Archive | ಹಾಸ್ಯ ಲೇಖನ RSS feed for this section

ಹಾಸ್ಯ ಲೇಖನ: ಸರಸ ವಿರಸ

7 ಜನ

* ಶ್ರೀನಾಥ್ ಬಲ್ಲೆ

(ಬರಹ ಮೊದಲು ಪ್ರಕಟವಾದದ್ದು ‘ಸಂಪದ’ದಲ್ಲಿ)

ಬೆಳಿಗ್ಗೆ ಇಂದ ಏನೋ ಧುಮ ಧುಮ ಅನ್ನುತ್ತಾ ಓಡಾಡುತ್ತಿದ್ದಳು ವಿಶಾಲೂ. ಏನೂ ಅಂತ ಹೇಳ್ತಿಲ್ಲ. ಕೆನ್ನೆಗಳು ಭಾಗಶ: ಕೆಂಪಾಗಿದ್ದು,  ಕಣ್ಣಲ್ಲಿ ಅಲ್ಲಲ್ಲೇ ನೀರು ತುಂಬಿದ್ದು, ತುಂತುರು ಅಥವಾ ಭಾರಿ ಅಳು ಬರುವ ಸಾಧ್ಯತೆ ಇತ್ತು. ನನ್ನೆದೆಗೆ ಒರಗಿ ಅತ್ತಾಗ (ಅತ್ತರೆ) ಕಾಟನ್ ಶರ್ಟಿನ ಜೊತೆ ಹೃದಯಕ್ಕೆ ಹತ್ತಿರವಾದ ಬನಿಯನ್ ಕೂಡಾ ಎಲ್ಲಿ ಒದ್ದೆಯಾಗುವುದೋ ಎಂದು ಅಲೋಚಿಸಿ, ನೀರು ಬಿದ್ದರೂ ಜಾರಿ ಹೋಗುವುದಕ್ಕೆ ಹತ್ತಿರವಾದ ಪಾಲಿಸ್ಟರ್ ಶರ್ಟು ಧರಿಸಿ ಕುಳಿತೆ.

ಅಳುವೂ ಬರಲಿಲ್ಲ, ಅವಳೂ ಬರಲಿಲ್ಲ, ಒರಗಲೂ ಇಲ್ಲ. ಹಾಗಾಗಿ, ನಾನೇ ಅವಳ ಬಳಿ ಹೋಗಿ "what is your ಸಂಕಟ ?" ಎಂದು ಕಂಗ್ಲೀಷ್’ನಲ್ಲಿ ಕೇಳೋಣ ಎಂದು ಯೋಚಿಸಿದೆ. ಹಾಗೆ ಕೇಳಿದರೆ ಸರಿ ಹೋಗುತ್ತೋ ಇಲ್ಲವೋ  ’you are my ಸಂಕಟ’ ಅಂದರೆ ಏನು ಮಾಡುವುದು.  ಹೋಗಲಿ,  ಟೀ.ವಿ ಕನ್ನಡದಲ್ಲಿ  "ಹೇನಾಯ್ತು ? " ಅಂತ ಕೇಳಲೇ?  "ಹೇನಿಲ್ಲ" ಅಂದುಬಿಟ್ಟರೆ ? ಸರಿ, ಸರಸವಾಗಿ ಡಾ|ರಾಜ್ ಶೈಲಿಯಲ್ಲಿ "ಕೋಪವೇತಕೇ ನನ್ನಲೀ ಹೇಳುಬಾ ಪ್ರೇಯಸೀ " ಎಂದು ಹಾಡೋಣ ಅಂತ ಹತ್ತಿರ ಹೋದರೆ, ಅವಳ ಮುಖ  "ಬಾರಾ… ಜಗಳಕೆ ಬಾರಾ" ಎಂದು ಹಾಡುವಂತೆ ತೋರಿತು. 

ಇದ್ಯಾವುದೂ ಬೇಡ. ಸರಸದ ಮಾತೇ ಸರಿ ಎಂದು ತೀರ್ಮಾನ ಮಾಡಿ "ನೀ ಸಿಟ್ಟು ಮಾಡಿಕೊಂಡಾಗ ಕೆಂಪು ಕೆಂಪಾಗಿ ಕಾಣೋದು ನೋಡಿ ಮನೆಯಲ್ಲಿ ಟೊಮ್ಯಾಟೋ ಮುಗಿದಿರೋದು ನೆನಪಾಯ್ತು ನೋಡು " ಅಂದೇ ಬಿಟ್ಟೆ. ಸದ್ಯ, ’ನಿಮ್ಮ ಹೊಟ್ಟೆ ನೋಡಿದಾಗಲೆಲ್ಲ ಕುಂಬಳಕಾಯಿ ಹುಳಿ ತಿನ್ನಬೇಕು ಅನ್ನಿಸುತ್ತೆ’ ಅಂತ ಅವಳು ಹೇಳಲಿಲ್ಲ. ನನ್ನ ಆ ಮಾತಿಗೆ ಅವಳು ಇನ್ನೂ ಕೆಂಪಾದಳು. ನಾಚಿಕೆಯಿಂದಲೋ ಅಥವಾ ಹೆಚ್ಚಿನ ಸಿಟ್ಟಿನಿಂದಲೋ ತಿಳಿಯದಾಯಿತು. ಮುಂದುವರೆಸಿದೆ "ಇದನ್ನೇ ಹೇಳೋದು… ಕೆಂಪೇ ಕೆಂಪೋತ್ಪತ್ತಿ:  ಅಂತ ".  ಆಗ ನಿಜಕ್ಕೂ ನಾಚಿಕೆಯ ಕೆಂಪೇರಿ ನಗು ಅಳು ಎರಡೂ ಒಟ್ಟಿಗೆ ಬಂದೇ ಬಿಟ್ಟಿತು. 

"ಈಗಲಾದರೂ ವಿಷಯ ಹೇಳು ಕೆಂಪಮ್ಮಾ " ಅಂದೆ. ನಾರಿ ನುಡಿದಳು "ಇವತ್ತು ಬೆಳಿಗ್ಗೆ ಇಂದ ನಾನೂ ಕಾಯ್ತಾ ಇದ್ದೀನಿ. ನನಗೆ ಶುಭಾಶಯ ಹೇಳಲೇ ಇಲ್ಲ ನೀವು". ಹೌದು, ಈಗಲೂ ಹೇಳಿಲ್ಲ ! ನಾನೇನು ಮಾಡಲಿ ಯಾವುದೋ ತಿಂಗಳು ಯಾವುದೋ ದಿನ ಹುಟ್ಟಿದರೆ ಹೇಗೆ ನೆನಪು ಇರುತ್ತೆ. ಅದೇ, ನಮ್ಮ ಪಕ್ಕದ ಮನೆ ರೋಜ ನೋಡಿ. ಜನವರಿ ಒಂದನೇ ತಾರೀಖು ಹುಟ್ಟಿದಳಂತೆ. ಹಾಗಂತ ಇವಳೇ ಹೇಳಿದ್ದು. ವಿಷಯ ತಿಳಿದಾಗಿನಿಂದ ಪ್ರತೀ ವರ್ಷ ತಪ್ಪದೆ, ಅವಳ ಗಂಡ ಅವಳಿಗೆ ವಿಶ್ ಮಾಡದಿದ್ದರೂ, ನಾನಂತೂ ಮಾಡಿದ್ದೇನೆ. ಹೋಗ್ಲಿ ಬಿಡಿ, ವಿಷಯಕ್ಕೆ ಬರೋಣ. 

ಸಮಾಧಾನ ಮಾಡುವಂತೆ ಹೇಳಿದೆ "ಅಲ್ವೇ, ನನಗೆ ನೆನಪಿಲ್ಲಾ ಅಂತ ಅಂದುಕೊಂಡಿದ್ದೀಯಾ. ಆ ಹಾಳಾದ ಹೂವಿನ ಅಂಗಡಿಯವನಿಗೆ ಬೆಳಿಗ್ಗೆ ಒಂಬತ್ತು ಘಂಟೆಗೆ ಸರಿಯಾಗಿ ಹೂವಿನ ಬುಕೆ ತೆಗೆದುಕೊಂಡು ಬಾ ಅಂತ ನೆನ್ನೆ ಸಂಜೆ ದುಡ್ಡು ಕೊಟ್ಟಿದ್ದೆ. ನೋಡು, ಇನ್ನೂ ಬಂದಿಲ್ಲ. ಅಲ್ಲಾ, ಹೂವಂತಹ ನಿನ್ನ ಮನಸ್ಸನ್ನು ಹೂವಿನಿಂದ ವಿಶ್ ಮಾಡುವುದು ಬಿಟ್ಟು ಬರೀ ಕೈಯಲ್ಲಿ ವಿಶ್ ಮಾಡಲಿಕ್ಕೆ ನಾನೇನು ಬಿಕನಾಸೀನೇ? " ಅಂತ ನನ್ನ ನಾನೇ ಬೈದುಕೊಂಡೆ. ಸೂರ್ಯಕಾಂತಿ ಹೂವಿನಂತೆ ಅರಳಿದ ಅವಳ ಮುಖದಲ್ಲಿನ ಬಾಯಿಂದ ನುಡಿ ಮುತ್ತುಗಳು ಉರುಳಿತು "ಬರೀ ಹೂವಿನ ಬುಕೆ ನಾ". 

ಸಾವರಿಸಿಕೊಂಡು  "ಹೂವಿನ ಬುಕೆ ಇಂದ ಒಂದು ಕೆಂಪು ರೋಜನ್ನು ತೆಗೆದುಕೊಂಡು ಮುಡಿದ ಮೇಲೆ ಹೊರಗಡೆ ಊಟಕ್ಕೆ ಹೋಗೋಣ ಅಂತ ನನ್ನ ಪ್ಲಾನು" ಅಂತ ಇಲ್ಲದ ಪ್ಲಾನು ಹೊರಬಿಟ್ಟೆ. ಅವಳು ಬಿಟ್ಟಾಳೆಯೇ "ಮತ್ತೊಂದು ರೋಸ್ ತೆಗೆದುಕೊಂಡು ನಿಮ್ಮ ಕಿವಿ ಮೇಲೆ ಇಟ್ಕೊಂಡು ಹೋದರೆ ಹೇಗೆ? ಅಲ್ರೀ, ಬೆಳಿಗ್ಗೆ ಸೊಪ್ಪಿನ ಹುಳಿ ಮಾಡು ಅಂತ ಹೇಳಿದ್ದು, ನಾಳೆಗಾ? ". ಥತ್! ಯಾಕೋ ಇವತ್ತು ಎದ್ದ ಘಳಿಗೆ ಚೆನ್ನಾಗಿಲ್ಲ. ಒಂದು ಹೇಳಿದರೆ ಇನ್ನೊಂದರಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದೇನೆ.

"ಅಲ್ಲ, ವಿಶಾಲೂ. ನಿನಗೆ ಸೊಪ್ಪಿನ ಹುಳಿ ಇಷ್ಟ ಅಲ್ವಾ. ಅದಕ್ಕೇ ಹೇಳಿದ್ದು" ಅಂದೆ. ವಿಶಾಲೂ "ನನಗೆ ಸೊಪ್ಪು ಇಷ್ಟ ಅಂತ ನಾನೇ ಮಾಡಿಕೊಂಡು ತಿನ್ನಬೇಕಾ. ನೀವು ಮಾಡೋದು ತಾನೇ ? " ಅನ್ನೋದೇ. ಯಾಕೋ ವ್ಯಾಪಾರ ಗಿಟ್ತಾ ಇಲ್ಲ ಅಂತ ಅಂದುಕೊಂಡು "ಸರಿ, ಅದು ಬಿಡು. ಈಗ ಹೇಳು, ಯಾವ ಹೋಟಲ್ಲಿಗೆ ಹೋಗೋಣ ?". ವಿಶಾಲೂ ಹೇಳಿದಳು "ಎಂಟನೇ ಕ್ರಾಸ್’ನಲ್ಲಿರೋ ಜನತಾ ಹೋಟೆಲ್ಲಿಗೆ ಹೋಗೋಣ ? ". ನಾನು ಬಿಗುಮಾನದಿಂದ ನುಡಿದೆ "ಥತ್! ಇಂತಹ ದಿನಾನೂ ನಿನ್ನನ್ನ ಆ ದರಿದ್ರ ಹೋಟೆಲ್ಲಿಗೆ ಕರೆದುಕೊಂಡು ಹೋಗ್ತೀನಾ?  ಬೇರೇ ಕಡೆ ಹೋಗೋಣ". ವಿಶಾಲೂ ಪ್ರತಿ ನುಡಿದಳು "ಅಲ್ರೀ, ಹಾಗಲ್ಲ, ಊಟ ಆದ ಮೇಲೆ ಅಲ್ಲಿಂದ ರಾಜರತ್ನಂ ಜುವೆಲರ್ಸ್’ಗೆ ನೆಡೆದೇ ಹೋಗಬಹುದು. ಸುಮ್ಮನೆ ಆಟೋ ಖರ್ಚು ಇರೋಲ್ಲ. ". ಪಕ್ಕದಲ್ಲೇ ಬಾಂಬ್ ಸಿಡಿದ ಹಾಗೆ ಆಯಿತು.

ಮತ್ತೆ ಸಾವರಿಸಿಕೊಂಡು ನುಡಿದೆ "ಅಲ್ಲಾ, ಇವತ್ತು ಭಾನುವಾರ ಅಲ್ವಾ? ಅಂಗಡಿ ರಜಾ".  ವಿಶಾಲೂ ನುಡಿದಳು "ಹೌದು, ಕಸ್ಟಮರ್ಸ್’ಗೆ ರಜ. ಆದರೆ ಡೆಲಿವರಿ ಕೊಡ್ತಾರೆ". ಇದೇನಪ್ಪ ಹೊಸ ವಿಷಯ ಅಂತ ಮಿಕಿ ಮಿಕಿ ನೋಡಿದೆ. ಅವಳು ಹೇಳಿದಳು "ಹೋದ ವಾರ ಆ ಕಡೆ ಹೋದಾಗ ಒಂದು ಸರ ನೋಡಿದ್ದೇ, ನೀವು ಹೇಳಿದ್ರೀ, ಒಂದು ಒಳ್ಳೇ ದಿನ ಕೊಡಿಸ್ತೀನಿ ಅಂತ. ಜ್ಞ್ನಾಪಕ ಇಲ್ವಾ? ಇದಕ್ಕಿಂತಾ ಒಳ್ಳೇ ದಿನ ಬೇಕಾ ? ನೆನ್ನೆ ಅಂಗಡಿಯವರಿಗೆ ಹೇಳಿ ಬಂದಿದ್ದೆ. ನಾಳೆ ಬರ್ತೀವಿ ತೆಗೆದಿಟ್ಟಿರಿ ಅಂತ. ಹೇಗಿದ್ರೂ ನೀವೂ ರೆಡಿ ಇದ್ದೀರಾ. ಮೊದಲು ಅಂಗಡಿಗೆ ಹೋಗಿ, ಸರ ತೆಗೆದುಕೊಂಡು ಆಮೇಲೆ ಊಟಕ್ಕೆ ಹೋಗೋಣ. ಸದ್ಯ, ಊಟದಲ್ಲಿ ನಿಧಾನ ಆಗಿ ಅಂಗಡಿ ಮುಚ್ಚಿಬಿಟ್ಟಾರು ".
ಮನದಲ್ಲೇ ಹಾಡಿಕೊಂಡೆ "ದಾರಿ ಕಾಣದಾಗಿದೇ ರಾಘವೇಂದ್ರನೇ…". ಇಬ್ಬರೂ ಹೊರಗೆ ಹೊರಟೆವು. ವಿಶೇಷವಾಗಿ ನಾವು ಹೊರಗೆ ಹೊರಟಾಗ ಹೇಗೋ ಕೊನೆ ಮನೆ ಅನಸೂಯಾಬಾಯಿಗೆ ತಿಳಿದು ಹೋಗುತ್ತದೆ. ಅವರೂ ಅದೇ ಸಮಯಕ್ಕೆ ಏನೋ ಕೆಲಸ ಇರುವ ಹಾಗೆ, ಹೊರಗೆ ಬಂದು ನಮ್ಮಿಂದ ವಿಷಯ ತಿಳಿದುಕೊಂಡ ಮೇಲೇನೇ ನಮಗೆ ಮುಂದೆ ಹೋಗಲು ಅನುಮತಿ ಸಿಗುವುದು. ಅಲ್ಲಿಯವರೆಗೆ ಜಪ್ಪಯ್ಯ ಅಂದರೂ ಬಿಡಲ್ಲ. ನನಗೋ ಅವರು ಬಂದರೇ ಆಗೋಲ್ಲ. ನಾನು ಸಿಡಿ ಸಿಡಿ ಅನ್ನುವುದು ಅವರು ಅದನ್ನು ಲೆಕ್ಕಿಸದೆ ಇರುವುದು ಎಲ್ಲ ಮಾಮೂಲು. ಇಂದೂ ಹಾಗೇ ಆಯಿತು. ನಾವು ಹೊರಗೆ ಕಾಲಿಡುತ್ತಿದ್ದಂತೆಯೇ ಅವರೂ ಹಾಗೇ ಸುಮ್ಮನೆ ಹಾದು ಹೋಗುವವರಂತೆ ನಮ್ಮನ್ನು ನೋಡಿ ನಿಂತು ಹಲ್ಲುಗಿಂಜಿದರು. ಇಂದು ಸಿಡಿಗುಟ್ಟುವ ಸರದಿ ವಿಶಾಲೂದು. ನಾನೇ ಹೋಗಿ ಅವರನ್ನು ಮಾತನಾಡಿಸಿದೆ. ಇದನ್ನು ನಿರೀಕ್ಷಿಸದ ಅವರು ಸೀದ ವಿಶಾಲೂ ಬಳಿ ಬಂದು "ರಾಮಣ್ಣಿಗೆ ಬಂದ ಜ್ವರ ವಾಸಿ ಆಯಿತಾ" ಅನ್ನೋದೇ ? 

ವಿಶಾಲೂ ಹೇಳಿದಳು "ಸ್ವಲ್ಪ ಮೈ ಬೆಚ್ಚಗಿದೆ ಅಂತ ಇದ್ದರು. ಅದಕ್ಕೆ ಸ್ವಲ್ಪ ಗಾಳಿಗೆ ತಿರುಗಾಡಿಕೊಂಡು ಬಂದರೆ ಸರಿ ಹೋಗಬಹುದು ಅಂತ ನಾನೇ ಹೊರಡಿಸಿಕೊಂಡು ಹೋಗುತ್ತಿದ್ದೇನೆ".  ಮೈ ಬೆಚ್ಚಗಾದರೆ ಹೊರಗೆ ತಿರುಗಾಡುವುದೇ? ಸುಳ್ಳು ಹೇಳಲಿಕ್ಕೂ ಬರುವುದಿಲ್ಲ ಇವಳಿಗೆ. ಆದರೆ ನನಗೆ ಜ್ವರ ಯಾವಾಗ ಬಂದಿತ್ತು ?  ನಾನು ಏನು ವಿಷಯ ಎಂದು ಸನ್ನೆ ಮಾಡಿ ಕೇಳಿದಾಗ ಅವಳು ನನ್ನನ್ನು ನೂಕಿಕೊಂಡು "ಸುಮ್ಮನೆ ಬನ್ನಿ"  ಅಂತ ಹೊರಡಿಸಿಕೊಂಡು ಹೋದಳು. ಇವತ್ತೇನೋ ಆಗಿದೆ. ಎಂದೂ ಬಿಡದ ಅನಸೂಯಾಬಾಯಿ ಹೆಚ್ಚು ವಿಷಯ ಕೇಳದೆ ನಮ್ಮನ್ನು ಹಾಗೇ ಬಿಟ್ಟುಬಿಟ್ಟರು. ಆಮೇಲೆ ವಿಷಯ ಹೇಳಿದಳು, ಅವರ ಸೊಸೆ ಸೀಮಂತಕ್ಕೆ ನನಗೂ ಊಟಕ್ಕೆ ಹೇಳಿದ್ದರಂತೆ. ಅಲ್ಲಿ ನನಗೇನು ಕೆಲಸ ಅಂತ ಇವಳು ನನಗೆ ಜ್ವರ ಅಂತ ಹೇಳಿದ್ದಳು. ಒಟ್ಟಾರೆ ನನಗೆ ಹಬ್ಬದೂಟ ಮಿಸ್ ಆಯಿತು.

ಅಂತೂ ನಮ್ಮ ಸವಾರಿ ಅಂಗಡಿಯ ಕಡೆ ನೆಡೆದಿತ್ತು. ಮನದಲ್ಲೇ ನೂರು ಬಾರಿ "ಅಂಗಡಿ ಬಾಗಿಲು ಮುಚ್ಚಿರಲಿ" ಎಂದು ಕೇಳಿಕೊಂಡೆ. ಕಣ್ಣಲ್ಲಿ ಕಸವೇನೋ ಬಿತ್ತು ಎಂದು ಉಜ್ಜಿಕೊಂಡಾಗ ಕಣ್ಣಿನ ರೆಪ್ಪೆಯ ಕೂದಲು ಬೆರಳಿಗೆ ಅಂಟಿಕೊಂಡಿತು. "ಅಂಗಡಿ ಬಾಗಿಲು ಮುಚ್ಚಿರಲಿ" ಎಂದು ಮನದಲ್ಲೇ ಮತ್ತೆ ಅಂದುಕೊಂಡು ಅದನ್ನು ಉಫ಼್ ಮಾಡಿದೆ. ಅಂಗಡಿಯ ಬಾಗಿಲಿಗೆ ಹೋದರೆ ….. ಬಾಗಿಲು ಬೀಗ !!! "ಯುರೇಕಾ" ಎಂದು ಕೂಗಲಿಲ್ಲ ಅಷ್ಟೇ!
ವಿಶಾಲೂ ಅಂಗಡಿಯವನಿಗೆ ಮನದಲ್ಲೇ ನೂರು ಬಾರಿ ಶಾಪ ಹಾಕಿದಳು. ನಾನು ನೂರು ಬಾರಿ ಆಶೀರ್ವಾದ ಮಾಡಿದ್ದೆ. ಅಲ್ಲಿಂದ ಸೀದ ಮನೆ ಕಡೆ ಹೊರಟೆವು. ಹೋಟಲ್ಲೂ ಇಲ್ಲ ಏನೂ ಇಲ್ಲ. ಹೇಗಿದ್ರೂ ಸೊಪ್ಪಿನ ಹುಳಿ ರೆಡಿ ಇತ್ತಲ್ಲ. ಕಣ್ಣುಗಳೆರಡೂ ಕನ್ನಂಬಾಡಿ ಕಟ್ಟೆಯಾಗಿತ್ತು. ಯಾವ ಕ್ಷಣದಲ್ಲಾದರೂ ಕಟ್ಟೆ ಒಡೆದು ನೀರು ಧೋ ಎಂದು ಸುರಿಯುವ ಸ್ಥಿತಿಯಲ್ಲಿತ್ತು. ಮನೆ ತಲುಪಿದ ಕೂಡಲೆ, ಅವಳ ಹುಟ್ಟುಹಬ್ಬಕ್ಕೆಂದು,  ಮೊದಲೇ ಖರೀದಿ ಮಾಡಿಟ್ಟಿದ್ದ ಚಿನ್ನದ ಸರ ತೆಗೆದು, ಅವಳ ಕೊರಳಿಗೆ ಹಾಕಿದೆ. ಈಗ ನಿಜಕ್ಕೂ ಜೋರಾಗಿ ಅಳು ಬಂದಿತ್ತು. ಒಳ್ಳೇದಕ್ಕೂ ಅಳು ಕೆಟ್ಟದಕ್ಕೂ ಅಳು. ನನಗೆ ಅರ್ಥವೇ ಆಗೋಲ್ಲ.

ಈಗ ನಿಜಕ್ಕೂ ಕೇಳಿದೆ "what is your ಸಂಕಟ ? ಸರ ಚೆನ್ನಾಗಿಲ್ವಾ? " ಅಂತ. ಏನೋ ಹೇಳಲಿಕ್ಕೆ ಬಾಯಿ ತೆರೆದಳು ಆದರೆ ಅದೇ ಸಮಯಕ್ಕೆ ಯಾರೋ ಬಾಗಿಲು ಬಡಿದರು. ತೆರೆದ ಬಾಯಿ ಮುಚ್ಚಿ, ಮುಚ್ಚಿದ್ದ ಬಾಗಿಲು ತೆರೆಯಲು, ಅಲ್ಲಿ ಅಂಗಡಿಯವನು ನಿಂತಿದ್ದ. "ಸಾರಿ ಮೇಡಮ್, ಬೇರೇ ಕೆಲಸ ಇತ್ತು ಅಂತ ಅಂಗಡಿ ಬೇಗ ಮುಚ್ಚಿದೆ. ಆದರೆ ಖಾಯಂ ಗಿರಾಕಿ ನೀವು ಅಂತ ನಿಮ್ಮ ಆರ್ಡರ್ ಮನೆಗೇ ತಲುಪಿಸೋಣ ಅಂತ ಬಂದೆ. ಇವತ್ತು ಸ್ಪೆಶಲ್ಲು ದಿನ ಅಲ್ವಾ………." ನಮ್ಮ ಮನೆ ವಿಷಯ ನಮಗಿಂತಲೂ ಹೊರಗಿನವರಿಗೆ ಚೆನ್ನಾಗಿ ಗೊತ್ತಿರುತ್ತೆ.

ಅವನು ತಂದುಕೊಟ್ಟ ಪ್ಯಾಕೆಟ್ ತೆರೆದು ಅದರಿಂದ ಒಂದು ಡಬ್ಬಿ ಹೊರತೆಗೆದಳು. ನನ್ನೆದೆ ಇನ್ನೂ ಜೋರಾಗಿ ಹೊಡೆದುಕೊಳ್ಳಲು ಶುರು ಮಾಡಿತ್ತು. ನಾನು ಸರ್ಪ್ರೈಸ್ ಮಾಡಲು ತಂದಿದ್ದರೆ ಇವಳು ಇನ್ನೊಂದು ತೆಗೆದಿಟ್ಟು ಕೊಂಡಿದ್ದಾಳೆ. ಡಬ್ಬಿಯಿಂದ ಒಂದು ಉಂಗುರ ಹೊರತೆಗೆದು, ನನ್ನ ಬೆರಳಿಗೆ ತೊಡಿಸಿ "happy anniversary" ಅಂದಳು !!!!! 

ಅಂದರೇ,  ಇಂದು ಅವಳ ಹುಟ್ಟಿದಹಬ್ಬ ಅಲ್ಲಾ ! ನಾನು ಹುಟ್ಟಿದಹಬ್ಬ ಅಂತ ಸರ ತಂದಿದ್ದೆ. ಮುಂಚೇನೇ ಗೊತ್ತಿದ್ದರೆ ಏನು ದೊಡ್ಡ ಸರ ತರ್ತಾ ಇದ್ನೇ ?  ಇಂದು ನಮ್ಮ ಮದುವೆಯಾದ ದಿನ. ಇಬ್ಬರೂ ಒಬ್ಬರಿಗೊಬ್ಬರು ಸರ್ಪ್ರೈಸ್ ಮಾಡಿಕೊಂಡಿದ್ದೆವು ! ಕಡೆಗೂ ನನ್ನೆದೆಗೆ ಒರಗಿ "ಅಲ್ರೀ, ಇವತ್ತು ನಮ್ಮ ಮದುವೆಯಾದ ದಿನ ಅಂತ ಗೊತ್ತಿದ್ದೂ ನಾಟಕ ಆಡಿದಿರಾ" ಅಂದಳು. ನಾನು ನುಡಿದೆ "ಖಂಡಿತಾ ನೆನಪಿರಲಿಲ್ಲ. ಸಾಮಾನ್ಯವಾಗಿ ನಾನು ದುರ್ಘಟನೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ" !!!

ಶಿರವೆಂಬ ಗುಡಿಯೊಳಗೆ ನೆಲೆಸಿರೋ “ಕೇಶ “ವಾ …..

12 ಮಾರ್ಚ್

ಮೆಕ್ಯಾನಿಕಲ್ ಇಂಜಿನಿಯರಿಂಗಿನಲ್ಲಿ ಬಿ.ಇ ಮಾಡಿ ಪ್ರಸ್ತುತ ಮುಂಬೈನ ಟಿಸಿಎಸ್‌ನಲ್ಲಿರುವ ಕುಂದಾಪುರದ ವಿ.ಸುಮಂತ ಶಾನುಭಾಗರು ಕವಿಗಳೂ ಹೌದು, ವಿಕಟಕವಿಗಳೂ ಹೌದು. ಅವರ ಇತ್ತೀಚಿನ ಹಾಸ್ಯ ಲೇಖನ ಸಂಪದದಲ್ಲಿ ಪ್ರಕಟವಾಗಿತ್ತು. ಅದು ನಗೆ ನಗಾರಿಯ ಓದುಗರಿಗಾಗಿ ಇಲ್ಲಿದೆ.

ಲೋ ಸುಮಂತಾ …… ತಲೆ ಒಳ್ಳೆ ಮರುಭೂಮಿ ಆಗಿ ಬಿಟ್ಟಿದೆಯಲ್ಲೋ !!!!! ನನ್ನ ಮಾನ ಮರ್ಯಾದೆಯ ಕಿಂಚಿತ್ತೂ ಪರಿವೆ ಇಲ್ಲದಂತೆ ಪಬ್ಲಿಕ್ಕಾಗಿ ನನ್ನ ಗೆಳೆಯ "ಸೈಕ್ ಪೋ " ನನ್ನ ಮಾನವನ್ನು ಬಹಿರಂಗ ಹರಾಜಿಗಿಟ್ಟಾಗ ಏನು ಮಾಡುವುದು ತಿಳಿಯದೆ ತಬ್ಬಿಬ್ಬಾದೆ . ತಕ್ಷಣ ಸುಧಾರಿಸಿಕೊಂಡು " ಹೌದೋ ನನ್ನ ತಲೆಯಲ್ಲಿ ಒಳ್ಳೆ ಬುದ್ಧಿ ತುಂಬಿದೆ ನಿನ್ನ ಥರ ಗೊಬ್ರ ಸಗಣಿ ತುಂಬಿದ್ದರೆ ನನ್ನ ಕೂದಲಿಗೂ ಪೋಷಣೆ ಸಿಕ್ಕಿ ಸೊಂಪಾಗಿ ಬೆಳೆದಿರೋದು" ಅಂಥ ಆವಾಜ್ ಹಾಕಿ ಅವನ ಬಾಯಿ ಮುಚ್ಚಿಸಿದೆ .ಇರಲಿ ಬಿಡಿ ಮೊದಮೊದಲು ಹೀಗೆ ಯಾರಾದರೂ ಹೇಳಿದರೆ ನನಗೆ ಸ್ವಲ್ಪ ಬೇಜಾರಾಗ್ತಿತ್ತು ಈಗ ಅಭ್ಯಾಸ ಆಗಿ ಹೋಗಿ ಬಿಟ್ಟಿದೆ . ಅದೇನೋ ಹೇಳ್ತಾರಲ್ಲ "ದಿನಾ ಸಾಯೋರಿಗೆ ಅಳೋರ್ಯಾರು " ಅಂತ ಹಾಗೇನೆ . ದಿನಾ ಹೋಗೋ ನನ್ನ ಕೂದಲಿಗೆ ಬೇಜಾರ್ ಮಾಡ್ಕೋಳ್ಲೋದಕ್ಕೂ ಸಮಯ ಇಲ್ಲದಾಗಿದೆ .

ಮೊನ್ನೆ "ಥಟ್ ಅಂತ ಹೇಳಿ " ನೋಡ್ತಾ ಇದ್ದೆ ಅದರ ನಿರೂಪಕರು "ಪ್ರತಿದಿನ ಮನುಷ್ಯರ 40 ಕೂದಲು ಉದುರುತ್ತದೆ ಹಾಗೆ ಬೆಳೆಯುತ್ತದೆ "ಅಂಥ ಹೇಳಿದ್ರು . ನನ್ನ ವಿಷಯದಲ್ಲಿ ಇದು ಸ್ವಲ್ಪ ಎಡವಟ್ಟಾಗಿದೆ . ಬ್ರಹ್ಮನ Program ನ್ನು testing ಮಾಡದೆ production ಗೆ release ಮಾಡಿರಬೇಕು . ಉದುರೋ ವಿಷಯದಲ್ಲಿ ನಲವತ್ತಕ್ಕೆ ಒಂದು ಹತ್ತು ಸೇರಿಸಿಯೇ ಉದುರುತ್ತದೆ ಆದರೆ ಬೆಳೆಯೋ program ಕೆಲಸ ಮಾಡುತ್ತಿಲ್ಲ . ಇದು ತಪ್ಪಲ್ಲವೇ ??. ಈ ಕೂದಲಿನ ಮೇಲೆ ಕಾಮೆಂಟರಿ ಕೇಳಿ ಕೇಳಿ ಸುಸ್ತಾಗಿದ್ದೇನೆ .ಕೆಲವೊಮ್ಮೆ ಕೊಲೆ ಮಾಡುವಷ್ಟು ಸಿಟ್ಟು ಬರುತ್ತದೆ .ಈಗ ನೀವೇ ನೋಡಿ …..

ಮೊನ್ನೆ ನಮ್ಮ ಮನೆಯ rent Agreement renew ಮಾಡುವಾಗ ಕಾರ್ಯನಿಮಿತ್ತ ಬ್ರೋಕರ್ ಬಳಿ ಹೋಗಿದ್ದೆ . ಅವನು ಅವನ ಹೊಸ Client ಗೆ " ಇಲ್ಲಿ ಮತ್ತೊಂದು plot ಖಾಲಿ ಇದೆ " ಎಂದು ಹೇಳಿ ನನ್ನ ತಲೆಯನ್ನು ನೋಡುತ್ತಾ ಕೂತರೆ ??? ಸಿಟ್ಟು ಬರುವುದಿಲ್ಲವೆ ???ನಾನೇನು ಮಾಡಲಿ ?? ಹಣೆಯ ಮೇಲೆ "Not for sale" ಎಂದು ಬೋರ್ಡ್ ಹಾಕಿ ತಿರುಗಲೇ??

ಕ್ಷೌರಕ್ಕೆಂದು ಹೋದಾಗ " ಗುರೂ … ಜೋನ್ ಅಬ್ರಾಹಂ ,ಶಾರುಕ್ ಖಾನ್ ಥರ Fomous personality ಗಳ Hair Style ಮಾಡೋ ಅಂದರೆ ಆ ಬಡ್ಡೀಮಗ " ಸಾರ್ …. Natural ಆಗಿ ನಿಮ್ಮದು ಘಜಿನಿ ಕಟ್ ಇದೆ ಇದು ಬಿಟ್ಟು ಬೇರೆ Fomous Personality ಬೇಕು ಅಂದರೆ ಗಾಂಧೀಜೀದು ಮಾಡಬಹುದು " ಅನ್ನೋದೇ ??? ಸಿಟ್ಟು ಬಂದು ಅಲ್ಲಿಂದ ಹೊರನಡೆದು ಬೇರೆ ಸೆಲೂನ್ ಗೆ ಹೋದೆ . ದೊಡ್ಡ ಕ್ಯೂ ಇತ್ತು . ಆದರೂ ನಾನೂ ಹೋಗುತ್ತಲೇ ಸೇಲೂನಿನವನು ಮೊದಲು ನಿಮಗೆ ಕಟ್ಟಿಂಗ್ ಮಾಡುತ್ತೇನೆ ಬನ್ನಿ ಸಾರ್ … ಅಂದ . ಆಯ್ತೆಂದು ಕೂತು "ಏನಪ್ಪಾ ನಂಗೆ ಯಾಕೆ First Preference ಕೊಟ್ಟೆ ಎಂದು ಕೇಳಿದರೆ ಸಾರ್ …ಅವರಿಗೆ ಕಟ್ಟಿಂಗ್ ಮಾಡ್ಲಿಕ್ಕೆ ಅರ್ಧ ಗಂಟೆ ಆಗುತ್ತೆ ನಿಮ್ಮದು ಎರಡು ನಿಮಿಷದಲ್ಲಿ ಮುಗಿಯುತ್ತಲ್ಲ … ಅದಕ್ಕೆ ಅನ್ನುವುದೇ ??? ಅಷ್ಟಲ್ಲದೆ ಕಟ್ಟಿಂಗ್ ಆದ ಮೇಲೆ ನಿತ್ಯದಂತೆ 50/- ಕೊಟ್ಟೆ . ಸಾರ್ … ನಾನು ಕೆಲಸಕ್ಕೆ ಸರಿಯಾಗಿ ಹಣ ತಗೊಳ್ಲೋನು. ಅಂಥ ಹೇಳಿ 20/- ವಾಪಾಸ್ ಕೊಡುವುದೇ ??? ಅವನ ನಿಯತ್ತಿಗೆ ಶಾಪ ಹಾಕುತ್ತ ಮನೆಗೆ ಹೋದೆ .

ಈಗ ಈ ಉದುರೋ ಕೂದಲಿಗೆ ಏನಾದರೂ ಮಾಡಬೇಕೆಂದು ನಿರ್ಧರಿಸಿದೆ . ಅಲೋಪತಿ ,ಹೋಮಿಯೋಪತಿ , ಆಯುರ್ವೇದ ,ವಿಜ್ಞಾನ , ಹಿಮಾನಿ , ಪ್ಯಾರಾಶೂಟ್, ನವರತ್ನ ತೈಲ, ತೆಂಗಿನೆಣ್ಣೆ ,ಹರಳೆಣ್ಣೆ ,ಸೀಗೆಕಾಯಿ ಪುಡಿ , ಕ್ಲಿನಿಕ್ ಪ್ಲಸ್ , ಆಲ್ ಕ್ಲೀಯರ್ ,ಅಪ್ನಾ ಖಯಾಲ್ ರಖ್ನಾ ಅನ್ನುತ್ತಾ ಗಾರ್ನೀರ್ , ತಲೆ ಮತ್ತು ಭುಜ (Head and shoulders) , ಯೋಗ, ಧ್ಯಾನ ಇವೆಲ್ಲದರ ಪ್ರಯೋಗ ನಡೆಸಿ ಸೋತು ಹೋದೆ . ಜಪ್ಪಯ್ಯ ಅಂದರೂ ಒಂದು ಕೂದಲು ಜನ್ಮ ಪಡೆಯಲಿಲ್ಲ . ಇನ್ನು Fevicol ಹಾಕಿ ಅಂಟಿಸಿ ಕೊಳ್ಳೋದು ಮತ್ತು ಯೂರಿಯಾ ಸುಫಲಾ ದಂತಹ ರಸಗೊಬ್ಬರ ಹಾಕಿಕೊಳ್ಳುವುದು ಮಾತ್ರ ಬಾಕಿ .ಅಥವಾ ಮೋಡ ಬಿತ್ತನೆಯಂತೆ ಕೇಶ ಬಿತ್ತನೆಯನ್ನು ಸರ್ಕಾರ ಹಮ್ಮಿಕೊಳ್ಳುತ್ತದೋ ಎಂದು ಕಾದು ನೋಡುತ್ತಿದ್ದೇನೆ .

"Dude…. ನಮ್ಮ ಮನೆಯ ಹತ್ರ ಒಬ್ರು ನಾಟಿ ವೈದ್ಯರಿದ್ದಾರೆ . ಅವರು ದನದ ಜೊಲ್ಲು ತಾಗಿದರೆ ಕೂದಲು ಬೆಳೆಯುತ್ತೆ ಅಂದ್ರು" ರಂಗ ಅರುಹಿದ . ಇಡೀ ಮುಳುಗಿದವನಿಗೆ ಚಳಿ ಏನು ?? ಇದೂ ಕೂಡ ನೋಡಿಯೇ ಬಿಡೋಣ .. ಎಂದು 2 ವಾರ ಬೆಳಿಗ್ಗೆ ಬೇಗ ಎದ್ದು ಪಕ್ಕದ ಮನೆಯವರ ಕೊಟ್ಟಿಗೆಗೆ ದೌಡಾಯಿಸಿದೆ . ದನವೋ …. ಸಿಕ್ಕಿದ್ದೇ ಛಾನ್ಸು ಎಂದು ನನ್ನ ತಲೆಯನ್ನು ನೆಕ್ಕಿದ್ದೇ ನೆಕ್ಕಿದ್ದು . ಉಹೂಂ …. ಅರ್ಧ ಕೂದಲು ಬರಲಿಲ್ಲ . ಸ್ವಲ್ಪ ದಿನದ ನಂತರ ಪಕ್ಕದ ಮನೆಯ ಅಂಕಲ್ ಮನೆಗೆ ಕರೆದರು . ಹೋದ ತಕ್ಷಣ ಕಾಫಿ ಕೊಟ್ಟು . "ಏನ್ ತಲೆ ಸಾರ್ ನಿಮ್ಮದು …. ಅಂದರು . ನಾನು ಇವರೆಲ್ಲೋ ನನ್ನ ಲೇಖನಗಳನ್ನು ಓದಿ ಮೆಚ್ಚಿರಬೇಕು ಎಂದುಕೊಂಡು ಧನ್ಯವಾದ ಅನ್ನುವುದಕ್ಕೆ ಮೊದಲೇ …. ಒಂದು ವಾರದಿಂದ ನಮ್ಮ ಹಸು ಒಂದೂವರೆ ಲೀಟರ್ ಹಾಲು ಹೆಚ್ಚಿಗೆ ಕರೀತಾ ಇದೆ ಎನ್ನುವುದೇ ??? ಬಿಸಿ ಇಲ್ಲದಿದ್ದರೂ ಕಾಫಿ ಲೋಟ "ತಡಾಲ್"… ಎಂದು ಕೆಳಗೆ ಬಿತ್ತು.

"ಮಚ್ಚಾ .. ಮಚ್ಚಾ ….ಮೊನ್ನೆ ನಾನು ಕುಂದಾಪುರಕ್ಕೆ ನಮ್ಮಜ್ಜಿ ಮನೆಗೆ ಹೋಗಿದ್ದೆ . ಕರಡಿ ಕೈಯಲ್ಲಿ ಆಶೀರ್ವಾದ ಮಾಡಿಸಿಕೊಂಡರೆ ಕೂದಲು ಬರುತ್ತೆ ಅಂಥ ಅಜ್ಜಿ ಹೇಳಿದ್ರು " ಸೇಟು ಫರ್ಮಾಯಿಸಿದ. ಲೋ ….ಏನೋ ?? ಆನೆ ಕೈಯಲ್ಲಿ ಕೋಲೆ ಬಸವನ ಕೈಯಲ್ಲಿ ಆಶೀರ್ವಾದ ಮಾಡಿಸ್ಕೊಳ್ಳೋದು ಕೇಳಿದ್ದೀನಿ ಇದೇನೋ ಕರಡಿ ಕೈಯಲ್ಲಿ ?? ಮತ್ತೆ ಆಮೇಲೆ ಕರಡಿ ಥರಾ ಮೈತುಂಬಾ ಕೂದಲು ಬಂದ್ರೆ ಕಷ್ಟ ಎಂದೆ . ಏಯ್ ಗುಬಾಲು….. ಇಲ್ಲಿವರ್ಗೂ ಯಾವ್ದಾದ್ರೂ ಬೋಳು ತಲೆ ಕರಡಿಯನ್ನ ನೋಡಿದ್ದೀಯಾ ??? ಮತ್ತೆ ಅದು ಆಶೀರ್ವಾದ ಮಾಡೋವಾಗ ತಲೆ ಮೇಲೆ ಕೈ ಇಡುತ್ತೆ ತಾನೆ ?? ಅಲ್ಲಿ ಮಾತ್ರ ಕೂದಲು ಬರುತ್ತೆ ಅಂಥ ಹೇಳಿದ . ಸರಿ … ಇರಲಿ ಮುಳುಗುವವನಿಗೆ ಹುಲ್ಲು ಕಡ್ಡಿ ಆಧಾರ ಅಂತೆ . ಹಾಗೆಯೇ ಊರಿಗೆ ಬಂದ ಕರಡಿ ಕುಣಿಸುವವನಿಗೆ ನೂರು ರುಪಾಯಿ ಕೊಟ್ಟು "ನೋಡು ಈ ಆಶೀರ್ವಾದ ತಲೆಗೆ ಮಾತ್ರ ಅಂಥ ನಿನ್ನ ಕರಡಿಗೆ ಹೇಳು " ಎಂದು ತಾಕೀತು ಮಾಡಿ ಆಶೀರ್ವಾದ ಮಾಡಿಸಿಕೊಂಡೆ.ಕರಡಿ ತಲೆ ಮೇಲೆ ಕೂದಲು ಬಂತೋ ಇಲ್ಲವೊ ತಿಳಿಯದು ನನ್ನ ತಲೆ ಮೇಲೆ ವಾರ ಕಳೆದರೂ ಕೂದಲು ಚಿಗುರಲಿಲ್ಲ .

ಈಗ ಇದೆಲ್ಲ ಬಿಟ್ಟು Root Cause analysis ಮಾಡಿ ಗೋಳಿ ಮರದಡಿ ಕೂತು ಧ್ಯಾನ ಮಾಡಿದಾಗ "ಕೂದಲಿರುವುದೇ ಕೂದಲುದುರಲು ಮೂಲ " ಎಂಬ ಜ್ಞಾನೋದಯವಾಗಿದೆ . ಇನ್ನು ಸ್ವಲ್ಪ ದಿನ ಕಳೆದ ಮೇಲೆ ತಲೆಯ ಮೇಲೆ ಒಂದೂ ಕೂದಲು ಇಲ್ಲದಂತಾದಾಗ ಕೂದಲು ಹೇಗೆ ಉದುರುತ್ತದೆ ಎಂದು ನಾನೂ ನೋಡುತ್ತೇನೆ . ಆದರೂ ಎಲ್ಲ ದೇವಸ್ಥಾನಗಳಿಗೆ ಹೋದಾಗ ನಾನು ಬೇಡುವುದೊಂದೇ " ನಾ ನಿನಗೇನೂ ಬೇಡುವುದಿಲ್ಲ ಹೃದಯ ಮಂಟಪದೊಳು ನೆಲೆಸಿರು ಹರಿಯೇ…. ಮತ್ತು ಶಿರವೆಂಬ ಗುಡಿಯೊಳಗೆ ನೆಲೆಸಿರೋ "ಕೇಶ "ವಾ ….. ಎಂದು .

ಇದೂ ಮುಗಿಯುತ್ತೆ… (ಮುಗಿಯಿತು)

2 ಮಾರ್ಚ್

(ಇಲ್ಲೀವರ್ಗೂ ಏನಾಗಿತ್ತು ಅಂದ್ರೆ….)

ಮಂಡಿಯೂರಿಯವರ ಮಾತಿನ ಮಾಂತ್ರಿಕ ಮೋಡಿಗೆ ಒಳಗಾದ ಕುಚೇಲನಿಗೆ ತಾನು ಕುರಿಯಲ್ಲ ಹುಲಿ ಎಂಬ ಆತ್ಮವಿಶ್ವಾಸ ಮೂಡಿತು. ಇಷ್ಟು ದಿನ ತನ್ನೊಳಗಿದ್ದ ಶಕ್ತಿಯನ್ನು ಕಾಣದೆ ಸಂಕಟ ಪಟ್ಟದ್ದಕ್ಕೆ ಆತನಿಗೆ ದುಃಖವಾಯಿತು. ಇನ್ನು ಮುಂದೆ ಮಂಡಿಯೂರಿಯವರ ಈ ಸೂಪರ್ ಫಾರ್ಮುಲಾವನ್ನು ಅಳವಡಿಸಿಕೊಂಡು ಬದುಕನ್ನು ಸುಖದ ಬೀಡಾಗಿಸಿಕೊಳ್ಳಬೇಕು ಎಂದುಕೊಂಡು ಜೇಬಿನಲ್ಲಿ ಉಳಿದಿದ್ದ ಚಿಲ್ಲರೆ ಕಾಸನ್ನೆಲ್ಲಾ ಮಂಡಿಯೂರಿಯವರ ಎದುರು ಇಟ್ಟು ಮಂಡಿಯೂರಿ ಬಾಗಿ ನಮಸ್ಕರಿಸಿ ಅಲ್ಲಿಂದ ಹೊರಟ.

ಮುಂದೆ ದಿನನಿತ್ಯದ ಬದುಕಿನಲ್ಲಿ ಯಾವುದೇ ಕಷ್ಟ ಬಂದರೂ ‘ಈ ಕಷ್ಟ ಶಾಶ್ವತವಲ್ಲ. ಇದು ಮುಗಿದು ಒಳ್ಳೆಯ ಕಾಲ ಬಂದೇ ಬರುತ್ತೆ. Just let it go… ಇದೂ ಮುಗಿಯುತ್ತೆ’ ಅಂದುಕೊಂಡು ನೆಮ್ಮದಿಯಿಂದ ಇರುತ್ತಾ, ಸುಖದ ಹೊಳೆಯಲ್ಲಿ ತೇಲುತ್ತಿರುವಾಗಲೂ ‘ಈ ಸುಖವೇ ಶಾಶ್ವತವಲ್ಲ. ಮನಸ್ಸಿನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಬೇಡ. ಲಗಾಮು ಕೈತಪ್ಪಿಹೋಗದಂತೆ ಎಚ್ಚರ ವಹಿಸು. ಸುಖದ ಅಲೆ ನಿರಂತರವಾದದ್ದಲ್ಲ. ಮೇಲೇರಿದವ ಕೆಳಕ್ಕಿಳಿಯಲೇ ಬೇಕು. ಈ ಸುಖದ ಘಳಿಗೆ- ಇದೂ ಮುಗಿದು ಹೋಗುತ್ತೆ.’ ಎಂಬ ಎಚ್ಚರವನ್ನು ಪಾಲಿಸುತ್ತಾ ಕುಚೇಲ ಇಡೀ ಭೂಮಿಯ ಮೇಲೆಯೇ  ಅತ್ಯಂತ ಸುಖಿ ಮನುಷ್ಯನಾಗಿದ್ದ. ಆತನ ಸಂತೋಷ, ನೆಮ್ಮದಿಯನ್ನು ಕಂಡು ನೆಂಟರಿಷ್ಟರು, ಸಹೋದ್ಯೋಗಿಗಳೆಲ್ಲಾ ಅಸೂಯೆಯಿಂದ ನರಳಿ ಡಾಕ್ಟರನ ಮಗನ ಶೋಕಿಗೆ ಚಂದಾ ಪಾವತಿಸತೊಡಗಿದರು.

ಸತ್ವಶಾಲಿಯಾದ ಮನುಷ್ಯನನ್ನು ಘಳಿಗೆ ಘಳಿಗೆಗೆ ಪರೀಕ್ಷೆಗೊಡ್ಡದಿದ್ದರೆ, ಗೋಳು ಹೋಯ್ದುಕೊಳ್ಳದಿದ್ದರೆ ತಾನಿದ್ದೇನು ಪ್ರಯೋಜನ ಎನ್ನಿಸಿರಬೇಕು ದೇವರಿಗೆ, ಕುಚೇಲನಿಗೆ ಸಾಲಾಗಿ ಒಂದರ ಮೇಲೊಂದರಂತೆ ಕಷ್ಟಗಳನ್ನು ನೀಡುತ್ತಾ ಹೋದ. ಆದರೆ ಕುಚೇಲ ಹಲ್ಲು ಕಚ್ಚಿ ಸಹಿಸುತ್ತಾ ನೆಮ್ಮದಿಯಿಂದ ಬಾಳುತ್ತಿದ್ದ. ದೇವರು ಕಟ್ಟ ಕಡೆಗೆ ತನ್ನ ಶಕ್ತ್ಯಾಯುಧವನ್ನೇ ಹೊರತೆಗೆದ. ತನ್ನೆಲ್ಲಾ ಶಕ್ತಿಯನ್ನು ಬಳಸಿ ಅದನ್ನು ಕುಚೇಲನ ಮೇಲೆ ಪ್ರಯೋಗ ಮಾಡಿಯೇ ಬಿಟ್ಟ. ಅದರ ಫಲವಾಗಿ ಕುಚೇಲ ಶುಭ ಮುಹೂರ್ತದಲ್ಲಿ ಮದುವೆಯಾದ.

ಮದುವೆಯಾದ ಹೊಸತರಲ್ಲಿ ದಾಂಪತ್ಯ ಸುಖದ ಜೇನನ್ನು ಸವಿದು ಸವಿದು ದುಂಡಗಾಗುತ್ತಿದ್ದ ಕುಚೇಲನ ಮನಸ್ಸಿನಲ್ಲಿ ಮಂಡಿಯೂರಿಯ ಉಪದೇಶ ಇದ್ದೇ ಇತ್ತು. ಈ ಸುಖ ಶಾಶ್ವತವಾದದ್ದಲ್ಲ, ಇದು ಒಂದು ದಿನ ಮುಗಿಯಲೇ ಬೇಕು ಎಂಬ ಎಚ್ಚರ ಆತನಿಗಿತ್ತು. ಈ ವೈಭವ, ಸುಖ, ಸಂತೃಪ್ತಿ, ನೆಮ್ಮದಿಯೆಲ್ಲಾ ಒಂದು ದಿನ ಮುಗಿಯಲೇ ಬೇಕು ಎಂಬುದು ಆತನಿಗೆ ತಿಳಿದಿತ್ತು. ಆದರೆ ಆ ದಿನ ಅಷ್ಟು ಬೇಗ ಬರುತ್ತೆ ಎಂಬುದನ್ನು ಆತ ಕನಸಿನಲ್ಲೂ ಎಣಿಸಿರಲಿಲ್ಲ. ಮದುವೆಯ ನಂತರ ಲೋಲುಪತೆ, ಮಾದಕತೆಯ ಪದರುಗಳೆಲ್ಲಾ ಸರಿದು, ಆ ಮಬ್ಬೆಲ್ಲಾ ತೊಲಗಿ ಹೆಂಡತಿ ಎಂಬಾಕೆಯ ವಿಶ್ವ ರೂಪ ದರ್ಶನವಾಗಲು ಶುರುವಾಯಿತು! ತನ್ನ ಕಷ್ಟದ ದಿನಗಳು ಇನ್ನು ಶುರುವಾದವು ಅನ್ನಿಸಿತು ಕುಚೇಲನಿಗೆ. ಆದರೆ ಇವು ಶಾಶ್ವತವಲ್ಲ, ಇವಕ್ಕೆ ಅಂತ್ಯ ಇದ್ದೇ ಇದೆ ಎಂಬ ಮಂಡಿಯೂರಿಯವರ ಮಾತು ಈತ ಆಶಾವಾದಿಯಾಗಿರಲು ನೆರವಾಗಿತ್ತು.

ಚಿಕ್ಕಂದಿನಲ್ಲಿ ತೂಕಡಿಕೆ, ಗೊರಕೆಗಳ ನಡುವೆ ಕೇಳಿದ ಹರಿಕತೆಯಲ್ಲಿ ನರಕದ ನಾನಾ ಟಾರ್ಚರ್ ವಿಧಾನಗಳ ಬಗ್ಗೆ ಅಸ್ಪಷ್ಟವಾಗಿ ತಿಳಿದಿತ್ತು. ಈಗ ಮದುವೆಯಾದ ನಂತರ ಅವೆಲ್ಲಾ ಸ್ಪಷ್ಟವಾಗ ತೊಡಗಿದವು. ನರಕವೆಂದರೆ ಅಬಾಲವೃದ್ಧರಾಗಿ ಎಲ್ಲರೂ ಥರಥರ ನಡುಗುವುದು ಏತಕ್ಕೆಂದು ಆತನಿಗೆ ಅರಿವಾಗಲಾರಂಭಿಸಿತು. ಹೆಂಡತಿ ‘ಪ್ರಾಣ ಹಿಂಡುವ’ ರಕ್ಕಸಿಯಾದದ್ದು ಯಾವಾಗ ಎಂದು ಆಲೋಚಿಸಲೂ ಮನಸ್ಸಿಗೆ ಶಕ್ತಿಯಿಲ್ಲದಾಯಿತು. ಬೆಳಿಗ್ಗೆ ಕಣ್ಬಿಟ್ಟ ಕ್ಷಣದಿಂದ ರಾತ್ರಿ ಎಚ್ಚರ ತಪ್ಪುವವರೆಗೂ ನಿಲ್ಲದ ಕಟಿಪಿಟಿಯಿಂದ ಕುಚೇಲ ಕಂಗಾಲಾಗಿ ಹೋದ. ‘ಮದುವೆಯೆಂಬುದು ಒಂದು ಕುಲುಮೆ’ ಎಂಬ ಹಿರಿಯರ ಮಾತು ನೆನಪಾದರೂ, ನಮ್ಮಂತಹ ಪ್ಲಾಸ್ಟಿಕ್ ಡಬ್ಬಗಳು ಸುಟ್ಟು ಕರಕಲಾಗಿ, ಕರಗಿ ನೀರಾಗುವುದು ಖಂಡಿತಾ ಎಂದು ಅನುಭವದಿಂದ ತಿಳಿದುಕೊಂಡ. ಆದರೂ ಮಂಡಿಯೂರಿಯವರ ಮಾತಿನ ಆಧಾರದ ಮೇಲೆ ಜೀವವನ್ನು ಅಂಗೈಯಲ್ಲಿ ಹಿಡಿದು ಜೋಪಾನ ಮಾಡಿಕೊಂಡಿದ್ದ. ‘ಇದೂ ಮುಗಿಯುತ್ತೆ…’ ಎಂದು ಪ್ರತಿ ರಾತ್ರಿ ಪಠಿಸುತ್ತಾ ನಿದ್ದೆ ಹೋಗುತ್ತಿದ್ದ.

ಮದುವೆಯಾಗಿ ಐವತ್ತು ವರ್ಷಗಳಾಗಿದ್ದವು. ಹೆಂಡತಿ ಗುಂಡುಕಲ್ಲಿನ ಹಾಗೇ ಇದ್ದಳು, ಆಕೆ ಕೊಡುತ್ತಿದ್ದ ಹಿಂಸೆಯೂ ಕಲ್ಲು ಗುಂಡಿನ ಹಾಗೇ ಇತ್ತು. ಕುಚೇಲ ‘ಇದೂ ಮುಗಿಯುತ್ತೆ…’ ಎಂದು ಪಠಿಸುವುದನ್ನು ಮಾತ್ರ ನಿಲ್ಲಿಸಿರಲಿಲ್ಲ.

‘ಅದೊಂದು ದಿನ ಬರುತ್ತದೆ. ಅಂದು ತನ್ನ ಈ ಕಷ್ಟವೆಲ್ಲಾ ದೂರವಾಗುತ್ತೆ. ತನಗೂ ಒಳ್ಳೆಯ ದಿನಗಳು ಬರುತ್ತೆ’ ಎಂದು ಕುಚೇಲ ಕಣ್ಣು ಮಂಜಾದರೂ ಕನಸು ಕಾಣುತ್ತಲೇ ಇದ್ದ. ಆ ದಿನ ಕಡೆಗೂ ಬಂದಿತು, ಅಂದು ಎಲ್ಲವೂ ಮುಗಿದು ಹೋಗಿತ್ತು. ಕುಚೇಲನ ಮನೆಯೆದುರು ಹೊಗೆ ಹಾಕಿತ್ತು.

ಅವನ ಅಂಗೈಯಲ್ಲಿ ಮುದುಡಿಕೊಂಡಿದ್ದ ಕಾಗದ ತುಂಡಿನ ಮೇಲೆ ಬರೆದಿತ್ತು: ‘ಇದೂ ಮುಗಿಯುತ್ತೆ!’

ಇದೂ ಮುಗಿಯುತ್ತೆ

26 ಫೆಬ್ರ


ಸೋಲೆಂಬುದು ಪದೇ ಪದೇ ಕಂಗೆಡಿಸತೊಡಗಿದಾಗ ಕುಚೇಲ ಕುಗ್ಗಿ ಹೋಗಿದ್ದ. ಅಪ್ಪ ಅಮ್ಮ, ಶಿಕ್ಷಕರು, ಗೆಳೆಯರ ಮೂದಲಿಕೆಯ ದಾಳಿಗೆ ಈಡಾಗಿಯೂ ಅಳಿದುಳಿದ ಆತನ ಆತ್ಮವಿಶ್ವಾಸ ಸರ್ಕಾರಿ ಇಂಜಿನಿಯರುಗಳು ಕಟ್ಟಿದ ಸೇತುವೆಯ ಹಾಗೆ ಕುಸಿದು ಬೀಳತೊಡಗಿತ್ತು. ಜೀವನದಲ್ಲಿ ಉತ್ಸಾಹವೇ ಇಲ್ಲವಾಗಿ ದುಃಖದ ಸಾಗರದಲ್ಲಿ ಬಿದ್ದಂತೆ ಭಾಸವಾಗುತ್ತಿತ್ತು. ಇನ್ನಷ್ಟು ದಿನ ಇದೇ ಮನಸ್ಥಿತಿಯಲ್ಲಿದ್ದರೆ ಒಂದೋ ಹುಚ್ಚು  ಹಿಡಿಯಬಹುದು ಇಲ್ಲವೇ ತನ್ನ ಕಣ್ಣೀರಿನ ಸುನಾಮಿಗೆ ಇಡೀ ಜಗತ್ತೇ ಬಲಿಯಾಗಬಹುದು ಅನ್ನಿಸಿದ್ದರಿಂದ ಕುಚೇಲ ತನ್ನ ಜಗತ್ತೇ ಆಗಿದ್ದ ನಾಲ್ಕು  ಗೋಡೆಗಳ ಪುಟ್ಟ ಕೋಣೆಯಿಂದ ಹೊರಬಂದ. ದೇಶದಲ್ಲೇ ಖ್ಯಾತಿಯನ್ನು ಗಳಿಸಿದ್ದ ಯಶಸ್ಸಿನ ರಹಸ್ಯ ಬೋಧಿಸುವ ಗುರು, ವ್ಯಕ್ತಿತ್ವ ವಿಕಸನದ ಪಿತಾಮಹ, ಕತ್ತೆಯನ್ನು ಕುದುರೆ ಮಾಡುವ ಮಾಂತ್ರಿಕ ಮಂಡಿಯೂರಿ ರವೀಂದ್ರನಾಥರ ಬಳಿಗೆ ಹೋದ. ತಿಂಗಳ ಸಂಬಳದ ಅರ್ಧ ಭಾಗವನ್ನು ಮರೆತು ಅಪಾಯಿಂಟ್ ಮೆಂಟು ಪಡೆದು ಅವರ ಕೋಣೆಯೊಳಗೆ ಹೋದ.

ಮಂಡಿಯೂರಿ ರವೀಂದ್ರನಾಥರು ಆಪ್ತ ಸಮಾಲೋಚನೆಯಲ್ಲಿ ಭಾರಿ ಪರಿಣಿತಿಯನ್ನು ಸಾಧಿಸಿದ್ದರು. ಮನುಷ್ಯನ ಮನಸ್ಸನ್ನು ಅವರು ಉಡುಪಿ ಹೋಟೆಲಿನ ಮೆನು ಓದಿದಷ್ಟೇ ಸರಾಗವಾಗಿ ಓದುತ್ತಾರೆ ಎಂಬ ಮಾತು ಜನಜನಿತವಾಗಿತ್ತು. ಅವರ ಸ್ಪೂರ್ತಿದಾಯಕ ಮಾತುಗಳನ್ನು ಕೇಳುತ್ತಿದ್ದರೆ ಪ್ರತಿಯೊಬ್ಬ ಗಂಡಸೂ ಪುರುಷ ಸಿಂಹವಾಗುತ್ತಿದ್ದ, ಪ್ರತಿ ಹೆಣ್ಣು ಮಗಳೂ ಒನಕೆ ಓಬವ್ವಳಾಗುತ್ತಿದ್ದಳು ಎನ್ನುತ್ತಾರೆ ಜನರು. ಅವರ ಪ್ರತಿಯೊಂದು ಭಾಷಣಗಳು ಮನುಷ್ಯನ ಆಳದಲ್ಲಿರುವ ಶಕ್ತಿಯನ್ನು ಹೊರಗೆ ತೆಗೆಯುವ ಬೋರ್ ವೆಲ್ ಗಳು ಎನ್ನುತ್ತಾರೆ ಅವರ ಅಭಿಮಾನಿಗಳು. ನಿಜಕ್ಕೂ ಅವು ಬೋರ್ ವೆಲ್ ಗಳೇ ಎಂದು ಕುಹುಕವಾಡುವ ವಿಮರ್ಶಕರ ಮಾತಿಗೆ ಬೆಲೆ ಕೊಡುವುದು ಬೇಡ. ಇಂಥವರೆದುರು ನಮ್ಮ ಕುಚೇಲ ತಲೆ ಕೆಳಗೆ ಹಾಕಿ ಕುಳಿತಿದ್ದ.

ಕುರಿಯನ್ನು ಕಂಡ ಕಟುಕನ ಹಾಗೆ ಕಣ್ಣಲ್ಲಿ ಉನ್ಮಾದದ ಅಲೆಯನ್ನು ಸೃಷ್ಟಿಸಿಕೊಂಡ ಮಂಡಿಯೂರಿಯವರು ಕುಚೇಲನ ಹೆಗಲ ಮೇಲೆ ಕೈ ಹಾಕಿ “ಏನೋ ಸಮಸ್ಯೆ ನಿನ್ನನ್ನು ಕಾಡುತ್ತಿದೆ. ನಿನಗೆ ಜೀವನದಲ್ಲಿ ಆಸಕ್ತಿಯೇ ಇಲ್ಲವಾಗಿದೆ. ಯಾವುದರಲ್ಲೂ ತೊಡಗುವುದಕ್ಕೆ ಮನಸ್ಸಾಗುತ್ತಿಲ್ಲ. ಅಲ್ಲವೇ?” ಎಂದರು. ಮಾರುದ್ದದ ಬಾಲ, ಊದಿದ ಮೂತಿ, ಮರದಿಂದ ಮರಕ್ಕೆ ಜಿಗಿಯುವ ಪ್ರಾಣಿಯನ್ನು `ಕೋತಿ’ ಎಂದು ಕಂಡುಹಿಡಿದಷ್ಟೇ ಸುಲಭವಾಗಿ ಮಂಡಿಯೂರಿಯವರು ಕುಚೇಲನ ಸಮಸ್ಯೆಯನ್ನು  ಕಂಡುಹಿಡಿದರು. ಸಾಯಿಬಾಬಾ ಸೃಷ್ಟಿಸಿದ ಚೈನನ್ನು ನೋಡುವಂತೆ ಕುಚೇಲ ಮಂಡಿಯೂರಿಯವರ ಮುಖವನ್ನೇ ಬೆಕ್ಕಸ ಬೆರಗಾಗಿ ನೋಡುತ್ತಿದ್ದ.

ತನಗೆ ಕಷ್ಟಗಳ ಮೇಲೆ ಕಷ್ಟಗಳು ಬರುತ್ತಿವೆ. ಬದುಕಿನಲ್ಲಿ ನೆಮ್ಮದಿ ಸಂತೋಷದ ಕ್ಷಣಗಳೇ ಇಲ್ಲವಾದಂತಾಗಿದೆ. ಓದಿನಲ್ಲಿ ಸರಿಯಾಗಿ ತೊಡಗಿಕೊಳ್ಳಲಿಲ್ಲ, ಪ್ರೀತಿಸಿದ ಹುಡುಗಿ ಅವಮಾನ ಮಾಡಿ ಹೋದಳು. ನಾಯಿಯ ಹಾಗೆ ಬೀದಿ ಸುತ್ತಿದರೂ ಕೆಲಸ ಸಿಕ್ಕಲಿಲ್ಲ. ಸಿಕ್ಕ ಕೆಲಸದಲ್ಲಿ ಚಿತ್ರ ಹಿಂಸೆ, ಪ್ರತಿ ಕೆಲಸದಲ್ಲೂ ಸೋಲು. ಇದುವರೆಗಿನ ನಾಲ್ಕು ಸಾವಿರ ಚಿಲ್ಲರೆ  ದಿನಗಳಲ್ಲಿ ಒಂದು ಸಲವೂ ಬಿಟಿಎಸ್ ಬಸ್ಸಿನಲ್ಲಿ ಸೀಟು ಸಿಕ್ಕಿಲ್ಲ ಎಂದರೆ ತನ್ನ ಹಣೆಬರಹ ಅದೆಷ್ಟು ಖರಾಬ್ ಇರಬೇಕು ಎಂದು ವಿಲಪಿಸಿದ ಕುಚೇಲ.

ದಿನಾ ಇಂಥವರನ್ನು ನೂರರ ಲೆಕ್ಕದಲ್ಲಿ ನೋಡುತ್ತಿದ್ದರೂ ಪ್ರತಿಯೊಬ್ಬರ ಕೊರೆತವನ್ನು ಕೇಳುತ್ತಿದ್ದರೂ ಮುಖದಲ್ಲಿ ಅಪ್ರಸನ್ನತೆಯ ಒಂದೇ ಒಂದು ಗೆರೆಯೂ ಸುಳಿಯಲು ಬಿಡದೆ ಮಂಡಿಯೂರಿಯವರು ಸಾವಧಾನವಾಗಿ ಮಾತನ್ನಾರಂಭಿಸಿದರು. “ನಿನ್ನ ಬದುಕಿನಲ್ಲಿ ನಿನಗೆ ಕೇವಲ ಸೋಲುಗಳೇ ಕಾಣಿಸುತ್ತಿವೆ, ನಿರಾಸೆಯೇ ನಿನಗೆ ಎಲ್ಲೆಲ್ಲೂ ಸಿಕ್ಕುತ್ತಿದೆ. ಬರುಬರುತ್ತ ನಿನಗೆ ಅದು ಅಭ್ಯಾಸವಾಗಿ ಹೋಗಿದೆ. ಗೆಲ್ಲುವ ಛಲದ ಜಾಗದಲ್ಲಿ ಗೆಲುವಿನ ಕನಸು ಕಾಣುತ್ತ ದಿನ ದೂಡುವೆ. ಇನ್ನು ಮುಂದೆ ಈ ದಿವ್ಯ ಮಂತ್ರವನ್ನು ಪಠಿಸಲು ಶುರು ಮಾಡು” ಎಂದು ಹೇಳಿ ಆತನ ಕೈಗೆ ಅಂಗೈ ಅಗಲದ ಕಾಗದದ ತುಂಡೊಂದನ್ನು ಕೊಟ್ಟರು.

“ಇದೂ ಮುಗಿದು ಹೋಗುತ್ತೆ”

“ನಿನ್ನೆದುರು ಸಾಲು ಸಾಲಾಗಿ ಕಷ್ಟಗಳ ಸರಮಾಲೆ ಬಂದು ನಿಲ್ಲಲಿ ನೀನು ಮನಸ್ಸಿನಲ್ಲಿ ಸದಾ ಈ ಮಂತ್ರವನ್ನೇ ಜಪಿಸುತ್ತಿರು. ಈ ಕಷ್ಟಗಳು ಶಾಶ್ವತವಲ್ಲ. ಇವು ಮುಗಿದು ಹೋಗುತ್ತವೆ. ಎಷ್ಟೇ ಸೋಲುಗಳು ನಿನಗಪ್ಪಳಿಸಿ ನಿನ್ನ ಬದುಕನ್ನು ಹೈರಾಣಾಗಿಸಲಿ, ಇದೆಲ್ಲಾ ಮುಗಿದುಹೋಗುವಂಥದ್ದು ಎಂದು ನೆನೆಸಿಕೊ. ಹಾಗೆಯೇ ಆಗಸದಲ್ಲಿ ನೆಗೆದಾಡುವಷ್ಟು ಖುಶಿಯಾಯ್ತು, ನಿನ್ನ ಬದುಕಿನಲ್ಲಿ ಸಂತಸದ ಹೊಳೆಯೇ ಹರಿಯಿತು ಎನ್ನುವಾಗಲೂ ಇದೂ ಶಾಶ್ವತವಲ್ಲ, ಇದೂ ಮುಗಿದೇ ಮುಗಿಯುತ್ತೆ ಎಂದು ನೆನೆಸಿಕೋ. ನಿನ್ನ ಬದುಕಿನಲ್ಲಿ ನಿನಗೆಂದೂ ನಿರಾಸೆಯಾಗುವುದಿಲ್ಲ. ಸುಖ ದುಃಖಗಳ್ಯಾವೂ ಶಾಶ್ವತವಲ್ಲ. ಅವೆರಡನ್ನೂ ಸಮಾನವಾಗಿ ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು.” ಭಾಷಣ ಕೊಟ್ಟರೆ ಮಂಡಿಯೂರಿ.

ಕತ್ತಲೆ ತುಂಬಿಕೊಂಡಿದ್ದ ಕುಚೇಲನ ಬಾಳಿನೊಳಗೆ ಝಿರೊ ಕ್ಯಾಂಡಲ್ ಬಲ್ಬು ಪ್ರಕಾಶಮಾನವಾಗಿ ಉರಿಯಲು ಶುರುವಾಯ್ತು. 

(ಸಶೇಷ)


Technorati Tags: , , ,

ಬೆಳಗಾನೆ ಎದ್ದು ನಾ ಯಾರ್ಯಾರ ಒದೆಯಲಿ?

1 ಫೆಬ್ರ

ಇಂದು ಬೆಳಗ್ಗೆ ಎಂದಿಗಿಂತ ಅರ್ಧ ಗಂಟೆ ಬೇಗನೆ ಎದ್ದ ಕುಚೇಲನಿಗೆ ಒಂದು ದೊಡ್ಡ ಜಿಜ್ಞಾಸೆ ಹುಟ್ಟಿಕೊಂಡಿತು. ಹುಲುಮಾನವರು ಹಾಸಿಗೆಯಿಂದೇಳುತ್ತಿದ್ದ ಹಾಗೆಯೇ ತಮ್ಮ ಅಂಗೈಯಲ್ಲಿ ದೇವಾಧಿದೇವತೆಗಳನ್ನು ಕಲ್ಪಿಸಿಕೊಂಡು ಅವರಿಗೆ ನಮಿಸಿಯೋ, ಕೋಣೆಯಲ್ಲಿ ನೇತು ಹಾಕಿಕೊಂಡ ದೇವರ ಪಟಕ್ಕೆ ಕೈ ಮುಗಿಯುತ್ತಲೋ, ಎಡ ಮಗ್ಗುಲಲ್ಲಿ ಎದ್ದೆವಾ ಎಂದು ಗಾಬರಿಯಾಗುತ್ತಲೋ, ರಾತ್ರಿಯ ಗುಂಡು ಜಾಸ್ತಿಯಾಯಿತಾ ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತಲೋ, ನಿದ್ರೆ ಕೆಡಿಸಿ ಎಚ್ಚರಿಸಿದ ಹಾಲಿನವನನ್ನೋ, ಪೇಪರ್‌ನವನನ್ನೋ ಬೈದುಕೊಳ್ಳುತ್ತಲೋ, ಇಷ್ಟು ಬೇಗ ಬೆಳಕಾಯಿತಾ ಎಂದು ಅಚ್ಚರಿಗೊಳ್ಳುತ್ತಲೋ, ಮಾಡಬೇಕಾದ ಕೆಲಸಗಳ ಪಟ್ಟಿ ತಯಾರಿಸುತ್ತಲೋ, ದೂರದಲ್ಲಿರುವ ಹೆಂಡತಿಯ ಮುಂಗುರಳನ್ನು ನೆನಪಿಸಿಕೊಳ್ಳುತ್ತಲೋ, ಪರೀಕ್ಷೆಗೆಷ್ಟು ದಿನಗಳಿವೆ ಎಂದು ಲೆಕ್ಕ ಹಾಕುತ್ತಲೋ, ತಿಂಗಳ ಮುನಿಸಿಗಿನ್ನೆಷ್ಟು ದಿನ ಎಂದು ಗುಣಿಸುತ್ತಲೋ ಬೆಳಗನ್ನು ಸ್ವಾಗತಿಸುತ್ತಾರೆ. ಆದರೆ ಸಾಮ್ರಾಟರ ಚೇಲನಾದ ಕುಚೇಲ ಇಂದು ಬೆಳಿಗ್ಗೆ ಎದ್ದಾಗ ಆತನಲ್ಲಿ ಒಂದು ಪ್ರಶ್ನೆ ಹುಟ್ಟಿಕೊಂಡಿತ್ತು. ಬೆಳಗಾನ ಎದ್ದು ನಾ ಯಾರ್ಯಾರ ನೆನೆಯಲಿ ಎಂದು ಹಡಿದ ಜನಪದದ ಹೆಣ್ಣು ಮಗಳನ್ನು ನೆನೆಸಿಕೊಂಡು ಆತ ‘ಬೆಳಗಾನ ಎದ್ದು ನಾ ಯಾರ್ಯಾರ ಒದೆಯಲಿ…’ ಎಂದು ಒರಲತೊಡಗಿದ. 311.beating

ಪಬ್ಬಿನೊಳಗೆ ನುಗ್ಗಿ ಮದಿರೆಯ ಮಬ್ಬಿನಲ್ಲಿ ಉಬ್ಬಿ, ಹಣದ ಕೊಬ್ಬಿನಲ್ಲಿ ಗಬ್ಬು ಗಬ್ಬಾಗಿ ತೂರಾಡಿ, ಹಾರಾಡಿ, ಕುಣಿದಾಡಿ, ಹೊರಳಾಡಿ ರಾಡಿ ಮಾಡುವವರನ್ನು ಅಟ್ಟಾಡಿಸಿಕೊಂಡು ಒದೆಯಲೇ ಎಂದು ಆಲೋಚಿಸಿದ. ಆದರೆ ಆ ಕೆಲಸವನ್ನು ‘ಉತ್ತಮ ಸಮಾಜಕ್ಕಾಗಿ’ ಟೊಂಕ ಕಟ್ಟು ನಿಂತ ಟಿವಿ ಚಾನೆಲ್ಲುಗಳ ಕೆಮರಾ ಹಾಗೂ ಕೆಮರಾ ಮನ್ನುಗಳ ಎದುರಲ್ಲೇ ಹಿಗ್ಗಾಡಿ ಜಗ್ಗಾಡಿ ಒದೆ ಕೊಟ್ಟು ಜಗತ್ತಿನಾದ್ಯಂತ ಹೆಸರು ಮಾಡಿಬಿಟ್ಟಿದ್ದಾರೆ. ‘ಸಂಸ್ಕೃತಿಯ ರಕ್ಷಕರು’ ಅಂತ ಬಿರುದು ಪಡೆದುಬಿಟ್ಟಿದ್ದಾರೆ.

ಇನ್ನು ನಮ್ಮ ನೆಲಕ್ಕೆ ಬಂದು ಇಲ್ಲಿನ ನೀರು, ಗಾಳಿ, ಮಣ್ಣು, ಕರೆಂಟು, ಪಿಜ್ಜಾ, ಬರ್ಗರು, ಕೋಕು ಎಲ್ಲಾ ಬಳಸಿಕೊಂಡು ಇಲ್ಲೇ ಮನೆ ಮಾಡ್ಕಂಡು ಹೆಂಡ್ತಿ ಮಕ್ಕಳು ಮಾಡ್ಕಂಡು ಇಲ್ಲಿಯವರ ಭಾಷೆಗೆ ಕವಡೆ ಕಾಸಿನ ಬೆಲೆ ಕೊಡದವರನ್ನು ಮನೆಗಳಿಂದ, ಆಫೀಸುಗಳಿಂದ, ನೌಕರಿಯ ಅರ್ಹತೆಯ ಪರೀಕ್ಷೆಯ ಕೊಠಡಿಗಳಿಂದ ಎಳೆದು ತಂದು ಬೀದಿಗೆ ಕೆಡವಿ ಬಡಿಯೋಣ ಅನ್ನಿಸಿತು. ಆದರೆ ಈಗಾಗಲೇ ಅಸಂಖ್ಯಾತ ಪಡೆಗಳು, ವೇದಿಕೆಗಳು, ಬಣಗಳು, ಸೇನೆಗಳು ಆ ಕೆಲಸವನ್ನು ಮಾಡುತ್ತಾ ಕ್ರೆಡಿಟ್ಟು ಪಡೆದುಕೊಳ್ಳುವುದಕ್ಕೆ ಕೋಳಿ ಜಗಳ ನಡೆಸುತ್ತಿವೆ. ಅವರ ಮಧ್ಯೆ ತಾನು ಹೋದರೆ ಜಜ್ಜಿ ಬಜ್ಜಿಯಾಗುವುದು ಖಂಡಿತಾ ಎಂಬುದು ಮನವರಿಯಾಯಿತು.

ಸಾವಿರಾರು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಸನಾತನ ಧರ್ಮ, ಜಗತ್ತಿನಲ್ಲೇ ಶ್ರೇಷ್ಠವಾದ ಧರ್ಮಕ್ಕೆ ಕೊಡಲಿ ಪೆಟ್ಟು ಕೊಡುವುದಕ್ಕೆ, ಇಡೀ ದೇಶವನ್ನೇ ಕ್ರೈಸ್ತಮಯವಾಗಿಸುವುದಕ್ಕೆ ಟೊಂಕಕಟ್ಟಿ ನಿಂತಿರುವ ಮಿಶಿ‘ನರಿ’ಗಳ ಚರ್ಚುಗಳಿಗೆ ಕಲ್ಲು ಬೀರಿ ಆ ನರಿಗಳನ್ನು ಹಿಡಿದು ದೊಣ್ಣೆಯಲ್ಲಿ ಬಡಿಯೋಣ ಜೊತೆಗೆ
ದೇಶಕ್ಕೆ ಬೆಂಕಿ ಹಚ್ಚುವವರು, ಭಯೋತ್ಪಾದಕರು, ಪಾಕಿಸ್ತಾನದ ಏಜೆಂಟುಗಳು ಎಂದು ಕಂಡ ಕಂಡ ಮುಸ್ಲೀಮರನ್ನು ಕಂಡಲ್ಲಿ ಅಟ್ಟಿಸಿಕೊಂಡು ಹೋಗಿ ಬಡಿಯೋಣ ಎಂಬ ಆಲೋಚನೆ ಬಂತು. ಆಗಲಾದರೂ ದೇಶವನ್ನು ಕಾಪಾಡಿದ, ದೇಶದ ಭವಿಷ್ಯದ ಬಗ್ಗೆ, ಭದ್ರತೆಯ ಬಗ್ಗೆ ಗಂಭೀರವಾಗಿ ಕೆಲಸ ಮಾಡಿದ ಹೆಸರು ಬರಬಹುದು ಅನ್ನಿಸಿತು. ಆದರೆ ತನ್ನ ಮನೆಗೆ ಬೆಳಿಗ್ಗೆ ಹಾಲು ಹಾಕುವವನಿಂದ ಹಿಡಿದು ರಾತ್ರಿ ಬೀಡ ಕೊಂಡು ಕೊಳ್ಳುವ ಅಂಗಡಿಯವನವರೆಗೆ ಎಲ್ಲರೂ ಮುಸ್ಲೀಮರೇ, ಇಲ್ಲ ಕ್ರೈಸ್ತರೇ. ಮಗಳ ಶಾಲೆ, ಮಗನ ಕಾಲೇಜು, ಈಕೆಯ ಆಸ್ಪತ್ರೆ ಎಲ್ಲವೂ ಆ ಕಿರಿಸ್ತಾನದವರೇ ನಡೆಸ್ತಿರೋದು. ಇನ್ನು ಕುಚೇಲನ ಪತ್ತೇದಾರಿಕೆಗೆ ಬರುವ ಕೇಸುಗಳು ಸಹ ಹಿಂದೂ, ಮುಸಲ್ಮಾನ, ಕ್ರೈಸ್ತ ಎಂದು ಬೇಧ ಕಾಣದಂತವು. ಇವರಿಬ್ಬರಲ್ಲಿ ಯಾರಿಗೆ ಒದ್ದರೂ  ಆ ಏಟು ಕಡೆಗೆ ತನ್ನ ಹೊಟ್ಟೆಗೇ ಬಂದು ಬೀಳುತ್ತೆ .

ತಾಸೆರಡು ತಾಸು ಉರುಳಿದರೂ ಕುಚೇಲನ ಗೊಂದಲಕ್ಕೆ ಪರಿಹಾರವೆಂಬುದು ಸಿಕ್ಕಲೇ ಇಲ್ಲ. ಕಡೆಗೆ ಒದೆಯುವುದಕ್ಕೆ ಹೊರಗೆ ಯಾರನ್ನೋ ಹುಡುಕಿಕೊಂಡೇಕೆ ಅಲೆಯುವುದು, ಮನೆಯಲ್ಲಿರುವ ಹೆಂಡತಿ ಸಾಕಲ್ಲವೇ ಅನ್ನಿಸಿತು. ಆಕೆ ಕೊಟ್ಟ ಕಾಫಿ ಬಟ್ಟಲನ್ನು ನೆಲಕ್ಕೆ ಬಿಸಾಕಿ ನಾಲ್ಕು ಡೈಲಾಗು ಒಗೆದು ನಾಲ್ಕು ಬಿಗಿಯಬಹುದು ಅನ್ನಿಸಿ ಸಂತೋಷವಾಯ್ತು. ಮರುಕ್ಷಣದಲ್ಲೇ ಡೊಮೆಸ್ಟಿಕ್ ವಯಲೆನ್ಸ್ ಆಕ್ಟಿನ ಕಲಮುಗಳು ಕಣ್ಮುಂದೆ ಹರಿದು ಹೋದವು. ಆದರೆ ಅವುಗಳಿಂದ ಆತ ವಿಚಲಿತನಾಗಲಿಲ್ಲ. ಒಂದು ವೇಳೆ ಆಕೆ ತಿರುಗಿ ಎರಡು ಕೊಟ್ಟರೆ ಎಂದು ಭಯವಾಗಿ ಆ ಯೋಜನೆ ಕೈ ಬಿಟ್ಟ.

ಮಕ್ಕಳ ಇನ್ಸ್ಪೆಕ್ಷನ್ ಮಾಡಿ ಕೆದರಿದ ಕೂದಲು, ಮಣ್ಣುಗಟ್ಟಿದ ಉಗುರು, ಕೊಳೆಯಾದ ಕಾಲ್ಚೀಲ, ಹರಿದ ಸ್ಕೂಲ್ ಬ್ಯಾಗು, ಸೋರುವ ಮೂಗು, ಸಂಪೂರ್ಣವಾಗದ ಹೋಂ ವರ್ಕು, ಸಂತೃಪ್ತಿ ತರದ ಮಾರ್ಕ್ಸ್ ಕಾರ್ಡನ್ನು ನೆಪವಾಗಿಟ್ಟುಕೊಂಡು ಕತ್ತೆಗೆ ಒದ್ದ ಹಾಗೆ ಒದೆಯೋಣ ಅಂದುಕೊಂಡ. ಆದರೆ ಮಕ್ಳು ತನಗಿಂತ ಜಾಣ್ರು ತನಗಿಂತ ಸ್ವಚ್ಛವಾಗಿವೆ. ಅಪ್ಪ, ಊಟ ಮಾಡೋ ಮುಂಚೆ ಕೈ ತೊಳೀಬೇಕು ಅಂತ ನಂಗೇ ಪಾಠ ಹೇಳಿಕೊಡಲು ಬರ್ತವೆ. ಹೋಂವರ್ಕ್ ನೋಡೋಕೆ ಹೋದ್ರೆ ಅಪ್ಪ ನಿಂಗೆ ಟ್ರಿಗ್ನಾಮೆಟ್ರಿ ಗೊತ್ತಾ ಅಂತ ನಮ್ ಹೈಸ್ಕೂಲು ಮೇಷ್ಟ್ರು ಹೆದರಿಸ್ತಿದ್ದ ಹಾಗೆ ಹೆದರಿಸ್ತಾರೆ!

ಇನ್ನೇನು ಮಾಡಲು ತೋಚದೆ ಕುಚೇಲ ಸಾಮ್ರಾಟರ ಬಳಿ ಬರುತ್ತಾನೆ. ಯಾರನ್ನು ಒದೆಯಲಿ ಎನ್ನುತ್ತಾ ತಲೆ ಕೆರೆದು ನಿಲ್ಲುತ್ತಾನೆ. ಸಾಮ್ರಾಟರು ಆತನಿಗೆ ಪೂರ್ವಕ್ಕೆ ಮುಖ ಮಾಡಲು ಹೇಳಿ ಜಾಡಿಸಿ ಒದೆಯುತ್ತಾರೆ. “ನಂಗೂ ಬೆಳಗಿಂದ ಇದೇ ಚಿಂತೆ ಆಗಿತ್ತು” ಎಂದು ಹಾಯಾಗಿ ಹೊರಟು ಹೋಗುತ್ತಾರೆ!

(ಚಿತ್ರ ಕದ್ದದ್ದು ಇಲ್ಲಿಂದ: http://www.ismennt.is/not/briem/text/3/31/311.what.works.html )

ಅಮ್ಮ ಫೋನೂ- ಬೋಂಡಾ ಜಾಮೂನೂ!

31 ಜನ

“ಬೆಂಗಳೂರು ಹುಡುಗೀರಂದ್ರೆ, ತಮ್ಮ ತೂಕ, ತಮ್ಮ ಮೇಕಪ್, ಫ್ಯಾಶನ್ ಮ್ಯಾಗಸೀನ್, ಫಿಲ್ಮಿ ಗಾಸಿಪ್ಸ್ ಗಳಲ್ಲೇ ಕಳೆದು ಹೋಗಿರುವ, ಕನ್ನಡದ ಗಂಧವೇ ಗೊತ್ತಿಲ್ಲದವರಂತೆ ಇಂಗ್ಲಿಷನ್ನೇ ತಮ್ಮ ಮಾತೃ ಭಾಷೆಯನ್ನಾಗಿಸಿಕೊಂಡಿರುವವರು ಎಂಬ ಕಲ್ಪನೆ ದಟ್ಟವಾಗಿರುವಾಗ ಬರೆಯುವ ಸಾಹಸಕ್ಕೆ ಕೈ ಹಾಕಲು ತುಸು ಹಿಂಜರಿಕೆ ಆಗುತ್ತಿದೆ. ಆದರೂ ಇನ್ನು ಬರೆಯದೇ ಇರುವುದಕ್ಕಾಗುವುದಿಲ್ಲವೆನಿಸಿ ಬ್ಲಾಗಿಂಗ್ ಶುರುವಿಟ್ಟುಕೊಂಡಿದ್ದೇನೆ!” ಎಂದೆನ್ನುತ್ತಾ ಹೇಮಾಂತರಂಗ ಬ್ಲಾಗು ತೆರೆದಿರುವ ಮಿಸ್ ಹೇಮಾ ಪವಾರ್ “ಬರವಣಿಗೆ, ನನ್ನ ಭಾವನೆಗಳನ್ನು ಹರಿಬಿಡಲು ನಾನು ಹುಡುಕಿಕೊಂಡ ದಾರಿಯಷ್ಟೆ. ಭೋರ್ಗರೆವ ಭಾವಗಳಿಗೆ ಅಕ್ಷರಗಳ ಬೊಗಸೆಯೊಡ್ಡಿ ಬ್ಲಾಗಿನ ಒಡಲಲಿ ತುಂಬುತ್ತಿರುವೆ. ನನ್ನಂತರಂಗಕ್ಕೆ ನಿಮೆಗೆಲ್ಲರಿಗೂ ಸ್ವಾಗತ.” ಎಂದು ಗಾಬರಿ ಪಡಿಸುತ್ತಾರೆ.

ಅವರ ಇತ್ತೀಚಿನ ಬರಹವನ್ನು ಸಾಮ್ರಾಟರು ಇಲ್ಲಿ ಪ್ರಕಟಿಸಲು ಸಂತೋಷ ಪಡುತ್ತಾರೆ.

ಆಫೀಸಿಗೆ ಹೊರಡುತ್ತಿದ್ದವಳು, ಅಮ್ಮ ಫೋನಿನಲ್ಲಿ ಮಾತಾಡುತ್ತಿದ್ದದ್ದು ಕೇಳಿ ಬೆಚ್ಚಿ ಬಿದ್ದು ಅಲ್ಲೇ ನಿಂತೆ! ನಮ್ಮಮ್ಮ ಯಾವತ್ತು ಫೋನಿನಲ್ಲಿ ಮಾತಾಡಲ್ವೆ ಅದ್ರಲ್ಲೇನು ವಿಶೇಷ ಅನ್ಕೊಂಡ್ರಾ, ಇತ್ತು ಅವತ್ತು ವಿಶೇಷವಿತ್ತು, ‘ನಮ್ಮುಡುಗೀನು ತುಂಬಾ ಕೆಲಸ ಮಾಡ್ತಾಳ್ರೀ, ಆಫೀಸಿಗೋಗ್ತಾಳೆ! ಕಾಲೇಜಿಗೆ ಹೋಗ್ತಾಳೇ! ಮನೇಲು ಅದು ಇದು ಕೆಲ್ಸ ಮಾಡ್ತಾಳೆ! ನಿನ್ನೆ ರಾತ್ರಿ ಪಾತ್ರೆನೆಲ್ಲ ಅವ್ಳೇ ತೊಳೆದಿದ್ದು!’ ಅಮ್ಮ ಯಾರ ಜೊತೇನೋ ಅತ್ಯುತ್ಸಾಹದಲ್ಲಿ ಹೇಳಿಕೊಳ್ಳುತ್ತಿದ್ದರು. ಆಹಾ! ಅಷ್ಟೊಂದು ಕೆಲಸ ಮಾಡ್ಬಿಟ್ನಾ ನಾನು, ಇದ್ದಿದ್ದು ನಾಲ್ಕು ಲೋಟ ಮೂರು ತಟ್ಟೆ ಅದನ್ನ ತೊಳೆದಿದ್ದಕ್ಕೆ ಇಷ್ಟೊಂದು ಹೊಗಳ್ತಿದ್ದಾರೆ! (ಅದು ತಿಂಗಳಲ್ಲಿ ಒಂದು ಸಲ)? ಯೋಚಿಸುತ್ತಿದ್ದ ನನಗೆ, ಭಾನುವಾರ ಎಲ್ಲೂ ಹೋಗಬೇಡ ಮನೇಲಿರು ಎಂದು ಅಪ್ಪಣೆ ಮಾಡಿದರು ಅಮ್ಮ! ಸಂಜೆ ಮನೆಗೆ ಬರುತ್ತಿದ್ದ ಹಾಗೆ ಅದರ ಹಿಂದಿದ್ದ ರಹಸ್ಯ ತಿಳಿದು ನಿಜಕ್ಕೂ ದಿಗಿಲಾಯಿತು.

‘ಹುಡುಗ ಸಾಫ್ಟ್ ವೇರ್ ಎಂಜಿನಿಯರ್ ಅಂತೆ ಕಣ್ರೀ, ಈ ಕಾಲದಲ್ಲಿ ಸ್ವಂತ ಮನೆ ಇಲ್ಲದೋರನ್ನ ಯಾರು ಒಪ್ಕೋತಾರೆ ಹೇಳಿ, ಆದ್ರೂ ಈ ಹುಡ್ಗ ವರದಕ್ಷಿಣೆಯೆಲ್ಲಾ ಬೇಡ ಚೆನ್ನಾಗಿ ಮದ್ವೆ ಮಾಡ್ಕೊಟ್ರೆ ಸಾಕು ಅಂತಾನಂತೆ’ ಅಮ್ಮ ಅಪ್ಪನ ಹತ್ರ ತುಂಬಾ ಖುಷಿಯಿಂದ ಹೇಳುತ್ತಿದ್ದರು.

‘ಇವಾಗ ಕಂಪನಿಗಳೆಲ್ಲ ಕೆಲಸದೋರನ್ನ ಮುಗಿದು ಹೋದ ಬಿಯರ್ ಬಾಟಲ್ ಗಳ ತರಹ ಹೊರಗೆ ಎಸೀತಿವೆ, ಸಾಫ್ಟ್ ವೇರ್ ಎಂಜಿನಿಯರ್ಸ್ ಎಲ್ಲ ಕೆಲಸ ಇಲ್ದೆ ಖಾಲಿ ಕೂತಿದಾರೆ, ಸುಮ್ನೆ ಸಂಬಳ ಜಾಸ್ತಿ ಅಂತ ಮದ್ವೆ ಮಾಡ್ಬಿಟ್ಟು ಆಮೇಲೆ ನಿನ್ನ ಮಗಳಿಗೂ ಅಳಿಯನಿಗೂ ನೀನೆ ಕೂರಿಸಿ ಊಟ ಹಾಕ್ಬೇಕು ಅಷ್ಟೇ!’ ಎಂದು ಅಕ್ಕ ನನ್ನ ಸಪೋರ್ಟಿಗೆ ನಿಂತಳು.
‘ಹೇ ಅದೆಲ್ಲ ನಂಗೂ ಗೊತ್ತು ಕಣೇ, ಬರೀ ಎಂಜಿನಿಯರ್ ಅಂತ ನಾನೂ ಮೊದಲು ಬೇಡ ಅಂದೆ, ಆದ್ರೆ ಕಮಲಮ್ಮ ಹೇಳಿದ್ರು (ಫೋನಲ್ಲಿ!!) ಹುಡುಗನ ಅಪ್ಪ ನಾಲ್ಕು ಮನೆ ಬಾಡಿಗೆಗೆ ಕೊಟ್ಟಿದಾರಂತೆ ಅವ್ರು ಇರೋ ಮನೇನ ಬಿಟ್ಟು. (ಅವ್ರಿರೋದು ಕೊಟ್ಬಿಟ್ಟು ಅವ್ರೇನು ಫುಟ್ ಪಾತ್ ಮೇಲೆ ಇರ್ಬೇಕಿತ್ತ?). ನಾನೆಲ್ಲ ವಿಚಾರಿಸಿದೀನಿ, ನೀವ್ಯಾರು ಮಾತಾಡ್ಬೇಡಿ ಅವ್ರು ಭಾನುವಾರ ಬರ್ತೀದಾರೆ ಅಷ್ಟೇ!!’ ಅಮ್ಮ ತಮ್ಮದೇ ಕಡೆಯ ಮಾತೆಂಬಂತೆ ಹೇಳಿದರು.

ನೀರಲ್ಲಿ ಮುಳುಗುತ್ತಿರುವವನು ಹುಲ್ಲುಕಡ್ಡಿಯನ್ನೂ ಆಸರೆಗೆ ಹಿಡಿದಂತೆ, ದೀನ ಮುಖ ಮಾಡಿ ಅಪ್ಪನ ಕಡೆ ನೋಡಿದೆ, ಅಪ್ಪ ಅರ್ಥ ಮಾಡಿಕೊಂಡವರಂತೆ, ‘ಚಿಕ್ಕುಡುಗಿ ಈಗ್ಲೆ ಯಾಕೆ ಅವ್ಳಿಗೆ ಇದೆಲ್ಲ!’ ಅಂತ ಇನ್ನು ಶುರು ಮಾಡಿದ್ರು, "ನಿಮಗೆ ಇನ್ನು ಹತ್ತು ವರ್ಷ ಹೋದ್ರು ನಿಮ್ಮ ಮಗಳು ಚಿಕ್ಕೋಳೆ, ಮೂರು ಕತ್ತೆಗಾದಷ್ಟು ವಯಸ್ಸಾಗಿದೆ (ಛೆ ಕತ್ತೆಗಳ ಲೆಕ್ಕದಲ್ಲಿ ಅಳೆಯೋದೆ ನನ್ನ ವಯಸ್ಸನ್ನ! ಅವಮಾನ) ಒಂದು ಕೆಲಸ ಬರೋಲ್ಲ, ಕಾರ್ಯ ಬರೋಲ್ಲ, ಮೊನ್ನೆ ಹಾಲು ಕಾಯ್ಸೆ ಅಂದ್ರೆ, ಪಕ್ಕದಲ್ಲಿರೋ ಮೊಸರಿನ ತಪ್ಲೆ ಒಲೆ ಮೇಲಿಟ್ಟಿದಾಳೆ (ಎರಡೂ ಬೆಳ್ಳಗೇ ಇತ್ತು ಕಣ್ರೀ Sad ). ನೀವಿಷ್ಟು ಮುದ್ದು ಮಾಡದೇ ಇದ್ದಿದ್ರೆ ನಾನು ಅವ್ಳಿಗೆ ಸರಿಯಾಗಿ ಬುದ್ದಿ ಕಲಿಸ್ತಿದ್ದೆ (ಬೆಳಿಗ್ಗೆ ಹೊಗಳಿದ್ದು ಅಡ್ವರ್ಟೈಸ್ ಮೆಂಟು ಮಾತ್ರ ಅಂತ ನನಗೆ ಆಗ ತಿಳೀತು!!). ಈ ಹುಡುಗ ಗೊತ್ತಾಗ್ಲಿ ಎರಡು ಕೊಟ್ಟು ಎಲ್ಲ ಕಲಿಸ್ತೀನಿ, ಇಲ್ಲ ಅಂದ್ರೆ ಹೋದೋರ ಮನೇಲಿ ನಮ್ಮ ಮಾನ ಕಳೀತಾಳೇ. ಈಗ ಯಾರೂ ಮಾತಾಡ್ಬೇಡಿ ನಾನು ಅವ್ರೀಗೆ ಬರೋಕೆ ಹೇಳಿಯಾಗಿದೆ……!" (ಅಮ್ಮ ಇನ್ನು ಏನೇನೋ ನಾಮಾರ್ಚನೆ ಮಾಡುತ್ಲೇ ಇದ್ದರು ನಿಮಗೆ ಬೋರ್ ಆಗ್ಬಾರ್ದು ಅಥವಾ ನನ್ನ ಮರ್ಯಾದೆ ಉಳಿಸಿಕೊಳ್ಳಲು Eye-wink ಅದನ್ನ ಇಲ್ಲಿಗೆ ಎಡಿಟ್ ಮಾಡಿದೀನಿ).

ನಾನೇನು ಮಾಡಲಾರೆ ಮಗಳೇ ಎಂದು ಅಪ್ಪ ಕೈ ಚೆಲ್ಲಿದಂತೆ ನನ್ನ ನೋಡಿದರು. ಇವ್ರನ್ನೆಲ್ಲಾ ನಂಬಿದ್ರೆ ನನ್ನ ಕುತ್ತಿಗೆಗೆ ತರ್ತಾರೆ ಅಂತ ಅಮ್ಮನ ಜೊತೆ ನಾನೇ ಯುದ್ದಕ್ಕೆ ನಿಂತೆ. ‘ನೋಡಮ್ಮ ನಾನು ನಿಂಗಷ್ಟು ಭಾರ ಆದ್ರೆ (ಎಷ್ಟು ಅಂತ ಕೇಳ್ಲಿಲ್ಲ ಸಧ್ಯ), ಬೇರೆ ಊರಿಗೆ ಹೋಗಿ ಪಿ.ಜಿ.ಹೌಸ್ನಲ್ಲಿ ಇದ್ಕೋತೀನಿ, ನೀನು ಇಷ್ಟು ಬೇಗ ಮದ್ವೆ ಗಿದ್ವೆ ಅಂದ್ರೆ ನಾನು ಸುಮ್ನೆ ಇರೋಲ್ಲ ಅಷ್ಟೇ. ನಾನಿನ್ನು ಓದ್ಬೇಕು, ಸೆಟಲ್ ಆಗ್ಬೇಕು…..!’ ಹೀಗೆ ಒಂದು ಫಿಲ್ಮ್ ಡೈಲಾಗ್ ಒಗಾಯಿಸಿದೆ. ನಮ್ ಕನ್ನಡಾ ಫಿಲ್ಮ್ ಡೈಲಾಗ್ ಗಳು ಥೇಟರ್ನಲ್ಲೇ ಓಡೋಲ್ಲ ಇನ್ನ ಮನೇಲಿ ಓಡುತ್ವೆ? ಇಲ್ಲೂ ಫ್ಲಾಪ್ ಆಯ್ತು. ಅಮ್ಮ ಉಪವಾಸದ ಬೆದರಿಕೆ ಒಡ್ಡಿ ಹಾಗೂ ಹೀಗೂ ನನ್ನನ್ನ ಗಂಡು ನೋಡೋಕೆ ಒಪ್ಪಿಸಿಯೇ ಬಿಟ್ರು.

ಬಂದವರಿಗೆ ಫಿಲ್ಮ್ ನಲ್ಲಿ ಮಾಡ್ತಾರಲ್ಲ ಹಾಗೆ ಕಾಫೀಲಿ ಭೇಧಿ ಮಾತ್ರೆಗಳು ಹಾಕಿ ಕೊಟ್ಬಿಡ್ಲೇ ಅಂನ್ಕೊಂಡೆ, ಛೆ ಈ ಫಿಲ್ಮಿ ಐಡಿಯಾಗಳೂ ಉಪಯೋಗ ಆಗೋಕಿಂತ ಕೈ ಕೊಡೋದೆ ಜಾಸ್ತಿ ಅಂತ ಸುಮ್ಮನಾದೆ. ಇಷ್ಟೆಲ್ಲಾ ಹೇಳ್ತಿದೀನಿ ನಿಮಗೊಂದು ಸತ್ಯ ಹೇಳ್ದೆ ಇದ್ರೆ ಮೋಸವಾಗುತ್ತೆ ಕಣ್ರೀ, ಒಳೊಗೊಳೊಗೆ ನನಗೂ ಬರೋ ಗಂಡನ್ನ ಒಂದು ಸಾರಿ ನೋಡಬೇಕು ಅನ್ನಿಸ್ತಿತ್ತು. ಮದ್ವೆ ಆಗದಿದ್ರೂ ನೋಡೋದ್ರಲ್ಲಿ ಏನು ತಪ್ಪು ಹೇಳಿ, ಅದು ಮೊದಲ ಸಲ ಹೀಗೆ ನನ್ನನ್ನೂ (!?) ನೋಡೋಕೆ ಯಾರಾದ್ರೂ ಬರ್ತಿರೋದು (ಅಲ್ಲ ನಾನೇನು ಎಕ್ಸಿಭಿಶನ್ನಾ ಹಾಗೆ ಎಲ್ಲಾರು ಬಂದು ಬಂದು ನೋಡೋಕೆ) ಹಾಗಾಗಿ ಹೆಚ್ಚು ತಲೆಕೆಡಿಸಿಕೊಳ್ಳದೆ, ಅದು ಹೇಗಿರ್ತಾನೋ ಒಂದು ಸಾರಿ ನೋಡಿಯೇ ತೀರೋಣ ಅಂತ ತೀರ್ಮಾನಿಸಿದೆ. ಫೋಟೋದಲ್ಲಂತು ಸುಮಾರಾಗಿದ್ದ, ತೆಗೆದು ಹಾಕೋಹಾಗೇನೂ ಇರ್ಲಿಲ್ಲ (ಎಲ್ಲಿಂದ ಅಂತ ಕೇಳ್ಬೇಡಿ ಮತ್ತೆ).

ಸರಿ ಆ ಹಾಳು ಭಾನುವಾರ ಬಂದೇ ಬಂತು, ಭಾನುವಾರವೆಂದ್ರೆ ಅಷ್ಟು ಖುಷಿಪಡ್ತಿದ್ದೋಳು ಈ ಸಲ ಇಷ್ಟು ಬೇಗ ಬಂತಲ್ಲ ಅಂತ ತಲೆ ಚಚ್ಕೋಳ್ತಿದ್ದೆ. ನನ್ನ ಸುಂದರ ಭಾನುವಾರದ ಖುಷಿಯನ್ನೆಲ್ಲ ಕೆಡೆಸಿದ ಆ ‘ಗಂಡಿಗೆ’ ಹಾಸಿಗೆಯಲ್ಲೇ ಹಿಡಿ ಶಾಪ ಹಾಕಿ ಎದ್ದು ತಯಾರಾದೆ. ಅಮ್ಮ ಆಗ್ಲೇ ಬೋಂಡಾ ಮತ್ತು ಜಾಮೂನ್ ರೆಡಿ ಮಾಡ್ತಿದ್ರು, ಆಹಾ ಅದರ ಸುವಾಸನೆ!! ಬಿಡಿ ಎಷ್ಟುದ್ದ ಬರೆದ್ರೂ ಸುಖವಿಲ್ಲ, ಅದನ್ನ ಅನುಭವಿಸಿಯೇ ತೀರಬೇಕು!! ಅವ್ರು ಬರ್ತಿರೋದಕ್ಕೆ ಆಗ್ತಿರೋ ಲಾಭ ಇದೊಂದೇ, ಎಂದುಕೊಂಡು ಬೋಂಡಾದ ತಟ್ಟೆಗೆ ಕೈ ಹಾಕಿದೆ. ಫಟ್ ಅಂತ ಕೈ ಮೇಲೆ ಒಂದು ಬಿಟ್ಟ ಅಮ್ಮ , ಅವ್ರು ಬಂದು ಹೋಗೋವರ್ಗೂ ಅದನ್ನ ಬಾಯಿಗಿಟ್ಟೆ ಕೈ ಮುರೀತೀನಿ ಅಂತ ಬೆದರಿಸಿದ್ರು. ‘ಅಮ್ಮೌ ಬರೋರಿಗೇನು ಮಡಿ ಬಟ್ಟೆ ಉಟ್ಟು ನೇವೇದ್ಯ ಮಾಡ್ತೀಯ? ಮೊದಲು ನನಗೆ ಕೊಡು, ಆಮೇಲೆ ಉಪ್ಪು ಖಾರ ಹೆಚ್ಚುಕಡಿಮೆ ಇದ್ರೆ ನಿನ್ನ ತಪ್ಪಿಂದ ನನ್ನ ಒಪ್ಪದೆ ಹೋದಾರು’ ಅಂತ ಅಮ್ಮನ್ನ ರೈಲತ್ತಿಸಿ, ಹಾಗೂ ಹೀಗೂ ಬೋಂಡಾ ಜಾಮೂನಿನ ರುಚಿ ನೋಡಿ ಸೇಡು ತೀರಿಸಿಕೊಂಡೆ.

ಬಂದ್ರೂ ಬಂದ್ರೂ ಕಡೇಗೂ 12 ಗಂಟೆ ಅಂತ ಹೇಳಿ 2 ಗಂಟೆಗೆ ಗಂಡು, ಗಂಡಿನ ಚೇಲಾಗಳೆಲ್ಲ ಬಂದ್ರು. ಕಾಯ್ಸಿದಷ್ಟೂ ಹೊತ್ತು ಒಂದು ನಿಮಿಷವೂ ತಪ್ಪಿಸದೇ ಅವ್ರನ್ನೆಲ್ಲ ಬೈದುಕೊಳ್ಳತ್ತಲೇ ಇದ್ದೆ! ಆಹಾ, ಆ ಗಂಡು ನೋಡೋಕೆ ಎರಡು ಕಣ್ಣು ಸಾಲದು! ಇವನ ಫೋಟೋ ಹಿಡಿದ ಆ ಫೋಟೋಗ್ರಾಫರ್ ನಿಜಕ್ಕೂ ಕಲಾವಿದ ಕಣ್ರೀ, ಇವನ ಅಸಲು ರೂಪ ಚೂರು ರಿಫ್ಲೆಕ್ಟ್ ಆಗದಂಗೆ ಎಷ್ಟು ಚೆನ್ನಾಗಿ ಹಿಡ್ದಿದ್ದಾನೆ (ಫೋಟೋನ) ಅನ್ಕೊಂಡೆ. ಅವನ ಕಣ್ಣು ಮೂಗಂತೂ ಬಿಡಿ ಹೋಲಿಕೆಗೆ ಸಿಗದಂತವು. ನಾನಿಲ್ಲಿ ಅಮೀರ್ ಖಾನ್, ಶಾರೂಕ್ ಖಾನರ ಸಿಕ್ಸ್ ಪ್ಯಾಕುಗಳ ಕನಸು ಕಾಣ್ತಿದ್ರೆ, ಈ ‘ಗಂಡು’ ಗುಂಡಗಿರೋ ಸ್ಟೀಲ್ ಬಿಂದಿಗೆಗೆ ಗಿಫ್ಟ್ ಪ್ಯಾಕ್ ಮಾಡಿದಂಗೆ ಇಷ್ಟು ದಪ್ಪದ ಹೊಟ್ಟೆ ಮೇಲೆ ಕಲರ್ ಕಲರ್ ಶರ್ಟು ಹಾಕ್ಕೊಂಡು, ಕನ್ನಡ ಫಿಲ್ಮ್ ಕಾಮೇಡಿಯನ್ ಗಳ ಜೊತೆ ಕಾಂಪೀಟ್ ಮಾಡೋ ಹಾಗಿದ್ದ. ಅಮ್ಮನ್ನ ಒಂದು ಸಲ ಗುರಾಯಿಸಿಕೊಂಡು ನೋಡಿದೆ. ತಮಗೇನು ಗೊತ್ತಿಲ್ಲದ ಹಾಗೆ ಓಡಾಡುತ್ತಿದ್ದರು. ಆ ‘ಗಂಡನ್ನ’ ನೋಡಿಯೂ ಅಮ್ಮನ ಉತ್ಸಾಹ ಕಡಿಮೆಯಾದಂತಿರಲಿಲ್ಲ. ಉಪಚಾರ ಮಾಡುತ್ತಲೇ ಹೋದರು. ಮೊದಲೇ ಕೋಪಗೊಂಡಿದ್ದ ನನಗೆ, ಅವರಿಗೆಲ್ಲ ಹೋಟೇಲ್ ಸರ್ವೆಂಟ್ ನಂತೆ ಅಮ್ಮ ಜಾಮೂನು ಬೋಂಡಾ ಕೊಡಲು ಹೇಳಿದಾಗ ನಿಜಕ್ಕೂ ರೇಗಿತು. ಮನೆಗೆ ಬಂದವರಿಗೆ ಅವಮಾನ ಮಾಡಬಾರದು, ನೀನು ಈ ಹುಡುಗನ್ನ ಮದ್ವೆಯಾಗೋದೇನು ಬೇಡ, ದಯವಿಟ್ಟು ಮರ್ಯಾದೆ ಕಳೀಬೇಡ ಕೊಡಮ್ಮ ಮಗಳೇ ಅಂತ ಅಮ್ಮ ಗೋಗರೆದ ಮೇಲೆ ಕೊಡಲು ಒಪ್ಪಿದ್ದು (ಇಲ್ಲ ಅಂದ್ರೆ ಅವರಿಗೆ ತಲುಪುವಷ್ಟರಲ್ಲಿ ನಾನೇ ಮುಗಿಸಿರುತ್ತಿದ್ದೆ).

‘ಸುಖವಾಗಿ ಬೆಳೆದು ಈಗ ಮದ್ವೆ ಮಾಡ್ಕೊಂಡು ಕಷ್ಟ ಪಡಬೇಕಿದೆ ಪಾಪ!’ ಅಕ್ಕ ಅಡಿಗೆಮನೆಯಲ್ಲಿ ಅಮ್ಮನ ಕಿವಿಯಲ್ಲಿ ಮೆಲ್ಲನಂದಳು, ‘ನೋಡೇ ಅಕ್ಕಾ! ನನ್ನ ನೋಡಿದ್ರೆ ಯಾರಿಗೂ ಅಯ್ಯೋ ಅನ್ಸೋದೆ ಇಲ್ಲ ಇಲ್ಲಿ!’ ಅಳುಮುಖ ಮಾಡಿ ನಾನು ದನಿಗೂಡಿಸಿದೆ, ‘ಅಯ್ಯೋ ನಿನಗಲ್ವೇ, ನಾನು ಹೇಳಿದ್ದು ಆ ಗಂಡಿಗೆ, ನೋಡು ಅಮ್ಮ ಮಾಡಿ ಹಾಕ್ತಾರೆ, ತಿಂದು, ಸುಖವಾಗಿ ಗುಂಡು ಗುಂಡಕ್ಕೆ ಹೇಗೆ ಬೆಳೆದಿದ್ದಾನೆ, ನಿನ್ನ ಮದ್ವೆ ಮಾಡ್ಕೊಳೋಕೆ ಪಾಪ ಅದ್ಯಾವ ಜನುಮದಲ್ಲಿ ಕರ್ಮ ಮಾಡಿದಾನೋ!’ ಎಂದು ಮುಸಿ ಮುಸಿ ನಕ್ಕಳು. ‘ಹ್ಞೂಂ, ಎಲ್ಲಾರು ಉದ್ದಕ್ಕೆ ಬೆಳೆದ್ರೆ ಇವನು ಅಡ್ಡಡ್ಡಕ್ಕೆ ಬೆಳೆದಿದ್ದಾನೆ, ಹೋಗೇ ನಿನಗೆ ತಮಾಶೆ ನನ್ನ ಜೀವ ಹೋಗ್ತಿದ್ರೆ ಇಲ್ಲಿ’ ಅಂತ ಗೊಣಗಿ ಸುಮ್ಮನಾದೆ.

ಅಂತೂ ‘ಗಂಡು’ ಮತ್ತವನ ಚೇಲಾಗಳ ನಿರ್ಗಮನವಾಯಿತು. ಬೋಂಡಾ ಜಾಮೂನು ಖರ್ಚಾಗಿದ್ದು ಬಿಟ್ರೆ ಇನ್ನೇನು ಪ್ರಯೋಜನವಾಗಲಿಲ್ಲ. ನನಗೆ ಒಂದೂ ಉಳಿಯದೆ ಎಲ್ಲಾ ಖಾಲಿಯಾಗಿತ್ತು ಅನ್ನೋದೊಂದು ನಿರಾಶೆ ಬಿಟ್ಟರೆ ಮತ್ತೇನು ಹೆಚ್ಚು ಬೇಜಾರಾಗಲಿಲ್ಲ. ಖುಷಿಯಿಂದ ಪುಟಿಯುತ್ತಿದ್ದ ಅಮ್ಮನಿಗೂ ’ಗಂಡಿನ’ ದರ್ಶನದಿಂದ ಬೇಜಾರಾಗಿತ್ತು.
‘ಅಯ್ಯೋ ಕೆಲಸ ಮಾಡೋಕೆ ನನ್ ಮಗಳು ಮನೇಲಿದ್ರೆ ತಾನೇ! ಇಷ್ಟು ವಯಸ್ಸಾದ್ರೂ ನಾನೇ ಎಲ್ಲ ಮಾಡ್ಬೇಕು, ಮಕ್ಕಳ ಕೈಲಿ ಸೇವೆ ಮಾಡಿಸ್ಕೊಳ್ಳೋಕು ಪುಣ್ಯ ಮಾಡಿರ್ಬೇಕು ಬಿಡಿ…………!’ ಮಾರನೇ ದಿನ ಅಮ್ಮ ಫೋನಿನಲ್ಲಿ ಮಾತಾಡುತ್ತಲೆ ಇದ್ದರು, ನಾನು ನಗುತ್ತಾ ಆಫೀಸಿನ ದಾರಿ ಹಿಡಿದೆ.

ಗಜನಿ ಅಮೀರ್‌ಗೆ ಧಿಕ್ಕಾರ!

22 ಡಿಸೆ

ಗಣೇಶ್

ಮೊನ್ನೆ ಏನಾಯ್ತು ಗೊತ್ತಾ? ಬೆಳಗ್ಗೆ ಕಣ್ಣು ತೆರೆಯುತ್ತಿರುವಂತೆ ಎದುರಿಗೆ

ಭಯೋತ್ಪಾದಕ !! ಯಾವಾಗಲೂ ಭಯೋತ್ಪಾದಕಿಯನ್ನು ನೋಡಿ ಅಭ್ಯಾಸವಿದ್ದುದರಿಂದ ನಾನು ಭಯಬೀಳಲಿಲ್ಲ.

ಗಮನಿಸಿ ನೋಡಿದಾಗ ಗೊತ್ತಾಯಿತು-ಅದು ಆಮೀರ್ ಖಾನ್‌ನ ಘಜನಿ ಚಿತ್ರದ ಪೋಸ್ಟರ್-ನನ್ನ ಬೆಡ್‌ನ ಎದುರಿನ ಗೋಡೆಯಲ್ಲಿತ್ತು. ಬೆಳ್ಳಂಬೆಳಗ್ಗೆ ಏಳುವಾಗ ನೋಡಲು ಲಕ್ಷ್ಮಿ ಫೋಟೋ, ಹೋಗಲಿ ಕತ್ರೀನಾಳಾದ್ದಾದರೂ ಹಾಕಬಾರದೆ. (ಹೆಗಲಿನ ಮಟ್ಟಕ್ಕೆ ಬೆಳೆದ ಮಕ್ಕಳಿರುವಾಗ ಇದನ್ನೆಲ್ಲಾ ಯೋಚನೆ ಮಾಡಬಾರದು. ಶಾಂತಂ ಪಾಪಂ.)

ಬರೀ ಮೇಲ್ಮೈ(ಮೇಲಿನ+ಮೈ), ಕೆಟ್ಟ ನೋಟ, ತಲೆಯಲ್ಲಿ ಕಾಫೀತೋಟದ ರಸ್ತೆ ತರಹ ಅಡ್ಡಾದಿಡ್ಡಿ ಗೆರೆ-ಈ ಪೋಸ್ಟರ್ ನನ್ನ ಕೋಣೆಯಲ್ಲಿ ಅಂಟಿಸಿರಬೇಕಾದರೆ ಏನೋ ಮಸಲತ್ತು ನಡೆಯುತ್ತಿದೆ ಎಂದು ಅಂದಾಜಿಸಿದೆ.

ಏನೂ ಗೊತ್ತಿಲ್ಲದವನಂತೆ ಎದ್ದು ನನ್ನ ನಿತ್ಯದ ಕೆಲಸ (ಪಾತ್ರೆ ತೊಳೆಯುವುದು, ಗುಡಿಸುವುದು…) ಮಾಡುತ್ತಿದ್ದೆ. ಮಕ್ಕಳಿಗೆ ತಡೆಯಲಾಗಲಿಲ್ಲ-‘ಕೋಣೆಯಲ್ಲಿದ್ದ ಫೋಟೋ ನೋಡಲಿಲ್ಲವಾ ಅಪ್ಪಾ’ ಎಂದು ಕೇಳಿದರು. ಹೊಸದಾಗಿ ನೋಡುವವನಂತೆ ಹೋಗಿ ನೋಡಿದೆ.

‘ಓಹೋ, ಶಾರುಕ್ ಖಾನ್ ಫೋಟೋ! ಚೆನ್ನಾಗಿಲ್ಲ. ನಿಮ್ಮ ಕೋಣೆಯಲ್ಲಿಯೇ ಹಾಕಿಕೊಳ್ಳಿ’ ಎಂದೆ.

‘ಇಲ್ಲಾಪ್ಪಾ, ಇದು ಆಮೀರ್ ಖಾನ್. ಬಾಡಿ ನೋಡಿ ಹೇಗಿದೆ?’ ಎಂದ ಮಗರಾಯ.

(ಬಾಡಿ..ಹೀರೋಯಿನ್‌ಗಳದ್ದಾಗಿದ್ದರೆ ಸೌಂದರ್ಯ ತುಂಬಿ ತುಳುಕುತ್ತಿತ್ತು. ಈ ಬಾಡಿ ನೋಡಿದಾಗ ಅಂಗಡಿಗಳಲ್ಲಿ ಒಂದರ ಮೇಲೆ ಒಂದು ಜೋಡಿಸಿಟ್ಟ ಪ್ಯಾಕ್‌ಗಳಂತೆ ಕಾಣುತ್ತದೆ. ಆದರೆ ಇದನ್ನು ಮಕ್ಕಳೆದುರು ಹೇಳಲಾಗುತ್ತದಾ?)

ಈಗ ಅಂದಾಜಾಯಿತು. ಇದು ನನ್ನ ಸಿಗರೇಟು, ಕುಡಿತ, ‘೧೦ ಪ್ಯಾಕ್ ಹೊಟ್ಟೆ’ಗೆ ಕತ್ತರಿ ಹಾಕುವ ಪ್ಲಾನ್..

ಈ ಮಕ್ಕಳು ಹೇಗೆ ಬೆಳೀತಾವೆ ನೋಡಿ. ನಿನ್ನೆವರೆಗೆ ಚಡ್ಡಿ ಸರಿ ಹಾಕಲಿಕ್ಕೆ ಬರದಿದ್ದವು ಈಗ ಬಾಡಿ ಬಗ್ಗೆ ನನಗೇ ಹೇಳುವಷ್ಟು ದೊಡ್ಡವರಾದರು.

‘ ನೋಡೋ, ನಾನು ಬಾಡಿ ಬೆಳಸಿ ಇನ್ನು ಸಾಧಿಸಬೇಕಾದ್ದೇನೂ ಇಲ್ಲ. ನೀವು ಬೇಕಿದ್ದರೆ

ಜಿಮ್‌ಗೆ ಸೇರಿ ಪ್ರಯತ್ನಿಸಿ’ ಅಂದೆ. ಅಷ್ಟು ಹೊತ್ತಿಗೆ ನನ್ನ ಮನೆಯಾಕೆಯ ಪ್ರವೇಶವಾಯಿತು.

‘ ನೋಡೇ, ಆತನ ತರಹ ಬಾಡಿ ಬೆಳೆಸಲು ಮಕ್ಕಳಿಗೆ ಗೆ ಗೆ, ಅಲ್ವೇ ನನಗೆ ಬೆಳಗ್ಗೆ ಟೈಮ್ ಎಲ್ಲಿದೆ? ಗುಡಿಸಿ ಒರೆಸುವುದಕ್ಕೇ ಟೈಮ್ ಸಾಲುವುದಿಲ್ಲಾ..’

ವ್ಯಾಯಾಮ ಅಥವಾ ಮನೆಕೆಲಸದಲ್ಲಿ ಒಂದನ್ನು ಕ್ಯಾನ್ಸಲ್ ಮಾಡಿಯಾಳು ಎಂದೆಣಿಸಿದೆ.

‘ಮಧ್ಯರಾತ್ರಿವರೆಗೆ ಟೈಪ್‌ರೈಟರ್ ಕುಟ್ಟುತ್ತೀರಲ್ಲ. ಅದನ್ನು ಬಿಟ್ಟು, ಬೇಗ ಮಲಗಿ, ಬೆಳಗ್ಗೆ ೪ ಘಂಟೆಗೆ ಎದ್ದು ವ್ಯಾಯಾಮ ಮಾಡಿ, ನಂತರ ಉಳಿದ ಕೆಲಸ ಮಾಡಿದರಾಯಿತು.’ ಅಂದಳು. ಹೋಗಿ ಮುಟ್ಟಿದ್ದು ಅಲ್ಲಿಗೇ.. ‘ಸಂಪದ’ವನ್ನು ಮೊದಲಿಂದಲೂ ಸವತಿ ತರಹ ನೋಡುತ್ತಾಳೆ.

ಮುಂದೇನಾಯಿತು ಎಂದು ನೀವು ಆಲೋಚಿಸಿದ್ದೀರೋ ಅದೇ ಆಯಿತು.

ಈಗ ಈ ಚ ಚ ಛಳಿಯಲ್ಲಿ – ನೀವೆಲ್ಲಾ ಕಂಬಳಿ ಹೊದ್ದು ಸುಖನಿದ್ದೆಯಲ್ಲಿರುವಾಗ- ನಾನು- ಈ ಪಾಪಿ ಘಜನಿಯಿಂದಾಗಿ-ಜಾಗಿಂಗ್ ಮಾಡುತ್ತಿದ್ದೇನೆ. ಸ್ಯಾಂಕೀಟ್ಯಾಂಕಿನ ಪಕ್ಕದ ಪೂಲ್‌ನಲ್ಲಿ ಸ್ವಿಮ್ ಮಾಡುತ್ತಿದ್ದೇನೆ,

ಈ ಸಿಕ್ಸ್ ಪ್ಯಾಕ್ ಆಮೀರ್‌ನಿಂದಾಗಿ-

ನನ್ನ ಒಂದು ಪ್ಯಾಕ್ ಸಿಗರೇಟಿಗೆ ಕತ್ತರಿ

ಒಂದೇ ಒಂದು (೨,೩,೪..)ಪೆಗ್‌ಗೂ ಕತ್ತರಿ

ಅರ್ಧ(ರಾತ್ರಿ) ಗಂಟೆ ಸಂಪದ ನೋಡಲೂ ಕತ್ತರಿ ಪ್ರಯೋಗವಾಗಿದೆ.

ಅಮಿತಾಬ್ ಶರ್ಟ್‌ನ ಒಂದು ಬಟನ್ ಸಹ ಬಿಚ್ಚದೇ ಈಗಲೂ ಹೀರೋ ಆಗಿ ಇಲ್ಲವಾ?

ಇಷ್ಟಕ್ಕೆಲ್ಲಾ ಕಾರಣನಾದ ಆಮೀರ್ ಘಜನಿ ರಿಲೀಸ್‌ಗೆಂದು ಬೆಂಗಳೂರಿಗೆ ಬಂದಾಗ ಧಿಕ್ಕಾರ ಕೂಗಬೇಕೆಂದಿದ್ದೇನೆ.

-ಗಣೇಶ(ಸದ್ಯದಲ್ಲಿ ಸಿಕ್ಸ್ ಪ್ಯಾಕ್ ಗಣೇಶ)

(‘ಸಂಪದ’ದಲ್ಲಿ ಪ್ರಕಟವಾದದ್ದು)

ಸ್ಕೂಪ್: ಉತ್ತಮ ಸಮಾಜಕ್ಕಾಗಿ ಟಿವಿ ೯ ?

26 ಏಪ್ರಿಲ್

(ನಗಾರಿ ತನಿಖಾ ಬ್ಯೂರೋ)

‘ಉತ್ತಮ ಸಮಾಜಕ್ಕಾಗಿ’ ಎಂಬ ಪಂಚಿಂಗ್ ಹಾಗೂ ಪರಿಣಾಮಕಾರಿ ಸ್ಲೋಗನ್ನನ್ನು ಹೊತ್ತುಕೊಂಡು ಕನ್ನಡದಲ್ಲಿ ಕಣ್ತೆರದದ್ದು ಟಿವಿ ೯ ಸುದ್ದಿ ಚಾನಲ್ಲು. ಇದು ಶುರುವಾಗಿ ಈಗಾಗಲೇ ತುಂಬಾ ದಿನಗಳು ಕಳೆದಿವೆ. ಈ ಸಂದರ್ಭದಲ್ಲಿ ಈ ಚಾನಲ್ಲಿನಿಂದ ಸಮಾಜ ಎಷ್ಟು ‘ಉತ್ತಮ’ವಾಗಿದೆ ಎಂಬುದನ್ನು ಪತ್ತೆಹಚ್ಚುವುದಕ್ಕೆ ನಗೆ ಸಾಮ್ರಾಟರು ತಮ್ಮ ಪತ್ತೇದಾರಿಕೆಯ ಚೇಲ ಕುಚೇಲನನ್ನು ಕಟ್ಟಿಕೊಂಡು ಅಜ್ಞಾತ ಪ್ರದೇಶಕ್ಕೆ ಪಲಾಯನಗೈದಿದ್ದಾರೆ.

‘ರಾಜಕಾರಣಿಗಳೇ ಎಚ್ಚರ..! ಮಾತಾಡುವ ಮುನ್ನ ಯೋಚಿಸಿ’ ಎಂದು ಚುನಾವಣೆಯ ಕಾವು ಜ್ವರದಂತೆ ಏರುತ್ತಿರುವ ಸಂದರ್ಭದಲ್ಲಿ ರೋಫ್ ಹಾಕುತ್ತಿರುವ ಈ ಸುದ್ಧಿ ಮಾಧ್ಯಮ ಆಶ್ವಾಸನೆಗಳನ್ನು ನೀಡುವಂತಹ ಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲು ತೋಳು ಮೇಲೇರಿಸುತ್ತಿದೆ. ಅವರ ಈ ಉತ್ಸಾಹ, ಆರ್ಭಟಕ್ಕೆ ಕಾರಣವನ್ನು, ಪ್ರೇರಣೆಯನ್ನೂ ಪತ್ತೆ ಹಚ್ಚಬೇಕೆಂದು ಮೂಲವನ್ನು ಹುಡುಕಿಹೊರಟ ಸಾಮ್ರಾಟ್ ಹಾಗೂ ಕುಚೇಲರಿಗೆ ಅಪಾರ ಶ್ರಮದ ನಂತರ ಉತ್ತರ ಸಿಕ್ಕೇ ಬಿಟ್ಟಿತು. ರಾಜಕಾರಣಿಗಳ ಕೊರಳ ಪಟ್ಟಿಯನ್ನು ಹಿಡಿದುಕೊಂಡು ಬರೀ ಆಶ್ವಾಸನೆಗಳನ್ನು ಕೊಟ್ಟಿರೋ ಹುಶಾರ್! ಆಶ್ವಾಸನೆಗಳನ್ನು ಕಾರ್ಯರೂಪಕ್ಕೆ ತರದಿದ್ದರೆ ನಿಮ್ಮ ತಲೆಗಳನ್ನು ಹಾರಿಸಿಯೇವು ಎಂದು ಬೀಗುತ್ತಿರುವುದರ ಹಿಂದಿನ ನೈತಿಕ ಶಕ್ತಿ ದೊರೆತಿರುವುದು ಇವರು ತಮ್ಮ ಆಶ್ವಾಸನೆಯಾದ ‘ಉತ್ತಮ ಸಮಾಜಕ್ಕಾಗಿ ಟಿವಿ ೯’ ನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತಂದಿರುವುದೇ ಆಗಿದೆ.

ಸುದ್ದಿ ಎಂದರೆ ಅವರಿವರಿಂದ ಕೇಳಿದ್ದು, ರಾತ್ರಿ ಕಾದು ಮನೋರಂಜನೆಯ ಕಾಂಟ್ರಾಕ್ಟ್ ತೆಗೆದುಕೊಂಡ ಚಾನಲ್ಲುಗಳಲ್ಲಿ ಪ್ರಸಾರವಾಗುವ ಸುದ್ಧಿಯನ್ನು ನೋಡಿ ತಿಳಿಯುವುದು, ರಾತ್ರಿ ನಿರಾಳವಾಗಿ ನಿದ್ದೆ ಮಾಡಿ ಎದ್ದು ಬೆಳಿಗ್ಗೆ ಪೇಪರ್ ಓದುವುದು ಎಂದು ತಿಳಿದಿದ್ದ ಸಾಮಾನ್ಯ ಜನೆತೆಗೆ ಸುದ್ಧಿಯ ಬಗ್ಗೆ ಅರಿವನ್ನು ಮೂಡಿಸಿದ ಆ ಮೂಲಕ ಉತ್ತಮ ಸಮಾಜ ಕಟ್ಟುವಲ್ಲಿ ಈ ಚಾನಲ್ಲು ತೆಗೆದುಕೊಂಡ ಶ್ರಮವನ್ನು ಇಲ್ಲಿ ನೆನೆಯಲೇ ಬೇಕು. ‘ಗಂಡನಿಗೆ ಹೆಂಡತಿಯ ಮೇಲೆ ಸಂಶಯ… ಕೊಲೆ’, ‘ಕರ್ನಾಟಕದವರು ಕಚಡಾಗಳು: ಮಾನ್ಯ ಮಂತ್ರಿ’, ‘ತಾಕತ್ತಿದ್ದರೆ ಹೀಗೆ ಮಾಡಿ: ಅನಾಮಿಕ’ ಎಂಬಂಥ ಫ್ಲಾಶ್, ಬ್ರೇಕಿಂಗ್ ಸುದ್ದಿಗಳನ್ನು ಅಪಾರ ಆಸಕ್ತಿಯಿಂದ ಜನರು ನೋಡಲು ಶುರುಮಾಡಿರುವುದು ಉತ್ತಮ ಸಮಾಜ ಕಟ್ಟುವ ಕೆಲಸದ ಮೊದಲ ಹಂತ. ಅದನ್ನು ಟಿವಿ ೯ ಯಶಸ್ವಿಯಾಗಿ ನಿರ್ವಹಿಸಿದೆ.

ಹಾಲಿವುಡ್ಡು, ಬಾಲಿವುಡ್ಡು, ಸ್ಯಾಂಡಲ್‌ವುಡ್ಡು, ಕಾಲಿವುಡ್ಡು ಎಂದು ಏನೇನೋ ಹೊಸ ಪದಗಳನ್ನು ಮೇಲಿಂದ ಮೇಲೆ ಹೇಳುತ್ತಾ, ಬಿಡುಗಡೆಯಾಗುವ(ಎಲ್ಲಿಂದ?) ಸಿನೆಮಾದ ನಾಯಕರನ್ನು, ಹಣ ಕೊಟ್ಟ ನಿರ್ಮಾಪಕರನ್ನು ಕರೆಸಿಕೊಂಡು ಹರಟೆ ಹೊಡೆದು ನಾಲ್ಕೈದು ಹಾಡುಗಳನ್ನು ಹಾಕಿ, ಅಡ್ವರ್ಟೈಸ್‌ಮೆಂಟಿನ ನಡುವೆ ಸಮಯ ಮಾಡಿಕೊಂಡು ಚಿತ್ರದ ದೃಶ್ಯಗಳನ್ನು ತೋರಿಸಿ ಜನರನ್ನು ರಂಜಿಸುತ್ತಾ ಜನರು ವಾಸ್ತವದ ಕಷ್ಟನಷ್ಟಗಳು, ಬೆಳೆದ ಬೆಲೆಗೆ ಬೆಲೆಯಿಲ್ಲದ ಕಂಗಾಲಾದ ರೈತ ತನ್ನ ಬವಣೆಯನ್ನು, ಹೋರಾಟದ ಯೋಜನೆಯನ್ನೆಲ್ಲಾ ಮರೆತು ಬಣ್ಣದ ಲೋಕದಲ್ಲಿ ವಿಹರಿಸುತ್ತಾ ಪಲಾಯನವಾದಿಯ ಶ್ರೇಷ್ಠ ಸ್ಥಾನವನ್ನೇರಲು ಟಿವಿ ೯ ಕೈಲಾದಷ್ಟು ನೆರವು ನೀಡುತ್ತಿರುವುದು ಅದರ ಎರಡನೆಯ ಹಂತದ ಸಾಧನೆಯ ಫಲ.

ವರ್ಷಾನುಗಟ್ಟಲೆ ಮುಂದಾಳುಗಳ ಗರಡಿಯಲ್ಲಿ ಪಳಗಿ, ಸಿದ್ಧಾಂತ-ಪ್ರತಿ ಸಿದ್ಧಾಂತಗಳನ್ನು ಅರೆದುಕುಡಿದು, ಸಮಸ್ಯೆಗಳನ್ನು ಅನುಭವಿಸುತ್ತಿರುವವರ ಹತ್ತಿರ ನೇರವಾಗಿ ಹೋಗಿ ಬೆರೆತು ಅವರ ಸಮಸ್ಯೆಯ ಮೂಲಗಳನ್ನು ಅರಿತು, ಆಳವಾದ ಅಧ್ಯಯನವನ್ನು ಮಾಡಿ, ಬೇರಿನ ಮಟ್ಟದಿಂದ ಸಂಘಟನೆಯನ್ನು ಮಾಡುತ್ತಾ ಬೆಳೆದು ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವ, ಚಳುವಳಿಗಳನ್ನು ಆಯೋಜಿಸುವ ನಾಯಕರು, ಮುತ್ಸದ್ಧಿಗಳಿಂದಾಗಿ ಪ್ರತಿಕ್ರಿಯೆ ಹಾಗೂ ಪ್ರತಿಭಟನೆ ತುಂಬಾ ದೀರ್ಘಕಾಲವನ್ನು ಅಪೇಕ್ಷಿಸುತ್ತದೆ ಎಂಬುದನ್ನು ತಮ್ಮ ‘ಆಳ’ವಾದ ಅಧ್ಯಯನದಿಂದ ಕಂಡುಕೊಂಡ ಟಿವಿ ೯ರ ನೇತಾರರು ದಿಢೀರ್ ಚಳುವಳಿಗಾರರನ್ನು ಪ್ರೋತ್ಸಾಹಿಸುವ ಕ್ರಾಂತಿಕಾರಕ ಯೋಜನೆಯನ್ನು ಹಮ್ಮಿಕೊಂಡರು. ಫಾಸ್ಟ್ ಫುಡ್, ಫಾಸ್ಟ್ ಲೈಫ್ ಸ್ಟೈಲ್ ಅಲ್ಲದೆ ಕ್ರಿಕೆಟ್ಟಿನಲ್ಲೂ ಫಾಸ್ಟಾದ ಟಿ೨೦ ಬಂದಿರುವಾಗ ಈ ಚಳುವಳಿ, ಪ್ರತಿಭಟನೆಗಳ್ಯಾಕೆ ಗಂಭೀರವಾಗಿರಬೇಕು ಎಂದು ಯೋಚಿಸಿ ಇವರು ನಾಡಿನಾದ್ಯಂತ ಹುಟ್ಟಿಕೊಂಡ ಅಸಂಖ್ಯ ವೇದಿಕೆ, ಸೇನೆ, ಪಡೆ, ದಳಗಳಿಗೆ ವಿಶೇಷ ಆದ್ಯತೆಯನ್ನು ನೀಡಿತು. ಅದರಲ್ಲೂ ಪ್ರತಿಭಟನೆಯೆಂಬುದು ಕೇವಲ ಬಾಯಿ ಮಾತಾಗಬಾರದು ‘ಕಾಯಾ’ ವಾಚಾ ಮನಸಾ ನಡೆಯಬೇಕು. ಹಾಗಾಗಿ ಸುಮ್ಮನೆ ಒಂದೆಡೆ ಕುಳಿತು ಪ್ರತಿಭಟನೆಯನ್ನು ದಾಖಲಿಸುವುದು, ಯಾರದೋ ಸಮಸ್ಯೆಗಾಗಿ ತಾವು ಉಪವಾಸ ಕುಳಿತುಕೊಳ್ಳುವುದು, ಸತ್ಯಕ್ಕಾಗಿ ಆಗ್ರಹಿಸುವುದು ಎಲ್ಲವೂ ‘ಅವೈಜ್ಞಾನಿಕ’ ಹಾಗೂ ‘ಅಪ್ರಾಯೋಗಿಕ’ ಎಂಬುದನ್ನು ಕಂಡುಕೊಂಡ ಇವರು ಮೇಜು, ಕುರ್ಚಿ, ಕಂಪ್ಯೂಟರುಗಳನ್ನು ಪುಡಿಪುಡಿ ಮಾಡುವುದನ್ನೂ, ಕಲ್ಲೆಸೆದು ಅನ್ಯಾಯ ಮಾಡುವವರ ಕೈ, ಕಾಲು, ಕಣ್ಣುಗಳಿಗಾಗಿ ‘ಆಗ್ರಹ’ ಮಾಡುವುದನ್ನು ಬೆಂಬಲಿಸಿ ಆ ‘ಹೋರಾಟ’ಗಳಿಗೆ ಪೂರ್ಣ ಪ್ರಮಾಣದ ಕವರೇಜ್ ಕೊಟ್ಟು ಉತ್ತಮ ಸಮಾಜಕ್ಕಾಗಿ ಈ ವಾಹಿನಿ ನಡೆಸುತ್ತಿರುವ ಪ್ರಯತ್ನ ಗಮನ ಸೆಳೆದಿದೆ.

ನ್ಯಾಯ, ನೀತಿಗಾಗಿ, ಅಪರಾಧ-ಶಿಕ್ಷೆ ತೀರ್ಮಾನಕ್ಕಾಗಿ ಪೋಲೀಸು, ಕೋರ್ಟುಗಳನ್ನು ನಂಬಿಕೊಂಡು ವರ್ಷಗಳ ಕಾಲ ಅಲೆದಾಡುವುದರಿಂದ ಸಮಾಜ ಕಷ್ಟ ಅನುಭವಿಸುತ್ತಿದೆ ಎಂಬುದನ್ನು ಗಮನಿಸಿದ ಟಿವಿ ಒಂಭತ್ತು ಇದಕ್ಕೊಂದು ಪರಿಹಾರವನ್ನು ಕಂಡುಕೊಂಡಿದೆ. ಮನೆಯಲ್ಲಿ ಸಿಕ್ಕ ಕಳ್ಳನನ್ನು, ವರದಕ್ಷಿಣೆಗಾಗಿ ಪೀಡಿಸಿದ ಗಂಡನ ಮನೆಯವರನ್ನು, ವಂಚನೆ ಮಾಡಿದ ಲೇವಾದೇವಿಗಾರನನ್ನು, ಕಾಮುಕ ಶಿಕ್ಷಕನನ್ನು ಜನರೇ ಬೀದಿಗೆಳೆದು ಹಿಗ್ಗಾಮುಗ್ಗಾ ಬಾರಿಸುವ, ತಾವಾಗಿ ಶಿಕ್ಷೆಯನ್ನು ತೀರ್ಮಾನಿಸುವ ಹೊಸ ಪದ್ಧತಿಯನ್ನು ಅದು ಬೆಂಬಲಿಸುತ್ತಿದೆ. ಇದರಿಂದಾಗಿ ಜನರಿಗೆ ‘ತ್ವರಿತ’ಗತಿಯಲ್ಲಿ ನ್ಯಾಯ ಸಿಕ್ಕುವುದಲ್ಲದೆ ಆರೋಪಿಗೂ ತಕ್ಕ ಶಿಕ್ಷೆ ಸಿಕ್ಕುತ್ತದೆ ಎಂಬುದು ಇವರ ವಿಚಾರ. ಹೀಗಾಗಿ ಎಲ್ಲೋ ಒಂದು ಕಡೆ ಒಬ್ಬನು ವಂಚನೆ ಮಾಡುತ್ತಿದ್ದಾನೆ ಎಂದರೆ ಜನರನ್ನು ಈ ಬಗೆಯ ಹೋರಾಟಕ್ಕೆ ಸಿದ್ಧ ಮಾಡುವಂತೆ, ‘ಇವರಿಗೇನು ಮಾಡಬೇಕು? ಜನರೇ ತೀರ್ಮಾನಿಸಬೇಕು’ ಎಂದು ಪ್ರಚೋದಿಸಿ ಅವರು ವಂಚಕನಿಗೆ ತದಕುವುದನ್ನು ಲೈವ್ ಕವರೇಜ್ ಮಾಡಿ ‘ಜನರ ತೀರ್ಮಾನ’ವನ್ನು ತೋರಿಸಿ ಕೃತಾರ್ತರಾಗುತ್ತಿದ್ದಾರೆ. ಇದೂ ಸಹ ಉತ್ತಮ ಸಮಾಜಕ್ಕಾಗಿ ಟಿವಿ ೯ರ ಕೊಡುಗೆ.

ಆತ್ಮಕಥೆಯೊಂದು ಪ್ರಕಟವಾಗಿ ಅದನ್ನು ಓದುವ ಸಮಯವಿದ್ದವರು ಓದಿ ಅದರಲ್ಲಿನ ಆಕ್ಷೇಪಾರ್ಹ ಸಂಗತಿಗಳನ್ನು ಚರ್ಚಿಸಿ ಅವುಗಳ ವಿರುದ್ಧ ಮಾತನಾಡುವ, ಉದ್ದೇಶ ಪೂರಿತವಾಗಿ ಹೆಸರಿಗೆ ಮಸಿ ಬಳಿಯುವ ಪ್ರಯತ್ನಕ್ಕೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ಹಾಕುವ ಕೆಲಸಗಳು ತುಂಬಾ ಸಮಯ ತಿನ್ನುತ್ತವೆ. ಇದರಿಂದ ಯಾರಿಗೂ ಲಾಭವಾಗುವುದಿಲ್ಲ ಎಂಬ ಸಂಗತಿಯನ್ನು ಸೂಕ್ಷವಾಗಿ ಅವಲೋಕಿಸಿದ ಈ ವಾಹಿನಿ ಆತ್ಮಕಥೆಯೊಂದು ಬಿಡುಗಡೆಯಾಗುವ ಮೊದಲೇ ಅದರಲ್ಲೇನಿದೆ ಎಂಬುದನ್ನು ದಿನವಿಡೀ ಪ್ರಸಾರ ಮಾಡಿ, ಆ ಪುಸ್ತಕವನ್ನು ನೋಡಿಯೇ ಇರದ, ಒಂದೇ ಒಂದು ಪುಟವನ್ನೂ ಓದದವರೆಲ್ಲಾ ಕೈಲಿ ಪ್ರತಿಭಟನೆಯ ‘ಅಸ್ತ್ರ’ಗಳನ್ನು ಹಿಡಿದುಕೊಂಡು ಬಂದು ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನೇ ರದ್ದುಗೊಳಿಸುವಲ್ಲಿ ಯಶಸ್ವಿಯಾಗುವಲ್ಲಿ ಸಹಕರಿಸಿದ ವಾಹಿನಿ ನಿಜಕ್ಕೂ ಉತ್ತಮ ಸಮಾಜ ಕಟ್ಟುವಲ್ಲಿ ಅಪಾರ ಶ್ರಮವಹಿಸುತ್ತಿದೆ.

ಇಷ್ಟು ಸತ್ಯಗಳನ್ನು ಪತ್ತೆ ಮಾಡುವಷ್ಟರಲ್ಲಿ ಸಾಮ್ರಾಟರೂ, ಅವರ ಪತ್ತೇದಾರಿಕೆಯ ಚೇಲ ಕುಚೇಲನೂ ಸುಸ್ತು ಹೊಡೆದು ಹೋದರು. ಆದರೂ ಸುದ್ದಿಯ ಹೆಸರಿನಲ್ಲಿ ಗಲ್ಲಿ ಗಾಸಿಪ್, ‘ಹೀಗೂ, ಈಗೂ ಉಂಟೆ’, ರಸ್ತೆ ಬದಿಯ ಕ್ರಿಕೆಟ್ ಅಭಿಮಾನಿಗಳ ಆಟದ ವಿಶ್ಲೇಷಣೆಗಳು ಮುಂತಾದ ಸಾಧನೆಗಳ ಬಗ್ಗೆ ಹಾಗೂ ಅವು ಉತ್ತಮ ಸಮಾಜಕ್ಕಾಗಿ ನೀಡುತ್ತಿರುವ ಕೊಡುಗೆಗಳ ಕುರಿತು ಇನ್ನೊಮ್ಮೆ ಪತ್ತೆದಾರಿಕೆ ಮಾಡಬೇಕೆಂದು ತೀರ್ಮಾನಿಸಿದರು.

ಏಪ್ರಿಲ್ ಒಂದು- ಎಲ್ಲರ ದಿನ!

28 ಮಾರ್ಚ್

ಮತ್ತೊಂದು ಏಪ್ರಿಲ್ ಒಂದು ಬರುತ್ತಿದೆ. ಏಪ್ರಿಲ್ ಒಂದು ಬರುವುದು ವರ್ಷಕ್ಕೆ ಒಂದೇ ಸಾರಿಯೇ ಆದರೂ ಆ ದಿನದ ಮಹತ್ವವನ್ನು ಅಲ್ಲಗಳೆಯಲಾಗದು. ಆ ದಿನವನ್ನು ‘ಮೂರ್ಖ’ರಿಗಾಗಿ ಮೀಸಲಿಟ್ಟಿರುವುದು ನಿಜಕ್ಕೂ ಅಭಿನಂದನಾರ್ಹವಾದ ಹಾಗೂ ಅತ್ಯಂತ ಸೂಕ್ತವಾದ ಸಂಗತಿ. ಜಗತ್ತಿನಲ್ಲಿ ಎಂಥೆಂಥವರಿಗೋ ಒಂದಿಡೀ ದಿನವನ್ನು ಮೀಸಲಿಡುವ ಪರಿಪಾಠ ಇದೆ. ‘ವ್ಯಾಲೆಂಟೈನ್ಸ್ ಡೇ’ ಅಂತೆ, ‘ಮದರ್ಸ್ ಡೇ’ ಅಂತೆ, ‘ಫಾದರ್ಸ್ ಡೇ’ (ಇದನ್ನು Father`s day ಎಂದು ಓದಿಕೊಳ್ಳಬೇಕಾಗಿ ವಿನಂತಿ, Fathers day ಎಂದು ಓದಿಕೊಂಡರೂ ಅದು ತಾಂತ್ರಿಕವಾಗಿ, ತಾತ್ವಿಕವಾಗಿ, ವಾಸ್ತವಿಕವಾಗಿ, ಕಾಲ್ಪನಿಕವಾಗಿ ತಪ್ಪಿಲ್ಲವಾದರೂ ‘ವ್ಯಾವಹಾರಿಕ’ವಾಗಿ ನಿಷಿದ್ಧ!), ‘ವುಮನ್ಸ್ ಡೇ’ ಇವೆಲ್ಲಾ ಇರಲಿ, ಅಂಥಾ ಮಹಾಮಾರಿ ಏಡ್ಸ್‌ಗೂ ಸಹ ಒಂದು ‘ಏಡ್ಸ್ ಡೇ’ ಎಂಬುದಿದೆ. ಅದೂ ಹೋಗಲಿ ಎಂದುಕೊಳ್ಳೋಣ ಎಂದರೆ Every dog has its day ಎನ್ನುತ್ತಾರೆ. ಹಂಗಾದರೆ ಪ್ರತಿಯೊಂದು ನಾಯಿಗೂ ಒಂದು ದಿನವಿದೆ, ಗಂಡಂದಿರಿಗೂ ಇದೆ!

ಹೀಗೆ ಜಗತ್ತಿನ ಸಣ್ಣ ಸಣ್ಣ ಗುಂಪುಗಳಿಗಾಗಿ ಎಂದೇ ಒಂದೊಂದು ದಿನವಿರುವಾಗ ಜಗತ್ತಿನ ಬಹುಸಂಖ್ಯಾತರ, majority ಜನರ ಹೆಸರಿನಲ್ಲಿ ವರ್ಷಕ್ಕೆ ಒಂದೇ ಒಂದು ದಿನವಾದರೂ ಬೇಡವೇ? ಜಗತ್ತಿನಲ್ಲಿ ಪ್ರಜಾಪ್ರಭುತ್ವವೇ ಅತ್ಯಂತ ಶ್ರೇಷ್ಠವಾದ ಪ್ರಭುತ್ವ ಎಂದು ನಮ್ಮನ್ನು ಮುನ್ನೂರು ಚಿಲ್ಲರೆ ವರ್ಷ ಆಳಿದ ಬ್ರಿಟೀಷರು ಹೇಳಿಕೊಟ್ಟದ್ದನ್ನು ಅವರಿಗಿಂತ ಚೆನ್ನಾಗಿ ನಂಬಿರುವ ಹಾಗೂ ಅದರ ಫಲವಾಗಿ ಪ್ರಸ್ತುತ ರಾಜಕಾರಣಿಗಳನ್ನು ಆರಿಸಿ ನಮ್ಮದು ಪ್ರಜಾಪ್ರಭುತ್ವ, ಪ್ರಭುತ್ವದಲ್ಲಿರುವವರ ಹಾಗೆಯೇ ನಮ್ಮ ದೇಶದ ಪ್ರಜೆಗಳೂ ಇರುವುದು ಎಂಬುದನ್ನು ಸಾರುತ್ತಿದ್ದೇವೆ. ಈ ಪ್ರಜಾಪ್ರಭುತ್ವದಲ್ಲಿ ಬಹುಸಂಖ್ಯಾತರಿಗೇ ಮೊದಲ ಮಣೆ. ನೂರು ಮಂದಿಯಲ್ಲಿ ತೊಂಭತ್ತು ಮಂದಿ ಸೂರ್ಯ ಪಶ್ಚಿಮದಲ್ಲಿ ಹುಟ್ಟುತ್ತಾನೆ ಎಂದರೆ ಅದೇ ಸತ್ಯ. ಹೀಗಿರುವಾಗ ಇಡೀ ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ಮೂರ್ಖರಿಗಾಗಿ ಮುನ್ನೂರ ಅರವತ್ತೈದು ಕಾಲು ದಿನಗಳಲ್ಲಿ ಅಟ್‌ಲೀಸ್ಟ್ ಒಂದು ದಿನವಾದರೂ ಬೇಡವೇ?

ಏಪ್ರಿಲ್ ಒಂದು ನಿಜಕ್ಕೂ ಮಹತ್ವದ ದಿನ. ಜಗತ್ತಿನಲ್ಲಿರುವ ಬಹುತೇಕರ ಪ್ರತಿಭೆಯನ್ನು ಗುರುತಿಸುವ ದಿನ. ತನ್ನ ಮೈಯಲ್ಲೇ ಕಸ್ತೂರಿಯಿದ್ದರೂ ಅದರ ಪರಿಮಳವನ್ನು ಹುಡುಕಿಕೊಂಡು ಕಸ್ತೂರಿ ಮೃಗ ಕಾಡೆಲ್ಲಾ ಸುತ್ತಿ ಕಂಗಾಲಾಗುತ್ತ, ಈ ಪರಿಮಳ ಅಗೋಚರವಾದದ್ದು ಸರ್ವವ್ಯಾಪಿಯಾದದ್ದು ಎಂಬ ನಿರ್ಧಾರಕ್ಕೆ ಬಂದಂತೆ ಜಗತ್ತಿನ ಜನರು ತಮ್ಮ ಕಿವಿಗಳೆರಡರ ಮಧ್ಯದೊಳಗೇ ಅಡಗಿರುವ ಮೂರ್ಖತನವನ್ನು ಕಾಣಲಾರದೆ ಹೊರಜಗತ್ತಿನಲ್ಲಿ ಮೂರ್ಖತನದ ಕೆಲಸಗಳನ್ನು ಗುರುತಿಸುತ್ತಾ, ಮೂರ್ಖರು ಯಾರು, ಮೂರ್ಖತನ ಎಲ್ಲಿದೆ ಅಂತ ಹುಡುಕುತ್ತಾ ಜಗತ್ತಿನೆಲ್ಲೆಡೆ ಅಲೆಯುತ್ತಿದ್ದಾನೆ. ತನ್ನೊಳಗಂತೂ ಇಲ್ಲ ಎಂದು ನೆಮ್ಮದಿಯಾಗಿರುತ್ತಾನೆ. ಕೆಲವೊಮ್ಮೆ ಅಪರೂಪಕ್ಕೆ ಜ್ಞಾನೋದಯವಾಗಿ ನನ್ನೊಳಗೇ ಅದು ಇದ್ದಿರಬಹುದಲ್ಲವಾ ಎಂಬ ಸಂಶಯ ನುಸುಳಿದರೂ ಕೂಡಲೇ ಆತನ ‘ಅಹಂ’ ಎಂಬ ಕಾವಲುಗಾರ ಅದನ್ನು ಹೊರಗಟ್ಟಿಬಿಡುತ್ತಾನೆ. ”ಮಗು ನೀನು ಮೂರ್ಖನಲ್ಲ. ನೀನು ಇಡೀ ಜಗತ್ತಿನಲ್ಲೇ ಅತ್ಯಂತ ಬುದ್ಧಿವಂತ. ಇಡೀ ಜಗತ್ತು ಹಗಲು ರಾತ್ರಿಯೆನ್ನದೆ ಕಾಯುತ್ತಿರುವ ಶ್ರೇಷ್ಠ ವ್ಯಕ್ತಿ ನೀನು. ನೀನು ಮೂರ್ಖನಾಗಲಿಕ್ಕೆ ಹೇಗೆ ಸಾಧ್ಯ? ಅದೋ ನೋಡು ಅಲ್ಲಿ ಕಾಣಿಸ್ತಾ ಇದ್ದಾನಲ್ಲ ಅವನು ಮೂರ್ಖ.” ಎನ್ನುತ್ತಾ ನೆತ್ತಿ ಸವರುತ್ತಾನೆ.

ಈ ನಮ್ಮ ನೆಮ್ಮೆಲ್ಲರ ಹೆಮ್ಮೆಯ ‘ಮೂರ್ಖರ ದಿನ’ ಆಗಮಿಸುತ್ತಿರುವ ಶುಭ ಮುಹೂರ್ತದಲ್ಲಿ ಜಗತ್ತಿನಲ್ಲಿ ನಮ್ಮ ನಿಮ್ಮೆಲ್ಲರ ಸಹೋದರ ಸಹೋದರಿಯರ ಬಗ್ಗೆ ಸ್ವಲ್ಪ ವಿಶ್ಲೇಷಿಸೋಣ. ಇಡೀ ಭೂಮಿಯ ಏಳುನೂರು ಕೋಟಿ ಜನ ಸಂಖ್ಯೆಯಲ್ಲಿ ಮೂರ್ಖರು ಎಷ್ಟು ಮಂದಿ ಎಂಬುದನ್ನು ಮೊದಲು ಪತ್ತೆ ಹಚ್ಚೋಣ. ಮನೆಯೇ ಮೊದಲ ಪಾಠ ಶಾಲೆ ಅಲ್ಲವೇ ಹಾಗಾಗಿ ನಮ್ಮ ಪತ್ತೇದಾರಿಕೆಯನ್ನು ಮನೆಯಿಂದಲೇ ಪ್ರಾರಂಭಿಸೋಣ. ಪ್ರೀತಿಯಿಂದ ಸಾಕಿ ಬೆಳೆಸಿದ ತಂದೆ ಮಗನನ್ನು “ಕತ್ತೆ ಮಗನೇ” ಎನ್ನುತ್ತಾನೆ. ಮನುಷ್ಯ ಎಸಗುತ್ತಿರುವ ಕ್ಷಮೆ ಇಲ್ಲದ ಅಪರಾಧಗಳಲ್ಲಿ ಇದೂ ಒಂದು. ತನ್ನಲ್ಲಿರುವ ಮೂರ್ಖತನವನ್ನು ಮರೆ ಮಾಚಲಿಕ್ಕೆ ಪ್ರಕೃತಿ ವಹಿಸಿದ ಪಾತ್ರವನ್ನು ಅನೂಚಾನವಾಗಿ ನಿರ್ವಹಿಸುತ್ತಿರುವ ಗಾರ್ಧಭ ಮಹಾಶಯನನ್ನು ಮೂರ್ಖ ಎಂದು ಬಿಂಬಿಸುತ್ತಿರುವುದು ಹಾಗೂ ಅಪರೂಪಕ್ಕೆ ಒಮ್ಮೆ ತನ್ನಂಥವನೇ ಆದ ಮಾನವನಲ್ಲಿ ಗೋಚರಿಸುವ ಮೂರ್ಖತನವನ್ನು ಹೆಸರಿಸಲಿಕ್ಕೆ ಗಾರ್ಧಭ ಮಹಾಶಯನ ಹೆಸರನ್ನೇ ಬಳಸುತ್ತಿರುವುದು ಅಕ್ಷಮ್ಯ ಅಪರಾಧ. ಇರಲಿ, ಅಪ್ಪ ತನ್ನ ಮಗನನ್ನು “ಕತ್ತೆ ಮಗನೇ” ಎಂದು ಸಂಬೋಧಿಸುತ್ತಾನೆ. ಅಂದರೆ ಆತನ ಮಗ ಮೂರ್ಖನ ಮಗ ಎಂದಾಯಿತು. ಆ ಮಗನಿಗೆ ತಾನೇ ನಿಜವಾದ ಅಪ್ಪ ಎಂಬ ನಂಬಿಕೆ ಇದ್ದರೆ, ಅಪ್ಪ ತನ್ನನ್ನೇ ಕತ್ತೆ ಎಂದು ಕರೆದುಕೊಂಡಂತಾಯಿತು. ಆ ಮೂಲಕ ತನ್ನ ಹೆಂಡತಿಯೂ ಕತ್ತೆ ಎಂದು ಸಾಬೀತು ಪಡಿಸಿದಂತಾಯಿತು. ಈ ‘ಕತ್ತೆಗಳಿಬ್ಬರ’ ಮಗ ಅಥವಾ ಮಗಳು ಮುಂದೆ ತಂದೆ ಅಥವಾ ತಾಯಿಯ ಪಾತ್ರವನ್ನು ಅಲಂಕರಿಸಿದಾಗ ಇದೇ ರೀತಿಯಾಗಿ ತಮ್ಮ ಮಕ್ಕಳನ್ನು ಸಂಬೋಧಿಸುವುದರಿಂದ ಅವರೂ ಮೂರ್ಖ ಮಹಾಸಭೆಯ ಸದಸ್ಯರಾಗುತ್ತಾರೆ.

ಇನ್ನು ಮನೆಯೆಂಬ ಮೊದಲ ಪಾಠ ಶಾಲೆಯಿಂದ ನಂತರದ ಪಾಠಶಾಲೆಯೆಂಬ ಮನೆಗೆ ಬರೋಣ. ತಿಂಗಳ ಮುವ್ವತ್ತು ದಿನಗಳಲ್ಲಿ ನಾಲ್ಕು ಭಾನುವಾರಗಳು, ನಾಲ್ಕು ಹಾಫ್ ಡೇ ಶನಿವಾರಗಳನ್ನು ಬಿಟ್ಟರೆ ಸಿಕ್ಕುವ ೨೨ ದಿನಗಳಲ್ಲಿ ಎರಡು ಸರಕಾರಿ ರಜೆಗಳು, ಒಂದು ರೀಜನಲ್ ರಜಾ ಸೇರಿಸಿ ಉಳಿದ ೧೯ ದಿನಗಳಲ್ಲಿ ಮೂರು ದಿನ ಟೆಸ್ಟು, ನಾಲ್ಕೈದು ದಿನ ಸ್ವಯಂ ಘೋಷಿತ ರಜೆಗಳನ್ನು ಕಳೆದರೆ ಮಿಕ್ಕುವ ಹನ್ನೊಂದು ದಿನಗಳಲ್ಲಿ ಒಂದು ತಾಸಿನ ಪಿರಿಯಡ್ ನಲ್ಲಿ ಕಾಲುಘಂಟೆ ಹಾಜರಾತಿಗಾಗಿ, ಇನ್ನರ್ಧ ಘಂಟೆ ಶಿಸ್ತಿನ ಬಗೆಗಿನ, ಸಮಯ ಪಾಲನೆ ಬಗೆಗಿನ ಭಾಷಣಕ್ಕಾಗಿ ವ್ಯಯವಾಗಿ ಇನ್ನುಳಿದ ಕಾಲುಘಂಟೆಯಲ್ಲಿ ಮಾಡಿದ ಪಾಠವನ್ನು ಮಕ್ಕಳು ತಪ್ಪಾಗಿ ಒಪ್ಪಿಸಿದರೆ ಶಿಕ್ಷಕರು ಮಕ್ಕಳನ್ನು ಬೈಯುತ್ತಾರೆ, “ಯಾವ ಕತ್ತೆ ನಿನಗೆ ಹೇಳಿ ಕೊಟ್ಟನೋ”. ಈ ಸ್ವಯಂ ಸಂಬೋಧನೆಯಿಂದಾಗಿ ಶಿಕ್ಷಕರು ಹಾಗೂ ಅವರ ಶಿಷ್ಯ ಶಿರೋಮಣಿಗಳಿಗೆ ಮೂರ್ಖ ಸಂಘದ ಸದಸ್ಯತ್ವ ನೀಡಲು ಅಡ್ಡಿಯಿಲ್ಲ.

ಹೀಗೇ ಸಾಗುತ್ತಾ, ಆಫೀಸಿಗೆ ಬನ್ನಿ… “ನಿನ್ನಂಥ ಮೂರ್ಖನನ್ನ ಕೆಲಸಕ್ಕೆ ಇಟ್ಟುಕೊಂಡಿದ್ದೀನಲ್ಲಾ, ನನಗೆ ಬುದ್ಧಿಯಿಲ್ಲ” ಎಂದು ಬಾಸೂ, “ನಿನ್ನ ಹತ್ರ ಕೆಲ್ಸ ಮಾಡ್ತಿದ್ದೀನಲ್ಲಾ, ನನ್ನಂಥ ಮೂರ್ಖ ಬೇರೊಬ್ಬನಿಲ್ಲ” ಅಂತ ಕೆಲಸಗಾರರೂ ಹೇಳುವುದರಿಂದ ಅವರೂ ಗಾಂಪರ ಗುಂಪಿನ ಹೆಮ್ಮೆಯ ಪ್ರಜೆಗಳಾಗುತ್ತಾರೆ. “ಈ ನಾಡಿನಲ್ಲಿ ಹುಟ್ಟಿದೆನಲ್ಲಾ, ನನಗೆ ಬುದ್ಧಿಯಿಲ್ಲ” ಎನ್ನುವ ಜನನಾಯಕರು, “ನಿಮ್ಮ ಮುಂದೆ ಅರಚುತ್ತಿದ್ದೇನಲ್ಲಾ, ಕತ್ತೆ ಮುಂದೆ ಕಿಂದರಿ ಬಾರಿಸಿದ ಹಾಗೆ” ಎನ್ನುವ ಸ್ವಯಂ ಘೋಷಿತ ಸಂಗೀತಗಾರ, “ಕತ್ತೇಗೇನು ಗೊತ್ತು ಕಸ್ತೂರಿ ಪರಿಮಳ” ಎನ್ನುವ ಕವಿಗಳು ಸಂಬೋಧಿಸುವ ಜನಸಮೂಹವೆಲ್ಲಾ ಮೂರ್ಖರ ಗಣತಿಯ ಲೆಕ್ಕದಲ್ಲಿ ಸೇರುತ್ತಾರೆ.

ಇನ್ನು, “ಪ್ರೀತಿ ಕುರುಡು. ಪ್ರೀತಿಗೆ ಕಣ್ಣಿಲ್ಲ… ಪ್ರೀತಿಸುವವರನ್ನು ಹೀಗಳೆಯುವ ಜಗತ್ತು ಮೂರ್ಖ” ಎನ್ನುವ ಅಮರ ಪ್ರೇಮಿಯ ಪ್ರಕಾರ ತಮ್ಮ ಜೋಡಿಯನ್ನು ಬಿಟ್ಟು ಉಳಿದ ಜಗತ್ತೆಲ್ಲಾ ‘ಮೂರ್ಖ’ ಲೇಬಲ್ಲಿಗೆ ಅರ್ಹ. “ಪ್ರೀತಿಗೆ ಕಣ್ಣು ಮಾತ್ರವಲ್ಲ ಅದಕ್ಕೆ ಮೂಗೂ ಇಲ್ಲ, ಕಿವಿಯೂ ಇಲ್ಲ, ಮೆದುಳಂತೂ ಮೊದಲೇ ಇಲ್ಲ, ಅದಕ್ಕಿರುವುದು ಬರೀ ಬಾಯಿ, ಹೊಟ್ಟೆ ಹಾಗೂ ಅವೆರಡರೊಳಗಿರುವ ಅಗಾಧ ಹಸಿವು ಮಾತ್ರ. ಈ ಪ್ರೇಮಿಗಳು ಭ್ರಾಂತುಗಳು” ಎನ್ನುವವರ ಪ್ರಕಾರ ಪ್ರೇಮದಲ್ಲಿ ಬಿದ್ದಿರುವವರು, ಎದ್ದಿರುವವರು ಎಲ್ಲರೂ ಮೂರ್ಖರು.

ಅವರನ್ನು ಮೊದಲಿಗೆ ಇಡೀ ಜಗತ್ತೇ ಹುಚ್ಚರು ಅಂತ ಕರೆದಿತ್ತು. ಲಿಯನಾರ್ಡೋ ಡವಿಂಚಿ, ಗೆಲಿಲಿಯೋ, ಐನ್ ಸ್ಟೈನ್ ಮುಂತಾದ ಕನಸುಗಾರ ಜೀನಿಯಸ್ಸುಗಳನ್ನು ಜಗತ್ತು ಮೂರ್ಖರು ಎಂದಿತ್ತು. ಗೆಲಿಲಿಯೋನನ್ನು ಕತ್ತೆ ಮೇಲೆ ಕೂರಿಸಿ ಮೆರವಣಿಗೆ ಮಾಡಿಸಿತು ಚರ್ಚು. ಜಗತ್ತೇ ಅಂತಹ ಜೀನಿಯಸ್ಸುಗಳನ್ನು ಹುಚ್ಚರು ಅಂತ ಕರೆದಿತು. ಅನಂತರ ಇಡೀ ಜಗತ್ತಿನ ಕಣ್ಣು ತೆರೆದ ಮೇಲೆ ಅವರನ್ನು ಮಹಾನ್ ಬುದ್ಧಿವಂತರು ಎಂದು ಕರೆದು ಪ್ರಾಯಶ್ಚಿತ ಮಾಡಿಕೊಂಡಿತು. ಆ ಮೂಲಕ ಹುಚ್ಚರು ಅವರಲ್ಲ, ಜಗತ್ತು ಎಂದು ಒಪ್ಪಿಕೊಂಡಿತು. ತಾವು ಮೂರ್ಖರು ಅವರು ಜೀನಿಯಸ್ಸುಗಳು ಎಂದು ಜಗತ್ತೇ ಹೆಮ್ಮೆಯಿಂದ ಹೇಳಿಕೊಂಡಿತು.

ಇನ್ನು ನಿಮ್ಹಾನ್ಸ್ ನಿವಾಸಿಗಳನ್ನು ಹುಚ್ಚರು, ಮೂರ್ಖರು ಅನ್ನುತ್ತದೆ ಜಗತ್ತು. ಅಲ್ಲಿರುವ ಯಾರಿಗೂ ಬುದ್ಧಿ ಸರಿಯಿಲ್ಲ ಎನ್ನುತ್ತದೆ ಹೊರಗಿರುವ ಜನ ಸಮೂಹ. ಹೊರಗೆ ನಿಂತು ನೋಡುವವರಿಗೆ ಹುಚ್ಚಾಸ್ಪತ್ರೆಯ ಒಳಗಿರುವವರೆಲ್ಲರೂ ಮೂರ್ಖರಾಗಿ ಕಾಣುತ್ತಾರೆ, ಅದೃಷ್ಟವಶಾತ್ ಡಾಕ್ಟರ್, ನರ್ಸುಗಳನ್ನು ಹೊರತು ಪಡಿಸಿ. ಆದರೆ ಆಸ್ಪತ್ರೆಯ ಒಳಗಿರುವ so called ಮೂರ್ಖರು ಹೇಳುವ ಪ್ರಕಾರ ತಾವು ಸಾಚಾಗಳು, ತಮ್ಮನ್ನು ಇಲ್ಲಿ ಕೂಡಿ ಹಾಕಿರುವ ಜಗತ್ತೇ ಹುಚ್ಚು. ಈ ಆಸ್ಪತ್ರೆಯ ಹೊರಗಿರುವವರೆಲ್ಲರೂ ಹುಚ್ಚರು. ಐನ್ ಸ್ಟೀನ್‍ನ ರಿಲೇಟಿವಿಟಿ ಸಿದ್ಧಾಂತದ ಪ್ರಕಾರ ಬೇರೆ ಬೇರೆ ನೆಲೆಗಳಲ್ಲಿ ನೋಡುವಾಗ ಸತ್ಯ ಬೇರೆ ಬೇರೆ ರೀತಿಯಾಗಿ ಕಾಣಿಸುತ್ತದೆ. ಹಾಗಾದರೆ ಎಲ್ಲವೂ ಸತ್ಯವೇ!

ಈ ಎಲ್ಲಾ ವಿಶೇಷ ಸಂಶ್ಲೇಷಣೆ-ವಿಶ್ಲೇಷಣೆಗಳನ್ನು ಪರಿಶೀಲಿಸಿದಾಗ ಏಪ್ರಿಲ್ ಒಂದು ಎಷ್ಟು ಮಹತ್ವದ ದಿನ ಎಂಬುದರ ಅರಿವಾಗದಿರದು. ಇದು ಎಲ್ಲರ ದಿನ ಆದರೂ ಯಾರ ದಿನವೂ ಅಲ್ಲ. ಎಲ್ಲರಿಗೂ ಏಪ್ರಿಲ್ ಒಂದು ಅಂದರೆ ಒಳಗೊಳಗೇ ಖುಶಿ ಆದರೆ ಯಾರೂ ತಮ್ಮನ್ನು ತಾವು ವಿಶ್ ಮಾಡಿಕೊಳ್ಳಲಾರರು. ಆದರೆ ನಗೆ ಸಾಮ್ರಾಟರಿಗೆ ಆ ಚಿಂತೆ ಇಲ್ಲ, ಅವರು ಸಂತೋಷವಾಗಿ, ಹೆಮ್ಮೆಯಿಂದೊಡಗೂಡಿ ವಿಶ್ ಮಾಡಿಕೊಳ್ಳುತ್ತಿದ್ದಾರೆ, ‘happy April First’!

-ನಗೆ ಸಾಮ್ರಾಟ್

ಟಾಕು ಟೀಕು ತಾರಾನಾಥ

13 ಮಾರ್ಚ್

ಇಂಜಿನಿಯರಿಂಗ್ ಓದಿಕೊಳ್ಳುತ್ತ ತನ್ನ ಓರಗೆಯ ಗೆಳೆಯರನ್ನು ಕೂಡಿಕೊಂಡು ‘ಸಡಗರ’ ಎಂಬ ಸಣ್ಣದೊಂದು ಮಾಸಪತ್ರಿಕೆಯನ್ನು ಕಳೆದ ಒಂದು ವರ್ಷದಿಂದ ATgAAAB1OtHeNNbJAjB6kEYZkQx1sI6fRkj7Z_AEdZaDUj-PrbID2cxZkt_B3jDu_s8uV9cazNPsYx4g5-ifFW-aw6gkAJtU9VA_OqFoXWvKxVaBRnb342R7bVptRw.jpg ನಡೆಸುತ್ತಿರುವವರು ಸುಪ್ರೀತ್.ಕೆ.ಎಸ್. ಹದಿಹರೆಯದ ಹುಮ್ಮಸ್ಸು, ಹಸಿಯಾದ ಕ್ರಿಯಾ ಶೀಲತೆ ಪತ್ರಿಕೆಯ ಪ್ರತಿ ವಿಭಾಗದಲ್ಲೂ ಎದ್ದು ಕಾಣುತ್ತದೆ. ‘ಸಡಗರ’ಪತ್ರಿಕೆಯಲ್ಲಿ ಪ್ರಕಟವಾಗುವ ಅವರ ಹಾಸ್ಯ ಬರಹಗಳನ್ನು ನಗೆ ನಗಾರಿ ಡಾಟ್ ಕಾಮ್ ‍ನೊಂದಿಗೆ ಹಂಚಿಕೊಳ್ಳಲು ಒಪ್ಪಿಕೊಂಡಿದ್ದಾರೆ.

ಇದು ಈ ಅಂಕಣಕಾರರ ಐದನೆಯ ಲೇಖನ.
ಹಿಂದಿನ ಲೇಖನ ಇಲ್ಲಿದೆ.

ಆಗಿನ ನಮ್ಮ ಬದುಕಿನ ಸ್ಥಿತಿಯೇ ವಿಚಿತ್ರವಾಗಿರುತ್ತಿತ್ತು. ನಾಡು ಹೋಗು ಎನ್ನುವ ಹಾಗೂ ಕಾಡು ಬಾ ಎನ್ನುವ ಸ್ಥಿತಿಯಂಥದ್ದೇ. ಆದರೆ ಇಲ್ಲಿನ ವ್ಯತ್ಯಾಸ ಅಂದರೆ ನಾವು ಬಂದದ್ದು ನಮ್ಮೂರುಗಳಿಂದ ಈ ಮಾಯಾನಗರಿಗೆ. ಊರಿನಲ್ಲಿ ಉಂಡುಟ್ಟು ಕುಣಿದಾಡಿದ ಮನೆ ಬಿಟ್ಟು ಅಬ್ಬೇಪಾರಿಗಳಂತೆ ಕೆಲಸ ಅರಸಿಕೊಂಡು ಈ ಊರು ಸೇರಿಕೊಂಡಿದ್ದೆವು. ನಮ್ಮಂತಹ ನಾಲ್ಕಾರು ಅಬ್ಬೇಪಾರಿಗಳು ಸೇರಿ ಈ ಭಯಂಕರ ರಾಕ್ಷಸನಂತಹ ನಗರಿಯಲ್ಲಿ ಪುಟ್ಟದೊಂದು ರೂಮು ಮಾಡಿಕೊಂಡು, ಮನೆಯಿಂದ ತಂದಿದ್ದ ದುಡ್ಡನ್ನು ದಿನಕ್ಕೆರಡು ಬಾರಿ ಎಣಿಸಿಕೊಂಡು ಪಂಚೆಯ ಒಳಗಿನ ಅಂಡರ್ ವೇರಿನ ಪದರಗಳಲ್ಲಿಟ್ಟುಕೊಂಡು ಇದಕ್ಕಿಂತ ಸೇಫ್ ಜಾಗವನ್ನು ಕೊಡುವ ಗ್ಯಾರಂಟಿಯನ್ನು ಆ ಸ್ವಿಸ್ ಬ್ಯಾಂಕಿನವರೂ ಕೊಡಲಾರರು ಎಂದುಕೊಳ್ಳುತ್ತಿದ್ದೆವು!

ಹೆಸರಿಗೆ ನಮ್ಮ ದು ಒಂದೇ ಸೂರು. ಆದರೆ ಅದರಡಿ ಬದುಕುವ ನಮ್ಮಲ್ಲಿ ಚೂರೇ ಚೂರು ರುಚಿ ನೋಡಲಾದರೂ ಸಾಕೆನ್ನುವಷ್ಟೂ ಸಹ ಸಾಮ್ಯತೆಗಳಿರಲಿಲ್ಲ. ಒಬ್ಬೊಬ್ಬನದು ಒಂದೊಂದು ದಿಕ್ಕು. ಒಬ್ಬೊಬ್ಬನದು ಒಂದೊಂದು ಜಗತ್ತು, ಇತರರಿಗೆ ಅದು ಆಪತ್ತಾದರೂ ಅವನಿಗೆ ಅದೇ ಮಹತ್ತು. ಇಂತಹ ಜೀವನ ಶೈಲಿಯನ್ನು ಅಖಂಡ ಐದು ವರ್ಷಗಳ ಕಾಲ ಜೀವಿಸಿರುವ ನನಗೆ ಇದನ್ನು ಕಾಣದ ಜಗತ್ತಿನ ಜನರು ಮಾಡಿರುವ ಅನೇಕ ನುಡಿಗಟ್ಟುಗಳು ಗಮ್ಮತ್ತಿನವಾಗಿ ಕಾಣಿಸುತ್ತವೆ. ‘ಎರಡು ದೇಹ ಒಂದೇ ಜೀವ’ ಅಂತ ಪ್ರೇಮಿಗಳನ್ನು ಕರೆಯುತ್ತಾರೆ. ಈ ನುಡಿಗಟ್ಟನ್ನೇ ಸ್ವಲ್ಪ ತಿರುಚಿ, ಅಲ್ಲಿ ಇಲ್ಲಿ ಕೆರೆದು, ಕೊಂಚ ಹರಿದು ನಮ್ಮ ಆ ದಿನಗಳ ಬದುಕಿಗೆ ಅನ್ವಯಿಸುವುದಾದರೆ, ‘ ಒಂದೇ ದೇಹ, ನಾಲ್ಕು ಜೀವ, ನಾಲ್ಕು ದಿಕ್ಕು’ ಎನ್ನಬಹುದು. ಒಬ್ಬ ದಢೂತಿ ಮಾರ್ವಾಡಿಯನ್ನು ಮಣ್ಣು ಮಾಡಲು ಬೇಕಾದಷ್ಟು ಜಾಗದಲ್ಲಿ ಎಬ್ಬಿಸಿದ ಒಂದು ಬಾಗಿಲಿನ, ಅರ್ಧ ಕಿಟಕಿಯ ರೂಮಿನಲ್ಲಿ ನಾವು ನಾಲ್ಕು ಮಂದಿ ಇರುತ್ತಿದ್ದೆವು. ರಾತ್ರಿ ಎಲ್ಲರೂ ಮಲಗಿದಾಗ ನಮ್ಮನ್ನು ಯಾರಾದರೂ ದೂರದಿಂದ ನೋಡಿದರೇ ಅಲ್ಲಿರುವುದು ಒಂದೇ ದೇಹವೆನ್ನಬೇಕು ಹಾಗೆ ಇಬ್ಬರನ್ನೊಬ್ಬರು ಒತ್ತಿಕೊಂಡು, ಒಬ್ಬನ ಕಾಲೊಳಗೆ ಮತ್ತೊಬ್ಬ ಹೊಸೆದುಕೊಂಡು ಬಿದ್ದುಕೊಂಡಿರುತ್ತಿದ್ದೆವು. ರಾತ್ರಿಗಳಲ್ಲಿ ಹೀಗೆ ನಾಲ್ಕು ದೇಹಗಳು ಒಂದೇ ಎನ್ನುವಂತೆ ಬೆಸೆದು, ಹೊಸೆದು, ಮಸೆದುಕೊಳ್ಳುತ್ತಿದ್ದರೂ ಒಮ್ಮೆ ಬೆಳಗಿನ ಅಲಾರಾಂ ಕೂಗಿ (ಈ ನಗರಿಯಲ್ಲಿ ಕೂಗಲಿಕ್ಕೆ ಕೋಳಿಗಳಾದರೂ ಎಲ್ಲಿವೆ?)ದರೆ ಸಾಕು ಒಂದೊಂದು ಜೀವ ಒಂದೊಂದು ದಿಕ್ಕಿನೆಡೆಗೆ ಮುಖ ಮಾಡಿರುವುದು, ಒಬ್ಬೊಬ್ಬರೂ ಒಂದೊಂದು ಧೃವಗಳಾಗಿರುವುದು ಗೋಚರವಾಗುತ್ತದೆ.

ಇದೊಂದು ಕೆಟ್ಟ ಅಭ್ಯಾಸ ಬೆಳೆದು ಬಿಟ್ಟಿದೆ ನೋಡಿ, ಹೇಳಬೇಕಾದ ಸಂಗತಿಗೆ ಸವಿಸ್ತಾರವಾದ ಪೀಠಿಕೆ ಹಾಕುತ್ತಾ ವಿಷಯವನ್ನೇ ಮರೆತುಬಿಡುವ ಚಾಳಿ. ನಾನು ಹೇಳ ಹೊರಟದ್ದು ಐದು ವರ್ಷದ ನಮ್ಮ ನಾಲ್ವರ ಗುಂಪಿನಲ್ಲಿದ್ದ ನಮ್ಮ ತಾರಾನಾಥನ ಬಗ್ಗೆ, ಆದರೆ ಪೀಠೆಕೆಯೇ ಇಲ್ಲಿಯವರೆಗೆ ಕಾಲು ಚಾಚಿಕೊಂಡು ಬಿಟ್ಟಿತು. ಸರಿ, ಇನ್ನು ತಾರಾನಾಥನ ವಿಷಯಕ್ಕೆ ಬರೋಣ.

ತಾರಾನಾಥ ಅತ್ತ ಎತ್ತರದ ತೆಂಗಿನ ಮರವೂ ಅಲ್ಲ ಇತ್ತ ಗಿಡ್ಡಗಿನ ತುಂಬೇ ಗಿಡವೂ ಅಲ್ಲ. ಆತ ಬಣ್ಣ ಅತ್ತಕಡೆ ಗೋಡೆ ಮೇಲಿನ ಸುಣ್ಣವೂ ಅಲ್ಲ, ಇತ್ತ ಬಚ್ಚಲು ಮನೆಯ ಇದ್ದಿಲೂ ಅಲ್ಲ. ಆತನ ಮುಖ ಲಕ್ಷಣ ಅತ್ತ ಗಂಡಸಿನ ಹಾಗೂ ಇರಲಿಲ್ಲ, ಇತ್ತ ಹೆಣ್ಣಿಗನ ಹಾಗೂ ಇರಲಿಲ್ಲ. ಆತನ ಕೂದಲು ಅತ್ತ ನೀಳವಾಗಿಯೂ ಇರಲಿಲ್ಲ, ಇತ್ತ ವಿರಳವಾಗಿಯೂ ಇರಲಿಲ್ಲ. ಅವನ ಮೂಗು… ಇದೇನಿದು ಅತ್ತ ಹಾಗೂ ಇರಲಿಲ್ಲ, ಇತ್ತ ಹೀಗೂ ಇರಲಿಲ್ಲ ಅಂತ ಬರೀ ‘ಇಲ್ಲ’ಗಳನ್ನೇ ಪಟ್ಟಿ ಮಾಡುತ್ತಿರುವಿರಲ್ಲಾ ಎನ್ನುವಿರಾ? ಏನು ಮಾಡುವುದು ದೇವರನ್ನು ವಿವರಿಸುವಾಗ ನನ್ನಪ್ಪ ಅತನು ಅದೂ ಅಲ್ಲ, ಇದೂ ಅಲ್ಲ ಅಂತ ಹೇಳುತ್ತಿದ್ದದ್ದನ್ನು ಕೇಳಿ ಕೇಳಿ ನನಗೆ ಈ ಅಭ್ಯಾಸ ಹತ್ತಿಕೊಂಡಿ ಬಿಟ್ಟಿದೆ. ಇರಲಿ, ತಾರಾನಾಥ ಎಂಬ ಸಾಕಷ್ಟು ಉದ್ದವಾದ ಹೆಸರಿಗೆ ನಾವು ನಾಲ್ಕು ಅಕ್ಷರ ಹೆಚ್ಚಾಗಿ ಸೇರಿಸಿದ್ದೆವು. ಅವನನ್ನು ನಾವು ಟಾಕು ಟೀಕು ತಾರಾನಾಥ ಎಂದು ಕರೆಯುತ್ತಿದ್ದೆವು. ಅದಕ್ಕೆ ಕಾರಣ ಆತನ ಒಪ್ಪ ಓರಣ, ನಮಗೆ ಸುಸ್ತು ಹೊಡೆಸುತ್ತಿದ್ದ ಆತನ ಶಿಸ್ತು.

ಮನೆಯೆಂಬ ಸೇನಾ ಶಿಬಿರದಲ್ಲಿ ಸೇನಾಧಿಪತಿಯಂತಹ ಅಪ್ಪಂದಿರು ಇದ್ದಾಗಲೇ ನಾನು ಹಾಗೂ ನಮ್ಮ ನಾಲ್ವರ ಗುಂಪಿನ ಮತ್ತಿಬ್ಬರು ‘ರೂಂ ಪಾಠಿ’ಗಳು (ಸಹಪಾಠಿಗಳು ಇದ್ದಂತೆ) ಶಿಸ್ತು ಕಲಿಯದವರು ನಾವು. ಹಾಕಿಕೊಳ್ಳುವ ಬಟ್ಟೆ, ನಮ್ಮ ಊಟ, ತಿಂಡಿ, ಚಹಾ, ಕೆಲಸ, ಓದು, ಪುಸ್ತಕ-ಬ್ಯಾಗು ಯಾವುದನ್ನೂ ಒಪ್ಪವಾಗಿಟ್ಟುಕೊಳ್ಳದ ನಾವು ಹುಟ್ಟುತ್ತಲೇ ಬಂಡಾಯ ಎದ್ದವರು. ವ್ಯವಸ್ಥಿತವಾಗಿದ್ದ ಯಾವುದನ್ನು ಕಂಡರೂ ನಮ್ಮ ನೆಮ್ಮದಿ ಹಾಳಾಗಿ ಹೋಗುತ್ತಿತ್ತು. ಓರಣವಾಗಿ ಜೋಡಿಸಿಟ್ಟ ಸಾಮಾನುಗಳನ್ನೆಲ್ಲಾ ಕೆದರಿ, ಮನೆಯ ತುಂಬೆಲ್ಲಾ ಹರಡಿ ಅಮ್ಮ ಗಾಬರಿಯಾಗುವಂತೆ ಮಾಡಿದಾಗಲೇ ನಮ್ಮ ಮನಸ್ಸಿಗೆ ತೃಪ್ತಿ, ಏನನ್ನೋ ಸಾಧಿಸಿದ ಸಾರ್ಥಕತೆ. ನಮ್ಮ ಪೂರ್ವಾಶ್ರಮದ ಗುಣಲಕ್ಷಣಗಳು ಹೀಗಿರುವಾಗ ನಮಗೆ ಟಾಕು-ಟೀಕು ತಾರಾನಾಥನಂತಹ ಜೀವಿಯನ್ನು ನೋಡಿ ನಮ್ಮ ಕಣ್ಣುಗಳ ಮೇಲೇ ಸಂಶಯ ಬಂದಿತ್ತು.

ಆಗಿನ್ನೂ ನಮ್ಮ ಹತ್ತೂ ಬೈ ಹತ್ತರ ರೂಮಿನಲ್ಲಿ ಮೂರು ಮಂದಿ ಇದ್ದೆವು. ಎಂದಾದರೊಮ್ಮೆ ಪರಮ ಅವ್ಯವಸ್ಥೆಯ ಗೂಡಾದ ಊರ ಮೀನು ಮಾರುಕಟ್ಟೆಯ ಮೇಲೆ ಆ ದಯಾಮಯಿಯಾದ ದೇವರಿಗೆ ಸಡನ್ನಾದ ಪ್ರೀತಿ ಬಂದು ಅದಕ್ಕೆ ಓಡಾಡುವ ಚೈತನ್ಯ ಕೊಟ್ಟು, ನೋಡಲು ಎರಡು ಕಣ್ಣು ಕೊಟ್ಟು ನಮ್ಮ ರೂಮು ನೋಡಲು ಕಳುಹಿಸಿದರೆ ಅದು ನಮ್ಮ ರೂಮಿನ ಅವವ್ಯವಸ್ಥೆ, ಗಲೀಜು ನೋಡಿ ನಾಚಿ ಓಡಿಬಿಡುತ್ತಿತ್ತೇನೊ! ಹೀಗಿರುವಾಗ ನಮ್ಮ ಈ ಗೂಡಿಗೆ ಸೇರ್ಪಡೆಯಾದವನು ತಾರಾನಾಥ. ನಮ್ಮ ರೂಮಿನೊಳಕ್ಕೆ ಕಾಲಿಟ್ಟ ಕ್ಷಣವೇ ಆತ ಕಣ್ಣು ಕತ್ತಲೆಬಂದು ಬಿದ್ದುಬಿಟ್ಟ. ಸ್ವಲ್ಪ ಸಮಯ ಕಳೆದು ಸುಧಾರಿಸಿಕೊಂಡು ಕಣ್ಣುಬಿಟ್ಟು ನೋಡಿದವನಿಗೆ ನಮ್ಮ ರೂಮಿನ ವಿರಾಟ್ ರೂಪ ದರ್ಶನವಾಗಿ ಕಣ್ಣಲ್ಲಿ ರಕ್ತ ಬಂದಂತಾಯಿತು. ಆದರೂ ಅವನ ಶಕ್ತಿಯನ್ನು ಮೆಚ್ಚಲೇ ಬೇಕು, ಆ ನಯನ ಕಠೋರವಾದ ವಿರಾಟ್ ರೂಪದ ದರ್ಶನವನ್ನು ಸಹಿಸಿಕೊಂಡು ಯಾವ ಮುನ್ಸೂಚನೆಯೂ ಇಲ್ಲದೆ ನಾವು ಮೂರು ಜನರನ್ನೂ ರೂಮಿನಿಂದ ಹೊರಕ್ಕೆ ಅಟ್ಟಿ ರೂಮಿನ ಬಾಗಿಲನ್ನು ಒಳಗಿನಿಂದ ಜಡಿದುಕೊಂಡ.

ಒಂದು ತಾಸಾದರೂ ಮಹಾನುಭಾವ ಬಾಗಿಲು ತೆರೆಯಲೇ ಇಲ್ಲ. ನಮಗೆಲ್ಲಾ ಈತ ಒಳಗೇನು ಮಾಡಿಕೊಳ್ಳುತ್ತಾನೋ ಎನ್ನುವ ಭಯ. ಆದರೆ ಏನನ್ನೂ ಮಾಡಲಾಗದ ಶಾಕ್‌ನಿಂದ ಇನ್ನೂ ಚೇತರಿಸಿಕೊಳ್ಳಲಾಗಿರಲಿಲ್ಲ. ಸರಿಯಾಗಿ ಎರಡು ತಾಸು ಕಳೇದ ನಂತರ ಬಾಗಿಲು ತೆರೆದ. ಗಾಬರಿಯಿಂದ ರೂಮಿನೊಳಕ್ಕೆ ನಾವು ನುಗ್ಗಿದೆವು. ಈಗ ರೂಮನ್ನು ನೋಡಿ ಮೂರ್ಛೆ ಬೀಳಬೇಕಾದ ಸರದಿ ನಮ್ಮದಾಗಿತ್ತು. ಅಥವಾ ಈಗಾಗಲೇ ನಾವು ಹೃದಯಾಘಾತವಾಗಿ ಸತ್ತು ನೇರವಾಗಿ ಬಂದು ಸ್ವರ್ಗವನ್ನು ನೋಡುತ್ತಿದ್ದೇವೇನೊ ಎನ್ನುವ ಭ್ರಮೆಯಾಯಿತು. ಕೇವಲ ಎರಡು ತಾಸಿನ ಕೆಳಗೆ ಅಪ್ಪಟ ಕೊಳಗೇರಿಯಂತಿದ್ದ ನಮ್ಮ ರೂಮು ಸಾಕ್ಷಾತ್ ಇಂದ್ರದೇವನ ಅಮರಾವತಿಯಂತಾಗಿಬಿಟ್ಟಿತ್ತು! ನಮ್ಮ ಈ ಹೊಸ ‘ಅಮರಾವತಿಯ’ ಇಂದ್ರ ತಾರಾನಾಥ ಬೆಳ್ಳಿ ಬಣ್ಣದ ಬನಿಯನ್ನು, ಅದಕ್ಕೆ ಬಿಳುಪಿನಲ್ಲಿ ಸ್ಪರ್ಧೆ ಒಡ್ಡುವ ಪಂಚೆ ಸುತ್ತಿಕೊಂಡು ನಮ್ಮೆದುರು ನಿಂತಿದ್ದ.

ಆಮೇಲಿನ ಒಂದು ವಾರ ನಾವು ಈ ‘ಅನ್ಯಗ್ರಹ ಜೀವಿ’ಯ ಚರ್ಯೆಗಳನ್ನು ಕುತೂಹಲದಿಂದ ಗಮನಿಸುವುದರಲ್ಲೇ ಕಳೆದುಬಿಟ್ಟೆವು. ಬೆಳಿಗ್ಗೆ ಎಂದೂ ಸೂರ್ಯನಿಗಿಂತ ಮುಂಚೆ ಏಳುವ ಅಪರಾಧ ಮಾಡದ ನಮಗೆ ಬೆಳಿಗ್ಗೆ ಮೂರು ಘಂಟೆಗೇ ಈತ ಇಟ್ಟ ಅಲರಾಮಿನ ಬಡಿತ ಮರಣ ಮೃದಂಗವಾಗಿ ಕೇಳುತ್ತಿತ್ತು. ಮೂರು ಗಂಟೆಗೆ ಒಂದು ಸೆಕೆಂಡು ಆಚೆ, ಒಂದು ಸೆಕೆಂಡು ಈಚೆ ಇಲ್ಲ ಎನ್ನುವಂತೆ ಏಳುತ್ತಿದ್ದ ತಾರಾನಾಥ ನೇರವಾಗಿ ನಮ್ಮ ರೂಮಿನ ಸ್ನಾನದ ಸೆಕ್ಷನ್‌ಗೆ ನಡೆಯುತ್ತಿದ್ದ. ಅಲ್ಲಿ ಹಿಂದಿನ ರಾತ್ರಿಯೇ ಭರ್ತಿ ಬಕೆಟ್ ನೀರು ತುಂಬಿಸಿಟ್ಟಿರುತ್ತಿದ್ದ, ಗರಿಗರಿಯಾದ ಟವೆಲ್ಲು, ಸ್ನಾನವಾದ ನಂತರ ಹಾಕಿಕೊಳ್ಳಬೇಕಾದ ಬನಿಯನ್ನು ಲುಂಗಿ, ಅಂಡರ್ವೇರುಗಳನ್ನು ಹಿಂದಿನ ರಾತ್ರಿಯೇ ಜೋಡಿಸಿಟ್ಟಿರುತ್ತಿದ್ದ. ಎಚ್ಚರವಾದ ಕೂಡಲೇ ರೋಬೊಟ್‌ನ ಹಾಗೆ ಸ್ನಾನದ ಸೆಕ್ಷನ್‌ಗೆ ಹೋಗಿ ಸ್ನಾನ ಆರಂಭಿಸಿಬಿಡುತ್ತಿದ್ದ. ನಿಖರವಾಗಿ ಎರಡು ವರೆ ಚೊಂಬು ನೀರು ಮೈ ಮೇಲೆ ಬಿದ್ದ ಕೂಡಲೆ ಸ್ವಲ್ಪ ಕಾಲ ಮೌನ. ಆಗ ಆತನ ಮೈಗೆ ಸೋಪು ತಿಕ್ಕಿಕೊಳ್ಳುತ್ತಿದ್ದ. ಸರಿಯಾಗಿ ಎರಡು ನಿಮಿಷದ ನಂತರ ಮತ್ತೆ ನಾಲ್ಕು ಚೊಂಬು ನೀರು ಮೈ ಮೇಲೆ ಸುರಿದ ಸದ್ದು. ಮತ್ತೆ ಮೌನ. ಆಗ ಮತ್ತೊಮ್ಮೆ ಆತ ಮೈಗೆ ಸೋಪು ಹಚ್ಚುತ್ತಿದ್ದಾನೆ ಎಂದು ತಿಳಿಯಬೇಕು. ಇದಾದ ನಂತರ ಆರು ಚೊಂಬು ನೀರು. ಇಷ್ಟಾಗುತ್ತಿದ್ದಂತೆಯೇ ಹದಿನೈದು ನಿಮಿಷವಾಗುತ್ತಿತ್ತು. ಆತ ಹಿಂದಿನ ದಿನ ತೊಟ್ಟುಕೊಂಡಿದ್ದ ಬನೀನು, ಪಂಚೆಯನ್ನು ಅದೇ ಬಕೆಟ್ಟಿನಲ್ಲಿ ನೆನೆ ಹಾಕಿ ಮೊದಲೇ ಜೋಡಿಸಿಟ್ಟುಕೊಂಡಿದ್ದ ಬನೀನು, ಪಂಚೆ ತೊಟ್ಟುಕೊಂಡು ಹೊರಬರುತ್ತಿದ್ದ.

ಸ್ನಾನ ಮುಗಿಸಿದ ನಂತರ ಹಿಂದಿನ ರಾತ್ರಿಯೇ ತುಂಬಿಟ್ಟುಕೊಂಡ ಬಿಸ್ಲೇರಿ ಬಾಟಲಿಯಲ್ಲಿ ಕಾಲು ಭಾಗದಷ್ಟು ನೀರನ್ನು ಕುಡಿದು ರೂಮಿನ ಒಂದು ಮೂಲೆಯಲ್ಲಿದ್ದ ದೇವರ ಫೋಟೊ ಮುಂದೆ ಕುಳಿತುಕೊಳ್ಳುತ್ತಿದ್ದ. ಆಮೇಲಿ ಒಂದು ತಾಸು ಅಖಂಡವಾದ ಪೂಜೆ. ಅವನ ಭಕ್ತಿ, ಭಾವಕ್ಕಿಂತಲೂ ದೇವರ ಮೂಲೆಯನ್ನು ಒಪ್ಪವಾಗಿಸುತ್ತಿದ್ದ ರೀತಿ, ಊದಿನಬತ್ತಿ ಹಚ್ಚಿಡುವ ಶೈಲಿ, ಒಂದು ಹನಿ ಎಣ್ಣೆ ನೆಲಕ್ಕೆ ಬೀಳದ ಹಾಗೆ ಹಚ್ಚಿಡುತ್ತಿದ್ದ ದೀಪ, ಹಿಂದಿನ ರಾತ್ರಿ ಮಲಗುವ ಮುನ್ನವೇ ಪಕ್ಕದ ಮನೆಯ ಗಿಡದಿಂದ ಕಿತ್ತು ತಂಡಿಟ್ಟುಕೊಂಡ ದಾಸವಾಳದ ಅರೆಬಿರಿದ ಮೊಗ್ಗು – ಇವನ್ನೆಲ್ಲಾ ನೋಡಿಯೇ ದೇವರು ಪ್ರತ್ಯಕ್ಷವಾಗಿಬಿಡಬೇಕು! ಒಂದು ತಾಸಿನ ಪೂಜೆಯೆಂದರೆ ಕರೆಕ್ಟಾಗಿ ಒಂದೇ ತಾಸು. ಅನಂತರ ಇನ್ನೊಂದು ಐದು ನಿಮಿಷ ಇರಯ್ಯಾ ಅಂತ ಸಾಕ್ಷಾತ್ ಆ ಆಂಜನೇಯನೇ ಹೇಳಿದರೂ ಈತ ನಿಲ್ಲುವುದಿಲ್ಲ. ನೇರವಾಗಿ ಬಚ್ಚಲಿಗೆ ಹೋಗಿ ನೆನೆಸಿಟ್ಟಿದ್ದ ಬಟ್ಟೆ ಒಗೆದು ರೂಮಿನ ಹೊರಗೆ ಒಣಗಲು ಹರವಿ ಚಪ್ಪಲಿ ಮೆಟ್ಟಿ ಹೊರಗೆ ವಾಕಿಂಗ್ ಹೊರಟು ಬಿಡುತ್ತಿದ್ದ. ರೂಮಿನ ಬಾಗಿಲ ಬಳಿ ಆತ ಚಪ್ಪಲಿಬಿಡುವ ಸದ್ದು ಕೇಳಿತೆಂದರೆ ಸಮಯ ಐದು ಗಂಟೆಯಾಯಿತೆಂದೇ ಅರ್ಥ!

ವಾಕಿನಿಂದ ಹಿಂದಿರುಗಿ ಬರುವಾಗ ಪಕ್ಕದ ಮನೆಯ ಎದುರು ಬಿದ್ದಿರುತ್ತಿದ್ದ ದಿನಪತ್ರಿಕೆಯನ್ನು ಅನಾಮತ್ತಾಗಿ ಎತ್ತಿಕೊಂಡು ಬಂದಿರುತ್ತಿದ್ದ. ಸರಿಯಾಗಿ ನಲವತ್ತೈದು ನಿಮಿಷ ಪೇಪರ್ ಓದಿ ಅದನ್ನು ಮತ್ತೆ ಅದರ ಸ್ವಸ್ಥಾನದಲ್ಲಿಯೇ ಎಸೆದು ಬಂದು ಈತ ಕೂರುವುದಕ್ಕೆ ಸರಿಯಾಗಿ ಪಕ್ಕದ ಮನೆಯವರು ಬಾಗಿಲು ತೆರೆಯುತ್ತಿದ್ದರು.

ಇದದ್ದು ಒಂದೇ ಕೋಣೆಯಾದರೂ ಅದರಲ್ಲಿ ನಾಲ್ಕು ಕಂಪಾರ್ಟ್ ಮೆಂಟುಗಳನ್ನಾಗಿ ಮಾಡಿಕೊಂಡು ನಾವು ನಾಲ್ಕು ಮಂದಿ ನಮ್ಮ ಸಾಮಾನು ಸರಂಜಾಮುಗಳನ್ನು ಜೋಡಿಸಿಟ್ಟುಕೊಳ್ಳುತ್ತಿದ್ದೆವು. ನಮ್ಮ ಶಿಸ್ತೋ, ಆ ದೇವರಿಗೇ ಪ್ರೀತಿ. ಲಾಠಿಚಾರ್ಜ್ ಆದಾಗ ಚದುರಿದ ಜನರ ಗುಂಪಿನಂತೆ ನಮ್ಮ ಚೀಲಗಳು, ಅಂಗಿ, ಬನಿಯನ್ನು, ಪ್ಯಾಂಟು, ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದವು. ಆದರೆ ಆ ಒಂದು ಮೂಲೆ ಮಾತ್ರ ನಿಗಿನಿಗಿ ಹೊಳೆಯುವಷ್ಟು ಚೊಕ್ಕಟವಾಗಿರುತ್ತಿತ್ತು. ಅದು ತಾರಾನಾಥನದು ಅಂತ ಪ್ರತ್ಯೇಕವಾಗಿ ಹೇಳಬೇಕೆ? ಆರುಗಂಟೆಗೆ ತನ್ನ ಸ್ಥಳವನ್ನು ಸ್ವಚ್ಛ ಮಾಡಲು ಕೂರುತ್ತಿದ್ದ ತಾರಾನಾಥ ಏಕಾಗ್ರ ಚಿತ್ತನಾಗಿ, ತಪಸ್ಸು ಮಾಡುವ ಯೋಗಿಯ ಹಾಗೆ ಸುಮಾರು ಒಂದು ತಾಸು ಅದರಲ್ಲೇ ತಲ್ಲೀನನಾಗುತ್ತಿದ್ದ. ಹಿಂದಿನ ದಿನವಷ್ಟೇ ಜೋಡಿಸಿಟ್ಟ ಬಟ್ಟೆ, ಪುಸ್ತಕ, ಸೂಟಕೇಸುಗಳನ್ನು ಮತ್ತೆ ಜರುಗಿಸಿ ಧೂಳು ಒರೆಸಿ, ನೀಟಾಗಿ ಜೋಡಿಸಿಡುತ್ತಿದ್ದ. ಆತ ಆ ದೈನಂದಿನ ಕ್ರಿಯೆ ಮುಗಿಸಿ ಮುಖ ಕೈಕಾಲು ತೊಳೆದು ನಮ್ಮನ್ನು ನಿದ್ರಾಲೋಕದಲ್ಲಿ ಮುಳುಗಿ ತೇಲಿ ಓಲಾಡುತ್ತಿದ್ದ ನಾವು ಮೂರು ಮಂದಿಯನ್ನು ಎಬ್ಬಿಸಲು ಆರಂಭಿಸುತ್ತಿದ್ದ. ಆತ ನಮ್ಮನ್ನು ಏಳಿಸಲು ಬಳಸುತ್ತಿದ್ದ ವಿಧಾನವೂ ಬಲೇ ಮಜವೆನಿಸುವಂಥದ್ದು. ಮೂರ್ನಾಲ್ಕು ಸಲ ‘ಎದ್ದೇಳ್ರೋ ಬೆಳಕಾಯ್ತು…’ ಅನ್ನುತ್ತಿದ್ದ ಸಮಯ ಇನ್ನೂ ಏಳೇ ಗಂಟೆ ಆಗಿದ್ದರೂ ‘ಎಂಟುಗಂಟೆಯಾಯ್ತು, ಒಂಭತ್ತು ಗಂಟೆಯಾಯ್ತು’ ಅಂತ ಹೆದರಿಸುತ್ತಿದ್ದ ಮೊದ ಮೊದಲು ಆತನ ಈ ತಂತ್ರಕ್ಕೆ ಬಲಿಬಿದ್ದು ನಾವು ಎದ್ದು ಬಿದ್ದು ಹೊರಡಲು ಸಿದ್ಧರಾಗುತ್ತಿದ್ದೆವು. ನಂತರದ ದಿನಗಳಲ್ಲಿ ಆತನ ಉಪಾಯ ತಿಳಿದು ಯಾವ ಭಯವೂ ಇಲ್ಲದೆ ಮಲಗಿರುತ್ತಿದ್ದೆವು. ಆಗ ಆತ ದಬದಬನೆ ಸದ್ದು ಮಾಡುತ್ತಾ ನಮ್ಮ ಕಿವಿಗಳಿಗೆ ಮರಣ ಮೃದಂಗದ ದನಿ ಕೇಳಿಸುವಂತೆ ಸದ್ದು ಮಾಡುತ್ತಾ ಅತ್ತಿಂದಿತ್ತ ಓಡಾಡುತ್ತಿದ್ದ. ಧಡಾರನೆ ಬಾಗಿಲು ಕಿಟಕಿ ಘರ್ಷಿಸಿ ‘ಕುಂಭಕರ್ಣ’ರನ್ನು ಏಳಿಸಲು ಪ್ರಯತ್ನಿಸುತ್ತಿದ್ದ. ಇದೆಲ್ಲಾ ಫಲ ಕೊಡದಿದ್ದರೆ ಕಟ್ಟ ಕಡೆಯ ಅಸ್ತ್ರವೆಂಬಂತೆ ತನ್ನ ‘ಕೋಕಿಲ’ ಕಂಠದಿಂದ ಹಾಡು ಗುನುಗಲು ಶುರುಮಾಡಿಬಿಡುತ್ತಿದ್ದ! ಆತ ಸಂಗೀತ ಕಛೇರಿಯ ಅಬ್ಬರ, ಬರ್ಬರತೆಗೆ ಮಣಿದು ನಾವು ಏಳದಿದ್ದರೆ ನಮ್ಮ ಕಿವಿಗಳಿಂದ ರಕ್ತ ಹರಿಯುತ್ತಿದ್ದದ್ದು ಗ್ಯಾರಂಟಿ.

ನಾವು ಮೂರೂ ಮಂದಿ ಒಟ್ಟಿಗೇ ಎದ್ದು ಹಲ್ಲುಜ್ಜಲು, ನಿತ್ಯ ಕರ್ಮ ತೀರಿಸಲು ಒಬ್ಬರಿಗೊಬ್ಬರು ಸ್ಪರ್ಧೆಯೊಡ್ಡುತ್ತ ಭೀಕರ ಕಾಳಗದಲ್ಲಿ ಮುಳುಗಿರುವಾಗ ತಾರಾನಾಥ ತನ್ನ ಸೂಟ್ ಕೇಸಿನಲ್ಲಿ ಗರಿ ಮುರಿಯದ ಹಾಗೆ ಮಡಚಿಟ್ಟ ಬಟ್ಟೆಯನ್ನು ಕೇರ್ ಫುಲ್ಲಾಗಿ ಹೊರತೆಗೆದು ಡ್ರೆಸ್ಸಿಂಗ್ ಶುರುಮಾಡಿಕೊಳ್ಳುತ್ತಿದ್ದ. ಆಹಾ… ಅವನ ಡ್ರೆಸ್ಸಿಂಗ್ ಸಂಪ್ರದಾಯವನ್ನು ನೋಡಲು ಎರಡು ಕಣ್ಣುಗಳೂ ಸಾಲದಾಗಿದ್ದವು. ಮಾರ್ನಿಂಗ್ ಶೋ ಸಿನೆಮಾಗೆಂದು ಮೇಕಪ್ ಶುರುಮಾಡುವ ಹೆಣ್ಣು ಮಕ್ಕಳು ಸೆಕೆಂಡ್ ಶೋ ಹೊತ್ತಿಗೆ ರೆಡಿಯಾಗುವಷ್ಟಲ್ಲದಿದ್ದರೂ ಅವರಿಗಿಂತ ಕಡಿಮೆಯಿಲ್ಲ ಎನ್ನುವಂತೆ ಆತ ರೆಡಿಯಾಗುತ್ತಿದ್ದ. ಸ್ನಾನ ಮಾಡಿ ಇನ್ನೂ ಮೈಯ ಮೇಲಿನ ತೇವ ಆರಿರದಿದ್ದರೂ ತಾರಾನಾಥ ಡ್ರೆಸ್ ಮಾಡಿಕೊಳ್ಳುವ ಮೊದಲು ಎರಡೆರಡು ಬಾರಿ ಸೋಪ್ ಹಾಕಿ ಮುಖ ತೊಳೆಯುತ್ತಿದ್ದ. ನಾವೆಲ್ಲ ಗುಬ್ಬಿಯ ಹಿಕ್ಕೆ ಅಂತ ಛೇಡಿಸುತ್ತಿದ್ದ ‘ಫೇರ್ ಅಂಡ್ ಲವ್ಲಿ’ಯನ್ನು ಒಂದು ಕೋಟ್ ಬಳಿದುಕೊಳ್ಳುತ್ತಿದ್ದ. ಅದರ ಮೇಲೆ ಪೌಡರ್. ಬಗಲುಗಳಿಗೆ ಸೂಟ್ ಕೇಸಿನಲ್ಲಿ ಬಚ್ಚಿಟ್ಟುಕೊಂಡಿರುತ್ತಿದ್ದ ವಿದೇಶಿ ಪರ್ ಫ್ಯೂಮ್. ಇದೆಷ್ಟು ನಡೆಯುವಷ್ಟರಲ್ಲಿ ನಮ್ಮ ನಿತ್ಯ ಕರ್ಮಗಳೆಲ್ಲಾ ಮುಗಿದು ಆಫೀಸಿಗೆ ಹೊರಡಲು ತಯಾರಾಗಿರುತ್ತಿದ್ದೆವು!

ಬಟ್ಟೆ-ಬರೆ, ತಿನ್ನುವ ಪದಾರ್ಥ, ಜೀವನ ಪದ್ಧತಿಗಳಲ್ಲಿ ತಾರಾನಾಥ ಪಾಲಿಸುತ್ತಿದ್ದ ಟಾಕು ಟೀಕನ್ನು ಲೇವಡಿ ಮಾಡುತ್ತಿದ್ದ ನಾವು ದುಡ್ಡಿನ ವಿಚಾರದಲ್ಲಿನ ಆತನ ಲೆಕ್ಕ ತಪ್ಪದ ವಿವೇಕ, ಮಾತುಗಾರಿಕೆಯಲ್ಲಿನ ತೂಕ ಹಾಗೂ ಸಮಯ ಪಾಲನೆಯನ್ನು ಮಾತ್ರ ಪರೋಕ್ಷವಾಗಿ ಗೌರವಿಸುತ್ತಿದ್ದೆವು. ಶೀತವಾದಾಗ ಕಟ್ಟಿಕೊಂಡ ಮೂಗಿನಿಂದ ಸಿಂಬಳವನ್ನು ಸೀಟಿ ತೆಗೆದು ರೊಪ್ಪನೆ ನೆಲಕ್ಕೆ ಒಗೆಯುವಂತೆ ಹಣವನ್ನು ಖರ್ಚು ಮಾಡುತ್ತಿದ್ದ ನನಗೂ, ಮಾತಿಗೆ ಕುಳಿತರೆ ಎದುರಿಗಿರುವವನ ತೆಲೆ ಹೋಳಾಗಿ ಮೆದುಳು ಈಚೆ ಬಂದರೂ ಮಾತು ನಿಲ್ಲಿಸದ ರಂಗನಿಗೂ, ಸಮಯ ಪಾಲನೆಯಲ್ಲಿ ನಮ್ಮ ರೈಲುಗಳಿಗೇ ಪಾಠ ಹೇಳಿಕೊಡುವಷ್ಟು ಪಂಡಿತನಾದ, ಸಮಯಕ್ಕೆ ಸರಿಯಾಗಿ ಯಾವ ಕೆಲಸವನ್ನೂ ಮಾಡದ, ಹುಟ್ಟುವಾಗಲೇ ಒಂದು ತಿಂಗಳು ಲೇಟಾಗಿ ಹುಟ್ಟಿದ್ದ ಪ್ರಕಾಶನಿಗೂ ತಾರಾನಾಥ ಅನೇಕ ವಿಷಯಗಳಲ್ಲಿ ಆದರ್ಶನಾಗಿದ್ದ. ನಾವೆಲ್ಲರೂ ಹೊರಗೆ ಆತನನ್ನು ರೇಗಿಸಿ ಆಡಿಕೊಳ್ಳುತ್ತಿದ್ದರೂ ಅಂತರಂಗದಲ್ಲಿ ಆತನ ಟೀಕು-ಟಾಕಿನ ಆರಾಧಕರಾಗಿದ್ದೆವು. ಆತನಂತಾಗಬೇಕು ಎಂತ ದಿನಕ್ಕೆ ಹತ್ತಾರು ಬಾರಿಯಾದರೂ ಅಂದುಕೊಳ್ಳುತ್ತಿದ್ದೆವು, ಅದರ ಜೊತೆಗೇ ಆತನ ವಿಪರೀತಗಳನ್ನು ನೆನೆಸಿಕೊಂಡು ದಿನಕ್ಕೆ ಕನಿಷ್ಠ ಪಕ್ಷ ಇಪ್ಪತ್ತು ಬಾರಿಯಾದರೂ ಅಪಹಾಸ್ಯ ಮಾಡುತ್ತಿದ್ದೆವು.

ತಾರಾನಾಥನನ್ನು ಕಂಡು ಅದಾಗಲೇ ಹತ್ತು ವರ್ಷಗಳಾಗಿದ್ದವು. ಅಂದು ಹೆಂಡತಿಯ ಒತ್ತಾಯಕ್ಕೆ ಹದಿನೈದು ದಿನಗಳ ಗಡ್ಡಕ್ಕೆ ಮೋಕ್ಷ ಕಾಣಿಸಲು ಸಲೂನ್‌ಗೆ ಹೋಗಿ ಹಿಂದಿರುಗುತ್ತಿದ್ದೆ. ಅಂದು ಅಮಾವಾಸ್ಯೆ ಇದ್ದದ್ದರಿಂದ ಬೆಳಗಾಗಿಯೇ ಮಗ ಸ್ಕೂಟರನ್ನು ತೊಳೆದು ಲಕ-ಲಕ ಹೊಳೆಯುವಂತೆ ಮಾಡಿದ್ದ. ನನ್ನಾಕೆಯ ಕೈಗಳ ಕೈಶಲ್ಯಕ್ಕೆ ಸಾಕ್ಷಿಯೆಂಬಂತೆ ನನ್ನ ಬಟ್ಟೆಗಳು ಶುಭ್ರವಾಗಿದ್ದವು. ಸಲೂನಿನಿಂದ ಟಿಪ್ ಟಾಪ್ ಆಗಿ ಹೊರಬರುವಾಗ ಸಿಗ್ನಲ್ ಬಳಿ ಮಣ್ಣು ಮೆತ್ತಿಕೊಂಡು ಗುರುತು ಸಿಗದ ಹಾಗೆ ಬಣ್ಣಗೆಟ್ಟಿದ್ದ ಸ್ಕೂಟರಿನಲ್ಲಿ ತನ್ನ ಮಗನ ಮೂಗಿನಿಂದ ಇಳಿಯುತ್ತಿದ್ದ ಸಿಂಬಳವನ್ನು ತನ್ನ ಶರ್ಟಿನ ಅಂಚಿನಿಂದ ಒರೆಸುತ್ತಿದ್ದ ವ್ಯಕ್ತಿ ಕಾಣಿಸಿದ. ಆತನನ್ನು ಎಲ್ಲೋ ಕಂಡಂತೆ ನನಗೆ ಭಾಸವಾಗುತ್ತಿತ್ತು. ಆದರೆ ಆತನ ಕೆದರಿದ ಕೂದಲು, ಮಾಸಲು ಬಣ್ಣದ ಬಟ್ಟೆ, ಸುಮಾರು ತಿಂಗಳ ವಯಸ್ಸಿನ ಗಡ್ಡದಿಂದಾಗಿ ಆತ ಯಾರೆಂಬುದು ಸ್ಪಷ್ಟವಾಗಲಿಲ್ಲ. ಕೊಂಚ ಹತ್ತಿರ ಹೋಗಿ ದಿಟ್ಟಿಸಿದಾಗ ನನ್ನ ಕಣ್ಣುಗಳನ್ನು ನಾನೇ ನಂಬಲಾಗಲಿಲ್ಲ! ಆತ ನಮ್ಮ ತಾರಾನಾಥ! ಬದುಕೆಂಬ ಶಿಕ್ಷಕ ತೋರಿಸುವ ದಾರಿಗಳನ್ನು ಕ್ರಮಿಸದೆ ಇರುವ ಧೈರ್ಯ ಯಾರು ತೋರಿಯಾರು?

(ಮೂಲ ಲೇಖನ ಸಡಗರ -ಮುಂಚಿನ ಹೆಸರು ‘ಕಲರವ’- ಪತ್ರಿಕೆಯಲ್ಲಿ ಪ್ರಕಟವಾಗಿತ್ತು)