ಇದೂ ಮುಗಿಯುತ್ತೆ

26 ಫೆಬ್ರ


ಸೋಲೆಂಬುದು ಪದೇ ಪದೇ ಕಂಗೆಡಿಸತೊಡಗಿದಾಗ ಕುಚೇಲ ಕುಗ್ಗಿ ಹೋಗಿದ್ದ. ಅಪ್ಪ ಅಮ್ಮ, ಶಿಕ್ಷಕರು, ಗೆಳೆಯರ ಮೂದಲಿಕೆಯ ದಾಳಿಗೆ ಈಡಾಗಿಯೂ ಅಳಿದುಳಿದ ಆತನ ಆತ್ಮವಿಶ್ವಾಸ ಸರ್ಕಾರಿ ಇಂಜಿನಿಯರುಗಳು ಕಟ್ಟಿದ ಸೇತುವೆಯ ಹಾಗೆ ಕುಸಿದು ಬೀಳತೊಡಗಿತ್ತು. ಜೀವನದಲ್ಲಿ ಉತ್ಸಾಹವೇ ಇಲ್ಲವಾಗಿ ದುಃಖದ ಸಾಗರದಲ್ಲಿ ಬಿದ್ದಂತೆ ಭಾಸವಾಗುತ್ತಿತ್ತು. ಇನ್ನಷ್ಟು ದಿನ ಇದೇ ಮನಸ್ಥಿತಿಯಲ್ಲಿದ್ದರೆ ಒಂದೋ ಹುಚ್ಚು  ಹಿಡಿಯಬಹುದು ಇಲ್ಲವೇ ತನ್ನ ಕಣ್ಣೀರಿನ ಸುನಾಮಿಗೆ ಇಡೀ ಜಗತ್ತೇ ಬಲಿಯಾಗಬಹುದು ಅನ್ನಿಸಿದ್ದರಿಂದ ಕುಚೇಲ ತನ್ನ ಜಗತ್ತೇ ಆಗಿದ್ದ ನಾಲ್ಕು  ಗೋಡೆಗಳ ಪುಟ್ಟ ಕೋಣೆಯಿಂದ ಹೊರಬಂದ. ದೇಶದಲ್ಲೇ ಖ್ಯಾತಿಯನ್ನು ಗಳಿಸಿದ್ದ ಯಶಸ್ಸಿನ ರಹಸ್ಯ ಬೋಧಿಸುವ ಗುರು, ವ್ಯಕ್ತಿತ್ವ ವಿಕಸನದ ಪಿತಾಮಹ, ಕತ್ತೆಯನ್ನು ಕುದುರೆ ಮಾಡುವ ಮಾಂತ್ರಿಕ ಮಂಡಿಯೂರಿ ರವೀಂದ್ರನಾಥರ ಬಳಿಗೆ ಹೋದ. ತಿಂಗಳ ಸಂಬಳದ ಅರ್ಧ ಭಾಗವನ್ನು ಮರೆತು ಅಪಾಯಿಂಟ್ ಮೆಂಟು ಪಡೆದು ಅವರ ಕೋಣೆಯೊಳಗೆ ಹೋದ.

ಮಂಡಿಯೂರಿ ರವೀಂದ್ರನಾಥರು ಆಪ್ತ ಸಮಾಲೋಚನೆಯಲ್ಲಿ ಭಾರಿ ಪರಿಣಿತಿಯನ್ನು ಸಾಧಿಸಿದ್ದರು. ಮನುಷ್ಯನ ಮನಸ್ಸನ್ನು ಅವರು ಉಡುಪಿ ಹೋಟೆಲಿನ ಮೆನು ಓದಿದಷ್ಟೇ ಸರಾಗವಾಗಿ ಓದುತ್ತಾರೆ ಎಂಬ ಮಾತು ಜನಜನಿತವಾಗಿತ್ತು. ಅವರ ಸ್ಪೂರ್ತಿದಾಯಕ ಮಾತುಗಳನ್ನು ಕೇಳುತ್ತಿದ್ದರೆ ಪ್ರತಿಯೊಬ್ಬ ಗಂಡಸೂ ಪುರುಷ ಸಿಂಹವಾಗುತ್ತಿದ್ದ, ಪ್ರತಿ ಹೆಣ್ಣು ಮಗಳೂ ಒನಕೆ ಓಬವ್ವಳಾಗುತ್ತಿದ್ದಳು ಎನ್ನುತ್ತಾರೆ ಜನರು. ಅವರ ಪ್ರತಿಯೊಂದು ಭಾಷಣಗಳು ಮನುಷ್ಯನ ಆಳದಲ್ಲಿರುವ ಶಕ್ತಿಯನ್ನು ಹೊರಗೆ ತೆಗೆಯುವ ಬೋರ್ ವೆಲ್ ಗಳು ಎನ್ನುತ್ತಾರೆ ಅವರ ಅಭಿಮಾನಿಗಳು. ನಿಜಕ್ಕೂ ಅವು ಬೋರ್ ವೆಲ್ ಗಳೇ ಎಂದು ಕುಹುಕವಾಡುವ ವಿಮರ್ಶಕರ ಮಾತಿಗೆ ಬೆಲೆ ಕೊಡುವುದು ಬೇಡ. ಇಂಥವರೆದುರು ನಮ್ಮ ಕುಚೇಲ ತಲೆ ಕೆಳಗೆ ಹಾಕಿ ಕುಳಿತಿದ್ದ.

ಕುರಿಯನ್ನು ಕಂಡ ಕಟುಕನ ಹಾಗೆ ಕಣ್ಣಲ್ಲಿ ಉನ್ಮಾದದ ಅಲೆಯನ್ನು ಸೃಷ್ಟಿಸಿಕೊಂಡ ಮಂಡಿಯೂರಿಯವರು ಕುಚೇಲನ ಹೆಗಲ ಮೇಲೆ ಕೈ ಹಾಕಿ “ಏನೋ ಸಮಸ್ಯೆ ನಿನ್ನನ್ನು ಕಾಡುತ್ತಿದೆ. ನಿನಗೆ ಜೀವನದಲ್ಲಿ ಆಸಕ್ತಿಯೇ ಇಲ್ಲವಾಗಿದೆ. ಯಾವುದರಲ್ಲೂ ತೊಡಗುವುದಕ್ಕೆ ಮನಸ್ಸಾಗುತ್ತಿಲ್ಲ. ಅಲ್ಲವೇ?” ಎಂದರು. ಮಾರುದ್ದದ ಬಾಲ, ಊದಿದ ಮೂತಿ, ಮರದಿಂದ ಮರಕ್ಕೆ ಜಿಗಿಯುವ ಪ್ರಾಣಿಯನ್ನು `ಕೋತಿ’ ಎಂದು ಕಂಡುಹಿಡಿದಷ್ಟೇ ಸುಲಭವಾಗಿ ಮಂಡಿಯೂರಿಯವರು ಕುಚೇಲನ ಸಮಸ್ಯೆಯನ್ನು  ಕಂಡುಹಿಡಿದರು. ಸಾಯಿಬಾಬಾ ಸೃಷ್ಟಿಸಿದ ಚೈನನ್ನು ನೋಡುವಂತೆ ಕುಚೇಲ ಮಂಡಿಯೂರಿಯವರ ಮುಖವನ್ನೇ ಬೆಕ್ಕಸ ಬೆರಗಾಗಿ ನೋಡುತ್ತಿದ್ದ.

ತನಗೆ ಕಷ್ಟಗಳ ಮೇಲೆ ಕಷ್ಟಗಳು ಬರುತ್ತಿವೆ. ಬದುಕಿನಲ್ಲಿ ನೆಮ್ಮದಿ ಸಂತೋಷದ ಕ್ಷಣಗಳೇ ಇಲ್ಲವಾದಂತಾಗಿದೆ. ಓದಿನಲ್ಲಿ ಸರಿಯಾಗಿ ತೊಡಗಿಕೊಳ್ಳಲಿಲ್ಲ, ಪ್ರೀತಿಸಿದ ಹುಡುಗಿ ಅವಮಾನ ಮಾಡಿ ಹೋದಳು. ನಾಯಿಯ ಹಾಗೆ ಬೀದಿ ಸುತ್ತಿದರೂ ಕೆಲಸ ಸಿಕ್ಕಲಿಲ್ಲ. ಸಿಕ್ಕ ಕೆಲಸದಲ್ಲಿ ಚಿತ್ರ ಹಿಂಸೆ, ಪ್ರತಿ ಕೆಲಸದಲ್ಲೂ ಸೋಲು. ಇದುವರೆಗಿನ ನಾಲ್ಕು ಸಾವಿರ ಚಿಲ್ಲರೆ  ದಿನಗಳಲ್ಲಿ ಒಂದು ಸಲವೂ ಬಿಟಿಎಸ್ ಬಸ್ಸಿನಲ್ಲಿ ಸೀಟು ಸಿಕ್ಕಿಲ್ಲ ಎಂದರೆ ತನ್ನ ಹಣೆಬರಹ ಅದೆಷ್ಟು ಖರಾಬ್ ಇರಬೇಕು ಎಂದು ವಿಲಪಿಸಿದ ಕುಚೇಲ.

ದಿನಾ ಇಂಥವರನ್ನು ನೂರರ ಲೆಕ್ಕದಲ್ಲಿ ನೋಡುತ್ತಿದ್ದರೂ ಪ್ರತಿಯೊಬ್ಬರ ಕೊರೆತವನ್ನು ಕೇಳುತ್ತಿದ್ದರೂ ಮುಖದಲ್ಲಿ ಅಪ್ರಸನ್ನತೆಯ ಒಂದೇ ಒಂದು ಗೆರೆಯೂ ಸುಳಿಯಲು ಬಿಡದೆ ಮಂಡಿಯೂರಿಯವರು ಸಾವಧಾನವಾಗಿ ಮಾತನ್ನಾರಂಭಿಸಿದರು. “ನಿನ್ನ ಬದುಕಿನಲ್ಲಿ ನಿನಗೆ ಕೇವಲ ಸೋಲುಗಳೇ ಕಾಣಿಸುತ್ತಿವೆ, ನಿರಾಸೆಯೇ ನಿನಗೆ ಎಲ್ಲೆಲ್ಲೂ ಸಿಕ್ಕುತ್ತಿದೆ. ಬರುಬರುತ್ತ ನಿನಗೆ ಅದು ಅಭ್ಯಾಸವಾಗಿ ಹೋಗಿದೆ. ಗೆಲ್ಲುವ ಛಲದ ಜಾಗದಲ್ಲಿ ಗೆಲುವಿನ ಕನಸು ಕಾಣುತ್ತ ದಿನ ದೂಡುವೆ. ಇನ್ನು ಮುಂದೆ ಈ ದಿವ್ಯ ಮಂತ್ರವನ್ನು ಪಠಿಸಲು ಶುರು ಮಾಡು” ಎಂದು ಹೇಳಿ ಆತನ ಕೈಗೆ ಅಂಗೈ ಅಗಲದ ಕಾಗದದ ತುಂಡೊಂದನ್ನು ಕೊಟ್ಟರು.

“ಇದೂ ಮುಗಿದು ಹೋಗುತ್ತೆ”

“ನಿನ್ನೆದುರು ಸಾಲು ಸಾಲಾಗಿ ಕಷ್ಟಗಳ ಸರಮಾಲೆ ಬಂದು ನಿಲ್ಲಲಿ ನೀನು ಮನಸ್ಸಿನಲ್ಲಿ ಸದಾ ಈ ಮಂತ್ರವನ್ನೇ ಜಪಿಸುತ್ತಿರು. ಈ ಕಷ್ಟಗಳು ಶಾಶ್ವತವಲ್ಲ. ಇವು ಮುಗಿದು ಹೋಗುತ್ತವೆ. ಎಷ್ಟೇ ಸೋಲುಗಳು ನಿನಗಪ್ಪಳಿಸಿ ನಿನ್ನ ಬದುಕನ್ನು ಹೈರಾಣಾಗಿಸಲಿ, ಇದೆಲ್ಲಾ ಮುಗಿದುಹೋಗುವಂಥದ್ದು ಎಂದು ನೆನೆಸಿಕೊ. ಹಾಗೆಯೇ ಆಗಸದಲ್ಲಿ ನೆಗೆದಾಡುವಷ್ಟು ಖುಶಿಯಾಯ್ತು, ನಿನ್ನ ಬದುಕಿನಲ್ಲಿ ಸಂತಸದ ಹೊಳೆಯೇ ಹರಿಯಿತು ಎನ್ನುವಾಗಲೂ ಇದೂ ಶಾಶ್ವತವಲ್ಲ, ಇದೂ ಮುಗಿದೇ ಮುಗಿಯುತ್ತೆ ಎಂದು ನೆನೆಸಿಕೋ. ನಿನ್ನ ಬದುಕಿನಲ್ಲಿ ನಿನಗೆಂದೂ ನಿರಾಸೆಯಾಗುವುದಿಲ್ಲ. ಸುಖ ದುಃಖಗಳ್ಯಾವೂ ಶಾಶ್ವತವಲ್ಲ. ಅವೆರಡನ್ನೂ ಸಮಾನವಾಗಿ ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು.” ಭಾಷಣ ಕೊಟ್ಟರೆ ಮಂಡಿಯೂರಿ.

ಕತ್ತಲೆ ತುಂಬಿಕೊಂಡಿದ್ದ ಕುಚೇಲನ ಬಾಳಿನೊಳಗೆ ಝಿರೊ ಕ್ಯಾಂಡಲ್ ಬಲ್ಬು ಪ್ರಕಾಶಮಾನವಾಗಿ ಉರಿಯಲು ಶುರುವಾಯ್ತು. 

(ಸಶೇಷ)


Technorati Tags: , , ,

5 Responses to “ಇದೂ ಮುಗಿಯುತ್ತೆ”

 1. ರಂಜಿತ್ ಫೆಬ್ರವರಿ 28, 2009 at 8:37 ಫೂರ್ವಾಹ್ನ #

  ಸ್ವಾಮಿ ಸಾಮ್ರಾಟರೇ,

  ನಮ್ಮಂತಹ ಸೋಲಿಗರ, ವಿರಹಿಗಳ ಗುರುಗಳಾದ ಮಂಡಿಯೂರಿಯವರನ್ನೂ ಬಿಡಲಿಲ್ಲವಲ್ಲ ನಿಮ್ಮ ಹಾಸ್ಯದ ಈಟಿ.
  ಅದಕ್ಕೆ ಕೊಂಚ ಬೇಸರವಾದರೂ ಗುರುಗಳ ಮಾತಿನಂತೆ ಈ ಲೇಖನವೂ ಈ ಪೋಸ್ಟಿನಲ್ಲೇ ಮುಗಿದುಹೋಗುತ್ತೆ ಅಂದುಕೊಂಡಿದ್ದರೆ ನಿಮ್ಮ ಸಶೇಷ ಪದ ನಿರಾಸೆತುಂಟುಮಾಡಿತು.

  • Nage samrat ಫೆಬ್ರವರಿ 28, 2009 at 7:02 ಅಪರಾಹ್ನ #

   ಮಂಡಿಯೂರಿಯವರ ಅಪ್ಪಟ ಅಭಿಮಾನಿಯಾದ ಕುಚೇಲ ನಮ್ಮ ಬಳಿ ಕ್ಯಾತೆ ತೆಗೆದಿದ್ದಾನೆ. ಅವರ ಬಗ್ಗೆ ಬರೆದದ್ದಕ್ಕೆ. ಆದರೆ ಮಂಡಿಯೂರಿಯವರೇ ಬಹಳ ಸಂತೋಷ ಪಟ್ಟಿದ್ದಾರೆ (ತಮ್ಮನ್ನು ಸುದ್ದಿಯಲ್ಲಿಟ್ಟಿದ್ದಕ್ಕೆ).
   ‘ಇದು ಶಾಶ್ವತವಲ್ಲ. ಮುಗಿಯಲೇ ಬೇಕು’ ಎಂಬ ತತ್ವವನ್ನು ನೆನಪಿಟ್ಟುಕೊಂಡು ಸಮಾಧಾನ ಮಾಡಿಕೊಳ್ಳಿ… ಖಂಡಿತವಾಗಿ ಇದೂ ಮುಗಿಯುತ್ತೆ…

   ನಗೆ ಸಾಮ್ರಾಟ್

 2. ರಂಜಿತ್ ಮಾರ್ಚ್ 1, 2009 at 10:48 ಫೂರ್ವಾಹ್ನ #

  ನಿಮ್ಮ (ಕು)ಚೇಲ ರಿಗೂ ಮತ್ತು ಇದನ್ನು ಮುಗಿಸಿ ನಮ್ಮ ವ್ಯಕ್ತಿತ್ವವನ್ನು ಮೆಟ್ಟಿಲುಗಳಲ್ಲಿ ಅಲ್ಲದೇ ಲಿಫ್ಟಿನಲ್ಲಿ ಬೆಳೆಸುವ ನಿಮಗೂ ನಾನು ಮಂಡಿಯೂರಿ ಮಾಡುವ ನಮಸ್ಕಾರ..:)

  • Nage samrat ಮಾರ್ಚ್ 2, 2009 at 7:09 ಅಪರಾಹ್ನ #

   ನಿಮ್ಮ ನಮಸ್ಕಾರಗಳನ್ನು ನೀಟಾಗಿ ಚಿನ್ನಾರಿ ಪೇಪರಿನಲ್ಲಿ ಪ್ಯಾಕ್ ಮಾಡಿಸಿ ಮಂಡಿಯೂರಿಯವರಿಗೆ ಸ್ಪೀಡ್ ಪೋಸ್ಟಿನಲ್ಲಿ ರವಾನಿಸಲಾಗಿದೆ…

   -ನಗೆ ಸಾಮ್ರಾಟ್

Trackbacks/Pingbacks

 1. ಇದೂ ಮುಗಿಯುತ್ತೆ… (ಮುಗಿಯಿತು) « ನಗೆ ನಗಾರಿ ಡಾಟ್ ಕಾಮ್ - ಮಾರ್ಚ್ 2, 2009

  […] ನಗಾರಿ ವಾರ್ಷಿಕೋತ್ಸವ ವಿಶೇಷ ← ಇದೂ ಮುಗಿಯುತ್ತೆ […]

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: