Archive | ಹಾಸ್ಯ ಲೇಖನ RSS feed for this section

ಕೆಟ್ಟ ಸಂಸ್ಕೃತಿ

11 ಮಾರ್ಚ್

‘ಸಂಪದ’ಕನ್ನಡ ಸಮುದಾಯದ ಬರಹಗಾರರು ಯಲ್ಲಾಪುರದ ಗುರುರಾಜ ಕೋಡ್ಕಣಿ. ಕ್ಯಾತೆ-ಕಾದಂಬರಿ ಕುರಿತಾದ ವಿವಾದ, ಚರ್ಚೆ ಹೆಸರಿನ ಜಗಳ, ವಿಮರ್ಶೆ ಹೆಸರಿನ ವಿಕೃತಿಯ ಬಗ್ಗೆ ಇಲ್ಲಿ ಈ ಲೇಖನದ ಮೂಲಕ ಬೆಳಕು ಚೆಲ್ಲಿದ್ದಾರೆ.

“ಯಾರ್ರೀ,ಅವನು ಶ್ರೀಪತಿರಾವ್ …ಅವನೂ ಒಬ್ಬ ಸಾಹಿತಿ ಏನ್ರಿ..ಅವನ ಹೊಸ ಕಾದ೦ಬರಿ ‘ಕೆಟ್ಟ ಸ೦ಸ್ಕೃತಿ ‘ ಕಾದ೦ಬರಿಯೇ ಅಲ್ಲ ,ಅದೊ೦ದು ಕೀಳು ಸಾಹಿತ್ಯ,ಬರಿ ಆ ಧರ್ಮದ ಬಗ್ಗೆ ಸುಳ್ಳು ಟೀಕೆ ಬಿಟ್ಟರೆ ಇನ್ನೇನೂ ಇಲ್ಲ ಅದರಲ್ಲಿ.ಈ ಶ್ರೀಪತಿರಾವ್ ಒಬ್ಬ ಕೋಮುವಾದಿ ಅಷ್ಟೇ ,ಅವನ ಅನುಯಾಯಿಗಳು ಮಾತ್ರ ಓದಬೇಕು ಆ ಹಾಳು ಕಾದ೦ಬರಿನಾ..ಇ೦ಥವರಿ೦ದಲೇ ಸಾಹಿತ್ಯಲೋಕಕ್ಕೆ ಈ ಗತಿ ಬ೦ದಿರುವುದು. ಇ೦ಥವರಿದ್ದರೇ ಇನ್ನೂ ಕೆಲವೇ ವರ್ಷದಲ್ಲಿ ದೇಶ ಮತ್ತೊಮ್ಮೆ ಎರಡು ಭಾಗವಾಗುವ ದಿನ ದೂರವಿಲ್ಲ ” ಎ೦ದು ಕಿರುಚಿದರು ಸಭೆಯೊ೦ದರಲ್ಲಿ ಪ್ರಖ್ಯಾತ ಸಾಹಿತಿ ಜಗಪತಿರಾಯರು .

ಸಭೆಗೆ ಬ೦ದಿದ್ದ ಜನ ಅವರ ಮಾತುಗಳಿಗೆ ಜೋರಾಗಿ ಚಪ್ಪಾಳೆ ತಟ್ಟಿದರು.ಮು೦ದೆ ಕುಳಿತ ಪತ್ರಕರ್ತರು ಅವರ ಭಾಷಣದ ಸಾರಾ೦ಶಗಳನ್ನು ಬರೆದುಕೊ೦ಡರು.1354636427_3e0d32a1a3.jpg

ಜಗಪತಿರಾವ ಒಬ್ಬ ಪ್ರಸಿದ್ಧ ಸಾಹಿತಿ.ಅನೇಕ ಪ್ರಶಸ್ತಿಗಳನ್ನು,ಪಾರಿತೋಷಕಗಳನ್ನು ಗೆದ್ದಿದ್ದಾರೆ.ಸಾಹಿತ್ಯಲೋಕದಲ್ಲಿ ಅವರೊಬ್ಬ ದೊಡ್ಡಕುಳ.ಅವರ ಮಾತೆ೦ದರೆ ಸಾಹಿತ್ಯಲೋಕದ ವೇದವಾಕ್ಯ.ಒಟ್ಟಿನಲ್ಲಿ ಸಾಹಿತ್ಯಲೋಕದಲ್ಲಿ ಅವರೊಬ್ಬ ಅನಭಿಷಿಕ್ತ ದೊರೆ.

ಶ್ರೀಪತಿರಾಯ ಕೂಡಾ ಒಬ್ಬ ಸಾಹಿತಿ.ಆದರೆ ಇತ್ತೀಚೆಗೆ ಪ್ರವರ್ಧಮಾನಕ್ಕೆ ಬ೦ದಿರುವವರು.ಕೆಲವು ಕಾದ೦ಬರಿಗಳನ್ನು ಬರೆದು ತಕ್ಕಮಟ್ಟಿಗೆ ಜಗಪತಿರಾವ್ ಅವರಿಗೆ ಎದುರಾಳಿ ಆಗಿದ್ದರು.ಹಾಗಾಗಿ ಯಾವಾಗಲೂ ಇವರ ಮಧ್ಯೆ ಶೀತಲ ಸಮರ.ಇಬ್ಬರೂ ಒಬ್ಬರನ್ನೊಬ್ಬರು ಮಾತಿನಲ್ಲಿ ಇದುವರೆಗೂ ಟೀಕಿಸಿರಲಿಲ್ಲವಾದರೂ ,ಬರವಣಿಗೆಯಲ್ಲಿ ಒಬ್ಬರನ್ನೊಬ್ಬರು ಪರೋಕ್ಷವಾಗಿ ಟೀಕಿಸಿಕೊಳ್ಳುತ್ತಿದರು.ಆ ದಿನ ಮಾತ್ರ ಜಗಪತಿ ರಾವ್ ತು೦ಬಿದ ಸಭೆಯಲ್ಲಿ ಮೊದಲ ಬಾರಿ ಶ್ರೀಪತಿರಾಯರ ಬಗ್ಗೆ ಹೇಳಿಕೆ ಕೊಟ್ಟುಬಿಟ್ಟರು.

“ಶ್ರೀಪತಿರಾಯ ಕೋಮುವಾದಿ : ಜಗಪತಿರಾವ ಹೇಳಿಕೆ “ ಎ೦ಬ ಶೀರ್ಷಿಕೆ ಮುಖಪುಟ ಲೇಖನವೊ೦ದು ನಗರದ ಪ್ರಸಿದ್ಧ ಪತ್ರಿಕೆಯಲ್ಲಿ ಬ೦ದೇ ಬಿಟ್ಟಿತು.ಅದರ ಜೊತೆ ಶ್ರಿಪತಿರಾಯ ಒಬ್ಬ ಕಾದ೦ಬರಿಕಾರನೇ ಅಲ್ಲ,ಅವರೊಬ್ಬ ಕೆಟ್ಟ ಲೇಖಕ ಎ೦ದು ಜಗಪತಿರಾವ ಹೇಳಿದರು ಎ೦ದು ಇರುವ ವಿಷಯಕ್ಕೆ ರೆಕ್ಕೆ ಪುಕ್ಕ ಸೇರಿಸಿ ಸವಿಸ್ತಾರ ವರದಿ ಬರೆಯಿತು ಪತ್ರಿಕೆ.

ಮಾರನೇ ದಿನ ಪತ್ರಿಕಾ ವರದಿಗಾರನೊಬ್ಬ ಶ್ರೀಪತಿರಾಯರ ಬಳಿಹೋಗಿ ,
“ಜಗಪತಿರಾವ ಅವರ ಹೇಳಿಕೆ ಬಗ್ಗೆ ತಮ್ಮ ಉತ್ತರವೇನು ಸಾರ್ ?” ಎ೦ದು ಕೇಳಿದ.

“ಜಗಪತಿರಾವ ಸಾಹಿತ್ಯಲೋಕದ ಅಣ್ಣ,ಅವರ ಬಗ್ಗೆ ನಾನೇನೂ ಹೇಳುವುದಿಲ್ಲ.ಆದರೆ ನಾನು ಬರೆದ “ಕೆಟ್ಟ ಸ೦ಸ್ಕೃತಿ” ಕಾದ೦ಬರಿಯಲ್ಲಿನ ಎಲ್ಲ ವಿಷಯಗಳೂ ನಿಜವಾದವು.ಅದಕ್ಕಾಗಿ ನಾನೂ ಸಾಕಷ್ಟು ರಿಸರ್ಚ ಮಾಡಿದ್ದೇನೆ.ಅದರಲ್ಲಿ ನಾನು ಆ ಧರ್ಮದ ಬಗ್ಗೆ ಸುಳ್ಳು ಟೀಕೆ ಮಾಡಿದ್ದೇನೆ ಎನ್ನುವುದು ಮಾತ್ರ ಸುಳ್ಳು.ಬೇಕಿದ್ದರೆ ಅದರ ಬಗ್ಗೆ ಸಾಕ್ಷಿಗಳನ್ನು ತೋರಿಸುತ್ತೇನೆ” ಎ೦ದರು ಶ್ರೀಪತಿರಾಯರು.ಪತ್ರಿಕಾ ವರದಿಗಾರ ಅವರು ಹೇಳಿದ್ದನ್ನು ಬರೆದುಕೊ೦ಡು ಹೋದ.

“ಜಗಪತಿರಾವ ಸುಳ್ಳುಗಾರ :ಶ್ರೀಪತಿರಾಯರ ಪ್ರತ್ಯುತ್ತರ “ ಎ೦ದು ಪತ್ರಿಕೆಯಲ್ಲಿ ಬ೦ದೇ ಬಿಟ್ಟಿತ್ತು ಪತ್ರಿಕೆಯಲ್ಲಿ ಮಾರನೇ ದಿನ ಬೆಳಿಗ್ಗೆ.ಜನರಿಗೆ,ಸಾಹಿತ್ಯಯಾಸಕ್ತರಿಗೆ ಇದೊ೦ದು ಪುಕ್ಸಟ್ಟೆ ಮನೋರ೦ಜನೆಯಾಯಿತು.ಜೊತೆಗೆ ಪತ್ರಿಕಾ ಸರ್ಕ್ಯುಲೇಶನ್ ಕೂಡಾ ಹೆಚ್ಚಾಯಿತು.

“ಏನ್ರೀ ಅವನ ಪಿ೦ಡ ರಿಸರ್ಚ್ ಮಾಡುವುದು ಅವನು.ಯಾವುದೋ ಒ೦ದೆರಡು ಪುಸ್ತಕಗಳನ್ನು ಓದಿ ಬರೆದುಬಿಟ್ಟರೆ ಆಯ್ತೇನ್ರೀ..?”ಎ೦ದು ಕೂಗಿದರು ಜಗಪತಿರಾವ.

ಅದನ್ನೂ ಯಥಾವತ್ತಾಗಿ ಪ್ರಕಟಿಸಿದ ಪತ್ರಿಕೆ,ಜೊತೆಗೆ ಜನತೆಯೇ “ಕೆಟ್ಟ ಸ೦ಸ್ಕೃತಿ” ಒಳ್ಳೆ ಕಾದ೦ಬರಿಯೋ ,ಕೆಟ್ಟ ಕಾದ೦ಬರಿಯೋ ನಿರ್ಧರಿಸಲಿ ಎ೦ದು ಕಾದ೦ಬರಿಯ ಬಗ್ಗೆ ,ಇವರಿಬ್ಬರ ನಡುವಿನ ಜಗಳದ ಬಗ್ಗೆ ಅನಿಸಿಕೆ ಬರೆಯಿರಿ,ಎ೦ದು ಜನರಲ್ಲಿ ಕೇಳಿತು.ಜನ ಪತ್ರಿಕೆಗೆ ಬರೆದಿದ್ದೇ ಬರೆದಿದ್ದು.ಕೆಲವರು ಜಗಪತಿರಾವ ಅವರನ್ನು ತೆಗಳಿದರೆ,ಇನ್ನೂ ಕೆಲವರು ಅವರು ಮಾಡಿದ್ದೇ ಸರಿ ಎ೦ದರು.ಕೆಲವರು ಕಾದ೦ಬರಿ ಅದ್ಭುತ ಎ೦ದರು,ಇನ್ನೂ ಕೆಲವರು ತು೦ಬಾ ಕೆಟ್ಟದಾಗಿದೆ ಎ೦ದರು.ಈ ಮಧ್ಯೆ ಇಬ್ಬರೂ ಲೇಖಕರು ಎಷ್ಟು ಪರಸ್ಪರ ದೋಷಾರೋಪಣೆ ಮಾಡಿಕೊ೦ಡರೆ೦ದರೆ,ಪರಸ್ಪರ ಇಬ್ಬರು ಎದುರು ಬದುರಾದರೆ ಕೊ೦ದೆ ಬಿಡುತ್ತಾರೇನೋ ಎ೦ದು ಎಲ್ಲರಿಗೂ ಅನಿಸುತ್ತಿತ್ತು.

ಇದೆಲ್ಲ ನಡೆದಿದ್ದು ತಿ೦ಗಳ ಹಿ೦ದೆ.ಎಷ್ಟೇ ತಪ್ಪಿಸಿಕೊ೦ಡರೂ ಒ೦ದು ಕಾರ್ಯಕ್ರಮದಲ್ಲಿ ಮಾತ್ರ ಇಬ್ಬರೂ ಏದುರುಬದುರು ಬ೦ದೇ ಬಿಟ್ಟರು.ಇಬ್ಬರೂ ಒಬ್ಬರನ್ನೊಬ್ಬರು ದುರುಗುಟ್ಟಿಕೊ೦ಡು ನೋಡಿದರಾದರೂ ಯಾರೂ ಮಾತನಾಡಲಿಲ್ಲ.

ಅಷ್ಟರಲ್ಲಿ ಆಯೋಜಕರೊಬ್ಬರು,”ಈಗ ಸನ್ಮಾನ್ಯ ಶ್ರೀಪತಿರಾಯರನ್ನು ವೇದಿಕೆಗೆ ಸ್ವಾಗತಿಸೋಣ ” ಎ೦ದರು.

ಅದೆಲ್ಲಿತ್ತೋ ಆ ಕೋಪ,ಜಗಪತಿರಾವ ಅವರು “ಅಲ್ರೀ ಹಿರಿಯ ಸಾಹಿತಿ ನಾನು ಇಲ್ಲೇ ಕೂತಿದ್ದಿನಿ.ನನ್ನನ್ನು ಮೊದಲು ಸ್ವಾಗತಿಸೋದು ಬಿಟ್ಟು ಈ ಅಯೋಗ್ಯನನ್ನು ಸ್ವಾಗತಿಸಿದ್ದರಲ್ರೀ ” ಎ೦ದು ಬಿಟ್ಟರು.

ವೇದಿಕೆ ಏರುತ್ತಿದ್ದ ಶ್ರೀಪತಿರಾಯರು ಧಡಕ್ಕನೇ ಕೆಳಗಿಳಿದು ಜಗಪತಿರಾವ ಅವರ ಬಳಿ ಬ೦ದವರೇ,

“ನೀನು ಅಯೋಗ್ಯ,ಸಾಹಿತ್ಯ ಬರೆಯೋದನ್ನು ಬಿಟ್ಟು ಬರಿ ಟೀಕೆ ಟಿಪ್ಪಣೆಗಳನ್ನು ಮಾಡುತ್ತಿರುವ ನೀನು ಅಯೋಗ್ಯ ,ರಾಸ್ಕಲ್ “ಎ೦ದು ಕೂಗಾಡಿದರು.

“ನನ್ನನ್ನೇ ರಾಸ್ಕಲ್ ಅ೦ತಿಯೇನೋ ,ಬೋ..ಮಗನೇ “ಎ೦ದು ಪ್ರತಿಯಾಗಿ ಕೂಗಾಡತೊಡಗಿದರು ಜಗಪತಿರಾವ.

ಇನ್ನೂ ಸ್ವಲ್ಪ ಹೊತ್ತು ಬಿಟ್ಟರೇ ಒಬ್ಬರನ್ನೊಬ್ಬರು ಹೊಡೆದೇ ಬಿಡುತ್ತಾರೆ ಎ೦ದೆನಿಸಿತೇನೋ ಅಲ್ಲಿ ನೆರೆದಿದ್ದ ಜನರಿಗೆ.ಇಬ್ಬರನ್ನೂ ಹಿಡಿದು ದೂರ ದೂರ ಎಳೆದರು.ಸಮಾರ೦ಭ ಹಾಳಾಗಿ ಹೋಯಿತು.

…………………………………….

ರಾತ್ರಿ ಎ೦ಟು ಗ೦ಟೆಯ ಸಮಯ.ಜಗಪತಿರಾವ ತಮ್ಮ ಮನೆಯ ಹಾಲಿನಲ್ಲಿ ಒಬ್ಬರೇ ಕುಳಿತು ಡ್ರಿ೦ಕ್ಸ್ ಮಾಡುತ್ತಿದ್ದರು.ಅಷ್ಟರಲ್ಲಿ ಕಾಲಿ೦ಗ್ ಬೆಲ್ ಸದ್ದಾಯಿತು.ಹೊರಗೆ ಹೋಗಿ ಬಾಗಿಲು ತೆರೆದರು ಜಗಪತಿರಾವ.

“ಓ ಬನ್ನಿ ,ಬನ್ನಿ ನಿಮಗೋಸ್ಕರಾನೆ ಕಾಯ್ತಿದ್ದೆ ,ಒಳಗೆ ಬನ್ನಿ” ಎ೦ದರು.ಒಳಗೆ ಬ೦ದು ಕುಳಿತರು ಶ್ರೀಪತಿರಾಯರು!

“ಮತ್ತೇನ್ರಿ ವಿಷಯ ಶ್ರೀಪತಿ,ತ೦ದಿದ್ದೀರೇನ್ರಿ…?” ಎ೦ದು ಕೇಳಿದರು ಜಗಪತಿರಾವ್

“ಹೂ೦ ಸಾರ್ ತ೦ದಿದ್ದೀನಿ.ಒಪ್ಪಿಸಿಕೊಳ್ಳಿ “ಎ೦ದು ಲಕೋಟೆಯೊ೦ದನ್ನು ಜಗಪತಿರಾವರಿಗೆ ನೀಡಿದರು ಶ್ರೀಪತಿರಾಯರು.

“ಐವತ್ತೇ ಇದೆಯಲ್ರೀ,ಶ್ರೀಪತಿ ಒ೦ದು ಲಕ್ಷಕಲ್ವೇನ್ರೀ ಮಾತಾಗಿದ್ದು ” ಎ೦ದರು ಜಗಪತಿರಾವ ಲಕೋಟೆಯಲ್ಲಿದ್ದ ಹಣ ಎಣಿಸುತ್ತಾ.

“ಅದನ್ನೂ ಕೊಟ್ಟು ಬಿಡ್ತೀನಿ ಸಾರ್,ಇನ್ನೂ ಒ೦ದೇ ತಿ೦ಗಳಲ್ವಾ ಆಗಿದ್ದು..? ಇನ್ನೂ ಸ್ವಲ್ಪ ಹಣ ಬರಬೇಕು ಸಾರ್ ” ಎ೦ದರು ಶ್ರೀಪತಿರಾಯರು.

“ಹೂ೦ ನಾನೂ ನೋಡ್ದೇ ಪೇಪರಲ್ಲಿ, “ಕೆಟ್ಟ ಸ೦ಸ್ಕೃತಿ”ಯ ಹತ್ತು ಸಾವಿರ ಪ್ರತಿಗಳು ಖರ್ಚಾಗಿವೆ ತಿ೦ಗಳಲ್ಲೇ ..?” ಎ೦ದು ಕೇಳಿದರು ಜಗಪತಿರಾವ.

“ಹೌದು ಸಾರ್,ಇನ್ನೂ ಇಪ್ಪತು ಸಾವಿರ ಮಾರಾಟವಾಗಬಹುದು ಅನ್ನೋ ಅ೦ದಾಜಿದೆ ” ಎ೦ದರು ಶ್ರೀಪತಿರಾಯರು.

“ಏನೇ ಆಗ್ಲೀ ಸಕತ್ ಘಾಟಿ ಕಣ್ರೀ ,ಶ್ರೀಪತಿ ನೀವು.ನನ್ನ ಕೈಲಿ ಕಾದ೦ಬರಿ ವಿರುದ್ಧ ಸ್ಟೇಟಮೆ೦ಟ್ ಕೊಡಿಸಿ,ವಿವಾದ ಸೃಷ್ಟಿಸಿ…ಹ್ಹೋ,ಹ್ಹೋ….ಹ್ಹೋ,ಹ್ಹೋ,ಹ್ಹೋ ” ಎ೦ದು ನಗತೊಡಗಿದರು ಜಗಪತಿರಾವ.

“ಹೂ೦ ಸಾರ್,ನಾನು ಆ ಕಾದ೦ಬರಿ ಬರೆದ ತಕ್ಷಣನೇ ಈ ಕಾದ೦ಬರಿ ಚೆನ್ನಾಗಿಲ್ಲ ಅನ್ನಿಸ್ತು ಸಾರ್.ಅದಕ್ಕೆ ಮೊದಲು ನಿಮ್ಮ ಕೈಲಿ ಅದನ್ನಾ ಹೊಗಳಿಸಿ ಬಿಡೋಣ ಅನ್ನಿಸ್ತು.ಆ ಮೇಲೆ ವಿಚಾರ ಮಾಡ್ಡೇ.ಹೊಗಳ್ಸೋಕ್ಕಿ೦ತ ತೆಗಳಿಸಿದರೆ ಹ್ಯಾಗೆ ಅ೦ತಾ,ಸಕತ್ತಾಗಿ ವರ್ಕಔಟ್ ಆಯ್ತು ಸಾರ್ ” ಎ೦ದರು ಸನ್ಮಾನ್ಯ ಶ್ರೀಪತಿರಾಯರು.

“ಆದ್ರೂ ಶ್ರೀಪತಿ, ನಾನು ನಿನ್ನೆ ನಿಮ್ಮ “ಕೆಟ್ಟ ಸ೦ಸ್ಕೃತಿ” ಓದ್ದೆ ಕಣ್ರೀ ,ತು೦ಬಾ ಆರ್ಡಿನರಿ ಕಾದ೦ಬರಿ. ವಿವಾದ ಮಾಡೋವ೦ತದ್ದೇನೂ ಇಲ್ಲವಲ್ರೀ ಅದರಲ್ಲಿ.ಆದ್ರೂ ಅಷ್ಟೊ೦ದು ಕಾಪಿ ಹೇಗ್ರಿ ಸೇಲ್ ಆಯ್ತು..?” ಕೇಳಿದರು ಜಗಪತಿರಾವ.

“ಹೌದು ಸಾರ್,ಅದರಲ್ಲಿ ಏನೂ ಇಲ್ಲ ,ಅದು ನನಗೂ ಗೊತ್ತು ಸಾರ್. ಆದ್ರೇ ತಾವೂ ಹೇಳಿ ಬಿಟ್ಟಿರಲ್ಲಾ ಅದರಲ್ಲೇನೋ ಇದೇ ಅ೦ತಾ, ಅದಕ್ಕೇ ಅದರಲ್ಲಿ ಏನೋ ಇದೆ. ಏನೂ ಇಲ್ದಿದ್ರೂ ಜನ ಏನೋ ಹುಡ್ಕತಾರೆ ಬಿಡಿ” ಎ೦ದು ನಕ್ಕರು ಶ್ರೀಪತಿರಾಯರು.

“ಅದು ಕರೆಕ್ಟೇ …ಇ೦ಥಾ ಅ೦ಡರಸ್ಟಾ೦ಡಿ೦ಗ್ ನಮ್ಮಿಬ್ಬರಲ್ಲಿ ಆವಾಗಾವಾಗ ಇರಲಿ ,ನನ್ನ ಹೆಸರು ಕೆಡುತ್ತೇ ಅ೦ತಾ ವಿಚಾರ ಮಾಡ್ಬೇಡಿ.ಯಾಕೆ೦ದ್ರೇ ಜನಕ್ಕೆ ಯಾವುದೂ ನೆನಪಿರೋದಿಲ್ಲ ಕಣ್ರಿ. ಸದ್ಯದಲ್ಲೇ ನಾನೂ ಹೊಸ ಕಾದ೦ಬರಿ ಬರಿತಿದೀನೀ.ಆವಾಗ ನಿಮ್ಮ ಸಹಾಯ ಬೇಕು ಕಣ್ರೀ” ಎ೦ದು ನಕ್ಕರು ಜಗಪತಿರಾವ್ ಸಾಹೇಬರು

“ಓಹೋ..ಖ೦ಡಿತವಾಗಿ ಸಾರ್ …..ಒಟ್ಟಿನಲ್ಲಿ ಜನ ಮರುಳೋ,ಜಾತ್ರೆ ಮರುಳೋ…ಅಲ್ವಾ” ಎ೦ದು ದೊಡ್ಡದಾಗಿ ನಕ್ಕರು ಶ್ರೀಪತಿರಾಯರು.ಅವರು ಕೊಟ್ಟಿದ್ದ ಹಣ ಕೂಡಾ ನಗುತ್ತಿತ್ತು ಜಗಪತಿರಾವ್ ಜೇಬಿನಲ್ಲಿ

(ಮೂಲ ಲೇಖನ ಸಂಪದದಲ್ಲಿ ಪ್ರಕಟವಾಗಿತ್ತು)


Technorati : , ,

ಗೇರ್ ಗೇರ್ ತಿಮ್ಮಣ್ಣ

27 ಫೆಬ್ರ

‘ಸಂಪದ’ದಲ್ಲಿ ಪ್ರಕಟವಾದ ಎ.ವಿ.ನಾಗರಾಜುರವರ ಈ ಲೇಖನ ಗೇರ್‍-ಶೆಟ್ಟಿ ಪ್ರಕರಣವನ್ನು ರಸವತ್ತಾಗಿ ವರ್ಣಿಸುತ್ತದೆ.picture-3155.jpg

ಮೊನ್ನೆ ಏನಾಯ್ತೂಂತೀರಿ . . . ಬೆಂಗಳೂರಿನಿಂದ ಮೈಸೂರಿಗೆ ಹೊಗ್ತಾ ಇದ್ದಾಗ, ಅರ್ಧ ದಾರಿ ಕ್ರಮಿಸಿದ ಮೇಲೆ, ನಾಲಗೆಯ ದ್ರವ ಆರತೊಡಗಿದಂತಾಗಿ, ಹಾಗು ಕಿಬ್ಬೊಟ್ಟೆಯು ತುಂಬಿಕೊಂಡುಬಂದು ದಾರಿ ಬದಿಯ ಒಂದು ದೊಡ್ಡ ಆಲದ ಮರದ ಕೆಳಗೆ ಕಾರನ್ನು ನಿಲ್ಲಿಸಿ, ನೀರಾವರಿ ಕಾರ್ಯವನ್ನು ಮೊದಲು ಮುಗಿಸಿ, ಡಿಕ್ಕಿಯಲ್ಲಿದ್ದ ಪ್ಲಾಸ್ಕಿನಿಂದ ಕಾಫಿಯನ್ನು ತೆಗೆದುಕೊಂಡು ಲೋಟಕ್ಕೆ ಬಗ್ಗಿಸಿಕೊಳ್ಳುತಿದ್ದಂತೆಯೇ , ಮೇಲಿನಿಂದ ದಡದಡನೆ ನಮ್ಮ ಪೂರ್ವೀಕರುಗಳ ಆಗಮನವಾಯಿತು. ಒಂದು ಕೆಂಪು ಮೂತಿಯ ಇಂಪೋರ್ಟೆಡ್ ಗಡವ, ಜೊತೆ ಜೊತೆಯಲಿ ಬಾಯಗಲವಾಗಿದ್ದ ಲೋಕಲ್ ಗಡವಿ ಮತ್ತು ಅವುಗಳ ಸುತ್ತಾ ಮುತ್ತಾ ಪಡ್ಡೆ ಮಂಗಗಳು ಕುಣಿದಾಡುತ್ತಾ ಬಂದು ನನ್ನ ಸುತ್ತಾ ಗಿರಕಿ ಹೊಡೆಯಲಾರಂಬಿಸಿದವು. ಗಡವ ಹಾಗು ಜೊತೆಯಲ್ಲಿದ್ದ ಗಡವಿ ನನ್ನನ್ನು ತಮ್ಮವರೆಂದು ಗುರುತಿಸಿದವೋ ಏನೋ, ಇಂಗ್ಲೀಷಿನಂತಹ ಭಾಷೆಯಲಿ ಏನೇನೋ ಹೇಳಲಾರಂಭಿಸಿದವು. ನಿಧಾನವಾಗಿ ಅವುಗಳ ಮಾತು ನನಗೆ ಅರ್ಥವಾಗತೊಡಗಿತು.

ನಾನು ಗಡವನನ್ನು “ನಿನ್ನ ಹೆಸರೇನು?” ಎಂದದ್ದಕೆ ಅದು “ಗೇರ್ ಗೇರ್ ತಿಮ್ಮಣ್ಣ” ಎಂದಿತು. “ನಿನ್ನಾಕೆಯ ಹೆಸರು?” ಎಂದೆ. “ಅದು ನನ್ನಾಕೆಯಲ್ಲ, ಈ ಪ್ರದೇಶದಲ್ಲಿ ಎಯ್ಡ್ಸ್ ರೋಗ ಹೆಚ್ಚಾಗಿ ಕಾಣಿಸಿಕೊಂಡಿದ್ದಾಗಿ ಅಂಕೆ ಸಂಖ್ಯೆಗಳಿಂದ ತಿಳಿದು ಬಂದದ್ದರಿಂದ, ಆಕೆ ಇಲ್ಲಿ ಅರಿವಿನ ಕಾರ್ಯಕ್ರಮ ಹಮ್ಮಿಕೊಂಡಿದ್ದಾಳೆ. ಅವಳ ಹೆಸರು ಸ್ವಲ್ಪಾ ಗಟ್ಟಿ ಅಂತಾ” ಎಂದಿತು.

“ಸರಿ, ನಿಮ್ಮ ದೇಶದಲ್ಲಿ ಎಯ್ಡ್ಸ್ ಇಲ್ಲವೆ” ಎಂದೆ.

“ಅಯ್ಯೋ ಬುದ್ದೂ, ಎಯ್ಡ್ಸ್ ಎಂಬ ರೋಗದ ಹೆಸರನ್ನು ನೀವು, ಭಾರತೀಯರು ಈ ಮೊದಲು ಕೇಳಿದ್ದಿರೇನು? ಇಲ್ವಲ್ಲಾ, ಅದನ್ನು ಸೃಷ್ಟಿಸಿದೋರು, ಭಾರತಕ್ಕೆ ತಂದೋರು ಎಲ್ಲಾ ನಾವೆ. ಈಗ ಅದನ್ನು ನಿರ್ಮೂಲನ ಮಾಡಿ, ಹೆಸರನ್ನೂ, ಹಣವನ್ನೂ ಗಳಿಸಿಕೊಂಡು ಹೋಗಲು ಬಂದಿದ್ದೇನೆ ಅಷ್ಟೆ. ಆದರೆ, ಈ ಒಳಗಿನ ವಿಷಯವನ್ನು ನೀನು ನನ್ನ ವಂಶಸ್ಥನೆಂದು ಹೇಳಿದ್ದೇನೆ. ಇವನ್ನೆಲ್ಲಾ ಪೇಪರ್ರಿನವರಿಗಾಗಲೀ, ಟಿವಿಯವರಿಗಾಗಲೀ ಹಂಚಬೇಡಾ” ಎಂದಿತು.

“ಸರಿ, ನಿಮ್ಮ ಕಾರ್ಯಕ್ರಮದ ರೀತಿ ಏನು?” ಎಂದೆ.

“ನಾನು ಎಯ್ಡ್ಸ್ ಹೇಗೆ ಬರುತ್ತದೆಂದು ತೋರಿಸಿಕೊಟ್ಟರೆ, ಸ್ವಲ್ಪಾಗಟ್ಟಿ ಅದನ್ನು ಬರದಂತೆ ತಡೆಯುವುದು ಹೇಗೆಂದು ತೋರಿಸುತ್ತಾಳೆ, ಮುಂದೆ ಈ ಮರಿಕೋತಿಗಳು ತಾಳಕ್ಕೆ ತಕ್ಕಂತೆ ಕುಣಿಯುತ್ತವೆ” ಎಂದಿತು.

“ಸರಿ, ಹತ್ತು ನಿಮಿಶದಲ್ಲಿ ನಿಮ್ಮ ಕಾರ್ಯಕ್ರಮದ ತುಣುಕೊಂದನ್ನು ನನ್ನ ಮುಂದೆ ಪ್ರದರ್ಶಿಸಲು ಸಾಧ್ಯವೇ? ನನಗೂ ಎಯ್ಡ್ಸ್ ಬಗ್ಗೆ ಸ್ವಲ್ಪವಾದರೂ ಜ್ಝಾನೋದಯವಾಗಲಿ” ಎಂದೆ.

“ಓ. . . ಅದಕ್ಕೇನಂತೆ, ಆ ಸೀನು ನನಗೆ ತುಂಬಾ ಇಷ್ಟ. ನೂರು ಸಾರಿ ಬೇಕಾದರೂ ಮಾಡಿತೋರಿಸುತ್ತೇನೆ” ಎಂದು ಓಡಿ ಹೋಗಿ, ಕೈಯಲ್ಲಿ ಕೋಲಿನ ತುಂಡೊಂದನ್ನು ಮೈಕಿನಂತೆ ಹಿಡಿದುಕೊಂಡು, ಏನೇನೋ ಕಿಚಕಿಚ ಎನ್ನುತ್ತಿದ್ದ ಸ್ವಲ್ಪಾಗಟ್ಟಿಯನ್ನು ಮುಂದಿನಿಂದ ಅನಾಮತ್ತಾಗಿ ತಬ್ಬಿಕೊಂಡು ಬಾಯಿಗೆ ಮುತ್ತು ಕೊಡಲು ಪ್ರಯತ್ನಿಸಿತು. ಆದರೆ ಸ್ವಲ್ಪಗಟ್ಟಿ ಅದಕ್ಕೆ ಅವಕಾಶ ಕೊಡದಂತೆ ತಲೆಯನ್ನು ಕೆಳಕ್ಕೆ ಬಾಗಿಸುತ್ತಾ, ಬಾಯನ್ನು ಮುಚ್ಚಲಾಗದಂತೆ ಅಗಲವಾಗಿ ತೆರೆದು ನಗುತ್ತಿರುವಂತೆ ನಟನೆ ಮಾಡಿತು. ವಿಧಿ ಇಲ್ಲದೆ, ಗೇರ್ ಗೇರ್ ತಿಮ್ಮಣ್ಣ ಅದರ ಕೆನ್ನೆಯ ಮೇಲೆ ಮುತ್ತುಗಳ ಸರ ಪೋಣಿಸತೊಡಗಿತು.

ನಾನು “ಇದೇನು ಗೇರ್ ಮಹಾರಾಜರೇ, ನಾನು ಕೇಳಿದ್ದೇನು, ನೀವು ಮಾಡುತ್ತಿರುವುದೇನು?” ಎಂದೆ.

ಅದಕ್ಕೆ ಆಕೆಯನ್ನು ತನ್ನ ಭಾಹು ಬಂದನದಿಂದ ಬೇಸರದಿಂದಲೇ ಬಿಟ್ಟ ಗೇರ್ ಗೇರ್ ತಿಮ್ಮಣ್ಣ “ನಾನು ಆಕೆಯನ್ನು ತಬ್ಬಿಕೊಂಡು ಮುದ್ದಾಡಲು ಹೋದದ್ದನ್ನು ನೀನು ನೋಡಿದೆಯಲ್ಲವೇ? ಅಂದರೆ ಏಯ್ಡ್ಸ್ ರೋಗ ಬರಲು ಈ ರೀತಿ ಅನೈತಿಕ ಸಂಬಂದವನ್ನು ಬೆಳೆಸಬೇಡಿ ಎಂದು ತೋರಿಸಿಕೊಟ್ಟೆ. ಅವಳು ಬಾಯನ್ನು ಅಗಲವಾಗಿ ಬಿಟ್ಟಿದ್ದರಿಂದ ನಾನು ಆಕೆಯ ತುಟಿ ಜೇನನ್ನು ಸವಿಯಲು ಆಗಲೇಇಲ್ಲ. ಎಯ್ಡ್ಸ್ ಬರುವ ಅವಕಾಶವೂ ಅವಳಿಗೆ ದೊರೆಯಲಿಲ್ಲ. ಅದನ್ನು ಆಕೆ ಸ್ಪಷ್ಟ ಪಡಿಸಿದಳು. ಇವೆಲ್ಲಾ ನಿಮ್ಮಂತಹ ಮಂದ ಬುದ್ಧಿಯವರಿಗೆ ತಕ್ಷಣ ಅರ್ಥವಾಗದು” ಎಂದಿತು.

“ಸರಿಯಪ್ಪ” ಎಂದ ನಾನು ಸ್ವಲ್ಪಗಟ್ಟಿಯನ್ನು “ಏನಮ್ಮಾ ನೀನು ಭಾರತೀಯಳಾಗಿ ಇದಕ್ಕೆಲ್ಲಾ ಅವಕಾಶ ಕೊಡಬಹುದೇ?. ಇಂತಹ ಪ್ರದರ್ಶನಗಳು ಮುಚ್ಚಿದ ಕದಗಳ ಹಿಂದೆಯಲ್ಲವೇ ನಡೆಯಬೇಕಾದದ್ದು” ಎಂದೆ.

ಅದಕ್ಕೆ ಆಕೆ ಸ್ವಲ್ಪವೂ ವಿಚಲಿತಳಾಗದೆ “ಅಯ್ಯೋ ಮಂಕುದಿಣ್ಣೆ, ಗೇರ್ ಮುತ್ತು ಕೊಟ್ಟದ್ದು ನನ್ನ ಕೆನ್ನೆಗೆ ಮಾತ್ರ, ನನಗಲ್ಲ. ಅಷ್ಟಕ್ಕೆಲ್ಲಾ ಎಯ್ಡ್ಸ್ ರೋಗ ಬರುವುದಿಲ್ಲ, ಅಲ್ಲದೆ, ಅಷ್ಟೋ ಆಕರ್ಷಣೆ ಇಲ್ಲದಿದ್ದರೆ ನಮ್ಮೆದುರು ಸಂತೆಯೂ ಸೇರುವುದಿಲ್ಲ. ಒಟ್ಟಲ್ಲಿ ನಮ್ಮ ಉದ್ದೇಶ ಎಯ್ಡ್ಸನ್ನು ಭಾರತದಿಂದ ತೊಲಗಿಸುವುದು. ಅದನ್ನು ತೊಲಗಿಸ ಬೇಕಾದರೆ, ಮೊದಲು ಅದನ್ನು ಭಾರತಕ್ಕೆ ತರಬೇಕು, ಆನಂತರ ನಾವು ಅದನ್ನು ತೊಲಗಿಸುವ ಪ್ರಯತ್ನ ಮಾಡಬೇಕು. ಎನ್ ಜಿ ಓ ಗಳು ಇದಕ್ಕಾಗಿ ಹಣವನ್ನು ಸಂಗ್ರಹಿಸುತ್ತಿವೆ, ನಾವು ಖರ್ಚು ಮಾಡುವಂತೆ ಮಾಡಿ, ನಮ್ಮ ಖರ್ಚನ್ನು ಹೊಂದಿಸಿಕೊಳ್ಳುತ್ತೇವೆ. ಒಟ್ಟಿನಲ್ಲಿ ಇದೊಂದು ಅರಿವಿನ ಕಾರ್ಯಕ್ರಮ. ಜನ ಜಾಗೃತಿಗಾಗಿ ಇವೆಲ್ಲಾ ಅಷ್ಟೇ” ಎಂದಿತು. ಇದನ್ನು ಕೇಳಿದ ಸುತ್ತಾ ನೆರೆದಿದ್ದ ಪಡ್ಡೆ ಮಂಗಣ್ಣಗಳಿಗೆ ಜ್ಞಾನೋದಯವಾದಂಗ್ತಾಗಿ, ಓಡಿ ಹೋಗಿ “ಹಿಡಿ ಮಗ, ಹಿಡಿ ಮಗ ಬಿಡಬೇಡ ಅವನ್ನ” ಎಂಬ ಹಾಡಿಗೆ ಕಾಲು ಹಾಕುತ್ತಾ, ಗೇರ್ ಗೇರ್ ತಿಮ್ಮಣ್ಣನ ಹಿಂದೆ ಸುತ್ತತೊಡಗಿದವು.

“ಸರಿಯಮ್ಮಾ, ವಿಶ್ ಯೂ ಬೋತ್ ಆಲ್ ದಿ ಬೆಸ್ಟ್” ಎಂದು ವಿಶ್ಶಿಸಿ, ಕಾರನ್ನೇರಿದೆ.

ಎ.ವಿ. ನಾಗರಾಜು
ಅಗಿಲೆನಾಗ್[ಎಟ್]ರಿಡಿಫ್ ಮೇಲ್.ಕಾಂ

(ಮೂಲ ಲೇಖನ ‘ಸಂಪದ’ದಲ್ಲಿ ಪ್ರಕಟವಾಗಿತ್ತು)


Technorati : , , ,

ಅವರು ಸಂತೋಷವನ್ನು ಎಲ್ಲಿ ಬಚ್ಚಿಟ್ಟರು ಗೊತ್ತೇ?

26 ಫೆಬ್ರ

ಇಂಜಿನಿಯರಿಂಗ್ ಓದಿಕೊಳ್ಳುತ್ತ ತನ್ನ ಓರಗೆಯ ಗೆಳೆಯರನ್ನು ಕೂಡಿಕೊಂಡು ‘ಸಡಗರ’ಎಂಬ ಸಣ್ಣದೊಂದು ಮಾಸಪತ್ರಿಕೆಯನ್ನು ಕಳೆದ ಒಂದು ವರ್ಷದಿಂದ ATgAAAB1OtHeNNbJAjB6kEYZkQx1sI6fRkj7Z_AEdZaDUj-PrbID2cxZkt_B3jDu_s8uV9cazNPsYx4g5-ifFW-aw6gkAJtU9VA_OqFoXWvKxVaBRnb342R7bVptRw.jpgನಡೆಸುತ್ತಿರುವವರು ಸುಪ್ರೀತ್.ಕೆ.ಎಸ್. ಹದಿಹರೆಯದ ಹುಮ್ಮಸ್ಸು, ಹಸಿಯಾದ ಕ್ರಿಯಾಶೀಲತೆ ಪತ್ರಿಕೆಯ ಪ್ರತಿ ವಿಭಾಗದಲ್ಲೂ ಎದ್ದು ಕಾಣುತ್ತದೆ. ‘ಸಡಗರ’ಪತ್ರಿಕೆಯಲ್ಲಿ ಪ್ರಕಟವಾಗುವ ಅವರ ಹಾಸ್ಯ ಬರಹಗಳನ್ನು ನಗೆ ನಗಾರಿ ಡಾಟ್ ಕಾಮ್ ‍ನೊಂದಿಗೆ ಹಂಚಿಕೊಳ್ಳಲು ಒಪ್ಪಿಕೊಂಡಿದ್ದಾರೆ.

ಮನುಷ್ಯ ಸಂತೋಷವಾಗಿರುವುದನ್ನು ಕಂಡು ಸಂಕಟಗೊಂಡ ದೇವತೆಗಳು ಕಂಡುಕೊಂಡ ಉಪಾಯದ ಬಗ್ಗೆ ಈ ವಾರ ಬರೆದಿದ್ದಾರೆ.

ಇದು ಈ ಅಂಕಣಕಾರರ ನಾಲ್ಕನೆಯ ಲೇಖನ.
ಹಿಂದಿನ ಲೇಖನ ಇಲ್ಲಿದೆ.

ಅಂದು ಯಾಕೋ ದೇವಲೋಕದಲ್ಲಿ ಎಂದಿನ ಪ್ರಶಾಂತತೆ ಇರಲಿಲ್ಲ. ಎಲ್ಲಿ ನೋಡಿದರೂ ಸಂತೃಪ್ತಿ, ಸಂತಸ, ಶಾಂತತೆಯಿಂದ ನಳನಳಿಸುತ್ತಿರುತ್ತಿದ್ದ ಸ್ವರ್ಗ ಯಾಕೋ ಅಂದು ಕದಡಿದ ನೀರಿನ ಕೊಳದಂತಾಗಿತ್ತು. ದೇವತೆಗಳು ಅಲ್ಲಲ್ಲಿ ಗುಂಪುಗುಂಪಾಗಿ ನಿಂತು ಏನನ್ನೋ ಗಾಢವಾಗಿ ಚಿಂತಿಸುತ್ತಿರುವಂತೆ, ಯಾರನ್ನೋ ತೋರಿಸಿ ಆರೋಪಿಸುತ್ತಿರುವಂತೆ, ನಿಂತಲ್ಲೆ ಜಗಳ ಕಾಯುತ್ತಿರುವಂತೆ ಕಾಣುತ್ತಿದ್ದರು.

ಆಗ ತಾನೆ ತಮ್ಮ ಲೋಕಸಂಚಾರ ಮುಗಿಸಿಕೊಂಡು ದೇವಲೋಕಕ್ಕೆ ಬಂದ ನಾರದ ಮಹರ್ಷಿಗಳಿಗೆ ಸ್ವರ್ಗದ ಈ ವಾತಾವರಣ ಕಂಡು ಗಲಿಬಿಲಿಯಾಯಿತು. ‘ಇದೇನು ಇಂದು ಸ್ವರ್ಗ ಹೀಗಾಗಿಬಿಟ್ಟಿದೆ? ದೇವೇಂದ್ರ ಏನು ಮಾಡುತ್ತಿದ್ದಾನೆ? ಯಾರಾದರೂ ರಾಕ್ಷಸ ಸ್ವರ್ಗವನ್ನು ಅತಿಕ್ರಮಿಸಿಕೊಳ್ಳಬೇಕು ಎಂಬ ಸಂಕಲ್ಪದಿಂದ ತಪಸ್ಸಿಗೆ ಕುಳಿತಿದ್ದಾನೆಯೋ ಹೇಗೆ? ಅಥವಾ ಈಗಾಗಲೇ ಯಾರಾದರೂ ರಾಕ್ಷಸ ಪ್ರಭುಗಳು ತೊಡೆತಟ್ಟಿ ಬಂದು ಯುದ್ಧ ಮಾಡಿ ಇಂದ್ರನನ್ನು ಕುರ್ಚಿಯಿಂದ ಕೆಳಕ್ಕುರಿಳಿಸಿದ್ದಾರೆಯೊ ಏನೋ… ಇಷ್ಟಕ್ಕೂ ಈ ನಮ್ಮ ಇಂದ್ರನಿಗೆ ಅದ್ಯಾಕೆ ಅಂತಹ ಕುರ್ಚಿಯ ಮೋಹವೋ ಕಾಣೆ! ಅದನ್ನುಳಿಸಿಕೊಳ್ಳುವ ತಾಕತ್ತಿಲ್ಲದಿದ್ದರೂ ಅದರ ಮೇಲೆ ಕುಳಿತು ದೌಲತ್ತು ನಡೆಸುವುದಕ್ಕೇನೂ ಕಡಿಮೆಯಿಲ್ಲ. ಅತ್ತ ಭೂಲೋಕದ ಯಾವೊಬ್ಬ ಮನುಷ್ಯನೋ ಇಲ್ಲವೇ ಪಾತಾಳದಿಂದ ಒಬ್ಬ ರಕ್ಕಸನೋ ತನ್ನ ಕುರ್ಚಿಯ ಮೇಲೆ ಕಣ್ಣು ಹಾಕಿದ್ದಾನೆ ಎಂಬುದರ ಸುಳಿವು ದೊರೆತುಬಿಟ್ಟರೆ ಸಾಕು ಈ ಇಂದ್ರ ಕಾಲುಹಿಡಿಯದ ದೇವರುಗಳಿಲ್ಲ!

ಪಾಪ ಆ ತ್ರಿಮೂರ್ತಿಗಳ ಪಾಡಂತೂ ಹೇಳತೀರದು. ಲೋಕ ಪರಿಪಾಲನೆಯ ‘ಕಾಮನ್ ಮಿನಿಮಮ್ ಪ್ರೋಗ್ರಾಮ್’ ಹಾಕಿಕೊಂಡು ಮೂರೂ ಮಂದಿ ಸರ್ಕಾರ ನಡೆಸುತ್ತಿರುವಾಗ, ಮನುಷ್ಯರೋ, ರಕ್ಕಸರೋ ಗಾಢವಾದ ತಪಸ್ಸು ಮಾಡಿ ತಲೆಗೆ ಬಂದ ವರವನ್ನು ಕೇಳಿದರೆ ಇಲ್ಲ ಎನ್ನಲಾದೀತೇ? ಅದರಲ್ಲೂ ನಮ್ಮ ಮುಕ್ಕಣ್ಣ ಮಹೇಶ್ವರ ರಕ್ಕಸರ ಡಿಮ್ಯಾಂಡುಗಳನ್ನು ಅಪ್ರೂವ್ ಮಾಡುವುದರಲ್ಲಿ ಎತ್ತಿದ ಕೈ. ಹಾಗಂತ ಮಹೇಶ್ವರನಿಗೆ ಏನೂ ಹೇಳಲಾಗದು, ‘ಕಾಮನ್ ಮಿನಿಮಮ್ ಪ್ರೋಗ್ರಾಮ್’ನ ಮುಖ ನೋಡಿಕೊಂಡು ಮೂವರೂ ಸುಮ್ಮನಿರಬೇಕು. ಇಲ್ಲದಿದ್ದರೆ ಸರ್ಕಾರವೇ ಉರುಳಿ ಹೋಗುವ ಭಯ (ಅವರಿಗೂ ಕುರ್ಚಿ ಮೇಲಿನ ಮೋಹ?!).

ಈ ರಕ್ಕಸರು ಮಹಾ ಬುದ್ಧಿವಂತರು. ವಿಷ್ಣುವಿಗೆ ನಮ್ಮ ಬಗ್ಗೆ ಸಾಫ್ಟ್ ಕಾರ್ನರ್ ಇಲ್ಲ ಎಂಬುದನ್ನು ತಿಳಿದು ಅವರು ನೇರವಾಗಿ ಮಹೇಶ್ವರನಿಗೋ ಇಲ್ಲವೇ ಸೃಷ್ಟಿಕರ್ತ ಬ್ರಹ್ಮನಿಗೋ ಗಾಳಹಾಕುತ್ತಾರೆ. ಆದರೆ ದಿನದ ಇಪ್ಪತ್ನಾಕ್ಲು ಗಂಟೆಯೂ ಸೃಷ್ಟಿಯ ಕೆಲಸದಲ್ಲಿ ತೊಡಗಿದ ಬ್ರಹ್ಮನಿಗೆ ನಾಲ್ಕು ತಲೆಗಳಿದ್ದರೂ, ಒಂದೊಂದು ತಲೆಗೆ ಎರಡೆರಡು ಕೈಗಳಂತೆ ಒಟ್ಟು ಎಂಟು ಕೈಗಳಿದ್ದರೂ ಸಾಲದು. ಅಂತಹ ಬ್ಯುಸಿ ಶೆಡ್ಯೂಲ್‍ನಲ್ಲಿಯೂ ಬಿಡುವು ಮಾಡಿಕೊಂಡು ಆಗಾಗ ರಕ್ಕಸರ ಮೊರೆಯನ್ನಾಲಿಸಿ ಅವರಿಗೆ ಬೇಡಿದ ವರವನ್ನು ಕೊಡುವುದುಂಟು. ಆದರೆ ಅದರಲ್ಲೂ ಅವರದ್ದು ಚಾಣಾಕ್ಷ ನಡೆ. ಚಿರಂಜೀವಿಯಾಗು ಅಂತ ವರ ಕೊಡುವುದು ತಮ್ಮ ಅಧಿಕಾರ ವ್ಯಾಪ್ತಿಯಿಂದ ಹೊರಗಿನದ್ದು ಎಂಬುದನ್ನು ತಿಳಿಸಿ ರಕ್ಕಸರ ಮಹತ್ವಾಕಾಂಕ್ಷಿ ವರಗಳ ಬೇಡಿಕೆಗಳಿಂದ ಬಚಾವಾಗಿಬಿಡುತ್ತಾರೆ. ಆದರೆ ಅವರಿಗೆ ನಮ್ಮ ಮಹಾವಿಷ್ಣುವಿನಂತೆ ಡಿಪ್ಲೊಮೆಟಿಕ್ ಆಗಿ ವರ್ತಿಸಲು ಬಾರದು. ಅದರ ಬಗ್ಗೆ ತಿಳಿಸಿ ಹೇಳವಂತೆ ಅವರು ತಮ್ಮ ಪುತ್ರಿ ಹಾಗೂ ಪತ್ನಿ ಸರಸ್ವತಿದೇವಿಯನ್ನು ಕೇಳಿಕೊಂಡಿದ್ದರೂ, ಮಾತೆ ಸರಸ್ವತಿಯವರು ‘ಸರಸ್ವತೀ ಪುತ್ರ’ ಎಂದು ಹೆಸರಿಟ್ಟು ಕೊಂಡ ಭೂಲೋಕದ ಪ್ರಭೃತ್ತಿಗಳಿಗೆ, ತಮ್ಮ ಹೆಸರನ್ನು ಉಳಿಸಿಕೊಳ್ಳುವುದರ ಸಲುವಾಗಿಯಾದರೂ, ಬುದ್ಧಿ ಧಾರೆಯೆರೆಯುವುದರಲ್ಲಿ ಬ್ಯುಸಿಯಾಗಿದ್ದರಿಂದ ಬ್ರಹ್ಮ ದೇವರಿಗೆ ಉಪದೇಶಿಸುವ ಕಾರ್ಯಕ್ರಮ ಪೋಸ್ಟ್ ಪೋನ್ ಆಗಿತ್ತು. ಮಹೇಶ್ವರನಿಗೆ ಹಿಮಾಲಯದ ತಪ್ಪಲಲ್ಲಿ ಕುಳಿತು ಧ್ಯಾನ ಮಾಡುವುದೇ ಬಹುದೊಡ್ಡ ಕೆಲಸ. ಆಗಾಗ ತಮ್ಮ ಮೂರನೆಯ ಕಣ್ಣು ಎಂಬ ‘ವಿಟೋ’ ಬಳಸಿ ಕೆಲವು anti social elementಗಳನ್ನು ನಾಶಮಾಡುವ ಕರ್ತವ್ಯ ಪಾಲಿಸುತ್ತಾರಾದರೂ ಅದು ದಿನನಿತ್ಯವಿರುವುದಿಲ್ಲ. ಮೇಲಾಗಿ ಅವರ ಪುತ್ರದ್ವಯರಾದ ಗಣೇಶ್ ಹಾಗೂ ಸುಬ್ರಹ್ಮಣ್ಯ ಬೆಳೆದು ಪ್ರಬುದ್ಧರಾಗಿ ತಮ್ಮ ತಮ್ಮ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರಾದ್ದರಿಂದ ಅವರ ಜಗಳ, ಕಿತ್ತಾಟ ಬಗೆಹರಿಸುವ ತಲೆನೋವೂ ಇಲ್ಲ. ಹಾಗಾಗಿ ರಕ್ಕಸರು ತಪಸ್ಸಿಗೆ ಥಟ್ ಅಂತ ಓಗೊಡುವುದು ಮಹೇಶ್ವರನೇ. ಅವರು ಏನು ಕೇಳಿದರೂ ತಥಾಸ್ತು ಎನ್ನುವುದು ಮಾತ್ರ ಮಹೇಶ್ವರನ ಕೆಲಸ. ಇದರಿಂದಾಗಿ ಮಹೇಶ್ವರ ಭಕ್ತ ಪರಾಧೀನನಾದರೂ ಉಳಿದ ದೇವತೆಗಳಿಗೆ ಇದರಿಂದ ಅಷ್ಟೇನೂ ಸಂತೋಷವಾದಂತೆ ಕಾಣುವುದಿಲ್ಲ. ಯಾರಾದರೂ ರಾಕ್ಷಸರು ಶಿವನಿಂದ ಪಡೆಯಬಾರದ ವರಗಳನ್ನು ಪಡೆದು ಸ್ವರ್ಗಕ್ಕೆ ಲಗ್ಗೆ ಹಾಕಿಬಿಟ್ಟರೆ ಎಂಬ ಆತಂಕ ದೇವತೆಗಳದ್ದು. ಶಿವನು ಕೊಟ್ಟ ವರವನ್ನು ಶಿವನ ಮೇಲೆಯೇ ಪರೀಕ್ಷಿಸಲು ಮುಂದಾಗುವ ಅನೇಕ ‘ಮುಗ್ಧ’ ರಕ್ಕಸರನ್ನು ಯಾವ ಉಪಾಯ ಬಳಸಿ ಸಂಹರಿಸುವುದು ಎನ್ನುವುದನ್ನು ಪ್ಲಾನ್ ಮಾಡುತ್ತಾ ಕೂರುವ ಕಷ್ಟ ಶ್ರೀಹರಿಯದು.

ಹೀಗಿರುವಾಗ ದೇವತೆಗಳೆಲ್ಲಾ ಆತಂಕಗೊಂಡಿರುವುದಕ್ಕೆ ಮಹೇಶ್ವರನ ಯಾವುದೋ ಹೊಸ ವರವೇ ಕಾರಣವಾಗಿರಬೇಕು. ಯಾವುದಕ್ಕೂ ಇರಲಿ ಒಮ್ಮೆ ವಿಶ್ವಾಮಿತ್ರರನ್ನು ಕೇಳಿಬಿಡೋಣ.’ ಎಂದುಕೊಂಡು ನಾರದ ಮಹರ್ಷಿ ಎದುರಿಗೆ ಬರುತ್ತಿದ್ದ ವಿಶ್ವಾಮಿತ್ರರನ್ನು ಕುರಿತು ಯಾರಾದರೂ ಹೊಸ ರಕ್ಕಸರು ತಪಸ್ಸಿಗೆ ಕುಳಿತಿರುವರೇ ಎಂದು ಪ್ರಶ್ನಿಸಿದರು. ವಿಶ್ವಾಮಿತ್ರರಿಗೆ ಮೊದಲೇ ದೇವತೆಗಳ ಮೇಲೆ ಅಂತಹ ಗುಡ್ ವಿಲ್ ಏನೂ ಇರಲಿಲ್ಲವಲ್ಲ, ಅದೂ ಅಲ್ಲದೆ ಅವರದು ಪ್ರಕಾಂಡ ಕೋಪ, ಸಿಡಿಮಿಡಿಯಿಂದಲೇ ‘ನನಗೆ ತಿಳಿದಂತೆ ಯಾವ ರಕ್ಕಸನೂ ತಪಸ್ಸಿಗೆ ಕುಳಿತಿಲ್ಲವಲ್ಲ?’ ಎಂದು ಹೇಳಿ ಸರಸರನೆ ನಡೆದು ಹೋದರು.

ನಾರದರ ಗೊಂದಲ ಇನ್ನಷ್ಟು ಹೆಚ್ಚಿತು. ‘ಯಾವ ರಕ್ಕಸನೂ ತಪಸ್ಸಿಗೆ ಕುಳಿತಿಲ್ಲ ಎನ್ನುವುದಾದರೆ ದೇವತೆಗಳಲ್ಲೇಕೆ ಈ ಪರಿಯ ಆತಂಕ, ಗಡಿಬಿಡಿ? ಈ ಇಂದ್ರ ಇನ್ನೇನು ಕಿತಾಪತಿ ಮಾಡಿಕೊಂಡಿರಬಹುದು? ತ್ರಿಲೋಕ ಸಂಚಾರಿಯಾದ ನನಗೇ ತಿಳಿಯದ ಗಾಸಿಪ್ ಯಾವುದಾದರೂ ಟ್ಯಾಬ್ಲಾಯ್ಡ್‍ನಲ್ಲಿ ಪ್ರಕಟವಾಗಿಬಿಟ್ಟಿದೆಯೋ ಹೇಗೆ? ಅದ್ಯಾರು ಈ ಇಂದ್ರನನ್ನು ತಂದು ದೇವತೆಗಳಿಗೆ ಅಧಿಪತಿಯನ್ನಾಗಿ ಮಾಡಿದರೋ ಕಾಣೆ, ಇವನ ಕಿತಾಪತಿ, ದಗಲಬಾಜಿಗಳು ಒಂದೆರೆಡಲ್ಲ. ಎಷ್ಟು ಮಂದಿಯ ಋಷಿ ಮುನಿಗಳ ಹೆಂಡತಿಯರ ಗೌರವವನ್ನು ಹಾಳು ಮಾಡಿಲ್ಲ ಇವನು. ರಾಕ್ಷಸರೂ ಮಾಡಲು ಹಿಂದೆ ಮುಂದೆ ನೋಡುವಂತಹ ಎಷ್ಟು ಕುಟಿಲ ತಂತ್ರಗಳನ್ನು ಇವನು ಮಾಡಿಲ್ಲ. ಎಷ್ಟು ಮಂದಿ ತಪಸ್ವಿಗಳ ಶ್ರದ್ಧೆಯನ್ನು ಕೆಡಿಸಿಲ್ಲ. ಮತ್ತೆ ಇವೆಲ್ಲಕ್ಕೂ ಆತನದ್ದು ಒಂದೇ ಸಮಜಾಯಿಷಿ: ಧರ್ಮ ರಕ್ಷಣೆ! ಯಾರ ಧರ್ಮವನ್ನು ಯಾರು ರಕ್ಷಿಸುತ್ತಾರೋ ಕಾಣೆ. ಈಗ ಮತ್ತೆ ಯಾವುದಾದರೂ ಋಷಿ ಪತ್ನಿಯ ಗೌರವ ಹಾಳು ಮಾಡುವುದಕ್ಕೆ ಈತ ಹೋಗಿದ್ದಾನೆಯೋ ಹೇಗೆ? ಸಿಕ್ಕುಬಿದ್ದು ಋಷಿಗಳಿಂದ ಅದಿನ್ಯಾವ ಶಾಪಗಳನ್ನು ಪಡೆದು ಬರುತ್ತಾನೊ?’ ಎಂದು ಯೋಚಿಸುತ್ತಿರುವಾಗಲೇ ನಾರದರಿಗೆ ವಸಿಷ್ಟರು ಬರುತ್ತಿರುವುದು ಕಂಡಿತು.
ಇಡೀ ದೇವಲೋಕವೇ ಗೊಂದಲದ ಗೂಡಾಗಿದ್ದರೂ ವಸಿಷ್ಟರು ಮಾತ್ರ ತಮ್ಮ ಎಂದಿನ ಸಂಯಮವನ್ನು ಕೆಡಿಸಿಕೊಂಡಿರಲಿಲ್ಲ. ಇವರನ್ನು ಕೇಳಿದರೆ ಅಸಲು ಸಮಾಚಾರ ಏನೆಂದು ತಿಳಿಯಬಹುದು ಎಂದುಕೊಂಡು ಮಹರ್ಷಿ ನಾರದರು ಸೀದಾ ವಸಿಷ್ಟರ ಬಳಿ ಸಾರಿದರು. ‘ವಂದನೆಗಳು, ವಸಿಷ್ಟ ಮಹರ್ಷಿಗಳಿಗೆ… ದೇವಲೋಕ ಯಾಕೋ ಎಂದಿನ ನೆಮ್ಮದಿಯಿಂದ ಕೂಡಿದಂತೆ ಕಾಣುವುದಿಲ್ಲವಲ್ಲ?’ ಎಂದು ನಾರದರು ನೇರವಾಗಿ ವಿಷಯಕ್ಕೇ ಬಂದರು.

ವಸಿಷ್ಟರು ತಮ್ಮ ಸಹಜ ಪ್ರಸನ್ನತೆಯಿಂದಲೇ, ‘ಏನಿಲ್ಲ ನಾರದರೆ, ದೇವೇಂದ್ರನಿಗೆ ಒಂದು ವಿಷಯದ ಬಗೆಗಿನ ಕೊರಗು ಹತ್ತಿಕೊಂಡಿದೆ. ಭೂಲೋಕದಲ್ಲಿ ಮನುಷ್ಯರು ಸಂತೋಷದಿಂದ ಇರುವುದನ್ನು ಕಂಡು ಆತನಿಗೆ ತಲೆಕೆಟ್ಟಿದೆ. ಭೂಲೋಕದಲ್ಲೇ ಮನುಷ್ಯರು ಸಂತೋಷವನ್ನು ಕಂಡುಕೊಂಡರೆ ಅವರಿಗೆ ಸ್ವರ್ಗದ ಬಯಕೆಯೇ ಇಲ್ಲದಂತಾಗಿಬಿಡುತ್ತೆ. ಆಗ ಸ್ವರ್ಗಕ್ಕೆ ಇರುವ ಡಿಮ್ಯಾಂಡ್ ಕಡಿಮೆಯಾಗಿಬಿಡುತ್ತೆ ಎಂಬ ಚಿಂತೆ ಆತನದ್ದು. ಸಂತೋಷವನ್ನು ಮನುಷ್ಯರು ಇಷ್ಟು ಸುಲಭವಾಗಿ ಕಂದುಕೊಂಡರೆ ದೇವತೆಗಳನ್ನಿರಲಿ, ದೇವರುಗಳನ್ನೂ ಮನುಷ್ಯರು ಮರೆತುಬಿಡುತ್ತಾರೆ. ಸ್ವರ್ಗ ನರಕಗಳು, ಯಜ್ಞ-ಯಾಗ, ದೇವರು-ದೇವರ ಹುಂಡಿ, ವ್ರತ- ಸಂಪ್ರದಾಯಗಳ ಮೇಲೆ ಜನರಿಗೆ ನಂಬಿಕೆಯೇ ಹೊರಟುಹೋಗಿಬಿಡುತ್ತೆ. ಆಗ ಸ್ವರ್ಗಕ್ಕೆ ಬೆಲೆಯೆಲ್ಲಿ ಉಳಿದೀತು ಎಂಬ ಹೊಟ್ಟೆಯುರಿ ಇಂದ್ರನಿಗೆ ಹುಟ್ಟಿದೆ. ಅದರ ತಾಪದಿಂದಾಗಿ ದೇವತೆಗಳೆಲ್ಲಾ ಕಂಗಾಲಾಗಿದ್ದಾರೆ. ಅವರ ನೆಮ್ಮದಿ ಹಾರಿಹೋಗಿದೆ. ಸ್ವರ್ಗ ಈಗ ನರಕಕ್ಕಿಂತಲೂ ಕಡೆಯಾಗಿಬಿಟ್ಟಿದೆ. ಅದಕ್ಕೆ ನಾನು ಭೂಲೋಕದ ರೆಸಾರ್ಟ್ ಒಂದರಲ್ಲಿ ಸ್ವಲ್ಪ ಕಾಲದವರೆಗೆ ವಿರಮಿಸಿಕೊಂಡು, ದೇವಲೋಕದ ಅಧಿವೇಶನ ಮುಗಿದ ನಂತರ ಇಲ್ಲಿಗೆ ಆಗಮಿಸುತ್ತೇನೆ. ನೀವೂ ಬರುವುದಿದ್ದರೆ ಹೇಳಿ ನಿಮಗೂ ರೆಸಾರ್ಟ್‍ನಲ್ಲಿ ಒಂದು ರೂಮ್ ಬುಕ್ ಮಾಡುವೆ.’ ಎಂದು ನಾರದರನ್ನು ಆಹ್ವಾನಿಸಿದರು.

ನಾರದರು ವಸಿಷ್ಟರಂತಹ ಹಿರಿಯರೇ ಸ್ವರ್ಗ ಬಿಟ್ಟುಹೋಗುತ್ತಿರುವಾಗ ಸಮಸ್ಯೆ ತುಂಬಾ ಗಂಭೀರವಾಗಿದೆ ಎಂದು ಭಾವಿಸಿ ತಾವು ಸಮಸ್ಯೆಯನ್ನು ಪರಿಹರಿಸಲು ಇಂದ್ರನಿಗೆ ಅಡ್ವೈಸ್ ಮಾಡುವುದಾಗಿ ತಿಳಿಸಿದ್ದರಿಂದ ವಸಿಷ್ಟರು ತಾವೊಬ್ಬರೇ ಭೂಲೋಕದೆಡೆಗೆ ಪಾದ ಬೆಳೆಸಿದರು.

ಸ್ವರ್ಗದ ಅಸ್ವಸ್ಥತೆಗೆ ಕಾರಣವನ್ನು ತಿಳಿದ ನಾರದರಿಗೆ ಅಲ್ಲಿ ಒಂದು ಕ್ಷಣ ನಿಲ್ಲಲಾಗಲಿಲ್ಲ. ಕೂಡಲೆ ಇಂದ್ರನ ಸಭೆಗೆ ಹೋಗಿ ಒಂದು ಅಧಿವೇಶನವನ್ನು ಕರೆಯುವಂತೆ ತಾಕೀತು ಮಾಡಿದರು. ಡ್ಯುಟಿಯಲ್ಲಿದ್ದ, ಡ್ಯುಟಿ ಮುಗಿಸಿಕೊಂಡು ಹೊರಟಿದ್ದ, ಚಿಂತಾಕ್ರಾಂತರಾಗಿ ಸ್ವರ್ಗದ ಬೀದಿಗಳಲ್ಲಿ ನಿಂತು ಹರಟುತ್ತಿದ್ದ ದೇವತೆಗಳೆಲ್ಲ ಅಧಿವೇಶನದಲ್ಲಿ ಸೇರಿದರು. ದೇವತೆಗಳ ಅಧಿಪತಿ ಇಂದ್ರ ಮಾತನ್ನಾರಂಭಿಸಿ ತನನ್ನು ಕಾಡುತ್ತಿದ್ದ ಸಮಸ್ಯೆಯನ್ನು ಸಭೆಗೆ ಗೊತ್ತುಪಡಿಸಿದ. ಆತ ಸಮಸ್ಯೆಯನ್ನು ಹೇಳುವ ಮೊದಲೇ ಅದು ಎಲ್ಲರಿಗೂ ತಿಳಿದಿರುವಂತೆ ಕಂಡಿತು. ದೇವೇಂದ್ರನಿಗೆ ಈ ಟ್ಯಾಬ್ಲಾಯ್ಡ್ ಗಳಿಗೆ ಯಾರದೋ ಮನಸ್ಸಲ್ಲಿರುವ ಹಗರಣಗಳನ್ನು ಜಗತ್ತಿಗೆ ಟಾಂ ಟಾಂ ಮಾಡುವ ವರವನ್ನು ಅದ್ಯಾವ ದೇವರು ಕೊಟ್ಟರೋ ಎಂದುಕೊಂಡು, ತನ್ನ ಸಮಸ್ಯೆಗೆ ಪರಿಹಾರ ಸೂಚಿಸುವಂತೆ ಸಭೆಯನ್ನು ಬಿನ್ನವಿಸಿಕೊಂಡ.

ತನ್ನ ಡ್ಯೂಟಿಯನ್ನು ಅರ್ಧದಲ್ಲೇ ನಿಲ್ಲಿಸಿ ಬಂದದ್ದಕ್ಕೆ ಸಿಡಿಮಿಡಿಗೊಂಡಿದ್ದ ಸೂರ್ಯದೇವ ಆಲೋಚಿಸಿ ಸಮಸ್ಯೆಯನ್ನು ಬೇರು ಸಮೇತ ಕಿತ್ತು ಹಾಕುವುದೇ ಸೂಕ್ತ ಎಂದು ಆಲೋಚಿಸಿ, ‘ಮಾನವರ ಸುಖಕ್ಕೂ ಹಾಗೂ ಸ್ವರ್ಗದ ನೆಮ್ಮದಿಯ ಹರಣಕ್ಕೂ ಕಾರಣವಾಗಿರುವ ಸಂತೋಷವನ್ನು ಮನುಷ್ಯರಿಗೆ ಸಿಕ್ಕದಂತೆ ಎಲ್ಲಿಯಾದರೂ ಅಡಗಿಸಿಟ್ಟುಬಿಡಬೇಕು.’ ಎಂಬ ಸಲಹೆಯನ್ನು ನೀಡಿದ.

ಸೂರ್ಯದೇವನ ಸಲಹೆಗೆ ಇಡೀ ಸಭೆಯೇ ತಲೆದೂಗಿತು. ಆದರೆ ಅಷ್ಟರಲ್ಲೇ ಕಿರಿಯನಾದ ಅಗ್ನಿದೇವ ಎದ್ದುನಿಂತು, ‘ಸೂರ್ಯದೇವ suggest ಮಾಡಿರುವ ಉಪಾಯ ಒಪ್ಪತಕ್ಕದ್ದೇ ಆದರೆ ಸಂತೋಷವನ್ನು ಎಲ್ಲಿ ಅಡಗಿಸಿಡುವುದು? ಈ ಮನುಷ್ಯರು ಭಾರಿ ಬುದ್ಧಿವಂತರು ಸಂತೋಷವನ್ನು ಎಲ್ಲಿಟ್ಟರೂ ಅವರು ಹುಡುಕಿಯೇ ಹುಡುಕುತ್ತಾರೆ.’ ಎಂದ.

ಕಿರಿಯನಾದ ಅಗ್ನಿದೇವನ ಮಾತುಗಳನ್ನು ಕೇಳಿ ಹಲವರಿಗೆ ಆಶ್ಚರ್ಯವಾಯಿತು. ಅವನ ಪ್ರಬುದ್ಧತೆಯನ್ನು ಕಂಡು ಹಿರಿಯನಾದ ಸೂರ್ಯ ದೇವನಿಗೂ ಮೆಚ್ಚುಗೆಯಾಯ್ತು. ಪರವಾಗಿಲ್ಲ ಹುಡುಗ ನನ್ನ ಗರಡಿಯಲ್ಲಿ ಚೆನ್ನಾಗಿ ಬೆಳೆದಿದ್ದಾನೆ ಎಂದುಕೊಂಡು, ‘ಅಗ್ನಿದೇವನ ಮಾತು ಚಿಂತನಯೋಗ್ಯ. ಚಿಕ್ಕವರು ಅಂತ ಈಗ ಇವರನ್ನು ಉಪೇಕ್ಷೆ ಮಾಡುವಂತಿಲ್ಲ ನೋಡಿ, ಹುಡುಗರು ಬಹಳ ಬೇಗ ಬುದ್ಧಿವಂತರಾಗಿಬಿಡ್ತಾರೆ… ಅಂದಹಾಗೆ ಈ ಮನುಷ್ಯರಿಂದ ಸಂತೋಷವನ್ನು ಎಲ್ಲಿ ಬಚ್ಚಿಡುವುದು?’ ಎಂದ ಸಭೆಯನ್ನುದ್ದೇಶಿಸಿ.

ಸೂರ್ಯದೇವನ ಮಾತನ್ನು ಕೇಳಿ ವಾಯುದೇವ ತಾನೇ ಮೊದಲಾಗಿ ಉಪಾಯ ಸೂಚಿಸಲು ಮುಂದಾದ, ‘ಸಂತೋಷವನ್ನು ಭೂಮಂಡಲದ ಅತಿ ಎತ್ತರದ ಪರ್ವತದ ಶಿಖರದಲ್ಲಿ ಹುದುಗಿಸಿಡೋಣ.ಆ ಎತ್ತರಕ್ಕೆ ಮನುಷ್ಯರು ಏರಲು ಸಾಧ್ಯವಿಲ್ಲ.’ ಎಂದ.

ಅಷ್ಟರಲ್ಲೇ, ‘ಮನುಷ್ಯರಿಗೆ ಇವತ್ತು ಆ ಪರ್ವತ ಏರಲು ಸಾಧ್ಯವಾಗದಿದ್ದರೂ ಒಂದಲ್ಲಾ ಒಂದು ದಿನ ಅವರದನ್ನು ಏರಿ ಸಂತೋಷವನ್ನು ಪಡೆದುಕೊಂಡೇ ಬಿಡುತ್ತಾರೆ.’ ಎಂಬ ಧ್ವನಿ ಸಭೆಯಿಂದ ಧಾವಿಸಿ ಬಂದಿತು.

ಮುಂಗಾರು ಮಳೆ ಸುರಿ-ಸುರಿಸಿ ಆಯಾಸಗೊಂಡಿದ್ದ ವರುಣ ದೇವ ತನ್ನ ದಣಿವಿನ ಮಧ್ಯದಲ್ಲೇ ಎದ್ದು ನಿಂತು, ‘ಮನುಷ್ಯನ ಕೈಯಿಂದ ಸಂತೋಷವನ್ನು ಬಚ್ಚಿಡಬೇಕೆಂಡರೆ ಸಾಗರದ ತಳವೇ ಸೂಕ್ತವಾದ ಸ್ಥಳ. ಮನುಷ್ಯ ಅಲ್ಲಿಗೆ ಹೋಗುವ ಕನಸನ್ನೂ ಕಾಣಲಾರ’ ಎಂದನು.

ಅಷ್ಟರಲ್ಲೇ ಸಭೆಯಲ್ಲಿನ ಮತ್ತೊಬ್ಬ ಹಿರಿಯ, ‘ಈ ಮನುಷ್ಯರನ್ನು ಅಷ್ಟು ಲಘುವಾಗಿ ಪರಿಗಣಿಸಲಾಗದು. ಅವರು ತಮ್ಮ ಬುದ್ಧಿಶಕ್ತಿಯಿಂದ ಒಂದಲ್ಲ ಒಂದು ದಿನ ಸಾಗರದ ಆಳವನ್ನು ಬಗೆದು ಸಂತೋಷವನ್ನು ಪಡೆದುಕೊಂಡುಬಿಡಬಲ್ಲರು.’ ಎಂದನು. ಸಭೆ ಅವರ ಮಾತಿಗೆ ತಲೆದೂಗಿತು.

ಎಲ್ಲರೂ ಆಳವಾಗಿ ಆಲೋಚಿಸುತ್ತಿರುವಾಗ ಚಂದ್ರದೇವ ಎದ್ದುನಿಂತು, ‘ಮನುಷ್ಯ ಗಿರಿಶಿಖರವನ್ನು ಏರಬಲ್ಲ, ಸಾಗರದ ಆಳವನ್ನು ಮುಟ್ಟಬಲ್ಲ ಆದರೆ ಆತ ನನ್ನ ಏರಿಯಾಗೆ ಕಾಲಿಡುವ ಸಾಧ್ಯತೆಯಿಲ್ಲವೇ ಇಲ್ಲ. ಹೆಣ್ಣಿನ ಮುಖವನ್ನು ಚಂದ್ರನಿಗೆ ಹೋಲಿಸುತ್ತಾ ಕಾಲಕಳೆಯುತ್ತಾನೆಯೇ ಹೊರತು ಆತನೆಂದೂ ಚಂದ್ರನನ್ನು ಮುಟ್ಟಲು ಸಾಧ್ಯವಿಲ್ಲ. ಆದ್ದರಿಂದ ಸಂತೋಷವನ್ನು ನನ್ನ ಲೋಕದಲ್ಲಿ ಬಚ್ಚಿಟ್ಟುಬಿಟ್ಟರೆ ನಮ್ಮೆಲ್ಲರ ಚಿಂತೆ ಕಳೆದಂತೆಯೇ.’ ಎಂದ ಖಚಿತವಾದ ಧ್ವನಿಯಲ್ಲಿ.

ಸಭೆಯು ಮೌನವಾಯಿತು. ಬಹುಪಾಲು ದೇವತೆಗಳಿಗೆ ಚಂದ್ರನ ಮಾತು ಒಪ್ಪಿತವಾಯಿತು. ಆದರೆ ಅಷ್ಟರಲ್ಲಿ ನಾರದ ಮಹರ್ಷಿಗಳು ಮಾತನಾಡಿದರು ‘ಮನುಷ್ಯನ ವಿಚಾರಶಕ್ತಿ, ಆತ್ಮಸ್ಥೈರ್ಯಕ್ಕೆ ಚಂದ್ರಲೋಕವನ್ನು ಮೆಟ್ಟುವುದು ಅಸಾಧ್ಯವೇನಲ್ಲ. ಇಂತಹ ಟೆಂಪೊರರಿ ಉಪಾಯಗಳ ಬದಲಾಗಿ ಯಾವುದಾದರೂ ಪರ್ಮನೆಂಟ್ ಉಪಾಯ ಕಂಡುಕೊಳ್ಳಬೇಕು.ಅವರು ಅದೆಷ್ಟು ತಿಪ್ಪರಲಾಗ ಹಾಕಿದರೂ ಸಂತೋಷವನ್ನು ಕಂಡುಕೊಳ್ಳುವುದು ಎಲ್ಲಿ ಅನ್ನೋದು ಅವರಿಗೆ ತಿಳಿಯಬಾರದು. ಅಂತಹ ಜಾಗವನ್ನು ಹುಡುಕಬೇಕು…’

ನಾರದರ ಮಾತಿನಿಂದ ಸಭೆಯಲ್ಲಿನ ಮೌನ ಮತ್ತಷ್ಟು ಗಾಢವಾಯಿತು. ಎಲ್ಲರೂ ದೀರ್ಘವಾಗಿ ಚಿಂತಿಸುತ್ತಾ ಕುಳಿತಿದ್ದರು. ಸೂಜಿ ಬಿದ್ದರೂ ಬಾಂಬ್ ಬಿದ್ದಷ್ಟು ಸದ್ದಾಗಬಹುದಾದಷ್ಟು ಮೌನ. ಇದುವರೆಗೂ ಏನೂ ಮಾತನಾಡದೆ ಸುಮ್ಮನೆ ಕುಳಿತಿದ್ದ ಅಶ್ವಿನಿ ದೇವತೆಗಳು ಎದ್ದುನಿಂತರು. ದೇವತೆಗಳಿಗೆ ಈ ಪಿಳ್ಳೆಗಳೇನು ಹೇಳಿಯಾರು ಎಂಬ ಲೇವಡಿ ಮಾಡುವ ತವಕ. ಆದರೆ ತಾವೇ ಏನೂ ಹೊಳೆಯದ ಅಸಹಾಯಕತೆಯಲ್ಲಿರುವಾಗ ಅವರನ್ನು ಛೇಡಿಸುವುದಾದರೂ ಹೇಗೆ ಎಂದುಕೊಂಡು ಸುಮ್ಮನಾದರು. ಅವರು ಏನು ಹೇಳಬಹುದು ಎಂಬ ಕಾತರದಿಂದ ಸಭೆ ತೊಯ್ದು ತೊಟ್ಟಿಕ್ಕುತ್ತಿತ್ತು.

‘ಮನುಷ್ಯನ ಸಂಕಲ್ಪ ಶಕ್ತಿ ಹಾಗೂ ಆತನ ಸಾಹಸದ ಮುಂದೆ ನಾವುಡ್ಡೊವ ಸವಾಲುಗಳ್ಯಾವುವೂ ನಿಲ್ಲುವುದಿಲ್ಲ. ಬ್ರಹ್ಮಾಂಡದ ಯಾವ ಮೂಲೆಯಲ್ಲಿ ಅಡಗಿಸಿಟ್ಟರೂ ಆತ ಒಂದಲ್ಲ ಒಂದು ದಿನ ಸಂತೋಷವನ್ನು ಪಡೆದೇ ತೀರುತ್ತಾನೆ. ಹಾಗಾಗಿ ಸಂತೋಷವನ್ನು ಹೊರಗೆಲ್ಲೋ ಬಚ್ಚಿಡುವ ಉಪಾಯ ಫಲಿಸುವುದಿಲ್ಲ. ಮನುಷ್ಯನಿಂದ ಸಂತೋಷವನ್ನು ಕಿತ್ತುಕೊಂಡ ನಂತರ ಅದನ್ನು ಎಂತಹ ಜಾಗದಲ್ಲಿಡಬೇಕೆಂದರೆ ಅದನ್ನು ಹುಡುಕುತ್ತಾ ಆತ ಇಡೀ ಬ್ರಹ್ಮಾಂಡವನ್ನೇ ಸಂಶೋಧಿಸಿದರೂ ಅದು ಆತನಿಗೆ ದೊರಕಬಾರದು…’ ಎಂದ ಅಶ್ವಿನಿದೇವತೆಗಳಲ್ಲಿ ಒಬ್ಬನು.

ಆ ಜಾಗ ಯಾವುದಿರಬಹುದೆಂಬ ಕುತೂಹಲದಿಂದ ಎಲ್ಲರೂ ತದೇಕಚಿತ್ತದಿಂದ ಅವರ ಮುಂದಿನ ಮಾತಿಗಾಗಿ ಎದುರುನೋಡುತ್ತಿದ್ದರು. ಮಾತು ಮುಂದುವರಿಸಿದ ಅಶ್ವಿನಿ ದೇವತೆ, ‘ಆದ್ದರಿಂದ ಸಂತೋಷವನ್ನು ಹೊರಗೆಲ್ಲೋ ಅಡಗಿಸಿಡುವ ಬದಲು ಅದನ್ನು ಮನುಷ್ಯನ ಮನಸ್ಸಿನಲ್ಲೇ ಬಚ್ಚಿಟ್ಟುಬಿಡೋಣ. ಆತ ಅದರ ಹುಡುಕಾಟದಲ್ಲಿ ಬ್ರಹ್ಮಾಂಡದ ಶೋಧದಲ್ಲಿ ತೊಡಗುತ್ತಾನೆ ವಿನಃ ಅದು ತನ್ನೊಳಗೇ ಇದೆ ಎಂಬುದಾಗಿ ಯೋಚಿಸುವುದೂ ಇಲ್ಲ. ಆತ ಎಂದೆಂದೂ ಹೊರಗಿನ ಜಗತ್ತಿನಲ್ಲಿ ಸಂತೋಷವನ್ನು ಹುಡುಕಾಡುತ್ತಲೇ ಇರುತ್ತಾನೆ. ತನ್ನೊಳಗೆ ತಿರುಗಿಕೊಂಡು ಆತ ಅದನ್ನು ಕಂಡುಕೊಳ್ಳುವ ಸಾಧ್ಯತೆ ಇಲ್ಲವೇ ಇಲ್ಲ.’ ಎಂದು ಮಾತು ಮುಗಿಸಿದ.

ಆತನ ಉಪಾಯವನ್ನು ಕೇಳಿ ಸಭೆ ಹರ್ಷೋದ್ಗಾರದಿಂದ ತುಂಬಿತು. ಸ್ವರ್ಗದ ಅಧಿಪತಿ ಇಂದ್ರನಿಗಂತೂ ತಡೆಯಲಾಗದಷ್ಟು ಸಂತಸ ಉಕ್ಕಿಬಂತು. ಕೂಡಲೆ ಆತ ಭೂಲೋಕದ ಸಮಸ್ತ ಸಂತೋಷವನ್ನು ಮನುಷ್ಯನ ಮನಸ್ಸಿನಲ್ಲಿ ಹುದುಗಿಸಿಟ್ಟ. ಭೂಲೋಕದ ಮೇಲೆ ಅತೃಪ್ತಿ, ದುಃಖ, ಅಸೂಯೆ, ಅಸೌಖ್ಯ, ಅನ್ಯಾಯಗಳು ಪ್ರಾರಂಭವಾದವು. ಮನುಷ್ಯರು ಸಂತೋಷವನ್ನರಸಿಕೊಂಡು ಅಲೆಯಲಾರಂಭಿಸಿದರು. ಹೊಸ ಹೊಸ ಪ್ರದೇಶಗಳಿಗೆ ಹೋಗಲಾರಂಭಿಸಿದರು. ಹೊಸ ವಸ್ತುಗಳನ್ನು ಕಂಡುಹಿಡಿಯಲಾರಂಭಿಸಿದರು. ಹೊಸ ಸಿದ್ಧಾಂತಗಳನ್ನು ರೂಪಿಸಲಾರಂಭಿಸಿದರು. ಕೊನೆಗೆ ಈ ಭೂಲೋಕದಲ್ಲಿ ಸಂತೋಷವಿಲ್ಲ, ಸತ್ತ ಮೇಲೆ ಸ್ವರ್ಗದಲ್ಲಿ ಅದನ್ನು ಪಡೆಯಬಹುದು ಎಂದು ಕೈಚೆಲ್ಲಿ ಕುಳಿತರು. ಯಾರೊಬ್ಬರೂ ತಮ್ಮೊಳಗೇ ಅಡಗಿರುವ ಸಂತೋಷವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಸ್ವರ್ಗಕ್ಕೆ ಮತ್ತೆ ಡಿಮಾಂಡ್ ಹೆಚ್ಚಿತು. ಇಂದ್ರ ಸದ್ಯದ ಮಟ್ಟಿಗೆ ನಿರಾಳನಾದ!


Technorati : , ,

ಪರಮೇಶಿ ನಿದ್ದೆ ಪ್ರಸಂಗ!

14 ಫೆಬ್ರ

ಇಂಜಿನಿಯರಿಂಗ್ ಓದಿಕೊಳ್ಳುತ್ತ ತನ್ನ ಓರಗೆಯ ಗೆಳೆಯರನ್ನು ಕೂಡಿಕೊಂಡು ‘ಸಡಗರ’ಎಂಬ ಸಣ್ಣದೊಂದು ಮಾಸಪತ್ರಿಕೆಯನ್ನು ಕಳೆದ ಒಂದು ವರ್ಷದಿಂದ ATgAAAB1OtHeNNbJAjB6kEYZkQx1sI6fRkj7Z_AEdZaDUj-PrbID2cxZkt_B3jDu_s8uV9cazNPsYx4g5-ifFW-aw6gkAJtU9VA_OqFoXWvKxVaBRnb342R7bVptRw.jpgನಡೆಸುತ್ತಿರುವವರು ಸುಪ್ರೀತ್.ಕೆ.ಎಸ್. ಹದಿಹರೆಯದ ಹುಮ್ಮಸ್ಸು, ಹಸಿಯಾದ ಕ್ರಿಯಾಶೀಲತೆ ಪತ್ರಿಕೆಯ ಪ್ರತಿ ವಿಭಾಗದಲ್ಲೂ ಎದ್ದು ಕಾಣುತ್ತದೆ. ‘ಸಡಗರ’ಪತ್ರಿಕೆಯಲ್ಲಿ ಪ್ರಕಟವಾಗುವ ಅವರ ಹಾಸ್ಯ ಬರಹಗಳನ್ನು ನಗೆ ನಗಾರಿ ಡಾಟ್ ಕಾಮ್ ‍ನೊಂದಿಗೆ ಹಂಚಿಕೊಳ್ಳಲು ಒಪ್ಪಿಕೊಂಡಿದ್ದಾರೆ.

ತರಗತಿಯಲ್ಲಿ ಅಧ್ಯಾಪಕರ ಕರ್ಣಕಠೋರವಾದ ಪಾಠದ ನಡುವೆಯೂ ತಪಸ್ಸಿನ ಹಾಗೆ ನಿದ್ರೆ ಮಾಡುತ್ತಿದ್ದ ಪರಮೇಶಿಯ ಬಗ್ಗೆ ಈ ವಾರ ಬರೆದಿದ್ದಾರೆ.

ಇದು ಈ ಅಂಕಣಕಾರರ ಮೂರನೆಯ ಲೇಖನ.
ಹಿಂದಿನ ಲೇಖನ ಇಲ್ಲಿದೆ.

ನಮ್ಮ ಕ್ಲಾಸಿನಲ್ಲಿ ಪರಮೇಶಿ ಅಂದರೆ ಎಲ್ಲರಿಗೂ ಭಯಮಿಶ್ರಿತ ಗೌರವ. ಏನೋ ಅಭಿಮಾನ. ನಮ್ಮೆಲ್ಲರಿಗೂ ಆತ ದೊಡ್ಡ ಕ್ರಾಂತಿಕಾರಿಯಂತೆ, ಮಹಾ ಧೈರ್ಯವಂತನಂತೆ ಕಾಣುತ್ತಿದ್ದ. ತರಗತಿಯ ಶಿಕ್ಷಕರಿಗಂತೂ ಅವನೆಂದರೆ ದುಸ್ವಪ್ನ. ಅದು ಯಾವ ಉಪಾಧ್ಯಾಯರ ಕ್ಲಾಸೇ ಇರಲಿ, ಅವರು ಅದೆಷ್ಟೇ ಕಟ್ಟುನಿಟ್ಟಿನವರಾಗಿರಲಿ, ಅವರು ಕೈಲಿ ಬೆತ್ತವನ್ನೇ ಏನು ಚಾಟಿಯನ್ನೇ ಹಿಡಿದುಕೊಂಡುಬರಲಿ, ಅವರು ಮಾಡುವ ಪಾಠ ಅವನಿಗೆ ಹಿಡಿಸಲಿಲ್ಲ, ಅವನ ತಲೆಗೆ ಹತ್ತಲಿಲ್ಲ ಅಂದರೆ ಸಾಕು ತನ್ನೆದುರಿನ ಡೆಸ್ಕ್‌ಗೆ ತನ್ನೆರೆಡು ಕೈಗಳನ್ನು ಮೊಣಕೈವರೆಗೂ ಊರಿ ಆಸನ ಸಿದ್ಧಪಡಿಸಿಕೊಂಡು ತನ್ನ ತಲೆಯನ್ನು ಅದರ ಮೇಲೆ ಪ್ರತಿಷ್ಠಾಪಿಸಿ ಸೊಂಪಾಗಿ ನಿದ್ದೆ ಮಾಡಲಾರಂಭಿಸುತ್ತಾನೆ. ಉಪಾಧ್ಯಾಯರು ನೋಡಿ ಸನ್ನೆ ಮಾಡಿದಾಗ ಪಕ್ಕದವರು ಅವನ ಬೆನ್ನಿಗೆ ತಿವಿದರೂ ಅವನಿಗೆ ತಿಳಿಯುವುದಿಲ್ಲ. ಉಪಾಧ್ಯಾಯರೇ ಬೆತ್ತದಿಂದ ಅವನ ಬೊಜ್ಜು ಹೊಟ್ಟೆಗೆ ತಿವಿದರೂ ಕೆಲವೊಮ್ಮೆ ಅವನನ್ನು ‘ಸಮಾಧಿ ಸ್ಥಿತಿ’ಯಿಂದ ಹೊರಗೆಳೆಯಲು ಸಾಧ್ಯವಾಗುವುದಿಲ್ಲ.

ಪರಮೇಶಿಗೆ ಜಗತ್ತಿನಲ್ಲಿ ಮಾಡಲಿಕ್ಕಿರುವುದು ಎರಡೇ ಕೆಲಸ. ಒಂದು ಹೊಟ್ಟೆ ತುಂಬಾ ತಿನ್ನುವುದು ಮತ್ತೊಂದು ಕಣ್ಣುತುಂಬಾ ನಿದ್ದೆ ಮಾಡುವುದು. ದೇವರು ಒಬ್ಬೊಬ್ಬರನ್ನು ಒಂದೊಂದು ಕೆಲಸ ಮಾಡುವುದಕ್ಕಾಗಿ ಭೂಮಿಗೆ ಕಳುಹಿಸಿರುತ್ತಾನೆ ಎಂದು ಬಲವಾಗಿ ನಂಬಿರುವ ಈತ ತನ್ನನ್ನು ದೇವರು ಈ ಎರಡು ಮಹತ್ಕಾರ್ಯ ಮಾಡಲಿಕ್ಕಾಗಿಯೇ ಕಳುಹಿಸಿಕೊಟ್ಟಿದ್ದಾನೆ ಎಂದು ಅವರಪ್ಪನ ಮೇಲೆ ಆಣೆ ಹಾಕಿ ಹೇಳುತ್ತಾನೆ. ಊಟಕ್ಕೆ ಕುಳಿತರೆ ಅವನೇ ಭೀಮಸೇನ, ಅವನೇ ಘಟೋತ್ಗಜ. ಮೂರು ಮೂರು ಮಂದಿಯ ಊಟವನ್ನೇ ಒಬ್ಬನೇ ಅನಾಯಾಸವಾಗಿ ಉಂಡು ‘ಈಗೀಗ ನಾನು ಊಟ ಕಡಿಮೆ ಮಾಡಿಬಿಟ್ಟಿದ್ದೇನೆ. ಈ ಹಾಳಾದ್ದು ಬೊಜ್ಜು ಬೆಳೆದುಬಿಟ್ಟಿದೆ. ಕರಗಿಸಬೇಕು.’ ಎಂದು ಶುದ್ಧ ಸಂತನಂತೆ ಮಾತನಾಡುತ್ತಾನೆ. ಅವನ ಭರಪೂರವಾದ ಊಟ, ಸೊಂಪಾದ ನಿದ್ದೆಯನ್ನು ಕಂಡು ಕರುಬಿದವರು ಎಷ್ಟು ಜನ? ಖ್ಯಾತ ಬರಹಗಾರರೊಬ್ಬರು `ಜಗತ್ತಿಗೇ ಹೊಟ್ಟೆ ಕಿಚ್ಚಾಗುವಂತೆ ಬದುಕ್ರೋ’ ಎಂದದ್ದನ್ನು ನಮ್ಮ ಪರಮೇಶಿ ಕಾಯಾ-ವಾಚಾ-ಮನಸಾ ಪಾಲಿಸುತ್ತಿದ್ದಾನೆ.

ತರಗತಿಯಲ್ಲಿ ನಿದ್ದೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಮನೆಯಲ್ಲಿ ಮೆದುವಾದ ಹಂಸ ತೋಲಿಕಾತಲ್ಪದಂತಹ ಹಾಸಿಗೆ, ತಲೆ ಮೇಲೆ ಗಿರ್ರನೆ ತಿರುಗುವ ಫ್ಯಾನು ಇದ್ದರೂ ಹಲವರಿಗೆ ನಿದ್ದೆ ಬರುವುದೇ ಇಲ್ಲ. ನಿದ್ರಾದೇವಿಯನ್ನು ಒಲಿಸಿಕೊಳ್ಳುವುದಕ್ಕಾಗಿ ಅನೇಕರು ಅನೇಕ ವಿಧವಾದ ತಪಸ್ಸುಗಳನ್ನಾಚರಿಸುತ್ತಾರೆ. ಹಲವಾರು ಟಾನಿಕ್, ಮಾತ್ರೆಗಳನ್ನು ನುಂಗಿ ಬಸವಳಿಯುತ್ತಾರೆ. ಆದರೆ ತಲೆಯಿಡಲು ಒಂದು ಮೆತ್ತನೆಯ ಆಸರೆಯಿಲ್ಲದೆ, ಕಾಲುಚಾಚಲು ಜಾಗವಿಲ್ಲದ ಪರಮ ಅಸುಖಿ ಪರಿಸ್ಥಿತಿಯಲ್ಲಿ ನಿದ್ರಾದೇವಿಯನ್ನು ಒಲಿಸಿಕೊಳ್ಳುವುದಕ್ಕೆ ಅದೆಂತಹ ಸಾಧನೆಯನ್ನು ಮಾಡಿರಬೇಕು ಅಲ್ಲವೇ? ಮೇಲಾಗಿ ತರಗತಿಯಲ್ಲಿನ `ನಿದ್ರಾ ತಪಸ್ಸಿ’ಗೆ ನೂರೆಂಟು ವಿಘ್ನಗಳು. ಶಾಲೆಯ ಅಕ್ಕಪಕ್ಕದ ರಸ್ತೆಗಳಲ್ಲಿ ಭರ್ರೋ ಎಂದು ಓಡುವ ವಾಹನಗಳ ಗೌಜು-ಗದ್ದಲ, ಅವುಗಳ ಹಾರನ್ ಹೊರಡಿಸುವ ಭಯಾನಕ ಸದ್ದು, ಸರಿಯಾದ ಕಿಟಕಿಗಳಿಲ್ಲದೆ, ಒಂದು ಫ್ಯಾನಿಲ್ಲದೆ ಅನುಭವಿಸುವ ನರಕಯಾತನೆಯಂತಹ ಸೆಖೆ, ಅಕ್ಕಪಕ್ಕ ಪಾಠಕೇಳುತ್ತಾ ಕುಳಿತವರಿಗೆ ತೊಂದರೆ ಕೊಡಬಾರದೆಂಬ ಎಚ್ಚರ, ಪಾಠ ಮಾಡುವು ಉಪಾಧ್ಯಾಯರಿಗೆ ಗೊತ್ತಾಗದ ಹಾಗೆ ತಪಸ್ಸಿಗೆ ಕುಳಿತುಕೊಳ್ಳಬೇಕಾದ ಅನಿವಾರ್ಯತೆ, ಎಲ್ಲಕ್ಕಿಂಗ ಮಿಗಿಲಾಗಿ ಕರ್ಣಕಠೋರವಾದ ಶಿಕ್ಷಕರ ಪಾಠದ ಅರಚಾಟ- ಇವೆಲ್ಲವನ್ನೂ ಮೆಟ್ಟಿ ನಿಂತು (ಅಲ್ಲಲ್ಲ, ಕುಳಿತು) ನಿದ್ದೆ ಮಾಡುವ ಪರಮೇಶಿ ಮಹಾನ್ ಸಾಧಕನಲ್ಲದೆ ಮತ್ತೇನು?

ತರಗತಿಯಲ್ಲಿ ಕುಳಿತು ನಿದ್ದೆ ಮಾಡುವುದಕ್ಕೂ ಪ್ರತಿಭೆಯಿರಬೇಕು ಎಂಬುದು ಪರಮೇಶಿಯ ಅಭಿಪ್ರಾಯ. ಮೇಲೆ ಹೇಳಿದ ವಿಘ್ನಗಳನ್ನು ಮೀರಿದರೂ ಯಶಸ್ವಿಯಾಗಿ ನಿದ್ದೆ ಮಾಡಲು ಅನೇಕರಿಗೆ ಸಾಧ್ಯವಾಗುದಿಲ್ಲ. ನಿದ್ದೆ ಮಾಡುವಾಗಿನ ಭಂಗಿಯ ಕಡೆಗೆ ಹೆಚ್ಚಿನ ಗಮನಕೊಡಬೇಕು ಎಂಬುದು ಅವನ ಸಲಹೆ. ಎಲ್ಲಾ ಭಂಗಿಗಳಿಗಿಂತ ಅಪಾಯಕಾರಿಯಾದದ್ದು: ಮೊಣಕೈಯನ್ನು ಮೇಜಿನ ಮೇಲೆ ಊರಿ, ಒಂದೇ ಕೈಯ ಮೇಲೆ ಗದ್ದವಿಟ್ಟುಕೊಂಡು ನಿದ್ದೆಗೆ ಶರಣಾಗುವುದು. ಹಾಗೆ ಮಾಡುವುದರಿಂದ ತಪಸ್ಸಿನಲ್ಲಿ ಲೀನವಾಗಿರುವ ದೇಹವನ್ನು ಬ್ಯಾಲೆನ್ಸ್ ಮಾಡಲು ಸಾಧ್ಯವಾಗದೆ ತಕ್ಕಡಿಯನ್ನು ತೂಗಿದಂತೆ ಒಮ್ಮೆ ಅತ್ತಲೂ ಒಮ್ಮೆ ಇತ್ತಲೂ ತಲೆಯಾಡಿಸುತ್ತಾ ತಾನು ನಿದ್ರಿಸುತ್ತಿದ್ದೇನೆ ಎಂಬ ರಹಸ್ಯವನ್ನು ಜಗಜ್ಜಾಹೀರು ಮಾಡಿದಂತಾಗುತ್ತದೆ. ಅಷ್ಟೇ ಅಲ್ಲದೆ ಅಕ್ಕಪಕ್ಕದಲ್ಲಿರುವ ವಿಘ್ನಸಂತೋಷಿಗಳ್ಯಾರಾದರೂ ನಮ್ಮ ತಲೆಗೆ ಆಸರೆಯಾಗಿರುವ ಕೈಯನ್ನು ಜರುಗಿಸಿಬಿಟ್ಟರೆ ವರ್ಲ್ಡ್ ಟ್ರೇಡ್ ಸೆಂಟರಿನ ಹಾಗೆ ತಲೆ ಮೇಜಿನ ಮೇಲಪ್ಪಳಿಸಿ ಬಾಯಲ್ಲಿರುವ ಹಲ್ಲುಗಳಿಗೋ ಇಲ್ಲ ಮೂಗಿಗೋ ಮೋಕ್ಷವಾಗುದಂತೂ ಗ್ಯಾರಂಟಿ.ಈ ವಿಚಾರವಾಗಿ ಬಹಳಷ್ಟು ಸಂಶೋಧನೆ ಮಾಡುತ್ತಿರುವ ಪರಮೇಶಿ ನಿದ್ರಿಸಲು ಅತ್ಯಂತ ಪರಿಣಾಮಕಾರಿಯಾದ ಭಂಗಿಯೊಂದನ್ನು ಸಿದ್ಧಪಡಿಸುತ್ತಿರುವುದಾಗಿಯೂ, ಅದು ಸಿದ್ಧವಾದರೆ ತರಗತಿಯಲ್ಲಿ ವಿದ್ಯಾರ್ಥಿಗಳು ಯಾವ ಅಡ್ಡಿ ಆತಂಕವಿಲ್ಲದೆ, ಯಾರ ಭಯವೂ ಇಲ್ಲದೆ ಆರಾಮಾಗಿ ನಿದ್ರಿಸಬಹುದೆಂದು ಹೇಳಿದ್ದಾನೆ.


Technorati : , , , ,

ಪ್ರಥಮ ಚುಂಬನ ದಂತ ಭಗ್ನ!

10 ಫೆಬ್ರ

ತಮ್ಮನ್ನೇ ತಾವು ಹಾಸ್ಯಕ್ಕೆ ಒಡ್ಡಿಕೊಳ್ಳುವುದು ಎಂಹ ಗಮ್ಮತ್ತಿನ ಸಂಗತಿ ಎಂಬುದನ್ನು ಕಂಡುಕೊಂಡಿರುವ ‘ಶಮ್ಮಿ’ಯವರು ಮೊಟ್ಟ ಮೊದಲಬಾರಿಗೆ ಹೆಲ್ಮೆಟ್ಟಿಲ್ಲದೆ ಬೆಂಗಳೂರಿನ ರಸ್ತೆಯ ಮೇಲಿಳಿದು ಪಟ್ಟ ಪಡಿಪಾಟಲನ್ನು ಈ ಲಲಿತ ಪ್ರಬಂಧದಲ್ಲಿ ನವಿರಾಗಿ ಬಿಚ್ಚಿಟ್ಟಿದ್ದಾರೆ.

ನಾನು ಪೇಚಿಗೆ ಬಿದ್ದ ಪ್ರಸಂಗವೇ, ಲಲಿತ ಪ್ರಬಂಧದ ವಿಷಯ. ನಾನು ಖುದ್ದಾಗಿ ಅನುಭವಿಸಿದ ಪೇಚಾಟವನ್ನು ಬರೆಯಬೇಕೆಂದು ಬಹಳ ದಿನಗಳಿಂದ ಅಂದುಕೊಳ್ಳುತ್ತಿದ್ದೆ. ಯಾವಾಗಲೂ ಬೇರೆಯವರ ಮೇಲೆ ಕಾಮಿಡಿ ಬರೆಯುವುದು ಸುಲಭ. ಆದರೆ ಕಾಮಿಡಿಯ ಕುರಿ ನಾವೇ ಆದಾಗ , ಪ್ರಸಂಗದ ಪೇಚಾಟವು ಆಮೇಲೆ ಮೆಲುಕು ಹಾಕಲು ಸೊಗಸು.

ಪೀಠಿಕೆ ಸಾಕಲ್ಲವೇ? ವಿಷಯ ಮು೦ದುವರಿಸುತ್ತೇನೆ. ನಾನು ಯಾವಾಗಲೂ ದ್ವಿಚಕ್ರವಾಹನವನ್ನು ಚಲಾಯಿಸುವಾಗ ( ಸೈಕಲ್ ಅಲ್ಲ ! ) ನಮ್ಮ ಘನ ಸರಕಾರದ ನಿಯಮದ೦ತೆ, ಶಿರಸ್ತ್ರಾಣವನ್ನು ( ಅಚ್ಚ ಕನ್ನಡದಲ್ಲಿ ಹೆಲ್ಮೆಟನ್ನು ! ) , ತಲೆಯ ಮೇಲೆ ಧರಿಸಿಕೊ೦ಡೇ ಚಲಾಯಿಸುವುದು. ಯಾಕೆ೦ದರೆ ಕಟ್ಟುನಿಟ್ಟಾಗಿ ಯಾವುದೇ ನಿಯಮವನ್ನು ಪಾಲಿಸುವ ಚಟ ನನಗೆ ಹುಟ್ಟಿನಿ೦ದ ಕರಗತ. ಬೆ೦ಗಳೂರು, ಕಳೆದ ೨೦೦೭ರ ಮಾರ್ಚ್ ತಿ೦ಗಳಿನ ಉರಿಬಿಸಿಲಿನಲ್ಲಿ, ಹೆಸರಿಗೆ ತಕ್ಕ೦ತೆ ಬೆ೦ದು ಕಾಳಾಗಿತ್ತು. ನಾನು ಸಮಯದಲ್ಲೇ, ನನ್ನ ಕಿವಿಗಳ ಮುಚ್ಚಿಹೋಗಿದ್ದ ಮೂರನೆಯ ಓಲೆಗಳ ತೂತುಗಳಿಗೆ ಹೊಸ ಓಲೆಗಳನ್ನು ಹಾಕಿಕೊ೦ಡಿದ್ದೆ. ಅವು ತುಂಬಾ ನೋವು ಕೊಡುತ್ತಿದ್ದರಿ೦ದ, ಕಿವಿಗಳು ಕೆ೦ಪಾಗಿ ಊದಿಕೊ೦ಡಿದ್ದವು. ಕಾರಣದಿಂದಲೂ ಮತ್ತು ಬಿಸಿಲಿನ ಝಳ ಹೆಚ್ಚಾಗಿ ಬೆವರು ಧಾರಾಕಾರವಾಗಿ ಹರಿಯುತ್ತಿದ್ದರಿ೦ದಲೂ ಹೆಲ್ಮೆಟನ್ನು ಪಕ್ಕಕ್ಕಿಟ್ಟು , ಮಗಳನ್ನು ಸ್ಕೂಲಿ೦ದ ಕರೆದುಕೊ೦ಡು ಬರಲು ಮಟಮಟ ಮಧ್ಯಾಹ್ನ ೧೨ ಗ೦ಟೆಗೆ ನನ್ನ ದ್ವಿಚಕ್ರ ವಾಹನದಲ್ಲಿ ಹೊರಟೆ.489476666_7d06821aa7.jpg

ನಮ್ಮ ಮನೆಯಿ೦ದ ವಾಹನದಲ್ಲಿ ಹೋದರೆ, ನನ್ನ ಮಗಳ ಸ್ಕೂಲಿಗೆ ಕೇವಲ ೧೦ ನಿಮಿಷದ ದಾರಿ. ದಾರಿ ಮಧ್ಯದಲ್ಲಿ ಒ೦ದು ಸ೦ಚಾರ ತಡೆಯ ಸಿಗ್ನಲ್ ಇದೆ. ಅಲ್ಲಿ ಸ೦ಚಾರದ ನಿಯಮ ಮುರಿದು ರಾಜಾರೋಷವಾಗಿ ಓಡಾಡುವ ವಾಹನ ಚಾಲಕರು ನಿಮ್ಮ ಕಣ್ಣುಗಳನ್ನು ಸ್ವಲ್ಪ ಹಾಯಿಸಿದರೆ ಸಾಕು, ದಿನಾ ಬೇಕಾದಷ್ಟು ಸಿಗುತ್ತಾರೆ. ಅ೦ಥಾ ಸಮಯದಲ್ಲಿ ನಾನು ಯಾವಾಗಲೂ ಹೆಲ್ಮೆಟ್ ಧರಿಸಿ , ಸ೦ಚಾರ ನಿಯಮ ಪಾಲಿಸಿಕೊ೦ಡು ವಾಹನವನ್ನು ಚಲಾಯಿಸುವಾಗ , ಒ೦ದು ಸೊಳ್ಳೆ ಹಿಡಿಯಲೂ ಸಹ ನಮ್ಮ ಸ೦ಚಾರಿ ಪೋಲೀಸರು ಅಲ್ಲಿ ಇರುತ್ತಿರಲಿಲ್ಲ. ಯಾವಾಗಲೋ ಒಮ್ಮೆ ಮಾಜಿ ಪ್ರಧಾನ ಮ೦ತ್ರಿಗಳೋ, ಅವರ ಮಕ್ಕಳೋ ಓಡಾಡುವಾಗ, ಇಲ್ಲದ್ದಿದ್ದರೆ ತಿ೦ಗಳ ಕೊನೆಯಲ್ಲಿ ಮಿಕಗಳನ್ನು ಹಿಡಿದು ತಮ್ಮ ಪಾಕೀಟುಗಳನ್ನು ತು೦ಬಿಸಿಕೊಳ್ಳಲಷ್ಟೇ, ಸಿಗ್ನಲ್ ಬಳಿ ಸ೦ಚಾರಿ ಪೋಲೀಸರು ಕಾಟಾಚಾರಕ್ಕೆ ಹಾಜರಿದ್ದು ತಮ್ಮ ಕಾರ್ಯವೈಖರಿಯ ಪ್ರದರ್ಶನ ನೀಡುತ್ತಾರೆ. ಇದು ನಾನು ರಸ್ತೆಯಲ್ಲಿ ನಾನು ದಿನನಿತ್ಯ ಓಡಾಡುವಾಗ ಕ೦ಡು ಬರುವ ದೃಶ್ಯ.

ಆದರೆ ನೋಡಿ, ನಿಮಗೆ ನಾನು ಮೊದಲೇ ಹೇಳಿದ೦ತೆ, ಶುಭದಿನ ನನ್ನ ಗ್ರಹಚಾರ ಕೆಟ್ಟಿತ್ತಲ್ಲ. ಆವತ್ತು ಸಿಗ್ನಲಿನಲ್ಲೇ ಇಬ್ಬರು ಸ೦ಚಾರಿ ಪೋಲೀಸ್ ಮಾವ೦ದಿರು ನನ್ನ ಮು೦ದೆಯೇ, ಬೈಕಿನಲ್ಲಿ ಸವಾರಿ ಹೊರಟಿದ್ದರು. ಸಿಗ್ನಲ್ ದಾಟಿ, ಅವರು, ನಾನು ಹೋಗಬೇಕಾಗಿದ್ದ ರಸ್ತೆಯ ಎಡಭಾಗದಲ್ಲೇ ತಮ್ಮ ಬೈಕ್ ನಿಲ್ಲಿಸಿ ಝಾ೦ಡಾ ಊರಿದರು. ಹೆಲ್ಮೆಟ್ ಹಾಕದೆ ದ್ವಿಚಕ್ರ ವಾಹನ ಚಲಾಯಿಸುತ್ತಿರುವವರನ್ನು, ಸ೦ಚಾರದ ದೀಪಗಳ ನಿಯಮಗಳನ್ನು ಉಲ್ಲ೦ಘಿಸುತ್ತಿರುವವರನ್ನು , ಮತ್ತು ತಮಗೆ ಸ೦ಶಯ ಬ೦ದವರನ್ನು ರಸ್ತೆ ಮಧ್ಯದಲ್ಲಿ ತಡೆಯೊಡ್ಡಿ ನಿಲ್ಲಿಸಿ ಫೈನನ್ನು ಕಟ್ಟಿಸತೊಡಗಿದರು. ಅದನ್ನೆಲ್ಲಾ ನೋಡಿ ಅಲ್ಲೇ, ಹಸಿರು

ದೀಪ ಬರುವುದನ್ನೇ ಕಾಯುತ್ತಿದ್ದ ನನ್ನ ಮೈ ಸಣ್ಣಗೆ ನಡುಗಲು ಶುರು, ಏಕೆ೦ದರೆ ನನ್ನ ಬಳಿ ಹೆಲ್ಮೆಟ್ ಇರಲಿಲ್ಲವಲ್ಲಾ. ಅದಕ್ಕೆ ತಾಳಮದ್ದಲೆಯ ಸಾಥಿಯ೦ತೆ, ನನ್ನ ವಾಹನ ಹೊ೦ಡಾ ಆಕ್ಟಿವದ ಪಕ್ಕದಲ್ಲಿಯೇ, ಇಬ್ಬರು ಹುಡುಗರ ಒ೦ದು ಬೈಕ್ ಸವಾರಿ, “ ನನಗೆ ಹೆಲ್ಮೆಟ್ ಬೇಕೇ?” ಎ೦ದು ಚುಡಾಯಿಸುತ್ತಿತ್ತು. ಒ೦ದೆಡೆ ನನಗೆ ಪೋಲೀಸರನ್ನು ಕ೦ಡು ಗಡಗಡ….ಇನ್ನೊ೦ದೆಡೆ ಹುಡುಗರ ಕಾಟಕ್ಕೆ, ಅವರಿಗೆ ಎರಡು ಝಾಡಿಸುವಷ್ಟು ಕೋಪ ಮೂಗಿನ ತುದಿಯಲ್ಲಿ.ನನ್ನ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದ ಹಾಗಿತ್ತು. ಅಷ್ಟರಲ್ಲಿ ಹಸಿರು ದೀಪ ಬ೦ತು. ನಾನು ತಲೆ ಓಡಿಸಿ ಬೇರೆ ವಾಹನಗಳ ಮಧ್ಯದಲ್ಲಿ ನನ್ನನ್ನು ಮರೆಯಾಗಿಸಿ, ವಾಹನ ಚಲಾಯಿಸಿದೆ. ಕೂದಲೆಳೆಯಲ್ಲಿ ನಾನು ಮಾವ೦ದಿರ ಕಪಿಮುಷ್ಟಿಯಿ೦ದ ಬಚಾವು ಮಾರಾಯ್ರೇ, ಹಾಗೂ, ಹೀಗೂ ನನ್ನನ್ನು ಪೋಲೀಸರು ತಡೆದರೆ, ನೋವಾದ ಕಿವಿಗಳನ್ನು ತೋರಿಸಿ, ಹೆಲ್ಮೆಟ್ ಧರಿಸದಿರುವುದಕ್ಕೆ ಸಬೂಬು ಹೇಳುವುದೆ೦ದು ಧೈರ್ಯ ತ೦ದುಕೊ೦ಡೆ.

ನಿಜ ಹೇಳ್ತೀನಿ; ಆವತ್ತು ನನಗೆ ದೇವರ ಮೇಲೆ ಬಹಳ ಸಿಟ್ಟು ಬ೦ದಿತ್ತು. ಯಾವತ್ತೂ, ಯಾವ ನಿಯಮವನ್ನು ಉಲ್ಲ೦ಘಿಸಿರದ ನಾನು“, ಯಾವಾಗಲೂ ಹೆಲ್ಮೆಟನ್ನು ಯುದ್ಧ ಕವಚದ ತರಹ ತಲೆಯ ಮೇಲೆ ಧರಿಸಿ ದ್ವಿಚಕ್ರ ವಾಹನವನ್ನು ಚಲಾಯಿಸುವ ನಾನು“, “ನನ್ನ ಕಿವಿಗಳಿ೦ದಲೇ ಅವಮಾನಕ್ಕೆ ಗುರಿಯಾಗುವ ಪರಿಸ್ಥಿತಿ ಬ೦ದಿತ್ತು. ಹಿ೦ದೆ ಬಹಳ ಸಲ ಬೇರೆಯವರು ಶಿರಸ್ತ್ರಾಣವಿಲ್ಲದೆ ರಾಜಾರೋಷವಾಗಿ ದ್ವಿಚಕ್ರವಾಹನಗಳಲ್ಲಿ ಭುರ್ ಭುರ್ ಎ೦ದು ಓಡಾಡುವುದನ್ನು ನನ್ನ ಸ್ವ೦ತ ಎರಡು ಕಣ್ಣುಗಳಿ೦ದ ನೋಡಿ, “ ದೇವರೇ, ನೀನು ಯಾಕೆ, ತರಹ ಸ೦ಚಾರದ ನಿಯಮಗಳನ್ನು ಮುರಿಯುವವರನ್ನು ಶಿಕ್ಷಿಸಲು, ಪೋಲೀಸರ ಅವತಾರದಲ್ಲಿ ದಿಢೀರನೆ ಪ್ರತ್ಯಕ್ಷವಾಗುವುದಿಲ್ಲವೆ೦ದು ಪರಮಾತ್ಮನನ್ನು ಅನೇಕ ಬಾರಿ ಪ್ರಶ್ನಿಸಿದ್ದೇನೆ. ಈಗ ನಾನೇ ಅ೦ಥ ಇಕ್ಕಟ್ಟಿನಲ್ಲಿ ಸಿಕ್ಕಿ ಹಾಕಿಕೊ೦ಡಿರುವಾಗ, ನನ್ನ ಕಾಣದ ದೇವರನ್ನು ಸಿಕ್ಕಿದ್ದೇ ಛಾನ್ಸ್ ಎ೦ದು ಚೆನ್ನಾಗಿ ಬೈದುಕೊ೦ಡೆ. ನೀವೆಲ್ಲಾ ನನ್ನ ಅವಸ್ಥೆ ನೋಡಿ , ಯಾವುದೋ ಲೋಕದಿ೦ದ ಒ೦ದು ವಿಚಿತ್ರ ಪ್ರಾಣಿ ಬ೦ದಿದೆ ಎ೦ದು ಅರ್ಥೈಸಿ ಸುಮ್ಮನೆ ನಗಬೇಡಿ. ನಾನು, “ನನ್ನನ್ನು ಭೂಲೋಕದಲ್ಲಿರುವ ಕೆಲವೇ ಕೆಲವು ಪುಣ್ಯವ೦ತರ ಸಾಲಿಗೆ ಸೇರಿಸಿಕೊ೦ಡಿದ್ದೇನೆ, ಅದಕ್ಕೆ ಹಾಗೆ ಯೋಚಿಸುತ್ತಿದ್ದೆ, ಅಷ್ಟೇ ಸಿ೦ಪಲ್. ಮೂರ್ಛೆ ತಪ್ಪುತ್ತಿದೆಯಾ? ಮಿನರಲ್ ನೀರಿರುವ ಬಾಟಲ್ ಕೊಡಲಾ?” ಆದರೂ, ಆವತ್ತು ಪ್ರಥಮ ಚು೦ಬನದಿ೦ದ ದ೦ತ ಭಗ್ನವಾಗುವ ಸಮಯ ಬ೦ದೇ ಬ೦ತಲ್ಲ; ಮುಖ ನನ್ನದು ಊದಿ, ಕಣ್ಣೀರ ಕೋಡಿ ಹರಿಯುವುದೊ೦ದೇ ಬಾಕಿ. ಹಾಗೂ ಹೀಗೂ ಪೋಲೀಸರ ದ೦ಡದಿ೦ದ ತಪ್ಪಿಸಿಕೊ೦ಡು, ಮಗಳ ಸ್ಕೂಲ್ ಹತ್ತಿರ ಬ೦ದು, ಸ್ನೇಹಿತೆಯರ ಬಳಿ ನನ್ನ ವೀರ ಪರಾಕ್ರಮವನ್ನು ಕೊಚ್ಚಿಕೊ೦ಡೆ. ಅವರೆಲ್ಲಾ ಇವತ್ತು ಪಾಪದ ಪುಣ್ಯವ೦ತ ಮಿಕ ಅನಾವಶ್ಯಕವಾಗಿ ತೊ೦ದರೆಗೆ ಸಿಕ್ಕಿ ಬಿತ್ತೆ೦ದು ಸ೦ತಾಪ ಸೂಚಿಸಿ, ಮನೆಗೆ ವಾಪಾಸು ಹೋಗಬೇಕಾದರೆ ಹುಶಾರಾಗಿ ಹೋಗೆ೦ದು ಬುದ್ಧಿವಾದ ಹೇಳಿದರು. DSC01745.JPG

ಬೀಗಿ ಪುನರ್ ಸ್ಥಿತಿಗೆ ನಾನು ಮರಳಿ, ಮಗಳನ್ನು ಕರೆದುಕೊ೦ಡು ವಾಪಾಸ್ ಮನೆಗೆ ಹೊರಟೆ. ಅದೇ ಸಿಗ್ನಲ್ ಹತ್ತಿರ ಬ೦ದಾಗ, ಅದೇ ಜಾಗದಲ್ಲಿ ಪೋಲೀಸರು ಇನ್ನೂ ಠಿಕಾಣಿ ಹೂಡಿದ್ದನ್ನು ಕ೦ಡು ನನ್ನ ಎದೆ ಧಸಕ್. “ ಇವತ್ತು ನಾನು ಎದ್ದ ಘಳಿಗೆಯೇ ಸರಿಯಿಲ್ಲ, ಪೋಲೀಸರಿ೦ದ ಉಗಿಸಿಕೊ೦ಡು ದ೦ಡ ತೆರಲೇ ಬೇಕು“, ಎ೦ದುಕೊ೦ಡು ಮನೆ ತಲುಪಿದ ಮೇಲೆ ನನ್ನ ಪತಿದೇವರಿ೦ದ ಸಿಗುವ ಉಗಿತಗಳ ಎಲ್ಲ ದೃಶ್ಯಗಳನ್ನು ಪುನರಾವರ್ತಿತ ಮೆಲುಕು ಹಾಕತೊಡಗಿದೆ. ಅಷ್ಟರಲ್ಲಿ , ಪುನ: ಹಸಿರು ದೀಪ ಬೆಳಗಿ, ನನ್ನ ಅದೃಷ್ಟವನ್ನೂ ಬೆಳಗಿತು. ನಾನು ಕೂದಲೆಳೆಯಲ್ಲಿ ಪಾರಾದೆ. ಆದರೆ ಆವತ್ತಿನಿ೦ದ ಒ೦ದೇ ಒ೦ದು ಶಪಥವನ್ನು, ಭೀಷ್ಮ ಪಿತಾಮಹನ೦ತೆ ನಾನೂ ಮಾಡಿಕೊ೦ಡಿದ್ದೇನೆ.

ಅದೇನೆ೦ದರೆ ಪ್ರಪ೦ಚದ ಯಾವುದೇ ಮೂಲೆಯಲ್ಲಿ, ನಾನು ದ್ವಿಚಕ್ರವಾಹನವನ್ನು ಚಲಾಯಿಸುವಾಗ, (ನನ್ನ ಲಿಸ್ಟ್ ನಲ್ಲಿ ಸೈಕಲನ್ನೂ ಸೇರಿಸಿಕೊ೦ಡಿದ್ದೇನೆ), ಅಯ್ಯೋ,ನಗಬೇಡಿ.) ಇನ್ನು ಮು೦ದೆ ಯಾವುದೇ ಕಾರಣಕ್ಕೂ ಹೆಲ್ಮೆಟ್ ಮಾತ್ರ ಬಿಟ್ಟು ಹೋಗುವುದಿಲ್ಲ..!! ನನ್ನ ತಲೆ ಬಿಟ್ಟು ಹೋದರೂ ಪರವಾಗಿಲ್ಲ…!!

ಮೊದಲ ಬಾರಿ ನಿಯಮ ಮುರಿದು ತೊ೦ದರೆಗೆ ಸಿಕ್ಕಿ ಹಾಕಿಕೊ೦ಡೆನಲ್ಲಾ, ಅದಕ್ಕಾಗಿಯೇ ನಾನು ಲಲಿತ ಪ್ರಬ೦ಧದ ತಲೆಬರಹ ಇಟ್ಟದ್ದು ಪ್ರಥಮ ಚು೦ಬನ೦, ದ೦ತ ಭಗ್ನ೦ ಎ೦ದು. ಶಿರಸ್ತ್ರಾಣ ಮನೆಯಲ್ಲಿ ಬಿಟ್ಟು ಆಚೆ ನೀವೂ ಹೊರಟರೆ, ಹೀಗೆ ಪಚೀತಿಗೆ ಸಿಕ್ಕಿ ಹಾಕಿಕೊಳ್ಳಬಹುದು, ಹುಶಾರ್ ! ಅದಕ್ಕೆ ಕಣ್ರೀ, ಈಗ ನಾನು ಮಲಗುವಾಗಲೂ ಪಕ್ಕದಲ್ಲಿ ಹೆಲ್ಮೆಟ್ ಇಟ್ಟುಕೊ೦ಡೇ ಇರುತ್ತೇನೆ, ಗೊತ್ತಾ? ಇಷ್ಟೆಲ್ಲಾ ಬರೆದ ಮೇಲೆ , ಕೊನೆಗೆ ನನಗೆ ಜ್ಞಾನೋದಯವಾದ ಪ೦ಚ್ಲೈನ್ ಗಳನ್ನು ನಿಮ್ಮೊ೦ದಿಗೆ ಹ೦ಚಿಕೊಳ್ಳಬೇಡವೇ? ಏನು ಗೊತ್ತಾ ? ಅಡಿಬರಹಗಳು ತು೦ಬಾ ಮುಖ್ಯ, ಏಕೆ೦ದರೆ ನಡೆದ ಹೆಲ್ಮೆಟಾಯಣದಿ೦ದ ನನಗೆ ಸಿಕ್ಕಿರಿರುವ ಜ್ಞಾನಾಮೃತಗಳಿವು.

ಅವೇನೆ೦ದರೆ…. ಮುಗಿಸುತ್ತಿದ್ದೇನೆ, ಸ್ವಲ್ಪವೇ ಸ್ವಲ್ಪ, ಕೋಪಿಸಿಕೊಳ್ಳಬೇಡಿ. “ ಈಗಿನ ಆಧುನಿಕ ಕಾಲದಲ್ಲಿ ದೇವರು ಪಾಪಿಗಳನ್ನು ಶಿಕ್ಷಿಸುವ ಕೆಲಸ ಬಿಟ್ಟು, ಅಳಿದುಳಿದ ಶಿಷ್ಟರನ್ನು ತನ್ನ ಪಾಲಿಗೆ ಉಳಿಸಿಕೊಳ್ಳುವ ಶ್ರಮದಾಯಕ ಪ್ರಯತ್ನದಲ್ಲಿ ತನ್ನನ್ನು ನಿರ೦ತರವಾಗಿ ತೊಡಗಿಸಿಕೊ೦ಡಿದ್ದಾನೆ. ಭೂಲೋಕದಲ್ಲಿ ಈಗ ಪಾಪಿಗಳ ಸ೦ಖ್ಯೆ ಜಾಸ್ತಿಯಾಗಿ, ಪುಣ್ಯವ೦ತರು ಕಮ್ಮಿಯಾಗಿದ್ದಾರೆ. ಹಾಗಾಗಿ ದೇವರು ಕಕ್ಕಾಬಿಕ್ಕಿಯಾಗಿ, “ಯಾರನ್ನು ಹೇಗೆ ಉಳಿಸಿಕೊಳ್ಳಬೇಕು?” ಎ೦ಬ ಗೊ೦ದಲದಲ್ಲಿ ಬಿದ್ದಿದ್ದಾನೆ. ಇಲ್ಲದ್ದಿದ್ದರೆ ಅವನೂ ತನ್ನ ಕೆಲಸ ಕಳೆದುಕೊ೦ಡು ನಿರುದ್ಯೋಗಿಯಾಗಬೇಕಾಗುತ್ತದೆ. ಆದ್ದರಿ೦ದ ತನ್ನ ಹೊಟ್ಟೆಪಾಡಿಗಾಗಿ , ಜಗತ್ತಿನ ಮಿಕ್ಕ ಮಾನವರಲ್ಲಿ ಪುಣ್ಯವ೦ತರನ್ನು ಅವನು ಹುಡುಕಲೇ ಬೇಕಾಗಿದೆ. ಹಾಗಾಗಿ ನನ್ನ೦ಥಾ ಪುಣ್ಯವ೦ತರು ನಿಯಮಗಳನ್ನು ಪಾಲಿಸದಿದ್ದರೆ, “ನನ್ನ೦ಥಾ ಅಳಿದುಳಿದ ಪುಣ್ಯವ೦ತರನ್ನು ಎಚ್ಚರಿಸಿ ಸರಿದಾರಿಗೆ ತರಲು, ತನ್ನಲ್ಲಿರುವ ಎಲ್ಲಾ ಅರ್ಜೆ೦ಟ್ ಕೆಲಸಗಳನ್ನು ಕೈ ಬಿಟ್ಟು, ಪುರುಸೊತ್ತು ಮಾಡಿಕೊ೦ಡು, “ ಭಗವ೦ತ, ಲೋಕರಕ್ಷಕ “, ನಾನಾ ಅವತಾರಗಳನ್ನು ಏಕಾಏಕಿಯಾಗಿ ಎತ್ತಿ, “ದಿಢೀರನೆ” , ನಿಮ್ಮ ಮು೦ದೆ ಪ್ರತ್ಯಕ್ಷನಾಗಿ, “ನಿಮ್ಮನ್ನು ಶಿಕ್ಷಿಸಲು ಬರುತ್ತಾನೆ“, ಹುಶಾರ್!!!

(ಮೂಲ ಲೇಖನ ‘ಸಂಪದ’ದಲ್ಲಿ ಪ್ರಕಟವಾಗಿತ್ತು.)


Technorati : , , , ,

ಅದು ಅಡ್ವರ್ಟೈಸ್‌ಮೆಂಟು ಮಾತ್ರ!

5 ಫೆಬ್ರ

ಇಂಜಿನಿಯರಿಂಗ್ ಓದಿಕೊಳ್ಳುತ್ತ ತನ್ನ ಓರಗೆಯ ಗೆಳೆಯರನ್ನು ಕೂಡಿಕೊಂಡು ‘ಸಡಗರ’ಎಂಬ ಸಣ್ಣದೊಂದು ಮಾಸಪತ್ರಿಕೆಯನ್ನು ಕಳೆದ ಒಂದು ವರ್ಷದಿಂದ ATgAAAB1OtHeNNbJAjB6kEYZkQx1sI6fRkj7Z_AEdZaDUj-PrbID2cxZkt_B3jDu_s8uV9cazNPsYx4g5-ifFW-aw6gkAJtU9VA_OqFoXWvKxVaBRnb342R7bVptRw.jpgನಡೆಸುತ್ತಿರುವವರು ಸುಪ್ರೀತ್.ಕೆ.ಎಸ್. ಹದಿಹರೆಯದ ಹುಮ್ಮಸ್ಸು, ಹಸಿಯಾದ ಕ್ರಿಯಾಶೀಲತೆ ಪತ್ರಿಕೆಯ ಪ್ರತಿ ವಿಭಾಗದಲ್ಲೂ ಎದ್ದು ಕಾಣುತ್ತದೆ. ‘ಸಡಗರ’ಪತ್ರಿಕೆಯಲ್ಲಿ ಪ್ರಕಟವಾಗುವ ಅವರ ಹಾಸ್ಯ ಬರಹಗಳನ್ನು ನಗೆ ನಗಾರಿ ಡಾಟ್ ಕಾಮ್ ‍ನೊಂದಿಗೆ ಹಂಚಿಕೊಳ್ಳಲು ಒಪ್ಪಿಕೊಂಡಿದ್ದಾರೆ.

ಪಾಪ ಪುಣ್ಯದ ಬಗ್ಗೆ ಪುಟ್ಟ ಹಾಸ್ಯ ಲೇಖನದ ಮೂಲಕ ವಿಡಂಬಿಸುವ ಪ್ರಯತ್ನ ಮಾಡುತ್ತಲೇ ಜಾಹೀರಾತುಗಳ ಮರ್ಮಕ್ಕೆ ತಗುಲುವ ಸತ್ಯವನ್ನು ಬಿಂಬಿಸಿದ್ದಾರೆ.
ಇದು ಈ ಅಂಕಣಕಾರರ ಎರಡನೆಯ ಲೇಖನ.
ಹಿಂದಿನ ಲೇಖನ ಇಲ್ಲಿದೆ.

ಅವನೊಬ್ಬ ಪುಣ್ಯಜೀವಿ. ಹೆಸರು ರಾಮಣ್ಣ ಎಂದಿಟ್ಟುಕೊಳ್ಳಿ. ಬದುಕಿದ್ದಾಗ ವೇದಶಾಸ್ತ್ರಗಳೆಲ್ಲಾ ಸ್ವರ್ಗಕ್ಕೆ ಹೋಗಲು ಸೂಚಿಸಿರುವ ಆಚರಣೆಗಳಲ್ಲಿ ಒಂದೂ ತಪ್ಪದಂತೆ ಲಿಸ್ಟ್ ಮಾಡಿಕೊಂಡು ಅಪರಿಮಿತವಾದ ಶ್ರದ್ಧೆಯಿಂದ ಬದುಕಿದ. ಆತ ಮಾಡದ ಸತ್ಕಾರ್ಯವಿಲ್ಲ, ಕೊಡದ ದಾನವಿಲ್ಲ. ಸರಿ ಅವನ ಪಾರಮಾರ್ಥಿಕ ಬ್ಯಾಂಕ್ ಅಕೌಂಟಿನಲ್ಲಿ ಪುಣ್ಯವೆಂಬುದು upper limit ಮುಟ್ಟಿಬಿಟ್ಟಿತ್ತು.

ಸರಿ ಒಂದು ದಿನ ಯಮಲೋಕದಿಂದ ಕರೆ ಬಂದಿತು. ರಾಮಣ್ಣ ಖುಷ್ಕುಶಿಯಿಂದ ಯಮರಾಜನ ಆಸ್ಥಾನಕ್ಕೆ ಹೋದ. ಆಸ್ಥಾನದಲ್ಲಿ ಯಮರಾಜ ವಿರಾಜಮಾನನಾಗಿದ್ದ. ಅವನ ಬಲಭಾಗದಲ್ಲಿ ಅಗಾಧವಾದ ಗ್ರಂಥವನ್ನು ಮೇಜಿನ ಮೇಲಿಟ್ಟಿಕೊಂಡು ಕುಳ್ಳಗಿನ ವ್ಯಕ್ತಿ ಕುಳಿತಿದ್ದ. ಅವನನ್ನು ನೋಡುತ್ತಿದ್ದಂತೆಯೇ ಆತ ಚಿತ್ರಗುಪ್ತ ಎನ್ನುವುದು ರಾಮಣ್ಣನಿಗೆ ತಿಳಿಯಿತು. ಎಷ್ಟಾದರೂ ಶಾಸ್ತ್ರಗಳನ್ನು ಓದಿ ಗಟ್ಟಿಯಾದ ಜೀವವಲ್ಲವೇ?ಅನೇಕರ ವಿಚಾರಣೆ ಮುಗಿದು ರಾಮಣ್ಣನ ಸರದಿ ಬಂದಾಗ ಚಿತ್ರಗುಪ್ತ ತನ್ನ ಬೃಹತ್ ಅಕೌಂಟ್ ಪುಸ್ತಕದಲ್ಲಿ ರಾಮಣ್ಣನ ಖಾತೆಯನ್ನು ತೆರೆಯುತ್ತಿದ್ದಂತೆಯೇ ಮೂರ್ಛೆ ಹೋಗುವುದೊಂದು ಬಾಕಿ. ಈ ಪುಣ್ಯಾತ್ಮ ರಾಮಣ್ಣನ ಪುಣ್ಯದ ಬ್ಯಾಲೆನ್ಸು ನೋಡಿ ಚಿತ್ರಗುಪ್ತನಿಗೇ ಆಶ್ಚರ್ಯವಾಯಿತು. ಆತನನ್ನು ಯಾವ ವಿಚಾರಣೆಯೂ ಇಲ್ಲದೆ ನೇರವಾಗಿ ಸ್ವರ್ಗಕ್ಕೆ ಕಳುಹಿಸಿಬಿಡಬೇಕೆಂದು ಯಮರಾಜನಿಗೆ ಸೂಚಿಸಿದ. ಭೂಲೋಕದಿಂದ ಬರುವ ಜೀವಗಳಲ್ಲಿ ಇಂತಹ ಅಪರೂಪದ ಜೀವವನ್ನು ಕಂಡು ಯಮರಾಜನಿಗೂ ಕುತೂಹಲವಾಯಿತು. ಅವನ ಜೀವನದ ಗ್ರಾಫನ್ನು ಕಂಡು ಸಂತುಷ್ಟನಾದ ಯಮಧರ್ಮರಾಜ ರಾಮಣ್ಣನಿಗೆ ನೇರವಾಗಿ ಸ್ವರ್ಗಕ್ಕೆ ಹೋಗಲು ಹೇಳಿದ.

ಆದರೆ ರಾಮಣ್ಣನಿಗೆ ಕುತೂಹಲ. ಎರಡರಲ್ಲಿ ಯಾವುದು ಹೇಗೆ ಎಂದು ತಿಳಿಯುವ ಆಸಕ್ತಿ. ಸರಿ, ಯಮಧರ್ಮರಾಯನನ್ನು ಕುರಿತು “ಪ್ರಭು, ನಾನು ಸ್ವರ್ಗಕ್ಕೋ, ನರಕಕ್ಕೋ ಹೋಗುವ ಮೊದಲು ಎರಡನ್ನೂ ನೋಡಬಯಸುತ್ತೇನೆ.” ಎಂದ. ಇಂತಹ ಪುಣ್ಯಜೀವಿಗೆ ಇಲ್ಲವೆನ್ನಲಾಗುತ್ತದೆಯೇ, ಯಮಧರ್ಮರಾಯ ಹೇಳಿದ “ಸರಿ, ಆಗಲಿ… ನಿನಗೆ ಈ ಎರಡು ಕಿಟಕಿಗಳ ಮೂಲಕ ಸ್ವರ್ಗ ಹಾಗೂ ನರಕವನ್ನು ತೋರಿಸುತ್ತೇನೆ. ನೀನು ಇವೆರಡರಲ್ಲಿ ಒಂದನ್ನು ಆಯ್ದುಕೊಳ್ಳಬೇಕು. ಆದರೆ ಎಚ್ಚರ, ಒಮ್ಮೆ ಮಾತ್ರ ಆಯ್ಕೆ ಮಾಡುವ ಹಕ್ಕು ನಿನಗಿದೆ.”

ರಾಮಣ್ಣನ ಎದುರಿಗೆ ಎರಡು ಕಿಟಕಿಗಳು ಪ್ರತ್ಯಕ್ಷವಾದವು. ಮೊದಲನೆಯ ಕಿಟಕಿಯ ಮೂಲಕ ನೋಡಿದ ರಾಮಣ್ಣನಿಗೆ ಅಲ್ಲಿ ಜೀವಗಳು ಪ್ರಶಾಂತವಾದ ವಾತಾವರಣದಲ್ಲಿ ಗುಂಪು ಗುಂಪಾಗಿ ಕುಳಿತು ದೇವರ ಭಜನೆ ಮಾಡುತ್ತಿರುವುದು, ಜಪ, ತಪ, ಧ್ಯಾನ ಮಾಡುತ್ತಿರುವುದು ಕಂಡಿತು. ಅದು ರಾಮಣ್ಣನಿಗೆ ರುಚಿಸಲಿಲ್ಲ. ‘ಅಯ್ಯೋ, ಇದನ್ನು ಮಾಡೋಕೆ ಸ್ವರ್ಗಕ್ಕೆ ಬರಬೇಕಾ? ಇದನ್ನೆಲ್ಲಾ ನಾನು ಭೂಲೋಕದಲ್ಲೇ ಮಾಡಿದ್ದೆನಲ್ಲಾ.’ ಎಂದುಕೊಂಡು ಎರಡನೆಯ ಕಿಟಕಿಯ ಕಡೆಗೆ ಹೊರಳಿದ. ಕಿಟಕಿಯಲ್ಲಿ ನೋಡುವ ಮೊದಲೇ ಅವನಿಗೆ ಡಮರು, ಮೃದಂಗ ಮುಂತಾದ ವಾದ್ಯಗಳ ನಾದ ಕೇಳಿಬರತೊಡಗಿತು. ಕಿಟಕಿಯಲ್ಲಿ ನೋಡಿದಾಗ ಅಲ್ಲಿ ಜೀವಗಳು ಸುರಪಾನ ಮಾಡುತ್ತಾ, ವಿಚಿತ್ರವಾಗಿ ಕಿರುಚಾಡುತ್ತಾ, ಅಲ್ಲಿನ ಹೆಂಗಸರ ಕ್ಯಾಬರೆ ಡ್ಯಾನ್ಸ್ ನೋಡುತ್ತಾ ಆನಂದ ಪಡುತ್ತಿರುತ್ತಾರೆ. ಇವೆಲ್ಲಾ ಅವನಿಗೆ ಹೊಸದಾಗಿಯೂ ಆಕರ್ಷಕವಾಗಿಯೂ ಕಾಣುತ್ತವೆ. ಆತ ನರಕವನ್ನೇ ಆಯ್ದುಕೊಳ್ಳುತ್ತಾನೆ.

ಅನಂತರ ಯಮರಾಯ ತಾನೇ ಖುದ್ದಾಗಿ ಆತನನ್ನು ನರಕದೆಡೆಗೆ ಕರೆದೊಯ್ಯುತ್ತಾನೆ. ನರಕದ ಬಾಗಿಲು ತೆರೆದಾಗ ಕಂಡ ದೃಶ್ಯದಿಂದ ರಾಮಣ್ಣ ತತ್ತರಿಸಿಹೋಗುತ್ತಾನೆ. ಅಲ್ಲಿ ಯಮಕಿಂಕರರು ಜೀವಗಳನ್ನು ಕಾದ ಎಣ್ಣೆಯಲ್ಲಿ ಮುಳುಗಿಸಿ ಎತ್ತುತ್ತಿದ್ದಾರೆ, ಮುಳ್ಳಿನ ಹಾಸಿಗೆಯ ಮೇಲೆ ಮಲಗಿಸುತ್ತಿದ್ದಾರೆ, ನಾಲಿಗೆಯನ್ನು ಸೀಳುತ್ತಿದ್ದಾರೆ, ಹುಳುಗಳಿಂದ ಕಡಿಸಿ ಯಾತನೆ ನೀಡುತ್ತಿದ್ದಾರೆ. ಇದನ್ನು ಕಂಡು ರಾಮಣ್ಣನಿಗೆ ತಾನು ಮೋಸಹೋಗಿರುವುದು ಖಾತ್ರಿಯಾಯಿತು. ಕೋಪದಿಂದ ಯಮರಾಜನೆಡೆಗೆ ತಿರುಗಿ “ಇದು ಅನ್ಯಾಯ. ಕಿಟಕಿಯಲ್ಲಿ ಕಂಡದ್ದೇ ಬೇರೆ ಇಲ್ಲಿ ಇರುವುದೇ ಬೇರೆ… ನನಗೆ ಮೋಸ ಮಾಡಿದ್ದೀರ” ಎಂದ.

ಆಗ ಯಮಧರ್ಮ ನಗುತ್ತಾ, “ಸಿಟ್ಟಾಗಬೇಡ. ಆಗ ಕಿಟಕಿಯಲ್ಲಿ ತೋರಿಸಿದ್ದು advertisement ಮಾತ್ರ. ಇದೇ ರಿಯಾಲಿಟಿ” ಎಂದ ಕಣ್ಣು ಮಿಟುಕಿಸಿ!

(ಮೂಲ ಲೇಖನ ‘ಸಡಗರ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು)


Technorati : , , , , , ,

ದೇವಲೋಕದಲ್ಲೊಂದು ಸಭೆ

27 ಜನ

ಇಂಜಿನಿಯರಿಂಗ್ ಓದಿಕೊಳ್ಳುತ್ತ ತನ್ನ ಓರಗೆಯ ಗೆಳೆಯರನ್ನು ಕೂಡಿಕೊಂಡು ‘ಸಡಗರ’ಎಂಬ ಸಣ್ಣದೊಂದು ಮಾಸಪತ್ರಿಕೆಯನ್ನು ಕಳೆದ ಒಂದು ವರ್ಷದಿಂದ ATgAAAB1OtHeNNbJAjB6kEYZkQx1sI6fRkj7Z_AEdZaDUj-PrbID2cxZkt_B3jDu_s8uV9cazNPsYx4g5-ifFW-aw6gkAJtU9VA_OqFoXWvKxVaBRnb342R7bVptRw.jpgನಡೆಸುತ್ತಿರುವವರು ಸುಪ್ರೀತ್.ಕೆ.ಎಸ್. ಹದಿಹರೆಯದ ಹುಮ್ಮಸ್ಸು, ಹಸಿಯಾದ ಕ್ರಿಯಾಶೀಲತೆ ಪತ್ರಿಕೆಯ ಪ್ರತಿ ವಿಭಾಗದಲ್ಲೂ ಎದ್ದು ಕಾಣುತ್ತದೆ. ‘ಸಡಗರ’ಪತ್ರಿಕೆಯಲ್ಲಿ ಪ್ರಕಟವಾಗುವ ಅವರ ಹಾಸ್ಯ ಬರಹಗಳನ್ನು ನಗೆ ನಗಾರಿ ಡಾಟ್ ಕಾಮ್ ‍ನೊಂದಿಗೆ ಹಂಚಿಕೊಳ್ಳಲು ಒಪ್ಪಿಕೊಂಡಿದ್ದಾರೆ.

ಮೊದಲ ಲೇಖನವಾಗಿ ‘ದೇವಲೋಕದಲ್ಲೊಂದು ಸಭೆ’ ಹಾಸ್ಯ ಲೇಖನ ಪ್ರಕಟವಾಗಿದೆ. ಕರ್ನಾಟಕದಲ್ಲಿ ನಡೆದ ಅಧಿಕಾರ ಹಸ್ತಾಂತರ ಎಂಬ ನಾಟಕದ ಸಂದರ್ಭದ ಸಂಗತಿಗಳನ್ನು ಇಲ್ಲಿ ವಿಡಂಬನಾತ್ಮಕವಾಗಿ ಬಿಂಬಿಸಿದ್ದಾರೆ.

ದೇವಲೋಕದಲ್ಲಿ ಅಲ್ಲೋಲಕಲ್ಲೋಲವೆದ್ದಿತ್ತು. ಎಲ್ಲೆಲ್ಲೂ ಗೊಂದಲದ ವಾತಾವರಣ ಕವಿದಿತ್ತು. ದೇವತೆಗಳ ಮುಖದ ಮೇಲೆ ಆತಂಕ, ಕಳವಳದ ಛಾಯೆ ಕುಣಿಯುತ್ತಿತ್ತು.ಆಫೀಸಿನಲ್ಲಿ ದೊಡ್ಡವರು ಸಿಟ್ಟಾದರೆ ಕೆಳಗಿನವರು ಥರಥರ ನಡುಗುವಂತೆ ಅವರು ಗಾಬರಿಯಾಗಿದ್ದರು.

ಅಂದು ದೇವಾಧಿದೇವ ಮಹಾವಿಷ್ಣು ಒಂದು general body meeting ಕರೆದಿದ್ದ. ಭೂಲೋಕದಲ್ಲಿ ನಡೆಯುತ್ತಿರುವ ಕೆಲವು ಸಂಗತಿಗಳನ್ನು ಚರ್ಚಿಸಿ ಕೆಲವು ಐತಿಹಾಸಿಕ ತೀರ್ಮಾನಗಳನ್ನು ಅಂದು ತೆಗೆದುಕೊಳ್ಳಬೇಕಿತ್ತು. ಸ್ವರ್ಗಕ್ಕೆ, ನರಕಕ್ಕೆ ನೋಟೀಸ್ ಹೋಗಿತ್ತು. ಭೂಲೋಕದಿಂದ ಸ್ವರ್ಗನರಕಗಳಿಗೆ ಬಂದು ಸೇರಿದ್ದ ಅನೇಕರಿಗೂ ಆ ಮೀಟಿಂಗ್‍ನಲ್ಲಿ ಭಾಗವಹಿಸಲು ಕರೆಬಂದಿತ್ತು.

ಅಂದು ವಿಷ್ಣುವಿನ ಆಸ್ಥಾನದಲ್ಲಿ ಸ್ಮಶಾನ ಮೌನ ಕವಿದಿತ್ತು.ಸದಾ ಕಾಲ ಚಿದ್ವಿಲಾಸದ ನಗೆಯನ್ನು ತುಟಿಗಳ ಮೇಲೆ ಹೊತ್ತು ಶೋಭಿಸುವ ಮಹಾವಿಷ್ಣು ಅಂದು ವಿಷಣ್ಣವದನನಾಗಿದ್ದು ಕಂಡು ಇತರರಿಗೆಲ್ಲಾ ಕೊಂಚ ದಿಗಿಲಾಗಿತ್ತು. ಮತ್ತ್ಯಾವ ಅಸುರ ಭೂಲೋಕದಲ್ಲಿ ತಲೆ ಎತ್ತಿದ್ದಾನೊ, ಮಹಾವಿಷ್ಣು ಇನ್ನ್ಯಾವ ಅವತಾರವೆತ್ತಿ ಭೂಲೋಕದ ಟ್ರಿಪ್‍ಗೆ ಹೋಗಬೇಕೊ ಎಂದು ಎಲ್ಲರೂ ಆಲೋಚಿಸುತ್ತಿದ್ದರು.

ಸಭೆಗೆ ಬರಬೇಕಾದವರೆಲ್ಲರೂ ಜಮಾವಣೆಯಾದ ನಂತರ ಮಹಾವಿಷ್ಣು ಅನಂತಶಯನಾಸನದಿಂದ ಮೆಲ್ಲಗೆ ಎದ್ದು ಕುಳಿತು ಮಾತಾಡಲು ತೊಡಗಿದ. ”ನಮ್ಮ ಆಹ್ವಾನದ ಮೇರೆಗೆ ಸಭೆಗೆ ಆಗಮಿಸಿರುವ ಪ್ರತಿಯೊಬ್ಬರಿಗೂ ನನ್ನ ಕೃತಜ್ಞತೆಗಳು. ನಾನು ನೇರವಾಗಿ ವಿಷಯಕ್ಕೇ ಬಂದುಬಿಡುವೆ ನಮ್ಮ ಬ್ರಹ್ಮದೇವನಿಗೆ ನಾನು ಮೊದಲೇ ಹೇಳಿದ್ದೆ. ಈ ಮನುಷ್ಯನೆಂಬ ಪ್ರಾಣಿಯನ್ನು ಸೃಷ್ಟಿಸುವಾಗ ಸ್ವಲ್ಪ ಹುಶಾರಾಗಿರಪ್ಪಾ, ಅವನ ಕೈಗೆ ಬುದ್ಧಿಯನ್ನು ಕೊಟ್ಟು ಹರಸಿಕಳುಹಿಸುವ ಮುನ್ನ ಕೊಂಚ ಅದರ ಪರಿಣಾಮಗಳನ್ನೂ ಯೋಚಿಸು ಎಂದು ಹೇಳಿದ್ದೆ. ಈಗ ನೋಡಿ ಏನಾಗಿದೆ…” ವಿಷ್ಣುವಿನ ಮುಖದ ತುಂಬ ವಿಷಾದ ಕವಿದಿತ್ತು.

ವಿಷಯ ನೇರವಾಗಿ ತಮ್ಮೆಡೆಗೇ ತಿರುಗಿದ್ದರಿಂದ ಬ್ರಹ್ಮದೇವರು ಕೊಂಚ ಅಪ್ರತಿಭರಾದರೂ ಅದನ್ನು ತೋರಿಸಿಕೊಳ್ಳದಂತೆ, “ಮಹಾವಿಷ್ಣು ಹೇಳುತ್ತಿರುವುದೇನೂ ನನಗೆ ಅರ್ಥವಾಗದು. ದೇವರ ಸೃಷ್ಠಿಯ ಮಹಾನತೆಯನ್ನು, ದೇವರ ಘನತೆಯನ್ನು ತಿಳಿದುಕೊಳ್ಳಲು ಸಾಮರ್ಥ್ಯವಿರುವ ಒಂದೇ ಒಂದೇ ಜೀವಿ ಅಷ್ಟು ಸುಂದರವಾದ ಭುವಿಯ ಮೇಲಿರದಿದ್ದರೆ ಏನುಪಯೋಗ ಎಂದು ಮಹಾವಿಷ್ಣುವೇ ಸೂಚಿಸಿದ್ದರಿಂದ ನಾನು ಮಾನವನಿಗೆ ವಿವೇಚನಾ ಶಕ್ತಿಯನ್ನು ದಯಪಾಲಿಸಿ ಭೂಮಿಗೆ ಕಳುಹಿಸಿಕೊಟ್ಟೆ. ದೇವ ಸೃಷ್ಟಿಯನ್ನು ಕಂಡು ವಿಸ್ಮಯಗೊಂಡ ಮಾನವ ದೇವರನ್ನು ಹೊಗಳುವುದನ್ನು ಕೇಳಿ ತಮಗೆ ಖುಷಿಯಾಗುವುದಿಲ್ಲವೇ? ರಸ್ತೆರಸ್ತೆಯಲ್ಲಿ ಮಹಾವಿಷ್ಣುವಿನ, ಮಹಾದೇವನ ಮಂದಿರಗಳಲ್ಲಿ ನಡೆಯುವ ಅರ್ಚನೆ, ಪೂಜೆಗಳಿಂದ ತಾವು ಸಂತುಷ್ಟರಾಗಿಲ್ಲವೇ? ಮನುಷ್ಯನಿಗೆ ಅಂತಹ ಬುದ್ಧಿಯನ್ನು ಕೊಟ್ಟುಕಳುಹಿಸಿದ ನನಗಾಗಿ ಅಂತ ಆತ ಒಂದಾದರೂ ದೇವಸ್ಥಾನ ಕಟ್ಟಿದ್ದಾನೆಯೇ? ಈ ಅನ್ಯಾಯ ಕಂಡೂ ನಾನು ಸುಮ್ಮನಿಲ್ಲವೇ? ನಾನೆಂದಾದರೂ ಮೀಸಲಾತಿಗಾಗಿ ಬಾಯೆತ್ತಿದ್ದೇನೆಯೇ? ಸುಮ್ಮನೆ ನನ್ನ ಮೇಲೆ ಆರೋಪ ಮಾಡಿದರೆ ನನ್ನ ಮನಸ್ಸಿಗೆ ನೋವಾಗುವುದಿಲ್ಲವೇ?” ಎಂದರು ವಿಷ್ಣುವಿನೆಡೆಗೆ ನೋಡುತ್ತಾ.

ಇದನ್ನೆಲ್ಲಾ ಕೇಳುತ್ತಿದ್ದ ಮುಕ್ಕಣ್ಣ ಕೊಂಚ ಗಡುಸಾಗಿ, “ನಿಮ್ಮ ದೋಷಾರೋಪಣೆಗಳನ್ನು ಆಮೇಲೆ ಮಾಡಿ ಮೊದಲು ಸಭೆ ಕರೆಯಲು ಕಾರಣವೇನು ಎಂಬುದನ್ನು ಅರುಹಿ.” ಎಂದ. ‘ಶಿವ ಅಂದರೆ ಹೀಗಿರಬೇಕು, ಅದೇನು ಗಾಂಭೀರ್ಯ, ಮಿತಭಾಷೆ…’ ಎಂದುಕೊಂಡರು ಸಭಿಕರೆಲ್ಲ.

ಮಹಾದೇವನ ಗಂಭೀರ ಮಾತಿಗೆ ಬೆಲೆಕೊಡುತ್ತಾ ಮಹಾವಿಷ್ಣು , “ ಭೂಲೋಕದ ಇತ್ತೀಚಿನ ಸಂಗತಿಗಳು ನಮ್ಮ ಮನಸ್ಸಿಗೆ ತುಂಬಾ ನೋವನ್ನುಂಟುಮಾಡಿವೆ. ನಮ್ಮ ಅನೇಕ ಅವತಾರಗಳನ್ನು, ಅವುಗಳ ಸಂದೇಶಗಳನ್ನು ಈ ಹುಲು ಮಾನವರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ನಮ್ಮ ಹೆಸರನ್ನು ಬಳಸಿಕೊಂಡು ನಮ್ಮ ಪ್ರಸಿದ್ಧಿಗೆ ಕಳಂಕ ತರುವ ಪ್ರಯತ್ನ ಮಾಡುತ್ತಿದ್ದಾರೆ.”

ಸಭಿಕರೆಲ್ಲರಿಗೂ ಮಹಾವಿಷ್ಣುವಿನ ಮನದ ನೋವು ತಟ್ಟಿತು. ಆದರೆ ಯಾರಿಗೂ ಅಸಲಿನ ಸಂಗತಿಯೇನು ಎಂಬುದು ತಿಳಿಯಲಿಲ್ಲ. ಮುಖದ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಹೊತ್ತು ಎಲ್ಲರೂ ವಿಷ್ಣುವಿನ ಮುಖವನ್ನೇ ದಿಟ್ಟಿಸುತ್ತಿದ್ದರು.

ಮಹಾವಿಷ್ಣು ಮುಂದುವರೆಸುತ್ತಾ, “ಭೂಲೋಕದಲ್ಲಿ ಕರ್ನಾಟಕವೆಂಬ ಪ್ರದೇಶ ಇರುವುದಷ್ಟೇ. ಅದರ ಸಿಂಹಾಸನಕ್ಕೆ ನಡೆಯುತ್ತಿರುವ ಪ್ರಹಸನದಲ್ಲಿ ನಮ್ಮ ಹೆಸರನ್ನು ವಿನಾಕಾರಣವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಿಷ್ಟು ಸಮಯದ ನಂತರ ಸಿಂಹಾಸನವನ್ನು ಒಪ್ಪಿಸುತ್ತೇನೆ ಎಂದು ಮಾತುಕೊಟ್ಟು ಅನಂತರ ಕೈಎತ್ತಿ, ‘ಮಹಾಭಾರತದಲ್ಲಿ ಶ್ರೀಕೃಷ್ಣನೇ ಕೊಟ್ಟ ಮಾತಿಗೆ ತಪ್ಪಿರುವಾಗ ನನ್ನದೇನು?’ ಎಂದು ಮುಖ್ಯಮಂತ್ರಿ ಹೇಳಿದ್ದಾನೆ ಎಂದು ತಿಳಿದು ಬಂದಿದೆ. ನೀವೇ ಹೇಳಿ, ನಾನು ಎಂದಾದರೂ ಕೊಟ್ಟ ಮಾತಿಗೆ ತಪ್ಪಿರುವೆನೇ? ದ್ರೌಪದಿಗೆ ಕೊಟ್ಟ ಮಾತಿನಂತೆ ಕೌರವರ ಸರ್ವನಾಶವನ್ನು ಮಾಡಲಿಲ್ಲವೇ? ಕೆಲವೊಮ್ಮೆ ಮಾತು ಮುರಿಯುವ ನಾಟಕವಾಡಿದರೂ ಅದು ಧರ್ಮಕ್ಕಾಗಿಯಲ್ಲವೇ? ಧರ್ಮದ ಪಕ್ಷ ಗೆಲ್ಲಲಿ ಎಂಬ ಉದ್ದೇಶದಿಂದಲೇ ಹೊರತು ಸ್ವಾರ್ಥಕ್ಕಾಗಿ ಅಲ್ಲ ಎಂಬುದು ನಿಮಗೂ ತಿಳಿದಿದೆಯಲ್ಲವೇ?” ಎಂದು ಸಭಿಕರನ್ನು ದಿಟ್ಟಿಸಿದ.

ವಿಷ್ಣುವಿನ ಮಾತನ್ನು ಅನುಮೋದಿಸುತ್ತಾ ಸಭೆಯ ನಡುವಿಂದ ಧ್ವನಿಯೊಂದು ಬಂದಿತು, “ನಿಮ್ಮ ಮನಸ್ಸಿನ ವೇದನೆ ನನಗರ್ಥವಾಗುತ್ತೆ ಮಹಾಪ್ರಭು. ಈ ದುಷ್ಟ ಮಾನವರಿಂದ ಕೇವಲ ನಿಮ್ಮ ಹೆಸರು ಮಾತ್ರವಲ್ಲ, ನನ್ನ ಹೆಸರಿಗೂ ಕಳಂಕ ತಗುಲಿದೆ..” ‘ಹ್ಹಾ! ಕೌಟಿಲ್ಯ!’ ಎಂದು ಉದ್ಘರಿಸಿತು ಸಭೆ. ನೀಳವಾದ ಶಿಖೆಯನ್ನು ಬಿಟ್ಟ ಉಜ್ವಲ ಕಂಗಳ ಕೌಟಿಲ್ಯ ಏರಿದ ದನಿಯಲ್ಲಿ ಮಾತು ಮುಂದುವರೆಸಿದ, “ಆ ಕಾಲದಲ್ಲಿ ಕೌಟಿಲ್ಯನೇ ಮೋಸದ ರಾಜಕೀಯ ಮಾಡಿರುವಾಗ ನಾವು ಮಾಡಿದರೆ ತಪ್ಪೇನು ಎಂದು ಆತ ಹೇಳಿಕೆ ನೀಡಿದ್ದಾನೆ. ನೀವೇ ಹೇಳಿ, ನಂದನ ದುರಾಡಳಿತದ ಆಳ್ವಿಕೆಯನ್ನು ಕೆಡವಲು ನಾನು ಆರಿಸಿಕೊಂಡ ಮಾರ್ಗಗಳು ಪ್ರಶ್ನಾರ್ಹವಾಗಿರಬಹುದು ಆದರೆ ಅದರಲ್ಲಿ ನನ್ನ ಸ್ವಾರ್ಥದ ಲವಲೇಶವೂ ಇರಲಿಲ್ಲ. ಕುಮಾರ ಚಂದ್ರಗುಪ್ತನನ್ನು ನಾನು ಸಿಂಹಾಸನದ ಮೇಲೆ ಕೂರಿಸಿ ನನಗೆ ಸರ್ವ ಅಧಿಕಾರವಿರುವ ಮಹಾ ಮಂತ್ರಿಯ ಪಟ್ಟ ದೊರೆಯುವುದಿದ್ದರೂ ಅದನ್ನು ತಿರಸ್ಕರಿಸಿ ನನ್ನ ಹಳೆಯ ಬಡತನದ ಬದುಕಿಗೆ ಹಿಂದಿರುಗಿದೆ. ಈಗಹೇಳಿ ತಮ್ಮ ಸ್ವಾರ್ಥಕ್ಕಾಗಿ ನಾಡಿನ ಜನತೆಯ ತೀರ್ಪನ್ನು ತಿರಸ್ಕರಿಸಿದವರಿಗೆ ನನ್ನ ಹೆಸರು ಎತ್ತಲು ಯಾವ ಯೋಗ್ಯತೆಯಿದೆ?” ಕೌಟಿಲ್ಯನ ಮುಖ ಆವೇಶದಿಂದ ಗಂಭೀರವಾಗಿತ್ತು.

ಅಷ್ಟು ಹೊತ್ತಿಗೆ ಸಭಿಕರಿಗೆಲ್ಲಾ ಸಮಸ್ಯೆಯ ತೀವ್ರತೆಯ ಅರಿವಾಗಿತ್ತು. ಎಲ್ಲರೂ ಮೌನವಾಗಿ ತುಟಿಬಿಚ್ಚದೆ ಕುಳಿತಿದ್ದರು.

ಕೆಲಕಾಲದ ನಂತರ ಮಹಾವಿಷ್ಣುವೇ, “ಈ ಸಮಸ್ಯೆಗೊಂದು ಸರ್ವಕಾಲಿಕವಾದ ಪರಿಹಾರವನ್ನು ಕಂಡುಕೊಳ್ಳಲು ಈ ಸಭೆಯನ್ನು ಕರೆದೆ. ಒಬ್ಬ ವ್ಯಕ್ತಿಯ ಒಂದು ವಿಚಾರವನ್ನು, ಒಂದು ಹೊಸ ಅನ್ವೇಷಣೆಯನ್ನು ಇನ್ನೊಬ್ಬರು ಬಳಸುವುದನ್ನು ತಡೆಯಲು ಭೂಲೋಕದಲ್ಲಿ ಒಂದು ವ್ಯವಸ್ಥೆಯಿದೆಯಂತೆ. ಅದನ್ನು ಪೇಟೆಂಟ್ ಅಂತ ಕರೆಯುತ್ತಾರಂತೆ. ನಾವೂ ಕೂಡ ನಮಗೆ ಸಂಬಂಧಿಸಿದ ವಿಚಾರಗಳನ್ನು, ನಮ್ಮ ಅವತಾರಗಳನ್ನೆಲ್ಲಾ ಪೇಟೆಂಟ್ ಮಾಡಿಸಿಬಿಡೋಣ. ಆಗ ನಮ್ಮ ಅನುಮತಿಯಿಲ್ಲದೆ ಯಾರೂ ಅದರ ಬಗ್ಗೆ ಮಾತನಾಡಲು ಸಾಧ್ಯವಾಗದು…” ಎಂದು ಸಭೆಯ ಅಭಿಪ್ರಾಯ ತಿಳಿಯುವಂತೆ ಅತ್ತಿತ್ತ ನೋಡಿದ.

ಮಹಾದೇವ ತನ್ನ ಅಭಿಪ್ರಾಯ ತಿಳಿಸುತ್ತಾ, “ದೇವರುಗಳಾದ ನಾವು ಮನುಷ್ಯರ ಬಳಿಗೆ ಹೋಗುವುದೇ? ಇದ್ಯಾಕೊ ಸರಿಯೆನಿಸಲ್ಲ.” ಎಂದ ಶಾಂತವಾಗಿ.

ಏನು ಮಾಡುವುದು? ಕಾಲ ಬದಲಾದ ಹಾಗೆ ನಾವೂ ಬದಲಾಗಬೇಕು. ಇಲ್ಲವಾದರೆ ನಮ್ಮನ್ನು ಹಳೇ ಕಾಲದವರು ಅಂತ ನಮ್ಮ ಕಿರಿಯರು ಆಡಿಕೊಳ್ಳುತ್ತಾರೆ. ಬಾಲಕ ಗಣೇಶನದೂ ಇದೇ ಅಭಿಪ್ರಾಯ. ಹಾಗಾಗಿ ಈ ಪೇಟೆಂಟ್ ಕೆಲಸವನ್ನು ಆತನಿಗೇ ಒಪ್ಪಿಸಿಬಿಡೋಣ.” ಎಂದು ಮಹಾವಿಷ್ಣು ಹೇಳುತ್ತಿದ್ದಂತೆ ಸಭೆಯಲ್ಲಿ ಕೆಲಕಾಲ ಗುಜುಗುಜು ಕೇಳಿಬಂತು ಅನಂತರ ಸಭೆ ಸರ್ವಾನುಮತದಿಂದ ಅದನ್ನು ಅನುಮೋದಿಸಿತು.

ಬಾಲಕ ಗಣೇಶ, “ಈ ಸಲದ ಚೌತಿ ಹೇಗೂ ಆಗಿಹೋಯ್ತು, ಮುಂದಿನ ಸಲ ಭೂಲೋಕಕ್ಕೆ ಹೋದಾಗ ಆ ಕೆಲಸವನ್ನು ಮಾಡಿಕೊಂಡುಬರುತ್ತೇನೆ. ನೀವೇನೂ ಚಿಂತಿಸಬೇಡಿ.” ಎಂದನು ಆತ್ಮವಿಶ್ವಾಸದಿಂದ.

ಈಗಿನ ಜನರೇಷನ್ ತುಂಬಾ ಬುದ್ಧಿವಂತರು, ಎಂತಹ ಸಮಸ್ಯೆಗಾದರೂ ಸುಲಭವಾಗಿ ಪರಿಹಾರ ಕಂಡುಕೊಂಡುಬಿಡುತ್ತಾರೆ, ಎಲ್ಲಾ ಕಾಲನ ಮಹಿಮೆ ಎಂದುಕೊಳ್ಳುತ್ತಾ ಸಭಿಕರು ಊಟದ ವ್ಯವಸ್ಥೆ ಮಾಡಿದೆಡೆಗೆ ಸಾಗಿದರು ನೆಮ್ಮದಿಯ ನಿಟ್ಟುಸಿರುಬಿಡುತ್ತಾ.

(ಮೂಲ ಲೇಖನ ‘ಸಡಗರ’ ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು.)


Technorati : , , ,