Archive | ಬ್ಯಾಡ್ ಟೈಮ್ಸ್ ಆಫ್ ಮೀಡಿಯಾ RSS feed for this section

ವಿಜಯ ಕರ್ನಾಟಕ, ಇ‘ಧ’ನ್ನು ಸರಿ ಪಡಿಸಿಕೊಳ್ತೀರಾ?

27 ಜುಲೈ

– ರಂಜಿತ್ ಅಡಿಗ, ಕುಂದಾಪುರ

ಕ್ರಿಕೆಟ್ಟಿನ ಪ್ರಥಮ ಪಾಠವನ್ನು, ಚಿಕ್ಕ ಹುಡುಗರಿಗೂ ಅರಿವಿರುವ ಸಿಲ್ಲಿbad times of media
ಮಿಸ್ಟೇಕನ್ನು  ಸಚಿನ್ ತೆಂಡುಲ್ಕರ್ ಮಾಡಿದರೆ, ಅವನಿಗೆ ಏನನ್ನಬೇಕು?

ಈ ಪ್ರಶ್ನೆ ಕಾಡಿದ್ದು ನಿನ್ನೆಯ ( ಜುಲೈ ೧೯) ವಿಜಯ ಕರ್ನಾಟಕವನ್ನು ಓದಿದಾಗ.
ಸಾಪ್ತಾಹಿಕ ಬಿಟ್ಟು ನೋಡಿದರೆ ಸಂಡೇ ವಿಕ ದ ಯೂಎಸ್ಪಿ ಶ್ರೀವತ್ಸ ಜೋಶಿರವರ
ಪರಾಗಸ್ಪರ್ಶ ಮತ್ತು  ಭಟ್ಟರ ಜನಗಳಮನ ಅಂಕಣ ಅನ್ನಬಹುದು. ಬೆಳಗೆರೆ ಬರೆದದ್ದು ಹಾಯ್
ಬೆಂಗಳೂರ್ ಮತ್ತು ದಟ್ಸ್ ಕನ್ನಡ ಓದುಗರನ್ನು ಹೊರತುಪಡಿಸಿ ಅಂತ ಡಿಸ್ ಕ್ಲೈಮರ್
ಹಾಕಿದ್ದರೆ ಚೆನ್ನಾಗಿರುತ್ತಿತ್ತು. ಅಲ್ಲಿ ಬಂದದ್ದೇ ಕಾಲಕ್ರಮೇಣ ಇಲ್ಲಿ ಪುನರ್ಜನ್ಮ
ಪಡೆಯುತ್ತದೆ. ಅದರ ಓದುಗರೂ ವಿ.ಕ. ದ ಓದುಗರೂ ಬೇರೆ ಬೇರೆ ಅನ್ನುವುದು ಭಟ್ಟರ ನಂಬಿಕೆ
ಅನ್ನಿಸುತ್ತದೆ.

ಹಾಗೆಯೇ ಭಾನುವಾರ ಪಿ. ತ್ಯಾಗರಾಜ್ ರ ಚಾಟಿ-ಚಟಾಕಿ ಅಂಕಣ ಕೂಡ ಬಹಳ ಕುತೂಹಲ ಮತ್ತು
ಮಜಭರಿತವಾಗಿರುತ್ತದೆ. ಆದರೆ  ಕುತೂಹಲ, ಮಜಾ, ವಿವರಗಳಿದ್ದರೆ ಸಾಕೆ? ಸಾರಾಸಗಟಾಗಿ
ಕನ್ನಡದ ಕಾಗುಣಿತ ತಪ್ಪುಗಳೂ ಓದುವಾಗ ಅಡ್ಡಿಪಡಿಸುತ್ತದಲ್ಲ? ನಿನ್ನೆಯ ” ಕಸ್ತೂರಿ
ರಂಗನ್, ವಿಷ್ಣುಗೆ ಕಾಡಿದ್ದ ಆ ಪತ್ರಕರ್ತರು!” ಎಂಬ ಶೀರ್ಷಿಕೆಯ ಚಾಟಿ-ಚಟಾಕಿ
ಗಮನಿಸಿ.  ಅದರಲ್ಲಿ ಸಿನೆಮಾ ಪಿ.ಆರ್.ಓ.,  ಡಿ. ವಿ. ಸುಧೀಂದ್ರ ರ ಪ್ರಸ್ತಾಪ
ಬರುತ್ತದೆ. ಅಂಕಣದಲ್ಲಿ ಎಲ್ಲೆಲ್ಲಿ ಸುಧೀಂದ್ರ ಅಂತ ಬರಬೇಕಿತ್ತೋ ಅಲ್ಲೆಲ್ಲಾ
ಸುದೀಂಧ್ರ ಅಂತಲೇ ಪ್ರಕಟವಾಗಿದೆ. ಒಂದು ಸಲ ಹಾಗಾಗಿದ್ದರೆ ಮುದ್ರಣ ರಾಕ್ಷಸನ ಸಮಸ್ಯೆ
ಅಂದುಕೊಂಡು ಸುಮ್ಮನಿರಬಹುದು, ಆದರೆ ೭ ಸಲ ಹಾಗಾದರೆ ಕಣ್ತಪ್ಪಿನಿಂದಾದದ್ದು
ಎನ್ನಲಾಗುವುದೇ? ಹಾಗೇನೆ “ಅವಾಕ್ಕಾದರು” ಪದ “ಅವಕ್ಕಾದರು” ಅಂತಲೇ ಬರುತ್ತದೆ.
ಅವಕ್ಕೆ+ಆದರು ಮತ್ತು ಅವಾಕ್+ಆದರು ಎರಡು ಪದಕ್ಕೂ ವ್ಯತ್ಯಾಸ ಇದೆಯಲ್ಲವೇ? ಇಂತಹ
ಚಿಕ್ಕಪುಟ್ಟ ತಪ್ಪನ್ನು ಎತ್ತಿಹಿಡಿಯಲು ಮುಜುಗರವಾದರೂ ಹೊಸ ಕನ್ನಡ ಓದುಗರನ್ನು
ತಪ್ಪುದಾರಿಗೆ ಎಳೆಯುವ, ದೈನಂದಿನ ಓದುಗರಿಗೆ ಸಲೀಸು ಓದಿಗೆ ಅಡ್ಡಿಯಾಗುವ
ಪ್ರಮಾದಗಳಾಗಬಾರದಲ್ಲವೇ?

ಹಿಂದಿ ಗಾಯಕರು ಕನ್ನಡ ಚಿತ್ರಗೀತೆ ಹಾಡುವಾಗ ಅಥವ ಟೀವಿ ನಿರೂಪಕರು ಕನ್ನಡ ಪದ
ಉಚ್ಚಾರಣೆಯನ್ನು ತಪ್ಪಾಗಿ ಮಾಡಿದರೆ ಅದನ್ನು ದೊಡ್ಡ ವಿಷಯವನ್ನಾಗಿ ಪರಿವರ್ತಿಸುವ
ಪತ್ರಕರ್ತರು ಅಂಥ ಚಿಕ್ಕ ದೋಷಗಳು ತಮ್ಮಿಂದಾಗದಂತೆ ಎಚ್ಚರ ವಹಿಸಬೇಕಲ್ಲವೇ?

***********

ಉದಯವಾಣಿ ಸಾಪ್ತಾಹಿಕ ಸಂಪದ ವೆಂದರೆ ಬಹಳ ನಿರೀಕ್ಷೆಯಿಟ್ಟು ಓದುವ ದಿನಗಳಿತ್ತು. ಈಗ
ಬಹುಶಃ ಪತ್ರಿಕೆಯ ಸಂಪಾದಕರಿಗೇ ಒಂಥರ ನಿರ್ಲಕ್ಷ್ಯ. ಏನು ಹಾಕಿದರೂ ನಡೆಯುತ್ತೆ.
ಪ್ರಶ್ನಿಸುವವರಿಲ್ಲ ಅನ್ನುವ ಭಾವವೇ?

ಈ ಸಲದ ಉದಯವಾಣಿ (ಜುಲೈ ೧೯) ಸಾಪ್ತಾಹಿಕ ಸಂಪದ ನೋಡಿದರೆ ವಿಷಯ ಅರಿವಾಗುತ್ತದೆ. ಪೇಜ್
ಡಿಸೈನ್ ನಲ್ಲಿ ಅಕ್ಷರ ವಿನ್ಯಾಸದಲ್ಲಿ ತೋರುವ ಆಸಕ್ತಿ ಬೇರೆ ವಿಷಯದಲ್ಲೂ ತೋರಿದ್ದರೆ
ಸಂಪದ ಎಷ್ಟೊಂದು ಸಂಪದ್ಭರಿತವಾಗಿರುತ್ತಿತ್ತು!

೨ ನೇ ಪುಟದಲ್ಲಿ ಫೋಟೋ ವನ್ನು ಕಾಲು ಭಾಗ ಒಂದು ಪೇಜಿಗೆ ಮುಕ್ಕಾಲು ಭಾಗ ಮತ್ತೊಂದು
ಪೇಜಿಗೆ ಹಂಚಿಕೆ ಮಾಡಿದ್ದು ನೋಡಿದರೆ ಪತ್ರಿಕೆಯ ಸಂಪಾದಕರಿಗೆ ವಿಷಯವನ್ನು ಬರೀ
ಓದುವವರು ಮಾತ್ರ ಇರುತ್ತಾರೆ ಅನ್ನುವ ನಂಬಿಕೆ. ಒಳ್ಳೆಯ ಕಾಲಂ ಇದ್ದರೆ ಸಂಗ್ರಹಿಸಿಡುವ
ಓದುಗರೂ ಇರುತ್ತಾರೆ ಅನ್ನುವುದು ಮರೆತುಬಿಟ್ಟರಾ?

ಅದು ಹೋಗಲಿ, ಮೂರನೇ ಪುಟದ ಲಘು ಪ್ರಬಂಧ ಓದಿದರೆ ಮತ್ತೆ ಮುಂದೆ ಉದಯವಾಣಿ ಓದಲೇ ಬಾರದು
ಎಂಬ ಹಾಗಿದೆ. ಬರಹಗಳ ಕೊರತೆಯಾ ಉದಯವಾಣಿಗೆ?  ಬ್ಲಾಗುಗಳು ಹೆಚ್ಚಿರುವ ಇಂಥ ಸಮಯದಲ್ಲಿ
ಹೀಗೆ ನಿರ್ಲಕ್ಷ್ಯ ತೋರಿದರೆ ಯಾವ ಓದುಗರು ನಿಮ್ಮವರಾಗಿ ಉಳಿದುಕೊಳ್ಳುತಾರೆ
ಸಂಪಾದಕರೆ? ಅಲ್ಲದೇ ಬೇರೆ ಪತ್ರಿಕೆಗಳ ಸಾಪ್ತಾಹಿಕದಲ್ಲಿ ಆದಷ್ಟೂ ಸಾಹಿತ್ಯಕ್ಕಾಗಿ
ಮೀಸಲಿಟ್ಟರೆ ಉದಯವಾಣಿ ಸಾಪ್ತಾಹಿಕದ ಎರಡು ಪೇಜು ಆರೋಗ್ಯ ನುಂಗಿಹಾಕುತ್ತದೆ. ನಿಜ
ಆರೋಗ್ಯವಾಣಿ ಚೆನ್ನಾಗಿ ಬರುತ್ತಿದೆ; ಆದರೆ ಅದಕ್ಕೆ ಭಾನುವಾರವನ್ನು
ಮೀಸಲಿಡಬೇಕಿತ್ತೇ?  ಚಂದವಾಗಿ ಬರೆವ ನವನೀತ ಚುಟುಕಗಳು ಸುದ್ಧಿಯಿಲ್ಲದೇ ಮರೆಯಾಗಿವೆ.
ಬೇರೆ ಪತ್ರಿಕೆಗಳಲ್ಲಿ ವಾರದ ದಿನದಲ್ಲಿ ಎಲ್ಲೋ ಮೂಲೆಯಲ್ಲಿ ಓದಸಿಗುವ ಎಸ್ಸೆಮ್ಮೆಸ್
ವಾಕ್ಯಗಳು ಸಾಪ್ತಾಹಿಕ ಸಂಪದದ ಮುಡಿಗೇರಿವೆ. ಭಾನುವಾರದ ಚಂದದ ಮೂಡಿನಲ್ಲಿ ವಾರವಿಡೀ
ಡಿಸ್ಟರ್ಬ್ ಮಾಡಿದ ಎಸ್ಸೆಮ್ಮೆಸ್ಸುಗಳನ್ನೇ ಓದಬೇಕೆ? ಅದರ ಮಟ್ಟಿಗೆ ಸಾಹಿತ್ಯದ
ತುಣುಕುಗಳನ್ನು ನೀಡುವ ವಿ.ಕ. ದ ಐಡಿಯಾವೇ ಚೆನ್ನಾಗಿದೆ.

ಮಳೆ ಕುರಿತ ಮುಖಪುಟ ಬರಹಕ್ಕೆ, ಎನ್ನೆಸ್ ಲಕ್ಷ್ಮೀನಾರಾಯಣ ಭಟ್ಟರ ಕವಿತೆಗಳಿಗಾಗಿ
ಚಂದದ ಡಿಸೈನ್ ಗಾಗಿ ಮಾತ್ರ ಈ ಸಲದ ಉದಯವಾಣಿ ಸಾಪ್ತಾಹಿಕ ಸಂಪದಕ್ಕೆ ಹತ್ತರಲ್ಲಿ
ನಾಲ್ಕು ಅಂಕ!