ಸಚಿನ್‌ಗೆ ಪ್ಯಾಡು ದೋಷ

6 ಫೆಬ್ರ

(ನಗೆ ನಗಾರಿ ಕಿರ್ ಕಿರಿಕೆಟ್ಟು ಬ್ಯೂರೋ)

ಶ್ರೀಲಂಕಾದ ವಿರುದ್ಧ ನಡೆಯುತ್ತಿರುವ ಐದು ಏಕ ದಿನ ಪಂದ್ಯಗಳ ಮೊದಲ ಮೂರೂ ಪಂದ್ಯಗಳಲ್ಲಿ ಭಾರತದ ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಹೆಚ್ಚು ರನ್ ಗಳಿಸದೆ ಔಟಾಗಿದ್ದಾರೆ. ಮೂರೂ ಪಂದ್ಯಗಳಲ್ಲಿ ಎಲ್.ಬಿ.ಡಬ್ಲ್ಯು (ವಿಕೆಟ್ ಮುಂದೆ ಕಾಲು) ಕಾರಣಕ್ಕೆ ಔಟಾಗಿದ್ದಾರೆ. ಶ್ರೀಲಂಕಾದ ಕುಮಾರ ಧರ್ಮಸೇನಾ,ಗಾಮಿನಿ ಸಿಲ್ವಾ, ದಕ್ಷಿಣಾ ಆಫ್ರಿಕಾದ ಬ್ರಯಾನ್ ಜರ್ಲಿಂಗ್ – ಈ ಮೂವರೂ ಅಂಪೈರ್‌ಗಳು ಸಚಿನ್ ವಿರುದ್ಧ ತಪ್ಪು ತೀರ್ಪು ನೀಡಿದ್ದಾರೆ. ಬೌಲರ್‌ಗಳ ಯಾರ್ಕರ್, ಬೌನ್ಸರ್, ಗೂಗ್ಲಿ, ದೂಸ್ರಾಗಳ ಜೊತೆಗೆ ನಮ್ಮ ಲಿಟಲ್ ಮಾಸ್ಟರ್ ಅಪೈರುಗಳನ್ನೂ ಎದುರಿಸಬೇಕಾಗಿರುವ ಪರಿಸ್ಥಿತಿ ಸೃಷ್ಟಿಯಾಗಿರುವುದು ವಿಷಾದನೀಯ.

ಧೋನಿ ಎಂಬ ಕಾಲ್ಚೆಂಡಾಟಗಾರ ಕ್ರಿಕೆಟ್ ಬ್ಯಾಟು ಹಿಡಿದದ್ದು, ರಾಷ್ಟ್ರೀಯ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡದ್ದು, ಟ್ವೆಂಟಿ ಟ್ವೆಂಟಿ ಕಪ್ ಗೆದ್ದದ್ದು, ಭಾರತದ ಏಕದಿನ, ಟೆಸ್ಟ್ ತಂಡಗಳಿಗೆ ನಾಯಕನಾದದ್ದು, ಸತತವಾಗಿ ಗೆಲುವಿನ ಕುದುರೆಯ ಮೇಲೆ ಸವಾರಿ ಮಾಡುತ್ತಿರುವುದಕ್ಕೆ ಆತನ ಪ್ರತಿಭೆಯಾಗಲಿ, ನಾಯಕತ್ವ ಗುಣಗಳಾಗಲಿ, ತಂಡದ ಸದಸ್ಯರ ಹೋರಾಟವಾಗಲಿ, ಸಾಂಘಿಕ ಪ್ರಯತ್ನವಾಗಲಿ, ಪರಿಶ್ರಮವಾಗಲಿ, ಒಗ್ಗಟ್ಟಾಗಲಿ ಕಾರಣವಲ್ಲ, ಅವುಗಳ ಪರಿಣಾಮವೇನಿದ್ದರು ಊಟದಲ್ಲಿನ ಉಪ್ಪಿನ ಕಾಯಿಯದು. ಧೋನಿಯ ಗೆಲುವಿನ ಕುದುರೆ ಸವಾರಿಯನ್ನು ಬ್ಯಾಲೆನ್ಸ್ ಮಾಡುತ್ತಿರುವುದು ಅಂತರಿಕ್ಷದಲ್ಲಿರುವ ಗ್ರಹಗಳು, ತಮ್ಮ ಕೈಯಿಂದ ಉರುಳುವ ದಾಳಗಳು ಎಂದು ಘಂಟಾಘೋಷವಾಗಿ ಸಾರಿದ ಸೋಮ-ಸೂಜಿ, ಚೈನ್ ಮಹಾಶಯರು ಈಗ ಸಚಿನ್ ಮೂರು ಭಾರಿ ಔಟಾದದ್ದಕ್ಕೆ ಏನು ಕಾರಣ ಕೊಡಬಹುದು ಎಂಬ ಕುತೂಹಲ ಸಾಮ್ರಾಟರಿಗೆ ಹುಟ್ಟಿತು.

ತಮ್ಮ ಡಯಾಬಿಟಿಸಿಗೆ ದುಬಾರಿ ಆಸ್ಪತ್ರೆಯ ಅತ್ಯಂತ ದುಬಾರಿ ಡಾಕ್ಟರ ಬಳಿ ಅತ್ಯಧಿಕ ದುಬಾರಿ ಇಂಜಕ್ಷನ್ನು ಹೆಟ್ಟಿಸಿಕೊಂಡು, ಇನ್ನಷ್ಟು ವರ್ಷ ಬದುಕುಳಿಯುವುದು ಗ್ಯಾರಂಟಿಯಾ ಎಂದು ಡಾಕ್ಟರ ಬಳಿ ಮೂರ್ನಾಲ್ಕು ಬಾರಿ ಕೇಳಿಕೊಂಡು ಸಾಮ್ರಾಟರೊಂದಿಗೆ ಸಂದರ್ಶನಕ್ಕೆ ಕೂತ ಸೋಮ-ಸೂಜಿಯವರು, ‘‘ಸಚಿನ್ ಕಳೆದ ಬಾರಿ ನಾಗ ಪ್ರತಿಷ್ಠೆ ಮಾಡಿಸಿಕೊಳ್ಳಲು ಬಂದಾಗಲೇ ನಾನು ಹೇಳಿದ್ದೆ. ‘ನಿನ್ನ ಕಾಲ ಬಳಿ ಗ್ರಹಗಳ ಓಡಾಟ ಅಷ್ಟು ಸಮರ್ಪಕವಾಗಿಲ್ಲ. ಬೇಗನೇ ಶಾಂತಿಯನ್ನು ಮಾಡಿಸಿಬಿಡು’ ಎಂದು. ಆದರೆ ಆತ ನನ್ನ ಮಾತಿನಲ್ಲಿ ನಂಬಿಕೆಯಿಡಲಿಲ್ಲ. ಯಾರೆಷ್ಟೇ ದೊಡ್ಡವರಾದರೂ ಗ್ರಹಗತಿಗಳನ್ನು ಅಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಈಗ ಅರಿವಾಗಿದೆ. ಒಂದಲ್ಲ ಎರಡಲ್ಲ, ಮೂರು ಬಾರಿ. ಅದೂ ಒಂದೇ ಪಂದ್ಯಾವಳಿಯಲ್ಲಿ, ಸತತವಾಗಿ ಮೂರು ಬಾರಿ ತಪ್ಪು ತೀರ್ಮಾನದಿಂದ ಔಟಾಗುವುದು ಆಕಸ್ಮಿಕ ಎನ್ನಲು ಸಾಧ್ಯವೇ? ಒಂದು ಸಲವಾದರೆ ಹೌದೆನ್ನಬಹುದು. ಮೂರು ಬಾರಿ ಹಾಗಾಗುವುದು ಕಾಕತಾಳೀಯವಲ್ಲವೇ ಅಲ್ಲ. ಅದು ಗ್ರಹಗತಿ ದೋಷದಿಂದ ಹುಟ್ಟಿದ ಸಮಸ್ಯೆ ಎಂಬುದು ಸ್ಪಷ್ಟ.

“ನಮ್ಮ ಈ ಅಭಿಪ್ರಾಯವನ್ನು ನಾವು ಸಚಿನ್‌ಗೂ ಮತ್ತವನ ನಾಯಕ ಧೋನಿ ಇಬ್ಬರಿಗೂ ಹೇಳಿದ್ದೇವೆ. ಹೀಗಾಗಿ ಕಾಲುಗಳ ಗ್ರಹಗಳ ಶಾಂತಿ ನಡೆಯುವವರೆಗೂ ಸಚಿನ್ನನಿಗೆ ವಿಶ್ರಾಂತಿ ಕೊಡಲು ತೀರ್ಮಾನಿಸಲಾಗಿದೆ. ಶೀಘ್ರದಲ್ಲಿ ನಾವು ಬಹುದೊಡ್ಡ ಹೋಮ ಕಾರ್ಯಕ್ರಮ ನಡೆಸಿ ಶಾಂತಿ ಮಾಡಲಿದ್ದೇವೆ. ಈಗ ಐದು ನೂರು ಕಿಲೋ ತುಪ್ಪಕ್ಕೆ ಆರ್ಡರ್ ಮಾಡಿಸಿದ್ದೇವೆ. ನಾಳೆಯಿಂದ ಸಿದ್ಧತೆ ಶುರುವಾಗಲಿದೆ.”

ಸಂದರ್ಶನ ಮುಗಿಯುತ್ತಿದ್ದಂತೆ ಸೋಮ-ಸೂಜಿಯವರ ಶಿಷ್ಯೋತ್ತಮ ಸಾಮ್ರಾಟರೆದುರು ‘ಹುಂಡಿ’ಯನ್ನು ಹಿಡಿದು ನಿಂತ. ತಮ್ಮ ಖಾಲಿ ಜೇಬಿನ ಮೇಲೆ ಕೈಯಾಡಿಸಿ ಸಾಮ್ರಾಟರು, ‘ನಾನು ಹುಂಡಿಗೆ ಎಷ್ಟು ದುಡ್ಡು ಹಾಕುವೆ ಎಂಬುದನ್ನು ನಿಖರವಾಗಿ ಊಹಿಸಿ’ ಎಂದು ಸೋಮ-ಸೂಜಿಯವರಿಗೆ ಸವಾಲು ಹಾಕುವ ಮನಸ್ಸಾಯಿತು. ಆದರೆ ಅವರ ‘ತಪ ಬಲ’ ಗಿಂತಲೂ ಅಗಾಧವಾಗಿ ಕಾಣುತ್ತಿದ್ದ ಅವರ ಸುತ್ತಮುತ್ತಲಿನ ಶಿಷ್ಯರ ‘ಬಾಹು ಬಲ’ವನ್ನು ಕಂಡು ಹೆದರಿ ಕಂಗಾಲಾಗಿ ಕತ್ತಿನಲ್ಲಿದ್ದ ರೋಲ್ಡ್ ಗೋಲ್ಡ್ ಚೈನನ್ನು ಧಾರಾಳವಾಗಿ ಹುಂಡಿಗೆ ನೂಕಿ ಪಾರಾದರು.

‘ಹುದಯ’ ಟಿವಿಯ ಆಸ್ಥಾನ ಜೋತಿಷಿಗಳಾಗಿ ಮೆರೆದ ಚೈನ್ ಮಹಾಸ್ವಾಮಿಯನ್ನು ಭೇಟಿಯಾಗಿ ಸಚಿನ್ ದುರದೃಷ್ಟಕ್ಕೆ ಪರಿಹಾರವೇನೆಂದು ಸಾಮ್ರಾಟರು ಪ್ರಶ್ನಿಸಿದರು. “ನೋಡಿ ಗುರು ಗ್ರಹ ಶ್ರೀಲಂಕಾದಲ್ಲಿ ಪ್ರವೇಶಿಸಲು ಹೋಗಿ ಎಲ್.ಟಿ.ಟಿ.ಇ, ಲಂಕಾ ಸೈನ್ಯದ ಕಾಳಗದ ನಡುವೆ ಸಿಕ್ಕು ಹಾಕಿಕೊಂಡಿರುವುದರಿಂದ, ಶ್ರೀಲಂಕದಲ್ಲಿ ಶನಿಗ್ರಹ ಪ್ರಧಾನ ಪಾತ್ರ ವಹಿಸಿದೆ. ರಾಹುವು ಬೌಲರ್ ಬದಿಯ ವಿಕೆಟಿನ ಹಿಂದೆಯೂ, ಕೇತುವು ಬ್ಯಾಟ್ಸ್‍ಮನ್‌ನ ಹಿಂಬದಿಯ ಹಿಂದೆಯೂ ವಿರಾಜಮಾನನಾಗಿರುವುದರಿಂದ ಸಚಿನ್ನನಿಗೆ ‘ಕುಜ’ ದೋಷದ ಬದಲು ‘ಪ್ಯಾಡ್ ದೋಷ’ ಅಮರಿಕೊಂಡಿದೆ. ಇದಕ್ಕಿರುವ ಅತ್ಯಂತ ಸುಲಭವಾದ ಪರಿಹಾರವೆಂದರೆ ಪಂದ್ಯವಿರುವ ದಿನ ಎಡಗಡೆಯಿಂದ ಎದ್ದು, ಒಂದು ಹನಿ ನೀರನ್ನೂ ಕುಡಿಯದೆ, ಒಂದು ಕಾಳು ಅಕ್ಕಿಯನ್ನೂ ಅಗಿಯದೆ ಉಪವಾಸವನ್ನಾಚರಿಸಿ, ಕಾಲಿಗೆ ಪ್ಯಾಡ್ ಕಟ್ಟಿಕೊಳ್ಳದೆ, ಹಿಮ್ಮುಖವಾಗಿ ಕ್ರೀಜಿಗೆ ಬಂದು ನಿಲ್ಲಬೇಕು. ಆಗ ರಾಹು – ಕೇತುವಿನ ಪರಿಭ್ರಮಣೆಯಲ್ಲಿ ಬದಲಾವಣೆ ಬಂದು ‘ಪ್ಯಾಡ್ ದೋಷ’ ನಿವಾರಣೆಯಾಗುತ್ತದೆ.”

ಸಂದರ್ಶನ ಮುಗಿಸಿ ನಾಲ್ಕು ಘಳಿಗೆ ಹುಂಡಿಯ ಆಗಮನಕ್ಕಾಗಿ ಸಾಮ್ರಾಟರು ಕಾಯುತ್ತಿದ್ದರು. ಕೈಲಿದ್ದ ನಕಲಿ ಬಂಗಾರದ ಉಂಗುರವನ್ನು ಅಗಲುವುದಕ್ಕೆ ಮಾನಸಿಕವಾಗಿ ತಯಾರಾಗುತ್ತಿದ್ದರು. ಹುಂಡಿ ಬರಲೇ ಇಲ್ಲ. ಅದರ ಬದಲಾಗಿ ‘ನಗೆ ನಗಾರಿ’ಯಲ್ಲಿ ಪೂರ್ತಿ ಪುಟ ಪ್ರಕಟಣೆಗಾಗಿ ಚೈನ್ ಮಹಾಸ್ವಾಮಿಯವರ ಜಾಹೀರಾತು ಸಿಕ್ಕಿತು. ಸಾಮ್ರಾಟರು ಆ ಪ್ರತಿಯನ್ನು ಬೆಳಗಿನ ಶೌಚ ವಿಧಿ ಪೂರೈಕೆಗಾಗಿ ಬಳಸಿ ರೀಮುಗಟ್ಟಲೆ ಪುಣ್ಯವನ್ನು ಗೋಡೌನಿಗೆ ತುಂಬಿಕೊಂಡಿದ್ದಾರೆ! 

6 Responses to “ಸಚಿನ್‌ಗೆ ಪ್ಯಾಡು ದೋಷ”

 1. Dr. BR. Satyanarayana ಫೆಬ್ರವರಿ 6, 2009 at 2:12 ಅಪರಾಹ್ನ #

  ಇಷ್ಟವಾಯಿತು ಪ್ಯಾಡುಪುರಾಣ

  • Nage samrat ಫೆಬ್ರವರಿ 6, 2009 at 7:47 ಅಪರಾಹ್ನ #

   ಧನ್ಯವಾದ ಡಾಕ್ಟ್ರೇ. ಪ್ಯಾಡು ದೋಷಕ್ಕೆ ನಿಮ್ಮ ಬಳಿಯೇನಾದರೂ ಮದ್ದು ಉಂಟೋ?
   – ನಗೆ ಸಾಮ್ರಾಟ್

 2. ಮನಸ್ವಿ ಸಾಗರ ಫೆಬ್ರವರಿ 6, 2009 at 10:25 ಅಪರಾಹ್ನ #

  ಹೌದು ಕೆಲವು ಅಂಪೈರುಗಳಿಗೆ ತೋರು ಬೆರಳಲ್ಲಿ ಕಂಟಕ ಇದೆ,ಒಟ್ಟು ಮೂರು ಬಾರಿ ಮಹಾನ್ ಆಟಗಾರನಿಗೆ ತೊಂದರೆ ಮಾಡಲು ಹೋಗಿ ತಮ್ಮ ಘನತೆ ಗೌರವ ಮಣ್ಣು ಪಾಲು ಮಾಡಿಕೊಂಡು ಆ ಮಹಾನ್ ಆಟಗಾರನ ಅಭಿಮಾನಿಗಳಿಂದ ಹಾಗೂ ಜನಸಾಮಾನ್ಯರಿಂದ ಛೀಮಾರಿ ಎಂದು ನಕಲಿಬಂಗಾರದ ಮಲೆಯಾಳಿಗಳ ಒಡೆತನದ ಕನ್ನಡ ಚಾನಲಿನಲ್ಲಿ ಮಹಾನ್ ಜೋತಿಷಿಯವರು ಅನೇಕ ತಿಂಗಳುಗಳ ಹಿಂದೆಯೇ ತಮ್ಮ ಕಾರ್ಯಕ್ರಮದಲ್ಲಿ ತಿಳಿಸಿದ್ದರು…!!
  ಹೌದು ನವಗ್ರಹದ ಕನ್ನಡ ಚಾನಲ್ ನವರು ಸೆಹವಾಗ್ ಬೋಲ್ಡ್ ಆಗಿ ಔಟ್ ಆಗಿದ್ದರ ಬಗ್ಗೆ ಕೆಲವು ತಿಂಗಳ ಹಿಂದೆ ಬೌಂಡರಿ ಲೈನ್ ಎನ್ನುವ ಕಾರ್ಯಕ್ರಮದಲ್ಲಿ ವರದಿಗಾರರಿಂದ ಆಟದ ಮೈದಾನದಿಂದ ನೇರವಾದ ಆಂಕೋ ದೇಖಾ ಹಾಲ್!(ಇದು ಆಕಾಶವಾಣಿಯವರ ಕಣ್ಣಲ್ಲಿ ನೋಡಿದ್ದನ್ನು ಕೇಳುಗರಿಗೆ ಯತಾವತ್ ವಿವರಣೆ ನೀಡುವುದು) ನಂತೆ ಹೇಳಿದ

  ಸ್ಟುಡಿಯೋ: ಬನ್ನಿ ಈಗ ನೇರವಾಗಿ ನಮ್ಮ ವರದಿಗಾರ ಮಣ್ಣಪ್ಪನವರಿಂದ ಸ್ಟೇಡಿಯಂ ನಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳೋಣ
  ಮಣ್ಣಪ್ಪನವರೇ…….. ಅಲ್ಲಿ ಏನು ನೆಡಿತಾ ಇದೆ ಮಣ್ಣಪ್ಪನವರೇ ನನ್ನ ಧ್ವನಿ ಕೇಳ್ತಾ ಇದೆಯಾ(ಮತ್ತೆ ಅದೇ ಮೇಲೆ ಕೇಳಿದ ಪ್ರಶ್ನೆ ರಿಪೀಟ್!)

  ವರದಿಗಾರ:(ನೇರ.. ಮೈದಾನದಿಂದ) ಹಾ.. ಕೇಳ್ತಾ ಇದೆ..ಸಣ್ಣಪ್ಪನವರೇ ಏನಾಗ್ತ ಇದೆ ಎಂದರೆ… ಆಟ ತುಂಬಾ ರೋಚಕ ಘಟ್ಟ ಕ್ಕೆ ಬಂದಿದೆ ನೋಡಿ ಸ್ಟೇಡಿಯಂ ನ ತುಂಬಾ ಕ್ರಿಕೆಟ್ ಅಭಿಮಾನಿಗಳು ತುಂಬಿ ತುಳುಕುತ್ತಿದ್ದಾರೆ.. ಬಾರೀ ಸಂಖ್ಯೆಯಲ್ಲಿ ಕ್ರಿಕೆಟ್ ವೀಕ್ಷಕರು ಬಂದಿದ್ದಾರೆ

  ಸ್ಟುಡಿಯೋ:(ಕ್ರಿಕೆಟ್ ವೀಕ್ಷಕರು ಬರದೇ ಇನ್ನು ಹಾಕಿ ವೀಕ್ಷಕರು ಬರುತ್ತಾರ ಎಂದು ಕೇಳುವಷ್ಟು ಸಿಟ್ಟು ಬರುತ್ತಿದೆ, ಅರ್ಧದಲ್ಲಿಯೇ ವರದಿಗಾರನ ಮಾತಿಗೆ ತಡೆಯೊಡ್ಡಲು ಮತ್ತೊಂದು ಪ್ರಶ್ನೆಯನ್ನು ಕೇಳಿಯೇ ಬಿಟ್ಟ ) ಸೆಹವಾಗ್ ಔಟ್ ಆಗಲು ಏನು ಕಾರಣ ಅವರು ಉತ್ತಮ ಫಾರಂ ನಲ್ಲಿ ಇದ್ರು??!! ಯಾಕೆ, ಯಾಕೆ ಹೀಗಾಯ್ತು ಅಂತೀರಿ?? ಚಂಡು ನೇರವಾಗಿ ಅವರ ವಿಕೇಟಿಗೆ ಬಡಿತಾ ಅಂತಾ? ಪ್ಯಾಡ್ ಅಡ್ಡಾ ಕೊಟ್ಟಿದ್ರೆ ಆಗ್ತಿರ್ಲಿಲ್ವಾ ಅಂತಾ?!!

  ವರದಿಗಾರ(ನೇ.. ಮೈ, ಏರಿದ ಧ್ವನಿಯಲ್ಲಿ) ನೋಡಿ ಸಣ್ಣಪ್ಪನವರೆ ಅದೇನಾಯ್ತು ಅಂದ್ರೆ ಸೆಹವಾಗ್ ಉತ್ತಮ ಫಾರಂ ನಲ್ಲೇ ಇದ್ರೂ ಆದ್ರೆ ಅವರ ಬ್ಯಾಟು ಮತ್ತೆ ಪ್ಯಾಡಿನ ನಡುವೆ ಗ್ಯಾಪ್ ಜಾಸ್ತಿ ಇದ್ದಿದ್ರಿಂದ ಬೌಲ್ಡ್ ಆದ್ರೂ.. ಬೇಲ್ಸ್ ಗೆ ನೇರವಾಗಿ ಚಂಡು ಬಡೀತು…

  ತಾಂತ್ರಿಕ ವರ್ಗ ಇವರ ಕರ್ಮಕಾಂಡ ನೋಡಲಾಗದೆ ಸಂಪರ್ಕ ಕಡಿತಗೊಳಿಸಿದರು…
  ಸ್ಟುಡಿಯೋದವ: (ಉಸ್ಸಪ್ಪಾ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ…) ಸಂಪರ್ಕ ಕಡಿತಗೊಂಡಿದೆ ಸಂಪರ್ಕ ಸಾಧ್ಯವಾಗುತ್ತಿಲ್ಲ, ಇನ್ನು ಕೆಲ ನಿಮಿಷಗಳ ನಂತರ ಮತ್ತೆ ನಮ್ಮ ಮಣ್ಣಪ್ಪನವರಿಂದ ನೇರವಾದ ಮಾಹಿತಿ ಪಡೆಯೋಣ,ಈಗ ಸಣ್ಣದೊಂದು ಬ್ರೇಕ್…..

  • Nage samrat ಫೆಬ್ರವರಿ 6, 2009 at 10:39 ಅಪರಾಹ್ನ #

   ನಿಮ್ಮ ವಿವರವಾದ ಪ್ರತಿಸ್ಪಂದನಕ್ಕೆ ಧನ್ಯವಾದಗಳು.
   ವರದಿಗಾರಿಕೆ ಮಾಡುವುದು ಹೇಗೆ ಎಂಬ ಭವಿಷ್ಯದಲ್ಲಿನ ಬೆಸ್ಟ್ ಸೆಲ್ಲರ್ ಕೃತಿಯನ್ನು ಒಂಭತ್ತು ಟಿವಿಯ ವರದಿಗಾರರು ಬರೆಯುತ್ತಿದ್ದಾರೆ. ಅದರ ಬಗ್ಗೆ ಸ್ಕೂಪ್ ಸಿಕ್ಕಿದ ಕೂಡಲೆ ನಗಾರಿಯಲ್ಲಿ ಪ್ರಕಟಿಸುವೆವು.

   – ನಗೆ ಸಾಮ್ರಾಟ್

 3. ರಂಜಿತ್ ಫೆಬ್ರವರಿ 7, 2009 at 9:40 ಫೂರ್ವಾಹ್ನ #

  ಸೂಪರ್ ಆಗಿದೆ ಸಾಮ್ರಾಟರೇ. ಹೀಗೆ ನೀವು ಬರೆದರೆ ಹೊಟ್ಟೆ ಹುಣ್ಣಿಗೆ ಕಾರಣವೇನೆಂದು ಚೈನ್ ಮಹಾಸ್ವಾಮಿಯ ಅಥವ ಸೂಜಿ ಸ್ವಾಮಿ ಯವರ ಮುಂದೆ ಕ್ಯೂ ನಲ್ಲಿ ನಿಲ್ಲಬೇಕಾದೀತು..:)

  ನಿಜಕ್ಕೂ ಖುಷಿಯಾಯಿತು ಓದಿ..:)

  • Nage samrat ಫೆಬ್ರವರಿ 7, 2009 at 9:35 ಅಪರಾಹ್ನ #

   ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಅನ್ನುತ್ತಾರೆ, ನಿಮ್ ಹೊಟ್ಟೆ ಹುಣ್ಣಿಗೆ ಚೈನ್ ಸ್ವಾಮಿಯ ಮುನ್ನುಡಿ ಬೇಕೇ?
   ಒಂದು ಬಾಟಲ್ ಸೋಡಾಗೆ ಸ್ವರ್ಗ ಕಾಣಿಸಿ ಸಾಕು!

   – ನಗೆ ಸಾಮ್ರಾಟ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: