Archive | ಕ್ರೀಡೆ RSS feed for this section

ಐಪಿಎಲ್ ಫೇಸ್ ಬುಕ್‌ಗೆ ಸ್ಥಳಾಂತರ : ಮೋಡಿ

18 ಫೆಬ್ರ

ಭದ್ರತೆ ದೃಷ್ಟಿಯಿಂದ ಅಭೂತಪೂರ್ವ ಕ್ರಮ

 

Untitled pictureನವದೆಹಲಿ, ಫೆ.೧೮: ಮಾರ್ಚ್ ೧೨ರಿಂದ ಶುರುವಾಗಲಿರುವ ಐಪಿಎಲ್ ಮೂರನೆಯ ಆವೃತ್ತಿಯನ್ನು ಭದ್ರತೆ ಕಾರಣದಿಂದ ಫೇಸ್ ಬುಕ್ಕಿಗೆ ಸ್ಥಳಾಂತರಿಸಲು ಸರ್ವಸಮ್ಮತವಾಗಿ ತೀರ್ಮಾನಿಸಿರುವುದಾಗಿ ಐಪಿಎ ಲ್ ದೊರೆ ಅಲೆತ ಮೋಡಿ ತಿಳಿಸಿದ್ದಾರೆ.

ಇಲ್ಲಿಯ ಸ್ಥಳೀಯ ಸೈಬರ್ ಕೆಫೆಯಲ್ಲಿ ನೆರೆದ ಸುದ್ದಿಗಾರರೊಂದಿಗೆ ಮಾತನಾಡಿದ ಮೋಡಿ ಭಯೋತ್ಪಾದಕ ಸಂಘಟನೆ ಹುಜಿಯ ಮುಖಂಡನ ಬೆದರಿಕೆಯ ಹಿನ್ನೆಲೆಯಲ್ಲಿ ಈ ನಿರ್ಧಾರಕೈಗೊಳ್ಳಲಾಗಿದೆ ಎಂದರು. ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆ ಹರ್ಕತುಲ್ ಜಿಹಾದಿ ಇಸ್ಲಾಮಿ(ಹುಜಿ)ಯ ಕಮ್ಯಾಂಡರ್ ಇಲಿಯಾಸ್ ಕಶ್ಮಿರಿ ಭಾರತದಲ್ಲಿ ನಡೆಯಲಿರುವ ಹಾಕಿ ಪಂದ್ಯಾವಳಿ, ಐಪಿಎಲ್ ಹಾಗೂ ಕಾಮನ್ ವೆಲ್ತ್ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ವಿದೇಶಿ ಆಟಗಾರರು ತಮ್ಮ ಜೀವಕ್ಕೆ ತಾವೇ ಜವಾಬ್ದಾರರು, ಪಾಕಿಸ್ತಾನದ ಆಟಗಾರರ ಜೀವಗಳಿಗೆ ಮಾತ್ರ ತಾವು ಜವಾಬ್ದಾರರು ಎಂದು ಬೆದರಿಕೆಯ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಕ್ರೀಡಾ ಪಟುಗಳ ರಕ್ಷಣೆಯ ಬಗ್ಗೆ ಕಾಳಜಿ ವ್ಯಕ್ತವಾಯಿತು.

ಕಳೆದ ಆವೃತ್ತಿಯ ಐಪಿಎಲ್ ಪಂದ್ಯಾವಳಿಯನ್ನು ಭದ್ರತೆಯ ದೃಷ್ಟಿಯಿಂದ ದಕ್ಷಿಣ ಆಫ್ರಿಕಾಗೆ ಸ್ಥಳಾಂತರಿಸಿ ರಾಜಸ್ಥಾನದ ತಂಡದ ಸೋಲಿಗೆ ಕಾರಣವಾಗಿದ್ದ ಮೋಡಿ ಈ ಬಾರಿ ಯಾರಿಗೂ ಅನ್ಯಾಯವಾಗದ ಹಾಗೆ ಸರ್ವ ಸಮ್ಮತವಾದ ಕ್ರಮವನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. “ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ನಮ್ಮೆಲ್ಲ ಶೇರುದಾರರ ಹಿತರಕ್ಷಣೆ ಮುಖ್ಯ. ಹಾಗಂತ ನಾವು ಆಟಗಾರರ ಜೀವವನ್ನು ಲೆಕ್ಕಿಸುವುದಿಲ್ಲ ಎಂದೇನಿಲ್ಲ.” ಎಂದಿದ್ದ ಮೋಡಿ ಕಡೆಗೆ ಐಪಿಎಲ್ ಪಂದ್ಯಾವಳಿಗಳನ್ನು ಫೇಸ್ ಬುಕ್ಕಿನಲ್ಲಿ ಆಯೋಜಿಸುವುದಕ್ಕೆ ಮುಂದಾಗಿದ್ದಾರೆ.

“ಫೇಸ್ ಬುಕ್ ವಿಶ್ವದಾದ್ಯಂತ ಸುರಕ್ಷಿತವಾದ ಕ್ರೀಡಾ ವಾತಾವರಣ ರೂಪಿಸುವಲ್ಲಿ ಯಶಸ್ವಿಯಾಗಿದೆ. ಲಕ್ಷಾಂತರ ಮಂದಿ ರೈತರು ಕ್ರೀಡಾಮನೋಭಾವದಿಂದ ಬೆಳೆ ತೆಗೆಯುವುದಕ್ಕೆ ನೆರವಾಗಿದೆ. ಒಂಚೂರು ರಕ್ತಪಾತವಿಲ್ಲದೆ ಮಾಫಿಯಾಗಳು ಯುದ್ಧ ನಡೆಸಿಕೊಳ್ಳಲು ಸಹಾಯ ಮಾಡಿದೆ. ಹಿಂಸಾಚಾರವಿಲ್ಲದೆ ವ್ಯಾಂಪೈರುಗಳು ಸಹಜೀವನ ನಡೆಸುವುದಕ್ಕೆ ಕಾರಣವಾಗಿದೆ. ಇಂತಹ ವ್ಯವಸ್ಥೆಯಲ್ಲಿ ಐಪಿಎಲ್ ಆಯೋಜಿಸಲು ಹರ್ಷವಾಗುತ್ತದೆ.”

ಮೋಡಿಯವರ ಈ ನಿರ್ಧಾರವನ್ನು ಸ್ವಾಗತಿಸಿರುವ ಫೇಸ್ ಬುಕ್ ನಿರ್ದೇಶಕ ಮಖೇಡಿ ಮ್ಯಾಥ್ಯುಸ್. “ಇದೊಂದು ಸ್ವಾಗತಾರ್ಹ ತೀರ್ಮಾನ. ಐಪಿಎಲ್ ಮೂರನೆಯ ಆವೃತ್ತಿಯನ್ನು ಫೇನ್ ಬುಕ್ಕಿನಲ್ಲಿ ಆಯೋಜಿಸಲು ನಮಗೂ ಹರ್ಷವಾಗುತ್ತದೆ. ಆಟಗಾರರು ತಮ್ಮ ತಮ್ಮ ದೇಶಗಳಲ್ಲೇ, ತಮ್ಮ ಮನೆಯ ಸೋಫಾಗಳಲ್ಲೇ ಕೂತು ಭಾಗವಹಿಸಬಹುದು. ವೀಕ್ಷಕರು ಕೂಡ ಆಫೀಸುಗಳಲ್ಲಿ, ಮನೆಗಳಲ್ಲಿ ಕೂತೇ ಪಂದ್ಯ ವೀಕ್ಷಿಸಬಹುದು. ಜೊತೆಗೆ ಕಪಿಸೇನೆಗಳ ಬೆದರಿಕೆ, ಭಯೋತ್ಪಾದಕರ ಬೆದರಿಕೆಗಳಿಗೂ ಅಂಜದೆ ವಿಶ್ವದಾದ್ಯಂತ ಎಲ್ಲರೂ ಪಾಲ್ಗೊಳ್ಳಬಹುದು.”

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಂತರ್ಜಾಲದ ಪ್ರಭಾವವನ್ನು ಅವಗಣಿಸಿ ಸಮಾಜ ಪ್ರಗತಿಯತ್ತ ಸಾಗಲು ಸಾಧ್ಯವಿಲ್ಲ ಎಂದಿರುವ ತಂತ್ರಜ್ಞ ತಂತ್ರೇಶ್ ಜಾದವ್ “ಬೆರಳು ಮುರಿತ, ತೊಡೆ ಸಂದು, ಭುಜದ ನೋವುಗಳಿಲ್ಲದೆ ಆಟಗಾರರು ಆರಾಮವಾಗಿ ಆಡಬಹುದಾದ ಅಂತರ್ಜಾಲದ ಐಪಿಎಲ್ ಆವೃತ್ತಿ ಕ್ರಾಂತಿಕಾರಿಯಾದ ಬೆಳವಣಿಗೆ. ಇದರಿಂದ ಆಟಗಾರರು ತಮ್ಮ ಆಟಕ್ಕೆ ಯಾವ ರೀತಿಯಿಂದಲೂ ಸಂಬಂಧಿಸದ ದೈಹಿಕ ಫಿಟ್‌ನೆಸ್ಗಾಗಿ ಶ್ರಮ ಪಡಬೇಕಿಲ್ಲ. ಅಲ್ಲದೆ ಕೂತಲ್ಲೇ ದೇಹವನ್ನು ಬಿಟ್ಟು ಸಂಚಾರ ಹೋಗಿ ಬರುತ್ತಿದ್ದ ಪೌರಾಣಿಕ ಕತೆಗಳನ್ನು ನಿಜ ಮಾಡಿ ತೋರಿಸಲು ಈ ತಂತ್ರಜ್ಞಾನ ನೆರವಾಗುತ್ತದೆ. ಜೈ ಐಟಿ!”

ಕಳೆದು ಹೋಗಿದೆ ಹುಡುಕಿ ಕೊಡಿ…

30 ಸೆಪ್ಟೆಂ

(ನಗೆ ನಗಾರಿ ಕ್ರೀಡಾವಿನೋದ ಬ್ಯೂರೋ)

ಸಾವಿರಾರು ರುಪಾಯಿಗಳ ಔಷಧಿ, ಹಣ್ಣು ಹಂಪಲು ತಿಂದು ಅರಗಿಸಿಕೊಂಡರೂ ನಮ್ಮ ನಾಡಿನ ಮಕ್ಕಳು ಎರಡು ಕಾಲ ಮೇಲೆ ನಿಲ್ಲುವುದರೊಳಗೆ ಕಣ್ಮುಚ್ಚುತ್ತವೆ ಆದರೆ ‘ಕಳೆದು ಹೋಗಿದೆ ಹುಡುಕಿ ಕೊಡಿ’ ಎಂದು ಪೋಲಿಸ್ ಸ್ಟೇಷನ್ನಿನಲ್ಲಿ ದಾಖಲಾದ ಅರ್ಜಿಗಳು ಚಿರಂಜೀವಿಗಳು. ಬಹುಶಃ ಇಲ್ಲಿಯೂ ನಮ್ಮ ನಾಡಿನ ಜನತೆ ಸಾವಿರಾರು ರೂಗಳ ಔಷಧಿ ಶೈತ್ಯೋಪಚಾರದ ಖರ್ಚನ್ನು ಮಾಡಿದರೆ ಆ ಅರ್ಜಿಗಳ ಕೊಲೆಗೆ ನಮ್ಮ ಪೋಲೀಸರು ಸಂಚನ್ನು ರೂಪಿಸುವ ಮಟ್ಟಿಗೆ ಕಾರ್ಯ ಪ್ರವೃತ್ತರಾಗಬಹುದು. Dejected Dhoni T20

ಹುಡುಕುವುದರ ಕಷ್ಟ ಅದನ್ನು ಕಳೆದುಕೊಂಡವನಿಗಿಂತ ಚೆನ್ನಾಗಿ ಅದಾರು ಬಲ್ಲರು? ತಿಪ್ಪೆಯ ಒಂದೊಂದು ಕೊಳೆತ ಹಣ್ಣಿನ ಸಿಪ್ಪೆಯನ್ನು ಸರಿಸುತ್ತಲೂ ಕಳೆದು ಹೋದ ವಸ್ತುವನ್ನು ಕಲ್ಪಿಸಿಕೊಳ್ಳುತ್ತಾ ಪ್ರಯಾಸಪಡುವ ಆಸಾಮಿಯನ್ನು ನೀವು ನೋಡಿರುತ್ತೀರಿ. ಆತ ರಸ್ತೆಯಲ್ಲಿ, ಚರಂಡಿಯ ಬಳಿ, ಶಾಲೆಯ ಮೈದಾನದಲ್ಲಿ, ತಿಪ್ಪೆ ಗುಂಡಿಯ ಸನಿಹ, ತಾನು ನಿದ್ರೆಯಲ್ಲಿ  ಓಡಾಡಿರಬಹುದಾದ  ಜಾಗವನ್ನೂ ಸಹ ಬಿಡದೆ ಆತ ತಲಾಶಿಸುತ್ತಿರುವಾಗ ದಾರಿಹೋಕರು ಮಾಡುವುದೇನು? ಚಡ್ಡಿಯೋ, ಪ್ಯಾಂಟೋ ಯಾವುದೋ ಎರಡು ಜೇಬಿರುವ ತೊಡುಗೆಯಾದರೆ ಅವೆರಡೂ ಜೇಬಿನೊಳಕ್ಕೆ ಕೈಗಳನ್ನು ಇಳಿಯ ಬಿಟ್ಟು, “ಏನು?” ಅನ್ನುವಂತೆ ನೋಟದಲ್ಲೇ ಪ್ರಶ್ನೋತ್ತರ ಮಾಲಿಕೆ ಆರಂಭಿಸುತ್ತಾರೆ. ನೀವು ಕೈ ಬಾಯಿ, ಮುಖ ಯಾವುದಕ್ಕೂ ಬಿಡುವಿಲ್ಲದ ಹಾಗೆ ಹುಡುಕಾಟದಲ್ಲಿ ತೊಡಗಿರುವಾಗ ಆ ನಿಮ್ಮ ಹಿತಚಿಂತಕ ದಾರಿಹೋಕ ತನ್ನ ಅನುಭವ ಸಾರವನ್ನೆಲ್ಲ ಹೀರಿ ಸಲಹೆಗಳನ್ನು, “ಹುಶಾರಾಗಿ ಇಟ್ಟುಕೊಳ್ಳಬಾರದಾ…” ಎನ್ನುವಂತಹ ಯಾವುದಕ್ಕೂ ಉಪಯೋಗಕ್ಕೆ ಬಾರದ ಬುದ್ಧಿಮಾತುಗಳನ್ನು ಅರ್ಪಿಸುತ್ತಾನೆ. ಭಕ್ತ ಕೊಟ್ಟಿದ್ದನ್ನೆಲ್ಲ ಸ್ವೀಕರಿಸುವ ತಿಮ್ಮಪ್ಪನ ಔದಾರ್ಯ ನಿಮ್ಮಲ್ಲಿದ್ದರೆ ಆ ದಾರಿಹೋಕನ ಬೆನ್ನು ನಿಮ್ಮ ಬೈಗುಳದ ಆಲಿಂಗನವಿಲ್ಲದೆ ಬ್ರಹ್ಮಚರ್ಯ ಪಾಲಿಸುತ್ತದೆ.

ಜನ ಏನೇನನ್ನೆಲ್ಲಾ ಕಳೆದುಕೊಳ್ಳುತ್ತಾರೆ? ಕಳೆದುಕೊಳ್ಳುವುದಕ್ಕೆ ಆ ವಸ್ತುವು ಮೊದಲು ತಮ್ಮ ಬಳಿ ಇರಬೇಕು ಎನ್ನುವ ಸಾಮಾನ್ಯ ತಿಳುವಳಿಕೆಯೂ ಅನೇಕರಿಗಿರುವುದಿಲ್ಲ. ಓಣಿಯ ಒಂದು ಮನೆಯಲ್ಲಿ ಒಂದು ಹಿತ್ತಾಳೆಯ ಚಂಬು ಕದ್ದ ಕಳ್ಳ ಸಿಕ್ಕಿ ಬಿದ್ದರೆ ಉಳಿದ ಮನೆಗಳಲ್ಲಿ ಎಂದೂ ಇದ್ದೇ ಇರದ ಚಿನ್ನದ ಆಭರಣಗಳು ಕಾಣೆಯಾಗಿರುತ್ತವೆ! ಮಾನ, ಮರ್ಯಾದೆ, ಬುದ್ಧಿವಂತಿಕೆ, ಸೌಂದರ್ಯ, ಶೀಲ, ವ್ಯಕ್ತಿತ್ವ, ಪ್ರಾಮಾಣಿಕತೆ, ಆದರ್ಶಗಳು ಕಳೆದು ಹೋದವು ಎಂದು ಯಾರಾದರೂ ಗೋಳಾಡಿದರೆ ಅವು ಮೊದಲು ಎದ್ದವೇ ಎನ್ನುವ ಸಂಶಯ ಸಹಜ.

ಕಳೆದು ಹೋದ ವಿಷಯಗಳ ಪ್ರಸ್ತಾಪವನ್ನು ಈಗ ಮಾಡುವುದಕ್ಕೆ ಉದ್ದೇಶವಿದೆ. ನಮ್ಮ ದೇಶದ ಕನಸುಗಳನ್ನು ನನಸಾಗಿಸಲು ಜನ್ಮವೆತ್ತಿ ಬಂದ, ತನ್ನ ಆಗಮನದಿಂದ ಬರಗೆಟ್ಟ ದೇಶಕ್ಕೆ ವಿಜಯಮಾಲೆಯನ್ನು ತೊಡಿಸಿ ಮೆರೆಸಿದ, ದೇಶಕ್ಕಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಆಡುತ್ತ, ತಂಡದ ನಾಯಕನಾಗಿರುವ ಮಹೇಂದ್ರ ಸಿಂಗ್ ಧೋನಿ ಎಂಬ ಯುವಕ ನಮ್ಮೀ ಕತೆಯ ದುರಂತ ನಾಯಕ. ಈತ ದೇಶದ ಹೆಸರನ್ನು ಬೆಳಗುವುದಕ್ಕಾಗಿ ದಿನದ ಪಂದ್ಯಗಳು, ದಿನ ರಾತ್ರಿಯ ಪಂದ್ಯಗಳನ್ನು ಆಡುತ್ತಾ, ಮೈದಾನದಲ್ಲಿ ಬೆವರು ಸುರಿಸುತ್ತಾ ತಂಡವನ್ನು ಮುನ್ನಡೆಸುತ್ತಾ ಕಷ್ಟ ಪಡುತ್ತಾನೆ. ಸಾಲದೆಂಬಂತೆ ಸಂಬಳವೆಂದು ಕ್ರಿಕೆಟ್ ಮಂಡಳಿಯಿಂದ ಕೈಯಲ್ಲಿ ಎಣಿಸಲಾಗದಷ್ಟು ಹಣ! ಇವೆಲ್ಲವನ್ನೂ ಬಹುಶಃ ಈತ ಹೇಗೋ ನಿಭಾಯಿಸುತ್ತಿದ್ದನೇನೋ, ಆದರೆ ಎದುರಾಳಿ ತಂಡದ ಬೌನ್ಸರ್‌ಗಳ ಜೊತೆಗೆ ಬಾಲಿವುಡ್ ಲಲನೆಯರ ‘ಅಂಡರ್ ಆರ್ಮ್’ ಡೆಲಿವರಿಗಳನ್ನು ಎದುರಿಸುವ ಕಷ್ಟ. ಇಷ್ಟು ಸಾಲದೆಂಬಂತೆ ಲೆಕ್ಕ ಹಾಕುವುದಕ್ಕೆ ತನ್ನ ಕಾಲೇಜು ವಿದ್ಯಾಭ್ಯಾಸವೇ ಸಾಲದಷ್ಟು ಮೊತ್ತದ ಜಾಹೀರಾತುಗಳ ಕಾಂಟ್ರ್ಯಾಕ್ಟು. ಇಷ್ಟೆಲ್ಲ ನರಕಯಾತನೆಯನ್ನು ಕೇವಲ ದೇಶದ ಮೇಲಿನ ಅಭಿಮಾನಕ್ಕಾಗಿ, ಕ್ರಿಕೆಟ್ ಮೇಲಿನ ಪ್ರೀತಿಗಾಗಿ, ಅಭಿಮಾನಿಗಳ ಮೇಲಿನ ಗೌರವಕ್ಕಾಗಿ ಪೂರ್ಣ ಮನಸ್ಸಿನಿಂದ ಒಪ್ಪಿ ಅನುಭವಿಸುತ್ತಿದ್ದ ಧೋನಿಯ ಸಹನೆಯ ಕಟ್ಟೆ ಒಡೆದಿದೆ. ಇಷ್ಟು ಕಾಲ ಆತನ ಬೆನ್ನುಲುಬಾಗಿದ್ದ ಶಕ್ತಿಯು ಕಳೆದುಹೋಗಿ ಆತ ಶಾಪಗ್ರಸ್ತ ಗಂಧರ್ವನಾಗಿದ್ದಾನೆ. ರಾಜಕುಮಾರಿಯ ಲಿಪ್‌ಸ್ಟಿಕ್ ಇಲ್ಲದ ತುಟಿಯ ಚುಂಬನಕ್ಕಾಗಿ ಕಾದು  ಕುಳಿತ ಕಪ್ಪೆಯಾಗಿದ್ದಾನೆ. ಆತನ ಅಪೂರ್ವ ಆಸ್ತಿಯಾಗಿದ್ದ ಅದು ಕಳೆದು ಹೋಗಿದೆ. ಹೌದು, ಧೋನಿಯ ಪ್ರಭಾವಳಿ ಕಳೆದು ಹೋಗಿದೆ!

ಆತ ನಿಜಕ್ಕೂ ಬುದ್ಧಿವಂತನಾಗಿದ್ದರೆ ತಾನು ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ ಎಂದು ತಿಳಿದಾಗ ಮಿದಾಸ ನೇರವಾಗಿ ತನ್ನ ಹೊಟ್ಟೆಯನ್ನು ಬಗೆದು ಜೀರ್ಣಾಂಗ ವ್ಯೂಹವನ್ನೇ ಮುಟ್ಟಿ ಬಿಡುತ್ತಿದ್ದ. ಹಸಿವೆಯೆಂಬ ರಕ್ಕಸನ ಬಂಗಾರದ ಪ್ರತಿಮೆಯನ್ನು ಮಾಡಿ ಶೋಕೇಸಿನಲ್ಲಿಟ್ಟು ಬಿಟ್ಟಿದ್ದರೆ ಅವನನ್ನು ಹಿಡಿಯುವವರು ಇದ್ದರೆ? ಯಾರಿಗೆ ಗೊತ್ತು, ಮುಟ್ಟಿದ್ದನ್ನು ಬಂಗಾರವಾಗಿಸುವ ಶಕ್ತಿ ಕೈಗಳಿಗೆ ಬಂದಾಗ, ತಲೆಯಲ್ಲಿ ಅದುವರೆಗೂ ಇದ್ದ ಮೆದುಳಿಗೇ ತುಕ್ಕು ಹಿಡಿಯಬಹುದು. ಈ ಕಾಲದ ಮಿದಾಸನ ಕತೆಯೇನು ಭಿನ್ನವಾಗಿಲ್ಲ. ಈತ ಕೆಮ್ಮಿದ ದಿಕ್ಕಿನಲ್ಲಿ ಗಾಳಿಯು ಹೆಚ್ಚಾಗಿ ಎದುರಾಳಿ ಆಟಗಾರ ಚಡಪಡಿಸಿ ಹೋಗುವ ಅದೃಷ್ಟ ಈತನದು. ತಾನೊಮ್ಮೆ ವಿಕೆಟುಗಳ ಹಿಂದಿನ ಜಾಗದಿಂದ ಕದಲಿ  ಬೌಲರ್‌ಗೆ ಸಣ್ಣ ಸ್ಟ್ರೆಸ್ ಮ್ಯಾನೇಜ್‌ಮೆಂಟ್ ಭಾಷಣ ಕೊಟ್ಟರೆ ಸಾಕು ಎದುರಾಳಿ ಬ್ಯಾಟ್ಸ್‌ಮನ್ ವಿಕೆಟ್ ಒಪ್ಪಿಸಿ ನಡೆದು ಬಿಡುತ್ತಿದ್ದ. ತಾನು ಕಣ್ಣು ಮುಚ್ಚಿಕೊಂಡು ಎಡಗೈಯಲ್ಲಿ ತೋರಿದ ಆಟಗಾರ ತಂಡದಲ್ಲಿ ಬಂದೊಡನೆ ಅಜ್ಞಾತವಾಸ ಕಳಚಿ ಬಂದ ಅರ್ಜುನನಾಗುತ್ತಿದ್ದ. ಆಗೆಲ್ಲಾ ಧೋನಿಯೆಂಬ ರಾಂಚಿಯ ಹುಡುಗನ ಸುತ್ತಲಿದ್ದ ಪ್ರಭಾವಳಿಯನ್ನು ಕಂಡು ಜನತೆ ಉಘೇ ಉಘೇ ಅನ್ನತೊಡಗಿದರು.

ಈಗ ತಾವೇ ಆತನ ಸುತ್ತ ಕಂಡಿದ್ದ ಪ್ರಭಾವಳಿಯು ಕಾಣೆಯಾಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ. ಜನರ ಮಾತು ಕೇಳಿ ಆತನೂ ತಾನು ಕಂಡಿರದ ವಸ್ತುವನ್ನು ಹುಡುಕಲು ಹೊರಟಿದ್ದಾನೆ. ತನ್ನ ದೇಶದ ಅಭಿಮಾನಿಗಳಿಗೆ ಇಂದಿನ ಆಟದಲ್ಲಿ ಆಸ್ಟ್ರೇಲಿಯ ವಿರುದ್ಧ ಪಾಕಿಸ್ತಾನ ಗೆಲ್ಲುವಂತೆ ಬೇಡಿಕೊಳ್ಳಿ, ಪಾಕಿಸ್ತಾನವನ್ನೇ ಬೆಂಬಲಿಸಿ ಎಂದು ಬೇಡಿಕೊಂಡಿದ್ದಾನೆ.

ಈ ನಡುವೆ ಧೋನಿ ಕಳೆದುಕೊಂಡಿದ್ದಾನೆ ಎಂದು ಹೇಳಲಾದ ಪ್ರಭಾವಳಿಯನ್ನು ಹುಡುಕಿ ಪತ್ತೆ ಹಚ್ಚಿ ಹಿಂದಿರುಗಿಸುವುದಕ್ಕಾಗಿ ದೇಶದ ನಾನಾ ಭಾಗಗಳಿಂದ ಚಾಣಾಕ್ಷ ಪತ್ತೆದಾರರನ್ನು ದಕ್ಷಿಣ ಆಫ್ರಿಕಾಗೆ ಕರೆಸಿಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ಕಾಣೆಯಾಗಿರುವ ಜನರ ಮಾನವೀಯತೆಯನ್ನು ಹುಡುಕುವ ವ್ಯರ್ಥ ಪ್ರಯತ್ನದಲ್ಲಿ ತೊಡಗಿದ್ದ ನಮ್ಮ ಅತ್ಯಾಪ್ತ ಚೇಲ ಕುಚೇಲನಿಗೆ ಸಹ ಕರೆ ಬಂದಿದೆ. ಈತ ಹಿಂದಿನ ಕೇಸ್ ಒಂದರಲ್ಲಿ ತೋರಿದ್ದ ಅಪ್ರತಿಮ ಬುದ್ಧಿಮತ್ತೆಯನ್ನು ಪ್ರಶಂಸಿಸಿ ಈತನ ಸೇವೆಯನ್ನು  ಈ ಕೇಸಿನಲ್ಲಿ ಬಯಸಿದ್ದಾರೆ. ಈ ದಿನದ ಪಂದ್ಯದ ಪ್ರಾರಂಭದ ಒಳಗೆ ತನಿಖೆ ಪೂರ್ಣಗೊಳ್ಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದರೆ, ಗೆಲುವಿನ ಓಟದಲ್ಲಿರುವಾಗ ನಾನಾ ದೋಷ ಪರಿಹಾರಗಳನ್ನು ಮಾಡಿಸಲು ದೇಶದ ಉದ್ದಗಲಕ್ಕೂ ಅಂಡೆಲೆಸಿದ ಮಾಂತ್ರಿಕರು ತಮ್ಮ ಮೆದುಳನ್ನು ಹುಡುಕಲು ಅಂಜನ ಹಾಕುವಲ್ಲಿ ಮಗ್ನರಾಗಿದ್ದಾರೆಯೇ ಎಂದು ಸಾಮ್ರಾಟರು ಗೊಣಗುತ್ತಿದ್ದಾರೆ!

ಭಾರತವೂ ಭಯೋತ್ಪಾದಕ ರಾಷ್ಟ್ರ: ಕ್ರಿಕೆಟ್ ಜಗತ್ತು

15 ಮಾರ್ಚ್

 

(ನಗಾರಿ ಕಿರಿಕಿರಿ ಕ್ರಿಕೆಟ್ಟು ಬ್ಯೂರೋ)

ಅಫಘಾನಿಸ್ತಾನದ ಬಾಡಿಗೆ ಹಂತಕರು, ತಮ್ಮದೇ ಸೈನ್ಯದ ಬೇನಾಮಿ ಸೈನಿಕರು, ಬಲೂಚಿಸ್ತಾನದ ಬುಡಕಟ್ಟು ಪಂಗಡದ ಯೋಧರನ್ನು ಭಾರತದೊಳಕ್ಕೆ ನುಗ್ಗಿಸಿ ಭಾರತೀಯ ಸೇನೆಯ ತಾಣಗಳ ಮೇಲೆ, ಕಾಶ್ಮೀರದಲ್ಲಿನ ಮುಸ್ಲಿಮೇತರ ಜನರ ಮೇಲೆ ದಾಳಿ ನಡೆಸಿ ಅದನ್ನು ಜಿಹಾದ್, ಸ್ವಾತಂತ್ರ್ಯ ಹೋರಾಟ, ಧರ್ಮ ಯುದ್ಧ ಎಂದು ಕರೆದುಕೊಂಡು ಹೆಮ್ಮೆಯಿಂದ ಸೋಲುತ್ತಿದ್ದ ಪಾಕಿಸ್ತಾನ ತನ್ನ ಹೋರಾಟವನ್ನು ಹೊಸತೊಂದು ಎತ್ತರಕ್ಕೆ ಕೊಂಡೊಯ್ದದ್ದು ಇತ್ತೀಚೆಗೆ. ಆಟದ ಮೈದಾನದಲ್ಲಿ ನಡೆಯುವ ಕಾಳಗವನ್ನು ಬೌಂಡರಿ ಲೈನ್ ದಾಟುತ್ತಿದ್ದಂತೆಯೇ ಮರೆತು ಬಿಡಬೇಕು ಎಂದು ವಿವೇಕಿ ಕ್ರಿಕೆಟಿಗರು ಹೇಳಿದ್ದಾರಾದರೂ ಈ ಬೌಂಡರಿಯಿಲ್ಲದ, ಮಿತಿಯಿಲ್ಲದ, ಮತಿಯಿಲ್ಲದ ಭಯೋತ್ಪಾದಕರಿಗೆ ಶ್ರೀಲಂಕಾದ ಕ್ರಿಕೆಟಿಗರೂ ಗುರಿಯಾದದ್ದು ದುರದೃಷ್ಟಕರ. ಅಷ್ಟು ಮಂದಿ ಆಟಗಾರರು ಎದುರು ಸಿಕ್ಕರೂ ಒಂದೂ ಗುರಿಯನ್ನು ಸರಿಯಾಗಿ ಮುಟ್ಟದಂತೆ ಶೂಟ್ ಮಾಡಿದ ಭಯೋತ್ಪಾದಕರಿಗೆ ತರಬೇತಿ ಸಿಕ್ಕಿದ್ದು ಪಾಕಿಸ್ತಾನದಲ್ಲೇ ಎಂದು ಸಾಬೀತು ಮಾಡಲು ಬೇರೆ ಸಾಕ್ಷಿಗಳೇ ಬೇಕಿಲ್ಲ.

ಲಂಕನ್ ಕ್ರಿಕೆಟ್ ತಂಡದೊಂದಿಗೇ ತಾವೂ ಹೊರಡುತ್ತಿದ್ದ ಪಾಕಿಸ್ತಾನದ ತಂಡ ಆ ದಿನ ಮಾತ್ರ ಹಿಂದಕ್ಕೆ ಉಳಿಯಲು ಯಾವ ಕೋಚು ಚಿಟ್ ಕಳುಹಿಸಿರಬೇಕು ಎಂದು ಜಗತ್ತೇ ತಲೆ ಕೆಡಿಸಿಕೊಂಡು ಕೂತಿರುವಾಗ ನಾವು ಸತ್ಯಶೋಧನೆಗಾಗಿ, ಕಾಣದ ಕೈಗಳ ಕೈವಾಡದ ತನಿಖೆಗಾಗಿ ನಮ್ಮ ಅತ್ಯಾಪ್ತ ಚೇಲ ಕುಚೇಲನನ್ನು ಪಾಕಿಸ್ತಾನಕ್ಕೆ ಅಟ್ಟುತ್ತಿದ್ದೇವೆ.

ಪಾಕಿಸ್ತಾನವೆಂಬ ‘ಪಾತಕಿ ಸ್ಥಾನ’ದಲ್ಲಿ ಬಾಳುವೆ ಮಾಡುವುದಕ್ಕಿರಲಿ, ಆಟವಾಡುವುದಕ್ಕೂ ಜಗತ್ತು ಹೆದರುವಂತಾಗಿದೆ. ಜಗತ್ತಿನ ಕ್ರಿಕೆಟ್ ವೀರರೆಲ್ಲಾ ಪಾಕಿಸ್ತಾನಕ್ಕೆ ಕಾಲಿಡಲು ಭಯಭೀತರಾಗಿದ್ದಾರೆ. ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಭಾರತ ಯಾವ ಕಾಲದಿಂದಲೂ ಜರೆಯುತ್ತಿದ್ದರೂ ಅದನ್ನು ಪ್ರತಿನಿತ್ಯ ಕೇಳುವ ದೂರದ ದೇವಸ್ಥಾನದ ಗಂಟೆಯ ನಾದದ ಹಾಗೆ ಭಾವಿಸಿ ಮೈಮರೆಯುತ್ತಿದ್ದ ಜಗತ್ತು ಈಗ ಎಚ್ಚೆತ್ತುಕೊಂಡಿದ್ದೆ. ಗಂಟೆಯ ಸದ್ದಿಗೆ ತಲೆದೂಗಿಸುತ್ತಿದೆ.

ಆದರೆ ಅದರ ನಡುವೆಯೇ ಅತ್ಯಂತ ಕರ್ಕಶವಾದ ಸದ್ದೊಂದು ಕೇಳಿಬರಲು ತೊಡಗಿದೆ. ಪಾಕಿಸ್ತಾನವೆಂಬ ಹೋಲಿಕೆಗೆ ಸಿಗದ ದೇಶದ ಜೊತೆಗೆ ಭಾರತದ ಹೆಸರನ್ನೂ ತಳುಕು ಹಾಕಲಾಗುತ್ತಿದ್ದ. ಜಗತ್ತಿನಾದ್ಯಂತ ಕ್ರಿಕೆಟ್ ಕಲಿಗಳು  ಪಾಕಿಸ್ತಾನ ಮಾತ್ರವಲ್ಲ ಭಾರತದ ಹೆಸರು ಕೇಳಿದರೂ ನಮ್ಮ ತೊಡೆಗಳು ನಡುಗುತ್ತಿವೆ ಎಂದು ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನದ ಜೊತೆಗೆ ಭಾರತವೂ ತಮಗೆ ದುಃಸ್ವಪ್ನವನ್ನು ತರಿಸುತ್ತಿವೆ ಎಂದು ವರದಿ ಮಾಡಿದ್ದಾರೆ. ಪಾಕ್ ಜೊತೆಗೆ ಭಾರತವನ್ನೂ ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಬೇಕಾಗಿ ಒಕ್ಕೊರಲಿನಿಂದ ಆಗ್ರಹಿಸುತ್ತಿವೆ. ಈ ಆಗ್ರಹದ ಧ್ವನಿಗೆ ಕ್ರಿಕೆಟ್ ಜಗತ್ತಿನದಲ್ಲದೆ ಇತರ ಧ್ವನಿಗಳೂ ಸೇರಿಕೊಂಡಿವೆ.

ಇವರ ಆಗ್ರಹಕ್ಕೆ ಕಾರಣವೇನೆಂದು ನಮ್ಮ ಆತ್ಮೀಯ ಗೆಳೆಯ ತೊಣಚಪ್ಪನವರು ವಿಚಾರಿಸಿದಾಗ ಆಸ್ಟ್ರೇಲಿಯಾ ತಂಡದ ಹೆಸರು ಹೇಳಲಿಚ್ಚಿಸದ ಆಟಗಾರನೊಬ್ಬ ಹೀಗೆಂದ, “ಭಾರತ ಭಯೋತ್ಪಾದಕ ರಾಷ್ಟ್ರವಾಗಿದೆ. ಅದರ ಹೆಸರು ಕೇಳಿದರೆ ನಮ್ಮ ಆಟಗಾರರು ಭಯದಿಂದ ತತ್ತರಿಸಿ ಹೋಗುತ್ತಾರೆ. ಹಿಂದೆಯೂ ಅನೇಕ ಬಾರಿ ಇಂತಹ ಘಟನೆಗಳು ನಡೆದಿದ್ದವು. ಇಡೀ ಭಾರತ ತಂಡವಲ್ಲ, ಅದರ ಒಬ್ಬ ಆಟಗಾರನನ್ನು ಕಂಡು ನಮ್ಮ ತಂಡವೇ ಭಯಭೀತಗೊಂಡಿತ್ತು. ನಮ್ಮ ತಂಡದ ಪ್ರಮುಖ ಸ್ಪಿನ್ ಬೌಲರ್ ಕನಸಿನಲ್ಲಿ ಆ ಆಟಗಾರ ಬಂದು ಭಯವನ್ನು ಹುಟ್ಟಿಸುತ್ತಿದ್ದ. ಹೇಗೋ ಭಾರತದ ಸರಣಿ ಪ್ರವಾಸದ ಸಂದರ್ಭದಲ್ಲಿ ಕಲಿತಿದ್ದ ‘ರಾಮ ರಕ್ಷಾ ಸ್ತೋತ್ರ’ವನ್ನು ಪಠಿಸಿ ಆತನನ್ನು ಸಹಿಸಿಕೊಂಡು ಆಡುತಿದ್ವಿ. ಆದರೆ ಈಗ ಇಡೀ ತಂಡಕ್ಕೆ ತಂಡವೇ ಭಯೋತ್ಪಾದಕ ಯುನಿಟ್ ಆಗಿದೆ. ಅವರ ಮೇಲೆ ಆಡಿದ ಎಲ್ಲಾ ತಂಡಗಳೂ ಸೀರೀಸ್ ಸೋಲುವುದರ ಜೊತೆಗೆ ಆ ತಂಡದ ನಾಯಕ ತಲೆ ದಂಡ ಕೊಡಬೇಕಾಗಿ ಬಂತು. ನೋಡಿ, ಈ ಧೋನಿ ಎಂಬ ಬಂಡು ಕೋರನ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ನಡೆಸಿರುವ ಭಯೋತ್ಪಾದನೆಯನ್ನ, ಇವರು ಸತತವಾಗಿ ಆರು ಸರಣಿಗಳನ್ನು ಗೆದ್ದಿದ್ದಾರೆ. ನಮ್ ತಂಡದ ಮೇಲೆ ಆಡಿ ಮಣಿಸಿದ ನಂತರ ನಮ್ಮದೇ ದೇಶದ ಮಂದಿ ನನ್ನನ್ನು ಶತ್ರುವಾಗಿ ಕಾಣಲು ಶುರುಮಾಡಿದ್ರು, ಗಾಯವಾಗದಿದ್ದರೂ, ಆಯಾಸವಾಗದಿದ್ದರೂ ನನಗೆ ವಿಶ್ರಾಂತಿ ಕೊಟ್ಟು ಕೂರುವಂತೆ ಮಾಡಿದರು. ಅಲ್ಲಿ ಇಂಗ್ಲೆಂಡಿನಲ್ಲಿ ಪೀಟರ್ ಸನ್ನಿಗೆ ಗೂಸಾ ತಿನ್ನಿಸಿದರು. ಶ್ರೀಲಂಕಾದ ನಾಯಕ ಪದವಿ ತ್ಯಾಗ ಮಾಡುವ ಮಾತನಾಡಿದ. ಜೊತೆಗೆ ಈ ಭಯೋತ್ಪಾದಕ ತಂಡಕ್ಕೆ ಸಿಕ್ಕುತ್ತಿರುವ ಆರ್ಥಿಕ ಬೆಂಬಲವೂ ಸಹ ಅಗಾಧ ಮಟ್ಟದ್ದಾಗಿದೆ. ನಮ್ ನೆಲದ ಮೇಲೆ ಬಂದು ನಮ್ಮನ್ನೇ ಎದುರು ಹಾಕಿಕೊಂಡ ಭಜ್ಜಿ ಸಿಂಗರನ್ನು ನಾವು ಏನೂ ಮಾಡಲಾಗಲಿಲ್ಲ. ಅದೇ ಕೊರಗಿನಲ್ಲಿ ನಮ್ ಸೈ-ಮೊಂಡನು ಬುದ್ಧಿ ಸ್ಥಿಮಿತ ಕಳೆದುಕೊಂಡಿದ್ದಾನೆ. ಇಷ್ಟೆಲ್ಲಾ ಕಷ್ಟ ನಷ್ಟ, ಧ್ವಂಸ-ದಾಳಿಯನ್ನು ಮಾಡಿದ ಭಾರತವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಬೇಕಾಗಿ ನಾನು ಸಮಸ್ತ ಕ್ರಿಕೆಟ್ ಜಗತ್ತಿನ ಪರವಾಗಿ ಆಗ್ರಹಿಸುತ್ತೇನೆ.”

ಆಸ್ಟ್ರೇಲಿಯಾ ನಾಯಕನ ಈ ಮಾತಿಗೆ ತಮ್ಮ ಧ್ವನಿಯನ್ನು ಸೇರಿಸಿರುವ ಅನೇಕರು, “ಭಾರತಕ್ಕೆ ಹೆದರಿ ನಮ್ಮ ದೇಶದ ಅಧ್ಯಕ್ಷ ಹೊರಗುತ್ತಿಗೆಯನ್ನು ನಿಯಂತ್ರಿಸುವ, ತನ್ನದೇ ದೇಶದ ಕಂಪೆನಿಗಳಿಗೆ ನಷ್ಟವುಂಟು ಮಾಡುವ ನಿರ್ಧಾರ ಮಾಡಬೇಕಿದೆ. ಕ್ರಿಕೆಟ್ಟಿನಲ್ಲಿ ಪುರುಷರ ತಂಡ ಮಾಡಿದ ದಾಳಿ ಸಾಲದು ಎಂಬಂತೆ ಮಹಿಳೆಯರ ತಂಡವೂ ವರ್ತಿಸುತ್ತಿದೆ. ಒಬ್ಬನೇ ಭಾರತೀಯ ಎರಡು ಆಸ್ಕರ್ ಬಾಚಿದ್ದಾನೆ, ಭಾರತದ ಕತೆಯಿರುವ ಎರಡು ಸಿನೆಮಾಗಳು ಪ್ರಶಸ್ತಿಯನ್ನು ಗೋಣಿ ಚೀಲಗಳಲ್ಲಿ ತುಂಬಿಕೊಂಡು ಪರಾರಿಯಾಗಿವೆ. ನಮಗಿಂತ ನಿಖರವಾಗಿ ಚಂದ್ರನನ್ನು ಪರಿಚಯಮ ಮಾಡಿಕೊಳ್ಳಲು ಮುಂದಾಗಿದ್ದಾರೆ. ಹೀಗೇ ಮುಂದುವರಿದರೆ ಭಾರತದ ಭಯದಲ್ಲಿ ಜಗತ್ತಿನೆಲ್ಲಾ ರಾಷ್ಟ್ರಗಳು ಅಳುತ್ತಾ ಕೂರುವುದು ನಿಶ್ಚಿತ. ಅದಕ್ಕೇ ಭಾರತವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸಲೇ ಬೇಕು.” ಎಂದು ನಮ್ಮ ತೊಣಚಪ್ಪನವರಲ್ಲಿ ತಮ್ಮ ದುಃಖ ತೋಡಿಕೊಂಡರು.

ತಮ್ಮ ಸಂದರ್ಶನವನ್ನು ಮುಗಿಸಿಕೊಂಡು ತೊಣಚಪ್ಪನವರು ವಿಮಾನ ನಿಲ್ದಾಣದಲ್ಲಿನ ನೌಕರಿಗೆ, ವಿಮಾನದೊಳಗಿನ ಗಗನ ಸಖಿಯರಿಗೆ ತಮ್ಮ ಭಾರತದ ಪಾಸ್ ಪೋರ್ಟ್ ತೋರಿಸಿ ಭಯ ಹುಟ್ಟಿಸಿದ ಘಟನೆ ತಡವಾಗಿ ವರದಿಯಾಗಿದೆ.

(ಚಿತ್ರ: ಸಾಮ್ರಾಟರ ಕೈಚಳಕ)

ಸಚಿನ್‌ಗೆ ಪ್ಯಾಡು ದೋಷ

6 ಫೆಬ್ರ

(ನಗೆ ನಗಾರಿ ಕಿರ್ ಕಿರಿಕೆಟ್ಟು ಬ್ಯೂರೋ)

ಶ್ರೀಲಂಕಾದ ವಿರುದ್ಧ ನಡೆಯುತ್ತಿರುವ ಐದು ಏಕ ದಿನ ಪಂದ್ಯಗಳ ಮೊದಲ ಮೂರೂ ಪಂದ್ಯಗಳಲ್ಲಿ ಭಾರತದ ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಹೆಚ್ಚು ರನ್ ಗಳಿಸದೆ ಔಟಾಗಿದ್ದಾರೆ. ಮೂರೂ ಪಂದ್ಯಗಳಲ್ಲಿ ಎಲ್.ಬಿ.ಡಬ್ಲ್ಯು (ವಿಕೆಟ್ ಮುಂದೆ ಕಾಲು) ಕಾರಣಕ್ಕೆ ಔಟಾಗಿದ್ದಾರೆ. ಶ್ರೀಲಂಕಾದ ಕುಮಾರ ಧರ್ಮಸೇನಾ,ಗಾಮಿನಿ ಸಿಲ್ವಾ, ದಕ್ಷಿಣಾ ಆಫ್ರಿಕಾದ ಬ್ರಯಾನ್ ಜರ್ಲಿಂಗ್ – ಈ ಮೂವರೂ ಅಂಪೈರ್‌ಗಳು ಸಚಿನ್ ವಿರುದ್ಧ ತಪ್ಪು ತೀರ್ಪು ನೀಡಿದ್ದಾರೆ. ಬೌಲರ್‌ಗಳ ಯಾರ್ಕರ್, ಬೌನ್ಸರ್, ಗೂಗ್ಲಿ, ದೂಸ್ರಾಗಳ ಜೊತೆಗೆ ನಮ್ಮ ಲಿಟಲ್ ಮಾಸ್ಟರ್ ಅಪೈರುಗಳನ್ನೂ ಎದುರಿಸಬೇಕಾಗಿರುವ ಪರಿಸ್ಥಿತಿ ಸೃಷ್ಟಿಯಾಗಿರುವುದು ವಿಷಾದನೀಯ.

ಧೋನಿ ಎಂಬ ಕಾಲ್ಚೆಂಡಾಟಗಾರ ಕ್ರಿಕೆಟ್ ಬ್ಯಾಟು ಹಿಡಿದದ್ದು, ರಾಷ್ಟ್ರೀಯ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡದ್ದು, ಟ್ವೆಂಟಿ ಟ್ವೆಂಟಿ ಕಪ್ ಗೆದ್ದದ್ದು, ಭಾರತದ ಏಕದಿನ, ಟೆಸ್ಟ್ ತಂಡಗಳಿಗೆ ನಾಯಕನಾದದ್ದು, ಸತತವಾಗಿ ಗೆಲುವಿನ ಕುದುರೆಯ ಮೇಲೆ ಸವಾರಿ ಮಾಡುತ್ತಿರುವುದಕ್ಕೆ ಆತನ ಪ್ರತಿಭೆಯಾಗಲಿ, ನಾಯಕತ್ವ ಗುಣಗಳಾಗಲಿ, ತಂಡದ ಸದಸ್ಯರ ಹೋರಾಟವಾಗಲಿ, ಸಾಂಘಿಕ ಪ್ರಯತ್ನವಾಗಲಿ, ಪರಿಶ್ರಮವಾಗಲಿ, ಒಗ್ಗಟ್ಟಾಗಲಿ ಕಾರಣವಲ್ಲ, ಅವುಗಳ ಪರಿಣಾಮವೇನಿದ್ದರು ಊಟದಲ್ಲಿನ ಉಪ್ಪಿನ ಕಾಯಿಯದು. ಧೋನಿಯ ಗೆಲುವಿನ ಕುದುರೆ ಸವಾರಿಯನ್ನು ಬ್ಯಾಲೆನ್ಸ್ ಮಾಡುತ್ತಿರುವುದು ಅಂತರಿಕ್ಷದಲ್ಲಿರುವ ಗ್ರಹಗಳು, ತಮ್ಮ ಕೈಯಿಂದ ಉರುಳುವ ದಾಳಗಳು ಎಂದು ಘಂಟಾಘೋಷವಾಗಿ ಸಾರಿದ ಸೋಮ-ಸೂಜಿ, ಚೈನ್ ಮಹಾಶಯರು ಈಗ ಸಚಿನ್ ಮೂರು ಭಾರಿ ಔಟಾದದ್ದಕ್ಕೆ ಏನು ಕಾರಣ ಕೊಡಬಹುದು ಎಂಬ ಕುತೂಹಲ ಸಾಮ್ರಾಟರಿಗೆ ಹುಟ್ಟಿತು.

ತಮ್ಮ ಡಯಾಬಿಟಿಸಿಗೆ ದುಬಾರಿ ಆಸ್ಪತ್ರೆಯ ಅತ್ಯಂತ ದುಬಾರಿ ಡಾಕ್ಟರ ಬಳಿ ಅತ್ಯಧಿಕ ದುಬಾರಿ ಇಂಜಕ್ಷನ್ನು ಹೆಟ್ಟಿಸಿಕೊಂಡು, ಇನ್ನಷ್ಟು ವರ್ಷ ಬದುಕುಳಿಯುವುದು ಗ್ಯಾರಂಟಿಯಾ ಎಂದು ಡಾಕ್ಟರ ಬಳಿ ಮೂರ್ನಾಲ್ಕು ಬಾರಿ ಕೇಳಿಕೊಂಡು ಸಾಮ್ರಾಟರೊಂದಿಗೆ ಸಂದರ್ಶನಕ್ಕೆ ಕೂತ ಸೋಮ-ಸೂಜಿಯವರು, ‘‘ಸಚಿನ್ ಕಳೆದ ಬಾರಿ ನಾಗ ಪ್ರತಿಷ್ಠೆ ಮಾಡಿಸಿಕೊಳ್ಳಲು ಬಂದಾಗಲೇ ನಾನು ಹೇಳಿದ್ದೆ. ‘ನಿನ್ನ ಕಾಲ ಬಳಿ ಗ್ರಹಗಳ ಓಡಾಟ ಅಷ್ಟು ಸಮರ್ಪಕವಾಗಿಲ್ಲ. ಬೇಗನೇ ಶಾಂತಿಯನ್ನು ಮಾಡಿಸಿಬಿಡು’ ಎಂದು. ಆದರೆ ಆತ ನನ್ನ ಮಾತಿನಲ್ಲಿ ನಂಬಿಕೆಯಿಡಲಿಲ್ಲ. ಯಾರೆಷ್ಟೇ ದೊಡ್ಡವರಾದರೂ ಗ್ರಹಗತಿಗಳನ್ನು ಅಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಈಗ ಅರಿವಾಗಿದೆ. ಒಂದಲ್ಲ ಎರಡಲ್ಲ, ಮೂರು ಬಾರಿ. ಅದೂ ಒಂದೇ ಪಂದ್ಯಾವಳಿಯಲ್ಲಿ, ಸತತವಾಗಿ ಮೂರು ಬಾರಿ ತಪ್ಪು ತೀರ್ಮಾನದಿಂದ ಔಟಾಗುವುದು ಆಕಸ್ಮಿಕ ಎನ್ನಲು ಸಾಧ್ಯವೇ? ಒಂದು ಸಲವಾದರೆ ಹೌದೆನ್ನಬಹುದು. ಮೂರು ಬಾರಿ ಹಾಗಾಗುವುದು ಕಾಕತಾಳೀಯವಲ್ಲವೇ ಅಲ್ಲ. ಅದು ಗ್ರಹಗತಿ ದೋಷದಿಂದ ಹುಟ್ಟಿದ ಸಮಸ್ಯೆ ಎಂಬುದು ಸ್ಪಷ್ಟ.

“ನಮ್ಮ ಈ ಅಭಿಪ್ರಾಯವನ್ನು ನಾವು ಸಚಿನ್‌ಗೂ ಮತ್ತವನ ನಾಯಕ ಧೋನಿ ಇಬ್ಬರಿಗೂ ಹೇಳಿದ್ದೇವೆ. ಹೀಗಾಗಿ ಕಾಲುಗಳ ಗ್ರಹಗಳ ಶಾಂತಿ ನಡೆಯುವವರೆಗೂ ಸಚಿನ್ನನಿಗೆ ವಿಶ್ರಾಂತಿ ಕೊಡಲು ತೀರ್ಮಾನಿಸಲಾಗಿದೆ. ಶೀಘ್ರದಲ್ಲಿ ನಾವು ಬಹುದೊಡ್ಡ ಹೋಮ ಕಾರ್ಯಕ್ರಮ ನಡೆಸಿ ಶಾಂತಿ ಮಾಡಲಿದ್ದೇವೆ. ಈಗ ಐದು ನೂರು ಕಿಲೋ ತುಪ್ಪಕ್ಕೆ ಆರ್ಡರ್ ಮಾಡಿಸಿದ್ದೇವೆ. ನಾಳೆಯಿಂದ ಸಿದ್ಧತೆ ಶುರುವಾಗಲಿದೆ.”

ಸಂದರ್ಶನ ಮುಗಿಯುತ್ತಿದ್ದಂತೆ ಸೋಮ-ಸೂಜಿಯವರ ಶಿಷ್ಯೋತ್ತಮ ಸಾಮ್ರಾಟರೆದುರು ‘ಹುಂಡಿ’ಯನ್ನು ಹಿಡಿದು ನಿಂತ. ತಮ್ಮ ಖಾಲಿ ಜೇಬಿನ ಮೇಲೆ ಕೈಯಾಡಿಸಿ ಸಾಮ್ರಾಟರು, ‘ನಾನು ಹುಂಡಿಗೆ ಎಷ್ಟು ದುಡ್ಡು ಹಾಕುವೆ ಎಂಬುದನ್ನು ನಿಖರವಾಗಿ ಊಹಿಸಿ’ ಎಂದು ಸೋಮ-ಸೂಜಿಯವರಿಗೆ ಸವಾಲು ಹಾಕುವ ಮನಸ್ಸಾಯಿತು. ಆದರೆ ಅವರ ‘ತಪ ಬಲ’ ಗಿಂತಲೂ ಅಗಾಧವಾಗಿ ಕಾಣುತ್ತಿದ್ದ ಅವರ ಸುತ್ತಮುತ್ತಲಿನ ಶಿಷ್ಯರ ‘ಬಾಹು ಬಲ’ವನ್ನು ಕಂಡು ಹೆದರಿ ಕಂಗಾಲಾಗಿ ಕತ್ತಿನಲ್ಲಿದ್ದ ರೋಲ್ಡ್ ಗೋಲ್ಡ್ ಚೈನನ್ನು ಧಾರಾಳವಾಗಿ ಹುಂಡಿಗೆ ನೂಕಿ ಪಾರಾದರು.

‘ಹುದಯ’ ಟಿವಿಯ ಆಸ್ಥಾನ ಜೋತಿಷಿಗಳಾಗಿ ಮೆರೆದ ಚೈನ್ ಮಹಾಸ್ವಾಮಿಯನ್ನು ಭೇಟಿಯಾಗಿ ಸಚಿನ್ ದುರದೃಷ್ಟಕ್ಕೆ ಪರಿಹಾರವೇನೆಂದು ಸಾಮ್ರಾಟರು ಪ್ರಶ್ನಿಸಿದರು. “ನೋಡಿ ಗುರು ಗ್ರಹ ಶ್ರೀಲಂಕಾದಲ್ಲಿ ಪ್ರವೇಶಿಸಲು ಹೋಗಿ ಎಲ್.ಟಿ.ಟಿ.ಇ, ಲಂಕಾ ಸೈನ್ಯದ ಕಾಳಗದ ನಡುವೆ ಸಿಕ್ಕು ಹಾಕಿಕೊಂಡಿರುವುದರಿಂದ, ಶ್ರೀಲಂಕದಲ್ಲಿ ಶನಿಗ್ರಹ ಪ್ರಧಾನ ಪಾತ್ರ ವಹಿಸಿದೆ. ರಾಹುವು ಬೌಲರ್ ಬದಿಯ ವಿಕೆಟಿನ ಹಿಂದೆಯೂ, ಕೇತುವು ಬ್ಯಾಟ್ಸ್‍ಮನ್‌ನ ಹಿಂಬದಿಯ ಹಿಂದೆಯೂ ವಿರಾಜಮಾನನಾಗಿರುವುದರಿಂದ ಸಚಿನ್ನನಿಗೆ ‘ಕುಜ’ ದೋಷದ ಬದಲು ‘ಪ್ಯಾಡ್ ದೋಷ’ ಅಮರಿಕೊಂಡಿದೆ. ಇದಕ್ಕಿರುವ ಅತ್ಯಂತ ಸುಲಭವಾದ ಪರಿಹಾರವೆಂದರೆ ಪಂದ್ಯವಿರುವ ದಿನ ಎಡಗಡೆಯಿಂದ ಎದ್ದು, ಒಂದು ಹನಿ ನೀರನ್ನೂ ಕುಡಿಯದೆ, ಒಂದು ಕಾಳು ಅಕ್ಕಿಯನ್ನೂ ಅಗಿಯದೆ ಉಪವಾಸವನ್ನಾಚರಿಸಿ, ಕಾಲಿಗೆ ಪ್ಯಾಡ್ ಕಟ್ಟಿಕೊಳ್ಳದೆ, ಹಿಮ್ಮುಖವಾಗಿ ಕ್ರೀಜಿಗೆ ಬಂದು ನಿಲ್ಲಬೇಕು. ಆಗ ರಾಹು – ಕೇತುವಿನ ಪರಿಭ್ರಮಣೆಯಲ್ಲಿ ಬದಲಾವಣೆ ಬಂದು ‘ಪ್ಯಾಡ್ ದೋಷ’ ನಿವಾರಣೆಯಾಗುತ್ತದೆ.”

ಸಂದರ್ಶನ ಮುಗಿಸಿ ನಾಲ್ಕು ಘಳಿಗೆ ಹುಂಡಿಯ ಆಗಮನಕ್ಕಾಗಿ ಸಾಮ್ರಾಟರು ಕಾಯುತ್ತಿದ್ದರು. ಕೈಲಿದ್ದ ನಕಲಿ ಬಂಗಾರದ ಉಂಗುರವನ್ನು ಅಗಲುವುದಕ್ಕೆ ಮಾನಸಿಕವಾಗಿ ತಯಾರಾಗುತ್ತಿದ್ದರು. ಹುಂಡಿ ಬರಲೇ ಇಲ್ಲ. ಅದರ ಬದಲಾಗಿ ‘ನಗೆ ನಗಾರಿ’ಯಲ್ಲಿ ಪೂರ್ತಿ ಪುಟ ಪ್ರಕಟಣೆಗಾಗಿ ಚೈನ್ ಮಹಾಸ್ವಾಮಿಯವರ ಜಾಹೀರಾತು ಸಿಕ್ಕಿತು. ಸಾಮ್ರಾಟರು ಆ ಪ್ರತಿಯನ್ನು ಬೆಳಗಿನ ಶೌಚ ವಿಧಿ ಪೂರೈಕೆಗಾಗಿ ಬಳಸಿ ರೀಮುಗಟ್ಟಲೆ ಪುಣ್ಯವನ್ನು ಗೋಡೌನಿಗೆ ತುಂಬಿಕೊಂಡಿದ್ದಾರೆ! 

ಅತ್ಯುತ್ತಮ ರಿಟೈರ್ ಮೆಂಟ್ ಪ್ಲಾನ್!

6 ನವೆಂ

(ನಗೆ ನಗಾರಿ ಕ್ರೀಡಾ ಕಿರಿಕಿರಿ ಬ್ಯೂರೋ)


ರಿಟೈರ್ ಆದ ನಂತರ ಬದುಕು ಹೇಗಿರುತ್ತದೆ, ರಿಟೈರ್ ಆದ ತಕ್ಷಣ ಆಗುವ ಬದಲವಾಣೆಗಳು, ಸ್ಥಿತ್ಯಂತರಗಳು, ಎದುರಾಗುವ ಸವಾಲುಗಳು, ಬದಲಾದ ಸುತ್ತಮುತ್ತಲಿನ ಪರಿಸರ ಹಾಗೂ ಜನರ ಪ್ರತಿಕ್ರಿಯೆಗಳು, ರಿಟೈರ್ ಮೆಂಟ್ ನಂತರದ ಯೋಜನೆಗಳು ಇವುಗಳ ಬಗ್ಗೆ ಎಲ್ಲಾ ತುಂಬಾ ಕೂಲಂಕುಶವಾಗಿ ಅಧ್ಯಯನ ಮಾಡಿ ಬಹುದೊಡ್ಡ ಗ್ರಂಥಗಳನ್ನು ಬರೆದು, ಭೀಷಣ ಭಾಷಣಗಳನ್ನು ಕೊರೆದು ಹೆಸರು ಮಾಡಿದವರು ಅನೇಕರಿದ್ದಾರೆ.ದುಡಿಯುವಾಗಲೇ, ಮದುವೆಯಾಗುವ ಮುನ್ನವೇ, ಚಿಗುರು ಮೀಸೆ ಒತ್ತೊತ್ತಾಗಿ ವ್ಯಾಪಿಸಿಕೊಳ್ಳುವ ಮುಂಚಿನಿಂದಲೇ ರಿಟೈರ್ ಮೆಂಟ್ ಬಗ್ಗೆ ಆಲೋಚಿಸಿ ಸೂಕ್ತವಾಗಿ ಪ್ಲಾನ್ ಮಾಡಿ ಹಣ ಕೂಡಿಡುವ ಬುದ್ಧಿವಂತರಿದ್ದಾರೆ. ತಾವು ರಿಟೈರ್ ಮೆಂಟ್ ಪಡೆಯುವವರೆಗೂ ಬದುಕಿರುತ್ತೇವೆ ಎಂಬ ಯಾವ ಗ್ಯಾರಂಟಿಯೂ ಇಲ್ಲದವರೂ ಸಹ ತಜ್ಞರ ಸಲಹೆ, ಮಾರ್ಗದರ್ಶನಗಳನ್ನು ಪಡೆದು ತಮ್ಮ ಭವಿಷ್ಯವನ್ನು ಭದ್ರಗೊಳಿಸಿಕೊಳ್ಳುತ್ತಿದ್ದಾರೆ. ರಿಟೈರ್ ಮೆಂಟ್ ಪ್ಲಾನುಗಳನ್ನು ಹಾಕಿಕೊಡುವ ದೊಡ್ಡ ದೊಡ್ಡ ಹಣಕಾಸು ಸಂಸ್ಥೆಗಳು ವಿಜೃಂಭಿಸುತ್ತಿವೆ. ಆದರೆ ಕ್ರಿಕೆಟ್ ಎಂಬ ಮಾಯಾ ಜಗತ್ತಿನಿಂದ ರಿಟೈರ್ ಆದವರು ಆಟದಲ್ಲಿನ ತಮ್ಮ ಹೆಸರು, ಖ್ಯಾತಿ, ಕುಖ್ಯಾತಿ, ಜಾಹೀರಾತು ಮಾರುಕಟ್ಟೆಯಲ್ಲಿನ ತಮ್ಮ ಚಾಲ್ತಿಯನ್ನು ಮುಂದುವರೆಸಿಕೊಂಡು ಹೋಗುವುದಕ್ಕೆ ಏನು ಮಾಡಬೇಕು ಎಂಬುದಕ್ಕೆ ಬಹುದೊಡ್ಡ ಉದಾಹರಣೆಯಾಗಿ ನಿಂತಿರುವವರು ಆಸ್ಟ್ರೇಲಿಯಾದ ದಾಂಡಿಗ ಹಾಗೂ ವಿಕೆಟ್ ಕೀಪರ್ ಅದಮ ಗಿಲ್ಲಿ ಕಷ್ಟ.


ತಮ್ಮ ಬಹು ಯಶಸ್ವೀ ಕ್ರಿಕೆಟ್ ಬದುಕಿನಿಂದ ವೈಭವೋಪೇತವಾದ ನಿವೃತ್ತಿಯನ್ನು ಘೋಷಿಸಿದ ನಂತರ ಗಿಲ್ಲಿಯವರು ತಮ್ಮ ಆತ್ಮಚರಿತ್ರೆಯನ್ನು ಬರೆಸುವ ಕೆಲಸದಲ್ಲಿ ತೊಡಗಿಸಿಕೊಂಡರು. ಕ್ರಿಕೆಟ್ ಮೈದಾನದಲ್ಲಿದ್ದಾಗ ಹೇಗೆ ಅವರು ಜಗತ್ತಿನ ಎಲ್ಲಾ ಕ್ರೀಡಾಪಟುಗಳಿಗೆ ಆದರ್ಶ ಪ್ರಾಯರಾಗಿದ್ದರೋ ಹಾಗೆಯೇ ನಿವೃತ್ತರಾದ ಕ್ರೀಡಾಪಟುಗಳು ಹೇಗೆ ತಮ್ಮ ಪ್ರಸಿದ್ಧಿಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿಕೊಟ್ಟು ಅದನ್ನು ಸ್ವತಃ ಪಾಲಿಸುವ ಮೂಲಕ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅವರ ಆತ್ಮಕತೆ ಟ್ರೂ ಕಲರ್ಸ್ನಲ್ಲಿ ಅವರು ಸಾಧ್ಯವಾದಷ್ಟು ಮಟ್ಟಿಗೆ ಕ್ರಿಕೆಟ್ ಜಗತ್ತನ್ನು ಕಾಡಿದ ವಿವಾದಗಳ ಭೂತಗಳನ್ನು ಆವಾಹಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಭಾರತದ ಖ್ಯಾತ ಆಟಗಾರ ಸಚಿನ್ ಹರ್ಭಜನ್ ಸಿಂಗ ಹಾಗೂ ಸೈಮಂಡ್ಸ್‌ರ ನಡುವಿನ ವಿವಾದದಲ್ಲಿ ಸುಳ್ಳು ಹೇಳಿದ್ದರು ಎಂದು ಗಿಲ್ಲಿ ಬರೆದುಕೊಂಡಿದ್ದಾರೆನ್ನಲಾಗಿದೆ. ಅಲ್ಲದೆ ಶ್ರೀಲಂಕಾದ ಸೈಲಂಟ್ ಕಿಲ್ಲರ್ ಮುರಳಿಯವರು ಮೋಸಗಾರರು, ಬಾಲನ್ನು ಎಲ್ಲರೂ ಮಾಡುವಂತೆ ಬೌಲ್ ಮಾಡದೆ ಚಕ್ಕರ್ ಎಸೆಯುತ್ತಾರೆ ಎಂದು ಆರೋಪಿಸಿದ್ದಾರೆ.


ಖ್ಯಾತ ಆತ್ಮಕತೆಗಳನ್ನೆಲ್ಲಾ ಓದಿ ನಾನಾ ಹೆಸರುಗಳಲ್ಲಿ ವಿವಿಧ ಪತ್ರಿಕೆಗಳಿಗೆ ಒಂದೇ ವಿಮರ್ಶೆಯನ್ನು ಕಳುಹಿಸುವ ಖ್ಯಾತಿಯನ್ನು ಪಡೆದಿರುವ ಸಾಮ್ರಾಟರನ್ನು ಪ್ರಸ್ತುತ ಗಿಲ್ಲಿಯವರ ಆತ್ಮಕತೆಯ ಬಗ್ಗೆ ನಗೆ ನಗಾರಿ ಕೇಳಿದಾಗ ಅವರು ಹೇಳಿದ್ದಿಷ್ಟು: ‘ಗಿಲ್ಲಿ ಎಷ್ಟು ಬುದ್ಧಿವಂತರು ಎಂಬುದನ್ನು ಅವರೊಂದಿಗೆ ಕ್ರಿಕೆಟ್ ಆಡಿದ ಎಲರೂ ಬಲ್ಲರು. ಅವರ ಆಟವನ್ನು ನೋಡಿದ ಯಾರು ಬೇಕಾದರೂ ಅವರು ಅಪ್ರತಿಮ ಚಾಲಾಕಿಗಳು ಎಂಬುದನ್ನು ಬಲ್ಲರು. ವಿಕೆಟ್ ಮುಂದಿರಲಿ, ವಿಕೆಟ್ ಹಿಂದಿರಲಿ ಅವರು ಎಂದಿಗೂ ತಮ್ಮ ತೀಕ್ಷ್ಣ ಬುದ್ಧಿಮತ್ತೆಯಿಂದ ಗಮನ ಸೆಳೆದವರು. ಹಿಂದೊಮ್ಮೆ ಶ್ರೀಲಂಕಾದ ವಿರುದ್ಧ ಬ್ಯಾಟ್ ಮಾಡುವಾಗ ನಿರುಪದ್ರವಿ ಪಿಂಗ್ ಪಾಂಗ್ ಚೆಂಡನ್ನು ಗ್ಲೌಸಿನೊಳಕ್ಕೆ ಹಾಕಿಕೊಂಡು ಬಂದು ಎಲ್ಲರನ್ನೂ ಬೆಪ್ಪುತಕ್ಕಡಿಯಾಗಿಸಿದ್ದರು. ವಿಕೆಟ್ ಹಿಂದೆ ನಿಂತು ಬ್ಯಾಟ್ಸ್ ಮನ್ ಹಾಗೂ ಆ ದೇವರ ಹೊರತು ಬೇರಾರಿಗೂ ಕೇಳದ ಹಾಗೆ ಸ್ಲೆಡ್ಜ್ ಮಾಡುವುದು ಆಸ್ಟ್ರೇಲಿಯನ್ ಆಟಗಾರರಾಗಿ ಅವರು ಬಹಳ ಚೆನ್ನಾಗಿ ರೂಢಿಸಿಕೊಂಡಿದ್ದರು ಎಂಬುದರ ಬಗ್ಗೆ ಎರಡು ಮಾತಿಲ್ಲ.


51469868HB001_Aus_Train

ಈಗ ರಿಟೈರ್ ಆದ ನಂತರವೂ ಗಿಲ್ಲಿಯವರು ತಮ್ಮ ಜಾಣತನಕ್ಕೆ ನಿವೃತ್ತಿ ನೀಡಿಲ್ಲ. ತಮ್ಮ ಆತ್ಮಚರಿತ್ರೆಯನ್ನು ಬರೆಯುವಾಗಲೂ ಸಹ ಅವರು ತಮ್ಮ ಅಪ್ರತಿಮ ಚುರುಕು ಬುದ್ಧಿಯನ್ನು ಪ್ರದರ್ಶಿಸಿದ್ದಾರೆ. ಜಗತ್ತಿನಲ್ಲಿ ಕ್ರಿಕೆಟ್ಟನ್ನು ಧರ್ಮವಾಗಿ, ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುವುದು ಭಾರತ, ಪಾಕಿಸ್ತಾನ, ಶ್ರೀಲಂಕಾ ಸೇರಿದ ಉಪಖಂಡ ಎಂಬುದು ಕ್ರಿಕೆಟ್‌ನ ಅ ಆ ಇ ಈ ಬಲ್ಲ ಪ್ರತಿಯೊಬ್ಬರಿಗೂ ತಿಳಿದಿರುವಂಥದ್ದು. ಆದರೆ ಈ ತಿಳುವಳಿಕೆಯನ್ನು ಯಶಸ್ವಿಯಾಗಿ ಬಳಸಿಕೊಂಡ ಗಿಲ್ಲಿಯವರು ತಮ್ಮ ಆತ್ಮಕತೆಯು ಕ್ರಿಕೆಟ್ ಜಗತ್ತಿನಲ್ಲಿ ಅಲೆಗಳನ್ನೆಬ್ಬಿಸಬೇಕು ಎಂದರೆ ಜೇನಿನ ಹುಟ್ಟಿನಂತಹ ಉಪಖಂಡಕ್ಕೆ ಒಂದೆರಡು ಕಲ್ಲು ತೂರಬೇಕು ಎಂಬ ಸೂತ್ರವನ್ನು ಕಂಡುಕೊಂಡಿದ್ದಾರೆ. ಅದರಂತೆಯೇ ಇಲ್ಲಿನ ಕ್ರಿಕೆಟ್ ದಿಗ್ಗಜರಾದ ಸಚಿನ್ ಹಾಗೂ ಮುರಳಿಯವರ ಪ್ರಸ್ತಾಪವನ್ನು ಮಾಡಿ ಸ್ವಲ್ಪ ಮಸಾಲೆ ಅರಿದು ಒಗ್ಗರಣೆ ಹಾಕಿದ್ದಾರೆ.


ಗಿಲ್ಲಿಯವರ ಈ ಪ್ರತಿಭೆಯನ್ನು ಭಾರತದಲ್ಲಿನ ನಿವೃತ್ತ ಕ್ರೀಡಾಪಟುಗಳು ಅನುಕರಣೆ ಮಾಡುವ ಪ್ರಯತ್ನ ಮಾಡಬೇಕು. ನಷ್ಟದಲ್ಲಿರುವ ಭಾರತದ ಉದ್ದಿಮೆಗಳು ಗಿಲ್ಲಿಯವರಿಂದ ಈ ರೀತಿಯ ಮಾರುಕಟ್ಟೆ ಗೆಲ್ಲುವ ತಂತ್ರಗಳನ್ನು ಕಲಿತುಕೊಳ್ಳಬೇಕು ಎಂದು ಈ ಮೂಲಕ ತಿಳಿಸಲು ಇಚ್ಚಿಸುತ್ತೇನೆ.’

ಸಾಮ್ರಾಟರ ಈ ಟೀಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಅದಮ ಗಿಲ್ಲಿ ಕಷ್ಟರು, ‘ಇದು ಪೂರ್ವಾಗ್ರಹಪೀಡಿತವಾದ, ಅತಿರಂಜಿತವಾದ, ವೈಯಕ್ತಿತ ನಿಂದನೆಯುಕ್ತವಾದ, ಅಸತ್ಯಗಳಿಂದ ಕೂಡಿದ ಬಾಲಿಶ ಅಭಿಪ್ರಾಯ’, ಎಂದು ತಿಳಿಸಿ, ‘ಇದರ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಜಯವರ್ಧನೆಗೆ ಒಂದು ಪತ್ರ!

26 ಜುಲೈ

ಭಾರತದ ಕ್ರಿಕೆಟ್ ತಂಡ ಶ್ರೀಲಂಕದ ಎದುರು ಮಂಡಿ ಊರಿ ಕುಳಿತಿರುವ ಸುದ್ದಿಯನ್ನು ತಿಳಿದ ನಗೆ ಸಾಮ್ರಾಟರು ಭಾರತದ ಕ್ರಿಕೆಟ್ ತಂಡಕ್ಕೆ ಸಾಂತ್ವನವನ್ನೂ, ಲಂಕಾದ ತಂಡಕ್ಕೆ ಅಭಿನಂದನೆಯನ್ನು ತಿಳಿಸುವುದರ ಜೊತೆಗೆ ಲಂಕಾದ ನಾಯಕ ಜಯ‘ವರ್ಧನೆ’ಗೆ ಅಮೂಲ್ಯವಾದ ಸಲಹೆಯನ್ನು ಮಾಡಿ ಕಳುಹಿಸಿದ ಇ-ಮೇಲಿನ ಪ್ರತಿ ಇಲ್ಲಿದೆ:

ಪ್ರಿಯ ಜಯವರ್ಧನೆ,
ಶ್ರೀಲಂಕವೆಂಬ ಪುಟ್ಟ ದ್ವೀಪದಲ್ಲಿ ಅಜಂತ ಮೆಂಡಿಸ್ ಎಂಬ ಮತ್ತೊಬ್ಬ ಮಾಂತ್ರಿಕನ್ನು ಹುಡುಕಿಕೊಂಡು ಬರುವುದರಲ್ಲಿ ಯಶಸ್ವಿಯಾದದ್ದಕ್ಕೆ ಅಭಿನಂದನೆಗಳು. ನಮ್ಮ ದೇಶದಲ್ಲೂ ಅಂಥಾ ಪ್ರತಿಭೆಗಳು ಇಲ್ಲವೆಂದಲ್ಲ. ಆದರೆ ನಮ್ಮ ದೇಶ ದೊಡ್ಡದು ನೋಡು ಅದಕ್ಕೇ ಹುಡುಕುವುದು ಸ್ವಲ್ಪ ಕಷ್ಟ. ಅಂದ ಹಾಗೆ ಮುರುಳಿಗೆ ಒಳ್ಳೆ ಜೂನಿಯರ್ ಸಿಕ್ಕಹಾಗಾಯ್ತು ಬಿಡು.

ಮೊದಲ ಟೆಸ್ಟ್ ಮ್ಯಾಚನ್ನು ನೀರು ಕುಡಿದವರಂತೆ ಗೆದ್ದು ಬಿಟ್ಟಿರಿ. ನಿಮ್ಮ ದೇಶದ ಯಾವುದೋ ಹೈಸ್ಕೂಲು ತಂಡದ ಹಾಗೆ ಕಂಡಿರಬೇಕಲ್ಲವಾ ನಮ್ಮ ತಂಡ? ಆ ಸಚಿನ್ನು, ಗಂಗೂಲಿ, ದ್ರಾವಿಡ್ಡು, ಸೆಹವಾಗು ಮುಂತಾದ ಅತಿರಥ ಮಹಾರಥರೆಲ್ಲಾ ಮುರುಳಿ ಹಾಗೂ ಮೆಂಡಿಸ್‌ರಿಗೆ ಗಲ್ಲಿ ಕ್ರಿಕೆಟರ್‌ಗಳ ಕಂಡಿದ್ದಾರೆ ಅನ್ನಿಸುತ್ತದೆ. ಹಾಗಂತ ತೀರಾ ಸಡಿಲಾಗಬೇಡಿ. ನಮ್ಮ ಜಂಬೋ ಅಷ್ಟು ಸುಲಭಕ್ಕೆ ಸೋಲು ಒಪ್ಪಿಕೊಳ್ಳುವವನಲ್ಲ. ಏನೋ ನಮ್ಮ ಹಿರಿಯ ಆಟಗಾರರಿಗೆ ಕೈತಪ್ಪಿಹೋದ ಏಕದಿನದ ಸ್ಥಾನದ ಕನವರಿಕೆ, ಯುವ ಆಟಗಾರರಿಗೆ ದಕ್ಕಿದ ಜಾಹೀರಾತುಗಳ ನೇವರಿಕೆ- ಈ ಬೆರಕೆಯಲ್ಲೇ ಅವರು ಮೈಮರೆತಿದ್ದಾರೆ ಅಷ್ಟೇ. ಯಾವಾಗ ಬೇಕಾದರೂ ಅವರು ಗರ್ಜಿಸಬಹುದು, ಗೊತ್ತಲ್ಲ ಅವರೆಂಥಾ ಪೇಪರ್ ಹುಲಿಗಳೆಂದು!

ಈ ಸಂದರ್ಭದಲ್ಲಿ ನಿಮ್ಮ ತಂಡದಲ್ಲೊಂದು ಬದಲಾವಣೆಯನ್ನು ಮಾಡಿಕೊಂಡರೆ ಇನ್ನುಳಿದ ಪಂದ್ಯಗಳನ್ನೂ ಸರಾಗವಾಗಿ ಗೆಲ್ಲಬಹುದು ಎಂದು ನನಗನ್ನಿಸುತ್ತದೆ. ಅಜಂತಾ ಮೆಂಡಿಸ್ ಹಾಗೂ ಮುತ್ತಯ್ಯ ಮುರಳೀಧರನ್ ಇಬ್ಬರೇ ಬೌಲರ್‌ಗಳನ್ನು ಇಟ್ಟುಕೊಂಡು ಉಳಿದವರಿಗೆಲ್ಲಾ ವಿಶ್ರಾಂತಿ ಕೊಟ್ಟುಬಿಡು. ಉಳಿದ ಒಂಭತ್ತು ಮಂದಿಯೂ ಬ್ಯಾಟ್ಸ್ ‌ಮನ್‌ಗಳೇ ಆಗಿರಲಿ. ನಮ್ಮ ತಂಡದವರು ಇವರಿಬ್ಬರಿಗೂ ಹೇಗೆ ಆಡಬೇಕು ಎಂದು ಕಲಿಯುವಷ್ಟರಲ್ಲಿ ಶ್ರೀಲಂಕಾ ಪ್ರವಾಸವೇ ಮುಗಿರುತ್ತದೆ. ನೀವು ಸರಣಿಯನ್ನು ಸುಲಭವಾಗಿ ಗೆಲ್ಲಬಹುದು. ಏನಂತೀಯ?

ಇಂತಿ,
ನಿನ್ನ ಹಿತ ಆಕಾಂಕ್ಷಿ
ನಗೆ ಸಾಮ್ರಾಟ್

ಈ ಇ-ಮೇಲು ಜಯವರ್ಧನೆಯ ದೇಶಕ್ಕೆ ಹಾರುವ ಮೊದಲೇ ಸೇತು ಸಮುದ್ರದ ಬಳಿ ಹಾಯುತ್ತಿರುವಾಗ ಲೀಕ್ ಆಗಿ ಬಿಸಿಸಿಐಗೆ ಲಭ್ಯವಾಗಿ ಬಿಟ್ಟಿದೆಯಂತೆ. ಅವರು ನಗೆ ಸಾಮ್ರಾಟರ ಸಲಹೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಭಾರತ ತಂಡದ ಎಲ್ಲಾ ಬೌಲರ್‌ಗಳನ್ನು ಕೂರಿಸಿಬಿಡಲು ತೀರ್ಮಾನಿಸಿದ್ದಾರೆ. ಲಂಕಾದ ಬ್ಯಾಟ್ಸ್ ಮನ್‌ಗಳಿಗೆ ಬೌಲರ್‌ಗಳೇ ಬೇಕಿಲ್ಲ ಒಂದು ಬೌಲಿಂಗ್ ಮಶೀನು ಇಟ್ಟುಬಿಟ್ಟರೆ ಸಾಕು ಎಂದು ಅವರಿಗೆ ಅನ್ನಿಸಿದೆಯಂತೆ!

ಭಜ್ಜಿ ಸಿಂಗಿಗೆ ಶಾಂತನಿಂದ ಕೋಚಿಂಗ್

7 ಜುಲೈ

(ನಗೆ ನಗಾರಿ ಕ್ರೀಡಾ ಬ್ಯೂರೋ)

ದೇಶ ಬಿಟ್ಟು ನೂರಾರು ಮೈಲು ದೂರ ಹಾರಿ ಹೋಗಿ ಅಲ್ಲಿನ ತಂಡದ ಆಟಗಾರನೊಬ್ಬನಿಗೆ ತನ್ನ ಭಾಷೆಯಲ್ಲಿಯೇ ‘ತೆರೆ ಮಾ ಕೀ..’ ಎಂದು ಮೈದನದಲ್ಲೇ ಬೈದು ಅದನ್ನು ಆ ಆಸ್ಟ್ರೇಲಿಯನ್ನು ‘ಮಂಕೀ’ ಎಂದು ಅರ್ಥೈಸಿಕೊಂಡು ಅವಮಾನಿತನಾದವನಂತೆ ನಟಿಸಿ ಕೇಸು ಜರುಗಿಸಿ ಸುಸ್ತಾದದ್ದು ಹಳೆಯ ಸಂಗತಿಯಾದರೂ ಆ ಮಂಕೀ ವೀರನಿಗೆ ಟಾಂಗುಕೊಟ್ಟ ಹರ್‌ಭಜನ್ ಸಿಂಗ್ ದೇಶದ ಜನರ ಕಣ್ಣಿನಲ್ಲಿ ಹೀರೋ ಆಗಿದ್ದ. ಅವನ ವಿರುದ್ಧ ಪ್ರಪಂಚದ ಪತ್ರಿಕೆಗಳೆಲ್ಲಾ ಮುರಕೊಂಡು ಬಿದ್ದರೂ ನಮ್ಮ ಜನರು ಎರಡೂ ಕೈಚಾಚಿ ಆತನನ್ನು ಬರಸೆಳೆದು ಅಪ್ಪಿಕೊಂಡರು. ಏನೋ ಸ್ವಲ್ಪ ಒರಟ ಅನ್ನೋ ಕಾರಣಕ್ಕೆ ಮನೆ ಮಗನನ್ನು ದೂರಲು ಸಾಧ್ಯವಾಗುತ್ತದೆಯೇ ನೀವೇ ಹೇಳಿ. (ಅಲ್ಲದೆ ಒರಟ ಐ ಲವ್ ಯೂ ಎಂದು ಹಾಡುವವರ ನಾಡು ನಮ್ಮದು!)

ದುಡ್ಡಿನ ಜಾತ್ರೆಯ ನೆಪದಲ್ಲಿ ನಲವತ್ತು ಚಿಲ್ಲರೆ ದಿನಗಳಲ್ಲಿ ಆಡಿಸಿದ ಕ್ರಿಕೆಟ್ ಎಂಬ ಆಟದಲ್ಲಿ ನಮ್ಮ ಭಜ್ಜಿ ರಾಂಗಾದದ್ದನ್ನು ಯಾರೂ ಮರೆತಿಲ್ಲ. ತನ್ನ ತಂಡ ಹೀನಾಯವಾಗಿ ಸೋತಾಗ ಎದುರಾಳಿ ತಂಡದಲ್ಲಿರುವ ತನ್ನದೇ ಸಹೋದ್ಯೋಗಿಗೆ ಕಪಾಳಮೋಕ್ಷ ಮಾಡಿದ. ಅವನ ಸಿಟ್ಟು, ಒರಟುತನ ಗೊತ್ತಿದ್ದವರಿಗೇ ಗಾಬರಿಯಾಯಿತು. ಸೋಲು ಗೆಲುವನ್ನು ಕ್ರೀಡಾ ಮನೋಭಾವದಿಂದ ತೆಗೆದುಕೊಳ್ಳಬೇಕು ಎಂದು ಬುದ್ಧಿ ಮಾತು ಹೇಳಲು ಹೋದರೆ ನಮ್ಮ ಕೆನ್ನೆಗೊಂದು ಬಾರಿಸಿ ‘ಇದೂ ಕ್ರೀಡಾ ಮನೋಭಾವವೇ, ಬಾಕ್ಸಿಂಗಿನದು’ ಎನ್ನಬಹುದು ಎಂಬ ಭಯದಿಂದ ಬುದ್ಧಿಜೀವಿಗಳು ತೆಪ್ಪಗಾದರು. ಸಿಂಗಿಗೆ ಪನಿಶ್ ಮೆಂಟ್ ಕೊಟ್ಟು ಶಾಂತನಿಗೆ ಉಶ್..ಉಶ್ ಮಾಡಿ ಕೈತೊಳೆದುಕೊಂಡರು.

ಕೆನ್ನೆಗೆ ಬಾರಿಸಿದ ತಪ್ಪಿಗಾಗಿ ಭಜ್ಜಿ ಈಗ ಶಾಂತನಿಗೆ ಕಂಡಕಂಡಲ್ಲಿ ಡಿನ್ನರ್ ಕೊಡಿಸುವ ಕರ್ಮ ಅಂಟಿಸಿಕೊಂಡಿದ್ದಾನೆ. ಈ ನಡುವೆ ಬೇರಾವ ಪತ್ರಿಕೆ, ನ್ಯೂಸ್ ಚಾನಲ್ಲು, ಟ್ಯಾಬಲಾಯ್ಡು, ಸುದ್ದಿ ಸಂಸ್ಥೆಗಳಿಗೆ, ಬೊಗಳೆ ಮಜಾದ ಬ್ಯೂರೋಗೂ ದಕ್ಕದ ಸುದ್ದಿ ನಗೆ ನಗಾರಿಯ ಒನ್ ರೂಂ ಕಚೇರಿಯನ್ನು ತಲುಪಿದೆ.

ಅದೇನೆಂದರೆ ಐಪಿಎಲ್ ಎಂಬ ಹಣದ ತೈಲಿಯ ಜಾತ್ರೆಯ ನೆಪದಲ್ಲಿ ನಡೆಯುವ ಕ್ರಿಕೆಟ್ ಆಟದಲ್ಲಿ ಭಾರೀ ಕಾಸನ್ನು ಹೂಡಿರುವ ಕುಳಕ್ಕೆ ಸಿಂಗನ ಬಗ್ಗೆ ಚಿಂತೆಯಾಗಿದೆಯಂತೆ. ಆತನ ಕೋಪಕ್ಕೆ, ಒರಟುತನಕ್ಕೆ ಒಳ್ಳೆ ಇಲಾಜು ಕೊಡಿಸಬೇಕೆಂದು ಆತ ಅವನನ್ನು ಕೋಚಿಂಗಿಗೆ ಕಳುಹಿಸುತ್ತಿದ್ದಾನಂತೆ. ಯಾರ ಬಳಿ ಅಂದಿರಾ? ನಂಬ್ತೀರೋ ಬಿಡ್ತೀರೋ ಕೇಳಿ, ಶಾಂತನ ಬಳಿ! ಹೌದು ಹೌಹಾರಬೇಡಿ. ಈ ಹಿಕಮತ್ತಿನ ಹಿಂದಿನ ಮರ್ಮ ತಿಳಿಯಲು ನಗೆ ಸಾಮ್ರಾಟರು ತಮ್ಮ ಚೇಲ ಕುಚೇಲನನ್ನು ಅಟ್ಟಿದ್ದು ವರದಿ ಈಗ ತಾನೆ ಟೆಲಿ ಪ್ರಿಂಟರಿನಿಂದ ತಲೆಗೆ ಹಾರಿದೆ.

ಅದು ಆಸ್ಟ್ರೇಲಿಯಾದ ಆಂಡ್ರೂ ಸಾಯಿ-ಮೊಂಡನೇ ಆಗಿರಲಿ, ಹೇ-ಡಾನ್ ಆಗಲಿ, ಸೋತ ಆಫ್ರಿಕಾದ ಆಂಡ್ರೂ ನೆಲ್ಲಿಯಾಗಲಿ ಎಲ್ಲರ ವಿರುದ್ಧವೂ ಮೂಗಿನ ಹೊಳ್ಳೆ ಅಗಲಿಸಿಕೊಂಡು ಡ್ರಾಗನ್ನಿನ ಹಾಗೆ ಘರ್ಜಿಸುವ ಶಾಂತನಿಗೆ ಏಕೆ ಯಾರೂ ಶಿಕ್ಷೆ ವಿಧಿಸಿಲ್ಲ? ಅದಕ್ಕೆ ಕಾರಣವಿದೆ. ಶಾಂತನು ತನ್ನ ಎದುರಾಳಿಯ ಮೇಲಿನ ಸಿಟ್ಟು, ಸೆಡುವುಗಳನ್ನೆಲ್ಲಾ ಹೊರಹಾಕಲು ಅತ್ಯಂತ ಚಾಣಾಕ್ಷವಾದ ವಿಧಾನವೊಂದನ್ನು ಕಂಡುಕೊಂಡಿದ್ದಾನಂತೆ. ಕ್ರಿಕೆಟ್ ಮೈದಾನದ ಪಿಚ್‌ನ್ನೇ ಎದುರಾಳಿಯ ಕೆನ್ನೆ ಎಂದುಕೊಂಡು ಅದಕ್ಕೇ ತನ್ನೆರಡು ಹಸ್ತಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವಷ್ಟು ಹೊತ್ತು ‘ನಗಾರಿ’ ಬಾರಿಸುತ್ತಾನಂತೆ. ಇತ್ತ ಹಾವೂ ಸಾಯಬೇಕು ಅತ್ತ ಕೋಲೂ ಮುರಿಯಬಾರದು ಎಂಬ ಬುದ್ಧಿವಂತಿಕೆ. ಇದನ್ನು ಕಲಿಯುವುದಕ್ಕೆ ಭಜ್ಜಿಯನ್ನು ಶಾಂತನ ಬಳಿಗೆ ಕೋಚಿಂಗಿಗೆ ಕಳಿಸಲಾಗುತ್ತಿದೆಯಂತೆ. ಹೀಗಾಗಿ ಭಜ್ಜಿ ಶಾಂತನಿಗೆ ಬಿಟ್ಟಿ ಡಿನ್ನರುಗಳಿಗೆ ಕರೆಯುವ ಅನಿವಾರ್ಯತೆಯಿದೆಯಂತೆ.

ಈ ಮಧ್ಯೆ ನಮ್ಮ ವರದಿ ಮಧ್ಯದಲ್ಲೆಲ್ಲೋ ಲೀಕ್ ಆಗಿ ಕ್ರಿಕೆಟ್ ಮೈದಾನದ ಅಂಗಳದ ಕ್ಯೂರೇಟರ್‌ ನಮ್ಮನ್ನು ಸಂಪರ್ಕಿಸಿ ಈ ಸುದ್ದಿಯಿಂದ ನಮಗೆ ತೀವ್ರವಾದ ಹಾನಿಯಾಗುತ್ತದೆ. ಎಲ್ಲಾ ಕ್ರಿಕೆಟ್ ಮಂದಿಯೂ ಶಾಂತನ ಟೆಕ್ನಿಕ್ ಬಳಸಲು ಶುರು ಮಾಡಿಕೊಂಡರೆ ನಮ್ಮ ಪಿಚ್ಚುಗಳ ಕೆನ್ನೆ ಜಖಂ ಗೊಳ್ಳುತ್ತದೆ ಎಂದು ಅವರು ತಮ್ಮ ಆತಂಕ ತೋಡಿಕೊಂಡಿದ್ದಾರೆ.

ಐಪಿಎಲ್ (ಇಂಡಿಯನ್ ಪೇಮೆಂಟ್ ಲೀಗ್) ವಿಶೇಷ

28 ಮೇ

(ನಗಾರಿ ಕ್ರೀಡಾ ಬ್ಯೂರೋ)

ಚುನಾವಣೆಯ ಬೀಟಿಗೆ ಹೋಗಿದ್ದ ನಗೆ ಸಾಮ್ರಾಟರು ಚುನಾವಣೆಯ ಕಾವು, ಎಲ್ಲೆಲ್ಲೂ ಸುರಿದು ಹರಿದು ಹೋಗುತ್ತಿದ್ದ ಹಣದ, ಹೆಂಡದ ಹೊಳೆಯನ್ನು ನೋಡಿ ಹೇಸಿಕೊಂಡು ಕೊಂಚ ವಿಶ್ರಾಂತಿಗಾಗಿ ಐಪಿಎಲ್ ಅರ್ಥಾತ್ ಇಂಡಿಯನ್ ಪೇಮೆಂಟ್ ಲೀಗ್‌ನ ಕಡೆಗೆ ಬೀಟು ಹಾಕಿದರು. ಜೊತೆಗೆ ಅವರ ಚೇಲ ಕುಚೇಲನೂ ಇದ್ದನೆನ್ನಿ…

ಚುನಾವಣೆಯಲ್ಲಿನ ಕತ್ತಲ ರಾತ್ರಿಯಲ್ಲಿನ ಹೆಂಡದ ಕಮಟು, ನೋಟಿನ ಗರಿಗರಿಯಿಂದ ರೋಸಿ ಹೋಗಿದ್ದ ನಗೆಸಾಮ್ರಾಟರಿಗೆ ಕ್ರಿಕೆಟ್ ಮೈದಾನದಲ್ಲಿ ಅವನ್ನು ಬಹಿರಂಗವಾಗಿ ಕಂಡು ತುಂಬಾ ಸಂತೋಷವಾಯಿತು. ಲಕ್ಷಾಂತರ ಮಂದಿ ತಮ್ಮೆಲ್ಲಾ ಹಕ್ಕುಗಳಿಂದ ವಂಚಿತರಾಗಿ, ತಾವು ಹುಟ್ಟಿರುವುದು ಮನುಷ್ಯರಾಗಿ ಎಂಬುದರ ಬಗ್ಗೆಯೇ ನಂಬಿಕೆ ಇಲ್ಲದ ಹಾಗೆ ಬದುಕುತ್ತಿರುವಾಗ ಒಬ್ಬೊಬ್ಬನಿಗೆ ಕೋಟಿ ಕೋಟಿ ಹಣವನ್ನು ಸುರಿಯುವುದು ಕಂಡು ನಮ್ಮ ವ್ಯವಸ್ಥೆ ಇದ್ದರೆ ಹೀಗಿರ ಬೇಕು, ಪ್ರತಿಭೆ ಇದ್ದವನ ಕಾಲ ಕೆಳಗೆ ಜಗತ್ತನ್ನೇ ಹೆಡೆ ಮುರಿ ಕಟ್ಟಿ ತಂದು ಮಲಗಿಸಬೇಕು. ಪ್ರತಿಭೆ ಇಲ್ಲದ ಬ್ರೂಟುಗಳನ್ನು ಬದುಕುವುದಕ್ಕೂ ಬಿಡಬಾರದು. ಹೆಂಡವನ್ನೋ, ಕಳ್ಳಮಾಲನ್ನೋ, ಪಾನೀಯದ ಹೆಸರಿನಲ್ಲಿ ಕಾರ್ಕೋಟಕವನ್ನೋ ಇವ್ಯಾವುದೂ ಇಲ್ಲವಾದರೆ ಕನಿಷ್ಠ ಪಕ್ಷ ಮಾನ – ಮರ್ಯಾದೆಯನ್ನಾದರೂ ಮಾರಿಕೊಂಡು  ಕಾಸು ಕೂಡಿಡಲಾಗದ ತಂದೆಗೆ ಮಕ್ಕಳನ್ನು ಪಡೆಯುವ ಹಕ್ಕು ಹೇಗೆ ಬರುತ್ತದೆ. ಓದಲು ಕಾಸಿಲ್ಲದೆ ಶಾಲೆಗೆ ಸೇರಲು ಆಗಲಿಲ್ಲ, ಸರ್ಕಾರಿ ಶಾಲೆಗೆ ಸೇರಿದರೂ ಶಿಕ್ಷಕರನ್ನೇ ಏನು, ಶಾಲೆಯ ಕಟ್ಟಡವನ್ನೇ ನೋಡಲಿಲ್ಲ, ಇವೆಲ್ಲಾ ಇದ್ದರೂ ಒಳ್ಳೆಯ ಕೋಚಿಂಗ್ ಪಡೆದು ಮಾರ್ಕು ಗಿಟ್ಟಿಸಿ ತೋರಿಸಲು ಸಾಧ್ಯವಾಗಲಿಲ್ಲ ಎಂಬ ಮಾತ್ರಕ್ಕೆ ಬಡವರ, ದರಿದ್ರರ ಮಕ್ಕಳು ಪ್ರತಿಭಾವಂತರಾಗುತ್ತಾರೆಯೇ? ಇಲ್ಲ. ಇವರನ್ನೆಲ್ಲಾ ಸಾಲಾಗಿ ನಿಲ್ಲಿಸಿ ಗುಂಡು ಹೊಡೆದು ಬಿಡಬೇಕು ಎಂದರು ನಗೆಸಾಮ್ರಾಟ್. ‘ಬುದ್ಧಿ, ನಿಮ್ಗೆ ಬುದ್ಧಿ ಇಲ್ಲ. ನಮ್ಮ ಸರ್ಕಾರದವ್ರು ಇದ್ನೆಲ್ಲಾ ಯಾವಾಗೋ ಯೋಚ್ಸಿದಾರೆ ಗೊತ್ತುಂಟಾ? ಅವ್ರೂ ನಿಮ್ಮಂಗೇ ತೀರ್ಮಾನಕ್ಕೆ ಬಂದ್ರು. ಆದ್ರೆ ಅದಕ್ಕೆಲ್ಲಾ ಒಂದು ಗುಂಡನ್ನ ಯೇಸ್ಟ್ ಮಾಡುವಷ್ಟು ಮಡ್ಡಿ ಅಲ್ಲ ನಮ್ಮ ಸರ್ಕಾರ. ಅದ್ಯಾರೋ ಇಟ್ಲರ್ರು  ಯಹೂದಿಗಳ್ನೆಲ್ಲಾ ಗುಂಡಿಯಾಗೆ ಆಕಿ ಗ್ಯಾಸು ಬಿಟ್ಟು ಸಾಯ್ಸಿ ಲಕ್ಷಾಂತರ ರೂಪಾಯಿ ಲುಕ್ಸಾನು ಮಾಡಿಕೊಳ್ಳಾಕೆ ನಮ್ಮ ಸರ್ಕಾರ ಏನು ಮಣ್ಣು ತಿಂತತಾ? ಆ ದರಿದ್ರದವಕ್ಕೆ ಒಟ್ಟೆಗೆ ಹಿಟ್ಟೇ ಇಲ್ಲದ ಹಂಗೆ ಮಾಡಿದ್ರೆ, ಚಳಿಯಾಗೆ ನಡುಗೋವ್ರಿಗೆ ಕಂಬಳಿ ಸಿಗದಂಗೆ ಮಾಡಿದ್ರೆ ಅವ್ರಾಗೆ ಜಂತು ಸತ್ತಂತೆ ಸಾಯ್ತಾರಲುವ್ರಾ? ಅಷ್ಟಕ್ಕೂ ಯಾವ್ನಾದ್ರೂ ಗಟ್ಟಿ ಹೈದ ಬದುಕುಳುದ್ರೆ ಇದ್ದೇ ಐತಲ್ಲಾ, ಕಳ್ಳ ಭಟ್ಟಿ…’ ಎಂದ ಚೇಲ.

‘ಹನ್ನೊಂದು ಮಂದಿ ಮೂರ್ಖರು ಆಡುವ ಆಟವನ್ನು ಹನ್ನೊಂದು ಸಾವಿರ ಮಂಡಿ ಮೂರ್ಖರು ನೋಡುತ್ತಾ ಕೂರುವುದೇ ಕ್ರಿಕೆಟ್’ ಅಂತ ಅದ್ಯಾವುದೋ ಭೂಪ ಹೇಳಿದ್ದನ್ನೇ ಗಾಸ್ಪೆಲ್ ಟ್ರುಥ್ ಅಂತ ನಂಬ್ಕೋಬೇಕಾ (ಈಗ ಬಿಡಿ, ಗಾಸ್ಪೆಲ್ಲು ಹೇಳಿರುವುದರಲ್ಲೇ ಟ್ರುತ್ಥು ಇಲ್ಲ ಅಂತ ಸಂಶೋಧನೆ ಮಾಡ್ತಿದ್ದಾರೆ!)?  ಅಂತ ತಲೆ ಕೆರೆದುಕೊಳ್ತಾ ಸಾಮ್ರಾಟರು ಮೈದಾನದಲ್ಲಿ ಅತ್ತಿಂದಿತ್ತ ಓಡಾಡುತ್ತಾ ಅಲ್ಲಿ ನೆರೆದಿದ್ದ ಯುವ, ಹದಿ-ವೃದ್ಧಾಪ್ಯದ, ಮಧ್ಯವಯಸ್ಕರನ್ನು ಸಂದರ್ಶಿಸಲು ಸಿದ್ಧರಾದರು.

ದೂರದ ದಿಗಂತದ ಶೂನ್ಯದಲ್ಲಿ ದೃಷ್ಟಿಯನ್ನು ನೆಟ್ಟಿಕೊಂಡು ನಿಂತ ಸಾಮ್ರಾಟರನ್ನು ಕೂಗಿ ಕರೆದ ಚೇಲ ಕುಚೇಲ ಅತ್ತ ಕಡೆ ನೋಡಿ ಎಂದ. ಅಲ್ಲಿ ಕ್ರೀಡಾಂಗಣದ ಗೇಟಿನ ಹೊರಗೆ ನೂರಾರು ಮಂದಿ ಕೈಲಿ ಕ್ರಿಕೆಟ್ ಬ್ಯಾಟು ಬದಲಿಗೆ ಹಾಕಿ ಕೋಲು, ತಿರುಪತಿ ತಿಮ್ಮಪ್ಪನ ಹಳೆಯ ಮೇಲಿರುವ ಸಿಂಬಲ್ಲಿನ ಆಕಾರದ ಝಳಪಿಸುವ ಆಯುಧಗಳನ್ನು ಹಿಡಿದುಕೊಂಡು ಗಲಾಟೆ ಹಾಕುತ್ತಿದ್ದರು. ಕೂಡಲೆ ಸಾಮ್ರಾಟರು ಚೇಲನೊಂದಿಗೆ ಅಲ್ಲಿಗೆ ಧಾವಿಸಿದರು. ಆ ಗುಂಪಿನ ಮುಂಚೂಣಿಯಲ್ಲಿ ಮಿಂಚುತ್ತಿದ್ದ ಹುರಿಯಾಳನ್ನು ಪಕ್ಕಕ್ಕೆ ಕರೆದು, ‘ಏನಯ್ಯಾ ಸಮಾಚಾರ’ ಎಂದರು. ಆ ಹುಡುಗ ವೀರಾ‘ವೇಷ’ದಿಂದ ‘ಅಲ್ರೀ, ನಮ್ಮ ದೇಶ ಎಂಥದ್ದು? ನಮ್ಮ ಸನಾತನ ಸಂಸ್ಕೃತಿ ಎಂಥದ್ದು? ನಾವು ಇಡೀ ಜಗತ್ತಿನ ಆಧ್ಯಾತ್ಮಿಕತೆಯನ್ನು ಕಲಿಸಿಕೊಟ್ಟವರು. ಇಡೀ ಜಗತ್ತಿಗೆ ನೈತಿಕತೆಯ ಪಾಠವನ್ನು ಹೇಳಿಕೊಟ್ಟವರು ಭಾರತೀಯರು… ನಾವು… ನಾವು…’ ಎನ್ನುವಷ್ಟರಲ್ಲಿ ಗಂಟಲು ರೇಗಿತು. ‘ಒಂದು ಸಿಗರೇಟಿದೆಯಾ ಸರ್ರು…’ ಅಂದು, ಸಾಮ್ರಾಟರಿಂದ ಪಡೆದು ಅದರ ತುದಿಗೆ ಬೆಂಕಿಕೊಟ್ಟು ಮಾತು ಮುಂದುವರೆಸಿದ, ‘ಹೆಣ್ಣಿಗೆ ದೇವಿಯ ಸ್ಥಾನವನ್ನು ಕೊಟ್ಟವರು ನಮ್ಮ ಪೂರ್ವಜರು. ಅದಕ್ಕಾಗಿಯೇ ನಾವು ಇಂದು ಆಕೆಯನ್ನು ಅಡುಗೆಮನೆ, ದೇವರ ಮನೆಗೆ ಸೀಮಿತಗೊಳಿಸಿ ಹಿರಿಯರ ಆದರ್ಶ ಪಾಲಿಸುತ್ತಿರುವುದು. ಹೆಣ್ಣಿಗೆ ಮಾತೆಯಂತ ಕರೆದವರು ನಮ್ಮ ಹಿಂದಿನವರು. ಅದಕ್ಕಾಗಿಯೇ ಆಕೆಗೆ ‘ಮಾತೆ’ಯಾಗುವ ಕೆಲಸ ಬಿಟ್ಟು ಬೇರಾವುದಕ್ಕೂ ಅವಕಾಶ ಸಿಗದ ಹಾಗೆ ನೋಡಿಕೊಂಡಿದ್ದೇವೆ. ನಾವು ಹೆಣ್ಣಿಗೆ ಇಂಥಾ ಮರ್ಯಾದೆಯನ್ನು ಮಾಡುತ್ತಿರುವಾಗ ಇವರು ಕ್ರಿಕೆಟ್ ಆಡುವ ಇಪ್ಪತ್ತೆರಡು ಮಂದಿ ಗಂಡಸರು ಹಾಗೂ ಅದನ್ನು ನೋಡುವುದಕ್ಕೆ ಬರುವ ಗಂಡಸರ ಮುಂದೆ ಅರೆ ಬರೆ ಬಟ್ಟೆ ತೊಟ್ಟು ಕುಣಿಯುವುದಕ್ಕಾಗಿ ‘ಚೀರ್ ಲೀಡರ್ಸ್’ನ್ನ ಕರೆಸಿದ್ದಾರೆ. ಇದು ನಮ್ಮ ಸಂಸ್ಕೃತಿಗೆ ಮಾಡಿದ ಅಪಮಾನ. ಅದಕ್ಕೇ ನಮ್ಮ ‘ಶಾಂತಿಯುತ’ ಪ್ರತಿಭಟನೆ’ ಎನ್ನುತ್ತಾ ಪಕ್ಕದಲ್ಲಿ ಬಿಟ್ಟಿದ್ದ ದೊಣ್ಣೆಯನ್ನೆತ್ತಿಕೊಂಡು ಹೊರಟ.

ಈ ಗುಂಪಿನ ಪಕ್ಕದಲ್ಲೇ ಮತ್ತೊಂದು ಗುಂಪು ನೆರೆಯಲು ಶುರುವಾಗಿತ್ತು. ಅವರದೂ ಅದೇ ಫ್ಯಾನ್ಸಿ ಡ್ರೆಸ್ಸು. ಇವರ  ಗೋಳೇನು ಕೇಳಿಕೊಂಬೋಗು ಎಂದು ಸಾಮ್ರಾಟರು ಕುಚೇಲನನ್ನು ಅಟ್ಟಿದರು. ‘ಅಯ್ಯೋ ಸಾರ್. ಇಲ್ಲಿ ಇವ್ರು ಸಂಸ್ಕಾರ, ಸಂಸ್ಕೃತಿ ಅಂತ ಗಲಾಟೆ ಮಾಡಾಕೆ ಜನರನ್ನ ಬಾಡಿಗೆ ತಂದದ್ದು ಗೊತ್ತಾಗಿ ಅದ್ಯಾರೋ ರೀಜನಲ್ ಓರಾಟಗಾರರು ಓಡಿ ಬಂದ್ರಂತೆ. ಈ ಸ್ಟೇಡಿಯಮ್ಮಿನವ್ರು ಇದೇಸದಿಂದ ಹುಡುಗೀರ್ನ ಕುಣಿಯೋಕೆ ಕರೆಸಿರೋದ್ನ ಕಂಡು ಅವರ ಮುಖಂಡ… ಪ್ರಾದೇಶಿಕ ಪ್ರತಿಭೆಗಳಿಗೆ ಅವಮಾನವಾಗಿದೆ. ನಿಮಗೆ ನಮ್ಮ ಸ್ಟೇಡಿಯಮ್ಮು ಬೇಕು, ನಮ್ಮ ಜನರು ಟಿಕೆಟು ಖರೀದಿಸ್ಬೇಕು, ನಮ್ಮ ಜನರ ದುಡ್ಡು ಬೇಕು ಆದರೆ ನಮ್ಮವರು ಬೇಡ. ಎಲ್ಲದರಲ್ಲೂ ಸ್ಥಳೀಯರಿಗೆ ಮೊದಲ ಆದ್ಯತೆ ಬೇಕು. ಅಂತ ಓರಾಟ ಶುರು ಅಚ್ಚಿಕೊಂಡವ್ರಂತೆ’ ವರದಿ ಒಪ್ಪಿಸಿದ ಕುಚೇಲ.

ನಮ್ಮ ಯುವಕರಿಗೆ ಪ್ರತಿಭಟನೆಗೆ ಎಂತೆಂಥಾ ವಿಷಯಗಳು ಸಿಕ್ಕುತ್ತವೆ. ಪೂರ್ ಫೆಲೋ ಗಾಂಧಿ ಕೇವಲ ಚಿಟಿಗೆ ಉಪ್ಪಿಗಾಗಿ ಸತ್ಯಾಗ್ರಹ ಮಾಡಿದ. ಇವರ ಬಳಿ ಇದ್ದಿದ್ದರೆ ಇನ್ನೂ ಎಷ್ಟೆಷ್ಟೋ ಮಹತ್ವದ ವಿಷಯಗಳು ಸಿಕ್ಕುತ್ತಿದ್ದವು ಪ್ರತಿಭಟನೆಗೆ ಎಂದು ಕೊಂಡು ಸಾಮ್ರಾಟರು ಕುಚೇಲನ ಸಮೇತ ಕ್ರೀಡಾಂಗಣದ ಒಳಕ್ಕೆ ಬಂದರು. ಎದುರಿಗೇ ನಾಲ್ಕೈದು ಮಂದಿ ಯುವಕರು, ಸ್ಫುರದ್ರೂಪಿಗಳು ಮುಖ ಗಂಟಿಕ್ಕಿಕೊಂಡು ಕುಳಿತಿರುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದ ನಗೆಸಾಮ್ರಾಟರು ಇಲ್ಲೊಂದು ಸ್ಟೋರಿ ಸಿಕ್ಕೀತು ಅಂತ ಅಂದುಕೊಂಡು ಅವರ ಬಳಿಗೆ ದೌಡಾಯಿಸಿದರು. ಸಾಮ್ರಾಟರು ಪತ್ರಿಕೆಯವರು ಎಂಬುದನ್ನು ಅರಿತ ಕೂಡಲೇ ಆ ಗುಂಪಿನವರೋ ಗೊಳೋ ಎಂದು ಅಳುತ್ತಾ ಫೋಟೊ ಫೋಸಿಗೆ ಸಿದ್ಧರಾದರು. ಸಾಮ್ರಾಟರು ಏನು ನಿಮ್ಮ ಚರಿತ್ರೆ ಎಂದು ಕೇಳುವ ಮೊದಲೇ ಒಬ್ಬ ಯುವಕ ‘ಅಂಕಲ್, ನೀವೇ ನೋಡಿ… ನಮ್ಮ ದೇಶದಲ್ಲಿ ಎಷ್ಟೆಲ್ಲಾ ಅಸಮಾನತೆ, ಶೋಷಣೆ ನಡೆಯುತ್ತಿದೆ. ನಮ್ಮ ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂದು ಆಶ್ವಾಸನೆ ಕೊಟ್ಟಿದ್ದರೂ ಎಲ್ಲೆಲ್ಲೂ ಬರೀ ಅಸಮಾನತೆ, ಶೋಷಣೆ ನಡೆಯುತ್ತಿದೆ. ಎಲ್ಲಾ ಕಡೆ ಬರೀ ಪಾರ್ಶಿಯಾಲಿಟಿ.’ ಎಂದು ಮಾತಿಗೆ ತೊಡಗಿದ. ಸಾಮ್ರಾಟರಿಗೆ ಈ ಹುಡಗನ ಪ್ರಾಮಾಣಿಕ ಕಳಕಳಿಯನ್ನು ಕಂಡು ಮಮತೆ ಉಕ್ಕಿತು. ‘ಅಲ್ಲಾ ಅಂಕಲ್, ಕ್ರಿಕೆಟ್ ಆಡುವುದು ಹುಡುಗರು, ನೋಡುವ ಬಹುಪಾಲು ಮಂದಿ ಹುಡುಗರು ಹೀಗಿರುವಾಗ ಅಲ್ಲಿ ಮೈದಾನದಲ್ಲಿ ಕುಣಿಯುವುದಕ್ಕೆ ಮಾತ್ರ ಹುಡುಗಿಯರು ಬೇಕಾ? ಚೀರ್ ಗರ್ಲ್ಸ್ ಮಾತ್ರ ಬೇಕಾ? ಚೀರ್ ಬಾಯ್ಸ್ ಯಾಕೆ ಇರಬಾರದು. ಇದು ಹುಡುಗರಿಗೆ ತೋರುತ್ತಿರುವ ಅಸಡ್ಡೆ. ಇದು ಹುಡುಗರ ಮೇಲೆ ನಡೆಯುತ್ತಿರುವ ಶೋಷಣೆ. ಮಹಿಳಾ ಪ್ರಧಾನವಾದ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಗಂಡಸರ ಶೋಷಣೆ’ ಎಂದು ಏರಿದ ದನಿಯಲ್ಲಿ ಭಾಷಣ ಚಚ್ಚುತ್ತಿರುವಂತೆಯೇ ನಗೆ ಸಾಮ್ರಾಟರಿಗೆ ಕಣ್ಣು ಕತ್ತಲೆ ಬಂದಿತ್ತು. ಅಷ್ಟರಲ್ಲಿ ಪಕ್ಕದಲ್ಲಿಯೇ ಬೇತಾಳದಂತೆ ಅಲೆದಾಡುತ್ತಿದ್ದ ‘ಭಾರತದ ಗಡಿಯಾರಗಳು’ ಎಂಬ ಅಚ್ಚ ಇಂಗ್ಲೀಷ್ ಪತ್ರಿಕೆಯ ವರದಿಗಾರ ನಮ್ಮ ಪತ್ರಿಕೆಯ ಮುಖಪುಟಕ್ಕೆ ಒಳ್ಳೆ ಕವರೇಜ್ ಸಿಕ್ಕಿತು ಅಂತ ಅಲ್ಲಿಗೆ ದೌಡಾಯಿಸಿದ. ಸಾಮ್ರಾಟರು ತಣ್ಣಗೆ ಅಲ್ಲಿಂದ ಜಾರಿಕೊಂಡರು.

ಸ್ಟೇಡಿಯಮ್ಮಿನಿಂದ ಹೊರಬಂದು ದಣಿವಾರಿಸಿಕೊಳ್ಳಲು ಸನಿಹದ ಅಂಗಡಿಯಲ್ಲಿ ನೀರು ಕೇಳಿದರೆ ಆತ ‘ನೀರಾದರೆ ಒಂದು ಬಾಟಲಿಗೆ ನೂರು ರೂಪಾಯಿ, ಬೀರಾದರೆ ಐವತ್ತು’  ಅಂದದ್ದು ಕೇಳಿ ದಿಗಿಲಾಗಿ ಓಡಲು ಶುರುಮಾಡಿದವರು ನಗಾರಿಯ ಕಛೇರಿ ತಲುಪಿದಾಗಲೇ ನಿಂತದ್ದು.

ಸ್ಕೂಪ್: ಆಸ್ಟ್ರೇಲಿಯಾದಿಂದ ದೀಪಿಕಾ ಬುಕ್ಕಿಂಗ್!

13 ಮಾರ್ಚ್

(ಅಂತರಾಷ್ಟ್ರೀಯ ಕ್ರೀಡಾ ಬ್ಯೂರೋ)

ಈ ಸ್ಫೋಟಕವಾದ ಹಾಗೂ ನೆಲಬಿರಿಯುವಂತಹ ಸುದ್ದಿಯನ್ನು ‘ನಗೆ ನಗಾರಿ’ ಅತಳ, ಸುತಳ, ಪಾತಾಳಗಳನ್ನು ಜಾಲಾಡಿ ಹೆಕ್ಕಿ ಕೊಂಡು ಬಂದು ನಿಮ್ಮ ಮುಂದೆ ಕುಕ್ಕುತ್ತಿದೆ. ಈ ತನಿಖಾ ವರದಿಯಿಂದಾಗಿ ಅಂತರಾಷ್ಟ್ರೀಯ ಮಟ್ಟದ ವಿವಾದಗಳು ಏಳಬಹುದೆಂಬ ಮುನ್ಸೂಚನೆಯನ್ನು ನಮ್ಮ ಹವಾಮಾನ ಇಲಾಖೆ ಕೊಟ್ಟಿರುವುದರಿಂದ ಯಾರೂ ಆತಂಕಗೊಳ್ಳಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟ ಪಡಿಸುತ್ತಿದ್ದೇವೆ.

ಕ್ರಿಕೆಟ್ ಎಂಬ ‘ಮೆಂಟಲ್ ಮನ್’ಗಳ ಆಟವನ್ನು ಹುಟ್ಟಿಸಿದ ಇಂಗ್ಲೆಂಡಿನ ತಂಡ ಅಂದು ಆತ್ಮಹತ್ಯೆ ಮಾಡಿಕೊಳ್ಳಲು ನೂರೆಂಟು ವಿಧಾನಗಳು ಎಂಬ ಪುಸ್ತಕವನ್ನು ಅಂತರ್ಜಾಲದಲ್ಲಿ ಹುಡುಕುತ್ತಿದ್ದರು. ಅದಕ್ಕೆ ಕಾರಣವಿಷ್ಟೇ, ಸ್ಟುವರ್ಟ್ ಅಗಲ (Stuart Broad)ನ ಆರು ಎಸೆತಗಳ ಒಂದು ಓವರಿನಲ್ಲಿ ಆರು ಸಿಕ್ಸರ್ ಚಚ್ಚುವ ಮೂಲಕ ನಮ್ಮ ನಿಮ್ಮೆಲ್ಲರ ಮೆಚ್ಚಿನ ಯುವರಾಜ್ ಸಿಂಗ್ ಜಗತ್ತು ಬೆಚ್ಚುವಂತೆ ಬೊಬ್ಬಿರಿದು ಅಬ್ಬರಿಸಿ ಕೊಬ್ಬಿಳಿಸಿದ್ದರು. ಅವರನ್ನು ಕೆಣಕಿದ ಆಂಡ್ರೂ ಪ್ಲಿಂಟಾಫ್ ಅಡಗಿಕೊಳ್ಳಲು ಸೌತ್ ಆಫ್ರಿಕಾದ ಸ್ಟೇಡಿಯಮ್ಮಿನಲ್ಲಿ ಬಿಲವನ್ನು ಹುಡುಕುತ್ತಿದ್ದರು. ತಮ್ಮ ಕೆಚ್ಚೆದೆಯ ಚಚ್ಚುವ ಆಟವನ್ನು ಪ್ರದರ್ಶಿಸಿ ಯುವಿ ಆಸ್ಟ್ರೇಲಿಯಾಕ್ಕೆ ಟಿಕ್- ಟ್ವೆಂಟಿ -ಟ್ವೆಂಟಿ ಆಟದಲ್ಲಿ ಬೆವರಿಳಿಸಿದ್ದರು.

ಯುವಿಯ ಸ್ಫೋಟಕ, ಭಯಾನಕ, ಭೀಭತ್ಸಕಾರಿ ಬ್ಯಾಟಿಗೆ ಯಾವ ಎಣ್ಣೆಯನ್ನು ಸವರಿದರೂ ಅದು ಆತನ ಕೈಯಿಂದ ಜಾರಿ ಆತ ಬೋಲ್ಡ್ ಆಗುತ್ತಿರಲಿಲ್ಲ. ಈ ಭಯಾನಕ ಸತ್ಯದಿಂದ ಕಂಗೆಟ್ಟು ಹಗಲಿಡೀ ನಿದ್ರೆ ಮಾಡಲಾರದೆ, ರಾತ್ರಿಯಿಡೀ

ಎಚ್ಚರವಿರಲಾರದೆ ಕಂಗಾಲಾದ ಆಸ್ಟ್ರೇ-ಲಿಯಾದ ಆಟಗಾರರು ವಿಪರೀತವಾದ ಆತಂಕದಲ್ಲಿದ್ದರು. ಇದು ಸಾಲದು ಎಂಬಂತೆ ನಮ್ಮ ಯವ್ವಿ-ಯವ್ವೀ ರಾಜ ಸಿಂಗರು ಭಾರತದ ಥೇಮ್ಸಾಫಿಂಡಿಯಾ ಪತ್ರಿಕೆಗೆ ಕೊಟ್ಟ ಸಂಶಯ-ದರ್ಶನದಲ್ಲಿ ”ಆಸ್ಟ್ರೇಲಿಯಾದ ಪಿಚ್ಚುಗಳು ನನಗೆ ಅಚ್ಚುಮೆಚ್ಚಿನವು, ಅಲ್ಲಿ ಬೌಲರ್‌ಗಳನ್ನು ಚಚ್ಚುವುದಕ್ಕೆ ನಾನು ಹಲ್ಲು ಕಚ್ಚಿ ಕಾಯುತ್ತಿದ್ದೇನೆ” ಅಂದಾಗ ಕಿರ್ ಕಿರಿ ಪೇಂಟಿಂಗ್ ಬೆಸ್ತು ಬಿದ್ದರು.

ಅಂದು ರಾತ್ರಿಯೇ ಕಿರ್ ಕಿರಿ ಪೇಂಟಿಂಗ್, ಹೇ-ದನಾ, ಸೈಮೊಂಡು, ಬೆಟ್ಟದ ಇಲಿ ಗುಪ್ತ ಸಭೆ ಸೇರಿ ಈ ಯವ್ವಿ ರಾಜನ ಕಿರೀಟ ಉರುಳಿಸೋದಕ್ಕೆ, ಆತನ ಬ್ಯಾಟಿನ ತಪಸ್ಸನ್ನು ಕೆಡಿಸೋದಕ್ಕೆ ಏನು ಮಾಡಬೇಕು ಅಂತ ಮಧ್ಯರಾತ್ರಿಯವರೆಗೂ ಮದ್ಯದ ಜೊತೆ ಸಮಾಲೋಚನೆ ನಡೆಸಿದರು. ಆದರೆ ಅವರ ತಲೆಯಿಂದ ಹತ್ತಾರು ಹೇನುಗಳು ಹೊರಬಂದವೇ ವಿನಃ ಯಾವ ಉಪಾಯವೂ ಬರಲಿಲ್ಲ. ಕೊನೆಗೆ ಕಿರ್ ಕಿರಿ ಪೇಂಟಿಂಗರು ಎಲ್ಲೋ ಕದ್ದು ಓದಿದ್ದ ಸುದ್ದಿಯನ್ನಾಧರಿಸಿ ನೇರವಾಗಿ ಪದ್ಮನಾಭನಗರದ ಮಹಾಮಾಂತ್ರಿಕನ ಬಂಗಲೆಗೆ ಎಸ್.ಟಿ.ಡಿ ಮಾಡಿ ದೀರ್ಘ ಸಮಾಲೋಚನೆ ನಡೆಸಿದ್ದಾಗಿ ತಿಳಿದು ಬಂದಿದೆ.

ಮರುದಿನವೇ ಕಿರ್ ಕಿರಿ ಪೇಂಟಿಂಗ್ ದೀಪಕ್ಕಂಗೂ ಯವ್ವೀ ರಾಜಂಗೂ ಅಫೇರು ಅಂತ ಪೇಪರ್‌ಗಳಿಗೆ ರದ್ದಿ ಹರಿಬಿಟ್ಟಿದ್ದಾನೆ. ರದ್ದಿಯನ್ನು ಸುದ್ದಿಯನ್ನಾಗಿ ಓದಿ ದೀಪಕ್ಕ ಬಿಟ್ಟಿ ಪ್ರಚಾರ ಗಟ್ಟಿ ಪ್ರಚಾರ ಅಂದುಕೊಂಡು ಆಸ್ಟ್ರೇಲಿಯಾಕ್ಕೆ ಕಾಲ್ಕಿತ್ತಿದ್ದಾಳೆ. ಅವಳು ಬಂದದ್ದು ತನ್ನ ಆಟ ನೋಡೋದಕ್ಕೋ, ನನ್ನನ್ನು ನೋಡೋದಕ್ಕೋ ಅಂತ ಭಾರಿ ಕನ್ ಫೂಸ್ ಆದ ಯವ್ವಿರಾಜ ಕಿರಿಕಿರಿ ಮಾಡುವ ಬೌಲರ್‌ಗಳಿಗೆ ಬೇಗ ಔಟ್ ಆಗುವ ಮೂಲಕ ಸರಿಯಾದ ಪಾಠ ಕಲಿಸುತ್ತಾ ಕನಸಿನ ಲೋಕದಲ್ಲಿ ಮುಳುಗಿದ್ದ.

ಇನ್ನೇನು ಶಾಂತಿ ನಂಗೆ ಸಿಕ್ಕರೆ ದೀಪಕ್ಕನ ಜೊತೆ ಪಕ್ಕದ ‘ಕೋಣೆ’ ಸೇರಬಹುದು ಅಂತ ಮನಸ್ಸಲ್ಲಿ ಮಂಡಿಗೆ ಮುರಿಯುತ್ತಿದ್ದ ಯವ್ವಿರಾಜನ ಹೃದಯ ಒಡೆದು ಚೂರಾಗುವಂತೆ ಪಕ್ಕದ ಕೋಣೆ ದೀಪಕ್ಕ ‘ಸಾವು ಹರಿಯಾ’ ನಾಯಕ ರಣ ‘ಬೀರ’ನಿಗೆ ಪ್ರಪೋಸ್ ಮಾಡಿಬಿಟ್ಟಳು. ಈ ಸುದ್ದಿ ಕೇಳಿ ಯುವ್ವಿ ಎದೆ ಬಕ್ಕ ಬಾರಲು ಬಿದ್ದದ್ದನ್ನು ಕಂಡ ಅತ್ತ ರಣಬೀರನ ಮುಖದಲ್ಲಿ ಪ್ಯಾದೆ ನಗೆಯಿದ್ದರೆ, ಇತ್ತ ಪೇಂಟಿಂಗ್‌ನ ಮುಖದ ಮೇಲೆ ವಿಕಟ ಹಾಸವಿತ್ತು ಎಂಬುದು ತಿಳಿದುಬಂದಿದ್ದು ಹೆಚ್ಚಿನ ಮಾಹಿತಿಗಾಗಿ ಎದುರು ನೋಡಲಾಗುತ್ತಿದೆ.

ಸ್ಪೀಡ್ ಗವರ್ನರ್ ಕಡ್ಡಾಯ ಶೀಘ್ರ ಅನುಷ್ಠಾನಕ್ಕೆ ಒತ್ತಾಯ

14 ಫೆಬ್ರ

(ಅಂತರಾಷ್ಟ್ರೀಯ ಕ್ರೀಡಾ ಬ್ಯೂರೊ)

ಭಾರಿ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸುವುದನ್ನು ಕಡ್ಡಾಯಗೊಳಿಸಿರುವ ಹೈಕೋರ್ಟಿನ ತೀರ್ಪಿನ ಬಗೆಗೆ ಅಪಾರವಾದ ಬೆಂಬಲ ವ್ಯಕ್ತವಾಗಿದೆ. ಹೀಗೆ ಬೇಷರತ್ತಾದ ಬೆಂಬಲವನ್ನು ನೀಡಿರುವವರು ಲಾರಿ ಮಾಲೀಕರೂ ಅಲ್ಲ, ಟ್ಯಾಕ್ಸಿ ಸಂಘದವರೂ ಅಲ್ಲ, ಅಖಿಲ ವಿಶ್ವ ರಕ್ಷಣಾತ್ಮಕ ದಾಂಡಿಗರ ಸಂಘದ ಅಧ್ಯಕ್ಷರು!

shoaibunplugged.jpgವೇಗವೆಂಬುದು ಅಂತ್ಯಂತ ಅಪಾಯಕಾರಿಯಾದ ಸಂಗತಿ. Speed thrills, but kills ಎಂಬುದಾಗಿ ಜಗತ್ತಿನ ಅತ್ಯಂತ ವೇಗದ ಫೆರಾರಿ ಚಾಲಕ ಮೈಕೆಲ್ ಶೂಮಾಕರ್ ಹೇಳಿರುವುದು ಇಲ್ಲಿ ಪ್ರಸ್ತುತ. brett%20lee%2001.jpgವೇಗದಿಂದಾಗಿ ಅನಾಹುತ ಸಂಭವಿಸುತ್ತವೆ, ವೇಗದಿಂದಾಗಿ ಹಾನಿಯಾಗುತ್ತದೆ, ವೇಗ ಸೈತಾನನಿದ್ದಂತೆ ಎಂಉ ಹೇಳಿದರು ಅಖಿಲ ವಿಶ್ವ ರಕ್ಷಣಾತ್ಮಕ ದಾಂಡಿಗರ ಸಂಘದ ಅಧ್ಯಕ್ಷರಾದ ಬ್ಯಾಟ್ಸ್ ಮನ್ ಮಿಸ್ಟರ್ ನಾನಾಮಿಕ‘.

ಕ್ರಿಕೆಟ್ ಚೆಂಡನ್ನು ನೂರಾ ಐವತ್ತು, ನೂರಾ ನಲವತ್ತು ಕಿ.ಮೀ ಪ್ರತಿಘಂಟೆ ವೇಗದಲ್ಲಿ ಎಸೆಯುವ ಬೌಲರ್‌ಗಳಿಂದ ನಮ್ಮಂತಹ ಬ್ಯಾಟ್ಸ್ ಮನ್‌ಗಳ ಪಕ್ಕೆಲುಬು, ತೊಡೆ ಮೂಳೆ, ತೊಡೆ ಸಂದು (ಗಾರ್ಡ್ ಆ ಸಮಯದಲ್ಲಿ ಗಾರ್ಡ್ ಲೆಸ್ ಆಗಿಬಿಡುತ್ತದೆ), ತಲೆ ಬುರುಡೆ ಅವಸಾನದ ಅಪಾಯ ಎದುರಿಸುತ್ತವೆ. ಹಾಗಾಗಿ ಇಂತಹ ವೇಗಿಗಳನ್ನು ಅಮಾನವೀಯರು ಎಂದು ಪರಿಗಣಿಸಿ ಅವರಿಗೂ ಕಡ್ಡಾಯವಾದ ವೇಗ ನಿಯಂತ್ರಕವನ್ನು ಅಳವಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರಾವಳಪಿಂಡಿಯ ಎಕ್ಸ್ ಪ್ರೆಸ್ ಶೋಭಾ ಹಕ್ತರ್, ಕಾಂಗರೂ ಪಾಳಯದ ಕ್ಷಿಪಣಿ ಬೆಟ್ಟಿ ಇಲಿ, ಕಪ್ಪು ಬೆಕ್ಕುಗಳ ಅಡ್ಡಾದ ಇನ್‌ಸೇನ್ ಬಾಂಡ್ ಇವರೆಲ್ಲರೂ ವೇಗವೆಂಬ ಸಮಾಜ ಬಾಹಿರ ಕೃತ್ಯದಲ್ಲಿ ತೊಡಗಿ ಅಮಾಯಕರ ಮಾನ ಹಾಗೂ ಪ್ರಾಣಕ್ಕೆ ಧಕ್ಕೆ ಉಂಟು ಮಾಡಿತ್ತಿರುವುದರಿಂದ ಅವರುಗಳಿಗೆ ಸ್ಪೀಡ್ ಗವರ್ನರ್ ಕಡ್ಡಾಯಗೊಳಿಸಿ ಶೀಘ್ರವಾಗಿ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ನಾವೆಲ್ಲಾ ಬ್ಯಾಟ್ಸ್ ಮನ್‌ಗಳು ಸಾಲಾಗಿ ಪೆವಿಲಿಯನ್ ಕಡೆಗೆ ಪೆರೇಡ್ ಹೊರಡುವೆವು ಎಂದು ಬೆದರಿಕೆ ಒಡ್ಡಿರುವುದು ಒದರಿಯಾಗಿದೆ.


Technorati : , ,