Archive | ಆರೋಗ್ಯ RSS feed for this section

ನಿದ್ದೆ ಮಾಡುವಾಗ ಮೆದುಳಿನ ಗ್ರಹಣ ಶಕ್ತಿ ಹೆಚ್ಚು: ವರದಿ

25 ಫೆಬ್ರ

ಮಂಡ್ಯದ ವಿಜ್ಞಾನಿಗಳ  ಅಧ್ಯಯನ ಬಯಲು ಮಾಡಿದ ಸತ್ಯ

ಬೆಂಗಳೂರು, ಫೆ 25: ತಾವು ತರಗತಿಯಲ್ಲಿ ಪಾಠ ಮಾಡುವಾಗ ತೂಕಡಿಸುವ ವಿದ್ಯಾರ್ಥಿಗಳ ಬಗ್ಗೆ ಇನ್ನು ಮುಂದೆ ಅಧ್ಯಾಪಕರು ಸಿಟ್ಟಾಗಬೇಕಿಲ್ಲ. ಮೈಯೆಲ್ಲ ಎಚ್ಚರವಾಗಿದ್ದು ಪಾಠ ಕೇಳುವ ವಿದ್ಯಾರ್ಥಿಗಳಿಗಿಂತ ಬೆಲ್ಲ ತೂಗುತ್ತ ನಿದ್ದೆ ಮಾಡುವ ವಿದ್ಯಾರ್ಥಿಗಳ ಮೆದುಳು ಹೆಚ್ಚು ಗ್ರಹಿಸುತ್ತಿರುತ್ತದೆ.  ಮಂಡ್ಯದ ಸಂಶೋಧಕರು ನಡೆಸಿರುವ ಅಧ್ಯಯನ  ತೋರಿಸಿಕೊಟ್ಟ ಸಂಗತಿಯಿದು.

ಬೆಂಗಳೂರಿನ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ ನಿಮ್ಹಾನ್ಸ್ ನ ಕ್ಯಾಂಟೀನಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಸಂಶೋಧಕರು ತಮ್ಮ ಅಧ್ಯಯನದ ವರದಿಯನ್ನು ಹಂಚಿಕೊಂಡರು. ತೂಕಡಿಸುತ್ತಿದ್ದ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತ ಮಂಡ್ಯದ ವಿಜ್ಞಾನಿ ಗೊರಕೆರಾಮ್ ನುಸ್ಲುವಾಡಿಯಾ “ಮನುಷ್ಯನಿಗೆ ನಿದ್ದೆ ಏಕೆ ಬೇಕು? ನಿದ್ದೆಯ ಸಮಯದಲ್ಲಿ ಮನುಷ್ಯನ ದೇಹ ಹಾಗೂ ಮೆದುಳಿನಲ್ಲಾಗುವ ಕ್ರಿಯೆಗಳು ಎಂಥವು ಎಂಬ ಬಗ್ಗೆ ವೈಜ್ಞಾನಿಕ ಜಗತ್ತಿಗೆ ಹೆಚ್ಚಿನ ಜ್ಞಾನವಿಲ್ಲ. ಮನುಷ್ಯನಿಗೆ ಸರಾಸರಿಯಾಗಿ ಎಷ್ಟು ತಾಸುಗಳ ನಿದ್ರೆಯ ಆವಶ್ಯಕತೆ ಇದೆ ಎಂಬ ಬಗ್ಗೆ ಒಮ್ಮತಕ್ಕೆ ಬರಲಾಗಿಲ್ಲ. ನಿದ್ದೆಯ ಸಮಯದಲ್ಲಿ ಬೀಳುವ ಕನಸುಗಳ ಕುರಿತು ಹೆಚ್ಚು ಸಂಶೋಧನೆ ನಡೆಯಬೇಕಿದೆ. ಜಗತ್ತಿನಾದ್ಯಂತ ವಿಜ್ಞಾನಿಗಳು ನಾಲ್ಕು ಮಂದಿ ಕುರುಡರು ಆನೆಯನ್ನು  ಮುಟ್ಟಿ ತಿಳಿದಂತೆ ನಿದ್ದೆಯ ನಾನಾ ಮಜಲುಗಳನ್ನು ತಡಕಾಡುತ್ತಿದ್ದಾರೆ.” ಎಂದರು.

ತರಗತಿಯಲ್ಲಿ ನಿದ್ದೆ ಮಾಡುವ ವಿದ್ಯಾರ್ಥಿಗಳ ಗ್ರಹಣ ಶಕ್ತಿ ಹಾಗೂ ಏಕಾಗ್ರತೆ ಹೆಚ್ಚು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

“ಈ ಜಾಗತಿಕ ಸಂಶೋಧನೆಯಲ್ಲಿ ಕರ್ನಾಟಕದ ವಿಜ್ಞಾನಿಗಳು ಹಿಂದೆ ಬಿದ್ದಿಲ್ಲ. ಮನುಷ್ಯನು ನಿದ್ದೆ ಮಾಡುವಾಗ ಮೆದುಳಿನಲ್ಲಿ ಚಟುವಟಿಕೆ ಕ್ಷೀಣಗೊಳ್ಳುವುದನ್ನು ಅನೇಕ ಅಧ್ಯಯನಗಳು ತೋರಿಸಿಕೊಟ್ಟಿವೆ. ಧ್ಯಾನದ ಉಚ್ಛ್ರಾಯ ಸ್ಥಿತಿಯಲ್ಲಿರುವ ಯೋಗಿಯ ಮೆದುಳಿನ ಅಲೆಗಳಿಗೂ ತರಗತಿಯಲ್ಲಿ ನಿದ್ದೆಯಲ್ಲಿ ತಲ್ಲೀನನಾದ ವಿದ್ಯಾರ್ಥಿಯ ಮೆದುಳಿನ ಅಲೆಗಳಿಗೂ ಅನೇಕ ಸಾಮ್ಯತೆಗಳು ನಮ್ಮ ಅಧ್ಯಯನದಲ್ಲಿ ಕಂಡು ಬಂದವು. ಶಾಸ್ತ್ರೀಯ ಸಂಗೀತವನ್ನು ಆಸ್ವಾದಿಸುವಾಗ, ರೋಚಕ ಕಾದಂಬರಿಯಲ್ಲಿ ಮೈಮರೆತಿರುವಾಗ, ಪಾರ್ಕಿನಲ್ಲಿ ಪ್ರಿಯತಮೆಯ ಅಂಗೈ ಹಿಡಿದು ಕೂತಿರುವಾಗ, ಶೌಚಾಲಯದಲ್ಲಿ ಸಲೀಸಾಗಿ ಮಲ ವಿಸರ್ಜನೆಯಾಗುವಾಗ ಮನುಷ್ಯನ ಮೆದುಳಿನಲ್ಲಾಗುವ ಬದಲಾವಣೆಗಳನ್ನು ನಾವು ಕೂಲಂಕುಶವಾಗಿ ಪರಿಶೀಲಿಸಿದೆವು. ಆಶ್ಚರ್ಯಕರವಾದ ಸಂಗತಿಯೆಂದರೆ  ಆಲೋಚನೆಗಳು, ಸಪ್ಪಳಗಳು ಕ್ಷೀಣವಾಗಿರುವ ಈ ಎಲ್ಲಾ ಕ್ರಿಯೆಗಳಲ್ಲಿ ಮೆದುಳು ತೋರುವ ಪ್ರತಿಕ್ರಿಯೆಗೂ ತರಗತಿಯಲ್ಲಿ ವಿದ್ಯಾರ್ಥಿಯು ತೂಕಡಿಸುವಾಗ ಆತನ ಮೆದುಳು ತೋರುವ ಪ್ರತಿಕ್ರಿಯೆಗೂ ಯಾವ ವ್ಯತ್ಯಾಸವೂ ಇಲ್ಲ. ಒಟ್ಟಿನಲ್ಲಿ ನಮ್ಮ ಸಂಶೋಧನೆಯ ಫಲಿತಾಂಶವೆಂದರೆ: ನಿದ್ದೆ ಮಾಡುವಾಗ ಮನುಷ್ಯನ ಮೆದುಳಿನ ಏಕಾಗ್ರತೆ ಹಾಗೂ ಗ್ರಹಣ ಶಕ್ತಿ ಹೆಚ್ಚು” ಎಂದು ಗೊರಕೆರಾಮ್ ಹೇಳಿದುದಾಗಿ ನಮ್ಮ ತೂಕಡಿಸುತ್ತಿದ್ದ ವರದಿಗಾರನ ಟೇಪ್ ರೆಕಾರ್ಡ್ ವರದಿ ಮಾಡಿದೆ.

ಈ ಸಂಶೋಧನೆಯು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರಲಿದೆ ಎಂದು ಭವಿಷ್ಯ ನುಡಿದ ವಿದ್ಯಾರ್ಥಿ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ತೂಗುತಲೆ ವೆಂಕಟೇಶ್ “ತರಗತಿಯಲ್ಲಿ ತಮ್ಮ ಪಾಡಿಗೆ ತಾವು ತೂಕಡಿಸುತ್ತ ಕೂರುವ ವಿದ್ಯಾರ್ಥಿಗಳನ್ನು ಹಿಂಸಿಸುವ, ಅಪಮಾನಿಸುವ ಅಧ್ಯಾಪಕರುಗಳಿಗೆ ಈ ಸಂಶೋಧನೆಯ ಫಲಿತಾಂಶ ಚಾಟಿ ಏಟು ನೀಡುವಂತಿದೆ. ಅತಿ ಬುದ್ಧಿವಂತರು, ದೇಶಕ್ಕಾಗಿ ಅವಿರತ ದುಡಿಯುವವರು, ದೇಶದ ಕಾನೂನು ಸುವ್ಯವಸ್ಥೆ ಕಾಪಾಡುವವರು ಎಲ್ಲರೂ ನಿದ್ದೆಯ ಮಹತ್ವ ವಿವರಿಸುವ ಜೀವಂತ ಸಾಕ್ಷಿಗಳಾಗಿದ್ದಾರೆ.  ಇನ್ನು ಮುಂದಾದರೂ ತಮ್ಮ ಪಾಠಗಳನ್ನು ಯಾರು ಹೆಚ್ಚು ಏಕಾಗ್ರತೆಯಿಂದ ಕೇಳುತ್ತಿದ್ದಾರೆ ಎಂದು ಅವರಿಗೆ ತಿಳಿದೀತೆಂದು ಆಶಿಸಬಹುದು.” ಎಂದರು.

ವೈಜ್ಞಾನಿಕವಾದ ಈ ಅಧ್ಯಯನದಿಂದ ತಮ್ಮ ಪಾಠ ಪ್ರವಚನದ ವಿಧಾನದಲ್ಲಿ ಏನೂ ಬದಲಾವಣೆಯಾಗದು ಎಂದಿರುವ   ಅಧ್ಯಾಪಕ ಕೊರೆತದೇವ್  ತಮಗೆ ಈ ವೈಜ್ಞಾನಿಕ ಸತ್ಯವು ಅನುಭವಜನ್ಯವಾಗಿ ತಿಳಿದುಬಂದಿತ್ತು ಎಂದರು. “ನಮ್ಮ ಪಾಠದ ವಿಧಾನ, ಧ್ವನಿಯ ಏರಿಳಿತ ಹಾಗೂ  ಅನಾಕರ್ಷಕ ಪಠ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿದ ಯಾರಿಗಾದರೂ ವಿದ್ಯಾರ್ಥಿಗಳು ಏಕೆ  ಅಪಾಯಕಾರಿ ಹಾಗೂ ಕಷ್ಟಕರವಾದ ಭಂಗಿಗಳಲ್ಲೂ ನಿದ್ದೆ ಮಾಡಲು ಸಾಧ್ಯ ಎಂಬುದು ತಿಳಿಯುತ್ತದೆ. ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ಗಲಭೆಯಿಬ್ಬಿಸದೆ ಏಕಾಗ್ರವಾಗಿ ಪಾಠ ಕೇಳಲೆಂದೇ ನಾವು ಈ ಶೈಲಿಯನ್ನು ಅನುಸರಿಸುವುದು.”

ನಿದ್ದೆಯ ಬಗ್ಗೆ ಖ್ಯಾತ ಪ್ರವಚನಕಾರರು ತಮ್ಮ ಅಭಿಪ್ರಾಯ ತಿಳಿಸುವಾಗ ನಮ್ಮ ವರದಿಗಾರನೂ, ಆತನ ರೆಕಾರ್ಡರೂ ನಿದ್ದೆ ಮಾಡುತ್ತಿದ್ದುವಾದ್ದರಿಂದ ವರದಿ ಮಾಡಲು ಸಾಧ್ಯವಾಗಿಲ್ಲ. ಈ ಕುರಿತು ತೂಕಡಿಸುತ್ತಿರುವ ನಮ್ಮ ಓದುಗರಲ್ಲಿ ನಾವು ವಿಷಾದಿಸುತ್ತೇವೆ.


ಮಂದಿ ಜ್ವರದ ಬಗ್ಗೆ ಎಚ್ಚರ!

14 ಆಗಸ್ಟ್

(ನಗೆ ನಗಾರಿ ಅನಾರೋಗ್ಯ ಬ್ಯೂರೋ)

ಮಂದಿ ಜ್ವರ!

ಹ್ಹ! ಒಂದ್ನಿಮಿಷ ನಿಲ್ಲಿ. ಗಾಬರಿಯಿಂದ ಎದ್ದು ಬಿದ್ದು ಓಡುವ ಅಗತ್ಯವಿಲ್ಲ. ದೂರದಲ್ಲಿರುವ ಹೆಂಡತಿ, ಗಂಡ, ಮಕ್ಕಳಿಗೆ ಫೋನಾಯಿಸಿ ಅವರ ಸುರಕ್ಷತೆ ದೃಢಪಡಿಸಿಕೊಳ್ಳುವ ಧಾವಂತ ಬೇಕಿಲ್ಲ. ಮೊಬೈಲ್ ಹೊರತೆಗೆದು ಗೆಳೆಯರು ಪರಿಚಿತರಿಗೆಲ್ಲಾ ಈ ಹೊಸ ಜ್ವರದ ಬಗ್ಗೆ ಎಚ್ಚರಿಸುವ ಪುಕ್ಕಟೆ ಮೆಸೇಜುಗಳನ್ನು ರವಾನಿಸುವ ಅಗತ್ಯವಿಲ್ಲ. ಸತ್ಯವನ್ನೇ ನೀಡುವ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳದಿರುವ ಪ್ರತಿಜ್ಞೆಗೆ ಕಟ್ಟು ಬಿದ್ದಿರುವ ದಿನದ ಇಪ್ಪತ್ನಾಲ್ಕು ಗಂಟೆಯೂ ಸುದ್ದಿಯೊಪ್ಪಿಸುವ ಟಿವಿ ಚಾನಲುಗಳ ಹಚ್ಚುವ ಆವಶ್ಯಕತೆಯಿಲ್ಲ. ನೈಜವಾದ ಮಾಹಿತಿಯನ್ನು ನೀಡಿ ಗೊಂದಲಗಳನ್ನು ಶಮನ ಮಾಡುವ ಧ್ಯೇಯೋದ್ದೇಶವನ್ನು ಹೊಂದಿರುವ ಪತ್ರಿಕೆಗಳನ್ನು ತಿರುವಿ ಹಾಕುವ ಕಷ್ಟ ತೆಗೆದುಕೊಳ್ಳುವುದು ಬೇಡ. ಅಂತರಜಾಲವೆಂಬ ವಿಶ್ವವಿದ್ಯಾಲಯದ ಅನಾಮಿಕ ಸಂಶೋಧಕ, ತಜ್ಞರ ಕೃತಿಗಳನ್ನು ಅವಲೋಕಿಸಿ ಪರಿಸ್ಥಿತಿಯ ನೈಜ ಚಿತ್ರಣವನ್ನು ಪಡೆದುಕೊಳ್ಳುವ ಪ್ರಯಾಸ ಪಡಬೇಕಿಲ್ಲ. ಇ-ಮೇಲ್‌ಗಳೆಂಬ ಆಕರ ಗ್ರಂಥಗಳನ್ನು ತಡಕಾಡುತ್ತಾ ಈ ಮಹಾ ಮಾರಿಗೆ ಔಷಧವೇನು ಎಂದು ಹುಡುಕುವ ತೊಂದರೆ ಖಂಡಿತವಾಗ್ಯೂ ತೆಗೆದುಕೊಳ್ಳಬೇಕಿಲ್ಲ.

ತುಸು ಸಡಿಲಾಗಿ, ಆರಾಮವಾಗಿ ಕೈ ಕಾಲು ಚಾಚಿಕೊಂಡು ಈ ವರದಿಯನ್ನು ಸಾವಧಾನದಿಂದ ಓದಿ.

ಮಂದಿ ಜ್ವರ ಎಂಬ ಹೊಸ ಹೆಸರಿನಿಂದ ಕರೆಯಲ್ಪಡುತ್ತಿರುವ ಈ ಜ್ವರವು ಹೊಸತೇನಲ್ಲ. ಇದು ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿರುವಂಥದ್ದು ಎಂದು ನಗೆ ನಗಾರಿಯ ರೋಗ ಇತಿಹಾಸ ವಿಶ್ಲೇಷಣಾ ಪ್ರತಿನಿಧಿ ಸಂಶೋಧಿಸಿದ್ದಾನೆ. ಕಾಲ ಕಾಲಕ್ಕೆ ಧುತ್ತೆಂದು ಪ್ರತ್ಯಕ್ಷವಾಗುವ ಈ ಜ್ವರವು ಜನರ ವಿವೇಕವನ್ನು, ಆಲೋಚಿಸುವ ಸಾಮರ್ಥ್ಯವನ್ನು, ನೆಮ್ಮದಿಯನ್ನು, ಹಣವನ್ನು, ಆಯಸ್ಸನ್ನು ಬಲಿ ತೆಗೆದುಕೊಳ್ಳುತ್ತದೆ ಎಂದು ತಿಳಿದು ಬಂದಿದೆ.

ಸ್ವತಂತ್ರ ಅಸ್ತಿತ್ವವಿಲ್ಲದ ಈ ಜ್ವರದ ವೈರಸ್ಸು, ಕೆಲವು ರಾಷ್ಟ್ರೀಯ ದುರಂತಗಳು, ಪ್ರಮುಖ ರಾಜಕೀಯ ವಿದ್ಯಮಾನಗಳು, ಸಾಂಕ್ರಾಮಿಕ ರೋಗಗಳು ಮುಂತಾದವುಗಳ ಕುರಿತ ಸುದ್ದಿಯಿಂದ ಹುಟ್ಟುವುದಾಗಿ ಸ್ವಯಂವೈದ್ಯ ತಜ್ಞರಾದ ಬೀಜಾ ಬಜಂತ್ರಿವರು ತಿಳಿಸಿದ್ದಾರೆ.

ದಿನ ಪತ್ರಿಕೆಗಳು, ಟಿವಿ ವಾಹಿನಿಗಳು – ಅದರಲ್ಲೂ ಇಪ್ಪತ್ನಾಲ್ಕು ಗಂಟೆ ಸುದ್ದಿ ಬಿತ್ತರಿಸುವ ಹೊಣೆ ಹೊತ್ತಂತವು – ಅನಾಮಿಕ ಸರಣಿ ಇ-ಮೇಲ್ ಫಾರ್ವರ್ಡುಗಳು, ಫಾರ್ವರ್ಡ್ ಆದ ಎಸ್.ಎಂ.ಎಸ್‌ಗಳು, ಟ್ವಿಟರ್, ಬ್ಲಾಗರ್, ವರ್ಡ್ ಪ್ರೆಸ್ ಮೊದಲಾದ ಬ್ಲಾಗು ಪುಟಗಳು, ಅಂತರಜಾಲದ ಚರ್ಚಾ ಕೂಟಗಳು, ಸ್ವಯಂ ಘೋಷಿತ ತಜ್ಞ ಮಾಹಿತಿ ತಾಣಗಳು ಇವುಗಳಿಂದ ಮಂದಿ ಜ್ವರದ ಪ್ರಸರಣವು ಉಂಟಾಗುತ್ತದೆ. ಜನರು ರಾಷ್ಟ್ರೀಯ ದುರಂತಗಳು, ಅವಘಡಗಳು, ಸಾಂಕ್ರಾಮಿಕ ರೋಗಗಳ ಮುನ್ನೆಚ್ಚರಿಕೆಗಳ ವರದಿಯಾದಾಗ ಈ ಮಂದಿ ರೋಗಕ್ಕೆ ತುತ್ತಾಗುವ ಸಂಭವ ಹೆಚ್ಚು.

ಅನವಶ್ಯಕ ಗಾಬರಿ, ಉದ್ದೇಶವಿಲ್ಲದ ಆತಂಕ, ಹೆಚ್ಚಿದ ರಕ್ತ ದೊತ್ತಡ, ಸಾಮಾನ್ಯ ಮಟ್ಟಕ್ಕಿಂತ ಕೆಳಗೆ ಕುಸಿದ ಸಾಮಾನ್ಯ ಜ್ಞಾನ, ಸ್ಪಷ್ಟವಾಗಿ ಆಲೋಚಿಸಲು ಅಶಕ್ತರಾಗುವುದು, ನೆನಪಿನ ಶಕ್ತಿಯಲ್ಲಿನ ಕುಸಿತ, ಸರಿ ತಪ್ಪು ನಿರ್ಧರಿಸುವ ತರ್ಕ ಶಕ್ತಿಯ ನಾಶ, ಇದ್ದಕ್ಕಿದ್ದ ಹಾಗೆ ಹಾಸ್ಯ ಪ್ರವೃತ್ತಿ ಕಾಣೆಯಾಗುವುದು, ವಿಪರೀತ ವಾಚಾಳಿತನ, ಮೊಬೈಲು, ಕಂಪ್ಯೂಟರ್, ಟಿವಿಗಳೆದುರು ಕಳೆಯುವ ಸಮಯದ ಹೆಚ್ಚಳ, ದಿನಚರಿಯಲ್ಲಿ ಏರು ಪೇರು, ದೇವಸ್ಥಾನಗಳಿಗೆ ಹೆಚ್ಚುವ ಭೇಟಿ, ಹೊಸ ವ್ರತಗಳು, ಹೋಮಗಳು, ಶಾಂತಿಗಳ ಬಗೆಗಿನ ಆಸಕ್ತಿ, ಜೋತಿಷಿಗಳ ಮೇಲೆ ಅಪಾರ ಭಯ ಭಕ್ತಿ – ಇವುಗಳು ಈ ಮಂದಿ ಜ್ವರದ ಸಾಮಾನ್ಯ ಲಕ್ಷಣಗಳೆಂದು ತಿಳಿದು ಬಂದಿದೆ.

ಮುನ್ನೆಚ್ಚರಿಕೆಯ ಕ್ರಮಗಳು.
೧. ಪೌಷ್ಠಿಕಾಂಶವುಳ್ಳ ಆಹಾರ, ಕುದಿಸಿ ಆರಿಸಿದ ನೀರು ಯಥೇಚ್ಛವಾಗಿ ಸ್ವೀಕರಿಸಿ.
೨. ವದಂತಿಗಳಿಗೆ ತಂದೆ ತಾಯಿಗಳಾಗಬೇಡಿ, ಬಾಯ್ ಫ್ರೆಂಡುಗಳೂ ಆಗಬೇಡಿ.
೩. ದಿನ ಪತ್ರಿಕೆಗಳ ಮುಖ ಪುಟಗಳನ್ನು ನೋಡುವುದನ್ನು ಕಡಿಮೆ ಮಾಡಿ.
೪. ಟಿವಿ ಸುದ್ದಿ ವಾಹಿನಿಗಳ ಮುಖ್ಯಾಂಶಗಳನ್ನೂ, ಮುಖ್ಯವಲ್ಲದ ಅಂಶಗಳನ್ನೂ ಕೇಳುವ, ನೋಡುವ ಚಟವನ್ನು ಕಡಿಮೆ ಮಾಡಿಕೊಳ್ಳಿ. ಟಿವಿಯಿಂದ ಆದಷ್ಟು ದೂರವಿರಿ.
೫. ಮೊಬೈಲಿನೊಂದಿಗೆ ಹೆಚ್ಚು ಸಮಯ ಕಳೆಯದಿರಿ. ಎಸ್.ಎಂ.ಎಸ್ಸುಗಳನ್ನು ಫಾರ್ವರ್ಡ್ ಮಾಡುವವರು ಹಾರ್ವರ್ಡ್ ವಿವಿಯ ಕುಲಪತಿಗಳಲ್ಲ ಎಂಬುದನ್ನು ನೆನಪಿಡಿ.
೬. ಇ-ಮೇಲಿನಲ್ಲಿ ಕಾಣಿಸಿಕೊಳ್ಳುವ ಡಾ|| ಚೆನ್ನಾಗಿ ಒಪ್ತಾ, ಡಾ|| ಫರ್ಗುನ್ನಿ ಮಣ್ಗುನ್ನಿಸ್ ರನ್ನು ನಂಬಬೇಡಿ. ಇ-ಮೇಲಿನಲ್ಲಿ ಖುದ್ದು ದೇವರೇ ಬಂದರೂ ನಂಬಬೇಡಿ. ಅದರಲ್ಲೂ ಫಾರ್ವಾರ್ಡ್ ಮಾಡಲ್ಪಟ್ಟ ಇ-ಮೇಲಿನಲ್ಲಿ, ಸ್ಪಾಮುಗಳಲ್ಲಿ ಮನೆದೇವರು ಬಂದರೂ ಕಣ್ತೆರೆಯಬೇಡಿ!
೭. ಜ್ವರದ ಬಗ್ಗೆ ನಿಮ್ಮ ವೈದ್ಯರನ್ನು ಕೇಳಿ ತಿಳಿಯಿರಿ. ನೂರು ಮೈಲು ಚಲಿಸುವ ಯಃಕಶ್ಚಿತ್ ಕಾರು ಓಡಿಸಲಿಕ್ಕೇ ಲೈಸೆನ್ಸ್ ಪಡೆದ ಡ್ರೈವರನ್ನೇ ಇಟ್ಟುಕೊಳ್ಳುವ ನೀವು ನೂರು ವರ್ಷ ಓಡಬಹುದಾದ ದೇಹದ ಸುಪರ್ದಿಯನ್ನು ಲೈಸೆನ್ಸ್ ಇಲ್ಲದ ಅಬ್ಬೇಪಾರಿ ತಜ್ಞರಿಗೆ, ಸ್ವಯಂಘೋಷಿತ ವೈದ್ಯರಿಗೆ ವಹಿಸುವಿರೇ?

ಚಿಕಿತ್ಸೆ

ಈಗಾಗಲೇ ಮಂದಿ ಜ್ವರದಿಂದ ಬಾಧಿತರಾಗಿದ್ದರೆ ನೀವು ಮಾಡಬೇಕಿರುವುದು:

೧. ಬಾಯಿ ಮುಚ್ಚಿಕೊಳ್ಳಿ.
೨. ಮೊಬೈಲ್ ಆಫ್ ಮಾಡಿ.
೩. ಟಿವಿ, ಕಂಪ್ಯೂಟರನ್ನು ಆರಿಸಿ.
೪. ದಿನಪತ್ರಿಕೆಗಳನ್ನು ಅಟ್ಟದ ಮೇಲೆ ಎಸೆಯಿರಿ.
೫. ಮನೆ ಬಾಗಿಲು ಭದ್ರ ಪಡಿಸಿಕೊಂಡು ನಾಲ್ಕು ಮೈಲು ನಡೆದಾಡಿಕೊಂಡು ಶುಭ್ರ ಗಾಳಿಯನ್ನು ಕುಡಿದು ಬನ್ನಿ.