ನಮ್ಮ ಕತೆ, ಕಾದಂಬರಿ, ಧಾರಾವಾಹಿಗಳು, ಸಿನೆಮಾಗಳಲ್ಲಿನ ಡೈಲಾಗುಗಳು ನಾನಾ ತೆರನಾಗಿರುತ್ತವೆ. ಒಂದು ಪಾತ್ರ ಇನ್ನೊಂದು ಪಾತ್ರದೊಂದಿಗೆ ನಡೆಸುವ ಮಾತುಕತೆಯೋ, ಒಂದು ಪಾತ್ರ ತನ್ನೊಂದಿಗೇ ಆಡಿಕೊಳ್ಳುವ ಮಾತುಗಳೋ, ಪಾತ್ರವೊಂದರ ಮನಸ್ಸಿನ ಹೊಯ್ದಾಟವೋ – ಹೀಗೆ ಒಟ್ಟಿನಲ್ಲಿ ಮಾತುಗಳು ಭಾರಿ ಪ್ರಮುಖವಾದ ಪಾತ್ರವನ್ನೇ ವಹಿಸುತ್ತವೆ. ಇಂತಹ ಡೈಲಾಗುಗಳು ಕೆಲವೊಮ್ಮೆ ಅದೆಷ್ಟು ಕೃತಕ ಅನ್ನಿಸುತ್ತವೆಯೆಂದರೆ, ಪ್ಲಾಸ್ಟಿಕ್ ಹೂವಿಗಾದರೂ ಇರುವ ಪ್ಲಾಸ್ಟಿಕಿನ ಸಹಜತೆಯೂ ಸಹ ಇವುಗಳಲ್ಲಿ ಕಾಣಸಿಗುವುದಿಲ್ಲ!
ಲೇಖನಗಳ, ಸಾಹಿತ್ಯೇತರ ಬರವಣಿಗೆಗಳ ಉದ್ದೇಶ ಒಂದು ವಿಷಯವನ್ನು, ಅನುಭವವನ್ನು ಆದಷ್ಟು ಸರಳವಾಗಿ ಓದಿಗರಿಗೆ ತಿಳಿಸುವುದು. ಅವರ ಅಭಿಪ್ರಾಯಗಳನ್ನು ಲೇಖನದ ಆಶಯಕ್ಕೆ ತಕ್ಕಂತೆ ತಿದ್ದುವುದು, ಅವರಿಗೆ ಲೇಖನದ ವಿಚಾರ ಸರಣಿಯನ್ನು ಒಪ್ಪಿಸುವುದು. ಒಂದರ್ಥದಲ್ಲಿ ಲೇಖನದಲ್ಲಿರುವ ವಿಷಯ ವಸ್ತುವನ್ನು ಓದುಗನೆಂಬ ಗ್ರಾಹಕನಿಗೆ ಮಾರುವುದು. ಈ ಕೆಲಸಕ್ಕೆ ಒಬ್ಬ ಉತ್ತಮ ಸೇಲ್ಸ್ ಮನ್‌ಗಿರಬೇಕಾದ ಚಾಣಾಕ್ಷತೆ, ಕುಟಿಲತೆಗಳೆಲ್ಲವೂ ಇರಬೇಕಾಗುತ್ತದೆ. ತನ್ನ ಪ್ರಾಡಕ್ಟ್ ಬಗೆಗಿನ ಅತಿಯಾದ ವಿಶ್ವಾಸ, ಎದುರಾಳಿಯ ಪ್ರಾಡಕ್ಟನ್ನು ಯಾವ ಕಾರಣಕ್ಕೂ ಶ್ರೇಷ್ಠವೆಂದು ಒಪ್ಪಿಕೊಳ್ಳದ ಎಚ್ಚರ ಇವೆಲ್ಲಾ ಅತ್ಯಗತ್ಯ.
ಆದರೆ ಓದುಗನಿಗೆ ಮಾರಾಟವಾಗುವ ತುರ್ತಿಲ್ಲದ ಸಾಹಿತ್ಯಿಕ ಬರವಣಿಗೆಯ ಕಥೆಯೇನು? ಅವುಗಳಲ್ಲಿನ ಸಂಭಾಷಣೆಗಳಾದರೂ ಹೇಗಿರುತ್ತವೆ? ನಮ್ಮ ದಿನ ನಿತ್ಯದ ಬದುಕನ್ನೇ ಗಮನಿಸೋಣ. ನಾವು ಸಾವಿರಾರು ಮಂದಿಯನ್ನುದ್ದೇಶಿಸಿ ವೇದಿಕೆಯ ಮೇಲೆ ಮಾಡುವ ಭಾಷಣದಲ್ಲಿರುವಷ್ಟು ತಾರ್ಕಿಕವಾದ, ಸ್ಪಷ್ಟ ಅರ್ಥ ಪೂರ್ಣವಾದ, ವ್ಯಾಕರಣ ಬದ್ಧವಾದ ವಾಕ್ಯಗಳು ಗೆಳೆಯರೊಂದಿಗೆ ಹರಟುವಾಗ ಇರುವುದಿಲ್ಲ. ಗೆಳೆಯ, ಓರಗೆಯವರ ಜೊತೆ ಮಾತನಾಡಲು ಬಳಸುವ ಶೈಲಿ ನಮ್ಮೊಂದಿಗಿನ ನಮ್ಮ ಮಾತುಕತೆಯಲ್ಲಿ ಕಂಡುಬರುವುದಿಲ್ಲ. ಪ್ರಜ್ಞಾ ಪೂರ್ವಕವಾದ ನಮ್ಮ ಮಾತುಕತೆಗಳಲ್ಲಿ ಕಂಡು ಬರುವ ಬಂಧ, ಬಿಗಿ ಅಪ್ರಜ್ಞಾ ಪೂರ್ವಕವಾದ ನಮ್ಮ ಆಲೋಚನೆಗಳಲ್ಲಿ ಇರುವುದಿಲ್ಲ.
ಅಪ್ರಜ್ಞಾಪೂರ್ವಕವಾದ ನಮ್ಮೆಲ್ಲಾ ಆಲೋಚನೆಗಳು, ಭಾವನೆಗಳು ತೀರಾ ಸಿಲ್ಲಿಯಾಗಿರುತ್ತವೆ. ಅವುಗಳಲ್ಲಿ ಸುಳಿದು ಹೋಗುವ ಆತಂಕ, ಅನುಮಾನ, ಅಶ್ಲೀಲತೆ, ಗೊಂದಲದ ನೆರಳುಗಳು ಕುತೂಹಲಕರವಾಗಿರುತ್ತವೆ. ಇಂತಹ ಸಿಲ್ಲಿ ಭಾವಗಳೇ ಶುದ್ಧೀಕರಿಸಿಸಲ್ಪಟ್ಟು ನಮ್ಮ ಅಭಿವ್ಯಕ್ತಿಯನ್ನು ರೂಪಿಸುತ್ತವೆ. ನಮ್ಮ ಸಾಹಿತ್ಯದಲ್ಲಿ ಪಾತ್ರಗಳ ಅಭಿವ್ಯಕ್ತಿಗಿರುವಷ್ಟು ಪ್ರಾಮುಖ್ಯತೆ ಆತನ ಈ ಅಂತರಂಗದ ಸಿಲ್ಲಿ, ಬಾಲಿಶ ಆಲೋಚನೆಗಳಿಗೆ ಇರುವುದಿಲ್ಲ. ಇದು ಹೀಗೇಕೆ? ಒಂದು ಪಾತ್ರವೊಂದರ ನೋವು, ನಲಿವುಗಳನ್ನೆಲ್ಲಾ ಅನುಭವಿಸುವಷ್ಟು ಸಾಮರ್ಥ್ಯವಿರುವ ಲೇಖಕನ ಪ್ರತಿಭೆಯನ್ನು ಈ ಅಪ್ರಜ್ಞಾಪೂರ್ವಕವಾದ ಆಲೋಚನೆಗಳು ಮೀರಿರುವವೇ? ಪಾತ್ರವೊಂದಕ್ಕೆ ಪ್ರಜ್ಞಾ ಪೂರ್ವಕವಾದ ವ್ಯಕ್ತಿತ್ವವೊಂದನ್ನು ಆರೋಪಿಸುವಾಗಲೂ ಸಹ ಲೇಖಕ ತನ್ನೊಳಗಿನ ಸಿಲ್ಲಿತನವನ್ನು ಶುದ್ಧೀಕರಿಸಿಯೇ ತೊಡಗಿಕೊಳ್ಳುತ್ತಾನೆಯೇ?
ಇತ್ತೀಚಿನ ಪ್ರಜಾ ಉವಾಚ