ತಾವೇ ಹಾಕಿಕೊಂಡ ಆದರೆ ಎಂದೂ ಪಾಲಿಸದ ವೇಳಾಪಟ್ಟಿಯ ಪ್ರಕಾರ ಇಂದು ಸಾಮ್ರಾಟರು ಸಂತಾಪಕೀಯವನ್ನು ಪ್ರಕಟಿಸಬೇಕಿತ್ತು. ಮಧ್ಯ ರಾತ್ರಿ ಹನ್ನೆರಡು ಘಂಟೆ ಕಳೆದು ಇಷ್ಟು ಹೊತ್ತಾದರೂ ಸಾಮ್ರಾಟರು ಕೀಬೋರ್ಡಿಗೆ ಅಂಗೈ ತೋರಿಸುವ ಲಕ್ಷಣವೂ ಕಾಣಲಿಲ್ಲ. ಇದು ಒಂದು ದಿನದ ಗೋಳಲ್ಲ, ನಗಾರಿ ಪ್ರಾರಂಭವಾದ ದಿನದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ.
ಉನ್ನತವಾದ ಕಾಲೇಜಿನ ಕಲಾ ವಿಭಾಗದಲ್ಲಿ ಓದಿ ಚಿನ್ನದ ಪದಕವನ್ನು ಎರಡು ಅಂಕಗಳಲ್ಲಿ ತಪ್ಪಿಸಿಕೊಂಡ ವಿದ್ಯಾರ್ಥಿ ನಾನು. ಎರಡು ಅಂಕ ಕಡಿಮೆ ಗಳಿಸಿದ ತಪ್ಪಿಗಾಗಿ ಏನೋ ಎಂಬಂತೆ ಸಾಮ್ರಾಟರ ಬಳಿ ಇಂಟರ್ನ್ ಆಗಿ ಸೇರಿಕೊಂಡೆ. ತೆಹೆಲ್ಕಾ ಡಾಟ್ ಕಾಮ್ ಪ್ರಸಿದ್ಧಿಯಲ್ಲಿದ್ದ ದಿನದಿಂದ ನಗೆ ನಗಾರಿ ಡಾಟ್ ಕಾಮ್ ನಂತಹ ಬಹುದೊಡ್ಡ ಸಂಸ್ಥೆಯಲ್ಲಿ ನಾನು ಕೆಲಸ ಮಾಡಿದರೆ ನನ್ನ ಭವಿಷ್ಯವು ಉಜ್ವಲವಾಗಿರುವುದು. ನಾನು ಮುಖ ತೋರಿದೆಡೆಯೆಲ್ಲಾ ಕೆಲಸಕ್ಕೆ ಆಹ್ವಾನಗಳು ತೂರಿ ಬರುವವು. ನೀಳ ಜಡೆಯ ಹುಡುಗಿಯರು ನನ್ನ ಶರ್ಟಿನ ಚುಂಗು ಎಳೆಯುತ್ತ ಒಂದು ಜೋಕು ಹೇಳು ಎಂದು ಪೀಡಿಸುವರು. ಆ ಮುದ್ದಾದ ಚಿತ್ರಗಳಿಗೆ ಚುರುಕಾದ ಅಡಿ ಬರಹಗಳನ್ನು ಕೊಡುತ್ತಿದ್ದವನು ನೀನೇನಾ ಎಂದು ಕಂಡವರೆಲ್ಲಾ ಹುಬ್ಬೇರಿಸುವರು ಎಂದೆಲ್ಲಾ ಕನಸು ಕಾಣುತ್ತ ದಿನ ತಳ್ಳುತ್ತಿದ್ದವನಿಗೆ ಸಾಮ್ರಾಟರಿಂದ ಮುಕ್ತಿಯೇ ಇಲ್ಲದಾಗಿ ಹೋಯಿತು.
ನನ್ನ ಬಗ್ಗೆ ಮಾತೆತ್ತಿದರೆ ‘ನಮ್ಮ ಅತ್ಯಾಪ್ತ ಚೇಲ ಕುಚೇಲ’ ಎಂದು ಸಕ್ಕರೆಯ ಮಾತನಾಡುವ ಸಾಮ್ರಾಟರು ಇಷ್ಟು ದಿನಗಳಲ್ಲಿ ನನಗೆ ನೀಡಿದ ಹಿಂಸೆಯನ್ನು ಪಟ್ಟಿ ಮಾಡಲು ಇದು ಯೋಗ್ಯವಾದ ಸ್ಥಳವಲ್ಲ. ಅವರು ಹೇಳಿದ್ದನ್ನೆಲ್ಲ ಮಾಡಿಕೊಂಡು, ಅವರು ಅಟ್ಟಿದಲ್ಲೆಲ್ಲಾ ಓಡಿ ಅಲೆದಾಡಿಕೊಂಡು ಇದ್ದೆ. ನಾನು ಬರೆದ ವರದಿಗಳಿಗೆಲ್ಲಾ ತಮ್ಮ ಹೆಸರೇ ಹಾಕಿಕೊಂಡು ಸಾಮ್ರಾಟರು ಮೆರೆಯುವಾಗ ನನಗೆ ಅಷ್ಟಾಗಿ ಬೇಸರವಾಗುತ್ತಿರಲಿಲ್ಲ. ಒಂದಲ್ಲ ಒಂದು ದಿನ ನನಗೂ ಕಾಲ ಕೂಡಿ ಬರುತ್ತದೆ. ಆಗ ಜಗತ್ತೇ ನನ್ನ ಬೆರಳ ಸನ್ನೆಯಿಂದ ಕುಣಿಯುತ್ತದೆ ಎಂದುಕೊಂಡಿದ್ದೆ. ಸಾಮ್ರಾಟರ ಮಹಿಮೆಯಿಂದ ಆ ದಿನ ಎಂದಿಗೂ ಬರುವುದಿಲ್ಲ ಎಂದು ಮೆಲ್ಲಗೆ ಅರಿವಾಗುತ್ತಿದೆ. ಸಾಮ್ರಾಟರೊಡನೆ ಕೆಲಸ ಮಾಡಿದೆ ಎಂದು ಹೇಳಿಕೊಂಡದ್ದಕ್ಕೆ ನಾಲ್ಕು ಕಛೇರಿಗಳಲ್ಲಿ ಕೈಲಿ ಹಿಡಿದಿದ್ದ ಫೈಲು ಕಸಿದುಕೊಂಡು ಹೊರದಬ್ಬಿದರು. ಒಬ್ಬ ಯಜಮಾನರಂತೂ ಜೇಬಲ್ಲಿದ್ದ ಐವತ್ತು ರುಪಾಯಿ, ಬಿಎಂಟಿಸಿ ದಿನದ ಪಾಸನ್ನು ಕಿತ್ತುಕೊಂಡು ಹೊರಗಟ್ಟಿದರು. ಸಾಮ್ರಾಟರ ಹೆಸರು ಹೇಳುತ್ತಿದ್ದಂತೆಯೇ ‘ನೋ ವೇಕೆನ್ಸಿ’ ಎಂದವರು ಅನೇಕರು. ಹೀಗೆ ನಾನು ಎಲ್ಲೆಲ್ಲಿ ಹೋದರೂ ಸಾಮ್ರಾಟರ ಹೆಸರಿನ ಕರಾಳ ನೆರಳು ಅದಾಗಲೇ ಅಲ್ಲಿ ಉಪಸ್ಥಿತವಿರುತ್ತಿತ್ತು.
ಹಳೆ ಗಂಡನ ಪಾದವೇ ಗತಿಯೆಂಬ ಗರತಿಯ ಅನುಭವ ವಾಕ್ಯವನ್ನು ರಕ್ತಗತವಾಗಿಸಿಕೊಂಡು ನಾನು ವಾಪಸ್ಸು ಸಾಮ್ರಾಟರ ಬಳಿ ಬಂದಿರುವೆ. ಆದರೆ ಈ ಬಾರಿ ಸಾಮ್ರಾಟರ ಚೇಲನಾಗಿಯಷ್ಟೇ ಉಳಿಯಲು ಬಂದಿಲ್ಲ. ಸಾಮ್ರಾಟರ ಸಾಮ್ರಾಜ್ಯಕ್ಕೆ ಅನಭಿಷಿಕ್ತ ಯುವರಾಜನಾಗುವ ಹುಮ್ಮಸ್ಸಿನಿಂದ ಬಂದಿದ್ದೇನೆ.
ಇಷ್ಟು ದಿನ ನಗಾರಿಯು ಬಾಲ್ಯಾವಸ್ಥೆಯಲ್ಲಿತ್ತು ಎನ್ನಬಹುದು. ಬಾಲಿಶವಾದ ಹಾಸ್ಯವೇ ಇದರ ಜೀವಾಳವಾಗಿತ್ತು. ಆಗಾಗ ಸಾಮ್ರಾಟರು ತಮ್ಮತನವನ್ನೂ ಮೀರಿದ ಅದ್ಭುತ ಹಾಸ್ಯವನ್ನು ಹುಟ್ಟಿಸುತ್ತಿದ್ದರು ಎನ್ನುವುದನ್ನು ಹೊರತು ಪಡಿಸಿದರೆ ಉಳಿದದ್ದೆಲ್ಲವೂ infantile ಆದ ನಗೆ ಬರಹಗಳೇ ಆಗಿರುತ್ತಿದ್ದವು. ಇನ್ನು ನನ್ನ ಸುಪರ್ದಿಗೆ ಬಂದಿರುವ ನಗಾರಿಗೆ ಯೌವನದ ಹೊಳಪನ್ನು ನೀಡಲು ನಾನು ಯತ್ನಿಸುವೆ. ಬಾಲಿಶತನವನ್ನೂ ಹೊಂದಿದ್ದು ಅದನ್ನು ಮೀರಲು ಯತ್ನಿಸುವ ಯುವಕನ ಹುಮ್ಮಸ್ಸನ್ನು ನಗಾರಿಯ ಬರಹಗಳಲ್ಲಿ ತುಂಬುವತ್ತ ಪ್ರಾಮಾಣಿಕ ಪರಿಶ್ರಮ ವಿನಿಯೋಗಿಸುವೆ. ಸಾಮ್ರಾಟರು ನಗಾರಿಯ ದೊರೆಗಳಾಗಿ ಮುಂದುವರೆಯುತ್ತಾರಾದರೂ ನಗಾರಿಯ ಆಗು ಹೋಗುಗಳಲ್ಲಿ ನಾನೇ ಸಕ್ರಿಯವಾಗಿ ಪಾಲ್ಗೊಳ್ಳುವೆ. ಇನ್ನು ಮೇಲೆ ಸಾಮ್ರಾಟರು ನನ್ನನ್ನು ಎಲ್ಲಿಯೂ ಅಟ್ಟುವುದಿಲ್ಲ ಎನ್ನುವ ವಿಶ್ವಾಸ ನನ್ನದು.
ಕಾಲವು ಬಹು ವೇಗವಾಗಿ ಬದಲಾಯಿಸುತ್ತಿದೆ. ವ್ಯಂಗ್ಯ ಎಂದು ನಾವು ಪರಿಗಣಿಸಿದ್ದು ವಾಸ್ತವವೇ ಆಗಿ ಸ್ಥಾಪಿತವಾಗುತ್ತಿದೆ. ವಾಸ್ತವವೇ ದೊಡ್ಡ ವ್ಯಂಗ್ಯವಾಗಿ ನಮ್ಮನ್ನು ಪರಿಹಾಸ್ಯ ಮಾಡುತ್ತಿದೆ. ಕೈಲಿ ಲಟ್ಟಣಿಗೆ ಹಿಡಿದು, ಸೊಂಟಕ್ಕೆ ಸೆರಗು ಸಿಕ್ಕಿಸಿಕೊಂಡು ಎದೆ ಸೆಟೆಸಿ ನಿಂತ ಹೆಂಡತಿ, ಹಣೆಯ ಮೇಲೆ ಬುಗುಟು ಎದ್ದು, ಸತ್ತೆನೋ ಕೆಟ್ಟೆನೋ ಎಂದು ಓಡುವ ಪತಿ- ಎನ್ನುವುದು ವ್ಯಂಗ್ಯವಾಗಿ ಉಳಿದೇ ಇಲ್ಲ ಎನ್ನುವುದನ್ನು ಭೈರಪ್ಪರಂತಹ ಹೆಸರಾಂತ ಕಾದಂಬರಿಕಾರರು ನಿರೂಪಿಸುವ ವಾಸ್ತವವಾಗಿ ಹೋಗಿದೆ. ಒಬ್ಬರ ಮೇಲೆ ಇನ್ನೊಬ್ಬರು ನೂರಾರು ಕೋಟಿ ರೂಪಾಯಿಗಳ ಭ್ರಷ್ಠಾಚಾರದ ಆರೋಪ ಮಾಡಿ, ತಮ್ಮ ಬಳಿ ಇರುವ ಸಾಕ್ಷ್ಯಗಳ ಸತ್ಯಾಸತ್ಯತೆಯ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದ ಜನಾರ್ದನ ರೆಡ್ಡಿ, ಕುಮಾರಸ್ವಾಮಿಗಳು ಕರ್ನಾಟಕದ ರಾಜಕೀಯದ ವಾಸ್ತವವನ್ನೇ ದೊಡ್ಡ ವ್ಯಂಗ್ಯವಾಗಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಹಾಸಿಗೆಯಲ್ಲಿ ಸೇರಿಕೊಂಡ ತಿಗಣೆಯ ಬಗ್ಗೆಯೇ ವಿನೋದ ಮಾಡುತ್ತ ಕೂರುವ ಸಾಮ್ರಾಟರನ್ನು ನೆಚ್ಚಿಕೊಂಡರೆ ಉಪಯೋಗವಿಲ್ಲ.
ಸಾಮ್ರಾಟರ ವಿನೋದದಲ್ಲಿ ವಿವೇಕವೇ ಹೆಚ್ಚು ಇರುತ್ತದೆ. ಅವರ ವಿನೋದಕ್ಕೆ ನನ್ನ ತಕರಾರುಗಳು ಎರಡು ರೀತಿಯವು. ಓದುಗರು ತಮ್ಮಿಂದ ವಿವೇಕ ಹೇಳಿಸಿಕೊಳ್ಳುವಂಥವರು ಎಂದು ಭಾವಿಸುವುದು ಸಾಮ್ರಾಟರ ಅಹಂಕಾರವನ್ನು ತೋರುತ್ತದೆ ಎನ್ನುವುದು ಮೊದಲ ತಕರಾರು. ಎರಡನೆಯದು, ವಿವೇಕವನ್ನು ವಿನೋದವಾಗಿ ಹೇಳಲು ಹೊರಟರೆ ಓದಿದವರೂ ಸಹ ವಿನೋದದಿಂದಲೇ ಅದನ್ನು ಮರೆತು ಮುಂದೆ ಹೋಗುತ್ತಾರೆ.
ನಗೆ ನಗಾರಿಯ ವಿನೋದವು ಹರಿತವಾಗಿಲ್ಲ. ವಿನೋದಕ್ಕೆ ಈಡು ಮಾಡಿದ ವ್ಯಕ್ತಿಯ ನಿಜ ನಾಮಧೇಯವನ್ನು ಬಳಸದಿರುವುದು ಸಾಮ್ರಾಟರ ಪುಕ್ಕಲುತನವನ್ನು ತೋರುತ್ತದೆ. ನಿಜ ಸನ್ನಿವೇಶಗಳು, ನಿಜ ವ್ಯಕ್ತಿಗಳು, ನಿಜವಾದ ಘಟನೆಗಳೇ ವಿನೋದಕ್ಕೆ, ವ್ಯಂಗ್ಯಕ್ಕೆ ಈಡಾಗಬೇಕು. ಆಗಲೇ ವ್ಯಂಗ್ಯದ ನಿಜವಾದ ಸತ್ವ ಹೊರತರಲಿಕ್ಕೆ ಸಾಧ್ಯ. ದೇಜಗೌ ತಮ್ಮನ್ನು ತಾವು ದಶರಥ, ಮೋತಿಲಾಲ ಎಂದು ಕರೆದುಕೊಳ್ಳುವುದು, ರಾಮುಲು ತಾನು ಯಾವುದೇ ರೀತಿಯಿಂದಲೂ ಚೆಂದ ಕಾಣಿಸಬಾರದೆಂದು ತಲೆ ಬೋಳಿಸಿಕೊಳ್ಳುವುದು, ರಾಹುಲ್ ಗಾಂಧಿ ತನ್ನ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ ಎಂದು ಹಲುಬುವುದು, ರವಿ ಬೆಳಗೆರೆ ತನ್ನ ಕೈಲಿನ್ನು ಆಗಲ್ಲ ಎಂದು ಬರೆದುಕೊಳ್ಳುವುದು ಎಲ್ಲವೂ ನಗಾರಿಯ ಮೊನಚಾದ ಹಾಸ್ಯಕ್ಕೆ ಈಡಾಗಬೇಕು. ಇದು ನನ್ನ ವಿಶನ್.
ಸಾಮ್ರಾಟರಷ್ಟು ನಿರರ್ಗಳವಾಗಿ ನನಗೆ ಬರೆಯಲು ಸಾಧ್ಯವಾಗದಿರಬಹುದು. ಅವರಷ್ಟು ಬುದ್ಧಿವಂತಿಕೆಯಿಂದ ಪ್ರತಿಕ್ರಿಯೆ ನೀಡಲು ನನಗೆ ಬಾರದಿರಬಹುದು. ಆದರೆ ಬೆಳೆಯುವ ಆಕಾಂಕ್ಷೆಯಿರುವ ನಾನು ನಗಾರಿಯಲ್ಲಿ ಅತ್ಯುತ್ತಮವಾದದ್ದೇ ಪ್ರಕಟವಾಗುವಂತೆ ನೋಡಿಕೊಳ್ಳುವೆನು.
ಸಾಮ್ರಾಟರೆ, ಸೈಡು ಬಿಡಿ!
ಟ್ಯಾಗ್ ಗಳು:ಇಂಟರ್ನ್, ಕುಚೇಲವಾಣಿ, ಕೆಲಸ, ವಿನೋದ, ಸಾಮ್ರಾಟ್, ಹಾಸ್ಯ, kuchela
ಇತ್ತೀಚಿನ ಪ್ರಜಾ ಉವಾಚ