Archive | ಶಿಕ್ಷಣ RSS feed for this section

ನನ್ನ ಸಾಧನೆಗೆ ಹಾಸ್ಟೆಲ್ ತಿಗಣೆಗಳೇ ಕಾರಣ!

27 ಫೆಬ್ರ

ಚಿನ್ನದ ಪದಕ ಪಡೆದ  ವಿದ್ಯಾರ್ಥಿಗೆ ತಿಗಣೆಯೇ ಗುರು

ಬೆಳಗಾವಿ: ೨೦೦೯-೨೦೧೦ರ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಘಟಿಕೋತ್ಸವದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಚಿನ್ನದ ಪದಕ ಪಡೆದ ತಂತ್ರೇಶ್ ಗೌಡ ತನ್ನ ಸಾಧನೆಗೆ ತನ್ನ ಹಾಸಿಗೆಯಲ್ಲಿ ವಾಸವಾಗಿರುವ ತಿಗಣೆಗಳೇ ಕಾರಣ ಎಂದು ತಿಳಿಸಿದ್ದಾರೆ.

ಘಟಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಿದ ರಾಜ್ಯಪಾಲ ಭಾರದಧ್ವಜರಿಂದ ಚಿನ್ನದ ಪದಕವನ್ನು ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ತಂತ್ರೇಶ್ ತಮ್ಮ ಯಶಸ್ಸಿನ ಗುಟ್ಟನ್ನು ಹಂಚಿಕೊಂಡಿದ್ದು ಹೀಗೆ.

“ನಾನು ಅಂತಹ ಪ್ರತಿಭಾವಂತ ವಿದ್ಯಾರ್ಥಿಯಲ್ಲ. ಪಿಯುಸಿಯವರೆಗೆ ನಾನು ಅತಿ ಸಾಧಾರಣ ಮಟ್ಟದ ಫಲಿತಾಂಶವನ್ನೇ ಪಡೆಯುತ್ತಿದ್ದೆ. ನಾನು ವಿಪರೀತ ಸೋಮಾರಿ ಎಂದು ಎಲ್ಲರೂ ಹೇಳುತ್ತಿದ್ದರು. ಕುಂಭ ಕರ್ಣನ ಹಾಗೆ ನಿದ್ದೆ ಮಾಡುತ್ತಿದ್ದೆ. ಸಂಜೆ ಏಳಕ್ಕೆ ಊಟ ಮಾಡಿ ಮಲಗಿದರೆ ಬೆಳಿಗ್ಗೆ ಒಂಭತ್ತು ಗಂಟೆಗೆ ಕಡಿಮೆ ಏಳುತ್ತಲೇ ಇರಲಿಲ್ಲ. ಅಷ್ಟು ಸಾಲದೆಂಬಂತೆ ತರಗತಿಯಲ್ಲಿ ಪ್ರತಿ ಲೆಕ್ಚರ್ ಬಂದಾಗಲೂ ನಿದ್ದೆ ಮಾಡುತ್ತಿದ್ದೆ ಹೀಗಾಗಿ ನನಗೆ ಓದಲು ಸಮಯವೇ ಸಿಕ್ಕುತ್ತಿರಲಿಲ್ಲ. ಪರೀಕ್ಷೆ ಬರೆಯುವಾಗಲೂ ವೇಗವಾಗಿ ಒಂದೇ ತಾಸಿನಲ್ಲಿ ಗೊತ್ತಿರುವುದನ್ನೆಲ್ಲ ಬರೆದು ಉಳಿದ ಎರಡು ತಾಸು ಹಾಯಾಗಿ ನಿದ್ದೆ ಮಾಡುತ್ತಿದ್ದೆ. ರಸಾಯನ ಶಾಸ್ತ್ರದ ಪ್ರಯೋಗಾಲಯದಲ್ಲಿ ಬುನ್ಸೆನ್ ಬರ್ನರಿನಲ್ಲಿ ಆಸಿಡ್ ಮಿಶ್ರಣವನ್ನು ಕಾಯಲು ಇಟ್ಟು ನಿದ್ದೆ ಮಾಡಿದ್ದೆನಂತೆ. ಎದ್ದು ನೋಡುವಷ್ಟರಲ್ಲಿ ನನ್ನ ಉತ್ತರ ಪತ್ರಿಕೆಯು ಆವಿಯಾಗಿ ಹೋಗಿತ್ತು.

ಹಾಸ್ಟೆಲಿನಲ್ಲಿದ್ದ ಕಾದಂಬರಿಗಳೆಲ್ಲಾ ಖಾಲಿಯಾಗಿ ಹೊಸದು ಕೊಳ್ಳುವುದಕ್ಕೆ ಕಾಸಿಲ್ಲದಾದಾಗ ಅನಿವಾರ್ಯವಾಗಿ ಪಠ್ಯ ಪುಸ್ತಕಗಳನ್ನು ಓದಲು ಶುರು ಮಾಡಿದೆ.

“ಹೀಗಿದ್ದ ನಾನು ಇಂಜಿನಿಯರಿಂಗ್ ಸೇರಿದೊಡನೆ ತುಂಬಾ ಬದಲಾಗಿ ಹೋದೆ. ಬಳ್ಳಾರಿಯಲ್ಲಿ ನಾವು ವಾಸವಾಗಿರುವುದು. ಅಲ್ಲಿನ ಕಾಲೇಜು ಸಿಕ್ಕಲಿಲ್ಲ ಎಂದು ಹಾಸನದ ಕಾಲೇಜು ಸೇರಿದೆ. ಅಲ್ಲಿನ ಹಾಸ್ಟೆಲಿನಲ್ಲಿ ವಾಸ ಶುರು ಮಾಡಿದಾಗಿನಿಂದ ನನ್ನ ಜೀವನ ಶೈಲಿಯೇ ಬದಲಾಗಿ ಹೋಯ್ತು.

“ಹಾಸಿಗೆಯ ತುಂಬ ಚೆಲ್ಲಿದ ಮಲ್ಲಿಗೆಯ ಹಾಗೆ ತುಂಬಿಕೊಂಡ ತಿಗಣೆಗಳು ನನಗೆ ಗುರುಗಳಾದವು. ಎಂತೆಂಥ ಗುರುಗಳೂ ಕಲಿಸಲಾಗದ ಶಿಸ್ತನ್ನು ರೂಢಿಸಿದವು. ಒಂದು ಕಾಲದಲ್ಲಿ ಎಲ್ಲರಿಂದ ಕುಂಭಕರ್ಣ ಎಂದು ಬಿರುದನ್ನು ಪಡೆದಿದ್ದ ನಾನು ರಾತ್ರಿ ಎರಡು ಮೂರಕ್ಕಿಂತ ಹೆಚ್ಚು ತಾಸು ಮಲಗಿರಲು ಸಾಧ್ಯವೇ ಆಗಲಿಲ್ಲ. ಅತ್ಯಾಚಾರಿಯ ಆತ್ಮಸಾಕ್ಷಿಯು ಕ್ಷಣಕ್ಷಣವೂ ಆತನನ್ನು ಕುಟುಕುವ ಹಾಗೆ ರಾತ್ರಿ ಮಲಗಿ ನಿದ್ದೆ ಹತ್ತುತ್ತಿರುವಂತೆಯೇ ತಿಗಣೆಗಳ ತಂಡವು ಮೈಯೆಲ್ಲಾ  ಆವರಿಸಿ ಕಂಡಕಂಡಲ್ಲೆಲ್ಲ ಕಡಿಯುತ್ತಿದ್ದವು. ಕತ್ತಿನ ಹಿಂಭಾಗ, ತೋಳು ತೊಡೆ ಎನ್ನದೆ ಎಲ್ಲಿ ಬೇಕೆಂದರಲ್ಲಿ ಕಡಿಯುತ್ತ ನಿದ್ದೆಯಿಂದ ಎಚ್ಛೆತ್ತುಕೊಳ್ಳುವಂತೆ ಮಾಡುತ್ತಿದ್ದವು. ಒಮ್ಮೆ ನಿದ್ದೆಯಿಂದೆದ್ದು ಲೈಟ್ ಹಾಕಿ ಹುಡುಕಿದರೆ ಒಬ್ಬರೂ ಇಲ್ಲ! ಅದೃಶ್ಯ ದೇವತೆಗಳಂತೆ ಅವು ನನ್ನನ್ನು ಸದಾ ಪ್ರಜ್ಞೆಯಿಂದಿರುವಂತೆ ಕಾಯುತ್ತಿದ್ದವು. ಅವರು ದಾಳಿ ಮಾಡಿದ ಜಾಗಗಳಲ್ಲಿ ಎದ್ದ ಗುಳ್ಳೆಗಳು ಮತ್ತೆ ತೂಕಡಿಸದಂತೆ ನೋಡಿಕೊಳ್ಳುತ್ತಿದ್ದವು.

“ನಾನು ಹಗಲು ರಾತ್ರಿಯೆನ್ನದೆ ಓದಲು ಶುರುಮಾಡಿದ್ದು ಆಗಲೇ. ರೂಮಿನಲ್ಲಿ ದೀಪ ಹಾಕಿದರೆ ಗೆಳೆಯರು ಓಡಿಸಿಕೊಂಡು ಬರುತ್ತಾರೆಂದು ಹೆದರಿ ಬೀದಿ ದೀಪದಡಿಯಲ್ಲಿ ಓದಲು ಶುರು ಮಾಡಿದೆ. ಮೊದ ಮೊದಲಿಗೆ ಸಿಕ್ಕ ಕತೆ ಕಾದಂಬರಿಗಳನ್ನು ಓದಲು ಪ್ರಾರಂಭಿಸಿದೆ. ಇಡೀ ಹಾಸ್ಟೆಲಿನಲ್ಲಿದ್ದ ಕಾದಂಬರಿಗಳೆಲ್ಲಾ ಖಾಲಿಯಾಗಿ ಹೊಸದು ಕೊಳ್ಳುವುದಕ್ಕೆ ಕಾಸಿಲ್ಲದಾದಾಗ ಅನಿವಾರ್ಯವಾಗಿ ಪಠ್ಯ ಪುಸ್ತಕಗಳನ್ನು ಓದಲು ಶುರು ಮಾಡಿದೆ. ಈಗ ನಾನು ಈ ಹಂತವನ್ನು ತಲುಪಿದ್ದೇನೆ ಎಂದರೆ ಅದಕ್ಕೆ ನಮ್ಮ ಹಾಸ್ಟೆಲಿನ ತಿಗಣೆಗಳೇ ಕಾರಣ.”

ಹಾಸ್ಟೆಲಿನ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಈ ರೀತಿ ನೆರವಾಗುವ ತಿಗಣೆಗಳನ್ನು ವಿದ್ಯಾರ್ಥಿ ಮಿತ್ರ  ಎಂದು ಕರೆಯಬೇಕು ಎಂದ ತಂತ್ರೇಶ್ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ತಿಗಣೆಗಳ ಬಗ್ಗೆ ತೋರುತ್ತಿರುವ ವೈಷಮ್ಯದ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

“ನನ್ನ ಜೂನಿಯರ್ ಗಳು ವಿದೇಶಿ ತಂತ್ರಜ್ಞಾನದ ಕೊಡುಗೆಯಾದ ತಿಗಣೆ ನಿರೋಧಕ ಹಾಸಿಗೆಗಳನ್ನು  ಬಳಸುತ್ತಿದ್ದಾರೆ. ರಾಸಾಯನಿಕ ಕ್ರಿಮಿನಾಶಕಗಳನ್ನು ಬಳಸಿ ನಿಸರ್ಗದತ್ತವಾದ `ವಿದ್ಯಾರ್ಥಿ ಮಿತ್ರ’ರನ್ನು ಕೊಲ್ಲುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ.”

ತಂತ್ರೇಶರ ಅಭಿಪ್ರಾಯವನ್ನು ಕಟುವಾಗಿ ವಿರೋಧಿಸಿದ ಅವರ ಜೂನಿಯರ್ ಹಾಗೂ ರೂಮ್ ಮೇಟ್ ಯಂತ್ರೇಶ್ ಜಾದವ್, “ಹಾಸ್ಟೆಲಿನ ಊಟ ತಿಂಡಿಯಿಂದಾಗಿ ನಮ್ಮ ದೇಹಗಳು ಮೆಡಿಕಲ್ ಕಾಲೇಜಿನಲ್ಲಿ ನೇತು ಹಾಕುವ ಅಸ್ಥಿಪಂಜರಗಳಾಗಿರುತ್ತವೆ. ಹೀಗಿರುವಾಗ ಪಠ್ಯೇತರ ಚಟುವಟಿಕೆಯಿಂದ ಸಂಪಾದಿಸಿಕೊಂಡ ಅಲ್ಪ ಸ್ವಲ್ಪ ರಕ್ತವನ್ನೂ ಈ ತಿಗಣೆಗಳು ಹೀರಿದರೆ ನಾವು ಬದುಕುವುದು ಹೇಗೆ? ಹಾಸ್ಟೆಲಿನಲ್ಲಿ ಒಂದೋ ನಾವಿರಬೇಕು ಇಲ್ಲವೇ ತಿಗಣೆಗಳಿರಬೇಕು.” ಎಂದು ನಮ್ಮ ವರದಿಗಾರನಲ್ಲಿ ತಮ್ಮ ಆಕ್ರೋಶ ತೋಡಿಕೊಂಡರು.

ಈ ಕುರಿತು ಅಭಿಪ್ರಾಯ ತಿಳಿಯಲು ತಿಗಣೆಗಳ ಪ್ರತಿನಿಧಿಯನ್ನು ಆಹ್ವಾನಿಸಲಾಗಿತ್ತಾದರೂ ಸಂಜೆಯಾದರೂ ಯಾರ ಪತ್ತೆಯೂ ಇಲ್ಲ. ತಿಗಣೆ ಪ್ರತಿನಿಧಿಯು ರಾಜ್ಯಪಾಲರ ಕತ್ತಿನ ಹಿಂದೆ ರಕ್ತಹೀರುವುದರಲ್ಲಿ ಮಗ್ನವಾಗಿದ್ದರೆಂದು   ಅನಂತರ ತಿಳಿದುಬಂದಿತು.

ನಿದ್ದೆ ಮಾಡುವಾಗ ಮೆದುಳಿನ ಗ್ರಹಣ ಶಕ್ತಿ ಹೆಚ್ಚು: ವರದಿ

25 ಫೆಬ್ರ

ಮಂಡ್ಯದ ವಿಜ್ಞಾನಿಗಳ  ಅಧ್ಯಯನ ಬಯಲು ಮಾಡಿದ ಸತ್ಯ

ಬೆಂಗಳೂರು, ಫೆ 25: ತಾವು ತರಗತಿಯಲ್ಲಿ ಪಾಠ ಮಾಡುವಾಗ ತೂಕಡಿಸುವ ವಿದ್ಯಾರ್ಥಿಗಳ ಬಗ್ಗೆ ಇನ್ನು ಮುಂದೆ ಅಧ್ಯಾಪಕರು ಸಿಟ್ಟಾಗಬೇಕಿಲ್ಲ. ಮೈಯೆಲ್ಲ ಎಚ್ಚರವಾಗಿದ್ದು ಪಾಠ ಕೇಳುವ ವಿದ್ಯಾರ್ಥಿಗಳಿಗಿಂತ ಬೆಲ್ಲ ತೂಗುತ್ತ ನಿದ್ದೆ ಮಾಡುವ ವಿದ್ಯಾರ್ಥಿಗಳ ಮೆದುಳು ಹೆಚ್ಚು ಗ್ರಹಿಸುತ್ತಿರುತ್ತದೆ.  ಮಂಡ್ಯದ ಸಂಶೋಧಕರು ನಡೆಸಿರುವ ಅಧ್ಯಯನ  ತೋರಿಸಿಕೊಟ್ಟ ಸಂಗತಿಯಿದು.

ಬೆಂಗಳೂರಿನ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ ನಿಮ್ಹಾನ್ಸ್ ನ ಕ್ಯಾಂಟೀನಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಸಂಶೋಧಕರು ತಮ್ಮ ಅಧ್ಯಯನದ ವರದಿಯನ್ನು ಹಂಚಿಕೊಂಡರು. ತೂಕಡಿಸುತ್ತಿದ್ದ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತ ಮಂಡ್ಯದ ವಿಜ್ಞಾನಿ ಗೊರಕೆರಾಮ್ ನುಸ್ಲುವಾಡಿಯಾ “ಮನುಷ್ಯನಿಗೆ ನಿದ್ದೆ ಏಕೆ ಬೇಕು? ನಿದ್ದೆಯ ಸಮಯದಲ್ಲಿ ಮನುಷ್ಯನ ದೇಹ ಹಾಗೂ ಮೆದುಳಿನಲ್ಲಾಗುವ ಕ್ರಿಯೆಗಳು ಎಂಥವು ಎಂಬ ಬಗ್ಗೆ ವೈಜ್ಞಾನಿಕ ಜಗತ್ತಿಗೆ ಹೆಚ್ಚಿನ ಜ್ಞಾನವಿಲ್ಲ. ಮನುಷ್ಯನಿಗೆ ಸರಾಸರಿಯಾಗಿ ಎಷ್ಟು ತಾಸುಗಳ ನಿದ್ರೆಯ ಆವಶ್ಯಕತೆ ಇದೆ ಎಂಬ ಬಗ್ಗೆ ಒಮ್ಮತಕ್ಕೆ ಬರಲಾಗಿಲ್ಲ. ನಿದ್ದೆಯ ಸಮಯದಲ್ಲಿ ಬೀಳುವ ಕನಸುಗಳ ಕುರಿತು ಹೆಚ್ಚು ಸಂಶೋಧನೆ ನಡೆಯಬೇಕಿದೆ. ಜಗತ್ತಿನಾದ್ಯಂತ ವಿಜ್ಞಾನಿಗಳು ನಾಲ್ಕು ಮಂದಿ ಕುರುಡರು ಆನೆಯನ್ನು  ಮುಟ್ಟಿ ತಿಳಿದಂತೆ ನಿದ್ದೆಯ ನಾನಾ ಮಜಲುಗಳನ್ನು ತಡಕಾಡುತ್ತಿದ್ದಾರೆ.” ಎಂದರು.

ತರಗತಿಯಲ್ಲಿ ನಿದ್ದೆ ಮಾಡುವ ವಿದ್ಯಾರ್ಥಿಗಳ ಗ್ರಹಣ ಶಕ್ತಿ ಹಾಗೂ ಏಕಾಗ್ರತೆ ಹೆಚ್ಚು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

“ಈ ಜಾಗತಿಕ ಸಂಶೋಧನೆಯಲ್ಲಿ ಕರ್ನಾಟಕದ ವಿಜ್ಞಾನಿಗಳು ಹಿಂದೆ ಬಿದ್ದಿಲ್ಲ. ಮನುಷ್ಯನು ನಿದ್ದೆ ಮಾಡುವಾಗ ಮೆದುಳಿನಲ್ಲಿ ಚಟುವಟಿಕೆ ಕ್ಷೀಣಗೊಳ್ಳುವುದನ್ನು ಅನೇಕ ಅಧ್ಯಯನಗಳು ತೋರಿಸಿಕೊಟ್ಟಿವೆ. ಧ್ಯಾನದ ಉಚ್ಛ್ರಾಯ ಸ್ಥಿತಿಯಲ್ಲಿರುವ ಯೋಗಿಯ ಮೆದುಳಿನ ಅಲೆಗಳಿಗೂ ತರಗತಿಯಲ್ಲಿ ನಿದ್ದೆಯಲ್ಲಿ ತಲ್ಲೀನನಾದ ವಿದ್ಯಾರ್ಥಿಯ ಮೆದುಳಿನ ಅಲೆಗಳಿಗೂ ಅನೇಕ ಸಾಮ್ಯತೆಗಳು ನಮ್ಮ ಅಧ್ಯಯನದಲ್ಲಿ ಕಂಡು ಬಂದವು. ಶಾಸ್ತ್ರೀಯ ಸಂಗೀತವನ್ನು ಆಸ್ವಾದಿಸುವಾಗ, ರೋಚಕ ಕಾದಂಬರಿಯಲ್ಲಿ ಮೈಮರೆತಿರುವಾಗ, ಪಾರ್ಕಿನಲ್ಲಿ ಪ್ರಿಯತಮೆಯ ಅಂಗೈ ಹಿಡಿದು ಕೂತಿರುವಾಗ, ಶೌಚಾಲಯದಲ್ಲಿ ಸಲೀಸಾಗಿ ಮಲ ವಿಸರ್ಜನೆಯಾಗುವಾಗ ಮನುಷ್ಯನ ಮೆದುಳಿನಲ್ಲಾಗುವ ಬದಲಾವಣೆಗಳನ್ನು ನಾವು ಕೂಲಂಕುಶವಾಗಿ ಪರಿಶೀಲಿಸಿದೆವು. ಆಶ್ಚರ್ಯಕರವಾದ ಸಂಗತಿಯೆಂದರೆ  ಆಲೋಚನೆಗಳು, ಸಪ್ಪಳಗಳು ಕ್ಷೀಣವಾಗಿರುವ ಈ ಎಲ್ಲಾ ಕ್ರಿಯೆಗಳಲ್ಲಿ ಮೆದುಳು ತೋರುವ ಪ್ರತಿಕ್ರಿಯೆಗೂ ತರಗತಿಯಲ್ಲಿ ವಿದ್ಯಾರ್ಥಿಯು ತೂಕಡಿಸುವಾಗ ಆತನ ಮೆದುಳು ತೋರುವ ಪ್ರತಿಕ್ರಿಯೆಗೂ ಯಾವ ವ್ಯತ್ಯಾಸವೂ ಇಲ್ಲ. ಒಟ್ಟಿನಲ್ಲಿ ನಮ್ಮ ಸಂಶೋಧನೆಯ ಫಲಿತಾಂಶವೆಂದರೆ: ನಿದ್ದೆ ಮಾಡುವಾಗ ಮನುಷ್ಯನ ಮೆದುಳಿನ ಏಕಾಗ್ರತೆ ಹಾಗೂ ಗ್ರಹಣ ಶಕ್ತಿ ಹೆಚ್ಚು” ಎಂದು ಗೊರಕೆರಾಮ್ ಹೇಳಿದುದಾಗಿ ನಮ್ಮ ತೂಕಡಿಸುತ್ತಿದ್ದ ವರದಿಗಾರನ ಟೇಪ್ ರೆಕಾರ್ಡ್ ವರದಿ ಮಾಡಿದೆ.

ಈ ಸಂಶೋಧನೆಯು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರಲಿದೆ ಎಂದು ಭವಿಷ್ಯ ನುಡಿದ ವಿದ್ಯಾರ್ಥಿ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ತೂಗುತಲೆ ವೆಂಕಟೇಶ್ “ತರಗತಿಯಲ್ಲಿ ತಮ್ಮ ಪಾಡಿಗೆ ತಾವು ತೂಕಡಿಸುತ್ತ ಕೂರುವ ವಿದ್ಯಾರ್ಥಿಗಳನ್ನು ಹಿಂಸಿಸುವ, ಅಪಮಾನಿಸುವ ಅಧ್ಯಾಪಕರುಗಳಿಗೆ ಈ ಸಂಶೋಧನೆಯ ಫಲಿತಾಂಶ ಚಾಟಿ ಏಟು ನೀಡುವಂತಿದೆ. ಅತಿ ಬುದ್ಧಿವಂತರು, ದೇಶಕ್ಕಾಗಿ ಅವಿರತ ದುಡಿಯುವವರು, ದೇಶದ ಕಾನೂನು ಸುವ್ಯವಸ್ಥೆ ಕಾಪಾಡುವವರು ಎಲ್ಲರೂ ನಿದ್ದೆಯ ಮಹತ್ವ ವಿವರಿಸುವ ಜೀವಂತ ಸಾಕ್ಷಿಗಳಾಗಿದ್ದಾರೆ.  ಇನ್ನು ಮುಂದಾದರೂ ತಮ್ಮ ಪಾಠಗಳನ್ನು ಯಾರು ಹೆಚ್ಚು ಏಕಾಗ್ರತೆಯಿಂದ ಕೇಳುತ್ತಿದ್ದಾರೆ ಎಂದು ಅವರಿಗೆ ತಿಳಿದೀತೆಂದು ಆಶಿಸಬಹುದು.” ಎಂದರು.

ವೈಜ್ಞಾನಿಕವಾದ ಈ ಅಧ್ಯಯನದಿಂದ ತಮ್ಮ ಪಾಠ ಪ್ರವಚನದ ವಿಧಾನದಲ್ಲಿ ಏನೂ ಬದಲಾವಣೆಯಾಗದು ಎಂದಿರುವ   ಅಧ್ಯಾಪಕ ಕೊರೆತದೇವ್  ತಮಗೆ ಈ ವೈಜ್ಞಾನಿಕ ಸತ್ಯವು ಅನುಭವಜನ್ಯವಾಗಿ ತಿಳಿದುಬಂದಿತ್ತು ಎಂದರು. “ನಮ್ಮ ಪಾಠದ ವಿಧಾನ, ಧ್ವನಿಯ ಏರಿಳಿತ ಹಾಗೂ  ಅನಾಕರ್ಷಕ ಪಠ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿದ ಯಾರಿಗಾದರೂ ವಿದ್ಯಾರ್ಥಿಗಳು ಏಕೆ  ಅಪಾಯಕಾರಿ ಹಾಗೂ ಕಷ್ಟಕರವಾದ ಭಂಗಿಗಳಲ್ಲೂ ನಿದ್ದೆ ಮಾಡಲು ಸಾಧ್ಯ ಎಂಬುದು ತಿಳಿಯುತ್ತದೆ. ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ಗಲಭೆಯಿಬ್ಬಿಸದೆ ಏಕಾಗ್ರವಾಗಿ ಪಾಠ ಕೇಳಲೆಂದೇ ನಾವು ಈ ಶೈಲಿಯನ್ನು ಅನುಸರಿಸುವುದು.”

ನಿದ್ದೆಯ ಬಗ್ಗೆ ಖ್ಯಾತ ಪ್ರವಚನಕಾರರು ತಮ್ಮ ಅಭಿಪ್ರಾಯ ತಿಳಿಸುವಾಗ ನಮ್ಮ ವರದಿಗಾರನೂ, ಆತನ ರೆಕಾರ್ಡರೂ ನಿದ್ದೆ ಮಾಡುತ್ತಿದ್ದುವಾದ್ದರಿಂದ ವರದಿ ಮಾಡಲು ಸಾಧ್ಯವಾಗಿಲ್ಲ. ಈ ಕುರಿತು ತೂಕಡಿಸುತ್ತಿರುವ ನಮ್ಮ ಓದುಗರಲ್ಲಿ ನಾವು ವಿಷಾದಿಸುತ್ತೇವೆ.


ಸಂಪೂರ್ಣ ಉಡುಗೆ ತೊಟ್ಟು ಪ್ರತಿಭಟನೆ

19 ಫೆಬ್ರ

ಪರೀಕ್ಷಾ ಮಂಡಳಿಯ ಹೊಸ ನೀತಿಯ ವಿರುದ್ಧ ಪ್ರತಿಭಟನೆಯ ಬೆದರಿಕೆ


ಚೆನ್ನೈ, ಫೆ.೧೯:
ತಮಿಳು ನಾಡಿನ ರಾಜ್ಯ ಪರೀಕ್ಷಾ ಮಂಡಳಿ ನಕಲು ತಡೆಗಟ್ಟುವುದಕ್ಕಾಗಿ ಘೋಷಿಸಿರುವ ನಿಯಂತ್ರಣ ಕ್ರಮಗಳನ್ನು ಹಿಂತೆಗೆದುಕೊಳ್ಳದಿದ್ದರೆ  ರಾಜ್ಯದ ವಿದ್ಯಾರ್ಥಿಗಳೆಲ್ಲ ಸಂಪೂರ್ಣ ಉಡುಗೆ ತೊಟ್ಟು ಉಗ್ರ ಪ್ರತಿಭಟನೆ ಕೈಗೊಳ್ಳುವುದಾಗಿ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನಕಲೇಶ್ ತಿಳಿಸಿದ್ದಾರೆ.

ಕಾಲೇಜಿನ ಸನಿಹದ ಝೆರಾಕ್ಸ್ ಅಂಗಡಿಯಲ್ಲಿ ಮೈಕ್ರೋ ಕಾಪಿ ತೆಗೆಸುವಲ್ಲಿ ಮಗ್ನರಾಗಿದ್ದ ನಕಲೇಶ್ ಸುದ್ದಿಗಾರರೊಂದಿಗೆ ಮಾತನಾಡಿದರು. “ಶೂ,ಸಾಕ್ಸು, ಬೆಲ್ಟುಗಳನ್ನು ಪರೀಕ್ಷಾ ಕೇಂದ್ರದೊಳಗೆ ಧರಿಸಿರಲು ಅನುಮತಿಸುವುದಿಲ್ಲ ಎಂದಿರುವುದು ವಿದ್ಯಾರ್ಥಿಗಳ ಸ್ವಾತಂತ್ರ್ಯ ಹರಣದ ಕೃತ್ಯವಾಗಿದೆ. ಶೂ ಸಾಕ್ಸು ಬಿಚ್ಚಿ ಕೊಠಡಿಯೊಳಗೆ ಬನ್ನಿ ಎಂದವರು ನಾಳೆ ಶರ್ಟು ಪ್ಯಾಂಟು ಕಳಚಿ ಬನ್ನಿ ಎಂದು ಫರ್ಮಾನು ಹೊರಡಿಸುವುದಕ್ಕೆ ಹೇಸುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ?” ಎಂದು ಪ್ರಶ್ನಿಸಿದರು.

ಈ ಕ್ರಮಗಳನ್ನು ಕೂಡಲೇ ಹಿಂತೆಗೆಯದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. “ರಾಜ್ಯದ ಬೀದಿ ಬೀದಿಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು. ವಿದ್ಯಾರ್ಥಿಗಳು ಸಂಪೂರ್ಣ ಫಾರ್ಮಲ್ ದಿರಿಸು ತೊಟ್ಟು, ವಿದ್ಯಾರ್ಥಿನಿಯರು ತೋಳು, ಮಂಡಿಗಳನ್ನೂ ಮುಚ್ಚುವ ಸಾಂಪ್ರದಾಯಿಕ ಉಡುಗೆ ತೊಡುವ ಮೂಲಕ ಪ್ರತಿಭಟಿಸುವರು.”

ವಿದ್ಯಾರ್ಥಿಗಳ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿರುವ  ಕಾಲೇಜು ಬದಿಯ ಅಂಗಡಿಗಳ ವ್ಯಾಪಾರಿ ಸಂಘ ತಾವು ಎಂದಿಗೂ ವಿದ್ಯಾರ್ಥಿಗಳ ಪರ ಎಂದು ಹೇಳಿಕೆ ನೀಡಿದೆ. “ವಿದ್ಯಾರ್ಥಿಗಳ ಹಿತಾಸಕ್ತಿಯೊಂದೇ ನಮಗೆ ಮುಖ್ಯ. ಹತ್ತಾರು ವರ್ಷಗಳಿಂದ ನಾವು ವಿದ್ಯಾರ್ಥಿಗಳಿಗಾಗಿ ನಮ್ಮ ಜೀವನವನ್ನು ಸವೆಸುತ್ತಾ ಬಂದಿದ್ದೇವೆ. ಇಡೀ ಪಠ್ಯಪುಸ್ತಕವನ್ನು ಅಂಗೈಯಲ್ಲಿ ಅಡಗಿಸಿಕೊಳ್ಳುವಷ್ಟು ಚೊಕ್ಕಟವಾಗಿ ನಾವು ಕಾಪಿ ಮಾಡಿಕೊಡದಿದ್ದರೆ ಪಾಪ ಈ ಎಳೆಯ ಮಕ್ಕಳು ರಾತ್ರಿ ದೀಪವನ್ನು ಉರಿಸಿ ಎಸ್.ಟಿ.ಡಿ ಬಿಲ್ಲಿಂಗ್ ಹಾಳೆಯ ಮೇಲೆ ಎಲ್ಲವನ್ನೂ ಬರೆದುಕೊಳ್ಳಬೇಕಾಗುತ್ತದೆ. ಪರೀಕ್ಷೆಯ ಮೊದಲೇ ಸೋರಿದ ಪ್ರಶ್ನೆ ಪತ್ರಿಕೆಯನ್ನು   ಹೆಕ್ಕಿ ತಂದು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಮಧ್ಯರಾತ್ರಿಯೆಲ್ಲ ಮುದ್ರಿಸಿ ವಿದ್ಯಾರ್ಥಿಗಳನ್ನು ವಯಕ್ತಿಕವಾಗಿ ಸಂಪರ್ಕಿಸಿ ತಲುಪಿಸುವುದು ಕಡಿಮೆ ತ್ರಾಸದ ಕೆಲಸವೇ?”

ಹೊಸ ತಂತ್ರಜ್ಞಾನದಿಂದಾಗಿ ತಮ್ಮ ವೃತ್ತಿ ಯು ಅವನತಿಯ ಅಂಚಿಗೆ ಸರಿಯುತ್ತಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು. “ಮೊಬೈಲು, ಪೆನ್ ಡ್ರೈವು ಮೊದಲಾದ ಅತ್ಯಾಧುನಿಕ ಸಲಕರಣೆಗಳನ್ನು ಬಳಸಿ ವಿದ್ಯಾರ್ಥಿಗಳು ಸ್ವತಂತ್ರವಾಗಿ, ನಮ್ಮ ಹಂಗಿಲ್ಲದೆ ಪರೀಕ್ಷೆ ಎದುರಿಸುವ ಕೆಟ್ಟ ಸಂಸ್ಕೃತಿ ಶುರುವಾಗಿದೆ. ಜಾಗತೀಕರಣದ  ಹುಚ್ಚು ಹೊಳೆಯಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿರುವ ಇಂತಹ ಸಾಂಪ್ರದಾಯಿಕ  ವೃತ್ತಿಯನ್ನು ಎಲ್ಲರೂ ಸೇರಿ ಉಳಿಸಬೇಕು.”