ಜನರನ್ನು ನಗಿಸುವುದು ಸುಲಭದ ಕೆಲಸವಲ್ಲ. ಕೂದಲಿಂದ ಬೆರಳ ತುದಿಯವರೆಗೆ ಚಿತ್ರ ವಿಚಿತ್ರವಾದ ವೇಷ ತೊಟ್ಟು ಬಫೂನಿನಂತೆ ಕುಣಿಯಬೇಕು. ಪದಗಳ ಮೋಡಿಯಲ್ಲಿ ಕೆಡವಿ ಪಂಚುಗಳ ಮೇಲೆ ಪಂಚುಗಳನ್ನು ಕೊಡಬೇಕು. ನೇರವಾದ ಸತ್ಯವನ್ನು ವಕ್ರಗೆರೆಗಳ ದಾಳಿಗೆ ಈಡು ಮಾಡಬೇಕು. ಪ್ರಸಿದ್ಧ ನಟನ, ಪ್ರಸಿದ್ಧ ರಾಜಕಾರಣಿಯ ಕಾಲೆಳೆಯಬೇಕು. ಇಷ್ಟೆಲ್ಲ ಮಾಡಿದರೂ `ನಗದು’ ಎನ್ನುವಂತಹ ಸ್ಪೀಶಿಗಳಿರುತ್ತವೆ. ಹೀಗಿರುವಾಗ ಆ ಎರಡು ಪಾತ್ರಗಳು ಮಾತಿಲ್ಲದೆ, ವಿಡಂಬನೆಯಿಲ್ಲದೆ, ವ್ಯಂಗ್ಯಾರ್ಥ, ದ್ವಂದ್ವಾರ್ಥದ ಹಂಗಿಲ್ಲದೆ, ಅಣಕವಾಡುವ ಆವಶ್ಯಕತೆಯಿಲ್ಲದೆ ಕೇವಲ ತಮ್ಮ ಚಿನ್ನಾಟ, ತುಂಟಾಟಗಳಿಂದಲೇ ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣು ಮುದುಕರವರೆಗೆ, ಮುಗ್ಧ ಬಾಲಕರಿಂದ ಹಿಡಿದು ಪಿಎಚ್ಡಿ ಬುದ್ಧಿವಂತರವರೆಗೆ, ಥೇಮ್ಸ್ ಪುತ್ರರಿಂದ ಹಿಡಿದು ಕೆಂಗೇರಿ ಏರಿಯಾದ ಮನೆಯ ಹುಡಗನವರೆಗೆ ಎಲ್ಲರನ್ನೂ ಬಿದ್ದು ಉರುಳಾಡಿ ನಗುವಂತೆ ಮಾಡಿದವು.
ಹೌದು ಅವು ಟಾಮ್ ಮತ್ತು ಜೆರ್ರಿ!
ವಿಲಿಯಂ ಹನ್ನಾ ಹಾಗೂ ಜೋಸೆಫ್ ಬಾರ್ಬರಾ ಎಂಬಿಬ್ಬರು ಪ್ರತಿಭಾವಂತರು ಸೇರಿ ಸೃಷ್ಟಿಸಿದ ಪಾತ್ರಗಳು- ಟಾಮ್ ಎಂಬ ಹೆಸರಿನ ಮನೆ ಬೆಕ್ಕು, ಜೆರ್ರಿ ಎಂಬ ಹೆಸರಿನ ತುಂಟ ಇಲಿ. ಬೆಕ್ಕಿಗೆ ಚಿನ್ನಾಟ ಇಲಿಗೆ ಪ್ರಾಣ ಸಂಕಟವೆಂಬ ಗಾದೆ ಮಾತನ್ನು ಈ ಟಾಮ್ ಹಾಗೂ ಜೆರ್ರಿಗಳು ತಲೆಕೆಳಗು ಮಾಡಿದವು. ಅಂಗೈ ಗಾತ್ರದ ಪುಟ್ಟ ಇಲಿ ಟಾಮ್ನನ್ನು ಕೆಣಕುವುದು, ಟಾಮ್ ನಾನಾ ತಂತ್ರಗಳನ್ನು ಹೂಡಿ ಜೆರ್ರಿಯನ್ನು ಹಿಡಿಯಲು ಹೊಂಚುವುದು. ಜೆರ್ರಿ ತಪ್ಪಿಸಿಕೊಂಡು ಓಡುತ್ತಲೇ ಟಾಮ್ಗೆ ತಿರುಗಿ ಟಾಂಗು ಕೊಡುವುದು – ಇಷ್ಟನ್ನೇ ವೈವಿಧ್ಯಮಯವಾಗಿ ನೂರಕ್ಕೂ ಹೆಚ್ಚು ಸ್ಕೆಚ್ಚುಗಳಲ್ಲಿ ತೋರಿದ ಹನ್ನಾ ಬಾರ್ಬರಾ ಜೋಡಿ ಮನರಂಜನೆಯಲ್ಲಿ ಹೊಸತೊಂದು ಪರಂಪರೆಯನ್ನೇ ಹುಟ್ಟುಹಾಕಿದರು.
ವಯಸ್ಸಾಗದ, ಮುಖ ಸುಕ್ಕು ಗಟ್ಟದ, ಖಾಯಿಲೆ ಬೀಳದ, ಸ್ಕ್ಯಾಂಡಲುಗಳಲ್ಲಿ ಸಿಲುಕಿ ಹೆಸರು ಕೆಡಿಸಿಕೊಳ್ಳದ, ಜನಪ್ರಿಯತೆಗಾಗಿ ಗಿಮಿಕ್ಕು ಮಾಡದ ಅನಿಮೇಶನ್ ತಂತ್ರಜ್ಞಾನದಲ್ಲಿ ರೂಪುಗೊಂಡ ಈ ಪಾತ್ರಗಳು ಜನರ ಮನಸ್ಸಿನಲ್ಲಿ ಹಚ್ಚ ಹಸಿರಾಗಿವೆ. ಟಾಮ್ ಹಾಗೂ ಜೆರ್ರಿಗಳ ಚಿನ್ನಾಟವನ್ನು ನೋಡದೆ ಈಗಿನ ಮಕ್ಕಳು ನಗುವುದನ್ನು ಕಲಿಯುವುದಿಲ್ಲ. ತಾವು ಎಳೆಯರಾಗಿದ್ದಾಗ ಕಂಡು ಖುಶಿಪಟ್ಟಿದ್ದ ಟಾಮ್ ಹಾಗೂ ಜೆರ್ರಿ ಕಾರ್ಟೂನುಗಳನ್ನು ತಮ್ಮ ಮಕ್ಕಳೊಂದಿಗೂ ಕೂತು ಎಂಜಾಯ್ ಮಾಡಬಹುದಾದ ವಿಶಿಷ್ಟತೆ ಇವುಗಳದು.
೧೯೪೦ರ ಫೆಬ್ರವರಿ ೧೦ರಂದು ಬಿಡುಗಡೆಯಾದ `ಪುಸ್ ಗೆಟ್ಸ್ ದ ಬೂಟ್’ ಸಿನೆಮಾದಲ್ಲಿ ಕಣ್ತೆರೆದ ಈ ಟಾಮ್ ಅಂಡ್ ಜೆರ್ರಿಗೆ ಎಪ್ಪತ್ತು ವರ್ಷಗಳು ಕಳೆದಿವೆ. ಇಂದಿಗೂ ಮಕ್ಕಳ, ವಯಸ್ಕರ ಕಣ್ಣುಗಳಲ್ಲಿ ಅದೇ ಲವಲವಿಕೆಯಿಂದ ಕುಣಿಯುತ್ತಿವೆ!
ಈ ಕೊಂಡಿಯಲ್ಲಿರುವ ತಾಣಕ್ಕೆ ಪ್ರವೇಶಿಸಿದರೆ ಬಹುತೇಕ ಎಲ್ಲಾ ಟಾಮ್ ಜೆರ್ರಿ ತುಂಟಾಟಗಳನ್ನು ಕಂಡು ಆನಂದಿಸಬಹುದು.
ಒಂದು ಸ್ಯಾಂಪಲ್ ಇಲ್ಲಿದೆ:
ಇದು ಈ ಸಂಚಿಕೆಯ ನಗಾರಿ ರೆಕಮಂಡೇಶನ್!
ಇತ್ತೀಚಿನ ಪ್ರಜಾ ಉವಾಚ