Tag Archives: ಗಾಂಭೀರ್ಯ

ಚರ್ಚೆ: ಹಾಸ್ಯ v/s ಗಾಂಭೀರ್ಯ

23 ಜನ

ಬರವಣಿಗೆಯಲ್ಲಿ ಹಾಸ್ಯಮಯವಾದ ಶೈಲಿ, ಸಿನೆಮಾಗಳಲ್ಲಿ ವಿಡಂಬನೆಯ ನಿರೂಪಣೆ ಹೇಳಬೇಕಾದ ವಿಷಯದ ಗಾಂಭೀರ್ಯವನ್ನು ಕೆಡಿಸುತ್ತವೆ ಆ ಮೂಲಕ ಅವುಗಳು ಬೀರಬೇಕಾದ ಪರಿಣಾಮ ಬೀರುವಲ್ಲಿ ವಿಫಲವಾಗುತ್ತವೆ ಎಂಬುದು ಹಲವರ ಆರೋಪ. ಗಂಭೀರವಾದ ವಿಚಾರವನ್ನು ಅಷ್ಟೇ ಒಣಗಾಂಭೀರ್ಯದಲ್ಲಿ ಮಂಡಿಸಿದಾಗಲೇ ಅದು ಪರಿಣಾಮ ಬೀರಲು ಸಾಧ್ಯವಾಗುತ್ತದೆ. ಹಾಸ್ಯ ಓದುಗರ ಇಲ್ಲವೇ ನೋಡುಗರ ಗಮನವನ್ನು ವಿಷಯದಿಂದ ಪಲ್ಲಟಗೊಳ್ಳುವಂತೆ ಮಾಡುತ್ತದೆ ಎನ್ನಲಾಗುತ್ತದೆ.

ಆದರೆ ತಮ್ಮ ಸಣ್ಣ ಕಥೆಗಳಲ್ಲಿ, ಕಾದಂಬರಿಗಳಲ್ಲಿ ಅವರಿಗೇ ವಿಶಿಷ್ಟವಾದ ಹಾಸ್ಯಾತ್ಮಕವಾದ ಶೈಲಿಯನ್ನು ಬೆಳೆಸಿ ಹೆಸರಾದ ಮಲಯಾಳಿ ಲೇಖಕ ವೈಕಂ ಮಹಮದ್ ಬಶೀರ್ ಅಭಿಪ್ರಾಯ ಬೇರೆ ತೆರನಾದದ್ದು:

‘ನಾನು ಉದ್ದೇಶ ಪೂರ್ವಕವಾಗಿ ಸಣ್ಣ ಕಾದಂಬರಿಗಳನ್ನು ಬರೆಯುತ್ತೇನೆ. ದೊಡ್ಡ ಕಾದಂಬರಿಯನ್ನು ಬರೆಯುತ್ತಾ ಹೋದಂತೆ ತೆಳುವಾಗುತ್ತಾ ಹೋಗುತ್ತದೆ. ಜನಗಳ ಮನಸ್ಸಿನಲ್ಲಿ ನಿಲ್ಲುವುದು ಕೆಲವೇ ಕೆಲವು ಪುಟಗಳು ಮಾತ್ರ. ಉಳಿದವು ವೇಸ್ಟ್. ಬೋರ್ ಅನ್ನಿಸಿ ಬಿಡಲೂಬಹುದು. ಹಿಡಿದದ್ದನ್ನು ಬಿಡದಂತೆ ಓದಿಸಿಕೊಂಡು ಹೋಗಬೇಕಾದರೆ ಚಿಕ್ಕ ಕಾದಂಬರಿಯಲ್ಲಿ ವಿಶ್ವವನ್ನೇ ತುಂಬಿಸಿ ಬಿಡಬೇಕು. ಹೀಗಾಗಿ ‘ಎಂಡೆ ಉಪ್ಪಾಪ್ಪಕ್ಕೊರು ಆನೆಯುಂಡಾಯಿರುನ್ನು’ ಕಾದಂಬರಿಯಲ್ಲಿ ಹೇಳ ಬೇಕಾದ್ದನ್ನೆಲ್ಲ ಆನೆಯ ರೂಪದಲ್ಲಿ ಹೇಳಿಬಿಟ್ಟೆ’ ಎಂದರು.

ನಾನು ತಲೆದೂಗಿದೆ. ‘ಹೌದು, ಆನೆ ಈ ಕಾದಂಬರಿಯಲ್ಲಿ ಎಲ್ಲವನ್ನೂ ಹೇಳುತ್ತದೆ’ಎಂದೆ. ‘ನೀವು ಬಳಸುವ ಹಾಸ್ಯದಿಂದಾಗಿ ಗಂಭೀರ ವಿಷಯಗಳು ಮರೆಯಾಗುವುದಿಲ್ಲವೇ…?’ ಎಂದು ಕೇಳಿದೆ.

‘ಇಲ್ಲ, ಮನುಷ್ಯನಿಗೆ ತಾಳ್ಮೆ ಇಲ್ಲದಿರುವ ಸಂದರ್ಭಗಳೇ ಹೆಚ್ಚು. ಗಂಭೀರವಾದ್ದನ್ನು ನೇರವಾಗಿ ಹೇಳಿದರೆ ಅವನಿಗೆ ನಾಟುವುದಿಲ್ಲ. ಗಂಭೀರವಾದುದನ್ನು ಮನಸ್ಸು ತೆಗೆದುಕೊಳ್ಳುವುದೂ ಇಲ್ಲ. ತೆಳುವಾದ ಹಾಸ್ಯದೊಂದಿಗೆ ಗಂಭೀರ ವಿಷಯಗಳನ್ನು ಸೇರಿಸಿ ಓದುಗನ ಮುಂದಿಟ್ಟರೆ ಅವನಿಗೆ ನಾಟುವ ಸಂದರ್ಭ ಹೆಚ್ಚು. ಗಂಭೀರ ವಿಷಯಗಳು ಬಲು ಭಾರ. ಹಾಸ್ಯರಸದೊಳಗೆ ಹುದುಗಿದ ವಿಷಯಗಳು ಮನಸ್ಸಿನಲ್ಲಿ ಸುಲಭವಾಗಿ ಕೂತುಬಿಡುತ್ತದೆ.’

ನಿಮಗೇನನ್ನಿಸುತ್ತೆ? ವಿಷಯದ ನಿರೂಪಣೆಯಲ್ಲಿ ಹದವಾದ ಹಾಸ್ಯ ಬೆರೆತರೆ, ಸಹಜವಾದ ವಿಡಂಬನೆ ಕಲೆತರೆ ಅದು ಬೀರುವ ಪರಿಣಾಮ ಗಾಢವಾಗುತ್ತದೆಯೇ? ಯಾವುದಾದಾರೂ ಪುಸ್ತಕವನ್ನು ಓದುವಾಗ, ಸಿನೆಮಾ ನೋಡುವಾಗ ನಿಮಗೆ ಈ ಅನುಭವವಾಗಿದೆಯೇ?

ನಗುವುದಕ್ಕೆ ಕಾರಣ ಬೇಕಿತ್ತಾ?

11 ಸೆಪ್ಟೆಂ

‘ಏನಿದೆ ಅಂತ ನಗು ನಗುತ್ತಾ ಇರಬೇಕು? ಈ ಬೋರು ಬದುಕಿನಲ್ಲಿ ನಗೋದಕ್ಕೆ ಏನು ಸಿಕ್ಕುತ್ತೆ?’ ಎಂಬ ಶಿಕಾಯತ್ತು ತುಂಬಾ ಮಂದಿಯದು. ಇವರ ಸಮಸ್ಯೆ ನಗುವುದಕ್ಕೆ ಇವರಿಗೆ ಕಾರಣಗಳು ಸಿಕ್ಕುವುದಿಲ್ಲ. ಓದಿದ ಜೋಕುಗಳು ಹಳೆಯವು ಅನ್ನಿಸುತ್ತವೆ, ಯಾರೋ ಮಾಡಿದ ವ್ಯಂಗ್ಯ ಕುಚೇಷ್ಟೆ ದಡ್ಡತನ ಅನ್ನಿಸುತ್ತದೆ, ನಗುವ ಅವಕಾಶಗಳು ಬಂದಾಗ ಅವುಗಳನ್ನು ಅನುಮಾನಿಸಿ ನೋಡುತ್ತಾರೆ. ನಗುವಂಥ ಸಂದರ್ಭ ಬಂದರೂ ನೋಡಿದವರಿಗೆ ತಮ್ಮದು ವಿವೇಕ ಪೂರ್ಣವಾದ ಮಂದ ಹಾಸ, ಮಿಲಿಯನ್ ಡಾಲರ್ ಸ್ಮೈಲ್ ಎನ್ನಿಸುವಂತೆ ಹಲ್ಕಿರಿಯುತ್ತಾರೆ. ಇವರಿಗೆ ಕಾರಣವಿಲ್ಲದೆ ನಗುವುದೆಂದರೆ ಏನು ಎಂಬುದು ಅರ್ಥವೇ ಆಗದ ಸಂಗತಿ.

ಇವರಿಗೆ ಹೇಳಬೇಕಾದ್ದು ಇಷ್ಟೇ, ‘ಮಹಾ ಸ್ವಾಮಿ ನೀವು ಬಹು ದೊಡ್ಡವರಾಗಿದ್ದೀರಿ. ದೊಡ್ಡ ದೊಡ್ಡದನ್ನು ಕಲಿಯುವ ಪ್ರಕ್ರಿಯೆಯಲ್ಲಿ ನಿಮ್ಮಿಡೀ ಬದುಕನ್ನು ಸವೆಸಿದ್ದೀರಿ. ಅತ್ಯುತೃಷ್ಟವಾದ ಸಿದ್ಧಾಂತಗಳು, ತತ್ವಗಳು, ಬೃಹದ್ಗ್ರಂಥಗಳನ್ನು ಅಧ್ಯಯನ ಮಾಡುವಲ್ಲಿ ನೀವು ಪೂರ್ಣ ಶಕ್ತಿಯನ್ನು ತೊಡಗಿಸಿದ್ದೀರಿ. ಬಹುಶಃ ಈ ಹಂತದಲ್ಲಿ ನೀವು ತುಂಬಾ ಹಿಂದಿನ ಅಂದರೆ ನಿಮ್ಮ ಬಾಲ್ಯದ ಗುಣಗಳನ್ನು ಕೊಂಚ ಮರೆತಿದ್ದೀರಿ. ನೆನಪಿದೆಯೇ ಆಗ ನೀವು ಬಸ್ಸಿನ ಮುಂದಿನ ಸೀಟಿನಲ್ಲಿ ನಿಮ್ಮ ತಂದೆಯ ತೊಡೆಯ ಮೇಲೆ ಕುಳಿತಿರುತ್ತಿದ್ದಿರಿ. ನಿಮ್ಮ ಹಿಂದಿನ ಸೀಟಿನಲ್ಲಿ ಕುಳಿತ ಅಂಕಲ್ಲೊ, ಆಂಟಿಯೋ ನಿಮ್ಮನ್ನು ನೋಡಿ ‘ಐ ಕಳ್ಳಾ…’ ಎಂದು ಕಣ್ಣು ಮಿಟುಕಿಸಿದರೆ ಸಾಕು ನೀವು ಕಿಲಕಿಲನೇ ನಗುತ್ತಿದ್ದಿರಿ. ಪುನಃ ಅವರು ಕಣ್ಣು ಮಿಟುಕಿಸಿದಾಗ ಮತ್ತೆ ಅಷ್ಟೇ ಲವಲವಿಕೆಯಿಂದ ನಗುತ್ತಿದ್ದಿರಿ. ಪುನಃ ಪುನಃ ಎಷ್ಟು ಬಾರಿ ನಕ್ಕರೂ ನಿಮಗೆ ಆಯಾಸವಾಗುತ್ತಿರಲಿಲ್ಲ. ಬೇಸರವಾಗುತ್ತಿರಲಿಲ್ಲ.

‘ಯೋಚಿಸಿ, ನಿಮಗೆ ಎದುರಿನ ಅಂಕಲ್ಲೋ ಆಂಟಿಯೋ ಯಾವ ಜೋಕನ್ನೂ ಹೇಳುತ್ತಿರಲಿಲ್ಲ. ಅಸಲಿಗೆ ಅವರ ಪರಿಚಯವೂ ನಿಮಗಿರುತ್ತಿರಲಿಲ್ಲ. ಅವರು ಎಂಥವರು, ಅವರ ಸಂಸ್ಕೃತಿ ಎಂಥದ್ದು, ಜಾತಿ ಯಾವುದು, ಆಸಕ್ತಿಗಳ್ಯಾವುವು ಎಂಬುದೊಂದೂ ಗೊತ್ತಿರಲಿಲ್ಲ. ಆದರೆ ಎದುರಿಗಿದ್ದವರ ಮುಖದಲ್ಲಿನ ನಿಷ್ಕಲ್ಮಶ ನಗೆಯನ್ನು ನೀವು ಗುರುತಿಸಿದ್ರಿ, ನೀವೂ ಅಷ್ಟೇ ನಿಷ್ಕಲ್ಮಶವಾಗಿ ನಗುತ್ತಿದ್ದಿರಿ. ನಿಮ್ಮ ನಗುವನ್ನು ಕಂಡು ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಭಯವಾಗುತ್ತಿರಲಿಲ್ಲ. ನಿಮ್ಮ ನಗುವಿನಲ್ಲಿನ ವಿಶ್ವಾಸದಿಂದಾಗಿ ನೋಡಿದವರೆಲ್ಲರೂ ನಿಮ್ಮನ್ನು ನಗಿಸುತ್ತಿದ್ದರು. ನೀವು ನಗುತ್ತಲೇ ಇದ್ದಿರಿ. ನಿಮಗೆ ಕಾರಣಗಳು ಬೇಕಿರಲಿಲ್ಲ ಆಗ ನಗಲು… ನಗು ನಿಮ್ಮೊಳಗಿತ್ತು, ಹೊರಹಾಕಲು ನೆಪಗಳನ್ನು ಮಾತ್ರ ಅಪೇಕ್ಷಿಸುತ್ತಿದ್ದಿರಿ. ಈಗ ಒಳಗಿನ ನಗುವನ್ನು ಬತ್ತಿಸಿಕೊಂಡಿದ್ದೀರಿ, ಕಾರಣಗಳನ್ನು ಹುಡುಕುತ್ತಿದ್ದೀರಿ. ಹೇಳಿ, ನಾವು ನಿಮ್ಮಷ್ಟು ಬುದ್ಧಿವಂತರಲ್ಲ. ಆದರೆ ನಿಮಗೆ ಇದು ವಿವೇಕ ಅನ್ನಿಸುತ್ತದೆಯೇ?’

ಏನಂತೀರಿ, ನಮ್ಮ ನಗು ಕಳುದು ಹೋದದ್ದು ಎಲ್ಲಿ ಎಂಬುದೇನಾದರೂ ನಿಮಗೆ ತಿಳಿಯಿತೇ?

ನಗು ಸಹಜವೋ, ಗಾಂಭೀರ್ಯ ಸಹಜವೋ?

21 ಆಗಸ್ಟ್

ನಗು ಸಹಜವೋ, ಗಾಂಭೀರ್ಯ ಸಹಜವೋ?

ಇದೊಂದು ಸರಳವಾದ ಪ್ರಶ್ನೆ. ಸಣ್ಣಸಣ್ಣದಕ್ಕೂ ನಗುತ್ತಾ, ಮುಸಿಮುಸಿ ಎಂದು ಹಲ್ಕಿರಿಯುತ್ತಾ, ವಿನಾಕಾರಣ ನಗುವ ಮಕ್ಕಳು ಕೊಂಚ ಬೆಳೆಯುತ್ತಿದ್ದಂತೆಯೇ ಅವರಿಗೆ ದೊಡ್ಡವರು ‘ಸ್ವಲ್ಪ ಗಂಭೀರವಾಗಿರುವುದನ್ನು ಕಲಿತುಕೋ’ ಎಂದು ಉಪದೇಶಿಸತೊಡಗುತ್ತಾರೆ. ಸಣ್ಣ ವಯಸ್ಸಿನಲ್ಲೇ ಮುಖದ ಮೇಲಿನ ತುಂಟಾಟಗಳಿಗೆಲ್ಲಾ ಟಾಟಾ ಹೇಳಿ ಅಲ್ಲಿ ದೊಡ್ಡವರ ಗಾಂಭೀರ್ಯಕ್ಕೆ ವಾಸ್ತವ್ಯ ಕಲ್ಪಿಸಿದ ಹುಡುಗ ಇಡೀ ‘ಹುಡುಗು ಕುಲ’ದ ಆದರ್ಶವಾಗುತ್ತಾನೆ.

ಮೂಗಿನ ಕೆಳಗೆ ಮೀಸೆ ಮೂಡಿ, ಅದರ ಗಡಿಯಾಚೆಗೆ ಹುಲುಸಾಗಿ ಗಡ್ಡ ಹರವಿಕೊಂಡು ಬೆಳೆದು ನೆತ್ತಿ ವಿಶಾಲವಾಗುತ್ತಾ, ಕಪ್ಪು ಕೂದಲ ರಾಶಿಯ ಮಧ್ಯೆ ಬೆಳ್ಳಿಯ ಗೆರೆಗಳು ಕಾಣಿಸಿಕೊಳ್ಳುತ್ತಿದ್ದ ಹಾಗೆ ವೈದ್ಯನೆಂಬ ನಾರಾಯಣ ನೆನಪಾಗುತ್ತಾನೆ. ವೈದ್ಯ ತನ್ನ ಫೀಸನ್ನು ವಸೂಲು ಮಾಡಿಕೊಂಡು, ‘ತೀರಾ ಇಷ್ಟು ಗಂಭೀರವಾಗಿರಬೇಡಿ. ಸ್ವಲ್ಪ ನಗುನಗುತ್ತಾ ಇರಿ. ನಿಮ್ಮ ರಕ್ತದೊತ್ತಡ ಹೆಚ್ಚಾಗಿದೆ ಎನ್ನುತ್ತಾನೆ’ ನಗುವುದಕ್ಕೆ ಪ್ರಯತ್ನ ಶುರುವಾಗುತ್ತದೆ.

ಗಾಂಭೀರ್ಯ ಸಹಜವಾದದ್ದಾ ಇಲ್ಲವೇ ನಗು ಸಹಜವಾದದ್ದಾ? ಗಾಂಭೀರ್ಯ ಸಹಜವಾದದ್ದೇ ಆದರೆ ಮಕ್ಕಳು ನಮ್ಮ ನಗೆಯನ್ನು ಹೂತುಹಾಕಿ ಅದರ ಮೇಲೇಕೆ ಗಾಂಭೀರ್ಯದ ಮಹಲನ್ನು ಕಟ್ಟಬೇಕು? ನಗು ಸಹಜವೆನ್ನುವುದೇ ಆದಲ್ಲಿ ನಗಲು ಪ್ರಯತ್ನಿಸುವುದು ಏತಕ್ಕೆ?

ನಮ್ಮ ದೇಹವನ್ನೇ ಗಮನಿಸಿ. ಅಲರ್ಟ್ ಆಗಿರುವುದು ಅವುಗಳ ಸಹಜವಾದ ಲಕ್ಷಣವಲ್ಲ. ಮುಷ್ಠಿ ಬಿಗಿ ಹಿಡಿದು ಎಷ್ಟು ಕಾಲ ಕೂರಲಾದೀತು? ಅವುಗಳ ಸಹಜ ಸ್ಥಿತಿ ಸಡಿಲವಾಗಿರುವುದು. ಆದರೆ ಆ ಸಡಿಲತೆ ಆಲಸ್ಯವಾಗಿ ತಿರುಗಬಹುದು. ಸಡಿಲತೆಯಲ್ಲಿ ಆಲಸ್ಯದ ಹೊಗೆ ಕಾಣುತ್ತಿದ್ದ ಹಾಗೆ ಬಿಗಿತ ತಂದು ಕೊಳ್ಳುತ್ತಾ, ಬಿಗಿತ ಅತಿಯಾಯಿತು ಎನ್ನುತ್ತಿದ್ದ ಹಾಗೆ ಸಡಿಲತೆಗೆ ಬಿಟ್ಟರೆ ಸ್ನಾಯುಗಳು ಬಲಿಷ್ಠವಾಗುತ್ತವೆ. ಹೀಗೆ ಏಕೆ ಇರಬಾರದು ನಮ್ಮ ಬದುಕು?