿಂದಾಗಿಯೇ ಭೂ ತಾಪಮಾನ ಏರಿಕೆಯಲ್ಲಿ ಈ ಮಟ್ಟಿಗಿನ ಆತಂಕಕಾರಿ ಏರಿಕೆ ಕಂಡಿರುವುದು.”
ಧರ್ಮವಿಲ್ಲದ ವಿಜ್ಞಾನ ಕುರುಡು ಎಂಬುದು ಜನ ಸಾಮಾನ್ಯ ನಂಬಿಕೆಯಾದರೂ ವಿಜ್ಞಾನಿಗೇ ನಟಿಯ ಉಡುಗೆಯಿಲ್ಲದ ದೇಹ ಇಷ್ಟು ಸ್ಪಷ್ಟವಾಗಿ ಕಂಡಿರುವಾಗ ಧರ್ಮದ ಕಣ್ಣಿಗೆ ಕಾಣದಿರುವುದುಂಟೇ? ಸ್ವಾಮಿ ನಿರ್ಬಟ್ಟೆಯಾನಂದರ ಅಭಿಪ್ರಾಯ ಹೀಗಿದೆ:
“ಸಿನೆಮಾ ನಟಿಯರ ಉಡುಪಿನ ಪ್ರಮಾಣದಲ್ಲಿ ಈ ಮಟ್ಟಿಗಿನ ಕಡಿತ ಆಗಿರುವುದರ ಹಿಂದೆ ಧರ್ಮದ ಕೈವಾಡವಿದೆಯೆಂದು ನಾವು ಸುತಾರಾಂ ಒಪ್ಪುವುದಿಲ್ಲ. ಧರ್ಮ ಕಡಿಮೆ ಬಟ್ಟೆ ಧರಿಸಿ, ಸರಳವಾದ ಬಟ್ಟೆ ಧರಿಸಿ ಅಥವಾ ಬಟ್ಟೆಯಾ, ಅದನ್ನು ಕಿತ್ತು ಬಿಸಾಕಿ ಎನ್ನುತ್ತದೆ ನಿಜ. ಆದರೆ ಯಾರಿಗೆ? ಪುರುಷರಿಗೆ ಮಾತ್ರ. ಏಕೆಂದರೆ ಆ ಕಟ್ಟಳೆಯನ್ನು ಬರೆಯುವವನಿಗೆ ಪುರುಷ ಅಂಗಿ ಬಿಚ್ಚಿ ಹಾಕಿ ರಸ್ತೆಯ ಮೇಲೆ ನಡೆದುಕೊಂಡು ಹೋದರೆ ಇನ್ನ್ಯಾವ ಪುರುಷನ ನೆಮ್ಮದಿಗೆ ಭಂಗವಾಗುವುದೋ ಎಂಬ ಆತಂಕ ಇರಲಿಲ್ಲ. ಆದರೇನು ಮಾಡುವುದು, ಈಗ ಈ ನೆಮ್ಮದಿಯೂ ಇಲ್ಲದ ಹಾಗಾಗಿದೆ! ಮಹಿಳೆಯರು ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಬಟ್ಟೆಯನ್ನು ಧರಿಸಬೇಕು ಎಂದೇ ಎಲ್ಲಾ ಧರ್ಮಗಳೂ ಹೇಳಿರುವುದು. ಕಾಪಾಡಿಕೊಳ್ಳಲು ಮಾನ, ಮರ್ಯಾದೆ, ಪ್ರಾಮಾಣಿಕತೆ, ಚಾರಿತ್ರ್ಯ ಇಲ್ಲದವನು ಕಾಪಾಡಲು ಹೆಣಗುವುದು ಒಂದನ್ನೇ, ಹೆಂಡತಿಯನ್ನು!”
ಕಾಣದ ದೇವರ ಹೆಸರಿನಲ್ಲಿ ಮಾತಾಡುವ ಅಧ್ಯಾತ್ಮಿಕರಿಗಿಂತ ಕಾಣುವ ಗ್ರಹಗಳ, ಅವುಗಳ ಮನೆಗಳ ಭಾಷೆಯಲ್ಲಿ ಮಾತಾಡುವ ಜೋತಿಷಿಗಳ ಮಾತಿಗೆ ನಮ್ಮ ಸಮಾಜದಲ್ಲಿ ಹೇಗೋ ಗೊತ್ತಿಲ್ಲ, ಆದರೆ ನಮ್ಮ ಟಿವಿ ಚಾನಲುಗಳಲ್ಲಿ ಮಾತ್ರ ಬೆಲೆ ಹೆಚ್ಚು! ಸಂಭಾವನೆಯೂ ಹೆಚ್ಚು! ನಟಿಯರ ಡ್ರೆಸ್ಸಿಂಗ್ ಸೆನ್ಸು ಇಷ್ಟು ನಾಜೂಕಾಗುತ್ತಾ ಹೋದರೆ ಮುಂದೆ ಏನಾಗಬಹುದು ಎಂದು ಶ್ರೀ ಬ್ರಹ್ಮಾಂಡ ಸ್ವಾಮಿಯವರನ್ನು ಪ್ರಶ್ನಿಸಿದೆವು.
“ಅಜ್ಜಿ ತಾತರೆಂಬ ರಾಹು ಕೇತುಗಳು ಮಕ್ಕಳ ಮನೆಯನ್ನು ಬಿಟ್ಟು ವೃದ್ಧರ ಮನೆಯನ್ನು ಪ್ರವೇಶಿಸಿದಾಗಲೇ ಈ ಪ್ರಕ್ರಿಯೆಯು ಶುರುವಾಯಿತೆನ್ನಬಹುದು. ಬ್ರಹ್ಮಾಂಡ ಸೂಕ್ತಿ ಸೌರಭ ಗ್ರಂಥದಲ್ಲಿ ಈ ಗ್ರಹಗತಿಯ ಉಲ್ಲೇಖವಿದೆ. ಮನೆಯ ಹಿರಿಯರ ಸ್ಥಾನಪಲ್ಲಟವಾಗುವುದರಿಂದ ಮನೆಯಲ್ಲಿ ಅವರ ವಟಗುಟ್ಟುವಿಕೆಯ ಅನುಪಸ್ಥಿತಿ ಉಂಟಾಗುವುದು. ಈ ಸಂದರ್ಭದಲ್ಲಿ ಮನೆಗೆ ಹಣವೆಂಬ ಶನಿಗ್ರಹದ ಪ್ರವೇಶವಾಗುವುದು. ಜಾತಕ ಎಷ್ಟೇ ಗಟ್ಟಿಯಾಗಿದ್ದರೂ ಆಗ ಬುದ್ಧಿ ಎಂಬ ಗುರು ಗ್ರಹವು ಜಾಗ ಖಾಲಿ ಮಾಡುವುದು. ಕಾಲನ ಗುಣದಿಂದ ಎಲ್ಲಾ ಮನೆಗಳಲ್ಲೂ ಹೃದಯವಂತಿಕೆ ಎಂಬ ಸೂರ್ಯ ಕಾಣೆಯಾಗುವನು. ಪ್ರದರ್ಶಿಸಲು ಬುದ್ಧಿ, ಹೃದಯವಂತಿಕೆಯಿಲ್ಲದ ಜನರು ದೇಹ ಪ್ರದರ್ಶನವನ್ನೇ ಬಾಳಿನ ಆದರ್ಶವಾಗಿಸಿಕೊಳ್ಳುವರು. ಚಳಿಗಾಲದಲ್ಲೂ ಹತ್ತಿಯನ್ನು ಧರಿಸುವರು, ಮಳೆಯಲ್ಲಿ ತುಂಡುಡುಗೆ ತೊಡುವರು.”
ಸಂಶಯ ಚೋದನೆಯು ಒಂದು ಹಂತಕ್ಕೆ ಬಂದಿತು ಎನ್ನುವಷ್ಟರಲ್ಲಿ ಹೊಸ ಸಿನೆಮಾದಲ್ಲಿ ತಮ್ಮ ಮಗಳ ಮಯಸ್ಸಿನ ಮೆಚ್ಚಿನ ನಾಯಕಿ ‘ಧೈರ್ಯ’ವಾಗಿ ಮೈಚಳಿಯನ್ನು, ಮೈ ತೊಡುಗೆಯನ್ನು ಬಿಟ್ಟು ನಟಿಸಿದ್ದಾಳೆ ಎಂಬ ಸುದ್ದಿ ತಲುಪಿ ಸಾಮ್ರಾಟರು ಅರ್ಧಕ್ಕೆ ಎದ್ದು ಥಿಯೇಟರಿಗೆ ಓಡಿದ್ದಾರೆ. ಈ ಸಂಶಯ-ಚೋದನೆಯ ಮುಂದಿನ ಭಾಗದಲ್ಲಿ ಇಷ್ಟು ಘೋರವಾದ ಜಾಗತಿಕ ಹುನ್ನಾರದ ಪ್ರಮುಖ ರುವಾರಿಗಳಾದ ಸಿನೆಮಾ ನಿರ್ದೇಶಕ ಹಾಗೂ ನಿರ್ಮಾಪಕರು, ಖುದ್ದು ಸಿನೆಮಾ ನಟಿಯರು ಹಾಗೂ ಈ ಜಗತ್ತೆಂಬ ಸಿನೆಮಾದ ನಿರ್ದೇಶಕನಾದ ದೇವರು ಮಾತಾಡಿದ್ದಾರೆ!
ಇತ್ತೀಚಿನ ಪ್ರಜಾ ಉವಾಚ