Archive | ಸೀರಿಯಸ್ಲೀ ಸೀರಿಯಸ್ಸು RSS feed for this section

ಸೀರಿಯಸ್ಲೀ ಸೀರಿಯಸ್ಸು: ಸತ್ತ ನೊಣ, ಹೆಗ್ಗಣಗಳ ಪರಿಮಳ!

14 ನವೆಂ

‘ಕಂಡವರ ತಟ್ಟೆಯಲ್ಲಿನ ಸತ್ತ ನೊಣದ ಬಗ್ಗೆ ಮಾತನಾಡುವ ಮೊದಲು ನಿಮ್ಮ ತಟ್ಟೆಯಲ್ಲಿನ ಸತ್ತ ಹೆಗ್ಗಣವನ್ನು ತೆಗೆದುಹಾಕಿ’ ಎಂಬುದು ಚರ್ಚಾಸ್ಪರ್ಧೆಗಳಲ್ಲಿ ವೀರಾವೇಷದಿಂದ ಹೋರಾಡಿ ಹಲವು ಬಾರಿ ವಿಜಯಿಯಾಗಿ ವಿಜಯಮಾಲೆಯನ್ನು ಧರಿಸಿ ಮೆರೆದು ಜನರು ಮರೆತು ಹೋದವರೂ, ವೀರಮರಣವನ್ನಪ್ಪಿ ನಾಲ್ಕು ಕ್ಷಣ ನೆರೆದವರ ಮೌನಾಚರಣೆಯನ್ನು ಸ್ವೀಕರಿಸಿದವರೂ, ಮುಖಹೇಡಿಗಳಾಗಿ ಹೌಹಾರಿ ಬಸವಳಿದು ಹೋದವರೂ ಎಲ್ಲರಿಗೂ ಪ್ರಿಯವಾದ ವಾಕ್ಯ. ಇದರರ್ಥ ನಿಮ್ಮಲ್ಲಿರುವ ದೊಡ್ಡ ತಪ್ಪನ್ನು ಮೊದಲು ತಿದ್ದಿಕೊಳ್ಳಿ ಆಮೇಲೆ ಇನ್ನೊಬ್ಬರಲ್ಲಿರುವ ಸಣ್ಣ ತಪ್ಪಿನ ಬಗ್ಗೆ ಮಾತನಾಡಲು ನಿಮಗೆ ಅರ್ಹತೆ ಬರುತ್ತದೆ ಎಂದು. ಉದಾಹರಣೆಗೆ: ಕೂದಲಿಗೆ ಶ್ಯಾಂಪೂ ಹಾಕೆ ಬೇಡ, ಹಾಳಾಗುತ್ತವೆ ಎಂದು ತಂದೆ ಮಗನಿಗೆ ಉಪದೇಶ ಮಾಡುತ್ತಾನೆ. ತಂದೆಯ ಬೋಳು ತಲೆಯಲ್ಲಿನ ನಾಲ್ಕು ಕೂದಲುಗಳನ್ನು ಹುಡುಕಿ ತೋರಿಸಿ ಮಗ ಮೇಲಿನ ವಾಕ್ಯವನ್ನು ಹೇಳಬಹುದು.

ಇಷ್ಟು ಪೀಠಿಕೆಯನ್ನು ಬಯಸುವ ಸಂಗತಿಯಾಗುವುದು ಎಂಬುದು ನಿಮ್ಮಂತಹ ಬುದ್ಧಿವಂತರಿಗೂ ಹೊಳೆದಿರಲಾಗದು. ಇಷ್ಟು ದಿನ ಭಾರತದ ಯಾವ ಮೂಲೆಯಲ್ಲಿ ಬಾಂಬುಗಳು ಸಿಡಿದರೂ, ಸಿಡಿಯದೆ ಮಲಗಿ ನಿದ್ದೆ ಹೋದರೂ, ಬಾಂಬಿನ ಸದ್ದು ಮಾಡುವ ಆನೆ ಪಟಾಕಿ ಅಬ್ಬರಿಸಿದರೂ, ನಾಲ್ಕು ಮಂದಿ ತಲೆಗೆ ಬಿಳಿಯ ಟೊಪ್ಪಿ ತೊಟ್ಟವರು ಒಂದೇ ದಿನ ಕಾಣೆಯಾದರೂ ‘ಭಯೋತ್ಪಾದನೆ’, ‘ಉಗ್ರವಾದ’, ‘ಮೂಲಭೂತವಾದ’, ‘ಮತಾಂಧತೆ’ ಎಂದೆಲ್ಲಾ ದಿನಪತ್ರಿಕೆಗಳ ಅಂಕಣಕೋರರು, ವಾರಪತ್ರಿಕೆಗಳ ಸೊಂಪಾದಕರು ಅಂಕಣಗಳ ಮೇಲೆ ಅಂಕಣಗಳನ್ನು ಚಚ್ಚುತ್ತಿದ್ದರು. ಕೆಲವರು ಅಲ್ ಖೈದ, ಮಷ್ಕಿರಿ ತೊಯ್ಬಾ, ಮಜಾಹಿದ್ದೀನ್ ಎಂದೆಲ್ಲಾ ಯಾರಿಗೂ ಅರ್ಥವಾಗದ ಶಬ್ಧಗಳ ದಾಳಿಯನ್ನು ಮಾಡುತ್ತಾ ಜನಸಾಮಾನ್ಯರನ್ನು ಭಯಭೀತರನ್ನಾಗಿಸುತ್ತಿದ್ದರು. ಕೇಸರಿ ಪಾರ್ಟಿಯಂತೂ ಪರಮ ತತ್ವಜ್ಞಾನಿಯ ಫೋಸಿಗೆ ರೆಡಿಯಾಗುತ್ತಾ ‘ನಾವು ಯಾವ ಕಾಲದಿಂದ ಹೇಳುತ್ತಾ ಬಂದಿದ್ದೇವೆ, ಅವರ ಮತಾಂಧತೆ ಹೆಚ್ಚಾಯಿತು ಅಂತ, ನೀವು ಕೇಳಲಿಲ್ಲ. ಸರಕಾರದ ಮೃದು ಧೋರಣೆಯಿಂದಾಗಿ ಗಟ್ಟಿ ಗಟ್ಟಿ ಬಾಂಬುಗಳು ಸ್ಪೋಟಗೊಳ್ಳುತ್ತಿವೆ. ನಮ್ಮವರನ್ನು ನೋಡಿ ಎಂದಿಗೂ ಒಬ್ಬರ ಮೇಲೆ ಕೈ ಎತ್ತಿದವರಲ್ಲ. ನಮ್ಮವರು ಯಾರ ಮೇಲಾದರೂ ದಂಡೆತ್ತಿ ಹೋದ ಉದಾಹರಣೆ ಇತಿಹಾಸದಲ್ಲಿ ಸ್ಯಾಂಪಲ್ಲಿಗಾದರೂ ಇದ್ದರೆ ತೋರಿಸಿ ನಾವು ಪ್ರಸ್ತುತ ಹಾಕಿಕೊಂಡಿರುವ ಶಾರ್ಟ್ಸ್ ಕಳಚಿ ನಿಮ್ಮಂತೆ ಪ್ಯಾಂಟು ತೊಡುತ್ತೇವೆ.’ ಎಂದು ಮೈಕುಗಳ ಮುಂದೆ ವಾಗ್ಝರಿಯನ್ನು ಹರಿಸಿ ಮೈಕನ್ನೂ, ನೋಡುಗರ ಕಣ್ಣುಗಳನ್ನು ಒದ್ದೆಯಾಗಿಸುತ್ತಿದ್ದರು.

ಇವರಿಗೆ ವಿರುದ್ಧವಾದದ್ದನ್ನೇ ಹೇಳುತ್ತಾ ಬಂದಿರುವ ಹ್ಯಾಂಡ್ ಪಾರ್ಟಿಯವರು ಆಡಳಿತದಲ್ಲಿದ್ದಾಗ ಅದರ ಹೋಂ ಮಿನಿಸ್ಟರು, ‘ಉಗ್ರವಾದವನ್ನು ನಾವು ಯಾವ ಕಾರಣಕ್ಕೂ ಸಹಿಸುವುದಿಲ್ಲ. ಭಯೋತ್ಪಾದಕರನ್ನು ಕಂಡಲ್ಲಿ ಗುಂಡಿಕ್ಕಿ ಕೊಂದು ಸೆರೆಹಿಡಿದು ನ್ಯಾಯಾಲಯದ ಮುಂದೆ ನಿಲ್ಲಿಸುತ್ತೇವೆ. ಭಯೋತ್ಪಾದಕರ ಒತ್ತಾಯಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ’ ನಾಲ್ಕೈದು ಸೂಟು ಬದಲಿಸುವ ನಡುವೆ ಸಮಯ ಮಾಡಿಕೊಂಡು ಹಿಂದಿನ ಹೇಳಿಕೆಯನ್ನೇ ನೆನಪಿನಿಂದ ಹೊರತೆಗೆದು ಮರು ಉಚ್ಚರಿಸಿ ಬೆವರೊರೆಸಿಕೊಳ್ಳುತ್ತಾರೆ. ಅಲ್ಲಿ ಇಲ್ಲಿ ಕೆಲವು ಭೂಮಿಯ ಮೇಲಿನ ಏಕೈಕ ಬುದ್ಧಿವಂತ ಪ್ರಾಣಿಗಳು ‘ಭಯೋತ್ಪಾದನೆಗೆ ಯಾವ ಧರ್ಮವನ್ನೂ ಹೊಣೆಯಾಗಿಸಲು ಸಾಧ್ಯವಿಲ್ಲ. ಒಂದು ಸಮಾಜ ಶಾಂತಿಯಿಂದ ಇದೆ ಎಂದರೆ, ಸಹಬಾಳ್ವೆ ಬ್ರಾತೃತ್ವವನ್ನು ಪಾಲಿಸುತ್ತಿದೆ, ಸರ್ವರಿಗೂ ಸ್ವತಂತ್ರವನ್ನು ಕೊಟ್ಟಿದೆ ಎಂದಾಗ ಅದಕ್ಕೆ ಅವರು ಪಾಲಿಸುವ ಧರ್ಮ, ಅವರ ಸಂಸ್ಕಾರವನ್ನು ಹೊಣೆ ಮಾಡಬೇಕು. ಆದರೆ ಅವರು ಹಿಂಸೆಗಿಳಿದು ಮುಗ್ಧ ಮಕ್ಕಳ, ಅಮಾಯಕರ ಪ್ರಾಣವನ್ನು ತೆಗೆಯುವಾಗ, ತಮ್ಮ ದೇಶವನ್ನೇ ಒಡೆದೊಡೆದು ದಳ್ಳುರಿಯಲ್ಲಿ ಬೇಯಿಸುವಾಗ ಅದಕ್ಕೆ ಧರ್ಮವನ್ನು ಹೊಣೆ ಮಾಡಬಾರದು. ಭಯೋತ್ಪಾದನಕನಿಗೆ ಧರ್ಮವಿಲ್ಲ. ಆತನ ಕೃತ್ಯಗಳೆಲ್ಲವೂ ಸ್ವಂತ ವಿವೇಚನೆಯಿಂದ ಬಂದವು.’ ಎಂದು ಘನಘಂಬೀರವಾದ ವಿಚಾರವನ್ನು ಮಂಡಿಸಿ ಗಡ್ಡ ಕೆರೆಯುತ್ತಾ ನಿಂತಿರುವಾಗ ಹ್ಯಾಂಡ್ ಪಕ್ಷದ ವಕ್ತಾರ ಬಂದು ‘ನಾವು ಅದನ್ನೇ ಹೇಳುತ್ತಿದ್ದದ್ದು, ಭಯೋತ್ಪಾದನೆಗೆ ಧರ್ಮ ಕಾರಣವಲ್ಲ. ಹಾಗೆಯೇ ಭಯೋತ್ಪಾದನೆಯನ್ನು ಮತದ ಹೆಸರು ಹೇಳಿ ಕರೆಯುವುದು ತಪ್ಪು. ಭಯೋತ್ಪಾದಕರದು ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆಯ ವಿರುದ್ಧದ ಬಂಡಾಯದ ದನಿ’ ಎಂದು ಉಸುರುತ್ತಾರೆ. ಕೇಸರಿ ಪಕ್ಷದವರು ಇವರಿಬ್ಬರ ಮಾತುಗಳನ್ನು ಕೇಳುತ್ತಾ ಚಿದ್ವಿಲಾಸದ ನಗೆ ಬೀರುತ್ತಾ, ‘ತುಷ್ಟೀಕರಣ’ ಎಂದು  ಉದ್ಗರಿಸುತ್ತಾರೆ.

ಆದರೆ ಕಾಲ ಚಕ್ರ ಉರುಳಿದ ಹಾಗೆ ಚಿದ್ವಿಲಾಸದ ನಗೆ ಬೀರುವವರ ಸರದಿಯೂ ಬದಲಾಗಿದೆ. ಕೇಸರಿ ಪಕ್ಷದವರು ಬೆವರಿಳಿಯುವ ಹಣೆಯನ್ನು ತಮ್ಮ ಜುಬ್ಬಗಳಿಗೆ ತಿಕ್ಕಿಕೊಳ್ಳುತ್ತಿದ್ದರೆ ಹ್ಯಾಂಡಿನವರು ಬೀಗುತ್ತಿದ್ದಾರೆ. ಕೇಸರಿ ಪಕ್ಷದ ಬೆಂಬಲಿಗರು ಬಾಂಬುಗಳನ್ನು ಮಾಡುವಲ್ಲಿ ಹೆಸರು ಮಾಡಿದ್ದಾರೆ, ಹ್ಯಾಂಡಿನವರಷ್ಟು ಚೆನ್ನಾಗಿ ಮಾಡುವುದನ್ನು ಇನ್ನೂ ಕಲಿತಿಲ್ಲವಾದರೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದಾರೆ. ನಾಲ್ಕೈದು ಮಂದಿ ಈ ಮಹಾನ್ ಪ್ರಯೋಗದಲ್ಲಿ ತಮ್ಮ ಜೀವವನ್ನೇ ಹವಿಸ್ಸನ್ನಾಗಿ ಅರ್ಪಿಸಿದ್ದಾರೆ. ಹ್ಯಾಂಡಿನ ಅನುಯಾಯಿಗಳಷ್ಟು ತರಬೇತಿಯನ್ನು ಕೇಸರಿ ಪಕ್ಷದ ಅಭಿಮಾನಿಗಳು ಪಡೆಯಬೇಕು ಎಂಬ ಉದ್ದೇಶದಿಂದ ನೇರವಾಗಿ ಸೇನೆಯಿಂದ ಉನ್ನತ ಅಧಿಕಾರಿಯನ್ನು ತರಬೇತಿ ನೀಡಲು ನೇಮಿಸಲಾಗಿದೆ. ಹಾಗೆಯೇ ಇವರ ಮೇಲೆ ಭಗವಂತನ ಕೃಪೆ ಹೆಚ್ಚಾಗಿರಲಿ ಎಂದು ಸಾಧ್ವಿ ಮಣಿಯವರ ನೆರವನ್ನೂ ಪಡೆಯಲಾಗಿದೆ. ಬುದ್ಧಿಜೀವಿಗಳು ಆಚೆ ಈಚೆ ನೋಡಿ ಮೊದಲು ಯಾರಾದರೂ ಮಾತನಾಡಲಿ ಎಂದು ಕಾಯುತ್ತಿದ್ದಾರೆ. ಕೇಸರಿ ಪಕ್ಷದವರು ಮಾಡುತ್ತಿದ್ದ ಆರೋಪಗಳ ಕಾಪಿಯನ್ನು ಪತ್ರಿಕೆಯ ಕಛೇರಿಗಳಿಂದ ಸ್ಪೀಡ್ ಪೋಸ್ಟಿನಲ್ಲಿ ತರಿಸಿಕೊಂಡ ಹ್ಯಾಂಡ್ ಪಕ್ಷದವರು ಅವನ್ನು ಉರುಹೊಡೆಯುವಲ್ಲಿ ಮಗ್ನರಾಗಿದ್ದರೆ ಕೇಸರಿ ಪಕ್ಷದವರು ಹ್ಯಾಂಡ್ ಪಕ್ಷದವರ ಹೇಳಿಕೆಗಳ ಮೊರೆಹೋಗಿದ್ದಾರೆ. ಈ ಮಧ್ಯೆ ನಗೆ ಸಾಮ್ರಾಟರಂತಹ ಮಾಜಿ ಜವಾಬ್ದಾರಿಯುತ ಪ್ರಜೆಗಳು ಹಾಗೂ ಹಾಲಿ ರಾಜಕೀಯ ವಿಶ್ಲೇಷಕರು ಕೇಸರಿ ಹಾಗೂ ಹ್ಯಾಂಡ್ ಪಕ್ಷಗಳ ಈ ಸಾಮರಸ್ಯವನ್ನು, ಕೊಡುತೆಗೆದುಕೊಳ್ಳುವಿಕೆಯನ್ನು ನಾವು ಇಷ್ಟು ವರ್ಷಗಳ ಇತಿಹಾಸದಲ್ಲಿ ಎಂದಿಗೂ ಕಂಡಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ನಗಾರಿಯಲ್ಲಿ ಪ್ರತಿಕ್ರಿಯೆಗಳೇಕಿಲ್ಲ?

13 ಜುಲೈ

ನಿಮಗೆ ನಿಜಕ್ಕೂ ಅಚ್ಚರಿಯಾಗುತ್ತದೆ. ನಗೆ ನಗಾರಿಯ ತಾಣಕ್ಕೆ ದಿನವೊಂದಕ್ಕೆ ಐವತ್ತರಿಂದ ನೂರು ಮಂದಿ ಮೌಸು ಚಿಟುಕಿಸಿ ಹೋಗುತ್ತಾರೆ. ಇಲ್ಲಿನ ಹಾಸ್ಯದ ಅಬ್ಬರಕ್ಕೆ ನವಿರಾಗಿ ನಲುಗಿ ಮನಸಾರೆ ನಗುತ್ತಾರೆ. ಆದರೆ ಕೆಲವೇ ಕೆಲವರು ಬರಹಗಳಿಗೆ ಪ್ರತಿಕ್ರಿಯೆ ಕೊಡುತ್ತಾರೆ. ಧ್ವನಿಗೆ ಪ್ರತಿಧ್ವನಿಯನ್ನು ಸೇರಿಸುತ್ತಾರೆ. ಯಾಕೆ ಹೀಗೆ?

ಇದಕ್ಕೆ ಮುಖ್ಯ ಕಾರಣ ನಮ್ಮ ‘ನಗೆ ಸಾಮ್ರಾಟ್’ ಎಂಬ ಅವತಾರ ಎನ್ನುತ್ತಾರೆ ನಮ್ಮ ಹಿತೈಷಿಗಳು. ನಮ್ಮ ಅ‘ನಾಮ’ಧೇಯತೆಯೇ ಓದುಗರಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸುವಂತೆ ಮಾಡುತ್ತಿದೆ. ನಮ್ಮ ಗುರುತಿಲ್ಲದ, ಪರಿಚಯವಿಲ್ಲದ ವಿವರವೇ ಪ್ರತಿಸ್ಪಂದನೆಗೆ ಅವಕಾಶವಿಲ್ಲದಂತೆ ಮಾಡುತ್ತಿದೆ ಎಂಬುದು ಅವರ ವಾದ.

ಜನರು ಅಗೋಚರವಾದ ದೇವರಿಗೆ ಪೂಜೆ ಮಾಡುತ್ತಾರೆ, ನೈವೇದ್ಯ ತೋರಿಸುತ್ತಾರೆ, ಕೈ ಮುಗಿಯುತ್ತಾರೆ ಆದರೆ ಆತನೊಂದಿಗೆ ಕಷ್ಟ ಸುಖ ಮಾತನಾಡುತ್ತಾ ಹರಟೆಗೆ ಕೂರುವುದಿಲ್ಲ. ಕೆಲವರು ದೆವ್ವ, ಭೂತಗಳಿಗೂ ಮರ್ಯಾದೆ ಕೊಡುತ್ತಾರೆ, ಹೆದರುತ್ತಾರೆ, ಪ್ರಾಣಿ ಬಲಿ ಕೊಟ್ಟು ಉಂಡು ಮಲಗುತ್ತಾರೆ. ಅವುಗಳನ್ನು ಹರಟೆ ಕಟ್ಟೆಗೆ ಎಳೆದುಕೊಂಡು ಬರುವುದಿಲ್ಲ. ಹಾಗೆಯೇ ನಗೆ ಸಾಮ್ರಾಟ್ ಎಂಬ ಮುಖವಿಲ್ಲದ ಗುರುತನ್ನು ಓದುಗರು ಮೆಚ್ಚುತ್ತಾರೆ, ಇಷ್ಟಪಡುತ್ತಾರೆ ಆದರೆ ಅದರೊಂದಿಗೆ ಸಂವಾದಕ್ಕೆ ತೊಡಗುವುದಿಲ್ಲ. ಅವರಿಗೇನಿದ್ದರೂ ತಮ್ಮ ಹಾಗೆ ಗುರುತಿರುವ ಜನರು ಬೇಕು ಮಾತಿಗೆ, ಹರಟೆಗೆ, ಪ್ರತಿಸ್ಪಂದನಕ್ಕೆ. ಹೀಗಾಗಿ ನಗೆ ಸಾಮ್ರಾಟರು ಹರಟಲಾಗದೆ ಒದ್ದಾಡುತ್ತಿದ್ದಾರೆ.

ಇನ್ನೂ ಕೆಲವು ಸುದ್ದಿ ಮೂಲಗಳ ಪ್ರಕಾರ. ನಗೆ ನಗಾರಿ ಡಾಟ್ ಕಾಮಿಗೆ ಬಂದು ನಗುನಗುತ್ತಾ ಜನರು ಎದ್ದು ಹೋಗಿಬಿಡುತ್ತಾರೆ. ಅವರಿಗೆ ನಾಲ್ಕು ಮಾತು ಆಡಬೇಕು ಎನ್ನುವುದೂ ಮರೆತುಹೋಗುವಷ್ಟು ನಗುಬಂದಿರುತ್ತದೆ. ಅವರಿಗೆ ನಗೆ ತರಿಸದ ವಿಚಾರವಿದ್ದರೆ ಅಲ್ಲಿ ಪ್ರತಿಕ್ರಿಯೆ ನೀಡಿರುತ್ತಾರೆ. ಈ ಸುದ್ದಿ ಮೂಲವನ್ನು ನಾವು ಮಾನ್ಯ ಮಾಡಿದ್ದು ಪ್ರತಿಕ್ರಿಯೆಗಳು ಅಷ್ಟಾಗಿ ಸಿಕ್ಕದ ದಿನ ಅದನ್ನು ನಾವು ಪುನಃ ಪುನಃ ಓದಿ ಖುಶಿ ಪಡುತ್ತೇವೆ.

ಒಂದು ವರ್ಗದ ಜನರಿಗೆ ಇಂಥಾ ‘ಸಿಲ್ಲಿ’ ಬ್ಲಾಗ್‌ಗಳಲ್ಲಿ ತಮ್ಮ ಹೆಸರಿನಲ್ಲಿ ಪ್ರತಿಕ್ರಿಯೆ ಹಾಕಿದರೆ ತಮ್ಮ ‘ಇಮೇಜಿಗೆ’ ಘಾಸಿಯಾಗುತ್ತದೆ ಎಂಬ ಭಯವಿರುತ್ತದೆ. ಗಂಭೀರ ಓದುಗರು, ಪ್ರಜ್ಞಾವಂತ ಬ್ಲಾಗಿಗರು ಎಲ್ಲಾದರೂ ಜೋಕು ಹೇಳಿಕೊಂಡು, ಜೋಕು ಓದಿಕೊಂಡು ಕಾಲ ಕಳೆಯಲು ಸಾಧ್ಯವಾಗುತ್ತದೆಯೇ? ಹಾಗೆ ಅಲ್ಲರ ಹಾಗೆ ಸದಾ ನಗುತ್ತಲೇ ಇದ್ದರೆ ನಮ್ಮನ್ನು ಜನ ‘ಗಂಭೀರ ಚಿಂತಕ’ರು ಎಂದು ಪರಿಗಣಿಸುವುದೇ ಇಲ್ಲ ಎಂಬುದು ಅವರ ವಾದ. ಹೀಗಾಗಿ ಅಂಥವರಿಗಾಗಿ ನಾವು ನಗೆ ನಗಾರಿಯಲ್ಲಿ ‘ನಗ ಬಾರದು’ ಅಂಕಣವನ್ನು ಶುರು ಮಾಡುವ ಆಲೋಚನೆ ಮಾಡಿದ್ದೇವೆ. ಆ ಅಂಕಣವನ್ನು ಓದಿ ಯಾರೂ ನಗಬಾರದೆಂದೂ, ಒಂದು ವೇಳೆ ಇಡೀ ಅಂಕಣವನ್ನು ಓದಿಯೂ ಯಾರು ನಗುವುದಿಲ್ಲವೋ ಅವರನ್ನು ‘ಶ್ರೇಷ್ಠ ಗಂಭೀರ ಚಿಂತಕ’ ಎಂದು ಘೋಷಿಸಲಾಗುವುದೆಂದೂ ಈ ಮೂಲಕ ತಿಳಿಸಲು ಇಚ್ಚಿಸುತ್ತೇವೆ.

ನಗೆ ನಗಾರಿಗೆ ಪ್ರತಿಕ್ರಿಯೆಗಳು ಏಕಿಲ್ಲ? ಇದಕ್ಕಾದರೂ ಪ್ರತಿಕ್ರಿಯಿಸಿ!

– ನಗೆ ಸಾಮ್ರಾಟ್

ನಗಾರಿ ಸದ್ದು ಮಾಡಲು ತೊಡಗಿದ್ದು ಅದಕ್ಕೇ!

31 ಜನ

‘ಸೀರಿಯಸ್ಲೀ ಸೀರಿಯಸ್’. ತಾವು ಹೇಳುವುದೆಲ್ಲವನ್ನೂ ಜನ ತುಂಬಾ ಲೈಟ್ ಆಗಿ ತೆಗೆದುಕೊಳ್ಳಬಾರದು ಎಂಬ ಎಚ್ಚರಿಕೆಯಲ್ಲಿ ಸಾಮ್ರಾಟರು ಕೊಂಚ ಗಂಭೀರವಾಗಿ ಆದರೆ ಎಲ್ಲೂ ‘ನಗೆ ರಹಿತ’ವಾಗದಂತೆ ಹಾಸ್ಯದ ಬಗೆಗಿನ ಚಿಂತನಯೋಗ್ಯ ಸಂಗತಿಗಳನ್ನು ಇಲ್ಲಿ ನಿವೇದಿಸಿಕೊಳ್ಳುತ್ತಾರೆ.

(‘ಸೀರಿಯಸ್ಲೀ ಸೀರಿಯಸ್’ ಸಂಪಾದಕೀಯ)

ಇಂತಹ ಒಂದು ಪ್ರಯತ್ನವನ್ನು ಮಾಡಬೇಕು ಎಂದು ನಿಶ್ಚಯಿಸಿದಾಗಲೆಲ್ಲಾ ನನ್ನೆದುರು ಎದ್ದು ನಿಲ್ಲುತ್ತಿದ್ದ ಪ್ರಶ್ನೆ -ಹಾಸ್ಯಕ್ಕೆ ಅಂತಲೇ ಒಂದು ಬ್ಲಾಗು ತೆರೆಯಬೇಕೆ? ಹಾಸ್ಯವನ್ನು ಅಷ್ಟು ಪ್ರಾಮುಖ್ಯತೆಯಿಂದ ಕಾಣುವ ಮನಸ್ಥಿತಿ ನಮ್ಮ ಜನರಿಗಿದೆಯೇ- ಎಂಬ ಸಂಶಯ ನನ್ನನ್ನು ಕೊಂಚ ಕಾಲದವರೆಗೆ ಈ ಪ್ರಯತ್ನಕ್ಕೆ ಕೈ ಹಾಕದಿರುವಂತೆ ತಡೆಯಿತು. ಕ್ರಮೇಣ ಹಾಸ್ಯಕ್ಕೆ ಜನ ಅಷ್ಟು ಬೆಲೆ ಕೊಡುತ್ತಾರೆಯೇ ಎಂಬ ಪ್ರಶ್ನೆ ಮರೆಯಾಗುತ್ತಾ, ಜನರು ಬೆಲೆ ಕೊಡುವ ಮೌಲ್ಯದ ಹಾಸ್ಯವನ್ನು ನಾವು ಒದಗಿಸುತ್ತಿದ್ದೇವೆಯೇ ಎಂಬ ಪ್ರಶ್ನೆ ಎದ್ದು ನಿಂತಿತು. ಅವರು ಮಾಡಿಲ್ಲ, ಇವರು ಮಾಡುತ್ತಿಲ್ಲ, ಇನ್ನೊಬ್ಬರ್ಯಾರೋ ಮಾಡಬಹುದಲ್ಲ ಎಂದು ಜಾರಿಕೊಳ್ಳುವುದಕ್ಕಿಂತ ನಾನೇ ಏಕೆ ಒಂದು try ಕೊಡಬಾರದು ಎಂದುಕೊಂಡು ‘ನಗೆ ನಗಾರಿ ಡಾಟ್ ಕಾಮ್’ ತೆರೆದೆ.

ಈಗ ಎಲ್ಲಾ ಹಾಳಾಗಿದೆ, ಹಾಸ್ಯ ಎಂಬ ಮನುಷ್ಯನ ಮಾನಸಿಕ ವಲಯದ ಅತಿ ಮುಖ್ಯವಾದ ಭಾವ ಈಗ ಕೇವಲ ವ್ಯಾಪಾರಿ ತಂತ್ರವಾಗಿಬಿಟ್ಟಿದೆ. ಹಾಸ್ಯ ಪ್ರವೃತ್ತಿಯವರು ಕೇವಲ ಜೋಕರ್‌(ಹಾಗೆಂದರೆ ಜೋಕರ್‍ಗಳು ಕೀಳು ಅಂತಲ್ಲ) ಗಳಾಗುತ್ತಿದ್ದಾರೆ. ಜನ ಈ ಜೋಕರ್‌ಗಳು ಹೇಳುವುದನ್ನು ಕೇಳಿ ಬಿದ್ದು ಬಿದ್ದು ನಗುತ್ತಾರೆ, ಉರುಳಾಡಿ ಹೊರಳಾಡಿ ನಗುತ್ತಾರೆ ಕಾರ್ಯಕ್ರಮ ಮುಗಿದು ಎದ್ದು ಹೋಗುವಾಗ ಆತ ಹೇಳ ಬಯಸಿದ ಸಂಗತಿಗಳನ್ನು ಗ್ರಹಿಸದೆ ಹೊರಟುಬಿಡುತ್ತಾರೆ.ಹಾಗಂತ ಸಂಪೂರ್ಣವಾದ ತಪ್ಪನ್ನು ಜನರ ಮೇಲೆ ಹೊರಿಸುವಂತಿಲ್ಲ. ಹಾಸ್ಯವನ್ನು ಗುತ್ತಿಗೆಗೆ ತೆಗೆದುಕೊಂಡವರಂತಾಡುವ ವಿದೂಷಕರೂ ಸಹ ತಮ್ಮ ಕೆಲಸ ಕೇವಲ ನೂರು ಮಂದಿಯ ಬಾಯಿಗಳನ್ನು ತೆರೆಸಿ ಹಲ್ಲು, ನಾಲಿಗೆ, ವಸಡುಗಳುಗೆ ಗಾಳಿ ಬೆಳಕು ಕಾಣಿಸುವುದು ಎಂದು ಭಾವಿಸಿರುತ್ತಾರೆ. ಸ್ಟೇಜಿನ ಮೇಲೆ ನಿಂತು ಗಂಟೆ ಗಟ್ಟಲೆ ಕಂಡಕಂಡಲ್ಲಿ ಹೆಕ್ಕಿತಂದ ಜೋಕುಗಳನ್ನು ಒಂದರ ಹಿಂದೆ ಒಂದರಂತೆ ಸಿಡಿಸಬಲ್ಲ ಹಾಸ್ಯಗಾರರು ಯಾಕೆ ಆರೋಗ್ಯಕರವಾದ, ಸೃಜನಶೀಲವಾದ ವಿನೋದ ಸಾಹಿತ್ಯವನ್ನು ಸೃಷ್ಠಿಸುವಲ್ಲಿ ಸೋಲುತ್ತಿದ್ದಾರೆ?

ಒಂದು ವಿಷಯವನ್ನು ಲೇಖಕ ಅಥವಾ ಕಲಾವಿದ ಓದುಗರಿಗೆ, ವೀಕ್ಷಕರಿಗೆ ಹೇಳಬಯಸುವಾಗ ಎರಡು ರೀತಿಯ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಆತ ತಾನು ಹೇಳಬಯಸುವ ಸಂಗತಿಯನ್ನು ತುಂಬಾ ಸಂಕೀರ್ಣವಾಗಿ ಹೇಳಿದರೆ ಜನರಿಗೆ ಅರ್ಥವಾಗುವುದೇ ಇಲ್ಲ. ಅಲ್ಲಿ ಆತ ಸೋಲುತ್ತಾನೆ. ಇಲ್ಲ ತುಂಬಾ ಸರಳಗೊಳಿಸಿ ಹೇಳಿದರೆ ಜನ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ. ಇಲ್ಲೂ ಕಲಾವಿದ ಅಥವಾ ಲೇಖಕ ಸೋಲುತ್ತಾನೆ. ತುಂಬು ಗಾಂಭೀರ್ಯತೆಯ ಶೈಲಿಯಲ್ಲಿ ಅಭಿವ್ಯಕ್ತಿಗೊಳ್ಳುವ ಸತ್ಯಗಳು ಜನರನ್ನು ಆಕರ್ಷಿಸುವುದೇ ಇಲ್ಲ. ಅದನ್ನು ಓದಬೇಕು ಎಂಬ ಕುತೂಹಲ, ಆಕರ್ಷಣೆ ಓದುಗರಿಗೆ ಬೆಳೆಯುವುದೇ ಇಲ್ಲ. ಇನ್ನು ಹೆಚ್ಚು ಸರಳೀಕರಿಸಿ ಹೇಳಲು ಹೊರಟರೆ ಜನರಿಗೆ ಇದರಲ್ಲಿ ಏನೋ ತಿಳಿಯುವುದಿದೆ ಎಂಬ ಭಾವವೇ ಹುಟ್ಟುವುದಿಲ್ಲ. ಈ ಎರಡೂ ಅಪಾಯಗಳಿಂದ ಪಾರಾಗುವ ವಿಧಾನವೆಂದರೆ, ನವಿರಾದ ಹಾಸ್ಯದ ದಾರಿಯನ್ನು ಹಿಡಿಯುವುದು!

ತೀವ್ರವಾದ ರೋಗಕ್ಕೆ ತುಂಬಾ ಶಕ್ತಿಶಾಲಿಯಾದ, ಪರಿಣಾಮಕಾರಿಯಾದ ಮಾತ್ರೆಗಳನ್ನು ಕೊಟ್ಟ ಡಾಕ್ಟರ್ ಅವನ್ನು ಹಾಲಿನೊಂದಿಗೆ ಸೇವಿಸಿ ಅಂತ ಹೇಳುತ್ತಾರೆ. ಮಾತ್ರೆಯ ಪರಿಣಾಮ ರೋಗದ ಮೇಲೆ ಆಗಬೇಕು, ಆದರೆ ಅದರ ಕಾವು, ಝಳ ದೇಹವನ್ನು ತಟ್ಟಬಾರದು ಎಂಬುದು ಅದರ ಉದ್ದೇಶ. ಹಾಸ್ಯವೂ ಹಾಲಿನ ಹಾಗೆಯೇ. ಸಮಾಜದ ಸಮಸ್ಯೆಗಳಿಗೆ, ವ್ಯಕ್ತಿತ್ವದ ಓರೆಕೋರೆಗಳಿಗೆ ಪರಿಣಾಮಕಾರಿಯಾದ, ಶಕ್ತಿಶಾಲಿಯಾದ ಸತ್ಯವನ್ನು ಹಾಸ್ಯದಲ್ಲಿ ಬೆರೆಸಿ ಕೊಟ್ಟರೆ ಅತ್ತ ರೋಗಕ್ಕೆ ತಕ್ಕ ಮದ್ದೂ ಆದ ಹಾಗಾಗುತ್ತದೆ, ಇತ್ತ ದೇಹಕ್ಕೆ ಆ ಆಂದೋಲನದ ಕಾವೂ ತಟ್ಟುವುದಿಲ್ಲ. ಹಾಸ್ಯವೆಂಬ ಮಾಧ್ಯಮದ ಗಮ್ಮತ್ತೇ ಅಂಥದ್ದು!

ಈ ನಿಟ್ಟಿನಲ್ಲಿ ಹಾಸ್ಯವನ್ನು ಟಿ.ವಿ ಚಾನೆಲ್ಲುಗಳ ದಿನಗೂಲಿ ಜೋಕರ್‌ಗಳ ಹಳಸಲು ಜೋಕುಗಳಿಂದ, ದಿನ ಪತ್ರಿಕೆಗಳ ಸ್ಥಳ ತುಂಬಿಸುವ ನಗೆ ಹನಿಗಳಿಂದ, ವಾರಪತ್ರಿಕೆಗಳ ಅನಿವಾರ್ಯ ‘ಹಾಸ್ಯ ಲೇಖನ’ಗಳಿಂದ, ಸಿನೆಮಾಗಳ ಆಟಕ್ಕುಂಟು ಲೆಕ್ಕಕ್ಕಿಲ್ಲವೆನ್ನುವ ಸಂಪ್ರದಾಯದಿಂದ ಮುಕ್ತಗೊಳಿಸಿ ಹೊಸ ಹೊಳಪು ಕೊಟ್ಟು ಅದರ ಹೊಸ ಸಾಧ್ಯತೆಗಳನ್ನು, ಹೊಸ ಆಯಾಮಗಳನ್ನು ಅನ್ವೇಷಿಸುವುದಕ್ಕಾಗಿಯೇ ಈ ಪ್ರಯತ್ನ. ಅದಕ್ಕಾಗಿಯೇ ನಗೆಯ ನಗಾರಿ ಸದ್ದು ಮಾಡಲು ಆರಂಭಿಸಿದ್ದು!

ನಿಮ್ಮ ಪ್ರೀತಿಯ,

ನಗೆ ಸಾಮ್ರಾಟ್


Technorati : , , , , ,