Archive | ಅಂಕಣಕೋರರು RSS feed for this section

ಕೋಮಲ್ ಕಾಲಂ: ವಾಸನೆ ಗೌಡಪ್ಪನ ಗೋರಕ್ಷಣೆ

20 ಸೆಪ್ಟೆಂ

ನಮ್ಮ ವಾಸನೆ ಗೌಡಪ್ಪ ಬೆಳಗ್ಗೆನೇ ಒಂದು 20ಹಸ ಇಟ್ಕಂಡು ಚೆಡ್ಡಿ ಬನೀನಾಗೆ ಹೊಂಟಿದ್ದ. ಹಿಂದಗಡೆ ಬಂದ ಬಸ್ ಡ್ರೇವರ್ ಲೇ ಹಸುನಾ ಸೈಡಿಗೆ ಹೊಡಿಯಲೇ  ಅಂದ. ಮಗನೇ ಹೆಂಗೈತೆ ಮೈಗೆ ಅಂದ ಗೌಡಪ್ಪ ಅಂದ್ kolam ಮ್ಯಾಕೆ, ಗೌಡ್ರೆ ನೀವಾ ಅಂದಾ ಡ್ರೇವರ್. ನೋಡಲಾ ಗೌಡನ ದರಿದ್ರ ಬುದ್ದಿಯಾ. ಮಗಾ ಕಾಸು ಉಳಿಸಕ್ಕೆ ತಾನೇ ಹಸ ಮೇಯಿಸ್ತಾವ್ನೆ ಅಂದಾ ಕ್ಲೀನರ್. ಸರಿ ನಿಂಗನ ಅಂಗಡೀಲಿ ನಾನು, ಸುಬ್ಬ, ಸೀತು ಎಲ್ಲಾ ಚಾ ಕುಡಿತಾ ಪ್ರಪಂಚದ ಆಗು ಹೋಗುಗಳ ಬಗ್ಗೆ  ಮಾತಾಡ್ತಾ ಇದ್ವಿ. ಪರದಾನಿ ಮನಮೋಹನ್ ಸಿಂಗಿಂದ ಒಬಾಮಾ ತಂಕ ಹತ್ತು ನಿಮಿಟ್ನಾಗೆ ನಮ್ಮ ಬಾಯ್ನಾಗೆ ಬಂದು ಹೋಗಿದ್ರು. ಮಗಂದು ಮನೇಲೆ ನೋಡಿದ್ರೆ ತಿನ್ನಕ್ಕೆ ಅಕ್ಕಿ ಇಲ್ಲಾ. ಪ್ರಪಂಚದ್ದೆಲ್ಲಾ ಮಾತಾಡ್ತಾವೆ ಅಂತಿದ್ದಾ ಚಾ ಅಂಗಡಿ ನಿಂಗ. ಏ ಥೂ,. ಎದ್ದು ಹೋಗ್ರಲಾ. ಅಟ್ಟೊತ್ತಿಗೆ ಗೌಡಪ್ಪನ ನೋಡಿದ ಸುಬ್ಬ. ಯಾಕ್ರೀ ಗೌಡ್ರೆ ಇವತ್ತು ಹಸ ನೀವು ಹೊಡಕಂಡು ಹೊಂಟೀರಿ ಅಂದಾ. ನೋಡಲಾ ನಮ್ಮ ಮನೆ ದನಕಾಯೋನು ಮೊನ್ನೆ ಕುಡಿಯಕ್ಕೆ ಕಾಸಿಲ್ಲಾ ಅಂತಾ ಎರಡು ಎಮ್ಮೆನಾ ಬರೀ 100ರೂಪಾಯಿಗೆ ಕಸಾಯಿ ಖಾನೆಗೆ ಕಳಸವ್ನೆ ಅಂದ. ಸರಿ ಕೋಣದ ತರಾ ಇರೋ ನಿಮ್ಮನ್ನ ಕಳಿಸಿಲ್ವಲ್ಲಾ ಅದಕ್ಕೆ ಖುಸಿ ಪಡಿ ಅಂದಾ ಸುಬ್ಬ, ಲೇ ಇವನನ್ನ ಕಡಿದರೆ ಕಸಾಯಿ ಖಾನೆನೇ ಗಬ್ಬಾಯ್ತದೆ ಅಂದಾ ದೊನ್ನೆ ಸೀನ.

ಅಟ್ಟೊತ್ತಿಗೆ ನಿಂಗಾ ಬರ್ರೀ ಗೌಡರೆ ಒಂದು ಅರ್ಧ ಚಾ ಕುಡಿದು ಹೋಗಿರಿ ಅಂದ. ನಿನ್ನ ದರಿದ್ರ ಚಲ್ಟದ ಚಾ ಕುಡಿದರೆ ಒಂದು ಹತ್ತು ಕಿತಾ ಕೆರೆತಾವ ಹೋಗಬೇಕು ಅಂದ ಗೌಡಪ್ಪ. ಮಗಂದು ಕಾಲೆಲ್ಲಾ ಸಗಣಿ ಆಗಿತ್ತು. ಇವನು ಹಸ ಹೊಡಕಂಡು ಮುಂದೆ ಹೋಯ್ತಾ ಇದ್ರೆ. ನಮ್ಮೂರು ಹೆಣ್ಣು ಐಕ್ಳು ಹಿಂದಿಂದ ಸಗಣಿ ಎತ್ಕಂಡು ಮರದಾಗೆ ಹಾಕ್ಕೊಂಡು ಹೋಗೋವು. ಬೆರಣಿ ತಟ್ಟಕ್ಕೆ ಆಯ್ತದೆ ಅಂತಾ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರ. ನಮ್ಮ ಸಗಣಿ ಅಂತಾ ಗೌಡ ಜಗಳ ಆಡೋನು. ಏ ಥೂ. ಅದರಾಗೆ ಒಂದು ದನಕ್ಕೆ ಅಜೀರ್ಣ ಅಂತೆ ಗೌಡಪ್ಪ ಹತ್ತಿರ ಬಂದರೆ ಕೊಟ್ಟಿಗೆ ವಾಸನೇ ಬರೋದು.ಹಳಸಿದ ಫಲಾವು ಮತ್ತು ಕೊಟ್ಟಿಗೆ ವಾಸನೆ ಎಲ್ಡು ಮಿಕ್ಸ್ ಆಗಿ ಒಂದು ತರಾ OX (ಎತ್ತು) ಬಾಡಿ ಡಿಯೋಡ್ರೆಂಟ್ ಸ್ಮೆಲ್ ಬರೋದು.

ಕೆರೆತಾವ ಹೋದ್ರೆ ಗೌಡಪ್ಪ ಕಾಯಿ ಜುಂಗು ಹಿಡಕಂಡು ಹೋ ಹೋ ಹೋಪ್ಪಾ ಹೋಪ್ಪಾ ಅಂತಾ ಲೈಫ್ ಬಾಯ್ ಸೋಪ್ನಾಗೆ ಹಸ ಮೈ ತೊಳೀತಾ ಇದ್ದ. ಹೆಂಡರು ಸ್ನಾನಕ್ಕೆ ಇಟ್ಕಂಡಿದ್ದ ಸೋಪ್ನಾಗೆ ಎತ್ತಿನ ಮೈ ತೊಳೆಯೋನು. ಅಲ್ಲಿ ನೋಡಿದ್ರೆ ಹೆಂಡರು ಗೌಡಂಗೆ ಒಂದಿಷ್ಟು ಬೆಂಕಿ ಹಾಕ ಅಂತಿದ್ವು. ಎಲ್ಲಿಗವಾ. ಎಲ್ಲಿಗಾದ್ರೂ. ಅಲ್ಲಿ ಬಟ್ಟೆ ಒಗೆಯೋ ಹೆಂಗಸರು ಲೇ ಆ ಕಡೆ ಹೋಗಲೇ ಅಂತಿದ್ವು. ಮಗಾ ರಾಜಮ್ಮಂಗೆ ರೇಗಸ್ತಾ ಇದ್ದ. ಯಾಕೆ ನನ್ನ ಗಂಡಂಗೆ ಹೇಳ್ ಬೇಕಾ ಅಂತಿದ್ದಾಗೆನೇ ಆ ದಡದಾಗೆ ನಿಂತಿದ್ದ. ಗೌಡಪ್ಪ ಸಣ್ಣ ಐಕ್ಳು ತರಾ ಎತ್ತಿನ ಮೈ ಮ್ಯಾಕೆ ಕೂತು ಕೆರೇಲ್ಲಿ ಓಡಾಡೋನು. ಮಗಂಗೆ ಈಜು ಬರಲ್ಲಾ ಕರೀರಲಾ. ಹೊಗೆ ಹಾಕಸ್ಕಂಡ್ ಬಿಟ್ಟಾನು ಅಂದಾ ಸುಬ್ಬ. ಒಂದು ಎತ್ತು ತೊಡೆಗೆ ತಿವಿದು ಸಾನೇ ಗಾಯ ಮಾಡಿತ್ತು. ತೊಡೆಗೆ ಒಂದು ಕಾಲ್ ಕೆಜಿ ಅರಿಸಿನ ಹಚ್ಚಿದ್ವಿ. ಮಗಾ ಹುಳಕಡ್ಡಿ ಆದೋರು ತರಾ ಚಡ್ಡಿ ಎತ್ಕಂಡು ಬರೋನು. ಎರಡು ಹಸ ಕಳೆದೈತೆ ಅಂತಾ ಎಲ್ಲಾರ ಕೊಟ್ಟಿಗೇನೂ ಸಂಜೆ ಹುಡಕ್ತಾ ಇದ್ದ. ಏ ಥೂ.

ಸರಿ ಸಂಜೆ ಗೌಡಪ್ಪ ಎಲ್ಲಾ ಹಸನ್ನ ಕೊಟ್ಟಿಗೆ ಕಟ್ಟಿ ಎಂದಿನಂತೆ ಸಿದ್ದೇಸನ ಗುಡಿತಾವ ಬಂದ. ನೋಡ್ರಲಾ ಗೋ ಹತ್ಯೆ ನಿಷೇಧ ಅಂತಾ ಸರ್ಕಾರದವರು ಮಾಡವ್ರೆ. ಅದಕ್ಕೆ ನಾವು ಪ್ರೋತ್ಸಾಹ ನೀಡಬೇಕು ಅಂದ. ಸರಿ ಗೌಡರೆ ನೀವೆ ನಮ್ಮ ನಾಯಕರು. ಒಂದು ತರಾ ನೀವು ನಮಗೆ ಭಗತ್ ಸಿಂಗ್ ಇದ್ದಂಗೆ ಅಂದಾ ಸುಬ್ಬ. ಯಾಕೆ ಮಗನೇ ನೇಣು ಹಾಕಿಸಕ್ಕಾ ಅಂದ ಗೌಡಪ್ಪ. ಸರಿ ಬೆಳಗ್ಗೆನೇ ಹಳ್ಳಿಯ ಗಡಿಭಾಗದಲ್ಲಿ ನಿಂತ್ವಿ. ಒಂದು ಆಟೋದಾಗೆ ಒಂದು ಎರಡ ಹಸ ಬರ್ತಾ ಇತ್ತು, ಆಟೋ ನಿಲ್ಲಿಸಿ ಮುಖ ಮೂತಿ ನೋಡದೆ ಸರಿಯಾಗಿ ಚಚ್ಚಿದ್ವಿ. ನೋಡಿದ್ರೆ ಅವನು ಸಂತ್ಯಾಗೆ ಹಸ ಖರೀದಿ ಮಾಡ್ಕಂಡು ಅವನ ಹಳ್ಳೀಗೆ ಹೊಂಟಿದ್ದ. ಕಡೆಗೆ ಅರಿಸಿನ ಹಚ್ಚಿ ಕಳಿಸಿಸ್ವಿ. ಮಗಾ ಯಲ್ಲಮ್ಮನ ಜಾತ್ರೇಲಿ ಎಮ್ಮೆ ಕಡಿಯೋರು ತರಾ ಆಗಿದ್ದ. ಮುಂದೆ ಪೋಲೀಸ್ನೋರು ನೀನು ಎಮ್ಮೆ ಕಡಿಯೋನು ಅಂತಾ ಕೇಸು ಹಾಕಿದ್ರಂತೆ,. ಈಗ ನಮ್ಮನ್ನ ನೋಡಿದ್ರೆ ಓಡದೇ ಮಾಡ್ತಾನೆ, ಮತ್ತೆ ಇನ್ನೊಂದು ಆಟೋದಾಗೆ ಇನ್ನೊಂದು ಹಸಾ ಇಟ್ಕಂಡು ಬತ್ತಾ ಇದ್ದ, ಅವನಿಗೂ ನಿಲ್ಲಿಸಿ ದಬು ದುಬು ದಬು ದುಬು ಅಂತಾ ಸಾನೇ ಚಚ್ಚಿದ್ವಿ. ನೋಡಿದ್ರೆ ಅದು ಗಬ್ಬ ಇತ್ತಂತೆ ಅದಕ್ಕೆ ಡೆಲಿವರಿ ಮಾಡ್ಸಕ್ಕೆ ಅಂತಾ ಆಸ್ಪತ್ರಗೆ ಹೋಗಿದ್ದೆ ಅಂದಾ. ಲೇ ನೀವು ಏನ್ರಲಾ ಬಂದೋರುಗೆಲ್ಲಾ ಹಿಂಗೆ ಹೊಡಿತಾ ಇದಿರಾ ಕೇಸು ಆಯ್ತದೆ ಕಲಾ ಅಂದ ಗೌಡಪ್ಪ. ನೀವು ಇರೋಬೇಕಾದ್ರೆ ಯಾಕೆ ಅಂದು ಮತ್ತೆ ನಿಂತ್ವಿ. 1

ಒಂದೇ ಲಾರಿಯಲ್ಲಿ ಒಂದು ಹತ್ತು ಹಸ ಇಟ್ಕಂಡು ಪಕ್ಕದ ಹಳ್ಳಿ ರಾಜ, ಜೊತೆಗೆ ಇಸ್ಮಾಯಿಲ್ ಇದ್ದ. ಅದನ್ನು ನಿಲ್ಲಿಸಿ ಸಾನೇ ಹೊಡೆದ್ವಿ. ಮೂಗು ಬಾಯ್ನಾಗೆ ರಕ್ತ. ಲೇ ಹಸಕ್ಕೆ ಹುಸಾರಿಲ್ಲಾ ಅಂತಾ ಪಕ್ಕದ ಹಳ್ಳಿಗೆ ನಾಟಿ ಔಷಧಿ ಕೊಡಿಸಕ್ಕೆ ಅಂತಾ ಹೋದರೆ ಹಿಂಗೆ ಹೊಡಿತಿರಾ ತಡೀರಿ ನಮ್ಮ ಕಡೆಯವರನ್ನು ಕರೆಸಿ ನಿಮಗೆ ಹೊಡೆಸ್ತೀನಿ ಅಂದಾ. ಮಗಾ ಕಿಸ್ನ ಅವರಿಗೆ ಅರಿಸಿನ ಹಚ್ಚಿದ್ದ. ಲೇ ನಡೀರಲಾ ಮನೆಗೆ. ನಿಮ್ಮನ್ನ ಕರೆದುಕೊಂಡು ಬಂದರೆ ನನಗೆ ನಿಜವಾಗಲೂ ಭಗತ್ ಸಿಂಗ್ ಮಾತ್ತೀರಾ ಅಂದ.

ಸರಿ ಮಾರನೆ ದಿನದಿಂದ ನಮ್ಮ ಕೆಲಸ ಗೋ ಹತ್ಯೆ ತಡೆಯೋದೆಯಾ ಅಂದಾ ಗೌಡಪ್ಪ. ಎಲ್ಲಿ ಹೊರಗೆ ಹಸ ಕಾಣಂಗಿಲ್ಲ. ಅಂಗೇ ತಂದು ಪಂಚಾಯ್ತಿ ದೊಡ್ಡಿಗೆ ಬಿಡ್ತಾ ಇದ್ವಿ. ದೊಡ್ಡಿ ತುಂಬಿ. ಪಂಚಾಯ್ತಿ ಆಫೀಸ್ನಾಗೂ ಎರಡು ಎಮ್ಮೆ ಕಟ್ಟಿದ್ವಿ. ಮಗಾ ಬಿಲ್ ಕಲೆಕ್ಟರ್ ಮೂಗು ಮುಚ್ಕಂಡು ಲೆಕ್ಕ ಬರೀತಾ ಇದ್ದ. ದೊಡ್ಯಾಗೆ ಗೌಡಂದು ಎರಡು ಹಸಾ ಇತ್ತು. ಏನ್ರಲಾ ನನ್ನ ಹಸನ್ನ ಇಲ್ಲೇ ತಂದು ಹಾಕಿದಿರಲಾ ಅಂದ. ಬೀದ್ಯಾಗೆ ಇತ್ತು ಅದಕ್ಕೆ ಅಂದಾ ನಿಂಗ. ಗೌಡಪ್ಪನ ಹೆಂಡರು ಬೆಳಗ್ಗೆ ಒಂದು ಬಕ್ಕಿಟ್ಟು ಕೊಟ್ಟು ಹಾಲು ಕರೆದುಕೊಂಡು ಬಾರಲಾ ಅಂತು. ನೋಡಿದ್ರೆ ಒಂದು ಲೋಟದಷ್ಟು ಬಂದಿರಲಿಲ್ಲ. ಏನ್ಲಾ ಹಸನ್ನ ಮೇಯಿಸಿಲ್ಲೇನ್ಲಾ ಅಂತು ಗೌಡಪ್ಪನ ಹೆಂಡರು. ಲೇ ಗಂಡಂಗೆ ಮರ್ವಾದೆ ಕೊಟ್ಟು ಮಾತಾಡೇ. ಯಾರಾದರೂ ಕೇಳಿಸ್ಕಂಡ್ರೆ ದನಕಾಯೋ ಶಂಭು ಅಂದ್ಕತಾರೆ ಅಂದಾ ಗೌಡಪ್ಪ. ಸರಿ.ಸರಿ. ನಾನು ಮೇಯಿಸಿದ್ದೆ ಕಣಮ್ಮಿ, ಅದು ಹಾಲು ಕೊಡೋ ಬದಲು ಒಂದು ಬಕ್ಕಿಟ್ಟು ಸಗಣಿ ಕೊಟ್ಟೈತೆ ಅಂದಾ ಗೌಡಪ್ಪ. ಅದ್ರಾಗೆ ಇವತ್ತು ನಿಂಗೆ ಮುದ್ದೆ ಅಂದು ಹೋತು. ಗಂಜಲ ನೆಂಚಳಕ್ಕೆ ಆಯ್ತದೆ ಅಂದ ಸುಬ್ಬ.

ಪೊಲೀಸ್ ಸ್ಟೇಷನ್ನಾಗೆ ನಾವು ಹೋಗಿ ಹೋಗಿ ಕಂಪ್ಲೇಟ್ ಕೊಡ್ತಾ ಇದ್ವಿ. ಹಸಕ್ಕೆ ಅಂತಾನೇ ಒಂದು ಬ್ರಾಂಚ್ ತೆಗೆದಿದ್ರು. ಕೌ ಸ್ಕ್ವಾಡ್ ಅಂತಾ. ಅದಕ್ಕೆ ಒಬ್ಬ ಇನ್ಸ್ ಪೆಕ್ಟರ್. ಬರೇ ಒಂದು ಗೌಡಪ್ಪ ಮಿಸ್ ಕಾಲ್ ಕಟ್ಟರೆ ಸಾಕು. ಜೀಪ್ನಾಗೆ ಬಂದು ಏನೂ ಸಿಗಲಿಲ್ಲ ಅಂದ್ರೆ ಬುಟ್ಯಾಗೆ ಸಗಣಿ ತುಂಬ್ಕಂಡು ಹೋಗೋನು. ಹೆಂಡರು ಬೆರಣಿ ತಟ್ಟಲಿ. ನೀರು ಕಾಯಿಸಕ್ಕೆ ಆಯ್ತದೆ ಅಂತಾ. ಇವನ ಕಾಟಾ ತಡಿಲಾರದೆ ಪ್ರಾಣಿ ದಯಾ ಸಂಘದೋರು ಒಂದು ಹತ್ತು ಕಂಪ್ಲೇಟ್ ಕೊಟ್ರು.  ಇವಾಗ ಕೇಸಿಗೆ ಅಂತಾ ದಿನಾ ಮಂಡ್ಯಕ್ಕೆ ಓಡಾಡ್ತಾನೆ. ಬೆಳಗ್ಗೆ ಹೋದ್ರೆ ಸಂಜೆತಾವ ಹಳ್ಳಿಗೆ ಬತ್ತಾನೆ.  ಆದ್ರೆ ಇನ್ಸೆಪೆಕ್ಟರ್ ಮಾತ್ರ ಸಗಣಿ ಎತ್ತೋ ಬುಟ್ಟಿ ಮಾತ್ರ ಅಂಗೇ ಜೀಪ್ನಾಗೆ ಮಡಗವನೆ. ನಿಜ ನೋಡಿದ್ರೆ ನಮ್ಮ ಹಳ್ಯಾಗೆ ಕಸಾಯಿ ಖಾನಗೆ ಹಸನ್ನ ಕಳಿಸ್ತಿದ್ದಿದ್ದು ಗೌಡಪ್ಪ ಅಂತಾ ಗೊತ್ತಾದ ಮ್ಯಾಕೆ ಬಂದಾ ನೋಡ್ರಲಾ ಹಸ ಬ್ರೋಕರ್ ಅಂತವ್ರೆ. ಗೌಡಪ್ಪ ಮುಖ ಮುಚ್ಕಂಡು ಓಯ್ತಾನೆ.

ಕುಚೇಲ ವಾಣಿ: ಸಾಮ್ರಾಟರೇ, ಸೈಡು ಬಿಡಿ

15 ಸೆಪ್ಟೆಂ

ತಾವೇ ಹಾಕಿಕೊಂಡ ಆದರೆ ಎಂದೂ ಪಾಲಿಸದ ವೇಳಾಪಟ್ಟಿಯ ಪ್ರಕಾರ ಇಂದು ಸಾಮ್ರಾಟರು ಸಂತಾಪಕೀಯವನ್ನು ಪ್ರಕಟಿಸಬೇಕಿತ್ತು. ಮಧ್ಯ ರಾತ್ರಿ ಹನ್ನೆರಡು ಘಂಟೆ ಕಳೆದು ಇಷ್ಟು ಹೊತ್ತಾದರೂ ಸಾಮ್ರಾಟರು ಕೀಬೋರ್ಡಿಗೆ ಅಂಗೈ ತೋರಿಸುವ ಲಕ್ಷಣವೂ ಕಾಣಲಿಲ್ಲ. ಇದು ಒಂದು ದಿನದ ಗೋಳಲ್ಲ, ನಗಾರಿ ಪ್ರಾರಂಭವಾದ ದಿನದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. kuchela

ಉನ್ನತವಾದ ಕಾಲೇಜಿನ ಕಲಾ ವಿಭಾಗದಲ್ಲಿ ಓದಿ ಚಿನ್ನದ ಪದಕವನ್ನು ಎರಡು ಅಂಕಗಳಲ್ಲಿ ತಪ್ಪಿಸಿಕೊಂಡ ವಿದ್ಯಾರ್ಥಿ ನಾನು. ಎರಡು ಅಂಕ ಕಡಿಮೆ ಗಳಿಸಿದ ತಪ್ಪಿಗಾಗಿ ಏನೋ ಎಂಬಂತೆ ಸಾಮ್ರಾಟರ ಬಳಿ ಇಂಟರ್ನ್ ಆಗಿ ಸೇರಿಕೊಂಡೆ. ತೆಹೆಲ್ಕಾ ಡಾಟ್ ಕಾಮ್ ಪ್ರಸಿದ್ಧಿಯಲ್ಲಿದ್ದ ದಿನದಿಂದ ನಗೆ ನಗಾರಿ ಡಾಟ್ ಕಾಮ್ ನಂತಹ ಬಹುದೊಡ್ಡ ಸಂಸ್ಥೆಯಲ್ಲಿ ನಾನು ಕೆಲಸ ಮಾಡಿದರೆ ನನ್ನ ಭವಿಷ್ಯವು ಉಜ್ವಲವಾಗಿರುವುದು. ನಾನು ಮುಖ ತೋರಿದೆಡೆಯೆಲ್ಲಾ ಕೆಲಸಕ್ಕೆ ಆಹ್ವಾನಗಳು ತೂರಿ ಬರುವವು. ನೀಳ ಜಡೆಯ ಹುಡುಗಿಯರು ನನ್ನ ಶರ್ಟಿನ ಚುಂಗು ಎಳೆಯುತ್ತ ಒಂದು ಜೋಕು ಹೇಳು ಎಂದು ಪೀಡಿಸುವರು. ಆ ಮುದ್ದಾದ ಚಿತ್ರಗಳಿಗೆ ಚುರುಕಾದ ಅಡಿ ಬರಹಗಳನ್ನು ಕೊಡುತ್ತಿದ್ದವನು ನೀನೇನಾ ಎಂದು ಕಂಡವರೆಲ್ಲಾ ಹುಬ್ಬೇರಿಸುವರು ಎಂದೆಲ್ಲಾ ಕನಸು ಕಾಣುತ್ತ ದಿನ ತಳ್ಳುತ್ತಿದ್ದವನಿಗೆ ಸಾಮ್ರಾಟರಿಂದ ಮುಕ್ತಿಯೇ ಇಲ್ಲದಾಗಿ ಹೋಯಿತು.

ನನ್ನ ಬಗ್ಗೆ ಮಾತೆತ್ತಿದರೆ ‘ನಮ್ಮ ಅತ್ಯಾಪ್ತ ಚೇಲ ಕುಚೇಲ’ ಎಂದು ಸಕ್ಕರೆಯ ಮಾತನಾಡುವ ಸಾಮ್ರಾಟರು ಇಷ್ಟು ದಿನಗಳಲ್ಲಿ ನನಗೆ ನೀಡಿದ ಹಿಂಸೆಯನ್ನು ಪಟ್ಟಿ ಮಾಡಲು ಇದು ಯೋಗ್ಯವಾದ ಸ್ಥಳವಲ್ಲ. ಅವರು ಹೇಳಿದ್ದನ್ನೆಲ್ಲ ಮಾಡಿಕೊಂಡು, ಅವರು ಅಟ್ಟಿದಲ್ಲೆಲ್ಲಾ ಓಡಿ ಅಲೆದಾಡಿಕೊಂಡು ಇದ್ದೆ. ನಾನು ಬರೆದ ವರದಿಗಳಿಗೆಲ್ಲಾ ತಮ್ಮ ಹೆಸರೇ ಹಾಕಿಕೊಂಡು ಸಾಮ್ರಾಟರು ಮೆರೆಯುವಾಗ ನನಗೆ ಅಷ್ಟಾಗಿ ಬೇಸರವಾಗುತ್ತಿರಲಿಲ್ಲ. ಒಂದಲ್ಲ ಒಂದು ದಿನ ನನಗೂ ಕಾಲ ಕೂಡಿ ಬರುತ್ತದೆ. ಆಗ ಜಗತ್ತೇ ನನ್ನ ಬೆರಳ ಸನ್ನೆಯಿಂದ ಕುಣಿಯುತ್ತದೆ ಎಂದುಕೊಂಡಿದ್ದೆ. ಸಾಮ್ರಾಟರ ಮಹಿಮೆಯಿಂದ ಆ ದಿನ ಎಂದಿಗೂ ಬರುವುದಿಲ್ಲ ಎಂದು ಮೆಲ್ಲಗೆ ಅರಿವಾಗುತ್ತಿದೆ. ಸಾಮ್ರಾಟರೊಡನೆ ಕೆಲಸ ಮಾಡಿದೆ ಎಂದು ಹೇಳಿಕೊಂಡದ್ದಕ್ಕೆ ನಾಲ್ಕು ಕಛೇರಿಗಳಲ್ಲಿ ಕೈಲಿ ಹಿಡಿದಿದ್ದ ಫೈಲು ಕಸಿದುಕೊಂಡು ಹೊರದಬ್ಬಿದರು. ಒಬ್ಬ ಯಜಮಾನರಂತೂ ಜೇಬಲ್ಲಿದ್ದ ಐವತ್ತು ರುಪಾಯಿ, ಬಿಎಂಟಿಸಿ ದಿನದ ಪಾಸನ್ನು ಕಿತ್ತುಕೊಂಡು ಹೊರಗಟ್ಟಿದರು. ಸಾಮ್ರಾಟರ ಹೆಸರು ಹೇಳುತ್ತಿದ್ದಂತೆಯೇ ‘ನೋ ವೇಕೆನ್ಸಿ’ ಎಂದವರು ಅನೇಕರು. ಹೀಗೆ ನಾನು ಎಲ್ಲೆಲ್ಲಿ ಹೋದರೂ ಸಾಮ್ರಾಟರ ಹೆಸರಿನ ಕರಾಳ ನೆರಳು ಅದಾಗಲೇ ಅಲ್ಲಿ ಉಪಸ್ಥಿತವಿರುತ್ತಿತ್ತು.

ಹಳೆ ಗಂಡನ ಪಾದವೇ ಗತಿಯೆಂಬ ಗರತಿಯ ಅನುಭವ ವಾಕ್ಯವನ್ನು ರಕ್ತಗತವಾಗಿಸಿಕೊಂಡು ನಾನು ವಾಪಸ್ಸು ಸಾಮ್ರಾಟರ ಬಳಿ ಬಂದಿರುವೆ. ಆದರೆ ಈ ಬಾರಿ ಸಾಮ್ರಾಟರ ಚೇಲನಾಗಿಯಷ್ಟೇ ಉಳಿಯಲು ಬಂದಿಲ್ಲ. ಸಾಮ್ರಾಟರ ಸಾಮ್ರಾಜ್ಯಕ್ಕೆ ಅನಭಿಷಿಕ್ತ ಯುವರಾಜನಾಗುವ ಹುಮ್ಮಸ್ಸಿನಿಂದ ಬಂದಿದ್ದೇನೆ.

ಇಷ್ಟು ದಿನ ನಗಾರಿಯು ಬಾಲ್ಯಾವಸ್ಥೆಯಲ್ಲಿತ್ತು ಎನ್ನಬಹುದು. ಬಾಲಿಶವಾದ ಹಾಸ್ಯವೇ ಇದರ ಜೀವಾಳವಾಗಿತ್ತು. ಆಗಾಗ ಸಾಮ್ರಾಟರು ತಮ್ಮತನವನ್ನೂ ಮೀರಿದ ಅದ್ಭುತ ಹಾಸ್ಯವನ್ನು ಹುಟ್ಟಿಸುತ್ತಿದ್ದರು ಎನ್ನುವುದನ್ನು ಹೊರತು ಪಡಿಸಿದರೆ ಉಳಿದದ್ದೆಲ್ಲವೂ infantile ಆದ ನಗೆ ಬರಹಗಳೇ ಆಗಿರುತ್ತಿದ್ದವು. ಇನ್ನು ನನ್ನ ಸುಪರ್ದಿಗೆ ಬಂದಿರುವ ನಗಾರಿಗೆ ಯೌವನದ ಹೊಳಪನ್ನು ನೀಡಲು ನಾನು ಯತ್ನಿಸುವೆ. ಬಾಲಿಶತನವನ್ನೂ ಹೊಂದಿದ್ದು ಅದನ್ನು ಮೀರಲು ಯತ್ನಿಸುವ ಯುವಕನ ಹುಮ್ಮಸ್ಸನ್ನು ನಗಾರಿಯ ಬರಹಗಳಲ್ಲಿ ತುಂಬುವತ್ತ ಪ್ರಾಮಾಣಿಕ ಪರಿಶ್ರಮ ವಿನಿಯೋಗಿಸುವೆ. ಸಾಮ್ರಾಟರು ನಗಾರಿಯ ದೊರೆಗಳಾಗಿ ಮುಂದುವರೆಯುತ್ತಾರಾದರೂ ನಗಾರಿಯ ಆಗು ಹೋಗುಗಳಲ್ಲಿ ನಾನೇ ಸಕ್ರಿಯವಾಗಿ ಪಾಲ್ಗೊಳ್ಳುವೆ. ಇನ್ನು ಮೇಲೆ ಸಾಮ್ರಾಟರು ನನ್ನನ್ನು ಎಲ್ಲಿಯೂ ಅಟ್ಟುವುದಿಲ್ಲ ಎನ್ನುವ ವಿಶ್ವಾಸ ನನ್ನದು.

ಕಾಲವು ಬಹು ವೇಗವಾಗಿ ಬದಲಾಯಿಸುತ್ತಿದೆ. ವ್ಯಂಗ್ಯ ಎಂದು ನಾವು ಪರಿಗಣಿಸಿದ್ದು ವಾಸ್ತವವೇ ಆಗಿ ಸ್ಥಾಪಿತವಾಗುತ್ತಿದೆ. ವಾಸ್ತವವೇ ದೊಡ್ಡ ವ್ಯಂಗ್ಯವಾಗಿ ನಮ್ಮನ್ನು ಪರಿಹಾಸ್ಯ ಮಾಡುತ್ತಿದೆ. ಕೈಲಿ ಲಟ್ಟಣಿಗೆ ಹಿಡಿದು, ಸೊಂಟಕ್ಕೆ ಸೆರಗು ಸಿಕ್ಕಿಸಿಕೊಂಡು ಎದೆ ಸೆಟೆಸಿ ನಿಂತ ಹೆಂಡತಿ, ಹಣೆಯ ಮೇಲೆ ಬುಗುಟು ಎದ್ದು, ಸತ್ತೆನೋ ಕೆಟ್ಟೆನೋ ಎಂದು ಓಡುವ ಪತಿ- ಎನ್ನುವುದು ವ್ಯಂಗ್ಯವಾಗಿ ಉಳಿದೇ ಇಲ್ಲ ಎನ್ನುವುದನ್ನು ಭೈರಪ್ಪರಂತಹ ಹೆಸರಾಂತ ಕಾದಂಬರಿಕಾರರು ನಿರೂಪಿಸುವ ವಾಸ್ತವವಾಗಿ ಹೋಗಿದೆ. ಒಬ್ಬರ ಮೇಲೆ ಇನ್ನೊಬ್ಬರು ನೂರಾರು ಕೋಟಿ ರೂಪಾಯಿಗಳ ಭ್ರಷ್ಠಾಚಾರದ ಆರೋಪ ಮಾಡಿ, ತಮ್ಮ ಬಳಿ ಇರುವ ಸಾಕ್ಷ್ಯಗಳ ಸತ್ಯಾಸತ್ಯತೆಯ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದ ಜನಾರ್ದನ ರೆಡ್ಡಿ, ಕುಮಾರಸ್ವಾಮಿಗಳು ಕರ್ನಾಟಕದ ರಾಜಕೀಯದ ವಾಸ್ತವವನ್ನೇ ದೊಡ್ಡ ವ್ಯಂಗ್ಯವಾಗಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಹಾಸಿಗೆಯಲ್ಲಿ ಸೇರಿಕೊಂಡ ತಿಗಣೆಯ ಬಗ್ಗೆಯೇ ವಿನೋದ ಮಾಡುತ್ತ ಕೂರುವ ಸಾಮ್ರಾಟರನ್ನು ನೆಚ್ಚಿಕೊಂಡರೆ ಉಪಯೋಗವಿಲ್ಲ.

ಸಾಮ್ರಾಟರ ವಿನೋದದಲ್ಲಿ ವಿವೇಕವೇ ಹೆಚ್ಚು ಇರುತ್ತದೆ. ಅವರ ವಿನೋದಕ್ಕೆ ನನ್ನ ತಕರಾರುಗಳು ಎರಡು ರೀತಿಯವು. ಓದುಗರು ತಮ್ಮಿಂದ ವಿವೇಕ ಹೇಳಿಸಿಕೊಳ್ಳುವಂಥವರು ಎಂದು ಭಾವಿಸುವುದು ಸಾಮ್ರಾಟರ ಅಹಂಕಾರವನ್ನು ತೋರುತ್ತದೆ ಎನ್ನುವುದು ಮೊದಲ ತಕರಾರು. ಎರಡನೆಯದು, ವಿವೇಕವನ್ನು ವಿನೋದವಾಗಿ ಹೇಳಲು ಹೊರಟರೆ ಓದಿದವರೂ ಸಹ ವಿನೋದದಿಂದಲೇ ಅದನ್ನು ಮರೆತು ಮುಂದೆ ಹೋಗುತ್ತಾರೆ.

ನಗೆ ನಗಾರಿಯ ವಿನೋದವು ಹರಿತವಾಗಿಲ್ಲ. ವಿನೋದಕ್ಕೆ ಈಡು ಮಾಡಿದ ವ್ಯಕ್ತಿಯ ನಿಜ ನಾಮಧೇಯವನ್ನು ಬಳಸದಿರುವುದು ಸಾಮ್ರಾಟರ ಪುಕ್ಕಲುತನವನ್ನು ತೋರುತ್ತದೆ. ನಿಜ ಸನ್ನಿವೇಶಗಳು, ನಿಜ ವ್ಯಕ್ತಿಗಳು, ನಿಜವಾದ ಘಟನೆಗಳೇ ವಿನೋದಕ್ಕೆ, ವ್ಯಂಗ್ಯಕ್ಕೆ ಈಡಾಗಬೇಕು. ಆಗಲೇ ವ್ಯಂಗ್ಯದ ನಿಜವಾದ ಸತ್ವ ಹೊರತರಲಿಕ್ಕೆ ಸಾಧ್ಯ. ದೇಜಗೌ ತಮ್ಮನ್ನು ತಾವು ದಶರಥ, ಮೋತಿಲಾಲ ಎಂದು ಕರೆದುಕೊಳ್ಳುವುದು, ರಾಮುಲು ತಾನು ಯಾವುದೇ ರೀತಿಯಿಂದಲೂ ಚೆಂದ ಕಾಣಿಸಬಾರದೆಂದು ತಲೆ ಬೋಳಿಸಿಕೊಳ್ಳುವುದು, ರಾಹುಲ್ ಗಾಂಧಿ ತನ್ನ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ ಎಂದು ಹಲುಬುವುದು, ರವಿ ಬೆಳಗೆರೆ ತನ್ನ ಕೈಲಿನ್ನು ಆಗಲ್ಲ ಎಂದು ಬರೆದುಕೊಳ್ಳುವುದು ಎಲ್ಲವೂ ನಗಾರಿಯ ಮೊನಚಾದ ಹಾಸ್ಯಕ್ಕೆ ಈಡಾಗಬೇಕು. ಇದು ನನ್ನ ವಿಶನ್.

ಸಾಮ್ರಾಟರಷ್ಟು ನಿರರ್ಗಳವಾಗಿ ನನಗೆ ಬರೆಯಲು ಸಾಧ್ಯವಾಗದಿರಬಹುದು. ಅವರಷ್ಟು ಬುದ್ಧಿವಂತಿಕೆಯಿಂದ ಪ್ರತಿಕ್ರಿಯೆ ನೀಡಲು ನನಗೆ ಬಾರದಿರಬಹುದು. ಆದರೆ ಬೆಳೆಯುವ ಆಕಾಂಕ್ಷೆಯಿರುವ ನಾನು ನಗಾರಿಯಲ್ಲಿ ಅತ್ಯುತ್ತಮವಾದದ್ದೇ ಪ್ರಕಟವಾಗುವಂತೆ ನೋಡಿಕೊಳ್ಳುವೆನು.

ಸಾಮ್ರಾಟರೆ, ಸೈಡು ಬಿಡಿ!

ಗಣಪತಿ ಹಬ್ಬಕ್ಕೆ ವಿಶೇಷ ಆರ್ಕೆಸ್ಟ್ರಾ ತಂಡ – ನಿಮ್ಮೂರಿಗೂ ಬರುತ್ತಿದ್ದೀವಿ

11 ಸೆಪ್ಟೆಂ
ನಮ್ಮೂರ ಹಿರಿಯ, ಮುದಿಯ ವಾಸನೆ ಗೌಡಪ್ಪನವರ ನೇತೃತ್ವದಲ್ಲಿ ಗಣಪತಿ ಕಲಕ್ಷನ್ ಅಂತೂ ಮಾಡಿದ್ದಾಯಿತು. ನೋಡಿದ್ರೆ 20ಸಾವಿರನೂ ಆಗಿರಲಿಲ್ಲ. ಆದರೆ ಪಾಂಪ್ಲೇಟ್ ನಲ್ಲಿ ಭಾರೀ ಆರ್ಕೆಸ್ಟ್ರಾ ಅಂತಾಹಾಕಿಸಿದೀವಿ. ಏನು ಮಾಡೋದು ಅಂತಾ ಯೋಚನೆ ಮಾಡ್ತಾ ಇದ್ದಾಗೆನೇ. ನಮ್ಮ ಗೌಡಪ್ಪ ನೋಡ್ರಲಾ ಪ್ರತೀ ವರ್ಸ ಗಣಪತಿ ಹಬ್ಬ ಬತ್ತದೆ. ಯಾಕಲಾ ಸುಮ್ನೆ ಆರ್ಕೆಸ್ಟ್ರದೋರಿಗೆ ಅಂತಾ ದುಡ್ಡು ಕೊಡೋದು ನಾವೇ ಒಂದು ಆರ್ಕೆಸ್ಟ್ರಾ ತಂಡ ಕಟ್ಟಿದ್ದರೆ ಹೆಂಗಲಾ ಅಂದ. ಮತ್ತೆ ಅದಕ್ಕೆ ಬೇಕಾದ ವಾದ್ಯಗಳು ಅಂದ ಸುಬ್ಬ. ನಾ ಎಲ್ಲಾ ಮಾತ್ತೀನಿ ನೀವು ರೆಡಿಯಾಗಿರಿ ಅಂದು ನಿಂಗನ ಅಂಗಡೀಲಿ ಅರ್ಧ ಚಾ ಕುಡಿದು ತಲೆ ಮ್ಯಾಕೆ ಟವಲ್ ಹಾಕ್ಕಂಡ್ ಹೊಂಟ.
ಸರಿ ಆ ತಂಡದಾಗ ಸುಬ್ಬ, ನಿಂಗ, ಕಟ್ಟಿಗೆ ಕಿಸ್ನ, ದೊನ್ನೆ ಸೀನ, ಸುಬ್ಬಿ (ಲೇಡಿ ಸಿಂಗರ್), ಗೌಡಪ್ಪ (ಆಂಕರ್), ಕೋರಸ್ ಗೆ ಗೌಡಪ್ಪನ ಇಬ್ಬರು ಹೆಂಡರು ಎಲ್ಲಾ ರೆಡಿ ಮಾಡಿಕೊಂಡು ಗೌಡಪ್ಪನ ತೋಟದ ಮನ್ಯಾಗೆ ಪ್ರಾಕ್ಟೀಸ್ ಸುರು ಮಾಡಿದ್ವಿ. ಮೊದಲಿಗೇನೇ ಎಲ್ಲಾ ಒರಿಜಿನಲ್ ಸಾಮಾನು ಬಳಸಿದ್ರೆ ಹಾಳಾಯ್ತದೆ ಅಂತಾ ಬಕ್ಕಿಟ್ಟು, ಚೊಂಬು ಹಿಂಗೆ ಬೇರೆ ಬೇರೆ ವಾದ್ಯಗಳಿಗೆ ಬಾರಿಸೋದನ್ನ ಪ್ರಾಕ್ಟೀಸ್ ಮಾಡಿದ್ವಿ. ಚೊಂಬು ಅನ್ನೋದು ತಟ್ಟೆ ಆದಂಗೆ ಆಗಿತ್ತು. ಮಗಾ ಸುಬ್ಬ ಮಂಚದ ಕಾಲ್ನಾಗೆ ಬಾರಿಸಿದ್ದ. ಇದನ್ನ ಹಳ್ಯಾಗೆ ಮಾಡಿದ್ರೆ  ಸವಂಡ್ ಕೇಳಕ್ಕಾಗದೇ ಯಾರಾದರೂ ಬಂದು ಹೊಡೆದಾರು ಅಂತಾ ತೋಟದ ಮನ್ಯಾಗೆ ಮಾಡಿದ್ವಿ. ಹಸು ಎಲ್ಲಾ ಅಂಗೇ ಓಡೋವು. ಹಂಗೇ ಕೆರೆತಾವ ಹೋಗಕ್ಕೂ ಹತ್ತಿರ ಆಯ್ತದೆ ಅಂತಾ. ಸುಬ್ಬಿಗೆ ಹಲ್ಲು ಉಬ್ಬು ಇದ್ದುದರಿಂದ ಒಂದಿಷ್ಟು ಪದಗಳು ಹಂಗೇ ಗಾಳಿಗೆ ಹೋಗೋವು. ಆ ಟೇಮಿಗೆ ಡ್ರಮ್ಸ್ ಸವಂಡ್ ಜಾಸ್ತಿ ಮಾಡ್ತಿದ್ವಿ. ಗೌಡಪ್ಪ ಮಂಡ್ಯಾ ಭಾಸೆಯಾಗೆ ಮಾತಡೋನು. ನೀವು ಹಿಂಗೆ ಮಾತಾಡಿದರೆ ಮಲೆನಾಡಿನವು ಸ್ಟೇಜಿಗೆ ಬಂದು ಒದಿತಾವೆ ಅಂದೆ.
ಸರಿ ಡ್ರಮ್ಸ್ ಒರಿಜಿನಲ್ ತಂದರೆ ಕಾಸು ಜಾಸ್ತಿಯಾಗ್ತದೆ ಅಂತಾ ಮನ್ಯಾಗೆ ಇರೋ ಕುರಿ ಚರ್ಮನ್ನ ಮರದ ಬಾಕ್ಸ್ ಗೆ ಕಟ್ಟಿದ್ದ.ಅವಾಗವಾಗ ಬೆಂಕಿ ಕಾಯಿಸೋದೆ ನಮ್ಮ ಕೆಲಸ. ಕಿಸ್ನ ಒಂದು ಹತ್ತು ಹುಲ್ಲುಪಿಂಡಿ ಹಂಗೇ ಬೆಂಕಿ ಪಟ್ನ ಯಾವಾಗಲೂ ಮಡಿಕ್ಕಂಡು ಇರೋನು.
ಸರಿ ಒಂದು ಸ್ಯಾಂಪಲ್ ಕಾರ್ಯಕ್ರಮ ಮಾಡೋಣ ಅಂತಾ ಪಕ್ಕದ ಹಳ್ಳಿ ಯಲ್ಲಮ್ಮನ ಜಾತ್ರಾಗೆ ಕಮ್ಮಿ ರೇಟಿಗೆ ಅಂದ್ರೆ ಬರೀ ಬೈಟು ಚಾ ಕಾಸಿಗೆ ಒಪ್ಪಿಕೊಂಡು ಪ್ರೋಗ್ರಾಮ್ ಕೊಟ್ವಿ. ನಮ್ಮ ಖರ್ಚು, ಗಾಡಿ ಖರ್ಚು ಎಲ್ಲಾ ಗೌಡಪ್ಪನೇ ನೋಡಿಕೊಂಡಿದ್ದ. ಎಲ್ಲಾರಗೂ ಬಿಳೀ ಷರ್ಟು ಅಂಗೇ ನೀಲಿ ಪ್ಯಾಂಟು ಹಾಕಿಸಿದ್ದ. ಸರೀ ಕಾರ್ಯಕ್ರಮ ಸುರುವಾತು. ಎಂದಿನಂತೆ ನನ್ನ ಪ್ರಾರ್ಥನೆ, ಗಣಪತಿ ಮ್ಯಾಕೆ. ಸುಕ್ಲಾಂ ಭರದರಂ ವಿಷ್ಣುಂ ಸಸಿ ವರ್ಣಂ ಜಾಯೇ ಸರ್ವ ಇಜ್ಞೋಪ ಸಾಂತೇಯೇ.ಅಂದೆ. ಲೇ ಯಲ್ಲಮ್ಮನ ಮ್ಯಾಕೆ ಹೇಳಲೇ. ಯಲ್ಲಮ್ಮ ನಿನ್ನ ಮೇಲೆ ಆಲು ಕುದೋ, ಆಲು ಕುದೋ ಅಂದೆ. ಅಂಗೇ ಅಲ್ಲಿದ್ದ ಜನರಿಂದ ಕೋರಸ್ ಸುರುವಾಗೇ ಹೋತು. ಅರಿಸಿನ ಎರಚಿದ್ದೇ ಎರಚಿದ್ದು. ಸುಬ್ಬಿ ಸದ್ಯ ನಾನು ಬದುಕೊಂಡೆ ಅಂತು. ಯಾಕವ್ವಾ. ದೇವರು ಬಂದೈತೆ ಅಂತಾ ಬೇವಿನ ಸೊಪ್ಪು ಕಟ್ಟಿ ಮೆರವಣಿಗೆ ಮಾಡಸೋರು ನನ್ನನ್ನ ಅಂತು. ಗೌಡಪ್ಪ ಮೈಕ್ ಹಿಡಕಂಡು ಬಂದೋನೆ. ನಿಮ್ಮೆಲ್ಲರ ಮೆಚ್ಚಿನ ಆರ್ಕೆಸ್ಟ್ರಾ “ಸಿದ್ದೇಸ”, ಈಗ ಕೇಳಿ ಆಟೋ ರಾಜ ಶಂಕರ್ ನಾಗರ ಸಂತೋಷಕ್ಕೆ ಹಾಡು ಅಂದ.
ಆ ಊರ್ನಾಗೂ ಆಟೋದೋನು ಒಬ್ಬ ರಾಜ ಇದ್ನಂತೆ. ಸ್ಟೇಜಿಗೆ ಬಂದು ಮೈಕ್ ಕೊಡ್ರಿ ಅಂದ. ಯಾಕಲಾ. ಹಾಡು ಹೇಳ್ತೀನಿ. ಹೋಗಲಾ ನಾ ಹೇಳಿದ್ದು ಸಂಕರಣ್ಣನ ಬಗ್ಗೆ. ಸರೀ ಸುರುವಾತು. ಮೈಕ್ ಮಧ್ಯ ಮಧ್ಯ ಡೊಯಯಯಯಯಯಯ ಅನ್ನೋದು. ಸುಬ್ಬ ಅಂಗೇ ಹೇಳಿದ್ದೇ ಹೇಳಿದ್ದು. ನಿಂಗ ಗಿಟಾರ್ ಬಾರಿಸಿದ್ದೇ ಬಾರಿಸಿದ್ದು. ಸಾನೇ ದುಡ್ಡು ಕೊಟ್ರು ಜನ.ಅದಕ್ಕೆ  ಹೊಡೆದಾಡೋವು.
ಹಾಡು ಮುಗಿದ ಮೇಲೆ ಮೈಕ್ ಸೆಟ್ ರಾಜ ಇಲ್ಲಿ ಎರಡು ಮೀಟರ್ ವೈರ್ ಮಡಗಿದ್ದೆ ಕಾಣಿಸ್ತಾ ಇಲ್ಲಾ ಅಂದ. ನೋಡಿದ್ರೆ ನಿಂಗ ಗಿಟಾರ್್ಗೆ ಚಕ್ಕೆ ತಗೊಂಡು ಬಾರಸವ್ನೆ. ತಂತಿ ಕಟ್ಟಾಗಿದ್ದಕ್ಕೆ. ರಾಜ ತಂದಿರೋ ಎರಡು ಮೀಟರ್ ವೈರನ ಇನ್ಸುಲೇಸನ್ ತೆಗೆದು ತಾಮ್ರದ ತಂತಿನ ಗಿಟಾರ್ ಗೆ ಹಾಕಿದ್ದ. ಬಾರಿಸಿದ್ರೆ ಢಣ್ ಅನ್ನೋದು. ಮಗಾ ಡ್ರಮ್ಸ್ ಬಾರಿಸೋ ದೊನ್ನೆ ಸೀನ ಅವಾಗವಾಗ ತಲೆಗೆ ನೀರು ಹಾಕ್ಕೊಂಡು ಬರೋನು. ಯಾಕಲಾ. ಗೌಡಪ್ಪ ಹೇಳವ್ನೆ. ನೀ ಡ್ರಮ್ಸ್ ಬಾರಿಸೋ ಬೇಕಾದ್ರೆ ತಲೆ ಅಲ್ಲಾಡಿಸಿದಾಗ ನೀರು ಬಿದ್ರೆ ಪೆಸೆಲ್ ಎಫೆಕ್ಟ್ ಆಯ್ತದೆ ಅಂತಾ. ಏ ಥೂ ಅಂದೆ. ಒಂದು ಹತ್ತು ಹಾಡು ಆಗೋ ಅಷ್ಟೊತ್ತಿಗೆ ಸೀನ ಯಾಕೋ ಮೈಯೆಲ್ಲಾ ಬಿಸಿ ಆಯ್ತದೆ ಅಂದಾ ನೋಡಿದ್ರೆ ಜ್ವರ ಬಂದಿತ್ತು. ನಿಂಗ ಚಾ ಕುಡಿಯೋಕ್ಕೆ ಅಂತಾ ಹೋದೋನು ಬಂದೇ ಇರ್ಲಿಲ್ಲ. ನೋಡಿದ್ರೆ ಯಾವುದೋ ಇಸ್ಕೂಲಿನ ಡ್ರೆಸ್ ನಮ್ಮ ಬಣ್ಣದ್ದೇ ಅಂತೆ. ಯಾಕೋ ಇವತ್ತು ಸಾಲೆಗೆ ಬಂದಿಲ್ಲಾ ಅಂತಾ ಹೆಡ್ ಮಾಸಟರು ಸರೀ 4ಬಾರಿಸಿದಾರೆ. ಆಮ್ಯಾಕೆ ಗೌಡಪ್ಪ ಏ ಇವನು ನಮ್ಮೋನು ಅಂದ್ ಮೇಲೆ ಬಿಟ್ಟು ಕಳಿಸಿದಾರೆ.
ಮೈಕ್ ರಾಜಂಗೆ ಸ್ಪೀಕರ್ ಬಾಕ್ಸ್ ಇಡಲೇ ಅಂದ್ರೆ. ಒಂದು ಹತ್ತು ಹಾರ್ನ್ ಕಟ್ಟಿದ್ದ. ಅದು ಒಳ್ಳೇ ಬೆಳಗ್ಗೆ ಹೊತ್ತು ಸಿದ್ದೇಸನ ಗುಡೀಲಿ ಭಕ್ತಿ ಗೀತೆ ಹಾಕಿದಂಗೆ ಕೇಳೋದು.
ಈಗ ಮಿನಿ ವಾಣಿ ಜಯರಾಂ ಸುಬ್ಬಿ ಅವರಿಂದ ಸಂದಾದ ಹಾಡು. ಲೇ ಪಿಚ್ಚರ್ ಹೆಸರು ಹೇಳಲೇ ಅಂದ್ವು ಗೌಡಪ್ಪಂಗೆ. ಜೀವನ ಚೈತ್ರ ಅಂದ. ಸರೀ ಸುಬ್ಬಿ ಸುರು ಹಚ್ಕಂತು. “ನೀ ಹಿಂಗೆ ನೋಡಬೇಡ ನನ್ನ, ನೀ ಹಿಂಗ ನೋಡಿದರೆ ನನ್ನ, ತಿರುಗಿ ನಾ ಹಿಂಗೆ ನೋಡುತೀನಿ ನಿನ್ನ” ಅಂತಾ ತಿರುಗಿ ನಿಂತ್ಕಂತು. ಏ ಥು. ಇದಕ್ಕೆ ಗೌಡಪ್ಪನ ಹೆಂಡರು ಕೋರಸ್ “ಆಆಆಆಆಆಆ ಊಊಊಊಊ” ಅಂತಾ. ಏ ಥೂ . ಇದೇನು ಸತ್ತಿರೋ ಮನೇನಾ ಅಂದಾ ಗೌಡಪ್ಪ. ತಂಬಿಟ್ಟು ರಾಮ ಕೀ ಪ್ಯಾಡ್ ನುಡಿಸ್ತಾ ಇದ್ದ. ಅವಾಗವಾಗ ಬಗ್ಗಿ ಏನೋ ಹುಡುಕೋನು. ಏನಲಾ. ಲೇ ಇದರಾಗೆ ಇದ್ದ ಬಟನ್ ಲೂಸ್ ಆಗಿ ಬಿದ್ದು ಹೋಗ್ಬಿಟ್ಟೈತೆ ಅಂದಾ. ಸರೀ ಒಂದು ಚಕ್ಕೆ ಕೊಟ್ವಿ ಅದರಾಗೆ ಒತ್ತು ಅಂತ. ಇನ್ನು ಸೀನ ಡ್ರಮ್ಸ್ ಬಾರಿಸೋಬೇಕಾದ್ರೆ ಕೋಲು ತಿರುಗಿಸಕ್ಕೆ ಹೋಗಿ ಒಂದು ಕೋಲು ಜನರ ಮಧ್ಯೆ ಬಿದ್ದೋತು. ಅವು ಚಾಟಿ ಮಾಡಕ್ಕೆ ಸಂದಾಗೈತೆ ಅಂತಾ ಹಂಗೇ ಮಡಿಕ್ಕಂಡಿದ್ವು. ಕಡೆಗೆ ಮುದ್ದೆ ಮಾಡೋ ಕೋಲು ತರಿಸಿಕೊಟ್ಟಿದ್ದಾತು. ಸೀನ ಡ್ರಮ್ಸ್ ಸವಂಡ್ ಕಮ್ಮಿ ಆಗೈತೆ ಅಂದಾ. ಅಂಗಂತಿದ್ದಂಗೆನೇ ಕಿಸ್ನ ಹುಲ್ಲು ಹಾಕಿ ಕಾಯಿಸಿ ಈಗ ಹೊಡೆಯಲಾ ಅಂದ. ಹೊಡೆದ್ರೆ ಹೆಣದ ಮೆರವಣಿಗೆ ಸವಂಡ್ ಬರೋದು. ಲೇ ಇದು ಕುಲದಲ್ಲಿ ಕೀಳ್ಯಾವುದೋ ಇದಕ್ಕೆ ಮಾತ್ರ ಹೊಂದ್ಕಂತದೆ ಕಲಾ ಅಂದ. ಪಟೇಲ ಲೇ ಗೌಡ ನಿನ್ನ ಹೆಂಡರ ಹತ್ರ ಡ್ಯಾನ್ಸ್ ಮಾಡ್ಸಲೇ ಅಂದ. ಅನಿವಾರ್ಯ, ಜೋಕೆ ಜೋಕೆ ನಾನು ಬಳ್ಳಿಯ ಮಿಂಚು ಅಂತಾ ಸುರು ಹಚ್ಕಂಡ್ವು. ಎಲ್ಡೇ ನಿಮಿಸ ಗೌಡಪ್ಪಂಗೆ ಯಾವನೋ ಬಂದು ದಬು,ದುಬು,ದಬು,ದುಬು ಅಂತಾ ಬಂದು ಹೊಡೆದಿದ್ದ. ಯಾರ್ರೀ ಗೌಡ್ರೆ, ಲೇ ನನ್ನ ಮಾವ ಕಲಾ ಅಂದ. ಗೌಡನ ಹೆಂಡರು ಮನೆಗೆ ಬಾ ಅಂದು ಹೋದ್ವು. ಸುಬ್ಬಿ ಹಾಡು ಹೇಳಿ ಹೇಳಿ ಬಾಯಿ ನೋಯ್ತಾ ಇದೆ ಅಂದ್ಲು. ಗೌಡಪ್ಪ ಒಂದು ಹತ್ತು ಕಟ್ಟು ಬೀಡಿ ಸೇದಿ ಕೆಮ್ತಾ ಕೂತಿದ್ದ . ಮಧ್ಯ ಚಾ ಕೊಟ್ಟಿದ್ದಕ್ಕೆ ಅವನ ದುಡ್ಡು ಲೆಸ್ ಮಾಡಿದ್ರು. ಹೊಗೆ ಕುಡಿದು ಕುಡಿದು ತಂತಿ ಪಕಡು ಸೀತು ಮೂಗು ಕಟ್ಕಂಡೈತೆ ಅನ್ನೋನು. ಸಂಜೆ 6ಕ್ಕೆ ಸುರುವಾಗಿದ್ದು, ಬೆಳಗ್ಗೆ 5ಆದ್ರೂ ಜನ ಅಂಗೇ ಕುಂತಿದ್ವು. ಲೇ ನಾವೇನೂ ಯಕ್ಸಗಾನ ಮಾಡ್ತೀದೀವೇನ್ಲಾ ಅಂದಾ ಸುಬ್ಬ.
ನೋಡಿದ್ರೆ ಯಲ್ಲಮನ ಜಾತ್ರಾಗೆ ಜಾಗರಣೆ ಮಾಡಿದ್ರೆ ಪುಣ್ಯ ಬತ್ತದೆ ಅಂತಾ ಜನ ಅಂಗೇ ಕೂತಿದ್ವು. ಕಿಸ್ನ ಡ್ಯಾನ್ಸ ಮಾಡಿ ಮಾಡಿ ಸ್ಟೇಜ್ ಕೆಳಗೆ ಕಿಸ್ಕಂಡಿದ್ದ. ನಾವು ಪ್ರಾಕಟ್ಈಸ್ ಮಾಡಿದ್ದು ಎಲ್ಲಾ ಹಾಡು ಹೇಳಿ. ಸಿದ್ದೇಸನ ಹಾಡು, ಯಲ್ಲಮ್ಮನ ಹಾಡು ಎಲ್ಲಾ ಹೇಳಿ ಸಾಕಾಗಿ ಹೋಗಿದ್ವಿ. ಬೆಳಕು ಹರಿತು ಎಲ್ಲಾ ಪ್ಯಾಕ್ ಮಾಡಿಕಂಡು ಊರಿಗೆ ಹೊಂಟ್ವಿ. ಪಟೇಲ ಜನನ್ನ ಏಣಿಸಿ 14ರೂಪಾಯಿ ಚಾ ಗೆ ಅಂತಾ ಕೊಟ್ಟ.
ನಮ್ಮೂರ್ನಾಗೆ ಗಣಪತಿ ಮಡಗಿದೀವಿ ನೀವೇ ಬರಬೇಕು ಆರ್ಕೆಸ್ಟ್ರಕ್ಕೆ ಅಂದ ಪಕ್ಕದೂರು ಸಿದ್ದ. ಕಾಸು ಎಷ್ಟು ಕೊತ್ತಿಯಲಾ.      ಬೈ ಟು ಚಾ ಜೊತೆಗೆ ತಿಂಡಿ ಕೊತ್ತೀನಿ ಅಂಗೇ ಒಂದು ಪಾಕೇಟ್ ಸಾರಾಯಿ ಅಂದಾ. ಗೌಡಪ್ಪ ನಮ್ಮನೇನು ಬಸ್ಟಾಂಡ್ ನಾಗೆ ಆಡೋ ಬಯಲುನಾಟಕದೋರು ಅಂದ್ಕಂಡೇನ್ಲಾ ಅಂದು ಹೊಡೆಯಕ್ಕೆ ಹೊಂಟ. ಸುಬ್ಬಿ ಯಾರಿಗಾದ್ರೂ ಬಯ್ಯಿರಿ ಬಯಲುನಾಟಕ ಬಯ್ಯಬೇಡಿ ಅಂತು. ಈಗ ನಮ್ಮೂರನಾಗೆ ಮಾತ್ರ ಆರ್ಕೆಸ್ಟ್ರಾ. ಮುಗಿಯೋ ಹೊತ್ತಿಗೆ ನಾವು ಮಾತ್ರ ಇತ್ತೀವಿ. ಅಂಗೈತೆ ನಮ್ಮ ಸ್ಟೈಲು.

ಕೋಮಲ್ ಕಾಲಂ: ಗೌಡಪ್ಪ ವೀಕ್ ಆಗವ್ನೆ

31 ಆಗಸ್ಟ್

ಕೆರೆ ತಾವದಿಂದ ಬತ್ತಾ ಇದ್ದೆ, ಅಟ್ಟೊತ್ತಿಗೆ ಗೌಡಪ್ಪ ತಲೆ ಮೇಲೆ ಕುಲಾವಿ, ಸ್ವಟರ್ ಹಾಕ್ಕೊಂಡ್ ಓಡ್ತಾ ಹಳ್ಳಿ ಕಡೇ ಬತ್ತಾ ಇದ್ದ. ಯಾಕ್ರೀ ಗೌಡರೆ ಜಾಗಿಂಗ್ ಮಾಡ್ತಾ ಇದೀರಲಾ ಅಂದೆ. ನೋಡಲಾ ಮೊನ್ನೆ ಡಾಕಟರು ತಾವ ಹೋಗಿದ್ದೆ ಸಾನೇ ದಪ್ಪಾ ಇದೆಯಾ ಸುಗರ್ 400ಪಾಯಿಂಟ್ ಆಯ್ತದೆ. ತೆಳ್ಳಗೆ ಆಗು ಅಂದ್ಯಾರೆ ಅದಕ್ಕೆ ಬಾಡಿ ಇಳಿಸ್ತಾ ಇದೀನಿ ಕಲಾ. ಅಂಗೇ ಇನ್ಸುಲೇಸನ್ ಸ್ಟಾಪ್ ಮಾಡೀವ್ನಿ. ನೋಡಲಾ ಮೈನಾಗೆ ಇರೋ ತೂತೆಲ್ಲಾ ಮುಚ್ಚೈತೆ ಅಂದ. ಸರಿ ಕೈನಾಗೆ ಚೊಂಬು ಯಾಕೆ ಅಂದೆ. ನೋಡಲಾ ಎಲ್ಲಿ ಕೂರಬೇಕು ಅನ್ನಿಸ್ತದೋ ಅಲ್ಲೇ ಕೂರ್ತೀನಿ ಅದಕ್ಕೆ ಕಲಾ ಅಂದ ಗೌಡಪ್ಪ. ಮತ್ತೆ ವಾಸನೆ ಹೋಗೋದಿಕ್ಕೆ ಯಾವುದು ಔಷಧಿ ಹೇಳಿಲ್ವಾ ಅಂದೆ. ಹೋಗಲಾ ತಲೆ ತಿನ್ನಬೇಡ ಅಂದ. ಮಗಂದು ಬೆವರು ವಾಸನೆ ಅಂಗೇ ಗಮ್ ಅಂತಾ ಮೂಗಿಗೇ ಹೊಡೆಯೋದು. ಸರಿ ಬುಡಿ,  ನಂಗೆ ಸಾನೇ ಅರ್ಜೆಂಟ್ ಆಗೈತೆ ಆಮ್ಯಾಕೆ ಸಿಕ್ತೀನಿ ಅಂದು ಹೊಂಟು ಸ್ವಲ್ಪ ಹೊತ್ತಿಗೇನೆ ಧಪ್ ಅಂತಾ ಸವಂಡ್ ಬಂತು. ಏನು ಅಂತಾ ನೋಡಿದ್ರೆ ಗೌಡಪ್ಪ ಸಗಣಿ ಮ್ಯಾಕೆ ಕಾಲಿಟ್ಟು ಕಿಸ್ಕಂಡಿದ್ದ. ಎಬ್ಬಿಸಿ ಮತ್ತೆ ಜಾಗಿಂಗ್ ಪ್ರೋಸೆಸ್ ಸುರು ಮಾಡಿಸ್ದೆ.

ಬೆಳಗ್ಗೆ ಗೌಡಪ್ಪನ ಮನೆಗೆ ಹೋದ್ರೆ, ನಮ್ಮ ಹಳಸೋದ ಫಲಾವು ವಾಸನೆಯ ಗೌಡಪ್ಪ ಪೇಪರ್ ಓದ್ತಾ ಇದ್ದ. ಗೌಡ್ರೆ ಅಂತೂ ನೀವು ಪೇಪರ್ ಓದೋ ಹಂಗೆ ಆದ್ರಲಾ ಅದೇ ಖುಸಿ. ಕರವೇಯಕ್ಕೆ ಹೇಳ್ಬೇಕು ಅಂದೆ. ಮಗಂದು ಯಾವುದೋ ಸಾಮಾನು ಕಟ್ಟಿಸ್ಕಂಡ್ ಬಂದ್ ಪೇಪರ್ ಓದ್ತಾ ಇದ್ದ. ಅದೂ ದೇವೆಗೌಡರು ಪ್ರಧಾನ ಮಂತ್ರಿಯಾಗಿದ್ದು ಕಾಲ. ಏ ಥೂ. ಮನೇಲ್ಲಿ ತಕ್ಕಡಿ ಇತ್ತು. ಇದೇನು ಗೌಡಪ್ಪ ಏನಾದರೂ ಸೊಪ್ಪು ವ್ಯಾಪಾರ ಸುರುಹಚ್ಕಂಡನಾ ಅಂತಾ ಅನ್ಕೊಂತ್ತಿದ್ದಾಗೆನೇ, ಗೌಡಪ್ಪನ ಹೆಂಡರು 100ಗ್ರಾಂ ಕಲ್ಲು ಇಟ್ಟು ಹಿಂದಿನ ದಿನದ ಅನ್ನ ತೂಕ ಮಾಡಿದ್ಲು. ಹಂಗೇ 50ಗ್ರಾಂ ಕಲ್ಲು ಇಟ್ಟು ಸಾರು ತೂಕ ಮಾಡಿದ್ಲು. 25ಗ್ರಾಂ ಇಟ್ಟು ಮುದ್ದೆ ತೂಕ ಮಾಡಿದ್ಲು. ನೋಡವ್ವ ಸರಿಯಾಗೈತಾ ತೂಕ ಅಂದಾ ಗೌಡಪ್ಪ. ಹೂಂ ಸರಿ ಐತೆ ರೀ ಅಂತು. ಒಂದು ಗ್ರಾಂ ಜಾಸ್ತಿ ಆಗಬಾರದು ಅಂದ ಗೌಡಪ್ಪ. ಗೌಡ್ರೆ ಏನ್ರೀ ಇದು ಅಂದೆ. ನೋಡಲಾ ಡಾಕಟರು ಹೇಳವ್ರೆ ಎಲ್ಲಾನೂ ತೂಕದ ಲೆಕ್ಕದಾಗೆ ತಿನ್ನು ಹಂಗಾದ್ರೆ ಮಾತ್ರ ಸರಿ ಆಯ್ತೀಯಾ ಅಂದವ್ರೆ ಅದಕ್ಕೆ ಕಲಾ ತಕ್ಕಡಿ ತಂದೀವ್ನಿ ಅಂದ. ಮಗಾ ಅದಕ್ಕೆ 50ರೂಪಾಯಿ ಕೊಟ್ಟು ಸರ್ಕಾರದ ಸೀಲ್ ಬೇರೆ ಹಾಕ್ಸಿದ್ದ ಬಡ್ಡೀ ಮಗ. ಅದ್ರಾಗೆ 20ಗ್ರಾಂ ಬಟ್ಟು ಕಳೆದು ಹೋಗಿತ್ತು ಅಂತಾ ಗೌಡನ ಹೆಂಡರು ಮಂಚದ ಕೆಳಗೆ  ಗೌಡಪ್ಪನ ಪಂಚೆ ಎತ್ತಿ ಹುಡುಕ್ತಾ ಇದ್ಲು. ಏ ಥೂ.

ಸರಿ ಗೌಡಪ್ಪನ ಹೆಂಡರು ಮಟನ್ ತಂದು 10ಗ್ರಾಂ ಬಟ್ಟು ಇಟ್ಟು ತೂಕ ಮಾಡಿದ್ಲು. 5ಗ್ರಾಂ ಜಾಸ್ತಿ ಬಂತು ಅದನ್ನ ಚಾಕೂನಾಗೆ ಕಟ್ ಮಾಡಿ ನಾಯಿಗೆ ಹಾಕಿದರೆ, ಮುಂಡೇದು ತಿನ್ಲಿಲ್ಲಾ ಹಂಗೇ ಹೋತು. ಗೌಡರೆ ನಾಳೆ ಮಟನ್ ಊಟ ಆಹಾ ಅಂದೆ. ಒಂದು ಹಲ್ಲಿಗೂ ಸಾಕಾಗಕಿಲ್ಲಾ, ಆದ್ರೂ ಏನ್ಲಾ ಮಾಡೋದು. ಮೂರು ಹೆಂಡರನ್ನ ಸಾಕುಬೇಕು ಕನ್ಲಾ ಅಂದ. ಮೂರನೇ ಹೆಂಡರು ಯಾರ್ರೀ ಗೌಡ್ರೆ ಅಂದೆ. ಅದೇ ಕಲಾ ನಮ್ಮ ಪೂಜಾರಪ್ಪನ ತಂಗಿ ಕಲಾ.ಅಯ್ಯೋ ನಿನ್ ಮುಖಕ್ಕೆ ನಿಂಗನ ಅಂಗಡಿ ಚಾ ಚಲ್ಟಾ ಹುಯ್ಯಾ ಅವಳನ್ನೂ ಬಿಡಲಿಲ್ವಾ ಅಂದೆ. ಅವನ ಹತ್ರ ಹೋಗ್ರೀ ಮಗಾ ಮಾಟ ಮಾಡಿಸಿ ನಿಮ್ಮ ಕಣ್ಣು ತೆಗಿಸ್ತಾವ್ನೆ ಅಂದೆ. ಹಂಗಾರೆ ಬೇಡ ಬುಡ್ಲಾ ಅಂದ. ಮಗಾ ಯಾವಾಗಲೂ ತಲೆ ಬುರುಡೆ ಹಿಡ್ಕಂಡು ರಾತ್ರಿ ಮಸಾನ ತಾವ ಹೋಯ್ತಾ ಇದ್ದಾಗೆ ಡೌಟ್ ಇತ್ತು . ಮಗಾ ಅಘೋರಿ ಇದ್ದಂಗೆ ಅವನೆ ಕಲಾ ಅಂದ. ಅವನ ತಂಗಿ ಲೇಡಿ ಅಘೋರಿ ಇರಬೇಕು ಅಂದ. ನಿಮ್ಮನ್ನೂ ಮಸಾಣ ಕಾಯಕ್ಕೆ ವೀರಬಾಹು ತರಾ ಕಂಬಳ್ಯಾಗೆ ಅಂಗೇ ಒಂದು ಹೋಂ ಗಾರ್ಡ್ ಕೋಲು ಕೊಟ್ಟು ಬಿಡ್ತಾನೆ ಅಂದೆ.

ಸರಿ ನಮ್ಮ ಎಂದಿನ ಅಡ್ಡೆ ನಿಂಗನ ಚಾ ಅಂಗಡಿ ಅಡ್ಡೇ ತಾವ ಸೇರಿದ್ವಿ. ಗೌಡಪ್ಪ ಅರ್ಧ ಚಾ ಕುಡಿದು. ಸಲ್ಟು ತೆಗೆದು ಚೆಡ್ಯಾಗೆ ಪೋಸು ಕೊಟ್ಟ. ಅವನ ಕೈನಾಗೆ ಇರೋ ಬೈಸೆಪ್ಸ್ ನೋಡಿ ದೊನ್ನೆ ಸೀನ ಅಬ್ಬಬ್ಬಾ ಅಂದ. ಅಂಗೇ ಗೌಡಪ್ಪ 50ಡಿಪ್ಸ್ ಹೊಡೆದು ಆ ಕಡೆ ಹೋಗಿ ವಾಂತಿ ಮಾಡಿ ಬಂದ. ಯಾಕ್ರೀ ಗೌಡ್ರೆ, ನೀರು ಕೊಡಲಾ ನಿಂಗ ಅಂದ. ಈಗ ತಾನೆ ಊಟ ಮಾಡಿದ್ದೆ ಕಲಾ ಅದಕ್ಕೆ ಆಮ್ಲೇಟ್ ಹಾಕ್ದೆ. ಏ ಥೂ. ಸರೀ ಗೌಡಪ್ಪನ ಬಾಡಿ ಒಂದು ತರಾ ಮೂಲಂಗಿ ಆದಂಗೆ ಆಗಿತ್ತು, ಹೊಟ್ಟೆ ದಪ್ಪ. ಕೈ ಕಾಲು ಸಣ್ಣ. ಮಗಾ ಹಿರಣ್ಣಯ್ಯ ಕಟ್ಟಿದಂಗೆ ಚೆಡ್ಡಿ ಕಟ್ಟೋನು.

ಅದೇ ಸಮಯಕ್ಕೆ ನಮ್ಮೂರ್ನಾಗೆ ಬಾಡಿ ಬಿಲ್ಡಿಂಗ್ ಸ್ಪರ್ಧೆ ಇತ್ತು. ನೋಡಿದ್ರೆ ಗೌಡಪ್ಪನೂ ಹೆಸರೂ ಕೊಟ್ಟವ್ನೆ. ಸರೀ ಸುರವಾತು. ನಮ್ಮ ತಂಬೂರಿ ಬಂದೋನೆ ಒಂದು 50ಕೆಜಿ ಅಕ್ಕಿ ಎತ್ತಿದ. ತಂತಿ ಪಕಡು ಸೀತು ಬಂದು ಒಂದು 100ಕೆಜಿ ಎತ್ತಿದ್ದ. ಸತ್ಯನಾರಾಯಣ ಪೂಜೆ ಪ್ರಸಾದ ಪ್ರಭಾವ. ಇದೀಗ ನಮ್ಮೂರ ಫೇಮಸ್ ಹಳಸೋದು ಫಲಾವು ವಾಸನೆಯ ಗೌಡಪ್ಪನವರು 150ಕೆಜಿ ಅಕ್ಕಿ ಎತ್ತುತ್ತಿದ್ದಾರೆ ಚಪ್ಪಾಳೆ. ಗೌಡ ಬಂದೋನೆ ಒಂದು ನಾಕು ಸಾಮು ಹೊಡೆದು ಎತ್ತಿ ಇಟ್ಟ. ಕಡೆಗೆ ಗೌಡಪ್ಪಂಗೆ ಪ್ರೈಸ್ ಕೊಟ್ವಿ. ಅದೂ ಪ್ರಾಥಮಿಕ ಸಾಲೇಯಲ್ಲಿ ಮಕ್ಕಳು ಗೆದ್ದಿರೋ ತುಕ್ಕು ಹಿಡಿದ ಕಬಡ್ಡಿ ಸೀಲ್ಡು.

ಬೆಳಗ್ಗೆ ಹೋದ್ರೆ ಗೌಡಪ್ಪನ ಬಲಗೈಗೆ ಬ್ಯಾಂಡೇಜ್ ಇತ್ತು. ಯಾಕ್ರೀ ಗೌಡ್ರೆ. ಬಲಗೈ ಡಿಸ್ ಲೊಕೇಟ್ ಆಗೈತೆ ಅಂದಾ. ಯಾಕ್ರೀ, ಮಗಂದು ಈರುಳ್ಳಿ ಚೀಲ ಜಾರತು ಕಲಾ ಅಂದ. ಅಂಗೇ ಭಟ್ಟಿ ಜಾರೈತೆ ಅಂತಾ ಒಂದು ಹತ್ತು ಕಿತಾ ಕೆರೆತಾವ ಹೋಗಿದ್ನಂತೆ. ದೊಡ್ಡ ಕರುಳು ಸಣ್ಣ ಕರುಳು ಹೋಗೈತೆ ಅಂದ. ಬೆಳಗ್ಗೆಯಿಂದ ತುಂಬಿಸಿದ್ದ ನೀರಿನ ಡ್ರಮ್ ಖಾಲಿಯಾಗಿತ್ತು. ನಿನ್ನ ಬಾಡಿಗೆ ಒಂದಿಷ್ಟು ಬೆಂಕಿ ಹಾಕ. ನೀರು ನೀನೇ ತೆಗೆದುಕೊಂಡು ಬಾ ಅಂತಾ ಗೌಡಪ್ಪನ ಹೆಂಡರು ಬಯ್ತಾ ಇದ್ಲು. ಗೌಡ್ರೆ ಏನ್ರೀ ನಿಮ್ಗೂ 6ಪ್ಯಾಕ್ ಬಂದೈತೆ ಅಂದೆ. ಲೇ ಅದು 6ಪ್ಯಾಕ್ ಅಲ್ಲ ಕಲಾ ಬೆನ್ನಿನ ಮೂಳೆ ಮುಂದೆ ಬಂದಿದೆ ಕಲಾ ಅಂದ. ಸರಿ ಅದೇ ಸಮಯಕ್ಕೆ ಕಟ್ಟಿಗೆ ಒಡೆಯೋ ಕಿಸ್ನ ಬಂದು ಗೌಡಪ್ಪನ ಪಕ್ಕ ಕೂತ. ಲೇ ಕಿಸ್ನ ನಿಮ್ಮಣ್ಣ ಯಾವಾಗ ಬಂದ್ ನಲಾ ಅಂದಾ ಸುಬ್ಬ. ಲೇ ನಮ್ಮ ಅಣ್ಣ ಅಲ್ಲ ಕಲಾ ಗೌಡಪ್ಪ ಕನ್ಲಾ ಅಂದ ಕಿಸ್ನ. ಗೌಡಪ್ಪ ಒಂದು ತರಾ ಕಟ್ಟಿಗೆ ಒಡೆಯೋರು ತರಾನೇ ಆಗಿದ್ದ. ಈಗ ಡಾಕಟರು ಹೇಳವ್ರಂತೆ ಇನ್ನೂ ವೀಕ್ ಆದ್ರೆ ನಿಮಗೆ ಡ್ರಿಪ್ಸ್ ಹಾಕಬೇಕು ಅಂತಾ. ಮಗಾ ಗೌಡಪ್ಪ ನಾಯಿ ಹೊಡಿಯೋ ಕೋಲು ಆದಂಗೆ ಆಗವ್ನೆ. ಹೆಂಡರು ಪಕ್ಕ ಹೋದರೆ ಮಗ ಕಂಡಂಗೆ ಕಾಣ್ತವ್ನೆ. ತಕ್ಕಡಿನಾ ಸಗಣಿ ತೂಗಕ್ಕೆ ಕೊಟ್ಟಿಗ್ಯಾಗೆ  ಹಾಕವ್ನೆ. ಜಾಗಿಂಗ್ ಅಂದ್ರೆ ಬೇಡ ಕಲಾ ದಪ್ಪ ಆಗಬೇಕು ಅಂತಾನೆ. ದಿನಾ ಒಂದು ಕೆಜಿ ಮಟನ್ ಅಂಗೇ ಒಂದು 5ಲೀ ಹಾಲು. ಗ್ಯಾಸ್ ಬೇರೆ. ಕೊಬ್ಬಿದ ಕುರಿ ಆದಂಗೆ ಆಗ್ತೀನಿ ನೋಡ್ರಲಾ ಅಂತಾನೆ ಬಡ್ಡೇ ಹತ್ತದ್ದು.

ಚಟಕ್ಕೆ ಹೊಸ ಚಟ – ಬಿಡುಗಡೆಗೆ ಒಂದು ದಾರಿ

23 ಆಗಸ್ಟ್

ರೀ ಗೌಡ್ರೆ, ಅದೇನ್ರೀ ಯಾವಾಗಲೂ ಸಿಗರೇಟು ಸೇದ್ತಾ ಇರ್ತೀರಿ. ಅತ್ಲಾಗೆ ಬಿಡಬಾರದಾ ಅಂದಾ ಸುಬ್ಬ. ನಾನು ಬಿಡಬೇಕು ಅಂತಾ ಸಾನೇ ದಿನದಿಂದ ಯೋಸನೆ ಮಾಡ್ತಾ ಇದೀನಿ. ಏನ್ಲಾ ಮಾಡಬೇಕು ಅಂದಾ ಗೌಡಪ್ಪ. ನೋಡ್ರೀ ಇದನ್ನ ಬಿಡಬೇಕು ಅಂದ್ರೆ ಗುಟ್ಕಾ ಹಾಕಕ್ಕೆ ಸುರು ಮಾಡ್ರಿ. ಅದು ನಿಮಗೆ ಆಗಕ್ಕಿಲ್ಲಾ ಆಮ್ಯಾಕೆ ಆಟೋ ಮ್ಯಾಟಿಕ್ ಆಗಿ ಬಿಡ್ತೀರಾ. ಸರಿ ಕನ್ಲಾ ನಾಳೆಯಿಂದ ಹಂಗೇ ಮಾತ್ತೀನಿ ಕಲಾ ಅಂದ ಗೌಡಪ್ಪ ಚಾ ಕುಡಿದು ಮತ್ತೆ ಸಿಗರೇಟು ಹಚ್ಕಂಡ.

ಸರಿ ಮಾರನೆ ದಿನಾ ಗೌಡಪ್ಪ ಅಗಿತಾ ಉಕ್ಕಂತ ಬರ್ತಾ ಇದ್ದ. ನೋಡ್ಲಾ ಸುಬ್ಬ, ಹೆಂಗೆ ನಾವು. ಬಿಡಬೇಕು ಅಂದ್ರೆ ಆಟೆಯಾ ಬಿಟ್ಟೇ ಬಿಡ್ತೀವಿ ಅಂದಾ. ಜೋಬ್ನಾಗೆ ನೋಡಿದ್ರೆ ಒಂದು 20 ಪ್ಯಾಕೆಟ್ ಮಣಿಕ್ ಚಂದ್ ಗುಟ್ಕಾ ಇತ್ತು. ಸಲ್ಟು ಮೇಲೆ ಎಲ್ಲಾ ಉಕ್ಕಂಡಿದ್ದ. ಬಾಯಿ ಪಕ್ಕದಾಗೆ ಜೊಲ್ಲು. ಅದನ್ನ ಟವಲ್ ನಾಗೆ ಒರೆಸಿಕೊಳ್ಳೋನು. ಒಂತರಾ ಹುಚ್ಚ ಪಿಚ್ಚರ್ ಸುದೀಪ್ ಆದಂಗೆ ಆಗಿದ್ದ. ಅವರ ಮನೆ ಮುದುಕಿ ಊಟ ಆದ್ ಮ್ಯಾಕೆ ಅಡಿಕೆ ಸಿಗಲಿಲ್ಲಾ ಅಂತಾ ಎಲೆ ಜೊತೆ ಗುಟ್ಕಾ ಹಾಕ್ಕೊಂಡು ವಾಂತಿ ಮಾಡ್ಕಂಡು ವರಂಡಾದಾಗೆ ಬಿದ್ದಿತ್ತಂತೆ. ಅದಕ್ಕೆ ಈಗ ಗೌಡ ಹಂಚಿನ ಸಂದಿ ಗುಟ್ಕಾ ಪ್ಯಾಕೆಟ್ ಮಡಗ್ತಾನೆ. ರಾಮಾಯಣದಾಗೆ ರಾಮ ದಾರಿಗೋಸ್ಕರ ಕಲ್ಲು ಎಸಿದ್ದನ್ನು ಹೇಗೆ ಮಂಗಗಳು ಫಾಲೋ ಮಾಡಿದ್ವೋ ಅಂಗೇ ರಸ್ತೇಲಿ ಕೆಂಪಗೆ ಇನ್ನೂ ಹಸಿ ಐತೆ ಅಂದ್ರೆ ಗೌಡಪ್ಪ ಇಲ್ಲೇ ಎಲ್ಲೋ ಅವನೆ ಅಂತಾ ಮಾತು. ಗಟ್ಟಿ ಪದಾರ್ಥ ಏನೂ ತಿನ್ನಲ್ಲ ಗೌಡಪ್ಪ. ಯಾಕೇಂದ್ರ ದವಡೆ ಸವದೈತೆ ಅಂತಾನೆ. ಸರಿ ನಿಂಗನ ಅಂಗಡಿಗೆ ಬಂದ ಚಾ ಕುಡಿದು ಮತ್ತೆ ಸಿಗರೇಟು ಹಚ್ಕಂಡ. ಏನ್ರೀ ಗೌಡ್ರೆ ಮತ್ತೆ ಸಿಗರೇಟು. ಚಾ ಕುಡಿಯೋ ಬೇಕಾದ್ರೆ ಮಾತ್ರ ಕಲಾ ಅಂದ. ಲೇ ಸುಬ್ಬ ಗುಟ್ಕಾನು ಸಾನೇ ಜಾಸ್ತಿ ಆಗ್ಬಿಟೈತೆ ಬಿಡಕ್ಕೆ ಏನ್ಲಾ ಮಾಡಬೇಕು. ಗೌಡ್ರೆ ಒಂದು ಕೆಲಸ ಮಾಡ್ರಿ ನಸ್ಯ ಹಾಕಿರಿ ಎಲ್ಲಾ ಬಿಟ್ಟು ಹೋಯ್ತದೆ ಅಂದಾ.

ಗೌಡಪ್ಪ ತಕ್ಷಣನೇ ಒಂದು ನಸ್ಯದ ಡಬ್ಬಿ ತಗೊಂಡು ಅದೂ ಸುರು ಹಚ್ಕಂಡ. ಕಂಡ ಕಂಡೆ ಹಾಕೋನು ಹಂಗೇ ಎದುರೆಗಡೆ ಇದ್ದ ಮುಖದ ಮ್ಯಾಕೆ ಆಕ್ಷಿ ಅನ್ನೋನು. ಮಗಂದು ಬಾಯ್ನಾಗೆ ಇರೋದೆಲ್ಲಾ ಎದುರುಗಿದ್ದೋರು ಮುಖದ ಮ್ಯಾಕೆ. ಇವನು ” ಆ ” ಅಂತಾ ಬಾಯ್ತಗಿದರೆ ಸಾಕು ಎಲ್ಲಾವೂ ಅಡಕಂತಾವೆ. ಓಡ್ರಲಾ. ಮಗಂದು ಟವಲ್ ಪಂಚೆ ಎಲ್ಲಾ ನಸ್ಯ ವಾಸನೆ. ಭೂಪತಿ ನಸ್ಯ ಅಂತೆ ಇವನ ಪಿಂಡ, ಇವನಿಗೆ ಇದನ್ನ ಹೇಳುಕೊಟ್ಟೋರು ಸಿಗಲಿ ಮಾರಿ ಹಬ್ಬ ಮಾತ್ತೀನಿ ಅಂತಿದ್ಲು ಗೌಡಪ್ಪನ ಹೆಂಡರು. ಮಗಾ ಸುಬ್ಬ ಅವರ ಮನೆಗೆ ಹೋಗೋದನ್ನೇ ಬಿಟ್ಟಿದಾನೆ. ಗೌಡಪ್ಪ ವರಾಂಡಾದಾಗೆ ಮಕ್ಕೊತಾನೆ. ಹೆಂಡರು ಗಬ್ಬು ವಾಸನೆ ಅಂತಾ ಹೊರಗೆ ಹಾಕವ್ಳಂತೆ.

ಸರಿ ಗೌಡಪ್ಪಂಗೆ ಮೂರು ಚಟನೂ ಹತ್ಕೊಂತು. ಸಿಗರೇಟು ಸೇದಿ ಸ್ವಲ್ಪ ಹೊತ್ತಿಗೇನೇ ನಸ್ಯ ಹಾಕೋನು ಅದಾಕಿ ಸ್ವಲ್ಪ ಹೊತ್ತಿಗೆ ಗುಟ್ಕಾ ಹಾಕೋನು. ಒಂದು ಸಾರಿ ವಸೂಲಿಗೇ ಅಂತಾ ಕರೆದುಕೊಂಡು ಹೋಗಿದ್ವಿ. ಬಾಯಿ ತುಂಬಾ ಗುಟ್ಕಾ. ನಸ್ಯ ಹಾಕ್ದ ನೋಡಿ. ಆಕ್ಷಿ ಅಂತಿದ್ದಾಗೆನೇ ಎದುರುಗಡೆ ಇದ್ದ ಬಿಳೀ ಪಂಚೆ ಬನೀನಲ್ಲಿ ಇದ್ದೋರು ರಾವು ಬಡದಂಗೆ ಕೆಂಪಗೆ ಆಗಿದ್ದರು. ನಿಮಗೆ ಕಾಸು ಕೊಡಕ್ಕಿಲ್ಲ ಅಂತಾ ಹೊರ ಹಾಕಿದ್ರು. ಟಾಕೀಸ್ನಾಗೆ ಕೂತ್ರೆ ಬಗ್ಗಿ ಉಗಿಯೋನು. ಪಿಚ್ಚರ್ ಬಿಟ್ ಮ್ಯಾಕೆ ತಂಬೂರಿ ತಮ್ಮಯ್ಯ ಚಪ್ಪಲಿ ಯಾಕೋ ಜಾರ್ತಾ ಐತೆ ಅಂದ. ನೋಡಿದ್ರೆ ಗೌಡಪ್ಪ ಸಾನೇ ಚಪ್ಪಲಿಗೆ ಉಗದವ್ನೆ. ಒಂದು ಸಾರಿ ಇಸ್ಮಾಯಿಲ್ ಬಸ್ನಾಗೆ ಹೋಗೋ ಬೇಕಾ್ದರೆ ಹಿಂಗೆ ಉಗಿದಿದಾನೆ. ಹಿಂದಕಡೆ ಇದ್ದ ಮುಖ ಎಲ್ಲಾ ಒಂದು ತರಾ ಸಣ್ಣ ಕುಂಕುಮ ಇಟ್ಟಂಗೆ ಆಗಿತ್ತು. ಮಗುವಿಗೆ ಸಿಡಿದೈತೆ. ಅಲರ್ಜಿ ಆಗುತ್ತೆ ಅಂತಾ ದಂಡ ಬೇರೆ ಇಸ್ಕಂಡಿದ್ರಂತೆ.

ಗೌಡಪ್ಪನ ಮನೆ ಮುಂದೆ ಒಂದು ಸಣ್ಣ ಬೀಡಾ ಅಂಗಡಿ ಆದಂಗೆ ಆಗಿತ್ತು. ಒಂದು ಕಡೆ ಗುಟ್ಕಾ ಪ್ಯಾಕೇಟ್ , ಮತ್ತೊಂದು ಕಡೆ ಸಿಗರೇಟು ತುಂಡು. ಗೌಡಪ್ಪನ ಮನೆ ಎಮ್ಮೆ ಗುಟ್ಕಾ ಪ್ಯಾಕೇಟ್ ತಿಂದು ಸಾಯೋ ಅಂಗೆ ಆಗಿತ್ತಂತೆ. ಇನ್ನೊಂದು ದಪಾ ಗುಟ್ಕಾ ಪ್ಯಾಕೇಟ್ ಕಂಡರೆ ನಾಯಿ ಹೊಡದಂಗೆ ಹೊಡಿತೀನಿ ಅಂತಾ ಹೆಂಡರು ಹೇಳಿದ ಮ್ಯಾಕೆ ಗೌಡಪ್ಪ ಪ್ಯಾಕೆಟ್ ನ್ನ ಜೋಬ್ನಾಗೆ ಮಡಿಕ್ಕಂಡು ಕೆರೆತಾವ ಹೋದಾಗ ಎಸಿತಾನೆ. ಈಗ ದಿನಕ್ಕೆ ಒಂದು ಹತ್ತು ಪ್ಯಾಕೆಟ್ ಸಿಗರೇಟು, 50 ಗುಟ್ಕಾ ಅಂಗೇ 20 ಗ್ರಾಂ ನಸ್ಯ. ಗೌಡಪ್ಪನ ಚಟ ಆಗೈತೆ.

ಚಟಕ್ಕೆ ಅಂತಾ ತಿಂಗಳಿಗೆ 2ಸಾವಿರ ರೂಪಾಯಿ ಬೇಕಂತೆ. ನಿಂಗನ ಚಾ ಅಂಗಡೀಲಿ ಎಲ್ಲಾ ಕೂತಿದ್ವಿ. ಗೌಡ್ರೆ ಇವೆಲ್ಲವನ್ನೂ ಬಿಡಬೇಕಂದ್ರೆ ಅಂತಿದ್ದಾಗೆನೇ ಗೌಡಪ್ಪ ಸುಬ್ಬಂಗೆ ಕೆರ ತಗೊಂಡು ಜ್ವರಾ ಬರೋ ತರಾ ಹೊಡೆದ. ಯಾಕ್ರೀ ಲೇ ಇವನು ಹೇಳ್ದಾ ಅಂತ ಚಟ ಜಾಸ್ತಿ ಮಾಡಿದ್ದಕ್ಕೆ ಮುಂಚೆ ಬರೀ ದಮ್ಮು, ಸುಗರ್ ಇತ್ತು. ಈಗ ಗ್ಯಾಸ್, ತಲೆ ಸುತ್ತು ಎಲ್ಲಾ ಬಂದೈತೆ ಅಂದಾ. ಒಂದು ತಿಂಗಳು ಆಸ್ಪತ್ರಾಗೆ ಇದ್ದೆ ಕಲಾ. ಇಂಜೆಕ್ಷನ್ ಚುಚ್ಚಿ ಚುಚ್ಚಿ ನನ್ನ ಮೈ ಒಂದು ತರಾ ಟಿಂಕರಿಂಗ್ ಮಾಡಿರೋ ಕಾರ್ ತರಾ ಆಗೈತೆ. ನೋಡ್ಲಾ ಗರುಡ ಇದ್ದಂಗೆ ಇದ್ದೆ. ಖಸಾಯಿ ಕಾನೆ ಹಸು ಆದಂಗೆ ಆಗೀನಿ ನೋಡ್ಲಾ ಅಂದಾ.  ಮೊನ್ನೆ ತಾನೆ ಆಸ್ಪತ್ರೆಯಿಂದ ಬಂದವ್ನೆ.ಈಗ ಗೌಡಪ್ಪ ಹೊರಗೆ ಜಾಸ್ತಿ ಬರಕ್ಕೇ ಇಲ್ಲಾ. ಎಲ್ಲಿ ಹೊಸಾ ಚಟ ಸುರುವಾಯ್ತದೋ ಅಂತಾ.

…………………………………..

ನಗಾರಿಯಲ್ಲಿ ಹೊಸ ಅಂಕಣವೊಂದು ಪ್ರಾರಂಭವಾಗಿದೆ. ಅಂಕಣಕಾರ  ಕೋಮಲ್ ರಿಗೆ ನಗಾರಿಗೆ ಸ್ವಾಗತ