ನಗೆ ಸಾಮ್ರಾಟರ alter ego ಕಳೆದ ಬಾರಿಯ ಸಂದರ್ಶನದಿಂದ ಉತ್ಸಾಹಗೊಂಡು ಈ ಸಂಚಿಕೆಯ ನಗೆ ನಗಾರಿಗಾಗಿ ಒಬ್ಬ ಯುವ ಹಾಗೂ ಯಶಸ್ವೀ ಬ್ಲಾಗಿಗನನ್ನು ಸಂದರ್ಶಿಸಿದೆ. ಈ ಸಾಮ್ರಾಟರ ಮಾನಸ ಪುತ್ರ ಸಾಮ್ರಾಟರ ಬೆನ್ತಟ್ಟುವಿಕೆಗಾಗಿ ಕಾಯುತ್ತಾ ನಿಂತಿದ್ದಾನೆ.
ಸಂದರ್ಶನ ನಿಮ್ಮ ಮುಂದಿದೆ:
ನಗೆ ಸಾಮ್ರಾಟ್: ನಮಸ್ಕಾರ್ ಸರ್. ಹೇಗಿದ್ದೀರಾ?
ಯುವ ಬ್ಲಾಗಿಗ: Fine dude. How are you?
ನ.ಸಾ: ಚೆನ್ನಾಗಿದ್ದೀನಿ ಸರ್. ಇದು ಕನ್ನಡದ ಪತ್ರಿಕೆಗಾಗಿನ ಸಂದರ್ಶನ. ಕನ್ನಡದಲ್ಲಿ ಮಾತನಾಡಿದರೆ ಚೆಂದ ಇತ್ತು.
ಯು.ಬ್ಲಾ: ನೋ ಪ್ರಾಬ್ಲಮ್ ಡೂಡ್. ಐ ಆಮ್ ಕಂಫರ್ಟಬಲ್ ವಿಥ್ ಕನ್ನಡ ಆಲ್ಸೋ!
ನ.ಸಾ: (ತಲೆ ಚಚ್ಚಿಕೊಳ್ಳುತ್ತಾ…) ಹಂಗಲ್ಲ ಸಾರ್. ಕನ್ನಡದಲ್ಲಿ ಮಾತಾಡಿ ಅಂದರೆ ಕನ್ನಡ ಫಾಂಟ್ಸ್ ಬಳಸಿಕೊಂಡು ಇಂಗ್ಲೀಷ್ ಮಾತಾಡಿ ಅಂತಲ್ಲ. ಕನ್ನಡದಲ್ಲಿ ಮಾತಾಡಿ, ಕನ್ನಡಿಗರು ಮಾತನಾಡುವ ಕನ್ನಡದಲ್ಲಿ.
ಯು.ಬ್ಲಾ: ಯು ಆರ್ ಇರಿಟೇಟಿಂಗ್ ಮಿ. ನಾನು ಬೆಂಗಳೂರು ಕನ್ನಡಿಗಾಸ್ ಮಾತಾಡೋ ಟೈಪೇ ಮಾತಾಡ್ತಿರೋದಲ್ವಾ?
ನ.ಸಾ: ಕ್ಷಮಿಸಿ ಸಾರ್. ಬೆಂಗಳೂರು ಕನ್ನಡಿಗರಲ್ಲ, ಉಳಿದ ಕನ್ನಡಿಗರು ಮಾತಾಡೋ ಕನ್ನಡದಲ್ಲಿ ಮಾತಾಡಿ.
ಯು.ಬ್ಲಾ: ಸರಿ. ಈಗ ಸರಿಯಾಗಿ ಕೇಳಿದಿರಿ ನೀವು. ಹೂಂ, ಸಂದರ್ಶನ ಮುಂದುವರೆಸಿ.
ನ.ಸಾ: ಸರ್, ಈ ಬ್ಲಾಗುಗಳು ನಮ್ಮ ಸಮೂಹ ಪ್ರಜ್ಞೆಗೆ ಹೊಸ ಆಯಾಮವನ್ನು ದಕ್ಕಿಸಿಕೊಟ್ಟು ಆಮೂಲಕ ಹೊಸ ಸಾಂಸ್ಕೃತಿಕ ಅನುಸಂಧಾನಗಳಿಗೆ ಅವಕಾಶ ಮಾಡಿಕೊಟ್ಟು ಜಾಗತೀಕರಣದ ಈ ಯುಗದಲ್ಲಿ ಸಮಾಜದಲ್ಲಿ ಜವಾಬ್ದಾರಿಯುತ ಸಮೂಹವನ್ನು ಹುಟ್ಟುಹಾಕುವ ಕೆಲಸ ಮಾಡುತ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಯು.ಬ್ಲಾ: ಹ್ಞಾ..? ಯಾವ ಭಾಷೆರೀ ಅದು? ಸ್ವಲ್ಪ ಅರ್ಥ ಹಾಗೋ ಹಂಗೇ ಕೇಳೋಕಾಗಲ್ಲವೇನ್ರಿ? ಬ್ಲಾಗ್ ಅಂದ್ರೆ ಏನು ಅಂತ ಸರಳವಾಗಿ ಕೇಳಿದ್ರೆ ನಿಮ್ಮ ಗಂಟೇನು ಹೋಗುತ್ತೆ? ನೀವು ಬುದ್ಧಿಜೀವಿಯಾ?
ನ.ಸಾ: (ಪ್ಯಾದೆ ನಗು ನಗುತ್ತಾ) ಓದುಗರು ಹಾಗನ್ನುತ್ತಾರೆ ಸರ್.
ಯು.ಬ್ಲಾ: ಹಿಂಗೇ ಕಣ್ರೀ ಜನ ನಿಮ್ಮನ್ನು ರೈಲು ಹತ್ತಿಸುವುದು. ನಿಮ್ಮಂಥವರ ಕಷ್ಟ ತಡಿಯೋಕಾಗದೆ ನಿಮ್ಮನ್ನು ಬುದ್ಧಿಜೀವಿ ಅಂತ ಕರೆದು ದೂರ ಕೂರಿಸಿಬಿಡ್ತಾರೆ. ರಾಜಕೀಯದ ನಿರಾಶ್ರಿತರನ್ನು ರಾಜಭವನದಲ್ಲಿ ಕೂರಿಸಿದ ಹಾಗೆ.
ನ.ಸಾ: ಕ್ಷಮಿಸಿ ಸರ್. ಸರಳವಾಗೆ ಕೇಳ್ತೀನಿ. ಈ ಬ್ಲಾಗುಗಳು ಯಾವ ರೀತಿಯಲ್ಲಿ ಸಮಾಜದ ಮೇಲೆ ಪರಿಣಾಮ ಬೀರ್ತಾ ಇವೆ ಸರ್?
ಯು.ಬ್ಲಾ: ಹಾಂ! ಹಂಗೆ ಕೇಳಿ. ನೋಡಿ ಈ ಬ್ಲಾಗುಗಳು ಮನುಷ್ಯನ ಬೇಸಿಕ್ ಇನ್‌ಸ್ಟಿಂಕ್ಟನ್ನು ಉದ್ದೀಪನ ಗೊಳಿಸುವಲ್ಲಿ ಸಹಾಯ ಮಾಡ್ತಾ ಇವೆ. ಮನುಷ್ಯನಿಗೆ ತನಗೆ ತಿಳಿದ ಸಂಗತಿಯನ್ನು ಇನ್ನೊಬ್ಬನಿಗೆ,ಮತ್ತೊಬ್ಬನಿಗೆ,ಮಗದೊಬ್ಬನಿಗೆ ದಾಟಿಸುವ ತೆವಲು ಇರುತ್ತದೆ. ಆ ಮಾಹಿತಿ ಸುದ್ದಿಯೋ, ವದಂತಿಯೋ, ಆರೋಪವೋ, ಸಂಶಯವೋ, ಸಂಶೋಧನೆಯೋ, ಕವನವೋ, ಕವಿತೆಯೂ ಅಥವಾ ಇವುಗಳ ಹೆಸರಿನಲ್ಲಿ ಗೀಚಿದ ರಬ್ಬಿಶೋ ಏನೇ ಆಗಬಹುದು. ಎಲ್ಲವನ್ನೂ ಎರಡನೆಯವನಿಗೆ, ಮೂರನೆಯವನಿಗೆ ದಾಟಿಸಿಬಿಡುವ ಆಸೆಯಿರುತ್ತದೆ. ಹಿಂದೆ ಇದೇ ಕಾರಣಕ್ಕೆ ಮನುಷ್ಯನಿಗೆ ಸಂಜ್ಞೆಗಳ ಭಾಷೆ ಬೇಕಾಯಿತು. ಅನಂತರ ಆತ ಶಬ್ಧಗಳನ್ನು ಕೇಳಿ ತಿಳಿದು ನಾಲಿಗೆಯನ್ನು ನಾನಾ ರೀತಿಯಲ್ಲಿ ತಿರುವಿ ಮಾತನಾಡಲು ಕಲಿತು ಭಾಷೆಗಳನ್ನು ಮಾಡಿದ. ಅನಂತರ ತಾನು ಹೇಳಿದ್ದನ್ನು ಪದೇ ಪದೇ ಹೇಳಲು ಬೇಜಾರಾಗಿಯೋ ಅಥವಾ ತಾನು ಸತ್ತ ಮೇಲೆ ತನ್ನ ‘ವಿಚಾರ’ಗಳನ್ನು ಮುಂದಿನ ತಲೆಮಾರಿಗೆ ಹೇಗೆ ತಲುಪಿಸುವುದು(ಅವರಿಗೆ ಬೇಕೋ ಬೇಡವೋ ಎನ್ನುವುದನ್ನು ಯೋಚಿಸದೆ) ಎನ್ನುವ ಚಿಂತೆಯಲ್ಲಿ ಲಿಪಿಯನ್ನು ಕಂಡುಕೊಂಡ. ಈಗ ಈ ಬ್ಲಾಗುಗಳು ಬಂದಿವೆ.
ನ.ಸಾ: ಒಳ್ಳೆಯ ವಿಶ್ಲೇಷಣೆ, ಇವುಗಳಿಂದ ಸಮಾಜದಲ್ಲಿ ಏನು ಬದಲಾವಣೆಯಾಗುತ್ತದೆ?
ಯು.ಬ್ಲಾ: ಸಮಾಜದಲ್ಲಿ ಬದಲಾವಣೆಗಳು? ತುಂಬಾ ಆಗ್ತವೆ. ಪಟ್ಟಿ ಮಾಡಿಕೊಳ್ಳಿ. ಜನರು ತಮ್ಮ ಕೆಲಸ ಗಿಲಸ ಬಿಟ್ಟು ಕಂಪ್ಯೂಟರಿನ ಕೀಲಿಮಣೆಯ ಮುಂದೆ ಕುಳಿತುಕೊಳ್ಳುತ್ತಾರೆ. ಕೀಲಿಮಣೆಯ ಮೇಲೆ ಧೂಳು ಕೂರಲು ಬಿಡುವು ಕೊಡದ ಹಾಗೆ ಕುಟ್ಟುತ್ತಲೇ ಇರುತ್ತಾರೆ. ಚಿಕ್ಕ ಮಕ್ಕಳು ಮೈದಾನದಲ್ಲಿ ಆಡುವುದು ವಿರಳವಾಗುತ್ತಿದೆ. ಯುವಕರು ಸೈಬರ್ ಕೆಫೆಗಳಲ್ಲಿ ಜಾಂಡಾ ಹೂಡಲು ಶುರು ಮಾಡಿದ್ದಾರೆ. ಆಫೀಸುಗಳಲ್ಲಿ ನೌಕರರು ಕದ್ದು ಮುಚ್ಚಿ ಐನ್‌ಸ್ಟೀನ್ ಪೇಟೆಂಟ್ ಆಫೀಸಿನಲ್ಲಿ ಕುಳಿತು ಥಿಯರಿ ಆಫ್ ರಿಲೇಟಿವಿಟಿ ಬರೆದ ಹಾಗೆ ಬ್ಲಾಗುಗಳನ್ನು ಕುಟ್ಟುತ್ತಿರುತ್ತಾರೆ. ಬಾಸುಗಳಿಗೆ ತಲೆ ನೋವು ತರುತ್ತಿರುತ್ತಾರೆ. ತಲೆ ನೋವು ಹೆಚ್ಚಾಗುವುದರಿಂದ ಅನಾಸಿನ್ ಮಾತ್ರೆಯ ವ್ಯಾಪಾರ ವಿಪರೀತವಾಗುತ್ತದೆ. ಇಂಟರ್ನೆಟ್ ಬಿಲ್ಲು ರೇಶನ್ ಬಿಲ್ಲಿನಲ್ಲಿ ಸೇರಿಹೋಗಿದೆ…
ನ.ಸಾ: (ತಲೆ ಕೆರೆದುಕೊಳ್ಳುತ್ತಾ) ಅದೆಲ್ಲಾ ಸರಿ ಸರ್, ಆದರೆ ಸಮಾಜಿಕವಾದ ಪರಿಣಾಮಗಳು ಏನು?
ಯು.ಬ್ಲಾ: ಇವೆಲ್ಲಾ ಸಾಮಾಜಿಕ ಬದಲಾವಣೆಗಳು ಎಲ್ಲವೇನ್ರಿ? ಓಹೋ, ನೀವು ಬುದ್ಧಿಜೀವಿಗಳು ಅಲ್ಲವಾ? ನಿಮಗೆ ಘನ ಗಂಭೀರವಾದ ಸಂಗತಿಗಳನ್ನು ಹೇಳಬೇಕು ಅಲ್ಲವೇ?
(ನಾಳೆ ಮುಂದುವರೆಯುವುದು)
ನಿಮ್ಮದೊಂದು ಉತ್ತರ