Archive | ಬ್ಲಾಗ್ ಬೀಟ್ RSS feed for this section

ಬ್ಲಾಗ್ ಬೀಟ್ 22

18 ಜುಲೈ

 

ನಾವು ಮಾಡುವ ತಪ್ಪನ್ನು ನಮಗಿಂತಾ ಚೆನ್ನಾಗಿ ಯಾರ್ಯಾರು ಮಾಡಿದ್ದಾರೆ ಎಂದು ವಿವರವಾಗಿ ದಾಖಲಿಸುವ ಕಲೆಯನ್ನೇ ವಿಮರ್ಶೆ ಎನ್ನುವುದು. ನಮ್ಮ  ಪ್ರಮುಖ ಪತ್ರಿಕೆಗಳು ಇದನ್ನು ಮಿರ್ಚಿ, ಮಸಾಲಾ ಹೆಸರಿನಲ್ಲಿ ಮಾಡುತ್ತಿವೆ. ಪ್ರತಿ ಸಂಚಿಕೆಯಲ್ಲಿ ಇದನ್ನೇ ನಾವು ‘ಬ್ಲಾಗ್ ಬೀಟ್’ ಹೆಸರಿನಲ್ಲಿ ಮಾಡುತ್ತಿದ್ದೇವೆ.

ನಮ್ಮ ವಿಮರ್ಶೆಯ ಮೊನೆಗೆ ನಿಮ್ಮ ಬ್ಲಾಗೂ ತಾಕಬೇಕೆಂದಿದ್ದರೆ ಇಲ್ಲೊಂದು ಕಮೆಂಟ್ ಹಾಕಿ.

……………………..

ಬೊಗಳೆ

 

‘ಸ್ವಂತ ಮನೆ’ಯನ್ನು ಕಟ್ಟಿಕೊಳ್ಳುವುದರಲ್ಲಿ ಮಜಾವಾಣಿ ಆಯ್ತು ಈಗ ಬೊಗಳೆಯ ಸರದಿ! ನಾವಿನ್ನೂ ವರ್ಡ್ ಪ್ರೆಸ್ಸೆಂಬ ಮನೆ ಮಾಲೀಕನ ಮರ್ಜಿಯಲ್ಲಿ ಬದುಕುತ್ತಾ ಬಾಡಿಗೆ ಮನೆ ಸೊಗಸು ನೀವೇನು ಬಲ್ಲಿರಿ, ಈ ಜಗತ್ತೇ ಬಾಡಿಗೆ ಮನೆ, ಈ ದೇಹ ಬಾಡಿಗೆ ಮನೆ… ಬಾಡಿಗೆತನಕ್ಕೆಲ್ಲಿ ಕೊನೆ ಎಂದು ದೇವದಾಸ ಪದ ಹಾಡಿಕೊಳ್ಳುತ್ತಾ ಇದ್ದೇವೆ.

ಸ್ವಂತ ಮನೆ ಕಟ್ಟಿಕೊಂಡಿರುವ ಬೊಗಳೆಯಲ್ಲಿ ಎಂಪಿಗಳು ಎಮ್ಮೆಗಳಾಗಲು ಒಪ್ಪಲಿಲ್ಲವೇಕೆ ಎಂಬ ವರದಿಯಿದೆ.

ಮೋಟುಗೋಡೆ

 

ಮೋಟುಗೋಡೆಗೆ ಎದುರಾಗಿ ಚಲ್ಲಣವಿಲ್ಲದ ಚೋಟುಗಳನ್ನು ನಿಲ್ಲಿಸಿ ನೋಡಿಕೊಳ್ಳಿ ಎಂದು ಸವಾಲೆಸೆದು ತಲ್ಲಣ ಸೃಷ್ಟಿಸಿರುವ ಮೋಟುಗೋಡೆ ಬ್ಲಾಗಿನಲ್ಲಿ ಖ್ಯಾತರು ಮೋಟುಗೋಡೆಯನ್ನು ಜಿಗಿದು ಮಾಡಿದ ಸಾಹಸದ ದಾಖಲಾತಿ ಮುಂದುವರೆದಿದೆ. ಗಂಗಾಧರ ಚಿತ್ತಾಲರ, ಅಡಿಗರ ಗೋಡೆ ದಾಟಿದ ಸಾಹಸಗಳು ಇಲ್ಲಿವೆ

ಕೆಂಡಸಂಪಿಗೆ

 

ಮುದ್ರಣಕ್ಕೆ ಕಾಗದವನ್ನು ಬಳಸದ, ವರದಿಗಾರರಿಗೆ, ಬರಹಗಾರರಿಗೆ , ಅನಾಮಿಕ ಕಮೆಂಟುದಾರರಿಗೆ ಟಿಎ, ಡಿಎ, ಬಾಟಾ ಕೊಡದ   ಕೆಂಡಸಂಪಿಗೆಯಲ್ಲಿ ಕಾಸ್ಟ್ ಕಟಿಂಗ್ ನಡೆಯುತ್ತಿದೆಯಾ ಎಂಬ ಸಂಶಯ ಸಾಮ್ರಾಟರಿಗೆ ಬಂದಿದೆ.

ಜಗತ್ತಿನಾದ್ಯಂತ ಪತ್ರಿಕೆಗಳು ತಮ್ಮ ಹೆಚ್ಚುವರಿ ವರದಿಗಾರರನ್ನು, ಪ್ರೂಫ್ ತಿದ್ದುವ ಬುದ್ಧಿವಂತರನ್ನು ಮನೆಗೆ ಕಳಿಸುತ್ತಿದ್ದರೆ ಕೆಂ.ಸಂದಲ್ಲಿ ಅಪ್ರತಿಮ ವರದಿಗಾರ ಸುದ್ದಿ ಕ್ಯಾತನನ್ನೇ ಹೊರಗೆ ಅಟ್ಟಲಾಗಿದೆ.

ಈ ಬಗ್ಗೆ ಕೆಂ.ಸಂದ ಅತಿಥಿ ಸಂಪಾದಕರು ಕೊಂಚ ಗಮನ ಹರಿಸಲಿ ಎಂಬುದು ನಗೆ ಸಾಮ್ರಾಟರ ಕೋರಿಕೆ.

ಇನ್ನು ಅತಿಥಿ ಸಂಪಾದಕರ ಹೊಸತೊಂದು ಐಡಿಯಾ ಬಗ್ಗೆ ನಮ್ಮ ಸಂಪೂರ್ಣ ಬೆಂಬಲವಿದೆ.

ಬ್ಲಾಗ್ ಬೀಟ್ 21

2 ಜೂನ್

 

ಬಹು ದಿನಗಳ ನಂತರ ಬೀಟಿಗೆ ಹೊರಟ ಸಾಮ್ರಾಟರಿಗೆ ಭಾರಿ ನಿರಾಶೆ ಕಾದಿತ್ತು. ಅತ್ಯುತ್ತಮವಾದ ಫಸಲನ್ನು ನಿರೀಕ್ಷಿಸಿ ಕುಯಿಲಿಗೆ ಹೊರಟಿದ್ದವರಿಗೆ ಬರಡು ಭೂಮಿಯಂತಹ ಬ್ಲಾಗಿನಂಗಳ ಕಂಡು ದುಃಖವಾಯಿತು. ವಿದರ್ಭದ ಆಸುಪಾಸಿನಲ್ಲಿ ಓಡಾಡುತ್ತಿದ್ದರೆ ನೇಣು ಬಿಗಿದುಕೊಳ್ಳುವ ಅಪಾಯವಿತ್ತು. ಆದರೆ ಎಂದೂ ಕರ್ನಾಟಕದ ಅಂಗಳದಿಂದ ಕಾಲ್ಕಿತ್ತದ ಸಾಮ್ರಾಟರು ಬಚಾವಾದರು. ಕನ್ನಡದ ನೆಲದಲ್ಲಿ ಆಶಾವಾದಕ್ಕೆ ಕೊರತೆಯಿಲ್ಲ ಎಂದು ತಮ್ಮನ್ನು ತಾವು ಸಮಾಧಾನಿಸಿಕೊಂಡು ಸಿಕ್ಕ ಒಂದೆರಡು ಕಾಳುಗಳನ್ನು ಹೆಕ್ಕಿ ತಂದು ಸುರಿದಿದ್ದಾರೆ.

ಬೊಗಳೆ

ಎಲ್ಲೇ ಯಾವುದಕ್ಕೆ ಬರಗಾಲವಿದ್ದರೂ ಬ್ಲಾಗಿನ ಅಂಗಳದಲ್ಲಿ ಬೊಗಳೆಗೆ ಬರಗಾಲವಿಲ್ಲವೆನ್ನುವುದನ್ನು ಅನ್ವೇಷಿಯವರು ಸತತವಾಗಿ ಸಾಬೀತು ಪಡಿಸಿಕೊಂಡು ಬರುತ್ತಿದ್ದಾರೆ. ತಮ್ಮ ಇತ್ತೀಚಿನ ವರದಿಯಲ್ಲಿ ತಮಿಳು ನಾಡಿನಲ್ಲಿನ ಚುನಾವಣೋತ್ತರ ಸನ್ನಿವೇಶವನ್ನು ತೆರೆದಿಟ್ಟಿದ್ದಾರೆ.

ತಮಿಳುಕಾಡಿನ ಪ್ರಥಮ ಕುಟುಂಬವು ತನ್ನೆಲ್ಲಾ ಶಕ್ತಿ-ಸಾಮರ್ಥ್ಯ-ಜನಬಲ-ಕುಟುಂಬ ಬಲಗಳನ್ನೆಲ್ಲವನ್ನೂ ದೆಹಲಿಗೆ ವರ್ಗಾಯಿಸಿರುವ ಕಾರಣದಿಂದಾಗಿ ತಮಿಳುಕಾಡು ಬಿಕೋ ಎನ್ನುತ್ತಿದ್ದ ಘಟನೆಯೊಂದು ಯಾರಿಗೂ ತಿಳಿಯದಂತೆ ಘಟಿಸಿದ್ದು, ಅದನ್ನು ಬೊಗಳೂರು ವರದ್ದಿಗಾರರು ಪತ್ತೆ ಹಚ್ಚಿರುವುದಾಗಿ ಅನ್ಯ ಪತ್ರಿಕೆಗಳಲ್ಲಿ ವರದ್ದಿಯಾಗಿದೆ.

ಮೋಟು ಗೋಡೆ

ಗೋಡೆಯ ಆಚೆ ಈ ಬಾರಿ ಸಾಮ್ರಾಟರಿಗೆ ಎದುರಾಗಿದ್ದು ಸಲಿಂಗಿ ಜೋಡಿಗಳ ವಿಷಯ. ಈ ಸಂಗತಿಯ ಬಗ್ಗೆ ಜಗತ್ತೇ ತಲೆ ಕೆಡಿಸಿಕೊಂಡು ಒದ್ದಾಡುತ್ತಿರುವಾಗ ಸಾಮ್ರಾಟರು ಸರಳವಾದ ಸೂತ್ರವನ್ನು ಹಾಕಿ ಸಮಸ್ಯೆಯನ್ನು ಪರಿಹರಿಸಿದ್ದಾರೆ.
ಅ=ಸಾಹಿತ್ಯಕ್ಕೆ ಹೆಣ್ಣು ಗಂಡೆಂಬ ಬೇಧವಿಲ್ಲ
ಬ= ಪ್ರೀತಿ ಮಾಡ ಬಾರದು ಮಾಡಿದರೆ ಜಗಕೆ ಹೆದರಬಾರದು ಎಂಬುದು ಉತ್ತಮ ಸಾಹಿತ್ಯ
ಕ= ಪ್ರೀತಿಗೆ ಗಂಡು ಹೆಣ್ಣೆಂಬ ಬೇಧವಿಲ್ಲ

ಪ್ರೀತಿಸುವಾಗ ತೊಂದರೆಯಿಲ್ಲ ಆದರೆ ಮದುವೆಯಾದ ನಂತರ ಒಂದೊಂದೇ ತೊಂದರೆ ಶುರುವಾಗುತ್ತೆ. ಮದುವೆಯಾಗುವವರು ಗಂಡು ಹೆಣ್ಣು ಮಾತ್ರ ಎಂಬ ತಪ್ಪು ಅಭಿಪ್ರಾಯದಿಂದಾಗಿ ಗಂಡ, ಹೆಂಡತಿ, ಅಪ್ಪ, ಅಮ್ಮ ಎಂಬಂತಹ ಸಂಬಂಧಗಳು ಗಟ್ಟಿಯಾದವು. ಈಗ ಇಬ್ಬರು ಒಂದೇ ಲಿಂಗಿಗಳು ಮದುವೆಯಾದರೆ…

ಆದರೆ ಅವರು ಹೆದರಬೇಕಿಲ್ಲ. ಜಗತ್ತಿನಲ್ಲಿ ಯಾವುದ್ಯಾವುದಕ್ಕೋ ಕ್ರಾಂತಿಯಾಗಿದೆ. ಹೀಗಿರುವಾಗ ಗಂಡ ಹೆಂಡತಿ ಎಂಬ ಪದಗಳ ವಿಚಾರದಲ್ಲಿ ಕ್ರಾಂತಿ ಮಾಡುವುದಕ್ಕೆ ಯಾಕೆ ಹಿಂಜರಿಕೆ.

ಬ್ಲಾಗ್ ಬೀಟ್ 20

7 ಮೇ

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

……………………………………………………

ಟೂನಂಗಡಿ 001

ಟೂನಂಗಡಿ ತೆರೆದು ಕೂತಿರುವ ಅಮೃತ್.ವಿ ಉದಯವಾಣಿಯಲ್ಲಿ ಪ್ರಕಟವಾದ ತಮ್ಮ ಕಾರ್ಟೂನುಗಳಲ್ಲಿ ಕೆಲವನ್ನು ಬ್ಲಾಗಿಗೆ ಹಾಕಿರುವುದು ಬೀಟ್ ಹೊರಟ ಸಾಮ್ರಾಟರ ಕಣ್ಣಿಗೆ ಬಿತ್ತು. ಹಾಗೆ ಕಣ್ಣಿಗೆ ಬಿದ್ದದ್ದನ್ನು  ಸಾವಕಾಶವಾಗಿ ಹೊರಗೆ ತೆಗೆದು ಅವರು ಇಲ್ಲಿ ಹಾಕಿದ್ದಾರೆ.

ಪಂಚ್ ಲೈನು

ಹುಡುಗಿಯರ ವಿಷಯದಲ್ಲೂ ರಾಜಕಾರಣದಲ್ಲೂ ತಲಾ ಒಂದೊಂದಾಗಿ ಪಿ.ಎಚ್.ಡಿ ಮಾಡುತ್ತಿರುವಂತೆ ಕಾಣುವ ಪಂಚ್ ಲೈನ್ ಗಣೇಶರು ಹುಡುಗಿಯರ ಮನಸ್ಸು ಗೆಲ್ಲೋದು ಚುನಾವಣೆ ಗೆಲ್ಲೋದೂ ಆಲ್ಮೋಸ್ಟ್ ಸೇಮ್ ಅಂತಾರೆ. ಹೇಗೆ ಅಂದ್ರಾ? ಇಲ್ ನೋಡಿ…

ಪುಗಸಟ್ಟೆ

ರಾಜಕೀಯದಲ್ಲಿನ ಎಡದ ಬಲ ಹಾಗೂ ಬಲದ ಎಡದ ಸುಳಿಯಲ್ಲಿ ಪುಗಸಟ್ಟೆ ಉಪದೇಶ ಕೊಡುವ ಬ್ಲಾಗಿಗರು ಒಂದು ಗಂಭೀರ ಪ್ರಶ್ನೆ ಕೇಳಿದ್ದಾರೆ. ‘ಈ ಘಟನೆ’ ಭಾರತದಲ್ಲಿ ನಡೆಯುವುದು ಯಾವಾಗ ಎಂಬುದು ಅವರ ಪ್ರಶ್ನೆ. ಇದಕ್ಕೆ ಉತ್ತರಿಸಬೇಕಾದಾವರು, ಮಾತನಾಡದೆ ಮಾಡಿ ತೋರಿಸುವವರನ್ನು ಹುಡುಕಿ ನಮ್ಮ ಚೇಲ ದೇಶಾಂತರ ಹೊರಟಿದ್ದಾನೆ.

ಬೊಗಳೆ

ಅಶಿಕ್ಷಿತರು, ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದವರೇ ತುಂಬಿ ಹೋಗಿರುವ ರಾಜಕೀಯ ರಂಗಕ್ಕೆ ಸುಶಿಕ್ಷಿತರು ಧುಮುಕುತ್ತಿರುವ ವಿದ್ಯಮಾನದ ಸಮಗ್ರ ವರದಿಯನ್ನು ಬೊಗಳೆ ಬ್ಯೂರೋ ಪ್ರಕಟಿಸಿದೆ. ಮಾನವಿಲ್ಲದ ದಂಡ ಪಿಂಡಗಳಾದ ರಾಜಕಾರಣಿಗಳಿಗೆ ಮಾನದಂಡವನ್ನು ವಿಧಿಸುವ ಮಹೋನ್ನತ ಕಾರ್ಯಕ್ಕೆ ಕೈ ಹಾಕಿದೆ. ಅವರ ಸಾಹಸಕ್ಕೆ ಸಂತಾಪ ಸೂಚಿಸುತ್ತಾ ನಾವು ಅಲ್ಲಿಂದ ಪರಾರಿಯಾಗಿದ್ದೇವೆ.

ಮೋಟುಗೋಡೆ

ಇರುವ ಮೋಟು ಗೋಡೆಯನ್ನು ಎಗರಿ ಎಗರಿ ಜಿರಾಫೆಯಂತೆ ಎತ್ತರವಾಗಿರುವ ಮೋಟುಗೋಡೆ ಬಳಗ ಕಂಪ್ಯೂಟರ್ ಕರ್ಮಕಾಂಡವನ್ನು ವರದಿ ಮಾಡಿದೆ. ರಿಸೆಷನ್ ಸಮಯದಲ್ಲಿ ಎಲ್ಲರನ್ನೂ ಕಾಡುತ್ತಿರುವ ಕಂಪ್ಯೂಟರ್ ಕರ್ಮ ಕಾಂಡವಲ್ಲ ಇದು. ಇದು ಮೋಟುಗೋಡೆಯ ಸ್ಪೆಷಲ್ ‘ಡಿಕ್’ಆಕ್ಷನ್!

ಮಜಾವಾಣಿ

ಮಜಾವಾಣಿ ಪತ್ರಿಕೆ ಈಗ ಮೈತುಂಬಿಕೊಂಡು ನಿಂತಿದೆ. ಅಗ್ರ ರಾಷ್ಟ್ರೀಯ ವಾರ್ತೆಯಿಂದ ಹಿಡಿದು ವಿಶೇಷ ಸಂದರ್ಶನದವರೆಗೆ ಎಲ್ಲಾ ವಿಭಾಗಗಳಲ್ಲೂ ನೈಪುಣ್ಯತೆ ಮೆರೆದಿದೆ.

ಈ ಸಂಚಿಕೆಯಲ್ಲಿ ಹಿನ್ನೆಲೆ ಕೆಮ್ಮು ಕಲಾವಿದ ದಮ್ಮುಲ ಕೃಷ್ಣಪ್ಪನವರ ಅಪರೂಪದ ಸಂದರ್ಶವನ್ನು ಪ್ರಕಟಿಸಲಾಗಿದೆ. ಕೆಮ್ಮಾಭಿಮಾನಿಗಳು ಹಾಗೂ ದಮ್ಮಾಭಿಮಾನಿಗಳು ಅವಶ್ಯಕವಾಗಿ ಓದಲೇಬೇಕಾದ ಸಂದರ್ಶನವಿದು.

ಬ್ಲಾಗ್ ಬೀಟ್ 19

11 ಮಾರ್ಚ್

 

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

……………………………………………………

ವಾರೆ ಕೋರೆ

ವಾರೆ ಕೋರೆ ಭರ್ಜರಿಯಾಗಿ ಓಪನಿಂಗ್ ಪಡೆದಿದೆ. ಮೊದಲ ಸಂಚಿಕೆಗೆ ಇಪ್ಪತ್ತು ಸಾವಿರ ಓದುಗರನ್ನೂ, ಸರಾಸರಿಯಾಗಿ ನವತ್ತು ಸಾವಿರ ಕಣ್ಣುಗಳನ್ನು ಹೊಂದಿದೆ. ಈ ವಿಕ್ರಮವನ್ನು ಸಾಧಿಸಿದ ಪ್ರಕಾಶ್ ಶೆಟ್ಟಿಯವರು ಅದೇ ಹುಮ್ಮಸ್ಸಿನಿಂದ ಜೊತೆಗೊಂದಿಷ್ಟು ಪೋಲಿ ಬುದ್ಧಿಯಿಂದ ಎರಡನೆಯ ಸಂಚಿಕೆಯನ್ನು ರೂಪಿಸಿದ್ದಾರೆ.

ಮೊದಲ ಸಂಚಿಕೆಯ ಮುಖಪುಟದಲ್ಲಿ ತಲೆ ತುಂಬ ಹೊಳೆಯುವ ಕೂದಲು ಹೊಂದಿದ ದೇವೆಗೌಡರ ಚಿತ್ರವನ್ನು ಛಾಪಿಸಿ ನಾಡಿನಾದ್ಯಂತ ನಗೆ ಬಾಂಬ್ ಸಿಡಿಸಿದ್ದ ವಾರೆ ಕೋರೆ, ಈ ಸಂಚಿಕೆಯಲ್ಲಿ ಮಲ್ಲಿಕಾ ಶೆರಾವತ್‌ಳನ್ನು ತೋರಿಸಿ ಹಾರ್ಟ್ ಅಟ್ಯಾಕ್ ಉಂಟು ಮಾಡಿದೆ. ‘ಲೂಸ್ ಹುಡುಗಿಯರೊಂದಿಗಿನ ರಸ ನಿಮಿಷಗಳ’ ವರದಿಯನ್ನು ಹೊತ್ತು ಬಂದಿದೆ ಎರಡನೆಯ ಸಂಚಿಕೆ.

 

ಬೊಗಳೆ ರಗಳೆ

ಬೊಗಳೂರ ಬ್ಯೂರೋ ತುಂಬ ಬ್ರೇಕಿಂಗ್ ಸುದ್ದಿಯದೇ ಸದ್ದು, ಬ್ರೇಕಿಂಗ್ ಸದ್ದಿನದೇ ಸುದ್ದಿ. ಬೊಗಳೆ ಮಾತಿಗೆ ಬ್ರೇಕಿಲ್ಲದ ಬ್ಯೂರೋದಲ್ಲಿ ಮಜಾಕೀಯ ಅರಾಜಕಾರಣಿಗಳ ಪಕ್ಷಾಂತರ, ಮತಾಂತರ, ಅವಾಂತರಗಳ ಕುರಿತ ಬ್ರೇಕಿಂಗ್ ನ್ಯೂಸುಗಳು ಪ್ರಕಟವಾಗಿವೆ. “ಬೊಗಳೂರು ಬ್ಯುರೋ ಕೂಡ ಆಗಾಗ್ಗೆ Breaking news ಹಾಗೂ Barking news ನೀಡುತ್ತಿರುವುದೇ ಕಾರಣ ಎಂಬ ಎದುರಾಳಿಗಳ ಸಂಶೋಧನೆಯೊಂದು ಏಕದಸದಸ್ಯ ಬೊಗಳೆ ಬ್ಯುರೋದ ಸಮಸ್ತ ಸಿಬ್ಬಂದಿಗಳು ಗಹಗಹಿಸಿ ಅಳುವುದಕ್ಕೆ ಮತ್ತು ಬಿಕ್ಕಿ ಬಿಕ್ಕಿ ನಗುವುದಕ್ಕೆ ಕಾರಣವಾಗಿದೆ.” ಎನ್ನುವ ಮೂಲಕ ನಮ್ಮ ಸಂಶೋಧನೆಗೆ ಕ್ರೆಡಿಟ್ ನೀಡಿರುವ ಬೊಗಳೆ ಬ್ಯೂರೋವನ್ನು ಕಂಡು ಕುಚೇಲ ಕಿಸಕ್ಕನೆ ಕಣ್ಣೀರು ಸುರಿಸುತ್ತಿದ್ದಾನೆ.

 

ಪುಗಸಟ್ಟೆ

ದೇಶಕ್ಕೆ ದೇಶವೇ ಮುತಾಲಿಕನ ಪ್ರೇಮ ವಿರೋಧಿ ಹೋರಾಟ ಹಾಗೂ ಅದಕ್ಕೆ ವಿರುದ್ಧವಾದ ಪಿಂಕು ಚೆಡ್ಡಿ ಹೋರಾಟದ ಸಾಧಕ, ಬಾಧಕ ನಿಷ್ಕರ್ಷೆಯಲ್ಲಿ ನಿರತವಾಗಿ ಅನ್ನಾಹಾರಗಳನ್ನು ತೊರೆದು, ನೀರು-ಮದಿರೆಗಳನ್ನು ಬಿಟ್ಟು, ಪಬ್ಬು-ಕ್ಲಬ್ಬುಗಳ ಮುಚ್ಚಿ, ಸಿಗರೇಟು-ಗಾಂಜಾಗೆ ಟಾಟಾ ಹೇಳಿ ಕೂತಿರುವಾಗ ಪುಗಸಟ್ಟೆ ವೀರನೊಬ್ಬ “ಚಡ್ಡಿ ಇವ್ರಿಗೆ ಕೊಟ್ಟು ಅವ್ರೇನು ಹಾಕ್ಕೊತ್ತಾರ?’’ ಅಂತ ಕಿತಾಪತಿ ತೆಗೆದಿದ್ದಾನೆ.

 

ಮೋಟುಗೋಡೆಯಾಚೆ ಇಣುಕಿ

ನನ್ನ ಕಣ್ಣುಗಳು ಮೇಲಿವೆ ಎನ್ನುತ್ತಾಳೆ ಈ ಟೀಶರ್ಟು ತೊಟ್ಟ ಬಾಲೆ. ಆದರೆ ಆಕೆಯಂದದ್ದು ಏನು ಎಂದು ಓದುವುದಕ್ಕಾದರೂ ನಮ್ಮ ಬಾಲಕರು ಕಣ್ಣು ಕೆಳಗೆ ಹರಿಸುತ್ತಾರೆ! ಈ ಕಣ್ಣು ಕಣ್ಣಾಟದ ಹೋಳಿ ಕಂಡಿದ್ದು ಮೋಟುಗೋಡೆಯಾಚೆ ಇಣುಕಿ ನೋಡಿದಾಗ.

ಬ್ಲಾಗ್ ಬೀಟ್ 17

2 ಫೆಬ್ರ

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

……………………………………………………

 

ವಾರೆ ಕೋರೆ ಬಿಡುಗಡೆ

ಜಗತ್ತಿನಾದ್ಯಂತ ಭಾರಿ ಕುತೂಹಲ ಉಂಟು ಮಾಡಿದ್ದ ಕನ್ನಡ ಹಾಸ್ಯ ಪತ್ರಿಕೆ ವಾರೆ ಕೋರೆ ಬಿಡುಗಡೆಯಾಯಿತು. ಕನ್ನಡ ನಾಡಿನಲ್ಲಿ ತುಂಟರಗಾಳಿಯನ್ನು ಎಬ್ಬಿಸಲು ಸಂಕಲ್ಪ ತೊಟ್ಟಿರುವ ಪ್ರಕಾಶ್ ಶೆಟ್ಟಿಯವರಿಗೆ ಅಭಿನಂದನೆಗಳು.

 

ಪತ್ರಿಕೆ ಬಿಡುಗಡೆಯ ಫೊಟೊ… ನಿದ್ರೇವೇಗೌಡರ ಅ‘ಮೃತ’ ಹಸ್ತದಿಂದ ಪತ್ರಿಕೆ ಬಿಡುಗಡೆ

KPN photo

ಬಿಡುಗಡೆ ಕಾರ್ಯಕ್ರಮದ ವರದಿ…

press

 

ಬೊಗಳೆ ರಗಳೆ

ವಸ್ತುನಿಷ್ಠ ಹಾಗೂ ವ್ಯಕ್ತಿ ಕಷ್ಟ ವರದಿಗಾರಿಕೆಯಲ್ಲಿ ಎತ್ತಿದ ಕೈ ಎಂಬ ಕುಖ್ಯಾತಿಯನ್ನು ಸಂಪಾದಿಸಿ ಸುಸ್ತಾಗಿರುವ ಬೊಗಳೆ ರಗಳೆ ಬ್ಯೂರೋ ಬೇರೆಲ್ಲಾ ಪತ್ರಿಕೆಗಳು ವರದಿ ಮಾಡದ ಸುದ್ದಿಗಳನ್ನು ವರದಿ ಮಾಡುವ ಕಾಯಕವನ್ನು ಮುಂದುವರೆಸಿದೆ.

ಕರುನಾಟಕದ ಅಮುಖ್ಯಮಂತ್ರಿಯವರು ಬೆಳಗಿನ ಉಪಹಾರಕ್ಕೆ ಇಡ್ಲಿ ವಡೆಯನ್ನು ತಿನ್ನುತ್ತಾರೆ ಎಂಬ ಸುದ್ದಿಯನ್ನು ಬೆನ್ನತ್ತಿ ವಿಸ್ತೃತವಾದ ವರದಿಯನ್ನು ಮಾಡಿದ್ದಾರೆ.

“ರಾಜ್ಯದ ಅಮುಖ್ಯಮಂತ್ರಿಗಳು ಬೆಳಗ್ಗಿನ ಉಪಾಹಾರಕ್ಕೆ ಇಡ್ಲಿ ವಡೆ ತಿನ್ನುತ್ತಾರೆ ಎಂದು ವರದ್ದಿಯಾಗಿರುವುದು ತನಿಖೆಗೆ ಅರ್ಹ ಎಂದು ಬೊಗಳೂರು ಓದುಗರೆಲ್ಲರೂ ಪ್ರತಿಭಟನೆ ಮಾಡಿರುವುದರಿಂದ ಒತ್ತಡಕ್ಕೆ ಮಣಿದ ನಮ್ಮ ಅನ್ವೇಷಣಾ ಬ್ಯುರೋ, ರದ್ದಿಗಾರರನ್ನು ಅಟ್ಟಾಡಿಸಿ ಕಳುಹಿಸಿತು.”

ಸುದ್ದಿಗೆ ಸಂಬಂಧ ಪಟ್ಟವರು ಪಡವರು ಹೀಗೆ ಯಾರ್ಯಾರನ್ನೆಲ್ಲಾ ಹಿಡಿದು ಸುದ್ದಿಯನ್ನು ಪಡೆಯಬೇಕು ಎಂಬುದಕ್ಕೆ ಯುವ ಉತ್ಸಾಹಿ ಪತ್ರಿಕೋದ್ಯಮದ ವಿದ್ಯಾರ್ಥಿನಿಯರಿಗೆ ಈ ವರದಿ ದಾರಿ ದೀಪವಾಗಲಿದೆ.

 

ಪಂಚ್ ಲೈನ್

ಓದುಗರನ್ನು ಗಾಬರಿ ಪಡಿಸುವುದಕ್ಕಾಗಿಯೋ ಇಲ್ಲವೇ ಓಡಿಸುವುದಕ್ಕಾಗಿಯೋ ಹೊಸ ಹೊಸ ಅವತಾರಗಳನ್ನೆತ್ತುವೆ ಎಂದು ವೀರ ಪ್ರತಿಜ್ಞೆ ಮಾಡಿರುವ ಪಂಚ್ ಲೈನ್ ಧೀರ ಗಣೇಶರು ಪರೀಕ್ಷೆಯ ನಂತರ ಪಂಚ್ ಲೈನಿಗೆ ಮರಳುವುದಾಗಿ ಮಾತು ಕೊಟ್ಟಿದ್ದರು. ಆದರೆ ವೇದಿಕೆಯ ಮೇಲೆ ನಾಟಕದ ಡೈಲಾಗಿನ ಪಂಚನ್ನೂ, ಲೈನನ್ನೂ ಮರೆತಂತೆ ಬ್ಲಾಗನ್ನು ಮರೆತಿರುವ ಹಾಗಿದೆ. ಅವರಿಗೆ ಈ ಮೂಲಕ ಸಾಮ್ರಾಟರುನ ನೆನಪಿಸುವುದೆಂದರೆ, ಮಾತು ಉಳಿಸಿಕೊಳ್ಳದಿದ್ದ ಆ ಶ್ರೀಕೃಷ್ಣನನ್ನೇ ಜನರು ಮರೆತು ‘ದೇವರಿದ್ದಾನಾ?’ ಎಂದು ಪ್ರಶ್ನಿಸುತ್ತಿದ್ದಾರೆ, ಇನ್ನು ಅವರಂತಹ ಹುಲುಮಾನವರ ಗತಿ ಏನು? ಆದಷ್ಟು ಬೇಗ ಗಣೇಶ್ ಪಂಚಿನ ಮೇಲೆ ಪಂಚುಗಳನ್ನು ರವಾನಿಸಲಿ ಎಂಬುದು ನಮ್ಮ ಅಶಯ.

 

ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವೂ, ಎಲ್ಲಿಲ್ಲವೋ ಸತ್ಯದ ಸುಳಿವು ಅಲ್ಲಿ ನಾವಿರುತ್ತೇವೆ ಎಂದು ಅಭಯ ನೀಡಿರುವ ಮಜಾವಾಣಿಯ ಸಂಪಾದ ಮಹಾಶಯರು ವಾಣಿಯನ್ನು ಮರೆತು ‘ಮಜಾ’ ಮಾಡುತ್ತಿರುವಂತಿದೆ ಎಂದು ಸಾಮ್ರಾಟರು ಗಡ್ಡ ಬೋಳಿಸುವ ಸಂಸ್ಥೆಯ ನೌಕರರು ಆಡಿಕೊಳ್ಳುತ್ತಿದ್ದಾರೆ.

ಬ್ಲಾಗ್ ಸ್ಪಾಟಿನಿಂದ ಫೇರಿಕಿತ್ತ ಮೇಲೆ ಮಜಾವಾಣಿ ಸೊರಗಿದೆಯೇ ಎಂಬ ಬಗ್ಗೆ ಲೋಕಾಯುಕ್ತ ತನಿಖೆಯನ್ನೂ, ಮಜಾವಾಣಿಯ ಸಂಪಾದಕರು ಪತ್ರಿಕಾ ಧರ್ಮ ಮೆರೆಯುವುದಕ್ಕೆ ಮಂಗಳೂರಿನ ಕಡೆಯ ಅಮ್ನೇಶಿಯಾ ಪ್ರವೇಶಿಸಿ ದಿವಂಗತರಾದರೋ ಎಂಬುದನ್ನು ಪತ್ತೆಹಚ್ಚಲು ನಮ್ಮ ಚೇಲ ಕುಚೇಲನ ತನಿಖೆಯನ್ನು ನಾವು ಆದೇಶಿಸಿದ್ದೇವೆ.

ಬ್ಲಾಗ್ ಬೀಟ್ 16

18 ಜನ

ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ವಾರ ವಾರವೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.

……………………………………

ವಾರೆ ಕೋರೆ

ಫೆಬ್ರವರಿಯಿಂದ ಪ್ರಕಾಶ್ ಶೆಟ್ಟಿಯವರು ತಮ್ಮ ಪಂಚನ್ನೆಲ್ಲಾ ಸೇರಿಸಿ ವಾರೆ ಕೋರೆಯ ಹೆಸರಿನಲ್ಲಿ ನಾಡಿನ ಜನತೆಗೆ ದಯಪಾಲಿಸುವ ಭರವಸೆಯಿತ್ತಿದ್ದಾರೆ. ಸಕಲ ಹಾಸ್ಯಾಭಿಮಾನಿಗಳು ಹಾಗೂ ನಗಲೇ ಬಾರದು ಎಂದು ಹೊಸ ವರ್ಷದ ರೆಸೊಲ್ಯೂಶನ್ ಮಾಡಿಕೊಂದಿರುವವರು ವಾರೆ ಕೋರೆಯನ್ನು ಎದುರು ನೋಡುತ್ತಿರುವುದು ತಿಳಿಯದ ಸಂಗತಿಯೇನಲ್ಲ.

ಹೊಸ ವರ್ಷದ ಶುಭಾಶಯಗಳನ್ನು ನಮ್ಮಷ್ಟು ಪ್ಲೇನ್ ಆಗಿ ಹೇಳುವುದಕ್ಕೆ ಪ್ರಕಾಶ್ ಶೆಟ್ಟಿಯವರೇನು, ನೇರವಾಗಿರುವರೇ? ಅವರು ‘ವಾರೆ ಕೋರೆ’ಯೇ! ಅವರ ಸ್ಟೈಲಿನಲ್ಲಿ ಹೊಸ ವರ್ಷದ ಶುಭಾಶಯಗಳು ಹೇಗಿವೆ ನೋಡಿ…

greetings

 

ಆದರೆ ಅವರು ಕೇವಲ ಗಂಡಸರಿಂದ ಶುಭಾಶಯಗಳನ್ನು ಹೇಳಿಸಿರುವುದು ಮಹಿಳಾಭಿಮಾನಿ ಹಾಗೂ ಉಗ್ರ ಮಹಿಳಾವಾದಿಯಾದ ಸಾಮ್ರಾಟರಿಗೆ ಕಿರಿಕಿರಿಯನ್ನುಂಟು ಮಾಡಿದೆ 🙂

 

……………………………

ಬೊಗಳೆ ರಗಳೆ

ಭಯೋತ್ಪಾದನೆಯ ಬಗ್ಗೆ ನಮ್ಮ ಪ್ರತಿಸ್ಪರ್ಧೆಗಳು ಬಹಳ ಆಲೋಚನೆ ಮಾಡುತ್ತಿದ್ದಾರೆ. ತಾವು ಯಾವ ರೀತಿಯಲ್ಲಿ ಕಾಣದ ಭಯೋತ್ಪಾದಕರನ್ನು ಮಟ್ಟ ಹಾಕಬೇಕು ಎಂಬ ಬಗ್ಗೆ ಆಲೋಚಿಸುತ್ತಿದ್ದಾರೆ. ಕೆಲವರು ಬಹು ಚಿಂತನಾಶೀಲರಾಗಿ, ಕ್ರಿಯಾಶೀಲರಾಗಿ ಯೋಚಿಸಿ ಹಲವು ಪುಟ್ಟ ಮಹಾನ್ ಹೆಜ್ಜೆಗಳನ್ನು ಇಟ್ಟಿದ್ದಾರೆ. ಬೊಗಳೆಯ ಅಸತ್ಯ ಅನ್ವೇಷಿಯವರು ಕಪ್ಪು ಗುಂಡನ್ನು ಬ್ಲಾಗಿಗೆ ಮೆತ್ತಿಸಿ ‘ಮಾನವತೆಯ ವಿರೋಧಿಗಳಿಗೆ ಧಿಕ್ಕಾರ’ ಕೂಗಿದ್ದಾರೆ.

 

ಅವರಷ್ಟು ಆಲೋಚನೆ ಮಾಡಬೇಕು ಎಂಬ ಮಹತ್ವಾಕಾಂಕ್ಷೆ ಇದ್ದರೂ ಆಲೋಚನೆ ಮಾಡಲು ಬೇಕಾದ ಕನಿಷ್ಠ ಆವಶ್ಯಕತೆ(ಮೆದುಳು)ಯ ಕೊರತೆಯಿಂದ ನಾವು ಬಳಲುತ್ತಿದ್ದೇವೆ. ಆದರೆ ನಮ್ಮದೊಂದು ಸಂಶಯವಿದೆ. ಬ್ಲಾಗು ಓದಲು ಬರುವ ಪ್ರಿಯ ಓದುಗ ದೊರೆಗಳನ್ನು ಇಂತಹ ಕಪ್ಪು ಗುಂಡು, ಕಪ್ಪು ಧ್ವಜ, ಕಪ್ಪು ಹೆಡ್ಡರು, ಕಪ್ಪು ಫಾಂಟು ತೋರಿಸಿ ಬೆದರಿಸುವುದು ಸರಿಯೇ? ಒಂದು ವೇಳೆ ಭಯೋಟ್ಪಾದಕರು ನಮ್ಮ ಬ್ಲಾಗ್ ಓದುತ್ತಾರೆ ಎಂಬುದು ನಿಶ್ಚಯವಾದರೆ ಅವರನ್ನು ಮಟ್ಟ ಹಾಕಲು ಇಂಥದ್ದು ಮಾಡಬಹುದು. ಆದರೆ ಅಮಾಯಕ ಓದುಗರನ್ನು ಹೀಗೆ ಬೆದರಿಸುವುದು ತರವೇ ಎಂಬುದು ನಗೆ ಸಾಮ್ರಾಟರ ಜಿಗ್-ನಾಸೆ!

 

ಈ ಮಧ್ಯೆ ನಗೆ ನಗಾರಿಯ ಕಣ್ಣು, ಕಿವಿ, ಬಾಯಿ, ಚರ್ಮಗಳಿಂದ ತಪ್ಪಿಸಿಕೊಂಡಿದ್ದ ‘ಸತ್ಯಂ’ ಗಾಥೆಯನ್ನು ಸಮರ್ಥವಾಗಿ ವರದಿ ಮಾಡಿ ಬೊಗಳೆ ತಾನು ಅವರಿಂದ ಲಂಚ ರಿಷುವತ್ತು ಪಡೆದಿಲ್ಲ ಎಂದು ಸಾಬೀತು ಪಡಿಸಿದೆ. ಆದರೆ ನಾವು ಹಾಗೆ ಸಾಬೀತು ಪಡಿಸಲಾಗದು!

 

……………………………

 

ಪಂಚ್ ಲೈನ್

 

ಬೊಗಳೆಯ ಹಾಗೆಯೇ ಪಂಚ್ ಲೈನ್ ಗಣೇಶರೂ ಸಹ ಭಯೋತ್ಪಾದನೆಯ ಬಗ್ಗೆ ತಲೆ ಕೆಡಿಸಿಕೊಂಡಿರುವುದು ಮೇಲ್ನೋಟಕ್ಕೆ ತಿಳಿಯುತ್ತದೆ. ತಮ್ಮ ಬ್ಲಾಗಿನ ತಲೆ ಬರಹದ ಕೆಳಗೆ ‘ಮಷ್ಕಿರಿ-ಐ-ತೊಯ್ಬ’ ಎಂದು ಬರೆದಿರುವುದನ್ನು ಕಂಡು ನಾವು ಇವರೂ ಭಯೋತ್ಪಾದನೆಯ ಬೆದರಿಕೆಗೆ ನಿಂತುಬಿಟ್ಟಿದ್ದಾರೆ ಎಂದುಕೊಂಡಿದ್ದೆವು. ಆದರೆ ಮೇಲ್ನೋಟವನ್ನು ಕೊಂಚ ಕೆಳಕ್ಕೆ ಹರಿಸಿದಾಗ, ಅದು ‘ಮಷ್ಕಿರಿ ಐತಿ ಒಯ್ಯಿ ಬಾ…!’ ಎಂದಿರುವುದು ಕಂಡು ದಿಗ್ಭ್ರಮೆಯಾಯಿತು!

ಸದ್ದಿಲ್ಲದೆ ಸದ್ದು ಮಾಡಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ಪಂಚ್ ಲೈನ್‌ಗೆ ಶುಭಾಶಯಗಳನ್ನು ತಡವಾಗಿ ತಲುಪಿಸುವ ಆಸಕ್ತಿ ಇದ್ದವರು ಇಲ್ಲಿ ಹೋಗಬಹುದು. ಆದರೆ ನಮಗೆ ಮಾತ್ರ ಸರಿಯಾದ ಸಮಯಕ್ಕೆ ಶುಭಾಶಯ ಕೋರುವುದನ್ನು ಮರೆಯಬೇಡಿ! ಹುಶಾರ್!

 

……………………………

 

ಕೆಂಡ ಸಂಪಿಗೆಯ ಸುದ್ದಿ ಕ್ಯಾತ

 

ನಮ್ಮೆಲ್ಲರ ಆತ್ಮೀಯ ವರದಿಗಾರನಾದ ಕೆಂಡಸಂಪಿಗೆಯ ಸುದ್ದಿ ಕ್ಯಾತನಿಗೆ ಕೆಂಡಸಂಪಿಗೆಯಿಂದ ಗೇಟ್ ಪಾಸ್ ನೀಡಲಾಗಿದೆ ಎಂಬ ವದಂತಿ ಸಂಪಿಗೆಯ ಘಮದ ಹಾಗೆಯೇ ಹರಡುತ್ತಿದೆ. ಇತ್ತೀಚೆಗೆ ಕೆಂಡ ಸಂಪಿಗೆಯಲ್ಲಿ ಸುದ್ದಿಕ್ಯಾತನ ಡೇಲಿ ಬೀಟ್ ಕಾಣದಿರುವುದೇ ಇದಕ್ಕೆ ಕಾರಣ. ಒಂದು ವೇಳೆ ಈ ವದಂತಿ ನಿಜವಾದರೆ ನಾವು ನಮ್ಮ ಅಭಿಮಾನಿಗಳ ಬಳಗವನ್ನು ಕಟ್ಟಿಕೊಂಡು ಕೆಂಡ ಸಂಪಿಗೆಯ ಅಂತರ್ಜಾಲ ಆಫೀಸಿನೆದುರು ಧರಣಿ ಕುಳಿತುಕೊಳ್ಳುತ್ತೇವೆ ಎಂದು ಈ ಮೂಲಕ ಎಚ್ಚರಿಕೆ ನೀಡಲು ಬಯಸುತ್ತೇವೆ.

ಬ್ಲಾಗ್ ಬೀಟ್ 18

22 ಡಿಸೆ

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

……………………………………………………..

 

ಮಜಾವಾಣಿ

ತಮ್ಮದೇ ಸ್ವಂತ ನೆಲೆಯನ್ನು ಕಂಡುಕೊಂಡಿರುವ ಮಜಾವಾಣಿ ತಮ್ಮ ಮೂರುವರೆ ಓದುಗರನ್ನು ಬಹುಕಾಲ ಕಡೆಗಣಿಸಿ ಅವರಿಗೆ ಯಾವ ಸುದ್ದಿಯನ್ನೂ ಕೊಡದೆ ಅನ್ಯಾಯ ಮಾಡುತ್ತಿತ್ತು.
ಈ ಬಗ್ಗೆ ಗಂಭೀರವಾಗಿ ಆಲೋಚಿಸಿ ಮಜಾವಾಣಿ ಒಳ್ಳೆಯ ಸುದ್ದಿಯನ್ನು  ಹೊತ್ತು ಬಂದಿದೆ. ಚಂದ್ರಯಾನದ ಅಪೂರ್ವ ಯಶಸ್ಸಿನಿಂದ ಹಿಗ್ಗಿರುವ ಇಸ್ರೋದ ವಿಜ್ಞಾನಿಗಳು ಹೊಸತೊಂದು ಸವಾಲಿಗೆ ಸಿದ್ಧರಾಗುತ್ತಿದ್ದಾರೆ ಎಂದು ವರದಿ ಮಾಡಿದೆ.

ಬೊಗಳೆ ರಗಳೆ

ಪಾಕಿಸ್ತಾನದ ಜಬರ್ದಾರಿ ಅಧಕ್ಷರ ಯು ಟರ್ನುಗಳನ್ನು ಕಂಡು ಕಂಗೆಟ್ಟು, ಕುಲಗೆಟ್ಟು ಹೋಗಿರುವ ಬೊಗಳೆ ರಗಳೆಯ ರದ್ದಿಗಾರ ಕರ್ನಾಟಕದ ಘಾಟು ರಸ್ತೆಗಳು ನೇರವಾಗಿರುವ ಸುದ್ದಿಯನ್ನು ಅರುಹಿದ್ದಾನೆ.
“ಪಾತಕಿಸ್ತಾನದಲ್ಲಿ ಕಾನೂನು ಎಂಬುದು ಇದೆಯೇ ಎಂಬ ಪ್ರಶ್ನೆಗೆ ಬೊಗಳೆ ರಗಳೆ ಬ್ಯುರೋದ ಅಸತ್ಯಾನ್ವೇಷಣೆ ಪ್ರವೀಣರಿಗೂ ಉತ್ತರ ಕಂಡುಕೊಳ್ಳಲಾಗಿಲ್ಲ. ”  ಎಂದು ಅಸತ್ಯಾನ್ವೇಷಿಗಳು ಕೈಚೆಲ್ಲಿ ಕೂತಿರುವುದರಿಂದ ಸಾಮ್ರಾಟರು ತನಿಖೆಗಾಗಿ ತಮ್ಮ ಅತ್ಯಾಪ್ತ ಚೇಲ ಕುಚೇಲನನ್ನು ಪಾಕಿಸ್ತಾನಕ್ಕೆ ಅಟ್ಟಲು ಒಂದು ನಕಲಿ ಪಾಸ್ ಪೋರ್ಟಿಗಾಗಿ ಪ್ರಯತ್ನಿಸುತ್ತಿದ್ದಾರೆ!

ವಾರೆ ಕೋರೆ

ಶುದ್ಧ ತರ್ಲೆ ಮಾಸಪತ್ರಿಕೆಯೊಂದನ್ನು ತೆರೆದಿರುವ ಪ್ರಕಾಶ್ ಶೆಟ್ಟಿ ‘ವಾರೆ ಕೋರೆ’ ಪತ್ರಿಕೆಯ ಹೆಸರಿನಲ್ಲೇ ಒಂದು ಬ್ಲಾಗನ್ನು ತೆರೆದಿದ್ದಾರೆ. ಈ ಬ್ಲಾಗಿನಲ್ಲಿ ‘ವಾರೆ ಕೋರೆ’ಯ ಪ್ರಾಯೋಗಿಕ ಸಂಚಿಕೆಯ ಪುಟಗಳನ್ನು ಏರಿಸಲಾಗಿದೆ.

ಪಂಚ್ ಲೈನ್

ಬ್ಲಾಗಿಂಗಿಗೆ ಅನಿವಾರ್ಯವಾಗಿ ಬಂಕ್ ಮಾಡಿದ್ದ ಗಣೇಶ್.ಕೆ ವಾಪಸ್ಸಾಗಿದ್ದಾರೆ. ಇತ್ತೀಚೆಗೆ ತಮ್ಮ ಪಂಚನ್ನೂ ಲೈನನ್ನೂ ಹುಡುಗ ಹುಡುಗಿಯರ ಬಗ್ಗೆ ಸೀಮಿತಗೊಳಿಸಿರುವ ಅವರಿಗೆ ತಮ್ಮ ಪಂಚುಗಳು ಕೇವಲ ಹುಡುಗರಿಗಾಗಿ ಅಲ್ಲ ಎಲ್ಲರಿಗೂ ಎಂದು ಘೋಷಿಸಿದ್ದಾರೆ.
“ಹುಡುಗ – ಹುಡುಗಿಯರ ನಡುವಿನ chemistry ಯ strategy ಬಗ್ಗೆ ತಲೆಕೆಡಿಸುವ ಪಂಚ್ ಲೈನ್ ಗಳೂ ಇವೆ. ತಲೆಕೆಡಿಸಿಕೊಳ್ಳುವ ಹುಡುಗಿಯರಿದ್ದಾರಾ..? ” ಎಂದು ಕೇಳುವ ಗಣೇಶರ ಸಂಕಟವನ್ನು ತಾಳಲಾರದೆ ಖುದ್ದು ಸಾಮ್ರಾಟರೇ ತನಿಖೆ ಮಾಡಿ ಹುಡುಗ ಹುಡುಗಿಯರು ತಮ್ಮ ನಡುವಿನ ಬಯಾಲಜಿ, ಫಿಸಿಕ್ಸು, ಮೆಕಾನಿಕ್ಸಿನ ಬಗ್ಗೆ ತಿಳಿಯುವಲ್ಲಿ ಬ್ಯುಸಿಯಾಗಿ ಕೆಮಿಸ್ಟ್ರಿ ಓದಲು ಸಮಯವಿಲ್ಲದಾಗಿದೆ ಎಂದು ತಿಳಿದು ಬಂದಿದೆ!

ಬ್ಲಾಗ್ ಬೀಟ್ 17

18 ನವೆಂ

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

……………………………………………………..

ಬೊಗಳೆ ರಗಳೆ

ಕೈ ಪಕ್ಷದಲ್ಲಿ ಟಿಕೇಟುಗಳು ಬಿಕರಿಯಾಗುತ್ತಿವೆ ಎಂಬ ಸತ್ಯವನ್ನು ಜಗಜ್ಜಾಹೀರು ಮಾಡಿ ಪಕ್ಷದಿಂದ ಗೇಟ್ ಪಾಸ್ ಪಡೆದರು ಮಾರ್ಗರೇಟ್ ಆಳ್ವಾ. ಟಿಕೆಟುಗಳು ಎಲ್ಲೆಲ್ಲಿ ಯಾವ ಬೆಲೆಗೆ ಮಾರಾಟವಾಗುತ್ತಿವೆ ಎಂಬುದನ್ನು ಪತ್ತೆ ಹಚ್ಚುವುದಕ್ಕಾಗಿ ಕಾಂಗೈ ಪಾರ್ಟಿಯವರು ಬೊಗಳೆ ರಗಳೆಯ ಅಸತ್ಯ ಅನ್ವೇಷಿಯವರನ್ನು ತನಿಖೆ ಮಾಡಲು ಕೋರಿಕೊಂಡರಂತೆ. ಅವರ ವರದಿ ಇಲ್ಲಿದೆ. ನಮ್ಮ ಜಗದ್ವಿಖ್ಯಾತ ಡಿಟೆಕ್ಟಿವ್ ಕುಚೇಲನ ಕಣ್ತಪ್ಪಿಸಿ ಈ ಕೇಸು ಅಸತ್ಯ ಅನ್ವೇಷಿಯವರ ಪಾಲಾದದ್ದು ಹೇಗೆ ಎನ್ನುವುದನ್ನು ಪತ್ತೆ ಹಚ್ಚುವುದಕ್ಕೆ ಸಾಮ್ರಾಟರು ಒಂದು ತನಿಖಾ ಮಂಡಳಿ ರಚಿಸುವಲ್ಲಿ ಬ್ಯುಸಿಯಾಗಿದ್ದಾರೆ.

ಪಂಚ್ ಲೈನ್

ಚಿತ್ರ ವಿಚಿತ್ರ ಪಂಚುಗಳನ್ನು ಓದುಗರೆಡೆಗೆ ರವಾನಿಸುವಲ್ಲಿ ಜಗತ್ವಿಖ್ಯಾತರಾಗಿರುವ ಗಣೇಶರು ಇತ್ತೀಚೆಗೆ ಹುಡುಗ ಹುಡುಗಿಯರ ನಡುವಿನ ಕೆಮಿಸ್ಟ್ರಿ, ಬಯಲಾಜಿ, ಫಿಸಿಕ್ಸು, ಲಾಜಿಕ್ಕು, ಮ್ಯಾಥಮ್ಯಾಟಿಕ್ಸುಗಳಲ್ಲಿ ಆಸಕ್ತಿ ತಳೆದಿರುವಂತಿದೆ.
ಇತ್ತೀಚಿನ ಅವರ ಪಂಚುಗಳೇ ಅದಕ್ಕೆ ಸಾಕ್ಷಿ:
ಹುಡುಗಿಯರೆಂದರೆ ಯಾರು?
ಗೊತ್ತಾಗದ ಪ್ರಶ್ನೆ… ಹುಡುಗರು ಹುಡುಗೀರು ಏನು ಮಾಡ್ತಾರೆ?

ಪ್ರಕಾಶ್ ಶೆಟ್ಟಿ ಪಂಚ್

ಪ್ರಕಾಶ್ ಶೆಟ್ಟಿಯವರು ಓರೆ ಕೋರೆಯ ತಯಾರಿಯಲ್ಲಿ ಫುಲ್ ಬ್ಯುಸಿಯಾಗಿರುವಂತಿದೆ. ಅವರ ಬ್ಲಾಗು ಅವರ ಗೆರೆಗಳ ಪಂಚಿಲ್ಲದೆ ಪೇಲವವಾಗಿದೆ.
ಶೀಘ್ರದಲ್ಲಿಯೇ ತಮ್ಮ ಬ್ಲಾಗಿನಲ್ಲಿ ತಮ್ಮ ಪತ್ರಿಕೆಯ ಪ್ರಾಯೋಗಿಕ ಪ್ರತಿಯನ್ನು ಪ್ರಕಟಿಸುತ್ತೇವೆ ಎಂದು ಪ್ರಾಮಿಸ್ ಮಾಡಿರುವ ಶೆಟ್ಟಿಯವರು ನಗೆ ಸಾಮ್ರಾಟರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದಾರೆ. ಅಲ್ಲದೆ ಪ್ರಕಾಶ್ ಶೆಟ್ಟಿಯವರು ಗೌಡರನ್ನು ನಗಿಸುವ ಶಪತ ಕೈಗೊಂಡಿರುವುದರಿಂದ ಸಾಮ್ರಾಟರ ಚೇಲ ಕುಚೇಲ ಗೌಡರು ನಗುತ್ತಾರೋ ಇಲ್ಲವೇ ಕಂಪ್ಯೂಟರಿನಲ್ಲಿ ನಗುವಂತೆ ಗ್ರಾಫಿಕ್ಸ್ ಮಾಡಲಾಗುತ್ತದೆಯೋ ಎಂದು ಪತ್ತೇ ಹಚ್ಚಲು ತಯಾರಾಗಿ ನಿಂತಿದ್ದಾನೆ.

ಕೆಂಡಸಂಪಿಗೆಯ ಸುದ್ದಿ ಕ್ಯಾತ

ಸತ್ತ ನಂತರ ನಿಮ್ಮ ಚಿತಾ ಭಸ್ಮವನ್ನು ಚಂದ್ರನಲ್ಲಿಗೆ ತೆಗೆದುಕೊಂಡು ಹೋಗುವ ಯೋಜನೆಯನ್ನು ಕಂಪೆನಿಯೊಂದು ಹಾಕಿಕೊಂಡಿದ್ದು ಸುದ್ದಿ ಕ್ಯಾತರು ಕರ್ನಾಟಕದಲ್ಲಿನ ಕಾಂಟ್ರ್ಯಾಕ್ಟನ್ನು ಗಿಟ್ಟಿಸಿಕೊಂಡಿದ್ದಾರೆ.
ಮುಂದಿನದನ್ನು ಅವರ ಮಾತಲ್ಲೇ ಕೇಳಿ:  “
ಸಾಯುವ ಮೊದಲು ಬುಕ್ಕಿಂಗ್ ಮಾಡಿಸಿದರೆ ರಿಯಾಯತಿ ಕೂಡ ಲಭ್ಯವಿದೆ. ಸತ್ತ ನಂತರ ಅಡ್ರೆಸ್ ಇಲ್ಲದ ಆತ್ಮಗಳಾಗಿ ಈ ಭೂಮಿಯಲ್ಲಿ ಅಲೆಯುವ ಬದಲು ನೇರವಾಗಿ ಸ್ವರ್ಗವನ್ನು ಸೇರಿಸಿಕೊಳ್ಳಲು ಈ ಯೋಜನೆಯ ಸದುಪಯೋಗ ಯಾಕೆ ಪಡೆದುಕೊಳ್ಳಬಾರದು. ಆಸಕ್ತರು ಮೇಲ್ಕಾಣಿಸಿದ ವಿವರಗಳೊಂದಿಗೆ ಮುಂಗಡ ಬುಕ್ಕಿಂಗ್ ಗಾಗಿ ಸುದ್ದಿಕ್ಯಾತರನ್ನು ಸಂಪರ್ಕಿಸಬಹುದು.”
ಸಾಮ್ರಾಟರು ಈಗಾಗಲೇ ಮುಂಗಡ ಬುಕ್ಕಿಂಗ್ ಮಾಡಿಸಿಯಾಗಿದೆ, ಎಷ್ಟಾದರೂ ಒಮ್ಮೆ ಆತ್ಮಹತ್ಯೆ ಮಾಡಿಕೊಂಡು ಪುನರ್ಜನ್ಮ ಪಡೆದು ಬಂದವರಲ್ಲವೇ? ಅನುಭವ ಹೆಚ್ಚು!

ಬ್ಲಾಗ್ ಬೀಟ್ 16

25 ಆಕ್ಟೋ

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

……………………………………………………..

ಸಾಮ್ರಾಟರ ಅಕಾಲಿಕ ಮರಣದಿಂದ ಬ್ಲಾಗ್ ಲೋಕದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿ ಬಿಡುತ್ತದೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ಬೀಟಿಗೆ ಸಾಮ್ರಾಟರು ಬರುತ್ತಿಲ್ಲ ಎಂಬುದನ್ನು ತಿಳಿದು ಬ್ಲಾಗಿಗ ಮಹಾಶಯರು ಇಲ್ಲ ಸಲ್ಲದ ತಂಟೆ ತಕರಾರು ತೆರೆದುಕೊಳ್ಳುತ್ತಾರೆ ಎಂದೆಲ್ಲಾ ಭಾವಿಸಿದ್ದ ಸಾಮ್ರಾಟರ ಅತೃಪ್ತ ಆತ್ಮಕ್ಕೆ ತಕ್ಕ ಪಾಠ ಸಿಕ್ಕಿದೆ. ಅಜ್ಜಿಯ ಕೋಳಿ ಕೂಗದಿದ್ದರೆ ಬೆಳಕೇ ಹರಿಯುವುದಿಲ್ಲ ಎಂಬುದನ್ನು ಅಕ್ಷರಶಃ ನಂಬಿಕೊಂಡಿದ್ದ ಸಾಮ್ರಾಟರು ಈಗ ಸದ್ದಿಲ್ಲದೆ ಅಜ್ಜಿಯ ಕೈಲಿದ್ದ ಕೋಳಿಯ ಕತ್ತು ಸೀಳಿ ಆ ಅಜ್ಜಿಯ ಕೈಲೇ ಮಸಾಲೆ ಅರೆಸುತ್ತಿದ್ದಾರೆ!

…………………………

ಪ್ರಕಾಶ್ ಶೆಟ್ಟಿಯವರದು ಬರೇ ವಾರೆ ಕೋರೆ

ತಮ್ಮ ವಾರೇ ಕೋರೆ ಗೆರೆಗಳಿಂದ ನಾಡಿನ ಉದ್ದಗಲಕ್ಕೆ ಚಿರಪರಿಚಿತರಾಗಿರುವ ಪ್ರಕಾಶ್ ಶೆಟ್ಟಿಯವರು ಬಹುದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. ಅವರ ಈ ಸಾಧನೆ ಗಿನ್ನಿಸ್ ದಾಖಲೆಯ ಪುಸ್ತಕದಲ್ಲೇ ಶ್ರೇಷ್ಠ ಮಟ್ಟದ ಸ್ಥಾನಮಾನವನ್ನು ಪಡೆಯಲಿದೆ ಎಂದು ಗುಸುಗುಸು ಶುರುವಾಗಿದೆ. ಅಸಲಿಗೆ ಇವರು ಮಾಡಲು ಹೊರಟಿರುವುದಾದರೂ ಏನನ್ನು? ‘ದೇವೇಗೌಡರನ್ನು ನಗಿಸಲು ಹೊರಟಿದ್ದಾರೆ!’

ಇಲ್ಲಿ ನೋಡಿ…

ಹೌದು, ಪ್ರಕಾಶ್ ಶೆಟ್ಟಿಯವರು ಕನ್ನಡದಲ್ಲಿ ಒಂದು ಹಾಸ್ಯ ಮಾಸ ಪತ್ರಿಕೆಯನ್ನು ತೆರೆಯುತ್ತಿದ್ದಾರಂತೆ. ಗೌಡರನ್ನು, ಖರ್ಗೆಯವರನ್ನು ನಗಿಸುವ ಹುಮ್ಮಸ್ಸಿರುವ ಶೆಟ್ಟಿಯವರ ಪಂಚ್‌ನ್ನು ಕನ್ನಡಿಗರು ಸಕತ್ತಾಗಿ ಸ್ವೀಕರಿಸಲಿ ಎಂಬುದು ಸಾಮ್ರಾಟರ ಹಾರೈಕೆ.

…………………………

ಆಚಾರ್ಯರಿಗೆ ಸ್ವಲ್ಪ ಬೇಜಾರಾಗುತ್ತದೆಯಂತೆ!

ತಮ್ಮನ್ನು ಹೋಂ ಮಿನಿಸ್ಟರ್ ಎಂದು ಕನಿಕರದಿಂದ, ಲೇವಡಿಯಿಂದ, ಮಮತೆಯಿಂದ ಕರೆಯುವುದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದ ಆಚಾರ್ಯರು ಇಷ್ಟೆಲ್ಲಾ ಆದರೂ ಇದರಿಂದ ಸ್ವಲ್ಪ ಬೇಜಾರಾಗುತ್ತದೆ ಎಂದು ಹೇಳಿದ್ದು ನಾಡಿನ ಹೆಸರಾಂತ ಪತ್ರಿಕೆ ಮಜಾವಾಣಿಯಲ್ಲಿ ವರದಿಯಾಗಿದೆ.

ಹಾಗೆಯೇ ನಮ್ಮ ಮಾನ್ಯ ಮುಖ್ಯ ಮಂತ್ರಿಯವರು ಅಮೇರಿಕಾದ ಅಕ್ಕನ ಸಮಾರಂಭಕ್ಕೆ ಹೋಗಿ ಆಂಗ್ಲ ರಾಜಕಾರಣಿಗೆ ಉಚಿತವಾಗಿ ಲೋಟಸ್ ಫ್ಲವರ್ ಆಪರೇಷನ್ ಮಾಡಿದ ಸಂಗತಿ ಸಚಿತ್ರ ವರದಿ ಮಜಾವಾಣಿಯಲ್ಲಿ ಪ್ರಕಟವಾಗಿದೆ.

…………………………

ಬೊಗಳೆ ದಿವಾಳಿ ವಿಶೇಷಾಂಕ

ರಾಜ್ಯದ ಪ್ರತಿಯೊಂದು ಪತ್ರಿಕೆಯೂ ತಾನು ಬದುಕಿದ್ದೇನೆ ಎಂಬುದನ್ನು ಸಾಬೀತು ಪಡಿಸುವುದಕ್ಕಾಗಿಯೇ ದೀಪಾವಳಿಯಂದು ವಿಶೇಷಾಂಕದ ಹೆಸರಿನಲ್ಲಿ ಒಂದೇ ಆಕಾರದ, ಒಂದೇ ತೂಕದ, ಒಂದೇ ಬೆಲೆಯ ಒಂದಷ್ಟು ಸರಕನ್ನು ದಾಟಿಸಿ ಕೈತೊಳೆದುಕೊಂಡುಬಿಡುತ್ತವೆ.

ಈ ರೇಸಿನಲ್ಲಿ ತಾನೇನೂ ಕಡಿಮೆ ಇಲ್ಲ ಎಂದು ಬೊಗಳೆ ರಗಳೆಯ ಏಕಸದಸ್ಯ ಬ್ಯೂರೋದ ಸಮಸ್ತ ಸಿಬ್ಬಂದಿ ಟೊಂಕ ಕಟ್ಟಿ ನಿಂತು ದಿವಾಳಿ ವಿಶೇಷಾಂಕವನ್ನು ಹೊರತಂದಿದ್ದಾರೆ. ಅವರು ಈ ಸಂಚಿಕೆಯನ್ನು ಹೊರತಂದಿದ್ದಕ್ಕಾಗಿ ಹಾಗೂ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದೆ ಕೃಪೆ ಮಾಡಿದ್ದಕ್ಕಾಗಿ ಸಾಮ್ರಾಟರಿಂದ ಅಭಿನಂದೆಗಳ ಠುಸ್ ಪಟಾಕಿಯನ್ನು ಪಡೆದಿದ್ದಾರೆ.

(ಇವರ ಉಚಾವಣೆಯಿಂದ ಸಾಮ್ರಾಟರೂ ಸಹ ನಗೆ ನಗಾರಿ ದೀಪಾವಳಿ ವಿಶೇಷಾಂಕ ತರುವ ಸನ್ನಾಹದಲ್ಲಿದ್ದಾರೆ ಎಂಬುದು ಕೇವಲ ಊಹಾಪೋಹದ ಆಧಾರದಲ್ಲಿ ರೂಪುಗೊಂಡಿರುವ ವಾಸ್ತವ ಸಂಗತಿ ಎಂದು ತಿಳಿಸುತ್ತಿದ್ದೇವೆ.)

…………………………

ಪಂಚುಗಳು

ತುಂಬಾ ದಿನಗಳಿಂದ ಬ್ಲಾಗ್ ಲೋಕದಿಂದ ಗಣೇಶರು ನಾಪತ್ತೆಯಾಗಿ ಅನಂತರ ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಾರ್ತೆಯೂ ವರದಿಯಾಗಿ ಜನರು ಅನವಶ್ಯಕವಾದ ಸಂಶೋಧನೆಗಳನ್ನು ಮಾಡಲು ಶುರು ಮಾಡತೊಡಗಿದಾಗಲೇ ಗಣೇಶರು ಪ್ರತ್ಯಕ್ಷರಾಗಿ ಒಂದೆರಡು ಪಂಚು ಕೊಟ್ಟು ಮಾಯವಾಗಿದ್ದಾರೆ.

ಅವರು ಕೊಟ್ಟ ಪಂಚಿನ ಅರ್ಥ ಸಾಮ್ರಾಟರಿಗೆ ಸಿಕ್ಕದೆ ಅದನ್ನು ಹುಡುಕಿ ಅಲೆಯುತ್ತಿದ್ದಾರೆ. ಯಾರಿಗಾದರೂ ಸಿಕ್ಕಿದರೆ ಶೇ ಐವತ್ತನ್ನು ತಮ್ಮತ್ತ ತಳ್ಳಲು ಮನವಿ ಮಾಡಿಕೊಂಡಿದ್ದಾರೆ!

ಬ್ಲಾಗ್ ಬೀಟ್ 15

17 ಸೆಪ್ಟೆಂ

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

……………………………………………………..

ನಗೆ ಸಾಮ್ರಾಟರಿಗೆ ಬೀಟಿಗೆ ಹೊರಡುವುದು ಯಾಕೋ ತುಂಬಾ ಯಾಂತ್ರಿಕವೆನಿಸಲು ಶುರುವಾಗಿದೆ. ನಕ್ಕು ನಕ್ಕೂ ಮಂದಿ ದಣಿದಿರುವಂತೆ ಬ್ಲಾಗುಗಳಲ್ಲಿ ನಗೆಯ ಬರವಣಿಗೆಗೆ ಸ್ವಲ್ಪ ದಣಿವು ಕಾಣಿಸಿಕೊಂಡಂತೆ ಕಾಣುತ್ತದೆ. ಆದರೂ ಸಾಮ್ರಾಟರು ತಮ್ಮ ಕೆಲಸವನ್ನು ತಾವು ಮಾಡುತ್ತಿದ್ದಾರೆ. ಈ ಸಂಚಿಕೆ ಬ್ಲಾಗ್ ಬೀಟ್ ನಿಮ್ಮೆದುರಿನಲ್ಲಿದೆ:

ಕೆಂಡ ಸಂಪಿಗೆಯ ಸುದ್ದಿ ಕ್ಯಾತ

ಹವ್ಯಾಸಕ್ಕಾಗಿ ಮದುವೆಯಾಗಿ, ಕ್ರಮೇಣ ಮದುವೆಯಾಗುವುದನ್ನೇ ಹವ್ಯಾಸವಾಗಿಸಿಕೊಂಡು ಎಂಭತ್ತಾರು ಪತ್ನಿಯರನ್ನು ಕಟ್ಟಿಕೊಂಡು ನೂರಾ ಎಪ್ಪತ್ತು ಮಕ್ಕಳ ತಂದೆಯಾಗಿರುವ ನೈಜೀರಿಯಾದ ಮಹಮ್ಮದ್ ಬೆಲ್ಲಾ ಅಬೂಬೆಕರ್ ನ ಸಾಧನೆ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿರುವುದನ್ನು ಸುದ್ದಿ ಕ್ಯಾತ ವರದಿ ಮಾಡಿದ್ದಾನೆ.

ಎಂಭತ್ತಾರು ಪತ್ನಿಯರನ್ನು ಕಟ್ಟಿಕೊಂಡು ಎಂಭತ್ನಾಲ್ಕು ವರ್ಷ ಬದುಕಿರುವ ಅಬೂಬೆಕರ್‌ನಿಂದ ‘ಯಶಸ್ವೀ ಗಂಡನಿಗೆ ಹತ್ತೇ ಸೂತ್ರಗಳು’ ಪುಸ್ತಕ ಬರೆಸಲು ಸಂಪರ್ಕಿಸಲಾಗುತ್ತಿದೆ. ಅದಕ್ಕೆ ಬುಕರ್ ಸಿಕ್ಕರೂ ಸಿಗಬಹುದು!

ಪ್ರಕಾಶ್ ಶೆಟ್ಟಿ ಪಂಚ್

ಹ್ಯಾಂಗಿಸಿ ಕೊಂಡ ಪ್ರಕಾಶ್ ಶೆಟ್ಟಿ ತಮ್ಮ ಕಾರ್ಟೂನುಗಳ ಪ್ರದರ್ಶನದ ವರದಿಯನ್ನು ಬ್ಲಾಗಿನಲ್ಲಿ ಅಲ್ಲಲ್ಲಿ ಚೆಲ್ಲಿದ್ದಾರೆ.
ಎಂದಿನಂತೆ ಅವರ ಹರಿತವಾದ ಗೆರೆಗಳ ಬರೆಗೆ ನರೇಂದ್ರ ಮೋದಿ, ಯಡ್ಡಿ, ಲಾಲು, ಪೊಲೀಸು ಬಲಿಯಾಗಿದ್ದಾರೆ.

ಬೊಗಳೂರು ವಾರ್ತೆ

ಜಗತ್ತಿನಲ್ಲಿ ಹೆಚ್ಚುತ್ತಿರುವ ಹಾಟ್ ಕಲ್ಚರಿನ ಬಗ್ಗೆ ಕಾಳಜಿ ವ್ಯಕ್ತಪಡಿಸಿರುವ ಬೊಗಳೂರು ಬ್ಯೂರೋ, ಸ್ಯಾಂಪಲ್ಲಿಗೆ ಬಟ್ಟೆಹಾಕುವ ನಟೀ ಮಣಿಯರನ್ನೂ, ಬಟ್ಟೆಯನ್ನು ಸ್ಯಾಂಪಲ್ಲಿಗಾಗಿ ಹಾಕುವವರನ್ನೂ ತರಾಟೆಗೆ ತೆಗೆದುಕೊಂಡಿದೆ.
ಡಿವೋರ್ಸು, ತಾಳಿ ಎಂದೆಲ್ಲಾ ಮ್ಯಾರೀಡ್ ಲೈಫಿನ ವರೀಡ್ ಸಂಗತಿಗಳನ್ನು ವರದ್ದಿ ಮಾಡಿರುವುದರಿಂದ ಬ್ಯಾಚುಲರ್ ಆದ ನಗೆ ಸಾಮ್ರಾಟರು ಅಲ್ಲಿಂದ ಕಾಲ್ಕೀಳುವ ಮುನ್ನ ಈ ನೋಟೀಸನ್ನು ಗಮನಿಸಿದ್ದಾರೆ:
“ಬ್ರಹ್ಮಾಂಡ ಸೃಷ್ಟಿಯ ರಹಸ್ಯವರಿಯುವ ನೆಪದಲ್ಲಿ ಬೊಗಳೆ ರಗಳೆ ಬ್ಯುರೋದ ವಿರುದ್ಧ ಸುರಂಗ ಕಾರ್ಯಾಚರಣೆ ನಡೆಸಿ, ರಹಸ್ಯ ಪತ್ತೆ ಹಚ್ಚುವ ಅಸಹ್ಯ ಕಾರ್ಯ ಆರಂಭವಾಗಿರುವುದರಿಂದ ಕೆರಳಿರುವ ಬೊಗಳೂರು ಮಂದಿ, ಪ್ರತಿಭಟನಾರ್ಥವಾಗಿ ಬ್ಯುರೋ ಬಾಗಿಲು ಮುಚ್ಚಿ ಒಂದು ವಾರ ಕಾಲ ಪರಾರಿಯಾಗಲು ಮತ್ತು ಇಲ್ಲದ ತಲೆ ಮರೆಸಿಕೊಳ್ಳಲು ನಿರ್ಧರಿಸಿದ್ದಾರೆ.”
ತಲೆ ಮರೆಸಿಕೊಂಡಿರುವ ಬೊಗಳೂರು ಮಂದಿಯನ್ನು ಪತ್ತೆ ಹಚ್ಚಲು ಸೂಪರ್ ಕಾಪ್ ಚೇಲ ಕುಚೇಲನಿಗೆ ಬಹಳಷ್ಟು ಅರ್ಜಿಗಳು ಬಂದಿದ್ದು ಆತ ಸಾಮ್ರಾಟರ ಅಪ್ಪಣೆಗಾಗಿ ಕಾಯುತ್ತಾ ತುದಿಗಾಲಲ್ಲಿ ಮಲಗಿ ಗೊರಕೆ ಹೊಡೆಯುತ್ತಿದ್ದಾನೆ!

ಮಜಾವಾಣಿ

ತಮ್ಮ ಪತ್ರಿಕೆಗಾಗಿ ಪ್ರತ್ಯೇಕ ತಾಣವನ್ನು ತೆರೆದಿರುವ ಮಜಾವಾಣಿ ತನ್ನ ಅತ್ಯಂತ ನಿಕಟ ಪ್ರತಿಸ್ಪರ್ಧಿ ಪತ್ರಿಕೆಯ ವೇಗಕ್ಕೆ ತಕ್ಕಂತೆ ಓಡಲು ಸಾಧ್ಯವಾಗುತ್ತಿಲ್ಲ ಎಂಬ ಸಂಗತಿ ಸಾಮ್ರಾಟರ ಗಮನಕ್ಕೆ ಬಂದಿದೆ. ಹೀಗಾಗಿ ಅಲ್ಲಿ ಹೊಸ ವರದಿಗಳ್ಯಾವುವೂ ಪತ್ತೆಯಾಗಿಲ್ಲ.
ಸಾಮ್ರಾಟರು ಬೀಟು ಹಾಕುವಾಗ ‘ಹಗ್ಗಗಳ ಮೇಲೆ ಶಾಸನ ವಿಧಿಸಿದ ಎಚ್ಚರಿಕೆಯ’ ವರದಿ ಪತ್ತೆಯಾಯಿತು.