Archive | ತೊಣಚಿ ಸಂಸಾರ RSS feed for this section

ತೊಣಪ್ಪನ ಡೈರಿ

9 ಆಕ್ಟೋ

ಕಾಪಾಡಿದ್ದು ಯಾರು?

 

ನೀವ್ ಅದೆಷ್ಟೇ ವಿನಯವಂತ್ರಾಗಿರ್ಬೋದು, ಆದ್ರೆ ಕೆಲ್ವೊಂದ್ಸಲ ನೀವ್ ಮಾಡಿದ ಕೆಲ್ಸಕ್ಕೆ ತಕ್ಕ ಕ್ರೆಡಿಟ್ಸು ಪಡೀಲೇಬೇಕಾಗುತ್ತೆ. ‘ಈ tonachi diary ಮಗುವಿನ ತಂದೆ ಯಾರು?’, ‘ಈ ಟೀ ಕಪ್ಪು ಒಡೆದದ್ದು ಯಾರು?’, ‘ನನ್ನ ಮಗಳಿಗೆ ಲವ್ ಲೆಟರ್ ಕೊಟ್ಟಿದ್ದು ಯಾರು?’, `ಬಹುಮಾನ ಬಂದ ಈ ಲಾಟರಿ ಟಿಕೆಟ್ ನಿಮ್ದಾ?’ ಅನ್ನೋ ಪ್ರಶ್ನೆಗಳೆದ್ದಾಗ ನಿಮ್ಮೆಲ್ಲಾ ವಿನಯವಂತಿಕೆ ಬಿಟ್ಟು ನಿಮ್ ಕೆಲ್ಸದ್ ಬಗ್ಗೆ ನೀವು ಕ್ರೆಡಿಟ್ಸ್ ತೆಗ್ದುಕೊಳ್ಳಬೇಕಾಗುತ್ತೆ.

ಪಾಪ ಈ ಸೀಕ್ರೇಟು ಆ ಹೆಲಿಕಾಪ್ಟರಿಗೆ ಗೊತ್ತಿರ್ಲಿಲ್ಲ! ವರ್ಷವಿಡೀ ನದಿ ಅನ್ನೋ ಬೋರ್ಡ್ ಹಾಕ್ಕಂಡಿದ್ದ ಬಯಲು ಮಂದಿರವಾಗಿದ್ದ ತುಂಗಾ ನದಿ ತುಂಬಾ ತುಂಬಿಕೊಂಡು ಮಂತ್ರಾಲಯವನ್ನೇ ಮುಳುಗ್ಸುವಾಗ ಮಂತ್ರಾಲಯ ಸ್ವಾಮಿಯವರ್ನ ಕಾಪಾಡಿದ್ದು ಸರಿಯಾದ್ ಸಮ್ಯಕ್ಕೆ ತಲುಪಿದ ಹೆಲೆಕಾಪ್ಟರು. ಮಾರ್ನೆಯ ದಿನ ಸ್ವಾಮ್ಗೋಳು ನಮ್ಮುನ್ ಕಾಪಾಡಿದ್ದು ಗುರುರಾಯ ಅನ್ವಾಗ ಆ ಹೆಲಿಕಾಪ್ಟರು ಮೋಸ್ಟ್ಲಿ ನನ್ ಪೈಲಟ್ ಹೆಸ್ರು ಗುರ್ರಾಯ ಅಂದ್ಕಂಡು ಸಮಾಧಾನ ಮಾಡ್ಕಂತೇನೋ!

ಹೆಲಿಕಾಪ್ಟರ್ ಬಗ್ಗೆ ನಾವ್ ಮಾತಾಡೋದು ಅವು ರಾಜ್ಯದ ಮುಖ್ಯಮಂತ್ರಿ ಸಮೇತ ಸ್ಪೋಟಗೊಂಡಾಗ್ ಮಾತ್ರ ಅನ್ಸುತ್ತೆ!

 

ಸುಳ್ ಮೆಣ್ಸಿನ್‌ಕಾಯ್!

 

ಪಾರ್ಟ್ ಟೈಮು  ನ್ಯೂಸ್ ಪೇಪರ್‌ , ಫುಲ್ ಟೈಮ್ ಪೊಲಿಟಿಕಲ್ ಆಕ್ಟಿವಿಸ್ಟು ಆಗಿರೋ ವಿಜಯ ಕರ್ನಾಟಕವೆಂಬೋ ನಂಬ್ರ ಒನ್ ಪತ್ರಿಕೆಯಲ್ಲಿ ಬ್ಯಾಡ್ಗಿ ಖಾರದ ಮೆಣ್ಸಿನ್ ಕಾಯಿ ಪ್ರ‘ತಾಪ’ರ ಕಾಲಂ ಪಕ್ಕದಲ್ಲೇ ಕೆಂಪ್ ಮೆಣ್ಸಿನ್ ಕಾಯಿ ಮಿರ್ಚಿ ಮಾಡೋ ಮೋಹನ್‌ರು ತಮ್ ಅಂತರ್ಜಾಲದ ಬಗ್ಗೆ ಸ್ವಲ್ಪ್ ಗಮನ ಕೊಡೋದ್ ವಾಸಿ ಅನ್ನಿಸ್ತದೆ.

ಕಳೆದ ಶನಿವಾರದ ಅಂಕಣದಾಗೆ ಅಲ್ಲಾಡಿಸಿದ್ ಕೆಂಪ್ ಮೆಣಸಿನ್ಕಾಯ್‌ನಾಗೆ ಹೀಗಂತಾರೆ:

gandhi

ಪತ್ರಿಕೋದ್ಯಮದ್ ಪಾಠಗಳಲ್ಲದಿದ್ರೂ ತೀಟೆಗಳನ್ ಸಾಮ್ರಾಟರ್ ತಾವ ಕಲ್ತಿರೋ ನಾನು ಗೂಗಲಿನ ಕೌಂಟರಿಗೆ ‘ಗಾಂಧಿ’ ಪದ ತಳ್ಳಿದ್ದೇ ತಡ ನಮ್ ದೇಶದ ತಂದೆ ಮಹಾತ್ಮ ಗಾಂಧಿಯವ್ರೇ ಕಂಡ್ರು. ಎರಡ್ರಾಗೆ ರಾಜೀವ್ ಕಂಡ್ರು, ಮೂರ್ನೇ ಪೇಜ್‌ನಾಗೆ  ಸೋನಿಯಾ ಅಮ್ಮಾವ್ರು ಬಂದ್ರು.

gandi1

gandi2

gandi3

ಅವ್ರೊಳಗಿನ ಹಾಡು ಕ್ಯೂಬಾ ಕೇಳಿದ್ಮೇಲೆ ಅವ್ರ ಇಂಟರ್ನೆಟ್ ಕನೆಕ್ಸನ್ನು ಕ್ಯೂಬಾದ್ದೇನಾ ಅಂಬೋ ಡೌಟು ನನ್ಗೆ ಬಂತು! ಯಾವ್ದಕ್ಕೂ ಮೊಹನ್ ಸಾಹೇಬ್ರು ವಸಿ ಚೆಕ್ ಮಾಡ್ಕಳದು ಒಳ್ಳೇದು!  

ತೊಣಚಿ ಡೈರಿ: ನಕ್ಸಲರ ಗರ್ಭನಿರೋಧಕಗಳು

22 ಆಗಸ್ಟ್

ಅಪಘಾತ ಬಸ್ಸಿಗೆ ಬೆಂಕಿ: ಸುದ್ದಿ tonachi diary

ಅಪಘಾತಗಳು ಸಂಭವಿಸಿದಾಗ್ಲೆಲ್ಲಾ ಬಸ್ಸಿಗೆ, ಲಾರಿಗೆ, ಕಾರಿಗೆ, ಬೈಕಿಗೆ ಬೆಂಕಿ ಹಚ್ಚೋದು ವಾಡಿಕೆಯಾಗ್ಬಿಟ್ಟಿದೆ. ಇದ್ನೆಲ್ಲಾ  ಗಮ್ನಿಸೊವಾಗ ಅಪಘಾತ ಮಾಡಿದ್ದು ನಿಜ್ಕೂ ಆ ವಾಹ್ನವಾ ಅಥ್ವಾ ಅದ್ನ ಓಡಿಸೋವ್ನಾ ಅಂತ ಡೌಟು ಬರತ್ತೆ. ಬೇಜವಾಬ್ದಾರಿಯಿಂದ ವಾಹನ ಓಡಿಸಿ ಅಪಘಾತ ಮಾಡ್ದವ್ನ ಹಿಡಿದು ಚಚ್ಚುವುದನ್ನ ಒಪ್ಕೊಬೌದು. ಆದ್ರೆ ಪಾಪದ್ದು ವಾಹನ ಬೆಂಕಿ ತಿನ್ನಾಂಥದ್ದು ಏನು ಮಾಡಿರತ್ತೆ? ಎಡವಿದ್ದ ಕಲ್ಲಿಗೆ ಒದೆಯುವ ಅಭ್ಯಾಸ ಬೆಳೆಸಿಕೊಂಡಿರೋ ಜನ್ರಿಗೆ ಎಡವಿದ್ದು ಕಲ್ಲಲ್ಲ, ತಮ್ಮ ಕಾಲು ಅನ್ನೋದು ತಿಳಿಯೋದೇ ಇಲ್ಲ!

ಆಟಗಾರರಿಗೆ ಭದ್ರತೆ ಏಕೆ ಬೇಕು?

ದೇಶವನ್ನು ಹಂತ ಹಂತವಾಗಿ ನಾಶ ಮಾಡುವ ರಾಜಕಾರಣಿಗಳಿಗೆ, ಸರ್ಕಾರಿ ಗೋಡೌನಿನ ಹೆಗ್ಣಗಳಾದ ಅಧಿಕಾರಿಗಳ್ಗೆ, ಜನರ ನೈತಿಕತೆಯನ್ನ ಮೆಲ್ಲಗೆ ನಾಶ ಮಾಡುವ ಸಿನ್ಮಾ ತಾರೆಯರಿಗೆ ಭದ್ರತೆ ಬೇಕು ಅನ್ನೋದು ಒಪ್ಪುವ ಮಾತು. ಖುಶಿಗಾಗಿ, ಟೈಂ ಪಾಸ್ ಮಾಡುವುದಕ್ಕಾಗಿ ಜನರು ಆಡುವ ಆಟವಾದ ಕ್ರಿಕೆಟನ್ನು ದುಡ್ಡು ಗಳಿಸೋದಕ್ಕೆ, ಜಾಹಿರಾತಿನ ರೂಪದರ್ಶಿಯಾಗುವ ಅವಕಾಶ ಗಳ್ಸೋದಕ್ಕೆ ಬಳ್ಸೋ ಆಟಗಾರರಿಗ್ಯಾಕೆ ಬೇಕು ಭದ್ರತೆ?

ಇಲ್ಲಿ ನೋಡಿ! ಆಟಗಾರರ ಪ್ರಾಣಕ್ಕಷ್ಟೇ ಅಪಾಯವಿರುವುದಿಲ್ಲ, ಅವ್ರ ಮಾನಕ್ಕೂ ಸದಾ ಅಪಾಯ ಕಟ್ಟಿಟ್ಟ ಬುತ್ತಿಯೇ, ಹೀಗಾಗಿ ಅವರಿಗೇ ಅತಿ ಹೆಚ್ಚಿನ ಭದ್ರತೆ ಬೇಕೆಂಬುದು ಸಾಮ್ರಾಟರ ಮಾಜಿ ಭದ್ರತಾ ಸಿಬ್ಬಂದಿಯಾಗಿದ್ದ ನಮ್ ಅಭಿಪ್ರಾಯ! ಪಠಾಣ ತಪ್ಪಿಸಿಕೊಂಡ ಮುತ್ತಿನ ಆಕ್ರಮಣವನ್ನಾಧರಿಸಿ ಹೊಸ ರಿಯಾಲಿಟಿ ಶೋ ನಡ್ಸೋಕೆ ಸಾಮ್ರಾಟ್ರು ಯೋಚ್ಸಿದಾರಂತೆ, ‘ಯಾರು ನಂಗೆ ಮುತ್ ಕೊಡೋರು?’, ‘ಮುತ್ ಕಾ ಸಾಮ್ನಾ’ ಹೀಗೆ ಹೆಸ್ರುಗಳ್ನ ಯೋಚಿಸ್ತಿದಾರೆ.

ನಕ್ಸಲರು ಹಾಗೂ ಗರ್ಭ ನಿರೋಧಕ!

ವ್ಯವಸ್ಥೆಯ ಅನ್ಯಾಯದ ವಿರುದ್ಧ, ಧನಿಕ ಶೋಷಕರ ಶೋಷಣೆಯ ವಿರುದ್ಧ ಹೋರಾಡುವ, ಬೂರ್ಶ್ವಾ ಚಿಂತನೆಯನ್ನು ಮಟ್ಟ ಹಾಕಲು ಪ್ರಾಣವನ್ನೊತ್ತೆಯಿಟ್ಟ ಜನ್ರನ್ನ ಅನೇಕ್ರು ನಕ್ಸಲರು ಅಂತಾರೆ. ಆದ್ರೆ ಬಹಳಷ್ಟು ಜನ್ಕೆ ಅವ್ರು ಕ್ರಿಮಿನಲ್ಗಳು ಅಷ್ಟೇ. ಇವ್ರು ದೇಶಕ್ಕಾಗಿ ಜೀವನವನ್ನ ತ್ಯಾಗ ಮಾಡಿರ್ತಾರಂತೆ. ಅಪ್ಪ ಅಮ್ಮ, ಗೆಳೆಯರ್ನ ಬಿಟ್ಟು ಕಾಡಲ್ಲಿ ಇರ್ತಾರಂತೆ. ಇವ್ರು ಮದುವೆಯಾಗಲ್ವಂತೆ, ಏಕೆಂದರೆ ಮದುವೆ, ಮಕ್ಳು, ಸಂಸಾರ ಅಂತ ಕಟ್ಟಿಕೊಳ್ತಾ ಕೂತ್ರೆ ವ್ಯವಸ್ಥೆನ ಕೆಡವೋಕೆ ಆಗಲ್ವಂತೆ. ಜೊತ್ಗೆ ಗುರಿ ಸಾಧನೆ ಅವ್ರಿಗೆ ಮುಖ್ಯವಂತೆ, ಮದ್ವೆ ಅಲ್ವಂತೆ. ಹೀಗಿರ್ವಾಗ ಅವ್ರ ಬಳಿ ಇದ್ವು ಎನ್ನಲಾದ ಗರ್ಭನಿರೋಧಕಗಳು ಏನ್ ಹೇಳ್ತವೆ? ಗುಂಡು ನಿರೋಧಕಗಳು ಸಿಕ್ಕಿದ್ರೆ ಅರ್ಥ ಮಾಡ್ಕೋಬೋದಿತ್ತು!

ತೊಣಚಪ್ಪನ ಡೈರಿ

16 ಮಾರ್ಚ್

ಪಕ್ಷದೊಳಗೆ ಭಿನ್ನ ಮತ- ಶಮನಕ್ಕೆ ಯತ್ನ

ಒಂದ್ ಪಕ್ಷದಾಗೇ ಭಿನ್ನಮತ, ಜಗಳ, ವೈಮನಸ್ಸು ಇಟ್ಕಂಡು ಕೆಲ್ಸ ಮಾಡೋಕೆ ಸಾಧ್ಯ ಇರೋವಾಗ, ಚುನಾವಣೆ ಎದ್ರಿಸಿ ಅಧಿಕಾರ ಹಿಡಿಯೋಕ್ ಆಗೋವಾಗ, ಈ ನೂರಾರ್ ಹೆಸ್ರು ಹೇಳ್ಕಂಡು ಬೇರ್ ಬೇರೆ ಸಿದ್ಧಾಂತದ್ ನೆಪ ಮಾಡ್ಕಂಡ್ ರಾಜ್ಕೀಯ ಮಾಡೋದ್ಯಾಕೆ? ಎಲ್ಲಾ ಪಕ್ಸಗಳೂ ಸೇರ್ಕಂಡು ‘ದುಡ್ಡಿದೋರ್, ದುಡ್ ಹೊಡೆಯೋರ್ ಪಕ್ಷ’ ಮಾಡ್ಕಂಡು ಬಿಟ್ರೆ ಒಳ್ಳೇದಲ್ವಾ? ಜನ್ಕೂ ಯಾವ್ ಪಕ್ಸಕ್ಕೆ ಓಟ್ ಒತ್ತದು ಅನ್ನೋ ಟೆನ್ಷನ್ ಕಡಿಮಿ ಆಗ್ತದೆ. ಈ ಟಿವಿ, ಪೇಪರ್‌ನೋರ್ ಯಾರ್ ಗೆಲ್ತಾರೆ ಯಾರ್ ಸೋಲ್ತಾರೆ ಅಂತ ಗಂಟ್ ಗಟ್ಲೆ ಗಂಟ್ಲು ಹರ್ಕಂಡು, ಪೆನ್ನು ಮುರ್ಕಂಡು ಕಶ್ಟ ಪಡೋದು ತಪ್ತದೆ. ಅಲ್ವಾ?

ತೃತೀಯ ರಂಗಕ್ಕೆ ಯಾವುದೇ ವಿಷನ್ ಇಲ್ಲ: ಪ್ರಣಬ್ ಮುಖರ್ಜಿ

ಒಕ್ಕೂಟ ರಚನೆ ಮಾಡೋಕೆ ರಾಜಕೀಯ ಪಕ್ಷ ಕಟ್ಕಣಕೆ ದುಡ್ಡು ಕಾಸು, ಹೆಂಡ, ಸೀರೆ ಬೇಕೋ ಹೊರ್ತು ವಿಷನ್ನು, ಪಾಲಿಸೀಸು ಬೇಕು ಅಂತ ಯಾವೋನ್ ಹೇಳ್ದವ?

ಅಧಿಕಾರ ಹಿಡ್ಕಬೇಕು, ಕುರ್ಚಿ ಮೇಲೆ ಕುತ್ಕಬೇಕು, ದುಡ್ ಮಾಡ್ಕೋ ಬೇಕು ಇದ್ಕಿಂತ ದೊಡ್ ವಿಷನ್ನು, ಪಾಲಿಸಿ, ಆದರ್ಶ ಇರೋಕ್ ಸಾಧ್ಯ ಐತಾ?

ಈ ಯುಪಿಎ ಹುಟ್ದಾಗ್ ಇರ್ದೇ ಇದ್ದ ವಿಷನ್ನುಗಳಾ ಇವು? ಜನ ಇಂಥದ್ದೆಲ್ಲಾ ಇಲ್ಯೂಶನ್ನಿಗೆ ಬಲಿಯಾಗ್ತಾರೆ ಇನ್ನೂ ಅಂದ್ಕಂಡೀರಾ?

ಮಳೆ ಬರ್ಸೋಕೆ ಕಪ್ಪೆ ಮದ್ವೆ

ಸಿಟೀಲ್ ಕುಂತು ಕೀಬೋರ್ಡ್ ಕುಟ್ಟುವ ನಿಂಗೆ ಇದ್ನ ಓದಿದ್ರೆ ಬಿದ್ ಬಿದ್ ನಗೋಷ್ಟು ಸಿಲ್ಲಿ ಅನ್ಸುತ್ತೆ ಅಲ್ವಾ? ಆದ್ರೂ ಹೇಳ್ತೀನ್ ಕೇಳಿ, ಈ ಜನ ಮಾಡ್ತಿರೋದ್ಕು ನೀವ್ ಬುದ್ಧಿವಂತ್ರು, ಪೇಟೆ ಜನ ಮಾಡ್ತಿರೋದ್ಕು ವ್ಯತ್ಯಾಸ ಇದ್ಯಾ?

ಇವ್ರು ಮಳೆ ಇಲ್ಲದ್ ನಾಡಿಗೆ ನೀರ್ ಸಿಕ್ಲಿ ಅಂತ ಎರಡ್ ಕಪ್ಪೆ ಹಿಡ್ದು ಮದ್ವೆ ಮಾಡ್ತಾರೆ. (ಮದ್ವೆ ಇಲ್ದೆ ಅವೇನ್ ಮಕ್ಳೇ ಮಾಡಲ್ವಾ ಅಂನ್ಬೇಡ್ರಿ. ಶ್ರೀರಾಮ್ ಸೇನೆ ಮುತಾಲಿಕ್ ಕಿವಿಗೆ ಬಿದ್ರೆ ಪ್ರಾಣಿಗಳ್ಲೂ ಹೆಣ್ಣು ಗಂಡು ರಾಖಿ ಅಥ್ವಾ ತಾಳಿ ಇಲ್ದೇ ಒಡಾಡೋಕ್ ಬಿಡಲ್ಲ ಆತ!) ಮಳೆ ಬರುತ್ತೊ ಇಲ್ವೋ ಗೊತ್ತಿಲ್ಲ. ಮಳೆ ಬರ್ಲಿ ಅನ್ನೋ ಉದ್ದೇಶಾಂತೂ ಅವ್ರಲ್ಲಿ ಇರ್ತದೆ. ನೀವ್ ಮಾಡಾದೇನು? ಸರ್ಕಾರ ಒಳ್ಳೇ ಆಡಳಿತ ಕೊಡ್ಲಿ ಅಂತಂದ್ ಓಟ್ ಹಾಕ್ತೀರಿ, ಪ್ರತಿ ಸಲಾನೂ ಇವ್ರು ತಮ್ ಬುದ್ಧಿ ತೋರ್ಸಿದ್ರೂ ಮನೆ ಎದ್ರು ಬಂದ್ ಹಲ್ ಕಿರಿದ್ರೆ ಮತ್ತೆ ನಂಬ್ತೀರಿ…

ಈಗ್ ಹೇಳ್ರಿ ಯಾರು ಮೂಢ್ರು?

ತೊಣಚಪ್ಪನ ಡೈರಿ

9 ಫೆಬ್ರ

ಸಿಎಂ ಪತ್ನಿ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಿ: ಬಂಗಾರಪ್ಪ

ಮಾಡಬೇಕಾದ ತನಿಖೆಗಳನ್ನು ಪೂರೈಸುವುದಕ್ಕೇ ಸಿಬಿಐಗೆ ಸಮಯ ಸಾಲುತ್ತಿಲ್ಲ ಹೀಗಿರುವಾಗ ನಮ್ಮ ನಾಡಿನ ಮೆಚ್ಚಿನ ನಾಯಕರ ಹೆಂಡತಿಯರ ಸಾವು, ಹೆಂಡತಿಯರ ಸಂಖ್ಯೆ, ಅಧಿಕೃತ – ಅನಧಿಕೃತ ಕುಟುಂಬಗಳ ತನಿಖೆಯನ್ನು ಅವರಿಗೆ ಹೊರಿಸಿದರೆ ಅವನ್ನು ಮುಗಿಸುವುದು ಈ ಸೌರಮಂಡಲ ಕರಗಿದ ಮೇಲೆಯೇ! ಹೀಗಾಗಿ ನಾನು ವೈಯಕ್ತಿಕವಾಗಿ ನಮ್ಮ ನಾಡಿನ ಪ್ರಜ್ಞಾವಂತರನ್ನು ಕೇಳಿಕೊಳ್ತೇನೆ, ನಮ್ ಸಾಮ್ರಾಟನ ಚೇಲ ಕುಚೇಲನಿಗೆ ಈ ತನಿಖೆಗಳನ್ನು ವಹಿಸಿ. ಕೆಲ್ಸ ಇಲ್ದೆ ನೊಣ ಹೊಡೀತ ‘ಕೀಟ ದಯಾ ಸಂಘ’ದವರ ಕೆಂಗಣ್ಣಿಗೆ ಆತ ಗುರಿಯಾಗೋದನ್ನ ತಪ್ಸಿ.

ರಂಗಸ್ಥಳದಲ್ಲೇ ಪ್ರಾಣ ಬಿಡುವುದು ಕಲಾವಿದ ಶಂಭು ಹೆಗಡೆಯವರ ಇಚ್ಛೆಯಾಗಿತ್ತು: ವರದಿ

ಇದೇ ಆಸೆ ನಮ್ ರಾಜಕೀಯ ನಾಯಕ್ರುಗಳಿಗೆ ಬಂದ್ರೆ ಎಷ್ಟ್ ಚಂದವೋ! ಭಾಷಣ ಬಿಗಿಯುವಾಗ್ಲೇ ಪ್ರಾಣ ಬಿಡೋ ಹಂಗೇನಾದ್ರೂ ಆದ್ರೆ ಈ ದೇಶ್ದ ನಾಸ್ತಿಕ್ರೆಲ್ಲ ಹೋಲ್ಸೇಲಾಗಿ ದೇವ್ರಿಗೆ ಅಡ್ಡ ಬೀಳ್ತಾರೆ!

ಮಾಧ್ಯಮಗಳಿಗೆ ಅಂಕುಶ ಹಾಕಲು ಆಚಾರ್ಯ ಚಿಂತನೆ- ವರದಿ

ನಮ್ ನ್ಯೂಸ್ ಚಾನಲ್ಲು, ಪೇಪರುಗಳ್ನ ಹ್ಯಾಂಡ್ಲ್ ಮಾಡೋಕೆ ಕ್ಲಾಸಲ್ಲಿ ಮಾನಿಟರ್ ಇದ್ಧಂಗೆ ಒಬ್ಬ ಒಂಬುಡ್ಸ್ ಮನ್ (ಮಾಧ್ಯಮ ಧರ್ಮಾಧಿಕಾರಿ)ಯನ್ನು ನೇಮಿಸುವ ಆಲೋಚ್ನೆ ಮಾಡ್ತಿದಾರಂತೆ ನಮ್ ಗೃಹ ಮಂತ್ರಿಗಳು. ಈ ಸಂದರ್ಭದಲ್ಲಿ ಮೊದ್ಲು ರಾಜ್ಯದಾಗೆ ಗಲಾಟೆ ಗದ್ಲ ತಪ್ಸೋ ಒಳ್ಳೆ ಅಧಿಕಾರಿ ನೇಮಕ ಆಗ್ಬೇಕು ಅಂತ ವಿರೋಧ ಪಕ್ಷದೋರಂಗೆ ವಾದ ಮಾಡೋದು ಬಿಟ್ಟು ನಮ್ ನಗೆ ಸಾಮ್ರಾಟ್ರನ್ನ ಒಂಬುಡ್ಸ್ ಮನ್ ಹುದ್ದೆಗೆ ಶಿಫಾರಸ್ಸು ಮಾಡ್ರಿ. ಹಂಗಾದ್ರೂ ಅವ್ರನ್ನ ನಗೆ ನಗಾರಿಯಿಂದ ಒದ್ದೋಡ್ಸೋಕೆ ಸಾಧ್ಯವಾಗುತ್ತೆ!

ಸಾಮ್ರಾಟರ ಗತಕಾಲದ ಗೆಳೆಯನಿಗೆ ಸ್ವಾಗತ

11 ಜನ

 

ಸಾಮ್ರಾಟರು ತಮ್ಮ ಅದ್ವಿತೀಯ ಬಾಲ್ಯವನ್ನು ಅನೇಕ ಮೇರು ವ್ಯಕಿಗಳೊಂದೊಗೆ ಕಳೆದಿದ್ದಾರೆ. ಚಡ್ಡಿ ಹಂಚಿಕೊಳ್ಳುವುದಕ್ಕೂ ಮೊದಲೇ ಭೂಮಿಯನ್ನೂ ಆಕಾಶವನ್ನೂ ಸಮಾನವಾಗಿ ಹಂಚಿಕೊಂಡು ಗೆಳೆತನದ ಧೀಮಂತ ಆದರ್ಶವಾಗಿದ್ದಾರೆ. ಊರಿನ ಮಂದಿ ಸಾಮ್ರಾಟರ ಸಾಧನೆಗಳನ್ನು, ಸಾಹಸಗಳನ್ನು ಕಂಡು ಹೊಟ್ಟೆ ಉರಿದುಕೊಂಡು, ಕಣ್ಣು ಕೆಂಪಗೆ ಮಾಡಿಕೊಂಡು ಊರಿನಿಂದ ಓಡಿಸಿದಾಗ ವಿಧಿಲಿಖಿತದಂತೆ ಅವರ ಗೆಳೆಯರ ಬಳಗ ದೂರಾಯಿತು. ಆದರೆ ಸಾಮ್ರಾಟರು ತಮ್ಮ ಪ್ರತಿಭೆಯನ್ನು ಜಾವದಲ್ಲಿ ಅರಳಿದ ಮಲ್ಲಿಗೆಯ ಕಂಪಿನ ಹಾಗೆ ಆರೂ ದಿಕ್ಕುಗಳಲ್ಲಿ (ಮೇಲೆ ಹಾಗೂ ಕೆಳಗೆ ಎರಡು ದಿಕ್ಕುಗಳಿವೆ ಎಂಬ ಜ್ಞಾನೋದಯ ಸಾಮ್ರಾಟರಿಗೆ ತುಂಬಾ ಹಿಂದೆಯೇ ಆಗಿದೆ.) ಹರಡಲು ತೊಡಗಿದಾಗ ಆಕರ್ಷಿತರಾದ ಅಸಂಖ್ಯಾತ ರಸಿಕ ದುಂಬಿಗಳಲ್ಲಿ ಸಾಮ್ರಾಟರ ಈ ಗತಕಾಲದ ಗೆಳೆಯನೂ ಇದ್ದ ಎಂಬುದನ್ನು ಸಾಮ್ರಾಟರು ಕನಸಿನಲ್ಲಿರಲಿ, ತಮ್ಮ ತೀವ್ರ ಏಕಾಗ್ರತೆಯ ಧ್ಯಾನದಲ್ಲೂ ಊಹಿಸಿರಲಿಲ್ಲ.

ಸಾಮ್ರಾಟರೊಂದಿಗೆ ತೀರಾ ಚಿಕ್ಕಂದಿನಲ್ಲಿ ಭೂಮಿಯನ್ನೂ, ಆಕಾಶವನ್ನೂ ಹಂಚಿಕೊಂಡು, ಸ್ವಲ್ಪ ಬೆಳೆದ ನಂತರ ನಿಕ್ಕರನ್ನು ಹಂಚಿಕೊಂಡು, ಬೆಳೆ ಬೆಳೆಯುತ್ತಾ ಬೀಡಿ, ಸಿಗರೇಟು, ಟೆಂಟ್ ಸಿನೆಮಾ ಟಿಕೇಟು, ಹೀಗೆ ಅನೇಕ ಸಾಹಸಗಳಲ್ಲಿ ಸಮಪಾಲನ್ನು ಪಡೆಯುತ್ತಿದ್ದ ಅಪ್ರತಿಮ ಗೆಳೆಯ ತೊಣಚಪ್ಪನವರು ಇಷ್ಟು ದಿನ ನಗೆ ನಗಾರಿಯನ್ನು ಗಮನಿಸುತ್ತಿದ್ದರು ಎಂಬುದನ್ನು ತಿಳಿದು ಸಾಮ್ರಾಟರಿಗೆ ಹಾಲಿಗೆ ನಿಂಬೆ ಹಣ್ಣು ಬೆರೆಸಿಕುಡಿದಷ್ಟು ಸಂತೋಷವಾಗಿದೆ! ಚಿಕ್ಕಂದಿನಲ್ಲಿ ಊರ ಬಯಲಿನಲ್ಲಿ ದೇಹದ ಮಾಲಿನ್ಯವನ್ನು ಕಳೆದು ‘ಮುಕ್ತ’ರಾಗುವ ತಪಸ್ಸಿನಲ್ಲಿ ತೊಡಗಿರುವಾಗಲೂ ನೀರಿನ ಚೊಂಬಿನಲ್ಲಿ ಪಾಲು ಬೇಡುತ್ತಿದ್ದ, ಪಡೆಯುತ್ತಿದ್ದ ತೊಣಚಪ್ಪನವರು ನಗೆ ನಗಾರಿಗೆ ವಕ್ಕರಿಸಿರುವುದು ನಮ್ಮ ಸಂಸ್ಥೆಯ ಸಮಸ್ತ ಸಿಬ್ಬಂದಿಗೆ ಹರ್ಷವುಂಟು ಮಾಡಿದೆ ಎಂದು ತಿಳಿಸಲು ಹರ್ಷಿಸುತ್ತೇವೆ.

ಇಷ್ಟು ದಿನ ಸಾಮ್ರಾಟರ ಕೊರೆತವನ್ನು ಸಹಿಸಿಕೊಂಡು ಗಟ್ಟಿಯಾಗಿದ್ದ ನಗೆ ನಗಾರಿಯ ಸ್ಥೈರ್ಯವಂತ, ಗಟ್ಟಿ ಹೃದಯದ ಧೀರರು ಈ ಹೊಸ ದಾಳಿಯಿಂದ ಧೃತಿಗೆಡಬಾರದು ಎಂದು ಸವಿನಯವಾಗಿ ಪ್ರಾರ್ಥಿಸುತ್ತೇವೆ. ತಮ್ಮ ಪ್ರಿಯವಾದ ಜೀವಿ ತೊಣಚಿ, ತಮಗೆ ಪ್ರಿಯವಾದ ಹವ್ಯಾಸ ರಗಳೆ, ಪ್ರಿಯವಾದ ಜೀವನ ಶೈಲಿ ಕಲಹ ಎಂದು ತಮ್ಮನ್ನು ತಾವು ಪರಿಚಯಿಸಿಕೊಳ್ಳುವ ತೊಣಚಪ್ಪನವರನ್ನು ನಾವು ಸಮಸ್ತ ಗೌರವಾದರಗಳಿಂದ ನಗೆ ನಗಾರಿಗೆ ಸ್ವಾಗತಿಸುತ್ತಿದ್ದೇವೆ. ನಮ್ಮ ಪ್ರೀತಿಯ ಓದುಗರ ಮೇಲಿನ ಅನುಕಂಪದಿಂದ ತೊಣಚಪ್ಪನವರ ಬರಹಗಳನ್ನು ಭಾನುವಾರ ಮಾತ್ರವೇ ಪ್ರಕಟಿಸಬೇಕು ಎಂದು ನಗೆ ನಗಾರಿಯ ನಿರ್ದೇಶಕರ ಸಭೆಯು ತೆಗೆದುಕೊಂಡಿದ್ದ ತೀರ್ಮಾನವನ್ನು ಕ.ಬುಗೆ ಎಸೆದ ತೊಣಚಪ್ಪನವರು ನಗೆ ನಗಾರಿಯನ್ನು ಸಾಮ್ರಾಟರಿಗೆ ಸರಿಸಮಾನವಾಗಿ ಬಳಸಿಕೊಳ್ಳುವುದಾಗಿ ಬೆದರಿಸಿದ್ದಾರೆ. ತಮ್ಮ ಬ್ಲಾಗು ಬರಹದ ಒಂದಕ್ಷರವನ್ನೂ ಎಡಿಟ್ ಮಾಡಬಾರದು ಎಂದು ಕಟ್ಟಪ್ಪಣೆ ಮಾಡಿದ್ದಾರೆ.

ಈ ಮಧ್ಯೆ ಬದುಕಿನಲ್ಲಿ ಬಹುದಿನಗಳ ನಂತರ ಸಂತಸದ ಕ್ಷಣಗಳನ್ನು ಸವಿಯುತ್ತಿದ್ದ ನಗೆ ಸಾಮ್ರಾಟರು ತೀವ್ರವಾಗಿ ವ್ಯಾಕುಲಗೊಂಡಿದ್ದಾರೆ. ಅತಿ ಕಾಳಜಿಯಿಂದ ನಗೆ ನಗಾರಿ ಸಿಬ್ಬಂದಿ ಅವರನ್ನು ಪ್ರಶ್ನಿಸಿದಾಗ ತಮ್ಮದು ವಸಿಷ್ಠ- ವಿಶ್ವಾಮಿತ್ರ ಜೋಡಿ ಎಂದು ತಿಳಿಸಿದ ಸಾಮ್ರಾಟರು ಈ ವಿಶ್ವಾಮಿತ್ರ ತೊಣಚಪ್ಪ ನನ್ನೆಲ್ಲಾ ಸೃಷ್ಟಿಗೆ ಪ್ರತಿಸೃಷ್ಟಿ ಮಾಡುತ್ತಾ ಹೋದರೆ… ಎಂದು ಆತಂಕ ವ್ಯಕ್ತಪಡಿಸಿದರು. ತಮ್ಮ ಸಂಪಾದಕೀಯಕ್ಕೆ ಪ್ರತಿಯಾಗಿ ತೊಣಚಪ್ಪ ಸಂಪಾದಕೀಯವನ್ನು ಬರೆಯಲು ಶುರುಮಾಡಿದರೆ ಎಂಬ ಆತಂಕವನ್ನು ತೋರ್ಪಡಿಸಿಕೊಳ್ಳಲು ಹಿಂದೇಟು ಹಾಕಿದ ಸಾಮ್ರಾಟರು ತೊಣಚಪ್ಪನವರನ್ನು ಅತ್ಯಂತ ತಣ್ಣಗೆ ಮಣ್ಣುಪಾಲು ಮಾಡಲು ದುಬೈನಿಂದ ಹಂತಕರನ್ನು ಕರೆಸುವ ಯೋಜನೆಯನ್ನು ಮಾಡಿದ್ದಾರೆ.

ಅಂತರಂಗದ ವಿಷಯಗಳು ಏನೇ ಇದ್ದರೂ ನಗೆ ನಗಾರಿ ಡಾಟ್ ಕಾಮ್ ಸಂತೋಷದಿಂದ ತನ್ನೆಲ್ಲಾ ಓದುಗರಿಗೆ ಹೊಸ ವರ್ಷದ ಹಾಗೂ ಸಂಕ್ರಾಂತಿಯ ಹಾಗೂ ಮೊಹರಮ್ ಶುಭಾಶಯಗಳನ್ನು ತಿಳಿಸುತ್ತಿದೆ. ಹಾಗೆಯೇ ನಗೆ ನಗಾರಿಯನ್ನು ಉಪೇಕ್ಷಿಸುವವರು ಹಾಗೂ ಬ್ಲಾಗಿನ ಅಂಗಳದಲ್ಲಿದ್ದೂ ಇತ್ತ ತಲೆ ಹಾಕದವರಿಗೆ ದೇವೇಗೌಡರ ಹಾಸ್ಯ ಪ್ರಜ್ಞೆ, ಖರ್ಗೆಯವರ ಕಂಠಸಿರಿ, ಯಡಿಯೂರಿಯಪ್ಪನವರ ಸಫಾರಿ, ಸಿಹಿ ಕಹಿ ಚಂದ್ರುರ ನುಣ್ಣನೆಯ ತಲೆಯನ್ನು ಕರುಣಿಸಲಿ ಎಂದು ತಾನೆಂದೆಂದಿಗೂ ನಂಬದ ದೇವರಲ್ಲಿ ಅತ್ಯಂತ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತದೆ! ಆ ನಿಮ್ಮ ದೇವರು ನಿಮ್ಮನ್ನು ತೊಣಚಪ್ಪನಿಂದ ಕಾಪಾಡಲಿ…

ತೊಣಚಿ ಡೈರಿ: ಪುಟ ೧

 

ಕಂಬಿ ಎಣಿಸುತ್ತಿರುವ ರಾಜು – ವರದಿ

ನಮ್ ಪೇಪರ್ನೋರ್ಗೆ ಒಂದೋ ಬುದ್ಧಿ ಇಲ್ರಿ, ಇಲ್ಲಾಂದ್ರೆ ಅದು ಇರ್ಬೇಕಾದ ಜಾಗ್ದಾಗೆ ಇಲ್ರಿ. ಇಂಥವ್ನ ಜೈಲ್ಗೆ ಹಾಕ್ದ್ರು ಅನ್ನದನ್ನ ‘ಅಂವ ಕಂಬಿ ಎಣಿಸ್ತಿದಾನೆ’ ಅಂತ ಹೆಂಗೆ ಬರೀಯಕೆ ಆಗ್ತದೆ? ಜೈಲ್ಗೆ ಹೋದ ಮಗ ಎಲ್ಲ ಕಂಬಿ ಎಣಿಸ್ತಾರ? ಇದ್ರ ಬಗ್ಗೆ ತಿಳ್ಕಂಡು ಬರಿಬೇಕು. ಜೈಲ್ಗೆ ಹೋದವ್ರು ಮಾಡೊ ಕೆಲ್ಸನೆಲ್ಲ ಪಟ್ಟಿ ಮಾಡಿ ಅದ್ರಲ್ಲಿ ಕಂಬಿ ಎಣ್ಸದು ಎಲ್ಲಿ ಇದೆ ಅಂತ ತಿಳಿಸ್ಬೇಕು. ಇಷ್ಟಕ್ಕೂ ಕಂಬಿ ಎಣಸ್ತರೆ ಅಂದ್ರೆ ಅವು ಅವ್ರದೇ ಸೆಲ್‌ನ ಕಂಬಿಗಳು ಹೌದಾ ಅಲ್ವಾ ಅಂತ ತನಿಖೆ ಮಾಡ್ಬೇಕು. ಎಣಿಸೋದನ್ನೆ ಕಲಿಯದ ಮಡ್ಡಿಗಳು ಜೈಲ್ಗೆ ಹೋದ್ರೆ ಕಂಬಿಗಳ್ ಜೊತೆ ಏನ್ ಮಾಡ್ತಾರೆ ಅನ್ನಾದನ್ನ ತಿಳಿಸ್ಬೇಕು. ಅಲ್ವಾ?

ಧೋನಿ, ಪಂಕಜ್ ಅಡ್ವಾನಿ ಭದ್ರತೆ ಇಲ್ಲದೆ ರಾಬಿನ್ ಉತ್ತಪ್ಪ ಮನೆಗೆ ಭೇಟಿ – ವರದಿ

ನಮ್ ಪೊಲೀಸ್ನೋರ್ಗೆ ಬುದ್ದಿ ಇಲ್ವಾ? ಇವ್ರನ್ನೆಲ್ಲ ಹಿಂಗೆ ಸೆಕ್ಯುರಿಟಿ ಇಲ್ದೆ ಓಡಾಡಕೆ ಬಿಡ್ಬಾರ್ದು. ಇದು ನಿಜವಾಗ್ಲು ಡೆಂಜರಸ್ಸು. ಇವ್ರನ್ನ ಕಾಯಕೆ ಕನಿಷ್ಠ ಹತ್ ಮಂದಿಯಾದ್ರೂ ಇರ್ಲೇ ಬೇಕು. ಹೆಂಗಂದ್ರೆ ನಮ್ ಊರಲ್ಲಿ ಡಯಾಬಿಟಿಸ್ ಶ್ರೀಮಂತ್ರು ತಮ್ಗಿಂತ ಎತ್ರದ ನಾಯಿಗೆ ಚೈನ್ ಹಾಕಿ ಕರ್ಕೊಂಡೋಗ್ತರಲ್ಲ, ಹಂಗೆ. ಇವ್ರನ್ನೆಲ್ಲ ಚೈನಿಲ್ದೆ ಹೊರಕ್ಕೆ ಬಿಡ್ಬಾರ್ದು. ಏನಂತೀರಿ ನೀವ್ಗಳು?

ವಿದೇಶಿಯರಿಂದ ಭಾರತದ ಜ್ಞಾನ ಸಂಪತ್ತಿನ ಕಳವು – ರವಿಶಂಕರ್ ಗುರೂಜಿ

ಹೌದೌದು, ಕಾಲ ಬದಲಾಗ್ತಿದೆ. ಹಿಂದೆ ನಮ್ ಸ್ಕೂಲಲ್ಲಿ ಮೇಡಮ್ಮು ನಿಮ್ ಹತ್ರ ಇರೋ ಯಾವುದನ್ನ ಇನ್ನೊಬ್ರು ಕದ್ಕೊಂಡು ಹೋಗಾಕಾಗಲ್ಲ ಅಂತ ಕೇಳೋರು. ಆಮೇಲೆ ಅವ್ರೇ ಉತ್ರ ಹೇಳೋರು, ದುಡ್ಡಿದ್ರೆ ಅದ್ನ ಕಳ್ಳ ಕದ್ದು ಒಯ್ಯಬಹ್ದು, ಚಿನ್ನ ಇದ್ರೆ ಕದೀಬಹ್ದು, ಮನೆ ಇದ್ರೆ ಅದ್ನ ನಾಶ ಮಾಡ್ಬೋದು. ಆದ್ರೆ ನಿಮ್ಮ ವಿದ್ಯೆಯನ್ನ ಯಾರೂ ಕದೀಯಕಾಗಲ್ಲ. ಆಗೆಲ್ಲಾ ನಂಗೆ ನಮ್ಮಿಂದ ಕದಿಯಲಾಗದ ಮತ್ತೊಂದು ವಸ್ತು ನೆನಪಾಗ್ತಿತ್ತು. ಅದು ನನ್ ಬಳಿ ಭಾಳ ಇತ್ತು, ಯಾರಾದ್ರೂ ಕದೀತಾರೇನೋ ಅಂತ ಕಾಯ್ತಿದ್ದೆ. ಇಷ್ಟು ವರ್ಷ ಆದ್ರೂ ಅದ್ರಲ್ಲಿ ನಯಾಪೈಸೆ ಕಳ್ತನ ಆಗಿಲ್ಲ. ಓ, ಅದೇನು ಅಂತೀರಾ? ಅದು ನನ್ ಮೂರ್ಖತನ! ಕದಿಯೋ ತಾಕತ್ತು ಐತಾ ವಿದೇಶಿಯರೇ? 🙂