ಭಾರತ ಸ್ವಾತಂತ್ರ್ಯ ಗಳಿಸಿ ೬೫ ವಸಂತಗಳು ಪೂರೈಸಿವೆ. ವರ್ಷ ಅರವತ್ತೈದು ಆದ ತರುವಾಯ ವ್ಯಕ್ತಿಯನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ; ತನ್ನನ್ನು ಹೊರತುಪಡಿಸಿ! ಈ ಅರವತ್ತೈದರ ಮರುಳಿನಲ್ಲಿ ದೇಶದ ಸ್ವಾತಂತ್ರ್ಯದ ಹೊಸ್ತಿಲಲ್ಲಿ ನೆಹರೂ ವಾಚಿಸಿದ “ಭಾಗ್ಯದೊಡನೆ ಭೇಟಿ” (tryst with destiny) ನೆನಪಿಸಿಕೊಂಡು ಆ ಭಾಗ್ಯದೊಂದಿಗಿನ ಭೇಟಿಯ ಅನುಭವವನ್ನು ನಗೆ ಸಾಮ್ರಾಜ್ಯಕ್ಕೆ ಇತ್ತೀಚೆಗೆ ವೀಸಾ ಪಡೆದ ಎಸ್.ಜಿ. ಸೀತಾರಾಮ್ ಹಂಚಿಕೊಂಡಿದ್ದಾರೆ.
ಈ ವಿಡಂಬನಾ ಸರಣಿ ಮೂರು ಕಂತುಗಳಲ್ಲಿ ನಿಮ್ಮ ಮುಂದೆ ಮೂಡಿಬರಲಿದೆ. ಇದು ಸರಣಿಯ ಎರಡನೆಯ ಕಂತು.
– ನಗೆ ಸಾಮ್ರಾಟ್
4. ಅಂದು “ಸ್ವ” ಎಂದೊಡನೆ ಸ್ವತಂತ್ರ, ಸ್ವರಾಜ್ಯ, ಸ್ವದೇಶಿ, ಸ್ವಯತ್ನ, ಸ್ವಶಕ್ತಿ, ಸ್ವಚ್ಛತೆ, ಸ್ವಾಭಿಮಾನ, ಸ್ವಾವಲಂಬನೆ, ಇತ್ಯಾದಿ ನೆನಪಿಗೆ ಬರುತ್ತಿದ್ದವು. ಅದೇ “ಸ್ವ” ಎಂದೊಡನೆ ಇಂದು ನಮಗೆ ಹೊಳೆಯುವುದು “ಸ್ವಾಹಾ!” ಸ್ವತ್ತು, ಸ್ವಕುಟುಂಬ, ಸ್ವಜಾತಿ, ಸ್ವಾರ್ಥ, ಇತ್ಯಾದಿ ಶಬ್ದಗಳು; “ಸ್ವತಂತ್ರ” ಎಂದರೆ ತಮ್ಮದೇ ಅಕ್ರಮಕಾರ್ಯಕ್ರಮಗಳಿಗಾಗಿ ಮಾಡಿಕೊಂಡಿರುವ “ಸ್ವ” ತಂತ್ರ; ಹಾಗೂ “ಜನತಂತ್ರ” ಎಂದರೆ ಜಾಣತಂತ್ರ ಎಂಬಂಥ ಅಸಹಜ ಅರ್ಥಾಂತರಗಳು.
5. ಅಂದು ಆಳಿದ ಪ್ರಭುಗಳು ಅಲ್ಲಲ್ಲಿಗೆ ಒಬ್ಬೊಬ್ಬರಿದ್ದರಷ್ಟೆ. ಆದರಿಂದು, ಚುರಾಯಿತ ಜನಮತಮುದ್ರೆಯನ್ನು ತೋರಿ ಚುನಾಯಿತರೆನಿಸಿಕೊಂಡವರೆಲ್ಲರೂ ನಮ್ಮ ಧಣಿಗಳೇ. ನಮ್ಮನ್ನು ಆಳುವ, ಆಳುಕಾಳುಗಳಂತೆ ಕಾಣುವ, ಇಂಥ ದು:ಶಾಸಕ, ಧೃತರಾಷ್ಟ್ರಕೂಟರು ಇಂದು ಹಳ್ಳಿಗೆ ಹತ್ತಿಪ್ಪತ್ತು. ಜಾತಿ, ಭಾಷೆ, ಇತ್ಯಾದಿಗಳನ್ನು “ಪಾಳೆಯ”ಗಳನ್ನಾಗಿಸಿಕೊಂಡಿರುವ ಪಾಳೆಯಗಾರರು; ದೇಶ ತುಂಡಿರಿಸಿ ಆಳುವ ತುಂಡರಸ-ಪುಂಡರಸರು; ಒಡೆದು-ಹೊಡೆದು ಆಳುವ ಒಡೆಯರು … ಇಂಥವರ ರಾಜಗಣಗಳೇ ಇಂದು ಈ ‘ಭರ್ತ್ಯ’ಭೂಮಿಯಲ್ಲಿ ಭರತನಾಟ್ಯವನ್ನಾಡುತ್ತಿರುವುವು; ತಮ್ಮ ರಾಜ್ಯಲೀಲೆಯಿಂದ ರಾರಾಜಿಸುತ್ತಿರುವುವು. ಆಳುಗಳೇ ಮಾಲೀಕರನ್ನು ಆಯ್ಕೆ ಮಾಡಿ, ಉಚ್ಚ ಪಟ್ಟಗಳಿಗೆ ತುಚ್ಛರನ್ನು ಹರಸಿ ಕಳಿಸಬೇಕಾಗಿರುವಂಥ ಹುಚ್ಚುತನವೇ ನಮ್ಮ ಈ “ಪ್ರಜಾ- ಪ್ರತಿನಿಧಿ ಪ್ರಭುತ್ವದ” ಹೆಚ್ಚುಗಾರಿಕೆಗಳಲ್ಲೊಂದಾಗಿದೆ.
6. ಅಂದೂ ಸಹ, ಅನೇಕ ಭಾರತಸ್ಥರಲ್ಲಿ ವಿದೇಶ ವ್ಯಾಮೋಹ, ವಿಶೇಷವಾಗಿ ಆಂಗ್ಲಾಕರ್ಷಣೆ, ಗಾಢವಾಗಿದ್ದುದು ನಿಜವಲ್ಲವೇ? ಹೌದು, ಇದೇನೋ ಒಪ್ಪತಕ್ಕದ್ದೇ. ವಾಸ್ತವವಾಗಿ, ಅಂದು ಅಂಧಸಮುದ್ರದ (ಅಟ್ಲ್ಯಾಂಟಿಕ್) ಈಚೆಗಿದ್ದ, ಅದರಲ್ಲೂ ಅಲ್ಲಿನ ತಮಸಾ (ಥೇಮ್ಸ್) ನದಿಯ ಬದಿಗಿದ್ದ ಅಯಸ್ಕಾಂತವು, ಇಂದು ಅದರಾಚೆಗಿರುವ ‘ಅಮರ’ ಅಮೆರಿಕಾಗೆ ಸರಿದಿದೆ, ಅಷ್ಟೆ. ತತ್ಫಲವಾಗಿ, ಅಮೆರಿಕಾವೇಶ ಅಮರಿಕೊಂಡಿರುವ ತಾಯ್ತಂದೆಯರು, ಭಾರತದ ಭಾರವನ್ನು ಎಂದು ತೊರೆದೇವೋ ಎಂದು ಹಾತೊರೆಯುತ್ತಾ, ಒಂದೇ ಹಠದಿಂದ ತಮ್ಮ ಬುದ್ಧಿಶಾಲಿ ಬಾಲರಿಗೆ ಬಾಲ್ಯದಿಂದಲೇ ಅಮೆರಿಕದ ಅಮಲೇರಿಸಿ, “ಅಮೆರಿಕ! ಅಮೆರಿಕ!!” ಎಂಬ ಜನ್ಮಸಾಫಲ್ಯ ಮಂತ್ರದ ದೀಕ್ಷೆಯನ್ನು ಅವರಿಗೆ ಸಕಾಲಕ್ಕೆ ಕೊಡಿಸಿ, ಅವರು ಮತ್ತೆಂದೂ ಭಾರತಕ್ಕೆ ಬಾರದಂತೆ ಆಚೆಗಟ್ಟಿ, ಒಂದು ನವಶೈಲಿಯ “ಕ್ವಿಟ್ ಇಂಡಿಯಾ” ಕಿಚ್ಚನ್ನೇ ಹಚ್ಚಿಕ್ಕಿದ್ದಾರೆ. ಅಂದು ಈಸ್ಟ್ ಇಂಡಿಯಾ ಕಂಪನಿಗೆ ಕಚ್ಚಾವಸ್ತುಗಳನ್ನೂ, ಕಾರಕೂನರನ್ನೂ ಒಲವಿನಿಂದ ಒದಗಿಸುತ್ತಿದ್ದ ಭಾರತವು, ಇಂದು ತನ್ನ ಸಮಸ್ತ ಸಮರ್ಥ ಯುವಶಕ್ತಿಯನ್ನು ಹೆಮ್ಮೆ-ಹುಮ್ಮಸ್ಸುಗಳಿಂದ, ಅಮೆರಿಕೇಂದ್ರೀಕೃತ ಸಾಫ್ಟ್‌ವೇರ್ ಕಂಪನಿಗಳಿಗೆ ಕಚ್ಚಾಮಾಲುಗಳನ್ನಾಗಿ ಪರಿವರ್ತಿಸಿ, ಎಡೆಬಿಡದೆ ರಫ್ತು ಮಾಡುತ್ತಿದೆ. ತನ್ನ ಇಡೀ ಶಿಕ್ಷಣಕ್ರಮವನ್ನು ‘ಪರ’ತಂತ್ರಜ್ಞಾನಕ್ಕೆ “ಪ್ರೋಗ್ರ್ಯಾಮ್” ಮಾಡಿಕೊಂಡು ಧನ್ಯತೆಯಿಂದ ಬೀಗುತ್ತಿದೆ. ಹೀಗೆ, ಬುದ್ಧಿರಾಶಿಯು ಅಮೆರಿಕಾತುರವಾಗಿಯೂ, ‘ನುಂಗಂಬಾಕಂ’ ಆದ ಧನರಾಶಿಯು ಸ್ವಿಸ್‍ಬ್ಯಾಂಕಾಭಿಮುಖವಾಗಿಗೂ ದಿಕ್ಕೆಟ್ಟು, “ಭಂಡ”ವಾಳವಷ್ಟೇ ಭಾರತದ ಅಭಿವೃದ್ಧಿಯಲ್ಲಿ ತೊಡಗಿಸಲು ಮಿಕ್ಕುಳಿಯುತ್ತಿದೆ.
7. ಭ್ರಷ್ಟಾಚಾರ, ಅತ್ಯಾಚಾರ, ಅನಾಚಾರ, ಢಂಬಾಚಾರ, ಇವೆಲ್ಲ ಅಂದೂ, ಎಂದೆಂದೂ ಇದ್ದವೇ ತಾನೇ? ಖಂಡಿತ. ಆದರೆ ಅಂದು ಭ್ರಷ್ಟಾಚಾರವು ಒಂದು ಅತಿವಿಶಿಷ್ಟ ಶಿಷ್ಟಾಚಾರವಾಗಿ, ರಾಜಕಾರಣಕ್ಕೆ ಅವಶ್ಯ ಅರ್ಹತೆಯಾಗಿ, ಹುದ್ದೇದಾರರ ಸಿದ್ಧಾಂತವಾಗಿ, ಮಾನ್ಯತೆ ಪಡೆದಿರಲಿಲ್ಲ. ಜನಮಾನಸದೊಳಗೆ “ಡಿ.ಎನ್.ಎ.-ಗತ”ವಾಗಿ, ಚರಾಚರಗಳೆಲ್ಲವನ್ನೂ ನಡೆಸುವ ವಿಶ್ವಚೇತನವಾಗಿ ಹೊರಹೊಮ್ಮಿರಲಿಲ್ಲ. ಲಂಚವೆಂಬ ಮೂಲವ್ಯಾಧಿಯು ಅತ್ಯುಗ್ರ ಆಮೂಲಾಗ್ರ ಅರ್ಬುದವಾಗಿ ಮೆಟ್ಟಿಕೊಂಡಿರಲಿಲ್ಲ; ಅಧಿಕೃತವಾಗಿ (ಮಂತ್ರಿಶಕ್ತಿ, ತಮೋಬಲಗಳಿಂದ) ಅಪಹರಿಸುವ ಸಂಸ್ಕೃತಿ ಆಗಿನ್ನೂ ಮೊಳಕೆಯೊಡೆದಿರಲಿಲ್ಲ. “ಝಣಝಣಹಣ ಅಧಿನಾಯಕ ಜಯಹೇ” ಎಂಬುದು ನಮಗೊಂದು ಅನಧಿಕೃತ ರಾಷ್ಟ್ರಗೀತೆಯಾಗಿರಲಿಲ್ಲ. “ಜಾತಿಯೇ ಜ್ಯೋತಿ,” “ಪರಧನವೇ ಪರಮಾತ್ಮ,” “ತದುಕಲು ಕಲಿಯಿರಿ,” “ನೀವಿರುವುದೆ ನಮಗಾಗಿ,” ಮುಂತಾದ ಪದಪುಂಜಗಳು ಆಗಿನ್ನೂ ಆಳರಸರ ಸ್ಫೂರ್ತಿಸೂಕ್ತಿಗಳಾಗಿ ಮೂಡಿಬಂದಿರಲಿಲ್ಲ. ಶ್ರೇಷ್ಠ ನ್ಯಾಯಮೂರ್ತಿಗಳು, ಜ್ಯೇಷ್ಠ ಐ.ಎ.ಎಸ್.-ಐ.ಪಿ.ಎಸ್. ಅಧಿಕಾರಿಗಳು, ವರಿಷ್ಠ ದಂಡನಾಯಕರು, ಗಣ್ಯ ಮಾಧ್ಯಮೋದ್ಯೋಗಿಗಳು, ಸುಸಂಪೂಜಿತ ಧರ್ಮಗುರುಗಳು, ಬಿರುದಾಂಕಿತ ಸಮಾಜಸೇವಕರು, ಬಹುಮಾನ್ಯ ಬುದ್ಧಿಜೀವರು … ಮೊದಲಾದ ಸಮಾಜಾಧಾರ ಸ್ತಂಭಗಳೇ ಆಗ ಹೀಗೆ ಹಗರಣರಂಗದಲ್ಲಿ ಮಾನಾಭಿಮಾನ-ವಿಕಲರಾಗಿ ಮುರಿದು ಬಿದ್ದಿರಲಿಲ್ಲ. ಮಹಾಬಿಲೇಶ್ವರರೂ-ವರಾಹಾಂಶ ಸಂಭೂತರೂ ಕೊರೆದ ಬಿಲಿಯನ್ ಬಿಲಗಳ ಬೀಡಾಗಿ, ಸುರಂಗಜೇಬರ ರಾಜಮಾರ್ಗವಾಗಿ, ಕೊಳ್ಳೆಗಳ ಕೊಳಚೆಯ ಕೊಳ್ಳವಾಗಿ, ಭಾರತದ ಪ್ರಭುತ್ವವು ಆಗ ಇನ್ನೂ ಅಷ್ಟು ‘ಪ್ರಬುದ್ಧವಾಗಿರಲಿಲ್ಲ; ಈ ಪ್ರಮಾಣಕ್ಕೆ ‘ಪ್ರಭುಕ್ತ’ವಾಗುವುದು (ತಿಂದುಹಾಕಲ್ಪಡುವುದು) ಎಂದು ಯಾವ ಭಾರತಜ್ಞರೂ ಊಹಿಸಿಯೂ ಇರಲಿಲ್ಲ. ಆಗ ದಿನಕ್ಕೊಂದು ವಿಚಾರಣಾ ಆಯೋಗ ನೇಮಿಸಲ್ಪಡಬೇಕಾಗಿ ಬಂದಿರಲಿಲ್ಲ. ಲೋಕಾಯುಕ್ತ ಸಂಸ್ಥೆಯು ಇನ್ನೂ ಲೋಕಕ್ಕೆ ಅಯುಕ್ತವೆನಿಸಿರಲಿಲ್ಲ. ಕಾನನದ ಕಾನೂನೆಂಬುದು ಸೋಂಕಿತ್ತಾದರೂ ಈಗಿನಂತೆ ಸೊಕ್ಕಿರಲಿಲ್ಲ. ಸಿಂಧುದೇಶವು ಪ್ರಜಾಂತಕ ಪರಿಪಾಲಕರಿಗೆ ಅಷ್ಟು ಅನುಕೂಲಸಿಂಧುವಾಗಿ ತಿರುಗಿರಲಿಲ್ಲ.
ಮೇಲಾಗಿ, ವಿದೇಶಿ ಧಾಳಿಕೋರರು ಇತಿಹಾಸದಾದ್ಯಂತ ಸೂರೆಗೈಯದಿದ್ದಷ್ಟು ಸಂಪತ್ತನ್ನು ಕೆಲವೇ ದಶಕಗಳಲ್ಲಿ ದೇಶಾಂತರಿಸಿ, ತಾಯ್ನಾಡಿನ ಜೀವದ್ರವ್ಯವನ್ನೇ ಇಂಗಿಸುವ ಸ್ವದೇಶಿ ರಾಷ್ಟ್ರಹೀರರು, ಕಳಿಂಗ “ಹಿಂಡಿಯಣ್ಣರು,” ಆಗಿನ್ನೂ ಅವತಾರವೆತ್ತಿರಲಿಲ್ಲ!
ನಿಮ್ಮದೊಂದು ಉತ್ತರ