Archive | ಸಾಹಿತ್ಯ RSS feed for this section

ಈ ವೈಫು ಇಷ್ಟೇನೇ…

6 ಸೆಪ್ಟೆಂ

(ಪಂಚರಂಗಿಯ ಭರ್ಜರಿ ಯಶಸ್ವಿ ಜನಪದ ಗೀತೆ ‘ಲೈಫು ಇಷ್ಟೇನೇ’ ಸ್ಪೂರ್ತಿಯಲ್ಲಿ ಸಾಮ್ರಾಟರು ದಿನವೂ ಗಂಡಂದಿರ ಅಂತರಂಗದ ಗ್ರಾಮಾಫೋನಿನಲ್ಲಿ ನುಡಿಯುವ ಭಾವವನ್ನು ಎತ್ತಿಕೊಂಡು ಹಾಡು ಕಟ್ಟಿದ್ದಾರೆ. ಭವಿಗಳು, ಅನುಭವಿಗಳು ಹೆಚ್ಚು ಸಾಲುಗಳನ್ನು ಸೇರಿಸಬಹುದು)

ಲವ್ವು ಗಿವ್ವು ಮಾಡಿ ಕಟ್ಕೋ
ಅಮ್ಮ ತೋರ್ಸಿದ್ ಹೆಣ್ಣೇ ಒಪ್ಕೋ
ಫಾರಿನಲ್ಲೇ ಮದ್ವೆ ಮಾಡ್ಕೋ
ವೈಫು ಇಷ್ಟೇನೇ!

ಕುಳ್ಳಗಿದ್ರೂ ಅಡ್ಜಸ್ಟ್ ಮಾಡ್ಕೋ
ದಪ್ಪ ಹೊಟ್ಟೇನ್ ಇಗ್ನೋರ್ ಮಾಡು
ಉಬ್ಬು ಹಲ್ಲನು ನೋಡಲೇ ಬೇಡ
ವೈಫು ಇಷ್ಟೇನೇ

ಗಂಡ ನೀನು ಡ್ರೈವರ್ ಆಗು
ಅಡುಗೆ ಮಾಡಿ ಇಸ್ತ್ರೀ ಹಾಕು
ಮುಸುರೆ ತೊಳೆದು ಕೆಲ್ಸಕ್ ಹೋಗು
ವೈಫು ಇಷ್ಟೇನೆ

ಅಮ್ಮ ಬೇರೆ ಮನೆಯ ಮಾಡ್ಲಿ
ಇಂಗ್ಲೀಷ್ ಕಲಿತ ಆಯಾ ಬರ್ಲಿ
ಕೆಲಸದ ಹೆಣ್ಣು ಹೇಗೆ ಇರ್ಲಿ
ವೈಫು ಇಷ್ಟೇನೇ

ಪ್ರೀತಿ ಪ್ರೇಮ ಎಲ್ಲಾ ಮರ್ತು
ವರ್ಷಕ್ಕೊಮ್ಮೆ ಕಾಲು ತೊಳೆದು
ತಾಳಿ ದೇವರು ಆಗಿ ಹೋಯ್ತು
ವೈಫು ಇಷ್ಟೇನೇ

ಸಿಗರೇಟ್ ಮನೆಯ ಹೊರಗೆ ಸೇದು
ಮಕ್ಕಳ ಸ್ಕೂಲು ಫೀಸು ತುಂಬು
ಜೊತೇಲಿ ಕೂತು ಸೀರಿಯಲ್ ನೋಡು
ವೈಫು ಇಷ್ಟೇನೆ

ಅತ್ತೆ ಮಾವ ದೇವರು ಅನ್ನು
ತವರಿಗೆ ಕಳಿಸಿ ಪಾರ್ಟಿ ಮಾಡು
ನೆನೆಪು ಮಾಡ್ಕಂಡು ಫೋನು ಮಾಡು
ವೈಫು ಇಷ್ಟೇನೇ

ಶರ್ಟಿನ ಒಳಗೆ ಹೊಟ್ಟೆ ಎಳ್ಕೋ
ಪಕ್ದಲ್ ನಿಂತು ಫೋಟೊ ತೆಗೆಸ್ಕೋ
ಮಗಳ ಫ್ರೆಂಡು ಅಂಕಲ್ ಅನ್ನಲಿ
ವೈಫು ಇಷ್ಟೇನೇ

ಮದ್ವೆ ಮೊದ್ಲು ಸೀರೆ ಕೊಡ್ಸು
ಮದ್ವೆ ಆದ್ಮೇಲ್ ಒಡವೆ ತೊಡ್ಸು
ದಿನವೂ ಮಲ್ಲಿಗೆ ಹೂನ ಮುಡ್ಸು
ವೈಫು ಇಷ್ಟೇನೇ

ಗಂಡ ಹೆಂಡತಿ ಸಿನೆಮಾಗೆ ಹೋಗ್ರಿ
ಒಂದೇ ಗ್ಲಾಸಲ್ಲಿ ಜ್ಯೂಸು ಕುಡೀರಿ
ಮೊದಲ ಮಗನಿಗೆ ಹೆಸ್ರು ಇಡ್ರಿ
ವೈಫು ಇಷ್ಟೇನೇ

ದಿನವೂ ತಪ್ಪದೆ ಆಫೀಸ್ಗೋಗು
ರಾತ್ರೀ ವರ್ಗೂ ಕೆಲಸ ಇಟ್ಕೋ
ಸಂಡೇ ಕೂಡ ಓಟಿ ಮಾಡು
ವೈಫು ಇಷ್ಟೇನೇ

ಬೆಳ್ಳಿ ವಜ್ರ ಎಲ್ಲಾ ಕೊಡ್ಸು
ಅವ್ಳ ಹೆಸರಲ್ಲಿ ಬಂಗ್ಲೆ ಕಟ್ಸು
ತಾಜ್ ಮಹಲಿಗೆ ಪಾಯ ಹಾಕು
ವೈಫು ಇಷ್ಟೇನೇ

ಹೆಂಡತಿ ಹೆಸರು ಹಿಟ್ಲರ್ ಆಗಿ
ಹೆಂಡತಿ ಆನೇ ಸೈಜೇ ಆಗ್ಲಿ
ತಿಂಗಳ ಕೊನೇಲಿ ಪಾಪರ್ ಆಗು
ವೈಫು ಇಷ್ಟೇನೇ….
ವೈಫು ಇಷ್ಟೇನೇ…

ಕವಿರಾಜರ ಸಾಹಿತ್ಯದಿಂದಾಗಿ ಕಪಾಳಮೋಕ್ಷ!

17 ಜುಲೈ

ಇದು ಹೊಸ ಅಂಕಣ.

ನಮ್ಮ ಮಾಧ್ಯಮ ಲೋಕದಲ್ಲಿ ತುಂಬಿಕೊಂಡಿರುವ ಅದ್ಭುತ ಪ್ರತಿಭೆಗಳನ್ನು, ಎಲೆ ಮರೆಯಲ್ಲಿ ಅಡಗಿರುವ ಕಾಯಿಗಳನ್ನು, ಪೀಚುಗಳನ್ನು ಬಯಲಿಗೆಳೆಯುವ ಪ್ರಯತ್ನ. ಕುಂದಾಪುರದ ರಂಜಿತ್ ಅಡಿಗ ಈ ಅಂಕಣವನ್ನು ನಿರ್ವಹಿಸಲಿದ್ದಾರೆ. ನಮ್ಮ ಸಿನೆಮಾ ಸಾಹಿತ್ಯ, ಪತ್ರಿಕೆಗಳು, ಟಿವಿ ಚಾನಲ್ಲುಗಳು- ಇಲ್ಲೆಲ್ಲಾ ಹರಡಿಕೊಂಡಿರುವ ಈ ಅಪ್ರತಿಮ ಪ್ರತಿಭೆಗಳ ಪೋಷಣೆಗೆ ನಾವು ಕಟಿ ಬದ್ಧರಾಗಿದ್ದೇವೆ.

……………………..

ಅವನಿಗೆ ಸಾರಿ ಸಾರಿ ಹೇಳಿದ್ದೆ. ಪ್ರೇಯಸಿ ಪಕ್ಕದಲ್ಲಿದ್ದಾಗ ಅಥವ ಆಕೆಗಾಗಿ ಹಾಡುವಾಗ ಯಾವುದಾದರೂ ರೋಮ್ಯಾಂಟಿಕ್ ಹಿಂದಿ ಸಾಂಗನ್ನು ಹಾಡು; ಇಲ್ಲವೇ ಚಂದದbad times of media ಭಾವಗೀತೆ ಯನ್ನು ಬಳಸು. ಭಾವಗೀತೆ ಒಗ್ಗದಿದ್ದರೆ ರಾಜ್ ಕುಮಾರ್ ಅದ್ಭುತವಾಗಿ ಹಾಡಿರುವ ನೂರಾರು ಗಾನಗಳಿವೆ. ಆದರೆ ಯಾವುದೇ ಕಾರಣಕ್ಕೂ, ಅಪ್ಪಿ-ತಪ್ಪಿ ಕೂಡ ಹೊಸ ಕನ್ನಡ ಚಿತ್ರಗೀತೆ ಮಾತ್ರ ಬೇಡ.

ಕೇಳಲಿಲ್ಲ. ಎಪ್ಫೆಮ್ ಪ್ರಭಾವವೋ, ಯೂಟು ಮಹಿಮೆಯೋ ಅಥವಾ ಪ್ರೇಯಸಿಯ ಮೊಗದಿಂದಾಗಿಯೋ ಅವನಿಗೆ ನೆನಪಾದದ್ದು, ಆ ಸಮಯದಲ್ಲಿ ಗುನುಗಿದ್ದು ಅಚ್ಚಕನ್ನಡದ ಹೊಸ ಚಿತ್ರವೊಂದರ ಗೀತೆ. ಅದೂ ಪ್ರತಿಭಾನ್ವಿತ ಯುವ ಗೀತರಚನಕಾರ ಕವಿರಾಜರ ಹಾಡು. “ಪರಿಚಯ” ಸಿನೆಮಾದ ಗೀತೆ.

ನಲ್ಲೆಯ ಮೊಗ ನೋಡಿದೊಡೆ ಅತ್ತ-ಇತ್ತ ನೋಡದೇ, ಸುತ್ತ-ಮುತ್ತಲಿನ ಪರಿವಿಲ್ಲದೇ, ಅರ್ಥ-ಗಿರ್ಥ ಕೂಡ ಅರಿವಿಲ್ಲದವನಂತೆ ಹಾಡತೊಡಗಿದ. ರೋಮ್ಯಾಂಟಿಕ್ ಹಾಡೆಂದರೆ ಗೆಳೆಯ ಸಾಕ್ಷಾತ್ ಉಪೇಂದ್ರ; ಹುಬ್ಬು ಮತ್ತು ಕೈ ಮೇಲೆ ಹೋಗೋದು ಬಿಟ್ಟರೆ ಬೇರೇನೂ ಎಕ್ಸ್ ಪ್ರೆಷನ್ಸ್ ಇಲ್ಲ!

ಮೊದಲ ಸಾಲು “ನಡೆದಾಡುವಾ ಕಾಮನಬಿಲ್ಲು…!”  ಅಂತ ಗೆಳೆಯ ಅಂದ ಕೂಡಲೇ ಪ್ರೇಯಸಿ ಮೈ ತುಂಬ ಉಬ್ಬಿ ಪೂರಿ.

“ಉಸಿರಾಡುವಾ ಗೊಂಬೆಯು ಇವಳು!” ಎಂದೊಡನೆ ಅದೇಕೋ ಆಕೆ ಉಸಿರಾಡುವುದು ಅವನಿಗೆ ಗೊತ್ತಾಗುವಂತೆ ಮಾಡಿ ತೋರಿಸಿದಳು.

“ಸಿಗಲಾರಳು ಹೋಲಿಕೆಗಿವಳೂ…!”

ಅರೆ! ಹಾಗಾದರೆ ಮೊದಲೆರಡು ಸಾಲು ಹೋಲಿಕೆಯಲ್ಲವೇ ಅಂತ ಅವನ ಕಾಲರ್ ಹಿಡಿದು ಕೇಳೋಕೆ ಅವಳೇನು ಕನ್ನಡ ಟೀಚರ್ರೇ? ಏನೊ ಇದೂ ಹೊಗಳಿಕೆ ಇರಬೇಕು ಅಂದುಕೊಂಡು ವೈಯಾರಿಸಿಕೊಂಡು ಮುಂದಿನ ಹೊಗಳಿಕೆಗೆ ಉಬ್ಬಲು ಅಣಿಯಾದಳು.

“…..ಏನೆಂದರೂ ಸುಂದರ ಸುಳ್ಳು!”

ಆಗ ಬಿತ್ತು ನೋಡಿ ಅವನಿಗೆ ಕೆನ್ನೆಗೆ! ಇದುವರೆಗೂ ಹೊಗಳಿದ್ದೆಲ್ಲಾ ಒಂದು ಸುಂದರ ಸುಳ್ಳು ಅಂತ ತನ್ನೆದುರೇ ಅಷ್ಟು ಧೈರ್ಯವಾಗಿ ಹೇಳುವುದಕ್ಕೆ ಅವನಿಗೆಷ್ಟು ಧಿಮಾಕು. ಅಷ್ಟು ಸಿಂಪಲ್ ವಿಷಯ ಅರ್ಥವಾಗುವುದಕ್ಕೆ ಅವಳೇನು ಕನ್ನಡ ಟೀಚರ್ರೇ ಆಗಿರಬೇಕೆ?

ನಿಜ (ಸುಂದರ ನಿಜವಲ್ಲ!) ಕಣ್ರೀ. ಕೆನ್ನೆ ಮೇಲೆ ಅವಳ ಕೈಯ ಐದೂ ಬೆಟ್ಟಿನಚ್ಚು. ಹೊಸ ಚಿತ್ರದ ಡ್ಯೂಯೆಟ್ ಹಾಡಲು ಹೊರಟಿದ್ದ ಗೆಳೆಯ ಆಗಿದ್ದ ಪೆಚ್ಚು!

-ರಂಜಿತ್ ಅಡಿಗ, ಕುಂದಾಪುರ

ನೀವೂ ಜನಪ್ರಿಯ ಅಂಕಣಕಾರರಾಗಬಹುದು!

17 ಮಾರ್ಚ್

(ಮೊದಲ ಭಾಗ)

೪. ಗುರಿಯ ಸ್ಪಷ್ಟತೆಯಿರಲಿ

ಅಂಕಣ ಬರಹಗಾರನಿಗೆ ತನ್ನ ಅಂಕಣವನ್ನು ಓದುವವರು ಯಾರು ಎಂಬ ಬಗ್ಗೆ ಸ್ಪಷ್ಟತೆ ಇರಬೇಕು. ಆ ಸೂರ್ಯನಿಗೇ ಇಡೀ ಜಗತ್ತನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ. ಹೀಗಿರುವಾಗ ಹುಲುಮಾನವನಾದ ಅಂಕಣಕಾರ ಎಲ್ಲರನ್ನೂ ಮೆಚ್ಚಿಸಬೇಕೆನ್ನುವುದು ಅಸಾಧ್ಯವಾದ ಸಂಗತಿ. ತಾನು ಮೆಚ್ಚಿಸಬೇಕಾದ್ದು ತನ್ನ ಅಂಕಣವನ್ನು ಓದುವ ವರ್ಗವನ್ನು ಎಂಬುದನ್ನು ಅಂಕಣಕಾರ ಬಹುಬೇಗ ಮನದಟ್ಟು ಮಾಡಿಕೊಳ್ಳಬೇಕು.
ನಿಮ್ಮ ಅಂಕಣ ಬರಹಕ್ಕೆ ಯುವಕರೇ ಪ್ರಮುಖವಾದ ಓದುಗರು ಎನ್ನುವುದಾದರೆ ಓಂ ಪ್ರಕಾಶ್ ಸಿನೆಮಾದ ಡೈಲಾಗ್ ಮಾದರಿಯಲ್ಲಿ ಹೆಡ್ಡಿಂಗುಗಳನ್ನೂ ಲೇಖನದಲ್ಲಿ ಪಂಚ್ ಲೈನ್‌ಗಳನ್ನೂ ಬಳಸಬೇಕು. ನಿಮ್ಮ ಓದುಗರು ಹೆಂಗಸರು ಎಂದಾದರೆ ಎಸ್.ನಾರಾಯಣ್ ಧಾರಾವಾಹಿ ಮಾದರಿಯಲ್ಲಿ ಬರೆಯಬೇಕು. ಒಟ್ಟಿನಲ್ಲಿ ನೀವು ಯಾರಿಗಾಗಿ ಬರೆಯುತ್ತಿರುವಿರಿ ಎಂಬುದನ್ನು ಯಾವಾಗಲೂ ಸ್ಪಷ್ಟವಾಗಿ ನೆನಪಿಟ್ಟುಕೊಂಡಿರಬೇಕು.

೫. ಗಾಳಿಯೊಂದಿಗೆ ಗುದ್ದಾಡು

ಒಂದು ವಿಷಯದ ಬಗ್ಗೆ, ಯಾವುದಾದರೊಂದು ಕ್ಷೇತ್ರದಲ್ಲಿ ಅರಿಣಿತಿಯನ್ನು ಗಳಿಸಿ ಟೆಕ್ಸ್ಟ್ ಬುಕ್ ಬರೆದ ಹಾಗೆ ಅಂಕಣ ಬರೆಯುವವರು ಇದ್ದಾರೆ. ಅವರ ಅಂಕಣಗಳನ್ನು ಆಸಕ್ತರು ಹಾಗೂ ನಿರಾಸಕ್ತಿರೂ ಇಬ್ಬರೂ ಟೆಕ್ಸ್ಟ್ ಬುಕ್ ಓದಿದ ಹಾಗೆಯೇ ಓದಿಕೊಳ್ಳುತ್ತಾರೆ. ಅಂಥವರನ್ನು ಜನಪ್ರಿಯ ಅಂಕಣಕಾರ ಎನ್ನಲು ಸಾಧ್ಯವಾಗದು.
ಅಂಕಣಕಾರ ಜನಪ್ರಿಯನಾಗಬೇಕಾದರೆ ಗಾಳಿಯೊಂದಿಗೆ ಗುದ್ದಾಡಬೇಕು, ಹತ್ತಿಯ ಮೂಟೆಯ ಮೇಲೆ ತನ್ನ ಬಾಕ್ಸಿಂಗ್ ಕೌಶಲ್ಯವನ್ನು ತೋರಬೇಕು, ಸಗಣಿಯೊಂದಿಗೆ ಸಖ್ಯ ಬೆಳೆಸಿಕೊಳ್ಳಬೇಕು, ಕೊಳಚೆಯ ಅಭಿಮಾನಿಯಾಗಿರಬೇಕು.
ಅರ್ಥವಾಗಲಿಲ್ಲವೇ, ವಿವರಿಸುತ್ತೇವೆ ಕೇಳಿ: ಅಂಕಣಕಾರ ತನ್ನ ಪರಿಣಿತಿಯ ಕ್ಷೇತ್ರದಲ್ಲಿನ ವಿಷಯಗಳ ಬಗ್ಗೆ ಎಷ್ಟೇ ಪ್ರಖರವಾಗಿ ಬರೆದರೂ ಎಲ್ಲರಿಗೂ ಅಪೀಲ್ ಮಾಡಲಾಗುವುದಿಲ್ಲ. ಅದಕ್ಕೆ ಆತ ಗಾಳಿಯ ಹಾಗೆ ಎಲ್ಲರಿಗೂ ಅನುಭವಕ್ಕೆ ಬಂದ, ಎಲ್ಲರಿಗೂ ಲಭ್ಯವಾದ ವಿಷಯ ಆರಿಸಿಕೊಳ್ಳಬೇಕು. ಹಾಗೆಯೇ ಹತ್ತಿಯ ಚೀಲದಂತಹ ಟಾಪಿಕ್ಕುಗಳನ್ನು ಇಟ್ಟುಕೊಳ್ಳಬೇಕು, ತನ್ನ ಪಂಚಿಂಗ್ ಕೌಶಲ್ಯವನ್ನು ತೋರಿಸುತ್ತಾ ಹೋಗಬೇಕು. ಉದಾಹರಣೆಗೆ ಗಾಂಧೀಜಿ, ಧರ್ಮ, ದೇಶಪ್ರೇಮ ಇಂಥವನ್ನೇ ತೆಗೆದುಕೊಳ್ಳಿ. ಇವು ಎಲ್ಲರಿಗೂ ಸಂಬಂಧಿಸಿದವು. ಗಾಂಧೀಜಿಗೆ ನೂರಾ ಎಂಟು ಪ್ರಶ್ನೆಗಳು ಎಂದು ಪುಂಖಾನುಪುಂಖವಾಗಿ ಪ್ರಶ್ನೆಗಳನ್ನು ಎಸೆದು ಲೇಖನ ಬರೀರಿ ಉತ್ತರ ಕೊಡೋಕೆ ಗಾಂಧಿ ಇದ್ರೆ ತಾನೆ ಭಯ? ಹಂಗೇ ಧರ್ಮ ಅಂತ ಇಟ್ಕೊಂಡು ನಿಮಗೆ ಸರಿ ಕಂಡಿದ್ದನ್ನು ಕಾಣದ್ದನ್ನೆಲ್ಲಾ ಗೀಚಿ ಹಾಕಿ, ನಿಮಗೆ ನಿಮ್ಮ ಓದುಗರು ಬಹುಸಂಖ್ಯಾತರಾಗಿರುವುದು ಯಾವ ಧರ್ಮದವರು ಎಂಬ ಸ್ಪಷ್ಟತೆ ಇರುತ್ತದಾದ್ದರಿಂದ ತೊಂದರೆಯಾಗುವುದಿಲ್ಲ.
ಸಗಣಿಯೊಂದಿಗೆ ಸಖ್ಯವೆಂದರೆ, ಅತ್ಯಂತ ಜನಪ್ರಿಯ ಅಂಕಣಕಾರನಾದವನಿಗೆ ಸಗಣಿ ಎಸೆಯುವ, ಮುಖಕ್ಕೆ ಮಸಿ ಬಳಿಯುವ ಕಲೆ ಕರಗತವಾಗಿರಲೇ ಬೇಕು. ಅದೆಂತಹ ಒಳ್ಳೆಯ ವ್ಯಕ್ತಿಯನ್ನೇ ಟೀಕಿಸುವುದಿದ್ದರೂ ನೀವು ಬಳಸುವ ಸಗಣಿ, ಮಸಿಯಿಂದ ಖುದ್ದು ಆ ವ್ಯಕ್ತಿಗೇ ತನ್ನ ಬಗ್ಗೆ ತನಗೆ ಸಂಶಯ ಬಂದುಬಿಡಬೇಕು. ಇದಕ್ಕೆ ವಕೀಲಿ ವೃತ್ತಿಯ ಗೆಳೆಯರಿಂದ ವಾದಕ್ಕೆ ತಯಾರಿಯನ್ನೂ, ಬೀದಿಜಗಳ ಪ್ರವೀಣರಿಂದ ವಿತಂಡವಾದದ ಅಭ್ಯಾಸವನ್ನೂ, ನಡೆದಾಡುವ ಅವಾಚ್ಯ ಶಬ್ಧಕೋಶಗಳಿಂದ ಬೈಗುಳ, ಆರೋಪಗಳನ್ನು ಕಡ ತೆಗೆದುಕೊಳ್ಳಬೇಕು.
ಬರ್ನಾಡ್ ಶಾ ಒಮ್ಮೆ ಹೇಳಿದಂತೆ, “ಹಂದಿಯೊಂದಿಗೆ ಕಿತ್ತಾಡಬೇಡ. ಹೆಚ್ಚು ಕಿತಾಡಿದಷ್ಟು ನೀನು ಕೊಳಕಾಗುತ್ತೀ ಆದ್ರೆ ಹಂದಿ ಅದನ್ನ ಎಂಜಾಯ್ ಮಾಡ್ತಾ ಹೋಗುತ್ತೆ” ಅಂತ. ಈ ತತ್ವವನ್ನು ಬಳಸಿದರೆ ನಿಮಗೆ ಸರಿಸಾಟಿಯೇ ಇರರು.

೬. ಸಂಗ್ರಹ ಬುದ್ಧಿ ಅವಶ್ಯಕ

ಅಂಕಣಕಾರನಿಗಿರುವ ಅತಿ ದೊಡ್ಡ ಸವಲತ್ತು ಎಂದರೆ ಆತ ಕೇವಲ ತನ್ನ ಸ್ವಂತದ್ದನ್ನೇ ಬರೆಯಬೇಕೆಂದಿಲ್ಲ. ಅಥವಾ ಸ್ವಂತದ್ದೆನ್ನುವುದ್ಯಾವುದನ್ನೂ ಬರೆಯಬೇಕೆಂದಿಲ್ಲ. ತನ್ನ ವಾದಕ್ಕೆ ಪೂರಕವಾಗಿ ಅನ್ಯರು ಹೇಳಿದ್ದನ್ನೆಲ್ಲಾ ಸಂಗ್ರಹಿಸಿ ಸೊಗಸಾಗಿ ಒಂದು ಖೌದಿ ಹೊಲಿದು ಬಿಟ್ಟರೆ ಸಾಕು.
ಉದಾಹರಣೆಗೆ ದೇವಸ್ಥಾನದ ಗರ್ಭಗುಡಿಯಲ್ಲಿ ಮೈಕ್ರೋಫೋನ್ ಬಳಸಬೇಕೇ ಬೇಡವೇ ಎಂದು ವಿವಾದವೆದ್ದಿದೆ ಎಂದು ಭಾವಿಸಿ. ಆಗ ಅಂಕಣಕಾರನಾದವನು ತನ್ನ ವಾದಕ್ಕೆ ಪೂರಕವಾಗಿ ಕೋಟ್ ಬಳಸಬಹುದು. ಮೈಕ್ರೋಫೋನ್ ಬಳಸುವುದು ನಿಷಿದ್ಧ ಎಂಬ ಅಭಿಪ್ರಾಯ ಬಿಂಬಿಸ ಹೊರಟವ “ದೇವರ ಪಿಸುಮಾತು ತಲುಪಬೇಕಾದ್ದು ಕಿವಿಗಳಿಗಲ್ಲ, ಹೃದಯಕ್ಕೆ” – ವಾಲ್ಮೀಕಿ ಮಹರ್ಷಿ ಎಂದೂ, ಮೈಕ್ರೋಫೋನ್ ಬಳಕೆಯನ್ನು ಅನುಮೋದಿಸುವವ “ಪುರೋಹಿತಶಾಹಿಯ ಸಂಚಿನ ಗುಟ್ಟು ರಟ್ಟಾಗುವುದಕ್ಕೆ ಬೇಕೇ ಬೇಕು ಡಂಗೂರ” – ವಿಶ್ವಾಮಿತ್ರ ಮಹರ್ಷಿ ಎಂದು ಕೋಟ್ ಬಳಸಬೇಕು. ಇದರಿಂದ ನಿಮ್ಮ ವಾದವನ್ನು ಮಂಡಿಸುವುದರ ಜೊತೆಗೆ ನಿಮ್ಮ ವಾದಕ್ಕೆ ಎಂತೆಂಥ ದೊಡ್ಡವರ ಬೆಂಬಲವಿದೆ ಎಂದು ತೋರ್ಪಡಿಸಿದ ಹಾಗೂ ಆಗುತ್ತೆ. ಜೊತೆಗೆ ವಾಲ್ಮೀಕಿಯಾಗಲಿ, ವಿಶ್ವಾಮಿತ್ರರಾಗಲಿ ಹೀಗೆ ಹೇಳಿದ್ದರು, ಮೈಕ್ರೋಫೋನಿನ ಬಗ್ಗೆ ತಿಳಿದಿದ್ದರು ಎನ್ನುವುದಕ್ಕೆ ಯಾವ ಸಾಕ್ಷಿಯೂ ಇರದು.
ಈ ತಂತ್ರದ ಸೂಕ್ತ ಬಳಕೆಗೆ ಅತ್ಯಂತ ಉಪಯುಕ್ತವಾದ ಸಾಧನ ಅಂತರಜಾಲ.

ಹೆಸರಾಂತ ಅಂಕಣಕಾರರಾಗುವುದಕ್ಕೆ ಬೇಕಾದ ರಹಸ್ಯ ಸೂತ್ರಗಳನ್ನು ಕೇಳಿದಿರಿ. ಭಕ್ತಿಯಿಂದ, ಶ್ರದ್ಧೆಯಿಂದ ಇವನ್ನೆಲ್ಲಾ ಪಾಲಿಸಿದರೆ ಅವಶ್ಯಕವಾಗಿ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಕಡೆಗೆ ಇವೆಲ್ಲವನ್ನೂ ಸರಳಗೊಳಿಸಿ ಒಂದು ಮೆಥಾಡಲಜಿಯನ್ನು ಹೇಳಲಿ ಬಯಸುತ್ತೇವೆ.

ಒಂದು ವಾರದ ಅಂಕಣವನ್ನು ಸಿದ್ಧ ಪಡಿಸಲು ಪಾಲಿಸಬೇಕಾದ ಅತ್ಯಂತ ಸರಳ ಪದ್ಧತಿ:
೧. ನಾಲ್ಕೂ ದಿಕ್ಕಲ್ಲಿ ಕಣ್ಣು ಹಾಯಿಸಿ ಬಿಸಿ ಬಿಸಿಯಾಗಿರುವ ವಿಷಯ ಆಯ್ದುಕೊಳ್ಳಿ.
೨. ವಿಷಯದ ಪರವಾಗಿ ಇಲ್ಲವೇ ವಿರುದ್ಧವಾಗಿ ಮಾತ್ರ ಬರೆಯಿರಿ. ಅಡ್ಡಗೋಡೆ ಮೇಲಿಟ್ಟ ದೀಪಕ್ಕೆ ಎಣ್ಣೆ ದಂಡ ಎಂಬುದು ನೆನಪಿರಲಿ.
೩. ವಿಷಯದ ಪರ, ವಿರುದ್ಧ ವಹಿಸುವುದು ಕಷ್ಟವಾದರೆ ಒಂದ್ರುಪಾಯಿ ನಾಣ್ಯ ತೂರಿ ನಿರ್ಧರಿಸಿ.
೪. ಅನಂತರ ನಿಮ್ಮ ವಾದಕ್ಕೆ ಪೂರಕವಾಗಿ ಲಭ್ಯವಿರುವ ಮಾಹಿತಿಯನ್ನು ಅಂತರಜಾಲದಿಂದ, ನಿಮ್ಮ ವಾದ ಬೆಂಬಲಿಸುವ ಮೂಲಭೂತವಾದಿಗಳಿಂದ, ಪುಸ್ತಕಗಳಿಂದ ಸಂಗ್ರಹಿಸಿಕೊಳ್ಳಿ.
೫. ಕೆಲವು ಕಡೆ ಕೋಟ್ ಮಾಡುತ್ತಾ ಉಳಿದಂತೆ ಸಂಗ್ರಹಿಸಿದ ಮಾಹಿತಿಯನ್ನೆಲ್ಲಾ ನಿಮ್ಮದೇ ಎನ್ನುವಂತೆ ಬರೀರಿ.
೬. ನಿಮ್ಮನ್ನು ಮೆಚ್ಚಿ, ನಿಮ್ಮ ಪ್ರತಿ ಅಂಕಣವನ್ನು ಕೊಂಡಾಡುವ ಓದುಗರ ಪತ್ರಗಳು ಮಾತ್ರ ಪತ್ರಿಕೆಯಲ್ಲಿ ಪ್ರಕಟವಾಗುವಂತೆ ನೋಡಿಕೊಳ್ಳಿ. ಅಂಥದ್ದು ಯಾವುದೂ ಬರದಿದ್ದರೆ ನೀವೇ ಓದುಗರ ಹೆಸರಲ್ಲಿ ಬರೆದುಕೊಂಡು ಪ್ರಕಟಿಸಿ.

ಇವನ್ನು ಪಾಲಿಸಿ ಪ್ರತಿಯೊಬ್ಬರೂ ಅತ್ಯುತ್ತಮ ಕಾಲಮಿಸ್ಟರಾಗಿ ಎಂದು ಹಾರೈಸುತ್ತೇವೆ.

ಪ್ರಖ್ಯಾತ ಅಂಕಣಕಾರರಾಗುವುದು ಹೇಗೆ?

16 ಮಾರ್ಚ್

ಈ ಹಿಂದೆ ನಾವು ಉತ್ತಮ ಕವಿಯಾಗಲು ನೀಡಿದ್ದ ಪಂಚ ಸೂತ್ರಗಳನ್ನು ಬಳಸಿ ಅತ್ಯಂತ ಯಶಸ್ವಿ ಕವನಗಳನ್ನು ಗೀಚಿ ಕವಿಯಾದ ಅನೇಕರು ನಮ್ಮನ್ನು ಅಭಿನಂದಿಸಿದ ಹಿನ್ನೆಲೆಯಲ್ಲಿ ಅಂದು ಶುರು ಮಾಡಿದ್ದ ಸಾಹಿತ್ಯ ಅಭಿಯಾನವನ್ನು ಮುಂದುವರೆಸಲು ನಿರ್ಧರಿಸಿದ್ದೇವೆ.

ಈ ಮಾಲಿಕೆಯ ಎರಡನೆಯ ಆವೃತ್ತಿಯಲ್ಲಿ ನಾವು ಅತಿ ಸಾಮಾನ್ಯ ಬರಹಗಾರ ಕೂಡ ‘ಪ್ರಖ್ಯಾತ ಅಂಕಣಕಾರನಾಗುವುದು ಹೇಗೆ?’ ಎಂದು ತಿಳಿಸಿಕೊಡುತ್ತೇವೆ. ಎಂದಿನಂತೆ ನಮ್ಮ ಸಲಹೆ ಸೂಚನೆಗಳು ಅತ್ಯಂತ ಚುಟುಕಾಗಿಯೂ, ಸ್ಪುಟವಾಗಿಯೂ, ಪರಿಣಾಮಕಾರಿಯಾಗಿಯೂ ಇರುತ್ತವೆಂಬುದನ್ನು ನೆನಪಿಸಬೇಕಿಲ್ಲ. ಹಾಗಾದರೆ, ಭಯ, ಭಕ್ತಿ, ಶ್ರದ್ಧೆಗಳಿಂದ ನಮ್ಮ ಉಪದೇಶ ಕೇಳಲು ಸಿದ್ಧರಾಗಿ.

ಅಂಕಣ ಬರಹವೆಂಬುದು ಯಾವ ಸಾಹಿತ್ಯ ಪ್ರಕಾರ ಎಂದು ತಲೆ ಕೆಡಿಸಿಕೊಂಡು ‘ಕೇಶ’ವನ ಕೃಪೆಯಿಂದ ಉಳಿದುಕೊಂಡಿರುವ ನಾಲ್ಕೈದು ಕೇಶ ಕುಡಿಗಳನ್ನು ಉದುರಿಸುವ ಅಗತ್ಯವಿಲ್ಲ. ಬೇರೆಲ್ಲ ಸಾಹಿತ್ಯ ಪ್ರಕಾರಗಳ ಹಾಗೆ ಇದು ತನ್ನ ಹುಟ್ಟನ್ನು ಅತ್ಯಂತ ಶಕ್ತಿಯುತವಾದ ಗುಟ್ಟನ್ನಾಗಿ ಉಳಿಸಿ ಸಂಶೋಧಕರು, ಪಂಡಿತರಿಗೆ ಹೆಮ್ಮೆ ತರುವ ಸರಕಾಗಿಲ್ಲ. ಅಂಕಣ ಬರಹ ಹುಟ್ಟಿದ್ದು ವೃತ್ತ ಪತ್ರಿಕೆಗಳೆಂಬ ಕುಲ ಹುಟ್ಟಿದ ನಂತರ. ಮೊದ ಮೊದಲು ವೃತ್ತ ಪತ್ರಿಕೆಯೆಂಬ ಬಹುದೊಡ್ಡ ಪಾರ್ಕಿಂಗ್ ಲಾಟನ್ನು ಸುದ್ದಿಗಳೆಲ್ಲಾ ಆಕ್ರಮಿಸಿದ ನಂತರ ಅನಾಥವಾಗಿ, ಬೇವಾರ್ಸಿಯಾಗಿ ಉಳಿದಿರುತ್ತಿದ್ದ ಜಾಗವನ್ನು ಈ ‘ಅಂಕಣ ಬರಹ’ಕ್ಕೆ ಬಿಟ್ಟುಕೊಡಲಾಗುತ್ತಿತ್ತು. ಅಷ್ಟಕ್ಕೇ ಚಿಗುರಿಕೊಂಡ ಈ ಅಂಕಣ ಬರಹಗಾರರ ಗಣ ಪ್ರತಿ ಪತ್ರಿಕೆಯಲ್ಲಿ ತನ್ನ ಪಾಲನ್ನು ಭದ್ರ ಮಾಡುವ ಕೆಲಸ ಮಾಡಲು ಶುರು ಮಾಡಿತು. ಈಗ ಅಂಕಣ ಬರಹಗಳಿಲ್ಲದ ಪತ್ರಿಕೆಯನ್ನು ನೋಡಿದರೆ ಕುಂಕುಮವಿಲ್ಲದ ಹೆಣ್ಣಿನ ಹಣೆ ನೋಡಿದ ಹಾಗಾಗುತ್ತೆ(ಈ ವಾಕ್ಯದಲ್ಲಿ ಸ್ತ್ರೀ ವಾದ, ಕೋಮುವಾದ, ಕಾಮವಾದಗಳನ್ನು ಹುಡುಕುವ ಉದ್ಧಟತನ ತೋರಿದವರನ್ನು ಉಗ್ರವಾಗಿ ಶಿಕ್ಷಿಸಲಾಗುವುದು!).

ಇದಿಷ್ಟು ಅಂಕಣ ಬರಹದ ಇತಿಹಾಸ. ಇನ್ನು ಪ್ರಖ್ಯಾತ ಅಂಕಣ ಕಾರನಾಗುವುದಕ್ಕೆ ಪಾಲಿಸಬೇಕಾದ ನಿಯಮಗಳ ಬಗ್ಗೆ ಗಮನ ಹರಿಸೋಣ.

೧. ನಂಬರ್ ಮ್ಯಾಟರ್ಸ್

ಅಂಕಣಕಾರನೊಬ್ಬನ  ಯಶಸ್ಸು ನಿರ್ಧಾರವಾಗುವುದು ಒಂದೇ ಅಂಶದಿಂದ. ಆತನ ಅಂಕಣವನ್ನು ಎಷ್ಟು ಮಂದಿ ಓದುತ್ತಾರೆ? ಮುದ್ರಕ, ಮಾಲೀಕ, ಸಂಪಾದಕ ಹಾಗೂ ಅಂಕಣಕಾರ- ಇಷ್ಟು ಮಂದಿ ಓದುವ ಪ್ರಶಸ್ತಿ ವಿಜೇತ ಬರಹಕ್ಕಿಂತ ಅತಿ ಹೆಚ್ಚು ಮಂದಿ ಓದುವ ಕಳಪೆ ಅಂಕಣ ಯಶಸ್ಸಿನ ಮಾಪಕದಲ್ಲಿ ಹೆಚ್ಚು ಅಂಕ ಗಳಿಸುತ್ತದೆ. ಹೀಗಾಗಿ ಅಂಕಣಕಾರನ ಯಶಸ್ಸು ಆತನ ಓದುಗರ ಸಂಖ್ಯೆಯ ಮೇಲೆ- ಅರ್ಥಾತ್ ಪತ್ರಿಕೆಯ ಓದುಗರ ಸಂಖ್ಯೆಯ ಮೇಲೆ ನಿರ್ಭರವಾಗಿರುತ್ತದೆ.
ಹೀಗಾಗಿ ಮೊದಲು ಅತ್ಯಧಿಕ ಪ್ರಸಾರ ಹೊಂದಿರುವ ಪತ್ರಿಕೆ ಯಾವುದು ಎಂಬುದನ್ನು ತಿಳಿದುಕೊಳ್ಳಿ. ಅನಂತರ ಆ ಪತ್ರಿಕೆಯ ಸಂಪಾದಕರ ಹೆಂಡತಿಯ ತವರು ಮನೆಯ ದಿಕ್ಕು, ಸಂಪಾದಕರ ಕಾರು ಚಾಲಕನ ಮನೆಯ ಓಣಿ, ಸಂಪಾದಕರ ಪೆನ್ನಿನ ಶಾಯಿ ಸರಬರಾಜು ಮಾಡುವವನ ವಿಳಾಸ, ಅವರ ಬಟ್ಟೆಗೆ ಇಸ್ತ್ರಿ ತಿಕ್ಕುವವನ ವಿವರ, ಸಂಪಾದಕರು ಅಡ್ಡ ಬೀಳುವ ಮಠಗಳು, ಸೆಲ್ಯೂಟು ಹೊಡೆಯುವ ಮಂತ್ರಿ ಮಹೋದಯರ ಬಗ್ಗೆ ಮಾಹಿತಿ ಸಂಗ್ರಹಿಸಿ. ಅಂಕಣಕ್ಕೆ ಬೇಕಾದ ವಿಷಯ ಸಂಗ್ರಹದಲ್ಲಿ ನ್ಯೂನ್ಯತೆಯಿದ್ದರೂ ಈ ಮುಂಚೆ ತಿಳಿಸಿದ ವಿವರಗಳ ಸಂಗ್ರಹದಲ್ಲಿ ಚಿಕ್ಕ ಲೋಪವೂ ಆಗಬಾರದು. ಸಂಗ್ರಹವಾದ ಮಾಹಿತಿಯ ಆಧಾರದ ಮೇಲೆ ಯಾರ ಕಾಲುಗಳಿಗೆ ಎಷ್ಟು ನಿಮಿಷ ಮಸಾಜ್ ಮಾಡಬೇಕು, ಯಾರ ಅಂಗೈಗೆ ಎಷ್ಟು ಶಾಖ ಕೊಡಬೇಕು ಎಂಬುದನ್ನು ತೀರ್ಮಾನಿಸಬೇಕು. ಆ ಮೂಲಕ ಅಂಕಣಕಾರನ ಸ್ಥಾನಮಾನವನ್ನು ಸಂಪಾದಿಸಿಕೊಳ್ಳಬೇಕು. ಎಲೆಯ ಮರೆಯ ಕಾಯಿಯಾಗಿ ಉಳಿಯುವುದು ನಿಮ್ಮ ಆದರ್ಶವಾದರೆ ಈ ಸಲಹೆಯನ್ನು ಕಸದ ಬುಟ್ಟಿಗೆ ಹಾಕಿ.

೨. ನಿರಂತರತೆಯೇ ತಾಯಿ ತಂದೆ

ಒಮ್ಮೆ ನೀವು ಅಂಕಣಕಾರನ ಸ್ಥಾನಮಾನವನ್ನು ಪಡೆದ ಮೇಲೆ ಅತ್ಯಂತ ತುರ್ತಿನಲ್ಲಿ ರೂಢಿಸಿಕೊಳ್ಳಬೇಕಾದ ಗುಣವೆಂದರೆ ನಿರಂತರತೆ. ನಿರಂತರವಾಗಿಲ್ಲದ ಗಂಗಾಜಲಕ್ಕಿಂತ ನಿರಂತರವಾದ, ಅಡೆತಡೆಯಿಲ್ಲದ ಕೊಚ್ಚೆ ನೀರು ನಮ್ಮ ಪತ್ರಿಕೆಗಳಿಗೆ ಅತಿ ಮುಖ್ಯ. ಹೀಗಾಗಿ ಕವಿಗಳ ಹಾಗೆ ಲಹರಿ ಬಂದಾಗ ಬರೆಯುವ, ಸ್ಪೂರ್ತಿಗಾಗಿ, ಪ್ರೇರಣೆಗಾಗಿ ಬೀದಿ ಸುತ್ತುವ ಹಾಗಿಲ್ಲ. ನಿಂತ ಭಂಗಿಯಲ್ಲೇ ಟಿಕೆಟ್ ವಿವರಗಳನ್ನು ಗೀಚಿಕೊಳ್ಳುವ ಬಸ್ ಕಂಡಕ್ಟರನ ಹಾಗೆ ಬರೆದು ಬಿಸಾಕುವ ತಾಕತ್ತು ಮೊದಲು ರೂಢಿಸಿಕೊಳ್ಳಬೇಕು.

೩. ಗಾಳಿ ಬಂದಾಗ ತೂರಿಕೋ

ವಾರಕ್ಕೊಂದು ಅಂಕಣ ಬರೆಯುವುದಕ್ಕೆ ಈ ದಿಶೆಯಲ್ಲಿ ಅನೇಕ ಅಡ್ಡಿ ಆತಂಕಗಳು ಎದುರಾಗುತ್ತವೆ. ಉದಾಹರಣೆಗೆ,  ಅಧ್ಯಯನದ ಕೊರತೆ, ಸತ್ಯಾಸತ್ಯತೆಯ ಪರಿಶೀಲನೆ, ತಥ್ಯಗಳ ತುಲನೆ, ಪೂರ್ವಾಗ್ರಹದಿಂದ ಮುಕ್ತವಾದ ವಿಶ್ಲೇಷಣೆ ಮುಂತಾದವು. ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾ ಕೂತರೆ ಪ್ರಖ್ಯಾತ ಅಂಕಣಕಾರನಾಗುವುದಕ್ಕೆ ಸಾಧ್ಯವಿಲ್ಲ. ‘ತಾನು ಬರೆಯುವುದೆಲ್ಲ ಸತ್ಯ, ತಾನು ಬರೆದದ್ದು ಮಾತ್ರ ಸತ್ಯ’ ಎಂಬ ಸರಳವಾದ ನಂಬಿಕೆಯನ್ನು ಅಂಕಣಕಾರನಾದವನು ತನ್ನ ಹೃದಯದಲ್ಲಿ ಸುವರ್ಣಾಕ್ಷರಗಳಿಂದ ಕೆತ್ತಿಸಿಟ್ಟುಕೊಳ್ಳಬೇಕು. ಒಂದು ವಿಷಯದ ಬಗ್ಗೆ ಅವರಿವರ ವಾದಗಳನ್ನೆಲ್ಲ ಕೇಳಿ ಸತ್ಯ ಯಾವುದು, ಸುಳ್ಳು ಯಾವುದು ಎಂದು ಪತ್ತೆ ಹಚ್ಚಿ, ಸ್ವತಂತ್ರವಾಗಿ ಅಧ್ಯಯನ ಮಾಡಿ ಅಭಿಪ್ರಾಯ ರೂಪಿಸಿಕೊಂಡು ಒಂದು ಅಂಕಣ ಬರೆಯುವಷ್ಟರಲ್ಲಿ ತಿಂಗಳು ಕಳೆದುಹೋಗಿರುತ್ತದೆ!
ಹೀಗಾಗಿ ಅಂಕಣಕಾರನಾದವನು ಸದಾ ಸಮಾಜಮುಖಿಯಾಗಿರಬೇಕು. ಬಹುಸಂಖ್ಯಾತರ ನಾಡಿಮಿಡಿತದ ತಿಳಿವನ್ನು ಹೊಂದಿರಬೇಕು. ತಾನು ಬರೆದದ್ದು ಸತ್ಯವೋ, ಪೂರ್ವಾಗ್ರಹದಿಂದ ಮುಕ್ತವಾದದ್ದೋ, ರಚನಾತ್ಮಕವಾದದ್ದೋ ಎಂದು ಆಲೋಚಿಸುವುದರಲ್ಲಿ ಸಮಯ ಕಳೆಯದೆ ಜನ ಸಾಮಾನ್ಯರು ಆ ವಿಷಯದ ಬಗ್ಗೆ ಯಾವ ಭಾವನೆ ಹೊಂದಿದ್ದಾರೆ ಎಂಬುದನ್ನು ಗ್ರಹಿಸಬೇಕು. ಗಾಳಿ ಬರುತ್ತಿರುವ ದಿಕ್ಕನ್ನು ಕಂಡುಕೊಂಡು ಅಲ್ಲಿ ತೂರಿಕೊಂಡು ಬಿಡಬೇಕು. ಭಯೋತ್ಪಾದಕ ದಾಳಿಯಾದೊಡನೆ ಅದಕ್ಕೆ ಸಂಬಂಧಿಸಿದ, ಸಂಬಂಧಿಸಿರದ ರಾಜಕಾರಣಿಗಳನ್ನು ಉಗಿಯಬೇಕು, ಸೈನ್ಯವನ್ನು ಹೊಗಳಿ ಅಟ್ಟಕ್ಕೇರಿಸಬೇಕು. ಕ್ರಿಕೆಟ್ ಪಂದ್ಯದಲ್ಲಿ ನಮ್ಮ ತಂಡ ವಿಜಯಿಯಾದರೆ ನಮ್ಮನ್ನು ಗೆಲ್ಲುವವರು ಯಾರಿದ್ದಾರೆ ಎಂದು ಜಗತ್ತಿಗೇ ಸವಾಲು ಎಸೆಯಬೇಕು. ಸತತವಾಗಿ ಸೋಲಲು ಶುರುವಾದರೆ ಒಬ್ಬೊಬ್ಬ ಆಟಗಾರನ ಇತಿಹಾಸವನ್ನೂ ಕೆದಕಿ, ಅವರ ಹಣದಾಸೆಯನ್ನು, ಸ್ವಾರ್ಥವನ್ನು ಜರೆದು ಉಗಿದು ಉಪ್ಪಿನಕಾಯಿ ಹಾಕಬೇಕು. ಅಲ್ಪಸಂಖ್ಯಾತರ ಮೇಲೆ ದಾಳಿ ನಡೆದರೆ, ಮಾರಣ ಹೋಮವೇ ಕಣ್ಣೆದುರು ನಡೆದರೂ ಅದು ಬಹುಸಂಖ್ಯಾತರ ಮೇಲಿನ ನಿರಂತರ ದೌರ್ಜನ್ಯಕ್ಕೆ ಸಣ್ಣ ಪ್ರತಿಕ್ರಿಯೆ ಎನ್ನಬೇಕು, ಸ್ಯೂಡೋ ಸೆಕ್ಯುಲರ್ ಮಾಧ್ಯಮಗಳ ಹುಯಿಲು ಅನ್ನಬೇಕು. ಇಡೀ ಜಗತ್ತಿನ ನೈತಿಕ ಅಧಃಪತನಕ್ಕೆ, ಹಣದ ವ್ಯಾಮೋಹಕ್ಕೆ, ಗೋವಾದ ಬೀಚಿನಲ್ಲಿ ಹೆಚ್ಚುತ್ತಿರುವ ಅತ್ಯಾಚಾರದ ಪ್ರಕರಣಗಳಿಗೆ ಬೆಂಗಳೂರಿನ ಐಟಿ ಬಿಟಿ ಮಂದಿಯೇ ಕಾರಣ ಅನ್ನಬೇಕು.
ಈ ಮಾದರಿಗಳನ್ನು ಅನುಸರಿಸಿದರೆ ಎರಡು ಲಾಭಗಳಿವೆ. ಬಹುಸಂಖ್ಯಾತರ ಭಾವನೆಗೆ ಅಂಕಣಕಾರನಾದವ ಸಹಾನುಕಂಪ ತೋರಿದಂತಾಗುತ್ತದೆ. ಎರಡನೆಯದು ಎಂಥದ್ದೇ ಸಂಕಷ್ಟ ಬಂದರೂ, ಯಾವುದೇ ಟೀಕೆಗಳು ಬಂದರೂ ತಾನು ಜನ ಸಾಮಾನ್ಯರ ಎದೆಯ ಅನಿಸಿಕೆಗೆ ಧ್ವನಿ ಕೊಟ್ಟೆನಷ್ಟೇ ಎಂದು ಡೈಲಾಗ್ ಹೊಡೆದು ತಪ್ಪಿಸಿಕೊಳ್ಳಬಹುದು.

(ಇನ್ನೂ ಉಂಟು)

ಉತ್ತಮ ಕವಿಯಾಗಲು ಪಂಚ ಸೂತ್ರಗಳು!

8 ನವೆಂ

(ನಗೆ ನಗಾರಿ ಸಾಹಿತ್ಯ ಬ್ಯೂರೋ)

ಜಗತ್ತಿನ ಎಲ್ಲಾ ವೃತ್ತಿಗಳನ್ನು ಯಶಸ್ವಿಯಾಗಿ ಮಾಡುವುದಕ್ಕೆ ಆವಶ್ಯಕವಾದ ಸೂತ್ರಗಳನ್ನು ರೂಪಿಸುತ್ತಾ ಅವುಗಳನ್ನು ಜಗತ್ತಿನಾದ್ಯಂತ ಹೇಳಿಕೊಡುತ್ತಾ ಹೆಸರುವಾಸಿಯಾದ ಸಾಮ್ರಾಟರು ನಗೆ ನಗಾರಿಯ ಕಛೇರಿಗೆ ಭೇಟಿಯಿತ್ತಾಗ ಅವರಿಗೆ ಉತ್ತಮ ಕವಿಯಾಗುವುದಕ್ಕೆ ನಿಮ್ಮ ಸಲಹೆ ಏನು?’ ಎಂದು ಒಬ್ಬ ಉದಯೋನ್ಮುಖ ಕವಿ ಹಾಗೂ ಹಿರಿಯ ಪತ್ರಕರ್ತರು ಕೇಳಿದರು. ಕೆಲ ಸಮಯ ಗಾಢವಾದ ಆಲೋಚನೆಯಲ್ಲಿ ಮುಳುಗಿ ಎದ್ದ ಸಾಮ್ರಾಟರು ಉತ್ತಮ ಕವಿಗೆ ಆವಶ್ಯಕವಾದ ಪಂಚ ಸೂತ್ರಗಳನ್ನು ನೀಡಿದರು.


poet

. ಮುಖವೇ ಪ್ರತಿಭೆಯ ಕನ್ನಡಿ

ನಮ್ಮೊಳಗಿನ ಪ್ರತಿಭೆಯು ಎಂಥದ್ದು ಎಂಬುದು ನಮ್ಮ ಮುಖ್ವಾನ್ನು ನೋಡಿದ ಕ್ಷಣವೇ ಎಲ್ಲರಿಗೂ ಅರಿವಿಗೆ ಬಂದುಬಿಡಬೇಕು. ಹೀಗಾಗಿ ಕವಿಯಾಗಲು ಬಯಸುವ ಪ್ರತಿಯೊಬ್ಬರು ತಮ್ಮ ವೇಷಭೂಷಣ, ಕೇಶವಿನ್ಯಾಸ, ಭಾಷೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಬೇಕು. ಕವಿಗಳಿಗೊಪ್ಪುವ ಕುರುಚಲು ಗಡ್ಡ, ಮೂಗಿನ ಮೇಲೊಂದು ಕನ್ನಡಕ, ದೊಗಲೆ ಜುಬ್ಬ, ಕೆಳಗೆ ಅಂತಸ್ಥಿಗೆ ತಕ್ಕ ಹಾಗೆ ಜೀನ್ಸ್ ಪ್ಯಾಂಟು ಇಲ್ಲವೇ ಸಾಧಾರಣ ಪ್ಯಾಂಟು, ಕಟಿಂಗಿನ ಮುಖ ಕಾಣದ ಪೊದೆ ಕೂದಲು, ಹೆಗಲ ಮೇಲೊಂದು ಜೋಳಿಗೆಯಂತಹ ಚೀಲ ಅದರೊಳಗೆ ಯಾರಿಗೂ ಅರ್ಥವಾಗದ ಗಹನವಾದ ವಿಷಯದ ಬಗೆಗಿನ ಪುಸ್ತಕಗಳು. ಬೆರಳುಗಳ ನಡುವೆ ಸಿಗರೇಟು ಇಲ್ಲವೇ ನಶ್ಯಈ ರೀತಿಯ ವೇಷ ಭೂಷಣ ಅಭ್ಯಾಸ ಮಾಡಿಕೊಳ್ಳಬೇಕು. ನಿಜ, ಹೀಗೆ ತಯಾರಾಗಿ ನಿಂತ ತಕ್ಷಣ ಕವಿತೆ ಹುಟ್ಟಿಬಿಡುವುದಿಲ್ಲ. ಆದರೆ ನೀವು ಒಬ್ಬ ಉತ್ತಮ ಕವಿಯಾಗಿ ಕಾಣಿಸಿಕೊಳ್ಳುತ್ತೀರಿ. ಕಾಲಿಗೆ ಪ್ಯಾಡು,ಕೈಗೆ ಗ್ಲೌಸು ಹಾಕಿಕೊಂಡು ನಿಂತವನನ್ನು ಕ್ರಿಕೆಟ್ ಪ್ಲೇಯರ್ ಎಂದು ಗುರುತಿಸಿಬಿಡುವ ಹಾಗೆ ನಿಮ್ಮನ್ನು ಕವಿ ಎಂದು ಕರೆಯತೊಡಗುತ್ತಾರೆ.

. ಸುಲಿದ ಬಾಳೆ ಹಣ್ಣು ವರ್ಜ್ಯ

ನಿಮ್ಮ ವೇಷ ಭೂಷಣದ ಮೂಲಕ ಒಮ್ಮೆ ನಿಮ್ಮನ್ನು ಕವಿ ಎಂದು ಜನರು ಒಪ್ಪಿಕೊಂಡು ಬಿಟ್ಟ ನಂತರ ನೀವು ನುಡಿದದ್ದೆಲ್ಲವೂ ಮಹಾಕಾವ್ಯವಾಗುತ್ತದೆ. ನೀವು ಕನವರಿಸಿದ್ದೆಲ್ಲವೂ ಕವನ ಸಂಕಲನಗಳಾಗುತ್ತವೆ. ಆದರೆ ಇಲ್ಲಿ ಒಂದು ರಹಸ್ಯಮಯವಾದ ಸೂತ್ರವನ್ನು ಗಮನಿಸಬೇಕು. ಒಮ್ಮೆ ನಿಮಗೆ ಕವಿ ಎಂಬ ಮನ್ನಣೆ ಸಿಕ್ಕ ನಂತರ ನೀವು ಎಲ್ಲರಿಗೂ ಅರ್ಥವಾಗುವಂತಹ, ಎಲ್ಲರೂ ಅರ್ಥ ಮಾಡಿಕೊಂಡು ಸವಿದು ಮೆಚ್ಚಬಹುದಾದಂತಹ ಕವನಗಳನ್ನು ಬರೆದುಬಿಡಬಾರದು.ಇದರಿಂದ ನೀವು ಕೇವಲ ಕ್ಯಾಸೆಟ್ ಕವಿಯಾಗಿಬಿಡುವಿರಿ ಇಲ್ಲವೇ ಹನಿಮಿನಿ ಕವಿಯಾಗುವಿರಿ. ಯಾರಿಗೂ ಅರ್ಥವಾಗದ, ಭಾಷೆಗೊತ್ತಿದ್ದರೂ ಅರ್ಥ ತಿಳಿಯಲು ಶೀರ್ಷಾಸನ ಹಾಕಿ ಓದಬೇಕಾದ ಸಾಲುಗಳನ್ನು ರಚಿಸಬೇಕು. ಈ ಸೂತ್ರದನ್ವಯ ರಚಿತವಾದ ನಮ್ಮ ಇತ್ತೀಚಿನ ಕವನದ ತುಣುಕೊಂದನ್ನು ಗಮನಿಸಬಹುದು

ಅಂಡಾಂಡ ಪಿಂಡಾಂಡ ಬ್ರಹ್ಮಾಂಡ ಒಡೆದೊಡೆದು

ಹೊಡೆದೊಡೆದು, ಉರುಳುರುಳಿ

ಹಬೆಯ ಕಾವು ಏರಿ, ಎಲೆಯ ನಡುವೆ ಜಾರಿ

ಸುರಿವ ಮಳೆಯ ಮೋಹ,

ಬಿಸಿಲ ಬಯಲು ನಿರ್ಮೋಹ, ಜಾಣ

ಕಾಜಾಣ, ಸಚಿನ್ನನ ನಲವತ್ತನೆ ಶತಕ

. ಗಾತ್ರಮುಖ್ಯವಲ್ಲ

ಹನಿ ಮಿನಿ ಕವನಗಳನ್ನು ಗೀಚಿದವರು ಎಂದಿಗೂ ಕವಿಯಾಗುವುದಕ್ಕೆ ಸಾಧ್ಯವಿಲ್ಲ ಎಂದು ಹಿರಿಯ ಕವಿಗಳು ಆಗಾಗ ಪೇಚಾಡುವುದನ್ನು ನೀವು ಪತ್ರಿಕೆಗಳವರದಿಗಳಲ್ಲಿ ಗಮನಿಸಿರಬಹುದು. ಅದು ಶುದ್ಧ ಭ್ರಮೆ. ಈಗಿನ ವೇಗದ ಯುಗದಲ್ಲಿ ಓದುಗರ ಸಮಯ ಬಹಳ ಮುಖ್ಯವಾದದ್ದು. ಹೀಗಾಗಿ ಪೇಜುಗಟ್ಟಲೆ ಬರೆದು(ಕೊರೆದು) ಓದುಗರ ಒತ್ತಡ ನಿರ್ವಹಣಾ ಕೌಶಲವನ್ನು ಪರೀಕ್ಷಿಸುವುದಕ್ಕಿಂತ, ಎರಡು ಮೂರು ನಾಲ್ಕು ಸಾಲುಗಳಲ್ಲಿ ಕವನಕ್ಕೆ ಅಂತ್ಯ ಹಾಡುವುದು ಸೂಕ್ತ. ನೀವು ಬರೆದದ್ದು ಯಾವುದೂ ಭೂಮಿಯ ಮೇಲಿನ ಯಾರಿಗೂ ಅರ್ಥವಾಗುವುದಿಲ್ಲ ಎಂದ ಮೇಲೆ ನಲವತ್ತು ಸಾಲು ಬರೆಯುವ ಶ್ರಮವೇಕೆ?

ಹ್ಹಾ! ಲಕ್ಷ್ನಣ ಸೀತಾ

ಧೋನಿ ಟಾಸ್ ಸೋತಾ!

ಎಂಬ ನಮ್ಮ ಸರಳವಾದ ಕವಿತೆಯನ್ನೇ ಗಮನಿಸಿ.

ವಿಮರ್ಶಕರು ಇದನ್ನು ಕಂಡ ಬಗೆ ನೋಡಿ ಮೇಲ್ನೋಟಕ್ಕೆ ಇದು ಅತ್ಯಂತ ಬಾಲಿಶವಾಗಿ ಸರಳವಾಗಿ ಕಂಡುಬಂದರೂ ಇದರ ಅರ್ಥವ್ಯಾಪ್ತಿ, ಬೀಸು ಬಹುದೊಡ್ಡದು. ಕವಿಯು ಇಲ್ಲಿ ಪೌರಾಣಿಕ ಪ್ರಜ್ಞೆಯನ್ನು ವರ್ತಮಾನಕ್ಕೆ ಎಳೆದುತರುವ ಪ್ರಯತ್ನ ಮಾಡಿದ್ದಾರೆ. ಮಾಯಾಮೃಗದ ಬೆನ್ನಟ್ಟಿದ ಶ್ರೀರಾಮ ಇಂದಿನ ದಿನಗಳಲ್ಲಿ ಯಶಸ್ಸಿನ ಬೆನ್ನುಹತ್ತಿದ ಯಾವುದೇ ವ್ಯಕ್ತಿಯ ಪ್ರತಿನಿಧಿಯಾಗಬಹುದು. ಇನ್ನೇನು ಬಾಣ ಚಿಮ್ಮಿ ಮಾಯಾಮೃಗದ ಎದೆ ಹೊಕ್ಕು ಅದು ಕೈವಶವಾಗಬೇಕು ಎನ್ನುವಷ್ಟರಲ್ಲಿ ಅದು ರಾಮನ ಪರಿವಾರವನ್ನು ಆತಂಕದಲ್ಲಿ ಕೆಡವುದಕ್ಕೆ ಹೀಗೆ ಕೂಗುತ್ತದೆ. ಇಲ್ಲಿ ಕವಿಯ ಸೃಜನಶೀಲತೆಯ ಸತ್ವ ಪರೀಕ್ಷೆ ಅಡಗಿದೆ. ಮಾನ್ಯರು ಅದನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಧೋನಿ ಟಾಸ್ ಸೋತ ಎಂದು ಕೂಗುವ ಮಾಯಾಮೃಗವು ಮನೆಯಲ್ಲಿರುವ ಲಕ್ಷಣ ಹಾಗೂ ಸೀತೆಯರಲ್ಲಿ ಎಷ್ಟು ಆತಂಕ ಹುಟ್ಟಿಸಬಹುದು ಎಂಬ ರೂಪಕ ಈ ಕಾಲಕ್ಕೆ ತಕ್ಕನಾದದ್ದು.

. ಉತ್ತಮ ಸಾಂಘಿಕ ಜೀವನ

ನಮ್ಮ ಕವನಗಳಿಗೆಲ್ಲಾ ವಿಮರ್ಶಕರು ಇರುವ ಇಲ್ಲದಿರುವ ಅರ್ಥಗಳನ್ನೆಲ್ಲಾ ಆರೋಪಿಸಿ ಲೈಟ್ ಪದ್ಯಗಳನ್ನೂ ಹೆವಿ ಮಾಡುವುದರ ಹಿಂದಿರುವ ಗುಟ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು. ಮನುಷ್ಯ ಸಂಘ ಜೀವಿ. ಆತ ಏಕಾಂಗಿಯಾಗಿ ಬದುಕುವುದು ಸಮಾಜ ವಿರೋಧಿ. ಹೀಗಾಗಿ ಕವಿ ತಾನೊಬ್ಬನೇ ತಿಂದು, ಕವನ ಬರೆಯುತ್ತಾ ಅದನ್ನು ಇತರರ ಮುಂದೆ ಕೊರೆಯುತ್ತಾ ಕೂರುವುದು ಅಪರಾಧ. ಕವಿಯಾದವನು ತನ್ನ ಸುತ್ತ ಯಾವಾಗಲೂ ಒಂದು ಸಂಘವನ್ನು ಪಾಲಿಸುತ್ತಿರಬೇಕು. ಮಾಧ್ಯಮಗಳಲ್ಲಿ  ಕೆಲಸಮಾಡುವವರು, ಈ ಮುಂಚೆ ವಿಮರ್ಶಕರು ಎಂದು ಹೆಸರು ಮಾಡಿದವರು, ಶಾಲಾ ಕಾಲೇಜುಗಳ ಉಪನ್ಯಾಸಕರು ಇಂಥವರು ಹೆಚ್ಚುಮಂದಿ ಗುಂಪಿನಲ್ಲಿದ್ದಷ್ಟೂ ಚೆನ್ನ. ಈ ಗುಂಪನ್ನು ನಿಮ್ಮ ಪ್ರತಿಭೆ, ಪಾಂಡಿತ್ಯ, ಸಹೃದಯತೆಯಿಂದಲೇ ಬೆಳೆಸಬೇಕು ಎಂದೇನಿಲ್ಲ. ಯಥಾಶಕ್ತಿ ದ್ರವ್ಯ, ಪಾನೀಯ ಖರ್ಚು ಮಾಡಿಯೂ ಉಳಿಸಿಕೊಳ್ಳಬಹುದು.

ಹೀಗೆ ಸಂಘ ಜೀವನದಲ್ಲಿ ಹುಟ್ಟಿದ ಕವನಗಳನ್ನು ಇವರು ನಾಲ್ಕೂ ದಿಕ್ಕಿಗೆ ವ್ಯಾಪಿಸುವಂತೆ ಪ್ರಚುರ ಪಡಿಸುತ್ತಾರೆ.

. ಹೊಟ್ಟೆ ಪಾಡಿಗೆ ಅನ್ಯವೃತ್ತಿ

ಈ ಐದನೆಯ ಸೂತ್ರವು ಬಹುಮುಖ್ಯವಾದದ್ದು ಹಾಗೂ ಸಾಹಿತ್ಯ ಲೋಕದಲ್ಲಿ ದೀರ್ಘ ಕಾಲ ತಳವೂರಲು ಅತ್ಯವಶ್ಯಕವು. ನೀವು ಅದೆಷ್ಟೋ ಪ್ರಸಿದ್ಧ ಕವಿಯಾಗಿರಿ, ಎಷ್ಟೇ ಬಹುಮಾನಗಳನ್ನು ಗೆದ್ದು ಗುಡ್ಡೆ ಹಾಕಿಕೊಂಡಿರಿ, ಅದೆಷ್ಟೇ ಕವನ ಸಂಕಲನಗಳನ್ನು ಪ್ರಕಟಿಸಿರಿ, ನಿಮ್ಮ ಹೊಟ್ಟೆ ಪಾಡಿಗಾಗಿ ಬೇರೊಂದು ಸುಭದ್ರವಾದ ಉದ್ಯೋಗವನ್ನು ಮಾಡಿ. ಬ್ಯಾಂಕ್ ಮೇನೇಜರ್ ಆಗಿ, ಕಾಲೇಜಿನಲ್ಲಿ ಉಪನ್ಯಾಸಕರಾಗಿ ಏನಾದರೂ ಆಗಿ. ಸರಕಾರಿ ನೌಕರಿ ಮಾಡುವುದು ಎಲ್ಲಕ್ಕಿಂತ ಉತ್ತಮ. ನಿಮ್ಮ ಭವಿಷ್ಯ ಭದ್ರವಾಗಿರುತ್ತದೆ ಎಂಬುದು ಒಂದು ಫಾಯಿದೆಯಾದರೆ, ನಿಮ್ಮ ಸಾಹಿತ್ಯ ಕೃಷಿಗೆ ಕಛೇರಿ ಸಮಯದಲ್ಲೂ ಭಂಗ ಬರುವುದಿಲ್ಲ ಎಂಬುದು ಮತ್ತೊಂದು ಫಾಯಿದೆ.

ದೊಡ್ಡವರನ್ನು ಬೈಯಿರಿ ದೊಡ್ಡವರಾಗಿರಿ!

3 ನವೆಂ

(ನಗೆ ನಗಾರಿ ವ್ಯಕ್ತಿತ್ವ ವಿಕಸನ ಬ್ಯೂರೋ)

ನಾಡಿನ ಹೆಸರಾಂತ ಪತ್ರಿಕೆಯ ಅಂಕಣಕಾರರು ನೀಡಿದ ಭಾರತವನ್ನು ಬೈಯಿರಿ ಬುಕರ್ ಪಡೆಯಿರಿ’ ಎಂಬ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವ ನಗೆ ಸಾಮ್ರಾಟರು ನಿಟ್ಟಿನಲ್ಲಿ ಅಗಾಧವಾದ ಸಂಶೋಧನೆಯನ್ನು ಮಾಡಿ ಬಹುದೊಡ್ಡ ಗ್ರಂಥವನ್ನು ಬರೆಯುವಂತೆ ತಮ್ಮ ಚೇಲ ಕುಚೇಲನಿಗೆ ತಾಕೀತು ಮಾಡಿದ್ದಾರೆ. ತನ್ನ ಶಿಷ್ಯನಿಗೆ ಬುಕರ್ ಬಂದಿತು ಎಂದು ಹೇಳಿಕೊಳ್ಳುವ ಹೆಮ್ಮೆಯಷ್ಟೇ ತನಗೆ ಸಾಕು ಎಂದು ಹೇಳಿರುವ ಸಾಮ್ರಾಟರನ್ನು ಜಗದ್ಗುರುವಿನ ಪಟ್ಟಕ್ಕೆ ಕಟ್ಟಬೇಕು ಎಂದು ಹಲವರು ಯೋಚಿಸುತ್ತಿರುವುದು ಸುಳ್ಳು ಎಂದು ನಮ್ಮ ಮೂಲಗಳು ಸ್ಪಷ್ಟಪಡಿಸಿವೆ.

ನಮ್ಮ ನೆಚ್ಚಿನ ಅಂಕಣಕಾರರ ಸಲಹೆಯನ್ನು ಅನುಸರಿಸಿ ನಗೆ ಸಾಮ್ರಾಟರು ಮತ್ತಷ್ಟು ಸಲಹೆಗಳನ್ನು ಓತಪ್ರೋತವಾಗಿ ನೀಡಲು ಸಿದ್ಧರಾಗಿ ನಿಂತಿದ್ದು ಅವುಗಳಲ್ಲಿ ತೀರಾ ಅಮೂಲ್ಯವಾದ ಒಂದನ್ನು ನಗೆ ನಗಾರಿಯ ಓದುಗರೊಂದಿಗೆ ಹಂಚಿಕೊಳ್ಳಲು ಇಚ್ಚಿಸಿದ್ದಾರೆ. ‘ಯಶಸ್ಸಿಗೆ ನೂರು ಮೆಟ್ಟಿಲು’, ‘ಹತ್ತೇ ಮೆಟ್ಟಿಲು’, ‘ಒಂದೇ ಮೆಟ್ಟಿಲು’ ಎಂದೆಲ್ಲಾ ರೀಮುಗಟ್ಟಲೆ ಬರೆದು ಬಿಸಾಕಿರುವ ಸಕ್ಸೆಸ್ ಗುರುಗಳ್ಯಾರಿಗೂ ತಿಳಿಯದ ಯಶಸ್ಸಿನ ಗುಟ್ಟನ್ನು ಸಾಮ್ರಾಟರು ಕಂಡುಕೊಂಡಿದ್ದಾರೆ. ಯಶಸ್ಸಿಗೆ ಎಷ್ಟೇ ಮೆಟ್ಟಿಲಿದ್ದರೂ ಅವುಗಳಿಗಿಂತ ಮುಂಚೆ ಒಂದು ಗೇಟ್ ಇರುತ್ತದೆ, ಅದನ್ನು ತೆರೆದರೆ ಮಾತ್ರ ಮೆಟ್ಟಿಲು ಏರಲು ಸಾಧ್ಯ, ಗೇಟಿಗೆ ಯಾವ ಕೀಲಿ ಕೈಯೂ ಇಲ್ಲ. ಆದರೆ ಅದನ್ನು ಕಾಯಲು ಒಬ್ಬ ಕಾವಲುಗಾರ ಮಾತ್ರನಿದ್ದಾನೆ. ಆತನಿಗೆ ಪ್ರಿಯವಾಗುವ ಹಾಗೆ ನಡೆದುಕೊಂಡುಬಿಟ್ಟರೆ ಸಾಕು ಆತ ಗೇಟಿನ ಬಾಗಿಲು ತೆರೆದು ನಮ್ಮನ್ನು ನಮ್ಮ ನಮ್ಮ ನಂಬಿಕೆಯ ನೂರೋ, ಹತ್ತೋ, ಒಂದೋ ಮೆಟ್ಟಿಲಿನ ಯಶಸ್ಸಿನ ಹಾದಿಯನ್ನು ಕ್ರಮಿಸಲು ಬಿಟ್ಟುಬಿಡುತ್ತಾನೆ.


ಕಾವಲುಗಾರ ಯಾವ ತಕರಾರನ್ನೂ ತೆಗೆಯದೆ ನಿಮ್ಮನ್ನು ಒಳಕ್ಕೆ ಬಿಡಬೇಕೆಂದರೆ ಮಾಡಬೇಕಾಗಿರುವುದು ಇಷ್ಟೇ: ನೀವು ದೊಡ್ಡವರಾಗಬೇಕು. ನಿಮಗೆ ಕೋಟ್ಯಾಧೀಶರು ಆಗುವುದು ಹೇಗೆ, ಆರೋಗ್ಯವಂತರಾಗುವುದು ಹೇಗೆ, ಪರೀಕ್ಷೆಯಲ್ಲಿ ಮಾರ್ಕು ಗಳಿಸುವುದು ಹೇಗೆ, ಹೆಂಡತಿಯನ್ನು ರಮಿಸುವುದು ಹೇಗೆ, ಗಂಡನನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ, ಬಾಸಿನ ತಲೆಗೆ ಬೆಣ್ಣೆ ತಿಕ್ಕುವುದು ಹೇಗೆ, ಕೆಲಸಗಾರರಿಂದ ಚಾಕರಿ ಮಾಡಿಸಿಕೊಳ್ಳುವುದು ಹೇಗೆ, ನಾಯಕರಾಗುವುದು ಹೇಗೆ ಎಂದೆಲ್ಲಾ ಉಪದೇಶ ಮಾಡುವ ಅನೇಕ ಪುಸ್ತಕಗಳು, ಆಡಿಯೋ ಟೇಪುಗಳು, ವಿಡಿಯೋಗಳು, ಬಡಬಡಿಸುವ ಟೀಚರುಗಳು ಸಿಕ್ಕಬಹುದಾದರೂ ದೊಡ್ಡವರಾಗುವುದು ಹೇಗೆ ಎಂದು ತಿಳಿಸುವವರು ಯಾರೂ ಸಿಕ್ಕುವುದಿಲ್ಲ. ತಮ್ಮ ನೆಚ್ಚಿನ ಅಂಕಣಕಾರರ ಸ್ಪೂರ್ತಿಯಿಂದ ಸಾಮ್ರಾಟರು ರಹಸ್ಯವನ್ನು ಬಯಲು ಮಾಡಿದ್ದಾರೆ. ದೊಡ್ಡವರಾಗಲು ನೀವು ಮಾಡಬೇಕಿರುವುದು ಇಷ್ಟೇ: ದೊಡ್ಡವರನ್ನು ಬೈಯಿರಿ. ಹಾಗೂ ನೀವು ಬೈಯ್ದದ್ದು ಗರಿಷ್ಠ ಮಂದಿಯ ಕಿವಿಗೆ ಬೀಳುವಂತೆ ಮಾಡಿ!


ಉದಾಹರಣೆಯ ಮೂಲಕ ವಿವರಿಸುವುದಾದರೆ, ಪ್ರಖ್ಯಾತ ಪತ್ರಿಕೆಯ ಅಂಕಣವೊಂದನ್ನು ಗಿಟ್ಟಿಸಿಕೊಳ್ಳಿ, ಇಲ್ಲವೇ ತಿಂಗಳು ತಿಂಗಳು ಸೇರುವ ಸಭೆಯೊಂದರಲ್ಲಿ ಮಾತಾಡುವ ಅವಕಾಶ ಸಂಪಾದಿಸಿಕೊಳ್ಳಿ, ಇಲ್ಲವೇ ಮೊದಲೇ ದೊಡ್ಡವರಾದವರ ಹಿಂದೆ ಸುಮ್ಮನೆ ಸುತ್ತುತ್ತಿರಿ. ಅನಂತರ ಒಬ್ಬೊಬ್ಬರನ್ನೇ ಆಯ್ದುಕೊಂಡು ಅವರ ಓರೆಕೋರೆಗಳನ್ನಷ್ಟೇ ಪಟ್ಟಿಮಾಡಿಕೊಂಡು ಮನಸಾರೆ ಬೈಯ್ಯುತ್ತಾ ಹೋಗಿ. ಗಾಂಧಿ ಜಯಂತಿ ಹತ್ತಿರವಿಲ್ಲ ಎಂಬುದನ್ನು ಖಾತರಿ ಪಡಿಸಿಕೊಂಡು ಗಾಂಧೀಜಿಯನ್ನು ಬಯ್ಯಲು ಶುರುಹಚ್ಚಿಕೊಳ್ಳಿ. ಬೈಯಲ್ಲು ಬೇಕಾದ ವಿಷಯದ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳುವುದು ಬೇಡ ನಿಮಗಿಂತ ಮೊದಲು ಇದೇ ಸೂತ್ರವನ್ನು ಬಳಸಿಕೊಂಡು ದೊಡ್ಡವರಾದರು ಸಾಕಷ್ಟು ಪರಿಶ್ರಮ ಪಟ್ಟು ಮಾಹಿತಿ ಕಲೆ ಹಾಕಿರುತ್ತಾರೆ. ಕೆಲವರು ಕೆಲಸಕ್ಕಾಗಿ ಸಮಾನ ಮನಸ್ಕರ ಸಂಘಟನೆಯನ್ನೇ ಮಾಡಿಕೊಂಡು ಸಮರೋಪಾದಿಯಲ್ಲಿ ಕೆಲಸ ಮಾಡಿರುತ್ತಾರೆ. ಗಾಂಧೀಜಿಯ ಮಗನನ್ನೇ ಸರಿಯಾಗಿ ನೋಡಿಕೊಳ್ಳಲಿಲ್ಲ, ಮಗನಿಗೇ ಸರಿಯಾದ ಪಿತಾ ಆಗಲಿಲ್ಲ ಇನ್ನು ರಾಷ್ಟ್ರಪಿತಾ ಹೇಗಾದಾರು? ಗಾಂಧೀಜಿ ಬ್ರಹ್ಮಚರ್ಯ ಪರೀಕ್ಷೆಗೆ ಕೈಗೊಂಡ ಪ್ರಯೋಗ ಸಾಧುವೇ? ಅಹಿಂಸೆಯನ್ನು ಬೋಧಿಸಿದ್ದು ಯಾರಿಗೆ? ಹಿಂಸೆ ಮಾಡಿದವರನ್ನು ಹೊಗಳಿದ್ದು ಯಾಕೆ? ಗಾಂಧೀಜಿಗಿದ್ದ ಅಫೇರು ಎಂಥದ್ದು? ಹೀಗೆ ಪ್ರಶ್ನೆಗಳ ಬಾಣಗಳನ್ನು ಪುಂಖಾನುಪುಂಕವಾಗಿ ಒಗೆಯುತ್ತ ಬನ್ನಿ. ಇಂಥ ಪ್ರಶ್ನೆಗಳು ನಿಮಗೆ ಸುಲಭವಾಗಿ ಯಥೇಚ್ಚವಾಗಿ ಅಂತರ್ಜಾಲದಲ್ಲಿ ಸಿಕ್ಕುತ್ತವೆ. ಬೈಗುಳವನ್ನು ಪರಿಣಾಮಕಾರಿಯಾಗಿ ಮಾಡುವ ವಿಧಾನ ಎಂದರೆ ಈಗ ಬದುಕಿಲ್ಲದ ಹಿರಿಯರ ಬಗ್ಗೆ ಅವಹೇಳನಕಾರಿ ಪ್ರಶ್ನೆಗಳನ್ನು ಒಗೆಯಿರಿ. ತಾಕತ್ತಿದ್ದರು ನಮ್ಮ ಆರೋಪ ಸುಳ್ಳು ಎಂದು ಸಾಬೀತು ಪಡಿಸಲಿ ಎನ್ನಿ. ಎಷ್ಟೇ ಪುನರ್ಜನ್ಮ, ಮರುಜನ್ಮ ಎಂದರೂ ಸತ್ತವರು ಎದ್ದು ಬಂದು ತಮ್ಮ ಕ್ಯಾರಕ್ಟರ್ ಸರ್ಟಿಫಿಕೇಟಿನ ಜೆರಾಕ್ಸ್ ಕಾಪಿಯನ್ನು ನಿಮಗೆ ಕಳುಹಿಸಲಾಗದು!


ದೊಡ್ಡದಾಗಿ ಹೆಸರು ಮಾಡಿದ ಯಾರನ್ನೂ ಬಿಡಬೇಡಿ, ಎಲ್ಲರನ್ನೂ ಬೀದಿಗೆ ಎಳೆದುತಂದು ದೊಡ್ಡದಾಗಿ ನಿಂದನೆ ಮಾಡಿ. ಮರ್ಮಾಘಾತವಾಗುವಂತಹ ಬೌನ್ಸರ್‌ಗಳನ್ನೇ ಎಸೆಯಿರಿ. ಮೂರು ವಿಕೆಟುಗಳು ಎಗರಿ ಹೋಗುವ ಹಾಗೆ ಯಾರ್ಕರ್ ಹಾಕಿ. ಬಸವಣ್ಣನವರ ತಾಯಿಯ ಬಗ್ಗೆ ಶಂಕೆ ವ್ಯಕ್ತಪಡಿಸಿಸುಭಾಷ್ ಚಂದ್ರಬೋಸ್‌ರ ದೇಶಪ್ರೇಮವನ್ನೇ ಶಂಕಿಸಿಅಮೀರ್ ಖಾನ್‌ನನ್ನು ನಂಗಾಗೊಳಿಸಿಮೇಧಾ ಪಾಟ್ಕರ್‌ರನ್ನು ಬಾಯಿಗೆ ಬಂದ ಹಾಗೆ ಬೈದು ಬಿಡಿ, ಸಾವರ್ಕರರು ಹೋಮೊ ಎಂದು ಕಲ್ಲು ಬೀರು ಬಿಡಿ, ರಾಜ್ ಕುಮಾರ್ ಏನೇನೆಲ್ಲಾ’ ಮಾಡಿದ್ದರು ಎಂದು ಬಾಂಬು ಎಸೆದುಬಿಡಿ, ಮಠದ ಸ್ವಾಮಿಯನ್ನು ಮನಸ್ಸಿಗೆ ಬಂದ ಹಾಗೆ ಕಿಂಡಲ್ ಮಾಡಿಬಿಡಿ, ಕಾದಂಬರಿಕಾರನನ್ನು ಡಿಬೇಟರ್ ಎನ್ನಿ, ಸಂಗೀತಗಾರನನ್ನು ಶ್ರೇಷ್ಠ ಭಾಷಣಕಾರ ಎನ್ನಿ, ಪತ್ರಿಕೆಯ ಸಂಪಾದಕನನ್ನು ಪ್ರಾಮಾಣಿಕ ರಾಜಕೀಯ ಕಾರ್ಯಕರ್ತ ಎನ್ನಿ, ಅಂಕಣಕಾರನನ್ನು ಅಮೇರಿಕಾದ ಏಜೆಂಟ್ ಎನ್ನಿ, ತಾಯಿಯಂತಹ ತೆರೆಸಾರನ್ನೂ ಬಿಡಬೇಡಿ ಬೀದಿಗೆ ಎಳೆದು ಬಿಸಾಕಿ. ಕಂಡ ಕಂಡ ದೊಡ್ಡವರನ್ನೆಲ್ಲಾ ಬೈಯ್ಯತೊಡಗಿ ಅನಾಯಾಸವಾಗಿ ನೀವು ದೊಡ್ಡವರಾಗುತ್ತೀರಿ. ಹೀಗೆ ದೊಡ್ಡವರಾಗುವಾಗ ಕೆಲವು ಅಡ್ಡಿ ಆತಂಕಗಳನ್ನು ಎದುರಿಸಬೇಕಾಗುತ್ತದೆ. ತುಂಬಾ ಜನರನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಸರಕಾರದ, ಪೊಲೀಸರ ಕಣ್ಣನ್ನೂ ಕೆಂಪಗಾಗಿಸಬೇಕಾಗುತ್ತದೆ. ಆದರೆ ಇದರಿಂದ ಧೃತಿಗೆಡಬೇಡಿ, ಸಾಧನೆಯ ಹಾದಿಯಲ್ಲಿ ರಿಸ್ಕುಗಳೆಲ್ಲಾ ಸಾಮಾನ್ಯ. ಎಂತಹ ಸಂಕಟದ ಸಂದರ್ಭದಲ್ಲೂ ಒಂದನ್ನು ನೆನಪಿಡಿ, ಎಷ್ಟೇ ಜನರು ನಿಮ್ಮ ವಿರುದ್ಧ ತಿರುಗಿ ಬಿದ್ದರೂ, ಬೆದರಿಕೆ ಹಾಕಿದರೂ ನಿಮ್ಮ ಹಾಗೆ ದೊಡ್ದವರಾದವರ ಹಿಂಡು ಸದಾ ನಿಮ್ಮ ಬೆನ್ನ ಹಿಂದಿರುತ್ತದೆ. ಧೈರ್ಯವಾಗಿ ಮುನ್ನುಗ್ಗಿ


ನಿಮಗೆ ಯಶಸ್ಸಿನ ಸೂತ್ರದ ಬಗ್ಗೆ ಸಂಶಯವಿದೆಯೇ? ನಿಮ್ಮ ಸಂಶಯವನ್ನು ಕ್ಷಣಮಾತ್ರದಲ್ಲಿ ಪರಿಹರಿಸಿಕೊಳ್ಳಬಹುದು. ಸಾಮ್ರಾಟರು ವರದಿಯಲ್ಲಿ ತಮಗಿಂತ ದೊಡ್ಡವರು ಹಾಗೂ ಹಿರಿಯರನ್ನೆಲ್ಲಾ ಮನಸಾರೆ ಆಡಿಕೊಂಡಿದ್ದಾರೆ. ನೋಡುತ್ತಿರಿ, ಕೆಲವೇ ದಿನಗಳಲ್ಲಿ ವರದಿ ವಿಪರೀತ ಕೋಲಾಹಲ ಉಂಟು ಮಾಡಿ ಸಾಮ್ರಾಟರು ಅನಾಯಾಸವಾಗಿ ದೊಡ್ಡವರಾಗಿಬಿಡುತ್ತಾರೆ. ಒಂದು ವೇಳೆ ಸಾಮ್ರಾಟರು ದೊಡ್ಡವರಾಗದಿದ್ದರೆ ಅವರು ಬೈದವರು ಯಾರೂ ದೊಡ್ಡವರಲ್ಲ ಎಂಬ ತೀರ್ಮಾನಕ್ಕೆ ಬರಲು ಅಡ್ಡಿಯಿಲ್ಲ!


[ ಸಾಮ್ರಾಟರ ಪ್ರತಿ ಬರಹದ ಮೊದಲ ಹಾಗೂ ಕಡೆಯ ಓದುಗನಾದ ಅವರ ಚೇಲ ಕುಚೇಲ ವರದಿಯನ್ನು ಓದಿ ಬಹು ಪ್ರಭಾವಿತನಾಗಿದ್ದಾನೆ. ತಾನೂ ದೊಡ್ಡವ, ಬಹುದೊಡ್ಡವನಾಗಬೇಕು ಎಂದು ಕನಸು ಕಾಣತೊಡಗಿದ್ದಾನೆ. ಜಗತ್ತಿನಲ್ಲಿ ಎಲ್ಲರಿಗಿಂತ ದೊಡ್ಡವ ಭಗವಂತ. ಆತನಷ್ಟೇ ದೊಡ್ಡವನಾಗಬೇಕು ಎಂದು ತೀರ್ಮಾನಿಸಿ ದೇವರನ್ನೇ ಬೈಯ್ಯಲು ಸಿದ್ಧತೆ ಶುರುಮಾಡಿಕೊಂಡಿದ್ದಾನೆ! ಶೀಘ್ರದಲ್ಲಿ ಆತನ ಸಮಗ್ರ ಸಂಶೋಧನೆಯ ದೇವರು? ಯಾರವರು?’ ಲೇಖನಮಾಲೆ ನಗೆ ನಗಾರಿಯಲ್ಲಿ ಎಕ್ಸ್‌ಕ್ಲೂಸೀವ್ ಆಗಿ ಪ್ರಕಟವಾಗಲಿದೆ! ]

ನೂರು ವರ್ಷ ಕವನಗಳನ್ನು ಬ್ಯಾನ್ ಮಾಡಿ

23 ಜುಲೈ

(ನಗೆ ನಗಾರಿ ಸಾಹಿತ್ಯ ಬ್ಯೂರೋ)

ಮಾಜಿ ಕವಿಗಳು, ಹಾಲಿ ಚಿಂತಕರಾದ ಶ್ರೀಯುತ ಪಾಪಣ್ಣನವರು ನಮ್ಮ ವರದಿಗಾರನನ್ನು ಖಾಸಗಿ ನಿವಾಸಕ್ಕೆ ಕರೆಸಿಕೊಂಡು ನೀಡಿದ ಸಂದರ್ಶನದಲ್ಲಿ ‘ನೂರು ವರ್ಷಗಳ ಕಾಲ ಎಲ್ಲಾ ಬಗ್ಗೆಯ ಕಾವ್ಯವನ್ನು ಬ್ಯಾನ್ ಮಾಡಬೇಕು’ ಎಂದು ಸರ್ಕಾರಕ್ಕೆ ಕ್ರಾಂತಿಕಾರಕ ಶಿಫಾರಸ್ಸನ್ನು ಮಾಡಿದ್ದಾರೆ. ಪುಸ್ತಕ, ಪತ್ರಿಕೆ, ಸಿನೆಮಾ, ಸಿನೆಮಾ ಹಾಡು, ಸಿನೆಮಾ ಹಾಡಿನ ಸಾಹಿತ್ಯದಲ್ಲಿ ಸಾಲು ಹೀಗೆ ಯಾವುದಾದರೊಂದನ್ನು ಬ್ಯಾನ್ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹ ಪಡಿಸುತ್ತಾ ಓಡಾಡುತ್ತಿದ್ದ ಪುಡಿ ಸಂಘಟನೆಗಳೆಲ್ಲವೂ ಪಾಪಣ್ಣನವರ ಮಾತನ್ನು ಕೇಳಿ ಬೆಚ್ಚಿ ಬಿದ್ದು ಎದ್ದು ಕುಳಿತಿವೆ.

ತಮ್ಮ ಕ್ರಾಂತಿಕಾರಕ ನಿಲುವಿಗೆ ಕಾರಣವೇನು? ಹಿಂದೆ ನೀವೂ ಅನೇಕಾನೇಕ ಕವನಗಳನ್ನು ಬರೆದಿರುವಿರಿ. ಉತ್ತಮ ಸಾಹಿತಿ ಎಂದು ಹೆಸರು ಪಡೆದಿದ್ದೀರಿ. ನೀವು ಹೀಗೆ ಬಂಡಾಯವೆದ್ದಿರುವುದರ ಹಿಂದಿನ ಚಿಂತನೆ ಯಾವುದು ಎಂದು ನಮ್ಮ ವರದಿಗಾರ ಪ್ರಶ್ನಿಸಿಲಾಗಿ ಪಾಪಣ್ಣನವರು ತಮ್ಮ ಬಿಳಿಯ ಗಡ್ಡದ ನಡುವೆ ಬೆರಳು ಹರಿದಾಡಿಸಿ ಮಾತಿಗೆ ಶುರು ಮಾಡಿದರು, ‘ನೋಡಿ, ನಾನು ನನ್ನ ಕೈ ನಡೆಯುತ್ತಿದ್ದ ಕಾಲದಲ್ಲಿ ಒಂದಷ್ಟು ಕವಿತೆಗಳನ್ನು ಬರೆದಿದ್ದೇನೆ. ಕೆಲವೊಂದನ್ನು ಬರೆಸಿದ್ದೇನೆ -ಅಂದರೆ ನಾನೇ ಹೇಳಿ ಬರೆಸಿದ್ದೇನೆ ಅಂತ ಕಣ್ರೀ- ನನ್ನ ಕವನ ಸಂಕಲನಕ್ಕೆ ಸಹೃದಯರಿಂದ ಭಾರೀ ಗೌರವವೇ ಸಿಕ್ಕಿದೆ. ಕುಳಿತುಕೊಳ್ಳಲು ಪೀಠವೂ ಸಿಕ್ಕಿದೆ. ನನ್ನ ಕವನಗಳನ್ನು ಮಕ್ಕಳು ಪಠ್ಯ ಪುಸ್ತಕಗಳಲ್ಲಿ ಓದುತ್ತಿದ್ದಾರೆ. ಅರ್ಥವಾಗದೆ ಉರು ಹೊಡೆಯುತ್ತಿದ್ದಾರೆ. ಶಿಕ್ಷಕರು ಮೊದಲು ಪಾಠಗಳನ್ನು ಓದಿ ಎಂದು ಸಲಹೆ ಕೊಡುತ್ತಿದ್ದಾರೆ. ವಿಶ್ವ ವಿದ್ಯಾಲಯಗಳಲ್ಲಿ ನನ್ನ ಕವನಗಳ ಪೋಸ್ಟ್ ಮಾರ್ಟಮ್ ನಡೆಸಿದವರಿಗೆ ಡಾಕ್ಟರ್ ಎಂದು ಕರೆಯುತ್ತಿವೆ. ಇದೆಲ್ಲದರ ಬಗ್ಗೆ ನನಗೆ ಯಾವ ತಕರಾರೂ ಇಲ್ಲ. ಅಸಲಿಗೆ ನನ್ನನ್ನು ಕಾರ್ಯಕ್ರಮಗಳಿಗೆ ಕರೆದಾಗ ಕವಿ ಎಂದು ಕರೆದರೆ ಮುದಗೊಳ್ಳುತ್ತೇನೆ. ಕೆಲವರು ನನ್ನನ್ನು ಆಗಾಗ ಮಾಜಿ ಕವಿಗಳು ಎಂದು ಕರೆದಾಗ ಹಾಲಿ ಕೊಲೆಗಾರನಾಗಲಾ ಎಂದು ಹಗಲೂ ರಾತ್ರಿ ಚಿಂತಿಸಿದ್ದೇನೆ.

‘ಅದೆಲ್ಲಾ ಬಿಡಿ. ಈಗ ನನ್ನ ಆಗ್ರಹದ ವಿಷಯಕ್ಕೆ ಬರೋಣ. ಇನ್ನು ನೂರು ವರ್ಷಗಳ ಕಾಲ ಯಾರೂ ಕವನಗಳನ್ನು ಬರೆಯ ಬಾರದು. ಈಗ ಕವನ ಬರೆಯಲು ಶುರು ಮಾಡಿರುವವರು ಕಾವ್ಯ ರಚನೆಗೆ ತಿಲಾಂಜಲಿಯನ್ನಿಡಬೇಕು. ಈಗ ಪ್ರಕಟವಾಗುತ್ತಿರುವ ಕವನ ಸಂಕಲನಗಳನ್ನೆಲ್ಲಾ ಉರುವಲಿಗೆ ಹಾಕಿ ದಿನವೂ ಜನರು ಬಿಸಿನೀರಿನಲ್ಲಿ ಸ್ನಾನ ಮಾಡಬೇಕು. ಹೊಸ ಸಂಕಲನಗಳ್ಯಾವೂ ಪ್ರಕಟವಾಗದ ಹಾಗೆ ಸರಕಾರ ಕಟ್ಟುನಿಟ್ಟು ಮಾಡಬೇಕು. ಕವಿಯು ಸಮಾಜ ವಿದ್ರೋಹಿ ಎಂಬುದನ್ನು ಸಂವಿಧಾನದಲ್ಲಿ ಸೇರಿಸಿ ತಿದ್ದು ಪಡಿ ಮಾಡಬೇಕು. ತಮ್ಮನ್ನು ತಾವು ಕವಿ ಎಂದು ಕರೆದುಕೊಳ್ಳುವವರನ್ನು ಕಂಬಿಗಳ ಹಿಂದೆ ನಿಲ್ಲಿಸಬೇಕು. ಕವಿತೆ ಬರೆಯೋದು, ಓದುವುದು ನನಗಿಷ್ಟ ಎನ್ನುವವರನ್ನು ಹುಚ್ಚು ಬಿಡಿಸುವ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಬೇಕು. ಧರ್ಮಗ್ರಂಥಗಳಲ್ಲಿ ಕವಿತೆ ವಾಚನ ಧರ್ಮ ಬಾಹಿರ ಎಂದು ನಮೂದಾಗುವ ಹಾಗೆ ಧಾರ್ಮಿಕ ಮುಖಂಡರು ಗಮನ ಹರಿಸಬೇಕು. ಇವೆಲ್ಲವುಗಳಿಗೆ ಒತ್ತಾಸೆಯಾಗಿ ಸರಕಾರ ನೂರು ವರ್ಷಗಳವರೆಗೆ ಪೊಯೆಟ್ರಿಯನ್ನು ಸಂಪೂರ್ಣವಾಗಿ ಬ್ಯಾನ್ ಮಾಡಬೇಕು.’

‘ಅದೆಲ್ಲಾ ಸರಿ. ಸಾರ್ ಆದರೆ ಯಾಕೆ ಬ್ಯಾನ್ ಮಾಡಬೇಕು ಎಂದು ನೀವು ಹೇಳಲೇ ಇಲ್ಲವಲ್ಲ?’ ಪ್ರಶ್ನಿಸಿದ ವರದಿಗಾರ.

‘ ಹೀಗೆ ನೂರು ವರ್ಷ ಪೊಯೆಟ್ರಿಯನ್ನು ಬ್ಯಾನ್ ಮಾಡಿದರೆ ಕವಿಗಳ ಶನಿ ಸಂತಾನ ನಾಶವಾಗುತ್ತದೆ. ಕವಿತೆಯ ಹೆಸರಿನಲ್ಲಿ ಜಂಡು ಬಾಮ್, ಅನಾಸಿನ್ ಮಾರಾಟ ಮಾಡುತ್ತಾ ಮೆಡಿಕಲ್ ಸ್ಟೋರ್‍‌ಗಳಿಗೆ ಲಾಭ ಮಾಡುವ ದಂಧೆಯವರ ಜನಾಂಗಕ್ಕೆ ಅಂತ್ಯ ಬರುತ್ತದೆ. ನೂರು ವರ್ಷ ಕಳೆದು ಬರುವ ಹೊಸ ಜನರೇಶನ್ನಿನಲ್ಲಿ ಕವಿಗಳ ಕೆಟ್ಟ ಸಂಸ್ಕೃತಿ ಇರುವುದಿಲ್ಲ. ಪತ್ರಿಕೆಗಳು ಸ್ಪೇಸ್ ಫಿಲ್ಲರ್‌ಗಳಿಗೆ ಕೊಂಚ ಕಾಲ ಒದ್ದಾಡ ಬಹುದು. ವಾಲಂಟರಿ ರಿಟೈರ್ ಮೆಂಟ್ ತೆಗೆದುಕೊಂಡವರು ನಾಲ್ಕೈದು ಉದ್ಘಾರಗಳನ್ನು ಹೊರಡಿಸಿ ತಮ್ಮನ್ನು ತಾವು ಕವಿ ಎಂದು ಕರೆದು ಸಂಭ್ರಮಿಸಿಕೊಳ್ಳುವುದಕ್ಕೆ ಕೊಂಚ ತೊಂದರೆಯಾಗಬಹುದು. ಉದ್ಯೋಗವಿಲ್ಲದವರು ಶಬ್ಧ ಕೋಶದ ರಸಾಯನ ಮಾಡಿ ತಮ್ಮ ರೆಸ್ಯೂಮಿನಲ್ಲಿ ‘ಖ್ಯಾತ
ಕವಿ’ ಎಂದು ನಮೂದಿಸಿಕೊಳ್ಳುವುದಕ್ಕೆ ಉತ್ಸಾಹಕ್ಕೆ ಹಾನಿಯಾಗಬಹುದು. ಆದರೆ ಲಕ್ಷಾಂತರ ಮರಗಳ ಜೀವ ಉಳಿಯುತ್ತದೆ, ಕವನ ಸಂಕಲನಗಳ ಪ್ರಕಟಣೆ ನಿಲ್ಲುವುದರಿಂದ.’

‘ಒಳ್ಳೆಯ ವಿಚಾರಗಳು ಸಾರ್. ಆದರೆ ಪೊಯೆಟ್ರಿಯನ್ನ ಬರೇ ನೂರು ವರ್ಷ ಬ್ಯಾನ್ ಮಾಡಬೇಕು ಅಂದಿರಿ. ಅಲ್ಲದೆ ಕೇವಲ ಈಗ ನಿಮ್ಮ ನಂತರ ಬರೆದವರ ಕವನ ಸಂಕಲನಗಳನ್ನು ಸುಡಬೇಕು ಎಂದು ಅಪ್ಪಣೆ ಕೊಡಿಸಿದಿರಿ. ಆದರೆ ಹಿಂದಿನದರ ಬಗ್ಗೆ ಮಾತಾಡಿಲ್ಲ. ಏನಿದರ ಮರ್ಮ?’ ಗೊಂದಲ ತಡೆಯಲಾರದೆ ಕೇಳಿದ ವರದಿಗಾರ.

‘ಇದು ನನ್ನ ಆಶಯದ ಬಹು ಮುಖ್ಯ ಅಂಶ. ನೂರು ವರ್ಷ ಕವನಗಳನ್ನು ಬ್ಯಾನ್ ಮಾಡುವುದರಿಂದ ಜನರಿಗೆ ಕವನ ಬರೆಯುವುದು, ಕಾವ್ಯ ಓದುವುದರಲ್ಲಿ ಆಸಕ್ತಿ ಹೊರಟು ಹೋಗುತ್ತದೆ. ಕವಿಗಳ ಕುಲವೇ ಅಸುನೀಗುತ್ತದೆ. ಜನರಿಗೆ ಹೆಚ್ಚು ಹೆಚ್ಚು ಸಮಯದ ಉಳಿತಾಯವಾಗುತ್ತದೆ. ಆಗ ಜನರು ಹೆಚ್ಚು ಹೆಚ್ಚು ದುಡಿಯಲು ಶುರು ಮಾಡುತ್ತಾರೆ. ಹೆಚ್ಚು ಸಂಪಾದಿಸುತ್ತಾರೆ. ದುಡ್ಡು ಕೂಡಿಡುತ್ತಾರೆ. ಮನೆಯನ್ನು ಟಿವಿ, ಫ್ರಿಡ್ಜು, ವಾಶಿಂಗ್ ಮಶೀನು, ಕಂಪ್ಯೂಟರು, ಕಾರು, ಬೈಕು, ಏರೋಪ್ಲೇನುಗಳಿಂದ ತುಂಬಿಸುತ್ತಾರೆ. ಕೊನೆಗೆ ಇದೆಲ್ಲಾ ಇಷ್ಟೆನಾ ಅನ್ನಿಸಲು ಶುರುವಾಗುತ್ತದೆ. ಬದುಕು ಇಷ್ಟು ನಿಸ್ಸಾರವಾ ಎಂದು ಕೇಳಿಕೊಳ್ಳತೊಡಗುತ್ತಾರೆ. ಆಗ ಕವಿತೆಯ ಜೀವಸಾರದ ಗುಟುಕಿಗಾಗಿ ಬಾಯಾರಿ ತತ್ತರಿಸುತ್ತಾರೆ. ಆದರೆ ಆಗ ಯಾವ ಕವನಗಳೂ ಇರುವುದಿಲ್ಲ. ಕವಿಗಳೂ ದಿವಂಗತರಾಗಿರುತ್ತಾರೆ. ಜನರಿಗೆ ಕವಿತೆಗಳೇ ಬದುಕು ಅನ್ನಿಸಲು ಶುರುವಾಗುತ್ತದೆ.’

‘ಇದರಿಂದೇನು ಲಾಭವಾಗುತ್ತೆ ಸಾರ್?’

‘ಆಗ ಉಳಿದವರ್ಯಾರ ಕವನಗಳೂ ಇರೋದಿಲ್ಲ. ನನ್ನವು ಮಾತ್ರ ಇರುತ್ತವೆ. ನಾನು ಬರೆದಿಟ್ಟು ಹೋದ ಕವನಗಳೇ ಸಂಜೀವಿನಿಗಳಾಗುತ್ತವೆ. ನನ್ನ ಖರ್ಚಾಗದ ಕವನ ಸಂಕಲನಗಳು ಹಾಟ್ ಗಾಸಿಪ್ಪಿನ ಹಾಗೆ ಬಿಕರಿಯಾಗುತ್ತವೆ. ನಾನು ಹೇಗೂ ನನ್ನ ಮೊಮ್ಮಕ್ಕಳಿಗೆ ಕಾಸು ಕೂಡಿಟ್ಟಿಲ್ಲ. ಅವರಿಗೆ ಒಂದು ದಾರಿಯಾಗುತ್ತದೆ. ಅದಕ್ಕೇ ನಾನು ಸರ್ಕಾರಕ್ಕೆ ಈ ಕೂಡಲೇ ಕವನಗಳನ್ನು, ಕವಿಗಳನ್ನೂ ನೂರು ವರ್ಷಗಳವರೆಗೆ ಬ್ಯಾನ್ ಮಾಡಬೇಕು ಎಂದು ಆಗ್ರಹಿಸುತ್ತೇನೆ.

‘‘ಕೆಂಪಾ’ ಪೊಯೆಟ್ಟಾ ಅಂಕಲ್?”

8 ಜುಲೈ

(ನಗೆ ನಗಾರಿ ಭಾಷೆ – ಸಾಹಿತ್ಯ ಬ್ಯೂರೋ)

ಕನ್ನಡ ಸಾಹಿತ್ಯ ಲೋಕವನ್ನು ಸದಾ ಸುದ್ದಿಯಲ್ಲಿಟ್ಟಿರಬೇಕು ಎಂಬುದನ್ನು ಕೆಲವು ಕವಿಗಳು ಮಾಜಿ ಸಾಹಿತಿಗಳು ತಪ್ಪಾಗಿ ಅರ್ಥೈಸಿಕೊಂಡು ಸದಾ ವಿವಾದಗಳ ಮೂಲಕ ಸುದ್ದಿಯಲ್ಲಿರುವ ಕೆಲಸ ಮಾಡುತ್ತಿದ್ದಾರೆ. ಪತ್ರಿಕೆಗಳ ವಾಚಕರ ವಾಣಿ ಎಂಬ ನಿರಪರಾಧಿ ಅಂಕಣವನ್ನು ರಣಾಂಗಣವಾಗಿಸಿಕೊಂಡು ಮುದಿ ಹೋರಿಗಳಂತೆ ಒಬ್ಬರನ್ನೊಬ್ಬರು ಮೊಂಡಾದ ಕೊಂಬಿನೊಂದಿಗೆ ತಿವಿದುಕೊಳ್ಳುತ್ತಾ, ತಾವೇ ಹಾಕಿದ ಸಗಣಿಯನ್ನು ಕೆದರುತ್ತಾ ಹೊಲಸೆಬ್ಬಿಸುತ್ತಾ ಅದನ್ನು ಕನ್ನಡದ ಕಂಪು ಎಂದು ಭ್ರಮಿಸುತ್ತಿರುವುದನ್ನು ಕಂಡು ನಗೆ ಸಾಮ್ರಾಟರಿಗೆ ಎಲ್ಲಿಲ್ಲದ ಕನಿಕರ.

ಮುರುಘ ಸ್ವಾಮಿಗಳು ಆಶೀರ್ವಚನ ಕೊಡುತ್ತಾ ಚಪ್ಪಲಿ ಕೀಳು ಎನ್ನುವ ಭಾವನೆಯ ಹಿಂದೆ ಕಾಲು ಮೆಟ್ಟುವ ವಸ್ತು ಕೀಳು ಮಟ್ಟದ್ದು. ಕಾಲು ಮನ್ನಣೆಗೆ ತಕ್ಕದಾದುದಲ್ಲ. ಹೀಗಾಗಿ ಜಾತಿ ಪದ್ಧತಿ ಹುಟ್ಟಲು ಕಾರಣವೆನ್ನಲಾದ ಪುರುಷ ಸೂಕ್ತದಲ್ಲಿ ಶೂದ್ರರನ್ನು ವಿಷ್ಣುವಿನ ಕಾಲಿನಿಂದ ಹುಟ್ಟಿಬಂದವರು ಎನ್ನಲಾಗಿದೆ. ತಲೆಯಿಂದ ಹುಟ್ಟಿ ಬಂದವರು ಎಂದುಕೊಂಡಿರುವ ಬ್ರಾಹ್ಮಣರು ತಲೆ ಇಡೀ ದೇಹದಲ್ಲಿ ಶ್ರೇಷ್ಠ ಎಂದು ವಾದಿಸುತ್ತಾ, ನಂಬಿಸುತ್ತಾ ಬಂದಿದ್ದಾರೆ. ಕಾಲುಗಳು ನಿಕೃಷ್ಟ. ಈ ಪದ್ಧತಿ ತೊಲಗ ಬೇಕು. ಚಪ್ಪಲಿಗಳು ಅವಜ್ಞೆಗೆ ಒಳಗಾಗಿರುವುದನ್ನು ಕೊಂಚ ಚಿಕಿತ್ಸಿಕ ಮನೋಭಾವದಿಂದ ಎದುರಿಸಬೇಕು ಎಂದರು. ಚಪ್ಪಲಿ ಹಾರ ಹಾಕಿಕೊಳ್ಳುವಂತಹ ಮನೋಭಾವ ಸೃಷ್ಟಿಯಾಗಬೇಕು ಎಂದು ಆಶಿಸಿದರು.

ಅದನ್ನು ಎಲ್ಲರೂ ಮರುದಿನದ ಪತ್ರಿಕೆಗಳಲ್ಲಿ ಓದಿದರು. ಕಿಡಿಗೇಡಿಯೊಬ್ಬ ಸ್ವಾಮಿಗಳಿಂದಲೇ ಅದು ಮೊದಲಾಗಬೇಕು ಎಂದು ಮಹಾನ್ ಗುರುಭಕ್ತನ ಹಾಗೆ ಪತ್ರ ಬರೆದ. ಮರುದಿನದಿಂದ ಸಾರಸ್ವತ ಲೋಕದ ಮಾಜಿ ಸಾಹಿತಿಗಳ ಪ್ರತಿನಿಧಿಯಂತಿರುವ ಕಣ್ಣು ‘ಕೆಂಪಾ’ರವರು ಸ್ವಾಮಿಜಿಯವರ ಬೆಂಬಲಕ್ಕೆ ನಿಂತು ಕಿಡಿಗೇಡಿಯ ಪತ್ರಕ್ಕೆ ಉತ್ತರ ಬರೆದು ಅದಕ್ಕೆ ಕಡ ತಂದ ಖಾರ ಬೆರೆಸಿ ಒಗಾಯಿಸಿದರು. ತಮ್ಮ ಬ್ಯಾಗಿನಲ್ಲಿದ್ದ ಹಳೆಯ ಡೈಲಾಗುಗಳನ್ನೆಲ್ಲಾ ಹೊರಕ್ಕೆ ತೆಗೆದು ಮೊಂಡಾಗಿದ್ದವುಗಳನ್ನು ಪಾಲಿಶ್ ಮಾಡತೊಡಗಿದರು. ‘ಓ ನನ್ನ ಚೇತನಾ ಆಗು ನೀ ಅನಿಕೇತನ’ ಎಂದು ವಿಶ್ವ ಮಾನವತೆಯನ್ನು ಸಾರಿದ ಸಾಹಿತಿ ವರೇಣ್ಯರ ವಾರಸುದಾರರು ಎಂದು ಹೇಳಿಕೊಳ್ಳುವವರು ಎಗ್ಗಿಲ್ಲದೆ ಜಾತಿಯನ್ನು ಮುಂದೆ ಮಾಡಿಕೊಂಡು ಕಚ್ಚಾಡಲು ಶುರು ಮಾಡಿದರು. ಜನರಿಗೋ ಸಾಹಿತಿಗಳ ಕಚ್ಚಾಟಗಳನ್ನು, ವಿವಾದಗಳನ್ನು ಎಂಜಾಯ್ ಮಾಡಲು ಎಲ್ಲಿಲ್ಲದ ಆಸಕ್ತಿ. ಎರಡು ಗಂಧದ ಕೊರಡು ಪರಸ್ಪರ ತಿಕ್ಕಿಕೊಂಡಾಗ ಹೊಮ್ಮುವುದು ಶ್ರೀಗಂಧದ ಪರಿಮಳ ಎಂದು ಭ್ರಮಿಸಿಕೊಂಡು ಜನರು ಕೊಚ್ಚೆಯಲ್ಲಿ ಕಲ್ಲು ಹಾಕುತ್ತಿದ್ದಾರೆ. ಮೈಮೇಲೆ ಕೊಳಕು ಸಿಡಿದಾಗಲೇ ಅವರಿಗೆ ಮೈಮೇಲೆ ಜ್ಞಾನ ಬರುವುದು.

ಈ ಮಧ್ಯೆ ನಗೆ ಸಾಮ್ರಾಟರು ಸಾಹಿತಿಗಳ ಸರಸ-ವಿರಸದ ಬಗ್ಗೆ ಇಂದಿನ ಯುವ ಜನತೆಯ ಅಭಿಪ್ರಾಯವನ್ನು ತಿಳಿಯಲು ಮುಂದಾದರು. ಒಬ್ಬ ತಡವರಿಸಿಕೊಂಡು ಇಂಗ್ಲೀಷಿನ ಮಧ್ಯೆ ಕನ್ನಡ ಬೆರೆಸುತ್ತಾ, ‘U know uncle, ನಂಗೇನೋ ಬರಾಕ್ ಒಬಾಮಮನೇ best ಅನ್ನಿಸುತ್ತೆ. Even my friends say so. Sorry, You asked me abt caste know.. um, ದೇಶಕ್ಕೆ ಒಳ್ಳೇದು ಅನ್ನೋದಿದ್ರೆ our poets should ಯೂಸ್ ಇಟ್. ಎನಿವೇ ಈ ‘ಕೆಂಪಾ’ uncle poet ಅಂತೆ ಹೌದಾ? How much does it cost to be poet uncle? ಯಾಕಂದ್ರೆ, I think, if it is affordable, i could give a try. ‘ ಎಂದದ್ದನ್ನು ಕೇಳಿ ಕಛೇರಿಗೆ ಎದ್ದು ಬಿದ್ದು ಓಡಿ ಬಂದು ತಣ್ಣಗೆ ಒಂದು ಲೋಟ ನೀರು ಕುಡಿದಿದ್ದಾರೆ ಎಂಬುದು ಔಟ್ ಆಫ್ ರೆಕಾರ್ಡ್!