Tag Archives: ಚುನಾವಣೆ

ನಿಜವಾದ ಕೋಡಿ ಹಳ್ಳಿ ಸ್ವಾಮಿ ಭವಿಷ್ಯ!

3 ಜೂನ್

(ನಗೆ ನಗಾರಿ ಭವಿಷ್ಯವಾಣಿ ಮಹಾನ್ವೇಷಣಾ ಬ್ಯೂರೋ)

ಮಾಧ್ಯಮದವರ ಬೇಜವಬ್ದಾರಿತನದ ಬಗ್ಗೆ ಪುಟಗಟ್ಟಲೆ ಕೊರೆದು ಸುಸ್ತಾಗಿರುವ ನಮಗೆ ಇನ್ನಷ್ಟು ಭಾಷಣ ಮಾಡಲು ಅವಕಾಶ ಸಿಕ್ಕಿದ್ದಕ್ಕಾಗಿ ಸಂತೋಷವಾಗಿದೆ.  ಸುದ್ದಿಯೆಂಬುದು ಕರ್ನಾಟಕದ ಕಗ್ಗತ್ತಲ ಮೂಲೆಯಲ್ಲಿ ಕಪ್ಪು ಕಂಬಳಿ ಹೊದ್ದು ಅಡಗಿ ಕುಳಿತಿದ್ದರೂ ಪತ್ತೆ ಹಚ್ಚಿ, ಹಿಡಿದು ತಂದು, ಬಣ್ಣ ಬಳಿದು, ಪೋಷಾಕು ತೊಡಿಸಿ ವರದಿ ಮಾಡುವ, ಆಮೂಲಕ ಉತ್ತಮ ಸಮಾಜ ಕಟ್ಟಲು ಶ್ರಮಿಸುವ ಚಾನಲ್ಲು, ನಿರಂತರವಾಗಿ ನೇರವಾದ ವರದಿಯನ್ನು ದಿಟ್ಟವಾಗಿ ಪ್ರಕಟಿಸುವ ಛಲ ಹೊತ್ತ ಚಾನಲ್ಲುಗಳು, ನಂಬರ್ ಒನ್, ಟೂ, ಥ್ರೀ ಪತ್ರಿಕೆಗಳು ಈ ಬಗೆಯ ಬೇಜವಾಬ್ದಾರಿಯನ್ನು ಪ್ರದರ್ಶಿಸುತ್ತಿರುವುದನ್ನು ಕಂಡು ನಾವು ಕೆಂಡಾ ಮಂಡಲರಾಗಿದ್ದೇವೆ. ಸುದ್ದಿಯನ್ನು ವರದಿ ಮಾಡುವುದಷ್ಟೇ ಪತ್ರಕರ್ತನ ಕೆಲಸವಲ್ಲ, ಆ ಸುದ್ದಿಯ ಬೆಳವಣಿಗೆ, ಅದರ ಪರಿಣಾಮಗಳನ್ನು ತಾಳ್ಮೆಯಿಂದ ಗಮನಿಸಿ ಓದುಗರಿಗೆ ಮುಟ್ಟಿಸಬೇಕಾದ್ದು ಆತನ ಕರ್ತವ್ಯ. ಆದರೆ ಈ ಕರ್ತವ್ಯವನ್ನು ಮರೆತು ಮಾಧ್ಯಮಗಳು ಉತ್ತಮ ಸಮಾಜ ಕಟ್ಟಲು ಹೊರಟಿವೆ.

ನಮ್ಮ ಪ್ರಭಾವಿ ಮುಖ್ಯಧಾರೆಯ ಮಾಧ್ಯಮಗಳು ಎಡವಿದ ಕಲ್ಲನ್ನೇ ಕರ್ತಾರನ ಕಮ್ಮಟ ಎಂದು ಭಾವಿಸಿ ಕೆಲಸಕ್ಕೆ ತೊಡಗುವ ನಗೆ ನಗಾರಿ ಡಾಟ್ ಕಾಮ್ ಪತ್ರಿಕಾ ಧರ್ಮವನ್ನು ಎತ್ತಿ ಹಿಡಿಯಲು ಮತ್ತೊಮ್ಮೆ ತನ್ನ ಸಮಸ್ತ ಶಕ್ತಿಯನ್ನೂ ವಿನಿಯೋಗಿಸಿದೆ.

ಚುನಾವಣೆಗಳ ಮುನ್ನ ಯಾರು ಎಷ್ಟು ಸೀಟು ಗೆಲ್ಲಬಹುದು, ಯಾರು ಕುರ್ಚಿಯೇರಬಹುದು ಎಂದೆಲ್ಲಾ ರಾಜಕೀಯ ಪಂಡಿತರು ಹಾಗೂ ಟಿವಿ ನಿರೂಪಕರು ಹಗಲು ರಾತ್ರಿ ಗಂಟಲು ಹರಿದುಕೊಳ್ಳುವುದು ಸಾಮಾನ್ಯ. ಏಕೆಂದರೆ ಅದು ಅವರ ವೃತ್ತಿ, ಹೊಟ್ಟೆ ಪಾಡು. ವೃತ್ತಿ ಅಥವಾ ಹೊಟ್ಟೆ ಪಾಡು ನಿರ್ವಹಿಸಲು ಯಾವುದೇ ಪ್ರತಿಭೆ, ಅಧ್ಯಯನ, ಜವಾಬ್ದಾರಿ, ತಜ್ಞತೆ ಇರಬೇಕು ಎಂದೇನು ಕಾನೂನು ಇಲ್ಲ. ಅವರು ಬಾಯಿಗೆ ಬಂದ, ತಲೆಗೆ ತೋಚಿದ ವಿಶ್ಲೇಷಣೆ ಮಾಡಿದರೂ, ತಲೆ ಬುಡವಿಲ್ಲದ ಭವಿಷ್ಯವಾಣಿಯನ್ನು ಅರುಹಿದರೂ ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಬುದ್ಧಿವಂತ ವೀಕ್ಷಕರಿಗೆ ಅನ್ನಿಸುವುದಿಲ್ಲ.

ಆದರೆ ಹೊಟ್ಟೆ ಪಾಡಿನ ಹಂಗಿಲ್ಲದೆ, ವೃತ್ತಿಯನ್ನು ನಿರ್ವಹಿಸಬೇಕಾದ ಅನಿವಾರ್ಯತೆಯಿಲ್ಲದೆ ಈ ಬಗೆಯ ಭವಿಷ್ಯವಾಣಿಯನ್ನು ಉದ್ಘೋಷಿಸುವ ಹವ್ಯಾಸಿ ತಜ್ಞರ ಪ್ರಯತ್ನವನ್ನು ಮಾತ್ರ ಅಸಡ್ಡೆಯಿಂದ ಕಾಣಬಾರದು. ಅವರ ಕೊಡುಗೆಯನ್ನು ಭಾರಿ ಗೌರವಾದರಗಳಿಂದ ನೆನೆಸಿಕೊಳ್ಳಬೇಕಾದ್ದು ಎಲ್ಲರ ಕರ್ತವ್ಯ.

ಈ ಸಾಲಿನ ಲೋಕಸಭಾ ಚುನಾವಣೆಗಳ ಮುಂಚೆ ರಾಜಕೀಯ ಏರುಪೇರುಗಳ ಬಗ್ಗೆ ಅತ್ಯಂತ ನಿಖರವಾಗಿ ಭವಿಷ್ಯ ನುಡಿದಿದ್ದ ಕೋಡಿ ಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿಯವರ ಹೇಳಿಕೆಗಳನ್ನು ನೆನೆಸಿಕೊಳ್ಳೋಣ.

svami

 

ಯಡಿಯೂರಪ್ಪ ಅಧಿಕಾರಕ್ಕೆ ಕುತ್ತು: ಕೋಡಿಮಠ ಶ್ರೀ ಭವಿಷ್ಯ

ಹಾಸನ, ಸೋಮವಾರ, 11 ಮೇ 2009( 10:51 IST )

NRB

ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ 15 ದಿನಗಳೊಳಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸ್ಥಾನಕ್ಕೆ ಕುತ್ತು ಬರಲಿದೆ. ಒಂದು ವೇಳೆ ತಕ್ಷಣಕ್ಕೆ ಅಪಾಯದಿಂದ ಪಾರಾದರೂ ಡಿಸೆಂಬರ್‌‌ನಲ್ಲಿ ಎದುರಾಗುವ ರಾಜಕೀಯ ಗಂಡಾಂತರದಿಂದ ಯಡಿಯೂರಪ್ಪ ಪಾರಾಗಲು ಸಾಧ್ಯವೇ ಇಲ್ಲ ಎಂದು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರು ಭವಿಷ್ಯ ನುಡಿದಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆ ಏರಿದ ದಿನದಿಂದಲೂ ರಾಜ್ಯದಲ್ಲಿ ಅವಘಡ, ಗಲಾಟೆ, ಸಾವುಗಳು ನಿರಂತರವಾಗಿ ಸಂಭವಿಸುತ್ತಿವೆ. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ಘಳಿಗೆಯೇ ಸರಿಯಿಲ್ಲ. ಗಂಡಾಂತರದಿಂದ ಅವರು ಪಾರಾಗಬೇಕಿದ್ದರೆ ಮುಖ್ಯಮಂತ್ರಿಯಾದ 45 ದಿನಗಳಲ್ಲಿ ರಾಜೀನಾಮೆ ನೀಡಿ ಮತ್ತೆ ಅಧಿಕಾರ ಸ್ವೀಕರಿಸಬೇಕಿತ್ತು. ಆ ಕೆಲಸ ಮಾಡಿದ್ದರೆ 10 ವರ್ಷ ಅನಭಿಷಿಕ್ತ ದೊರೆಯಂತಿರಬಹುದಿತ್ತು. ಈಗ ಯಾವ ಶಾಂತಿ ಮಾಡಿಸಿದರೂ ಗಂಡಾಂತರದಿಂದ ಪಾರಾಗಲು ಸಾಧ್ಯವಾಗದು ಎಂದು ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಹಿಂದಿನ ಚುನಾವಣೆಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡು ಪ್ರಬಲವಾಗಲಿದೆ. ರಾಜ್ಯದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು ಸಂಭವಿಸುವ ಸಾಧ್ಯತೆಯಿದೆ ಎಂದರು.

 

ಸ್ವಾಮೀಜಿಯವರ ಭವಿಷ್ಯವಾಣಿಯನ್ನು ವರದಿ ಮಾಡುವಲ್ಲಿ ಪತ್ರಿಕೆಗಳು ತೋರಿದ ಶ್ರದ್ಧೆಯನ್ನು ಅವರ ಭವಿಷ್ಯವಾಣಿ ನಿಖರವೆಂದು ಸಾಬೀತಾದಾಗ ಅದನ್ನು ನೆನಯುವಲ್ಲಿ ತೋರಲು ಮರೆತರು. ಅತ್ಯಂತ ನಿಖರವಾಗಿ ಫಲಿತಾಂಶವನ್ನು ನಿರೀಕ್ಷಿಸಿದ್ದಕ್ಕೆ ಸ್ವಾಮೀಜಿಯವರಿಗೆ ನಾವು ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

ತಮ್ಮ ತ್ರಿಕಾಲಜ್ಞಾನದ ಬಲದಿಂದ ಸ್ವಾಮೀಜಿಯವರು ಈ ಚುನಾವಣೆಯ ನಂತರ ದೇಶದ ಪ್ರಧಾನಿಯಾಗುವುದು ಮಹಿಳೆಯೇ ಎಂದಿದ್ದರು. ತೃತೀಯ ರಂಗ ಉತ್ತಮ ಸಾಧನೆ ಮಾಡಲಿದೆ ಎಂದಿದ್ದರು. ಪ್ರಧಾನಿ ಆಯ್ಕೆ ಸಮಯದಲ್ಲಿ ಆಗುವ ಗಲಾಟೆಯಿಂದ ಒಂದು ಬಣ ಪ್ರಮುಖ ಪಕ್ಷದಿಂದ ಸಿಡಿದು ಹೋಗಲಿದೆ ಎಂದಿದ್ದರು. ತಮ್ಮ ಭವಿಷ್ಯವಾಣಿಯನ್ನು ಬೆಂಬಲಿಸುವುದಕ್ಕೆ ಮುಂಬಯಿಯ ಮೇಲೆ ಆಕ್ರಮಣ ನಡೆಯುವುದನ್ನು ನಾವು ಮೊದಲೇ ನುಡಿದಿದ್ದೆವು ಎಂದು ನೆನಪಿಸಿದ್ದರು. ಕರ್ನಾಟಕದಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಪಡೆದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಸ್ಥಾನ ಹೆಚ್ಚಿಸಿಕೊಳ್ಳುತ್ತವೆ ಎಂದಿದ್ದರು. ಚುನಾವಣೆಯ ನಂತರ ಯಡಿಯೂರಪ್ಪನವರ ಅಧಿಕಾರಕ್ಕೆ ಕುತ್ತು ಬರಲಿದೆ ಎಂದೂ ತಿಳಿಸಿದ್ದರು.   ಅಲ್ಲಿ ಇಲ್ಲಿ ಕೆಲವು ಅಪಸವ್ಯಗಳನ್ನು ಹೊರತು ಪಡಿಸಿದರೆ ಸ್ವಾಮೀಜಿಯವರ ಭವಿಷ್ಯವಾಣಿ ಶೇ ನೂರರಷ್ಟು ಸತ್ಯವಾಗಿದೆ. 

ಸ್ವಾಮೀಜಿಯವರ ಈ ಸಾಧನೆಗೆ, ದಿವ್ಯ ಶಕ್ತಿಗೆ ತಲೆಬಾಗಿರುವ ವೈಜ್ಞಾನಿಕ ಜಗತ್ತು ಇವತ್ತು ಮಧ್ಯ ರಾತ್ರಿ ಹನ್ನೆರಡು ಗಂಟೆಯಿಂದಲೇ ತಮ್ಮೆಲ್ಲಾ ಕೆಲಸಗಳನ್ನು ನಿಲ್ಲಿಸಿ ಸ್ವಾಮೀಜಿಯ ಪದತಲದಲ್ಲಿ ನೆಲೆಯೂರುವ ಯೋಜನೆ ಹಾಕಿಕೊಂಡಿದ್ದಾರೆ. ಭೂಕಂಪನ ಮುನ್ಸೂಚನೆ, ಚಂಡಮಾರುತ, ಸುನಾಮಿಗಳ ಮುನ್ನೆಚ್ಚರಿಕೆ, ರೇಡಾರ್ ನಿರ್ವಹಣೆ, ಶೇರು ಮಾರುಕಟ್ಟೆಯ ನಿರ್ವಹಣೆ ಮಾಡಬೇಕಾದ ತಜ್ಞರೆಲ್ಲ ತಮ್ಮ ಕೆಲಸಗಳನ್ನು ಸ್ವಾಮೀಜಿಯವರ ಕೈಗೆ ನೀಡಿ ಕಾಲಿಗೆ ಬೀಳಲು ಏಕಸಮ್ಮತವಾಗಿ ನಿರ್ಧರಿಸಿದ್ದಾರೆ.

ಈ ನಡುವೆ  ಸಾಮ್ರಾಟರು ಸ್ವಾಮೀಜಿಯವರನ್ನು ವೈಯಕ್ತಿಕವಾಗಿ ಭೇಟಿಯಾಗಿ ತಮ್ಮ ಅಭಿನಂದನೆಗಳನ್ನು ಸಲ್ಲಿಸಿ, ಈ ವರದಿ ಪ್ರಕಟಣೆಗಾಗಿ ಅಲ್ಪ ಮೊತ್ತದ ಚೆಕ್ ಒಂದನ್ನು ಪಡೆದುಕೊಂಡು ಅದು ಕ್ಲಿಯರ್ ಆಗುವುದೋ ಇಲ್ಲ ಬೌನ್ಸ್ ಆಗುವುದೋ ಎಂದು ಭವಿಷ್ಯವಾಣಿಯನ್ನು ಕೇಳಿಕೊಂಡು ಬಂದು ಕೂತಿದ್ದಾರೆ.

ತೊಣಚಪ್ಪನ ಡೈರಿ

16 ಮಾರ್ಚ್

ಪಕ್ಷದೊಳಗೆ ಭಿನ್ನ ಮತ- ಶಮನಕ್ಕೆ ಯತ್ನ

ಒಂದ್ ಪಕ್ಷದಾಗೇ ಭಿನ್ನಮತ, ಜಗಳ, ವೈಮನಸ್ಸು ಇಟ್ಕಂಡು ಕೆಲ್ಸ ಮಾಡೋಕೆ ಸಾಧ್ಯ ಇರೋವಾಗ, ಚುನಾವಣೆ ಎದ್ರಿಸಿ ಅಧಿಕಾರ ಹಿಡಿಯೋಕ್ ಆಗೋವಾಗ, ಈ ನೂರಾರ್ ಹೆಸ್ರು ಹೇಳ್ಕಂಡು ಬೇರ್ ಬೇರೆ ಸಿದ್ಧಾಂತದ್ ನೆಪ ಮಾಡ್ಕಂಡ್ ರಾಜ್ಕೀಯ ಮಾಡೋದ್ಯಾಕೆ? ಎಲ್ಲಾ ಪಕ್ಸಗಳೂ ಸೇರ್ಕಂಡು ‘ದುಡ್ಡಿದೋರ್, ದುಡ್ ಹೊಡೆಯೋರ್ ಪಕ್ಷ’ ಮಾಡ್ಕಂಡು ಬಿಟ್ರೆ ಒಳ್ಳೇದಲ್ವಾ? ಜನ್ಕೂ ಯಾವ್ ಪಕ್ಸಕ್ಕೆ ಓಟ್ ಒತ್ತದು ಅನ್ನೋ ಟೆನ್ಷನ್ ಕಡಿಮಿ ಆಗ್ತದೆ. ಈ ಟಿವಿ, ಪೇಪರ್‌ನೋರ್ ಯಾರ್ ಗೆಲ್ತಾರೆ ಯಾರ್ ಸೋಲ್ತಾರೆ ಅಂತ ಗಂಟ್ ಗಟ್ಲೆ ಗಂಟ್ಲು ಹರ್ಕಂಡು, ಪೆನ್ನು ಮುರ್ಕಂಡು ಕಶ್ಟ ಪಡೋದು ತಪ್ತದೆ. ಅಲ್ವಾ?

ತೃತೀಯ ರಂಗಕ್ಕೆ ಯಾವುದೇ ವಿಷನ್ ಇಲ್ಲ: ಪ್ರಣಬ್ ಮುಖರ್ಜಿ

ಒಕ್ಕೂಟ ರಚನೆ ಮಾಡೋಕೆ ರಾಜಕೀಯ ಪಕ್ಷ ಕಟ್ಕಣಕೆ ದುಡ್ಡು ಕಾಸು, ಹೆಂಡ, ಸೀರೆ ಬೇಕೋ ಹೊರ್ತು ವಿಷನ್ನು, ಪಾಲಿಸೀಸು ಬೇಕು ಅಂತ ಯಾವೋನ್ ಹೇಳ್ದವ?

ಅಧಿಕಾರ ಹಿಡ್ಕಬೇಕು, ಕುರ್ಚಿ ಮೇಲೆ ಕುತ್ಕಬೇಕು, ದುಡ್ ಮಾಡ್ಕೋ ಬೇಕು ಇದ್ಕಿಂತ ದೊಡ್ ವಿಷನ್ನು, ಪಾಲಿಸಿ, ಆದರ್ಶ ಇರೋಕ್ ಸಾಧ್ಯ ಐತಾ?

ಈ ಯುಪಿಎ ಹುಟ್ದಾಗ್ ಇರ್ದೇ ಇದ್ದ ವಿಷನ್ನುಗಳಾ ಇವು? ಜನ ಇಂಥದ್ದೆಲ್ಲಾ ಇಲ್ಯೂಶನ್ನಿಗೆ ಬಲಿಯಾಗ್ತಾರೆ ಇನ್ನೂ ಅಂದ್ಕಂಡೀರಾ?

ಮಳೆ ಬರ್ಸೋಕೆ ಕಪ್ಪೆ ಮದ್ವೆ

ಸಿಟೀಲ್ ಕುಂತು ಕೀಬೋರ್ಡ್ ಕುಟ್ಟುವ ನಿಂಗೆ ಇದ್ನ ಓದಿದ್ರೆ ಬಿದ್ ಬಿದ್ ನಗೋಷ್ಟು ಸಿಲ್ಲಿ ಅನ್ಸುತ್ತೆ ಅಲ್ವಾ? ಆದ್ರೂ ಹೇಳ್ತೀನ್ ಕೇಳಿ, ಈ ಜನ ಮಾಡ್ತಿರೋದ್ಕು ನೀವ್ ಬುದ್ಧಿವಂತ್ರು, ಪೇಟೆ ಜನ ಮಾಡ್ತಿರೋದ್ಕು ವ್ಯತ್ಯಾಸ ಇದ್ಯಾ?

ಇವ್ರು ಮಳೆ ಇಲ್ಲದ್ ನಾಡಿಗೆ ನೀರ್ ಸಿಕ್ಲಿ ಅಂತ ಎರಡ್ ಕಪ್ಪೆ ಹಿಡ್ದು ಮದ್ವೆ ಮಾಡ್ತಾರೆ. (ಮದ್ವೆ ಇಲ್ದೆ ಅವೇನ್ ಮಕ್ಳೇ ಮಾಡಲ್ವಾ ಅಂನ್ಬೇಡ್ರಿ. ಶ್ರೀರಾಮ್ ಸೇನೆ ಮುತಾಲಿಕ್ ಕಿವಿಗೆ ಬಿದ್ರೆ ಪ್ರಾಣಿಗಳ್ಲೂ ಹೆಣ್ಣು ಗಂಡು ರಾಖಿ ಅಥ್ವಾ ತಾಳಿ ಇಲ್ದೇ ಒಡಾಡೋಕ್ ಬಿಡಲ್ಲ ಆತ!) ಮಳೆ ಬರುತ್ತೊ ಇಲ್ವೋ ಗೊತ್ತಿಲ್ಲ. ಮಳೆ ಬರ್ಲಿ ಅನ್ನೋ ಉದ್ದೇಶಾಂತೂ ಅವ್ರಲ್ಲಿ ಇರ್ತದೆ. ನೀವ್ ಮಾಡಾದೇನು? ಸರ್ಕಾರ ಒಳ್ಳೇ ಆಡಳಿತ ಕೊಡ್ಲಿ ಅಂತಂದ್ ಓಟ್ ಹಾಕ್ತೀರಿ, ಪ್ರತಿ ಸಲಾನೂ ಇವ್ರು ತಮ್ ಬುದ್ಧಿ ತೋರ್ಸಿದ್ರೂ ಮನೆ ಎದ್ರು ಬಂದ್ ಹಲ್ ಕಿರಿದ್ರೆ ಮತ್ತೆ ನಂಬ್ತೀರಿ…

ಈಗ್ ಹೇಳ್ರಿ ಯಾರು ಮೂಢ್ರು?

ಸೋಲಿನ ಪತ್ತೆಗಾಗಿ ಸಂಶೋಧನೆ

6 ಜುಲೈ

(ನಗೆ ನಗಾರಿ ರಾಜಕೀಯ ಬ್ಯೂರೊ)

ಚುನಾವಣೆಯೆಂಬ ಗೂಳಿ ನಾಡಿನ ರಾಜಬೀದಿಯಿಂದ ಹಿಡಿದು ಗಲ್ಲಿಗಲ್ಲಿಗಳಲ್ಲಿ ನುಗ್ಗಿ ಧೂಳೆಬ್ಬಿಸಿ ಓಡಿಹೋಗಿದೆ. ಆ ಗೂಳಿಯ ಬೆನ್ನನ್ನೇರಿದ ಅದೃಷ್ಟವಂತರು ಸವಾರಿ ಮಾಡುತ್ತಿದ್ದಾರೆ, ಮೆರೆಯುತ್ತಿದ್ದಾರೆ. ಗೂಳಿಗೆ ಕಾಲಿಗೆ ಸಿಕ್ಕು ಗೊರಸಿನಿಂದ ಪಕ್ಕೆಗೆ ಒದೆಸಿಕೊಂಡವರು ಕುಯ್ಯೋ ಮರ್ರೋ ಎನ್ನುತ್ತಾ ಮೂಲೆ ಸೇರಿಕೊಂಡು ಗಾಯಗಳಿಗೆ ಇಲಾಜು ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಗಾಯಗಳಿಗೆ ತಕ್ಕ ಮಟ್ಟಿಗೆ ಇಲಾಜು ಮಾಡಿಕೊಂಡು ರೆಡಿಯಾದ ಪಂಟರುಗಳು ಹೊಸತೊಂದು ಸಂಶೋಶನೆ ಕೈ ಹಾಕಿರುವ ಸುದ್ದಿ ತಡವಾಗಿ ನಗೆ ನಗಾರಿಯನ್ನು ತಲುಪಿದೆ. ಈ ಸುದ್ದಿಯನ್ನು ಬೆನ್ನಟ್ಟಿ ನಗೆ ಸಾಮ್ರಾಟರು ಅನೇಕ ನಿಗೂಢ ಹಾಗೂ ರೋಮಾಂಚನಕಾರಿ ಸಂಗತಿಗಳನ್ನು ಅನ್ವೇಷಿಸಲು ತೊಡಗಿದ್ದಾರೆ.

ಅಖಿಲ ಕರ್ನಾಟಕದಲ್ಲಿ ಭೂಗತವಾಗಿ ಅಲೆಯುತ್ತಾ ವಿವಾದಗಳು ಎದ್ದಾಗ ತಲೆ ತೋರಿಸಿ ಮತ್ತೆ ಮರೆಯಾಗುವ ಅನೇಕ ಸಂಘಟನೆಗಳು, ‘ರಾಜಕೀಯ’ ಪಕ್ಷಗಳು ಚುನಾವಣೆಯ ಸಮಯಕ್ಕೆ ಸರಿಯಾಗಿ ಮೇಲೆದ್ದು ನಿಂತು ಕೈ ಕಾಲು, ತಲೆ, ಹೊಟ್ಟೆಗಳನ್ನು, ಅವೆಲ್ಲವುಗಳಿಗಿಂತಲೂ ಮುಖ್ಯವಾಗಿ ಜೇಬನ್ನು ಎಲ್ಲೆಂಲ್ಲಿಂದಲೂ ಸಂಪಾದಿಸಿಕೊಂಡು ವಿಜೃಂಭಿಸುವುದು ಜಗತ್ತಿನ ಅಚ್ಚರಿಗಳಲ್ಲಿ ಒಂದಾಗಿದೆ. ಚುನಾವಣೆಯ ಮುಂಚಿನ ನಾಲ್ಕೈದು ವರ್ಷಗಳಲ್ಲಿ ಜನರು ಕಂಡೇ ಇರದ ಪಕ್ಷಗಳು, ಮುಖವಿಲ್ಲದ ನಾಯಕರ ಹೆಸರುಗಳು ಪತ್ರಿಕೆಗಳಲ್ಲಿ ರಾರಾಜಿಸುವುದನ್ನು ಗಮನಿಸಿರುವ ನಗೆ ಸಾಮ್ರಾಟರು ಈ ವಿಚಿತ್ರ ಆಸಕ್ತಿಕರ ಸಂಗತಿಯ ಬಗ್ಗೆ ಮಾಡಲು ಕೆಲಸವಿಲ್ಲದವರು ಸಂಶೋಧನೆ ನಡೆಸಿ ಪಿ.ಎಚ್.ಡಿ ಗಾಗಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

ವಿಶ್ವದಲ್ಲೇ ಅತ್ಯಂತ ಗಣ್ಯವಾದ ಸ್ಥಾನವನ್ನು ಪಡೆಸಿರುವ ನೊಬೆಲ್ ಪಾರಿತೋಷಕಕ್ಕೆ ಪ್ರತಿಯಾಗಿ ಬುದ್ಧಿವಂತರು, ವಿವೇಕಿಗಳು ಹಾಗೂ ವಾಸ್ತವವಾದಿಗಳು ಸ್ಥಾಪಿಸಿರುವ ಇಗ್ನೊಬೆಲ್ ಪ್ರಶಸ್ತಿಯನ್ನು ಈ ಸಂದರ್ಭದಲ್ಲಿ ನೆನೆಯಬೇಕು. ಚುನಾವಣೆಯ ವಾಸನೆ ಗಾಳಿಯಲ್ಲಿ ತೇಲುವ ಮೊದಲು ಭೂಮಿಯ ಮೇಲೆ ಯಾವ ಭಾಗದಲ್ಲಿ ಜೀವಿಸಿದ್ದರು ಎಂದು ತಿಳಿಯದ ಮಂದಿ ಸರಿಯಾಗಿ ಎಲಕ್ಷನ್ನಿನ ಸೀಝನ್ನಿನಲ್ಲಿ ಹೋರಾಟಗಳಿಗೆ ಹಾಗೂ ಓರಾಟಗಳಿಗೆ ಧುಮ್ಮಿಕ್ಕುವುದನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ ಅವರ ಸಾಧನೆಗೆ ಇಗ್ನೊಬೆಲ್ ಕೊಡಲು ಶಿಫಾರಸ್ಸು ಮಾಡಬಹುದು.

ಚುನಾವಣೆಯ ಚದುರಂಗದಲ್ಲಿ ಸೋತ ಕಿಲಾಡಿಗಳು ತಮ್ಮ ಸೋಲನ್ನು ಕ್ರೀಡಾ ಮನೋಭಾವನೆಯಿಂದ ತೆಗೆದುಕೊಳ್ಳುವ ಬದಲು ‘ಜನರ ತೀರ್ಪನ್ನು ಮನಃಪೂರ್ವಕವಾಗಿ ಸ್ವೀಕರಿಸಿದ್ದೇವೆ’ ಎಂಬ ಸವಕಲು ಕನ್‌ಫೆಶನ್‌ ಮೂಲಕ ಜನರು ಮೋಸ ಮಾಡಿದರು ಎಂದು ಹಾರಾಡುತ್ತಿರುವುದು ನಗೆ ಸಾಮ್ರಾಟರಲ್ಲಿ ಕುತೂಹಲ ಕೆರಳಿಸಿದೆ. ಈ ಮಧ್ಯೆ ಮರದಿಂದ ಮರಕ್ಕೆ ಹಾರುವ ವಾನರನ ಹಾಗೆ ಪಕ್ಷದಿಂದ ಪಕ್ಷಕ್ಕೆ ಕಾಲ್ಕಿತ್ತು ಆ ಪಕ್ಷಗಳಿಂದ ಏನೇನನ್ನೋ ಕಿತ್ತುಕೊಂಡು ಸುಸ್ತಾಗಿ ನೆಲಕ್ಕಿಳಿದು ಸೈಕಲ್ಲು ತುಳಿಯತೊಡಗಿದ ಸೊರಬದ ಮುತ್ಸದ್ಧಿ ‘ಗೋಲ್ಡ’ಪ್ಪ ಸೈಕಲ್ಲು ಬ್ಯಾಲೆನ್ಸ್ ಮಾಡಲಾಗದೆ ಚರಂಡಿಗೆ ಬಿದ್ದರು. ತಮ್ಮ ಸೋಲಿಗೆ ಕಾರಣ ಹುಡುಕಿಕೊಂಡು ಸಂಶೋಧನೆ ನಡೆಸಿದ ಅವರು ನನ್ನ ಎದುರಾಳಿಗಳು ( ‘ಗಳು’ ಏನು ಬೇಕಿಲ್ಲ ಬಿಡಿ. ಇದ್ದವರೆಲ್ಲಾ ಎರಡು ಪಕ್ಷದವರು ನನ್ನ ಕುತ್ತಿಗೆಗೇ ಚೆಂಡು ಹೂವಿನ ಮಾಲೆಯನ್ನು ಹಾಕಿ ಕಳಿಸಿದ್ದರು) ಕ್ಷೇತ್ರದಲ್ಲಿ ಹಣವನ್ನು ಹೊಳೆಯಾಗಿ ಹರಿಸಿದ್ದಾರೆ. ಅದಕ್ಕಾಗಿ ಗೆದ್ದು ಬಂದಿದ್ದಾರೆ. ತಾವು ಹರಿಸಿದ್ದು ಬರೀ ಚರಂಡಿಯಾಗಿದ್ದುದರಿಂದ ಹೊಳೆಯ ಎದುರು ತಾವು ಗೆಲ್ಲಲು ಸಾಧ್ಯವಾಗಿಲ್ಲ ಎಂದು ಸೂಚಿರುವುದಾಗಿ ವರದಿಯಾಗಿದೆ.

ಈ ಮಧ್ಯೆ ಟೋಪಿ ಹಾಗೂ ಕಪ್ಪು ಗಾಜಿನ ಪಕ್ಷದ ಏಕೈಕ ಅಭ್ಯರ್ಥಿ ಹಾಗೂ ಅಧ್ಯಕ್ಷರು ವಿಧಾನ ಸಭೆಯ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡು ದಬ್ಬಾಳಿಕೆಯಿಂದ ವಾಸ ಮಾಡಿಕೊಂಡಿದ್ದ ಮನೆಯನ್ನು ತೊರೆದು ವಿಧಾನ ಪರಿಷತ್ತಿನಲ್ಲೂ ಜೇಬು ಸುಟ್ಟುಕೊಂಡು ಕಂಗಾಲಾಗಿ ಕುಳಿತಿರುವ ದೃಶ್ಯವನ್ನು ನೋಡಿರುವ ಬೆಂಗಳೂರಿನ ಗಾರ್ಧಭ ಪ್ರಮುಖರು, ಎಮ್ಮೆ ಮುಖಂಡರು ಸಂಭ್ರಮದಿಂದ  ಕುಣಿದಾಡಿರುವುದಾಗಿ ವರದಿಯಾಗಿದೆ. ಪೆಟ್ರೋಲಿನ ಬೆಲೆ ಹರ್ ಭಜನ್ ಸಿಂಗಿನ ಸಿಟ್ಟಿನ ಹಾಗೆ ಏರುತ್ತಿರುವ ಹೊತ್ತಿನಲ್ಲಿ ಆ ಯಪ್ಪ ತಮ್ಮ ಮೇಲೆ ಸವಾರಿ ಮಾಡಿ ಪ್ರತಿಭಟನೆ ಮಾಡುವ, ಆ ಮೂಲಕ ತಮ್ಮನ್ನು ಹಿಂಸಿಸುವ ಪರಿಸ್ಥಿತಿ ಇಲ್ಲವಾಗಿರುವುದಕ್ಕೆ ಸಂತೋಷ ವ್ಯಕ್ತ ಪಡಿಸಿದ್ದಾರೆ.