ನಗಾರಿ ಕಿಕ್ಕಿಂಗ್!

28 ನವೆಂ

ತಲೆಮರೆಸಿಕೊಂಡು ಹೋಗುವುದರಲ್ಲಿ ಸಾಮ್ರಾಟರಾಗಿರುವ ನಗೆ ಸಾಮ್ರಾಟರನ್ನು ಹುಡುಕಿ ಕರೆತರುವುದಕ್ಕೆ ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಗಾರಿಯ ಉಸ್ತುವಾರಿಯನ್ನು ಯುವ ಸದಸ್ಯರೊಬ್ಬರು ವಹಿಸಿಕೊಂಡದ್ದು, ತಮ್ಮ ಅತ್ಯಾಪ್ತ ಚೇಲ ಕುಚೇಲ ತಮ್ಮ ವಿರುದ್ಧವೇ ತಿರುಗಿ ಬಿದ್ದದ್ದು ಇವೆಲ್ಲವುಗಳನ್ನು ಕಂಡ ಸಾಮ್ರಾಟರು ಕಂಗಾಲಾಗಿದ್ದರು. ಹಲ್ಲಿಲ್ಲದ ತನ್ನ ಬಳಿಯಿರುವ ಕಡಲೆಯನ್ನು ಕಿತ್ತುಕೊಳ್ಳಲು ಬರುವ ‘ಹಲ್ಕಟ್’ ಮಂದಿಯಿಂದ ತಪ್ಪಿಸಿಕೊಂಡು ತಿರುಗಾಡುತ್ತಿದ್ದರು.

ಅವರು ಎಲ್ಲಿ ಹೋಗಿದ್ದಾರೆ ಏನು ಮಾಡುತ್ತಿದ್ದಾರೆ ಎಂದು ಯಾರಿಗೂ ಸಣ್ಣ ಮಾಹಿತಿಯೂ ಇರಲಿಲ್ಲ. ನಗೆ ನಗಾರಿಯ ಪಾಸ್ ವರ್ಡ್ ಅವರ ಸ್ವತ್ತಾದ್ದರಿಂದ ಉಳಿದ ಸದಸ್ಯರ್ಯಾರೂ ನಗಾರಿಯಲ್ಲಿ ಕೆಲಸ ಮಾಡಲೂ ಸಾಧ್ಯವಾಗಲಿಲ್ಲ. ಸಾಮ್ರಾಟರನ್ನು ಹುಡುಕುತ್ತಾ ಹೋಗಬಾರದ ಜಾಗಕ್ಕೆಲ್ಲ ಹೋಗಿಬಂದ ಕುಚೇಲ ನಿರಾಶೆಯಿಂದ ಕೈಚೆಲ್ಲಿ ಕೂತ. ಆಗ ಸಾಮ್ರಾಟರು ತಮ್ಮ ಬೆನ್ನ ನೆರಳಿನಂತಿರುವ ತಮ್ಮ ಆಲ್ಟರ್ ಈಗೋವನ್ನೂ ತೊರೆದು ಜಾಗ ಖಾಲಿಮಾಡಿರುವುದು ಬೆಳಕಿಗೆ ಬಂತು. ಸಾಮ್ರಾಟರ ಅನುಪಸ್ಥಿತಿಯಲ್ಲಿ ಅವರ ಆಲ್ಟರ್ ಈಗೋ ಅರ್ಧಕ್ಕೆ ನಿಲ್ಲಿಸಿದ್ದ ಬಂದ್ರೆ ತಾರೆ ಸಂದರ್ಶನ ಪೂರೈಸುವ ಉಮ್ಮೇದಿನಲ್ಲಿ ನಾಪತ್ತೆಯಾಗಿತ್ತು. ಬಂದ್ರೆ ತಾರೆಯವರು ವಿಪರೀತದ ಡಯಟಿಂಗ್ ನಿಂದ ಸಣಕಲಾಗಿರುವುದನ್ನು ತನ್ನ ಎರಡು ಕಣ್ಣುಗಳಿಂದ ನೋಡಲಾರದೆ ಕಣ್ಣಿರು ಗರೆಯುತ್ತಿದ್ದ ಆಲ್ಟರ್ ಈಗೋವನ್ನು ತೊಣಚಪ್ಪ ಸಂತೈಸಿ ಕರೆದು ತಂದು ಸಾಮ್ರಾಟರ ಪತ್ತೆಗೆ ನೇಮಿಸಿದ. ಆಲ್ಟರ್ ಈಗೋ ಜೀವಿಗಳು ಪ್ರವೇಶಿಸಲು ಯೋಗ್ಯವಲ್ಲದ ಪ್ರದೇಶಗಳನ್ನೆಲ್ಲ ಹೊಕ್ಕು ಸಾಮ್ರಾಟರಿಗೆ ಹುಡುಕಾಡಿದ ಅವರ ಸುಳಿವೆಲ್ಲೂ ಸಿಕ್ಕಲಿಲ್ಲ.

ಕಡೆಗೆ ನಗಾರಿಯ ಸದಸ್ಯರೆಲ್ಲ ನಿರಾಶೆಯ ಮಡುವಲ್ಲಿ ಮುಳುಗಿರುವಾಗ, Yes We can ಮಂತ್ರದ ಒಡೆಯ, ಹಿರಿಯಣ್ಣ ಅಮೇರಿಕಾದ ಪ್ರಥಮ ಕರಿಯ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡಿದರು. ಅಮೇರಿಕಾದ ಈ ಮಾಂತ್ರಿಕ ಮಾತುಗಾರನ ಮೋಡಿಗೆ ಸಿಲುಕಿ ತಮ್ಮ ಗೋಳನ್ನು ಮರೆಯುವುದಕ್ಕೆ ಎಲ್ಲರೂ ಟಿವಿ ಚಾಲೂ ಮಾಡಿ ಕೂತೆವು. ವ್ಯಾಪಾರಕ್ಕಾಗಿ, ಉದ್ಯೋಗ ಸೃಷ್ಟಿಗಾಗಿ ಭಾರತಕ್ಕೆ ಬಂದಿರುವ ಒಬಾಮನ ಬೆಂಬಲಕ್ಕೆಂದು ನಾವು ಮೈಕೊರೆಯುವ ಚಳಿಯಲ್ಲಿ ಅಮೇರಿಕನ್ ಕಂಪೆನಿಯ ಎಸಿ ಚಾಲೂ ಮಾಡಿ, ಪೆಪ್ಸಿ ಹೀರುತ್ತ, ಕೆ.ಎಫ್.ಸಿ ಕೋಳಿ ತೊಡೆಯನ್ನು ಮೆಲ್ಲತೊಡಗಿದೆವು. ಜಗತ್ತಿನ ಶ್ರೀಮಂತ ರಾಷ್ಟ್ರದ ಗನಘಂಭೀರ ಅಧ್ಯಕ್ಷರು ಕೂತಿದ್ದಾರೆ. ಅವರೆದುರು ಪುಟ್ಟ ಮಕ್ಕಳು ಕುಣಿಯುತ್ತಿದ್ದಾರೆ. ಕಾನ್ವೆಂಟ್ ಶಾಲೆಯಲ್ಲಿ, ಮನೆಯಲ್ಲಿ ಎಂದೂ ತೊಟ್ಟಿರದ ಬಟ್ಟೆಗಳನ್ನು ತೊಟ್ಟು ಎಂದೂ ಕೇಳಿರದ ಹಾಡಿಗೆ ಎಂದೂ ಕಂಡಿರದ ವ್ಯಕ್ತಿಯ ಎದುರು ನೃತ್ಯ ಮಾಡುವ ದೈನೇಸಿ ಸ್ಥಿತಿಯ ಬಗ್ಗೆ ಮರುಗುತ್ತ ಮಕ್ಕಳೂ ಗಂಭೀರವಾಗಿದ್ದರು. ಇದ್ದಕ್ಕಿದ್ದಂತೆ ಏನೋ ಮಾಂತ್ರಿಕವಾದದ್ದು ಸಂಭವಿಸಿತು. ಗಂಭೀರವಾಗಿ ಕುಳಿತಿದ್ದ ಒಬಾಮ ವೇದಿಕೆಯ ಮೇಲೆ ನಡೆದರು. ಮಕ್ಕಳು ಹಾಕುತ್ತಿದ ಹೆಜ್ಜೆಗಳನ್ನು ಅನುಕರಿಸತೊಡಗಿದರು. ಭಾರತದ ನೆಲದಲ್ಲಿ ನಿಂತು ಭಾರತದ ಟ್ಯೂನಿಗೆ ಹೆಜ್ಜೆ ಹಾಕಿಬಿಟ್ಟರು.

ನಮ್ಮಿಡೀ ತಂಡಕ್ಕೆ ಆಕಾಶವೇ ಕಳಚಿ ಖಾಲಿಯಾದ ಕೆ.ಎಫ್.ಸಿಯ ರಟ್ಟಿನ ಡಬ್ಬಿಯಲ್ಲಿ ಬಿದ್ದ ಹಾಗಾಯ್ತು. ಅಮೇರಿಕಾದ ಅಧ್ಯಕ್ಷ ಭಾರತದ ಜನರ ಮನರಂಜನೆಯ ವಸ್ತುವಾದ ವ್ಯಂಗ್ಯದ ಸೃಷ್ಟಿ ಹುಲುಮಾನವರಿಂದ ಸಾಧ್ಯವಿಲ್ಲದು. ಗಂಭೀರನಾದ ಭಗವಂತನಿಗೂ ಇಂತಹ ಸನ್ನಿವೇಶವನ್ನು ಸೃಷ್ಟಿಸುವ ಆಸಕ್ತಿ ಇಲ್ಲ. ಹೀಗಿರುವಾಗ ಇದ್ದಕ್ಕಿದ್ದ ಹಾಗೆ ಇಂತಹ ಅಪೂರ್ವ ಘಟನೆ ಘಟಿಸಿತೆಂದರೆ ಅಲ್ಲಿ ಸಾಮ್ರಾಟರು ಇರಲೇಬೇಕು ಎಂದು ನಮಗೆ ಕ್ಷಣಮಾತ್ರಕ್ಕೆ ಹೊಳೆದುಬಿಟ್ಟಿತು.

ಕೂಡಲೆ ನಗಾರಿ ಬ್ಯುರೋದ ಮುಂಬೈ ಕಚೇರಿಗೆ ಸಾಮ್ರಾಟರ ಭಾವಚಿತ್ರವನ್ನು ಕಳುಹಿಸಿ ಪತ್ತೆ ಹಚ್ಚಿಸಲು ತಿಳಿಸಲಾಯ್ತು. ಯಾವುದೇ ಅಂತರಾಷ್ಟ್ರೀಯ ಬಿಕ್ಕಟ್ಟು ಏರ್ಪಡಬಾರದೆಂದು ಒಬಾಮ ದೇಶ ಬಿಡುವವರೆಗೆ ಕಾಯುವಂತೆ ತಿಳಿಸಲಾಯ್ತು. ಕೂಡಲೆ ಸಿಕ್ಕಿ ಬಿದ್ದ ಸಾಮ್ರಾಟರ ಮನವೊಪ್ಪಿಸಿ ಎಳೆ ತರುವುದರಲ್ಲಿ ಇಷ್ಟು ಸಮಯ ಘಟಿಸಿತು.

ಸಾಮ್ರಾಟರ ಅನುಪಸ್ಥಿತಿಯಲ್ಲಿ ನಿದ್ದೆಗೆ ಜಾರಿದ ನಗಾರಿಯ ಪ್ರತಿಸ್ಪರ್ಧಿ ಪತ್ರಿಕೆಯು ಸಾಮ್ರಾಟರ ಆಗಮನದ ಸುದ್ದಿಯು ತಲುಪಿದ ಕೂಡಲೆ ಎಚ್ಚೆತ್ತಿದೆ. ಸೋಮವಾರ ಧರೆ ಸ್ಪೋಟಗೊಳ್ಳುವಂತಹ ಸುದ್ದಿಯೊಂದನ್ನು ಪ್ರಕಟಿಸುವುದಾಗಿ ಹೇಳಿಕೊಂಡಿದೆ. ಬಹುಶಃ ಅದು ಸಾಮ್ರಾಟರು ನಗಾರಿಯ ಕೇಂದ್ರ ಕಛೇರಿಗೆ ಹಿಂದಿರುಗಿದ ಸುದ್ದಿಯನ್ನೇ ಮೊದಲು ಬ್ರೇಕ್ ಮಾಡುವ ಹೊಂಚು ಹಾಕಿಕೊಂಡಿದ್ದರೆ, ಈ ಮೂಲಕ ನಾವು ಅವರಿಗೆ ಮರುಕ ಸೂಚಿಸಲು ಇಚ್ಛಿಸುತ್ತೇವೆ.

 

 

2 Responses to “ನಗಾರಿ ಕಿಕ್ಕಿಂಗ್!”

 1. Anveshi ನವೆಂಬರ್ 29, 2010 at 11:05 ಫೂರ್ವಾಹ್ನ #

  ಓಹೋಹೋಹೋ. ಹ್ಹ ಹ್ಹ ಹ್ಹ ಹ್ಹ…. ನಿಮ್ಮ ನಗಾರಿಯ ಕುಕ್ಕಿಂಗ್ ಸ್ಟೋರಿಗಾಗಿಯೇ ನಮ್ಮ ಬ್ಯುರೋದ ಮಂದಿಯನ್ನು ಎತ್ತಾಗಿಕೊಂಡು ಹೋಗಿ, ಆಪರೇಶನ್ ಬೊಗಳೆ ಕಾರ್ಯಾಚರಣೆ ಮಾಡಿರುವ ನಿಮ್ಮ ಸುದ್ದಿಯನ್ನೂ ಪ್ರಕಟಿಸಿಬಿಡುತ್ತೇವೆಂದು ನೀವಂದುಕೊಂಡಿದ್ದರೆ, ಅದು ನಿಮ್ಮ ಆತ್ಮವಿಶ್ವಾಸದ ಮತ್ತು ನಿರಾಶೆಯ ಪರಮಾವಧಿಯೂ ಹೌದಾಗಿರಬಹುದಾಗಿದೇ ಎಂದು ತನಿಖೆ ನಡೆಸಿ ತಿಳಿಯಬೇಕಾಗಿದೆ. ನೀವೆಷ್ಟೇ ನಮ್ಮ ಏಕಸದಸ್ಯ ಬ್ಯುರೋದ ಸರ್ವರನ್ನೂ ಎತ್ತಾಕಿಕೊಂಡು ಹೋದ್ರೂ, ನಮ್ಮ ಸರಕಾರ ಉರುಳುವುದಿಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿರಬೇಕು. ಸಿಟಿ ರವಿಯವರಂತೂ ಅಲ್ಲಾಡುವುದೆಲ್ಲಾ ಉರುಳುವುದಿಲ್ಲ ಎಂದು ಈಗಾಗಲೇ ಘೋಷಿಸಿರುವುದು ನಿಮಗೆ ಗೊತ್ತಿರಬೇಕಲ್ಲಾ…

  ಮತ್ತೆ, ನೀವು ಹೋಗಬಾರದ ಜಾಗಕ್ಕೆಲ್ಲಾ ಹೋಗಿರುವುದು ನಮಗೆ ತುಂಬಾ ಖುಷಿಯ ಸಂಗತಿ.

  • Nage samrat ನವೆಂಬರ್ 30, 2010 at 11:20 ಫೂರ್ವಾಹ್ನ #

   ಸಿಟಿ ರವಿಯವರು ಅಲ್ಲಾಡುವುದೆಲ್ಲಾ ಉರುಳುವುದಿಲ್ಲ ಎಂದು ಹೇಳಿಕೆ ನೀಡಿದ ತರುವಾಯ ಉದುರಿದ ತಮ್ಮ ತಲೆ ಕೂದಲನ್ನು ಕಂಡು ಅವು ಅಲ್ಲಾಡಿದ್ದಕ್ಕೆ ರಾಹುಲ್ ಗಾಂಧಿ ಹೆಲಿಕಾಪ್ಟರ್ ರೆಕ್ಕೆ ತಿರುಗಿದ್ದು ಕಾರಣ ಎಂದು ನಗಾರಿಗೆ ಹೇಳಿಕೆ ನೀಡಿದ್ದಾರೆ.

   ನಗಾರಿಗಾಗಿ ನಿಮ್ಮ ಬ್ಯೂರೋದ ‘ಸರ್ವರ್’ನ್ನು ಎತ್ತಾಕಿಬಂದು ಬಳಸಲು ಹೊರಟರೆ ಅದು ಹ್ಯಾಂಗ್ ಮಾಡಿಕೊಂಡು ನಿಷ್ಠೆಯನ್ನು ಮೆರೆಯಿತು. ಎಚ್ಚರಿಕೆಯನ್ನು ರವಾನಿಸಿದ ಸೂಟ್ ಕೇಸಿನಲ್ಲೇ ನಾವು ಆ ಶವವನ್ನು ಇಟ್ಟು ಮರಳಿಸಿದ್ದೇವೆ. 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: