ಯಾವ ತಾಂತ್ರಿಕ ಪರಿಣಿತಿಯೂ ಇಲ್ಲದೆ ಈ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ನಗೆ ನಗಾರಿಯ ಸಾಮ್ರಾಜ್ಯವನ್ನು ಎರಡು ವರ್ಷಗಳ ಕಾಲ ನಾವು ಆಳಿದ್ದೇವೆ. ಈ ನಡುವೆ ನಮ್ಮ ಕೌಶಲ್ಯರಹಿತ, ಸಂಸ್ಕಾರವಿಲ್ಲದ ಹಸಿ ಹಸಿ ಪ್ರತಿಭೆಯನ್ನು ಬಳಸಿ ರಾಜ್ಯಭಾರ ಮಾಡಿದ್ದೇವೆ. ಪ್ರಜೆಗಳೂ ಸಹ ನಮ್ಮ ದೋಷಗಳನ್ನು ಕಂಡೂ ಕಾಣದವರ ಹಾಗೆ ಜಾಣ ಕುರುಡನ್ನು ನಟಿಸಿ ಸಾಮ್ರಾಟರ ಮರ್ಯಾದೆ ಕಾಪಾಡುತ್ತ ಬಂದಿದ್ದಾರೆ.
ಆದರೆ ಕಾಲ ಬದಲಾಗಿದೆ. ಮಗುವಿನ ನ್ಯಾಪ್‌ಕಿನ್ ಬದಲಾಯಿಸುವುದಕ್ಕೂ ಕಾಲೇಜು ಡಿಗ್ರಿಗಳಿವೆ. ಹೋಟೇಲಿಗೆ ಬಂದ ಗಿರಾಕಿಯೊಂದಿಗೆ ವ್ಯವಹರಿಸುವುದನ್ನು ಕಲಿಸಿಕೊಡುವುದಕ್ಕೆ ಪದವಿಗಳಿವೆ. ಪ್ರೀತಿಸುವುದನ್ನೂ ಹೇಳಿಕೊಡುವ ಕೋರ್ಸುಗಳಿವೆ. ಕಾಲ ಬದಲಾದ ಹಾಗೆ ನಾವೂ ಬದಲಾಗುವ ನಾಟಕವಾಡದಿದ್ದರೆ ಜನ ನಮ್ಮನ್ನು ಮ್ಯೂಸಿಯಂನಲ್ಲಿ ಪುರಾತನ ಅಸ್ಥಿ ಪಂಜರಗಳ ರೂಂ ಮೇಟ್ ಮಾಡಿಬಿಡಬಹುದೆಂಬ ಆತಂಕದಿಂದ ನಾವು ಹಗಲು ನಿದ್ದೆಯನ್ನೂ ರಾತ್ರಿ ಎಚ್ಚರವನ್ನೂ ಕಳೆದುಕೊಂಡಿದ್ದೆವು.
ಇಷ್ಟು ಕಾಲ ನಮ್ಮ ಅತ್ಯಾಪ್ತ ಚೇಲ ಕುಚೇಲ ಹಾಗೂ ನಮ್ಮ ಗತಕಾಲದ ಗೆಳೆಯ ತೊಣಚಪ್ಪ ಇವರಿಬ್ಬರನ್ನೇ ನೆಚ್ಚಿಕೊಂಡು ಸಾಮ್ರಾಜ್ಯವಾಳಿದ್ದೇವೆ. ಎರಡೂ ಬದಿಯಲ್ಲಿ ಉರಿಯುವ ಸಿಗರೇಟಿನಂತೆ ಯೌವನವನ್ನು ಸವೆಸಿದ್ದೇವೆ. ಈಗ ನಾವು ಆರಾಮ ಕುರ್ಚಿಯಲ್ಲಿ ನಮಗಿಂತ ಸಾಮರ್ಥ್ಯ ಶಾಲಿಗಳಾದ ಯುವಕರ ದುಡಿಮೆಯ ಯಶಸ್ಸಿನ ಫಲವನ್ನುಣ್ಣುತ್ತ, ಅವರ ದೋಷ, ವೈಫಲ್ಯಗಳನ್ನು ಹೆಕ್ಕುತ್ತ, “ನಮ್ಮ ಕಾಲದಲ್ಲಿ…” ಎಂದು ಬೋರ್ ವೆಲ್ ಕೊರೆಯುತ್ತ ಕೂರುವ ಸಮಯ.
ನಗೆ ನಗಾರಿಯು ಮೂಲತಃ ಸುದ್ದಿ ಮಾಧ್ಯಮ. ಸತ್ಯ ಹಾಗೂ ಸತ್ಯಾಕಾಂಕ್ಷಿಗಳ ನಡುವಿನ ತೂಗು ಸೇತುವೆ. ಸತ್ಯದಿಂದ ಸತ್ಯಾಕಾಂಕ್ಷಿಗಳನ್ನು ಸದಾ ದಿಕ್ಕೆಡಿಸುವ ಮುಖ್ಯವಾಹಿನಿಯ ಮಾಧ್ಯಮಗಳೊಂದಿಗೆ ಸೆಣೆಸುತ್ತ ಸತ್ಯವನ್ನು ಉಳಿಸುವುದು ನಮ್ಮ ಧ್ಯೇಯ. ಸತ್ಯವಲ್ಲದೆ ಬೇರೇನೂ ನಮ್ಮ ವರದಿಗಳಲ್ಲಿ ಸುಳಿಯಬಾರದು ಎಂಬುದು ನಮ್ಮ ಆದರ್ಶ. ಆದರೆ ಸೂಕ್ತ ತಾಂತ್ರಿಕ ಶಿಕ್ಷಣದ ಕೊರತೆಯಿಂದ ನಾವು ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಲಾಗಲಿಲ್ಲ ಎಂಬುದು ಈಗ ನಮ್ಮ ಮುಂದೆ ಕೂತಿರುವ ಯುವಕನ ಮಾತು ಕೇಳಿದಾಗ ಅನ್ನಿಸುತ್ತಿದೆ. ಒಬ್ಬನೇ ವ್ಯಕ್ತಿ ಪ್ರಧಾನ ಸಂಪಾದಕನೂ, ಉಪ ಸಂಪಾದಕನೂ, ಸುದ್ದಿ ಸಂಪಾದಕನೂ, ವರದಿಗಾರನೂ, ಪ್ರೂಫ್ ತಿದ್ದುವವನೂ ಆದರೆ ಆತನೊಬ್ಬನೇ ಪತ್ರಿಕೆಯ ಓದುಗನೂ ಆಗಬೇಕಾಗುತ್ತದೆ ಎಂಬ ಆಘಾತಕಾರಿ ಸತ್ಯ ನಮ್ಮ ತಿಳಿವಿಗೆ ಬಂದಿತು. ಒಂದೇ ಕ್ಯೂಬಿಕಲ್‌ನಲ್ಲಿ ಕುಳಿತು ದಿನವೊಂದಕ್ಕೆ ಹದಿನೆಂಟು ಇಪ್ಪತ್ತು ತಾಸುಗಳ ಕಾಲ ಅರವತ್ತು ಎಪ್ಪತ್ತು ಪುಟಗಳನ್ನು ಗೀಚುವುದು ಮಹಾನ್ ಸಾಧನೆಯೇ ಸರಿ. ಆದರೆ ಹಾಗೆ ಗೀಚುವುದಕ್ಕೆ ಸರಕು ಎಲ್ಲಿಂದ ಲಭ್ಯವಾಗಬೇಕು? ಸರಕಿನ ಕೊರತೆ ಕಂಡಾಗಲೆಲ್ಲಾ ನಾನಿವತ್ತು ಬೆಳಿಗ್ಗೆ ಎರಡು ಬಾರಿ ಗಡ್ಡ ಮಾಡಿಕೊಂಡೆ, ಒಂದು ವಾರದಿಂದ ನಾನು ಗ್ಯಾಸ್ ಬಿಟ್ಟೇ ಇಲ್ಲ, ನನ್ನ ನಾಯಿಮರಿ ಕಾಲಿಗೆ ಆಗಿದ್ದ ಗಾಯ ಅದೆಷ್ಟು ಬೇಗ ಮಾಯವಾಯಿತು ಗೊತ್ತ ಎಂದು ಕೊರೆಯಬೇಕಾಗುವುದು.
ಸತ್ಯಸ್ಯ ಸತ್ಯ ವರದಿಗಾರಿಕೆಯನ್ನು ಮಾಡುವುದು ನಗೆನಗಾರಿಯ ಕಾರ್ಯಸೂಚಿಯಲ್ಲಿನ ಮೊದಲ ಆದ್ಯತೆಯಾಗಬೇಕು. ಅದಕ್ಕಾಗಿ ನಾವು ಯಂಗ್ ಮ್ಯಾನ್ ನಾರದನ ಕೈಲಿ ಸಾಮ್ರಾಜ್ಯದ ಕೆಲಸವನ್ನು ಒಪ್ಪಿಸುತ್ತಿದ್ದೇವೆ. ನಾವು ಆತನ ಕೆಲಸವನ್ನು ಗಮನಿಸಿಕೊಳ್ಳುತ್ತ, ಬಿಟ್ಟಿ ಉಪದೇಶಗಳನ್ನು ನೀಡುತ್ತ ಆತ ಕೇಳಿದಾಗ ನಮ್ಮ ಆರ್ಥ್ರೈಟಿಸ್ ಬಗ್ಗೆಯೂ, ಐವತ್ತು ವರ್ಷಗಳಿಂದ ನಾವು ತ್ಯಜಿಸುತ್ತ ಬಂದಿರುವ ಚಟಗಳ ಬಗ್ಗೆಯೋ ಕೊರೆಯುತ್ತೇವೆ.
ಇಷ್ಟೇ ಅಲ್ಲದೆ ಸಾಮ್ರಾಜ್ಯದ ವಹಿವಾಟು ಗಮನಿಸುವುದಕ್ಕೆ ದೊಡ್ಡದೊಂದು ತಂಡವೇ ಸಿದ್ಧವಾಗುತ್ತಿದೆ. ನಮ್ಮ ಕುಚೇಲ ಹಾಗೂ ತೊಣಚಪ್ಪನವರ ಸಂಗಡ ಸ್ವಾಮಿ ಅಧ್ಯಾತ್ಮಾನಂದ ಸೇರಿಕೊಳ್ಳಲಿದ್ದಾರೆ. ಇವರಲ್ಲದೆ ಮಿಸ್ಟರ್ ನಕ್ಕಣ್ಣ ಹಾಗೂ ನಗಾರಿಯ ಏಕೈಕ ಮಹಿಳಾ ಒದರಿಗಾರ್ತಿ ಹಾಗೂ ಲೇಖಕಿ ಶ್ರೀಮತಿ ಕುಮಾರಿ ಪ್ರಜೆಗಳಿಗಾಗಿ ದುಡಿಯಲಿದ್ದಾರೆ, ನಗಾರಿ ಬಡಿಯಲಿದ್ದಾರೆ!
ಇತ್ತೀಚಿನ ಪ್ರಜಾ ಉವಾಚ