Tag Archives: ಕುಚೇಲ

ಭೋಗರಾಜ ಶೆಟ್ಟರ ಸಂದರ್ಶನ ಅತೀ ಶೀಘ್ರದಲ್ಲಿ…

4 ಸೆಪ್ಟೆಂ

 

ಮಚ್ಚು ಲಾಂಗು ರೇಜರುಗಳ ಸತ್ಸಂಪ್ರದಾಯವನ್ನು ನೆಚ್ಚಿಕೊಂಡು, ಕುರ್ಪು, ಗುನ್ನ, ಡಿಚ್ಚಿಗಳೆಂಬ ದೈವೀ ಪ್ರಭಾವಳಿಯಿಂದ ಸನ್ನಡತೆಯನ್ನು ಕಾಪಾಡಿಕೊಂಡು ಕರುಣಾಜನಕ, ಕರುಳು ಬೇಧಕ ಭಾವುಕ ಪರಂಪರೆಯನ್ನು ಪೊರೆಯುತ್ತಾ ನೆಮ್ಮದಿಯಾಗಿದ್ದ ಕನ್ನಡ ಚಿತ್ರರಂಗಕ್ಕೆ ಹೊತ್ತಲ್ಲದ ಹೊತ್ತಿನಲ್ಲಿ ಮುಂಗಾರು ಹೊಡೆಸಿ ನೆಗಡಿ ಹತ್ತಿಸಿ, ಸಿಂಬಳ ಸುರಿಸುವಂತೆ ಮಾಡಿದ್ದು ನಮ್ಮ ನಿಮ್ಮೆಲ್ಲರ ಮೆಚ್ಚಿನ ಭೋಗರಾಜ ಶೆಟ್ಟರು.

ಸತತ ಮೂರು ಚಿತ್ರಗಳಲ್ಲಿ ಭರ್ಜರಿ ಯಶಸ್ಸನ್ನು ಕಂಡು ಪ್ರಾಯೋಜಕರಾದ ಕಂಪೆನಿಗಳಿಗಿಂತ ಹೆಚ್ಚಿನ ಪ್ರಚಾರವನ್ನು ಪಡೆದುಕೊಂಡ ಶೆಟ್ಟರು ಪೆನ್ನು ಹಿಡಿದುಕೊಂಡರೂ, ಮೈಕು ಹಿಡಿದುಕೊಂಡರೂ, ಇನ್ಯಾರದೂ ಕೈಯಿ ಹಿಡಿದುಕೊಂಡರೂ, ತಮ್ಮದೇ ತಲೆ ಹಿಡಿದುಕೊಂಡರೂ ಮಾಧ್ಯಮಗಳಿಗೆ ಎದ್ದು ಬಿದ್ದು ವರದಿ ಮಾಡಬಹುದಾದ ಸುದ್ದಿ.

ಭೋಗರಾಜ ಶೆಟ್ಟರು ತಮ್ಮ ಸಿನೆಮಾಗಳ ಬಗ್ಗೆ ಎಲ್ಲೂ ಹೆಚ್ಚಾಗಿ ಮಾತನಾಡುವುದಿಲ್ಲ ಎಂದು ಅನೇಕ ಟಿವಿ ಸಂದರ್ಶನಗಳಲ್ಲಿ ತಮ್ಮ ಸಿನೆಮಾವನ್ನು ಪ್ರಮೋಟ್ ಮಾಡುತ್ತಾ ಮಾತನಾಡಿದ್ದಾರೆ. ತಮ್ಮ ಸಿನೆಮಾ ಬದುಕಿನ ಜೊತೆಗೆ ತಮ್ಮ ಸಾಹಿತ್ಯಿಕ ಲೋಕದ ಬಗ್ಗೆಯೂ ಸಂದರ್ಶನಗಳಲ್ಲಿ ಮನಬಿಚ್ಚಿ, ರೆಕ್ಕೆ ಬಿಚ್ಚಿ ಮಾತನಾಡಿದ್ದಾರೆ. ಅವರು ರೆಕ್ಕೆ ಬಿಚ್ಚಿ ಮಾತನಾಡುವ ಕಾರಣಕ್ಕೇ ಅವರು ಪ್ರಶ್ನೆಗಳಿಗೆ ಹಾರಿ ಹಾರಿ ಹಾರಿಕೆಯ ಉತ್ತರ ನೀಡುತ್ತಾರೆ yogarajbhaಎನ್ನುವ ಪ್ರಶಂಸೆಗೆ ವಿನಾಕಾರಣ ಗುರಿಯಾಗಿದ್ದಾರೆ.

ಈ ಹಾರು ಹಕ್ಕಿಯ ಜೊತೆಗೆ ಅಭೂತಪೂರ್ವವಾದ ಸಂದರ್ಶನವೊಂದನ್ನು ಮಾಡಬೇಕೆಂದು ಹಾರಿಕೆಯ ತಜ್ಞರಾದ ಸಾಮ್ರಾಟರಲ್ಲಿ ಕೋರಿಕೆ ಸಲ್ಲಿಸಲಾಯ್ತು. ಕೂಡಲೇ ಸಾಮ್ರಾಟರು ತಮ್ಮಾಪ್ತ ಚೇಲ ಕುಚೇಲನಿಗೆ ಕರೆ ಕಳುಹಿಸಿದರು. ನಾರ್ಕೋ ಲೆಪ್ಸಿಯಿಂದಾಗಿ ಕಂಡ ಕಂಡಲ್ಲಿ, ಕಂಡವರ ಸಂಗಡ ಮಲಗಲು ಶುರುಮಾಡಿದ್ದ ತಮ್ಮ ಆಲ್ಟರ್ ಈಗೋವನ್ನು ಇಗೋ ಇಗಲೇ ಎಳೆದು ತಾ ಎಂದು ಆಜ್ಞಾಪಿಸಿದರು.

ತಮ್ಮ ಬೆನ್ನ ಹಿಂದೆ ತೂಕಡಿಸುತ್ತ ನಿಂತ ಆಲ್ಟರ್ ಈಗೋವನ್ನು ಎಚ್ಚರಿಸಿ ಭೋಗರಾಜ ಶೆಟ್ಟರ ಸಂ-ದರ್ಶನವನ್ನು ಮಾಡಿಕೊಂಡು ಬರಲಿಕ್ಕೆ ಅಟ್ಟಿದರು. ಮಂದ್ರ ಸ್ವರದಲ್ಲಿ ಆಲ್ಟರ್ ಈಗೋ

ಇಂಟ್ರ್ಯು ಮಾಡಿ ಪುಣ್ಯ ಕಟ್ಕೊ

ಯೋಚ್ನೆ ಮಾಡಿ ಗಡ್ಡ ಸುಟ್ಕೊ

ಉತ್ರ ಸಿಗದೆ ಇರುವೆ ಬಿಟ್ಕೊ

ಲೈಫು ಇಷ್ಟೇನೇ…

ಎಂದು ಹಾಡಿಕೊಳ್ಳುತ್ತಾ ಸಂದರ್ಶನಕ್ಕೆ ಮುಂದಾಯಿತು.

ಶೀಘ್ರದಲ್ಲಿ ನಿರೀಕ್ಷಿಸಿ ಭರ್ಜರಿ ನಿರ್ದೇಶಕ ಭೋಗರಾಜ ಶೆಟ್ಟರ ಸಂದರ್ಶನ: ನಗಾರಿಯಲ್ಲಿ ಮಾತ್ರ!

ನಗೆ ಸಾಮ್ರಾಜ್ಯದ ಉತ್ತರಾಧಿಪತಿ!

6 ಜನ

ಯಾವ ತಾಂತ್ರಿಕ ಪರಿಣಿತಿಯೂ ಇಲ್ಲದೆ ಈ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ನಗೆ ನಗಾರಿಯ ಸಾಮ್ರಾಜ್ಯವನ್ನು ಎರಡು ವರ್ಷಗಳ ಕಾಲ ನಾವು ಆಳಿದ್ದೇವೆ. ಈ ನಡುವೆ ನಮ್ಮ ಕೌಶಲ್ಯರಹಿತ, ಸಂಸ್ಕಾರವಿಲ್ಲದ ಹಸಿ ಹಸಿ ಪ್ರತಿಭೆಯನ್ನು ಬಳಸಿ ರಾಜ್ಯಭಾರ ಮಾಡಿದ್ದೇವೆ. ಪ್ರಜೆಗಳೂ ಸಹ ನಮ್ಮ ದೋಷಗಳನ್ನು ಕಂಡೂ ಕಾಣದವರ ಹಾಗೆ ಜಾಣ ಕುರುಡನ್ನು ನಟಿಸಿ ಸಾಮ್ರಾಟರ ಮರ್ಯಾದೆ ಕಾಪಾಡುತ್ತ ಬಂದಿದ್ದಾರೆ.

ಆದರೆ ಕಾಲ ಬದಲಾಗಿದೆ. ಮಗುವಿನ ನ್ಯಾಪ್‌ಕಿನ್ ಬದಲಾಯಿಸುವುದಕ್ಕೂ ಕಾಲೇಜು ಡಿಗ್ರಿಗಳಿವೆ. ಹೋಟೇಲಿಗೆ ಬಂದ ಗಿರಾಕಿಯೊಂದಿಗೆ ವ್ಯವಹರಿಸುವುದನ್ನು ಕಲಿಸಿಕೊಡುವುದಕ್ಕೆ ಪದವಿಗಳಿವೆ. ಪ್ರೀತಿಸುವುದನ್ನೂ ಹೇಳಿಕೊಡುವ ಕೋರ್ಸುಗಳಿವೆ. ಕಾಲ ಬದಲಾದ ಹಾಗೆ ನಾವೂ ಬದಲಾಗುವ ನಾಟಕವಾಡದಿದ್ದರೆ ಜನ ನಮ್ಮನ್ನು ಮ್ಯೂಸಿಯಂನಲ್ಲಿ ಪುರಾತನ ಅಸ್ಥಿ ಪಂಜರಗಳ ರೂಂ ಮೇಟ್ ಮಾಡಿಬಿಡಬಹುದೆಂಬ ಆತಂಕದಿಂದ ನಾವು ಹಗಲು ನಿದ್ದೆಯನ್ನೂ ರಾತ್ರಿ ಎಚ್ಚರವನ್ನೂ ಕಳೆದುಕೊಂಡಿದ್ದೆವು.

ಇಷ್ಟು ಕಾಲ ನಮ್ಮ ಅತ್ಯಾಪ್ತ ಚೇಲ ಕುಚೇಲ ಹಾಗೂ ನಮ್ಮ ಗತಕಾಲದ ಗೆಳೆಯ ತೊಣಚಪ್ಪ ಇವರಿಬ್ಬರನ್ನೇ ನೆಚ್ಚಿಕೊಂಡು ಸಾಮ್ರಾಜ್ಯವಾಳಿದ್ದೇವೆ. ಎರಡೂ ಬದಿಯಲ್ಲಿ ಉರಿಯುವ ಸಿಗರೇಟಿನಂತೆ ಯೌವನವನ್ನು ಸವೆಸಿದ್ದೇವೆ. ಈಗ ನಾವು ಆರಾಮ ಕುರ್ಚಿಯಲ್ಲಿ ನಮಗಿಂತ ಸಾಮರ್ಥ್ಯ ಶಾಲಿಗಳಾದ ಯುವಕರ ದುಡಿಮೆಯ ಯಶಸ್ಸಿನ ಫಲವನ್ನುಣ್ಣುತ್ತ, ಅವರ ದೋಷ, ವೈಫಲ್ಯಗಳನ್ನು ಹೆಕ್ಕುತ್ತ, “ನಮ್ಮ ಕಾಲದಲ್ಲಿ…” ಎಂದು ಬೋರ್ ವೆಲ್ ಕೊರೆಯುತ್ತ ಕೂರುವ ಸಮಯ.

ನಗೆ ನಗಾರಿಯು ಮೂಲತಃ ಸುದ್ದಿ ಮಾಧ್ಯಮ. ಸತ್ಯ ಹಾಗೂ ಸತ್ಯಾಕಾಂಕ್ಷಿಗಳ ನಡುವಿನ ತೂಗು ಸೇತುವೆ. ಸತ್ಯದಿಂದ ಸತ್ಯಾಕಾಂಕ್ಷಿಗಳನ್ನು ಸದಾ ದಿಕ್ಕೆಡಿಸುವ ಮುಖ್ಯವಾಹಿನಿಯ ಮಾಧ್ಯಮಗಳೊಂದಿಗೆ ಸೆಣೆಸುತ್ತ ಸತ್ಯವನ್ನು ಉಳಿಸುವುದು ನಮ್ಮ ಧ್ಯೇಯ. ಸತ್ಯವಲ್ಲದೆ ಬೇರೇನೂ ನಮ್ಮ ವರದಿಗಳಲ್ಲಿ ಸುಳಿಯಬಾರದು ಎಂಬುದು ನಮ್ಮ ಆದರ್ಶ. ಆದರೆ ಸೂಕ್ತ ತಾಂತ್ರಿಕ ಶಿಕ್ಷಣದ ಕೊರತೆಯಿಂದ ನಾವು ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಲಾಗಲಿಲ್ಲ ಎಂಬುದು ಈಗ ನಮ್ಮ ಮುಂದೆ ಕೂತಿರುವ ಯುವಕನ ಮಾತು ಕೇಳಿದಾಗ ಅನ್ನಿಸುತ್ತಿದೆ. ಒಬ್ಬನೇ ವ್ಯಕ್ತಿ ಪ್ರಧಾನ ಸಂಪಾದಕನೂ, ಉಪ ಸಂಪಾದಕನೂ, ಸುದ್ದಿ ಸಂಪಾದಕನೂ, ವರದಿಗಾರನೂ, ಪ್ರೂಫ್ ತಿದ್ದುವವನೂ ಆದರೆ ಆತನೊಬ್ಬನೇ  ಪತ್ರಿಕೆಯ ಓದುಗನೂ ಆಗಬೇಕಾಗುತ್ತದೆ ಎಂಬ ಆಘಾತಕಾರಿ ಸತ್ಯ ನಮ್ಮ ತಿಳಿವಿಗೆ ಬಂದಿತು. ಒಂದೇ ಕ್ಯೂಬಿಕಲ್‌ನಲ್ಲಿ ಕುಳಿತು ದಿನವೊಂದಕ್ಕೆ ಹದಿನೆಂಟು ಇಪ್ಪತ್ತು ತಾಸುಗಳ ಕಾಲ ಅರವತ್ತು ಎಪ್ಪತ್ತು ಪುಟಗಳನ್ನು ಗೀಚುವುದು ಮಹಾನ್ ಸಾಧನೆಯೇ ಸರಿ. ಆದರೆ ಹಾಗೆ ಗೀಚುವುದಕ್ಕೆ ಸರಕು ಎಲ್ಲಿಂದ ಲಭ್ಯವಾಗಬೇಕು? ಸರಕಿನ ಕೊರತೆ ಕಂಡಾಗಲೆಲ್ಲಾ ನಾನಿವತ್ತು ಬೆಳಿಗ್ಗೆ ಎರಡು ಬಾರಿ ಗಡ್ಡ ಮಾಡಿಕೊಂಡೆ, ಒಂದು ವಾರದಿಂದ ನಾನು ಗ್ಯಾಸ್ ಬಿಟ್ಟೇ ಇಲ್ಲ, ನನ್ನ ನಾಯಿಮರಿ ಕಾಲಿಗೆ ಆಗಿದ್ದ ಗಾಯ ಅದೆಷ್ಟು ಬೇಗ ಮಾಯವಾಯಿತು ಗೊತ್ತ ಎಂದು ಕೊರೆಯಬೇಕಾಗುವುದು.

ಸತ್ಯಸ್ಯ ಸತ್ಯ ವರದಿಗಾರಿಕೆಯನ್ನು ಮಾಡುವುದು ನಗೆನಗಾರಿಯ ಕಾರ್ಯಸೂಚಿಯಲ್ಲಿನ ಮೊದಲ ಆದ್ಯತೆಯಾಗಬೇಕು. ಅದಕ್ಕಾಗಿ ನಾವು ಯಂಗ್ ಮ್ಯಾನ್ ನಾರದನ ಕೈಲಿ ಸಾಮ್ರಾಜ್ಯದ ಕೆಲಸವನ್ನು ಒಪ್ಪಿಸುತ್ತಿದ್ದೇವೆ. ನಾವು ಆತನ ಕೆಲಸವನ್ನು ಗಮನಿಸಿಕೊಳ್ಳುತ್ತ, ಬಿಟ್ಟಿ ಉಪದೇಶಗಳನ್ನು ನೀಡುತ್ತ ಆತ ಕೇಳಿದಾಗ ನಮ್ಮ  ಆರ್ಥ್ರೈಟಿಸ್ ಬಗ್ಗೆಯೂ, ಐವತ್ತು ವರ್ಷಗಳಿಂದ ನಾವು ತ್ಯಜಿಸುತ್ತ ಬಂದಿರುವ ಚಟಗಳ ಬಗ್ಗೆಯೋ ಕೊರೆಯುತ್ತೇವೆ.

ಇಷ್ಟೇ ಅಲ್ಲದೆ ಸಾಮ್ರಾಜ್ಯದ ವಹಿವಾಟು ಗಮನಿಸುವುದಕ್ಕೆ ದೊಡ್ಡದೊಂದು ತಂಡವೇ ಸಿದ್ಧವಾಗುತ್ತಿದೆ. ನಮ್ಮ ಕುಚೇಲ ಹಾಗೂ ತೊಣಚಪ್ಪನವರ ಸಂಗಡ ಸ್ವಾಮಿ ಅಧ್ಯಾತ್ಮಾನಂದ ಸೇರಿಕೊಳ್ಳಲಿದ್ದಾರೆ. ಇವರಲ್ಲದೆ ಮಿಸ್ಟರ್ ನಕ್ಕಣ್ಣ ಹಾಗೂ ನಗಾರಿಯ ಏಕೈಕ ಮಹಿಳಾ ಒದರಿಗಾರ್ತಿ ಹಾಗೂ ಲೇಖಕಿ ಶ್ರೀಮತಿ ಕುಮಾರಿ ಪ್ರಜೆಗಳಿಗಾಗಿ ದುಡಿಯಲಿದ್ದಾರೆ, ನಗಾರಿ ಬಡಿಯಲಿದ್ದಾರೆ!

ಕಳೆದು ಹೋಗಿದೆ ಹುಡುಕಿ ಕೊಡಿ…

30 ಸೆಪ್ಟೆಂ

(ನಗೆ ನಗಾರಿ ಕ್ರೀಡಾವಿನೋದ ಬ್ಯೂರೋ)

ಸಾವಿರಾರು ರುಪಾಯಿಗಳ ಔಷಧಿ, ಹಣ್ಣು ಹಂಪಲು ತಿಂದು ಅರಗಿಸಿಕೊಂಡರೂ ನಮ್ಮ ನಾಡಿನ ಮಕ್ಕಳು ಎರಡು ಕಾಲ ಮೇಲೆ ನಿಲ್ಲುವುದರೊಳಗೆ ಕಣ್ಮುಚ್ಚುತ್ತವೆ ಆದರೆ ‘ಕಳೆದು ಹೋಗಿದೆ ಹುಡುಕಿ ಕೊಡಿ’ ಎಂದು ಪೋಲಿಸ್ ಸ್ಟೇಷನ್ನಿನಲ್ಲಿ ದಾಖಲಾದ ಅರ್ಜಿಗಳು ಚಿರಂಜೀವಿಗಳು. ಬಹುಶಃ ಇಲ್ಲಿಯೂ ನಮ್ಮ ನಾಡಿನ ಜನತೆ ಸಾವಿರಾರು ರೂಗಳ ಔಷಧಿ ಶೈತ್ಯೋಪಚಾರದ ಖರ್ಚನ್ನು ಮಾಡಿದರೆ ಆ ಅರ್ಜಿಗಳ ಕೊಲೆಗೆ ನಮ್ಮ ಪೋಲೀಸರು ಸಂಚನ್ನು ರೂಪಿಸುವ ಮಟ್ಟಿಗೆ ಕಾರ್ಯ ಪ್ರವೃತ್ತರಾಗಬಹುದು. Dejected Dhoni T20

ಹುಡುಕುವುದರ ಕಷ್ಟ ಅದನ್ನು ಕಳೆದುಕೊಂಡವನಿಗಿಂತ ಚೆನ್ನಾಗಿ ಅದಾರು ಬಲ್ಲರು? ತಿಪ್ಪೆಯ ಒಂದೊಂದು ಕೊಳೆತ ಹಣ್ಣಿನ ಸಿಪ್ಪೆಯನ್ನು ಸರಿಸುತ್ತಲೂ ಕಳೆದು ಹೋದ ವಸ್ತುವನ್ನು ಕಲ್ಪಿಸಿಕೊಳ್ಳುತ್ತಾ ಪ್ರಯಾಸಪಡುವ ಆಸಾಮಿಯನ್ನು ನೀವು ನೋಡಿರುತ್ತೀರಿ. ಆತ ರಸ್ತೆಯಲ್ಲಿ, ಚರಂಡಿಯ ಬಳಿ, ಶಾಲೆಯ ಮೈದಾನದಲ್ಲಿ, ತಿಪ್ಪೆ ಗುಂಡಿಯ ಸನಿಹ, ತಾನು ನಿದ್ರೆಯಲ್ಲಿ  ಓಡಾಡಿರಬಹುದಾದ  ಜಾಗವನ್ನೂ ಸಹ ಬಿಡದೆ ಆತ ತಲಾಶಿಸುತ್ತಿರುವಾಗ ದಾರಿಹೋಕರು ಮಾಡುವುದೇನು? ಚಡ್ಡಿಯೋ, ಪ್ಯಾಂಟೋ ಯಾವುದೋ ಎರಡು ಜೇಬಿರುವ ತೊಡುಗೆಯಾದರೆ ಅವೆರಡೂ ಜೇಬಿನೊಳಕ್ಕೆ ಕೈಗಳನ್ನು ಇಳಿಯ ಬಿಟ್ಟು, “ಏನು?” ಅನ್ನುವಂತೆ ನೋಟದಲ್ಲೇ ಪ್ರಶ್ನೋತ್ತರ ಮಾಲಿಕೆ ಆರಂಭಿಸುತ್ತಾರೆ. ನೀವು ಕೈ ಬಾಯಿ, ಮುಖ ಯಾವುದಕ್ಕೂ ಬಿಡುವಿಲ್ಲದ ಹಾಗೆ ಹುಡುಕಾಟದಲ್ಲಿ ತೊಡಗಿರುವಾಗ ಆ ನಿಮ್ಮ ಹಿತಚಿಂತಕ ದಾರಿಹೋಕ ತನ್ನ ಅನುಭವ ಸಾರವನ್ನೆಲ್ಲ ಹೀರಿ ಸಲಹೆಗಳನ್ನು, “ಹುಶಾರಾಗಿ ಇಟ್ಟುಕೊಳ್ಳಬಾರದಾ…” ಎನ್ನುವಂತಹ ಯಾವುದಕ್ಕೂ ಉಪಯೋಗಕ್ಕೆ ಬಾರದ ಬುದ್ಧಿಮಾತುಗಳನ್ನು ಅರ್ಪಿಸುತ್ತಾನೆ. ಭಕ್ತ ಕೊಟ್ಟಿದ್ದನ್ನೆಲ್ಲ ಸ್ವೀಕರಿಸುವ ತಿಮ್ಮಪ್ಪನ ಔದಾರ್ಯ ನಿಮ್ಮಲ್ಲಿದ್ದರೆ ಆ ದಾರಿಹೋಕನ ಬೆನ್ನು ನಿಮ್ಮ ಬೈಗುಳದ ಆಲಿಂಗನವಿಲ್ಲದೆ ಬ್ರಹ್ಮಚರ್ಯ ಪಾಲಿಸುತ್ತದೆ.

ಜನ ಏನೇನನ್ನೆಲ್ಲಾ ಕಳೆದುಕೊಳ್ಳುತ್ತಾರೆ? ಕಳೆದುಕೊಳ್ಳುವುದಕ್ಕೆ ಆ ವಸ್ತುವು ಮೊದಲು ತಮ್ಮ ಬಳಿ ಇರಬೇಕು ಎನ್ನುವ ಸಾಮಾನ್ಯ ತಿಳುವಳಿಕೆಯೂ ಅನೇಕರಿಗಿರುವುದಿಲ್ಲ. ಓಣಿಯ ಒಂದು ಮನೆಯಲ್ಲಿ ಒಂದು ಹಿತ್ತಾಳೆಯ ಚಂಬು ಕದ್ದ ಕಳ್ಳ ಸಿಕ್ಕಿ ಬಿದ್ದರೆ ಉಳಿದ ಮನೆಗಳಲ್ಲಿ ಎಂದೂ ಇದ್ದೇ ಇರದ ಚಿನ್ನದ ಆಭರಣಗಳು ಕಾಣೆಯಾಗಿರುತ್ತವೆ! ಮಾನ, ಮರ್ಯಾದೆ, ಬುದ್ಧಿವಂತಿಕೆ, ಸೌಂದರ್ಯ, ಶೀಲ, ವ್ಯಕ್ತಿತ್ವ, ಪ್ರಾಮಾಣಿಕತೆ, ಆದರ್ಶಗಳು ಕಳೆದು ಹೋದವು ಎಂದು ಯಾರಾದರೂ ಗೋಳಾಡಿದರೆ ಅವು ಮೊದಲು ಎದ್ದವೇ ಎನ್ನುವ ಸಂಶಯ ಸಹಜ.

ಕಳೆದು ಹೋದ ವಿಷಯಗಳ ಪ್ರಸ್ತಾಪವನ್ನು ಈಗ ಮಾಡುವುದಕ್ಕೆ ಉದ್ದೇಶವಿದೆ. ನಮ್ಮ ದೇಶದ ಕನಸುಗಳನ್ನು ನನಸಾಗಿಸಲು ಜನ್ಮವೆತ್ತಿ ಬಂದ, ತನ್ನ ಆಗಮನದಿಂದ ಬರಗೆಟ್ಟ ದೇಶಕ್ಕೆ ವಿಜಯಮಾಲೆಯನ್ನು ತೊಡಿಸಿ ಮೆರೆಸಿದ, ದೇಶಕ್ಕಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಆಡುತ್ತ, ತಂಡದ ನಾಯಕನಾಗಿರುವ ಮಹೇಂದ್ರ ಸಿಂಗ್ ಧೋನಿ ಎಂಬ ಯುವಕ ನಮ್ಮೀ ಕತೆಯ ದುರಂತ ನಾಯಕ. ಈತ ದೇಶದ ಹೆಸರನ್ನು ಬೆಳಗುವುದಕ್ಕಾಗಿ ದಿನದ ಪಂದ್ಯಗಳು, ದಿನ ರಾತ್ರಿಯ ಪಂದ್ಯಗಳನ್ನು ಆಡುತ್ತಾ, ಮೈದಾನದಲ್ಲಿ ಬೆವರು ಸುರಿಸುತ್ತಾ ತಂಡವನ್ನು ಮುನ್ನಡೆಸುತ್ತಾ ಕಷ್ಟ ಪಡುತ್ತಾನೆ. ಸಾಲದೆಂಬಂತೆ ಸಂಬಳವೆಂದು ಕ್ರಿಕೆಟ್ ಮಂಡಳಿಯಿಂದ ಕೈಯಲ್ಲಿ ಎಣಿಸಲಾಗದಷ್ಟು ಹಣ! ಇವೆಲ್ಲವನ್ನೂ ಬಹುಶಃ ಈತ ಹೇಗೋ ನಿಭಾಯಿಸುತ್ತಿದ್ದನೇನೋ, ಆದರೆ ಎದುರಾಳಿ ತಂಡದ ಬೌನ್ಸರ್‌ಗಳ ಜೊತೆಗೆ ಬಾಲಿವುಡ್ ಲಲನೆಯರ ‘ಅಂಡರ್ ಆರ್ಮ್’ ಡೆಲಿವರಿಗಳನ್ನು ಎದುರಿಸುವ ಕಷ್ಟ. ಇಷ್ಟು ಸಾಲದೆಂಬಂತೆ ಲೆಕ್ಕ ಹಾಕುವುದಕ್ಕೆ ತನ್ನ ಕಾಲೇಜು ವಿದ್ಯಾಭ್ಯಾಸವೇ ಸಾಲದಷ್ಟು ಮೊತ್ತದ ಜಾಹೀರಾತುಗಳ ಕಾಂಟ್ರ್ಯಾಕ್ಟು. ಇಷ್ಟೆಲ್ಲ ನರಕಯಾತನೆಯನ್ನು ಕೇವಲ ದೇಶದ ಮೇಲಿನ ಅಭಿಮಾನಕ್ಕಾಗಿ, ಕ್ರಿಕೆಟ್ ಮೇಲಿನ ಪ್ರೀತಿಗಾಗಿ, ಅಭಿಮಾನಿಗಳ ಮೇಲಿನ ಗೌರವಕ್ಕಾಗಿ ಪೂರ್ಣ ಮನಸ್ಸಿನಿಂದ ಒಪ್ಪಿ ಅನುಭವಿಸುತ್ತಿದ್ದ ಧೋನಿಯ ಸಹನೆಯ ಕಟ್ಟೆ ಒಡೆದಿದೆ. ಇಷ್ಟು ಕಾಲ ಆತನ ಬೆನ್ನುಲುಬಾಗಿದ್ದ ಶಕ್ತಿಯು ಕಳೆದುಹೋಗಿ ಆತ ಶಾಪಗ್ರಸ್ತ ಗಂಧರ್ವನಾಗಿದ್ದಾನೆ. ರಾಜಕುಮಾರಿಯ ಲಿಪ್‌ಸ್ಟಿಕ್ ಇಲ್ಲದ ತುಟಿಯ ಚುಂಬನಕ್ಕಾಗಿ ಕಾದು  ಕುಳಿತ ಕಪ್ಪೆಯಾಗಿದ್ದಾನೆ. ಆತನ ಅಪೂರ್ವ ಆಸ್ತಿಯಾಗಿದ್ದ ಅದು ಕಳೆದು ಹೋಗಿದೆ. ಹೌದು, ಧೋನಿಯ ಪ್ರಭಾವಳಿ ಕಳೆದು ಹೋಗಿದೆ!

ಆತ ನಿಜಕ್ಕೂ ಬುದ್ಧಿವಂತನಾಗಿದ್ದರೆ ತಾನು ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ ಎಂದು ತಿಳಿದಾಗ ಮಿದಾಸ ನೇರವಾಗಿ ತನ್ನ ಹೊಟ್ಟೆಯನ್ನು ಬಗೆದು ಜೀರ್ಣಾಂಗ ವ್ಯೂಹವನ್ನೇ ಮುಟ್ಟಿ ಬಿಡುತ್ತಿದ್ದ. ಹಸಿವೆಯೆಂಬ ರಕ್ಕಸನ ಬಂಗಾರದ ಪ್ರತಿಮೆಯನ್ನು ಮಾಡಿ ಶೋಕೇಸಿನಲ್ಲಿಟ್ಟು ಬಿಟ್ಟಿದ್ದರೆ ಅವನನ್ನು ಹಿಡಿಯುವವರು ಇದ್ದರೆ? ಯಾರಿಗೆ ಗೊತ್ತು, ಮುಟ್ಟಿದ್ದನ್ನು ಬಂಗಾರವಾಗಿಸುವ ಶಕ್ತಿ ಕೈಗಳಿಗೆ ಬಂದಾಗ, ತಲೆಯಲ್ಲಿ ಅದುವರೆಗೂ ಇದ್ದ ಮೆದುಳಿಗೇ ತುಕ್ಕು ಹಿಡಿಯಬಹುದು. ಈ ಕಾಲದ ಮಿದಾಸನ ಕತೆಯೇನು ಭಿನ್ನವಾಗಿಲ್ಲ. ಈತ ಕೆಮ್ಮಿದ ದಿಕ್ಕಿನಲ್ಲಿ ಗಾಳಿಯು ಹೆಚ್ಚಾಗಿ ಎದುರಾಳಿ ಆಟಗಾರ ಚಡಪಡಿಸಿ ಹೋಗುವ ಅದೃಷ್ಟ ಈತನದು. ತಾನೊಮ್ಮೆ ವಿಕೆಟುಗಳ ಹಿಂದಿನ ಜಾಗದಿಂದ ಕದಲಿ  ಬೌಲರ್‌ಗೆ ಸಣ್ಣ ಸ್ಟ್ರೆಸ್ ಮ್ಯಾನೇಜ್‌ಮೆಂಟ್ ಭಾಷಣ ಕೊಟ್ಟರೆ ಸಾಕು ಎದುರಾಳಿ ಬ್ಯಾಟ್ಸ್‌ಮನ್ ವಿಕೆಟ್ ಒಪ್ಪಿಸಿ ನಡೆದು ಬಿಡುತ್ತಿದ್ದ. ತಾನು ಕಣ್ಣು ಮುಚ್ಚಿಕೊಂಡು ಎಡಗೈಯಲ್ಲಿ ತೋರಿದ ಆಟಗಾರ ತಂಡದಲ್ಲಿ ಬಂದೊಡನೆ ಅಜ್ಞಾತವಾಸ ಕಳಚಿ ಬಂದ ಅರ್ಜುನನಾಗುತ್ತಿದ್ದ. ಆಗೆಲ್ಲಾ ಧೋನಿಯೆಂಬ ರಾಂಚಿಯ ಹುಡುಗನ ಸುತ್ತಲಿದ್ದ ಪ್ರಭಾವಳಿಯನ್ನು ಕಂಡು ಜನತೆ ಉಘೇ ಉಘೇ ಅನ್ನತೊಡಗಿದರು.

ಈಗ ತಾವೇ ಆತನ ಸುತ್ತ ಕಂಡಿದ್ದ ಪ್ರಭಾವಳಿಯು ಕಾಣೆಯಾಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ. ಜನರ ಮಾತು ಕೇಳಿ ಆತನೂ ತಾನು ಕಂಡಿರದ ವಸ್ತುವನ್ನು ಹುಡುಕಲು ಹೊರಟಿದ್ದಾನೆ. ತನ್ನ ದೇಶದ ಅಭಿಮಾನಿಗಳಿಗೆ ಇಂದಿನ ಆಟದಲ್ಲಿ ಆಸ್ಟ್ರೇಲಿಯ ವಿರುದ್ಧ ಪಾಕಿಸ್ತಾನ ಗೆಲ್ಲುವಂತೆ ಬೇಡಿಕೊಳ್ಳಿ, ಪಾಕಿಸ್ತಾನವನ್ನೇ ಬೆಂಬಲಿಸಿ ಎಂದು ಬೇಡಿಕೊಂಡಿದ್ದಾನೆ.

ಈ ನಡುವೆ ಧೋನಿ ಕಳೆದುಕೊಂಡಿದ್ದಾನೆ ಎಂದು ಹೇಳಲಾದ ಪ್ರಭಾವಳಿಯನ್ನು ಹುಡುಕಿ ಪತ್ತೆ ಹಚ್ಚಿ ಹಿಂದಿರುಗಿಸುವುದಕ್ಕಾಗಿ ದೇಶದ ನಾನಾ ಭಾಗಗಳಿಂದ ಚಾಣಾಕ್ಷ ಪತ್ತೆದಾರರನ್ನು ದಕ್ಷಿಣ ಆಫ್ರಿಕಾಗೆ ಕರೆಸಿಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ಕಾಣೆಯಾಗಿರುವ ಜನರ ಮಾನವೀಯತೆಯನ್ನು ಹುಡುಕುವ ವ್ಯರ್ಥ ಪ್ರಯತ್ನದಲ್ಲಿ ತೊಡಗಿದ್ದ ನಮ್ಮ ಅತ್ಯಾಪ್ತ ಚೇಲ ಕುಚೇಲನಿಗೆ ಸಹ ಕರೆ ಬಂದಿದೆ. ಈತ ಹಿಂದಿನ ಕೇಸ್ ಒಂದರಲ್ಲಿ ತೋರಿದ್ದ ಅಪ್ರತಿಮ ಬುದ್ಧಿಮತ್ತೆಯನ್ನು ಪ್ರಶಂಸಿಸಿ ಈತನ ಸೇವೆಯನ್ನು  ಈ ಕೇಸಿನಲ್ಲಿ ಬಯಸಿದ್ದಾರೆ. ಈ ದಿನದ ಪಂದ್ಯದ ಪ್ರಾರಂಭದ ಒಳಗೆ ತನಿಖೆ ಪೂರ್ಣಗೊಳ್ಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದರೆ, ಗೆಲುವಿನ ಓಟದಲ್ಲಿರುವಾಗ ನಾನಾ ದೋಷ ಪರಿಹಾರಗಳನ್ನು ಮಾಡಿಸಲು ದೇಶದ ಉದ್ದಗಲಕ್ಕೂ ಅಂಡೆಲೆಸಿದ ಮಾಂತ್ರಿಕರು ತಮ್ಮ ಮೆದುಳನ್ನು ಹುಡುಕಲು ಅಂಜನ ಹಾಕುವಲ್ಲಿ ಮಗ್ನರಾಗಿದ್ದಾರೆಯೇ ಎಂದು ಸಾಮ್ರಾಟರು ಗೊಣಗುತ್ತಿದ್ದಾರೆ!

ಸಂತಾಪಕೀಯ: ಅನಾಮಿಕ ಅತಿಥಿಯ ಬೆನ್ನತ್ತಿ…

26 ಸೆಪ್ಟೆಂ

ಇಷ್ಟು ದಿನ ನಗೆ ನಗಾರಿ ಆಫೀಸಿನಲ್ಲಿ ನೆಲೆಸಿದ್ದ ಶಾಂತಿ ಅನೇಕರಲ್ಲಿ ಕೆಟ್ಟ ಕೂತಹಲವನ್ನು, ಕೆಲವರಲ್ಲಿ ಒಳ್ಳೆಯ ಸಂಶವನ್ನೂ sataapakeeya ಮೂಡಿಸಿದ್ದು ನಮ್ಮ ಗಮನಕ್ಕೆ ಬಂದಿದೆ. ಅನ್ಯಗ್ರಹವಾಸಿಗಳಾದ ರಾಜ್ಯದ ಗೃಹ ಮಂತ್ರಿಗಳು ನಗಾರಿ ಸದ್ದಡಗಿಸಿದ್ದು ನಮ್ಮ ಸರಕಾರದ ಸಾಧನೆ ಎಂದು ಕೆ.ಎಸ್.ಆರ್.ಟಿ.ಸಿ ಟಿಕೆಟ್ ಹಿಂಭಾಗದ ಸಾಧನೆಗಳ ಪಟ್ಟಿಯಲ್ಲಿ ಸೇರಿಸಲು ಹೊಂಚು ಹಾಕಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡ ಮಹತ್ಕಾರ್ಯಕ್ಕಾಗಿ ಎರಡನೆಯ ಗೌಡಾಗೆ ಯಡ್ಡಿ ಕತ್ತೆತ್ತಿ ಸುತ್ತಲೂ ಕಣ್ಣಾಡಿಸುತ್ತಿದ್ದಾರೆ. ಮಠಗಳ ರೇಷನ್ ಕೊರಕ ಹುಳುಗಳಾಗಿ ಭವ್ಯ ಜೀವನವನ್ನು ದಿವ್ಯವಾಗಿ ಕಳೆಯುತ್ತಿರುವ ಪಾರ್ಟ್ ಟೈಮ್ ಧರ್ಮ ಜಿಜ್ಞಾಸುಗಳು, ಫುಲ್ ಟೈಮ್ ಟಿವಿ ವಾಹಿನಿ ಜೋತಿಷಿಗಳು ತಮ್ಮ ಹೆಸರಿಲ್ಲದ ಶಾಂತಿ ಹೋಮಗಳಿಗೆ ಬ್ಲಾಗ್ ಲೋಕದ ಅತಿ ಕ್ಷುದ್ರ ಜೀವಿಯೇ ತಣ್ಣಗಾಗಿ ಹೋಯಿತು ಎಂದು ಬಯೋಡೇಟಾ ಅಪ್ಡೇಟ್ ಮಾಡಿಕೊಳ್ಳುತ್ತಿದ್ದಾರೆ. ಕೊಚ್ಚೆಯಲ್ಲಿ ನೆತ್ತಿಯ ಮಟ್ಟಕ್ಕೆ ಮುಳುಗಿ ಅಲ್ಲಿದಂಲೇ ಕೆಸರೆರುಚುತ್ತಾ ಅವರಿವರ ಬಟ್ಟೆಯನ್ನು ಕೊಳೆಯಾಗಿಸಿ, ಮಡಿ ಕೆಡಿಸಿ ಮಡಿವಂತರು ಸ್ನಾನ ಗೃಹಕ್ಕೆ ಪದೇ ಪದೇ ತೆರಳುವಂತೆ ಮಾಡಿದ ಖುಶಿಯಲ್ಲಿ ಇನ್ನೆರಡು ಅಡಿ ಆಳಕ್ಕೆ ಕೊಚ್ಚೆಯಲ್ಲಿ ಮುಳುಗುತ್ತಿರುವ ಅನಾಮಿಕ ಬ್ಲಾಗಿಗರು ಹಾಗೂ ಬೇವಾರ್ಸಿ ಕಮೆಂಟುಗಳ ಸೃಷ್ಟಿಕರ್ತರು ತಮ್ಮ ೨೪/೭ ಕಠಿಣ ಶ್ರಮದಿಂದ ಸಾಮ್ರಾಟರು ಬ್ಲಾಗ್ ಮಂಡಲದಿಂದ ಓಡಿಹೋದರು ಎಂದು ಸಂಭ್ರಮಿಸುತ್ತಿದ್ದಾರೆ. ಎಲ್ಲರ ಮನಸ್ಸಿನ ಮಂಡಿಗೆಯಲ್ಲಿ ಸಿಕ್ಕ ಒಂಟಿ ಹರಳಿನ ಹಾಗೆ ನಾವು ಮತ್ತೆ ಹಾಜರಾಗಿದ್ದೇವೆ.

ಪ್ರತಿ ಬಾರಿಯ ಹಾಗೆ ಇಷ್ಟು ದಿನಗಳ ನಮ್ಮ ಗೈರು ಹಾಜರಿಗೆ ಕಾರಣವನ್ನು ನಿವೇದಿಸಿಕೊಳ್ಳಲೇಬೇಕು. ಓದುಗ ಪ್ರಜೆಗಳಾದ ನೀವು ಎಂದಿಗಾದರೂ ನಮ್ಮನ್ನು ಕಾರಣ ಕೇಳಿದ್ದುಂಟೇ? ಆದರೂ ನಮ್ಮ ಪ್ರಜಾ ಸಮೂಹಕ್ಕೆ ಉತ್ತಮ ಉದಾಹರಣೆಯನ್ನು ಹಾಕಿಕೊಡುವ ಮಹೋದ್ದೇಶದಿಂದ ನಾವು ಈ ಅಭ್ಯಾಸವನ್ನು ಅವ್ಯಾಹತವಾಗಿ ನಡೆಸಿಕೊಂಡು ಬಂದಿದ್ದೇವೆ. ನಾವು ಗೈರು ಹಾಜರಾದ ದಿನಗಳಲ್ಲಿ ಎರಡು ಮುಕ್ಕಾಲು ದಿನಗಳನ್ನು ನಾವು ಗೈರು ಹಾಜರಿಯ ಕಾರಣವನ್ನು ಅನ್ವೇಷಿಸುವುದರಲ್ಲಿಯೇ ಕಳೆಯುತ್ತೇವೆ ಎಂದರೆ ನಮ್ಮ ಬದ್ಧತೆ ಎಷ್ಟು ಗಂಭೀರವಾದದ್ದು ಎಂಬುದರ ಕಲ್ಪನೆ ನಿಮಗಾದೀತು.

ಈ ಬಾರಿಯ ನಮ್ಮ ಗೈರು ಹಾಜರಿಗೆ ಗಟ್ಟಿಯಾದ ಕಾರಣವಿಲ್ಲದಿಲ್ಲ. ಹಿಂದಿನ ಸಂಚಿಕೆಯಲ್ಲಿ ನಾವು ಬ್ಲಾಗ್ ಲೋಕದಲ್ಲಿ ಅಲ್ಲೋಲ ಕಲ್ಲೋವನ್ನು ಉಂಟು ಮಾಡಿದ, ಕಾಫಿ ಲೋಟದಲ್ಲಿ (ಕೆಲವರ ವ್ಹಿಸ್ಕಿ ಗಾಜಿನಲ್ಲಿ) ಬಿರುಗಾಳಿ ಎಬ್ಬಿಸಿದ ಬ್ಲಾಗ್ ಪ್ರಜೆಯ ವಿಶೇಷ ಸಂದರ್ಶನವನ್ನು ಪ್ರಕಟಿಸುವುದಾಗಿ ಘೋಷಿಸಿದ್ದೆವು. ಕೆಲಸ ಮುಗಿಯುವವರೆಗೆ ಅದನ್ನು ಯಾರ ಬಳಿಯೂ ಬಾಯಿ ಬಿಡಬೇಡ ಎಂಬ ಹಿರಿಯರ ಮಾತಿಗೆ ಕವಡೆ ಕಾಸಿನ ಬೆಲೆಯನ್ನೂ ನೀಡದ ನಾವು ಕೆಲಸವನ್ನು ಘೋಷಿಸಿದ ನಂತರವೇ ಅದನ್ನು ಮಾಡಲು ತೊಡಗುವುದು. ಈ ಬಾರಿ ನಾನು ಸೊನ್ನೆ ರನ್ನುಗಳಿಗೇ ಔಟಾಗುವುದು ಎಂದು ಘೋಷಿಸಿ ಮೈದಾನದಲ್ಲಿ ಆ ಘೋಷಣೆಯನ್ನು ಸಾಕಾರಗೊಳಿಸಿದ ನೆಪವನ್ನಿಟ್ಟುಕೊಂಡು ನಮ್ಮನ್ನು ಕಾಲೇಜು ಕ್ರಿಕೆಟ್ ಟೀಮಿನಿಂದ ಹೊರ ಹಾಕಿದ ಪ್ರಕರಣವನ್ನು ನಮ್ಮ ಆತ್ಮಕತೆಯಲ್ಲಿ ವಿವರವಾಗಿ ಬರೆಯಲಿದ್ದೇವೆ.

ಬ್ಲಾಗ್ ಅಂಗಳದ ಆ ಸೆಲೆಬ್ರಿಟಿಯ ಸಂದರ್ಶನಕ್ಕಾಗಿ ನಮ್ಮ ಆಲ್ಟರ್ ಈಗೋವನ್ನು ಅಟ್ಟಿದ್ದೆವು. ಬ್ಲಾಗ್ಲೋಕ ವಿಖ್ಯಾತ ಬ್ಲಾಗಿನ ಅನಾಮಿಕ ಯಜಮಾನರನ್ನು ಹುಡುಕಿಕೊಂಡು ಹೊರಟ ನಮ್ಮ ಆಲ್ಟರ್ ಈಗೋ ಎಷ್ಟು ದಿನಗಳಾದರೂ ಹಿಂದಿರುಗಲಿಲ್ಲ. ಸರಿಯಾದ ವಿಳಾಸ, ಲ್ಯಾಂಡ್ ಮಾರ್ಕು, ಗುರುತಿನ ಚರ್ಯೆ, ಮೊಬೈಲ್ ನಂಬರು  ಇದ್ದರೇನೇ ಈ ನಗರಗಳಲ್ಲಿ ವ್ಯಕ್ತಿಯನ್ನು ಹುಡುಕುವುದು ಕಷ್ಟ ಹೀಗಿರುವಾಗ ಹೆಸರಿಲ್ಲದ ಬ್ಲಾಗ್ ವ್ಯಾಸನನ್ನು ಹುಡುಕಿ ಹೊರಟ ನಮ್ಮ ಆಲ್ಟರ್ ಈಗೋ ಅಂತರಜಾಲದ ಯಾವುದೋ ಎಳೆಯಲ್ಲಿ ಕಾಲು ಸಿಕ್ಕಿಸಿಕೊಂಡು ಖೈದಾಗಿ ಹೋಯಿತು. ಅದನ್ನು ಹುಡುಕಲೆಂದು ಕಳುಹಿಸಿದ ಲೋಕ ವಿಖ್ಯಾತ ಡಿಟೆಕ್ಟೀವ್ ಶೆರ್ಲಾಕ್ ಹೋಮ್ಸನ ಗುರು, ನಮ್ಮ ಅತ್ಯಾಪ್ತ ಚೇಲ ಕುಚೇಲ ಸಹ ಕಣ್ಮರೆಯಾಗಿ ಹೋದ. ಆ ಬ್ಲಾಗಿಗರ ಬಗ್ಗೆ ಈಗಾಗಲೇ ಬ್ಲಾಗ್ಲೋಕದಲ್ಲಿ ಅನೇಕ ವದಂತಿಗಳು, ನಿಗೂಢ ದಂತಕತೆಗಳು ಹರಡಿಕೊಂಡಿದ್ದರಿಂದ ಅಲ್ಲೆಲ್ಲಾದರೂ ಚಾಚಿಕೊಂಡಿರಬಹುದಾದ ಬರ್ಮುಡ ರೆಕ್ಟಾಂಗಲ್, ಸರ್ಕಲ್‌ಗಳ ರಹಸ್ಯ ಬೇಧಿಸಲು ಖುದ್ದಾಗಿ ನಾವೇ ತೆರಳಿದೆವು.

ಕಾಲನೇ ಕೈ ಹಿಡಿದನೆಂದರೆ ಆಗದ ಕೆಲಸ ಯಾವುದಾದರೂ ಉಂಟೇ? ಮುಖ್ಯಮಂತ್ರಿಗಳೇ ಶಿಫಾರಸ್ಸು ಮಾಡಿದರೆಂದರೆ ಸಿಕ್ಕದ ನೌಕರಿ ಯಾವುದಾದರೂ ಉಂಟೆ? ನಾವು ಅನಾಮಿಕ ಬ್ಲಾಗಿಗರ ಬೆನ್ನಟಿ ಹೊರಟ ಕೆಲವೇ ದಿನಗಳಲ್ಲಿ ಆ ಬ್ಲಾಗಿಗರೇ ನಮ್ಮ ಕಾಲಿಗೆ ಕಚ್ಚಿಕೊಂಡರು. ಆದರೆ ಕಾಲಿಗೆ ತೊಡರಿಕೊಂಡ ಆ ವಸ್ತುವಿಗೆ ಮುಖವಾಗಲಿ, ಉಳಿದ ಅವಯವಗಳಾಗಲಿ ಇದ್ದಂತೆ ತೋರಲಿಲ್ಲ. ಉದ್ದನೆಯ ಕೂದಲಿದ್ದ ಮಾತ್ರಕ್ಕೆ ಹೆಣ್ಣೆಂದು ಗುರುತಿಸುವುದು, ಜೇಬಲ್ಲಿ ಪೆನ್ನು ಇಟ್ಟುಕೊಂಡ ಮಾತ್ರಕ್ಕೆ ವಿದ್ಯಾವಂತ ಎಂದು ಭಾವಿಸಿದಷ್ಟೇ ಪ್ರಮಾದಕಾರಿ ಎಂದು ಅನುಭವದಿಂದ ಕಂಡುಕೊಂಡಿದ್ದ ನಾವು ಇನ್ನಿತರ ದೇಹದ ಭಾಗಗಳಿಗಾಗಿ ಹುಡುಕಾಡಿದೆವು. ಗಂಡು, ಹೆಣ್ಣೆಂದು ಪ್ರತ್ಯೇಕಿಸುವುದಕ್ಕೆ ಆ ದೇವರು ಅದೆಷ್ಟು ಸ್ಪಷ್ಟವಾದ ಭಿನ್ನತೆಯನ್ನು ಕೊಟ್ಟಿದ್ದಾಗ್ಯೂ ನಮಗೆ ನಮ್ಮ ಕಾಲಿಗೆ ತೊಡರಿದ ವಸ್ತು ಯಾವ ಲಿಂಗದ್ದು ಎಂದು ನಿರ್ಧರಿಸಲಾಗಲಿಲ್ಲ. ಆದರೂ ಆ ವಸ್ತುವೇ ವಿಖ್ಯಾತ ಬ್ಲಾಗಿನ ವಾರಸುದಾರ ಎಂದು ನಾವು ನಮ್ಮ ಆರನೆಯ ಇಂದ್ರಿಯ ಹಾಗೂ ಏಳನೆಯ ಇಂದ್ರಿಯಗಳ ಸಹಯೋಗದಿಂದ ನಡೆಸಿದ ಕಾರ್ಯಾಚರಣೆಯಿಂದ ಕಂಡುಕೊಂಡೆವು.

ಸಂದರ್ಶನ ಶುರು ಮಾಡುವ ಮುನ್ನ, ಅತಿಥಿಯನ್ನು ಹೊಗಳಿ ಅಟ್ಟಕ್ಕೇರಿಸುವುದು ನಮ್ಮ ಎಂದಿನ ಪದ್ಧತಿ. ನಾವು ಈಗಾಗಲೇ ಅಟ್ಟದಲ್ಲಿ ಈಸಿ ಚೇರು ಹಾಕಿಕೊಂಡು ಕೂತಿರುತ್ತೇವಾದ್ದರಿಂದ ಅತಿಥಿಯನ್ನು ಅಲ್ಲಿಗೇ ಕರೆಸಿಕೊಳ್ಳುವುದು ನಮಗೆ ಅನುಕೂಲಕರವಾದ ಸಂಗತಿ. ಈ ವಸ್ತುವನ್ನು ಹೀಗೆ ಅಟ್ಟಕ್ಕೆ ಏರಿಸುವುದಕ್ಕೆ ನಮಗೆ ಬಹು ಪ್ರಯಾಸವಾಯಿತು. ಮುಖವೇ ಇಲ್ಲದ ವಸ್ತುವಿಗೆ ಮುಖ ಸ್ತುತಿ ಮಾಡುವುದಾದರೂ ಹೇಗೆ? ನಿಮ್ಮ ಕಣ್ಣುಗಳು ನೀಳವಾದ ಮೀನಿನ ಕಣ್ಣುಗಳ ಹಾಗಿವೆ, ಮೂಗಿ ಸಂಪಿಗೆಯ ಹಾಗಿದೆ, ಮೀಸೆ  ಬೋರ್ಡು ಒರೆಸುವ ಡಸ್ಟರ್ ಇದ್ದ ಹಾಗಿದೆ, ಮುಂಗುರುಳು ನಮ್ಮ ಕಾರಿನ ವೈಪರ್ ಇದ್ದ ಹಾಗಿದೆ ಎನ್ನಲಿಕ್ಕೆ ಆಯಾ ಅವಯವಗಳ ಜಾಗದಲ್ಲಿ ಏನಾದರೊಂದು ಇರಲೇ ಬೇಕಲ್ಲವೇ? ಮುಖವೇ ಇಲ್ಲದ ಈ ವಸ್ತುವನ್ನಿಟ್ಟುಕೊಂಡು ಅದೆಂತಹ ಕಲ್ಪನಾ ಶಕ್ತಿಯಿರುವ ಕವಿಯಾದರೂ ಒಂದೇ ಒಂದು ಸಾಲು ಬರೆಯಲಾರ!

ಹೇಗೋ ನಮ್ಮ ತಪಃಶಕ್ತಿಯನ್ನೆಲ್ಲ ಖರ್ಚು ಮಾಡಿ ಆ ವಸ್ತುವನ್ನು ಅಟ್ಟಕ್ಕೆ ಏರಿಸಿ ನಾವು ಸಂದರ್ಶವನ್ನು ನಡೆಸಿದೆವು. ಆ ಸಂದರ್ಶನದ ಕತೆಯೋ, ಅದು ಮತ್ತೊಂದು ಉದಯ ಟಿವಿ ಧಾರಾವಾಹಿಯ ಸರಕಾಗುವಷ್ಟಿದೆ. ಅದನ್ನು ಇನ್ನೊಮ್ಮೆ ಯಾವಾಗಲಾದರೂ ಹೇಳುವೆ. ಸರಿ ಸಂದರ್ಶನ ಮುಗಿಸಿಕೊಂಡು, ಬರ್ಮುಡ ಪೆಂಟಗನ್ನಿನಲ್ಲಿ ಲೀನವಾಗಿದ್ದ ನಮ್ಮ ಆಲ್ಟರ್ ಈಗೋ ಹಾಗೂ ಕುಚೇಲನನ್ನು ಪತ್ತೇ ಹಚ್ಚಿ ಎಳೆದುಕೊಂಡು ನಮ್ಮ ಕಛೇರಿಗೆ ಹಿಂದಿರುಗುವಷ್ಟರಲ್ಲಿ ನಮ್ಮ ಜೀವ ಬಾಯಿಗೆ ಬಂದಂತಾಗಿತ್ತು.

ನಗೆ ಸಾಮ್ರಾಜ್ಯದ ಸಾಮ್ರಾಟರಾದ ನಮ್ಮನ್ನು ಇಷ್ಟು ಬೆವರಿಳಿಸುವಂತೆ ಮಾಡಿದ ಆ ಸಂದರ್ಶನವನ್ನು ಶೀಘ್ರದಲ್ಲಿಯೇ ನಗೆ ನಗಾರಿಯಲ್ಲಿ ಬೆಳಕು ಕಾಣಿಸುತ್ತೇವೆ. ಇನ್ನು ಮುಂದೆ ತಪ್ಪದೆ ನಗಾರಿಯ ಸದ್ದು ಎಂದಿನ ಕರ್ಕಶ ಶೃತಿಯಲ್ಲಿ ನಿಮ್ಮ ಕಿವಿಗಳನ್ನಪ್ಪಳಿಸಿ ಕಿವಿಯ ಮೇಣವನ್ನು ಕೆಡವಿ ಸ್ವಚ್ಛಗೊಳಿಸುವುದು ಎಂದು ಭರವಸೆ ಕೊಡುತ್ತೇವೆ.

 

ಇಂತಿ ನಿಮ್ಮ
ನಗೆ ಸಾಮ್ರಾಟ್

ಇದೂ ಮುಗಿಯುತ್ತೆ… (ಮುಗಿಯಿತು)

2 ಮಾರ್ಚ್

(ಇಲ್ಲೀವರ್ಗೂ ಏನಾಗಿತ್ತು ಅಂದ್ರೆ….)

ಮಂಡಿಯೂರಿಯವರ ಮಾತಿನ ಮಾಂತ್ರಿಕ ಮೋಡಿಗೆ ಒಳಗಾದ ಕುಚೇಲನಿಗೆ ತಾನು ಕುರಿಯಲ್ಲ ಹುಲಿ ಎಂಬ ಆತ್ಮವಿಶ್ವಾಸ ಮೂಡಿತು. ಇಷ್ಟು ದಿನ ತನ್ನೊಳಗಿದ್ದ ಶಕ್ತಿಯನ್ನು ಕಾಣದೆ ಸಂಕಟ ಪಟ್ಟದ್ದಕ್ಕೆ ಆತನಿಗೆ ದುಃಖವಾಯಿತು. ಇನ್ನು ಮುಂದೆ ಮಂಡಿಯೂರಿಯವರ ಈ ಸೂಪರ್ ಫಾರ್ಮುಲಾವನ್ನು ಅಳವಡಿಸಿಕೊಂಡು ಬದುಕನ್ನು ಸುಖದ ಬೀಡಾಗಿಸಿಕೊಳ್ಳಬೇಕು ಎಂದುಕೊಂಡು ಜೇಬಿನಲ್ಲಿ ಉಳಿದಿದ್ದ ಚಿಲ್ಲರೆ ಕಾಸನ್ನೆಲ್ಲಾ ಮಂಡಿಯೂರಿಯವರ ಎದುರು ಇಟ್ಟು ಮಂಡಿಯೂರಿ ಬಾಗಿ ನಮಸ್ಕರಿಸಿ ಅಲ್ಲಿಂದ ಹೊರಟ.

ಮುಂದೆ ದಿನನಿತ್ಯದ ಬದುಕಿನಲ್ಲಿ ಯಾವುದೇ ಕಷ್ಟ ಬಂದರೂ ‘ಈ ಕಷ್ಟ ಶಾಶ್ವತವಲ್ಲ. ಇದು ಮುಗಿದು ಒಳ್ಳೆಯ ಕಾಲ ಬಂದೇ ಬರುತ್ತೆ. Just let it go… ಇದೂ ಮುಗಿಯುತ್ತೆ’ ಅಂದುಕೊಂಡು ನೆಮ್ಮದಿಯಿಂದ ಇರುತ್ತಾ, ಸುಖದ ಹೊಳೆಯಲ್ಲಿ ತೇಲುತ್ತಿರುವಾಗಲೂ ‘ಈ ಸುಖವೇ ಶಾಶ್ವತವಲ್ಲ. ಮನಸ್ಸಿನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಬೇಡ. ಲಗಾಮು ಕೈತಪ್ಪಿಹೋಗದಂತೆ ಎಚ್ಚರ ವಹಿಸು. ಸುಖದ ಅಲೆ ನಿರಂತರವಾದದ್ದಲ್ಲ. ಮೇಲೇರಿದವ ಕೆಳಕ್ಕಿಳಿಯಲೇ ಬೇಕು. ಈ ಸುಖದ ಘಳಿಗೆ- ಇದೂ ಮುಗಿದು ಹೋಗುತ್ತೆ.’ ಎಂಬ ಎಚ್ಚರವನ್ನು ಪಾಲಿಸುತ್ತಾ ಕುಚೇಲ ಇಡೀ ಭೂಮಿಯ ಮೇಲೆಯೇ  ಅತ್ಯಂತ ಸುಖಿ ಮನುಷ್ಯನಾಗಿದ್ದ. ಆತನ ಸಂತೋಷ, ನೆಮ್ಮದಿಯನ್ನು ಕಂಡು ನೆಂಟರಿಷ್ಟರು, ಸಹೋದ್ಯೋಗಿಗಳೆಲ್ಲಾ ಅಸೂಯೆಯಿಂದ ನರಳಿ ಡಾಕ್ಟರನ ಮಗನ ಶೋಕಿಗೆ ಚಂದಾ ಪಾವತಿಸತೊಡಗಿದರು.

ಸತ್ವಶಾಲಿಯಾದ ಮನುಷ್ಯನನ್ನು ಘಳಿಗೆ ಘಳಿಗೆಗೆ ಪರೀಕ್ಷೆಗೊಡ್ಡದಿದ್ದರೆ, ಗೋಳು ಹೋಯ್ದುಕೊಳ್ಳದಿದ್ದರೆ ತಾನಿದ್ದೇನು ಪ್ರಯೋಜನ ಎನ್ನಿಸಿರಬೇಕು ದೇವರಿಗೆ, ಕುಚೇಲನಿಗೆ ಸಾಲಾಗಿ ಒಂದರ ಮೇಲೊಂದರಂತೆ ಕಷ್ಟಗಳನ್ನು ನೀಡುತ್ತಾ ಹೋದ. ಆದರೆ ಕುಚೇಲ ಹಲ್ಲು ಕಚ್ಚಿ ಸಹಿಸುತ್ತಾ ನೆಮ್ಮದಿಯಿಂದ ಬಾಳುತ್ತಿದ್ದ. ದೇವರು ಕಟ್ಟ ಕಡೆಗೆ ತನ್ನ ಶಕ್ತ್ಯಾಯುಧವನ್ನೇ ಹೊರತೆಗೆದ. ತನ್ನೆಲ್ಲಾ ಶಕ್ತಿಯನ್ನು ಬಳಸಿ ಅದನ್ನು ಕುಚೇಲನ ಮೇಲೆ ಪ್ರಯೋಗ ಮಾಡಿಯೇ ಬಿಟ್ಟ. ಅದರ ಫಲವಾಗಿ ಕುಚೇಲ ಶುಭ ಮುಹೂರ್ತದಲ್ಲಿ ಮದುವೆಯಾದ.

ಮದುವೆಯಾದ ಹೊಸತರಲ್ಲಿ ದಾಂಪತ್ಯ ಸುಖದ ಜೇನನ್ನು ಸವಿದು ಸವಿದು ದುಂಡಗಾಗುತ್ತಿದ್ದ ಕುಚೇಲನ ಮನಸ್ಸಿನಲ್ಲಿ ಮಂಡಿಯೂರಿಯ ಉಪದೇಶ ಇದ್ದೇ ಇತ್ತು. ಈ ಸುಖ ಶಾಶ್ವತವಾದದ್ದಲ್ಲ, ಇದು ಒಂದು ದಿನ ಮುಗಿಯಲೇ ಬೇಕು ಎಂಬ ಎಚ್ಚರ ಆತನಿಗಿತ್ತು. ಈ ವೈಭವ, ಸುಖ, ಸಂತೃಪ್ತಿ, ನೆಮ್ಮದಿಯೆಲ್ಲಾ ಒಂದು ದಿನ ಮುಗಿಯಲೇ ಬೇಕು ಎಂಬುದು ಆತನಿಗೆ ತಿಳಿದಿತ್ತು. ಆದರೆ ಆ ದಿನ ಅಷ್ಟು ಬೇಗ ಬರುತ್ತೆ ಎಂಬುದನ್ನು ಆತ ಕನಸಿನಲ್ಲೂ ಎಣಿಸಿರಲಿಲ್ಲ. ಮದುವೆಯ ನಂತರ ಲೋಲುಪತೆ, ಮಾದಕತೆಯ ಪದರುಗಳೆಲ್ಲಾ ಸರಿದು, ಆ ಮಬ್ಬೆಲ್ಲಾ ತೊಲಗಿ ಹೆಂಡತಿ ಎಂಬಾಕೆಯ ವಿಶ್ವ ರೂಪ ದರ್ಶನವಾಗಲು ಶುರುವಾಯಿತು! ತನ್ನ ಕಷ್ಟದ ದಿನಗಳು ಇನ್ನು ಶುರುವಾದವು ಅನ್ನಿಸಿತು ಕುಚೇಲನಿಗೆ. ಆದರೆ ಇವು ಶಾಶ್ವತವಲ್ಲ, ಇವಕ್ಕೆ ಅಂತ್ಯ ಇದ್ದೇ ಇದೆ ಎಂಬ ಮಂಡಿಯೂರಿಯವರ ಮಾತು ಈತ ಆಶಾವಾದಿಯಾಗಿರಲು ನೆರವಾಗಿತ್ತು.

ಚಿಕ್ಕಂದಿನಲ್ಲಿ ತೂಕಡಿಕೆ, ಗೊರಕೆಗಳ ನಡುವೆ ಕೇಳಿದ ಹರಿಕತೆಯಲ್ಲಿ ನರಕದ ನಾನಾ ಟಾರ್ಚರ್ ವಿಧಾನಗಳ ಬಗ್ಗೆ ಅಸ್ಪಷ್ಟವಾಗಿ ತಿಳಿದಿತ್ತು. ಈಗ ಮದುವೆಯಾದ ನಂತರ ಅವೆಲ್ಲಾ ಸ್ಪಷ್ಟವಾಗ ತೊಡಗಿದವು. ನರಕವೆಂದರೆ ಅಬಾಲವೃದ್ಧರಾಗಿ ಎಲ್ಲರೂ ಥರಥರ ನಡುಗುವುದು ಏತಕ್ಕೆಂದು ಆತನಿಗೆ ಅರಿವಾಗಲಾರಂಭಿಸಿತು. ಹೆಂಡತಿ ‘ಪ್ರಾಣ ಹಿಂಡುವ’ ರಕ್ಕಸಿಯಾದದ್ದು ಯಾವಾಗ ಎಂದು ಆಲೋಚಿಸಲೂ ಮನಸ್ಸಿಗೆ ಶಕ್ತಿಯಿಲ್ಲದಾಯಿತು. ಬೆಳಿಗ್ಗೆ ಕಣ್ಬಿಟ್ಟ ಕ್ಷಣದಿಂದ ರಾತ್ರಿ ಎಚ್ಚರ ತಪ್ಪುವವರೆಗೂ ನಿಲ್ಲದ ಕಟಿಪಿಟಿಯಿಂದ ಕುಚೇಲ ಕಂಗಾಲಾಗಿ ಹೋದ. ‘ಮದುವೆಯೆಂಬುದು ಒಂದು ಕುಲುಮೆ’ ಎಂಬ ಹಿರಿಯರ ಮಾತು ನೆನಪಾದರೂ, ನಮ್ಮಂತಹ ಪ್ಲಾಸ್ಟಿಕ್ ಡಬ್ಬಗಳು ಸುಟ್ಟು ಕರಕಲಾಗಿ, ಕರಗಿ ನೀರಾಗುವುದು ಖಂಡಿತಾ ಎಂದು ಅನುಭವದಿಂದ ತಿಳಿದುಕೊಂಡ. ಆದರೂ ಮಂಡಿಯೂರಿಯವರ ಮಾತಿನ ಆಧಾರದ ಮೇಲೆ ಜೀವವನ್ನು ಅಂಗೈಯಲ್ಲಿ ಹಿಡಿದು ಜೋಪಾನ ಮಾಡಿಕೊಂಡಿದ್ದ. ‘ಇದೂ ಮುಗಿಯುತ್ತೆ…’ ಎಂದು ಪ್ರತಿ ರಾತ್ರಿ ಪಠಿಸುತ್ತಾ ನಿದ್ದೆ ಹೋಗುತ್ತಿದ್ದ.

ಮದುವೆಯಾಗಿ ಐವತ್ತು ವರ್ಷಗಳಾಗಿದ್ದವು. ಹೆಂಡತಿ ಗುಂಡುಕಲ್ಲಿನ ಹಾಗೇ ಇದ್ದಳು, ಆಕೆ ಕೊಡುತ್ತಿದ್ದ ಹಿಂಸೆಯೂ ಕಲ್ಲು ಗುಂಡಿನ ಹಾಗೇ ಇತ್ತು. ಕುಚೇಲ ‘ಇದೂ ಮುಗಿಯುತ್ತೆ…’ ಎಂದು ಪಠಿಸುವುದನ್ನು ಮಾತ್ರ ನಿಲ್ಲಿಸಿರಲಿಲ್ಲ.

‘ಅದೊಂದು ದಿನ ಬರುತ್ತದೆ. ಅಂದು ತನ್ನ ಈ ಕಷ್ಟವೆಲ್ಲಾ ದೂರವಾಗುತ್ತೆ. ತನಗೂ ಒಳ್ಳೆಯ ದಿನಗಳು ಬರುತ್ತೆ’ ಎಂದು ಕುಚೇಲ ಕಣ್ಣು ಮಂಜಾದರೂ ಕನಸು ಕಾಣುತ್ತಲೇ ಇದ್ದ. ಆ ದಿನ ಕಡೆಗೂ ಬಂದಿತು, ಅಂದು ಎಲ್ಲವೂ ಮುಗಿದು ಹೋಗಿತ್ತು. ಕುಚೇಲನ ಮನೆಯೆದುರು ಹೊಗೆ ಹಾಕಿತ್ತು.

ಅವನ ಅಂಗೈಯಲ್ಲಿ ಮುದುಡಿಕೊಂಡಿದ್ದ ಕಾಗದ ತುಂಡಿನ ಮೇಲೆ ಬರೆದಿತ್ತು: ‘ಇದೂ ಮುಗಿಯುತ್ತೆ!’

ನಗಾರಿ ಹುಟ್ಟು ಹಬ್ಬಕ್ಕೆ ಶುಭಾಶಯಗಳ ಸುರಿಮಳೆ!

6 ಫೆಬ್ರ

ನಗೆ ನಗಾರಿ ಡಾಟ್ ಕಾಮ್‌ನ ವಾರ್ಷಿಕೋತ್ಸವ ಸಮಾರಂಭದ ಬಗ್ಗೆ ಸವಿರವಾದ ವರದಿಯನ್ನು ನೀಡಬೇಕಿದ್ದ ತೊಣಚಪ್ಪ ಹಾಗೂ ಕುಚೇಲರು ಪಾರ್ಟಿಯಲ್ಲಿನ ಪ್ರಸಾದ, ತೀರ್ಥದಿಂದ ‘ಸಮಾಧಿ’ ಸ್ಥಿತಿಯನ್ನು ತಲುಪುವುದರಿಂದ ಸಾಮ್ರಾಟರಾದ ನಾವೇ ಕುದುರೆಗಳ ಲಗಾಮು ಹಿಡಿಯಬೇಕಿದೆ. ಹೀಗಾಗಿ ವರದಿ ಕೊಂಚ ತಡವಾಗಲಿದೆ. ಆದರೆ ನಮ್ಮಹಾಗೂ ನಮ್ಮ ಪತ್ರಿಕೆಯ ಹುಟ್ಟು ಹಬ್ಬಕ್ಕೆ ನಮ್ಮ ಭಕ್ತ ವೃಂದವು ಪ್ರತಿಕ್ರಿಯಿಸಿರುವ ರೀತಿಯನ್ನು ನೆನೆಯದಿದ್ದರೆ ನಮಗೆ ಮನಃಶಾಂತಿ ಲಭ್ಯವಾಗುವುದಿಲ್ಲ.

ಗಣೇಶ್.ಕೆ

mareyabahudemba bhayadinda eegale abhinandisuttiddene.
aadare neevu nageyanna nandisabedi anta kelikolluttene.

ಪ್ರಸಾದ್

ನೂರ್ಕಾಲ ಬೆಳಗಲಿ ನಗೆಯ ದೀವಿಗೆ
ಅನುಗಾಲವೂ ಹರಿಯಲಿ ಸಾಮ್ರಾಟರ ಕಿರುನಗೆ
ಅಭಿಮಾನಿಗಳ ಎದೆಯಲ್ಲಿ ಸಂಭ್ರಮವು ಬಗೆಬಗೆ.
“ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು”

ಹೇಮಾ ಪವಾರ್

ಸಾಮ್ರಾಟರೇ ವರ್ಷವಿಡೀ ನಗೆ ನಗಾರಿಯ ರಥ ಸುಗಮವಾಗಿ ನಡೆಸಿಕೊಂಡು ಬಂದಿದ್ದೀರಿ. ಅದರ ರಹಸ್ಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನೂ ಮುಗಿಸಿದ್ದೀರಿ. ನಿಮ್ಮ ಚೇಲ ಕುಚೇಲನ ಭಯಂಕರ ವಿರೋಧವಿದ್ದರೂ, ನಮ್ಮೆಲ್ಲರ ಪರವಾಗಿ ನಿಮಗೊಂದು ಸನ್ಮಾನ ಸಮಾರಂಭ ಏರ್ಪಡಿಸಬೇಕೆಂದಿದ್ದೇವೆ, ಇದಕ್ಕೆ ನಿಮ್ಮ ಅಭಿಪ್ರಾಯವೇನು??

ವಿ. ಸುಮಂತ ಶ್ಯಾನುಭಾಗ್

ಸಾಮ್ರಾಟರೆ .. ಸನ್ಮಾನವೆಂದರೆ ಯಾರ ಬಳಿ ಏನು ಇಲ್ಲವೋ ಅದನ್ನು ಕೊಡುವುದು ಎಂದರ್ಥ .. ಹೇಮಾ ಅವರಿಗೆ ಎಷ್ಟು ಸೊಕ್ಕು ನೋಡು ನಿಮಗೆ ಮಾನ ಮರ್ಯಾದೆ ಕೊಡುತ್ತೇನೆ ಅಂಥಾ ಇದ್ದಾರೆ

ಏನೇ ಇರಲಿ ಸಮಸ್ತ ಕನ್ನಡಿಗರಿಗೆ ದಿನವೂ ಹಾಸ್ಯರಸದ ಭೂರಿಭೋಜನ ಬಡಿಸುತ್ತಿರುವ , ಸ್ವಯಂಘೋಷಿತ ನಗೆಸಾಮ್ರಾಟ್ , ಕಲಿಯುಗದ ಆಸ್ಥಾನ ವಿದೂಷಕ , ಒಂದು ವರುಷದ ಮಗು “ನಗೆನಗಾರಿ ” ಮತ್ತದರ ಚಮಚಾಗಳಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಿದ್ದೇನೆ .
ಶ್ರೀ ದೇವರು ತಮಗೆ ದೀರ್ಘಾಯುಷ್ಯ ,ಆರೋಗ್ಯ ,ಸುಖ ಶಾಂತಿ ನೆಮ್ಮದಿಗಳನ್ನು ಕರುಣಿಸಲೆಂದು ಆತನ ಚರಣಕಮಲಗಳಲ್ಲಿ ಪ್ರಾರ್ಥಿಸುತ್ತೇನೆ . ನಿಮ್ಮ ನಗಾರಿಯ ಶಬ್ದ ಕನ್ನಡನಾಡಿನಾದ್ಯಂತ ಮಾರ್ದನಿಸಲಿ ,ನಿಮ್ಮ ನಗೆಗಡಲಲ್ಲಿ ಇನ್ನೊ ದೊಡ್ಡ ದೊಡ್ಡ ನಗುವಿನ ಅಲೆಗಳು ಏಳಲಿ ಹಾಗೋ ನಮ್ಮಂಥ ನಿಮ್ಮ ಅಭಿಮಾನಿಗಳು ಆ ನಗೆಗಡಲಲ್ಲಿ ತೇಲುವಂತಾಗಲಿ ಎಂದು ಹಾರೈಸುತ್ತೇನೆ .

ಮತ್ತೊಮ್ಮೆ ಜನ್ಮದಿನದ ಹಾರ್ದಿಕ ಶುಭಾಶಯಗಳೊಂದಿಗೆ

ರಂಜಿತ್ ಅಡಿಗ

“ಸೋಮಾರಿ ಮಿತ್ರ”ನೆಂದು ಉಲ್ಲೇಖಿಸಿ, ನಿಮ್ಮ ಅಸಂಖ್ಯ ಓದುಗರೆದುರು ನನ್ನನ್ನು ನೆನೆದುದ್ದಕ್ಕೆ ಕಣ್ತುಂಬಿ ಬಂತು.

ಅಂದ ಹಾಗೆ ಫೆಬ್ರವರಿ ೧೪ ಹತ್ತಿರ ಬಂತು, ಸಾಮ್ರಾಟರ ಪ್ರೇಮ ಕತೆಗಳನ್ನು ಓದುವ ಸೌಭಾಗ್ಯ ದೊರಕೀತೆ??

ಬೆಳಗಾನೆ ಎದ್ದು ನಾ ಯಾರ್ಯಾರ ಒದೆಯಲಿ?

1 ಫೆಬ್ರ

ಇಂದು ಬೆಳಗ್ಗೆ ಎಂದಿಗಿಂತ ಅರ್ಧ ಗಂಟೆ ಬೇಗನೆ ಎದ್ದ ಕುಚೇಲನಿಗೆ ಒಂದು ದೊಡ್ಡ ಜಿಜ್ಞಾಸೆ ಹುಟ್ಟಿಕೊಂಡಿತು. ಹುಲುಮಾನವರು ಹಾಸಿಗೆಯಿಂದೇಳುತ್ತಿದ್ದ ಹಾಗೆಯೇ ತಮ್ಮ ಅಂಗೈಯಲ್ಲಿ ದೇವಾಧಿದೇವತೆಗಳನ್ನು ಕಲ್ಪಿಸಿಕೊಂಡು ಅವರಿಗೆ ನಮಿಸಿಯೋ, ಕೋಣೆಯಲ್ಲಿ ನೇತು ಹಾಕಿಕೊಂಡ ದೇವರ ಪಟಕ್ಕೆ ಕೈ ಮುಗಿಯುತ್ತಲೋ, ಎಡ ಮಗ್ಗುಲಲ್ಲಿ ಎದ್ದೆವಾ ಎಂದು ಗಾಬರಿಯಾಗುತ್ತಲೋ, ರಾತ್ರಿಯ ಗುಂಡು ಜಾಸ್ತಿಯಾಯಿತಾ ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತಲೋ, ನಿದ್ರೆ ಕೆಡಿಸಿ ಎಚ್ಚರಿಸಿದ ಹಾಲಿನವನನ್ನೋ, ಪೇಪರ್‌ನವನನ್ನೋ ಬೈದುಕೊಳ್ಳುತ್ತಲೋ, ಇಷ್ಟು ಬೇಗ ಬೆಳಕಾಯಿತಾ ಎಂದು ಅಚ್ಚರಿಗೊಳ್ಳುತ್ತಲೋ, ಮಾಡಬೇಕಾದ ಕೆಲಸಗಳ ಪಟ್ಟಿ ತಯಾರಿಸುತ್ತಲೋ, ದೂರದಲ್ಲಿರುವ ಹೆಂಡತಿಯ ಮುಂಗುರಳನ್ನು ನೆನಪಿಸಿಕೊಳ್ಳುತ್ತಲೋ, ಪರೀಕ್ಷೆಗೆಷ್ಟು ದಿನಗಳಿವೆ ಎಂದು ಲೆಕ್ಕ ಹಾಕುತ್ತಲೋ, ತಿಂಗಳ ಮುನಿಸಿಗಿನ್ನೆಷ್ಟು ದಿನ ಎಂದು ಗುಣಿಸುತ್ತಲೋ ಬೆಳಗನ್ನು ಸ್ವಾಗತಿಸುತ್ತಾರೆ. ಆದರೆ ಸಾಮ್ರಾಟರ ಚೇಲನಾದ ಕುಚೇಲ ಇಂದು ಬೆಳಿಗ್ಗೆ ಎದ್ದಾಗ ಆತನಲ್ಲಿ ಒಂದು ಪ್ರಶ್ನೆ ಹುಟ್ಟಿಕೊಂಡಿತ್ತು. ಬೆಳಗಾನ ಎದ್ದು ನಾ ಯಾರ್ಯಾರ ನೆನೆಯಲಿ ಎಂದು ಹಡಿದ ಜನಪದದ ಹೆಣ್ಣು ಮಗಳನ್ನು ನೆನೆಸಿಕೊಂಡು ಆತ ‘ಬೆಳಗಾನ ಎದ್ದು ನಾ ಯಾರ್ಯಾರ ಒದೆಯಲಿ…’ ಎಂದು ಒರಲತೊಡಗಿದ. 311.beating

ಪಬ್ಬಿನೊಳಗೆ ನುಗ್ಗಿ ಮದಿರೆಯ ಮಬ್ಬಿನಲ್ಲಿ ಉಬ್ಬಿ, ಹಣದ ಕೊಬ್ಬಿನಲ್ಲಿ ಗಬ್ಬು ಗಬ್ಬಾಗಿ ತೂರಾಡಿ, ಹಾರಾಡಿ, ಕುಣಿದಾಡಿ, ಹೊರಳಾಡಿ ರಾಡಿ ಮಾಡುವವರನ್ನು ಅಟ್ಟಾಡಿಸಿಕೊಂಡು ಒದೆಯಲೇ ಎಂದು ಆಲೋಚಿಸಿದ. ಆದರೆ ಆ ಕೆಲಸವನ್ನು ‘ಉತ್ತಮ ಸಮಾಜಕ್ಕಾಗಿ’ ಟೊಂಕ ಕಟ್ಟು ನಿಂತ ಟಿವಿ ಚಾನೆಲ್ಲುಗಳ ಕೆಮರಾ ಹಾಗೂ ಕೆಮರಾ ಮನ್ನುಗಳ ಎದುರಲ್ಲೇ ಹಿಗ್ಗಾಡಿ ಜಗ್ಗಾಡಿ ಒದೆ ಕೊಟ್ಟು ಜಗತ್ತಿನಾದ್ಯಂತ ಹೆಸರು ಮಾಡಿಬಿಟ್ಟಿದ್ದಾರೆ. ‘ಸಂಸ್ಕೃತಿಯ ರಕ್ಷಕರು’ ಅಂತ ಬಿರುದು ಪಡೆದುಬಿಟ್ಟಿದ್ದಾರೆ.

ಇನ್ನು ನಮ್ಮ ನೆಲಕ್ಕೆ ಬಂದು ಇಲ್ಲಿನ ನೀರು, ಗಾಳಿ, ಮಣ್ಣು, ಕರೆಂಟು, ಪಿಜ್ಜಾ, ಬರ್ಗರು, ಕೋಕು ಎಲ್ಲಾ ಬಳಸಿಕೊಂಡು ಇಲ್ಲೇ ಮನೆ ಮಾಡ್ಕಂಡು ಹೆಂಡ್ತಿ ಮಕ್ಕಳು ಮಾಡ್ಕಂಡು ಇಲ್ಲಿಯವರ ಭಾಷೆಗೆ ಕವಡೆ ಕಾಸಿನ ಬೆಲೆ ಕೊಡದವರನ್ನು ಮನೆಗಳಿಂದ, ಆಫೀಸುಗಳಿಂದ, ನೌಕರಿಯ ಅರ್ಹತೆಯ ಪರೀಕ್ಷೆಯ ಕೊಠಡಿಗಳಿಂದ ಎಳೆದು ತಂದು ಬೀದಿಗೆ ಕೆಡವಿ ಬಡಿಯೋಣ ಅನ್ನಿಸಿತು. ಆದರೆ ಈಗಾಗಲೇ ಅಸಂಖ್ಯಾತ ಪಡೆಗಳು, ವೇದಿಕೆಗಳು, ಬಣಗಳು, ಸೇನೆಗಳು ಆ ಕೆಲಸವನ್ನು ಮಾಡುತ್ತಾ ಕ್ರೆಡಿಟ್ಟು ಪಡೆದುಕೊಳ್ಳುವುದಕ್ಕೆ ಕೋಳಿ ಜಗಳ ನಡೆಸುತ್ತಿವೆ. ಅವರ ಮಧ್ಯೆ ತಾನು ಹೋದರೆ ಜಜ್ಜಿ ಬಜ್ಜಿಯಾಗುವುದು ಖಂಡಿತಾ ಎಂಬುದು ಮನವರಿಯಾಯಿತು.

ಸಾವಿರಾರು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಸನಾತನ ಧರ್ಮ, ಜಗತ್ತಿನಲ್ಲೇ ಶ್ರೇಷ್ಠವಾದ ಧರ್ಮಕ್ಕೆ ಕೊಡಲಿ ಪೆಟ್ಟು ಕೊಡುವುದಕ್ಕೆ, ಇಡೀ ದೇಶವನ್ನೇ ಕ್ರೈಸ್ತಮಯವಾಗಿಸುವುದಕ್ಕೆ ಟೊಂಕಕಟ್ಟಿ ನಿಂತಿರುವ ಮಿಶಿ‘ನರಿ’ಗಳ ಚರ್ಚುಗಳಿಗೆ ಕಲ್ಲು ಬೀರಿ ಆ ನರಿಗಳನ್ನು ಹಿಡಿದು ದೊಣ್ಣೆಯಲ್ಲಿ ಬಡಿಯೋಣ ಜೊತೆಗೆ
ದೇಶಕ್ಕೆ ಬೆಂಕಿ ಹಚ್ಚುವವರು, ಭಯೋತ್ಪಾದಕರು, ಪಾಕಿಸ್ತಾನದ ಏಜೆಂಟುಗಳು ಎಂದು ಕಂಡ ಕಂಡ ಮುಸ್ಲೀಮರನ್ನು ಕಂಡಲ್ಲಿ ಅಟ್ಟಿಸಿಕೊಂಡು ಹೋಗಿ ಬಡಿಯೋಣ ಎಂಬ ಆಲೋಚನೆ ಬಂತು. ಆಗಲಾದರೂ ದೇಶವನ್ನು ಕಾಪಾಡಿದ, ದೇಶದ ಭವಿಷ್ಯದ ಬಗ್ಗೆ, ಭದ್ರತೆಯ ಬಗ್ಗೆ ಗಂಭೀರವಾಗಿ ಕೆಲಸ ಮಾಡಿದ ಹೆಸರು ಬರಬಹುದು ಅನ್ನಿಸಿತು. ಆದರೆ ತನ್ನ ಮನೆಗೆ ಬೆಳಿಗ್ಗೆ ಹಾಲು ಹಾಕುವವನಿಂದ ಹಿಡಿದು ರಾತ್ರಿ ಬೀಡ ಕೊಂಡು ಕೊಳ್ಳುವ ಅಂಗಡಿಯವನವರೆಗೆ ಎಲ್ಲರೂ ಮುಸ್ಲೀಮರೇ, ಇಲ್ಲ ಕ್ರೈಸ್ತರೇ. ಮಗಳ ಶಾಲೆ, ಮಗನ ಕಾಲೇಜು, ಈಕೆಯ ಆಸ್ಪತ್ರೆ ಎಲ್ಲವೂ ಆ ಕಿರಿಸ್ತಾನದವರೇ ನಡೆಸ್ತಿರೋದು. ಇನ್ನು ಕುಚೇಲನ ಪತ್ತೇದಾರಿಕೆಗೆ ಬರುವ ಕೇಸುಗಳು ಸಹ ಹಿಂದೂ, ಮುಸಲ್ಮಾನ, ಕ್ರೈಸ್ತ ಎಂದು ಬೇಧ ಕಾಣದಂತವು. ಇವರಿಬ್ಬರಲ್ಲಿ ಯಾರಿಗೆ ಒದ್ದರೂ  ಆ ಏಟು ಕಡೆಗೆ ತನ್ನ ಹೊಟ್ಟೆಗೇ ಬಂದು ಬೀಳುತ್ತೆ .

ತಾಸೆರಡು ತಾಸು ಉರುಳಿದರೂ ಕುಚೇಲನ ಗೊಂದಲಕ್ಕೆ ಪರಿಹಾರವೆಂಬುದು ಸಿಕ್ಕಲೇ ಇಲ್ಲ. ಕಡೆಗೆ ಒದೆಯುವುದಕ್ಕೆ ಹೊರಗೆ ಯಾರನ್ನೋ ಹುಡುಕಿಕೊಂಡೇಕೆ ಅಲೆಯುವುದು, ಮನೆಯಲ್ಲಿರುವ ಹೆಂಡತಿ ಸಾಕಲ್ಲವೇ ಅನ್ನಿಸಿತು. ಆಕೆ ಕೊಟ್ಟ ಕಾಫಿ ಬಟ್ಟಲನ್ನು ನೆಲಕ್ಕೆ ಬಿಸಾಕಿ ನಾಲ್ಕು ಡೈಲಾಗು ಒಗೆದು ನಾಲ್ಕು ಬಿಗಿಯಬಹುದು ಅನ್ನಿಸಿ ಸಂತೋಷವಾಯ್ತು. ಮರುಕ್ಷಣದಲ್ಲೇ ಡೊಮೆಸ್ಟಿಕ್ ವಯಲೆನ್ಸ್ ಆಕ್ಟಿನ ಕಲಮುಗಳು ಕಣ್ಮುಂದೆ ಹರಿದು ಹೋದವು. ಆದರೆ ಅವುಗಳಿಂದ ಆತ ವಿಚಲಿತನಾಗಲಿಲ್ಲ. ಒಂದು ವೇಳೆ ಆಕೆ ತಿರುಗಿ ಎರಡು ಕೊಟ್ಟರೆ ಎಂದು ಭಯವಾಗಿ ಆ ಯೋಜನೆ ಕೈ ಬಿಟ್ಟ.

ಮಕ್ಕಳ ಇನ್ಸ್ಪೆಕ್ಷನ್ ಮಾಡಿ ಕೆದರಿದ ಕೂದಲು, ಮಣ್ಣುಗಟ್ಟಿದ ಉಗುರು, ಕೊಳೆಯಾದ ಕಾಲ್ಚೀಲ, ಹರಿದ ಸ್ಕೂಲ್ ಬ್ಯಾಗು, ಸೋರುವ ಮೂಗು, ಸಂಪೂರ್ಣವಾಗದ ಹೋಂ ವರ್ಕು, ಸಂತೃಪ್ತಿ ತರದ ಮಾರ್ಕ್ಸ್ ಕಾರ್ಡನ್ನು ನೆಪವಾಗಿಟ್ಟುಕೊಂಡು ಕತ್ತೆಗೆ ಒದ್ದ ಹಾಗೆ ಒದೆಯೋಣ ಅಂದುಕೊಂಡ. ಆದರೆ ಮಕ್ಳು ತನಗಿಂತ ಜಾಣ್ರು ತನಗಿಂತ ಸ್ವಚ್ಛವಾಗಿವೆ. ಅಪ್ಪ, ಊಟ ಮಾಡೋ ಮುಂಚೆ ಕೈ ತೊಳೀಬೇಕು ಅಂತ ನಂಗೇ ಪಾಠ ಹೇಳಿಕೊಡಲು ಬರ್ತವೆ. ಹೋಂವರ್ಕ್ ನೋಡೋಕೆ ಹೋದ್ರೆ ಅಪ್ಪ ನಿಂಗೆ ಟ್ರಿಗ್ನಾಮೆಟ್ರಿ ಗೊತ್ತಾ ಅಂತ ನಮ್ ಹೈಸ್ಕೂಲು ಮೇಷ್ಟ್ರು ಹೆದರಿಸ್ತಿದ್ದ ಹಾಗೆ ಹೆದರಿಸ್ತಾರೆ!

ಇನ್ನೇನು ಮಾಡಲು ತೋಚದೆ ಕುಚೇಲ ಸಾಮ್ರಾಟರ ಬಳಿ ಬರುತ್ತಾನೆ. ಯಾರನ್ನು ಒದೆಯಲಿ ಎನ್ನುತ್ತಾ ತಲೆ ಕೆರೆದು ನಿಲ್ಲುತ್ತಾನೆ. ಸಾಮ್ರಾಟರು ಆತನಿಗೆ ಪೂರ್ವಕ್ಕೆ ಮುಖ ಮಾಡಲು ಹೇಳಿ ಜಾಡಿಸಿ ಒದೆಯುತ್ತಾರೆ. “ನಂಗೂ ಬೆಳಗಿಂದ ಇದೇ ಚಿಂತೆ ಆಗಿತ್ತು” ಎಂದು ಹಾಯಾಗಿ ಹೊರಟು ಹೋಗುತ್ತಾರೆ!

(ಚಿತ್ರ ಕದ್ದದ್ದು ಇಲ್ಲಿಂದ: http://www.ismennt.is/not/briem/text/3/31/311.what.works.html )

ಭಜ್ಜಿ ಸಿಂಗಿಗೆ ಶಾಂತನಿಂದ ಕೋಚಿಂಗ್

7 ಜುಲೈ

(ನಗೆ ನಗಾರಿ ಕ್ರೀಡಾ ಬ್ಯೂರೋ)

ದೇಶ ಬಿಟ್ಟು ನೂರಾರು ಮೈಲು ದೂರ ಹಾರಿ ಹೋಗಿ ಅಲ್ಲಿನ ತಂಡದ ಆಟಗಾರನೊಬ್ಬನಿಗೆ ತನ್ನ ಭಾಷೆಯಲ್ಲಿಯೇ ‘ತೆರೆ ಮಾ ಕೀ..’ ಎಂದು ಮೈದನದಲ್ಲೇ ಬೈದು ಅದನ್ನು ಆ ಆಸ್ಟ್ರೇಲಿಯನ್ನು ‘ಮಂಕೀ’ ಎಂದು ಅರ್ಥೈಸಿಕೊಂಡು ಅವಮಾನಿತನಾದವನಂತೆ ನಟಿಸಿ ಕೇಸು ಜರುಗಿಸಿ ಸುಸ್ತಾದದ್ದು ಹಳೆಯ ಸಂಗತಿಯಾದರೂ ಆ ಮಂಕೀ ವೀರನಿಗೆ ಟಾಂಗುಕೊಟ್ಟ ಹರ್‌ಭಜನ್ ಸಿಂಗ್ ದೇಶದ ಜನರ ಕಣ್ಣಿನಲ್ಲಿ ಹೀರೋ ಆಗಿದ್ದ. ಅವನ ವಿರುದ್ಧ ಪ್ರಪಂಚದ ಪತ್ರಿಕೆಗಳೆಲ್ಲಾ ಮುರಕೊಂಡು ಬಿದ್ದರೂ ನಮ್ಮ ಜನರು ಎರಡೂ ಕೈಚಾಚಿ ಆತನನ್ನು ಬರಸೆಳೆದು ಅಪ್ಪಿಕೊಂಡರು. ಏನೋ ಸ್ವಲ್ಪ ಒರಟ ಅನ್ನೋ ಕಾರಣಕ್ಕೆ ಮನೆ ಮಗನನ್ನು ದೂರಲು ಸಾಧ್ಯವಾಗುತ್ತದೆಯೇ ನೀವೇ ಹೇಳಿ. (ಅಲ್ಲದೆ ಒರಟ ಐ ಲವ್ ಯೂ ಎಂದು ಹಾಡುವವರ ನಾಡು ನಮ್ಮದು!)

ದುಡ್ಡಿನ ಜಾತ್ರೆಯ ನೆಪದಲ್ಲಿ ನಲವತ್ತು ಚಿಲ್ಲರೆ ದಿನಗಳಲ್ಲಿ ಆಡಿಸಿದ ಕ್ರಿಕೆಟ್ ಎಂಬ ಆಟದಲ್ಲಿ ನಮ್ಮ ಭಜ್ಜಿ ರಾಂಗಾದದ್ದನ್ನು ಯಾರೂ ಮರೆತಿಲ್ಲ. ತನ್ನ ತಂಡ ಹೀನಾಯವಾಗಿ ಸೋತಾಗ ಎದುರಾಳಿ ತಂಡದಲ್ಲಿರುವ ತನ್ನದೇ ಸಹೋದ್ಯೋಗಿಗೆ ಕಪಾಳಮೋಕ್ಷ ಮಾಡಿದ. ಅವನ ಸಿಟ್ಟು, ಒರಟುತನ ಗೊತ್ತಿದ್ದವರಿಗೇ ಗಾಬರಿಯಾಯಿತು. ಸೋಲು ಗೆಲುವನ್ನು ಕ್ರೀಡಾ ಮನೋಭಾವದಿಂದ ತೆಗೆದುಕೊಳ್ಳಬೇಕು ಎಂದು ಬುದ್ಧಿ ಮಾತು ಹೇಳಲು ಹೋದರೆ ನಮ್ಮ ಕೆನ್ನೆಗೊಂದು ಬಾರಿಸಿ ‘ಇದೂ ಕ್ರೀಡಾ ಮನೋಭಾವವೇ, ಬಾಕ್ಸಿಂಗಿನದು’ ಎನ್ನಬಹುದು ಎಂಬ ಭಯದಿಂದ ಬುದ್ಧಿಜೀವಿಗಳು ತೆಪ್ಪಗಾದರು. ಸಿಂಗಿಗೆ ಪನಿಶ್ ಮೆಂಟ್ ಕೊಟ್ಟು ಶಾಂತನಿಗೆ ಉಶ್..ಉಶ್ ಮಾಡಿ ಕೈತೊಳೆದುಕೊಂಡರು.

ಕೆನ್ನೆಗೆ ಬಾರಿಸಿದ ತಪ್ಪಿಗಾಗಿ ಭಜ್ಜಿ ಈಗ ಶಾಂತನಿಗೆ ಕಂಡಕಂಡಲ್ಲಿ ಡಿನ್ನರ್ ಕೊಡಿಸುವ ಕರ್ಮ ಅಂಟಿಸಿಕೊಂಡಿದ್ದಾನೆ. ಈ ನಡುವೆ ಬೇರಾವ ಪತ್ರಿಕೆ, ನ್ಯೂಸ್ ಚಾನಲ್ಲು, ಟ್ಯಾಬಲಾಯ್ಡು, ಸುದ್ದಿ ಸಂಸ್ಥೆಗಳಿಗೆ, ಬೊಗಳೆ ಮಜಾದ ಬ್ಯೂರೋಗೂ ದಕ್ಕದ ಸುದ್ದಿ ನಗೆ ನಗಾರಿಯ ಒನ್ ರೂಂ ಕಚೇರಿಯನ್ನು ತಲುಪಿದೆ.

ಅದೇನೆಂದರೆ ಐಪಿಎಲ್ ಎಂಬ ಹಣದ ತೈಲಿಯ ಜಾತ್ರೆಯ ನೆಪದಲ್ಲಿ ನಡೆಯುವ ಕ್ರಿಕೆಟ್ ಆಟದಲ್ಲಿ ಭಾರೀ ಕಾಸನ್ನು ಹೂಡಿರುವ ಕುಳಕ್ಕೆ ಸಿಂಗನ ಬಗ್ಗೆ ಚಿಂತೆಯಾಗಿದೆಯಂತೆ. ಆತನ ಕೋಪಕ್ಕೆ, ಒರಟುತನಕ್ಕೆ ಒಳ್ಳೆ ಇಲಾಜು ಕೊಡಿಸಬೇಕೆಂದು ಆತ ಅವನನ್ನು ಕೋಚಿಂಗಿಗೆ ಕಳುಹಿಸುತ್ತಿದ್ದಾನಂತೆ. ಯಾರ ಬಳಿ ಅಂದಿರಾ? ನಂಬ್ತೀರೋ ಬಿಡ್ತೀರೋ ಕೇಳಿ, ಶಾಂತನ ಬಳಿ! ಹೌದು ಹೌಹಾರಬೇಡಿ. ಈ ಹಿಕಮತ್ತಿನ ಹಿಂದಿನ ಮರ್ಮ ತಿಳಿಯಲು ನಗೆ ಸಾಮ್ರಾಟರು ತಮ್ಮ ಚೇಲ ಕುಚೇಲನನ್ನು ಅಟ್ಟಿದ್ದು ವರದಿ ಈಗ ತಾನೆ ಟೆಲಿ ಪ್ರಿಂಟರಿನಿಂದ ತಲೆಗೆ ಹಾರಿದೆ.

ಅದು ಆಸ್ಟ್ರೇಲಿಯಾದ ಆಂಡ್ರೂ ಸಾಯಿ-ಮೊಂಡನೇ ಆಗಿರಲಿ, ಹೇ-ಡಾನ್ ಆಗಲಿ, ಸೋತ ಆಫ್ರಿಕಾದ ಆಂಡ್ರೂ ನೆಲ್ಲಿಯಾಗಲಿ ಎಲ್ಲರ ವಿರುದ್ಧವೂ ಮೂಗಿನ ಹೊಳ್ಳೆ ಅಗಲಿಸಿಕೊಂಡು ಡ್ರಾಗನ್ನಿನ ಹಾಗೆ ಘರ್ಜಿಸುವ ಶಾಂತನಿಗೆ ಏಕೆ ಯಾರೂ ಶಿಕ್ಷೆ ವಿಧಿಸಿಲ್ಲ? ಅದಕ್ಕೆ ಕಾರಣವಿದೆ. ಶಾಂತನು ತನ್ನ ಎದುರಾಳಿಯ ಮೇಲಿನ ಸಿಟ್ಟು, ಸೆಡುವುಗಳನ್ನೆಲ್ಲಾ ಹೊರಹಾಕಲು ಅತ್ಯಂತ ಚಾಣಾಕ್ಷವಾದ ವಿಧಾನವೊಂದನ್ನು ಕಂಡುಕೊಂಡಿದ್ದಾನಂತೆ. ಕ್ರಿಕೆಟ್ ಮೈದಾನದ ಪಿಚ್‌ನ್ನೇ ಎದುರಾಳಿಯ ಕೆನ್ನೆ ಎಂದುಕೊಂಡು ಅದಕ್ಕೇ ತನ್ನೆರಡು ಹಸ್ತಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವಷ್ಟು ಹೊತ್ತು ‘ನಗಾರಿ’ ಬಾರಿಸುತ್ತಾನಂತೆ. ಇತ್ತ ಹಾವೂ ಸಾಯಬೇಕು ಅತ್ತ ಕೋಲೂ ಮುರಿಯಬಾರದು ಎಂಬ ಬುದ್ಧಿವಂತಿಕೆ. ಇದನ್ನು ಕಲಿಯುವುದಕ್ಕೆ ಭಜ್ಜಿಯನ್ನು ಶಾಂತನ ಬಳಿಗೆ ಕೋಚಿಂಗಿಗೆ ಕಳಿಸಲಾಗುತ್ತಿದೆಯಂತೆ. ಹೀಗಾಗಿ ಭಜ್ಜಿ ಶಾಂತನಿಗೆ ಬಿಟ್ಟಿ ಡಿನ್ನರುಗಳಿಗೆ ಕರೆಯುವ ಅನಿವಾರ್ಯತೆಯಿದೆಯಂತೆ.

ಈ ಮಧ್ಯೆ ನಮ್ಮ ವರದಿ ಮಧ್ಯದಲ್ಲೆಲ್ಲೋ ಲೀಕ್ ಆಗಿ ಕ್ರಿಕೆಟ್ ಮೈದಾನದ ಅಂಗಳದ ಕ್ಯೂರೇಟರ್‌ ನಮ್ಮನ್ನು ಸಂಪರ್ಕಿಸಿ ಈ ಸುದ್ದಿಯಿಂದ ನಮಗೆ ತೀವ್ರವಾದ ಹಾನಿಯಾಗುತ್ತದೆ. ಎಲ್ಲಾ ಕ್ರಿಕೆಟ್ ಮಂದಿಯೂ ಶಾಂತನ ಟೆಕ್ನಿಕ್ ಬಳಸಲು ಶುರು ಮಾಡಿಕೊಂಡರೆ ನಮ್ಮ ಪಿಚ್ಚುಗಳ ಕೆನ್ನೆ ಜಖಂ ಗೊಳ್ಳುತ್ತದೆ ಎಂದು ಅವರು ತಮ್ಮ ಆತಂಕ ತೋಡಿಕೊಂಡಿದ್ದಾರೆ.