ವಿಡಂಬನೆ: ಭಾಗ್ಯದೊಡನೆ ಭೇಟಿ ಅಂತಿಮ ಭಾಗ

20 ಆಗಸ್ಟ್

ಭಾರತ ಸ್ವಾತಂತ್ರ್ಯ ಗಳಿಸಿ ೬೫ ವಸಂತಗಳು ಪೂರೈಸಿವೆ. ವರ್ಷ ಅರವತ್ತೈದು ಆದ ತರುವಾಯ ವ್ಯಕ್ತಿಯನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ; ತನ್ನನ್ನು ಹೊರತುಪಡಿಸಿ! ಈ ಅರವತ್ತೈದರ ಮರುಳಿನಲ್ಲಿ ದೇಶದ ಸ್ವಾತಂತ್ರ್ಯದ ಹೊಸ್ತಿಲಲ್ಲಿ ನೆಹರೂ ವಾಚಿಸಿದ “ಭಾಗ್ಯದೊಡನೆ ಭೇಟಿ” (tryst with destiny) ನೆನಪಿಸಿಕೊಂಡು ಆ ಭಾಗ್ಯದೊಂದಿಗಿನ ಭೇಟಿಯ ಅನುಭವವನ್ನು ನಗೆ ಸಾಮ್ರಾಜ್ಯಕ್ಕೆ ಇತ್ತೀಚೆಗೆ ವೀಸಾ ಪಡೆದ ಎಸ್.ಜಿ. ಸೀತಾರಾಮ್ ಹಂಚಿಕೊಂಡಿದ್ದಾರೆ.

ಈ ವಿಡಂಬನಾ ಸರಣಿ ಮೂರು ಕಂತುಗಳಲ್ಲಿ ನಿಮ್ಮ ಮುಂದೆ ಮೂಡಿಬರಲಿದೆ. ಇದು ಸರಣಿಯ ಕಡೆಯ ಕಂತು.

– ನಗೆ ಸಾಮ್ರಾಟ್

ಮೊದಲ ಕಂತು ಇಲ್ಲಿ ಓದಿ
ಎರಡನೆಯ ಕಂತು ಇಲ್ಲಿ ಓದಿ  

ಅಂದು, ಮುಗಿಲು ಮುಚ್ಚುವ ಮಹೋನ್ನತ ಮಹಲುಗಳು; ನಾಗಾಲೋಟವನ್ನೋಡುವ ನಾಗಾಲಿಗಳು (ಚತುಶ್ಚಕ್ರಿ, ಯಂತ್ರಾಶ್ವ ಅಥವಾ ‘ಕಾರ್’); ವಾಕ್-&-ಟಾಕ್ ಸ್ವಾತಂತ್ರ್ಯವನ್ನು ಒಮ್ಮೆಲೇ ಚಿಮ್ಮಿಸುವ, ಬೈಲುಬೈಲುಗಳಲ್ಲಿ ರಿಂಗಣಗುಣಿಸುವ ಮೋಬೈಲ್‍ಗಳು; ಯುವತೆಯನ್ನು ಪಾಡಿತೂಗುವ ಐ-ಪಾಡ್‍ಗಳು ಮತ್ತು ಯಂತ್ರಮುಗ್ಧರನ್ನಾಗಿಟ್ಟುಕೊಂಡಿರುವ ತೊಡೆಪಿಡಿಗಳು (ಲ್ಯಾಪ್‍ಟಾಪ್); ಮನೆಮನೆಗಳಲ್ಲಿ ಬಗೆಬಗೆಯ ವಾಹಿನಿಗಳ ಮೂಲಕ ‘ದಿನಕ್ಕಿಪ್ಪತ್ತೈದು’ ಗಂಟೆಕಾಲ ಕಣ್ಣಿಗೆ ಚ್ಯೂಯಿಂಗ್ ಗಮ್ ಜಗಿಸಿ ಜಗಮಗಿಸುವ ಜಂಬೋ ಟಿ.ವಿ.ಗಳು; ಹೆಜ್ಜೆಗೊಂದು ಹಾದುಬರುವ ಯಾಂತ್ರಿಕ-ತಾಂತ್ರಿಕ ಸಕಲವಿದ್ಯಾಲಯಗಳು; ಅತಿತಾಂತ್ರಿಕ ರೋಗೋಪಚಾರ ರಾಜಗೃಹಗಳು; ಇಂದ್ರಲೋಕದ ಇಂದ್ರಿಯಸುಖೋಪಭೋಗವನ್ನೂ ಮಂಕಾಗಿಸುವ ಚಂದ್ರಚುಂಬಿತ, ಬಹುತಾರಾ ಹೋಟೆಲ್‍ಗಳು-ರಿಸಾರ್ಟ್‍ಗಳು; ಅತ್ಯಾಧುನಿಕಾಧ್ಯಾತ್ಮಿಕ ಆಶ್ರಮಾಂತ:ಪುರಗಳು; ಬಹುಕೀರ್ತಿತ ಬಹುರಾಷ್ಟ್ರಕ ಬೃಹದೋದ್ಯಮಗಳು; ಮಾಲೆಮಾಲೆಗಳಲ್ಲಿ ಮಾಲುಗಳನ್ನೆಸೆದು ‘ಕಮಾಲ್’ ಮಾಡುವ ಮಾಲ್‍ಗಳು; ಒಂದು ಮಹಾಪದ್ಮ (ಟ್ರಿಲಿಯನ್) ಡಾಲರ್ ಸಮಗಟ್ಟುವ ಅರ್ಥವ್ಯವಸ್ಥೆ … ಈ ‘ಮೆಗಾ’ಬೆಳವಣಿಗೆಯ ಮಹಾಮೆರವಣಿಗೆಯು ಅಂದಿನ್ನೂ ಗಾಳಿಗೋಪುರಗಳ ಗರ್ಭದಲ್ಲಿತ್ತಷ್ಟೆ.

ಇಂದು, ಸುಮಾರು ಏಳು ದಶಕಗಳ ಈ ಏಳಿಗೆಯಿಂದ ಏಮಾರಿಸಲ್ಪಡುತ್ತಿರುವವರಿಗೆ, ಮಾಳಿಗೆಯನ್ನೇರಿ ಹೋಳಿಗೆ ಮೆಲ್ಲುತ್ತಿರುವ ಪೀಳಿಗೆಯು ಕಣ್ಗೊಳಿಸುತ್ತಿದೆಯೇ ಹೊರತು, ಉಳಿದ ಜನಕೋಟಿಗಳು ಕೂಳಿಗೆ-ಕಾಳಿಗೆ-ಕೂಲಿಗೆ ಹೆಣಗಿ ಹೆಣವಾಗುತ್ತಿರುವುದು; ಉಳ್ಳವರು ಊದುತ್ತಿದ್ದಂತೆಯೇ ಊಳಿಗದವರು ಉರುಳುತ್ತಿರುವುದು, ಕಣ್ಣೆವೆಗೂ ತಾಕಿಲ್ಲ. ಆಯ್ದ ಕೆಲವು “ಮುದ್ದಿನ ಮಕ್ಕಳಿಗೆ,” ಲಕ್ಷಗಳಿಗೆ ಲಕ್ಷ್ಯವೇ ಇಲ್ಲವೆಂಬಂತೆ ಸಂಬಳ-ಸಾರಿಗೆ-ಸವಲತ್ತುಗಳನ್ನು ಎರಚಾಡಿ ಅತುಲೈಷಾರಾಮಕ್ಕೆಡೆಗೊಟ್ಟಿರುವ; ಅದೇ ಸಮಯ, ಸುಸ್ಥಾಪಿತ “ಸುಶೋಷಿತ”ರನ್ನು ನಿಗೂಢವಾಗಿ ನಿರ್ಧನರನ್ನಾಗಿಸಿ, ನಿಧನರನ್ನಾಗಿಸುತ್ತಿರುವ, ಸಾಮಾನ್ಯರನ್ನು ಅಮಾನ್ಯರನ್ನಾಗಿಸುತ್ತಿರುವ, ಕೃತ್ರಿಮ ಆರ್ಥಿಕ ಭಯೋತ್ಪಾದಕತೆಯು ಇಂದು ಯಾರಲ್ಲೂ ಆತಂಕವನ್ನುಂಟುಮಾಡುತ್ತಿಲ್ಲ; ಯಾರ ‘ಅಜೆಂಡಾ’ವನ್ನೂ ಅಲಂಕರಿಸಿಲ್ಲ. ಕೋಟಿಕೋಟಿ ರೂಪಾಯಿ ವ್ಯವಹಾರಗಳ ನಡುವೆ, ಕೋಟ್ಯಂತರ ಚಿಣ್ಣರು ರಾತ್ರಿಯೂಟದಿಂದ ವಂಚಿತರಾಗಿ ಹಸಿವಿನಲ್ಲೇ ಹಾಸಿಗೆಗೊರಗುತ್ತಿರುವುದು, ಉಗ್ರ.ಉದಾರವಾದಿ, ಉದರಸುಖಿ ಉದ್ಧಾರಕರನ್ನು ಉದ್ವೇಗಗೊಳಿಸುತ್ತಿಲ್ಲ.  ಕೊಳೆಯುತ್ತಿರುವ ಕೋಟ್ಯಂತರ ಟನ್ ಧಾನ್ಯರಾಶಿಗಳ ಮುಂದೆ ಧ್ಯಾನಲೀನರಾಗಿರುವ ಅಧಿಕಾರಿಗಳಲ್ಲಿ, ಎದುರಿನಲ್ಲೇ ಹಸುಳೆಗಳು ಹಸಿವಿನಿಂದ ಅಸು ನೀಗುತ್ತಿರುವುದು ತುಸು ಮರುಕವನ್ನೂ ಉತ್ಪಾದಿಸಿಲ್ಲ. ರೈತರ ಸರಣಿ-ಆತ್ಮಹತ್ಯೆಯಿಂದ (ಸಾಯುವ ಸ್ವಾತಂತ್ರ್ಯ?) ವಿದರ್ಭದ ಹತ್ತಿಯ ನೆಲವು ಹತ್ತಿಕೊಂಡು ಸುಡುಗಾಡಾಗುತ್ತಿರುವುದು; 13 ಕೋಟಿ ಬಾಲಕೂಲಿಗಳು ಇಂದಿಗೂ ಅಮಾನವೀಯ ಆವರಣಗಳಲ್ಲಿ ಜೀವ ತೇಯುತ್ತಿರುವುದು, ಮತ್ತು 14 ಕೋಟಿ ಬಾಲಭಾರತರು ಶಾಲೆಯಿಂದ ಉದುರಿಹೋಗಿರುವುದು; ಪಂಜಾಬ್‍ನಂಥ ಪುರೋಗಾಮಿ ಪ್ರಾಂತ್ಯದಲ್ಲಿ, ಕೀಟನಾಶಕದ ನಂಜಿನಿಂದಾಗಿ ಕ್ಯಾನ್ಸರ್‍ಗ್ರಸ್ತರಾದ ಬಡರೋಗಿಜಂಗುಳಿಗಳು ತಮ್ಮದೇ ರಾಜ್ಯದಲ್ಲಿ ಸೌಲಭ್ಯವಂಚಿತರಾಗಿ, ಪ್ರತಿರಾತ್ರಿ ನೂರಾರು ಸಂಖ್ಯೆಯಲ್ಲಿ “ಕ್ಯಾನ್ಸರ್ ರೈಲು” ಹತ್ತಿ ದೂರದ ಬಿಕನೇರ್‍ನ ಕ್ಯಾನ್ಸರ್ ಆಸ್ಪತ್ರೆಗೆ ದೌಡಾಯಿಸುವಂತಾಗಿರುವುದು …

ಇವೆಲ್ಲವೂ ಯಾರ ಅಂತ:ಕರಣಕ್ಕೂ ಆಘಾತಕಾರಿಯಾಗಿಲ್ಲ. ಪ್ರತಿಶತ 75 ಪ್ರಜೆಗಳಿಗೆ “ಎಲ್ಲಿ ಪ್ರಕೃತಿ ಕರೆವುದೋ ಅಲ್ಲೇ ಶೌಚಾಲಯ” ಎಂಬ ಅವಸ್ಥೆಯುಂಟಾಗಿರುವುದು;  ಕೊಳೆಯುತ್ತಿರುವ ಧಾನ್ಯಗಳನ್ನು ಸಂರಕ್ಷಿಸಲು ಸಿಗದ ವಿದ್ಯುತ್ತು, ಮಾಲ್‍ಗಳಲ್ಲಿ ಪಾದುಕೆಗಳ ಹವಾನಿಯಂತ್ರಿತ ಪಾಲನೆಗೆ ಎಣೆಯಿಲ್ಲದೆ ಸಿಗುತ್ತಿರುವುದು; ಬೆಳೆ ತೆಗೆಯಲು ಇಲ್ಲವಾದ ಭೂಮಿ, ನೀರು, ಮತ್ತಿತರ ಸಂಪನ್ಮೂಲಗಳು, ಐಟಿ-ಬಿಟಿ ಕಂಪನಿಗಳಿಗೆ ಕೇಳಿದ ಮಾತ್ರಕ್ಕೆ ಸುಲಭವಾಗಿ ಲಭಿಸುತ್ತಿರುವುದು; ವಿದ್ಯೆಯ “ಸಾದ್ಯಂತ ಸಾಫ್ಟ್‌ವೇರೀಕರಣ,” ವ್ಯಾಪಾರದ ವ್ಯಾಪಕ ಬಹುರಾಷ್ಟ್ರೀಕರಣ, ಮತ್ತು ಜನಾವಶ್ಯಕ ಜಾಗಗಳಲ್ಲೆಲ್ಲ  ಜಾಗೃತೀಕರಣವಿಲ್ಲದೆ ಜಾಗತೀಕರಣವಾಗುತ್ತಿರುವುದು; ವಿದ್ಯುನ್ಮಾನ ಮಾಧ್ಯಮವು ಅತ್ಯುನ್ಮಾದಕ ಟಿ.ವಿ. ಸೀರಿಯಲ್ಲುಗಳ ಮೂಲಕ ಸಂಸಾರಗಳನ್ನು ಸೀಳುವ, ಸಜ್ಜನರನ್ನು ಸಮಾಪ್ತಿಮಾಡುವ ನವನವೀನ ಕಪಟೋಪಾಯಗಳನ್ನೂ, ಗಾಢಮೂಢಾಚರಣೆಗಳನ್ನೂ ದಿನವಿಡೀ ಜನಮನದೊಳಗೆ ನಾಟಿಸಿ, ಕ್ಷುಲ್ಲಕ ಸುದ್ದಿ-ಕ್ಷಣಿಕ ಜಾಹೀರಾತುಗಳಿಂದ ಕ್ಷೋಭೆಯನ್ನುಂಟುಮಾಡಿ, ಪ್ರತಿ ಮನೆಯನ್ನು ಅಶಾಂತಿನಿಕೇತನವನ್ನಾಗಿಸುತ್ತಿರುವುದು; ಕ್ರಿಕೆಟ್ ವಾಹಿನಿಗಳು ಕಲಾತ್ಮಕ ಪಂದ್ಯವೊಂದನ್ನು ವರ್ಷಾವಧಿ ಕಾಳದಂಧೆಯನ್ನಾಗಿಸಿ, ಯುವಶಕ್ತಿಯನ್ನು ಪೋಲುಮಾಡಿ, ಐ.ಪಿ.ಎಲ್. ಎಂಬ ಒಂದು ಪಾಪಕೂಪವನ್ನೇ ಹುಟ್ಟುಹಾಕಿರುವುದು; ನರವ್ಯಾಘ್ರಗಳಾಗಿದ್ದ ಪಂಜಾಬಿ ಯುವಕರು ನಶೀಲಿ ಪದಾರ್ಥಗಳಿಂದಾಗಿ ನರಪ್ರೇತಗಳಾಗಿ,  ವ್ಯಗ್ರವಾದಿ ಉಗ್ರವ್ಯಸನಿಗಳಾಗಿ, ಬೇಸಾಯ-ಸೈನ್ಯ ಎರಡನ್ನೂ ಕೈಬಿಟ್ಟು ಓಟ ಕೀಳುತ್ತಿರುವುದು; ರಕ್ತದಾಹಿ ರಿಯಲ್ ಎಸ್ಟೇಟ್‍ಗಳು ಗ್ರಾಮಗ್ರಾಮಗಳನ್ನು, ಕೃಷಿಭೂಮಿ-ಕೃಷಿಕಾರ್ಮಿಕರನ್ನು ನುಂಗಿನೊಣೆದು, ವ್ಯವಸಾಯವನ್ನು ವ್ಯವಕಲನದ ವ್ಯವಹಾರವನ್ನಾಗಿಸಿರುವುದು; ಮೆಟ್ರೋಗಳು ಗಗನಮುಖಿಯಾಗುತ್ತಿದ್ದಂತೆಯೇ, ಅವುಗಳ ಭೂಗತ ಜಗತ್ತು ಮತ್ತಷ್ಟು ಪಾತಾಳಮುಖಿಯಾಗುತ್ತಿರುವುದು, ಮತ್ತು ಅಲ್ಲಿನ ಕೊಳಚೆ ಪ್ರದೇಶಗಳು ‘ನರಲೋಕದ ನರಕ’ಗಳೆಂಬ ಯಶಸ್ಸಿಗಾಗಿ ಪರಸ್ಪರ ಪೈಪೋಟಿಯಲ್ಲಿ ಬಿದ್ದಿರುವುದು; ಹಬ್ಬುತ್ತಿರುವ ಪಬ್ಬು-ಕ್ಲಬ್ಬುಗಳಲ್ಲಿ, ಮದಿರೆಯ ಮಂದಿರಗಳಲ್ಲಿ, ಬೀರ್‍ಬಲ್ಲ, ರಮ್ಮೇಶ, ವಿಸ್ಕ್ಯಂಠ, ತೈಲಪ, ಅಮಲೇಂದ್ರೇತ್ಯಾದಿ ‘ಮದ್ಯ’ರಾತ್ರಿ ಮಕ್ಕಳು, “ಒಂದೇ  ಬಾಟ್ಲ್ ರಮ್// ಸುಜಲಾಂ, ಸುತರಾಂ, ಮರೆಯದ ಪಾನಕಾಂ//” ಎಂದು ಮದ್ಯದೇಶ್ ರಾಗದಲ್ಲಿ ಒಮ್ಮದದಿಂದ ಮೊರೆಯುತ್ತಿರುವುದು, ಮತ್ತು ಅಮೆರಿಖಾದ್ಯ ಅಡ್ಡೆಗಳಲ್ಲಿ ನವಪೀಳಿಗೆಯ ವೈನ್‍ತೇಯ-ವೃಕೋದರ ಸಹೋದರ-ಸಹೋದರಿಯರು ಸ್ವ-ಉದರವನ್ನು ಸಲಹುತ್ತಾ, ತಮ್ಮದೇ ಆದ ಒಂದು “ಬಾರ್-ರತ” ವರ್ಷವನ್ನು,  ಜಡಭರತಖಂಡವನ್ನು ಕಟ್ಟಿಕೊಂಡು ಅದರೊಳಗೆ ಬೆಚ್ಚಗೆ ಬಚ್ಚಿಟ್ಟುಕೊಳ್ಳುತ್ತಿರುವುದು, ಮತ್ತು ಈ ಕಾರಣ, ದೇಶದಲ್ಲಿ ಪುಸುಕಲು-ಪುಕ್ಕಲು ಯುವಪ್ರಜೋತ್ಪತ್ತಿಯಾಗುತ್ತಿರುವುದು; ಮಹಿಳೆಯರ ಮತ್ತು ಮಕ್ಕಳ ಮೇಲೆ ದಿನವಹಿ ದಬ್ಬಾಳಿಕೆ-ದುಂಡಾವರ್ತಿಗಳಾಗುತ್ತಿರುವುದು; ಇವಿಷ್ಟೇ ಸಾಲದೋ ಎಂಬಂತೆ, ಅಂದು ಪಂಜಾಬ-ಸಿಂಧು-ವಂಗಗಳಲ್ಲಿ ಭಾರತದೇಹದ ಶಿರಚ್ಛೇದನ-ಬಾಹುಚ್ಛೇದನದಿಂದುಂಟಾದ ಜನಸಾಗರದ ದಾರುಣ ವಲಸೆ-ಮಾರಣ ಹೋಮಗಳ ಘೋರ ನೆನಪನ್ನು ಕೆರಳಿಸುವಂತೆ, ಇಂದು ಅಸ್ಸಾಮಿನಲ್ಲಿ ಜನಾಂಗೀಯ ದ್ವೇಷಾಗ್ನಿಯು ಭುಗಿಲೆದ್ದಿರುವುದು … ಒಂದೇ, ಎರಡೇ, ಅಥವಾ ಎರಡು ಸಾವಿರದ ಹನ್ನೆರಡೇ?! ದಿಟವಾಗಿ, ಸನಾತನ ಯುಗದಿಂದಲೂ, ನರನಾಡಿನಾಳಗಳ ಆಳಗಲಗಳಲ್ಲಿ “ದೇವ ಕಣ”ವನ್ನು (ಗಾಡ್ ಪಾರ್ಟಿಕಲ್) ಒಯ್ದಿರುವ, ಪರಮಾಣುವಿನಲ್ಲಿಯೂ ಪರಮಾತ್ಮನನ್ನೇ ಕಾಣುವ, ಭಾರತೋದ್ಭವರ ಸ್ಥಿತಿ ಇಷ್ಟು ಬೇಗ ಇಷ್ಟು ಕ್ಷಯಿಸಿತೆಂದರೆ ನಂಬುವುದಾದರೂ ಹೇಗೆ? ಅದು ಹೇಗಾದರಿರಲಿ, ನಿಜ ದುರಂತವೆಂದರೆ, ಈ ಯಾವ ಸುಡುಸತ್ಯಗಳೂ, ಸ್ವಹಿತಾರ್ಥವನ್ನು ಅರಸುತ್ತಿರುವ ಅರಸರನ್ನು, ಲಂಡ-ಲಂಪಟ-ಲಂಚಲೋಲುಪ ಅಧಿಕಾರಸ್ಥರನ್ನು, ನಿತ್ಯಸನ್ಮಾನಿತ ಬುದ್ಧಿಪುರುಷರನ್ನು, ಧರ್ಮಾಗ್ರಹ-ನ್ಯಾಯಾಗ್ರಹ ವರೇಣ್ಯರನ್ನು, ಸ್ವ.ಸಂತೃಪ್ತ ಸು.ಸಂಸುಪ್ತ ಸಾಮಾನ್ಯರನ್ನು ಇನ್ನೂ ಮುಟ್ಟಿಯೇ ಇಲ್ಲವೆಂಬುದು.

“ಭಾಗ್ಯದೊಡನೆ ಭೇಟಿ” ಎಂದಿಗೆ?

“ಬಿಡುಗಡೆ”ಯ ಆ ಕಾರಿರುಳು ಕಡೆಗೆ ಹಡೆದುಕೊಟ್ಟಿದ್ದು ಇಷ್ಟೆ: ವಸಾಹತಿನ ಅಧಿಕಾರ ಹಸ್ತಾಂತರ; ದೇಶೀ ಅಧಿನಾಯಕರಿಗೆ ಅದೇ “ನೆಲಸಿಗ ಅಧೀನ”ರ ಮೇಲೆ ಸ್ವಾಮ್ಯವನ್ನೀವ, ಅರೆರಾತ್ರಿಯಲ್ಲಿ ಅವರಿಗೆ ಹಿರಿಕೊಡೆಹಿಡಿದು ಅವರನ್ನೇ ಭಾರತಭಾಗ್ಯವಿಧಾತರೆಂದು ಉದ್ಘೋಷಿಸುವ, ಒಂದು ಘನ ಸಂ-ಭ್ರಮ; ಜೊತೆಗೆ, ಪ್ರಭುಗಳು ತಮ್ಮ ಸೇವಕರಿಂದ ತಾವೇ ಆಳಿಸಿಕೊಳ್ಳಲು ಆಯ್ಕೆ ಮಾಡಬೇಕಾದಂಥ ವಿಕಟ, ವಿಲೋಮ ವ್ಯವಸ್ಥೆಯ ಬೀಜಾವಾಪ. ಇದರಿಂದ ದೊರೆತದ್ದು ಸತ್ಪ್ರಜೆಗಳಿಗೆ ಸ್ವಾತಂತ್ರ್ಯವಲ್ಲ; ಹೊಸ ‘ಸ್ವಾಹಾರ್ಥಿ’ ಸ್ವಾಮಿಗಳ ಸ್ವಚ್ಛಂದತೆಗೆ ಸ್ಪಷ್ಟ ಸನ್ನದಷ್ಟೆ. ಮತ್ತು ಇದು ನೆಲೆಗೊಟ್ಟಿದ್ದು ಬರಿಯ ಆರ್ಥಿಕ, ರಾಜಕೀಯ ಭ್ರಷ್ಟತೆಗಲ್ಲ; ಒಂದು ಭವ್ಯ ಸಮಾಜದ-ಸಂಸ್ಕೃತಿಯ-ಸಭ್ಯತೆಯ ಮೌಲ್ಯಹತ್ಯೆಗೆ. ಇಂದಿನ ಕಾಳವರಾಹಕಲ್ಪದ ಭಾರತವು, ಈ ಪರಿಯ ಟೊಳ್ಳು ಬುಡಬೇರುಗಳ ಮೇಲೆ, ಮತ್ತೊಂದು ಹುಟ್ಟಿನ ಹೊಸಿಲಿನಲ್ಲಿ, ಅದಿರುತ್ತ ನಿಂತಿದೆ. ಈ ಭಾವ್ಯಭಾರತವಾದರೂ ನಮಗೆ ಆ ದೀರ್ಘನಿರೀಕ್ಷಿತ “ಭಾಗ್ಯದೊಡನೆ ಭೇಟಿ”ಯನ್ನು ತಂದೀತೇ ಎಂಬುದು, ಪ್ರತಿ ಪ್ರಜೆಯೂ ಧ್ವನಿಯೆತ್ತಿ, ಪ್ರತಿ ಪ್ರತಿನಿಧಿಯಿಂದ ಪ್ರತಿಧ್ವನಿಯನ್ನು  ಪ್ರಚೋದಿಸುವುದರ ಮೇಲೆ ನಿಶ್ಚಿತವಾಗಿ ನಿಂತಿದೆ.  ಪ್ರಜೆಗಳು ಮಂತ್ರಿಮುಗ್ಧ ಹಿಂದಾಳುಗಳಾಗಿ ಕೈಕಟ್ಟಿ ನಿಲ್ಲದೆ, ಸತ್ವದೊಡನೆ ರಾಜಸ-ತ್ವವನ್ನೂ ಕೂಡಿಸಿಕೊಂಡು ಕೈಬೀಸಿ ಮುನ್ನಡೆದರೆ ಮಾತ್ರ, ಸತ್ವವಿರುವ ರಾಜರನ್ನು ಕಾಣಬಹುದು; ಇಲ್ಲದಿದ್ದಲ್ಲಿ ಪ್ರಜಾಸತ್ತೆಯು ಸತ್ತವರ ಸಂತೆಯಾಗುವುದೆಂಬುದರಲ್ಲಿ ಸಂಶಯವೇ ಸುಳಿಯದು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: