ಮಾಧ್ಯಮದವರು ತಮ್ಮ ಧರ್ಮ ಮರೆಯುತ್ತಿರುವುದರ ವಿರುದ್ಧ ಆಕ್ರೋಶ
ಬೆಂಗಳೂರು, ಮಾ ೩: ಕಳೆದ ಕೆಲವು ವರ್ಷಗಳಿಂದ ರಾಜ್ಯದ ಹಾಗೂ ದೇಶದ ಮಾಧ್ಯಮಗಳಲ್ಲಿ ಜನರ ಭಾವನೆ ಕೆರಳಿಸುವ ವರದಿಗಳು ಪ್ರಕಟವಾಗಿಲ್ಲದಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ ಅಖಿಲ ಭಾರತ ಅಬ್ಬೇಪಾರಿಗಳ ಪರಿಷತ್ (ABAP) ರಾಜ್ಯಾಧ್ಯಕ್ಷ ಮುಸ್ತಫಾ ಠಾಕರೋಲಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ರಸ್ತೆಯ ಮಧ್ಯದಲ್ಲಿ ಲಾರಿ ಟೈರಿಗೆ ಬೆಂಕಿ ಹಾಕುವುದರ ಮೂಲಕ ಸುದ್ದಿಗೋಷ್ಟಿ ಉದ್ಘಾಟಿಸಿದ ಮುಸ್ತಫಾ ಮಾಧ್ಯಮಗಳಿಗೆ ಜನರ ಭಾವನೆಗಳ ಬಗ್ಗೆ ಕಾಳಜಿಯಿಲ್ಲ ಎಂದು
ಆರೋಪಿಸಿದರು. “ಸುಮಾರು ಎರಡು ವರ್ಷಗಳಿಂದ ಸಹನೆಯಿಂದ ಕಾದಿದ್ದೇವೆ. ನಮ್ಮ ಧಾರ್ಮಿಕ, ರಾಷ್ಟ್ರೀಯ, ಭಾಷಿಕ ಭಾವನೆಯನ್ನು ಕೆರಳಿಸುವ ಘಟನೆ ನಡೆಯುವುದೆಂದು ನಿರೀಕ್ಷಿಸಿ ನಿರಾಶರಾಗಿದ್ದೇವೆ. ಇಷ್ಟು ದೀರ್ಘಾವಧಿಯಲ್ಲಿ ಒಬ್ಬ ಕಲಾವಿದನಿಗೂ ನಮ್ಮ ಧಾರ್ಮಿಕ ಭಾವನೆಗಳನ್ನು ಕೆಣಕುವಂತಹ ಕಲಾಕೃತಿಯನ್ನು ರಚಿಸಲು ಸಾಧ್ಯವಾಗಿಲ್ಲವೇ? ಜಗತ್ತಿನಲ್ಲೇ ವಾರ್ಷಿಕ ಅತ್ಯಧಿಕ ಸಿನೆಮಾಗಳನ್ನು ತಯಾರಿಸುವ ಬಾಲಿವುಡ್ಡಿಗೆ ಕೋಮು ಸಾಮರಸ್ಯ ಕದಡುವ ಒಂದೇ ಒಂದು ಕಥಾವಸ್ತು ನೆನಪಾಗಿಲ್ಲವೇ? ಇಷ್ಟು ಮಂದಿ ಬಾಲಿವುಡ್ ನಟ, ನಟಿಯರು, ರಾಜಕಾರಣಿಗಳು, ಕಲಾವಿದರು, ಬುದ್ಧಿಜೀವಿಗಳು ಒಂದೇ ಒಂದು ವಿವಾದಾತ್ಮಕ ಹೇಳಿಕೆಯನ್ನು ಟಿವಿ ಸಂದರ್ಶನದಲ್ಲಿ ಕೊಟ್ಟಿಲ್ಲ, ತಮ್ಮ ಟ್ವಿಟರ್ ಪುಟಗಳಲ್ಲೂ ಎಲ್ಲೂ ಆ ಪ್ರಯತ್ನ ಮಾಡಿಲ್ಲ ಎಂದರೆ ಯಾರಿಗಾದರೂ ಸಂಶಯ ಬರುತ್ತದೆ ತಾನೆ? ದೇಶಕ್ಕೆ ಬೆಂಕಿ ಹಾಕುವಂತಹ ಕೃತಿಗಳನ್ನು ರಚಿಸುತ್ತಿದ್ದ ಲೇಖಕರ ಕುಲ ಎಲ್ಲಿ ಕಾಣೆಯಾಯಿತು? ದೇವರನ್ನು ನಗ್ನವಾಗಿ ಚಿತ್ರಿಸುವ, ದೇವಮಾನವರಿಗೆ ಬಟ್ಟೆ ತೊಡಿಸುವ, ದೈವ ಸಮಾನರ ಹುಟ್ಟು ಪ್ರಶ್ನಿಸುವ, ಪ್ರವಾದಿಗಳ ಚಿತ್ರ ಬಿಡಿಸುವ, ಸ್ತ್ರೀಯರ ಬುರ್ಕಾಗಳಿಗೆ ಬೆಂಕಿ ಹಾಕಿ ಎನ್ನುವವರೆಲ್ಲ ಎಲ್ಲಿ ಹೋದರು? ಈ ವಿದ್ಯಮಾನಗಳ ಹಿಂದೆ ದುಷ್ಟ ಶಕ್ತಿಗಳ ಕೈವಾಡವಿದೆ. ಕ್ರೂರವಾದ ರಾಜಕಾರಣವಿದೆ.
“ವಿವಾದಗಳು, ಮಾಧ್ಯಮಗಳು ಆಗಾಗ ಧಾರ್ಮಿಕ ಭಾವನೆ ಕೆರಳಿಸುತ್ತಿದ್ದರೆ ಅಲ್ಲವೇ, ತಮ್ಮಲ್ಲೂ ಧಾರ್ಮಿಕ ಭಾವನೆ ಇದೆ ಎಂದು ಜನರಿಗೆ ಮನವರಿಕೆಯಾಗುವುದು? ರೋಗ ಬಂದಾಗಲೇ ಅಲ್ಲವೇ ತನ್ನಲ್ಲಿ ಆರೋಗ್ಯವಿತ್ತು ಎಂದು ನೆನೆಪಾಗುವುದು? ಹೆಂಡತಿ ಬಂದ ಮೇಲೆ ತಾನೆ ತನ್ನ ಜೇಬಲ್ಲೂ ದುಡ್ಡು ಉಳಿಯುತ್ತಿತ್ತು ಎಂಬ ಅರಿವಾಗುವುದು? ಇತಿಹಾಸಕಾರರು ಹೊಸ ಹೊಸ ವ್ಯಾಖ್ಯಾನ ಕೊಟ್ಟು ಜನರನ್ನು ರೊಚ್ಚಿಗೆಬ್ಬಿಸದಿದ್ದರೆ ನಮ್ಮ ಪರಿಷತ್ತಿನ ಸದಸ್ಯರಿಗೆ ನೌಕರಿ ಯಾರು ಕೊಡುವವರು? ರಸ್ತೆಯಲ್ಲಿ ದಾಂಧಲೆಯೆಬ್ಬಿಸಿ, ಸರ್ಕಾರಿ ಬಸ್ಸುಗಳಿಗೆ ಕಲ್ಲು ಎಸೆದು, ಅಂಗಡಿಗಳ ಗಾಜು ಒಡೆದು, ಲೈಟು ಕಂಬಗಳ ಬಲ್ಬು ಒಡೆದು ,ಕೈಗೆ ಸಿಕ್ಕಿದ್ದನ್ನು ದೋಚಿ ಆರ್ಥಿಕತೆಯ ಗಾಲಿಗಳು ತಿರುಗುವಂತೆ ಮಾಡುವವರು ಯಾರು? ಪತ್ರಿಕೆಗಳು ಹೀಗೆ ಮೌನವಾದರೆ ತಲೆಮಾರುಗಳಿಂದ ದಾಂಧಲೆಯೆಬ್ಬಿಸುವ ವೃತ್ತಿಯನ್ನು ಪಾಲಿಸುತ್ತಾ ಬಂದಿರುವವರ ಗತಿಯೇನು? ನಮ್ಮ ಹೊಟ್ಟೆ ಮೇಲೆ ಹೊಡೆಯುವ ಈ ಕೆಟ್ಟ ಸಂಪ್ರದಾಯಕ್ಕೆ ಹೊಣೆ ಯಾರು?
“ಸರಕಾರ ಈ ಕೂಡಲೇ ನಮ್ಮ ನೆರವಿಗೆ ಬರಬೇಕು. ವಿವಾದಾತ್ಮಕ ಪುಸ್ತಕಗಳಿಗೆ ವಿಶೇಷ ಪ್ರಶಸ್ತಿ ಘೋಷಿಸಬೇಕು. ಅನಾರೋಗ್ಯ ಸಚಿವರು ತಮ್ಮ ಎರಡು ದಿನದ ಶೇವಿಂಗ್ ಖರ್ಚನ್ನು ಕೊಟ್ಟರೂ ಸಾಕು ಅರ್ಧ ಡಜನ್ ಮರಿ ಸಾಹಿತಿಗಳನ್ನು ಸಾಕಬಹುದು. ರೊಚ್ಚಿಗೆಬ್ಬಿಸುವ ಕಾದಂಬರಿ ಬರೆದವರಿಗೆ ಪ್ರೋತ್ಸಾಹ ನೀಡಬೇಕು. ನಾಲ್ಕು ನೂರು ಪುಟಗಳ ಕಾದಂಬರಿಯನ್ನು ಓದಿ ಅದರಲ್ಲಿ ರೊಚ್ಚಿಗೇಳುವ ಅಂಶವೇನಿದೆ ಎಂದು ವಿಮರ್ಶಕರು, ವಿರೋಧಿ ಪಾಳೆಯದ ಬುದ್ಧಿಜೀವಿಗಳು ಎರಡು ಸಾಲಿನಲ್ಲಿ ತಿಳಿಸುವ ಕಷ್ಟ ತೆಗೆದುಕೊಳ್ಳದಿದ್ದರೆ ನಮಗೆ ಅದು ತಿಳಿಯುವುದಾದರೂ ಹೇಗೆ? ಈ ವಿಮರ್ಶಕರನ್ನೂ ಸರಿಯಾಗಿ ನೋಡಿಕೊಳ್ಳಬೇಕು. ಆರ್ಟ್ ಗ್ಯಾಲರಿಗಳಲ್ಲಿ ನಗ್ನ ಕಲಾಕೃತಿಗಳಿಗೆ ಶಿಷ್ಯವೇತನ ನೀಡಬೇಕು. ಕೋಮು ಭಾವನೆ ಕೆರಳಿಸುವ ಚಿತ್ರಗಳಿಗೆ ಮನರಂಜನಾ ತೆರಿಗೆ ವಿನಾಯಿತಿಯನ್ನೂ, ವಿಶೇಷ ಸಬ್ಸಿಡಿಯನ್ನೂ ಸರಕಾರ ನೀಡಬೇಕು.ಇಲ್ಲದಿದ್ದರೆ ರಾಷ್ಟ್ರಾದ್ಯಂತ ಉಗ್ರ ರೂಪದ ಪ್ರತಿಭಟನೆ ನಡೆಸಲಾಗುವುದು. ಈ ಸಂದರ್ಭದಲ್ಲಿ ಆಗುವ ಪ್ರಾಣ ಹಾನಿ, ಆಸ್ತಿನಾಶಕ್ಕೆ ಸರಕಾರ, ಮಾಧ್ಯಮಗಳೇ ಹೊಣೆ” ಎಂದು ಬೆದರಿಕೆ ಒಡ್ಡಿದ್ದಾರೆ
ಇಂಗ್ಲೀಷ್ ಸುದ್ದಿ ಮಾಧ್ಯಮಗಳ ಗಮನವನ್ನು ನಿ.ಮ್ಮ ಪ್ರತಿಭಟನೆಯ ಕಡೆಗೆ ಸೆಳೆಯಲು ಏನು ಮಾಡುತ್ತೀರಿ ಎಂದು ವರದಿಗಾರ್ತಿ ಕೇಳಿದ ಪ್ರಶ್ನೆಗೆ ಠಾಕರೋಲಿಯವರು ಪತ್ರಿಕಾ ಗೋಷ್ಟಿಗೆ ಆಗಮಿಸಿದ್ದ ಕ್ಯಾಮರಾಮೆನ್ ಗಳನ್ನು ಹಿಡಿದು ಜಗ್ಗಾಡಿದರು. ಎರಡು ಕೆಮಾರಗಳನ್ನು ಕುಟ್ಟಿ ಪುಡಿ ಮಾಡಿದರು. ವರದಿಗಾರ್ತಿಯ ಕೂದಲು ಹಿಡಿದು ಜಗ್ಗಿದರು. ಈ ಸಂದರ್ಭದಲ್ಲೆ ಆಕೆಯ ವಿಗ್ಗು ಕೈಗೆ ಬಂದದ್ದಕ್ಕೆ ನಗಾರಿ ವರದಿಗಾರ ಸಾಕ್ಷಿಯಾದ. ಅನಂತರ ಮುಖಕ್ಕೆ ಮಸಿ ಬಳಿಯಲು ಮುಂದಾದರು. ದಪ್ಪನೆಯ ಮೇಕಪ್ ಮೇಲೆ ಮಸಿಯು ಅಂಟದೆ ವರದಿಗಾರ್ತಿ ತಪ್ಪಿಸಿಕೊಂಡಳು ಎಂದು ಮೂಲಗಳು ತಿಳಿಸಿವೆ.
ಇತ್ತೀಚಿನ ಪ್ರಜಾ ಉವಾಚ