ದೊಡ್ಡವರನ್ನು ಬೈಯಿರಿ ದೊಡ್ಡವರಾಗಿರಿ!

3 ನವೆಂ

(ನಗೆ ನಗಾರಿ ವ್ಯಕ್ತಿತ್ವ ವಿಕಸನ ಬ್ಯೂರೋ)

ನಾಡಿನ ಹೆಸರಾಂತ ಪತ್ರಿಕೆಯ ಅಂಕಣಕಾರರು ನೀಡಿದ ಭಾರತವನ್ನು ಬೈಯಿರಿ ಬುಕರ್ ಪಡೆಯಿರಿ’ ಎಂಬ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವ ನಗೆ ಸಾಮ್ರಾಟರು ನಿಟ್ಟಿನಲ್ಲಿ ಅಗಾಧವಾದ ಸಂಶೋಧನೆಯನ್ನು ಮಾಡಿ ಬಹುದೊಡ್ಡ ಗ್ರಂಥವನ್ನು ಬರೆಯುವಂತೆ ತಮ್ಮ ಚೇಲ ಕುಚೇಲನಿಗೆ ತಾಕೀತು ಮಾಡಿದ್ದಾರೆ. ತನ್ನ ಶಿಷ್ಯನಿಗೆ ಬುಕರ್ ಬಂದಿತು ಎಂದು ಹೇಳಿಕೊಳ್ಳುವ ಹೆಮ್ಮೆಯಷ್ಟೇ ತನಗೆ ಸಾಕು ಎಂದು ಹೇಳಿರುವ ಸಾಮ್ರಾಟರನ್ನು ಜಗದ್ಗುರುವಿನ ಪಟ್ಟಕ್ಕೆ ಕಟ್ಟಬೇಕು ಎಂದು ಹಲವರು ಯೋಚಿಸುತ್ತಿರುವುದು ಸುಳ್ಳು ಎಂದು ನಮ್ಮ ಮೂಲಗಳು ಸ್ಪಷ್ಟಪಡಿಸಿವೆ.

ನಮ್ಮ ನೆಚ್ಚಿನ ಅಂಕಣಕಾರರ ಸಲಹೆಯನ್ನು ಅನುಸರಿಸಿ ನಗೆ ಸಾಮ್ರಾಟರು ಮತ್ತಷ್ಟು ಸಲಹೆಗಳನ್ನು ಓತಪ್ರೋತವಾಗಿ ನೀಡಲು ಸಿದ್ಧರಾಗಿ ನಿಂತಿದ್ದು ಅವುಗಳಲ್ಲಿ ತೀರಾ ಅಮೂಲ್ಯವಾದ ಒಂದನ್ನು ನಗೆ ನಗಾರಿಯ ಓದುಗರೊಂದಿಗೆ ಹಂಚಿಕೊಳ್ಳಲು ಇಚ್ಚಿಸಿದ್ದಾರೆ. ‘ಯಶಸ್ಸಿಗೆ ನೂರು ಮೆಟ್ಟಿಲು’, ‘ಹತ್ತೇ ಮೆಟ್ಟಿಲು’, ‘ಒಂದೇ ಮೆಟ್ಟಿಲು’ ಎಂದೆಲ್ಲಾ ರೀಮುಗಟ್ಟಲೆ ಬರೆದು ಬಿಸಾಕಿರುವ ಸಕ್ಸೆಸ್ ಗುರುಗಳ್ಯಾರಿಗೂ ತಿಳಿಯದ ಯಶಸ್ಸಿನ ಗುಟ್ಟನ್ನು ಸಾಮ್ರಾಟರು ಕಂಡುಕೊಂಡಿದ್ದಾರೆ. ಯಶಸ್ಸಿಗೆ ಎಷ್ಟೇ ಮೆಟ್ಟಿಲಿದ್ದರೂ ಅವುಗಳಿಗಿಂತ ಮುಂಚೆ ಒಂದು ಗೇಟ್ ಇರುತ್ತದೆ, ಅದನ್ನು ತೆರೆದರೆ ಮಾತ್ರ ಮೆಟ್ಟಿಲು ಏರಲು ಸಾಧ್ಯ, ಗೇಟಿಗೆ ಯಾವ ಕೀಲಿ ಕೈಯೂ ಇಲ್ಲ. ಆದರೆ ಅದನ್ನು ಕಾಯಲು ಒಬ್ಬ ಕಾವಲುಗಾರ ಮಾತ್ರನಿದ್ದಾನೆ. ಆತನಿಗೆ ಪ್ರಿಯವಾಗುವ ಹಾಗೆ ನಡೆದುಕೊಂಡುಬಿಟ್ಟರೆ ಸಾಕು ಆತ ಗೇಟಿನ ಬಾಗಿಲು ತೆರೆದು ನಮ್ಮನ್ನು ನಮ್ಮ ನಮ್ಮ ನಂಬಿಕೆಯ ನೂರೋ, ಹತ್ತೋ, ಒಂದೋ ಮೆಟ್ಟಿಲಿನ ಯಶಸ್ಸಿನ ಹಾದಿಯನ್ನು ಕ್ರಮಿಸಲು ಬಿಟ್ಟುಬಿಡುತ್ತಾನೆ.


ಕಾವಲುಗಾರ ಯಾವ ತಕರಾರನ್ನೂ ತೆಗೆಯದೆ ನಿಮ್ಮನ್ನು ಒಳಕ್ಕೆ ಬಿಡಬೇಕೆಂದರೆ ಮಾಡಬೇಕಾಗಿರುವುದು ಇಷ್ಟೇ: ನೀವು ದೊಡ್ಡವರಾಗಬೇಕು. ನಿಮಗೆ ಕೋಟ್ಯಾಧೀಶರು ಆಗುವುದು ಹೇಗೆ, ಆರೋಗ್ಯವಂತರಾಗುವುದು ಹೇಗೆ, ಪರೀಕ್ಷೆಯಲ್ಲಿ ಮಾರ್ಕು ಗಳಿಸುವುದು ಹೇಗೆ, ಹೆಂಡತಿಯನ್ನು ರಮಿಸುವುದು ಹೇಗೆ, ಗಂಡನನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ, ಬಾಸಿನ ತಲೆಗೆ ಬೆಣ್ಣೆ ತಿಕ್ಕುವುದು ಹೇಗೆ, ಕೆಲಸಗಾರರಿಂದ ಚಾಕರಿ ಮಾಡಿಸಿಕೊಳ್ಳುವುದು ಹೇಗೆ, ನಾಯಕರಾಗುವುದು ಹೇಗೆ ಎಂದೆಲ್ಲಾ ಉಪದೇಶ ಮಾಡುವ ಅನೇಕ ಪುಸ್ತಕಗಳು, ಆಡಿಯೋ ಟೇಪುಗಳು, ವಿಡಿಯೋಗಳು, ಬಡಬಡಿಸುವ ಟೀಚರುಗಳು ಸಿಕ್ಕಬಹುದಾದರೂ ದೊಡ್ಡವರಾಗುವುದು ಹೇಗೆ ಎಂದು ತಿಳಿಸುವವರು ಯಾರೂ ಸಿಕ್ಕುವುದಿಲ್ಲ. ತಮ್ಮ ನೆಚ್ಚಿನ ಅಂಕಣಕಾರರ ಸ್ಪೂರ್ತಿಯಿಂದ ಸಾಮ್ರಾಟರು ರಹಸ್ಯವನ್ನು ಬಯಲು ಮಾಡಿದ್ದಾರೆ. ದೊಡ್ಡವರಾಗಲು ನೀವು ಮಾಡಬೇಕಿರುವುದು ಇಷ್ಟೇ: ದೊಡ್ಡವರನ್ನು ಬೈಯಿರಿ. ಹಾಗೂ ನೀವು ಬೈಯ್ದದ್ದು ಗರಿಷ್ಠ ಮಂದಿಯ ಕಿವಿಗೆ ಬೀಳುವಂತೆ ಮಾಡಿ!


ಉದಾಹರಣೆಯ ಮೂಲಕ ವಿವರಿಸುವುದಾದರೆ, ಪ್ರಖ್ಯಾತ ಪತ್ರಿಕೆಯ ಅಂಕಣವೊಂದನ್ನು ಗಿಟ್ಟಿಸಿಕೊಳ್ಳಿ, ಇಲ್ಲವೇ ತಿಂಗಳು ತಿಂಗಳು ಸೇರುವ ಸಭೆಯೊಂದರಲ್ಲಿ ಮಾತಾಡುವ ಅವಕಾಶ ಸಂಪಾದಿಸಿಕೊಳ್ಳಿ, ಇಲ್ಲವೇ ಮೊದಲೇ ದೊಡ್ಡವರಾದವರ ಹಿಂದೆ ಸುಮ್ಮನೆ ಸುತ್ತುತ್ತಿರಿ. ಅನಂತರ ಒಬ್ಬೊಬ್ಬರನ್ನೇ ಆಯ್ದುಕೊಂಡು ಅವರ ಓರೆಕೋರೆಗಳನ್ನಷ್ಟೇ ಪಟ್ಟಿಮಾಡಿಕೊಂಡು ಮನಸಾರೆ ಬೈಯ್ಯುತ್ತಾ ಹೋಗಿ. ಗಾಂಧಿ ಜಯಂತಿ ಹತ್ತಿರವಿಲ್ಲ ಎಂಬುದನ್ನು ಖಾತರಿ ಪಡಿಸಿಕೊಂಡು ಗಾಂಧೀಜಿಯನ್ನು ಬಯ್ಯಲು ಶುರುಹಚ್ಚಿಕೊಳ್ಳಿ. ಬೈಯಲ್ಲು ಬೇಕಾದ ವಿಷಯದ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳುವುದು ಬೇಡ ನಿಮಗಿಂತ ಮೊದಲು ಇದೇ ಸೂತ್ರವನ್ನು ಬಳಸಿಕೊಂಡು ದೊಡ್ಡವರಾದರು ಸಾಕಷ್ಟು ಪರಿಶ್ರಮ ಪಟ್ಟು ಮಾಹಿತಿ ಕಲೆ ಹಾಕಿರುತ್ತಾರೆ. ಕೆಲವರು ಕೆಲಸಕ್ಕಾಗಿ ಸಮಾನ ಮನಸ್ಕರ ಸಂಘಟನೆಯನ್ನೇ ಮಾಡಿಕೊಂಡು ಸಮರೋಪಾದಿಯಲ್ಲಿ ಕೆಲಸ ಮಾಡಿರುತ್ತಾರೆ. ಗಾಂಧೀಜಿಯ ಮಗನನ್ನೇ ಸರಿಯಾಗಿ ನೋಡಿಕೊಳ್ಳಲಿಲ್ಲ, ಮಗನಿಗೇ ಸರಿಯಾದ ಪಿತಾ ಆಗಲಿಲ್ಲ ಇನ್ನು ರಾಷ್ಟ್ರಪಿತಾ ಹೇಗಾದಾರು? ಗಾಂಧೀಜಿ ಬ್ರಹ್ಮಚರ್ಯ ಪರೀಕ್ಷೆಗೆ ಕೈಗೊಂಡ ಪ್ರಯೋಗ ಸಾಧುವೇ? ಅಹಿಂಸೆಯನ್ನು ಬೋಧಿಸಿದ್ದು ಯಾರಿಗೆ? ಹಿಂಸೆ ಮಾಡಿದವರನ್ನು ಹೊಗಳಿದ್ದು ಯಾಕೆ? ಗಾಂಧೀಜಿಗಿದ್ದ ಅಫೇರು ಎಂಥದ್ದು? ಹೀಗೆ ಪ್ರಶ್ನೆಗಳ ಬಾಣಗಳನ್ನು ಪುಂಖಾನುಪುಂಕವಾಗಿ ಒಗೆಯುತ್ತ ಬನ್ನಿ. ಇಂಥ ಪ್ರಶ್ನೆಗಳು ನಿಮಗೆ ಸುಲಭವಾಗಿ ಯಥೇಚ್ಚವಾಗಿ ಅಂತರ್ಜಾಲದಲ್ಲಿ ಸಿಕ್ಕುತ್ತವೆ. ಬೈಗುಳವನ್ನು ಪರಿಣಾಮಕಾರಿಯಾಗಿ ಮಾಡುವ ವಿಧಾನ ಎಂದರೆ ಈಗ ಬದುಕಿಲ್ಲದ ಹಿರಿಯರ ಬಗ್ಗೆ ಅವಹೇಳನಕಾರಿ ಪ್ರಶ್ನೆಗಳನ್ನು ಒಗೆಯಿರಿ. ತಾಕತ್ತಿದ್ದರು ನಮ್ಮ ಆರೋಪ ಸುಳ್ಳು ಎಂದು ಸಾಬೀತು ಪಡಿಸಲಿ ಎನ್ನಿ. ಎಷ್ಟೇ ಪುನರ್ಜನ್ಮ, ಮರುಜನ್ಮ ಎಂದರೂ ಸತ್ತವರು ಎದ್ದು ಬಂದು ತಮ್ಮ ಕ್ಯಾರಕ್ಟರ್ ಸರ್ಟಿಫಿಕೇಟಿನ ಜೆರಾಕ್ಸ್ ಕಾಪಿಯನ್ನು ನಿಮಗೆ ಕಳುಹಿಸಲಾಗದು!


ದೊಡ್ಡದಾಗಿ ಹೆಸರು ಮಾಡಿದ ಯಾರನ್ನೂ ಬಿಡಬೇಡಿ, ಎಲ್ಲರನ್ನೂ ಬೀದಿಗೆ ಎಳೆದುತಂದು ದೊಡ್ಡದಾಗಿ ನಿಂದನೆ ಮಾಡಿ. ಮರ್ಮಾಘಾತವಾಗುವಂತಹ ಬೌನ್ಸರ್‌ಗಳನ್ನೇ ಎಸೆಯಿರಿ. ಮೂರು ವಿಕೆಟುಗಳು ಎಗರಿ ಹೋಗುವ ಹಾಗೆ ಯಾರ್ಕರ್ ಹಾಕಿ. ಬಸವಣ್ಣನವರ ತಾಯಿಯ ಬಗ್ಗೆ ಶಂಕೆ ವ್ಯಕ್ತಪಡಿಸಿಸುಭಾಷ್ ಚಂದ್ರಬೋಸ್‌ರ ದೇಶಪ್ರೇಮವನ್ನೇ ಶಂಕಿಸಿಅಮೀರ್ ಖಾನ್‌ನನ್ನು ನಂಗಾಗೊಳಿಸಿಮೇಧಾ ಪಾಟ್ಕರ್‌ರನ್ನು ಬಾಯಿಗೆ ಬಂದ ಹಾಗೆ ಬೈದು ಬಿಡಿ, ಸಾವರ್ಕರರು ಹೋಮೊ ಎಂದು ಕಲ್ಲು ಬೀರು ಬಿಡಿ, ರಾಜ್ ಕುಮಾರ್ ಏನೇನೆಲ್ಲಾ’ ಮಾಡಿದ್ದರು ಎಂದು ಬಾಂಬು ಎಸೆದುಬಿಡಿ, ಮಠದ ಸ್ವಾಮಿಯನ್ನು ಮನಸ್ಸಿಗೆ ಬಂದ ಹಾಗೆ ಕಿಂಡಲ್ ಮಾಡಿಬಿಡಿ, ಕಾದಂಬರಿಕಾರನನ್ನು ಡಿಬೇಟರ್ ಎನ್ನಿ, ಸಂಗೀತಗಾರನನ್ನು ಶ್ರೇಷ್ಠ ಭಾಷಣಕಾರ ಎನ್ನಿ, ಪತ್ರಿಕೆಯ ಸಂಪಾದಕನನ್ನು ಪ್ರಾಮಾಣಿಕ ರಾಜಕೀಯ ಕಾರ್ಯಕರ್ತ ಎನ್ನಿ, ಅಂಕಣಕಾರನನ್ನು ಅಮೇರಿಕಾದ ಏಜೆಂಟ್ ಎನ್ನಿ, ತಾಯಿಯಂತಹ ತೆರೆಸಾರನ್ನೂ ಬಿಡಬೇಡಿ ಬೀದಿಗೆ ಎಳೆದು ಬಿಸಾಕಿ. ಕಂಡ ಕಂಡ ದೊಡ್ಡವರನ್ನೆಲ್ಲಾ ಬೈಯ್ಯತೊಡಗಿ ಅನಾಯಾಸವಾಗಿ ನೀವು ದೊಡ್ಡವರಾಗುತ್ತೀರಿ. ಹೀಗೆ ದೊಡ್ಡವರಾಗುವಾಗ ಕೆಲವು ಅಡ್ಡಿ ಆತಂಕಗಳನ್ನು ಎದುರಿಸಬೇಕಾಗುತ್ತದೆ. ತುಂಬಾ ಜನರನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಸರಕಾರದ, ಪೊಲೀಸರ ಕಣ್ಣನ್ನೂ ಕೆಂಪಗಾಗಿಸಬೇಕಾಗುತ್ತದೆ. ಆದರೆ ಇದರಿಂದ ಧೃತಿಗೆಡಬೇಡಿ, ಸಾಧನೆಯ ಹಾದಿಯಲ್ಲಿ ರಿಸ್ಕುಗಳೆಲ್ಲಾ ಸಾಮಾನ್ಯ. ಎಂತಹ ಸಂಕಟದ ಸಂದರ್ಭದಲ್ಲೂ ಒಂದನ್ನು ನೆನಪಿಡಿ, ಎಷ್ಟೇ ಜನರು ನಿಮ್ಮ ವಿರುದ್ಧ ತಿರುಗಿ ಬಿದ್ದರೂ, ಬೆದರಿಕೆ ಹಾಕಿದರೂ ನಿಮ್ಮ ಹಾಗೆ ದೊಡ್ದವರಾದವರ ಹಿಂಡು ಸದಾ ನಿಮ್ಮ ಬೆನ್ನ ಹಿಂದಿರುತ್ತದೆ. ಧೈರ್ಯವಾಗಿ ಮುನ್ನುಗ್ಗಿ


ನಿಮಗೆ ಯಶಸ್ಸಿನ ಸೂತ್ರದ ಬಗ್ಗೆ ಸಂಶಯವಿದೆಯೇ? ನಿಮ್ಮ ಸಂಶಯವನ್ನು ಕ್ಷಣಮಾತ್ರದಲ್ಲಿ ಪರಿಹರಿಸಿಕೊಳ್ಳಬಹುದು. ಸಾಮ್ರಾಟರು ವರದಿಯಲ್ಲಿ ತಮಗಿಂತ ದೊಡ್ಡವರು ಹಾಗೂ ಹಿರಿಯರನ್ನೆಲ್ಲಾ ಮನಸಾರೆ ಆಡಿಕೊಂಡಿದ್ದಾರೆ. ನೋಡುತ್ತಿರಿ, ಕೆಲವೇ ದಿನಗಳಲ್ಲಿ ವರದಿ ವಿಪರೀತ ಕೋಲಾಹಲ ಉಂಟು ಮಾಡಿ ಸಾಮ್ರಾಟರು ಅನಾಯಾಸವಾಗಿ ದೊಡ್ಡವರಾಗಿಬಿಡುತ್ತಾರೆ. ಒಂದು ವೇಳೆ ಸಾಮ್ರಾಟರು ದೊಡ್ಡವರಾಗದಿದ್ದರೆ ಅವರು ಬೈದವರು ಯಾರೂ ದೊಡ್ಡವರಲ್ಲ ಎಂಬ ತೀರ್ಮಾನಕ್ಕೆ ಬರಲು ಅಡ್ಡಿಯಿಲ್ಲ!


[ ಸಾಮ್ರಾಟರ ಪ್ರತಿ ಬರಹದ ಮೊದಲ ಹಾಗೂ ಕಡೆಯ ಓದುಗನಾದ ಅವರ ಚೇಲ ಕುಚೇಲ ವರದಿಯನ್ನು ಓದಿ ಬಹು ಪ್ರಭಾವಿತನಾಗಿದ್ದಾನೆ. ತಾನೂ ದೊಡ್ಡವ, ಬಹುದೊಡ್ಡವನಾಗಬೇಕು ಎಂದು ಕನಸು ಕಾಣತೊಡಗಿದ್ದಾನೆ. ಜಗತ್ತಿನಲ್ಲಿ ಎಲ್ಲರಿಗಿಂತ ದೊಡ್ಡವ ಭಗವಂತ. ಆತನಷ್ಟೇ ದೊಡ್ಡವನಾಗಬೇಕು ಎಂದು ತೀರ್ಮಾನಿಸಿ ದೇವರನ್ನೇ ಬೈಯ್ಯಲು ಸಿದ್ಧತೆ ಶುರುಮಾಡಿಕೊಂಡಿದ್ದಾನೆ! ಶೀಘ್ರದಲ್ಲಿ ಆತನ ಸಮಗ್ರ ಸಂಶೋಧನೆಯ ದೇವರು? ಯಾರವರು?’ ಲೇಖನಮಾಲೆ ನಗೆ ನಗಾರಿಯಲ್ಲಿ ಎಕ್ಸ್‌ಕ್ಲೂಸೀವ್ ಆಗಿ ಪ್ರಕಟವಾಗಲಿದೆ! ]

8 Responses to “ದೊಡ್ಡವರನ್ನು ಬೈಯಿರಿ ದೊಡ್ಡವರಾಗಿರಿ!”

 1. M G Harish ನವೆಂಬರ್ 3, 2008 at 8:59 ಅಪರಾಹ್ನ #

  ಮೊದಲಿಗೆ ನಗು ಬಂತು. ಆದರೆ ವಿಚಾರ ಮಾಡಿ ನೋಡಿದರೆ ನೀವು ಬರೆದಿರುವುದು ಈಗ ನಡೆಯುತ್ತಿರುವುದಕ್ಕೆ ಹಿಡಿದ ಕನ್ನಡಿಯಂತಿದೆ.

  ಸಾಮ್ರಾಟರೇ, ನಿಮಗೊಂದು ಸಲಾಮ್!!!

 2. chetana chaitanya ನವೆಂಬರ್ 4, 2008 at 11:12 ಫೂರ್ವಾಹ್ನ #

  🙂
  nijavAglU idu nage baraha alla!
  eega naDeetirO karma kANDa idu.

 3. ಗಣೇಶ್.ಕೆ ನವೆಂಬರ್ 4, 2008 at 6:54 ಅಪರಾಹ್ನ #

  ನಗೆ ಸಾಮ್ರಾಟರೇ,
  ನಿಮ್ಮ ಪಟ್ಟಿ ನೋಡಿ ಬೆಸ್ತು ಬಿದ್ದೆ…!
  ದೊಡ್ಡವರಾಗಲಿಕ್ಕೆ ದೊಡ್ಡ ಪಟ್ಟಿಯೇ ಇದೆ..!
  ‘ಧ್ಯಾಂಕ್ಯೂ’..! (ಧನ್ಯವಾದ ಪ್ಲಸ್ ಥ್ಯಾಂಕ್ಯೂ..!)
  ಗಣೇಶ್.ಕೆ

 4. Nage samrat ನವೆಂಬರ್ 4, 2008 at 11:42 ಅಪರಾಹ್ನ #

  ಹರೀಶರೇ,
  ನಿಮಗೆ ಮೊದಲು ನಗು ಬಂದದ್ದು ನಮಗೆ ಅತೀವ ಸಮಾಧಾನ ತಂದಿದೆ. ನಂತರದ ಕೆಲಸ ಮಾಡುವುದಕ್ಕೆ -ಅಂದರೆ ವಿಚಾರ, ಚಿಂತನೆ, ಆಲೋಚನೆ ಮಾಡಲು- ದೊಡ್ಡ ಬೆಟಾಲಿಯನ್ನೇ ಇದೆ. ಮೊದಲಿನ ಕೆಲಸ ಮಾಡಲಿಕ್ಕೆ ನಮ್ಮಂತಹ ನಿಮ್ಮಂತಹ ಸಾಮಾನ್ಯರು ಒಂದಾಗಬೇಕು!

  ನಗೆ ಸಾಮ್ರಾಟ್

 5. Nage samrat ನವೆಂಬರ್ 4, 2008 at 11:46 ಅಪರಾಹ್ನ #

  ಚೇತನಾ ತೀರ್ಥಹಳ್ಳಿಯವರೇ,
  ಇದು ನಗೆ ಬರಹ ಅಲ್ಲ ಎಂದು ನೀವು ಮಾಡಿರುವ ಕ್ಯಾತೆಯನ್ನು ನಾವು ತುಂಬಾ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ನಮಗೆ ಪರಿಚಯವಿರುವ ಎರಡು ಮುಕ್ಕಾಲು ಪತ್ರಿಕೆಗಳಿಗೆ ಹೇಳಿ ನಿಮ್ಮ ವಿರುದ್ಧ ಬರೆಸಲು ತಯಾರಿ ನಡೆಸಿದ್ದೇವೆ. ‘ಸಾಮ್ರಾಟರು ನಗೆಗಾರರೇ ಅಲ್ಲ: ಚೇತನಾ ತೀರ್ಥಹಳ್ಳಿ’ ಎಂಬ ತಲೆ ಬರಹ ಸಿದ್ಧವಾಗಿದೆ.
  ಒಂದು ಪತ್ರಿಕೆಯಂತೂ ಈ ಕ್ಯಾತೆಯ ಬಗ್ಗೆ ಓದುಗರ, ಅಭಿಮಾನಿಗಳ ಎಸ್.ಎಂ.ಎಸ್ ಸಂಗ್ರಹಿಸುವ ಪ್ಲಾನ್ ಹೊಂದಿದೆ.
  ನಿಮಗೊಂದು ಅವಕಾಶವಿದೆ, ಬೇಗನೇ ತಿದ್ದುಪಡಿ ಮಾಡಿಬಿಡಿ 🙂

  ನಗೆ ಸಾಮ್ರಾಟ್

 6. Nage samrat ನವೆಂಬರ್ 4, 2008 at 11:51 ಅಪರಾಹ್ನ #

  ಗಣೇಶರೇ,
  ನಾವು ಸೂಕ್ತವಾದ ಆಧಾರಗಳಿಲ್ಲದೆ, ಎವಿಡೆನ್ಸುಗಳಿಲ್ಲದೆ, ಉದ್ಗ್ರಂಥಗಳ ದೀರ್ಘಕಾಲದ ಅಧ್ಯಯನವಿಲ್ಲದೆ ಒಂದೇ ಒಂದು ವಾಕ್ಯವನ್ನೂ ಬರೆಯುವುದಿಲ್ಲ ಎಂಬುದು ನಿಮಗೆ ತಿಳಿದಿಲ್ಲವೇ? ನಾವು ಚಿಕ್ಕವರಾಗಿದ್ದಾಗ ಅಕ್ಕಿ ಕಾಳಿನ ಮೇಲೆ ಓಂ ಬರೆಯುವುದಕ್ಕೇ ನಾಲ್ಕು ವರ್ಷ ತೆಗೆದುಕೊಂಡವರು ಗೊತ್ತೇ? ಆ ಸಮಯವಿಡೀ ನಾವು ನಾಲ್ಕೂ ವೇದಗಳ ಜೊತೆಯಲ್ಲಿ ಕಳೆದವರು, (ನಾವು ಮಲಗುತ್ತಿದ್ದ ತೊಟ್ಟಿಲ ಪಕ್ಕದಲ್ಲಿನ ಬುಕ್ ಶೆಲ್ಫಿನಲ್ಲಿ ಅವು ತಮ್ಮ ಪಾಡಿಗೆ ತಾವು ಇದ್ದವು ಎನ್ನಿ 🙂 ) ಹೀಗಾಗಿ ನಮ್ಮ ಈ ಪಟ್ಟಿಯ ಬಗ್ಗೆ ಹುಬ್ಬೇರುವುದು ಅಸಹಜವೇನಲ್ಲ ಬಿಡಿ…

  ನಗೆ ಸಾಮ್ರಾಟ್

 7. chetana chaitanya ನವೆಂಬರ್ 6, 2008 at 4:39 ಅಪರಾಹ್ನ #

  🙂

 8. Nage samrat ನವೆಂಬರ್ 6, 2008 at 5:20 ಅಪರಾಹ್ನ #

  ಓಹ್ ನಮ್ಮ ಪ್ರತಿಕ್ರಿಯೆ ಓದಿ ನಕ್ಕುಬಿಟ್ಟಿರಿ ಎಂದ ಮೇಲೆ ನಮ್ಮ ಮೇಲಿನ ಆರೋಪ ಹುರುಳಿಲ್ಲದ್ದು ಎಂದು ಸಾಬೀತಾಯಿತು!

  ನಗೆ ಸಾಮ್ರಾಟ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: