Archive | ಆಗಷ್ಟ್, 2008

ಚರ್ಚೆ: ನಮ್ಮ ಹಾಸ್ಯ ಪ್ರಜ್ಞೆ ಎಂಥದ್ದು?

4 ಆಗಸ್ಟ್

ಚರ್ಚೆ

ಅದ್ಯಾವುದೋ ಹಲ್ಪುಡಿಯ ಜಾಹೀರಾತಿನಲ್ಲಿ ತೋರಿಸುತ್ತಾರೆ: ಪುಟ್ಟ ಹುಡುಗಿ ತನ್ನಪ್ಪನ ಬಹುಮುಖ್ಯವಾದ ಕಾಗದ ಪತ್ರವನ್ನು ಮುಲಾಜಿಲ್ಲದೆ ಪರ್ರ್ ಅಂತ ಹರಿದು ಹಾಕಿಬಿಡುತ್ತಾಳೆ. ಅದನ್ನು ಹುಡುಕುತ್ತಿದ್ದ ಅಪ್ಪ ಆಕೆಯನ್ನು ನೋಡುತ್ತಾಳೆ. ಆ ಮಗು ತನ್ನ ಹಾಲು ಹಲ್ಲುಗಳನ್ನು ತೋರಿಸಿ ಮುಗ್ಧವಾಗಿ ನಗುತ್ತದೆ. ಅಪ್ಪನಿಗೆ ಸಿಟ್ಟು ಮರೆವೆಯಾಗುತ್ತದೆ, ದುಗುಡ, ಟೆನ್ಷನ್ ಮಾಯವಾಗಿ ಮುಖದಲ್ಲಿ ಅಂಥದ್ದೇ ನಗೆ ಅರಳುತ್ತದೆ.

ನಗು ಅಂದರೆ ವಿಕಟ ಹಾಸ್ಯ ಮಾತ್ರವಾ? ಜೋಕುಗಳಿಗೆ ಬಿದ್ದು ಬಿದ್ದು ನಗುವುದೇ ಹಾಸ್ಯ ಪ್ರಜ್ಞೆ ಎನ್ನಿಸಿಕೊಳ್ಳುತ್ತದೆಯಾ? ಖಂಡಿತಾ ಇಲ್ಲ. ನಮ್ಮ ವ್ಯಕ್ತಿತ್ವದ ಪ್ರತಿಯೊಂದು ತಿರುವು, ಏರು, ಇಳಿತದಲ್ಲಿ ಬೆರೆತ ನಗು, ಲಘುವಾಗಿ ತೆಗೆದುಕೊಳ್ಳುವ ಗುಣ ನಮ್ಮ ಹಾಸ್ಯ ಪ್ರಜ್ಞೆಯನ್ನು ರೂಪಿಸುತ್ತದೆ. ಬೆಳಗಿನ ಕಾಫಿ ಆರಿ ಹೋದಾಗ ಸಿನೆಮಾ ಸ್ಟೈಲಿನಲ್ಲಿ ಅದನ್ನು ನೆಲಕ್ಕೆ ಕುಕ್ಕಿ ಯಕಃಶ್ಚಿತ್ ಕಾಫಿಗಾಗಿ ಇಡೀ ದಿನದ ಮೂಡನ್ನು ಹಾಳು ಮಾಡಿಕೊಳ್ಳುವುದಕ್ಕೂ, ‘ಇತ್ತೀಚೆಗೆ ನೀನು ನಗೋದೇ ಕಡಿಮೆಯಾಗಿದೆ. ಕಾಫೀಲಿ ಸಕ್ಕರೆ ಕಡಿಮೆಯಾದಾಗ ನಿನ್ನ ನಗಿವನ್ನೇ ಬೆರೆಸಿಕೊಂಡು ಕುಡಿದುಬಿಡುತ್ತಿದ್ದೆ’ ಅಂತ ಕೊಂಚ ರೊಮ್ಯಾಂಟಿಕ್ ಆಗಿ ಹೇಳಿದ್ರೆ ಮಾರನೆಯ ದಿನದಿಂದ ಕಾಫಿಗೆ ಸಕ್ಕರೆಯೂ ಸರಿಯಾಗಿರುತ್ತದೆ, ಹೆಂಡತಿಯ ಮುಖದ ಮೇಲೆ ನಗುವೂ ಅರಳಿರುತ್ತದೆ! ಟ್ರಾಫಿಕ್ಕಿನಲ್ಲಿ ಬೈಕಿಗೆ ತರಚಿಸಿಕೊಂಡು ಹೋದ ಸವಾರನೆಡೆಗೊಂದು ಮುಗುಳ್ನಗೆ ಬೀರುವಷ್ಟು ಸಂಯಮ, ಅನುರಾಗ ನಮ್ಮಲ್ಲಿದ್ದರೆ ಅದು ಹಾಸ್ಯ ಪ್ರಜ್ಞೆ ಅನ್ನಿಸಿಕೊಳ್ಳುತ್ತದೆ.

ನಮ್ಮ ಬದುಕು ಸಣ್ಣ ಸಣ್ಣ ಘಟನೆಗಳ ಒಟ್ಟು ಮೊತ್ತ. ಮೋಕ್ಷವೆಂಬುದು ಎಲ್ಲೋ ದೂರದಲ್ಲಿಲ್ಲ. ಸತ್ತ ಮೇಲಿನ ಜಡ್ಜ್‌ಮೆಂಟ್ ದಿನದ ಮೇಲೆ ನಮ್ಮ ಬದುಕಿನ ಯಶಸ್ಸು ನಿರ್ಣಿಯಸಲ್ಪಡುವುದಿಲ್ಲ. ಹಾದಿಯನ್ನು ಸವೆಸುವುದರಲ್ಲೇ ಬದುಕು ಇರುವುದು. ಇಂದಿನ ಕ್ಷಣವೇ ನಮ್ಮ ಬದುಕು, ಹಿಂದಿನದು ಕಳೆದು ಹೋದದ್ದು. ಮುಂದಿನದು ಮುಚ್ಚಿದ ಬಾಗಿಲಿನ ಹಿಂದಿರುವಂಥದ್ದು. ಈಗಿರುವ ಕ್ಷಣವೇ ಸತ್ಯ, ನಿತ್ಯ. ಅದನ್ನೇಕೆ ನಾವು ಸಿಟ್ಟು, ಕೋಪ, ಅಶಾಂತಿ, ಅಪನಂಬಿಕೆ, ಅನುಮಾನ, ದ್ವೇಷ, ಕಪಟಗಳಿಂದ ಕಳೆದುಕೊಳ್ಳಬೇಕು?

ಹೌದಲ್ಲವೇ?

ನಗಾರಿ ರೆಕಮಂಡೇಶನ್ 11

3 ಆಗಸ್ಟ್

ಅಂತರ್ಜಾಲದ ಮುಕ್ತ ವಿಶ್ವಕೋಶದ ತಾಣ ವಿಕಿಪಿಡಿಯಾದ ಬಗ್ಗೆ ತಿಳಿಯದವರೇ ಇಲ್ಲ. ಯಾವುದೇ ವಿಷಯದ ಬಗ್ಗೆ ಮಾಹಿತಿ ಬೇಕಾದರೆ ಅಂತರ್ಜಾಲದಲ್ಲಿ ‘ಹುಡುಕುವುದು’ ಎಂಬ ಪದಕ್ಕೆ ‘ಗೂಗಲ್’ ಪರ್ಯಾಯವಾಗಿರುವ ಹಾಗೆಯೇ ವಿಶ್ವಕೋಶ ಎಂಬ ಪದಕ್ಕೆ ಪರ್ಯಾಯವಾಗಿ ರೂಪುಗೊಂಡಿರುವುದು ಈ ವಿಕಿಪಿಡಿಯಾ. ಇದರಲ್ಲಿನ ಮಾಹಿತಿ ಪುಟಗಳಿಗೆ ಜಗತ್ತಿನ ಯಾರು ಬೇಕಾದರೂ ತಮ್ಮ ಬಳಿಯಿರುವ ಮಾಹಿತಿಯನ್ನು ಸೇರಿಸಿ ಸೂಕ್ತ ಆಧಾರಗಳನ್ನು ಒದಗಿಸಬಹುದು. ಅದನ್ನು ಅದೇ ವಿಷಯದ ಮತ್ತ್ಯಾವುದೋ ಪ್ರದೇಶದ ಜನರು ತಿದ್ದಬಹುದು. ಇದು ಅಂತರ್ಜಾಲದಲ್ಲಿ ಖ್ಯಾತಿಯನ್ನು ಪಡೆದಿರುವ ತಾಣ.

ಈ ವಿಕಿಪಿಡಿಯಾದ ಶೈಲಿಯನ್ನೇ ಅನುಸರಿಸಿ ಕೇವಲ ವಿಡಂಬನೆ, ಹಾಸ್ಯ, ಕಾಲೆಳೆಯುವಿಕೆ, ಕೊಂಕುಗಳಿಗಾಗಿ ಮೀಸಲಾದ ಒಂದು ತಾಣ ೨೦೦೫ರಲ್ಲಿ ಶುರುವಾಗಿದೆ. ಇದರ ಹೆಸರು ಅನ್‌ಸೈಕ್ಲೊಪಿಡಿಯಾ. ವಿಕಿಪಿಡಿಯಾದ ಮಾದರಿಯನ್ನೇ ಅನುಸರಿಸಿಕೊಂಡು, ವಿಕಿಪಿಡಿಯಾದ ಪ್ರತಿಯೊಂದು ಮಾಹಿತಿ ಪುಟಕ್ಕೂ ಪರ್ಯಾಯವಾದ ವಿಡಂಬನೆಯ, ಶುದ್ಧ ಹಾಸ್ಯ – ಅಪಹಾಸ್ಯದ ಮಾಹಿತಿ ಇರುವ ಪುಟಗಳನ್ನು ಇಲ್ಲಿ ಪ್ರಕಟಿಸಲಾಗುತ್ತದೆ. ವಿಕಿಪಿಡಿಯಾದಲ್ಲಿರುವ ಎಲ್ಲಾ ಮಾಹಿತಿ ಪುಟಗ ಮೇಲೆ ವಿಡಂಬನೆಯ ಪುಟಗಳನ್ನು ತೆರೆಯುವುದು ಅವರ ಉದ್ದೇಶ. ಈಗಾಗಲೇ ಈ ತಾಣದಲ್ಲಿ ಇಂಗ್ಲೀಷಿನಲ್ಲಿ ಸುಮಾರು ಇಪ್ಪತ್ಮೂರು ಸಾವಿರಕ್ಕಿಂತ ಹೆಚ್ಚು ಲೇಖನಗಳು ಲಭ್ಯವಿದೆ.

ಹೀಗೇ ಸುಮ್ಮನೆ ನಿಮಗೆ ವಿಕಿಪಿಡಿಯಾದಲ್ಲಿನ ಹುಡುಕಾಟ ಮುಗಿದ ನಂತರ ಬೇಕಿದ್ದ ವಿಷಯದ ಬಗ್ಗೆ ಅನ್ ಸೈಕ್ಲೋಪಿಡಿಯಾದಲ್ಲಿ ಹುಡುಕಿ ನೋಡಿ ನೀವು ಬಿದ್ದು ಬಿದ್ದು ನಗುವಂಥ, ನಿಮ್ಮ ಹೊಟ್ಟೆ ಹುಣ್ಣಾಗಿಸುವಂಥ, ನಿಮ್ಮನ್ನು ಕೆರಳಿಸುವಂಥ, ಬೆಚ್ಚಿ ಬೀಳುವಂಥ ಹಾಸ್ಯ ಇಲ್ಲಿ ಸಿಕ್ಕುತ್ತದೆ. ಉದಾಹರಣೆಗೆ ಈ ಪುಟವನ್ನೇ ನೋಡಿ, ಗಾಂಧೀಜಿಯ ಬಗ್ಗೆ ಅನ್ ಸೈಕ್ಲೋಪಿಡಿಯಾದಲ್ಲಿರುವ ಪುಟವಿದು. ಹಾಗೆಯೇ ಇದನ್ನು ನೋಡಿ ಇದು ಅಡಾಲ್ಫ್ ಹಿಟ್ಲರನ ಬಗೆಗಿರುವ ಪುಟ.

ಇದು ಈ ಸಂಚಿಕೆಯ ನಗಾರಿ ರೆಕಮಂಡೆಶನ್!

ಬ್ಲಾಗ್ ಬೀಟ್ 12

1 ಆಗಸ್ಟ್

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

ಓದನ್ನು ಮುಂದುವರೆಸಿ

ವಾರದ ವಿವೇಕ 14

1 ಆಗಸ್ಟ್

…………………………………………………………………………………….

ಕಣ್ಣೀರು ಸುರಿಯುವುದೊಂದೇ ಹೆಣ್ಣಿನ
ಕೆಲಸವಾಗಿದ್ದರೆ ಎಲ್ಲ ಹೆಣ್ಣುಗಳೂ ಅದನ್ನೇ
ಸಮರ್ಥವಾಗಿ ಮಾಡಿ, ಲೋಕದ ಎಲ್ಲ ಗಂಡುಗಳನ್ನೂ
ಕಂಬನಿ ಮಹಾಸಾಗರದಲ್ಲಿ ಎಂದೋ ಮುಳುಗಿಸಿ ಬಿಡುತ್ತಿದ್ದವು.

– ಬೀchi

…………………………………………………………………………………….