Archive | ನಗಾರಿ ವಾರ್ಷಿಕೋತ್ಸವ ವಿಶೇಷ RSS feed for this section

ಪ್ರತಂಪು ಸಿಂಹ ಬರೆದಿದ್ದಾರೆ: ಮುಹ್ ಖೋಲ್ಕರ್ ನಕ್ಕುನೋಡಿ…. ಮಿಸ್ಟರ್ ಬುದ್ಧಿಜೀವಿ!

5 ಮಾರ್ಚ್

ಓದುಗರಿಗೆಲ್ಲ ನಮಸ್ಕಾರ. ನಿಮಗೆಲ್ಲಾ ಗೊತ್ತಿದೆ ನಾನೊಬ್ಬ ಪತ್ರಕರ್ತ. ಕನ್ನಡ ಪತ್ರಿಕೋದ್ಯಮದಲ್ಲಿ ಚಿಕ್ಕ ವಯಸ್ಸಿಗೆ ಅಂಕಣಕಾರನಾದೆ, ಈಗಲೂ ನಮ್ಮ ಪತ್ರಿಕೆಯಲ್ಲಿ ನಾನೇ ಸೀನಿಯರ್ ಅಂಕಣಕಾರ. ನನ್ನ ಅಂಕಣಗಳಲ್ಲಿ `ನಾನು’ ಎಂಬ ಪದವನ್ನು ನಾನು ಬಳಸುವುದಿಲ್ಲ. ಅಂಕಣ ಬರಹ ವೈಯಕ್ತಿಕವಾಗಿರಬಾರದು ಹಾಗೂ ವ್ಯಕ್ತಿ ನಿಷ್ಟವಾಗಿರಬಾರದು ಎನ್ನುವುದು ನನ್ನ ನಂಬಿಕೆ.ವಸ್ತುನಿಷ್ಟವಾಗಿ ಬರೆಯುವುದರಿಂದಲೇ ನನ್ನ ಅಂಕಣ ಇಷ್ಟು ಜನಪ್ರಿಯವಾಗಲು ಸಾಧ್ಯವಾಗಿರುವುದು.

ನಾನು ವಸ್ತುನಿಷ್ಟವಾಗಿ ಬರೆಯುವುದಿಲ್ಲ ವ್ಯಕ್ತಿ ನಿಷ್ಠವಾಗಿ ಬರೆಯುತ್ತೇನೆ ಎಂದು ಹಲವರು ಆರೋಪ ಮಾಡುತ್ತಾರೆ. ಅವರಿಗೆ ನಾನು ಹೇಳುವುದು ಇಷ್ಟೇ, ನನ್ನ ಅಂಕಣಗಳನ್ನು ಮುಕ್ತ ಮನಸ್ಸಿನಿಂದ, ಪೂರ್ವಾಗ್ರಹ ತೊರೆದು ಓದಿ. ನಾನು ಯಾವ ಸಂದರ್ಭದಲ್ಲೂ ವ್ಯಕ್ತಿ ನಿಂದನೆಗೆ ಇಳಿದಿಲ್ಲ. ಅದಂತ ಪೂರ್ತಿಯವರ ಬಗ್ಗೆ ಬರೆಯುವಾಗಲೂ ನಾನವರನ್ನು ವೈಯಕ್ತಿಕವಾಗಿ ಟೀಕಿಸಿಲ್ಲ. `ಜ್ಞಾನಪೀಠಿ ನಂಬರ್ ೬’ ಎಂದು ಸಂಬೋಧಿಸಿದ್ದೇನೆ. ಕೆಂಪಾ ಬಗ್ಗೆ ಬರೆಯುವಾಗ ಅವರನ್ನು `ಜಿರಳೆ ಔಷಧಿ’ ಎಂದು ಕರೆಯುವುದರ  ಮೂಲಕ ನಾನು ಇಡೀ ಚರ್ಚೆಯನ್ನು  ವ್ಯಕ್ತಿಗಳಿಂದ  `ಜ್ಞಾನಪೀಠ, ಜಿರಳೆ ಔಷಧಿ’ ಎನ್ನುವ ವಸ್ತುಗಳ ಬಗೆಗೆ ತಿರುಗಿಸಿ `ವಸ್ತು’ನಿಷ್ಠವಾದ ಚರ್ಚೆ ಮಾಡಿದ್ದೇನೆ.

ನಗೆ ನಗಾರಿ ಡಾಟ್ ಕಾಮ್ ಎರಡು ವರ್ಷಗಳಿಂದ ಅಂತರ್ಜಾಲದಲ್ಲಿ ನಗೆಯ ಹಬ್ಬವನ್ನು ಮಾಡುತ್ತಿದೆ. ನನ್ನ ಗೆಳೆಯರು ಕೇಳಿದ್ರು `ನೀನು ಕನ್ನಡದಲ್ಲಿ ಬರೆಯೋದೇನಿದ್ರೂ ಅಂಕಣದಲ್ಲಿ ಮಾತ್ರ. ಆರ್ಕುಟ್, ವೆಬ್ ಸೈಟಿನಲ್ಲಿ ನೀನು ಇಂಗ್ಲೀಷಿನಲ್ಲಷ್ಟೇ ಕೀಬೋರ್ಡು ಇರುವುದು ಎಂದು ನಂಬಿರುವೆ. ಆದರೆ ನಗಾರಿ ಬ್ಲಾಗಿಗೆ ಕನ್ನಡದಲ್ಲಿ ಯಾಕೆ ಬರೆಯಲು ಒಪ್ಪಿದೆ’ ಎಂದು. ಅದಕ್ಕೆ ನಾನವರಿಗೆ ಹೇಳಿದೆ,  `ಇದು ಹಲ್ಲುಳ್ಳ ವೀರರು ಮೆಟ್ಟುವ, ಹಿಟ್ಟು ತಟ್ಟುವ ಬ್ಲಾಗು. ಹಲ್ಲಿದ್ದ ಗಟ್ಟಿಗರಷ್ಟೇ ಹಲ್ಲು ತೋರಿ ನಗಲಿಕ್ಕೆ ಸಾಧ್ಯ. ಅದಕ್ಕೇ ಇಲ್ಲಿ ಕನ್ನಡದಲ್ಲಿ ಬರೆಯೋದು’ ಅಂತ. ಈ ಹಲ್ ಸೆಟ್ಟಿನ ಬ್ಲಾಗಿಗೆ ಬರೆಯಲು ಹಿಂದೆ ಕಾಂಡೋಮ್ ಬಿಚ್ಚಿಟ್ಟ ಪೆನ್ನೂ  ಬೇಕಿಲ್ಲ, ಫಿಲ್ಟರ್ ತೆಗೆದಿಟ್ಟ ಗಂಟಲೂ ಬೇಕಿಲ್ಲ. ಕುಟ್ಟಲು ಕೀಬೋರ್ಡ್ ಇದ್ದರೆ ಸಾಕು.

ನಗೆ ಸಾಮ್ರಾಟರು ಯಾರು, ಅವರ ಸಾಧನೆ ಏನು ಎಂದು ಸಾಮ್ರಾಜ್ಯದ ಪ್ರಜೆಗಳಾದ ನಿಮಗೆಲ್ಲಾ ಗೊತ್ತಿದೆ. ಅವರ ಬಗ್ಗೆ ನಾನು ಹೆಚ್ಚು ಮಾತಾಡಲ್ಲ. ನಾವ್ ಫ್ರೆಂಡ್ಸು ಮಾಡೋಕೆ ಕೆಲ್ಸ ಇಲ್ಲದಾಗ ಹೇಳ್ತಿರ್ತೀವಿ, ಸೂರ್ಯಂಗೇ ಟಾರ್ಚಾ, ತಿಮ್ಮಪ್ಪಂಗೇ ಕಟಿಂಗಾ ಅಂತ. ಹಾಗೇ ಹೇಳ್ತೀವಿ, ತಿಪ್ಪೆಗೇ  ಕಸನಾ ಅಂತ. ನನ್ ಪಾಲಿಗೆ ಸಾಮ್ರಾಟರು ತಿಪ್ಪೆ, ಅವ್ರಿಗೆ ಕಸ ಎಸೆಯೋ ಕೆಲಸ ನಾನು ಮಾಡಲ್ಲ. ಆದ್ರೆ ಈ ತಿಪ್ಪೆ ಕಡೆ ತಿರುಗಿ ಕಲ್ಲು ಎಸೆದು ಮೈಮೇಲೆಲ್ಲಾ ಕಸ ಎಳೆದುಕೊಂಡ ವ್ಯಕ್ತಿಗಳ  ಬಗ್ಗೆ ಬರೀತೀನಿ. ಯಾಕಂದ್ರೆ ಅವ್ರಿಗೂ ಇದಕ್ಕೂ ಸಂಬಂಧ ಇದೆ.

ನಿಮಗೆಲ್ಲ ನೆನಪಿರಬಹುದು ಬೀಚಿಯವರ ಪುಣ್ಯ ಸ್ಮರಣೆಯ ಪ್ರಯುಕ್ತ ಅವರ ಬಗ್ಗೆ ನಾನು ಒಂದು ಲೇಖನ ಬರೆದಿದ್ದೆ. ಅದರಲ್ಲಿ ನಾನು ಬೀಚಿಯವರು ಅಷ್ಟು ದೊಡ್ಡ ಬುದ್ಧಿಜೀವಿಯಾಗಿದ್ದರೂ ಹಾಸ್ಯಪ್ರಜ್ಞೆ ಉಳ್ಳವರಾಗಿದ್ದರು. ಈಗಿನ ಬುದ್ಧಿಜೀವಿಗಳಿಗೆ ಉಳಿದೆಲ್ಲಾ ಪ್ರಜ್ಞೆಗಳಂತೆ  ಹಾಸ್ಯ ಪ್ರಜ್ಞೆಯೂ ಇಲ್ಲ ಎಂದಿದ್ದೆ. ಆಗ ನಮ್ಮಾಫಿಸೀಗೆ ಒಂದು ಫ್ಯಾಕ್ಸ್ ಬಂತು, ಒಬ್ಬ ದೊಡ್ಡ ಲೇಖಕರು `ಇವ್ನು ನಮ್ಮನ್ನು ಆಡಿಕೊಂಡು ನಗ್ತಿದಾನೆ. ಸೋಮಸೂಜಿ, ಕೆಂಪಾ, ಓಎಂದ ರಾವ್ ಮುಂತಾದವರಿಗೆ  ನಗಲಿಕ್ಕೆ ಹಲ್ಲೇ ಇಲ್ಲ ಅಂತ ಆರೋಪಿಸಿದ್ದಾನೆ.’ ಅಂತ ಹೇಳಿದ್ರು. ನಮ್ಮ ಸಂಪಾದಕರು ಆ ಲೇಖಕರ ಫೋನ್ ನಂಬರ್ ಕೊಟ್ಟು ಮಾತಾಡು, ಅವರೇನಂದ್ರು ಅಂತ ರೆಕಾರ್ಡ್ ಮಾಡಿಕೋ ನಾಳೆ ನ್ಯೂಸಿಲ್ಲದಿದ್ರೆ `ದಂತ-ಕ್ಯಾತೆ’ ಅಂತ ವರದಿ ಪ್ರಕಟಿಸಿ ಎಸ್.ಎಂ.ಎಸ್ ಪೋಲ್ ಮಾಡಬಹುದು ಅಂದ್ರು. ನಾನು ಅವ್ರಿಗೆ ನೇರವಾಗಿ ಕೇಳ್ದೆ, `I stand by my views. If  you people have teeth and gums, not to mention guts, why don`t you smile to camera?’ ಅತ್ತಕಡೆಯಿಂದ ಬ್ಬೆಬ್ಬೆಬ್ಬೆ ಅಂತ ಉತ್ತರ ಬಂತು. `I don`t need to answer to you on phone, because my dentures are missing from yesterday. I`ll lodge my protest infront of gandhi statue tomorrow.’ ಅಂತ ಮತ್ತೆ ಫ್ಯಾಕ್ಸ್ ಕಳಿಸಿದ್ರು. ಹಲ್ ಸೆಟ್ ಇಲ್ಲದಿದ್ರೂ ಗಾಂಧಿ ಅದೆಷ್ಟು ಚೆನ್ನಾಗಿ ನಗ್ತಾ ಇದ್ರು, dentures ಇಟ್ಟುಕೊಂಡೂ ನಗಲಿಕ್ಕೆ ಬಾರದ ಈ ನಗೆ ವಿರೋಧಿ, ಗಾಂಭೀರ್ಯ ಪಕ್ಷಪಾತಿ ವ್ಯಕ್ತಿಯ ಬಗ್ಗೆ ಹೇಳ್ತೀನಿ.

ಅನೈಸರ್ಗಿಕ ದಂತಪಂಕ್ತಿಯಿರುವ ಈ ಅದಂತ ಪೂರ್ತಿ ಎಂಥಾ ಸಾಹಿತಿ ಅಂತ ಎಲ್ಲರಿಗೂ ಗೊತ್ತು. ಅವರೆಂಥಾ ದೊಡ್ಡ ಕಾಪಿ ಕ್ಯಾಟು, ಹಲ್ಕಿರಿಯುವುದರ ವಿರೋಧಿ ಎಂದು ನಾನು ಹೇಳಬೇಕಿಲ್ಲ. ಇವರು ಬರ್ಮಿಂಗ್ ಹ್ಯಾಮಿನಲ್ಲಿ ಡಾಕ್ಟರೇಟ್ ಪಡೆಯೋಕೆ, ನವ್ಯ ಕಾವ್ಯ ಚಳುವಳಿಯ ಹರಿಕಾರರಾಗುವುದಕ್ಕೆ, ಲಂಕೇಶ್, ಪೂರ್ಣ ಚಂದ್ರ ತೇಜಸ್ವಿಯವರ ಸರಿ ಸಮಾನರಾಗುವುದಕ್ಕೆ, ಒಂದಿಡೀ ಹೊಸ ತಲೆಮಾರಿನ ಲೇಖಕರಿಗೆ ಮೇಷ್ಟ್ರು ಆಗಿರುವುದಕ್ಕೆ, ಎಂಬತ್ತರ ಇಳಿ ವಯಸ್ಸಿನಲ್ಲೂ ಸಮಾಜದ ವಿದ್ಯಮಾನಗಳ ಬಗ್ಗೆ ದಿಟ್ಟ ನಿಲುವು ತಳೆಯುವುದಕ್ಕೆ ಹಗಲು ರಾತ್ರಿಯೆನ್ನದೆ ಅದೆಷ್ಟು ಕಾಪಿ ಹೊಡೆದಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. ಅದನ್ನ ತಿಳಿಯೋದಕ್ಕೆ ಅವರ ಕತೆಗಳನ್ನ, ಕವಿತೆಗಳನ್ನ, ವಿಮರ್ಶೆಯನ್ನ ಓದಬೇಕಿಲ್ಲ.

ಇಂತಹ ಅದಂತ ಪೂರ್ತಿಗಳು ಇಷ್ಟೆಲ್ಲಾ ಬರೆದ್ರೂ ಒಂದೇ ಒಂದು ಹಾಸ್ಯ ಲೇಖನ ಬರೆದಿಲ್ಲ. ಯಾವುದೋ ದೇಶದ ಕವಿಯನ್ನು ಕನ್ನಡಕ್ಕೆ ಪರಿಚಯ ಮಾಡಿಸಿದರೂ ಕನ್ನಡದ ಹಾಸ್ಯ ಸಾಹಿತ್ಯವನ್ನು ವಿಮರ್ಶಿಸಿಲ್ಲ. ಜನ ಸಾಮಾನ್ಯರ ದಿನ ನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಹಾಸ್ಯದ ಕುರಿತು ಒಂದೇ ಒಂದು ಒಳ್ಳೆ ಮಾತಾಡಿದ್ದಾರಾ? ಇದರಿಂದ ಏನು ತಿಳಿಯುತ್ತೆ ಅಂದ್ರೆ, ಅದಂತ ಮೂರ್ತಿಗಳು ನಗೆ ವಿರೋಧಿ ಹಾಗೂ ಜೀವವಿರೋಧಿ.

ಇವರೊಬ್ಬರೇ ಅಲ್ಲ, ಯಾವ ಬುದ್ಧಿಜೀವಿಯನ್ನೇ ತೆಗೆದುಕೊಳ್ಳಿ. ನಗುವುದು ಎಂದರೆ ಅವರಿಗೆ ತಿಳಿದೇ ಇಲ್ಲ. ಇವರು ಮಾತಾಡೋಕೆ ಶುರು ಮಾಡಿದರೆ ಜನರು ತೂಕಡಿಸಲು ತೊಡಗುತ್ತಾರೆ. ಓಶೋ ಒಂದು ಮಾತು ಹೇಳ್ತಾರೆ, `ನಗುವುದಕ್ಕೆ, ನಗಿಸುವುದಕ್ಕೆ, ನಗಲ್ಪಡುವುದಕ್ಕೆ ಅತಿ ಹೆಚ್ಚಿನ ಬೌದ್ಧಿಕ ಪ್ರಾಮಾಣಿಕತೆ ಬೇಕು. ಗುಂಡಿಗೆ ಬೇಕು.’ ಇವರು ಕೊಚ್ಚಿಕೊಳ್ಳುವ ಮಾರ್ಕ್ಸಿಸ್ಟ್ ಸಮಾಜದಲ್ಲಿ ನಗುವುದಕ್ಕೂ ಸರಕಾರದ ಅಪ್ಪಣೆ ಇರಬೇಕು ಎಂದು ಗೊತ್ತಿಲ್ಲವೇ?

ಇದೇ ಸಂದರ್ಭದಲ್ಲಿ ಇನ್ನೊಬ್ಬ ಢೋಂಗಿ ಬುದ್ಧಿಜೀವಿ ಪತ್ರಕರ್ತರ ಬಗ್ಗೆ ಬರೀಬೇಕು. ಇವರ ಬಗ್ಗೆ ನಾನು ನಮ್ಮ ಪತ್ರಿಕೆಯ ವಾಚಕರ ವಾಣಿಯಲ್ಲಿ , ನನ್ನ ವೆಬ್ ಸೈಟಿನಲ್ಲಿ ಬೇರೆಯವರ ಹೆಸರಿನಲ್ಲಿ ಆಗಲೇ ತುಂಬಾ ಬರೆದಿದ್ದೀನಿ. ಆದರೂ ಇಲ್ಲಿ ಈತನ ಲಂಪಟತೆಯನ್ನು ಬಯಲು ಮಾಡಲೇಬೇಕು.ಆತ ಬೇರಾರೂ ಅಲ್ಲ ಸಾಯ್ ಬೆಂಗಳೂರು ಅನ್ನೋ ಪತ್ರಿಕೋದ್ಯಮಕ್ಕೆ ಕಪ್ಪು ಚುಕ್ಕೆಯಾದ ಕಪ್ಪು ಪತ್ರಿಕೆಯ  ಸ್ವಯಂ ಘೋಷಿತ ಸಾರಥಿ. ಶಿವರಾಮ ಕಾರಂತರು ಇಂತಹ ಪತ್ರಿಕೋದ್ಯಮವನ್ನು ಚರಂಡಿ ಪತ್ರಿಕೋದ್ಯಮ  ಎಂದು ಜರೆದಿದ್ದರು. ಇಂತಹ ಚರಂಡಿಯಲ್ಲಿ  ತಾನು ಪ್ರಾಮಾಣಿಕ, ಹೃದಯವಂತ, ನಿಷ್ಠುರ ಪತ್ರಕರ್ತ, ಕಷ್ಟದಲ್ಲಿರುವವರಿಗೆಲ್ಲಾ ನೆರವಾಗುವ ಆಪ್ತಬಂಧು ಎಂದು ಫೋಸ್ ಕೊಡುತ್ತಾ ಅಕ್ಷರಗಳ ಊದುಬತ್ತಿ ಹಚ್ಚಿಟ್ಟುಕೊಂಡು ಕೂತಿರುವ ಗವಿ ಬಿಳಿಗೆರೆಗೆ ಹಾಸ್ಯ ಅಂದರೆ ಏನು ಗೊತ್ತು? `ಕೇಳಿ’ ಅನ್ನೋ ದ್ವಂದ್ವಾರ್ಥವಿರುವ ಅಂಕಣದಲ್ಲಿ ತಾನೇ ಬರೆದ ಪ್ರಶ್ನೆಗೆ ಪೋಲಿಯಾಗಿ, ತನ್ನ ಮಕ್ಕಳೂ ಸಹ ಓದಲಾಗದಷ್ಟು ಅಸಹಸ್ಯವಾಗಿ ಉತ್ತರ ಕೊಟ್ಟು ಅದನ್ನೇ ಹಾಸ್ಯ ಪ್ರಜ್ಞೆ ಎಂದು ಕರೆಯುವುದು ಬಿಟ್ಟರೆ ಈತ ಒಂದಾದರೂ ಹಾಸ್ಯ ಲೇಖನ ಬರೆದಿದ್ದಾರಾ? ಆ ಅಂಕಣದಲ್ಲಿ  ಶ್ರೀಮತಿ ಶಿಲ್ಪಾ  ಶೆಟ್ಟಿ ಕುಂದ್ರಾ, ಶ್ರೀಮತಿ ಐಶ್ವರ್ಯ ಬಚ್ಚನ್, ಸಾನಿಯಾ ಮಿರ್ಜಾರನ್ನು ತನ್ನ ಹಿಂದೆ ಬಿದ್ದಿರುವ ಪ್ರೇಯಸಿಯರು ಅನ್ನುವ ಹಾಗೆ ಕೀಳಾಗಿ ಬರೆಯುವ ಈತ ಹೆಣ್ಣು ಮಕ್ಕಳಿಗೆ ತಂದೆ, ಅಣ್ಣ, ಬಂಧು ಆಗಲು ಸಾಧ್ಯವೇ? ಈತನ ಬಂಧುತ್ವ, ಬಾಂಧವ್ಯ ಎಂಥದ್ದು ಎಂಬುದು ಪತ್ರಿಕೆಗಳಲ್ಲಿ ಬಯಲಾಗುತ್ತಿದೆ. ಮೊಮ್ಮಕ್ಕಳು ಹುಟ್ಟಿದ ಮೇಲೂ ಐ ಲವ್ ರವಿಕೆ  ಅನ್ನೋ ಥರ ಪತ್ರ ಪ್ರೇಮ ಬರೆಯೋದು, ಪೋಲಿ ಪುಸ್ತಕಗಳನ್ನು ಅನುವಾದಿಸುವುದು ನೋಡಿದರೇನೇ ತಿಳಿಯುತ್ತೆ  ಆತ ಎಂಥಾ ಢೋಂಗಿ ವ್ಯಕ್ತಿ ಎಂದು.

ಭಾರತವನ್ನು ಬೈದು ದೊಡ್ಡವರಾದ ಬರಹಗಾರರು, ಭಾರತದ ಬಡತನವನ್ನು, ಸಮಸ್ಯೆಗಳ ಬಗ್ಗೆ ಗಮನ ಸೆಳೆದ ಚಿತ್ರೋದ್ಯಮದವರು, ಮುಸ್ಲೀಮರ ಬಗ್ಗೆ ಒಲವಿನಿಂದ ಮಾತನಾಡುವ ಸಿನೆಮಾ ನಟರು ಯಾರನ್ನೇ ಗಮನಿಸಿ ಇವರೆಲ್ಲರೂ ಹಾಸ್ಯವನ್ನು ಕೀಳಾಗಿ ಕಾಣುವವರು. ನಗೆ ವಿರೋಧಿಗಳು, ನಗುವುದು ಸಹಜ ಧರ್ಮ ಎಂದು ಡಿವಿಜಿ ಹೇಳಿದ್ದಾರೆ. ಹೀಗಾಗಿ ಇವರೆಲ್ಲ ಸಹಜವಾದ ನಿಸರ್ಗ ವಿರೋಧಿಗಳು, ಧರ್ಮ ವಿರೋಧಿಗಳು. ಸದಾ ನಗುವ ಸದಾನಂದ ಗೌಡ, ಶೋಭಾ ಕರಂದ್ಲಾಜೆಯವರನ್ನು ನೋಡಿಯಾದರೂ ನಗುವುದನ್ನು ಬುದ್ಧಿಜೀವಿಗಳು ಕಲೀಬೇಕು. ಇಲ್ಲವಾದರೆ ಮುಂದೊಂದು ದಿನ ಜನರು ಹೇಳುತ್ತಾರೆ, ಅದಂತಪೂರ್ತಿ sucks!

ವಸ್ತುನಿಷ್ಟ ಅಂಕಣಕಾರನಾಗಿ ನಗೆ ನಗಾರಿಯ ವಾರ್ಷಿಕ ವಿಶೇಷಾಂಕಕ್ಕೆ ಈ ಬರಹ ಬರೆದಿದ್ದೇನೆ… ಒಂದೇ ಒಂದು ಸಾಲಿನಲ್ಲಾದರೂ hate mongering, ad hominem, digressing ವಾದ ಕಂಡು ಬಂದಿದೆಯೇ? ಖಂಡಿತಾ ಇಲ್ಲ. ಒಂದು ವೇಳೆ  ಇದೆ ಎಂದು ಯಾರಾದರೂ ಹೇಳಿದರೆ ಅವರು ನಗೆ ವಿರೋಧಿಗಳು, ಜೀವವಿರೋಧಿಗಳು, ಧರ್ಮ ವಿರೋಧಿಗಳು… losers!

ನಿರೀಕ್ಷಿಸಿ ಪ್ರತಂಪು ಸಿಂಹರ ಲೇಖನ!

22 ಫೆಬ್ರ

ನಗೆ ನಗಾರಿಗೆ ಮೊದಲ ವರ್ಷ ತುಂಬಿದಾಗ ಕನ್ನಡದ ಖ್ಯಾತ ಪತ್ರಕರ್ತ ಗವಿ ಬಿಳಿಗೆರೆ ವಿಶೇಷ ಲೇಖನವೊಂದನ್ನು ಬರೆದುಕೊಟ್ಟಿದ್ದರು. ನಗೆ ನಗಾರಿ ಡಾಟ್ ಕಾಮ್ ಬಗ್ಗೆ ಹಾಗೂ ನಮ್ಮ ಬಗ್ಗೆ ಏನಾದರೂ ನಾಲ್ಕು ಮಾತು ಬರೆಯುತ್ತಾರೆ ಎಂದು ನಿರೀಕ್ಷಿಸಿದ್ದ ನಮಗೆ ಗವಿಯವರ ಚಿಕ್ಕ ಆಟೋ`ಭಯಾಗ್ರಫಿ’ ಓದಲು ಸಿಕ್ಕಿತು. ಅದು ನಗಾರಿ ವಿಶೇಷ ಲೇಖನವಾಗುವ ಬದಲು ಗವಿ ಬಿಳಿಗೆರೆ ಸಾಮಾನ್ಯ ಲೇಖನವಾಗಿ ಹೋಗಿತ್ತು.

ಹೀಗಾಗಿ ಎರಡನೆಯ ವರ್ಷದ ಹುಟ್ಟು ಹಬ್ಬದ ಸಂಭ್ರಮಕ್ಕೆ ಯಾರ ಕೈಲಿ ವಿಶೇಷ ಲೇಖನ ಬರೆಸುವುದು ಎಂದು ಚಿಂತೆಗಿಟ್ಟುಕೊಂಡಿತು. ನಾಡಿನ ಹೆಸರಾಂತ ಬರಹಗಾರರಿಗೆಲ್ಲ ತಮ್ಮ ಬಗ್ಗೆಯೇ ಹೇಳಿಕೊಳ್ಳುವುದಕ್ಕೆ ವೇದಿಕೆಗಳು ಸಾಕಾಗುತ್ತಿಲ್ಲ ಹೀಗಿರುವಾಗ ಎರಡು ವರ್ಷ ತುಂಬಿದ ನಗೆ ನಗಾರಿಯ ಬಗ್ಗೆ ಮಾತನಾಡುವವರನ್ನೇ ಆರಿಸಬೇಕು ಎಂಬುದು ನಮ್ಮ ಏಕ ಸದಸ್ಯ ಸಾಮ್ರಾಜ್ಯದ ಒಕ್ಕೊರಲಿನ ತೀರ್ಮಾನವಾಯ್ತು.

ವಸ್ತುನಿಷ್ಠತೆಗೆ ಹೆಸರುವಾಸಿಯಾದ, ಯುವ ಅಂಕಣಕಾರ ನಮ್ಮ ಕಣ್ಣಿಗೆ ಬಿದ್ದರು. ಕಳೆದ ಹಲವು ವರ್ಷಗಳಿಂದ ತಮ್ಮ `ಯುವ ಅಂಕಣಕಾರ’ ಟೈಟಲನ್ನು ಉಳಿಸಿಕೊಂಡು ಬಂದಿರುವ ಶ್ರೀಯುತ ಪ್ರತಂಪು ಸಿಂಹರಿಗೆ ನಮ್ಮ ಸಾಮ್ರಾಜ್ಯದ ಬಗ್ಗೆ ವಿಸ್ತೃತವಾದ ಲೇಖನ ಬರೆಯಲು ಕೇಳಿಕೊಂಡೆವು. ಅದಕ್ಕೆ ಪ್ರತಂಪು ಸಿಂಹರು ಕೂಡಲೇ ಒಪ್ಪಿಕೊಂಡರು. ನಿಮ್ಮ ಹೆಸರಿನಲ್ಲೇ ಲೇಖನ ಬರೆಯಬೇಕು ಎಂದಾಗ ತುಸು ವಿಚಲಿತರಾದರು. ತೊಣಚಪ್ಪ ಎರಡು ನಿಮಿಷ ವಿವರಿಸಿದ ನಂತರ ತಮ್ಮ ಹೆಸರಿನಲ್ಲಿಯೇ ಲೇಖನ ಬರೆಯಲು ಒಪ್ಪಿಕೊಂಡರು.

ಪ್ರತಂಪು ಸಿಂಹರ ವಿಶೇಷ ಲೇಖನವು ಎರಡು ವರ್ಷ ತುಂಬಿದ ಸಂಭ್ರಮದಲ್ಲಿರುವ ನಗಾರಿ ಓದುಗರ ಖುಷಿ ಇಮ್ಮಡಿಸೀತು ಎಂಬುದು ನಮ್ಮ ಆಶಯ!

– ನಗೆ ಸಾಮ್ರಾಟ್

ಡುಂ ಡುಂ ಡುಂ ಡುಂ ಡುಂ !

16 ಫೆಬ್ರ

ಪ್ರಜಾ ದರ್ಬಾರ್ 3

 

ತಮ್ಮ ಪತ್ರಿಕೆ, ಬ್ಲಾಗುಗಳ ಹುಟ್ಟು ಹಬ್ಬದ ದಿನ ಅವುಗಳ ಸಂಪಾದಕರು, ಮಾಲೀಕರು ಕಂಡಕಂಡವರಿಂದ ಅಭಿನಂದನೆಗಳನ್ನು ಬೇಡಿ ಪಡೆಯುತ್ತವೆ. ಬ್ಲಾಗನ್ನು ಎಂದೂ ಓದದ ದೊಡ್ಡವರಿಂದ ವಿಮರ್ಶೆಗಳನ್ನು ಸಂಪಾದಿಸಿ ಪ್ರಕಟಿಸುತ್ತವೆ. ನಗೆ ನಗಾರಿ ಡಾಟ್ ಕಾಮ್‌ಗೆ ಎರಡು ವರ್ಷ ತುಂಬಿದ ಸಂತಸದ ಸಂರ್ಭದಲ್ಲಿ ನಾವು ಅದೇ ಸಂಪ್ರದಾಯ ಪಾಲಿಸಲು ಇಚ್ಛಿಸುವುದಿಲ್ಲ.

ನಮ್ಮ ಬ್ಲಾಗಿನ ನಿಯಮಿತ ಓದುಗರಾದ, ಸತ್ರ್ಪಜೆಗಳಾದ ಮಂದಿಯಿಂದ ಅವರ ಪ್ರಾಮಾಣಿಕ ಅನಿಸಿಕೆಯನ್ನ ಕೇಳಿದ್ದೇವೆ. ಅದನ್ನು ಚೂರೂ ಕತ್ತರಿಸದೆ ಪ್ರಕಟಿಸುತ್ತೇವೆ. ನಗೆ ನಗಾರಿ ಡಾಟ್ ಕಾಮ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ನೇರವಾಗಿ ಕಳಿಸಬಹುದು (nagesamrat [at] gmail.com)

– ನಗೆ ಸಾಮ್ರಾಟ್

ಎರಡು ವರ್ಷದ ಹಿಂದೆ ಊಂ … ಎಂದು ಅಳುತ್ತಿದ್ದ ನಗಾರಿಯು ಇಂದು ಎರಡು ವರ್ಷದ ಪೋರನಾಗಿ ಹಾಸ್ಯ ಡಿಂಡಿಮವ ಬಾರಿಸುತ್ತಿದೆ .

ನಗೆ ಸಾಮ್ರಾಜ್ಯದ ರಾಜರ ಅಸ್ತಿತ್ವ – ಗುರುತು ಪರಿಚಯಗಳಿಲ್ಲದೆ ಇದ್ದರೂ ಎಲ್ಲರೂ ಆ ಹಾಸ್ಯ ನಗಾರಿಯ ಶಬ್ದಕ್ಕೆ ಕಾಯುತ್ತಿರುವಂತೆ ಮಾಡಿದ್ದು ಸತ್ಯ .

ಸ್ವಲ್ಪ ಸಿಹಿ , ಸ್ವಲ್ಪ ಕಹಿ , ಸ್ನೇಹಿತರ ಪ್ರಶಂಸೆ , ಕೆಲವರ ಕುಹಕ / ವ್ಯಂಗ್ಯ  ಎಲ್ಲವನ್ನು ಜೀರ್ಣಿಸಿಕೊಂಡು ಇಷ್ಟು ದೊಡ್ದವನಾಗಿರುವ ಈ "ಜೋಕುಮಾರ "   ನಗುತ್ತ ನಗಿಸುತ್ತಾ ನೂರ್ಕಾಲ ಬಾಳಲಿ ಎಂದು ಹಾರೈಸುತ್ತೇನೆ

– ಸುಮಂತ ಶ್ಯಾನುಭಾಗ್ ವಿ .

ಈ ವರ್ಷವಾದರೂ ಸಾಮ್ರಾಜ್ಞಿಯ ಆಯ್ಕೆಯಾಗಲಿ

15 ಫೆಬ್ರ

ಪ್ರಜಾ ದರ್ಬಾರ್ ೨

ಸಾಮ್ರಾಟರೇ,

ಹೆಕ್ಕಿ ಕೆದಕಿ ನೀವು ಮಾಡುವ ವಿಶಿಷ್ಟ ವ್ಯಕ್ತಿಗಳ ಸಂದರ್ಶನಗಳ ಬಗ್ಗೆ, ತಟಕ್ಕಂತ ಆತ್ಮಹತ್ಯೆ ಮಾಡಿಕೊಂಡು ಬಿಡುವ ನಿಮ್ಮ ಬಗ್ಗೆ, ಅಷ್ಟೇ ವೇಗವಾಗಿ ಪ್ರತ್ಯಕ್ಷವಾಗುವ ನಿಮ್ಮ ಆಲ್ಟರ್ ಈಗೋ ಬಗ್ಗೆ, ನಿಮ್ಮ ಚೇಲ ಕುಚೇಲ, ಚೇಲರಲ್ಲದ ತೊಣಚಪ್ಪರ ಬಗ್ಗೆ ವಿಸ್ತೃತವಾದದ್ದೊಂದು ವಿಮರ್ಶೆ ಬರೆದು ಅವನ್ನು ಹಲವು ಸಂಪುಟಗಳಲ್ಲಿ ಬಿಡುಗಡೆ ಮಾಡಬೇಕೆಂದಿದ್ದ ನಾನು, ನನ್ನ ಆಸೆಯನ್ನು ಮೊಟಕುಗೊಳಿಸಿ, ಎರಡನೇ ವರ್ಷಾಚರಣೆಯ ಸಂಧರ್ಭದಲ್ಲಿ ನಗೆನಗಾರಿಯ ಬಗ್ಗೆ ಕೆಲವೇ ಮಾತುಗಳಲ್ಲಿ ಹೇಳಿಮುಗಿಸುತ್ತೇನೆ.

ನನಗೆ ಗೊತ್ತಿರುವ ಮಟ್ಟಿಗೆ ಕನ್ನಡ ಬ್ಲಾಗುಗಳಲ್ಲಿ ನಗೆನಗಾರಿಯಂತದ್ದು ಒಂದೇ ಪ್ರಯತ್ನ, ಅದು ನಿಮ್ಮಿಂದಾದದ್ದು. ನಗೆನಗಾರಿಯ ಹಾಸ್ಯದ ವಿಶಿಷ್ಟ ಶೈಲಿ, ಹೊಸ ಪ್ರಯೋಗಗಳು ಮನಸ್ಸಿಗೆ ಹಿಡಿಸುತ್ತವೆ. ಇದ್ದಕ್ಕಿದ್ದಂತೆ ಅಂತರ್ಧಾನವಾಗುವ ಸಾಮ್ರಾಟರ ಬಗ್ಗೆ, ಹೈಪ್ ಮೂಡಿಸಿ ಸುಮ್ಮನಾದ ಸಾಮ್ರಾಜ್ಞಿಯ ಪಟ್ಟದ ಬಗ್ಗೆ ಸರಿಯಾದ ಸ್ಪಷ್ಟನೆಗಳು ಸಿಕ್ಕಿಲ್ಲವಾದಾಗ್ಯೂ ನಗೆನಗಾರಿಯು ನನ್ನ ನೆಚ್ಚಿನ ಬ್ಲಾಗ್ ಗಳಲ್ಲೊಂದು ಎಂಬುದನ್ನು ತಳ್ಳಿಹಾಕಲಾರೆ.  ನಗೆ ನಗಾರಿಯ ಧ್ವನಿ ಹೀಗೆ ಮೊಳಗುತಿರಲಿ ನಗಲು ಮರೆತವರನ್ನು ಬಡಿದು ಎಚ್ಚರಿಸುತ್ತಿರಲಿ, ಇನ್ನಷ್ಟು ಹಾಸ್ಯದ ಹೊನಲು ನಮ್ಮ ಸಾಮ್ರಾಟರಿಂದ ಹರಿದು ಬರಲಿ. ಈ ವರ್ಷವಾದರೂ ಸಾಮ್ರಾಜ್ಞಿಯ ಆಯ್ಕೆಯಾಗಲಿ ಎಂಬ ಹಾರೈಕೆಗಳೊಂದಿಗೆ….

– ಹೇಮ ಪವಾರ್, ಬೆಂಗಳೂರು

ಹಳೆ ಹೇರು, ಹೊಸ ಡೈಯು ಕೂಡಿರಲು ವಿಗ್ಗು ಸೊಗಸು!

14 ಫೆಬ್ರ

ಹಳೆಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು ಎಂಬ ಕವಿವಾಣಿಯಿದೆ. ಇದನ್ನು ವಕ್ರವಾಗಿ ಅರ್ಥ ಮಾಡಿಕೊಂಡು ನಾವು ಹಳೆ ಹೇರು ಹೊಸ ಡೈಯು ಕೂಡಿರಲು ವಿಗ್ಗು ಸೊಗಸು ಎಂದು ಹೊಸ ಕಪಿವಾಣಿಗೆ ಜನ್ಮ ನೀಡಿದ್ದೇವೆ.

ವಯಸ್ಸು ಮಾಗಿತು ಎಂದು ಕೂದಲ ವಿರಹದಲ್ಲಿ ನರಳುವ ಬಕ್ಕ ಹಣೆ, ಮುದುರಿದ ಮುಖದ ಚರ್ಮ, ನಡುಗುವ ಕೈಗಳು, ಬಾಗಿದ ಬೆನ್ನು, ಮಂದವಾದ ಕಣ್ಣು, ಕಿವಿಗಳು, ಧುಮ್ಮಿಕ್ಕಿ ಹರಿಯುವ ಬಾಲ್ಯದ ನೆನಪುಗಳು, ಬೇಡವೆಂದರೂ ತೆರೆದುಕೊಳ್ಳುವ ಅನುಭವ ಕಂತೆ ಇವೆಲ್ಲ ಸಾರಿ ಸಾರಿ ಹೇಳಿದರೂ ಕೂದಲಿಗೆ ಬಣ್ಣ ಬಳಿದುಕೊಂಡು, ಮುಖಕ್ಕೆ ಕ್ರೀಮು ಬಳಿದು ಕೊಂಡು ಹೊಸ ಚಿಗುರಿನ ಸಂಭ್ರಮ ಪಡುತ್ತಾರೆ.

ಈ ಜನಪ್ರಿಯ ಧೋರಣೆಗೆ ನಾವೇಕೆ ಅಪವಾದವಾಗೋಣ ಎಂದುಕೊಂಡು ನಾವೂ ಹೊಸ ಚಿಗುರು ಕಾಣುವ ಪ್ರಯತ್ನದಲ್ಲಿದ್ದೇವೆ. ಸಾಮ್ರಾಜ್ಯದಲ್ಲಿ ನೀಡಿದ ಭರವಸೆಗಳನ್ನು ನೆನಪಿಟ್ಟುಕೊಳ್ಳಲಾಗದ ಮಾಗಿದ ವಯಸ್ಸನ್ನು ಮುಟ್ಟಿದ ನಮ್ಮನ್ನು ಅಂತರ್ಜಾಲದ ಅನಭಿಷಿಕ್ತ ದೊರೆಯಾಗಿಸುವ ನಾರದ, ಕುಚೇಲರ ಉತ್ಸಾಹಕ್ಕೆ ತಣ್ಣೀರೆರಚುವ ಮನಸ್ಸಾಗಲಿಲ್ಲ.

ಜಗತ್ತಿಗೆ ಜಗತ್ತೇ ಓಬಿರಾಯನ ಕಾಲದ್ದು ಎನ್ನುವಂತಾಗಿರುವ ಟ್ವಿಟರಿಗೆ ನಮ್ಮನ್ನು ಇವರು ಪರಿಚಯಿಸಿದರು. ನಮ್ಮ ಅಗಣಿತ ಪಾಂಡಿತ್ಯವನ್ನು, ಅನಂತ ಪ್ರತಿಭೆಯನ್ನೂ 140 ಅಕ್ಷರಗಳಿಗೆ ಇಳಿಸುವ ಶ್ರಮ ವಿವರಿಸುವುದೆಂತು? ನಗಾರಿಯಲ್ಲಿ ಪುಟಗಟ್ಟಲೆ ಕೊರೆಯುವ ನಮಗೆ ಅದು ಬಹುದೊಡ್ಡ ವೈಕಲ್ಯವೇ ಆಗಿ ಹೋಗಿತ್ತು.

ಫೇಸ್ ಇಲ್ಲದ ನಮ್ಮನ್ನು ಒಯ್ದು ಫೇಸ್ ಬುಕ್ಕಿಗೂ ಅಂಟಿಸಿಬಿಟ್ಟರು. ನಮ್ಮ ವಜನು, ಆರಾ, ಗ್ಲಾಮರುಗಳಿಗೆ ಮರುಳಾಗಿ ಕನ್ಯಾಮಣಿಗಳು ಮುಗಿಬೀಳಬಾರದೆಂಬ ಎಚ್ಚರಿಕೆಯಿಂದ ನಮ್ಮ ಅಸಲಿ ಜನ್ಮ ದಿನಾಂಕವನ್ನೇ ಪ್ರಕಟಿಸಿದ್ದೇವೆ.

ಎರಡನೆಯ ವರ್ಷದ ಹುಟ್ಟು ಹಬ್ಬದ ಸಂದರ್ಭ ನಾನಾ ಹೊಸತನಗಳನ್ನು ನಗೆ ನಗಾರಿಗೆ ಸೇರಿಸುವ ಹುಮ್ಮಸ್ಸಿನಲ್ಲಿದ್ದೇವೆ. ಒಂದಿಷ್ಟು ದಿನ ಈ ಆರಂಭಶೂರತ್ವವನ್ನು ಸಹಿಸುವ ಜವಾಬ್ದಾರಿ ನಿಮ್ಮದು!

– ನಗೆ ಸಾಮ್ರಾಟ್

ಓದುಗರ ದುಃಖದ ಮೇಲೆ ಯುದ್ಧ ಜಾರಿಯಲ್ಲಿರಲಿ…..

14 ಫೆಬ್ರ

ತಮ್ಮ ಪತ್ರಿಕೆ, ಬ್ಲಾಗುಗಳ ಹುಟ್ಟು ಹಬ್ಬದ ದಿನ ಅವುಗಳ ಸಂಪಾದಕರು, ಮಾಲೀಕರು ಕಂಡಕಂಡವರಿಂದ ಅಭಿನಂದನೆಗಳನ್ನು ಬೇಡಿ ಪಡೆಯುತ್ತವೆ. ಬ್ಲಾಗನ್ನು ಎಂದೂ ಓದದ ದೊಡ್ಡವರಿಂದ ವಿಮರ್ಶೆಗಳನ್ನು ಸಂಪಾದಿಸಿ ಪ್ರಕಟಿಸುತ್ತವೆ. ನಗೆ ನಗಾರಿ ಡಾಟ್ ಕಾಮ್‌ಗೆ ಎರಡು ವರ್ಷ ತುಂಬಿದ ಸಂತಸದ ಸಂರ್ಭದಲ್ಲಿ ನಾವು ಅದೇ ಸಂಪ್ರದಾಯ ಪಾಲಿಸಲು ಇಚ್ಛಿಸುವುದಿಲ್ಲ.

ನಮ್ಮ ಬ್ಲಾಗಿನ ನಿಯಮಿತ ಓದುಗರಾದ, ಸತ್ರ್ಪಜೆಗಳಾದ ಮಂದಿಯಿಂದ ಅವರ ಪ್ರಾಮಾಣಿಕ ಅನಿಸಿಕೆಯನ್ನ ಕೇಳಿದ್ದೇವೆ. ಅದನ್ನು ಚೂರೂ ಕತ್ತರಿಸದೆ ಪ್ರಕಟಿಸುತ್ತೇವೆ. ನಗೆ ನಗಾರಿ ಡಾಟ್ ಕಾಮ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ನೇರವಾಗಿ ಕಳಿಸಬಹುದು (nagesamrat [at] gmail.com)

– ನಗೆ ಸಾಮ್ರಾಟ್

ಬ್ಲಾಗುಲೋಕದಲ್ಲಿ (ನಿಜವಾದ) ಹಾಸ್ಯ ಸಾಹಿತ್ಯ ತುಂಬಾ ಕಡಿಮೆ ಇದೆ. ಅದರ ಕೊರತೆ ನೀಗಿಸುವಲ್ಲಿ ನಿಮ್ಮ ಪ್ರಯತ್ನ ದೊಡ್ಡದು. ನನಗೆ ಪರ್ಸನಲ್ಲಾಗಿ ಈ ಬ್ಲಾಗ್ ಇಷ್ಟ ಯಾಕೆಂದರೆ ಇದರಲ್ಲಿನ ಜಾಣ್ಮೆಯುಕ್ತ ಬರಹಗಳು. ಹಾಸ್ಯ ಬರೆಯಲು ತುಂಬಾ ಬುದ್ಧಿಶಕ್ತಿ ಬೇಕು ಅನ್ನೋದು ನನ್ನಭಿಪ್ರಾಯ.( "ನನ್ನನ್ನು ನೋಡಿದರೆ ಹಾಗನ್ನಿಸುತ್ತದಾ?" ಅಂತ ಸ್ವತಃ ಅಚ್ಚರಿ ಪಡಬೇಡಿ). ಬರಹದಲ್ಲಿ ಅಲ್ಲದೇ ಪ್ರತಿಕ್ರಿಯೆಯಲ್ಲೂ ನಿಮ್ಮನ್ನು ಕೆಣಕುವುದು, ಅದಕ್ಕೆ ನೀವಿತ್ತ ಉತ್ತರಕ್ಕೆ ಅಚ್ಚರಿ ಪಡುವುದು ಇವು ನನಗಂತೂ ಸಾಮಾನ್ಯವಾಗಿಬಿಟ್ಟಿದೆ.

ಒಂದೆರಡು ಪಾಯಿಂಟುಗಳು ನಿಮ್ಮ ಮುಂದಿನ ದಾರಿಗೆ. ಆಗಾಗ್ಗೆ ಇನ್ನೇನು ನಿಂತುಬಿಡುತ್ತದೆ ಅನ್ನುವ ಭಯ ಪ್ರಜೆಗಳಿಗೆ ಇನ್ನು ಮುಂದಾದರೂ ಮೂಡಿಸದಿರಿ. ಹಾಗೇನೇ ಬರಹದಲ್ಲಿ ಇನ್ನಷ್ಟು ವೈವಿಧ್ಯತೆಗಳು ಬರಲಿ ಎಂಬ ಆಸೆ ವ್ಯಕ್ತಪಡಿಸುತ್ತೇನೆ. ಬರಹಗಳು ಚುರುಕಾಗಲಿ ಮತ್ತು ನಗದವರಿಗೆ ಚುರುಕು ಮುಟ್ಟಿಸಲಿ.

ಹೆಚ್ಚು ಕಾವ್ಯಾತ್ಮಕವಾಗಿ ಹೊಗಳಿದರೂ ನಮಗೆ ಚಿನ್ನದ ಹಾರ, ನೆಕ್ಲೇಸು, ಗಿಫ್ಟ್ ಹ್ಯಾಂಪರ್ರುಗಳು ಈ ಸಾಮ್ರಾಜ್ಯದಲ್ಲಿ ಗಿಟ್ಟುವುದು ಅಷ್ಟರಲ್ಲೇ ಇದೆ ಎಂಬ ಸತ್ಯದ ಅರಿವಿರುವುದರಿಂದ ನನ್ನ ಮಾತು ಇಷ್ಟಕ್ಕೇ ಮುಗಿಸುವೆ.

ಸಾಮ್ರಾಜ್ಯದಲ್ಲಿ ನಗಾರಿ ಮೊಳಗುತಿರಲಿ. ಓದುಗರ ದುಃಖದ ಮೇಲೆ ಯುದ್ಧ ಜಾರಿಯಲ್ಲಿರಲಿ.

-ರಂಜಿತ್ ಅಡಿಗ, ಸಿಂಗಾಪುರ

ಹುಟ್ಟು ಹಬ್ಬಕ್ಕೆ ವಿಷ್ ಮಾಡುವುದಿಲ್ಲವೇ?

13 ಫೆಬ್ರ

ನಗೆ ನಗಾರಿ ಡಾಟ್ ಕಾಮ್ ಎಂಬ ನಗೆಯ ಸಾಮ್ರಾಜ್ಯ ಸ್ಥಾಪನೆಯಾಗಿ ಜನವರಿ ೨೭ಕ್ಕೆ ಎರಡು ವರ್ಷಗಳು ಸಂಪೂರ್ಣವಾದವು. ವಿಜಯ ನಗರ ಸಾಮ್ರಾಜ್ಯದಲ್ಲಿ ಬೀದಿ ಬೀದಿಯಲ್ಲಿ ಮುತ್ತು ರತ್ನಗಳನ್ನು ಅಕ್ಕಿ ಬೇಳೆ ವ್ಯಾಪಾರ ಮಾಡಿದಂತೆ ಮಾರುತ್ತಿದ್ದರಂತೆ. ಆ ಭವ್ಯ ನಗರದ ನೆನಪನ್ನು ಹಸಿರಾಗಿಡುವುದಕ್ಕಾಗಿ ನಮ್ಮ ನಾಯಕರುಗಳು ಮಾಡಿರುವ ಸಾಧನೆಯನ್ನು ನೆನೆಯಲೇಬೇಕು. ಥೇಟ್ ವಿಜಯನಗರದ ಕಾಲದ ಟಾರಿಲ್ಲದ ಬೀದಿಯಲ್ಲಿ ನಿಂತು ಅಕ್ಕಿ ಬೇಳೆಗಳನ್ನು ಮುತ್ತು ರತ್ನಗಳನ್ನು ಕೊಳ್ಳುವ ಹಾಗೆ ಖರೀದಿ ಮಾಡುವ ಭಾಗ್ಯವಂತರು ನಾವೆಲ್ಲ. ನಗಾರಿ ಸಾಮ್ರಾಜ್ಯವೇನು ಕಡಿಮೆಯದಲ್ಲ. ಇಲ್ಲಿ ನಟ್ಟ ನಡು ಬೀದಿಯಲ್ಲಿ ಜನರು ಮುತ್ತುಗಳಂತಹ ತಮ್ಮ ಹಲ್ಲುಗಳನ್ನು ಕಿರಿದು ನಗುವಿನ ವಹಿವಾಟು ನಡೆಸುತ್ತಾರೆ. ಎರಡೇ ವರ್ಷಗಳಲ್ಲಿ ನಲವತ್ಮೂರು ಚಿಲ್ಲರೆ ಸಾವಿರ ಸ್ಮೈಲುಗಳು ಮಿನುಗಿವೆ!

ಈ ಎರಡು ವರ್ಷದಲ್ಲಿ ಏನೇನೆಲ್ಲ ನಡೆದಿದೆ! ಆದರೆ ಇದೆಲ್ಲ ಇನ್ನೂ ಪ್ರಾರಂಭವಷ್ಟೇ… ಎರಡು ವರ್ಷದ ಮಗು ಅಂಗಾಲಿನ ಮೇಲೆ ಚಲಿಸುತ್ತ ಮೆಲ್ಲಗೆ ಗೋಡೆ ಹಿಡಿದು ಎದ್ದು ನಿಲ್ಲುವ ಪ್ರಯತ್ನ ಮಾಡುತ್ತಿದೆ. ನೀವು ಸಾಧ್ಯವಾದಷ್ಟು ನಿಮ್ಮ ಕೈಗಳನ್ನು ದೂರವಿರಿಸಿಕೊಳ್ಳುವ ಮೂಲಕ ಅದರ ಓಟಕ್ಕೆ ನೆರವಾಗ ಬೇಕಾಗಿ ವಿನಂತಿ!

ಎರಡನೆಯ ವರ್ಷದ ಹುಟ್ಟುಹಬ್ಬಕ್ಕೆ ವಿಷ್ ಮಾಡುವುದಿಲ್ಲವೇ?

– ನಗೆ ಸಾಮ್ರಾಟ್

ಗವಿ ಬಿಳಿಗೆರೆ ಲೇಖನ: ಸಿಗರೇಟಿನ ಮೊನೆಗೆ ಬೆಂಕಿ ತಾಗಿಸುವ ಹೊತ್ತಲ್ಲಿ ಕಂಡ ಮುಖದ ಕುರಿತು…

21 ಆಗಸ್ಟ್

ನಗೆ ನಗಾರಿ ಡಾಟ್ ಕಾಮ್ ವಾರ್ಷಿಕೋತ್ಸವ ವಿಶೇಷಾಂಕಕ್ಕಾಗಿ ಖ್ಯಾತ ಪತ್ರಕರ್ತ, ಪತ್ರಿಕೋದ್ಯಮಿ, ರೇಡಿಯೋ ಜಾಕಿ, ಟಿವಿ ಆಂಕರ್, ನಟ, ನಿರ್ದೇಶಕ, ನಿರ್ಮಾಪಕ, ತಮ್ಮ ಸಿನೆಮಾದ ಏಕೈಕ ವೀಕ್ಷಕರಾದ ಗವಿ ಬಿಳಿಗೆರೆ ಬರೆದ ಲೇಖನವಿದು.

ನಾನು ಬೆಂಗಳೂರನ್ನು ಬಿಟ್ಟು ಹೋಗುವುದು ಬಂಗಾರಪ್ಪ ಒಂದು ಪಕ್ಷ ಬಿಟ್ಟು ಹೋಗುವಷ್ಟೇ ಸಾಮಾನ್ಯ. ಪತ್ರಿಕೆಯ ಕೆಲಸವನ್ನೆಲ್ಲಾ 200px-RaviBelagere ಮಾಡಿ ಮುಗಿಸಿ ದಣಿದ ಬೆರಳುಗಳನ್ನು ಲೈಟ್ ಆಗಿ ಮಸಾಜ್ ಮಾಡುವುದಕ್ಕೆ ರವೀಶನಿಗೆ ಬಿಟ್ಟುಬಿಡುತ್ತೇನೆ.

ರವೀಶ ನನಗೆ ಬೆನ್ನಲ್ಲಿ ಹುಟ್ಟಿದ ತಮ್ಮನಂಥ ಹುಡುಗ. ವರದಿಯೊಂದಕ್ಕೆ ಸಂಬಂಧಿಸಿದ ಇನ್ಪರ್ಮೇಶನ್ ಪಡೆಯುವುದಕ್ಕಾಗಿ ಇಡೀ ಬೆಂಗಳೂರಿನಲ್ಲಿ ಕುಖ್ಯಾತವಾದ ಕಲಾಸಿ ಪಾಳ್ಯದ ರಸ್ತೆಗಳಲ್ಲಿ ತಿರುಗುತ್ತಿದ್ದೆ. ಆ ಮಬ್ಬುಗತ್ತಲೆಯಲ್ಲಿ ನನ್ನ ಯಾರೂ ಗುರುತು ಹಿಡಿಯುವಂತಿರಲಿಲ್ಲ. ಮುಖ ಯಾವುದು ತಲೆ ಯಾವುದು ಎಂದು ತಿಳಿಯದಷ್ಟು ಹುಲುಸಾಗಿ ಬೆಳೆದ ಗಡ್ಡವಿತ್ತು ಜೊತೆಗೆ ವಿಲಕ್ಷಣವಾದ ಹ್ಯಾಟ್ ಇತ್ತು. ನನ್ನ ಮುಖ ಪರಿಚಯ ಯಾರಿಗಾದರೂ ಸಿಕ್ಕುವ ಛಾನ್ಸೇ ಇರಲಿಲ್ಲ. ವರದಿಗೆ ಬೇಕಾದ ಇನ್ಫರ್ಮೇಶನ್ ಹುಡುಕುವುದು ಸಾಮಾನ್ಯ ಕೆಲಸವಲ್ಲ. ಈ ಕೆಲಸ ಮಾಡುವ ಕ್ರೈಂ ರಿಪೋರ್ಟರ್ ಒಬ್ಬನಿಗೆ ಪಾತಕ ಲೋಕದ ಗಲ್ಲಿಗಲ್ಲಿಯ ಪರಿಚಯವಿರಬೇಕು. ರೌಡಿಯೊಬ್ಬ ಕನಸಿನಲ್ಲಿ ಹಾಕುವ ಹೊಂಚಿನ ವಾಸನೆ ರಿಪೋರ್ಟರ್ ಆದವನಿಗೆ ಹಿಂದಿನ ರಾತ್ರಿ ಗುಂಡು ಹಾಕುವಾಗಲೇ ಮೂಗಿಗೆ ಬಡಿದಿರಬೇಕು. ನಾನು ಆ ಅಮವಾಸ್ಯೆ ಕಳೆದ ರಾತ್ರಿಯಲ್ಲಿ ಕಲಾಸಿ ಪಾಳ್ಯದ ಬಸ್ ಸ್ಟ್ಯಾಂಡಿನ ಕಲ್ಲು ಬೆಂಚಿನ ಮೇಲೆ ಕುಳಿತು ಸಿಗರೇಟು ಹಚ್ಚಿದೆ. ಇನ್ಫರ್ಮೆಂಟ್ ಬರುವುದು ತಡವಾಗುವ ಸೂಚನೆ ಸಿಕ್ಕಿತು. ನಾನು ತುಸುವೂ ಯೋಚನೆಯಿಲ್ಲದೆ ಯಾರ ಮಾನವನ್ನಾದರೂ  ಕಳೆದುಬಿಡಬಲ್ಲೆ ಆದರೆ ಸಮಯವನ್ನು ವ್ಯರ್ಥವಾಗಿ ಕಳೆಯಲಾರೆ. ಕಿಸೆಯಿಂದ ಪುಟ್ಟ ನೋಟ್ ಬುಕ್ ತೆರೆದು ಬಸ್ ಸ್ಟ್ಯಾಂಡಿನ ಸೋಡಿಯಂ ದೀಪದ ಮಬ್ಬು ಬೆಳಕಿನಲ್ಲಿ ಬರೆಯ ತೊಡಗಿದೆ. ಹಾಗೆ ಬರೆಯಲು ಕೂತವನಿಗೆ ಸಮಯ ಕಳೆದದ್ದೇ ತಿಳಿವಿಗೆ ಬರಲಿಲ್ಲ, ಅಂಗೈ ಅಗಲದ ನೋಟ್ ಬುಕ್ಕಿನ ಹಾಳೆಗಳೆಲ್ಲಾ ತುಂಬಿ ಹೋದದ್ದು ತಿಳಿದ ಮೇಲೆ ತಲೆ ಮೇಲಕ್ಕೆ ಎತ್ತಿದ್ದೆ. ಮಬ್ಬು ಬೆಳಕಿನಲ್ಲಿ ಬರೆದದ್ದಕ್ಕೋ ಏನೋ ಕಣ್ಣುಗಳು ವಿಪರೀತ ಉರಿಯುತ್ತಿದ್ದವು. ಬೆರಳುಗಳಲ್ಲಿ ಸಣ್ಣಗೆ ನೋವು ಕಾಣತೊಡಗಿತ್ತು. ಬೆರಳುಗಳನ್ನು ಹಿಚುಕಿಕೊಳ್ಳುತ್ತಾ ಅತ್ತಿತ್ತ ಓಡಾಡತೊಡಗಿದೆ.

“ಅಣ್ಣಾ, ಬೆರಳು ಒತ್ತಲಾ?” ಹಿಂದಿನಿಂದ ಪುಟ್ಟ ಆಕೃತಿಯೊಂದು ಚಲಿಸಿತು. ನಾನು ಕೂಡಲೇ ಅಲರ್ಟ್ ಆದೆ. ಕಿಸೆಯಲ್ಲಿದ್ದ ರಿವಾಲ್ವರ್ ತಡಕಿದೆ. ಹಿಂತಿರುಗಿ ನೋಡಿದೆ. ಆತ ಯಾವುದೋ ಕಥೆಯಿಂದ ಇಳಿದು ಬಂದ ಪಾತ್ರದಂತಿದ್ದ. ಮಾಸಲು ಬಟ್ಟೆ, ಬರ್ಮುಡ ಥರದ್ದೊಂದು ಹಳಸಲು ಚಡ್ಡಿ ಹಾಕಿದ್ದ. ಕೂದಲು ಕರೆಗಟ್ಟಿತ್ತು. ಮತ್ತೊಮ್ಮೆ ಗೊರಲು ಧ್ವನಿಯಲ್ಲಿ, “ಅಣ್ಣಾ ಬೆರಳು ನೋಯ್ತಿದ್ರೆ, ನಾನು ಮಸಾಜ್ ಮಾಡ್ತೀನಿ” ಅಂದ.

ನಾನು respond ಮಾಡುವ ಮೊದಲೇ ನನ್ನ ಕೈ ಸೆಳೆದುಕೊಂಡು ಬೆರಳುಗಳನ್ನು ನೀವಲು ಶುರು ಮಾಡಿದ. ನನಗೆ ಹಾಯೆನಿಸಿತು. ಅಲ್ಲಿಗೆ ನಾನು ಬಂದಿದ್ದ ಕೆಲಸವೇ ಮರೆತುಹೋಗುವಷ್ಟರ ಮಟ್ಟಿಗೆ relax ಆಗಿದ್ದೆ. ಆಗಿನಿಂದ ಬೆನ್ನಿಗೆ ಬಿದ್ದವನು ಈ ರವೀಶ.

ಆತ ನನ್ನ ಬೆರಳುಗಳಿಗೆ ಅದೆಂಥದ್ದೋ ಎಣ್ಣೆಯನ್ನು ತಿಕ್ಕಿ ಮಸಾಜ್ ಮಾಡುವಾಗ ನಾನು ಕಿಟಕಿಯಿಂದ ಹೊರಗೆ ಕಣ್ಣು ಹಾಯಿಸುತ್ತೇನೆ. ಮಳೆ ಕರೆಯದೆ ಮುಂದೆ ಹೋಗುತ್ತಿರುವ ಮೋಡಗಳು ಕಾಣುತ್ತವೆ. ಇದೇ ಕಪ್ಪು ಆಕಾಶವನ್ನು ಎಂತೆಂಥ ನೆಲದ ಮೇಲೆ ನಿಂತು ನೋಡಿಲ್ಲ? ಎನ್ನಿಸತೊಡಗುತ್ತೆ.

ಅದು ೨೦೦೧ರ ಆಸುಪಾಸು. ಪತ್ರಿಕೆಯ ಕೆಲಸ ಮುಗಿಸಿ ಹುಡುಗರಿಗೆ instructions ಕೊಟ್ಟು ನಾನು ವಿಮಾನ ನಿಲ್ದಾಣಕ್ಕೆ ಹೊರಟೆ. ದಕ್ಷಿಣ ಆಫ್ರಿಕಾಕ್ಕೆ ನೆಗೆಯಲು ವಿಮಾನ ಕಾದು ನಿಂತಿತ್ತು. ಉಳಿದೆಲ್ಲರೂ ಸಾಲ ಸೋಲ ಮಾಡಿಯೋ, ಸರ್ಕಾರದ sponsorship ನಿಂದಲೋ ವಿದೇಶ ಸುತ್ತುವುದಕ್ಕೆ ಹೋಗುವಾಗ ಅಮೇರಿಕಾ, ಫ್ರಾನ್ಸು, ಸ್ವಿಟ್ಜರ್ ಲ್ಯಾಂಡುಗಳಂಥ ದೇಶಗಳಿಗೆ ಹೋಗುತ್ತಾರೆ. ನನಗೆ ಅದೇನು ತೆವಲೋ, ಇದುವರೆಗೂ ಯಾರೂ ಕಾಲಿಡದಿದ್ದ ದೇಶಗಳಿಗೆ ಅಲೆದಿದ್ದಾನೆ, ಅಜ್ಞಾತವಾದ ದೇಶಗಳ ದುರ್ಗಮವಾದ ಕಾಡುಗಗಳಲ್ಲಿ ಬರಿಗಾಲ ಫಕೀರನಂತೆ ನಡೆದಿದ್ದೇನೆ. ಹಾಗೆ ಅಲೆಯುವಾಗ ನೆರಿಗೆ ಲಂಗದ ಹುಡುಗಿ ನೆನೆಪಾಗುತ್ತಾಳೆ, ತುಮಕೂರಿನ ರಸ್ತೆಗಳು ನೆನಪಾಗುತ್ತವೆ. ಅವಳ ಮೋಸದಿಂದಲೇ ಅಲ್ಲವೇ ನಾನಿವತ್ತು ಅವಡುಗಚ್ಚಿ ಈ ಕಾಡಿನಲ್ಲಿ ಹೆಜ್ಜೆ ಹಾಕುತ್ತಿರುವುದು ಅನ್ನಿಸುತ್ತದೆ.

ನಿಜ ಹೇಳಬೇಕೆಂದರೆ, ಈ ಬಾರಿ ನಾನು ದಕ್ಷಿಣ ಆಫ್ರಿಕಾಕ್ಕೆ ಹೊರಟಿದ್ದು  ಅಲ್ಲಿ ತಲೆ ಮರೆಸಿಕೊಂಡಿರುವ ಮುಂಬೈ ಭೂಗತ ಜಗತ್ತಿನ ಡಾನ್‌ನನ್ನು ಭೇಟಿಯಾಗಲು. ಜೊಹಾನ್ಸ್ ಬರ್ಗಿನ ಗ್ರ್ಯಾಂಡ್ ಸೆಂಟ್ರಲ್ ಏರ್‌ಪೋರ್ಟಿನಲ್ಲಿ ಇಳಿದು ವಿಮಾನ ನಿಲ್ದಾಣದ ಹೊರಗಿನ ಅಂಗಡಿಯೊಂದರಲ್ಲಿ ಸಿಗರೇಟು ಖರೀದಿಸಿ ಬೆಂಕಿ ಹೊತ್ತಿಸಲು ತುಸು ಧಾವಂತದಲ್ಲಿ ಪಕ್ಕಕ್ಕೆ ತಿರುಗಿದೆ.

“Easy Gentleman!” ಕಂಚಿನ ಕಂಠದ ಧ್ವನಿಯೊಂದು ಮೊಳಗಿತು. ಕತ್ತೆತ್ತಿ ನೋಡಿದೆ. ಆಜಾನುಬಾಹು ವ್ಯಕ್ತಿಯೊಬ್ಬ ನಗುತ್ತ ನಿಂತಿದ್ದ. ನನಗಿಂತ ಸುಮಾರು ಎರಡು ಅಡಿ ಎತ್ತರವಿದ್ದ ಆತನನ್ನು ನಾನು ಕತ್ತೆತ್ತಿ ನೋಡಬೇಕಾಯಿತು. ಆತನ ಬಿಗಿ ದೇಹ ಒಮ್ಮೆಗೇ ನನ್ನನ್ನು attract ಮಾಡಿತು. ಕೂಡಲೇ ಈತ ರೆಗ್ಯುಲರ್ ಆಗಿ exercise ಮಾಡುವಾತ ಎಂದು ತಿಳಿಯಿತು. ಆತನ ಮುಖವನ್ನು ಗಮನಿಸಿದೆ. ಎಲ್ಲೋ ನೋಡಿದ ನೆನಪಾಯಿತು.

ನೆಲ್ಸನ್ ಮಂಡೇಲ!

ದಕ್ಷಿಣ ಆಫ್ರಿಕಾದಲ್ಲಿ ಕರಿಯರನ್ನು exploit ಮಾಡುವ ವರ್ಣ ಪದ್ಧತಿಯ ವಿರುದ್ಧ ಹೋರಾಡಿ, ಅಪಾದನೆಗೊಳಗಾಗಿ ಇಪ್ಪತ್ತೇಳು ವರ್ಷ ರೊಬೆನ್ ದ್ವೀಪದಲ್ಲಿ ಸೆರೆವಾಸ ಅನುಭವಿಸಿದವ ಮಂಡೇಲ. ವರ್ಣ ವ್ಯವಸ್ಥೆಯನ್ನು ಕಿತ್ತೊಗೆದು ನಂತರ ದಕ್ಷಿಣ ಆಫ್ರಿಕಾದ ಅಧ್ಯಕ್ಷನಾದ.

ಬೆಂಕಿ ಕೊಡಬೇಕಿದ್ದ ಸಿಗರೇಟನ್ನು ಕೈಲಿ ಹಿಡಿದುಕೊಂಡು ನಾನು ಕಣ್ಣು ಬಾಯಿ ಬಿಟ್ಟು ನೋಡನೋಡುತ್ತಿದ್ದಂತೆಯೇ ಆತ ಸರಸರನೆ  ನಡೆದು ಏರ್ ಪೋರ್ಟಿನೊಳಕ್ಕೆ ಹೊರಟುಹೋದ. ನಾನು ಸಿಗರೇಟ್ light ಮಾಡಿ ಹೊರಗೆ ಕಾರಿಡಾರಿನಲ್ಲಿ ನಾಲ್ಕು ಹೆಜ್ಜೆ ಹಾಕತೊಡಗಿದೆ. ಇದು ಈ ದಿನದ ಕಡೆಯ ಸಿಗರೇಟು ಎಂದು ನೆನಪಾಯಿತು. ಹದಿನೈದು ವರ್ಷಗಳಿಂದ ಸಿಗರೇಟು ಸಂಪೂರ್ಣವಾಗಿ ಬಿಟ್ಟು ಬಿಡುವ ಪ್ರಯತ್ನ ಮಾಡುತ್ತಲೇ ಇರುವೆ. ಹತ್ತನೆಯ ಸಂಚಿಕೆಯ ಪತ್ರಿಕೆಯಲ್ಲಿ ಸಿಗರೇಟಿನ ಬಗ್ಗೆ ಬರೆಯುವಾಗ ದಿನಕ್ಕೆ ಇಪ್ಪತ್ತಕ್ಕಿಂತ ಹೆಚ್ಚು ಸಿಗರೇಟು ಸೇದುತ್ತಿದ್ದೆ. “ಹೀಗೆ ಹೊಗೆ ಚಿಮಣಿಯ ಹಾಗೆ ಸೇದುತ್ತಿದ್ದರೆ 200px-RaviBelagerelungs ಸುಟ್ಟುಹೋಗುತ್ತವೆ. ಸತ್ತು ಹೋದರೆ ಬರೆಯೋಕೆ ಹೇಗೆ ಸಾಧ್ಯ? ನೀನು ಬರೆಯದೆ ಪತ್ರಿಕೆ ಹೊರಬರಲು ಹೇಗೆ ಸಾಧ್ಯ? ಅಸಂಖ್ಯಾತ ಓದುಗ ದೊರೆಗಳಿಗೆ ನೀನು ದ್ರೋಹ ಮಾಡಿದಂತಾಗುವುದಿಲ್ಲವಾ ರವೀ” ಎಂದು ಹಿರಿಯಣ್ಣನಂತಹ ಡಾಕ್ಟರ್ ಹೊಗೆಬತ್ತಿಯವರು ಗದರಿದಾಗಿನಿಂದ ಸಿಗರೇಟಿಗೆ ಕಡಿವಾಣ ಹಾಕ ತೊಡಗಿದೆ. ಈಗ ದಿನಕ್ಕೆ ಇಪ್ಪತ್ತು ಸಿಗರೇಟು ಸೇದುವುದಿಲ್ಲ. ಎರಡು ದಿನಕ್ಕೆ ನಲವತ್ತು ಮಾತ್ರ ಸೇದುವುದು.

ರಾತ್ರಿ ಹೊಟೇಲ್‌ನಲ್ಲಿ  ಅನುವಾದಿಸಿ ಮುಗಿಸಬೇಕಾದ ಸಿಡ್ನಿ ಶೆಲ್ಡನ್ನನ ಕಾದಂಬರಿಯ ಬಗ್ಗೆ ಚಿಂತಿಸುತ್ತಾ ಹೆಜ್ಜೆ ಹಾಕುತ್ತಿರುವಾಗ ಮೊಬೈಲ್ ರಿಂಗ್ ಆಯಿತು. ಫೋನ್ ಮಾಡಿದ್ದು ನಗೆ ಸಾಮ್ರಾಟರು , ಅದೀಗ ತಾನೆ ನಗೆನಗಾರಿಗೆ ಬರೆದು ಮುಗಿಸಿ ಆಫೀಸಿನ ಬಾಗಿಲು ಹಾಕಿ ನನಗೆ ಫೋನ್ ಮಾಡಿದ್ದರು. ಅಲ್ಲಿ ನಾನಿದ್ದ ದೇಶದಲ್ಲಿ ಆಗ ಮಧ್ಯಾನ ಎರಡೂವರೆ ಗಂಟೆ, ಇಲ್ಲಿ ಬೆಂಗಳೂರಲ್ಲಿ ಸಂಜೆ ಆರರ ಸಮಯ. ವಿಷಯ ಏನೆಂದು ಕೇಳಿದೆ.

“ರವೀ, ನಮ್ಮ ನಗೆನಗಾರಿ ಡಾಟ್ ಕಾಮ್‌ಗೆ ಒಂದು ವರ್ಷ ತುಂಬುತ್ತೆ ವಿಶೇಷಾಂಕ ತರ್ತಾ ಇದೀನಿ. ನೀನು ಏನಾದರೂ ಬರೀಬೇಕಲ್ಲ” ಅಂದಿತು ಅತ್ತಲಿನ ಧ್ವನಿ.

ನಗೆಸಾಮ್ರಾಟ ನನಗೆ ಅಣ್ಣನಂಥ ಗೆಳೆಯ. ನಾನು ಅದೆಷ್ಟೇ ತಮಾಶೆ ಮಾತಾಡಿದರೂ, ಟಿವಿ, ರೇಡಿಯೋದಲ್ಲಿ ಹಾಸ್ಯ ಮಾಡಿದರೂ, ಪತ್ರಿಕೆಯಲ್ಲಿ ಪೋಲಿ ಪ್ರಶ್ನೆಗಳಿಗೆ ಪೋಲಿಯಾಗಿ ಉತ್ತರ ಕೊಟ್ರೂ ಇದುವರೆಗೂ ಪಟ್ಟಾಗಿ ಕೂತು ಒಂದು ಹಾಸ್ಯ ಬರಹ ಅಂತ ಬರೆಯೋಕಾಗಿಲ್ಲ.

ನಂಗೆ ಈ ಮನುಷ್ಯನ ಬಗ್ಗೆ ಆಶ್ಚರ್ಯ ಆಗುತ್ತೆ. ಒಂದು ಚಿಕ್ಕಾಸೂ ಹುಟ್ಟದ ನಗೆನಗಾರಿ ಡಾಟ್ ಕಾಮ್ ನಂತಹ ಅದ್ಭುತ ಬ್ಲಾಗ್ ನಡೆಸುತ್ತಿದ್ದಾನೆ. ಒಬ್ಬನೇ ಕೂತು ಸಾಕಷ್ಟು ಬರೀತಾನೆ. ನನ್ನಷ್ಟು ವರ್ಕೋಹಾಲಿಕ್ ಅಲ್ಲದಿದ್ರೂ ಚೆನ್ನಾಗಿ ಕೆಲಸ ಮಾಡ್ತಾನೆ. ಅದ್ಭುತವಾದದ್ದೊಂದು ಟೀಮ್ ಕಟ್ಟಿಕೊಂಡಿದ್ದಾನೆ. ಅವರಿವರ ಅನುಕರಣೆಗೆ ಬಿದ್ದು ಹಾಳಾಗದೆ ಬರೆದರೆ ಒಳ್ಳೆಯ ನಗೆ ಬರಹಗಾರನಾಗುವ future ಇದೆ.

ನಗೆ ನಗಾರಿ ಡಾಟ್ ಕಾಮ್‌ನ ಫರ್ಸ್ಟ್ ಹ್ಯಾಪಿ ಬರ್ತಡೇ ಗೆ ಚಿಯರ್ಸ್!

ನಿಮ್ಮವನು

ಗವಿ ಬಿಳಿಗೆರೆ

ನಗೆ ನಗಾರಿ ಮಾಸಪತ್ರಿಕೆ ಮಾರುಕಟೆಯಲ್ಲಿ!

1 ಏಪ್ರಿಲ್

 

ನಗೆ ನಗಾರಿಯ ಸಾಮ್ರಾಜ್ಯದ ಸಮಸ್ತ ಪ್ರಜೆಗಳಿಗೂ ಸಂತಸದ ಸುದ್ದಿ.

ನಗೆ ನಗಾರಿ ಡಾಟ್ ಕಾಮ್ ತನ್ನ ಒಂದು ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಸಂದರ್ಭದಲ್ಲೇ ಈ ಸವಿ ಸುದ್ದಿಯನ್ನು ಹಂಚಿಕೊಳ್ಳಬೇಕಿತ್ತು. ಆದರೆ ಸಿದ್ಧತೆಯ ಕೊರತೆಯಿಂದ ಪ್ರಕಟಿಸಲು ಹಿಂದುಮುಂದು ನೋಡಿದೆವು. ಆದರೀಗ ಬಹುತೇಕ ನಿಶ್ಚಿತವಾಗಿದೆ. ‘ನಗೆ ನಗಾರಿ’ ಮಾಸಪತ್ರಿಕೆ ಇಂದಿನಿಂದ ನಿಮಗೆ ರಾಜ್ಯದ ಎಲ್ಲಾ ಪುಸ್ತಕದಂಗಡಿಗಳಲ್ಲಿ ಲಭ್ಯವಿದೆ.

ನಗೆ ನಗಾರಿಯ ಬ್ಲಾಗಿನಲ್ಲಿನ ವೈವಿಧ್ಯಮಯ ಹಾಸ್ಯದ ಸರಕನ್ನು ಆನಂದಿಸಿದ ಪ್ರತಿಯೊಬ್ಬರಿಗೂ ಈ ಪತ್ರಿಕೆಯ ನಮ್ಮ ಪ್ರಯತ್ನ ಆವಶ್ಯಕವಾಗಿ ಸಂತೋಷ ನೀಡುತ್ತದೆ ಎಂಬ ನಂಬಿಕೆ ನಮ್ಮದು.

ಪ್ರಥಮ ಸಂಚಿಕೆಯ ವಿಶೇಷತೆಗಳು ಇಂತಿವೆ:

ಮುಖಪುಟ ಲೇಖನ – ಮುಂದಿನ ಪ್ರಧಾನಿ ಯಾರು? ನಗೆ ನಗಾರಿ ವಿಶೇಷ ಸಮೀಕ್ಷಾ ವರದಿ.

ಖ್ಯಾತ ಹಾಸ್ಯ ಕವಿ – ಹನಿಕವಿ ಮಿನಿಕವಿ – ಡುಂಡಿರಾಜರ ಅಂಕಣ

ಹೆಸರಾಂತ ನಿರ್ದೇಶಕ ರಮೇಶ್ ಅರವಿಂದ್ ಬರೆಯುವ ಅಂಕಣ

ಖ್ಯಾತ ಪತ್ರಕರ್ತ ರವಿ ಬೆಳಗೆರೆಯವರ ಸಂದರ್ಶನ

ಕೋಕಿಲ ಸಾಧುರವರ ವಿಶೇಷ ಲೇಖನ

ವಿಜಯ ಕರ್ನಾಟಕದ ಉಪ ಸಂಪಾದಕರಾದ ಪ್ರತಾಪ್ ಸಿಂಹರ ಹಾಸ್ಯ ಲೇಖನ ಮಾಲೆ.

ಇನ್ನೂ ಇವೆ…

ಈ ಕೂಡಲೇ ನಿಮ್ಮ ಸಂಚಿಕೆಯನ್ನು ಕಾದಿರಿಸಿ. ಹತ್ತಿರದ ಪುಸ್ತಕದಂಗಡಿಗೆ ಭೇಟಿ ಕೊಡಿ.

ಇಲ್ಲವಾದರೆ ನಿಮ್ಮ ವಿಳಾಸವನ್ನು ತಿಳಿಸಿ ನಮಗೊಂದು (nagesamrat@gmail.com) ಮಿಂಚಂಚೆ ಹಾಕಿ.

ನಗಾರಿ ಹುಟ್ಟು ಹಬ್ಬಕ್ಕೆ ಶುಭಾಶಯಗಳ ಸುರಿಮಳೆ!

6 ಫೆಬ್ರ

ನಗೆ ನಗಾರಿ ಡಾಟ್ ಕಾಮ್‌ನ ವಾರ್ಷಿಕೋತ್ಸವ ಸಮಾರಂಭದ ಬಗ್ಗೆ ಸವಿರವಾದ ವರದಿಯನ್ನು ನೀಡಬೇಕಿದ್ದ ತೊಣಚಪ್ಪ ಹಾಗೂ ಕುಚೇಲರು ಪಾರ್ಟಿಯಲ್ಲಿನ ಪ್ರಸಾದ, ತೀರ್ಥದಿಂದ ‘ಸಮಾಧಿ’ ಸ್ಥಿತಿಯನ್ನು ತಲುಪುವುದರಿಂದ ಸಾಮ್ರಾಟರಾದ ನಾವೇ ಕುದುರೆಗಳ ಲಗಾಮು ಹಿಡಿಯಬೇಕಿದೆ. ಹೀಗಾಗಿ ವರದಿ ಕೊಂಚ ತಡವಾಗಲಿದೆ. ಆದರೆ ನಮ್ಮಹಾಗೂ ನಮ್ಮ ಪತ್ರಿಕೆಯ ಹುಟ್ಟು ಹಬ್ಬಕ್ಕೆ ನಮ್ಮ ಭಕ್ತ ವೃಂದವು ಪ್ರತಿಕ್ರಿಯಿಸಿರುವ ರೀತಿಯನ್ನು ನೆನೆಯದಿದ್ದರೆ ನಮಗೆ ಮನಃಶಾಂತಿ ಲಭ್ಯವಾಗುವುದಿಲ್ಲ.

ಗಣೇಶ್.ಕೆ

mareyabahudemba bhayadinda eegale abhinandisuttiddene.
aadare neevu nageyanna nandisabedi anta kelikolluttene.

ಪ್ರಸಾದ್

ನೂರ್ಕಾಲ ಬೆಳಗಲಿ ನಗೆಯ ದೀವಿಗೆ
ಅನುಗಾಲವೂ ಹರಿಯಲಿ ಸಾಮ್ರಾಟರ ಕಿರುನಗೆ
ಅಭಿಮಾನಿಗಳ ಎದೆಯಲ್ಲಿ ಸಂಭ್ರಮವು ಬಗೆಬಗೆ.
“ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು”

ಹೇಮಾ ಪವಾರ್

ಸಾಮ್ರಾಟರೇ ವರ್ಷವಿಡೀ ನಗೆ ನಗಾರಿಯ ರಥ ಸುಗಮವಾಗಿ ನಡೆಸಿಕೊಂಡು ಬಂದಿದ್ದೀರಿ. ಅದರ ರಹಸ್ಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನೂ ಮುಗಿಸಿದ್ದೀರಿ. ನಿಮ್ಮ ಚೇಲ ಕುಚೇಲನ ಭಯಂಕರ ವಿರೋಧವಿದ್ದರೂ, ನಮ್ಮೆಲ್ಲರ ಪರವಾಗಿ ನಿಮಗೊಂದು ಸನ್ಮಾನ ಸಮಾರಂಭ ಏರ್ಪಡಿಸಬೇಕೆಂದಿದ್ದೇವೆ, ಇದಕ್ಕೆ ನಿಮ್ಮ ಅಭಿಪ್ರಾಯವೇನು??

ವಿ. ಸುಮಂತ ಶ್ಯಾನುಭಾಗ್

ಸಾಮ್ರಾಟರೆ .. ಸನ್ಮಾನವೆಂದರೆ ಯಾರ ಬಳಿ ಏನು ಇಲ್ಲವೋ ಅದನ್ನು ಕೊಡುವುದು ಎಂದರ್ಥ .. ಹೇಮಾ ಅವರಿಗೆ ಎಷ್ಟು ಸೊಕ್ಕು ನೋಡು ನಿಮಗೆ ಮಾನ ಮರ್ಯಾದೆ ಕೊಡುತ್ತೇನೆ ಅಂಥಾ ಇದ್ದಾರೆ

ಏನೇ ಇರಲಿ ಸಮಸ್ತ ಕನ್ನಡಿಗರಿಗೆ ದಿನವೂ ಹಾಸ್ಯರಸದ ಭೂರಿಭೋಜನ ಬಡಿಸುತ್ತಿರುವ , ಸ್ವಯಂಘೋಷಿತ ನಗೆಸಾಮ್ರಾಟ್ , ಕಲಿಯುಗದ ಆಸ್ಥಾನ ವಿದೂಷಕ , ಒಂದು ವರುಷದ ಮಗು “ನಗೆನಗಾರಿ ” ಮತ್ತದರ ಚಮಚಾಗಳಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಿದ್ದೇನೆ .
ಶ್ರೀ ದೇವರು ತಮಗೆ ದೀರ್ಘಾಯುಷ್ಯ ,ಆರೋಗ್ಯ ,ಸುಖ ಶಾಂತಿ ನೆಮ್ಮದಿಗಳನ್ನು ಕರುಣಿಸಲೆಂದು ಆತನ ಚರಣಕಮಲಗಳಲ್ಲಿ ಪ್ರಾರ್ಥಿಸುತ್ತೇನೆ . ನಿಮ್ಮ ನಗಾರಿಯ ಶಬ್ದ ಕನ್ನಡನಾಡಿನಾದ್ಯಂತ ಮಾರ್ದನಿಸಲಿ ,ನಿಮ್ಮ ನಗೆಗಡಲಲ್ಲಿ ಇನ್ನೊ ದೊಡ್ಡ ದೊಡ್ಡ ನಗುವಿನ ಅಲೆಗಳು ಏಳಲಿ ಹಾಗೋ ನಮ್ಮಂಥ ನಿಮ್ಮ ಅಭಿಮಾನಿಗಳು ಆ ನಗೆಗಡಲಲ್ಲಿ ತೇಲುವಂತಾಗಲಿ ಎಂದು ಹಾರೈಸುತ್ತೇನೆ .

ಮತ್ತೊಮ್ಮೆ ಜನ್ಮದಿನದ ಹಾರ್ದಿಕ ಶುಭಾಶಯಗಳೊಂದಿಗೆ

ರಂಜಿತ್ ಅಡಿಗ

“ಸೋಮಾರಿ ಮಿತ್ರ”ನೆಂದು ಉಲ್ಲೇಖಿಸಿ, ನಿಮ್ಮ ಅಸಂಖ್ಯ ಓದುಗರೆದುರು ನನ್ನನ್ನು ನೆನೆದುದ್ದಕ್ಕೆ ಕಣ್ತುಂಬಿ ಬಂತು.

ಅಂದ ಹಾಗೆ ಫೆಬ್ರವರಿ ೧೪ ಹತ್ತಿರ ಬಂತು, ಸಾಮ್ರಾಟರ ಪ್ರೇಮ ಕತೆಗಳನ್ನು ಓದುವ ಸೌಭಾಗ್ಯ ದೊರಕೀತೆ??