(ನಗೆ ನಗಾರಿ ಭವಿಷ್ಯ ವಿತರಣಾ ಬ್ಯೂರೋ)
ಕನ್ನಡ ಪತ್ರಿಕೋದ್ಯಮ ಹಿಂದೆಂದೂ ಕಂಡರಿಯದ ಪ್ರಮಾಣದ ಬದ್ಧತೆಯನ್ನು ತೋರಿ ‘ರದ್ದಿಮನೆ’ಯ ಹಿರಿತಲೆಗಳ ಹಳೆಯ ಹೃದಯದ ಸ್ತಂಭನಕ್ಕೆ ನಗೆ ನಗಾರಿ ಡಾಟ್ ಕಾಮ್ ಕಾರಣವಾಗಿದ್ದು ಎಲ್ಲರಿಗೂ ತಿಳಿದ ಸಂಗತಿ. ಈ ಸರ್ವವೇದ್ಯವಾದ ಸಾಧನೆಯನ್ನು ಪುನರುಚ್ಛರಿಸುವುದಕ್ಕೆ ಕಾರಣವಿದೆ.
ಮನುಷ್ಯ ಬಹುವಾಗಿ ಹೆದರುವ ಮೂರು ಸಂಗತಿಗಳಲ್ಲಿ ಮೂರನೆಯದು ಕಾಲ. ಮೊದಲೆರಡು ಸ್ಥಾನಗಳನ್ನು ಕ್ರಮವಾಗಿ ಹೆಂಡತಿ ಹಾಗೂ ಜಿರಲೆ ದಕ್ಕಿಸಿಕೊಂಡಿವೆ. ಕಾಲಗಳಲ್ಲಿ ಅತಿ ಸರಳವಾದ ಹಾಗೂ ತಿಳಿದುಕೊಳ್ಳಲು ಅತ್ಯಂತ ಸುಲಭ ಎಂದು ಭಾಸವಾಗುವ ಗತಕಾಲದ ಬಗ್ಗೆಯೇ ಮನುಷ್ಯ ಗರಿಷ್ಠ ಪ್ರಮಾಣದಲ್ಲಿ ಹೆದರುತ್ತಾನೆ. ಅದಕ್ಕೆ ಆ ಕಾಲವನ್ನು ‘ಭೂತ’ಕಾಲ ಎಂದು ಕರೆದಿದ್ದಾನೆ. ವರ್ತಮಾನವಂತೂ ಆತನ ಕೈಗೇ ಸಿಕ್ಕುವುದಿಲ್ಲ. ಅದಕ್ಕೆ ಅದು ‘ಭೂತ’ಕ್ಕಿಂತ ಹೆಚ್ಚಿನ ಭಯ ಹುಟ್ಟಿಸುತ್ತದೆ. ಈ ಭಯವನ್ನು ಎನ್‌ಕ್ಯಾಶ್ ಮಾಡಿಕೊಳ್ಳುವ ಹುನ್ನಾರದಿಂದಾಗಿಯೇ ದಿನಪತ್ರಿಕೆಗಳು ತಮ್ಮನ್ನು ಆಗಾಗ ವರ್ತಮಾನ ಪತ್ರಿಕೆಗಳೆಂದು ಕರೆದುಕೊಳ್ಳುವುದು. ಈ ಎರಡರಕ್ಕಿಂತ ಭೀಕರವಾದ ಭಯಕ್ಕೆ ಕಾರಣವಾಗುವುದು ಭವಿಷ್ಯ. ಆರು ಅಡಿಯ ಮನುಷ್ಯ ಆರು ಅಡಿಯ ಭಯಪೀಡಿತ ಮನುಷ್ಯನಾಗಿ ಪರಿವರ್ತಿತನಾಗುವುದಕ್ಕೆ ಭವಿಷ್ಯವೆಂಬ ಪದವೇ ಸಾಕು.
ಈ ಭಯವನ್ನು ಮಟ್ಟ ಹಾಕುವುದಕ್ಕಾಗಿ ಹಾಗೂ ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳುವುದಕ್ಕಾಗಿ ಸಹಜವಾಗಿ ಸಮಾಜ ಸುಧಾರಕರು ಹುಟ್ಟಿಕೊಂಡರು. ಕಂಡವರ ಭವಿಷ್ಯವನ್ನು ಹೇಳುತ್ತ ತಮ್ಮ ಭವಿಷ್ಯವನ್ನು ಭದ್ರ ಪಡಿಸಿಕೊಳ್ಳುವ ಜೋತಿಷಿಗಳು ತಾವು ಕಂಡವರಿಗೆ ಸಾವಿನ ಭಯವನ್ನು ಹುಟ್ಟಿಸಿ ತಮ್ಮ ಬದುಕಿಗೆ ‘ಮೌಲ್ಯ’ ಸೇರಿಸುವ ಪಾಲಿಸಿಗಳನ್ನು ಪಡೆಯುವ ವಿಮೆ ಏಜಂಟರಿಗಿಂತ ಶ್ರೇಷ್ಠರು ಎಂದು ವಾದಿಸುತ್ತಾರೆ. ಪ್ರಸ್ತುತ ಈ ವ್ಯಾಜ್ಯ ಸುಪ್ರೀಂ ಕೋರ್ಟಿನಲ್ಲಿದೆ. ಇದಕ್ಕೂ ಮೊದಲು ಸರದಿಯಲ್ಲಿರುವ ವ್ಯಾಜ್ಯಗಳ ಸಂಖ್ಯೆಯನ್ನು ಎಣಿಸಲು ತೆರಳಿದ ಬಾಲಕನ ಮೊಮ್ಮಗ ಈಗ ದಕ್ಷಿಣ ಆಫ್ರಿಕಾದಲ್ಲಿ ಬ್ಯಾರಿಸ್ಟರ್ ಓದುತ್ತಿದ್ದಾನೆ.
ಭವಿಷ್ಯವನ್ನು ವರ್ತಮಾನದಲ್ಲಿ ನಿಖರವಾಗಿ ಊಹಿಸಿ ಭವಿಷ್ಯವನ್ನು ಭೂತವಾಗಿಸಿದ ಖೋಡಿ ಮಠದ ಸ್ವಾಮೀಜಿಯ ಬಗ್ಗೆ ಹಿಂದೆ ನಾವು ವರದಿ ಮಾಡಿದ್ದೆವು. ಸ್ವಾಮೀಜಿಯವರ ಭವಿಷ್ಯವಾಣಿಯನ್ನು ಬಿತ್ತರಿಸುವುದರಲ್ಲಿ ಮಾಧ್ಯಮದ ಮಂದಿ ತೋರಿದ ಅದ್ಭುತ ಹುಮ್ಮಸ್ಸು ಆ ಭವಿಷ್ಯವಾಣಿ ನಿಜವಾದ ಸಂದರ್ಭದಲ್ಲಿ ತೋರದಿದ್ದುದಕ್ಕೆ ಕಾರಣವೇನಿರಬಹುದೆಂದು ನಾವು ಎರಡು ವರ್ಷದ ಹಿಂದಿನ ಸ್ವಾಮೀಜಿಯವರ ಡೈರಿಯಲ್ಲಿ ಹುಡುಕುತ್ತಿರುವೆವು.
ಸ್ವಾಮೀಜಿ ಭವಿಷ್ಯವಾಣಿಯ ಫಾಲೋ ಅಪ್ ವರದಿಗೆ ಸ್ಪಂದಿಸಿರುವ ಮಹಾಜನತೆಯು ಸ್ವಾಮೀಜಿಯವರಲ್ಲಿ ತಮ್ಮ ಭವಿಷ್ಯವನ್ನು ಕೇಳುವುದಕ್ಕೆ ಉತ್ಸುಕರಾಗಿ ಕಮೆಂಟುಗಳನ್ನು ಹಾಕಿರುವರು. ಒಬ್ಬೊಬ್ಬರ ಕಮೆಂಟಿಗೂ ಉತ್ತರಿಸಲು ಶುರು ಮಾಡಿದರೆ ಎಷ್ಟು ಸಮಯ ತಗುಲಬಹುದು ಎಂಬುದರ ಅಂದಾಜು ಮಾಡಲು ತಾವು ಶಕ್ಯರಲ್ಲ ಎಂದು ಭಾವಿಸಿದ ಸ್ವಾಮೀಜಿಯವರು ಕಮೆಂಟಿಸಿದ ಎಲ್ಲರಿಗೂ ಹಾಗೂ ತಮ್ಮ, ತಮ್ಮ ಮಕ್ಕಳ, ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್, ತಮ್ಮ ಮನೆಯ ನಾಯಿ, ಬೆಕ್ಕು, ಕುರಿ, ಕೋಳಿ, ಹೆಗ್ಗಣಗಳ ಭವಿಷ್ಯವನ್ನು ತಿಳಿಯುವ ಕುತೂಹಲವಿರುವ ಸಮಸ್ತರಿಗೂ ಅತಿ ಶೀಘ್ರದಲ್ಲಿ ಹೋಲ್ ಸೇಲ್ ಆಗಿ ಭವಿಷ್ಯವನ್ನು ಅರುಹಲಿದ್ದಾರೆ.
ಸಾಮಾನ್ಯೀಕರಿಸಿದ ಭವಿಷ್ಯವಾಣಿಗಳಲ್ಲಿ ನಂಬಿಕೆಯಿಲ್ಲದ ವಿಚಾರವಾದಿ ಆಸಕ್ತರು ತಮ್ಮ ಹೆಸರು, ಹುಟ್ಟಿದ ದಿನ, ಆ ಸಮಯದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಜಾಹೀರಾತಿನ ಹೆಸರಿನ ಜೊತೆಗೆ ಮನೆಯ ಸುತ್ತ ಎರಡು ಅಡಿ ಜಾಗದಲ್ಲಿ ಎಲ್ಲಾದರೂ ಬೆಳೆದಿರುವ ವಾಸನೆಯಿಲ್ಲದ ಹೂ ಬಿಡುವ ಗಿಡದಲ್ಲಿನ ಹಳದಿ ಎಲೆಗಳ ಸಂಖ್ಯೆಯನ್ನು ಕಳಿಸಿಕೊಟ್ಟರೆ ಪ್ರತ್ಯೇಕವಾಗಿ ಅವರ ನಿಖರ ಭವಿಷ್ಯವನ್ನು ಸ್ವಾಮೀಜಿಯವರು ತಿಳಿಸುವರು.
ಜೊತೆಗೆ ಉತ್ತಮ, ಮಧ್ಯಮ, ಅಧಮ – ಈ ಎಲ್ಲಾ ಬಗೆಯ ಮಾಧ್ಯಮಗಳಲ್ಲಿ ಭಾರಿ ಕೋಲಾಹಲವನ್ನು ಉಂಟು ಮಾಡಿರುವ ಮಾಯನ್ನರ ಕ್ಯಾಲಂಡರಿನ ಬಗ್ಗೆ ಹಾಗೂ ೨೦೧೨ರಲ್ಲಿ ಜರುಗಲಿದೆ ಎನ್ನಲಾಗಿರುವ ಭೀಕರ ಪ್ರಳಯದ ಬಗ್ಗೆ ಸ್ವಾಮೀಜಿಯವರು ವೈಜ್ಞಾನಿಕವಾದ, ತಂತ್ರಜ್ಞಾನಯುತವಾದ, ತಾರ್ಕಿಕವಾದ ಭವಿಷ್ಯವನ್ನು ನುಡಿಯಲಿದ್ದಾರೆ. ಪ್ರಳಯ ನಡೆಯುವುದೋ ಇಲ್ಲವೋ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಲಿದ್ದಾರೆ. ಆ ಕಡ್ಡಿಯು ಎಷ್ಟು ತುಂಡಾಗಬಹುದು ಎಂಬ ವಿಚಾರವಾಗಿ ಸಾಮ್ರಾಟರು ಹಾಗೂ ತೊಣಚಪ್ಪನವರ ನಡುವೆ ವಾಗ್ವಾದ ಶುರುವಾಗಿದೆ. ಈ ವಾಗ್ವಾದ ಅಂತ್ಯವಾಗಲು ತೆಗೆದುಕೊಳ್ಳುವ ಸಮಯ ಎಷ್ಟಾಗಬಹುದು ಎಂದು ಕುಚೇಲ ಅಂದಾಜಿಸುವಲ್ಲಿ ಮಗ್ನನಾಗಿರುವನು. ಕುಚೇಲನ ಅಂದಾಜು ನಿಖರವಾಗಿರುತ್ತದೆಯೋ ಇಲ್ಲವೋ ಎಂಬುದರ ಮೇಲೆ ಬೆಟ್ ಕಟ್ಟಿದ ಎದುರು ಮನೆಯ ಲಕ್ಕಿ ವಿಕ್ಕಿ ವಾಗ್ವಾದಕ್ಕೆ ಇಳಿದಿರುವರು.
ವಿ.ಸೂ: ತಮಗೆ ಮಕ್ಕಳಾಗುತ್ತವೆಯೇ ಎಂಬ ಪ್ರಶ್ನೆ ಕೇಳುವವರು ಮೊದಲಿಗೆ ಗಂಡಿಗೆ ಇಪ್ಪತ್ತೊಂದು, ಹೆಣ್ಣಿಗೆ ಹದಿನೆಂಟು ದಾಟಿದೆಯೇ ಎಂಬುದನ್ನು ಸ್ಪಷ್ಟ ಪಡಿಸಿಕೊಂಡು ತಮಗೆ ಮದುವೆಯಾಗಿದೆಯೇ ಇಲ್ಲವೇ ಎಂಬುದನ್ನು ಮುಂಚಿತವಾಗಿ ತಿಳಿಸಬೇಕು.
ಇತ್ತೀಚಿನ ಪ್ರಜಾ ಉವಾಚ