Tag Archives: ಚರ್ಚೆ

ಚರ್ಚೆ: ಡರ್ಟಿ ಜೋಕೆಂಬ ಬೇಲಿ ಹಾರುವ ಹುಮ್ಮಸ್ಸು!

25 ಜುಲೈ

 

ಕೆಲವು ಬಗೆಯ ಜೋಕುಗಳಿವೆ. ಅವುಗಳು ಸಾಮಾನ್ಯ ಜೋಕುಗಳಿಗಿಂತ ಹೆಚ್ಚು ಚಲಾವಣೆಯಲ್ಲಿರುತ್ತವೆ. ಮೊಬೈಲುಗಳಲ್ಲಿ ಕ್ಷಣಮಾತ್ರದಲ್ಲಿ ಪ್ರತ್ಯಕ್ಷವಾಗಿ ಮೊಬೈಲಿಗ ಕಣ್ಣಾಡಿಸಿ ಆಸ್ವಾದಿಸಿ, ಅಲ್ಲಿಂದ ನಾಲ್ಕೈದು ವಿಳಾಸದಾರರಿಗೆ ರವಾನೆಯಾದೊಡನೆಯೇ ಪುರ್ರೆಂದು ಮೊಬೈಲ್ ಅಂಗಳದಿಂದ ಅಂತರಿಕ್ಷಕ್ಕೆ ಹಾರಿ ಬಿಡುತ್ತವೆ.

ಅವುಗಳಿಗೆ ಎಲ್ಲೆಡೆಯಲ್ಲೂ ಪ್ರವೇಶವಿಲ್ಲ. ಜೋಕುಗಳ ಸಮಾಜದಲ್ಲಿ ಅವು ಅಸೃಶ್ಯರಿದ್ದಂತೆ. ಅವುಗಳಲ್ಲಿ ಯಾರ ಮೇಲೂ ವೈಯಕ್ತಿಕ ನಂಜು ಕಾರಲಾಗಿರುವುದಿಲ್ಲ. ವ್ಯಕ್ತಿ ಕೇಂದ್ರಿತವಾದ ಹೀಯಾಳಿಕೆಯಿರುವುದಿಲ್ಲ. ಯಾರಿಗೂ ನೋವಾಗುವಂತಹ ಜನಾಂಗೀಯ ನಿಂದನೆಯಾಗಲಿ ಇರುವುದಿಲ್ಲ. ಆದರೂ ಅವುಗಳು ‘ಘೆಟ್ಟೋ’ಗಳಲ್ಲಿ ಮಾತ್ರ ಅಸ್ತಿತ್ವ ಉಳಿಸಿಕೊಂಡಿರುತ್ತವೆ.

ಅವುಗಳ ಗುಣಮಟ್ಟವನ್ನು ನಿರ್ಲಕ್ಷಿಸಲಾಗುವುದಿಲ್ಲ. ಜೋಕೊಂದರ ಸೃಷ್ಟಿಗೆ, ಅದರ ಉದ್ದೇಶ ಸಾರ್ಥಕವಾಗುವುದಕ್ಕೆ ಬೇಕಾಗುವ ಎಲ್ಲಾ ಬುದ್ಧಿವಂತಿಕೆ, ತಂತ್ರಗಾರಿಕೆ ಅದರಲ್ಲಿರುತ್ತದೆ. ಆದರೆ ಅವು ಗಳು ಮಾಮೂಲಿನ ಜೋಕುಗಳು ಪಡೆಯುವ ಗಾಳಿ ಬೆಳಕನ್ನು ಪಡೆದುಕೊಳ್ಳುವುದಿಲ್ಲ.

ಹೌದು, ಅವು ಪೋಲಿ ಜೋಕುಗಳು!

ಪೋಲಿ ಎಂಬ ಪದವನ್ನು ಹೇಗೆ ಬೇಕಾದರೂ ಅರ್ಥೈಸಬಹುದು. ಒಂದು ಮಾನದಂಡದಲ್ಲಿ ಪೋಲಿಯಾಗಿ ಕಂಡ ಚಟುವಟಿಕೆ ಮಾನದಂಡ ಬದಲಾಯಿಸಿದಾಕ್ಷಣ ರಸಿಕತೆ ಎನ್ನಿಸಿಕೊಳ್ಳುತ್ತದೆ. ತನ್ನ ಮಗ ಮಾಡಿದರೆ ಅದು ರಸಿಕತೆ, ನಿನ್ನ ಮಗ ಮಾಡಿದರದು ವ್ಯಭಿಚಾರ ಎನ್ನುವ ಹಳೆಯ ಮಾತಿನಂತೆ ಮಾನದಂಡಗಳು ಬದಲಾಗುತ್ತವೆ.

ನಿಜಕ್ಕೂ ಪೋಲಿ ಜೋಕುಗಳಲ್ಲಿ ಇರುವುದು ಏನು? ಲೈಂಗಿಕತೆಯನ್ನು ವಿಜೃಂಭಿಸುವ, ಸುಪ್ತವಾಗಿರಿಸಿದ ಲೈಂಗಿಕ ವಾಸನೆಯನ್ನು ಕೆಣಕುವ ಗುಣ. ಕೆಲವು ಜೋಕುಗಳಲ್ಲಿ ಹೆಣ್ಣನ್ನು ಕೀಳಾಗಿ ಕಾಣುವ, ಭೋಗದ ವಸ್ತುವಿನಂತೆ ಕಾಣುವ ಗುಣವೂ ಇರುತ್ತೆ. ಆದರೆ ನಮ್ಮ ಸಭ್ಯ ಸಮಾಜ ಅಂತಹ ಜೋಕುಗಳನ್ನು ನಿರ್ಬಂಧಿಸುವುದಕ್ಕೆ, ಅವುಗಳನ್ನು ಪೋಲಿ ಎಂದು ಕರೆಯುವುದಕ್ಕೆ ಹೆಣ್ಣಿನ ಗೌರವಕ್ಕೆ ಅವು ಉಂಟು ಮಾಡುವ ಧಕ್ಕೆಯೇ ಪ್ರಮುಖ ಕಾರಣವೇ? ಅಥವಾ ಎಲ್ಲಾ ಸಮಾಜಗಳಿಗೆ, ಎಲ್ಲಾ ಧರ್ಮಗಳಿಗೆ ಟಬೂ ಆಗಿರುವ ಲೈಂಗಿಕತೆಯ ಪ್ರಸ್ತಾಪವೇ ಅಸಾಧು ಎನ್ನುವುದೇ?

ಚರ್ಚೆ: ಸ್ನೇಹ ಸೇತು ಕಡಿಯುವ ಮುನ್ನ

11 ಮಾರ್ಚ್

ತನ್ನನ್ನು ತಾನು ಗೇಲಿ ಮಾಡಿಕೊಂಡು ನಗುವುದೇ ಅತ್ಯಂತ ಶ್ರೇಷ್ಠವಾದ ಹಾಸ್ಯ. ಇನ್ನೊಬ್ಬನ ಕಾಲೆಳೆಯುವುದೂ, ಅಸಹಾಯಕತೆಯನ್ನು ಲೇವಡಿ ಮಾಡುವುದೂ ಹಾಸ್ಯದ ಪರಿಧಿಯಲ್ಲಿ ಓಡಾಡಿಕೊಂಡಿರಲು ಪರವಾನಿಗೆ ಪಡೆದಿದೆಯಾದರೂ ಅದು ಆ ಇನ್ನೊಬ್ಬನಿಗೆ ನೋವುಂಟು ಮಾಡುವ ಯಾವ ಹಕ್ಕನ್ನು ಹೊಂದಿಲ್ಲ. ಇನ್ನೊಬ್ಬನನ್ನು ನೋಯಿಸುವ ಹಾಸ್ಯ ಕುಹಕವಾಗುತ್ತದೆ.

ಹಾಸ್ಯವನ್ನು ಸವಿಯುವುದಕ್ಕೆ, ವ್ಯಂಗ್ಯವನ್ನು ಆಸ್ವಾದಿಸುವುದಕ್ಕೆ ಹಾಸ್ಯಪ್ರಜ್ಞೆಯೆಂಬುದು ಆವಶ್ಯಕವಾಗಿ ಇರಲೇಬೇಕು. ಹಾಸ್ಯಪ್ರಜ್ಞೆ ಇಲ್ಲದ ಗಂಭೀರ ಘಮಂಡಿಗಳಿಗೆ ನವಿರಾದ, ಆರೋಗ್ಯಕರವಾದ, ಹಾರ್ಮ್‌ಲೆಸ್ ಆದ ಹಾಸ್ಯ, ವಿಡಂಬನೆಯೂ ಸಹ ವೈಯಕ್ತಿಕ ದೂಷಣೆಯಾಗಿ, ಅಫೆನ್ಸಿವ್ ಆಗಿ ಕಾಣುತ್ತೆ. ಅಂಥವರ ಬಗ್ಗೆ ಪ್ರಾಮಾಣಿಕವಾದ ಅನುಕಂಪದ ನಗೆ ಬೀರಿ ಮುಂದೆ ಸಾಗಬೇಕಷ್ಟೇ.

ಆದರೆ ನಗಿಸುವವರ, ನಗುವವರ ದಡದಲ್ಲಿ ನಿಂತವರು ಆಚೆ ದಡವರ ಬಗ್ಗೆ ಅನುಕಂಪವನ್ನೂ, ಸಹಾನುಭೂತಿಯನ್ನೂ ಹೊಂದಿರಬೇಕಾಗುತ್ತದೆ. ಆಚೆ ದಡದಲ್ಲಿ ನಿಂತು ನಗೆಪಾಟಲಿಗೆ ಈಡಾಗುವವರ ಬಗ್ಗೆ, ಅವರ ಭಾವನೆಗಳ ಬಗ್ಗೆ ಕಾಳಜಿಯಿರಬೇಕಾಗುತ್ತದೆ. ಈ ಎರಡೂ ದಡಗಳ ನಡುವಿನ ಕಂದರ ಅತಿಯಾಗದ ಹಾಗೆ ಎಚ್ಚರವಹಿಸುತ್ತಾ, ಸಹೃದಯತೆಯಿಂದ ಎರಡೂ ದಡವನ್ನು ಬೆಸೆಯುವ ಸೇತುವೆ ನಿರ್ಮಿಸುತ್ತಾ ಹಾಸ್ಯದ ನದಿಯ ನೀರನ್ನು ಸವಿಯಬೇಕು. ಇಲ್ಲವಾದಲ್ಲಿ ಎರಡೂ ಬದಿಯವರ ಮುಖದ ಮೇಲಿನ ನಗು ಮರೆಯಾಗಿ ಭಾವೋದ್ರೇಕದ ರಕ್ತದೋಕುಳಿ ಹರಿದು ನಗೆ ಬುಗ್ಗೆಯ ಹರಿವು ಕಲುಷಿತಗೊಳ್ಳುತ್ತದೆ.

ಇಷ್ಟೆಲ್ಲ ಹೇಳಲು ಕಾರಣ ಸರಳವಾದದ್ದು. ಜೋಕುಗಳಲ್ಲಿ, ವಿಡಂಬನೆಯಲ್ಲಿ ಸಾಕಷ್ಟು ಸಹಜವಾಗಿರುವ ‘ಜನಾಂಗೀಯ ನಿಂದನೆ’ಯ ಬಗ್ಗೆ ನಿಮ್ಮ ಗಮನ ಸೆಳೆಯಬೇಕಿತ್ತು. ನಮ್ಮ ಹಾಸ್ಯಕ್ಕಾಗಿ, ನಮ್ಮ ಮನರಂಜನೆಗಾಗಿ ಒಂದಿಡೀ ಜನಾಂಗದ, ಅದರ ಸದಸ್ಯರ ಭಾವನೆಗಳ ಪರಿವೆಯೇ ಇಲ್ಲದೆ ವರ್ತಿಸುವುದು ಅನಾಗರೀಕವಾಗುತ್ತದೆಯಲ್ಲವೇ? ದೇಶ ಭಕ್ತ ಪಂಜಾಬಿಗಳನ್ನು, ದೈಹಿಕ ಶಕ್ತಿಯಲ್ಲಿ ಅಪ್ರತಿಮರಾದ, ಬುದ್ಧಿಶಕ್ತಿಯಲ್ಲೂ ಯಾರಿಗೇನು ಕಡಿಮೆಯಿಲ್ಲ ಎಂದು ಸಾಬೀತು ಪಡಿಸಿದ, ಧೈರ್ಯ- ಸಾಹಸಗಳಲ್ಲಿ ಮೊದಲಿಗರಾದ ಸರ್ದಾರ್ಜಿಗಳನ್ನು ಬುದ್ಧಿಹೀನರಾಗಿ, ಪೆದ್ದರಾಗಿ ಮೂದಲಿಸುವುದು ನಿಜಕ್ಕೂ ಅಸಹ್ಯ ಹುಟ್ಟಿಸುವ ವರ್ತನೆ. ಆ ಜನಾಂಗದ, ಜನರ ಸ್ಥಾನದಲ್ಲಿ ನಮ್ಮನ್ನೇ ಕಲ್ಪಿಸಿಕೊಂಡು ಒಮ್ಮೆ ಜೋಕುಗಳನ್ನು ಓದಿಕೊಂಡರೆ ನಾವು ಅದೆಷ್ಟೇ ಹಾಸ್ಯಪ್ರಜ್ಞೆಯುಳ್ಳವರೆಂದುಕೊಂಡರೂ ಮನಸ್ಸು ಕಹಿಯಾಗುತ್ತದೆ.

ವೈದ್ಯ, ವಕೀಲ, ಪೊಲೀಸು, ರಾಜಕಾರಣಿ, ಪತ್ರಕರ್ತ, ಕಾಲೇಜು ಪ್ರೊಫೆಸರು, ಮಠದ ಸ್ವಾಮೀಜಿ, ಮಿಶಿನರಿ ಪಾದ್ರಿ ಇವರುಗಳ ಕುರಿತ ಜೋಕುಗಳು ನೇರವಾಗಿ ವ್ಯಕ್ತಿಯನ್ನು ಗುರಿಯಾಗಿಸಿಕೊಂಡಿರುವುದಿಲ್ಲ. ಆಯಾ ಕ್ಷೇತ್ರದ, ಆಯಾ ವೃತ್ತಿಯ ವೈಪರೀತ್ಯಗಳನ್ನು ವ್ಯಂಗ್ಯಕ್ಕೆ, ಲೇವಡಿಗೆ, ಹಾಸ್ಯಕ್ಕೆ ಒಳಪಡಿಸುವ ಪ್ರಯತ್ನವಷ್ಟೇ ಆಗಿರುತ್ತದೆ.

ತಿಳಿದೋ ತಿಳಿಯದೆಯೋ ಈ ರೀತಿ ನಗೆಯೆಂಬ ಮಹಾ ನದಿಯ ಒಂದು ಬದಿಯಲ್ಲಿ ನಿಂತ ನಾವುಗಳು ಇನ್ನೊಂದು ಬದಿಯೊಂದಿಗಿನ ಸ್ನೇಹ ಸೇತುವನ್ನು ಕಡಿದುಕೊಳ್ಳುವ ಹಂತ ತಲುಪಿರುತ್ತೇವೆ. ಆಗ ಕೊಂಚ ಎಚ್ಚರವಹಿಸಬೇಕಷ್ಟೇ!

ಚರ್ಚೆ: ಜೋಕು ಹುಟ್ಟುವ ಸಮಯ!

20 ಫೆಬ್ರ

 

ಕವಿತೆ ಹುಟ್ಟುವುದು ಹೇಗೆ, ಕವಿತೆಯ ಅಪ್ಪ ಅಮ್ಮ ಯಾರು, ಕಥೆ ಜನ್ಮ ತಾಳುವ ಪರಿಸರ ಎಂಥದ್ದು, ಕಾದಂಬರಿ ಮೊಟ್ಟೆ ಒಡೆದು ಮರಿಯಾಗುವದಕ್ಕೆ ಬೇಕಾದ ಕಾವು ಎಷ್ಟು ಎಂದೆಲ್ಲಾ ಅಳತೆ ಮಾಪಕಗಳನ್ನು ಹಿಡಿದು jokes ಬೆವರು ಹರಿಸುವ ಸಂಶೋಧಕ, ಪಂಡಿತರಿಂದ ತಪ್ಪಿಸಿಕೊಂಡಿರುವ ಪ್ರಶ್ನೆ- ಜೋಕುಗಳು ಹುಟ್ಟುವುದು ಹೇಗೆ? ಈ ಜಗತ್ತಿನಲ್ಲಿರುವ ಅಸಂಖ್ಯಾತ ದಾಖಲಿತ ಜೋಕುಗಳಿಗೆ ಅಪ್ಪ ಅಮ್ಮಂದಿರು ಯಾರೂ ಇಲ್ಲವೇ? ಒಂದು ಜೋಕು ಹುಟ್ಟು ಪಡೆದು ಬೇರೆ ಬೇರೆ ಸಂಸ್ಕೃತಿಯ ಜನರ ನಡುವೆ ನಲುಗಿ ಹೊಸ ರೂಪ ಪಡೆದು ದೂರ ದೂರದವರೆಗೆ ಪಸರಿಸುವ ರೀತಿಯೇ ಅದ್ಭುತ. ಎಲ್ಲಿಯೋ ಸಿಕ್ಕ ಉತ್ಕೃಷ್ಟವಾದ ಹೇಳಿಕೆಯನ್ನು ದಾಖಲಿಸುವಾಗಲೂ, ಭಾಷಣದಲ್ಲಿ, ಬರವಣಿಗೆಯಲ್ಲಿ, ಪತ್ರಿಕೆಗಳ ಸಂಪಾದಕೀಯ ಪುಟದ ಮೂಲೆಯಲ್ಲಿ ಬಳಸುವಾಗಲೂ ಅದನ್ನುದುರಿಸಿದ ವ್ಯಕ್ತಿಯ ಹೆಸರನ್ನು ಹಾಕಲಾಗುತ್ತದೆ. ಹೆಸರು ತಿಳಿಯದ ಹೇಳಿಕೆಗಳಿಗೆ ‘ಅನಾಮಿಕ’ನ ಹೆಸರನ್ನಾದರೂ ಅಂಟಿಸಿ ಕೈತೊಳೆದುಕೊಳ್ಳಲಾಗುತ್ತದೆ. ಆದರೆ ಮನುಷ್ಯ ತನ್ನೆಲ್ಲಾ ಸಂಕಟವನ್ನು ಕ್ಷಣಕಾಲ ಮರೆತು ನಕ್ಕು ಹಗುರಾಗಲು ನೆರವಾಗುವ ಅಕ್ಷರಗಳ ಈ ಆಭರಣಗಳನ್ನು ಕಡೆದಿರಿಸಿದ ಅಗೋಚರ ಶಿಲ್ಪಿಗಳ ನೆನಪೂ ನಮಗೆ ಆಗುವುದಿಲ್ಲ!

ಜೋಕು ಹುಟ್ಟುವುದು ಹೇಗೆ ಎನ್ನುವುದು  ಸಿಲ್ಲಿ ಪ್ರಶ್ನೆ ಎಂದು ಭಾವಿಸುವವರು ಒಂದು ಪ್ರಯತ್ನ ಮಾಡಬಹುದು. ಇದುವರೆಗೂ ತಾವು ಎಲ್ಲೂ ಕೇಳಿರದ, ಎಲ್ಲೂ ಓದಿರದ ತಮ್ಮದೇ ಒಂದೈದು ಜೋಕುಗಳನ್ನು ಸೃಷ್ಟಿಸುವುದು. ಜೋಕ್ ಎಂದ ಮೇಲೆ ಅದರ ಸಾರ್ಥಕ್ಯವಿರುವುದು ಅದು ಕೇಳುಗನ ತಲೆಗೆ ಅಪ್ಪಳಿಸಿ ಆತನಲ್ಲಿ ನಗುವಿನ ಅಲೆ ಎಬ್ಬಿಸಿದಾಗಲೇ. ನಾವೆಷ್ಟೇ ಹಾಸ್ಯ ಪ್ರವೃತ್ತಿಯವರು, ಸರಸ ಮಾತುಗಾರರು ಎಂದು ಭ್ರಮೆ ಇರಿಸಿಕೊಂಡಿದ್ದರೂ ನಮ್ಮ ಕೈಲಿ ನಾಲ್ಕು ಪಂಚಿಂಗ್ ಜೋಕುಗಳನ್ನು ಬರೆಯಲು ಸಾಧ್ಯವಾಗುವುದಿಲ್ಲ. ಆ ಕುಸುರಿ ಕೆಲಸ ಬಲು ನಾಜೂಕಿನದು.

ಬಹುಶಃ ಈ ಜೋಕುಗಳೆಂಬುವು ಉರುಟುರುಟಾದ ನಾಣ್ಯದ ಹಾಗೆ ಅನ್ನಿಸುತ್ತದೆ. ಅವು ಹೆಚ್ಚು ಹೆಚ್ಚು ಕೈಗಳನ್ನು ಬದಲಾಯಿಸುತ್ತಾ ಹೋದಂತೆ, ಹೆಚ್ಚು ಚಲಾವಣೆಯಾಗುತ್ತಾ ಹೋದಂತೆ ನುಣುಪಾಗುತ್ತ ಹೋಗುತ್ತವೆ. ಹೆಚ್ಚು ಶಾರ್ಪ್ ಆಗುತ್ತಾ ಹೋಗುತ್ತವೆ. ಹೆಚ್ಚು ಪಂಚಿಂಗ್ ಎನ್ನಿಸುತ್ತವೆ. ಎಲ್ಲೂ ಪಂಡಿತೋತ್ತಮರ ಕತ್ತರಿ, ಬ್ಲೇಡುಗಳಿಗೆ ಈಡಾಗದೆ, ಹಾರ ತುರಾಯಿಯ ವೈಭೋಗವನ್ನು ಅನುಭವಿಸದೆ ಜನ ಮಾನಸದಲ್ಲಿ ಹಸಿರಾಗಿರುವ ಜೋಕುಗಳು ನಿಜಕ್ಕೂ ವಿಸ್ಮಯದ ಸಾಹಿತ್ಯವೇ ಸರಿ.

ನಿಮಗೇನನ್ನಿಸುತ್ತೆ?

ಚರ್ಚೆ: ನಗುವಿನ ಬಗೆ

12 ಫೆಬ್ರ

ನಗುವಿನಲ್ಲಿರುವ ಬಗೆಗಳೆಷ್ಟು!

ಮುದ್ದು ಕಂದ ತುಟಿ ಅರಳಿಸಿ ನಕ್ಕ ನಗು, ಪುಂಡ ಪೋರನೊಬ್ಬ ತಪ್ಪು ಮಾಡಿ ಕ್ಷಮೆ ಕೋರುವಂತೆ ನಿಂತು ನಕ್ಕ ನಗು, ಬೊಚ್ಚ ಬಾಯಿಯ ಮುದುಕ ಅಪಾನವಾಯುವಿಗೆ ಮುಕ್ತಿ ನೀಡಿ ಮುಖದಲ್ಲಿ ಅರಳಿಸಿದ ನಗು, ಧ್ಯಾನದಲ್ಲಿ ಕುಳಿತವನ ಮುಖದಲ್ಲಿನ ಮಂದಸ್ಮಿತದ ನಗು, ಜೋಕು ಕೇಳಿ ತಡೆಯಲಾಗದು ಪಕ್ಕೆಲುಬು ಹಿಡಿದುಕೊಂಡು ಉರುಳಾಡಿ ನಕ್ಕ ನಗು, ಸಮಸ್ಯೆಗಳೆಲ್ಲಾ ಪರಿಹಾರವಾದಾಗ ನಿಟ್ಟುಸಿರಿನ ಸಂಗಡ ಹೊರಬಂದ ನಗು, ಸವಾಲನ್ನು ಕಂಡು ಸಿನಿಕತೆಯಿಂದ ಹುಟ್ಟಿದ ನಗು, ದೊಡ್ಡ ವರ ಮೂರ್ಖತನವನ್ನು ಕಂಡು ಹುಟ್ಟಿದ ನಗು, ಚಿಕ್ಕವರ ದೊಡ್ಡತನ ಕಂಡು ಹುಟ್ಟಿದ ನಗು, ಇತರರನ್ನು ಲೇವಡಿ ಮಾಡಿ ನಕ್ಕ ನಗು, ಕುಂಟ, ಕುರುಡನ ಅಸಹಾಯಕತೆ ಕಂಡು ನಕ್ಕ ನಗು, ಬಾಳೆ ಹಣ್ಣಿನ ಸಿಪ್ಪೆ ಹುಟ್ಟಿಸಿದ ನಗು, ಅಟ್ಟ ಹಾಸದ ನಗು, ಅಹಂಕಾರದ ಕೇಕೆಯ ನಗು, ವಿಕಾರವಾದ ನಗು!laugh

ಮನುಷ್ಯನಿಗೆ ನಗುವುದಕ್ಕೆ ಅದೆಷ್ಟು ಕಾರಣ ಸಿಕ್ಕುತ್ತವೆ! ಯಾರನ್ನೋ ಲೇವಡಿ ಮಾಡಿ, ಯಾರದೋ ಅಸಹಾಯಕತೆಯನ್ನು ಆಡಿಕೊಂಡು ನಮ್ಮನ್ನು ನಾವು ಸಂಕುಚಿತಗೊಳಿಸಿಕೊಂಡು ನಗುವ ಅಪಹಾಸ್ಯದ ನಗುವಿಗೂ, ನಮ್ಮೊಳಗನ್ನು ವ್ಯಾಪಿಸಿಕೊಂಡು ಎದೆಯನ್ನು ಹಗುರಾಗಿಸಿ ಕಣ್ಣನ್ನು ತೇವಗೊಳಿಸಿ, ಭಾವನೆಗಳನ್ನು ತಣಿಸುವ ವಿಶಾಲವಾದ ನಗುವಿಗೂ ಅದೆಷ್ಟು ವ್ಯತ್ಯಾಸವಿದೆಯಲ್ಲವೇ?

ನಮ್ಮ ಪ್ರೇಮ, ನಮ್ಮ ಗೆಳೆತನ, ನಮ್ಮ ಮಾತೃ ಭಕ್ತಿ, ನಮ್ಮ ಶಿಸ್ತು, ನಮ್ಮ ಸ್ವಚ್ಛತೆ, ನಮ್ಮ ದೇಶ ಪ್ರೇಮಗಳ ಹಾಗೆಯೇ ಹಾಸ್ಯ ಕೂಡ ವಿಶಿಷ್ಟವಾದದ್ದು. ನಾವು ನಮ್ಮ ಪ್ರೇಮಕ್ಕೆ ಮೌಲ್ಯ ಸೇರಿಸುತ್ತಾ ಹೋದ ಹಾಗೆ, ನಮ್ಮ ಪ್ರೇಮ ನಮ್ಮನ್ನು ಬೆಳೆಸುತ್ತಾ ಹೋದ ಹಾಗೆ ನಮ್ಮ ಹಾಸ್ಯವೂ, ಹಾಸ್ಯ ಪ್ರವೃತ್ತಿಯೂ ಸಹ. ನಾವದನ್ನು ಬೆಳೆಸುತ್ತೇವೆ, ಅದು ನಮ್ಮನ್ನು ಬೆಳೆಸುತ್ತದೆ.

ಏನಂತೀರಿ?

ಚರ್ಚೆ: ಹಾಸ್ಯ v/s ಗಾಂಭೀರ್ಯ

23 ಜನ

ಬರವಣಿಗೆಯಲ್ಲಿ ಹಾಸ್ಯಮಯವಾದ ಶೈಲಿ, ಸಿನೆಮಾಗಳಲ್ಲಿ ವಿಡಂಬನೆಯ ನಿರೂಪಣೆ ಹೇಳಬೇಕಾದ ವಿಷಯದ ಗಾಂಭೀರ್ಯವನ್ನು ಕೆಡಿಸುತ್ತವೆ ಆ ಮೂಲಕ ಅವುಗಳು ಬೀರಬೇಕಾದ ಪರಿಣಾಮ ಬೀರುವಲ್ಲಿ ವಿಫಲವಾಗುತ್ತವೆ ಎಂಬುದು ಹಲವರ ಆರೋಪ. ಗಂಭೀರವಾದ ವಿಚಾರವನ್ನು ಅಷ್ಟೇ ಒಣಗಾಂಭೀರ್ಯದಲ್ಲಿ ಮಂಡಿಸಿದಾಗಲೇ ಅದು ಪರಿಣಾಮ ಬೀರಲು ಸಾಧ್ಯವಾಗುತ್ತದೆ. ಹಾಸ್ಯ ಓದುಗರ ಇಲ್ಲವೇ ನೋಡುಗರ ಗಮನವನ್ನು ವಿಷಯದಿಂದ ಪಲ್ಲಟಗೊಳ್ಳುವಂತೆ ಮಾಡುತ್ತದೆ ಎನ್ನಲಾಗುತ್ತದೆ.

ಆದರೆ ತಮ್ಮ ಸಣ್ಣ ಕಥೆಗಳಲ್ಲಿ, ಕಾದಂಬರಿಗಳಲ್ಲಿ ಅವರಿಗೇ ವಿಶಿಷ್ಟವಾದ ಹಾಸ್ಯಾತ್ಮಕವಾದ ಶೈಲಿಯನ್ನು ಬೆಳೆಸಿ ಹೆಸರಾದ ಮಲಯಾಳಿ ಲೇಖಕ ವೈಕಂ ಮಹಮದ್ ಬಶೀರ್ ಅಭಿಪ್ರಾಯ ಬೇರೆ ತೆರನಾದದ್ದು:

‘ನಾನು ಉದ್ದೇಶ ಪೂರ್ವಕವಾಗಿ ಸಣ್ಣ ಕಾದಂಬರಿಗಳನ್ನು ಬರೆಯುತ್ತೇನೆ. ದೊಡ್ಡ ಕಾದಂಬರಿಯನ್ನು ಬರೆಯುತ್ತಾ ಹೋದಂತೆ ತೆಳುವಾಗುತ್ತಾ ಹೋಗುತ್ತದೆ. ಜನಗಳ ಮನಸ್ಸಿನಲ್ಲಿ ನಿಲ್ಲುವುದು ಕೆಲವೇ ಕೆಲವು ಪುಟಗಳು ಮಾತ್ರ. ಉಳಿದವು ವೇಸ್ಟ್. ಬೋರ್ ಅನ್ನಿಸಿ ಬಿಡಲೂಬಹುದು. ಹಿಡಿದದ್ದನ್ನು ಬಿಡದಂತೆ ಓದಿಸಿಕೊಂಡು ಹೋಗಬೇಕಾದರೆ ಚಿಕ್ಕ ಕಾದಂಬರಿಯಲ್ಲಿ ವಿಶ್ವವನ್ನೇ ತುಂಬಿಸಿ ಬಿಡಬೇಕು. ಹೀಗಾಗಿ ‘ಎಂಡೆ ಉಪ್ಪಾಪ್ಪಕ್ಕೊರು ಆನೆಯುಂಡಾಯಿರುನ್ನು’ ಕಾದಂಬರಿಯಲ್ಲಿ ಹೇಳ ಬೇಕಾದ್ದನ್ನೆಲ್ಲ ಆನೆಯ ರೂಪದಲ್ಲಿ ಹೇಳಿಬಿಟ್ಟೆ’ ಎಂದರು.

ನಾನು ತಲೆದೂಗಿದೆ. ‘ಹೌದು, ಆನೆ ಈ ಕಾದಂಬರಿಯಲ್ಲಿ ಎಲ್ಲವನ್ನೂ ಹೇಳುತ್ತದೆ’ಎಂದೆ. ‘ನೀವು ಬಳಸುವ ಹಾಸ್ಯದಿಂದಾಗಿ ಗಂಭೀರ ವಿಷಯಗಳು ಮರೆಯಾಗುವುದಿಲ್ಲವೇ…?’ ಎಂದು ಕೇಳಿದೆ.

‘ಇಲ್ಲ, ಮನುಷ್ಯನಿಗೆ ತಾಳ್ಮೆ ಇಲ್ಲದಿರುವ ಸಂದರ್ಭಗಳೇ ಹೆಚ್ಚು. ಗಂಭೀರವಾದ್ದನ್ನು ನೇರವಾಗಿ ಹೇಳಿದರೆ ಅವನಿಗೆ ನಾಟುವುದಿಲ್ಲ. ಗಂಭೀರವಾದುದನ್ನು ಮನಸ್ಸು ತೆಗೆದುಕೊಳ್ಳುವುದೂ ಇಲ್ಲ. ತೆಳುವಾದ ಹಾಸ್ಯದೊಂದಿಗೆ ಗಂಭೀರ ವಿಷಯಗಳನ್ನು ಸೇರಿಸಿ ಓದುಗನ ಮುಂದಿಟ್ಟರೆ ಅವನಿಗೆ ನಾಟುವ ಸಂದರ್ಭ ಹೆಚ್ಚು. ಗಂಭೀರ ವಿಷಯಗಳು ಬಲು ಭಾರ. ಹಾಸ್ಯರಸದೊಳಗೆ ಹುದುಗಿದ ವಿಷಯಗಳು ಮನಸ್ಸಿನಲ್ಲಿ ಸುಲಭವಾಗಿ ಕೂತುಬಿಡುತ್ತದೆ.’

ನಿಮಗೇನನ್ನಿಸುತ್ತೆ? ವಿಷಯದ ನಿರೂಪಣೆಯಲ್ಲಿ ಹದವಾದ ಹಾಸ್ಯ ಬೆರೆತರೆ, ಸಹಜವಾದ ವಿಡಂಬನೆ ಕಲೆತರೆ ಅದು ಬೀರುವ ಪರಿಣಾಮ ಗಾಢವಾಗುತ್ತದೆಯೇ? ಯಾವುದಾದಾರೂ ಪುಸ್ತಕವನ್ನು ಓದುವಾಗ, ಸಿನೆಮಾ ನೋಡುವಾಗ ನಿಮಗೆ ಈ ಅನುಭವವಾಗಿದೆಯೇ?

ಚರ್ಚೆ: ನಗುವುದು ಅಷ್ಟು ಕಷ್ಟವೇ!

3 ನವೆಂ

‘ನಗುವುದು ಅಷ್ಟು ಕಷ್ಟವೇ?’ ಎಂಬ ಪ್ರಶ್ನಗೆ ಉತ್ತರಿಸುವ ಮೊದಲು ಬೆಂಗಳೂರಿನ ಅಷ್ಟೂ ಲಾಫಿಂಗ್ ಕ್ಲಬ್ಬುಗಳ ಪ್ರತಿದಿನ ಬೆಳಗಿನ ಸರ್ಕಸ್ಸುಗಳನ್ನು, ಟಿವಿ ಚಾನಲ್‌ಗಳಲ್ಲಿನ ಪ್ರೈಂ ಟೈಮ್ ಕಾಮಿಡಿ ಕಿಲಾಡಿಗಳ ಎಲ್ಲಾ ಸಾಹಸಗಳನ್ನು ಒಮ್ಮೆ ಅವಲೋಕಿಸಬೇಕು. ಹೌದು! ನಗುವುದು ನಿಜಕ್ಕೂ ಕಷ್ಟ ಇಲ್ಲವಾದರೆ ಮನುಷ್ಯ ಅದಕ್ಕಾಗಿ ಇಷ್ಟೋಂದು ಖರ್ಚು ಮಾಡುತ್ತಿದ್ದನೇ?

ನಮ್ಮ ಬದುಕಿನ ಗತಿಯನ್ನ ಹೇಗೆ ಮಾರ್ಪಾಟುಗೊಳಿಸಿಕೊಂಡಿದ್ದೇವೆ ಎಂಬುದನ್ನು ಗಮನಿಸಿದರೆ ನಮಗೆ ನಗುವುದಕ್ಕೆ ಏಕೆ ಸಾಧ್ಯವಾಗುತ್ತಿಲ್ಲ ಎಂಬುದರ ಅರಿವಾಗುತ್ತದೆ. ಮೂರು ನಾಲ್ಕು ಮಂದಿ ಕಲೆಯಬೇಕು, ಒಬ್ಬರ ಕಾಲನ್ನೊಬ್ಬರು ಎಳೆಯುವ ಕೆಲಸದಲ್ಲಿ ತೊಡಗಿಕೊಳ್ಳಬೇಕು, ಆಗ ಯಾವ ಪ್ರಯಾಸವೂ ಇಲ್ಲದೆಯೇ ಹಾಸ್ಯವು ಹುಟ್ಟಿಕೊಳ್ಳುತ್ತದೆ. ನಕ್ಕು ಹಗುರಾಗುತ್ತೇವೆ. ಸರಿ, ಆದರೆ ನಾಲ್ಕು ಮಂದಿ ಕಲೆಯುವುದೇ ನಮಗೆ ಬಹುದೊಡ್ಡ ಸಾಧನೆಯಾಗಿ ಕಾಣುತ್ತಿದೆಯಲ್ಲ!

ಅದನ್ನು ಪಕ್ಕಕ್ಕಿಡಿ, ನಗುವುದು ನಿಜಕ್ಕೂ ಎಷ್ಟು ಕಷ್ಟ ಎಂಬುದಕ್ಕೆ ಒಂದು ಪ್ರಸಂಗವನ್ನು ಗಮನಿಸಿ. ನೀವು ಟೀಚರ್ ಎಂದುಕೊಳ್ಳಿ ತರಗತಿಯನ್ನು ಪ್ರವೇಶಿಸಿದಾಕ್ಷಣ ಕಪ್ಪು ಹಲಗೆಯ ಮೇಲೆ ಅಕರಾಳ ರೂಪದ ಕಾರ್ಟೂನ್ ಬರೆದು ಅದರ ಕೆಳಗೆ ಯಾರೋ ಕಿಡಿಗೇಡಿ ಹುಡುಗರು ನಿಮ್ಮ ಹೆಸರು ಬರೆದಿರುತ್ತಾರೆ, ಬೈಕಿನಲ್ಲಿ ರಭಸವಾಗಿ ನುಗ್ಗುತ್ತಿರುತ್ತೀರಿ ಸ್ವಲ್ಪ ಮಂದ ಬುದ್ಧಿಯವ ಹುಡುಗ ನಿಮ್ಮ ಬೈಕಿಗೆ ಅಡ್ಡ ಬಂದು ಬಿಡುತ್ತಾನೆ- ಹೇಳಿ ಈಗ ನಿಮ್ಮ ಕೈಲಿ ನಕ್ಕು ಬಿಡಲು ಸಾಧ್ಯವೇ? ಕ್ರಿಕೆಟಿನಲ್ಲಿ ಭಾರತ ಫೈನಲ್ ಓವರಿನಲ್ಲಿ ಎರಡು ವಿಕೆಟ್ ಕಳೆದುಕೊಂಡು  ಸೋತುಬಿಡುತ್ತದೆ, ಮಗ ಪಿಯುಸಿಯಲ್ಲಿ ಫೇಲಾಗಿ ಮನೆಗೆ ಬರುತ್ತಾನೆ, ಪಕ್ಕದ ಮನೆಯಾತ ವಿನಾಕಾರಣದ ಕ್ಯಾತೆ ತೆಗೆದು ನಿಂತಿರುತ್ತಾನೆ- ಪ್ರಮಾಣ ಮಾಡಿ ಹೇಳಿ ನಿಮಗೆ ಈ ಸಂದರ್ಭಗಳಲ್ಲಿ ನಕ್ಕು ಹಗುರಾಗುವುದಕ್ಕೆ ಸಾಧ್ಯವಾ?ಅದಕ್ಕೇ ಮೊದಲಲ್ಲೇ ಕೇಳಿದ್ದು, ನಗುವುದು ಅಷ್ಟು ಸುಲಭವೇ ಎಂದು!

ಘನವಾದ ವ್ಯಕ್ತಿತ್ವವಿರುವವರಿಗೆ ಮಾತ್ರ ಎಂಥಾ ಸಂದರ್ಭದಲ್ಲಾದರೂ ನಗುವಿನ ಅಲೆಯನ್ನು ಮೈಮೇಲೆಳೆದುಕೊಂಡು ಅದರ ಮೇಲೆ ಅನಾಯಾಸವಾಗಿ ತೇಲಿ ಮುಂದೆ ಸಾಗಲು ಸಾಧ್ಯ. ಹಾಸ್ಯ ಹುಟ್ಟುವುದು ಅಂಥ ಘನವಾದ ವ್ಯಕ್ತಿತ್ವದ ಸಂಗದಲ್ಲಿ ಮಾತ್ರ. ವಿರಾಮದಲ್ಲಿನ ಪೋಲಿ ಹಾಸ್ಯ, ಅಪಹಾಸ್ಯಗಳೂ ಇವೆ. ಆದರೆ ಹಾಸ್ಯ ಮನೋವೃತ್ತಿಯ ನಿಜವಾದ ಸತ್ವ ಪರೀಕ್ಷೆ ನಡೆಯುವುದು ಸಂಕಟದ, ಆಘಾತದ ಸಂದರ್ಭಗಳಲ್ಲೇ. ಅಂಥ ಪ್ರಸಂಗಗಳಿಗೆ ನಮ್ಮ ದಿನನಿತ್ಯದ ಬದುಕಿನಲ್ಲಿ ಯಾವ ಕೊರತೆಯೂ ಇರುವುದಿಲ್ಲ!

ನಗು ಸಹಜವೋ, ಗಾಂಭೀರ್ಯ ಸಹಜವೋ?

21 ಆಗಸ್ಟ್

ನಗು ಸಹಜವೋ, ಗಾಂಭೀರ್ಯ ಸಹಜವೋ?

ಇದೊಂದು ಸರಳವಾದ ಪ್ರಶ್ನೆ. ಸಣ್ಣಸಣ್ಣದಕ್ಕೂ ನಗುತ್ತಾ, ಮುಸಿಮುಸಿ ಎಂದು ಹಲ್ಕಿರಿಯುತ್ತಾ, ವಿನಾಕಾರಣ ನಗುವ ಮಕ್ಕಳು ಕೊಂಚ ಬೆಳೆಯುತ್ತಿದ್ದಂತೆಯೇ ಅವರಿಗೆ ದೊಡ್ಡವರು ‘ಸ್ವಲ್ಪ ಗಂಭೀರವಾಗಿರುವುದನ್ನು ಕಲಿತುಕೋ’ ಎಂದು ಉಪದೇಶಿಸತೊಡಗುತ್ತಾರೆ. ಸಣ್ಣ ವಯಸ್ಸಿನಲ್ಲೇ ಮುಖದ ಮೇಲಿನ ತುಂಟಾಟಗಳಿಗೆಲ್ಲಾ ಟಾಟಾ ಹೇಳಿ ಅಲ್ಲಿ ದೊಡ್ಡವರ ಗಾಂಭೀರ್ಯಕ್ಕೆ ವಾಸ್ತವ್ಯ ಕಲ್ಪಿಸಿದ ಹುಡುಗ ಇಡೀ ‘ಹುಡುಗು ಕುಲ’ದ ಆದರ್ಶವಾಗುತ್ತಾನೆ.

ಮೂಗಿನ ಕೆಳಗೆ ಮೀಸೆ ಮೂಡಿ, ಅದರ ಗಡಿಯಾಚೆಗೆ ಹುಲುಸಾಗಿ ಗಡ್ಡ ಹರವಿಕೊಂಡು ಬೆಳೆದು ನೆತ್ತಿ ವಿಶಾಲವಾಗುತ್ತಾ, ಕಪ್ಪು ಕೂದಲ ರಾಶಿಯ ಮಧ್ಯೆ ಬೆಳ್ಳಿಯ ಗೆರೆಗಳು ಕಾಣಿಸಿಕೊಳ್ಳುತ್ತಿದ್ದ ಹಾಗೆ ವೈದ್ಯನೆಂಬ ನಾರಾಯಣ ನೆನಪಾಗುತ್ತಾನೆ. ವೈದ್ಯ ತನ್ನ ಫೀಸನ್ನು ವಸೂಲು ಮಾಡಿಕೊಂಡು, ‘ತೀರಾ ಇಷ್ಟು ಗಂಭೀರವಾಗಿರಬೇಡಿ. ಸ್ವಲ್ಪ ನಗುನಗುತ್ತಾ ಇರಿ. ನಿಮ್ಮ ರಕ್ತದೊತ್ತಡ ಹೆಚ್ಚಾಗಿದೆ ಎನ್ನುತ್ತಾನೆ’ ನಗುವುದಕ್ಕೆ ಪ್ರಯತ್ನ ಶುರುವಾಗುತ್ತದೆ.

ಗಾಂಭೀರ್ಯ ಸಹಜವಾದದ್ದಾ ಇಲ್ಲವೇ ನಗು ಸಹಜವಾದದ್ದಾ? ಗಾಂಭೀರ್ಯ ಸಹಜವಾದದ್ದೇ ಆದರೆ ಮಕ್ಕಳು ನಮ್ಮ ನಗೆಯನ್ನು ಹೂತುಹಾಕಿ ಅದರ ಮೇಲೇಕೆ ಗಾಂಭೀರ್ಯದ ಮಹಲನ್ನು ಕಟ್ಟಬೇಕು? ನಗು ಸಹಜವೆನ್ನುವುದೇ ಆದಲ್ಲಿ ನಗಲು ಪ್ರಯತ್ನಿಸುವುದು ಏತಕ್ಕೆ?

ನಮ್ಮ ದೇಹವನ್ನೇ ಗಮನಿಸಿ. ಅಲರ್ಟ್ ಆಗಿರುವುದು ಅವುಗಳ ಸಹಜವಾದ ಲಕ್ಷಣವಲ್ಲ. ಮುಷ್ಠಿ ಬಿಗಿ ಹಿಡಿದು ಎಷ್ಟು ಕಾಲ ಕೂರಲಾದೀತು? ಅವುಗಳ ಸಹಜ ಸ್ಥಿತಿ ಸಡಿಲವಾಗಿರುವುದು. ಆದರೆ ಆ ಸಡಿಲತೆ ಆಲಸ್ಯವಾಗಿ ತಿರುಗಬಹುದು. ಸಡಿಲತೆಯಲ್ಲಿ ಆಲಸ್ಯದ ಹೊಗೆ ಕಾಣುತ್ತಿದ್ದ ಹಾಗೆ ಬಿಗಿತ ತಂದು ಕೊಳ್ಳುತ್ತಾ, ಬಿಗಿತ ಅತಿಯಾಯಿತು ಎನ್ನುತ್ತಿದ್ದ ಹಾಗೆ ಸಡಿಲತೆಗೆ ಬಿಟ್ಟರೆ ಸ್ನಾಯುಗಳು ಬಲಿಷ್ಠವಾಗುತ್ತವೆ. ಹೀಗೆ ಏಕೆ ಇರಬಾರದು ನಮ್ಮ ಬದುಕು?

ಚರ್ಚೆ: ಕಲ್ಲು ನಗುವ ಸಮಯ!

3 ಜುಲೈ

ನಮ್ಮ ವೇಗದ ನಗರದ ಬದುಕಿನಲ್ಲಿ ಎಲ್ಲವೂ ಕಮಾಡಿಟಿಗಳಾದ ಹಾಗೆಯೇ ನಗುವೂ ಒಂದು ಪ್ರಾಡಕ್ಟ್ ಆಗುತ್ತಿದೆಯಾ ಎಂಬ ಸಂಶಯ ಮೂಡುತ್ತದೆ. ಜನರಿಗೆ ನಗುವುದಕ್ಕೆ ಕಾರಣಗಳು ಬೇಕು. ನಗು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದರೆ ಜೋಕುಗಳನ್ನು ಹುಡುಕಲು ಶುರು ಮಾಡುತ್ತಾರೆ. ಜೋಕ್ ಪುಸ್ತಕಗಳನ್ನು ಕೊಳ್ಳುತ್ತಾರೆ. ನೂರಾರು ರುಪಾಯಿ ಶುಲ್ಕ ಕಟ್ಟಿ ಲಾಫಿಂಗ್ ಕ್ಲಬ್ಬುಗಳಿಗೆ ಸೇರಿಕೊಂಡು ನಗುತ್ತಾರೆ. ಕೆಲವರು ತುಂಬಾ ಪರಿಶ್ರಮ ವಹಿಸಿ ನಗುವುದರಲ್ಲಿ ಗಂಭೀರವಾದ ಸಾಧನೆ ಮಾಡುತ್ತಾರೆ. ನಗುವುದು ಎಂದರೇನೇ ಎಲ್ಲಾ ಪ್ರಯತ್ನಪೂರ್ವಕ ಕ್ರಿಯೆಗಳನ್ನು ಮರೆಯುವುದು, ಜನರು ನಗುವುದನ್ನೂ ಪ್ರಯತ್ನ ಪೂರ್ವಕವಾದ ಕ್ರಿಯೆಯಾಗಿಸಿಕೊಳ್ಳುತ್ತಿರುವುದನ್ನು ಕಂಡರೆ ಅಪ್ರಯತ್ನ ಪೂರ್ವಕವಾಗಿ ನಗು ಬರುತ್ತದೆ!

ಕಾಮಿಡಿ ಸೀರಿಯಲ್ಲುಗಳು, ಜೋಕುಗಳನ್ನು ಹೇಳಿ ಬಹುಮಾನ ಪಡೆಯಲು ಅದನ್ನೊಂದು ಸ್ಪರ್ಧೆಯಾಗಿಸಿದ ಕಾರ್ಯಕ್ರಮಗಳು ಬಹು ಮಜವಾಗಿರುತ್ತವೆ. ಒಂದೊಂದು ಹಾಸ್ಯ ಪ್ರಸಂಗ ಬಂದಾಗಲೂ, ಸಂಭಾಷಣೆಯಲ್ಲಿ ಒಂದೊಂದು ಪಂಚಿಂಗ್ ಲೈನ್ ಬಂದಾಗಲೂ ಹಿನ್ನೆಲೆಯಲ್ಲಿ ‘ಹ್ಹ..ಹ್ಹ…ಹ್ಹ’ ಎಂಬ ರೆಕಾರ್ಡೆಡ್ ನಗುವನ್ನು ಪ್ಲೇ ಮಾಡುತ್ತಾರೆ. ನಗುವುದಕ್ಕೆಂದೇ ಟಿವಿ ಸೆಟ್‌ಗಳ ಮುಂದೆ ಕುಳಿತ ಜನ ಆ ಎಲ್ಲಿ ನಗಬೇಕು ಎಂದು ಟಿವಿಯವರು ಸೂಚಿಸುವಂತೆ! ನಿಜಕ್ಕೂ ನಾವು ಅಷ್ಟು ಯಾಂತ್ರಿಕವಾಗಿದ್ದೇವೆ. ಮನಃಪೂರ್ವಕವಾಗಿ ನಗುವುದಕ್ಕೂ ಮುಂಚೆ ಇಲ್ಲಿ ನಗಬಹುದಾ, ನಕ್ಕರೆ ಯಾರೇನು ತಿಳಿಯುತ್ತಾರೆ ಎಂದು ಆಲೋಚಿಸಿ ಮುಂದುವರೆಯುವಷ್ಟು ಯಾಂತ್ರಿಕರಾಗಿದ್ದೇವೆ.

ಹೀಗಾಗಿ ನಮ್ಮ ನಗುವೂ, ನಮ್ಮನ್ನು ನಗಿಸಲು ಪ್ರಯತ್ನಿಸುವವರೂ ಇಷ್ಟೇ ಯಾಂತ್ರಿಕವಾಗುತ್ತಿದ್ದಾರೆ.

ಚರ್ಚೆ: ನಗುವುದಕ್ಕೂ ನಮಗೆ ವೈದ್ಯರ ಪ್ರಿಸ್ಕ್ರಿಪ್ಷನ್ ಬೇಕಾ?

26 ಏಪ್ರಿಲ್

ನಮ್ಮ ಬದುಕುಗಳು ನಗರ ಕೇಂದ್ರಿತವಾಗುತ್ತಾ ಹೋದಂತೆಲ್ಲಾ ನಾವು ಯಾಂತ್ರಿಕರಾಗುತ್ತಿದ್ದೇವಾ? ಈ ವ್ಯಾಪಾರಿ ಜಗತ್ತಿನ ಅವ್ಯಕ್ತ ಕಾನೂನುಗಳಿಗೆ ನಮ್ಮನ್ನು ನಾವು ಒಡ್ಡಿಕೊಂಡಿದ್ದೇವೆಯೇ? ನಮ್ಮನ್ನು ನಗಿಸುವುದಕ್ಕೂ ಒಬ್ಬ ಜೋಕರ್‌ನನ್ನು ಅಪಾಯಿಂಟ್ ಮಾಡಿಕೊಳ್ಳುವ ಅನಿವಾರ್ಯತೆಯನ್ನು ಸೃಷ್ಟಿಸಿಕೊಂಡಿದ್ದೇವಾ? ನಮಗೆ ನಗುವುದಕ್ಕೆ ಸಿನೆಮಾ, ಹಾಸ್ಯ ಲೇಖನ, ಕಾಲೆಳೆಯುವಿಕೆ, ಯಾರದೋ ಮೇಲಿನ ಜೋಕು, ಬೆಳ್ಳಂಬೆಳಗಿನಲ್ಲಿ ಪಾರ್ಕಿನಲ್ಲಿ ಫೀಸು ಪಡೆದು ನಗಿಸುವ ಲಾಫಿಂಗ್ ಕ್ಲಬ್ಬುಗಳು ಕೇವಲ ನೆಪಗಳಾ ಅಥವಾ ಅನಿವಾರ್ಯತೆಗಳಾ?

ನಮ್ಮ ಬದುಕಿನಿಂದ ನಗು ಕಾಣೆಯಾಗುತ್ತಿರುವುದು ಎಲ್ಲಿಂದ? ಮನುಷ್ಯರ ಮುಖವನ್ನೇ ನೋಡಬಯಸದ ನಮಗೆ ನಗುವಿಗೆ ಎಲ್ಲಿ ವ್ಯವಧಾನವಿರುತ್ತದೆ? ಪಕ್ಕದ ಮನೆಯ ಹುಡುಗನೊಂದಿಗೆ, ಎದುರು ಮನೆಯ ಗೃಹಿಣಿಯೊಂದಿಗೆ, ನಮ್ಮದೇ ಮನೆಯ ಮಕ್ಕಳೊಂದಿಗೆ, ಸಂಬಂಧಿಕರೊಂದಿಗೆ ಮುಖ ಕೊಟ್ಟು ಮಾತನಾಡುತ್ತಾ ಹತ್ತಾರು ಬಾರಿ ಮನ ತುಂಬಿ ನಗುವುದಕ್ಕಿಂತ ನಮಗೆ ನಮ್ಮ ಕೋಣೇಯ ಬಾಗಿಲು ಗಿಡಿದುಕೊಂಡು ಕಂಪ್ಯೂಟರಿನಲ್ಲಿ ಮಿಸ್ಟರ್ ಬೀನ್ ಹಾಕಿಕೊಂಡು ಬಿದ್ದು ಬಿದ್ದು ನಗುವುದು ಆಪ್ಯಾಯಮಾನವಾಗುತ್ತಿದೆಯಲ್ಲವಾ? ಯಾಕೆ ಹೀಗೆ?

ಚಾರಿಟಿ, ಭಕ್ತಿ, ಸಮಾಜ ಸೇವೆಗಳೂ ಕಮಾಡಿಟಿಗಳಾಗಿರುವಾಗ, ಅವುಗಳಿಗೆಲ್ಲಾ ಲಾಭ ನಷ್ಟ, ಪಾರಮಾರ್ಥಿಕದ ಅರ್ಥಮೆಟಿಕ್ಕುಗಳು ಸೇರಿಕೊಂಡಿರುವಂತೆ ನಾವು ನಗುವನ್ನೂ ಒಂದು ಕಮಾಡಿಟಿಯಾಗಿ, ನಮ್ಮ ಆರೋಗ್ಯವನ್ನು ಕಾಪಾಡುವ ಮೆಡಿಸಿನ್ ಆಗಿ ಕಾಣಬಯಸುತ್ತೇವಾ? ನಗುವುದಕ್ಕೂ ನಮಗೆ ವೈದ್ಯರ ಪ್ರಿಸ್ಕ್ರಿಪ್ಷನ್ ಬೇಕಾ? ಏನಂತೀರಿ?

(ಕಳೆದ ವಾರದ ಚರ್ಚೆ)