(ನಗೆ ನಗಾರಿ ಅಂತರಾಷ್ಟ್ರೀಯ ಕ್ಯಾತೆ ಬ್ಯೂರೋ)
ಶಾಲೆಗೆ ಸೇರಿದ ಹುಡುಗನೊಬ್ಬನ ಮಾತು, ಪ್ರಶ್ನೆಗಳಿಗೆ ಆತ ನೀಡುವ ಉತ್ತರಗಳು ಆಕರ್ಷಕವಾಗಿದ್ದರೆ ಅವನ್ನೆಲ್ಲ ಕಂಡು ಆತ ತುಂಬಾ ಬುದ್ಧಿವಂತ ಇರಬೇಕು ಎಂದೆನ್ನಿಸುವುದು ಸಾಮಾನ್ಯ. ಆದರೆ ಹಾಗಂತ ಪರೀಕ್ಷೆ ನಡೆಸುವ ಮೊದಲೇ ಆತನಿಗೆ ಮೊದಲ ರ್ಯಾಂಕ್ ಕೊಟ್ಟುಬಿಡಲು ಸಾಧ್ಯವೇ?
ಅಧಿಕಾರಕ್ಕೆ ಬಂದು ಒಂದು ವರ್ಷವೂ ಆಗಿರದ, ಬರಾಕ್ ಒಬಾಮರಿಗೆ ವಿಶ್ವ ಶಾಂತಿ ನೊಬೆಲ್ ಬಹುಮಾನ ಕೊಟ್ಟಿರುವುದನ್ನು ಕಂಡು ಅನೇಕರು ಹೀಗೆ ಮೂಗೆಳೆಯುತ್ತಿದ್ದಾರೆ. ಯುದ್ಧ ದಾಹಿ ಅಮೇರಿಕಾ ದೇಶದ ಶಬ್ಧಕೋಶದಲ್ಲಿಯೂ ಸಹ ಶಾಂತಿ ಎಂಬ ಪದದ ಬದಲಾಗಿ ‘ಬಾಂಬು’ ಇರುವುದನ್ನು ಪತ್ತೆ ಮಾಡಿರುವ ಶಾಂತಿಯುತ ರಕ್ತಕ್ರಾಂತಿಯ ಧುರೀಣರು ಜಾಗತಿಕ ಆರ್ಥಿಕ ಕುಸಿತದ ಈ ಕಾಲದಲ್ಲಿ ನೊಬೆಲ್ ಸಂಸ್ಥೆ ಅಗ್ಗದ ಜೋಕ್ ಕಟ್ ಮಾಡಿದೆ ಎಂದು ಹೇಳಿಕೆ ನೀಡಿದೆ. ಕೆಂಪು ಬಣ್ಣದಲ್ಲಿರಬೇಕಾಗಿದ್ದ ಹೇಳಿಕೆಯ ಪಾಂಪ್ಲೆಟುಗಳು ನೀಲಿಗೆ ತಿರುಗಿದುದರ ಹಿಂದೆ ಸಿ.ಐ.ಎ ಕೈವಾಡವಿದೆಯೆಂದು ಹಳದಿ ಬಣ್ಣದ ಮತ್ತೊಂದು ಪಾಂಪ್ಲೆಟಿನಲ್ಲಿ ಹೇಳಲಾಗಿದೆ.
ಒಬಾಮರಿಗೆ ನೊಬೆಲ್ ಕೊಟ್ಟಿರುವುದರ ವಿರುದ್ಧ ಅರಬ್ ರಾಷ್ಟ್ರಗಳಲ್ಲಿ, ಇರಾಕ್, ಇರಾನ್ ಹಾಗೂ ಸೌದಿ ಅರೇಬಿಯಾ ಎಂಬ ದುಷ್ಟತ್ರಯ ಮಿತ್ರಕೂಟದಲ್ಲಿ ಅಸಮಾಧಾನದ ಹೊಗೆ ಆಡಿರುವುದು ನಿಜವಾದರೂ ಜಗತ್ತಿನ ಯಾವ ಮೂಲೆಯಲ್ಲೂ ಗಟ್ಟಿ ಧ್ವನಿಯ ಪ್ರತಿಭಟನೆ ವ್ಯಕ್ತವಾಗಿರುವುದು ಯಾವ ಮುಖ್ಯವಾಹಿನಿಯ ಮಾಧ್ಯಮಗಳಲ್ಲೂ ವರದಿಯಾಗಿಲ್ಲ. ಮುಖ್ಯವಾಹಿನಿಯ ಮಾಧ್ಯಮಗಳು ಕಳೆದುಕೊಂಡ ಸುದ್ದಿಯನ್ನು ಹೆಕ್ಕಿ ತೆಗೆಯುವಲ್ಲಿ ಜಗತ್ಪ್ರಸಿದ್ಧವಾಗಿರುವ ನಗೆ ನಗಾರಿಯು ಈ ಸುದ್ದಿಯ ಬೆನ್ನಟ್ಟಿತು. ಒಬಾಮರನ್ನು ನೊಬೆಲ್‌ಗೆ ಆಯ್ಕೆ ಮಾಡಿರುವುದನ್ನು ಉಗ್ರವಾಗಿ ವಿರೋಧಿಸಿರುವ ಸಂಘಟನೆಯೊಂದು ‘ಕೊಲೆಗಾರ ಒಬಾಮಗೆ ಶಾಂತಿ ನೊಬೆಲ್?’ ಎಂಬ ಶೀರ್ಷಿಕೆಯಲ್ಲಿ ಪತ್ರಿಕಾ ಹೇಳಿಕೆಯನ್ನು ನೀಡಿದೆ. ಒಂದು ವೇಳೆ ನೊಬೆಲ್ ಸಮಿತಿಯು ತನ್ನ ನಿರ್ಧಾರವನ್ನು ಬದಲಿಸದಿದ್ದರೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಉಳಿದೆಲ್ಲ ದೊಡ್ಡ ಮಾಧ್ಯಮ ಸಂಸ್ಥೆಗಳು ಈ ಪುಟ್ಟ ಸಂಘಟನೆಯ ಪತ್ರಿಕಾ ಹೇಳಿಕೆಯನ್ನು ಕಸದ ಬುಟ್ಟಿಗೆ ಎಸೆದಿವೆ. ಆದರೆ ಪತ್ರಿಕಾ ಕಛೇರಿಯ ಕಸದ ಬುಟ್ಟಿಯನ್ನೇ ಅತಿಮುಖ್ಯ ಬಾತ್ಮೀದಾರನನ್ನಾಗಿ ಹೊಂದಿರುವ ನಗೆ ನಗಾರಿಯು ಆ ಬಹುಸಂಖ್ಯಾತ ಮೈನಾರಿಟಿಯ ಒಂಟಿ ಧ್ವನಿಗೆ ಬೆಂಬಲ ನೀಡುತ್ತ ಅವರ ಪ್ರಕಟಣೆಯನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ:
ಮಾನವರ ಕ್ಯಾಲಂಡರಿನ ದಿನಾಂಕ: ೦೯-೧೦-೨೦೦೯
ಮಾನವರ ಭೂಪಟದ ಸ್ಥಳ : ನ್ಯೂಯಾರ್ಕ್
ಅಂತರಾಷ್ಟ್ರೀಯ ಕೀಟ ಪ್ಯಾರಕೀಟ ಸಂಘಟನೆಯ ಅಂಗ ಸಂಸ್ಥೆಯಾದ ಅಂತರಾಷ್ಟ್ರೀಯ ನಿರುದ್ಯೋಗಿ ನೊಣಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ನಾನು, ಶ್ರೀಮತಿ ನೊಣಚಮ್ಮ ಈ ಪತ್ರದ ಮೂಲಕ ತಿಳಿಸುವುದೇನೆಂದರೆ…
ಅಮೇರಿಕಾದ ನೂತನ ಅಧ್ಯಕ್ಷರಾದ ಬರಾಕ್ ಹುಸೇನ್ ಒಬಾಮ ಮೇಲ್ನೋಟಕ್ಕೆ ಶಾಂತಿದೂತರಾಗಿ, ಜಗತ್ತಿನ ಸಮಸ್ಯೆಗಳನ್ನೆಲ್ಲ ಪರಿಹರಿಸುವ ಮುತ್ಸದ್ಧಿಯಾಗಿ, ದೇವರ ಮಗನಾಗಿ, ಪ್ರವಾದಿಯಾಗಿ ಕಂಡುಬಂದರೂ ಅಂತರಂಗದಲ್ಲಿ ಆತನೂ ರಕ್ತದಾಹಿಯೇ. ಆತನ ದೇಹದಲ್ಲಿ ವರ್ಷವೊಂದಕ್ಕೆ ನಾಶವಾಗುವ ಕೆಂಪು ರಕ್ತ ಕಣಗಳೇ ಇದಕ್ಕೆ ಹಸಿ ಸಾಕ್ಷಿ.
ಒಬಾಮರ ಮೊದಲು ಎರಡು ಅವಧಿಗಳ ಕಾಲ ಅಮೇರಿಕಾದ ಅಧ್ಯಕ್ಷರಾಗಿದ್ದ ಬುಶ್ ನಿಜವಾದ ಅಹಿಂಸಾವಾದಿಯಾಗಿದ್ದರು ಎಂಬುದನ್ನು ನಮ್ಮ ಕೀಟ ಸಂಘಟನೆಯು ನೆನೆಯಲು ಇಚ್ಛಿಸುತ್ತದೆ. ಅವರ ಕಾಲಾವಧಿಯಲ್ಲಿ ಅಫಘಾನಿಸ್ತಾನ, ಇರಾಕ್ ಮೊದಲಾದೆಡೆ ನೊಣಗಳ ಹಾಗೆ ಜನರು ಕೊಲ್ಲಲ್ಪಟ್ಟರೂ, ಅಬು ಗಾರಿಬ್, ಗ್ವಾಂಟನಮೋ ಸೆರೆಮಮನೆಗಳಲ್ಲಿ ಕೀಟಗಳಂತೆ ಖೈದಿಗಳು ತಿಕ್ಕಲ್ಪಟ್ಟರು. ಆದರೆ ಬುಶ್ ಆಶ್ರಯದಲ್ಲಿ ನಮ್ಮ ಕೀಟ ಜೀವ ಸಂಕುಲಕ್ಕೆ ಯಾವ ಬಾಧೆಯೂ ತಟ್ಟಲಿಲ್ಲ. ಕೀಟ ಪ್ರಪಂಚದ ಅಧಿದೇವತೆಯಂತೆ ಸನ್ಮಾನ್ಯ ಬುಶ್‌ರವರು ಅಧಿಕಾರ ನಡೆಸಿದರು.
ಇರಾಕ್ ಎಂಬ ದೇಶದ ರಕ್ಕಸ ಸರ್ವಾಧಿಕಾರಿಯನ್ನು ನೇಣಿಗೆ ಹಾಕಿ ಆ ದೇಶಕ್ಕೆ ಪ್ರಜಾಪ್ರಭುತ್ವವನ್ನು ತಂದುಕೊಟ್ಟು ಉಡುಗೊರೆಯಾಗಿ ಪತ್ರಕರ್ತನೊಬ್ಬನ ಶೋ ಒಂದು ಗಾಳಿಯಲ್ಲಿ ತೂರಿ ಬಂದಾಗ ಬುಶ್ ಕಾರ್ಯಕ್ಷಮತೆಯ ನಿಜವಾದ ಪರೀಕ್ಷೆ ನಡೆಯಿತು. ತೂರಿ ಬಂದ ಶೂ ಸೋಲ್ ಹಾಗೂ ಬುಶ್ ಹಣೆಯ ನಡುವೆ ನಮ್ಮ ಕೀಟ ಸಂಘಟನೆಯ ಅಧ್ಯಕ್ಷರಾದ ಶ್ರೀ ನೊಣಯ್ಯನವರು ಸಿಕ್ಕಿ ಹಾಕಿಕೊಂಡಿದ್ದರು. ಒಂದು ವೇಳೆ ಶೂ ತಮ್ಮ ಹಣೆಗೆ ಅಪ್ಪಳಿಸಲು ಬುಶ್ ಅನುಮತಿಸಿದ್ದಿದ್ದರೆ ಅಂದು ನಮ್ಮ ಸಂಘಟನೆ ನಾಯಕನನ್ನು ಕಳೆದುಕೊಳ್ಳುತ್ತಿತ್ತು. ಪರಮದಯಾಳುವಾದ ಜಾರ್ಜ್ ಬುಶ್ ತಮ್ಮೆಲ್ಲಾ ಆತ್ಮಶಕ್ತಿಯನ್ನು ಒಗ್ಗೂಡಿಸಿ ನಮ್ಮ ನಾಯಕನ ಪ್ರಾಣವನ್ನು ಉಳಿಸಿದರು. ಅಂದೇ ನಾವು ವಿಶ್ವಸಂಸ್ಥೆಗೆ ಪತ್ರವನ್ನು ಬರೆದು ಸನ್ಮಾನ್ಯ ಬುಶ್‌ರಿಗೆ ವಿಶ್ವಶಾಂತಿ ನೊಬೆಲ್ ನೀಡಬೇಕು ಎಂದು ಒತ್ತಾಯಿಸಿದ್ದೆವು. ಪತ್ರವನ್ನು ಹೊತ್ತೊಯ್ದ ನಮ್ಮ ದೂತನು ವಿಮಾನ ನಿಲ್ದಾಣದ ಮಸ್ಕಿಟೊ ರಿಪೆಲೆಂಟ್ ದಾಳಿಗೆ ಬಲಿಯಾಗಿ ಪತ್ರವು ಗುರಿಯನ್ನು ತಲುಪುವಲ್ಲಿ ವಿಫಲವಾಯಿತು.
ಬುಶ್‌ರಂತಹ ಅಪ್ರತಿಮ ಕರುಣಾಮಯಿಯಿಂದ ಅಧಿಕಾರ ಕಸಿದುಕೊಂಡ ಒಬಾಮ ನಮ್ಮ ಸಂಸ್ಥೆಯ ಪಾಲಿಗೆ ಒಸಾಮ ಆದದ್ದು ದುರಂತ. ಜಾರ್ಜ್ ಬುಶ್‌ರಿಂದ ರಕ್ಷಿಸಲ್ಪಟ್ಟ ನಮ್ಮ ಅಧ್ಯಕ್ಷರು ತಮ್ಮ ಕೃತಜ್ಞತಾ ಪತ್ರವನ್ನು ಖುದ್ದಾಗಿ ಅಮೇರಿಕಾದ ಅಧ್ಯಕ್ಷರಿಗೆ ತಲುಪಿಸಲು ವೈಟ್ ಹೌಸ್ ಸೇರಿದ್ದರು. ಆದರೆ ಅಷ್ಟರಲ್ಲಿ ಬುಶ್‌ರನ್ನು ಪಟ್ಟದಿಂದ ಇಳಿಸಿ ಈ ಕರಿದೊರೆಯನ್ನು ಪ್ರತಿಷ್ಠಾಪಿಸಲಾಗಿತ್ತು. ಆದರೂ ಬುಶ್ ಅಲಂಕರಿಸಿದ್ದ ಅಧ್ಯಕ್ಷ ಸ್ಥಾನದ ಮೇಲಿನ ಗೌರವದಿಂದ ನಮ್ಮ ನೊಣಯ್ಯನವರು ಒಬಾಮರಿಗೆ ಪ್ರೀತಿಯ ಆಲಿಂಗನ ಹಾಗೂ ಕೆನ್ನೆಯ ಮೇಲೆ ಹೂ ಮುತ್ತನ್ನು ನೀಡಲು ಮುಂದಾದರು.
ಆಗ ಸ್ಪೋಟಿಸಿತು ರಕ್ಕಸನ ಅಂತರಂಗದಲ್ಲಿದ್ದ ಕ್ರೋಧಾಗ್ನಿ! ರಾಷ್ಟ್ರೀಯ ಮಾಧ್ಯಮದ ಕೆಮರಾಗಳ ಸಮಕ್ಷಮದಲ್ಲಿಯೇ ಆತನ ರೌದ್ರಾವತಾರ ಅನಾವರಣಗೊಂಡಿತು. ಕಡು ನಿಷ್ಕರುಣಿ ಕೊಲೆಗಾರನ ಹಾಗೆ ಒಬಾಮ ನಮ್ಮ ಅಧ್ಯಕ್ಷರನ್ನು ಪಟ್ ಎಂದು ಹೊಡೆದುರುಳಿಸಿ ಬಿಟ್ಟರು. ಕ್ಷಣ ಮಾತ್ರದಲ್ಲಿ ನೊಣಯ್ಯನವರ ಪ್ರಾಣ ಪಕ್ಷಿ ಅನಂತದಲ್ಲಿ ಲೀನವಾಗಿ ಹೋಯ್ತು. ಇಂತಹ ಘೋರವಾದ ಪಾಪವೆಸಗಿಯೂ ಚೂರೂ ಪಶ್ಚಾತಾಪವಿಲ್ಲದೆ ಹತ ನೊಣಯ್ಯನವರ ಶವವನ್ನು ನ್ಯಾಪ್‌ಕಿನ್ನಿನಲ್ಲಿ ಎತ್ತಿ ಬಿಸಾಕಿ ಕೆಮಾರದವರಿಗೆ ಕವರ್ ಮಾಡಲು ನಗುತ್ತಾ ಹೇಳಿದರು. ಅನಂತರ ಕೈ ಒರೆಸಿಕೊಂಡು ಸಂದರ್ಶನ ಮುಂದುವರೆಸಿದರು.
ಈ ಘಟನೆಗೆ ನಮ್ಮ ಬಳಿ ವಿಡಿಯೋ ದಾಖಲೆಗಳಿವೆ. ಅದನ್ನಿಲ್ಲಿ ಲಗತ್ತಿಸಿದ್ದೇವೆ.
ಪತ್ರಿಕೆಗಳ ವರದಿಗಳ ಆಧಾರಗಳಿವೆ.
ಹೇಳಿ, ಇಂತಹ ನಿಷ್ಕರುಣೆಯ, ಕ್ರೂರ ರಕ್ತದಾಹಿ ಮನುಷ್ಯನಿಗೆ ಶಾಂತಿ ನೊಬೆಲ್ ಬಹುಮಾನ ನೀಡಿದರೆ ನೊಬೆಲ್ ಪ್ರತಿಷ್ಠಾನವನ್ನು ಸ್ಥಾಪಿಸಿದ, ಜಿಲಟಿನ್, ಡೈನಮೈಟ್ ಕಂಡುಹಿಡಿದು, ಬೊಫೊರ್ಸ್ ಕಂಪೆನಿಯ ಒಡೆಯನಾಗಿ ವಿಶ್ವಯುದ್ಧದಲ್ಲಿ ಮಾನವರ ಜೀವಗಳನ್ನು ಸೊಳ್ಳೆ ಜೀವಗಳಿಗೆ ಸಮ ಎಂದು ತೋರಿಸಿಕೊಟ್ಟ ಆಲ್ಫ್ರೆಡ್ ನೊಬೆಲ್ ಆತ್ಮಕ್ಕೆ ಶಾಂತಿ ಸಿಕ್ಕುತ್ತದೆಯೇ?
ತಮ್ಮ ಈ ನಿರ್ಧಾರವನ್ನು ನೊಬೆಲ್ ಸಮಿತಿಯು ಹಿಂತೆಗೆದುಕೊಳ್ಳದಿದ್ದರೆ ನಾವು ವಿಶ್ವದಾದ್ಯಂತ ಉಗ್ರ ಪ್ರತಿಭಟನೆಯನ್ನು ನಡೆಸಲಿದ್ದೇವೆ. ನಮ್ಮ ಸಂಘಟನೆಯ ಆತ್ಮಾಹುತಿ ದಳದ ಯೋಧರು ಜಗತ್ತಿನೆಲ್ಲ ಟೀ ಕಪ್ಪುಗಳಲ್ಲಿ ಧುಮುಕಿ ಪ್ರಾಣ ತ್ಯಾಗ ಮಾಡಲಿರುವರು. ಮುಂದೆ ಆಗಲಿರುವ ಎಲ್ಲಾ ಅನಾಹುತಗಳಿಗೆ ನೊಬೆಲ್ ಸಮಿತಿಯೇ ಹೊಣೆ! ಎಚ್ಚರ!
ಇಂತಿ,
ಅಂತರಾಷ್ಟ್ರೀಯ
ನಿರುದ್ಯೋಗಿ ನೊಣಗಳ
ಒಕ್ಕೂಟದ
ಪ್ರಧಾನ ಕಾರ್ಯದರ್ಶಿ
ಶ್ರೀಮತಿ ನೊಣಚಮ್ಮ
ಟ್ಯಾಗ್ ಗಳು:ತೀವ್ರ ಪ್ರತಿಭಟನೆ, ನೊಣದ ಕೊಲೆ, ಪತ್ರಿಕಾ ಪ್ರಕಟಣೆ, ಬರಾಕ್ ಒಬಾಮ, ಶಾಂತಿ ನೊಬೆಲ್, barack obama
ಇತ್ತೀಚಿನ ಪ್ರಜಾ ಉವಾಚ