ಮಚ್ಚು ಲಾಂಗು ರೇಜರುಗಳ ಸತ್ಸಂಪ್ರದಾಯವನ್ನು ನೆಚ್ಚಿಕೊಂಡು, ಕುರ್ಪು, ಗುನ್ನ, ಡಿಚ್ಚಿಗಳೆಂಬ ದೈವೀ ಪ್ರಭಾವಳಿಯಿಂದ ಸನ್ನಡತೆಯನ್ನು ಕಾಪಾಡಿಕೊಂಡು ಕರುಣಾಜನಕ, ಕರುಳು ಬೇಧಕ ಭಾವುಕ ಪರಂಪರೆಯನ್ನು ಪೊರೆಯುತ್ತಾ ನೆಮ್ಮದಿಯಾಗಿದ್ದ ಕನ್ನಡ ಚಿತ್ರರಂಗಕ್ಕೆ ಹೊತ್ತಲ್ಲದ ಹೊತ್ತಿನಲ್ಲಿ ಮುಂಗಾರು ಹೊಡೆಸಿ ನೆಗಡಿ ಹತ್ತಿಸಿ, ಸಿಂಬಳ ಸುರಿಸುವಂತೆ ಮಾಡಿದ್ದು ನಮ್ಮ ನಿಮ್ಮೆಲ್ಲರ ಮೆಚ್ಚಿನ ಭೋಗರಾಜ ಶೆಟ್ಟರು.
ಸತತ ಮೂರು ಚಿತ್ರಗಳಲ್ಲಿ ಭರ್ಜರಿ ಯಶಸ್ಸನ್ನು ಕಂಡು ಪ್ರಾಯೋಜಕರಾದ ಕಂಪೆನಿಗಳಿಗಿಂತ ಹೆಚ್ಚಿನ ಪ್ರಚಾರವನ್ನು ಪಡೆದುಕೊಂಡ ಶೆಟ್ಟರು ಪೆನ್ನು ಹಿಡಿದುಕೊಂಡರೂ, ಮೈಕು ಹಿಡಿದುಕೊಂಡರೂ, ಇನ್ಯಾರದೂ ಕೈಯಿ ಹಿಡಿದುಕೊಂಡರೂ, ತಮ್ಮದೇ ತಲೆ ಹಿಡಿದುಕೊಂಡರೂ ಮಾಧ್ಯಮಗಳಿಗೆ ಎದ್ದು ಬಿದ್ದು ವರದಿ ಮಾಡಬಹುದಾದ ಸುದ್ದಿ.
ಭೋಗರಾಜ ಶೆಟ್ಟರು ತಮ್ಮ ಸಿನೆಮಾಗಳ ಬಗ್ಗೆ ಎಲ್ಲೂ ಹೆಚ್ಚಾಗಿ ಮಾತನಾಡುವುದಿಲ್ಲ ಎಂದು ಅನೇಕ ಟಿವಿ ಸಂದರ್ಶನಗಳಲ್ಲಿ ತಮ್ಮ ಸಿನೆಮಾವನ್ನು ಪ್ರಮೋಟ್ ಮಾಡುತ್ತಾ ಮಾತನಾಡಿದ್ದಾರೆ. ತಮ್ಮ ಸಿನೆಮಾ ಬದುಕಿನ ಜೊತೆಗೆ ತಮ್ಮ ಸಾಹಿತ್ಯಿಕ ಲೋಕದ ಬಗ್ಗೆಯೂ ಸಂದರ್ಶನಗಳಲ್ಲಿ ಮನಬಿಚ್ಚಿ, ರೆಕ್ಕೆ ಬಿಚ್ಚಿ ಮಾತನಾಡಿದ್ದಾರೆ. ಅವರು ರೆಕ್ಕೆ ಬಿಚ್ಚಿ ಮಾತನಾಡುವ ಕಾರಣಕ್ಕೇ ಅವರು ಪ್ರಶ್ನೆಗಳಿಗೆ ಹಾರಿ ಹಾರಿ ಹಾರಿಕೆಯ ಉತ್ತರ ನೀಡುತ್ತಾರೆ
ಎನ್ನುವ ಪ್ರಶಂಸೆಗೆ ವಿನಾಕಾರಣ ಗುರಿಯಾಗಿದ್ದಾರೆ.
ಈ ಹಾರು ಹಕ್ಕಿಯ ಜೊತೆಗೆ ಅಭೂತಪೂರ್ವವಾದ ಸಂದರ್ಶನವೊಂದನ್ನು ಮಾಡಬೇಕೆಂದು ಹಾರಿಕೆಯ ತಜ್ಞರಾದ ಸಾಮ್ರಾಟರಲ್ಲಿ ಕೋರಿಕೆ ಸಲ್ಲಿಸಲಾಯ್ತು. ಕೂಡಲೇ ಸಾಮ್ರಾಟರು ತಮ್ಮಾಪ್ತ ಚೇಲ ಕುಚೇಲನಿಗೆ ಕರೆ ಕಳುಹಿಸಿದರು. ನಾರ್ಕೋ ಲೆಪ್ಸಿಯಿಂದಾಗಿ ಕಂಡ ಕಂಡಲ್ಲಿ, ಕಂಡವರ ಸಂಗಡ ಮಲಗಲು ಶುರುಮಾಡಿದ್ದ ತಮ್ಮ ಆಲ್ಟರ್ ಈಗೋವನ್ನು ಇಗೋ ಇಗಲೇ ಎಳೆದು ತಾ ಎಂದು ಆಜ್ಞಾಪಿಸಿದರು.
ತಮ್ಮ ಬೆನ್ನ ಹಿಂದೆ ತೂಕಡಿಸುತ್ತ ನಿಂತ ಆಲ್ಟರ್ ಈಗೋವನ್ನು ಎಚ್ಚರಿಸಿ ಭೋಗರಾಜ ಶೆಟ್ಟರ ಸಂ-ದರ್ಶನವನ್ನು ಮಾಡಿಕೊಂಡು ಬರಲಿಕ್ಕೆ ಅಟ್ಟಿದರು. ಮಂದ್ರ ಸ್ವರದಲ್ಲಿ ಆಲ್ಟರ್ ಈಗೋ
ಇಂಟ್ರ್ಯು ಮಾಡಿ ಪುಣ್ಯ ಕಟ್ಕೊ
ಯೋಚ್ನೆ ಮಾಡಿ ಗಡ್ಡ ಸುಟ್ಕೊ
ಉತ್ರ ಸಿಗದೆ ಇರುವೆ ಬಿಟ್ಕೊ
ಲೈಫು ಇಷ್ಟೇನೇ…
ಎಂದು ಹಾಡಿಕೊಳ್ಳುತ್ತಾ ಸಂದರ್ಶನಕ್ಕೆ ಮುಂದಾಯಿತು.
ಶೀಘ್ರದಲ್ಲಿ ನಿರೀಕ್ಷಿಸಿ ಭರ್ಜರಿ ನಿರ್ದೇಶಕ ಭೋಗರಾಜ ಶೆಟ್ಟರ ಸಂದರ್ಶನ: ನಗಾರಿಯಲ್ಲಿ ಮಾತ್ರ!
ಟ್ಯಾಗ್ ಗಳು:ಆಲ್ಟರ್ ಈಗೋ, ಕುಚೇಲ, ನಗೆ ಸಾಮ್ರಾಟ್, ಭೋಗರಾಜ ಶೆಟ್ಟರು
ಇತ್ತೀಚಿನ ಪ್ರಜಾ ಉವಾಚ