ಸಾಮ್ರಾಟರು ತಮ್ಮ ಅದ್ವಿತೀಯ ಬಾಲ್ಯವನ್ನು ಅನೇಕ ಮೇರು ವ್ಯಕಿಗಳೊಂದೊಗೆ ಕಳೆದಿದ್ದಾರೆ. ಚಡ್ಡಿ ಹಂಚಿಕೊಳ್ಳುವುದಕ್ಕೂ ಮೊದಲೇ ಭೂಮಿಯನ್ನೂ ಆಕಾಶವನ್ನೂ ಸಮಾನವಾಗಿ ಹಂಚಿಕೊಂಡು ಗೆಳೆತನದ ಧೀಮಂತ ಆದರ್ಶವಾಗಿದ್ದಾರೆ. ಊರಿನ ಮಂದಿ ಸಾಮ್ರಾಟರ ಸಾಧನೆಗಳನ್ನು, ಸಾಹಸಗಳನ್ನು ಕಂಡು ಹೊಟ್ಟೆ ಉರಿದುಕೊಂಡು, ಕಣ್ಣು ಕೆಂಪಗೆ ಮಾಡಿಕೊಂಡು ಊರಿನಿಂದ ಓಡಿಸಿದಾಗ ವಿಧಿಲಿಖಿತದಂತೆ ಅವರ ಗೆಳೆಯರ ಬಳಗ ದೂರಾಯಿತು. ಆದರೆ ಸಾಮ್ರಾಟರು ತಮ್ಮ ಪ್ರತಿಭೆಯನ್ನು ಜಾವದಲ್ಲಿ ಅರಳಿದ ಮಲ್ಲಿಗೆಯ ಕಂಪಿನ ಹಾಗೆ ಆರೂ ದಿಕ್ಕುಗಳಲ್ಲಿ (ಮೇಲೆ ಹಾಗೂ ಕೆಳಗೆ ಎರಡು ದಿಕ್ಕುಗಳಿವೆ ಎಂಬ ಜ್ಞಾನೋದಯ ಸಾಮ್ರಾಟರಿಗೆ ತುಂಬಾ ಹಿಂದೆಯೇ ಆಗಿದೆ.) ಹರಡಲು ತೊಡಗಿದಾಗ ಆಕರ್ಷಿತರಾದ ಅಸಂಖ್ಯಾತ ರಸಿಕ ದುಂಬಿಗಳಲ್ಲಿ ಸಾಮ್ರಾಟರ ಈ ಗತಕಾಲದ ಗೆಳೆಯನೂ ಇದ್ದ ಎಂಬುದನ್ನು ಸಾಮ್ರಾಟರು ಕನಸಿನಲ್ಲಿರಲಿ, ತಮ್ಮ ತೀವ್ರ ಏಕಾಗ್ರತೆಯ ಧ್ಯಾನದಲ್ಲೂ ಊಹಿಸಿರಲಿಲ್ಲ.
ಸಾಮ್ರಾಟರೊಂದಿಗೆ ತೀರಾ ಚಿಕ್ಕಂದಿನಲ್ಲಿ ಭೂಮಿಯನ್ನೂ, ಆಕಾಶವನ್ನೂ ಹಂಚಿಕೊಂಡು, ಸ್ವಲ್ಪ ಬೆಳೆದ ನಂತರ ನಿಕ್ಕರನ್ನು ಹಂಚಿಕೊಂಡು, ಬೆಳೆ ಬೆಳೆಯುತ್ತಾ ಬೀಡಿ, ಸಿಗರೇಟು, ಟೆಂಟ್ ಸಿನೆಮಾ ಟಿಕೇಟು, ಹೀಗೆ ಅನೇಕ ಸಾಹಸಗಳಲ್ಲಿ ಸಮಪಾಲನ್ನು ಪಡೆಯುತ್ತಿದ್ದ ಅಪ್ರತಿಮ ಗೆಳೆಯ ತೊಣಚಪ್ಪನವರು ಇಷ್ಟು ದಿನ ನಗೆ ನಗಾರಿಯನ್ನು ಗಮನಿಸುತ್ತಿದ್ದರು ಎಂಬುದನ್ನು ತಿಳಿದು ಸಾಮ್ರಾಟರಿಗೆ ಹಾಲಿಗೆ ನಿಂಬೆ ಹಣ್ಣು ಬೆರೆಸಿಕುಡಿದಷ್ಟು ಸಂತೋಷವಾಗಿದೆ! ಚಿಕ್ಕಂದಿನಲ್ಲಿ ಊರ ಬಯಲಿನಲ್ಲಿ ದೇಹದ ಮಾಲಿನ್ಯವನ್ನು ಕಳೆದು ‘ಮುಕ್ತ’ರಾಗುವ ತಪಸ್ಸಿನಲ್ಲಿ ತೊಡಗಿರುವಾಗಲೂ ನೀರಿನ ಚೊಂಬಿನಲ್ಲಿ ಪಾಲು ಬೇಡುತ್ತಿದ್ದ, ಪಡೆಯುತ್ತಿದ್ದ ತೊಣಚಪ್ಪನವರು ನಗೆ ನಗಾರಿಗೆ ವಕ್ಕರಿಸಿರುವುದು ನಮ್ಮ ಸಂಸ್ಥೆಯ ಸಮಸ್ತ ಸಿಬ್ಬಂದಿಗೆ ಹರ್ಷವುಂಟು ಮಾಡಿದೆ ಎಂದು ತಿಳಿಸಲು ಹರ್ಷಿಸುತ್ತೇವೆ.
ಇಷ್ಟು ದಿನ ಸಾಮ್ರಾಟರ ಕೊರೆತವನ್ನು ಸಹಿಸಿಕೊಂಡು ಗಟ್ಟಿಯಾಗಿದ್ದ ನಗೆ ನಗಾರಿಯ ಸ್ಥೈರ್ಯವಂತ, ಗಟ್ಟಿ ಹೃದಯದ ಧೀರರು ಈ ಹೊಸ ದಾಳಿಯಿಂದ ಧೃತಿಗೆಡಬಾರದು ಎಂದು ಸವಿನಯವಾಗಿ ಪ್ರಾರ್ಥಿಸುತ್ತೇವೆ. ತಮ್ಮ ಪ್ರಿಯವಾದ ಜೀವಿ ತೊಣಚಿ, ತಮಗೆ ಪ್ರಿಯವಾದ ಹವ್ಯಾಸ ರಗಳೆ, ಪ್ರಿಯವಾದ ಜೀವನ ಶೈಲಿ ಕಲಹ ಎಂದು ತಮ್ಮನ್ನು ತಾವು ಪರಿಚಯಿಸಿಕೊಳ್ಳುವ ತೊಣಚಪ್ಪನವರನ್ನು ನಾವು ಸಮಸ್ತ ಗೌರವಾದರಗಳಿಂದ ನಗೆ ನಗಾರಿಗೆ ಸ್ವಾಗತಿಸುತ್ತಿದ್ದೇವೆ. ನಮ್ಮ ಪ್ರೀತಿಯ ಓದುಗರ ಮೇಲಿನ ಅನುಕಂಪದಿಂದ ತೊಣಚಪ್ಪನವರ ಬರಹಗಳನ್ನು ಭಾನುವಾರ ಮಾತ್ರವೇ ಪ್ರಕಟಿಸಬೇಕು ಎಂದು ನಗೆ ನಗಾರಿಯ ನಿರ್ದೇಶಕರ ಸಭೆಯು ತೆಗೆದುಕೊಂಡಿದ್ದ ತೀರ್ಮಾನವನ್ನು ಕ.ಬುಗೆ ಎಸೆದ ತೊಣಚಪ್ಪನವರು ನಗೆ ನಗಾರಿಯನ್ನು ಸಾಮ್ರಾಟರಿಗೆ ಸರಿಸಮಾನವಾಗಿ ಬಳಸಿಕೊಳ್ಳುವುದಾಗಿ ಬೆದರಿಸಿದ್ದಾರೆ. ತಮ್ಮ ಬ್ಲಾಗು ಬರಹದ ಒಂದಕ್ಷರವನ್ನೂ ಎಡಿಟ್ ಮಾಡಬಾರದು ಎಂದು ಕಟ್ಟಪ್ಪಣೆ ಮಾಡಿದ್ದಾರೆ.
ಈ ಮಧ್ಯೆ ಬದುಕಿನಲ್ಲಿ ಬಹುದಿನಗಳ ನಂತರ ಸಂತಸದ ಕ್ಷಣಗಳನ್ನು ಸವಿಯುತ್ತಿದ್ದ ನಗೆ ಸಾಮ್ರಾಟರು ತೀವ್ರವಾಗಿ ವ್ಯಾಕುಲಗೊಂಡಿದ್ದಾರೆ. ಅತಿ ಕಾಳಜಿಯಿಂದ ನಗೆ ನಗಾರಿ ಸಿಬ್ಬಂದಿ ಅವರನ್ನು ಪ್ರಶ್ನಿಸಿದಾಗ ತಮ್ಮದು ವಸಿಷ್ಠ- ವಿಶ್ವಾಮಿತ್ರ ಜೋಡಿ ಎಂದು ತಿಳಿಸಿದ ಸಾಮ್ರಾಟರು ಈ ವಿಶ್ವಾಮಿತ್ರ ತೊಣಚಪ್ಪ ನನ್ನೆಲ್ಲಾ ಸೃಷ್ಟಿಗೆ ಪ್ರತಿಸೃಷ್ಟಿ ಮಾಡುತ್ತಾ ಹೋದರೆ… ಎಂದು ಆತಂಕ ವ್ಯಕ್ತಪಡಿಸಿದರು. ತಮ್ಮ ಸಂಪಾದಕೀಯಕ್ಕೆ ಪ್ರತಿಯಾಗಿ ತೊಣಚಪ್ಪ ಸಂಪಾದಕೀಯವನ್ನು ಬರೆಯಲು ಶುರುಮಾಡಿದರೆ ಎಂಬ ಆತಂಕವನ್ನು ತೋರ್ಪಡಿಸಿಕೊಳ್ಳಲು ಹಿಂದೇಟು ಹಾಕಿದ ಸಾಮ್ರಾಟರು ತೊಣಚಪ್ಪನವರನ್ನು ಅತ್ಯಂತ ತಣ್ಣಗೆ ಮಣ್ಣುಪಾಲು ಮಾಡಲು ದುಬೈನಿಂದ ಹಂತಕರನ್ನು ಕರೆಸುವ ಯೋಜನೆಯನ್ನು ಮಾಡಿದ್ದಾರೆ.
ಅಂತರಂಗದ ವಿಷಯಗಳು ಏನೇ ಇದ್ದರೂ ನಗೆ ನಗಾರಿ ಡಾಟ್ ಕಾಮ್ ಸಂತೋಷದಿಂದ ತನ್ನೆಲ್ಲಾ ಓದುಗರಿಗೆ ಹೊಸ ವರ್ಷದ ಹಾಗೂ ಸಂಕ್ರಾಂತಿಯ ಹಾಗೂ ಮೊಹರಮ್ ಶುಭಾಶಯಗಳನ್ನು ತಿಳಿಸುತ್ತಿದೆ. ಹಾಗೆಯೇ ನಗೆ ನಗಾರಿಯನ್ನು ಉಪೇಕ್ಷಿಸುವವರು ಹಾಗೂ ಬ್ಲಾಗಿನ ಅಂಗಳದಲ್ಲಿದ್ದೂ ಇತ್ತ ತಲೆ ಹಾಕದವರಿಗೆ ದೇವೇಗೌಡರ ಹಾಸ್ಯ ಪ್ರಜ್ಞೆ, ಖರ್ಗೆಯವರ ಕಂಠಸಿರಿ, ಯಡಿಯೂರಿಯಪ್ಪನವರ ಸಫಾರಿ, ಸಿಹಿ ಕಹಿ ಚಂದ್ರುರ ನುಣ್ಣನೆಯ ತಲೆಯನ್ನು ಕರುಣಿಸಲಿ ಎಂದು ತಾನೆಂದೆಂದಿಗೂ ನಂಬದ ದೇವರಲ್ಲಿ ಅತ್ಯಂತ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತದೆ! ಆ ನಿಮ್ಮ ದೇವರು ನಿಮ್ಮನ್ನು ತೊಣಚಪ್ಪನಿಂದ ಕಾಪಾಡಲಿ…
ತೊಣಚಿ ಡೈರಿ: ಪುಟ ೧
ಕಂಬಿ ಎಣಿಸುತ್ತಿರುವ ರಾಜು – ವರದಿ
ನಮ್ ಪೇಪರ್ನೋರ್ಗೆ ಒಂದೋ ಬುದ್ಧಿ ಇಲ್ರಿ, ಇಲ್ಲಾಂದ್ರೆ ಅದು ಇರ್ಬೇಕಾದ ಜಾಗ್ದಾಗೆ ಇಲ್ರಿ. ಇಂಥವ್ನ ಜೈಲ್ಗೆ ಹಾಕ್ದ್ರು ಅನ್ನದನ್ನ ‘ಅಂವ ಕಂಬಿ ಎಣಿಸ್ತಿದಾನೆ’ ಅಂತ ಹೆಂಗೆ ಬರೀಯಕೆ ಆಗ್ತದೆ? ಜೈಲ್ಗೆ ಹೋದ ಮಗ ಎಲ್ಲ ಕಂಬಿ ಎಣಿಸ್ತಾರ? ಇದ್ರ ಬಗ್ಗೆ ತಿಳ್ಕಂಡು ಬರಿಬೇಕು. ಜೈಲ್ಗೆ ಹೋದವ್ರು ಮಾಡೊ ಕೆಲ್ಸನೆಲ್ಲ ಪಟ್ಟಿ ಮಾಡಿ ಅದ್ರಲ್ಲಿ ಕಂಬಿ ಎಣ್ಸದು ಎಲ್ಲಿ ಇದೆ ಅಂತ ತಿಳಿಸ್ಬೇಕು. ಇಷ್ಟಕ್ಕೂ ಕಂಬಿ ಎಣಸ್ತರೆ ಅಂದ್ರೆ ಅವು ಅವ್ರದೇ ಸೆಲ್‌ನ ಕಂಬಿಗಳು ಹೌದಾ ಅಲ್ವಾ ಅಂತ ತನಿಖೆ ಮಾಡ್ಬೇಕು. ಎಣಿಸೋದನ್ನೆ ಕಲಿಯದ ಮಡ್ಡಿಗಳು ಜೈಲ್ಗೆ ಹೋದ್ರೆ ಕಂಬಿಗಳ್ ಜೊತೆ ಏನ್ ಮಾಡ್ತಾರೆ ಅನ್ನಾದನ್ನ ತಿಳಿಸ್ಬೇಕು. ಅಲ್ವಾ?
ಧೋನಿ, ಪಂಕಜ್ ಅಡ್ವಾನಿ ಭದ್ರತೆ ಇಲ್ಲದೆ ರಾಬಿನ್ ಉತ್ತಪ್ಪ ಮನೆಗೆ ಭೇಟಿ – ವರದಿ
ನಮ್ ಪೊಲೀಸ್ನೋರ್ಗೆ ಬುದ್ದಿ ಇಲ್ವಾ? ಇವ್ರನ್ನೆಲ್ಲ ಹಿಂಗೆ ಸೆಕ್ಯುರಿಟಿ ಇಲ್ದೆ ಓಡಾಡಕೆ ಬಿಡ್ಬಾರ್ದು. ಇದು ನಿಜವಾಗ್ಲು ಡೆಂಜರಸ್ಸು. ಇವ್ರನ್ನ ಕಾಯಕೆ ಕನಿಷ್ಠ ಹತ್ ಮಂದಿಯಾದ್ರೂ ಇರ್ಲೇ ಬೇಕು. ಹೆಂಗಂದ್ರೆ ನಮ್ ಊರಲ್ಲಿ ಡಯಾಬಿಟಿಸ್ ಶ್ರೀಮಂತ್ರು ತಮ್ಗಿಂತ ಎತ್ರದ ನಾಯಿಗೆ ಚೈನ್ ಹಾಕಿ ಕರ್ಕೊಂಡೋಗ್ತರಲ್ಲ, ಹಂಗೆ. ಇವ್ರನ್ನೆಲ್ಲ ಚೈನಿಲ್ದೆ ಹೊರಕ್ಕೆ ಬಿಡ್ಬಾರ್ದು. ಏನಂತೀರಿ ನೀವ್ಗಳು?
ವಿದೇಶಿಯರಿಂದ ಭಾರತದ ಜ್ಞಾನ ಸಂಪತ್ತಿನ ಕಳವು – ರವಿಶಂಕರ್ ಗುರೂಜಿ
ಹೌದೌದು, ಕಾಲ ಬದಲಾಗ್ತಿದೆ. ಹಿಂದೆ ನಮ್ ಸ್ಕೂಲಲ್ಲಿ ಮೇಡಮ್ಮು ನಿಮ್ ಹತ್ರ ಇರೋ ಯಾವುದನ್ನ ಇನ್ನೊಬ್ರು ಕದ್ಕೊಂಡು ಹೋಗಾಕಾಗಲ್ಲ ಅಂತ ಕೇಳೋರು. ಆಮೇಲೆ ಅವ್ರೇ ಉತ್ರ ಹೇಳೋರು, ದುಡ್ಡಿದ್ರೆ ಅದ್ನ ಕಳ್ಳ ಕದ್ದು ಒಯ್ಯಬಹ್ದು, ಚಿನ್ನ ಇದ್ರೆ ಕದೀಬಹ್ದು, ಮನೆ ಇದ್ರೆ ಅದ್ನ ನಾಶ ಮಾಡ್ಬೋದು. ಆದ್ರೆ ನಿಮ್ಮ ವಿದ್ಯೆಯನ್ನ ಯಾರೂ ಕದೀಯಕಾಗಲ್ಲ. ಆಗೆಲ್ಲಾ ನಂಗೆ ನಮ್ಮಿಂದ ಕದಿಯಲಾಗದ ಮತ್ತೊಂದು ವಸ್ತು ನೆನಪಾಗ್ತಿತ್ತು. ಅದು ನನ್ ಬಳಿ ಭಾಳ ಇತ್ತು, ಯಾರಾದ್ರೂ ಕದೀತಾರೇನೋ ಅಂತ ಕಾಯ್ತಿದ್ದೆ. ಇಷ್ಟು ವರ್ಷ ಆದ್ರೂ ಅದ್ರಲ್ಲಿ ನಯಾಪೈಸೆ ಕಳ್ತನ ಆಗಿಲ್ಲ. ಓ, ಅದೇನು ಅಂತೀರಾ? ಅದು ನನ್ ಮೂರ್ಖತನ! ಕದಿಯೋ ತಾಕತ್ತು ಐತಾ ವಿದೇಶಿಯರೇ? 🙂
ನಿಮ್ಮದೊಂದು ಉತ್ತರ