ಯುವ ಬ್ಲಾಗಿಗನ ಸಂದರ್ಶನ(2)

13 ಆಗಸ್ಟ್

(ನಗೆ ಸಾಮ್ರಾಟರ ಅಟ್ಟದ ಮೇಲಿನ ಈಗೋ ಭಾಳ ಬುದ್ಧಿವಂತನಾಗಿಬಿಟ್ಟಿದ್ದ. ಸಂದರ್ಶನದ ಉಳಿದ ಭಾಗವನ್ನು ‘ನಾಳೆ’ಗೆ ಮುಂದುವರೆಸುವುದಾಗಿ ಹೇಳಿ ನಾಪತ್ತೆಯಾಗಿಬಿಟ್ಟ. ಆ ನಾಳೆ ಯಾವತ್ತೂ ಬರುವುದಿಲ್ಲ ಎಂದು ತಿಳಿದು ಆತ ಪರಾರಿ ಕಿತ್ತಿದ್ದ. ಅನಂತರ ನಗೆ ಸಾಮ್ರಾಟರು ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಬೀದಿ ಬೀದಿ ಅಲೆದು ಮನೆ ಮನೆಯ ಅಟ್ಟವನ್ನು ಹುಡುಕಾಡಿ ಅವನನ್ನು ಎಳಕೊಂಡು ಬಂದಿದ್ದಾರೆ. ಸಂದರ್ಶನ ಮುಂದಿನ ಭಾಗವನ್ನು ಇಲ್ಲಿ ಕೊಟ್ಟು ಆತ ತನ್ನ ಮರ್ಯಾದೆ ಉಳಿಸಿಕೊಂಡಿದ್ದಾನೆ.)

ನಗೆ ಸಾಮ್ರಾಟ್: ಹೌದು, ಸರ್. ಬ್ಲಾಗಿಂಗ್ ಸಮಾಜದ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರುತ್ತದೆ? ದಯವಿಟ್ಟು ತಿಳಿಸಬೇಕು.

ಯುವ ಬ್ಲಾಗಿಗ: ಇಂಟರ್ನೆಟ್ ಎಂಬ ಅಲ್ಲಾವುದ್ದೀನನ ಅದ್ಭುತದ ದೀಪದಿಂದ ಹೊರ ಬರುತ್ತಿರುವ ಅಸಂಖ್ಯಾತ ಜೀನಿಗಳಲ್ಲಿ ಈ ಬ್ಲಾಗಿನ ತಂತ್ರಜ್ಞಾನವೂ ಒಂದು ಕಣ್ರೀ. ಇದು ಜನರಿಗೆ ಹಿಂದೆಂದೂ ಇರದಿದ್ದ, ಜನರು ಊಹಿಸಲು ಸಾಧ್ಯವೇ ಇರದಿದ್ದ ಅವಕಾಶವನ್ನು ತೆರೆದುಕೊಟ್ಟಿದೆ. ಇಂಥ ಸವಲತ್ತು ಯಾವ ಕಾಲದಲ್ಲಿತ್ತು, ಯಾವ ನಾಗರೀಕತೆಗಳಲ್ಲಿತ್ತು? ಹಿಂದಿನಿಂದಲೂ ತುಂಬಾ ಹಿಂದಿನಿಂದಲೂ ದೊಡ್ಡವರು ಹೇಳುತ್ತಾ ಬಂದದ್ದು ಒಂದೇ ಮಾತು ‘ಬಾಯ್ಮುಚ್ಚು… ತಲೆ ಹರಟೆ!’ ಮನುಷ್ಯನ ಸಹಜ ಸ್ವಭಾವವೇ ಬಾಯ್ತೆರೆಯುವುದು. ಮಗು ಕಣ್ಬಿಟ್ಟ ಕೂಡಲೇ ಬಾಯಿ ಅಗಲಿಸಿ ಕಿಟ್ಟನೆ ಚೀರುತ್ತದೆ. ಹಾಗೆ ಚೀರದ ಮಗು ಆರೋಗ್ಯ ಹೊಂದಿರುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ. ಮನುಷ್ಯ ಬಿದ್ದಾಗಲೂ, ಎಡವಿದಾಗಲೂ ಬಾಯಿ ತೆರೆಯುತ್ತಾನೆ. ಕೊನೆಗೆ ಸತ್ತ ಮೇಲೂ ಬಾಯ್ತೆರೆದೇ ಇರುತ್ತಾನೆ. ಮನುಷ್ಯನ ಈ ಸಹಜ ಸ್ವಭಾವವನ್ನು ದಮನಿಸುವ ವ್ಯವಸ್ಥಿತ ಸಂಚು ತುಂಬಾ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದನ್ನು ನುಚ್ಚು ನೂರು ಮಾಡಿದ್ದು ಬ್ಲಾಗುಗಳು. ಇದಕ್ಕೂ ಮುನ್ನ ಇದೇ ಕ್ರಾಂತಿಯನ್ನು ಮೊಬೈಲ್ ಫೋನುಗಳು ಮಾಡಲು ಪ್ರಯತ್ನ ಪಟ್ಟವು. ‘ಮಾತಾಡು ಇಂಡಿಯಾ ಮಾತಾಡು’ ಎಂದು ಹುರಿದುಂಬಿಸಿದವು. ಆದರೆ ಅವುಗಳಿಗೆ ಯಶಸ್ಸು ಸಿಕ್ಕಲಿಲ್ಲ.

ನ.ಸಾ: ಮೊಬೈಲುಗಳು ಯಶಸ್ವಿಯಾಗಲಿಲ್ಲವಾ? ಹೇಗೆ ಸರ್?

ಯು.ಬ್ಲಾ: ‘ಮಾತಾಡು ಭಾರತವೇ ಮನಬಿಚ್ಚಿ ಮಾತಾಡು’ ಎಂದೇನೋ ಮೊಬೈಲ್ ಕಂಪೆನಿಗಳು ಜನರನ್ನು ಹುರಿದುಂಬಿಸಿದವು. ಜನರೂ ಸಹ ಹೆಚ್ಚು ಹೆಚ್ಚು ಮಾತಾಡಿದಷ್ಟೂ ಫೋನ್ ಬಿಲ್ಲು ಹೆಚ್ಚು ಹೆಚ್ಚು ಬರುವುದನ್ನು ಕಂಡು ತಮ್ಮ ಮಾತಿಗೆ ಇಷ್ಟೋಂದು ಬೆಲೆಯಿದೆಯಾ ಎಂದು ಅನುಮಾನಗೊಂಡು, ಆಶ್ಚರ್ಯಗೊಂಡು, ಆಘಾತಗೊಂಡು ಸುಧಾರಿಸಿಕೊಂಡರು. ಆದರೆ ಬರು ಬರುತ್ತಾ ಅವರಿಗೆ ಅರಿವಾಯಿತು. ಮೊಬೈಲುಗಳು ಕ್ರಾಂತಿಯನ್ನು ಮಾಡುವಲ್ಲಿ ಸೋತವು ಎಂದು. ಮೊಬೈಲಿನಲ್ಲಿ ನೀವೆಷ್ಟೇ ಮಾತನಾಡಿದರೂ ನಿಮ್ಮನ್ನು ಕೇಳಲಿಕ್ಕೆ ಒಬ್ಬನಾದರೂ ಅತ್ತ ಕಡೆ ಇರಬೇಕಲ್ಲವಾ? ನಿಮ್ಮ ಕಥೆಗೆ, ನಿಮ್ಮ ಸಾಧನೆಯ ಯಶೋಗಾಥೆಗೆ ಹೂಂಗುಟ್ಟಲು ಒಂದು ಜೊತೆ ಕಿವಿ-ಬಾಯಿಯಾದರೂ ಆವಶ್ಯಕವಲ್ಲವಾ? ಜನರಿಗೆ ಮಾತನಾಡುವ, ಬಾಯ್ಬಿಡುವ ತೆವಲು ಹತ್ತಿದಾಗ ಸುಮ್ಮನೆ ಕಂಡಕಂಡವರಿಗೆ ಫೋನಾಯಿಸಲು ಸಾಧ್ಯವಾಗುತ್ತದಾ? ಹಾಗೇನಾದರೂ ಮಾಡಿದರೆ ‘ಕೊರೆತ ಕ್ರಿಮಿ’ ಎಂಬ ಬಿರುದು ಪಡೆಯಬೇಕಾಗುತ್ತದೆ. ನಿಮಗೆ ಸಾಹಿತ್ಯದಲ್ಲಿ ನೊಬೆಲ್ ಕೊಟ್ಟ ಸಂಗತಿಯನ್ನು ಹೇಳಲು ಫೋನಾಯಿಸಿದರೂ ಅತ್ತ ಬದಿಯವರು ಫೋನಿನ ಕೊನೆಯ ರಿಂಗಿನ ಕಂಪನ ಸಾಯುವವರೆಗೂ ಅದನ್ನು ಕೈಲೇ ಇಟ್ಟುಕೊಂಡು ಸತಾಯಿಸತೊಡಗುತ್ತಾರೆ. ಇಲ್ಲವೇ ಸಿಮ್ ಬದಲಿಸಿ ಅದರ ಬಗ್ಗೆ ಸುಳಿವೂ ಸಿಕ್ಕದ ಹಾಗೆ ಎಚ್ಚರ ವಹಿಸುತ್ತಾರೆ. ಇದರಿಂದಾಗಿ ಮೊಬೈಲುಗಳು ‘ಬಾಯ್ತೆರೆಸುವ’ ಕ್ರಾಂತಿಯನ್ನು ಮಾಡುವಲ್ಲಿ ವಿಫಲವಾದವು.

ನ.ಸಾ: ಅದೇನೋ ಸರಿ ಸರ್, ಆದರೆ ಬ್ಲಾಗುಗಳು ಹೇಗೆ ಈ ಕ್ರಾಂತಿಯನ್ನು ಮಾಡಲು ಸಾಧ್ಯವಾಯಿತು?

ಯು.ಬ್ಲಾ: ಹೇಳುತ್ತೇನೆ ಕೇಳಿ, ಈ ಬ್ಲಾಗುಗಳು ಕಂಪ್ಯೂಟರು, ಅದಕ್ಕೊಂದು ಅಂತರ್ಜಾಲದ ನೆಟ್‌ವರ್ಕು ಇರುವ ಯಾರಾದರೂ ಒಂದು ತಾಣವನ್ನು ತೆರೆದುಕೊಂಡು ಮನಸ್ಸಿಗೆ ತೋಚಿದ್ದನ್ನು ಗೀಚಿ ಬಿಸಾಕುವ ಸ್ವಾತಂತ್ರ್ಯವನ್ನೂ ಕೊಟ್ಟವು. ಜನರು ಚೆಂದದ ಹೆಸರಿನ ಬ್ಲಾಗುಗಳನ್ನು ತೆರೆದುಕೊಂಡು ಅದರಲ್ಲಿ ತಮ್ಮ ಫೋಟೊ ಹಾಕಿಕೊಂಡು, ತಮ್ಮ ಪ್ರವರವನ್ನು ಹರಿಬಿಟ್ಟು ಹುರುಪಿನಿಂದ ಮಾತು ಹಚ್ಚಿಕೊಂಡರು. ಮೈಮೇಲೆ ಹುತ್ತಗಟ್ಟಲು ಬಿಟ್ಟು ರಾಮಾಯಣ ರಚಿಸುವಲ್ಲಿ ಮಗ್ನರಾದವರ ಹಾಗೆ ಕೀಲಿಮಣೆಯನ್ನು ಕುಟ್ಟುತ್ತಾ ಕೂರುತ್ತಾರೆ ಜನರು. ತಾವು ಬರೆಯುವುದನ್ನೇ ಜಗತ್ತು ಕಾಯುತ್ತಾ ಕುಳಿತಿದೆಯೆಂದು ಭ್ರಮಿಸಿಕೊಂಡು ಕಲ್ಪನಾ ಲೋಕದಲ್ಲಿ ತೇಲಾಡುತ್ತಾರೆ. ತಮ್ಮ ಮಾತನ್ನು, ತಮ್ಮ ಬರಹವನ್ನು ತಮ್ಮ ಚಿಂತನೆಯ ಹೆಸರಿನಲ್ಲಿರುವ ಹರಟೆಯನ್ನು ಜಗತ್ತಿನ ಯಾವ ಮನುಷ್ಯ ಬೇಕಾದರೂ ಓದಬಹುದು ಎಂದು ನೆನೆದು ಪುಳಕಗೊಳ್ಳುತ್ತಾರೆ. ದಿನಕ್ಕೆ ನೂರು ಬಾರಿ ಕ್ಲಿಕ್ಕಿಗರ ಸಂಖ್ಯೆಯನ್ನು ನೋಡುತ್ತಾ, ಬ್ಲಾಗ್ ಅಂಕಿ ಅಂಶಗಳ ಗ್ರಾಫನ್ನೇ ಧೇನಿಸುತ್ತಾ ಕೂರುತ್ತಾರೆ. ದಿನ ದಿನವೂ ಪ್ರಪಂಚದ ಯಾವ ಮೂಲೆಯಿಂದಲಾದರೂ ತಮಗೆ ಪ್ರತಿಕ್ರಿಯೆ ಬಂದಿದೆಯಾ ಎಂದು ಮೇಲ್ ಬುಟ್ಟಿಯನ್ನು ತಡಕುತ್ತಾರೆ. ಇಷ್ಟೆಲ್ಲಾ ಹುಸಿ ಸಂಭ್ರಮ ಪಡುತ್ತಾ ಕಳೆಯುವ ಸಮಯದಲ್ಲಿ ಮಹತ್ವವಾದದ್ದೇನನ್ನೋ ಓದುವ, ಬರೆಯುವ, ಹೊಸದನ್ನು ಕಲಿಯುವಂತಹ ಕೆಲಸಗಳನ್ನು ಮಾಡಬಹುದು ಎಂಬುದನ್ನು ಯಶಸ್ವಿಯಾಗಿ ಮರೆಯುತ್ತಾರೆ. ಮಾತನಾಡುತ್ತಲೇ ಹೋಗುತ್ತಾರೆ…

ನ.ಸಾ: ತುಂಬಾ ಚೆನ್ನಾಗಿ ಹೇಳಿದ್ರಿ ಸರ್. ಬ್ಲಾಗುಗಳಲ್ಲಿ ಹೆಚ್ಚು ಹೆಚ್ಚು ಜನರು ಬರೆಯಲು ಶುರು ಮಾಡಿದಾಗಿನಿಂದ ಒಟ್ಟಾರೆಯಾಗಿ ಏನೆಲ್ಲಾ ಬೆಳವಣಿಗೆಗಳಾಗಿವೆ? ಜನರ ಮನಸ್ಥಿತಿಯಲ್ಲಿ ಏನೆಲ್ಲಾ ಪರಿವರ್ತನೆಗಳಾಗಿವೆ?

ಯು.ಬ್ಲಾ: ಒಳ್ಳೆಯ ಪ್ರಶ್ನೆ. ನಮ್ಮ ಜನರಲ್ಲಿ, ಅದರಲ್ಲೂ ನನ್ನಂಥ ಯುವಕರಲ್ಲಿ ಬಹಳ ಬದಲಾವಣೆಗಳಾಗುತ್ತಿವೆ. ಹಿಂದೆಲ್ಲಾ ಸಮಾಜದ ಬಗ್ಗೆ, ವ್ಯವಸ್ಥೆಯಲ್ಲಿನ ಅವ್ಯವಸ್ಥೆಯ ಬಗ್ಗೆ ಇವರು ಕುದ್ದು ಹೋಗುತ್ತಿದ್ದರು. ಅನ್ಯಾಯ ಮೇರೆ ಮೀರಿದಾಗ ಬೀದಿಗಿಳಿಯುತ್ತಿದ್ದರು. ಕೆಲವೊಮ್ಮೆ ಉಗ್ರ ಪ್ರತಿಭಟನೆಗಳನ್ನು ಮಾಡುತ್ತಿದ್ದರು. ಜೀವವನ್ನು ಬಲಿದಾನ ಮಾಡಲೂ ಹಿಂಜರಿಯುತ್ತಿರಲಿಲ್ಲ, ಸುಧಾರಣೆಯನ್ನು ತರುತ್ತಿದ್ದರು. ಬದಲಾವಣೆಗೆ ಕಾರಣರಾಗುತ್ತಿದ್ದರು. ಈಗ ಹಾಗಿಲ್ಲ. ತಮಗೆ ಏನೇ ಅನ್ಯಾಯ ಕಂಡರೂ, ವ್ಯವಸ್ಥೆಯ ಬಗ್ಗೆ ಜಿಗುಪ್ಸೆ ಬಂದರೂ ಪಬ್ಲಿಕ್ ಟಾಯ್ಲೆಟ್ ಒಳಹೊಕ್ಕು ಉಮ್ಮಳವನ್ನು ಕಳೆದುಕೊಂಡು ಬಂದಷ್ಟೇ ಸಲೀಸಾಗಿ ಅದನ್ನೆಲ್ಲಾ ಬ್ಲಾಗಿನ ಅಂಗಳದಲ್ಲಿ ಕಾರಿಕೊಂಡು ಜವಾಬ್ದಾರಿಯಿಂದ ಜಾರಿಕೊಂಡು ಬಿಡುತ್ತಾರೆ. ಕಣ್ಣೆದುರೇ ಅನ್ಯಾಯ ನಡೆಯುತ್ತಿದ್ದರೆ ಅದರ ಬಗ್ಗೆ ಬ್ಲಾಗಿನಲ್ಲಿ ಏನೆಂದು ಬರೆಯುವುದು, ಏನು ಟೈಟಲ್ ಕೊಡುವುದು, ಎಂಥಾ ಪ್ರತಿಕ್ರಿಯೆ ಬರಬಹುದು ಎಂದೆಲ್ಲಾ ಕನಸುತ್ತಾ ಅನ್ಯಾಯವನ್ನು ಪ್ರತಿಭಟಿಸುವುದನ್ನೇ ಮರೆಯಲು ಸಹಾಯ ಮಾಡುತ್ತಲಿದೆ ಈ ಬ್ಲಾಗು. ಟ್ರಾಫಿಕ್ಕಿನ ಬಗ್ಗೆ, ಹೆಚ್ಚುತ್ತಿರುವ ಮನಸ್ಸಿನ ಮಾಲಿನ್ಯದ ಬಗ್ಗೆ, ಭಾವನೆಗಳು ನಶಿಸುತ್ತಿರುವುದರ ಬಗ್ಗೆ, ಮನುಷ್ಯ ಮನುಷ್ಯನ ಜೊತೆ ಮಾತನಾಡಲು ಸಂಯಮ ಕಳೆದುಕೊಳ್ಳುತ್ತಿರುವ ಬೆಳವಣಿಗೆಯ ಬಗ್ಗೆ… ಹೀಗೆ ಎಲ್ಲದರ ಬಗ್ಗೆ ಗೊಣಗುತ್ತಾ ಗೊಣಗುತ್ತಾ ತಮ್ಮ ಗೊಣಗಾಟ ಈ ಜಡವಾದ ವ್ಯವಸ್ಥೆಯಲ್ಲಿ ಭಯಾನಕ ಬಿರುಗಾಳಿಯನ್ನೇಳಿಸುತ್ತದೆ ಎಂದು ಕನಸು ಕಾಣುತ್ತಾ ಬದುಕುತ್ತಿದ್ದಾರೆ.

ನ.ಸಾ: ಹೀಗೆಲ್ಲಾ ನಡೆಯುತ್ತಿದೆಯೇ ಸರ್? ಮತ್ತೇನೇನು ನಿಮ್ಮ ಗಮನಕ್ಕೆ ಬಂದಿದೆ?

ಯು.ಬ್ಲಾ: ಹೇಳಲಿಕ್ಕೆ ಇನ್ನೂ ಇದೆ. ಜನರಿಗೆ ಪತ್ರಿಕೆಗಳು ಏಕೈಕ ಸುದ್ದಿ ಮೂಲವಾಗಿದ್ದವು. ಪತ್ರಿಕೆಯಲ್ಲಿ ಪ್ರಕಟವಾದದ್ದೆಲ್ಲಾ ಸತ್ಯ ಎಂದು ಜನ ನಂಬುತ್ತಿದ್ದರೂ ಈಗಲೂ ಬಹುಪಾಲು ಮಂದಿ ಅದನ್ನೇ ನಂಬಿಕೊಂಡಿದ್ದಾರೆ. ಈ ಬ್ಲಾಗುಗಳು ಬಂದ ಮೇಲೆ ಜನರು ಪತ್ರಿಕೆಗಳ ‘ಪಾತಿವ್ರತ್ಯ’ವನ್ನೇ ಶಂಕಿಸಲು ಶುರು ಮಾಡಿದ್ದಾರೆ. ಮುಂಚೆಯಾದರೆ ಅದು ಆರುಶಿ ತಲ್ವಾರ್ ಕೊಲೆ ಕೇಸಿರಲಿ, ಪದ್ಮ ಪ್ರಿಯಾ ಪ್ರಕರಣವಿರಲಿ, ವೋಟಿಗಾಗಿ ಹಣದ ಕ್ಯಾತೆಯಿರಲಿ ಪತ್ರಿಕೆಗಳು ಹೇಳಿದ್ದನ್ನೇ ಮಹಾಪ್ರಸಾದವೆಂಬಂತೆ ನಾವು ನಂಬುತ್ತಿದ್ದೆವು. ಸಂಪಾದಕರು ದಪ್ಪಕ್ಷರಗಳಲ್ಲಿ ಮುದ್ರಿಸಿದ್ದನ್ನೇ ಮಹಾ ಪ್ರಸಾದವೆಂಬಂತೆ ನಾವು ಭಯ ಭಕ್ತಿಯಿಂದ ಕಣ್ಣಿಗೊತ್ತಿಕೊಂಡು ಅದನ್ನು ಹರಟೆ ಕಟ್ಟೆಯ ‘ಸಂವಾದ’ದಲ್ಲಿ ಎತ್ತಿಕೊಂಡು ನಮ್ಮ ನಮ್ಮ ಸಂಸ್ಕಾರಗಳಿಗೆ ತಕ್ಕ ಹಾಗೆ ಅದನ್ನು ಸಂಸ್ಕರಿಸಿ, ಸಾಧ್ಯವಾದಷ್ಟು ಮಂದಿಗೆ ವಿತರಿಸಿ ಮನೆಯ ಬಾಗಿಲು ಹಾಕಿಕೊಂಡು ನೆಮ್ಮದಿಯಿಂದ ಮಲಗುತ್ತಿದ್ವಿ. ಆದರೆ ಈ ಬ್ಲಾಗುಗಳು ಪತ್ರಿಕೆಗಳ ನಾನಾ ಬಣ್ಣದ ವೇಷಗಳನ್ನು ಬಿಚ್ಚಿ ಹಾಕಿ ಅವನ್ನು ಬೆತ್ತಲಾಗಿಸುತ್ತಾ ಹೋದಂತೆಲ್ಲಾ ನಮಗೆ ಆಘಾತವಾಗುತ್ತಿದೆ. ಈಗ ಜನರಿಗೆ ಪತ್ರಿಕೆಗಳಲ್ಲಿ ಬಂದದ್ದೆಲ್ಲಾ ಸತ್ಯವಲ್ಲ ಆದರೆ ಬ್ಲಾಗುಗಳಲ್ಲಿ ಬಂದದ್ದೆಲ್ಲಾ ಸತ್ಯ ಎಂದು ಅರಿವಾಗುತ್ತಿದೆ. ಹೀಗಾಗಿ ಗಲ್ಲಿಗೊಂದರಂತೆ ‘ಅಭಿಪ್ರಾಯ’ ವಿತರಿಸುವ ಬ್ಲಾಗುಗಳು ಹುಟ್ಟಿಕೊಂಡಿವೆ. ಸೂರ್ಯನ ಕೆಳಗಿನ ಪ್ರತಿಯೊಂದು ಸಂಗತಿಯ ಬಗ್ಗೆ ನಿರರ್ಗಳವಾಗಿ ಕೊರೆಯಬಲ್ಲ ಪಂಡಿತರು ಸೃಷ್ಟಿಯಾಗಿದ್ದಾರೆ. ಜಗತ್ತಿನ ಯಾವ ಘಟನೆಯ ಬಗೆಗೇ ಆಗಲಿ ಮಾತನಾಡುವ ಹಕ್ಕು ಎಲ್ಲರಿಗೂ ಸಿಕ್ಕಿದೆ. ಯಾವ ಕೋರ್ಟು, ವಿಚಾರಣೆಯೂ ಇಲ್ಲದೆ ಅಪರಾಧಿ ಯಾರೆಂದು ತೀರ್ಪು ಕೊಡುವ ಸ್ವಾತಂತ್ರ್ಯ ಎಲ್ಲರಿಗೂ ಸಿಕ್ಕಿದೆ. ಇದಕ್ಕಿಂತ ಹೆಚ್ಚಿನ ಕ್ರಾಂತಿ ಸಾಧ್ಯವೇ?

ನ.ಸಾ: ತುಂಬಾ ಉಪಯುಕ್ತವಾದ ಚಿಂತನೆಗಳನ್ನು ನಮ್ಮೊಂದಿಗೆ ಹಂಚಿಕೊಂಡದ್ದಕ್ಕೆ ಧನ್ಯವಾದಗಳು ಯುವ ಬ್ಲಾಗಿಗರೇ.

ಯು.ಬ್ಲಾ: ಹ್ಹಾ! ನಿಮ್ಮ ಸೋಂಪಾದಕರ ಇಲ್ಲವೇ ಸಹ ಬ್ಲಾಗಿಗರ ಒತ್ತಾಯಕ್ಕೆ ಮಣಿದು ನನ್ನ ಸಂದರ್ಶನವನ್ನೇನಾದರೂ ಎಡಿಟ್ ಮಾಡಿದರೆ ಜೋಕೆ!

ನ.ಸಾ: ಇಲ್ಲ, ಸರ್ ನಮ್ಮ ಬ್ಲಾಗಿನಲ್ಲಿ ಯಾವ ಸಂಗತಿಯೂ ಸೆನ್ಸಾರ್ ಆಗುವುದಿಲ್ಲ. ನಮ್ಮ ನಾಡಿನ ಖ್ಯಾತ ಅಂಕಣಕಾರ ಪ್ರತಾಪ್ ಸಿಂಹರು ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗಿ ಯಾರದೋ ಪುಸ್ತಕದ ಸಂವಾದ ಕಾರ್ಯಕ್ರಮದಲ್ಲಿ, ತಮ್ಮ ಪುಸ್ತಕ ಬಿಡುಗಡೆ ಮಾಡಿ ಬೇರಾರನ್ನೋ ಬೈದು ಭಾಷಣ ಮಾಡುವಾಗ ಹೇಳಿದ ಹಾಗೆ ನೀವು ‘ಕಾಂಡೋಮ್’ ಇಲ್ಲದೆ ಮಾತನಾಡಬಹುದು ನಗೆ ನಗಾರಿಯಲ್ಲಿ ಮಾತ್ರ! (ಮಾತನಾಡುವುದಕ್ಕೆ ಕಾಂಡೋಮ್ ಯಾಕೆ ಅಂತ ಹಾಯ್ ಬೆಂಗಳೂರ್ ಸಾರಥಿಯ ಹಾಗೆ ಕೇಳಬೇಡ್ರಿ ಮತ್ತೆ!)

2 Responses to “ಯುವ ಬ್ಲಾಗಿಗನ ಸಂದರ್ಶನ(2)”

 1. prasad ಆಗಷ್ಟ್ 16, 2008 at 4:24 ಅಪರಾಹ್ನ #

  Nage samratare,

  Ee sandarshana adbhuthavagiddu, blogugala swaroopavannu anavarana madalu prashasthavagide.

  Jagaththina yavude vishayadalle agali olleyadu, jothege kettaddu hege berethideyo, idu kooda adara ondu mukha.

  ide reethiyagi antharjaladalli nedeyuththiravu avyavaharagala bagge ondu lekhana thamminda
  neerikshisuththa,

  dhanyavadagalondige,
  Prasad

 2. Nage samrat ಆಗಷ್ಟ್ 19, 2008 at 5:14 ಅಪರಾಹ್ನ #

  ಪ್ರಸಾದ್,
  ಚಿಕ್ಕ ಚಿಕ್ಕ ಬೆನ್ತಟ್ಟುವಿಕೆಗೇ ಹೆಗಲ ಮೇಲಿಂದ ತಲೆಯನ್ನು ಗಿರ್ರನೆ ತಿರುಗಿಸುತ್ತಾ ಅಲೆಯುವ ನಗೆ ಸಾಮ್ರಾಟರ ಆಲ್ಟರ್ ಈಗೋ ನಿಮ್ಮ ಹೊಗಳಿಕೆಯಿಂದ ನೆಲದ ಮೇಲೆ ನಿಲ್ಲಲಾಗದವನಾಗಿದ್ದಾನೆ.

  ಅವನನ್ನು ನೆಲದ ಮೇಲೆ ಕುಕ್ಕರುಬಡಿಸಿ ನೀವು ಹೇಳಿದಂತೆ ಅಂತರ್ಜಾಲದ ಅವ್ಯವಹಾರಗಳ ತನಿಖೆಗೆ ಸಾಮ್ರಾಟರು ತಮ್ಮ ಚೇಲ ಕುಚೇಲನನ್ನು ಅಟ್ಟಿದ್ದಾರೆ.

  ನಗೆ ಸಾಮ್ರಾಟ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: