Tag Archives: ಟಿವಿ

ಮುಂದುವರೆದದ್ದು ಎಲ್ಲಿ?

6 ಆಕ್ಟೋ

picture-16

ಹೀಗೂ ಒಂದು ರಿಯಾಲಿಟಿ ಶೋ!

5 ನವೆಂ

(ನಗೆ ನಗಾರಿ ಮನರಂಜನಾ ಬ್ಯೂರೋ)

ತಮ್ಮ ರಿಯಲ್ ಬದುಕಿನ ಕಷ್ಟ ಸಂಕಟಗಳನ್ನು, ಉಪದ್ವಾಪ್ಯಗಳನ್ನು ಮರೆಯುವುದಕ್ಕಾಗಿ ಕ್ಷಣಮಾತ್ರಕ್ಕೆ ತಮ್ಮೆಲ್ಲಾ ದುಃಖಗಳಿಂದ ಬಿಡುವನ್ನು ಪಡೆಯುವುದಕ್ಕಾಗಿ, ಹಗಲಿನ ದುಡಿಮೆಯಿಂದ ಆದ ದಣಿವನ್ನು ತಣಿಸುವುದಕ್ಕಾಗಿ ಮನುಷ್ಯನು ಮನರಂಜನೆಯನ್ನು ಕಂಡುಕೊಂಡ ಎಂದು ಸಣ್ಣ ಮಗುವಾದರೂ ಯೋಚಿಸಿ ಹೇಳಬಹುದು. ಸಣ್ಣಗೆ ತಮಟೆಯನ್ನು ಬಡಿಯುತ್ತಾ, ಬೆಂಕಿಯ ಸುತ್ತ ಕುಣಿಯುತ್ತಾ, ಅಜ್ಜಮುತ್ತಜ್ಜನ ಕಾಲದ ರಾಜ, ರಾಕ್ಷಸ, ರಾಜಕುಮಾರಿಯರ ಕಥೆಯನ್ನು ಕೇಳುತ್ತಾ, ತಾವೇ ಕಟ್ಟಿಕೊಂಡ ಹಾಡು ಹಾಡುತ್ತಾ ಬೆಳೆದವರನ್ನು ಕಂಡು ನಮ್ಮ ವಿಜ್ಞಾನಕ್ಕೆ ಭಾರೀ ಅನುಕಂಪ ಮೂಡಿತು. ಮನರಂಜನೆಯ ಹೆಸರಿನಲ್ಲಿ ಜನರೇ ಕಷ್ಟ ಪಡುವುದು ಎಂಥಾ ಘೋರವಾದ ಸಂಗತಿ ಎಂದು ಆಲೋಚಿಸಿದ ವಿಜ್ಞಾನದ ವಂದಿಗರು ಅದಕ್ಕಾಗಿಯೇ ಎಂದು ಟಿವಿ ಎಂಬ ಮಾಯಾಪೆಟ್ಟಿಗೆಯನ್ನು ಆಕಾಶದಿಂದ ತಂದು ಪ್ರತಿಯೊಬ್ಬರ ಮನೆಯಲ್ಲಿರಿಸಿದರು. ಹಲವು ಮಂದಿಯ ಮನರಂಜನೆಗಾಗಿ ಕೆಲವು ಮಂದಿ ದುಡಿಯುವುದನ್ನು ಬಹುದೊಡ್ಡ ಆದರ್ಶವಾಗಿ ಕಲಿಸಿದರು. ಬೆಳಗೆಲ್ಲಾ ದುಡಿದು ಬಂದವರ ಮನಸ್ಸಮಾಧಾನಕ್ಕಾಗಿ ಮನರಂಜನೆ ನೀಡುವುದು ಅನೇಕರಿಗೆ ಮುಖ್ಯ ದುಡಿಮೆಯಾಯಿತು.


ಯಾವುದೇ ಒಳ್ಳೆಯ ಸಂಗತಿಯೂ ಕ್ರಮೇಣ ಸತ್ವವನ್ನು ಕಳೆದುಕೊಂಡು ಕಾಲಿಗೆ ಕಚ್ಚಿಕೊಂಡ ಕೊಚ್ಚೆಯ ಬಳ್ಳಿಯಾಗುತ್ತದೆ ಎಂಬುದು ಸಾಮ್ರಾಟರ ಅನುಭವದ ತಿಳುವಳಿಕೆ. ಅದರಂತೆಯೇ ಟಿವಿಯ ಮನರಂಜನೆಯೇ ಜನರ ಮನೋವೇದನೆಗೆ ಕಾರಣವಾಗತೊಡಗಿದ್ದು ನಮ್ಮ ಸಂಸ್ಕೃತಿ ಚಿಂತಕರು, ಮನಃಶಾಸ್ತ್ರಜ್ಞರು ಮಾಡಲು ಕೆಲಸವಿಲ್ಲದಾಗ ಗಂಭೀರವಾಗಿ ಚಿಂತಿಸಬೇಕಾದ ಸಂಗತಿ. ನಾನಾ ವೇಷಗಳಲ್ಲಿ, ನಾನಾ ಶಕ್ತಿಗಳೊಂದಿಗೆ ಭೂಮಿಯ ಮೇಲೆ ಜನ್ಮವೆತ್ತಿ ಬರುತ್ತಾ ದೇವತೆಗಳ, ಮಾನವರ ನೆಮ್ಮದಿಯನ್ನು ಕೆಡಿಸುತ್ತಿದ್ದ ರಕ್ಕಸರು ಧಾರಾವಾಹಿ’ ಎಂಬ ರೂಪ ಪಡೆದು ದಿನದಿನವೂ ಜನಸಾಗರವನ್ನು ದುಃಖದಲ್ಲಿ ಮುಳುಗಿಸುವ ಕೆಲಸವನ್ನು ನಿರಾಯಾಸವಾಗಿ ಮಾಡಲು ಶುರುಮಾಡಿದರು. ಜನರನ್ನು ಒಂದಿಂಚೂ ಕದಲದ ಹಾಗೆ, ಒಂಚೂರೂ ಸ್ವಂತ ಆಲೋಚನೆ ಮಾಡದ ಹಾಗೆ, ತಾಯಿ ಮಕ್ಕಳ ಕಡೆಗೆ ಗಮನ ಕೊಡದ ಹಾಗೆ, ತಂದೆ ಹೊರಗಿನ ಕೆಲಸಗಳಿಗೆ ಏಕಾಗ್ರತೆ ತಾಳದ ಹಾಗೆ, ಮಕ್ಕಳು ತಮ್ಮ ಕರ್ತವ್ಯವನ್ನು ನೆನೆಯದ ಹಾಗೆ ಮಾಡುವ ಸಮ್ಮೋಹನಾಸ್ತ್ರವನ್ನು ರಕ್ಕಸರು ಕಂಡುಕೊಂಡದ್ದು ಇಡೀ ಪುರಾಣ ಲೋಕದ ವಿಸ್ಮಯ. ಆದರೆ ಯಾವಾಗ ಧರ್ಮಕ್ಕೆ ತೊಂದರೆಯಾಗುತ್ತದೆಯೋ, ಯಾವಾಗ್ಯಾವಾಗ ಮನುಷ್ಯನಿಗೆ ಕಂಟಕ ಬರುತ್ತದೆಯೋ ಆಗ ನಾನು ಅವತರಿಸಿ ಬರುತ್ತೇನೆ ಎಂದು ಶ್ರೀಕೃಷ್ಣ ಹೇಳಿದ್ದು ಸುಳ್ಳಾಗಲಿಲ್ಲ.


tv

ಧಾರಾವಾಹಿಯ ರಕ್ಕಸನ ದಾಳಿಯಿಂದ ಮನುಷ್ಯನನ್ನು ರಕ್ಷಿಸಲು ರಿಯಾಲಿಟಿ ಶೋ’ಗಳೆಂಬ ದೇವದೂತರು ಅವತರಿಸಿಬಂದವು. ಪ್ರತಿದಿನ ಒಂದು ಧಾರಾವಾಹಿ ಮುಗಿದಾಗ ನಾಳೆ ಏನಾಗುವುದೋ ಎಂಬ ಆತಂಕದಲ್ಲಿ ಇಡೀ ದಿನವನ್ನು ಕಳೆದು ಮರುದಿನ ಧಾರಾವಾಹಿಯ ಸಮಯಕ್ಕಾಗಿ ಜಾತಕ ಪಕ್ಷಿಯ ಹಾಗೆ ಕಾಯುತ್ತಿದ್ದವರನ್ನು ಸಂಕಟದಿಂದ ಪಾರುಮಾಡಲು ಬಂದಂತೆ ಅವತರಿಸಿದ್ದು ರಿಯಾಲಿಟಿ ಶೋ. ಯಾರೋ ಕೆಲಸವಿಲ್ಲದವರು ಕುಳಿತು ಹೆಣೆದು ಬಿಸಾಕಿದ ಕಾಲ್ಪನಿಕ ಧಾರಾವಾಹಿಗಳನ್ನು ನೋಡುವುದಕ್ಕಿಂತ ನೈಜತೆಯನ್ನು ಉಣಬಡಿಸುವ ಕಾರ್ಯಕ್ರಮಗಳನ್ನು ಜನರೂ ಅಪ್ಪಿಕೊಂಡರು. ಸ್ಟೇಜಿನ ಮೇಲೆ ನಿಜವಾಗಿ ಹಾಡುವುದು, ಕುಣಿಯುವುದು, ಜೋಕು ಮಾಡುವುದು, ಒಂದಷ್ಟು ಜನರನ್ನು ಒಟ್ಟಿಗೇ ಕೂಡಿ ಹಾಕಿ ಅವರ ಚಲನವಲನವನ್ನು ನೈಜ’ ಬಿಹೇವಿಯರನ್ನು ಲಕ್ಷಾಂತರ ಜನರು ನೋಡುವ ಏರ್ಪಾಟು ಮಾಡುವುದು ಇವೆಲ್ಲವನ್ನೂ ಜನರು ಮೆಚ್ಚಿಕೊಳ್ಳತೊಡಗಿದರು. ಇದಕ್ಕೆ ಕಾರಣ, ಪ್ರತಿದಿನವೂ ಬಿಡದೆ ಕಾರ್ಯಕ್ರಮ ನೋಡಬೇಕು ಎಂಬ ಒತ್ತಡ ಇಲ್ಲದಿರುವುದು!

ಆದರೆ ರಕ್ಕಸನ ಶಕ್ತಿಯನ್ನು ಕಡಿಮೆ ಮಾಡಲು ಇನ್ನೂ ಸಾಧ್ಯವಾಗಿಲ್ಲ ಎಂಬುದು ಹಲವರ ಅಭುಪ್ರಾಯ. ಮೂಲೆ ಮನೆ ಮಾಲಮ್ಮನವರ ಪ್ರಕಾರ ಧಾರವಾಹಿಗಳೇ ಇನ್ನೂ ಪ್ರಬಲವಾಗಿವೆಯಂತೆ. ಏಕೆಂದರೆ ಧಾರಾವಾಹಿಯನ್ನು ನಿಯಮಿತವಾಗಿ ನೋಡಬೇಕು ಎಂದೇನಿಲ್ಲ. ನೋಡಲು ಬಿಟ್ಟು ಒಂದು ವರ್ಷವಾದ ನಂತರ ಮತ್ತೆ ನೋಡಲು ಶುರು ಮಾಡಿದರೂ ಕಥೆಯ ಲಿಂಕ್ ತಪ್ಪಿತು ಎನ್ನಲಾಗುವುದಿಲ್ಲ. ಉದಾಹರಣೆಗೆ ಯುವತಿಯೊಬ್ಬಳ ಮದುವೆ ನಿರ್ಧಾರವಾಗುತ್ತದೆ ಎಂದುಕೊಳ್ಳಿ. ನೀವು ಒಂದೆರಡು ವಾರ ನೋಡದಿದ್ದರೆ ಮದುವೆ ನಡೆದು ಹೋಗಿಬಿಡುತ್ತದೆ ಎಂಬ ಆತಂಕ ಪಡುವ ಅಪಾಯವಿಲ್ಲ. ಇನ್ನೇನು ಮದುವೆಗೆ ನಾಲ್ಕು ದಿನ ಇದೆ ಎನ್ನುವಾಗ ಹುಡುಗನ ಕಡೆಯಿಂದ ಒಂದು ತಕರಾರು ಬರುತ್ತದೆ, ಹುಡುಗನ ಮನೆಯಲ್ಲಿ ಯಾರಾದರೊಬ್ಬರು ಕ್ಯಾತೆ ತೆಗೆಯುತ್ತಾರೆ. ಮದುವೆ ಮುಂದೆ ಹೋಗುತ್ತದೆ. ನೀವು ಒಂದುವರ್ಷ ಕಳೆದು ನೋಡಿದರೂ ಹುಡುಗಿಗೆ ಮದುವೆಯಾಗಿರುವುದಿಲ್ಲ. ಮತ್ತೆ ಹೊಸ ಹೊಸ ಸಮಸ್ಯೆಗಳನ್ನು ನಿರ್ದೇಶಕರು ತಮ್ಮ ಮಾಯಾಜಾಲದಿಂದ ಸೃಷ್ಟಿಸಿ ಪಾತ್ರಧಾರಿಗಳನ್ನು ಜೊತೆಗೆ ಧಾರಾವಾಹಿಗಳ ವೀಕ್ಷಕರನ್ನು ಸಿಕ್ಕಿಸಿರುತ್ತಾರೆ. ಆದರೆ ರಿಯಾಲಿಟಿ ಶೋಗಳು ಹಾಗಲ್ಲ ಅವು ಒಂದು ದಿನ ಬಿಟ್ಟರೆ ಅಂದು ಗೆದ್ದದ್ದು ಯಾರು, ಯಾರು ಹೇಗೆ ಫರ್‌ಫಾರ್ಮ್ ಮಾಡಿದರು, ಯಾರು ಒಳ್ಳೆಯ ಅಂಕಗಳಿಸಿದರು ಎಂಬುದು ತಿಳಿಯುವುದೇ ಇಲ್ಲ.


ಏನೇ ಆದರೂ ಇಂದಿನ ಟಿವಿಯ ಯುಗದಲ್ಲಿ ಧಾರಾವಾಹಿ ಎಂಬ ಮಹಾ ಪ್ರಭಾವದಿಂದ ಪ್ರೇಕ್ಷಕರನ್ನು ಪಾರು ಮಾಡಲು ರಿಯಾಲಿಟಿ ಶೋಗಳೆಂಬ ಆಶಾಕಿರಣಗಳು ಕಾಣಿಸಿಕೊಂಡಿರುವುದು ಸಾಮ್ರಾಟರಿಗೆ ಸಮಾಧಾನ ತಂದಿದೆ. ಈ ಬಹುದೊಡ್ಡ ಕ್ರಾಂತಿಯಲ್ಲಿ ತಮ್ಮದೂ ಪಾಲು ಇರಬೇಕೆಂದು ಇಚ್ಚಿಸಿರುವ ಸಾಮ್ರಾಟರು ತಾವೂ ಒಂದಷ್ಟು ರಿಯಾಲಿಟಿ ಶೋಗಳನ್ನು ಮಾಡಿಕೊಟ್ಟು ಜನರನ್ನು ಧಾರಾವಾಹಿ ಗುಮ್ಮನಿಂದ ಪಾರು ಮಾಡುವ ಯೋಚನೆಯಲ್ಲಿದ್ದಾರೆ. ಅವರ ತಲೆಯಲ್ಲಿರುವ ಕೆಲವು ರಿಯಾಲಿಟಿ ಶೋಗಳ ಕಲ್ಪನೆಗಳು ಹೀಗಿವೆ: ‘ದಿ ಗ್ರೇಟ್ ಹಾರರ್ ಶೋಎಂಬ ಭಯಾನಕವಾದ ರಿಯಾಲಿಟಿ ಶೋ. ಇದನ್ನು ಕಂಡು ಬೆಚ್ಚದವರು ಯಾರೂ ಇರಬಾರದು! ಅನೇಕ ಚಾನೆಲ್ಲುಗಳು ಬಳಸಿ ಬಳಸಿ ಸೊರಗಿ ಸೋರಿ ಹೋಗಿರುವ ದೆವ್ವದ ಮಿಸ್ಟರಿ ಕಥೆಗಳು, ಪವಾಡದ ವಿವರಗಳ್ಯಾವೂ ಇದರಲ್ಲಿರುವುದಿಲ್ಲ. ಈ ಶೋನಲ್ಲಿ ಅವರು ತೋರಿಸಬೇಕೆಂದಿರುವುದು ಇಷ್ಟೇ: ಬಾಲಿವುಡ್ಡು, ಸ್ಯಾಂಡಲ್ ವುಡ್ಡಿನ ಎಲ್ಲಾ ನಾಯಕ, ನಾಯಕಿಯರನ್ನು ತೋರಿಸುವುದು. ಅದೂ ಮೇಕಪ್ಪು, ವಿಗ್ಗುಗಳು ಇಲ್ಲದೇ!


ಮತ್ತೊಂದು,‘ ದಿ ಗ್ರೇಟ್ ಗಾಡ್ ಫಾದರ್’! ಇದು ಬಿಗ್ ಬ್ರದರ್ ಶೋನಿಂದ ಪ್ರೇರಿತವಾದದ್ದು ಎಂಬುದು ಸಾಮ್ರಾಟರ ಕಾಲೆಳೆಯುವವರ ಕೀಟಲೆಯಾದರೂ ಇದರಲ್ಲಿ ಹೊಸ ಚಿಂತನೆಯಿದೆ. ಒಂದು ಬಹು ಎತ್ತರದ ಬೇಲಿ ಇರುವ, ಒಮ್ಮೆ ಒಳ ಹೊಕ್ಕವರು ಹೊರಗೆ ಬರದಷ್ಟು ಭದ್ರವಾಗಿರುವ ಕಟ್ಟಡದಲ್ಲಿ ನಾಡಿನ ಹೆಸರಾಂತ ರಾಜಕಾರಣಿಗಳನ್ನೆಲ್ಲಾ ಹಾಕಿಬಿಡುವುದು. ಅರವತ್ತು, ಎಪ್ಪತ್ತು, ಎಂಭತ್ತು ಎಂದು ವಯಸ್ಸು ಹಾಗೂ ತೂಕದಲ್ಲಿ ತೂಗುತ್ತಿರುವವರ ನಾಯಕರನ್ನು ಕೆಮರಾಗಳ ಕಣ್ಗಾವಲಿನಲ್ಲಿ ಸೇರಿಸುವುದು. ಪಕ್ಷ ಬೇಧವಿಲ್ಲದೆ ಅರ್ಹತೆಯಿರುವವರನ್ನೆಲ್ಲಾ ಆರಿಸುವುದು. ಸತತ ಎರಡು ವರ್ಷಗಳ ಕಾಲ ಅವರ ಚಲನವಲನಗಳನ್ನೆಲ್ಲಾ ಗಮನಿಸುತ್ತಿರುವುದು. ಇದರಲ್ಲೇನು ಸ್ಪೆಶಾಲಿಟಿ ಇದೆ ಅಂತೀರಾ? ಇದಕ್ಕೂ ಬಿಗ್ ಬಾಸ್ ನಂತಹ ಶೋಗೂ ವ್ಯತ್ಯಾಸವಿಲ್ಲ ಎನ್ನುತ್ತೀರಾ? ಸಾಮ್ರಾಟರ ಉಪಾಯವನ್ನು ತಾಳ್ಮೆಯಿಂದ ಕೇಳಿ, ಎರಡು ವರ್ಷ ಹೀಗೆ ಕಾರ್ಯಕ್ರಮ ನಡೆಸಿದ ನಂತರ ಸದ್ದಿಲ್ಲದೆ ಎಲ್ಲಾ ಕೆಮರಾಗಳನ್ನು ಆಫ್ ಮಾಡಿ ಆ ಕಟ್ಟಡದ ಕಾಂಪೌಂಡಿನ ಬಾಗಿಲನ್ನು ಶಾಶ್ವತವಾಗಿ ಮುಚ್ಚಿ ಕೀಲಿಕೈಯನ್ನು ನಾಶ ಮಾಡಿಬಿಡುವುದು! ಆಗ ಅದು ದೇಶವೇ ಕೊಂಡಾಡುವ ರಿಯಾಲಿಟಿ ಶೋ ಆಗಿಬಿಡುತ್ತದೆ!

ತಮ್ಮ ಐಡಿಯಾಗಳನ್ನು ಯಾರೂ ಕದಿಯಬಾರದೆಂದು ಸಾಮ್ರಾಟರು ಅವನ್ನು ಪೇಟೆಂಟ್ ಮಾಡಿಸಲು ಮುಂದಾಗಿದ್ದಾರೆ. ಕಾಪಿ ಮಾಡುವವರೂ ಪೇಟೆಂಟ್ ದಕ್ಕುವ ಮೊದಲೇ ಪ್ರಯತ್ನಿಸಬೇಕಾಗಿ ಸೂಚನೆ!